ಡಾ|| ವಿದ್ಯಾಶಂಕರರು ಈ ವರ್ಷ, ಒಟ್ಟು ಅಯ್ದು ಕಾವ್ಯಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ; ದೀಪದ ಕಲಿಯರ ಕಾವ್ಯ, ಶಾಂತಿ ಪುರಾಣ ಸಂಗ್ರಹ, ಅನಂತನಾಥ ಪುರಾಣ ಸಂಗ್ರಹ, ಧರ್ಮ ಸಂಪಾದನೆ ಮತ್ತು ರಾಘವಾಂಕ ಚತುರ್ಮುಖ. ಇವುಗಳಲ್ಲಿ ಕಡೆಯ ಎರಡು ಕಾವ್ಯಗಳನ್ನು ತಮ್ಮ ಸಹೋದ್ಯೋಗಿ ಹು.ಕಾ.ಜಯದೇವರ ಜತೆಯಲ್ಲಿ ಸಂಪಾದಿಸಿದ್ದಾರೆ.

ದೀಪದ ಕಲಿಯರ ಕಾವ್ಯ ಅಂಬುಲಿಗೆ ಚೆನ್ನಮಲ್ಲೇಶ ಕವಿಯ ತೀರ ಕಳಪೆಯಾದ ಸಾಂಗತ್ಯ ಕಾವ್ಯ. ಸಾಂಗತ್ಯದ ಓಟ ಅಪ್ರಸನ್ನವಾಗಿದೆ, ವಸ್ತು ಸಾಮಾನ್ಯ, ನಿರೂಪಣೆ ನೀರಸ, ಇದರ ಪ್ರಸ್ತುತ ಸಂಪಾದನೆ ಸಾಕಷ್ಟು ಶ್ರದ್ಧೆಯಿಂದ ನಡೆದಿದೆ; ಪಾಠಾಂತರಗಳ ಆಯ್ಕೆಯಲ್ಲಿ ಅನುಬಂಧನ ಸಂಯೋಜನೆಯಲ್ಲಿ ಶ್ರಮವಹಿಸಿರುವುದು ಎದ್ದು ಕಾಣುತ್ತದೆ.

ಇದರಲ್ಲಿ ಕಂಡು ಬರುವ ಕೆಲವು ನ್ಯೂನತೆಗಳು:

೧. ಅನುಬಂಧ ಅಕಾರಾದಿಯಾಗಿಲ್ಲ.

೨. ಪೀಠಿಕೆಯಲ್ಲಿ ಕವಿಯ ಕಾಲ ವಿಚಾರದ ಚರ್ಚೆಯಿಲ್ಲ. ಕವಿ ಚರಿತೆಯಲ್ಲಿ ಸುಮಾರು ೧೭೦೦ ಎಂದಿದೆ – ಎಂದು ಹೇಳುತ್ತಾರೆಯೇ ಹೊರತು ಅದನ್ನು ಒಪ್ಪಬೇಕೆ ಅಥವಾ ಬೇಡವೇ ಎಂಬ ವಿವರಣೆಯೇ ಇಲ್ಲ.

೩. ಕಾವ್ಯದಲ್ಲಿ ಬರುವ ಧರಣಿಕೇಶನ ಕಥೆಯಲ್ಲಿ ಮಹಾಭಾರತ ರಾಮಾಯಣಗಳ ಕಥೆಯ ಪ್ರಭಾವ ಹೇಗೆ ಸಮಾವೇಶವಾಗಿದೆಯೆಂಬುದರ ತೌಲನಿಕ ಅಧ್ಯಯನದ ವಿವರವಿಲ್ಲ.

೪. ಈಗಾಗಲೇ ಮೂರು ಸಲ ಅಚ್ಚಾದ ಕೃತಿಯಾದುದರಿಂದಲೂ, ಇದು ತೀರ ಸಾಮಾನ್ಯ ಕೃತಿಯಾದುದರಿಂದಲೂ ನಾಲ್ಕನೆಯದಾದ ಈ ಪ್ರಕೃತ ಮುದ್ರಣಕ್ಕೆ ಅವಕಾಶ ಕಾಣುವುದಿಲ್ಲ.

೫. ಚೆನ್ನಮಲ್ಲೇಶ – ಚನ್ನಮಲ್ಲೇಶ ಎಂಬಂಥ ಜೋಡಿ ರೂಪಗಳಲ್ಲಿ ಯಾವುದಾದರೂ ಒಂದನ್ನು ಸ್ವೀಕರಿಸಬೇಕಿತ್ತು.

೬. ಪಾಠಾಂತರ ಕೊಡುವ ಕ್ರಮದಲ್ಲಿನ ನ್ಯೂನತೆ : ಸ್ವೀಕೃತ ಪಾಠದಲ್ಲಿ ಗುರುತಿಸಿದ ಎರಡು ಅಂಕಿಗಳ ನಡುವೆ ಇರುವ ಪಠ್ಯ ಭಾಗಕ್ಕೆ ಆಯಾ ಪುಟಗಳಲ್ಲಿ ಕೆಳಗಡೆ ಅನ್ಯ ಪ್ರತಿಗಳ ಪಾಠಾಂತರಗಳನ್ನು ತೋರಿಸುವ ಕ್ರಮ ಸರಿಯೆ. ಆದರೆ ಈ ಎರಡು ಅಂಕಿಗಳನ್ನು ೧-೨, ೩-೪, ೫-೬, ೭-೮ ಎಂಬ ಕ್ರಮದಲ್ಲಿ ಕೊಟ್ಟಿರುವುದು ಸರಿಯಲ್ಲ. ಅದನ್ನು ೧-೧, ೨-೨, ೩-೩, ೪-೪ ಎಂಬ ಕ್ರಮದಲ್ಲಿ ಕೊಡುವುದು ಹೆಚ್ಚು ಸೂಕ್ತವಾಗಿರುತ್ತದೆ. ಮೂಲ ಕಾವ್ಯದ ಅರ್ಥಕಳಚದಂತೆ ಸಂಗ್ರಹ ಮಾಡಬೇಕಾದ ಹೊಣೆ ಇರುತ್ತದೆ.

ಇನ್ನು ಪೊನ್ನ ಕವಿಯ ಶಾಂತಿಪುರಾಣ ಸಂಗ್ರಹ ಹಾಗೂ ಜನ್ನ ಕವಿಯ ಅನಂತಪುರಾಣ ಸಂಗ್ರಹಗಳ ಪರಿಶೀಲನೆಗೆ ತೊಡಗುವ ಮೊದಲೇ ಹೇಳಬೇಕಾದ ಮಾತಿದೆ. ಇಂಥ ಸಂಗ್ರಹಗಳ ಬಗ್ಗೆ ಗ್ರಂಥ ಸಂಪಾದನೆಯ ದೃಷ್ಟಿಯಿಂದ ಹೆಚ್ಚಿಗೆ ಹೇಳುವಂತಹುದು ಇರುವುದಿಲ್ಲ. ಇದು ಸಾಮಾನ್ಯವಾಗಿ ಹಳಗನ್ನಡ ಗ್ರಂಥಗಳ ಸಂಗ್ರಹಗಳಿಗೆಲ್ಲ ಅನ್ವಯಿಸುವ ಅಭಿಪ್ರಾಯ. ಏಕೆಂದರೆ ಇಂಥ ಸಂಗ್ರಹಗಳ ಉದ್ದೇಶ ಪರಿಮಿತವಾಗಿರುತ್ತದೆ, ಮುಖ್ಯವಾಗಿ ಪಠ್ಯಪುಸ್ತಕವಾಗು ಅಪೇಕ್ಷೆಗಳನ್ನು ಹೊಂದಿರುತ್ತದೆ. ಹಾಗಿರುವುದು ತಪ್ಪೆಂದು ನನ್ನ ಟೀಕೆಯಲ್ಲ. ಈ ಉತ್ತರಾರ್ಧವೇ ಗುರಿಯಾಗಿರುವುದಾದರೆ ಪೀಠಿಕೆ ಅನುಬಂಧ ಕವಿಕಾವ್ಯ ಪರಿಚಯ ಸಮಗ್ರವಾಗಿ ಬರಬೇಕಾಗುತ್ತದೆ; ಪಠ್ಯವನ್ನು ಬೋಧಿಸುವ ಅಧ್ಯಾಪಕರಿಗೂ ಓದುವ ವಿದ್ಯಾಥಿಗಳಿಗೂ ಆದಷ್ಟೂ ಪೂರ್ಣ ಸಹಾಯಕ ಅಂಶಗಳನ್ನು ಒದಗಿಸಿರಬೇಕಾಗುತ್ತದೆ. ಈ ಸಂಗ್ರಹಕಾರರು ಆ ಕಾರ್ಯವನ್ನು ಸಾಕಷ್ಟು ಮುತುವರ್ಜಿಯಿಂದ ಮಾಡಿದ್ದಾರೆಂಬುದನ್ನು ಒಪ್ಪಿಕೊಳ್ಳಬೇಕು. ಸಂಪಾದಕರು ವಿಮರ್ಶೆಯ ಭಾಗದಲ್ಲಿ ತೂಕ ತಪ್ಪುವುದುಂಟು. ಅದಕ್ಕೆ ಅವರ ಔದಾರ್ಯ ಕಾರಣ. ಅರ್ಥಕೋಶದಲ್ಲಿ ಒಂದೊಂದು ಪುಟದಲ್ಲಿ ಬರುವ ಕೆಲವು ಕಠಿಣ ಶಬ್ದಗಳಿಗೆ ಆಯಾ ಪುಟ ಸಂಖ್ಯೆಯಡಿ ಹೇಳುತ್ತಾ ಹೋಗಿದ್ದಾರೆ; ಅದೂ ಅಕಾರಾದಿಯಾಗಿ ಅಲ್ಲ, ಪದ್ಯದ ಕ್ರಮ ಅನುಸರಿಸಿ. ಆದರೆ ಒಟ್ಟು ಕಠಿಣ ಶಬ್ದಗಳನ್ನು ಸೇರಿಸಿ ಅವನ್ನು ಅಕಾರಾದಿಯಾಗಿ ಕೊಟ್ಟಿದ್ದರೆ ಸರಿಯಾಗಿರುತ್ತಿತ್ತು. ಪೂರ್ಣ ಪ್ರಮಾಣದ ಕಾವ್ಯವನ್ನು ಕೆಲವು ಉಚಿತ ಕಾರಣಗಳಿಗಾಗಿ ಸಂಗ್ರಹಕ್ಕಿಳಿಸುವಾಗಲೂ ಶುದ್ಧ ಅಥವಾ ಉತ್ತಮ ಪಾಠ ನಿರ್ಣಯದ ದೃಷ್ಟಿಯಿಂದ ಬೇರೆ ಬೇರೆ ಹಸ್ತ ಪ್ರತಿಗಳನ್ನು ಉಪಯೋಗಿಸುವುದು ಉಪೇಕ್ಷಣೀಯ; ಹಾಗೆ ಮಾಡುವುದರಿಂದ ಸಂಗ್ರಹಗಳಿವೂ ವಿಶೇಷ ಮೌಲ್ಯ ಬರುವುದು ಸಾಧ್ಯ. ಪಂಪ ರಾಮಾಯಣ ಸಂಗ್ರಹ, ಸಿದ್ಧರಾಮ ಚರಿತೆ ಸಂಗ್ರಹ, ಹರಿಶ್ಚಂದ್ರ ಕಾವ್ಯ ಸಂಗ್ರಹ ಮೊದಲಾದುವನ್ನು ಇಲ್ಲಿ ನೆನೆಯಬಹುದು. ಪ್ರಕೃತ ಸಂಗ್ರಹಗಳು ಅಂಥ ಪ್ರಯತ್ನಕ್ಕೆ ತೊಡಗಿಲ್ಲ.

ಚಿಕ್ಕಮಲ್ಲಿಕಾರ್ಜುನ ಕವಿಯ ‘ಧರ್ಮಸಂಪಾದನೆ ಕಾವ್ಯ ಸಾಹಿತ್ಯಿಕವಾಗಿ ಸಪ್ಪೆಯಾಗಿದ್ದರೂ ಜನಪದ ಅಧಿಗಮದಿಂದ ಎತ್ತಿಕೊಂಡ ಕಥೆಗಳೂ ಅದರಲ್ಲಿ ಸೇರಿಕೊಂಡಿರುವುದರಿಂದ ಅದೊಂದು ಸ್ವಾರಸ್ಯವಾದ ಕಾವ್ಯವಾಗಿದೆ. ಕವಿಚರಿತೆಯಲ್ಲಿ ಅನುಕ್ತವೂ, ಏಕೈಕ ಹಸ್ತ ಪ್ರತಿಯುಳ್ಳದ್ದೂ ಆದ ಈ ಪರಿವರ್ಧಿನೀ ಷಟ್ಪದಿ ಕಾವ್ಯವನ್ನು ಸಂಪಾದಕರು ಅಚ್ಚುಕಟ್ಟಾಗಿ ಸಿದ್ಧಪಡಿಸಿಕೊಟ್ಟಿದ್ದಾರೆ.

ರಾಘವಾಂಕ ಚತುರ್ಮುಖ ಒಂದು ಸಂಕಲನ ಕೃತಿ. ಇದರಲ್ಲಿ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ, ಸಿದ್ಧರಾಮ ಚರಿತೆ, ಸೋಮನಾಥ ಚರಿತೆ, ವೀರೇಶ ಚರಿತೆ- ಎಂಬ ನಾಲ್ಕು ಕಾವ್ಯಗಳಿಂದ ಆಯ್ದ ಕೆಲವು ‘ಮುಖ್ಯ(?)’ ಭಾಗಗಳ ಸಂಕಲನ ಕೃತಿ. ಇದು ಪಠ್ಯಪುಸ್ತಕವೆಂಬ ಕಾರಣಕ್ಕಾಗಿ ಸಿದ್ಧಪಡಿಸಿದ ಆತುರಾತುರದ ಸಂಯೋದನೆಯಾದರೂ ಸಂಪಾದಕರೂ ಆಯಾ ಕಾವ್ಯಗಳಿಂದ ಪದ್ಯಗಳ ಆಯ್ಕೆಯಲ್ಲಿ ಸ್ವಲ್ಪ ವಿಚಕ್ಷಣೆ ತೋರಿದ್ದಾರೆ. ಇನ್ನೂ ಹೆಚ್ಚಿನೆ ಚ್ಚರ ತೋರಿದ್ದರೆ ಗ್ರಂಥ ಸಂಕಲನವನ್ನು ಮತ್ತಷ್ಟು ಉತ್ತಮಗೊಳಿಸಲು ಸಾಧ್ಯವಿತ್ತು. ಪೀಠಿಕೆಯಲ್ಲಿ ‘ಸಿಕ್ಕಿ ಪ್ರಕಟವಾಗಿರುವ ರಾಘವಾಂಕನ ಕೃತಿಗಳಲ್ಲಿ ವೀರೇಶ ಚರಿತೆ ಅಥವಾ ಸೋಮನಾಥ ಚಾರಿತ್ರ ಕವಿಯ ಮೊದಲ ಕೃತಿಯೆಂದೂ, ಸೋಮನಾಥ ಚಾರಿತ್ರವೇ ಮೊದಲ ಕೃತಿಯೆಂದೂ ಹಾಗೆಯೇ ಸಿದ್ಧರಾಮ ಚಾರಿತ್ರ ಕೊನೆಯ ಕೃತಿಯೆಂದೂ, ಹರಿಶ್ಚಂದ್ರ ಕಾವ್ಯವೆ ಕೊನೆಯ ಕೃತಿಯೆಂದೂ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ’ (ಪುಟ-೫) ಎಂಬಂಥ ಅನ್ವಯ ಕ್ಲಿಷ್ಟವಾದ ಗೋಜುಗೋಜಲಾದ ವಾಕ್ಯಗಳನ್ನು ಓರಣಿಸಿ, ಅಭಿಪ್ರಾಯ ಸ್ಪಷ್ಟವಾಗಿ ಸಿಗುವಂತೆ ಬರೆಯಬಹುದಿತ್ತು.

ಶರಜಾ ನಾಗಮಂತ್ರೀಶನ ಕಾವ್ಯ ಶುಕಸಪ್ತತಿ (ಸಂ: ವೆಂಕಟರಾಮಾಚಾರ್ಯ), ಪ್ರಕೃತ ವಿಮರ್ಶಿತ ಪುಸ್ತಕ ಅದರ ಮೂರನೆಯ ಭಾಗ. ಈ ಕಾವ್ಯ ಗ್ರಂಥ ಸಂಪಾದನೆಯ ಶಾಸ್ತ್ರ ನಿಕಷದಲ್ಲಿ ಪರಿಶೀಲನೆಗೆ ಹಿಡಿದಾಗ ತೀರ ಅಶಾಸ್ತ್ರೀಯವಾಗಿ ಸಂಪಾದಿತವಾಗಿರುವುದು ಸ್ವಯಂ ಸ್ಪಷ್ಟವಾಗುತ್ತದೆ. ಇದನ್ನು ಸಿದ್ಧಪಡಿಸಿರುವಾಗ ಬಳಿಸಿಕೊಂಡ ಓಲೆಯ ಅಥವಾ ಕಾಗದದ ಪ್ರತಿಗಳೆಷ್ಟು ಅವು ಲಿಖಿತವಾದ ಕಾಲ ಯಾವುದು, ಆ ಪ್ರತಿಗಳ ಸ್ಥಿತಿ ಎಂತಹುದು, ಪ್ರಾಚೀನ ಯಾವುದು, ಪಾಠ ಭೇದಗಳೇನಾದರೂ ಉಂಟೆ, ಈ ಗ್ರಂಥ ಪರಿಷ್ಕಾರದಲ್ಲಿ ಮುಖ್ಯವಾಗಿ ಅವಲಂಬಿಸಿರುವ ಪ್ರತಿ ಯಾವುದು, ಅದಕ್ಕೆ ಕಾರಣಗಳಾವುವು – ಇವು ಯಾವುವೂ ಈ ಗ್ರಂಥದಿಂದ ಗೊತ್ತಾಗುವುದಿಲ್ಲ. ಹೋಗಲಿ, ಇದನ್ನು ಏಕೈಕ ಹಸ್ತ ಪ್ರತಿಯಾಧಾರದಿಂದ ಸಿದ್ಧಪಡಿಸಿದ್ದಾರೆಂದು ತಿಳಿಯೋಣವೆಂದರೆ ಅದೂ ಸಾಧ್ಯವಿಲ್ಲ; ಗ್ರಂಥಾಂತ್ಯದಲ್ಲಿ ಸಂಪಾದಕರು ತಮಗೆ ಇದರ ಎಂಟ ಹಸ್ತ ಪ್ರತಿಗಳು ದೊರೆತಿವೆಯೆಂಬ ಸಂಗತಿಯನ್ನು ಹೇಳಿದ್ದಾರೆ. ಹಾಗಾದರೆ ಆ ಎಂಟು ಪ್ರತಿಗಳನ್ನು ಹೇಗೆ ಹೇಗೆ ಉಪಯೋಗಿಸಿಕೊಂಡಿದ್ದಾರೆಂದು ಪ್ರಶ್ನೆ ಹಾಕಿಕೊಂಡು ಹುಡುಕಿದರೆ ಉತ್ತರ ಸಿಗುವುದಿಲ್ಲ.

ಸಂಪಾದಕರಿಗೆ ಗ್ರಂಥ ಸಂಪಾದನೆಯ ವಿಧಾನ ತಿಳಿಯದು. ಜತೆಗೆ ಒಂದು ಸಂಪಾದಿತ ಕೃತಿಗೆ ಬರೆಯುವ ಪೀಠಿಕೆಯ ಸ್ವರೂಪವೂ ಗೊತ್ತಿಲ್ಲ. ೭೨ ಸಂಧಿಗಳ ಈ ಭಾಮಿನೀ ಷಟ್ಪದಿ ಕಾವ್ಯವನ್ನು, ಒಂದು ಸಂಚಿಕೆಯಲ್ಲಿ ಹನ್ನೆರಡು ಸಂಧಿಗಳಂತೆ ಬಿಡಿಬಿಡಿ ಸಂಚಿಕೆಗಳಾಗಿ ಪ್ರಕಟಿಸುತ್ತಿರುವ ಕ್ರಮವೇ ಸರಿತೋರುತ್ತಿಲ್ಲ. ಹೀಗೆ ಭಾಗಗಳಾಗಿ ಪ್ರಕಟಿಸುತ್ತಿರುವುದು ಗ್ರಂಥ ವಿಮರ್ಶೆಗೆ ಒಟ್ಟಿಗೆ ಹಿಡಿತಕ್ಕೆ ಸಿಗುವುದಿಲ್ಲ, ಅಲ್ಲದೆ ಓದುಗರಿಗೂ ಅನಾನುಕೂಲವಾಗುತ್ತದೆ. ಒಂದೇ ಗ್ರಂಥದ ಗಾತ್ರಕ್ಕೆ ಮೀರಿದ ಪುಟ ಪ್ರಮಾಣವೂ ಇದರಲ್ಲಿಲ್ಲ. ಒಂದು ವೇಳೆ ಹಾಗಿದ್ದಿದ್ದರೆ ಮಹಾಭಾರತದಂತೆ ಪರ್ವಗಳನ್ನು ಪ್ರತ್ಯೇಕವಾಗಿ ಪ್ರಕಟಿಸಬಹುದಿತ್ತು. ಆದರೆ ಈ ಗ್ರಂಥ ಇಡಿಯಾಗಿ ಮುದ್ರಿಸಿದರೂ ಡೆಮಿ ಆಕಾರದಲ್ಲಿ ೬೫೦ ಪುಟಗಳಾಗಬಹುದು. ಅಷ್ಟೆ. ಇದರ ಸಂಪಾದಕರು ಪೀಠಿಕೆಯಲ್ಲಿ ಈ ಕಾವ್ಯದ ಛಂದಸ್ಸಿನ ವಿಚಾರವಾಗಿ, ಭಾಷೆಯ ವಿಚಾರವಾಗಿ ಅಥವಾ ನೇರವಾಗಿ ಕಾವ್ಯದ ಬಗ್ಗೆ ಕೂಡ (ವಿಮರ್ಶೆ ಇರಲಿ) ವಿವರಣೆ ಕೊಡಕೊಟ್ಟಿಲ್ಲ. ಇರುವ ‘ಕವಿ ಕಾವ್ಯ ವಿಚಾರ’ವೂ ಹರುಕು ಮುರುಕು. ಅದರಲ್ಲಿ ವ್ಯವಸ್ಥೆಯಿಲ್ಲ. ಅಚ್ಚಿಸಿರುವ ಶುಭಾಶಯ ಪತ್ರಗಳನ್ನು ಧಾರಾಳವಾಗಿ ಕೈಬಿಟ್ಟು, ಅದೇ ಸ್ಥಳವನ್ನು ಕಾವ್ಯ ವಿಮರ್ಶೆಗೆ ಮೀಸಲಿಡಬಹುದಿತ್ತು.

ಕಲ್ಲರಸ ಕವಿ ವಿರಚಿತವಾದ ಜನವಶ್ಯ (ಸಂ: ಜಿ.ಜಿ. ಮಂಜುನಾಥನ್) ಏಳು ಹಸ್ತಪ್ರತಿಗಳ ನೆರವಿನಿಂದ ಅಚ್ಚುಕಟ್ಟಾಗಿ ಸಿದ್ಧವಾಗಿರುವ ಕಾಮಶಾಸ್ತ್ರಕೃತಿ. ಸಮಪಾದಕರು ತಾವು ಬಳಸಿಕೊಂಡಿರುವ ಹಸ್ತಪ್ರತಿಗಳ ಸ್ವರೂಪವನ್ನು ಸ್ಪಷ್ಟಪಡಿಸಿರುವುದಲ್ಲೆ ಶುದ್ಧ ಪಾಠ ನಿರ್ಣಯದಲ್ಲಿ ಪರಿಶ್ರಮ ತೋರಿದ್ದಾರೆ. ಅವರು ಕೊಟ್ಟಿರುವ ಸಂಕ್ಷಿಪ್ತ ಪೀಠಿಕೆಯೂ ಉಚಿತವಾಗಿದೆ. ಚಂದ್ರರಾಜನ ಮದನತಿಲಕ, ಜನ್ನನ ಮೋಹಾನುಭವ ಮುಕುರ, ಮಲ್ಲಕವಿಯ ಮನ್ಮಥ ವಿಜಯ – ಇವು ಇನ್ನಿತರ (ಕನ್ನಡದಲ್ಲಿರುವ) ಕಾಮ ಶಾಸ್ತ್ರಗ್ರಂಥಗಳು. ಇವುಗಳ ಸಾಲಿನಲ್ಲಿ ಪ್ರಕೃತ ಜನವಶ್ಯ ಪಡೆದಿರುವ ವಿಶಿಷ್ಟತೆ ಓದುಗರಿಗೆ ಮನವರಿಕೆಯಾಗುತ್ತದೆ.

ಭೀಮ ಕವಿಯ ಬಸವ ಪುರಾಣ ಸಂಗ್ರಹ (ಸಂ: ಪಿ.ವಿ. ನಾರಾಯಣ) ತಕ್ಕಮಟ್ಟಿಗಿದೆ. ಇಂಥದೊಂದು ಸಂಗ್ರಹದ ಅಗತ್ಯವಂತೂ ಇತ್ತು. ಕೆಲವು ಕವಿಗಳ ಕಾವ್ಯವನ್ನು ಸಂಗ್ರಹಿಸುವುದು ಕಷ್ಟವಾದರೂ ಭೀಮ ಕವಿಯ ಬಸವ ಪುರಾಣದಂತಹ, ಅನವಶ್ಯಕವಾದ ಭಾಗಗಳಿಂದ ವಿಸ್ತರವಾಗಿ ಬೆಳೆದ ಕಾವ್ಯಗಳನ್ನು ಸಂಗ್ರಹಿಸುವುದು ಸುಲಭ ಹಾಗೂ ಅವಶ್ಯ. ಆದರೆ ಇಲ್ಲಿನ ಸಂಪಾದಕರು ಈ ಸಂಗ್ರಹವನ್ನು ಇನ್ನೂ ಉತ್ತಮಗೊಳಿಸಲು ಸಾಧ್ಯವಿತ್ತು. ಅಲ್ಲದೆ ಅಲ್ಲಲ್ಲಿ ಕಂಡು ಬರುವ ಛಂದಸ್ಸಿನ ದೋಷಗಳಿಗೆ ಟಿಪ್ಪಣಿಗಳಿಲ್ಲದಿರುವುದು ಸಂದೇಹಕ್ಕೆ ಕಾರಣವಾಗಿದೆ. ವಿರತ ಮಹಲಿಂಗದೇವ ವಿರಚಿತ ಗುರುಬೋಧಾಮೃತ ಕಾವ್ಯವನ್ನು (ಸಂ: ಡಿ. ಸಿದ್ಧಗಂಗಮ್ಮ ಮತ್ತು ಪಿ. ಮರಿಬಸವರಾಧ್ಯ) ಅಯ್ದು ಹಸ್ತಪ್ರತಿಗಳ ಸಹಾಯದಿಂದ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಕೃತಿ ತೀರ ಸಾಮಾನ್ಯ ಗುಣದಿಂದ ಕೂಡಿದ್ದರೂ ಸಂಪಾದಕನ ಕಾರ್ಯ ವ್ಯವಸ್ಥಿತವಾಗಿ ನಡೆದಿದೆ. ಈ ಕೃತಿ ಕೆಲವು ಕಾವ್ಯೇತರ ಕಾರಣಗಳಿಗಾಗಿ ಗಮನಾರ್ಹವಾಗಿದೆ. ಛಂದಸ್ಸಿನ ದೃಷ್ಟಿಯಿಂದ ಇದನ್ನು ಒಂದು ‘ಚಂಪೂ’ ಎಂದು ಕರೆಯಲು ಅವಕಾಶ ಮಾಡಿಕೊಡುವಷ್ಟು ವೈವಿಧ್ಯವಿದೆ; ೯೯೦ ತ್ರಿಪದಿಗಳು, ೧೪ ವೃತ್ತಗಳು, ೪೧ ಕಂದ ಪದ್ಯಗಳು, ೧೧೭ ಸಂಸ್ಕೃತ ಶ್ಲೋಕಗಳು, ಪ್ರಭುದೇವ – ಚೆನ್ನಬಸವಣ್ಣಣವರ ಮೂರು ವಚನಗಳು, ಎರಡು ಸಂಸ್ಕೃತ ಶ್ಲೋಕಗಳಿಗೆ ಬರೆದ ಟೀಕೆ – ಇವು ಗ್ರಂಥಕ್ಕೆ ಪುಷ್ಟಿ ಕೊಟ್ಟಿವೆ.

ಗುಂಡಬ್ರಹ್ಮಯ್ಯಗಳ ಚರಿತ್ರೆ (ಸಂ: ವಿ. ಶಿವಾನಂದ) ಚೆನ್ನಕವಿಯ ಸಾಮಾನ್ಯ ಕಾವ್ಯ. ಶರಣಾಗತರಿಗೆ ರಕ್ಷೆ ಕೊಡುವುದರಲ್ಲಿ ‘ಗಂಡು-ಬ್ರಹ್ಮಯ್ಯ’ಗಳು ಶ್ರೇಷ್ಠರಂತೆ. ಮರೆ ಹೊಕ್ಕವರನ್ನು ಕಾಪಾಡುವವರೆಂದು ಕಾಲ್ಪೆಂಡೆಯವನ್ನು ಇವರು ಧರಿಸಿದ್ದು ಅದನ್ನು ಪರೀಕ್ಷಿಸಲು ಪರಶಿವನೇ ಕಳ್ಳನಾಗಿ ಬಂದನಂತೆ. ಗಣಪತಿರಾಯನ ಅರಮನೆಗೆ ಕನ್ನ ಹಾಕಿದ ಕಳ್ಳ ಗುಂಡ ಬ್ರಹ್ಮಯ್ಯಗಳಲ್ಲಿ ಮೊರೆ ಹೊಕ್ಕು ನಿಂತಾಗ ದೊರೆ ಕಳ್ಳನನ್ನು ಬಿಟ್ಟುಕೊಡದಿದ್ದರೆ ಶೂಲದ ಶಿಕ್ಷೆಗೆ ಗುರಿಯಾಗಬೇಕೆಂದಾಗ ಅಂಜದೆ ಶೂಲಕ್ಕೇರಿದಾಗ ದೇವರು ಮೆಚ್ಚಿ ಶೂಲಸಹಿತ ಕೈಲಾಸಕ್ಕೊಯ್ದು ಗಣಪದವಿಕೊಟ್ಟು ಅಮರರನ್ನಾಗಿಸಿದಂತೆ. ಈ ಕಥೆಯಲ್ಲಿ ವಿಚಿತ್ರಗಳು – ಗುಂಡ ಬ್ರಹ್ಮಯ್ಯಗಳ ೧೩ನೆ ಶತಮಾನದಲ್ಲಿ ಕಾಕತೀಯ ದೊರೆ ಗಣಪತಿರಾಯನ ಕಾಲದಲ್ಲಿ ಆಗಿಹೋದ ಚಾರಿತ್ರಿಕ ವ್ಯಕ್ತಿಗಳು. ಚಾರಿತ್ರಿಕ ವ್ಯಕ್ತಿಗಳ ಸಾಮಾಜಿಕ ಜೀವನದಲ್ಲಿ ದೇವರ ಪ್ರವೇಶವೆಂಬುದು, ಸಾಮಾಜಿಕ ಚಲನಚಿತ್ರದಲ್ಲಿ ಭಗವಂತ ಪ್ರತ್ಯಕ್ಷವಾದಂತೆ ವಿರೋಧಾಭಾಸವಾಗಿದೆ; ಅತ್ತ ಚರಿತ್ರೆಯೂ ಆಗಿರದೆ, ಇತ್ತ ಪುರಾಣವೂ ಆಗಿರದೆ. ಕಾವ್ಯ ಅಲ್ಲಿಯೂ ಸಲ್ಲದೆ ಇಲ್ಲಿಯೂ ಸಲ್ಲದೆ ಸೋತಿದೆ. ಗುಂಡ ಬ್ರಹ್ಮಯ್ಯಗಳು ಶರಣಾಗತ ವಜ್ರಪಂಜರೆಂಬುದನ್ನೂ ಅಲ್ಲಗಳೆಯಬೇಕಾಗುತ್ತದೆ. ಆಶ್ರಯ ಕೊಡಬೇಕಾದ ಅಂಥ ವ್ಯಕ್ತಿ ಆಶ್ರಯಕ್ಕೆ ಅರ್ಹನೆ ಎಂಬ ಪರಿಶೀಲನೆ ಪ್ರಮುಖವಾದ್ದು. ಇಲ್ಲವಾದರೆ ಜಾರ ಚೋರವಿಟ ಕೊಲೆಗಾರರಿಗೆಲ್ಲ ರಕ್ಷೆಕೊಟ್ಟು ಕಾನೂನು ಉಲ್ಲಂಘಿಸಿದವರೆಲ್ಲಾ ಗುಂಡ ಬ್ರಹ್ಮಯ್ಯಗಳೇ ಆದಾರು. ಅದರಿಂದ “ಶರಣುಬಂದವರನ್ನು ಕಾಯುವ ಪರಾಕಾಷ್ಠ ತತ್ವದ ಮೇಲೆ ರೂಪಿತಗೊಂಡಿರುವ ಈ ವೀರ ಭಕ್ತಿರಸಪ್ರಧಾನವಾದ ಕೃತಿ ಕನ್ನಡ ಕಾವ್ಯದ ಆದರ್ಶವನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದೆ” – ಎಂಬ ಇಲ್ಲಿನ ಸಂಪಾದಕರ ಅಭಿಪ್ರಾಯ ಅತ್ಯುಕ್ತಿಗೆ ಕಿರೀಟವಿಟ್ಟಂತಿದೆ. ಕವಿಕಾಲ ಕಾವ್ಯ ಸಂಬಂಧವಾದ ಪೀಠಿಕೆ ಇನ್ನೂ ಉತ್ತಮವಾಗಿರಬೇಕಿತ್ತು.

ಸೂರ್ಯಕವಿ ವಿರಚಿತ ಕವಿಕಂಠಹಾರ (ಸಂ: ಕಾವ್ಯಪ್ರೇಮಿ) ದೇಸಿ ಸಮಾನಾರ್ಥ ಶಬ್ದ ಹಾಗೂ ತತ್ಸಮ-ತದ್ಭವ ಶಬ್ದಗಳ ಕಂದಪದ್ಯ ರೂಪವಾದ ನಿಘಂಟು. ಇದರ ಕಾಲ ಸುಮಾರು ಹದಿನೇಳನೆಯ ಶತಮಾನ. ಸಂಪಾದಕರು ಇದಕ್ಕೆ ಅನುಬಂಧವಾಗಿ ಅರ್ಥವಿವರಣೆ ಕೊಟ್ಟಿದ್ದಾರೆ. ಅದು ಅಷ್ಟು ಕ್ರಮ ಪ್ರಾಪ್ತಗತಿಯಲ್ಲಿ ನಿಯೋಜಿತವಾಗಿಲ್ಲ. ಕೆಲವುಕಡೆ ದೀರ್ಘ ಸಮಾಸ ರೂಪಗಳಿಗೆ ಅರ್ಥ ಹೇಳಿದರೆ ಮತ್ತೆ ಕೆಲವು ಕಡೆ ಬಿಡಿ ಬಿಡಿ ಶಬ್ದಗಳನ್ನಿತ್ತು ಅರ್ಥ ಕೊಡುತ್ತಾರೆ; ಇವೆರಡರಲ್ಲಿ ಯಾವುದಾದರೂ ಒಂದು ಕ್ರಮವನ್ನು ಅನುಸರಿಸಬೇಕಿತ್ತು. ಪ್ರಕೃತ ಮುದ್ರಣಕ್ಕೆ ಉಪಯೋಗಿಸಿಕೊಂಡ ಹಸ್ತಪ್ರತಿಗಳ ಪ್ರಸ್ತಾಪವಿಲ್ಲ. ಈ ಕೃತಿಯ ವೈಶಿಷ್ಟ್ಯವೇನೆಂಬುದರ ವಿವೇಚನೆಯೂ ನಿರೂಪಿತವಾಗಿಲ್ಲ; ಗ್ರಂಥಸಂಪಾದನೆಯಲ್ಲಿ ಪರಿಶ್ರಮವಿಲ್ಲದವರ ಪ್ರಯತ್ನ ಹೇಗಿರುತ್ತದೆಂಬುದಕ್ಕೆ ಇದು ಉದಾಹರಣೆಯಾಗಿ ನಿಲ್ಲುತ್ತದೆ.

ರಾಮನಾಥಾಂಕಿತ ಜೇಡರ ದಾಸಿಮಯ್ಯನ ವಚನಗಳು (ಸಂ: ಎಚ್. ದೇವೀರಪ್ಪ ಮತ್ತು ರಾಚಪ್ಪ) ಯಶಸ್ವಿಯಾದ ಸಂಪಾದಿತ ಕೃತಿ. ಇದನ್ನು ಆರು ಮಾತೃಕೆಗಳ ನೆರವಿನಿಂದ ಸಿದ್ಧಪಡಿಸಲಾಗಿದೆ. ಈಗಾಗಲೇ ಅಚ್ಚಾಗಿರುವ ಹಿಂದಿನ ಮುದ್ರಣಗಳಿಗಿಂತ ಈ ಕೃತಿ ಎಲ್ಲ ವಿಧದಿಂದಲೂ ಉತ್ತಮವಾಗಿವೆ ಈ ಸಂದರ್ಭದಲ್ಲಿ ಅವಶ್ಯ ಸ್ಮರಿಸಬೇಕಾದ ಹಿಂದಣ ವ್ಯವಸ್ಥಿತ ಪ್ರಯತ್ನಗಳಲ್ಲೊಂದಾದ ಬಿ.ಎಸ್. ಸಣ್ಣಯ್ಯನವರ ‘ದೇವರ ದಾಸಿಮಯ್ಯನ ವಚನ’ಗಳನ್ನೂ (ಪ್ರ.ಕ. ೪೬-೪) ಅವರಿತ್ತ ಸಂಕೇತಗಳನ್ನೂ ಈ ಸಂಪಾದಕರು ಯಥೇಚ್ಛವಾಗಿ ಬಳಸಿಕೊಂಡಿದ್ದಾರೆ.

ಪರಂಜ್ಯೋತಿಯತಿಯ ಅನುಭವ ಮುಕುರ (ಸಂ: ಎಂ.ಎಸ್. ಬಸವರಾಜಯ್ಯ) ತ್ರಿಪದಿಯಲ್ಲಿ ರಚಿತವಾಗಿದೆ. ಇದಕ್ಕೆ ನಿಜಗುಣಶಿವಯೋಗಿ ಸ್ವರೂಪಸಿದ್ಧ ಎಂಬ ಟೀಕೆಯನ್ನು ಬರೆದಿದ್ದಾನೆ. ಪ್ರಕೃತ ಮುದ್ರನದಲ್ಲಿ ಇವೆರಡನ್ನೂ ಕೊಟ್ಟಿದ್ದಾರೆ. ಇದರಿಂದ ಗ್ರಂಥ ಉಪಯುಕ್ತತೆ ಹೆಚ್ಚಿದೆ. ಸಂಪಾದಕರ ಪ್ರಯತ್ನ ಪ್ರಶಂಸನೀಯವಾಗಿದೆ.

ಬಿ.ಎಸ್. ಸಣ್ಣಯ್ಯನವರು ಈ ವರ್ಷ ಬಂಧುವರ್ಮನ ಹದಿವಂಶಾಭ್ಯುದಯ ಮತ್ತು ನಾಗವರ್ಮನ ವರ್ಧಮಾನ ಪುರಾಣವನ್ನು, ಏಕೈಕ ಹಸ್ತಪ್ರತಿಗಳ ಆಧಾರದಿಂದ ಅಚ್ಚುಕಟ್ಟಾಗಿ ಸಿದ್ಧಪಡಿಸಿಕೊಟ್ಟಿದ್ದಾರೆ. ತೌಲನಿಕ ವ್ಯಾಸಂಗಕ್ಕೆ ಸಾಮಗ್ರಿ ಒದಗಿಸಿಕೊಟ್ಟಿದ್ದಾರೆ.

ಎರಡನೆಯ ನಾಗವರ್ಮನ ವರ್ಧಮಾನ ಪುರಾಣ ತೀರ ಆಕಸ್ಮಿಕವಾಗಿ ಬೆಳಕಿಗೆ ಬಂದ ಪ್ರಮುಖ ಜೈನ ಚಂಪೂಕಾವ್ಯ. ಮೂಡುಬಿದರೆ ‘ದಿಗಂಬರ ಜೈನ ಧರ್ಮಶಾಲಾ ಗ್ರಂಥಭಂಡಾರ’ದಲ್ಲಿ ದೊರೆತ ಏಕೈಕ ಓಲೆಗರಿಯ ನೆರವಿನಿಂದ ಸಂಪಾದಕರು ಈ ಗ್ರಂಥವನ್ನು ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಒಂದೇ ಹಸ್ತಪ್ರತಿಯಿಂದ, ಅದೂ ಅಪ್ರಕಟಿತ ಹಳಗನ್ನಡ ಗ್ರಂಥವನ್ನು ಸಿದ್ಧಪಡಿಸುವುದು ಎಷ್ಟು ಪ್ರಯಾಸಕರವೆಂಬುದು ತಿಳಿದ ವಿಷಯ. ಅಲಲ್ಲಿ ಅಕ್ಷರಸ್ಖಾಲಿತ್ಯಗಳಿದ್ದರೂ ಸಂಪಾದಕರು ಬಹು ಕ್ಲೇಶದಿಂದ ಈ ಕೆಲಸವನ್ನು ಆದಷ್ಟೂ ಉತ್ತಮವಾಗಿ ನಡೆಸಿದ್ದಾರೆ. ಮೂಲದಲ್ಲಿ ಲುಪ್ತವಾಗಿರುವ ಅಕ್ಷರಗಳಿಗೆ ಹಲವು ಕಡೆ ಊಹಾಪಾಠವನ್ನು, ಛಂದಸ್ಸು ಮತ್ತು ಅರ್ಥದ ಬಲದಿಂದ, ಕೊಟ್ಟಿದ್ದಾರೆ. ಈ ಬಗೆಯ ಪಾಠನಿರ್ಣಯದಲ್ಲಿ ಅವರು ಎಷ್ಟು ಮಟ್ಟಿಗೆ ಯಶಸ್ವಿಯಾಗಿದ್ದಾರೆಂಬುದನ್ನು ಈಗ ನಿರ್ಧರಿಸಿ ಹೇಳುವುದು ಕಷ್ಟ; ವೈಯಕ್ತಿಕವಾಗಿ ಕೆಲವೆಡೆ ನನಗೆ ಕೆಲವು ಸಂಶಯಗಳಿವೆ’ ಅದರ ಪ್ರಸ್ತಾಪ ಇಲ್ಲಿ ಅಪ್ರಸ್ತುತ… ಚಾರುದತ್ತ ಪ್ರಕರಣದ ದೋಷಗಳು (ಶಿವ) ಮಂದಿರ ಎಂದೂ ಕುಸುಮ (ಶೇಖರ) ದೇವ ಎಂದೂ (ಅಂಗ) ಮಂದಿರ ಎಂದು ಪುನಾರಚಿಸಿಕೊಳ್ಳಬೇಕು. ಕಥಾಸಾರದಲ್ಲಿ ತಪ್ಪುಗಳಿವೆ. ಗಂಧರ್ವದತ್ತೆಯನ್ನು ಮದುವೆಯಾಗಿ ಬಂದನೆನ್ನುತ್ತಾರೆ.

ಕಾವ್ಯಾರಂಭದಲ್ಲಿ ‘ಎಷ್ಟು ಪದ್ಯಗಳು ಲುಪ್ತವಾಗಿವೆಯೊ ತಿಳಿಯದು’ ಎನ್ನುತ್ತಾರೆ; ಸುಮಾರು ಆರು ಪದ್ಯಗಳು ಲುಪ್ತವಾಗಿವೆಯೆಂದು ಧಾರಾಳವಾಗಿ ಊಹಿಸಬಹುದು. ಅವು ಪಂಚಪರಮೇಷ್ಠಿಗಳನ್ನು ಕುರಿತು ಅಯ್ದು ಮತ್ತ ಯಕ್ಷಯರನ್ನ ಯಕ್ಷಿ ಕುರಿತು ಒಂದು. ಮಹಾವೀರರ ೨೫೦೦ನೆಯ ನಿರ್ವಾಣೋತ್ಸವವನ್ನು ದೇಶಾದ್ಯಂತ ಆಚರಿಸುತ್ತಿಲಿರುವ ಸಂದರ್ಭದಲ್ಲಿ ನಾಗವರ್ಮನ ವರ್ಧಮಾನ ಪುರಾಣದ ಜತೆಗೆ ಪದ್ಮ ಕವಿಯ ವರ್ಧಮಾನ ಚರಿತೆ ಎಂಬ ಸಾಂಗತ್ಯ ಕಾವ್ಯವನ್ನೂ ಇದೇ ಸಂಪಾದಕರು ಸಿದ್ಧಪಡಿಸಿರುವುದು ಯೋಗಾಯೋಗ. ಡಾ. ಆ.ನೇ ಉಪಾಧ್ಯೆಯವರ ನೆರವಿನಿಂದ ಮ್ತು ದಿವಂಗತ ಡಾ|| ಹೀರಾಲಾಲ್ ಜೈನರ ವೀರಜಿನೇಂದ್ರ ಚರಿತೆ (ಮೂಲ ಹಿಂದಿ) ಗ್ರಂಥದ ಉಪೋದ್ಭಾತ ಸಹಾಯದಿಂದ ಈ ಸಂಪಾದಿತ ಕೃತಿಗೆ ಮೌಲಿಕವಾದ ಮುನ್ನುಡಿಯನ್ನು ಬರೆಯಲು ಸಾಧ್ಯವಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾವ್ಯವಾಗಿ ನಾಗವರ್ಮನ ವರ್ಧನಮಾನ ಪುರಾಣಕ್ಕೆ ಇರುವ ಸ್ಥಾನ ನಿರ್ದೇಶನ ಅಷ್ಟೇನೂ ಶ್ರೇಷ್ಠವಲ್ಲದಿದ್ದರೂ, ಅದು ಒದಗಿಸಿರುವ ಕೆಲವು ವಿವರಗಳು ಅಪೂರ್ವವಾಗಿವೆಯೆಂಬ ಕಾರಣದಿಂದ ಅದಕ್ಕೆ ಮಹತ್ವದ ಸ್ಥಾನವಿದೆ. ಸಂಪಾದಕರು ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಇದರ ಬಹುಪಾಲು ಹೇಳಿಕೆಗಳು ಇವರು ಸಂಪಾದಿಸಿರುವ ಇನ್ನೊಂದು ಕೃತಿ ಹರಿವಂಶಾಭ್ಯುದಯಕ್ಕೂ ಅನ್ವಯಿಸುತ್ತದೆ.

ಭರತೇಶನ ದಿನಚರಿಯ ಭಾಗ ವಿಜಯದ ದಿನಗಳು ಮತ್ತು ಭಾಗ ತಪಸ್ಸಿನ ದಿನಗಳು (ಲೇ: ಪಿ.ಕೆ.ನಾರಾಯಣ) ಎಂಬುವು ರತ್ನಾಕರ ವರ್ಣಿಯ ಭರತೇಶ್ವರ ಚರಿತೆ (ಭರತೇಶ ವೈಭವ) ಸಾಂಗತ್ಯ ಕಾವ್ಯದ ಹೊಸಗನ್ನಡ ಗದ್ಯಾನುವಾದ. ಇದರ ಮೊದಲನೆಯ ಭಾಗ ಸರಸದ ದಿನಗಳು ಈಗಾಗಲೇ ಪ್ರಕಟವಾಗಿದೆ. ಈ ಮೂರೂ ಭಾಗಗಳು ಸೇರಿಸಿದರೆ ಒಟ್ಟು ಸುಮಾರು ಒಂದು ಸಾವಿರ ಪುಟಗಳ ಹಿರಿಯ ಗ್ರಂಥವಾಗುತ್ತದೆ. ಇದೊಂದು ಸಾರ್ಥಕ ಪ್ರಯತ್ನ, (ಇವುಗಳನ್ನು ಕುರಿತ ವಿಮರ್ಶೆ ಗ್ರಂಥ ಸಂಪಾದನೆಗೆ ಸೇರಿದ್ದಲ್ಲ.)

ರತ್ನಾಕರವರ್ಣಿಯ ಭರತೇಶ ವೈಭವ ಕನ್ನಡದಲ್ಲಿ ಬಹುಜನಪ್ರಿಯವಾದ ಕಾವ್ಯ. ಅದರ ಸಾಂಗತ್ಯರೂಪ, ಸರಳಶೈಲಿ, ಕಾವ್ಯಮಯ ಪ್ರಸನ್ನತೆ, ಶೃಂಗಾರ ಚಿತ್ರಣ, ಯೋಗ ಭೋಗತ್ಯಾಗಗಳ ಅಪೂರ್ವ ಸಂಯೋಜನೆ, ಗೇಯತೆ – ಮೊದಲಾದವು ಭರತೇಶರ ವೈಭವವನ್ನು ಜನಾನುರಾಗಗಳೊಸಿವೆ. ಜೈನ ಸಾಹಿತ್ಯದಲ್ಲಿ ಅತ್ಯಂತ ಪ್ರಸಿದ್ಧವಾದ ‘ಭರತ ಬಾಹುಬಲಿ’ ಕಥೆಯನ್ನು ಎತ್ತಿಕೊಂಡು ರತ್ನಾಕರ ತನ್ನ ಕಾವ್ಯ ಸಿದ್ಧಿಯಲ್ಲಿಟ್ಟು, ತನ್ನತನದ ಪ್ರತ್ಯೇಕ ಮುದ್ರೆಯನ್ನೊತ್ತಿ ಚಿರಸ್ಥಾಯಿಗೊಳಿಸಿದ್ದಾನೆ. ಈ ಸರಳ ಸುಂದರ ಕಾವ್ಯಕ್ಕೆ ಹೊಸಗನ್ನಡ ಭಾವಾನುವಾದವನ್ನು ವ್ಯಾಖ್ಯಾನ ಧಾಟಿಯಲ್ಲಿ ಈ ಹಿಂದೆಯೇ ಜಿ. ಬ್ರಹ್ಮಪ್ಪನವರು ಗುರುದೇವ, ಸನ್ಮತಿ, ವಿವೇಕಾಭ್ಯುದಯ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಆದರೆ ಅದು ಒಂದು ಯೋಜಿತ ಅನುವಾದವಲ್ಲ. ಈ ಲೇಖಕರು ರತ್ನಾಕರ ಕಾವ್ಯವನ್ನು ಬಹುವಾಗಿ ಅನುಸರಿಸಿದ್ದಾರೆ. ತಮ್ಮ ಭಾವನೆಗಳನ್ನು ಕವಿಯ ಭಾವನೆಗಳೊಡನೆ ಬೆಸೆದಿಲ್ಲ. ಕೇವಲ ಕವಿಯ ಅಭಿಪ್ರಾಯಗಳನ್ನು ಸಂಗ್ರಹಗೊಳಿಸಿ ಇಂದಿನ ಕನ್ನಡದಲ್ಲಿಟ್ಟಿದ್ದಾರೆ. ರತ್ನಾಕರನ ಚೆಲುವಾದ ವರ್ಣನೆಗಳನ್ನು ಆದಷ್ಟೂ ಸೋರದಂತೆ ಹಿಡಿದಿಟ್ಟಿದ್ದಾರೆ. ಅವರ ಪ್ರಯತ್ನ ಸಫಲವಾಗಿದೆ.

ನಾಗಚಂದ್ರ ಕವಿಕೃತ ಮಲ್ಲಿನಾಥ ಪುರಾಣ (ಸಂ: ಡಾ|| ಬಿ.ಎಸ್. ಕುಲಕರ್ಣಿ) ಈಗಾಗಲೇ ಹಿಂದೆ ಅಚ್ಚಾಗಿದ್ದರೂ ಪ್ರಕೃತ ಮುದ್ರಣ ಹಿಂದಿನದಕ್ಕಿಂತ ಗ್ರಂಥ ಪರಿಷ್ಕರಣದ ದೃಷ್ಟಿಯಿಂದಲೂ ಪೀಠಿಕೆ ಹಾಗೂ ಉಪಯುಕ್ತ ಅನುಬಂಧಗಳಿಂದಲೂ ಉತ್ತಮವಾಗಿದೆ. ಮುದ್ರಿತ ಪ್ರತಿಯ ಜತೆಗೆ ಮೈಸೂರಿನ ಎರಡು ಹಸ್ತ ಪ್ರತಿಗಳನ್ನೂ (ಒಂದು ತಾಳೇಗರಿ, ಇನ್ನೊಂದು ಕಾಗದ ಪ್ರತಿ), ದಿ|| ಎಂ.ಡಿ. ಅಧಿಕಾರಿಗಳು ಕೊಟ್ಟ ವರಾಂಗ ಜೈನಮಠದ ತಾಳೇಗರಿಯನ್ನೂ, ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳವರು ಕೊಟ್ಟ ಶ್ರವಣಬೆಳಗೊಳ ಜೈನಮಠದ ತಾಳೇಗರಿಯನ್ನೂ ಪ್ರಸ್ತುತ ಗ್ರಂಥ ಸಂಪಾದನೆಗೆ ಬಳಸಿಕೊಂಡಿದ್ದಾರೆ. ಡಾ|| ಬಿ.ಎಸ್. ಕುಲಕರ್ಣಿಯವರು ಸಮಯ ಪರೀಕ್ಷೆ, ಜೀವಂಧರ ಚರಿತೆ, ಲೋಭದತ್ತ ಚರಿತೆ, ಚಾವುಂಡರಾಯ ಪುರಾಣ ಮೊದಲಾದ ಗ್ರಂಥಗಳನ್ನು ಸಂಪಾದಿಸಿ ಅನುಭವ ಪಡೆದವರಿದ್ದೂ, ಅಡಿಟಿಪ್ಪಣಿಯಲ್ಲಿ ಪಾಠಾಂತರಗಳನ್ನು ಕೊಡುವಾಗ ಇಂಗ್ಲಿಷ್ ಅಂಕಿಗಳ ಜತೆಗೆ ನಕ್ಷತ್ರ ಚಿಹ್ನೆ, ಕಠಾರಿ ಚಿಹ್ನೆ ಮೊದಲಾದವನ್ನು ಬಳಸಿದ್ದರ ಔಚಿತ್ಯ ಅರ್ಥವಾಗುವುದಿಲ್ಲ. ಉದ್ದಕ್ಕೂ ಅಂಕಿಗಳನ್ನೇ ಬಳಸಿ ನಡುವೆ ಉಳಿದ ಚಿಹ್ನೆಗಳನ್ನು ಹಾಕುವುದರಿಂದ ವಿಶೇಷ ಪ್ರಯೋಜನವೇನೂ ಇಲ್ಲ, ಜತೆಗೆ ಕ್ರಮಲೋಪದ ದೋಷ ಬರುತ್ತದೆ. ನಾಲ್ಕು ಪ್ರತಿಗಳ ನೆರವು ಪಡೆದಿದ್ದರೂ ಅಲ್ಲಲ್ಲಿ ಸಂಪಾದಕರಿಗೆ ಸಹಾಯವಾಗದೆ ಊಹಾಪಾಠಗಳನ್ನು ಕೊಡಬೇಕಾಗಿ ಬಂದಿದೆ. ಇವನ್ನು ಸಾಕಷ್ಟು ಯಶಸ್ವಿಯಾಗಿ ಸಂಪಾದಕರು ನಿರ್ವಹಿಸಿದ್ದಾರೆ; ಉದಾಹರಣೆಗೆ ಪು. ೮೩, ೮೭, ೧೦೫ ಮೊದಲಾದ ಕಡೆ ನೋಡಬಹುದು.

(ಸಾಹಿತ್ಯ ವಾರ್ಷಿಕ ೧೯೭೪: ಸಂಪಾದಕರು, ಜಿ.ಎಸ್. ಶಿವರುದ್ರಪ್ಪ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೯೭೬)

ಗ್ರಂಥ ಸಂಪಾದನೆ

ಈ ವಿಭಾಗದಲ್ಲಿ ೧೯೭೫ ರಲ್ಲಿ ಹೊರ ಬಂದ ಒಟ್ಟು ೧೮ ಕೃತಿಗಳನ್ನು ಸಮೀಕ್ಷಿಸಿದೆ. ಇವುಗಳಲ್ಲಿ ಕಡೆಯ ಎರಡು ಕೃತಿಗಳು, ಪಂಪಭಾರತ ಕಥಾಲೋಕ ಮತ್ತು ಮಹಾವೀರ, ಸಂಪಾದಿತ ಕೃತಿಗಳಲ್ಲ, ಅನುವಾದಿತ ಕೃತಿಗಳು, ಅವೆರಡನ್ನು ಬಿಟ್ಟರೆ ಇನ್ನುಳಿದ ೧೬ ಕೃತಿಗಳು ಸಂಪಾದಿತ ಗ್ರಂಥಗಳು. ಇವುಗಳಲ್ಲಿ ಒಂದು ಛಂದಸ್ಸಿಗೆ ಸಂಬಂಧಿಸಿದ (ಛಂದೋಂಬುಧಿ), ಒಂದು ವ್ಯಾಕರಣಕ್ಕೆ ಸಂಬಂಧಿಸಿದೆ (ಶಬ್ದಮಣಿ ದರ್ಪಣ), ಒಂದು ಶಬ್ದಕೋಶ ಶಾಸ್ತ್ರಕ್ಕೆ ಸಂಬಂಧಿಸಿದೆ (ಕರ್ನಾಟಕ ಶಬ್ದಮಂಜರಿ). ಈ ಮೂರು ಶಾಸ್ತ್ರ ಗ್ರಂಥಗಳನ್ನು ಬಿಟ್ಟರೆ ಉಳಿದ ೧೩ ಕಾವ್ಯಗಳು. ಈ ಕಾವ್ಯಗಳಲ್ಲಿ ನಾಲ್ಕು ಜೈನ ಧರ್ಮಕ್ಕೆ ಮತ್ತು ಏಳು ವೀರಶೈವ ಧರ್ಮಕ್ಕೆ ಸಂಬಂಧಿಸಿವೆ.

ಗ್ರಂಥ ಸಂಪಾದನೆಯ ದೃಷ್ಟಿಯಿಂದ ಕಳಪೆ ಕೃತಿಗಳು ಹೆಚ್ಚು.

ಛಂದೋಂಬುಧಿ (ಸಂ : ಕೃಷ್ಣಭಟ್ಟ) ಮತ್ತೆ ಮುದ್ರಣವಾಗುವ ಅವಕಾಶ ಒದಗಿಬಂದಿದೆ. ಕಳೆದ ವರ್ಷವಷ್ಟೆ ಪ್ರಕಟವಾದ ಕನ್ನಡ ಛಂದಸ್ಸಂಪುಟದಲ್ಲಿ ಇದು ಸಮಾವೇಶವಾಗಿತ್ತು. ಅದರ ವಿಮರ್ಶೆ ಕೂಡ ನಮ್ಮ ೧೯೭೪ರ ಸಾಹಿತ್ಯ ವಾರ್ಷಿಕದಲ್ಲಿದೆ. ಅದರ ಬೆನ್ನು ಹಿಂದೆಯೇ ಹೊರ ಬರುತ್ತಿರುವ ಈ ಕೃತಿ ಅದಕ್ಕಿಂತ ಹೆಚ್ಚು ಪರಿಷ್ಕಾರ ಪಡೆದಿರಬಹುದೆಂಬ ನಿರೀಕ್ಷೆ ಸಹಜವೇ. ಆದರೂ ಓದುಗರಿಗೆ ಇಲ್ಲಿಯೂ ಹಲವು ನಿರಾಶೆಗಳು ಕಾದಿವೆ:

೧. ಪ್ರಸ್ತುತ ಗ್ರಂಥ ಸಂಪಾದನೆಗೆ ಬಳಸಿಕೊಂಡಿರುವ ಹಸ್ತಪ್ರತಿಗಳು ಯಾವುವು, ಅವುಗಳ ಸ್ವರೂಪವೇನು – ಇದು ಸರಿಯಾಗಿ ತಿಳಿಯುವುದಿಲ್ಲ. ಪರಿಶಿಷ್ಟ ಎಂಟರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಗ್ರಂಥಾಲಯದಲ್ಲಿರುವ ಛಂದೋಂಬುಧಿಯ ಪ್ರತಿಗಳಲ್ಲಿ ಮತ್ತು ಮೈಕ್ರೋಫಿಲ್ಮ್‌ಪ್ರತಿಗಳಲ್ಲಿ ಕಂಡು ಬರುವ ಪ್ರಕಾರ, ಭಿನ್ನಪಾಠ, ಅಧಿಕಪಾಠ ಸಂದರ್ಭಗಳನ್ನು ಕೊಟ್ಟಿದ್ದಾರೆ. ಹಾಗಿದ್ದಲ್ಲಿ ಈ ಪ್ರತಿಗಳಲ್ಲದೆ ಬೇರೆ ಪ್ರತಿಗಳನ್ನು ಅವಶ್ಯ ನೋಡಿದ್ದಾರೆಂದಾಯಿತು. ಆದರೆ ಆ ಪ್ರತಿಗಳು ಯಾವುವು, ಅವುಗಳಿಂದ ಎಷ್ಟರಮಟ್ಟಿನ ನೆರವು ಪಡೆದಿದ್ದಾರೆ – ಎಂಬುದು ಖಚಿತವಾಗುವುದಿಲ್ಲ. ಗ್ರಂಥದ ಕಟ್ಟಕಡೆಯಲ್ಲಿ (ಏಕೆಂದರೆ ಗ್ರಂಥಾರಂಭದಲ್ಲೂ ಒಂದು ಗ್ರಂಥ ಋಣಪಟ್ಟಿ ಇದೆ) ಬರುವ ಗ್ರಂಥ ಋಣದ ಪಟ್ಟಿಯಲ್ಲಿ ಛಂದೋಂಬುಧಿಯ ಹದಿಮೂರು ಪ್ರತಿಗಳ ಉಲ್ಲೇಖವಿದೆ; ಇವುಗಳಲ್ಲಿ ಅಯ್ದು ಈಗಾಗಲೇ ಅಚ್ಚಾಗಿರುವ ಪ್ರತಿಗಳು, ಇನ್ನೆಂಟು ಹಸ್ತಪ್ರತಿಗಳು; ಈ ಎಂಟರಲ್ಲೂ ನಾಲ್ಕು, ಪರಿಶಿಷ್ಟ ಎಂಟರಲ್ಲಿ ಪ್ರಸ್ತಾಪಿತವಾಗಿರುವ ಪ್ರತಿಗಳೇ ಆಗಿವೆ – ಅಂತೂ ಇದು ಕಡೆಗೂ ಇತ್ಯರ್ಥವಾಗದೆಯೇ ಉಳಿಯುತ್ತದೆ.

೨. ಪರಿಶಿಷ್ಟ ಎಂಟು ಅಕ್ರಮವಾಗಿದೆ :

ಅ. ಪಾಠಾಂತರಗಳನ್ನು ಕೊಡುವುದು ಆಯಾ ಪದ್ಯಗಳು ಬರುವ ಪುಟದ ಅಡಿಭಾಗದಲ್ಲಿಯೇ ಹೊರತು ಪರಿಶಿಷ್ಟದಲ್ಲಿ ಅಲ್ಲ.

ಆ. ಕೆಲವು ಪಾಠಾಂತರಗಳನ್ನು ಪಠ್ಯದ ಪದ್ಯಗಳ ಅಡಿಯಲ್ಲಿ ಕೊಟ್ಟು ಮತ್ತೆ ಕೆಲವನ್ನು ಇಲ್ಲಿ ಪ್ರತ್ಯೇಕವಾಗಿ ಕೊಡುವುದು ಅಶಾಸ್ತ್ರೀಯ. ಇವು (ಅ.ಆ.) ಒಟ್ಟಿಗೆ ಒಂದು ಕಡೆ ಇರಬೇಕು. ಆಯಾ ಸ್ಥಾನದಲ್ಲೇ ಬರಬೇಕು.

ಅಲ್ಲದೆ ಈ ಎಂಟನೆಯ ಪರಿಶಿಷ್ಟದಲ್ಲಿ ಭಿನ್ನಪಾಠ ಯಾವುದು. ಅಧಿಕಪಾಠ ಯಾವುದು, ಗ್ರಂಥದಲ್ಲಿನ ಮೂಲ ಪಠ್ಯಭಾಗಕ್ಕೆ ಇದು ಎಲ್ಲಿ ಸೇರ್ಪಡೆಯಾಗಬೇಕು ಎಂಬುದು ಕೂಡಾ ಸ್ಫುಟವಾಗಿಲ್ಲ.

೩. ಗ್ರಂಥಋಣ ಎಂಬುದು ಗೋಜುಗೋಜಾಗಿದೆ. ಗ್ರಂಥಾರಂಭದಲ್ಲಿ ಕೃತಿಸ್ಮರಣೆ ಪಕ್ಕದಲ್ಲೇ ಒಂದು ಗ್ರಂಥ ಋಣವಿದೆ. ಮತ್ತೆ ಪುಟ ೨೦೦ ರಿಂದ ೨೦೩ರ ವರೆಗೆ ಗ್ರಂಥಾಂತ್ಯದಲ್ಲಿ ಇನ್ನೊಂದು ಗ್ರಂಥ ಋಣವಿದೆ. ಇವೆರಡರಲ್ಲೂ ಕೆಲವು ಪುನರಾವೃತ್ತಿಯಾಗಿವೆ. ಇಲ್ಲಿಯೂ ಒಂದು ವ್ಯವಸ್ಥೆಯಿಲ್ಲ. ಅಜಿತಪುರಾಣ, ಅನಂತನಾಥ ಪುರಾಣ, ಚಂದ್ರಪ್ರಭ ಪುರಾಣ ಮೊದಲಾದುವಕ್ಕೆ ಅವುಗಳ ಸಂಪಾದಕರು, ಪ್ರಕಾಶಕರು, ಪ್ರಕಟನ ವರ್ಷ – ವಗೈರ ವಿವರಗಳಿಲ್ಲ. ಕವಿರಾಜಮಾರ್ಗ, ಕಾವ್ಯಾವಲೋಕನ, ಕವಿಜನಾಶ್ರಯಮು – ಮೊದಲಾದುವಕ್ಕೆ ಈ ವಿವರಗಳಿವೆ ಮತ್ತೆ ಕೆಲವಕ್ಕೆ ಪ್ರಕಟನ ವರ್ಷ ಕೊಟ್ಟಿದ್ದು ಇನ್ನು ಕೆಲವಕ್ಕೆ ಕೊಟ್ಟಿಲ್ಲ (ಛಂದೋಮಂಜರಿ, ಕಾವ್ಯಾಕಲಾನಿಧಿ ಪ್ರಕಟಿತ ಛಂದೋಬುಧಿ ಇತ್ಯಾದಿ).

೪. ಸಂಕ್ಷಿಪ್ತ ಸಂಜ್ಞೆಗಳು (ಪುಟ. ೮) ಕ್ರಮಪ್ರಾಪ್ತ ಗತಿಯಲ್ಲಿಲ್ಲ. ಉಲ್ಲೇಖಿಸಿರುವ ಅನ್ಯ ಗ್ರಂಥಗಳ ಹೆಸರುಗಳನ್ನು ಒಂದಕ್ಷರ, ಎರಡಕ್ಷರ, ಮೂರಕ್ಷರ, ನಾಲ್ಕಕ್ಷರ – ಹೀಗೆ ತೋಚಿದಂತೆ ಸಂಕೇತಿಸಿ (ಸಂಕ್ಷಿಪ್ತಗೊಳಿಸಿ) ಕೊಟ್ಟಿದ್ದಾರೆ.

೫. ಕೆಲವು ಪದ್ಯಗಳ ಪಾಠಾಂತರಗಳನ್ನು ಗುರುತಿಸಿಲ್ಲ, ಮತ್ತೆ ಕೆಲವನ್ನೂ ಗುಮನಿಸಿಲ್ಲ. ಪ್ರಥಮಾಧಿಕಾರದಿಂದ ಅಯ್ದು ಉದಾಹರಣೆಗಳನ್ನಿತ್ತು ಈ ಸಂಗತಿಯನ್ನು ವಿಶದಪಡಿಸುತ್ತೇನೆ.

  1. ಒಂದನೆಯ ಪದ್ಯದ ನಾಲ್ಕನೆಯ ಸಾಲಿನಲ್ಲಿ ಬರುವ ‘ಬೇಱ್ಪವರದುನ್ನತಿಯಂ’ ಎಂಬುದಕ್ಕೆ ‘ಬೇಱ್ವಿ ವರಮಂ ದಯೆಯಿಂ’ ಎಂಬ ಪಾಠಾಂತರವಿದೆ.
  2. ಎರಡನೆಯ ಪದ್ಯದ ನಾಲ್ಕನೆಯ ಸಾಲಿನಲ್ಲಿ ಬರುವ ‘ಕೂರ್ತು ನಮಗೀತೆ’ ಎಂಬುದಕ್ಕೆ ‘ಕೂರ್ತೆಮಗೀಗೆ’ ಎಂಬ ಪಾಠಾಂತರವಿದೆ.

iii. ನಾಲ್ಕನೆಯ ಪದ್ಯದ ಕಡೆಯ ಸಾಲಿನಲ್ಲಿ ‘ಕೂರ್ತುಬೀರಸಿರಿಯೀಗೆ’ ಎಂಬುದಕ್ಕೆ ‘ತಾನೆ ವೀರಸಿರಿಯಕ್ಕೆ’ ಎಂಬ ಪಾಠಾಂತರವಿದೆ.

  1. ಪದ್ಯ ೭, ಸಾಲು ೨; ‘ಪುರಾಣಮಾರ್ಗ’ ಎಂಬುದಕ್ಕೆ ಇರುವ ಇನ್ನೊಂದು ಪಾಠ ‘ಪುರಾಣ ಪೂರ್ವ’
  2. ಪದ್ಯ ೮

ಬಲ್ಲರ ಬಗೆಯ ಕಲ್ತಮ
ನೆಲ್ಲಮನಂಗೊಂಡೊಱಲ್ದು ಪೇಱಲ್ ಕೀತಂ|
ಬಲ್ಲನೆನಲ್ಕೆಱವಿಕ್ಕಿದ
ಬೆಲ್ಲದವೊಲಪೂರ್ವಮಾಗೆ ಪೇಱ್ದಂ ಕೃತಿಯಂ ||

ಇದಕ್ಕಿರುವ ಭಿನ್ನಪಾಠ

ಬಲ್ಲರ ಬಗೆಯಂ ಕೇಳ್ದವ
ರೆಲ್ಲಂ ಕೈಕೊಂಡರಲ್ದು ಕೇಳ್ದಿಂತೀತಂ |
ಬಲ್ಲನೆನಲ್ಕೆಱವಿಕ್ಕಿದ
ಚೆಲ್ವೆನಿಸಲಪೂರ್ವಮಾಗೆ ಪೇಱ್ದಂ ಕೃತಿಯಂ ||
vi ಪದ್ಯ ೧೦
ಪ್ರಾಸಾನುಪ್ರಾಸಂಗಳ
ಲೇಸಾಗಿರೆ ಸುಕ್ಕಡಂಗಿ ಕನ್ನಡದಿಂ ಪೇ |
ಱ್ವೌಸುಕವಿಯನಾಶುಕವಿಯ
ನಾ ಸುಕವಿಪ್ರಕರಮಱೆದು ಮೆಚ್ಚುಗೆಮಲ್ತೆ ||

ಇದಕ್ಕೆ ಬೇರೆ ಪಾಠಾಂತರಗಳಿರುವ ಪದ್ಯ :

ಪ್ರಾಸಾನುಪ್ರಾಸಕ್ಕದು
ಲೇಸಗಿದೆ ಸುಕ್ಕಡಂಗಿ ಕನ್ನಡದಿಂ ಪೇ|
ಳ್ದಾಸುಕರ ಕವಿಯ ಬಲ್ಮೆಯ
ನಾಸುಕವಿ ಪ್ರಕರಮಱೆದು ಮೆಚ್ಚುಗುಮಲ್ತೇ ||

ಈ ಪಾಠಾಂತರಗಳನ್ನು ಸಂಪಾದಕರು ಗುರುತಿಸದೇ ಹೋದದ್ದು ಅಸಮರ್ಥನೀಯವಾಗಿದೆ, ಏಕೆಂದರೆ ಇವು ಅವರು ಕೊಡುವ ಗ್ರಂಥೃಣ ಪಟ್ಟಿಯಲ್ಲಿನ ಹಸ್ತಪ್ರತಿಗಳಲ್ಲೇ ದೊರೆಯುತ್ತವೆ.

೬. ಕೆಲವು ಪದ್ಯಗಳ ನಡುವೆ ಅಲ್ಪವಿರಾಮ ಚಿಹ್ನೆ ಹಾಕಿರುವುದು ಅಶುದ್ಧಕ್ರಮ. ಪದವಿಭಾಗ, ಗಣವಿಭಾಗ, ಅಂಶವಿಭಾಗ ಮೊದಲಾದುವನ್ನು ಸೂಚಿಸುವುದಿದ್ದರೂ ಉದ್ದಕ್ಕೂ ಒಂದು ನಿಯಮದಂತೆ ಇದನ್ನು ಪಾಲಿಸಬೇಕು. ಇನ್ನೂ ದೋಷವೆಂದರೆ ಒಂದೇ ಪದ್ಯದಲ್ಲಿ ಒಂದೋ ಎರಡೋ ಸಾಲಿಗೆ ಪದವಿಭಾಗ ಸೂಚನೆ ಕೊಟ್ಟು ಉಳಿದ ಪಾದಗಳಲ್ಲಿ ಅದನ್ನು ಕೈಬಿಟ್ಟಿರುವುದು.

೭. ಅಲ್ಲಲ್ಲಿ ಸಂಪಾದಕರು ಮೂಲ ಪದ್ಯಗಳಿಗೆ ಹೊಸಗನ್ನಡದಲ್ಲಿ ವ್ಯಾಖ್ಯಾನಿಸುವುದುಂಟು. ಕವಿಕೃತ ಪದ್ಯಗಳ ಜತೆಗೇ ಸಂಪಾದಕ ರಚಿತ ವಿವರಣೆಯೂ ಮುದ್ರಣ ವ್ಯತ್ಯಾಸವಿಲ್ಲದೆ ಬೆರೆತಿರುವುದು ಸರಿಯಲ್ಲ. ಸಂಪಾದಕರ ವಿವರಣೆಗಳು ಪ್ರತ್ಯೇಕವಾಗಿರಬೇಕು. ಇವೆರಡರ ನಡುವೆ ಒಂದು ತೆಳು ಅಡ್ಡಗೆರೆ ತರುವುದು ವಾಡಿಕೆ. ಅಥವಾ ಅಡಿಟಿಪ್ಪಣಿಯಲ್ಲೋ ಬೇರೆ ಪ್ರಮಾಣದ ಅಕ್ಷರ ವಿಧಾನದಿಂದಲೋ ಸೂಚಿಸಬಹುದು. ಛಂದೋಂಬುಧಿಯ ಪದ್ಯಗಳೂ ಸಂಪಾದಕರ ವಿವರಣೆಯೂ ೧೨ ಪಾಯಿಂಟ್ ರೋಮನ್‌ನಲ್ಲೇ ಇರುವುದನ್ನಾದರೂ ತಪ್ಪಿಸಬಹುದಿತ್ತು. ನಾಗವರ್ಮನ ವಚನ ಭಾಗವೂ ಬಂದಾಗ ಇದರ ಔಚಿತ್ಯವೇನೆಂಬುದು ಮನವರಿಕೆಯಾಗುತ್ತದೆ.

೮. ಕೆಲವು ಪದ್ಯಗಳಿಗೆ ವಿವರಣೆ ಕೊಡುವುದು, ಮತ್ತೆ ಕೆಲವಕ್ಕೆ ಕೊಡದಿರುವುದು – ಈ (ಅ) ವ್ಯವಸ್ಥೆಯ ಹಿಂದೆ ಕೂಡ ಒಂದು ಗೊತ್ತಾದ ಸಕ್ರಮ ನಿಯಮ ಪ್ರವರ್ತಿಸಿಲ್ಲ. ಏಕೆಂದರೆ ವಿವರಣೆ ಬಯಸುವ ಕೆಲವು ಪದ್ಯಗಳಿಗೆ ವಿವರಣೆಯೇ ಇಲ್ಲ ಮತ್ತು ವಿವರಣೆ ಬೇಡದ ಕೆಲವು ಸರಳ ಪದ್ಯಗಳಿಗೆ ವಿವರಣೆಯಿದೆ.

೯. ಅನೇಕ ಪದ್ಯಗಳಿಗೆ ಆಯಾ ಪದ್ಯದ ವೃತ್ತಜಾತಿಯನ್ನು ಹೆಸರಿಸಿದ್ದರೂ ಕೆಲವು ಪದ್ಯಗಳಿಗೆ ತಿಳಿಸಿಲ್ಲ.

೧೦. ಪೀಠಿಕೆಯಲ್ಲಿ ಅನಾವಶ್ಯಕ ವಿವರಗಳನ್ನು ಕಲೆ ಹಾಕಿ ಹೇಳಿದ್ದಾರೆ. ಕೆಲವು ಕಡೆ ಅತಿ ವಿಸ್ತಾರದ ದೋಷಗಳಿವೆ. ಒಮ್ಮೊಮ್ಮೆ ಅನಗತ್ಯವಾಗಿ ಸಂಸ್ಕೃತ ಪದ್ಯಗಳನ್ನು ಉದಾಹರಿಸುತ್ತಾರೆ. ಸಂಗೀತದ ವಿವರಣೆ ಅಪ್ರಸ್ತುತವೆಂಬಷ್ಟು ಹೆಚ್ಚು ಬಂದಿದೆ.

೧೧. ಶಬ್ದಕೋಶ ಹೇಗಿರಬಾರದೋ ಹಾಗಿದೆ: ತೊಡರದೆ, ತೊದಳೇಂ, ದ್ಯೋತಿಸಿರೆ, ಪತ್ತಿರ್ದಾಗಳ್, ಪರ್ಬಿಕ್ಕೆ, ಪುದಿದಿರ್ಕೆ, ಪುದುಂಗೊಳೆ, ಸಮನಿಸಲ್ – ಎಂಬ ಶಬ್ದಗಳು ಶಬ್ದ ಕೋಶದ ವ್ಯವಸ್ಥೆಗೆ ಅಳವಟ್ಟಾಗ ತೊಡರು, ತೊದಳು, ದ್ಯೋತಿಸು, ಪತ್ತು, ಪರ್ಬು, ಪುದಿ, ಪುದು/ಪುದುಂಗೊಳ್, ಸಮನಿಸು ಎಂಬಂತೆ ಇರಬೇಕಾಗುತ್ತದೆ.

೧೨. ಇದು ಆಗಸ್ಟ್ ೧೯೭೫ ರಲ್ಲಿ ಪ್ರಕಟವಾಗಿದೆ; ಮೇ ೧೯೭೪ ರಲ್ಲಿ ಮೈಸೂರಿನಲ್ಲೇ ಪ್ರಕಟವಾದ ಛಂದಸ್ಸಂಪುಟದ ಉಲ್ಲೇಖ ಇದರಲ್ಲಿ ಬಂದಿಲ್ಲ.

೧೩. ಅಪಾರ ಮುದ್ರಣ ದೋಷಗಳಿವೆ. ಇವು ಕರಡು ತಿದ್ದಾಣಿಕೆಯಲ್ಲಿ ಎಚ್ಚರ ತೋರದಿದ್ದುದರಿಂದ ಸಂಭವಿಸಿರುವ ಸ್ಖಾಲಿತ್ಯಗಳೇ ಹೊರತು ಅಚ್ಚುಕೂಟದವರ ಅಥವಾ ಪ್ರಕಾಶಕರ ತಪ್ಪಲ್ಲ.

೧೪. ಪುಸ್ತಕದ ಬೆಲೆ (೨೫/-) ಹೆಚ್ಚಾಯಿತೆಂಬುದೇ ಹೊರತು ಮುದ್ರಣ. ಕಾಗದ, ಹೊದಿಕೆ ಮುದ್ದಾಗಿದೆ.

೧೫. ಸಂಪಾದಕರಿಗೆ ಗ್ರಂಥ ಸಂಪಾದನಾ ಶಾಸ್ತ್ರದ ಪ್ರವೇಶ ಪರಿಶ್ರಮಗಳಿವಲ್ಲವೆಂದು ಚೆನ್ನಾಗಿ ಸಾಬೀತಾಗುತ್ತದೆ.

೧೬. ಒಟ್ಟಾರೆ ಇದೊಂದು ಜನಪ್ರಿಯ ಆವೃತ್ತಿಯಾಗಿಯೇ ಉಳಿಯುತ್ತದೆ.

ಬಾಹುಬಲಿ ಪಂಡಿತನ ಧರ್ಮನಾಥ ಪುರಾಣವನ್ನು (ಸಂ: ಎನ್. ಬಸವಾರಾಧ್ಯ) ನಾಲ್ಕು ಹಸ್ತಪ್ರತಿಗಳಿಂದ ಸಂಪಾದಿಸಲಾಗಿದೆ. ಇವುಗಳಲ್ಲಿ ಕ, ಗ, ಚ ಪ್ರತಿಗಳ ಮೂಲ ಮೂಡಬಿದ್ರಿಗೆ ಸೇರಿದ್ದು. ಮೂಡಬಿದ್ರಿಯ ದಿವಂಗತ ಲೋಕನಾಥ ಶಾಸ್ತ್ರಿಗಳಿಂದ ಬಂದ ಗ್ರಂಥದಿಂದ ಎತ್ತಿದ ಪ್ರತಿಯೇ ಕ ಪ್ರತಿ. ಮೂಡಬಿದ್ರಿಯ ಜೈನಧರ್ಮ ಶಾಲೆಯಲ್ಲಿನ ಓಲೆಯ ಪ್ರತಿಯಿಂದ ಮೈಕ್ರೊಫಿಲಂ ಮಾಡಿದ ಪ್ರತಿ ‘ಗ’. ಮೂಡಬಿದ್ರಿಯ ವೀರವಾಣಿ ಸಿದ್ಧಾಂತ ಭವನದ ಓಲೆಪ್ರತಿಯ ಮೈಕ್ರೋಫಿಲಂ ಪ್ರತಿ ‘ಚ’. ಎಂ.ಸಿ. ಪದ್ಮನಾಭಶಮ್ರು ಜಿನವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ ಅಷ್ಟಾಶ್ವಾಸಗಳ ಪ್ರತಿ ‘ಜ’, ಅಂದರೆ ‘ಜ’ ಮುದ್ರಿತ ಪ್ರತಿ.

ಈ “ನಾಲ್ಕು ಪ್ರತಿಗಳಲ್ಲಿ ಕ ಪ್ರತಿ ಶುದ್ಧವಾದುದು, ಸಮಗ್ರವಾದುದು. ಆದರೂ ಸಹ ಕೆಲವೆಡೆ ಗ್ರಂಥಪಾತವಾಗಿದೆ. ಅಂಥ ಕಡೆಗಳಲ್ಲಿ ಇನ್ನುಳಿದ ಪ್ರತಿಗಳಿಂದ ಅದನ್ನು ತುಂಬಲಾಗಿದೆ. ಈ ಕಾವ್ಯದ ಪಾಠಾಂತರಗಳನ್ನು ನಿರ್ಧರಿಸುವಲ್ಲಿ ಯಾವುದೇ ಒಂದು ಪ್ರತಿಯನ್ನು ನಿರಂತರವಾಗಿ ಅನುಸರಿಸಿಲ್ಲ. ಆದರೆ ಕ ಪ್ರತಿಯ ಪಾಠಾಂತರಗಳನ್ನು ವಿಶೇಷವಾಗಿ ಅನುಸರಿಸಲಾಗಿದೆ. ಸಂದರ್ಭೋಚಿತವಾಗಿ ಇತರ ಪ್ರತಿಗಳ ಪಾಠಗಳನ್ನೂ ಮಾಡಿ ವಿಚಾರ ಮಾಡಿ ಆ ಪಾಠಗಳನ್ನೇ ಇಲ್ಲಿ ಉಳಿಸಿಕೊಳ್ಳಲು ಯತ್ನಿಸಲಾಗಿದೆ” ಎಂದು ಸಂಪಾದಕರು ತಿಳಿಸಿದ್ದಾರೆ. ಇದರಲ್ಲಿ ಪುನರುಕ್ತಿ ದೋಷವಿದ್ದರೂ, ಅವರ ಈ ಆಶಯ ಬಹುಮಟ್ಟಿಗೆ ಈಡೇರಿದೆಯೆನ್ನಬಹುದು.