-೧-

ಈ ೧೯೭೩ನೆಯ ವರ್ಷದಲ್ಲಿ ನನ್ನ ಗಮನಕ್ಕೆ ಬಂದ ಗ್ರಂಥಸಂಪಾದನೆಗೆ ಸಂಬಂಧಿಸಿದ ಗ್ರಂಥಗಳು ಹದಿನಾಲ್ಕು. ಇವುಗಳಲ್ಲಿ ನಾಲ್ಕು ಕೃತಿಗಳು ಹೊರತು ಉಳಿದ ಹೊತ್ತಗೆಗಳಿಗೆ ಸಂಬಂಧಿಸಿದಂತೆ, ಒಟ್ಟಾರೆ ವ್ಯಕ್ತವಾಗುವ ನ್ಯೂನತೆಗಳು ಸಮಾನ ಸ್ವರೂಪದ್ದಾಗಿವೆ. ಸಂಪಾದಕರು ಓಲೆಗರಿ ಅಥವಾ ಕೋರೆ ಕಡತಗಳಿಂದ ಪ್ರತಿಯೆತ್ತಿ ಅಚ್ಚಿಗೆ ಅಣಿಗೊಳಿಸಿದರೆ ಅಲ್ಲಿಗೆ ತಮ್ಮ ಕೆಲಸ ಮುಗಿಯಿತೆಂಬ ಅರ್ಧಸತ್ಯದ ಧೋರಣೆಯಿದೆ ಹೊರಬರಬೇಕು. ವಾಸ್ತವವಾಗಿ ಮುದ್ರಣಪ್ರತಿ ಸಿದ್ಧವಾಗುತ್ತಿದ್ದಂತೆ ಸಂಪಾದಕನ ಜವಾಬ್ದಾರಿ ಹೆಚ್ಚುತ್ತದೆ. ಅಲ್ಲಿಂದ ಆತ ಕೃತಿಯ ಸಂಪಾದನ ಕಾರ್ಯ ಸರ್ವಾಂಗ ಸುಂದರವಾಗುವಲ್ಲಿ, ಸಾರ್ಥಕವಾಗುವಲ್ಲಿ ಶ್ರಮವಹಿಸಬೇಕು. ಒಬ್ಬ ಸಾಮಾನ್ಯ ಓದುಗನಷ್ಟೇ ಒಬ್ಬ ವಿದ್ವಾಂಸ ಓದುಗನನ್ನೂ ದೃಷ್ಟಿಯಲ್ಲಿರಿಸಿಕೊಂಡು ಅವರಿಗೆ ಸಹಾಯಕವಾಗುವಂತೆ ಸಂಪಾದನ ಕಾರ್ಯ ಸಂಯೋಜಿತವಾಗಬೇಕು.

ಅಲ್ಲದೆ ಮುಖ್ಯವಾಗಿ ಕೈಗೆತ್ತಿಕೊಂಡ ಕೃತಿಗೆ ಸಂಬಂಧಿಸಿದ ಸಾಮಗ್ರಿಗಳನ್ನೆಲ್ಲ ಸಂಗ್ರಹಿಸಿಕೊಳ್ಳಬೇಕು. ಹೀಗೆ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಂಡಮೇಲೆ ಮುಂದಿರುವ ಸಾಮಗ್ರಿಯನ್ನು ವಿಮರ್ಶಾತ್ಮಕ ವಿವೇಚನೆಗೆ ಅಳವಡಿಸಿಕೊಡಬೇಕು. ಲೇಖಕನ ವಸ್ತು ಸ್ವರೂಪ, ಅದರ ಸ್ಥಾನ, ಅನ್ಯ ಪ್ರಭಾವ, ಅನ್ಯರ ಮೇಲೆ ಈತನ ಪ್ರಭಾವ, ಚಾರಿತ್ರಿಕ ಸಾಮಾಜಿಕ ಸಂಗತಿಗಳು – ಹೀಗೆ ಹಲವು ಮಗ್ಗಲುಗಳಿಂದ ಕವಿಕಾವ್ಯ ಪರಾಮರ್ಶೆಯೂ ನಡೆಯಬೇಕು. ಇಂಥ ಪ್ರಯತ್ನಗಳಿಂದ ಸಂಪಾದಿತವಾದ ಗ್ರಂಥದ ಉಪಯುಕ್ತತೆ ಹೆಚ್ಚುವುದಷ್ಟೇ ಅಲ್ಲದೆ ಸಂಪಾದನಕಾರನ ಶ್ರಮ ಶ್ರದ್ಧೆಗಳ ಸಾರ್ಥಕತೆ ಆಗುತ್ತದೆ ಮತ್ತು ಸಂಪಾದಿಸುತ್ತಿರುವ ಗ್ರಂಥವನ್ನು ರಚಿಸಿದ ಕೃತಿಕಾರನಿಗೆ ಹೆಚ್ಚು ನ್ಯಾಯ, ಗೌರವ ದೊರೆತಂತೆ ಆಗುತ್ತದೆ. ಈ ಸಮೀಕ್ಷೆಯಲ್ಲಿ ಮುದ್ರಣ ದೋಷಗಳನ್ನು ಅನುಲಕ್ಷಿಸಿಲ್ಲ.

ದುರ್ಗಸಿಂಹ ವಿರಚಿತ ಪಂಚತಂತ್ರ, ಮಲ್ಲಕವಿ ಸಂಯೋಜಿತ ಕಾವ್ಯಸಾರ ಮತ್ತು ನಾಗವರ್ಮ ವಿರಚಿತ ಕರ್ಣಾಟಕ ಕಾದಂಬರಿ ಇವು ಮೂರೂ ಕೃತಿಗಳು ಒಬ್ಬರೇ ಸಂಪಾದಕರಿಂದ (ಎನ್.ಅನಂತರಂಗಾಚಾರ್) ಸಂಪಾದಿತವಾಗಿವೆ. ಹಿಂದಿನ ಮುದ್ರಣಕ್ಕಿಂತ ಹೆಚ್ಚಿನ ಆಧಾರ – ಅನುಕೂಲಗಳು ಉಪಲಬ್ಧವಿದ್ದೂ ಸಂಪಾದಕರು ಅವನ್ನೆಲ್ಲ ಅಳವಡಿಸಿಕೊಳ್ಳುವಲ್ಲಿರುವ ಸಾಧ್ಯತೆಗಳನ್ನು ಸೂರೆಮಾಡಿಲ್ಲ. ಡಾ. ಆ.ನೇ. ಉಪಾಧ್ಯೆಯವರು ಬೃಹತ್ ಕಥಾಕೋಶಕ್ಕೆ ಬರೆದಿರುವ ವಿದ್ವತ್ ಪೂರ್ಣವಾದ ಮುನ್ನುಡಿಯನ್ನು ಬಳಸಿಕೊಂಡಿದ್ದರೂ ಇವರು ಅದರ ಪೂರ್ಣ ಪ್ರಯೋಜನ ಪಡೆದಿಲ್ಲ. ಇಲ್ಲಿನ ಪೀಠೀಕೆಯಲ್ಲೂ ಪೆಡಸಿದೆ, ಪರಿಷ್ಕಾರವಿಲ್ಲ. ಲವಲವಿಕೆಯಿಲ್ಲದ ಶೈಲಿ ಓದುಗರಿಗೆ ಸಾಕಷ್ಟು ಹಿಂಸೆ ಕೊಡುತ್ತದೆ. ಪಂಚತಂತ್ರದ ತಿರುಳನ್ನು ವಿಮಾರ್ಶಾತ್ಮಕವಾಗಿ ಪರಿಶೀಲಿಸಿ ಕೃತಿಯ ಮೌಲ್ಯಮಾಪನ ಮಾಡಬೇಕಾದು – ಇದು ಇಂಥ ಹಳಗನ್ನಡ ಕಾವ್ಯಗಳನ್ನು ಸಂಪಾದಿಸುವವರಿಗೆ ಇರುವ ಮುಖ್ಯ ಹೊಣೆ. ಈ ಹೊಣೆಯ ನಿರ್ವಹಣೆಯಲ್ಲಿ ಸಂಪಾದಕರು ಹೆಜ್ಜೆಹೆಜ್ಜೆಗೂ ಸೋತಿದ್ದಾರೆ. ಅಗತ್ಯವಾದ ಕೃತಿ ವಿವೇಚನೆ ಬಿಟ್ಟು ಬಹುದೂರ ತಿರುಗುತ್ತಾರೆ. ಪಂಚತಂತ್ರದ ಮುದ್ರಣವೂ ಚೆನ್ನಾಗಿಲ್ಲ. ಸ್ಖಾಲಿತ್ಯಗಳೂ ಹೇರಳವಾಗಿವೆ. ಪುಟ ೩ ರಲ್ಲಿ ಪದ್ಯ ೧೬ಕ್ಕೆ ‘ವಶ್ಯವಾಣಿ’ ಎಂಬುದಕ್ಕೆ ಪಾಠಾಂತರ ಮುಂದಿನ ಪುಟದಲ್ಲಿದೆ. ಡಾ|| ಅ. ವೆಂ. ರವರ ಪಂಚತಂತ್ರ ಪರಂಪರೆ ಬಗ್ಗೆ ಇಂಗ್ಲಿಷಿನಲ್ಲಿ ಬರೆದಿರುವ ಲೇಖನಗಳ ಸಾರವನ್ನು ಇಲ್ಲಿ ಒಂದೆಡೆ ಹಸಿಹಸಿಯಾಗಿ ಅನುವಾದಿಸಿ ಗುಡಿಸಿಗುಡ್ಡೆ ಮಾಡಿದ್ದಾರೆ. ಅದರಲ್ಲಿ ಕ್ರಮಬದ್ಧ ಸಂಯೋಜನೆಯಿಲ್ಲ. ತಾವು ಸಂಪಾದಿಸುತ್ತಿರುವ ಕೃತಿಯ ವೈಶಿಷ್ಟ್ಯಕ್ಕೆ ಅದನ್ನು ತಾರ್ಕಣೆ ಮಾಡಿ ವಿವೇಚಿಸಿಲ್ಲ. ೨೩ನೆಯ ಪದ್ಯ ಟಿಪ್ಪಣಿಯಲ್ಲಿ ‘ಅಸಗ, ಮನಸಿಜ, ಚಂದ್ರಭಟ್ಟರು ಕನ್ನಡ ಕವಿಗಳಿದ್ದಿರಬೇಕು. ಇವರ ಕೃತಿಗಳಾವುದೂ ಉಪಲಬ್ಧವಿಲ್ಲ’ (ಪುಟ ೨೦೨) ಎನ್ನುತ್ತಾರೆ. ಆದರೆ ಅಸಗಕವಿ ರಚಿಸಿರುವ ಸಂಸ್ಕೃತ ವರ್ಧಮಾನ ಪುರಾಣ ಮತ್ತು ಶಾಂತಿಪುರಾಣಗಳು ಉಪಲಬ್ಧವಿದ್ದು ಬಹಳ ಹಿಂದೆಯೇ ಅಚ್ಚು ಆಗಿವೆ. ೨೪ನೆಯ ಪದ್ಯದ ಟಿಪ್ಪಣಿಯಲ್ಲಿ ಪೊನ್ನನ ಕಾಲ ಸುಮಾರು ೯೮೦ ಎಂದು ಹೇಳುತ್ತಾರೆ. ಇದು ಸುಮಾರು ೯೪೫ ಎಂದಾಗಬೇಕು ಏಕೆಂದರೆ ಪೊನ್ನನಿಗೆ ಆಶ್ರಯ ಹಾಗೂ ಕವಿಚಕ್ರವರ್ತಿ ಎಂಬ ಬಿರುದು ಕೊಟ್ಟ ರಾಷ್ಟ್ರಕೂಟರ ಮುಮ್ಮಡಿ ಕೃಷ್ಣನ ಕಾಲ ೯೩೯-೯೬೬. ಅದರಿಂದ ೯೬೬ರ ಆಚೆಗೆ ಹೋಗದು. ಅನುಬಂಧಗಳು ಉಪಯುಕ್ತವಾಗಿವೆಯಾದರೂ ಅದರ ಉಪಯುಕ್ತತೆಯನ್ನು ಇನ್ನೂ ಹೆಚ್ಚಿಸಿ ಸಾರ್ಥಕ ಪಡಿಸಬಹುದಿತ್ತು. ಟಿಪ್ಪಣಿಯನ್ನೂ ಬರೆದಿದ್ದಾರೆ. ಆದರೆ ಗೋಜಲಾಗಿದೆ. ತಪ್ಪುಗಳಿವೆ.

ಕಾವ್ಯಸಾರ ಮಲ್ಲಕವಿ ಸಂಯೋಜಿತವಾದ ಒಂದು ಸಂಕಲನ ಕಾವ್ಯ. ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವಆದ ಮತ್ತು ಅಭಿನವವಾದಿ ವಿದ್ಯಾನಂದನನ ಕಾವ್ಯಸಾರದ ಮಾದರಿಗೆ ಸೇರಿದ ಕೃತಿಯಿದು. ಹಳಗನ್ನಡ ಕಾವ್ಯಗಳಲ್ಲಿ ಬರುವ ವರ್ಣನಾ ಭಾಗಗಳನ್ನು ಅಷ್ಟಾದಶವರ್ಣನೆಗೆ ಅನುಸಾರವಾಗಿ ಕಾವ್ಯಸಾರವನ್ನು ಸಂಕಲಿಸಲಾಗಿದೆ. ಅನುಪಲಬ್ಧ ಕನ್ನಡ ಕಾವ್ಯಗಳ ಕಡೆಗೆ ಕೆಲವು ಸೂಚನೆಗಳನ್ನು ಈ ಸಂಕಲನ ಕೃತಿ ನೀಡುವುದರಿಂದ ಇದರ ಉಪಯುಕ್ತತೆ ಇದ್ದೇ ಇದೆ. ಆದರೆ ಇದರ ಸಂಪಾದನಕಾರ್ಯ ನಿರೀಕ್ಷಿಸಿದಷ್ಟು ಚೆನ್ನಾಗಿಲ್ಲ. ಅನವಶ್ಯಕ ಅನುಬಂಧಗಳಿವೆ. ‘ಮುನ್ನುಡಿ’ಯಲ್ಲಿ “ಈ ಕಾವ್ಯಸಾರ ಗ್ರಂಥವನ್ನು ಸಂಪಾದಿಸಿ ತಮ್ಮ ವಿದ್ವತ್‌ಪೂರ್ಣ ಮುನ್ನುಡಿಯೊಡನೆ ಪ್ರಕಟಿಸಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುವು ಮಾಡಿಕೊಟ್ಟಿದ್ದಾರೆ” ಎಂದು ಸಂಪಾದಕರನ್ನು ಕುರಿತು ತಿಳಿಸಿದೆ. ಆದರೆ ಸಂಪಾದಕರ ಮಾತು ಅರ್ಥಾತ್ ‘ವಿದ್ವತ್‌ಪೂರ್ಣ ಮುನ್ನುಡಿ’ ಓದಿದಾಗ ಅಲ್ಲಿ ಕಂಡುಬರುವುದು ವಿದ್ವತ್ತಿನ-ವಿಮರ್ಶೆಯ ಅಭಾವ. ಅದರ ಫಲವಾದ ನಿರಾಶೆ. ಆಕರ ಸಿಕ್ಕದ ಪದ್ಯಗಳೆಂದು ಸಂಪಾದಕರು ಕೊಟ್ಟಿರುವ ಪಟ್ಟಿಯ ನೂರಾರು ಪದ್ಯಗಳಿಗೆ ಅವರೇ ಈ ಹಿಂದೆ ಸಂಪಾದಿಸಿರುವ ಕೆಲವು ಕಾವ್ಯಗಳಲ್ಲೂ ಆಕರ ಸಿಗುತ್ತದೆ.

ಈ ಕೃತಿ ಆತುರದ ಯಾಂತ್ರಿಕ ಕೆಲಸವಾಗಿದೆ: ಅವಧಾನ ಆಲೋಚನೆಗಳಿಂದ ಲಭಿಸುವ ಸೌಷ್ಠವ ಕಳೆದುಕೊಂಡಿದೆ. ಸೂಕ್ತಿ-ಸುಧಾರ್ಣವಕ್ಕೆ ಸಂವಾದಿಯಾದ ಇದರಲ್ಲಿನ ೨೨೦ ಪದ್ಯಗಳನ್ನು ಕೈಬಿಡಬಹುದಿತ್ತು ಎಂಬ ಹೇಳಿಕೆ ಅವಕಾಶವಿದೆಯಾದರೂ ಹೊಸ ಪಾಠಾಂತರಗಳು ಲಭ್ಯವಾಗಬಹುದೆಂಬ ದೃಷ್ಟಿಯಿಂದ ಇದನ್ನು ಉಳಿಸಿಕೊಂಡಿರುವುದನ್ನು ಸಾಧುವಾಗಿ ಪರಿಗಣಿಸಬಹುದು.

ಕರ್ನಾಟಕ ಕಾದಂಬರಿಗಂತೂ ಎಂಥ ಸಪ್ಪೆ ಪೀಠಿಕೆ. ಕನ್ನಡ ಕಾವ್ಯಗಳಲ್ಲಿ ಹಲವು ನಿಟ್ಟಿನಿಂದ ಒಂದು ಹಿರಿಯ ಸ್ಥಾನವಿರುವ ಈ ಕಾವ್ಯಕ್ಕೆ ಒಂದು ಉತ್ತಮ ಉಪಯುಕ್ತ ಪೀಠಿಕೆ ಬರೆಯಲು ಅಪರೂಪವಾಗಿ ಸಿಗುವ ಸದವಕಾಶವನ್ನು ಸಂಪಾದಕರು ಕಳೆದುಕೊಂಡರಲ್ಲಾ ಎನಿಸುತ್ತದೆ. ಒಂದು ಸಮಾಧಾನವೆಂದರೆ ಅಕಾರಾದಿ ಅನುಬಂಧಗಳನ್ನು ಕೊಡುವುದರಲ್ಲೇ ವಿಜೃಂಭಿಸುವ ಮನೋಭಾವದ ಈ ಸಂಪಾದಕರು ಇಲ್ಲಿ ಅದರ ಜೊತೆಗೆ ‘ಕಾದಂಬರೀ ದರ್ಪಣ’ವನ್ನು ಕೊಟ್ಟಿದ್ದಾರೆ. ಆದರೆ ಇದು ಕೂಡ ಮೊಟಕಾಗಿರುವುದಲ್ಲದೆ ಅವೈಜ್ಞಾನಿಕವಾಗಿದೆ. ಇದರಲ್ಲಿ ಅವರ ಯಾವ ಕ್ರಮ ಅನುಸರಿಸುತ್ತಿದ್ದಾರೆಂಬುದು ಕಡೆಗೂ ತಿಳಿಯುವುದಿಲ್ಲ. ಡಾ. ಡಿ.ಎಲ್.ಎನ್. ಅವರ ‘ಪಂಪಭಾರತ ದೀಪಿಕೆ’ಯ ಆದರ್ಶದ ಪರಭಾವದಿಂದ ಬರವಣಿಗೆಗೆ ತೊಡಗಿದ್ದಾರೆ, ಅಲ್ಲಿನ ಕಾಲುಪಾಲು ಸಿದ್ಧಿಯನ್ನೂ ಪಡೆಯುವುದಿಲ್ಲ. “ಬಾಣನು ಕ್ರಿಶ. ೬೦೬ ರಿಂದ ೬೪೮ರ ವರೆಗೆ ಆಳಿದ ಹರ್ಷವರ್ಧನನ ಕಾಲದವನಾದುದರಿಂದ ಅವನು ೬ನೆಯ ಶತಮಾನದ ಉತ್ತರಾರ್ಧದಲ್ಲಿಯೋ ೭ನೆಯ ಶತಮಾನದ ಪೂರ್ವಭಾಗದಲ್ಲಿಯೋ ಇದ್ದಿರಬೇಕು” (ಪೀಠಿಕೆ ಪು iv) ಎಂಬಂಥ ವಾಕ್ಯಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ತಾವು ಸಂಪಾದಿಸಿರುವ ಕನ್ನಡ ಕಾದಂಬರಿ ಕಾವ್ಯದ ಕರ್ತೃವಿನ ವಿಚಾರ ತಿಳಿಸುವಾಗ ಇತ್ತೀಚೆಗೆ ಅಂದರೆ ಇವರು ಈ ಕಾವ್ಯದ ಪೀಠಿಕೆ ಬರೆದ ವೇಳೆಗೆ ಲಭ್ಯವಾದ ನಾಗವರ್ಮನ ವರ್ಧಮಾನ ಪುರಾಣದ ಉಲ್ಲೇಖವಿಲ್ಲ. ಸಂಪಾದಕರು ಕವಿಚರಿತೆಯ ಉದಾಹರಣೆಯಿಂದ ತೃಪ್ತರಾಗುತ್ತಾರೆ.

ಶಿವಶರಣರ ಸಂಪುಟ (ಸಂ. ದೇವೀರಪ್ಪ) ಈ ವರ್ಷದಲ್ಲಿ ಸಂಪಾದಿತವಾದ ಕೃತಿಗಳಲ್ಲಿ ಗಣ್ಯವಾದುದು. ಗ್ರಂಥ ಸಂಪಾದನಾ ಶಾಸ್ತ್ರದ ದೃಷ್ಟಿಯಿಂದ ಶುದ್ಧವಾಗಿದೆ. ಪಾಠದ ಆಯ್ಕೆಯಲ್ಲಿ ಗ್ರಾಹ್ಯವಾದುದನ್ನು ಸ್ವೀಕರಿಸುವಲ್ಲಿ ಔಚಿತ್ಯ ತೋರಿದ್ದಾರೆ. ಜೊತೆಗೆ ತಾವು ಸಂಪಾದಿಸುತ್ತಿರುವ ಕೃತಿಗಳ ಬಗ್ಗೆ ತಲಸ್ಪರ್ಶಿಯಾದ ಜ್ಞಾನದಿಂದ ಕೃತಿಯ ಸ್ವರೂಪವನ್ನು ತೋರಿಸಿ ಕೊಟ್ಟಿದ್ದಾರೆ. ಶಾಸ್ತ್ರದ ದೃಷ್ಟಿಯಿಂದ ಸಂಪಾದನ ಕಾರ್ಯ, ಸಾಹಿತ್ಯದ ದೃಷ್ಟಿಯಿಂದ ಮೌಲ್ಯ ಮಾಪನ ಕಾರ್ಯ – ಇವೆರಡೂ ಜತೆಗೂಡಿದ ಸಂಪಾದನೆಗೆ ತೂಕ ಹೆಚ್ಚು. ಡಾ. ಡಿ.ಎಲ್.ಎನ್. ಗ್ರಂಥ ಸಂಪಾದನ ರೀತಿಯನ್ನು ಮಾದರಿಯಾಗಿಟ್ಟುಕೊಂಡು ಹೊರಟಿರುವ ಇಲ್ಲಿನ ಪ್ರಯತ್ನ ಬಹುಮಟ್ಟಿಗೆ ಯಶಸ್ವಿಯಾಗಿದೆ. ಇದು ಹರಿಹರೇತರ ಕೃತ ವಿರೂಪಾಕ್ಷಾಂಕಿತ ಶಿವಶರಣ ಸಂಪುಟವೆಂಬುದನ್ನು ಅವಶ್ಯ ಅನುಲಕ್ಷಿಸಬೇಕು. ಇದರಲ್ಲಿ ವಿರೂಪಾಕ್ಷಾಂಕಿತವಿರುವ ನಲವತ್ತೆರಡು ಕಥಾನಾತ್ಮಕ ರಗಳೆಗಳಿವೆ. ಇದು ಇದೇ ಸಂಪಾದಕರ ‘ಶರಣ ಚರಿತ ಮಾನಸಂ’ ಕೃತಿಗೆ ಒಂದು ಪೂರಕ ಕೃತಿಯಾಗಿದೆಯಲ್ಲದೆ ಅಲ್ಲಿನ ಪೀಠಿಕೆಯ ಬಹ್ವಂಶ ಇಲ್ಲಿಗೂ ಸಲ್ಲುತ್ತದೆ.

ಹರಿಹರನ ಅಯ್ದುರಗಳೆಗಳು (ಸಂ. ಎಂ.ಎನ್. ಲೀಲಾವತಿ) ಕುರಿತು ಹೇಳಬೇಕಾದ ಮೊದಲನೆಯ ಮಾತೆಂದರೆ, ಇದು ಇದರ ಸಂಪಾದಕರ ಚೊಚ್ಚಲಾದರೂ ಅಚ್ಚುಕಟ್ಟಾಗಿ ಸಂಪಾದಿತವಾಗಿದೆ. ಇದರಲ್ಲಿ ಮುಖ್ಯವಾಗಿ ಮೂರು ಕೊರತೆಗಳಿವೆ. ಮೊದಲನೆಯದಾಗಿ ಇದರಲ್ಲಿರುವ ರಗಳೆಗಳು ಆಗಲೇ ಒಮ್ಮೆ ಪ್ರಕಟಿತ, ಎರಡನೆಯದಾಗಿ ಇಲ್ಲಿರುವ ರಗಳೆಗಳ ಸುರಗಿಯ ಚೌಡಯ್ಯಗಳ ರಗಳೆ, ಮುಸುಟೆಯ ರಗಳೆ, – ತೆಲುಗು ಬೊಮ್ಮಯ್ಯಗಳ ರಗಳೆ, – ಬಾಹೂರು ಬೊ-ಕೋವೂರು-ರಗಳೆ) ಸಾಹಿತ್ಯಕ ಮೌಲ್ಯ ಸುಮಾರಿಗೂ ಬರುವುದಿಲ್ಲ. ಈ ಎರಡೂ ಕಾರಣಗಳು ಇದರ ಮರು ಮುದ್ರಣದ ಅಗತ್ಯವಿಲ್ಲವೆಂಬುದನ್ನು ಪುಷ್ಟೀಕರಿಸುತ್ತವೆ. ಮೂರನೆಯದಾಗಿ ಅಯ್ದೂ ರಗಳೆಗಳಿಗೆ ತುಲನಾತ್ಮಕ ಸಾಹಿತ್ಯ ವಿವೇಚನೆ ಸಾಲದು. ಎರಡನೆಯ ಕಾರಣವನ್ನು ಕಡೆಗಣಿಸುವಂತೆ ಮಾಡಬಹುದಿತ್ತು. ಈ ಅಯ್ದೂ ರಗಳೆಗಳ ಸಮಗ್ರವೂ ಸಂಶೋಧನಾತ್ಮಕ ಆದ ವಿಮರ್ಶೆಯಿದೆ.

ಅಷ್ಟಕಗಳು (ಸಂ.ಭೋ.ಪಾಟೀಲ) ಭಕ್ತಿ ನಿಷ್ಟವಾದ ಹದಿನೈದು ಅಷ್ಟಕಗಳ ಸಂಕಲನ. ಇದರ ಕೆಲವು ಪಾಠಾಂತರಗಳ ವಿಚಾರವಾಗಿ ತೀವ್ರ ಭಿನ್ನಾಭಿಪ್ರಾಯಕ್ಕೆಡೆಯಿದೆಯಾದರೂ ಈ ಸಂಕಲನದ ಪ್ರಯತ್ನ ಮಾತ್ರ ಪ್ರಶಂಸನೀಯವಾದುದು. ಸಂಪಾದಿತ ಕಾವ್ಯಗಳಿಗೇ ಸರಿಯಾದ ಸ್ಥಾನವಿಲ್ಲದಿರುವಾಗ ಅಷ್ಟಕಗಳು ಪ್ರಕಟನೆಯ ದೃಷ್ಟಿಯಿಂದ ಅನಾಥಗೀತಗಳಾಗುವ ಸಾಧ್ಯತೆಯಿದೆ. ಹೀಗಿದ್ದೂ ಇವುಗಳಿಗೆ ಪೂಜಾಸಾಹಿತ್ಯದ ಒಂದು ಭಾಗವಾಗಿ ಇರುವ ಮಹತ್ವವನ್ನು ಮನಗಾಣ ಬೇಕಾಗುತ್ತದೆ. ಇಲ್ಲಿನ ಪೀಠಿಕೆಯಲ್ಲಿ ಅಷ್ಟಕ ಸಾಹಿತ್ಯ ಪರಂಪರೆಯನ್ನು ವಿವರಿಸುವಾಗ ಜೈನ ಸಾಹಿತ್ಯ ಪರಂಪರೆಯಲ್ಲಿರುವ ವಿಪುಲವಾದ ಅಷ್ಟಕ ಸಾಹಿತ್ಯದ ಪ್ರಸ್ತಾಪ ಇನ್ನೂ ನಿಕರವಾಗಿ, ಸಾಧಾರವಾಗಿ ಬರಬೇಕಿತ್ತು.

ಮಡಿವಾಳಯ್ಯನ ವಚನಗಳು (ಸಂ.ಎಸ್. ಉಮಾಪತಿ) ಸುಮಾರಾಗಿ ಸಂಪಾದಿತವಾದ ಕೃತಿಯಾದರೂ ಮೊದಲ ಬಾರಿಗೆ ಇಷ್ಟು ಮಡಿವಾಳಯ್ಯನ ವಚನಗಳು ಇಡಿಯಾಗಿ ಬರುತ್ತಿರುವುದರಿಂದ ಇದಕ್ಕೆ ಸ್ವಾಗತ.

ಮಹಾದೇವಿಯಕ್ಕನ ಚರಿತ ಸಂಗ್ರಹ: (ಸಂ. ಚಂದ್ರಯ್ಯ) ಈ ಗ್ರಂಥದ ಸಂಪಾದನೆಯ ಬಗ್ಗೆ ಹೇಳುವಂತಹುದು ಕಡಮೆಯಾದರೂ ಇದು ಛಂದಸ್ಸಿನ ದೃಷ್ಟಿಯಿಂದ ಒಂದು ಗಮನಾರ್ಹ ಕೃತಿ. ಆರು ವಿಧವಾದ ಷಟ್ಪದಿಗಳ ಜೊತೆಗೆ ಸಾಂಗತ್ಯ ಹಾಗೂ ಸಂಸ್ಕೃತ ಶ್ಲೋಕಗಳನ್ನು ಬಳಸಿರುವ ಕಾವ್ಯವಿದು. ಕನ್ನಡ ಕಾವ್ಯಗಳ ಛಂದಸ್ಸಿನ ಚರಿತ್ರೆಯಲ್ಲಿ ಒಟ್ಟು ಸಾಂಗತ್ಯದಲ್ಲೇ ರಚಿಸಿದ ಕಾವ್ಯಗಳು ಹಲವಾರಿವೆ. ಅದರಂತೆ ನಡುವೆ ಷಟ್ಪದಿ, ಕಂದ, ವೃತ್ತ, ರಗಳೆ, ಗದ್ಯ ಮೊದಲಾದುವನ್ನು ಕ್ವಚಿತ್ತಾಗಿ ಬಳಸಿದ ಕೆಲವೇ ಕಾವ್ಯಗಳಿವೆ. (ವಿವರಗಳಿಗೆ ನೋಡಿ: ಹಂಪ, ನಾಗರಾಜಯ್ಯ, ಸಾಂಗತ್ಯದ ಕೆಲವು ಸಂಗತಿಗಳು, ಪ್ರಬುದ್ಧ ಕರ್ನಾಟಕ ೧೯೬೦). ಆದರೆ ಒಟ್ಟು ಕಾವ್ಯ ಬೇರೆ ಛಂದಸ್ಸಿನಲ್ಲಿದ್ದು ನಡುವೆ ವೈವಿಧ್ಯಕ್ಕಾಗಿ ಸಾಂಗತ್ಯ ಬಳಸಿಕೊಂಡ ಕಾವ್ಯಗಳು ವಿರಳ. ಈ ಕಾವ್ಯ ಅಂತಹವುಗಳಲ್ಲೊಂದೆಂಬ ಕಾರಣದಿಂದಲೂ ಅಭ್ಯಾಸ ಯೋಗ್ಯವಾಗಿದೆ. ಪುಟ ೭೪ರಲ್ಲಿ ಬರುವ ೬ನೆಯ ಪದ್ಯದಲ್ಲಿ ತಪ್ಪುಗಳಿವೆ. ಮೊದಲನೆಯ ಪಾದದಲ್ಲಿ ಮೂರು ಮಾತ್ರೆಗಳು ಬಿಟ್ಟು ಹೋಗಿವೆ. ಮೂರನೆಯ ಪಾದದಲ್ಲಿ ನಾಲ್ಕನೆಯ ಗಣ ಎಂಬ ಕ್ರಮದಲ್ಲಿದೆ. ವಾರ್ಧಕ ಷಟ್ಪದಿಯಲ್ಲಿ ಇದು ಬರಲಾಗದೆಂಬುದು ಛಂದಸ್ಸಿನ ನಿಯಮ. ೭೫ನೆಯ ಪುಟದಲ್ಲಿನ ೧೦ನೆಯ ಪದ್ಯದ ಮೊದಲು ಪಾದದ ಎರಡನೆಯ ಗಣ ದೋಷದಿಂದ ಕೂಡಿದೆ. ಹೀಗೆ ಹಲವಾರು ತಪ್ಪುಗಳಿವೆ. ಶಬ್ದಾರ್ಥ ಕೋಶದಲ್ಲಿ ಶಬ್ದಗಳು ಬರುವ ಪದ್ಯ. ಪುಟ, ಆಶ್ವಾಸಕ್ಕೆ ಸಂಬಂಧಿಸಿದ ಸಂಖ್ಯಾನಿರ್ದೇಶನವಿಲ್ಲದಿರುವುದು ದೋಷ. ಇದರಿಂದ ಕೆಲವು ತಪ್ಪು ತಿಳುವಳಿಕೆಗೂ ಅವಕಾಶವಿದೆ. ಉದಾ: ‘ಪ್ಲವರ್ಗ’ ಶಬ್ದಕ್ಕೆ ಕಪಿ, ಕುದುರೆ, ಕಪ್ಪೆ, ಬೆಸ್ತ, ಸಮುದ್ರದ ನೊರೆ ಹೀಗೆ ಆಯ್ದು ಅರ್ಥ ಹೇಳಿದ್ದಾರೆ. ಈ ಅರ್ಥಗಳಲ್ಲಿ ಯಾವ ಪದ್ಯದ ಪ್ರಯೋಗಕ್ಕೆ ಯಾವ ಅರ್ಥವೆಂಬುದು ತಿಳಿಯುವುದಿಲ್ಲ. ಕೇವಲ ನಿಘಂಟು ನೋಡಿ ಈ ಅರ್ಥಗಳನ್ನು ಕೊಟ್ಟಿದ್ದಾರೊ ಅಥವಾ ಈ ಅಯ್ದೂ ಅರ್ಥಗಳಿಗೆ ಪ್ರಯೋಗಗಳಿವೆಯೊ ಸ್ಪಷ್ಟವಾಗುವುದಿಲ್ಲ.

ಲೋಭದತ್ತ ಚರಿತೆ (ಸಂ. ಡಾ.ಬಿ.ಎಸ್.ಕುಲಕರ್ಣಿ) ನೇಮರಸ ಕವಿಕೃತ ಕಿರುಕಾವ್ಯ. ಈ ಸಾಂಗತ್ಯ ಕಾವ್ಯವನ್ನು ಕಾರಂಜಾದಲ್ಲಿನ ಒಂದು ತಾಳೇಗರಿಯ ಸಹಾಯದಿಂದ ಸಿದ್ಧಪಡಿಸಿರುವುದಾಗಿ ಸಂಪಾದಕರು ತಿಳಿಸಿದ್ದಾರೆ. ಆದರೆ ಡಾ. ಬಿ.ಎಸ್. ಕುಲಕರ್ಣಿಯವರು ಇನ್ನೂ ಶ್ರಮವಹಿಸಿ ವಿದ್ಯಾಭೂಷಣ ಪಂಡಿತ ಕೆ. ಭುಜಬಲಿ ಶಾಸ್ತ್ರಿಗಳವರು ಸಿದ್ಧಪಡಿಸಿರುವ ಮೂಡಬಿದ್ರಿಯ ‘ತಾಡಪತ್ರಿಕೀ ಸೂಚಿ’ ನೋಡಿದ್ದರೆ ಅಲ್ಲಿ ಇದೇ ನೇಮರಸನ ಈ ಲೋಭದತ್ತ ಚರಿತೆ ಕಾವ್ಯದ ಇನ್ನೆರಡು ಪ್ರತಿಗಳಿರುವ ಸಂಗತಿ ತಿಳಿದು ಬರುತ್ತಿತ್ತು. ಅವುಗಳ ನೆರವಿನಿಂದ ಪಾಠ ಪರಿಷ್ಕರಣ ಕಾರ್ಯ ಇನ್ನೂ ಚೆನ್ನಾಗಲು ಸಾಧ್ಯವಿತ್ತು. ಈ ಒಂದು ಅನವಧಾನ ಫಲವಾದ ಕೊರತೆಯ ಹೊರತು ಲೋಭದತ್ತ ಚರಿತೆಯ ಸಂಪಾದನ ಕಾರ್ಯ, ಮುನ್ನುಡಿ ಉಪಯುಕ್ತವಾದ ಉತ್ತಮ ರೀತಿಯಲ್ಲಿವೆ. ಇದೇ ನೇಮರಸ ಕವಿ ಸುದರ್ಶನ ಚರಿತೆ ಎಂಬ ಇನ್ನೊಂದು ಕಾವ್ಯವನ್ನೂ ರಚಿಸಿದ್ದಾನೆ.

ದೇವೀ ಮಹಾತ್ಮೆ (ಸಂ.ಎನ್.ಕೆ.ಹೆಗಡೆ) ಎಂಬುದು ಬಹುಶಃ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗಿಹೋದ ಒಬ್ಬ ಅಜ್ಞಾತ ಕವಿಯ ಷಟ್ಪದಿಕಾವ್ಯ. ಮೂರು ಪ್ರತಿಗಳ (ಕ.ಖ.ಘ.) ಆಧಾರದಿಂದ ಇದನ್ನು ಸಿದ್ಧಪಡಿಸಿದ್ದಾರೆ. ಬಳಸಿಕೊಂಡ ಪ್ರತಿಗಳ ವಿವರಗಳನ್ನು ಕೊಟ್ಟಿದ್ದಾರೆ. ಇದರ ರಚನೆಯ ಕಾಲ ಸರಿಯಾಗಿ ತಿಳಿಯದು. ಆಂತರಿಕ ಪ್ರಮಾಣಗಳಿಂದ ಸುಮಾರು ಹದಿನೇಳನೆಯ ಶತಮಾನದ ಕಾವ್ಯವೆಂದು ಹೇಳಲಡ್ಡಿಯಿಲ್ಲ. ಮಾರ್ಕಂಡೇಯ ಪುರಾಣದ ದೇವೀಚರಿತೆ (ಸಪ್ತಶತಿ) ಮೂಲ ಆಧರಿಸಿ ಭಾಮಿನೀ ಷಟ್ಪದಿ ರೂಪದಲ್ಲಿರುವ ಈ ಕಾವ್ಯದ ಪ್ರಮಾಣ ೪೫೧ ಪದ್ಯಗಳು. ಗ್ರಂಥ ಸಂಪಾದನೆ ಸಂಪಾದಕರ ಪ್ರಥಮ ಪ್ರಯತ್ನವಾದರೂ ಪ್ರಶಂಸನೀಯವಾಗಿದೆ.

ಶಾಂತನಿರಂಜನ ಕವಿ ವಿರಚಿತ ಅಬ್ಬಲೂರು ಚರಿತೆ (ಸಂ.ಎನ್. ಬಸವಾರಾಧ್ಯ) ಕಾವ್ಯ ದೃಷ್ಟಿಯಿಂದ ಕಳಪೆಯಾದರೂ ಗ್ರಂಥ ಸಂಪಾದನ ದೃಷ್ಟಿಯಿಂದ ಸುಯೋಗ್ಯವಾಗಿದೆ. ನಾಲ್ಕು ಪ್ರತಿಗಳ ಸಹಾಯದಿಂದ (ಒಂದು ಮಾತ್ರ ಓಲೆಗರಿ) ಇದನ್ನು ಪರಿಷ್ಕರಿಸಿದ್ದಾರೆ. ಕಾವ್ಯ ವಿಮರ್ಶೆಯ ಭಾಗ ಇನ್ನಷ್ಟು ಇರಬೇಕಿತ್ತು ಎಂದು ಅನ್ನಿಸುತ್ತದೆ. ಅನುಬಂಧಗಳು ತುಂಬ ಉಪಯುಕ್ತವಾಗಿವೆ.

ಸಂಗವಿಭು ವಿರಚಿತ ಮೂರು ಶತಕ (ಸಂ. ಶಾಂತರಸ) ಸಂಪಾದನೆಯ ಕಾರ್ಯ, ಕವಿ ದೇಶಕಾಲ ಪ್ರಸ್ತಾವನೆ, ಮುದ್ರಣ ಎಲ್ಲ ಚೆನ್ನಾಗಿವೆ. ಇಲ್ಲಿನ ಬಸವ ಶತಕ ಭುವನೈಕ ನಾಯಕೀ ಶತಕ ಹಾಗೂ ಪಂಪಾ ಶತಕಗಳಲ್ಲಿ ಕಾವ್ಯಾಂಶ ಕಡಿಮೆಯಿದ್ದರೂ ಸಂಪಾದಕರಾರು ತುಂಬ ಶ್ರದ್ಧೆಯಿಂದ ಕೃತಿಯನ್ನು ಅಚ್ಚಿಗೆ ಅಣಿಗೊಳಿಸಿಕೊಟ್ಟಿದ್ದಾರೆ.

ಶ್ರೀಪಾದರಾಜರ ಕೃತಿಗಳು (ಸಂ.ಜಿ. ವರದರಾಜಾರಾವ್) ಈ ವರ್ಷದಲ್ಲಿ ಉತ್ತಮ ತರವಾಗಿ ಸಂಪಾದಿತವಾಗಿರುವ ಕೃತಿಗಳಲ್ಲೊಂದು. ಇದುವರೆಗೆ ಪ್ರಕಟವಾಗದ ಶ್ರೀ ಪಾದರಾಜರ ಕೀರ್ತನೆಗಳನ್ನೂ ಒಳಗೊಂಡ ಈ ಗ್ರಂಥ ಜನಪ್ರಿಯ ಆವೃತ್ತಿಯಾದರೂ (ಪಂಡಿತ ಆವೃತ್ತಿ ಪ್ರತ್ಯೇಕವಾಗಿದೆ) ಕೀರ್ತನೆಗಳ ಸಂಪಾದನೆಯಲ್ಲಿ ಸಂಯೋಜನೆಯಲ್ಲಿ ಪೀಠಿಕೆಯಲ್ಲಿ ಅರೆಕೊರೆಗಳಿಲ್ಲದೆ ಅಚ್ಚುಕಟ್ಟಾಗಿದೆ. ಗ್ರಂಥ ಸಂಪಾದನ ಕಾರ್ಯದಲ್ಲಿ ಸಂಪಾದಕರು ವಹಿಸಿರುವ ಶ್ರಮ ಎಚ್ಚರಗಳ ಜೊತೆಗೆ ಅವರು ಈ ಕೆಲಸದಲ್ಲಿ ತಳೆದಿರುವ ಮಮತೆಯೂ ಸ್ಪಷ್ಟವಾಗುತ್ತದೆ.

ಕೆರೆಯ ಪದ್ಮರಸ ವಿರಚಿತ ದೀಕ್ಷಾಬೋಧೆ (ಸಂ. ಡಾ|| ಬಿ.ಬಿ.ಹೆಂಡಿ) ನಾಲ್ಕು ಪ್ರತಿಗಳ ಸಹಾಯದಿಂದ ಒಪ್ಪವಾಗಿ ಸಂಪಾದಿತವಾಗಿರುವ ಕೃತಿ. ಅದರಲ್ಲಿಯೂ ಸಂಸ್ಕೃತ ಶ್ಲೋಕಗಳ ಪಾಠ ಶುದ್ಧಿ ನಿರ್ಧಾರ ವಿಚಾರದಲ್ಲಿ ವಹಿಸಿದರುವ ಪರಿಶ್ರಮ ಪ್ರಶಂಸನೀಯ. ಪ್ರಸ್ತಾವನೆಯೂ ಉಚಿತವಾಗಿದೆ. ಪಾರಿಭಾಷಿಕ ಶಬ್ದಕೋಶ ಕಠಿಣ ಶಬ್ದಕೋಶ ಶ್ಲೋಕಗಳ ಅಕಾರಾದಿ-ಇವು ಓದುಗನ ಅಗತ್ಯವನ್ನು ಪೂರೈಸುತ್ತವೆ. ಆದರೆ ಕಾವ್ಯದ ಛಂದಸ್ಸನ್ನು ಕುರಿತು ಪ್ರಸ್ತಾವನೆಯಲ್ಲಿ ಪ್ರಾಸ್ತಾಪಿಸದಿರುವುದು ಕೊರತೆಯಾಗಿ ಎದ್ದುಕಾಣುತ್ತದೆ. ಕಂದ, ವೃತ್ತಗಳನ್ನು ಕ್ವಚಿತ್ತಾಗೂ, ಲಲಿತ ರಗಳೆ (ಎರಡು ಸ್ಥಲಗಳಲ್ಲಿ) ಮಂದಾನಿಲ ರಗಳೆಯನ್ನು (ಒಂದು ಸ್ಥಲದಲ್ಲಿ) ಅಧಿಕವಾಗೂ ಮೂರು ಸ್ಥಲಗಳ ಈ ಗ್ರಂಥದಲ್ಲಿ ಸಮರ್ಥವಾಗಿ ಉಪಯೋಗಿಸಿರುವುದರಿಂದಲೂ ಛಂದಸ್ಸಿನ ಮೇಲೆ ಕವಿಗೆ ಒಳ್ಳೆಯ ಹಿಡಿತವಿರುವುದರ ಬಗ್ಗೆ ವಿವರಣೆ ಅಪೇಕ್ಷ್ಯವಾಗುತ್ತದೆ. ಕೇವಲ ಸಾಹಿತ್ಯದ ವಿದ್ಯಾರ್ಥಿಗೆ ಈ ಗ್ರಂಥದಲ್ಲಿ ವೈಶಿಷ್ಟ್ಯ ಕಂಡು ಬರುವುದು ಈ ಲವಲವಿಕೆಯ ಲಯದಲ್ಲೇ ಹೆಚ್ಚು ಉಳಿದಂತೆ ಈ ಕೃತಿಯ ಬಹುಪಾಲು ಶಾಸ್ತ್ರಜಡ.

(ಸಾಹಿತ್ಯ ವಾರ್ಷಿಕ ೧೯೭೩: ಸಂಪಾದಕರು, ಜಿ.ಎಸ್. ಶಿವರುದ್ರಪ್ಪ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೪)

ಗ್ರಂಥ ಸಂಪಾದನೆ

ಕನ್ನಡ ಛಂದಸ್ಸಂಪುಟ (ಸಂ: ಡಾ.ಎಲ್. ಬಸವರಾಜು) ಈ ವರ್ಷದಲ್ಲಿ ಪ್ರಕಟವಾದ ಸಂಪಾದಿತ ಗ್ರಂಥಗಳಲ್ಲಿ ಗಮನಾರ್ಹವಾಗಿದೆ. ಇದರ ಮುಖ್ಯ ಉಪಯುಕ್ತತೆಯೆಂದರೆ, ಕನ್ನಡ ಛಂದಸ್ಸಿಗೆ ಸಂಬಂಧಿಸಿದ ನಾಲ್ಕು ಆಧಾರಪೂರ್ಣ ಕೃತಿಗಳು ಇಲ್ಲಿ ಒಂದೆಡೆ ದೊರೆಯುತ್ತವೆಂಬುದು. ಇದರ ಜತೆಗೇ ಹೇಳಬೇಕಾದ ಮತ್ತೊಂದು ಮಹತ್ವದ ಮಾತೆಂದರೆ ಆದಷ್ಟೂ ವಿಶ್ವಸನೀಯ ಶುದ್ಧ ಪಾಠ ನಿರ್ಣಯಕ್ಕೆ ಇಲ್ಲಿನ ಸಂಪಾದಕರು ಗಮನವಿತ್ತಿದ್ದಾರೆ ಎಂಬುದು. ಈ ಗ್ರಂಥದಲ್ಲಿ ಛಂದಸ್ಸಿಗೆ ಸಂಬಂಧಿಸಿದ ನಾಗವರ್ಮನ ‘ಛಂದೋಂಬುಧಿ’, ಅಭಿನವಕೇಶಿರಾಜ ಈಶ್ವರನ ‘ಕವಿಜಿಹ್ವಾಬಂಧನ’, ಗುಣಚಂದ್ರನ ‘ಛಂದಸ್ಸಾರ’ ಮತ್ತು ವೀರಭದ್ರನ ‘ನಂದಿ ಛಂದೋರ್ಣವ’ ಎಂಬ ನಾಲ್ಕು ಗ್ರಂಥಗಳ ‘ಪರಿಷ್ಕೃತ ಪೂರ್ಣ ಪಾಟ, ನಿರ್ದೇಶನ, ವ್ಯಾಖ್ಯಾನ, ಟಿಪ್ಪಣಿ, ಪ್ರಸ್ತಾರ, ಸಂದರ್ಭ ಸಾಮಗ್ರಿ ಮತ್ತು ಅನುಬಂಧಗಳೊಡನೆ’ ಸಿದ್ಧಪಡಿಸಿಕೊಡಲಾಗಿದೆ. ಇದಕ್ಕಾಗಿ ಸಂಪಾದಕರು ವಹಿಸಿರುವ ಕಾಳಜಿಯನ್ನು ಗ್ರಂಥದುದ್ದಕ್ಕೂ ಕಾಣಬಹುದು. ಛಂದಸ್ಸನ್ನೇ ವಿಶೇಷವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ (ವಿದ್ವಾಂಸ ವಿದ್ಯಾರ್ಥಿಗಳನ್ನೂ ಸೇರಿಸಿ) ಇದರಿಂದ ಉಪಕಾರವಾಗಿದೆ.

ಈ ಸಂಪುಟ ಕೆಲವು ಕೊರತೆಗಳನ್ನೂ ಉಳಿಸಿಕೊಂಡಿದೆ.

೧. ಪುಸ್ತಕ ಕೈಗೆತ್ತಿಕೊಂಡಕೂಡಲೆ ಕಣ್ಣಿಗೆ ಬಡಿಯುವ ದೋಷ – ಅತ್ಯಂತ ಸಾಧಾರಣವಾದ ಮುದ್ರಣ. ಕಥೆ ಕಾದಂಬರಿಗಳಲ್ಲಿನ ಮುದ್ರಣ ಸ್ಖಾಲಿತ್ಯಗಳನ್ನು ಹೇಗೋ ಸಹಿಸಬಹುದು, ಅಲ್ಲಿ ಒಮ್ಮೊಮ್ಮೆ ಅದು ಕ್ಷಮ್ಯ. ಅಪರೂಪಕ್ಕೊಮ್ಮೆ ಮುದ್ರಣವಾಗುವ ಇಂಥ ಶಾಸ್ತ್ರ ಕೃತಿಗಳಲ್ಲಿ ಸಂಭವಿಸುವ ಅತಿಯಾದ ಅಚ್ಚಿನ ದೋಷಗಳು ಅಕ್ಷಮ್ಯ. ‘ಕರಡು ವಾಚನ’ ಸರಿಯಾಗಿ ಆಗಿಲ್ಲ. ಮೊಸರಿನಲ್ಲಿ ಕಲ್ಲು ಸಿಕ್ಕಿ ಅನುಭವತರುವ ಸಾಲುಗಳು ಸ್ಖಾಲಿತ್ಯ ಸ್ಖಲೆಯಿಂದ ಸಾಗುತ್ತವೆ. ಸಂಪಾದಕರೇ ಕೊಟ್ಟಿರುವ ಅಯ್ದು ಪಟಗಳು ‘ತಪ್ಪೋಲೆ’ಯ ಜತೆಗೆ ಇನ್ನೂ ಅಯ್ದು ಪುಟಗಳ ತಿದ್ದುಪಡಿಕೊಡಬಹುದೆಂದ ಮೇಲೆ ಮುದ್ರಣದ ವಿಷಯದಲ್ಲಿ ಸಂಭವಿಸಿರುವ ಅಸೀಮ ನಿರ್ಲಕ್ಷ್ಯವನ್ನು ಅರಿಯಬಹುದು. ಅಕ್ಷರ ಸ್ಖಾಲಿತ್ಯ ರೂಪದ ಮುದ್ರಣ ದೋಷವಲ್ಲದೆ, ಹೆಚ್ಚು ಮಸಿಯಿಂದ ಮುದ್ದೆಯಾದ ಏನೇನೂ ಒಪ್ಪವಿಲ್ಲದ ಇಲ್ಲಿನ ಮುದ್ರಣ ಕಣ್ಣಿಗೆ ಕುಕ್ಕುವಷ್ಟು ವಿಕಾರವಾಗಿದೆ. ಇಂಥ ಮುದ್ರಣದ ಈ ಸಂಪುಟಕ್ಕೆ ‘ಬೆಲೆ ಮೂವತ್ತು ರೂಪಾಯಿ’ ಎಂಬುದು ವಿಡಂಬನೆಗೆ ವಸ್ತುವಾಗಿದೆ.

೨. ಕಾವ್ಯನಾಮಾದಿಗಳ ಕೆಲವು ಸಂಕ್ಷಿಪ್ತ ರೂಪಗಳು ಅಹಿತಕರವಾಗಿವೆ. ಅಲ್ಲದೆ ಇವು ಒಂದು ಕ್ರಮಪ್ರಾಪ್ತ ಗತಿಯಲ್ಲಿಲ್ಲ. ಸಂಪಾದಕರು ಉಪಯೋಗಿಸಿರುವ ಅನೇಕ ಗ್ರಂಥಗಳ ದೀರ್ಘ ಹೆಸರಿನ ಪುನರಾವೃತ್ತಿಯನ್ನು ತಪ್ಪಿಸಲು ಸಂಕ್ಷಿಪ್ತ ರೂಪಗಳನ್ನಿಟ್ಟುಕೊಳ್ಳುವುದು ಅಗತ್ಯ. ಈ ರೀತಿ ಮಾಡುವಾಗ ಸಾಮಾನ್ಯವಾಗಿ ಮೂರು ಅಕ್ಷರಗಳನ್ನಿಟ್ಟುಕೊಳ್ಳುತ್ತಾರೆ. ಉದಾಹರಣೆ : ಅಜಿತ ಪುರಾಣ, ಅರ್ಧನೇಮಿ ಪುರಾಣ, ಆದಿಪುರಾಣ, ಮಲ್ಲಿನಾಥ ಪುರಾಣ, ವರ್ಧಮಾನ ಪುರಾಣ – ಇವುಗಳಿಗೆ ಕ್ರಮವಗಿ ಅಜಿಪು, ಅರ್ಧಪು (ಅಥವಾ ಅರ್ಧನೇ, ಅನೇಪು), ಆದಿಪು, ಮಲ್ಲಿಪು, ವರ್ಧಪು ಎಂಬ ಸಂಕ್ಷಿಪ್ತರೂಗಳನ್ನಿಟ್ಟುಕೊಳ್ಳುವರು. ಅನುಬಂಧ ೧೬ರಲ್ಲಿ ಸಂಪಾದಕರು ‘ಈ ಅನುಬಂಧದಲ್ಲಿ ಬಳಸಿರುವ ಕಾವ್ಯನಾಮಗಳ ಸಂಕ್ಷಿಪ್ತ ರೂಪಗಳ ವಿವರ ಈ ಕೆಳಗಿನಂತಿದೆ’ (ಪುಟ ೨೯೬) ಎಂದು ಹೇಳಿ ಅವನ್ನು ಕೊಟ್ಟಿರುವ ಪಟ್ಟಿಯಲ್ಲಿ ಪಾಲಿಸಿರುವ ಕ್ರಮ (?) ಅವ್ಯವಸ್ಥೆಗೆ ಉದಾಹರಣೆಯಾಗಿದೆ. ಅಜಿತ, ಅನೇಮಿ, ಆದಿಪು, ಜೀವಸಂ, ಶಾಂತಿಪು – ಎಂಬುವು ಬಹುಮಟ್ಟಿಗೆ ಸರಿಯಾಗಿವೆ. ಇದೇ ತ್ರ‍್ಯಕ್ಷರೀ ಸಂಕ್ಷಿಪ್ತ ವಿಧಾನವನ್ನು ಉಳಿದ ಗ್ರಂಥಗಳಿಗೆ ಅನ್ವಯಿಸಿಲ್ಲ. ಕಾದಂ, ಜವಿ, ಮಲ್ಲಿ, ಲೀಲಾ, ವಪು, – ಇವನ್ನು ಕಾದಂಬ, ಜಗವಿ, ಮಲ್ಲಿಪು, ಲೀಲಾವ, ವರ್ಧಪು ಎಂಬಂತೆ ಬಳಸಬಹುದಿತ್ತು. ಕವಿರಾಜಮಾರ್ಗಕ್ಕೆ ‘ಕಮಾರ್ಗ’ ಎಂದು ಕೊಟ್ಟಿದ್ದಾರೆ; ಅದನ್ನು ‘ಕವಿರಾ’ ಎಂದು ಕೊಡಬಹುದಿತ್ತು. ಜಾತಿಲಕ, ಮತಿಲಕ, ರಾಚಚಪು – ಎಂಬುವಂತೂ ವಿಚಿತ್ರವಾಗಿವೆ. ಇದರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ನಿಘಂಟು ಕಚೇರಿಯಲ್ಲಿ ಈಗಾಗಲೇ ಕಳೆದ ಹತ್ತು ವರ್ಷಗಳಿಂದ ಬಳಸುತ್ತಿರುವ ಸಂಕ್ಷಿಪ್ತ ರೂಪಗಳನ್ನು ಗಮನಿಸಿ ಅದನ್ನೇ ಅಳವಡಿಸಿಕೊಂಡಿದ್ದರೆ ಸೂಕ್ತವಾಗಿರುತ್ತಿತ್ತು.

೩. ಅನವಶ್ಯಕವಾದ ಅಲಂಕಾರಮಯ ವಾಕ್ಯರಚನೆ ಈ ಬಗೆಯ ಶಾಸ್ತ್ರವಿಷಯ ನಿರೂಪಣೆಗೆ ಸರಿಯಲ್ಲ. ಅದರಿಂದ ವಿಷಯಾನುಸಂಧಾನಕ್ಕೆ ಅಡ್ಡಿಯಾಗುತ್ತದೆಂಬುದಕ್ಕೆ ಇಲ್ಲಿನ ಬರವಣಿಗೆಯೇ ಉದಾಹರಣೆಯಾಗಿದೆ : “ಕನ್ನಡ ಛಂದಃ ಕ್ಷೇತ್ರದ ನಾಲ್ಕು ಲಿಂಗದ ಕಲ್ಲುಗಳು… ಇವು ಕನ್ನಡ ಕಾವ್ಯಲೋಕದ ಪದ್ಯ ಬಂಧಗಳೆಂಬ ಭೂಸೇನಾ ವಿಭಾಗದ ನವಜವಾನರ ನಡೆತಿದ್ದಿ ನೀಳವಾಗಿ ನಡೆಸುವ ಲಿಲಾ ತರಪೇತಿ ಕೆಂದ್ರಗಳು. ಅಲ್ಲಿ… ಗಣಗಳ ತುಕಡಿಗಳು ಪ್ರಾಸದ ಯಮಕದ ಗಮಕದ ವಿನೋಧ ಸ್ಥಾನಗಳು, ಯತಿ-ವಡಿಗಳ ವಿರಾಮ-ಆರಾಮಗಳು, ಸಮ-ಅರ್ಧಸಮ ವಿಷಯ ವ್ಯೂಹಗಳು,… ವಿವಿಧ ಆಯಾಮದ ವ್ಯಾಯಾಮಗಳು, ಲಘುಬಗೆಯಿಂದ ನಡೆದು ಗುರುವಾಗಿ ಅಡ್ಡಬೀಳುವ ಉತ್ಕಟ ಸನ್ನಿವೇಶಗಳು, ಎಡ-ಬಲ ಪಾದಗಳನ್ನು ಬದಲಿಸಿ ಹೊಸ ಬಗೆಯಾಗುವ ಹುರಿ ಹುಮ್ಮಸ್ಸುಗಳು, ಆನೆಯಂತೆ ನಡೆದದ್ದೇ ದಾರಿಯಾಗಿ ನುಗ್ಗಿ ಜನರನ್ನು ಚಕಿತಗೊಳಿಸಿ ನಗಿಸುವುದು, ಹಂಸೆಯಂತೆ ನಡೆಯುವುದು, ಹುಲ್ಲೆಯಂತೆ ಪುಟಿಯುವುದು, ನವಿಲಂತೆ ಕುಣಿಯುವುದು, ಹುಲಿಯಂತೆ ಹೌಹಾರುವುದು, ಹಾವಿನಂತೆ ಉರುಗುವುದು, ಮಿಂಚಿನಂತೆ ಸೆಳೆಸೆಳೆಯಾಗಿ ಹೊಳೆಯುವುದು, ಕೂಗುವುದು, ಕುಕಿಲುವುದು- ಹಲವು ವಿಧ ಆಟಪಾಟ ಛಂದಃ ಪ್ರಪಂಚದಲ್ಲಿ ಈ ಅದ್ಭುತ ಆಮೋದಮಯ ಮಾಯಾ ಲೋಕದಲ್ಲಿ ಮುಗ್ಧರು ಸಹೃದಯರು ಅವರ ಆಹ್ಲಾದ ರಕ್ಷಣೆ ವರ್ಧನೆಗಾಗಿಯೇ ಕವಿಮಹಾನುಭಾವರು ಏರ್ಪಡಿಸಿದ ಗುರು ಲಘುಸೇನಾ ಪ್ರದರ್ಶನಗಳು…” (೧೧), “… ಕೆಲವು ವಿಪುಲವಾಗಿ ಬಳಕೆಯಲ್ಲಿದ್ದುದರಿಂದ ಅಡ್ರೆಸ್ಸಿಲ್ಲದ ನಾರದನಂತೆ ಅತ್ಯಂತ ಪ್ರಿಯವೂ ಆಗಿರಬಹುದು” (೩೩), “ಈ ಅಂಶ ಛಂದಸ್ಸಮೂಹಕ್ಕೆ ಪಿರಿಯಕ್ಕರ ಮಹಾರಾಜ, ತ್ರಿಪದಿ ರಾಣಿ, ಷಟ್ಪದಿ ಯುವರಾಜ, ಗೀತಿಕೆ ಮಹಾಮಂತ್ರಿ”, (೩೪). ಇಂಥ ಬರವಣಿಗೆಯಿಂದ ಸಂಕ್ಷಿಪ್ತತೆ ಮರೆಯಾಗುವುದಲ್ಲದೆ ಹೇಳಲು ಏನೂ ವಿಷಯವಿಲ್ಲದಾಗಲೂ ಪುಟಗಟ್ಟಲೆ ಬರೆದುಕೊಂಡು ಹೋಗುವುದು ಸುಲಭವಾಗಿಬಿಡುತ್ತದೆ. ‘ಅಲ್ಲಿಂದ ಹದಿನೈದು ವರ್ಷಕಾಲ ಕನ್ನಡ ಛಂದೋಲೋಕಕ್ಕೆ ಕಡು ಚಳಿಗಾಲ – ಎಲ್ಲೆಡೆಯೂ ವಾತಾವರಣ ತಂಡಿಯಿಂದ ಸೆಟೆದುಕೊಂಡಂತಿತ್ತು’ (೫) ಎಂಬ ವಾಕ್ಯ ನಗು ಬರಿಸುತ್ತದೆ. ಛಂದಸ್ಸಿನ ಬಗ್ಗೆ ಒಂದು ಗ್ರಂಥವಿಲ್ಲದ ಮಾತ್ರಕ್ಕೆ ಚಳಿಗಾಲ ಬಂದು ವಾತಾವರಣವೇ ಸೆಟಿದುಕೊಂಡಿತ್ತೆಂಬುದು ತೀರಾ ತಮಾಷೆಯಾಗಿ ತೋರುತ್ತದೆ; ಗಂಭೀರ ರೀತಿಯಲ್ಲಿ ಅದರ ಧ್ವನ್ಯರ್ಥವನ್ನು ಹಿಡಿಯಲು ಅಡ್ಡಿಯಾಗುತ್ತದೆ. ಶಾಸ್ತ್ರದ ಬರವಣಿಗೆ ಈ ಬಗೆಯ ಅಪಾಯಗಳಿಗೆ ಬೀಳದಿರಬೇಕಾದರೆ ನಿಯಂತ್ರಣವಿರಬೇಕು.

ಅಲ್ಲಲ್ಲಿ (ಲಿಂಗ, ಅಸ್ರವ, ಸಂವರ) ಧಾರ್ಮಿಕ ಪರಿಭಾಷೆಯನ್ನು ಶಾಸ್ತ್ರ ಪರಿಭಾಷೆಗೆ ಕಸಿಮಾಡಲೆತ್ನಿಸಿದ್ದಾರೆ. ಇದು ಸ್ವಾಗತಾರ್ಹವೆಂಬುದು ಸರಿಯೆ, ಕನ್ನಡಕ್ಕೆ ಹೊಸ ಪರಿಭಾಷೆ ಸೇರುತ್ತಿರಬೇಕೆಂಬ ದೃಷ್ಟಿಯಿಂದ. ಆದರೆ ಅದು ಮತ ಸಂಬಂಧವಾದ ಬಣ್ಣ ತಳೆದ ಮಾತುಗಳಿಂದ ರೂಪಗೊಳ್ಳುವುದು ಅಪಾಯಕಾರಿಯೆಂದು ತೋರುತ್ತದೆ. ಹೊಸ ಪರಿಭಾಷೆಯನ್ನು ಹೊಣೆಯರಿತು ಹಿಂದುಮುಂದು ನೋಡಿ ರೂಢಿಸಿಕೊಳ್ಳಬೇಕಾದ ದಾರಿಯನ್ನು ಪ್ರೊ. ಎಲ್. ಬಸವರಾಜು ಅವರಿಂದ ನಿರೀಕ್ಷಿಸುತ್ತೇವೆ.

೫. ಸಂಪಾದಕರು ವಿನಾಕಾರಣ ರೊಚ್ಚಿಗೆದ್ದವರಂತೆ ಬರೆಯತೊಡಗುತ್ತಾರೆ : ‘ನಾಗವರ್ಮನ ಛಂದೋಂಬುಧಿ ಕನ್ನಡಕ್ಕೆ ಎಷ್ಟು ಅಮೂಲ್ಯವಾದ (ಮೂಲ) ಗ್ರಂಥವೋ ಅಷ್ಟೇ ಅಭೇದ್ಯವಾದ ಸವಾಲುಗಳನ್ನು ಅದು ವಿದ್ವಜ್ಜನರಿಗೆ ಎಸೆದು ತಲೆ ಕೆದರಿಕೊಂಡು ಕಣ್ಣು ಕೆಂಚಗೆ ಮಾಡಿ ನಿಂತಿತ್ತು. ಅದು ಹಾಕಿದ ಯಕ್ಷ ಪ್ರಶ್ನೆಗಳಿಗೆ… ಗಾಲಿ ಸರಿಯಾದ ಉತ್ತರ ಕೊಡಲಾರದೆ ಕಾಲಸರೋವರದ ದಂಡೆಯಲ್ಲಿ ದಿಂಡುರುಳಿದ್ದರು’. – (೫)., “…ಮೇಲೆ ನಮೂದಿಸಿರುವ ವಾರ್ತೆಗಳು ಪೊಳ್ಳಲ್ಲದೆ ಮತ್ತೇನು?… ಆದರೂ ಈ ಛಂದೋಂಬುಧಿಯ ನಾಗವರ್ಮನ ವೆಂಗಿಪಱುವಿನವನು ಎಂಬಿತ್ಯಾದಿಯನ್ನು ಹೇಳುವ (ಪ್ರಕ್ಷಿಪ್ತ) ಭಾಗವೂ ಈಗ ಗುರುತಿಸಲಾಗದ ಕುಹಕ ಕುಯುಕ್ತಿಯು ಅಥವಾ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾದ ಪ್ರಾಂತೀಯ ಕಾಮಾಲೆಯ ಫಲಿತಾಂಶವಷ್ಟೆ” (೫೨). ಹೀಗೆ ಒಮ್ಮೊಮ್ಮೆ ಆವೇಶದಿಂದ ರಭಸವಾಗಿ ಮತುಗಳು ದುಬಾರಿಯಾಗಿ ನುಗ್ಗುವುದುಂಟು. ಇದು ಆರೋಗ್ಯಕರ ಬರವಣಿಗೆಯೆನಿಸುವುದಿಲ್ಲ.

೬. ಸಂಪಾದಕರು ಅಲ್ಲಲ್ಲಿ ಊಹೆಯ ಗಾಳಿಗುದುರೆಸವಾರಿಗೆ ತೊಡಗುತ್ತಾರೆ; “…ತನ್ನ ಛಂದೋಂಬುಧಿಯ ಪ್ರಾರಂಭಕ್ಕೆ ಸಯ್ಯಡಿಯ ಪಿನಾಕಿಯನ್ನು ವರದನಾಗುವಂತೆ ಕೇಳಿಕೊಂಡಿದ್ದಾನೆ. ಮಹಿಷಾಸುರ ಮರ್ದಿನಿ ಭಗವತಿಯು ತನ್ನ ಭುಜಗಳಿಗೆ ವೀರಸಿರಿಯಾಗಿರಲೆಂದು ಹಾರೈಸಿಕೊಂಡಿದ್ದಾನೆ. ಹೀಗೆಂಬ ಸಂದರ್ಭದ ಅವನ ಧಾಟಿಯಲ್ಲಿ ವೀರಕರ್ಪೂ ಉರಿಹತ್ತಿದೆ. ರೌದ್ರಧೂಮ ಸುಳಿಸುತ್ತಿದೆ” (೫೩). ಅಂಕೆಯಿಲ್ಲದೆ ಸಾಗುವ ಇಲ್ಲಿನ ವಾಗ್ಧೋರಣೆಯಲ್ಲಿ ಶೈಥಿಲ್ಯವಿದೆ. ಊಹೆಗೆ ಸ್ವಾತಂತ್ರ‍್ಯವಿದೆ; “ತನ್ನ ಕೃತಿಯ ಕೊನೆಗೆ ‘ಅಱನಂ ಪಾಳಿಯುಮಂ ಪುದುಂಗೊಳಿಸಿಕೊಂಡೀ ಭೂಮಿಯಂ ಭೂಮಿಪರ್ ನೆಱೆಯಾಳ್ಗೆ’ ಎಂದು ಮಾತ್ರ ನಿರೀಕ್ಷಿಸುತ್ತಾನೆ. ಈ ನಿರೀಕ್ಷಣೆಯಲ್ಲಿ ಆಶೆಗಿಂತ ನಿರಾಶೆಯೇ ನೆರಳಾಡುತ್ತಿದೆಯೆನಿಸುವುದು. ಬಹುಶಃ ರಾಜರಿಗೆ ಅವನು ಕೊಟ್ಟ ಗೌರವವನ್ನು ಅವರು ಕೊನೆಯವರೆಗೂ ಉಳಿಸಿಕೊಳ್ಳಲಿಲ್ಲವಾಗಬಹುದು. ಆದುದರಿಂದಲೆ (?) ಅವರೂ ಅವರ ಸಂತಾನ ಇಂದು ನಿರ್ನಾಮವಾಗಿದೆ” (೫೩) – ಇಲ್ಲಿನ ವಿವರಣೆ ಸಮಂಜಸವಾಗಿಲ್ಲ. ಧರ್ಮ ಪರಾಕ್ರಮಗಳಿಂದ ನೆಲವನ್ನು ಆಳಲಿ ಎಂಬುದು ಸಾಮಾನ್ಯವಾಗಿ ಕಾವ್ಯ ನಾಟಕಗಳ ಕಡೆಯಲ್ಲಿ ದೊರೆಗಳು ಬರುವ ಭರತವಾಕ್ಯ; ಇದಕ್ಕೆ ನಾವು ಕನ್ನಡ ಕಾವ್ಯಗಳಿಂದ ಅನೇಕ ಉದಾಹರಣೆಗಳನ್ನು ಕೊಡಬಹುದು; ಹೀಗಿರುವಾಗ, ಈ ವಾಕ್ಯಕ್ಕೆ ವಾಚ್ಯರ್ಥದಾಚೆಗಿನ ಅಥಾನ್ವೇಷಣೆಗೆ ತೊಡಗುವುದರ ಔಚಿತ್ಯ ಕಂಡು ಬರುತ್ತಿಲ್ಲ. ನಾಗವರ್ಮನ ಕೃತಿಯ ಆಂತರಿಕ ಪ್ರಮಾಣಗಳು ಇದ್ದನ್ನು ಪುಷ್ಟಿಗೊಡುತ್ತಿಲ್ಲ. ಆತ ರಾಜರಿಗೆ ಕೊಟ್ಟ ಮರ‍್ಯಾದೆಯನ್ನು ಅವರು ಉಳಿಸಿಕೊಳ್ಳಲಿಲ್ಲವೆಂಬ ಹೇಳಿಕೆ ಆಧಾರವಿಲ್ಲದ್ದು; ಗೌರವಕ್ಕೆ ಭಾಜನರಾಗದ್ದರಿಂದ ರಾಜರೂ ರಾಜರ ಸಂತಾನವೂ ನಿರ್ನಾಮವಾಯಿತೆಂಬ ಮಾತಂತೂ ಅಭಾಸವಾಗಿದೆ. ಕವಿ ಮತ್ತು ಕವಿಯ ಸಂತಾನ ನಿರ್ನಾಮವಾಗಿಲ್ಲವೆ? ನಿರ್ನಾಮವಾಗದ ಸಂತಾನವಾವುದು? ತಾನು ಬರೆದ ಒಂದು ಕೃತಿ ಉಳಿದ ಮಾತ್ರಕ್ಕೆ ಅವನಿಗೆ ಅಗ್ಗಳಿಕೆಯ ವೀರಪಟ್ಟ ಕಟ್ಟಿ, ಅವನಿಗೆ ಆಶ್ರಯ ಕೊಟ್ಟವರಿಗೆ ತೆಗಳಿಕೆಯ ಮಾತುಗಳನ್ನು ಆಡುವುದು ಸರಿಯಲ್ಲ.

೭. “ಛಂದೋಂಬುಧಿಯ ನಾಗವರ್ಮ ಅಂಥ ಜೈನನಾಗಿದ್ದರೆ ಶಿವ (ಮತ್ತೆ ಕೆಲವು ಪ್ರತಿಗಳ ಪ್ರಕಾರ) ಕೇಶವರನ್ನೇಕೆ ತನ್ನ ಛಂದೋಂಬುಧಿಯ ಪ್ರಾರಂಭದಲ್ಲಿ ಸ್ತುತಿಸುತ್ತಿದ್ದ? ಎಲ್ಲಕ್ಕಿಂತ ದೊಡ್ಡದಾದ ಅಂಶಗಣವನ್ನು ‘ರುದ್ರ’ ಎಂದೇಕೆ ಹೆಸರಿಸುತ್ತಿದ್ದ? ಆದ್ದರಿಂದ ಇವನು ಜೈನೇತರನೆಂಬುದಷ್ಟೇ ಅಲ್ಲ, ‘ಗುರುವೆಂಬುದು ಕೇಳ್ ತ್ರಿಯಂಬಕಂ, ಲಘುಮುರಾಂತಕಂ’ ಎಂದು ಶಿವಪಾರಮ್ಯವನ್ನು ಒಪ್ಪಿಕೊಂಡಿರುವ ಒಬ್ಬ ತೀವ್ರ ಶೈವನೆಂಬುದೂ ಯಾವ ಕಾರಣಗಳಿಂದಲೇ ಆಗಲಿ ಅಲ್ಲಗಳೆಯಲಾಗದ ಸತ್ಯ ಸಂಗತಿ” (೫೨). ಇಲ್ಲಿನ ವಿವರಣೆ ವಿರೋಧಾಭಾಸಗಳಿಂದ ಕೂಡಿದೆ. ಒಂದು ಧರ್ಮಕ್ಕೆ ಸೇರಿದವನು ಅನ್ಯಧರ್ಮದ ದೇವರನ್ನು, ಕೆಲವು ಅನಿವಾರ್ಯ ಕಾರಣಗಳಿಗಾಗಿ ಕಾವ್ಯಾರಂಭದಲ್ಲಿಯೇ ಸ್ತುತಿಸಿರುವುದಕ್ಕೆ ಕನ್ನಡ ಕಾವ್ಯ ಪರಂಪರೆಯಲ್ಲಿ ಉದಾಹರಣೆಗಳಿವೆ. ಒಂದು ಗಣವನ್ನು ‘ರುದ್ರ’ವೆಂದು ಹೆಸರಿಸಿದ್ದಾನೆಂಬ ಕಾರಣದಿಂದ ಆತನ ಮತ ನಿರ್ಧಾರಮಾಡುವುದು ಸಕ್ರಮವಲ್ಲ. ಅದು ಪರಿಭಾಷೆಗೆ ಸೇರಿದ ಪ್ರಯೋಗ. ಪರಿಭಾಷೆ ಕವಿಯಿಂದ ಕವಿಗೆ ಕೇವಲ ಮತೀಯ ಕಾರಣದಿಂದ ವ್ಯತ್ಯಾಸವಾಗುವುದು ಕಡಮೆ. ಅಲ್ಲದೆ ನಾಗವರ್ಮ ಆಧರಿಸಿರಬಹುದಾದ ಕೃತಿಯಲ್ಲಿ (ಜಯಕೀರ್ತಿಯನ್ನು ಬಿಟ್ಟು) ಅಂಶಗಣಗಳ ಹೆಸರು ಹೇಗಿತ್ತೊ ಹಾಗೆಯೇ ಈತನೂ ಅನುಸರಿಸಿರಬಹುದು. ಆ ವಿವರಣೆಯಲ್ಲಿ ನನ್ನ ಅಭಿಪ್ರಾಯವಿದು; ನಾಗವರ್ಮ ಜೈನನಲ್ಲದಿರಬಹುದು, ಆದರೆ ಅವನ ಅಜೈನತ್ವಕ್ಕೆ ಆರಿಸಿಕೊಂಡ ಈ ಕಾರಣ ಸಾಧುವಲ್ಲ. ಇದಕ್ಕಿಂತ ಪ್ರಬಲವಾದ ಅಂತರ ಬಾಹ್ಯ ಪ್ರಮಾಣಗಳ ಪೂರಕ ಸಾಮಗ್ರಿ ದೊರೆತಿದ್ದರೆ ಮಾತ್ರ ಹೇಳಬಹುದಾದುದನ್ನು, ಅವುಗಳ ಅಭಾವವಿರುವಾಗಲೂ ಅವಧಾರಣೆಯಿತ್ತು ಹೇಳಹೊರಟಿರುವ ಸಂಪಾದಕರ ಪ್ರಯತ್ನ ಪ್ರಶ್ನಾರ್ಹ.

೮. ಸ್ವೀಕೃತ ಪಾಠವನ್ನಿಟ್ಟುಕೊಂಡು ಕೊಟ್ಟಿರುವ ಪದ್ಯಗಳ ನಡುವೆ ಅರ್ಥ ವಿರಾಮ ಚಿಹ್ನೆ ಬಳಸಿರುವುದು ವಿಚಿತ್ರವಾಗಿದೆ. ಇದೇನು ಜನಪ್ರಿಯ ಆವೃತ್ತಿಯೇನೋ ಎಂಬ ಸಂದೇಹ ತಂದುಕೊಡುತ್ತದೆ. ಆದರೆ ಸಂಪಾದಕರು ಈ ವಿರಾಮ ಚಿಹ್ನೆಗಳನ್ನು ಕೆಲವು ಪದ್ಯಗಳಿಗೆ ಮಾತ್ರ, ಒಮ್ಮೊಮ್ಮೆ ಕೆಲವು ಪದ್ಯಗಳ ಕೆಲವು ಸಾಲುಗಳಿಗೆ ಮಾತ್ರ ಹಾಕಿದ್ದಾರೆ. ಈ ಕ್ರಮ ಅಕ್ರಮ; ಕೆಲವು ಕಡೆ ಕೊಡುವುದು, ಕೆಲವು ಕಡೆ ಬಿಡುವುದು, ಒಂದೆ ಪದ್ಯದಲ್ಲಿ ಅರ್ಧಕ್ಕೆ ಕೊಡುವುದು ಇನ್ನರ್ಧಕ್ಕೆ ಕೊಡದಿರುವುದು ಅನವಧಾನದ ಪರಿಣಾಮ.

೯. ಪದ್ಯಗಳ ಪಾಠದಲ್ಲಿ ಛಂದೋಭಂಗವಾಗಿರುವ ಪ್ರಸಂಗಗಳೂ ಇವೆ. ಇವು ಮುದ್ರಣ ದೋಷದ ಪರಿಣಾಮವಲ್ಲ, ಸಂಪಾದಕರ ಅವಜ್ಞೆಯ ಫಲ. ಎರಡು ಉದಾಹರಣೆ ಕೊಡುತ್ತೇನೆ;

ಅ. ಛಂದೋಂಬುಧಿಯ ೩ನೆಯ ಪದ್ಯದ (ಪುಟ ೧) ಕಡೆಯ ಶಬ್ದ ‘ನಾಗವರ್ಮನ’ ಎಂದಿದೆ, ಇದು ‘ನಾಗವರ್ಮನಾ’ ಎಂದು ದೀರ್ಘ ಸ್ವರಾಂತವಾಗಿರಬೇಕು.

ಆ. -ಅದೇ- ೩ನೇ ಪದ್ಯದ (ಪುಟ ೨) ಕಡೆಯ ಶಬ್ದ ‘ಕವಿ ನಾಗವರ್ಮನ’ ಎಂದಿದೆ, ಇದೂ ಕೂಡ ‘ಕವಿನಾಗವರ್ಮನಾ’ ಎಂದು ದೀರ್ಘಾಂತವಾಗಿರಬೇಕು.

೧೦. ಇಂಥ ಗ್ರಂಥಗಳ ಸಂಪಾದಕರು ತಾವು ಗ್ರಂಥಪಾಠ ನಿಷ್ಕರ್ಷೆಗಾಗಿ ಬಳಿಸಿಕೊಂಡಿರುವ ಪ್ರತಿಗಳ ರಚನೆಯ ಕಾಲ, ಱ ….. ಕಾರಾದಿ ವರ್ಣಗಳ ಬಳಕೆ, ಪ್ರತಿಕಾರರ ವಿಚಾರ, ಇತರ ವೈಶಿಷ್ಟ್ಯಗಳು – ಮೊದಲಾದ, ಪ್ರತಿಗಳ ಸ್ವರೂಪ ವಿಚಾರವನ್ನು ತಿಲಿಸುವುದು ವಾಡಿಕೆ.ಜತೆಗೆ ಹಲವು ಪ್ರತಿಗಳನ್ನು ಬಳಸಿಕೊಂಡಾಗ ಆ ಪ್ರತಿಗಳ ಪೀಳಿಗೆ ತಿಳಿಸಿ, ಸಂಪದಕರು ಅವುಗಳಲ್ಲಿ ಯಾವುದನ್ನು ಮೂಲಪಾಠ ನಿಷ್ಕಷೇಗೆ ಸಹಾಯಕವೆಂದು ಸ್ವೀಕರಿಸಿರುವರೆಂಬುದನ್ನು ಸಕಾರಣವಾಗಿ ನಿರ್ದೇಶಿಸಬೇಕಾಗುತ್ತದೆ. ಆದರೆ ಈ ಸಂಪಾದಕರು ಛಂದೋಂಬುಧಿ ವಿಚಾರವಾಗಿ ಅಂಥ ವ್ಯವಸ್ಥಿತ ಕ್ರಮವನ್ನು ಪಾಲಿಸದಿರುವುದು ಸೋಜಿಗಕ್ಕಿಂತ ಶೋಚನೀಯವಾಗಿದೆ. ಪುಟ ೪ ರಲ್ಲಿನ ಅಡಿಟಿಪ್ಪಣಿಯಲ್ಲಿ, ತಾವು ಹಿಂದಿನ ಪರಿಷ್ಕರಣಗಳ ಜತೆಗೆ ಮೈಸೂರು ಕ.ಅ. ಸಂಸ್ಥೆಯಲ್ಲಿ ಕೆ.ಎ.೮, ಕೆ.ಎ.೧೨, ಕೆ.೨೩೧, ಕೆ.ಎ.೨೮೩, ಕೆ.ಎ. ೨೮೭, ಕೆ.೫೮೨ನೇ ನಂಬರಿನ ಓಲೆಯ ಮತ್ತು ಕಾಗದ ಪ್ರತಿಗಳನ್ನೂ ಬಳಸಿಕೊಂಡು ನಾಗವರ್ಮನ ಛಂದೋಂಬುಧಿಯ ಒಂದು ಸುಧಾರಿತ ಪರಿಷ್ಕರಣವನ್ನು ತಂದಿದ್ದೇನೆ’ ಎಂಬುದಾಗಿ ತಿಳಿಸಿದ್ದಾರೆ. ಅವರ ಈ ಮುದ್ರಣ ಸುಧಾರಿತ ಪರಿಷ್ಕರಣವೆಂದು ಓದುಗರಿಗೆ ವಿಶ್ವಾಸ ಮೂಡಲು ಬೇಕಾದ ವಿವರಣೆಗಳನ್ನೂ ಸಂಪಾದಕರು ಕೊಡಬೇಕಿತ್ತು. ಆ ಓಲೆಗರಿ ಮತ್ತು ಕಾಗದ ಪ್ರತಿಗಳಲ್ಲಿ ಕೃತಿಕಾರನ ಕಾಲಕ್ಕೆ ಹತ್ತಿರವಾದುದು ಯಾವುದೆಂಬುದನ್ನು ಅವರು ಹೇಳುವುದಿಲ್ಲ; ಅಥವಾ ಇವುಗಳಲ್ಲಿ ಯಾವುದಕ್ಕಾದರೂ (ಅಥವಾ ಯಾವುದರಲ್ಲೂ) ಕಲಾನಿರ್ದೇಶನವಿರದಿದ್ದಲ್ಲಿ ಅದನ್ನಾದರೂ ಹೇಳಬಹುದಿತ್ತು ಸಂಪಾದಕರೇ ವಿವರಿಸದಿದ್ದಾಗ ಓದುಗರಿಗೆ ಹಸ್ತಪ್ರತಿಗಳ ಸ್ವರೂಪ ಗೊತ್ತಾಗುವುದೂ, ಹಿಂದಿನ ಮುದ್ರಣಗಳಿಗಿಂತ ಇದು ಸುಧಾರಿತ ಪರಿಷ್ಕರಣವೆಂದು ಗ್ರಹಿಸುವುದೂ, ಯಾವ ಅಂಶಗಳನ್ನು ಅವರು ಉತ್ತಮಪಡಿಸಿದ್ದಾರೆಂದು ಗುರುತಿಸುವುದೂ ಕಷ್ಟವಾಗುತ್ತದೆ. ತೀರ ಪ್ರಾಸಂಗಿಕವಾಗಿ ಸಂಪದಕರು ಪುಟ (೨) ರಲ್ಲಿ ‘ಪ್ರಸ್ತುತ ಸಂಪಾದಕನು ಛಂದೋಂಬುಧಿಯ ಪರಿಷ್ಕರಣಕ್ಕೆ ಬಳಸಿಕೊಂಡಿರುವ ಹಲವು ಪ್ರತಿಗಳಲ್ಲಿ ಅತ್ಯಂತ ವಿಶ್ವಾಸಾರ್ಹವಾದ ಜೈನ ಪ್ರತಿ ಕೆ.ಎ.೮…’ ಎಂದು ಹೇಳಿದ್ದಾರೆ. ವಾಸ್ತವವಾಗಿ ಈ ಮಾತು ಪುಟ ೪ರ ಅಡಿಟಿಪ್ಪಣಿಯಲ್ಲಿ ಬರಬೇಕಿತ್ತು. ಇರಲಿ. ಈಗ ಬರುವ ಪ್ರಶ್ನೆ ಈ ಕೆ.ಎ.೮. ಎಂಬ ಹಸ್ತಪ್ರತಿಯೇ ಏಕೆ ವಿಶ್ವಸನೀಯವಾಗಿದೆ. ಉಳಿದವು ಏಕಲ್ಲ ಎಂಬುದು. ಅದಕ್ಕೆ ಉತ್ತರ ಸಿಗುವುದಿಲ್ಲ. ಕೆ.ಎ.೮. ಎಂಬುದು ಜೈನ ಪ್ರತಿಯಾದರೆ ಇನ್ನುಳಿದ ಹಸ್ತಪ್ರತಿಗಳಲ್ಲಿ ಇವರು ಹೇಳುವ ಬ್ರಾಹ್ಮಣ – ಶೈವ ಎಂದು ವಿಂಗಡಿಸಿಕೊಂಡಿರುವ ಪ್ರತಿಗಳು ಯಾವುವು, ಆಧಾರಗಳಾವುದು ಎಂಬುದೂ ತಿಳಿದು ಬರುವುದಿಲ್ಲ. ಆರನೆಯ ಪದ್ಯ.

ಇಂದುಧರನುಮೆಗೆ ಪೇೞ್ದಾ
ಛಂದಂ ಪಿಂಗಳನಿನವನಿಗಂ ಪರಪಿದೊಡಾ
ಛಂದೋಂಬು ರಾಶಿಯೊಳಂ
ಲ್ತಂದದೆ ನಿಜಸತಿಗೆ ನಾಗವರ್ಮಂ ಪೇೞ್ದಂ

ಎಂಬುದಾಗಿರುವುದನ್ನು ಪರಿಗ್ರಹಿಸಿದ್ದಾರೆ. ಆದರೆ ಇದಕ್ಕೆ ಇವರು ಅತ್ಯಂತ ವಿಶ್ವಾಸಾರ್ಹವಾದ ಪ್ರತಿಯೆಂದು ಹೆಳಿದ ಕೆ.ಎ.೮. ಪ್ರತಿಯಲ್ಲಿ

ದೇವಂ ದೇವಿಗೆ ಪೇೞ್ದುದ
ನಾವಂ ಪಿಂಗಳನೆ ಕೇಳ್ದು ರಿಸಿಯರ್ಗಂ ಪೇ
ಱ್ದಾ ವಿಧಮನೊಲ್ದು ಪೇೞ್ದಪೆ
ಭಾವಿಸಿಕೇಳ್ ಕೆಳದಿ ಛಂದಮಂ ಕ್ರಮದಿಂದಂ

ಎಂದಿದೆ ಈ ಪದ್ಯವನ್ನು ಸಂಪಾದಕರು ಸ್ವೀಕರಿಸದಿರುವುದಕ್ಕೆ ಸಮಾಧಾನಕರ ಕಾರಣಗಳನ್ನಿತ್ತಿಲ್ಲ. ಅಲ್ಲದೆ ಕೆ.ಎ.೮. ಪ್ರತಿಯ ಜತೆಗೆ ಕೆ.ಎ.೨೮೩ ಮತ್ತು ಕೆ.೫೮೨ ಸಂಖ್ಯೆಯ ಪ್ರತಿಗಳಲ್ಲೂ ಈ ಪದ್ಯವಿರುವುದು ತುಂಬ ಗಮನಾರ್ಹವಾಗಿದ್ದು ಸಂಪಾದಕರು ತಳೆದ ತೀರ್ಮಾನಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಪೋಷಿಸುತ್ತದೆ. ಅತ್ಯಂತ ವಿಶ್ವಾಸಾರ್ಹವೆಂದು ಸಂಪಾದಕರಿಗೂ ಮನವರಿಕೆಯಾಗಿರುವ ಪ್ರತಿಯ ಜತೆಗೆ ಇನ್ನೆರಡು ಪ್ರತಿಗಳಲ್ಲೂ ಇರುವ ಒಂದು ಪದ್ಯವನ್ನು (ಇಲ್ಲಿ ವಿಮರ್ಶೆಗೆಂದು ಒಂದು ಪದ್ಯವನ್ನು ಹೆಸರಿಸಿದ್ದೇನೆ ಅಷ್ಟೆ) ಸ್ವೀಕೃತ ಪಾಠದಿಂದ ಕೆಳಗಿಳಿಸಿ ಅಡಿಟಿಪ್ಪಣಿಯಲ್ಲಿಡುವುದಕ್ಕೆ ಸಬಲವಾದ ಆಧಾರಗಳು ಬೇಕಾಗುತ್ತವೆ. ಇಲ್ಲಿ ಸಂಪಾದಕರ ಔಚಿತ್ಯ ಪ್ರಶ್ನಾರ್ಹವಾಗಿದೆ. ತಮಗೆ ಬೇಕಾದ ಪದ್ಯಗಳನ್ನು ಸ್ವೀಕೃತ ಪಾಠ ಕ್ರಮಕ್ಕೆ ನಿಲ್ಲಿಸುವಾಗ ಕೆ.ಎ.೮.ರ ಪ್ರತಿಯನ್ನು ಬೆಂಬಲಿಸಿಕೊಳ್ಳುವುದು, ಬೇಡವಾದ ಪದ್ಯ ಕೆ.ಎ.೮. ಮತ್ತು ಪೂರಕವಾಗಿ ಇತರ ಪ್ರತಿಗಳಲ್ಲಿದ್ರೂ ಕಡೆಗಣಿಸುವುದು – ಹೀಗೆ ಮಾಡಿದಂತೆ ಅಲ್ಲಲ್ಲಿ ತೋರುತ್ತದೆ. ಸ್ಪಷ್ಟವಾಗಿ ಹೇಳುವುದಾದರೆ ಸಂಪಾದಕರು ಛಂದೋಂಬುಧಿಯ ಕರ್ತೃವನ್ನು ಶೈವನಿರಬೇಕೆಂದು ಪೂರ್ವಾಗ್ರಹ ಪ್ರೇರಿತರಾಗಿ ಹೊರಟು, ಅದರ ಸಂಸ್ಥಾಪನೆಗೆ ಬರುವ ಪೂರಕ ಸಾಮಗ್ರಿಗೆ ಮಹತ್ವವಿತ್ತು, ಅನುಷಂಗಿಕಾಂಶಗಳನ್ನು ಗೌಣವಾಗಿ ತಿಳಿದಿರುವಂತೆ ಅಭಿಪ್ರಾಯ ಬರಲು ಅವಕಾಶವಾಗಿದೆ; ‘ಶಿವಪಾರಮ್ಯವನ್ನು ಒಪ್ಪಿಕೊಂಡಿರುವ ಒಬ್ಬ ತೀವ್ರ ಶೈವನೆಂಬುದೂ ಯಾವ ಕಾರಣಗಳಿಂದಲೇ ಆಗಲಿ ಅಲ್ಲಗಳೆಯಲಾಗದ ಸತ್ಯಸಂಗತಿ… ಅವನ ಧಾಟಿಯಲ್ಲಿ ವೀರ ಕರ್ಪೂರ ಉರಿಹತ್ತಿದೆ, ರೌದ್ರ ಧೂಮ ಸುಳಿಸುತ್ತಿದೆ’ (೫೨-೫೩) ಎಂಬಂಥ ಹೇಳಿಎಕಗಳಲ್ಲಿ ಇತ್ತಿರುವ ಒತ್ತು ಸಂಪಾದಕರ ಒಲವರವನ್ನು ಕನ್ನಡಿಸುತ್ತವೆ. ಇದರಿಂದಗಿ ಛಂದೋಂಬುಧಿಯ ಪ್ರಕೃತ ಪರಿಷ್ಕೃತ ಮುದ್ರಣವನ್ನು ಎಚ್ಚರದಿಂದ ಬಳಸಬೇಕಾಗುತ್ತದೆ. ಛಂದೋಂಬುಧಿಯನ್ನು ಬಿಟ್ಟು ಉಳಿದ ಮೂರು ಕೃತಿಗಳಲ್ಲಿ ಈ ಬಗೆಯ ಸಿಕ್ಕು ಸಮಸ್ಯೆಗಳಿಲ್ಲ.