ಇಲ್ಲಿ ವಿಮರ್ಶಿತವಾಗಿರುವ ೧೯೭೬ರಲ್ಲಿ ಪ್ರಕಟವಾದ ಎಂಟು ಪುಸ್ತಕಗಳಲ್ಲಿ ಮೂರು ನೇರವಾಗಿ ವ್ಯಾಕರಣಕ್ಕೂ, ನಾಲ್ಕು ಭಾಷೆಗೂ, ಒಂದು ನಿಘಂಟುವಿಗೂ ಸಂಬಂಧಿಸಿವೆ. ಭಾಷೆಗೆ ಸಂಬಂಧಿಸಿದ ನಾಲ್ಕು ಗ್ರಂಥಗಳಲ್ಲಿ ದ್ರಾವಿಡ ಭಾಷಾ ವ್ಯಾಸಂಗ, (ಅನ್ಯ) ಭಾಷಾ ಬೋಧನೆ ಮತ್ತು ಭಾಷಾ ವಿಜ್ಞಾನ ನಿಘಂಟು ಎಂಬ ಗ್ರಂಥಗಳಿವೆ. ಇವುಗಳಲ್ಲಿ ‘ಭಾಷಾ ವಿಜ್ಞಾನ ನಿಘಂಟು’ ಎಂಬ ಪುಸ್ತಕ ಶಬ್ದಕೋಶವೆಂಬ ಸಾಮಾನ್ಯ ವಿಭಾಗಕ್ಕೆ ಸೇರಬಹುದಾದರೂ, ಅದು ಭಾಷಾ ವಿಜ್ಞಾನ ಕ್ಷೇತ್ರದ ಪರಿಭಾಷಿಕ ಶಬ್ದಗಳಿಗೆ ಸೀಮಿತವಾಗಿರುವುದರಿಂದ ಅದನ್ನು ಭಾಷಾವಿಜ್ಞಾನ ವಿಭಾಗದಲ್ಲಿ ಸಮಾವೇಶಗೊಳಿಸಲಾಗಿದೆ.

ಭಾಷಾವಿಜ್ಞಾನ ಕೋಶ (ಕೆ. ಕೆಂಪೇಗೌಡ) ಇನ್ನಷ್ಟು ಅವಧಾನದಿಂದ ಪ್ರಕಟವಾಗಬೇಕಿತ್ತೆಂಬ ಅಭಿಪ್ರಾಯಕ್ಕೆ ಅವಕಾಶಮಾಡಿ ಕೊಟ್ಟಿದೆ. ಇಂಥ ಶಬ್ದಕೋಶಗಳು ತೀರ ವೈಜ್ಞಾನಿಕವಾಗಿ ಇರಬೆಕಾದುದು ಅಗತ್ಯ. ಆದರೆ ಇದರಲ್ಲಿ ಅವೈಜ್ಞಾನಿಕ ಅಸ್ತವ್ಯಸ್ತತೆ ತಲೆ ಹಾಕಿದೆ.

೧. ಪಾರಿಭಾಷಿಕ ಶಬ್ದಕೋಶ ಮಾಮೂಲಿನ ಶಬ್ದಕೋಶದಂತೆ ಅಲ್ಲ. ಶಬ್ದಕೋಶದಲ್ಲಿ ಒಂದು ಶಬ್ದಕ್ಕಿರುವ ಅರ್ಥಗಳನ್ನು ಒಂದೆಡೆ ಸಂಗ್ರಹಿಸಿಕೊಡುತ್ತಾರೆ. ಪಾರಿಭಾಷಿಕ ಕೋಶದಲ್ಲಿ ಒಂದು ಪರಿಭಾಷೆಗೆ, ಇನ್ನೊಂದು ಭಾಷೆಯಲ್ಲಿ ಸಂವಾದಿಯಾಗಿ ನಿಲ್ಲುವ, ಸಮಾನಾರ್ಥ ವ್ಯಂಜಕ ಶಬ್ದವನ್ನು ಕೊಡಬೇಕು. ಇಲ್ಲಿ ಅಲ್ಲಲ್ಲಿ ಅಂಥ ಪ್ರಯತ್ನವಿದ್ದರೂ ಹಲವು ಶಬ್ದಗಳಿಗೆ ಅರ್ಥವನ್ನು ವಿವರಿಸತೊಡಗುತ್ತಾರೆ. ಪಾರಿಭಾಷಿಕ ಶಬ್ದವೂ ವಿವರಣಾತ್ಮಕವಾಗಿಯೇ ಇರಬೇಕಾಗಿರುತ್ತದೆಯಾದರೂ ಅದು ತನ್ನ ಸಂಕ್ಷಿಪ್ತ ಗುಣದಿಂದ ವಂಚಿತವಾಗಿರಬಾರದು.

೨. ಒಂದು ಶಬ್ದಕ್ಕೆ ಸಂವಾದಿಯಾಗಿ ಇನ್ನೊಂದು ಶಬ್ದ ಕೊಡಬೇಕಾದುದು ಕ್ರಮ ಮತ್ತು ನಿಯಮ. ಇಲ್ಲಿ ಒಂದು ಶಬ್ದಕ್ಕೆ ಹಲವು ಶಬ್ದಗಳನ್ನು ಕೊಡುತ್ತಾರೆ. ಆಫ್ರಿಕೇಟ್ ಎಂಬ ಶಬ್ದಕ್ಕೆ ಅನುಘರ್ಷಿ, ಸ್ಪರ್ಶಘರ್ಷಿ, ಸ್ಪರ್ಶ ಸಂಘರ್ಷಿ, ಘರ್ಷಸ್ಪರ್ಶಿ ಎಂಬ ಶಬ್ದರೂಪಗಳನ್ನು ಕೊಟ್ಟಿದ್ದಾರೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಮತ್ತು ಮೂಲಭೂತ ಉದ್ದೇಶದಿಂದ ದೂರ ಸರಿದಂತಾಗಿದೆ.

೩. ಇಂಗ್ಲಿಷ್ ಪರಿಭಾಷೆಗೆ ಸಂವಾದಿಯಾದ ಒಂದು ಶಬ್ದವನ್ನು ಭಾರತೀಯ ಭಾಷೆಗಳಲ್ಲಿ ಕೊಡುವಾಗ ಸಂಸ್ಕೃತ ಶಬ್ದಗಳನ್ನು ಸ್ವೀಕರಿಸುವುದು ಉಚಿತ, ಉಪಯುಕ್ತ. ಇಲ್ಲಿ ಕೆಲವು ಕಡೆ ಒಮ್ಮೊಮ್ಮೆ ಅನಗತ್ಯವಾಗಿ ಕೂಡ, ಕನ್ನಡ ಶಬ್ದಗಳನ್ನು ಬಳಸಿದ್ದಾರೆ : ಲಿಂಗ್ವ – ನಾಲಿಗೆಯ (ಇದು ನಾಲಗೆಯ ಎಂದು ಇರಬೇಕು). ಮಾತಿನ, ಜಿಹ್ವೆಯ, ಜಿಹ್ವೀಯ, ಭಾಷೆಯ.

೪. ಖಚಿತತೆಯ ಅಭಾವ ಗ್ರಂಥದ ಮೌಲ್ಯವನ್ನು ಕುಂಠಿತಗೊಳಿಸಿದೆ. ಅರಿಕೆಯಲ್ಲಿ ‘ಭಾಷಾವಿಜ್ಞಾನವನ್ನು ಸಂವಾದಿಯಾದ ಕನ್ನಡದಲ್ಲಿ ತರುವಾಗ ಅನೇಕ ಸಮಸ್ಯೆಗಳು ತಲೆದೋರುತ್ತವೆ’ ಎಂದಿದ್ದಾರೆ. ಈ ವಾಕ್ಯದ ಅರ್ಥ ವಿಶದವಾಗುವುದಿಲ್ಲ. ‘ನನಗೆ ಉಚಿತವೆಂದು ತೋರಿದ ರೀತಿಯಲ್ಲಿ ಕನ್ನಡ ಶಬ್ದಗಳನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡಿದ್ದೆನೆ’ – ಎಂದಿದ್ದಾರೆ. ಶಾಸ್ತ್ರ ವಿಷಯದಲ್ಲಿ ವೈಯಕ್ತಿಕಕ್ಕೆ ಉಚಿತವೆನಿಸಿದುದನ್ನು ಪ್ರಯೋಗಿಸುವುದಕ್ಕೆ ಅವಕಾಶ ಸೀಮಿತ. ವಿಷಯಕ್ಕೆ ಅನುಗುಣವಾಗಿರುವುದು, ಉಳಿದ ಲೇಖಕರಿಗೆ ಸಮ್ಮತವಾಗುವಂತಿರುವುದು ಇಲ್ಲಿ ಮುಖ್ಯವಾಗಿರುತ್ತದೆ.

೫. ಇದೇ ಶಬ್ದಕೋಶ ಮೊದಲು ಪ್ರಬುದ್ಧ ಕರ್ನಾಟಕದಲ್ಲಿ ಬಿಡಿಬಿಡಿಯಾಗಿ ಪ್ರಕಟವಾದಾಗ ಲೇಖಕರು ಇದನ್ನು ಸಿದ್ಧಪಡಿಸುವುದಕ್ಕೆ ಉಪಯೋಗಿಸಿಕೊಂಡ ಸಹಾಯಕ ಗ್ರಂಥ ಸೂಚಿಯನ್ನು ಕೊಟ್ಟಿದ್ದರು. ಈಗ ಪುಸ್ತಕ ರೂಪದಲ್ಲಿ ಶಬ್ದಕೋಶ ಹೊರತರುವಾಗ ಅದನ್ನು ಕೈಬಿಟ್ಟ ಉದ್ದೇಶ ಅರ್ಥವಾಗಲಿಲ್ಲ.

ಬಹುಮಟ್ಟಿಗೆ ಸಮಾನ ದೃಷ್ಟಿಕೋನದಿಂದ ರಚಿತವಾಗಿರುವ ಭಾಷಾಬೋಧನೆ (ಎ.ಎಸ್. ನಂಜುಂಡಸ್ವಾಮಿ) ಮತ್ತು ಅನ್ಯಭಾಷಾಬೋಧೆ (ವಿಲ್ಯಂಮಾಡ್ತ) ಎಂಬ ಗ್ರಂಥಗಳು ಗುಣದ ದೃಷ್ಟಿಯಿಂದ ಎರಡು ಧ್ರುವಗಳಾಗಿವೆ.

ಭಾಷಾ ಬೋಧನೆ ತುಂಬ ನೀರು ನೀರಾದ ಬರವಣಿಗೆಗೆ ಉದಾಹರಣೆಯಾಗಿದೆ. ಈ ಪುಸ್ತಕ ಆರಿಸಿಕೊಂಡಿರುವ ವಿಷಯದ ಆಳಕ್ಕೆ ಇಳಿಯದೆ ಮೇಲು ಮೇಲೆ ತೇಲಿಕೊಂಡು ಹೋಗುವ ಸ್ವರೂಪದಲ್ಲಿದೆ. ‘ಪ್ರಾಥಮಿಕ ಘಟ್ಟದಲ್ಲೂ, ಮಾಧ್ಯಮಿಕ ಘಟ್ಟದಲ್ಲೂ ಕನ್ನಡವನ್ನಾಗಲೀ ಆಂಗ್ಲ ಭಾಷೆಯನ್ನಾಗಲೀ ಬೋಧಿಸುವ ಉಪಾಧ್ಯಾಯರಿಗೂ ಅಧ್ಯಾಪಕರ ತರಬೇತಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಭಾವೀ ನುಡಿ ಬೋಧಕರಿಗೂ ಈ ಗ್ರಂಥವು ಉಪಯುಕ್ತವಾಗಿರುವುದೆಂದು ಆಶಿಸಲಾಗಿದೆ. ಭಾಷಾಬೋಧನೆಗೆ ಸಂಬಂಧಿಸಿದ ಆಂಗ್ಲ ಗ್ರಂಥಗಳನ್ನು ಓದಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದವರ ನೆರವಿಗೆ ಈ ಹೊತ್ತಗೆಯು ಧಾವಿಸುವುದೆಂದು ಭಾವಿಸಲಾಗಿದೆ’ – ಎಂಬ ಆಶಯ ಕೈಗೂಡದ ಕನಸಾಗಿಯೇ ಉಳಿದಿದೆ. ಕನ್ನಡದ ಸಂದರ್ಭದಲ್ಲಿ ಭಾಷಾಬೋಧನೆಯ ಅಗತ್ಯ ಮತ್ತು ವಿಧಾನ ಕುರಿತು ಲೇಖಕರಿಗೆ ಇರುವ ತಿಳುವಳಿಕೆಯ ಅಭಾವ ಗ್ರಂಥದುದ್ದಕ್ಕೂ ವ್ಯಕ್ತವಾಗುತ್ತದೆ. ಕೇವಲ ಸಹಾಯಕ ಇಂಗ್ಲಿಷ್ ಗ್ರಂಥಗಳನ್ನು ಆಧರಿಸಿ, ಅದನ್ನು ಜೀರ್ಣಿಸಿಕೊಳ್ಳದೆ, ಗಿಳಿ ಪಾಠವಾಗಿ ಕನ್ನಡಿಸುವ ‘ಕನ್ನಡವಕ್ಕಿ’ ಕೆಲಸ ಮಾಡಿದಂತಾಗಿದೆ.

ಇದರ ತದ್ವಿರುದ್ಧ ಪ್ರಯತ್ನ ಅನ್ಯಭಾಷಾಬೋಧೆಯಲ್ಲಿದೆ. ಇಲ್ಲಿ ಸಮಸ್ಯೆ ಸ್ವರೂಪವನ್ನು ಸಾಕಷ್ಟು ಪರಿಚಯಿಸಿಕೊಂಡು ವಿಷಯವನ್ನು ಮಂಡಿಸುವ ಪ್ರಯತ್ನವಿದೆ. ಅನ್ಯಭಾಷಾಬೋಧನ ಪದ್ಧತಿಯಲ್ಲಿರುವ ವ್ಯಾಕರಣ – ಭಾಷಾಂತರ ಪದ್ಧತಿ, ನೇರ ಪದ್ಧತಿ, ರಚನಾತ್ಮಕ-ಶ್ರಾವಣ-ಮೌಖಿಕ ಪದ್ಧತಿ, ಭಾಷಾ ವೈಜ್ಞಾನಿಕ ಪದ್ಧತಿ ಮೊದಲಾದ ಕ್ರಮಗಳನ್ನು ತತ್ವಗಳನ್ನೂ ಸಾಧನೆಗಳನ್ನೂ ಸರಳ ರೀತಿಯಲ್ಲಿ ಪರಿಚಯಿಸಿದ್ದಾರೆ. ಶ್ರವಣಾತ್ಮಕ ಸಾಧನೆಗಳನ್ನು ಬಳಸಿಕೊಂಡು ಬೋಧಿಸುವ ‘ಭಾಷಾ-ಬೋಧನೆ’ಯ ಆಧುನಿಕ ವಿಧಾನದ ತಿಳಿವಳಿಕೆಯೂ ಇಲ್ಲಿದೆ. ಅಲ್ಲಲ್ಲಿ ಭಾಷೆ ತೀರ ಗ್ರಾಂಥಿಕವಾಗಿ ಪೆಡಸು ಎನಿಸಿದರೂ ಇದೊಂದು ಉಪಯುಕ್ತ ಪುಸ್ತಕವೆಂಬುದರಲ್ಲಿ ಸಂಶಯವಿಲ್ಲ.

ದ್ರಾವಿಡ ಭಾಷಾ ವ್ಯಾಸಂಗ (ಸಂಗಮೇಶ ಸವದತ್ತಿ ಮಠ) ಭಾಷಾ ವಿಜ್ಞಾನದ ಸಾಮಾನ್ಯ ತಿಳಿವಳಿಕೆಯ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳಿಗೆ ಸುಲಭವಾಗಿ ವಿವರಿಸುವ ಉದ್ದೇಶದಿಂದ ರಚಿತವಾಗಿರುವ ಗ್ರಂಥ. ಇದರಲ್ಲಿ ದ್ರಾವಿಡ ಜನಾಂಗ, ದ್ರಾವಿಡ ಭಾಷೆಗಳ ಅಧ್ಯಯನದ ಇತಿಹಾಸ, ದ್ರಾವಿಡ ಭಾಷೆಗಳು, ಅವುಗಳ ವರ್ಗೀಕರಣ, ಮೂಲ ದ್ರಾವಿಡ ಭಾಷೆಯ ಧ್ವನಿಯಾ ಮತ್ತು ಆಕೃತಿಮಾಗಳ ವಿಚಾರ, ವೈಶಿಷ್ಟ್ಯ ಇವುಗಳನ್ನು ವಿವರಿಸಲಾಗಿದೆ. ಜತೆಗೆ ಕಡೆಯಲ್ಲಿ ಉಪಯುಕ್ತವಾದ ಪರಿಶಿಷ್ಟ ಹಾಗೂ ಅನುಬಂಧಗಳನ್ನು ಕೊಟ್ಟಿದೆ.

ದ್ರಾವಿಡ ಭಾಷಾ ವಿಜ್ಞಾನ ಬೆಳೆಯುತ್ತಿರುವ ಕ್ಷೇತ್ರ. ಕಾಲ್ಡ್‌ವೆಲ್ ತರುವಾಯದ ನೂರಿಪ್ಪತ್ತೈದು ವರ್ಷಗಳಲ್ಲಿ ಅನೇಕ ಗ್ರಂಥಗಳೂ ನೂರಾರು ಲೇಖನಗಳೂ ಪ್ರಕಟವಾಗಿವೆ. ಎಂ.ಬಿ. ಎಮೆನೊ, ಥಾಮಸ್ ಬರೊ, ಎಂ.ಎಸ್. ಆಂಡ್ರನೊವ್, ಕಮಿಲ್ ಜ್ವೆಲೆಬಿಲ್, ಭದ್ರಿರಾಜು ಕೃಷ್ಣಮೂರ್ತಿ ಮೊದಲಾದ ದ್ರಾವಿಡ ಭಾಷಾ ವಿಜ್ಞಾನಿಗಳ ಬರವಣಿಗೆ ಮೌಲಿಕ ಕೊಡುಗೆಯಾಗಿದೆ. ಈ ಬಗೆಯ ವೈಯಕ್ತಿಕ ಪ್ರಯತ್ನಗಳು ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಸಮುದಾಯ ಪ್ರಯತ್ನಕ್ಕೆ ಗುರಿಯಾಗಿವೆ. ಪುಣೆ ಮತ್ತು ಅಣ್ಣಾಮಲೈ ವಿಶ್ವವಿದ್ಯಾನಿಲಯಗಳೂ, ಮೈಸೂರಿನಲ್ಲಿರುವ ಅಖಿಲ ಭಾರತ ಭಾಷಾ ಸಂಸ್ಥೆಯೂ, ಅಖಿಲ ಭಾರತ ದ್ರಾವಿಡ ಭಾಷಾ ಪರಿಷತ್ತೂ ದ್ರಾವಿಡ ಭಾಷಾ ಅಧ್ಯಯನಕ್ಕೆ ಹೊಸ ಆಯಾಮವನ್ನು ತಂದು ಕೊಡುತ್ತಿದೆ. ಈ ಕ್ಷೇತ್ರದಲ್ಲಿ ಸಿದ್ಧಿ ಸಾಧನೆ ಸಂಶೋಧನೆಗೆ ಫಲಿತಾಂಶವನ್ನು ಪ್ರಕಟಿಸುವ ಸಲುವಾಗಿ ಮೀಸಲು ಪತ್ರಿಕೆಗಳಿವೆ. ಪ್ರತಿವರ್ಷ ಏರ್ಪಡುವ ದ್ರಾವಿಡ ಭಾಷಾ ಸಮ್ಮೇಳನಗಳಲ್ಲಿ ಚರ್ಚೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೀಗಾಗಿ ದ್ರಾವಿಡ ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿ ಬರವಣಿಗೆಗೆ ತೊಡಗುವ ಹೊಸಬರಿಗೆ ಅಪಾರವಾದ ವಿಶೇಷ ಅನುಕೂಲಗಳು ಇರುವಂತೆ ಹೊಣೆಗಾರಿಕೆಯೂ ಇದೆ. ಲೇಖಕರು ಇತ್ತೀಚೆಗಿನ ಬೆಳವಣಿಗೆಯ ಪರಿಚಯ ಪಡೆದಿರಬೇಕಾದುದು ಅನಿವಾರ್ಯವಾಗುತ್ತದೆ.

ಕನ್ನಡದಲ್ಲಿ ದ್ರಾವಿಡ ಭಾಷಾ ವಿಜ್ಞಾನ ಪ್ರಕಟವಾದ ಮೇಲೆ (ಹಂಪನಾ, ೧೯೬೬, ೧೯೭೨) ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅದೇ ಲೇಖಕರ ‘ದ್ರಾವಿಡ ಸಂಖ್ಯಾವಾಚಕಗಳು’ (೧೯೭೨) ಬಿಟ್ಟರೆ, ಒಟ್ಟು ಒಂದು ದಶಕದ ಅವಧಿಯಲ್ಲಿ ಬೇರೆ ಗ್ರಂಥಗಳು ಬರಲಿಲ್ಲ. ಈ ಕೊರತೆ ಮತ್ತು ಅಗತ್ಯವನ್ನು ಪೂರೈಸುವ ಪ್ರಾಮಾಣಿಕ ಪ್ರಯತ್ನದ ಫಲವಾಗಿ ದ್ರಾವಿಡ ಭಾಷಾ ವ್ಯಾಸಂಗ ಹೊರಬಂದಿದೆ. ಲೇಖಕರೇ ಅರಿಕೆ ಮಾಡಿಕೊಂಡಿರುವಂತೆ ‘ತೀರ ಆಳವೂ ಅಲ್ಲದ ತೀರ ಸಾಮಾನ್ಯವೂ ಅಲ್ಲದ, ವ್ಯಾಸಂಗಿಗೆ ಅಗತ್ಯವೆನಿಸುವ ವಿಷಯವನ್ನಿಲ್ಲಿ ಕ್ರೋಡೀಕರಿಸಲಾಗಿದೆ.’

ಲೇಖಕರು ಇನ್ನಷ್ಟು ಎಚ್ಚರವಹಿಸಿ ಪರಿಶೀಲಿಸಿದ್ದರೆ ಇದರಲ್ಲಿನ ಕೆಲವು ದೋಷಗಳನ್ನಾದರೂ ಸುಲಭವಾಗಿ ತಪ್ಪಿಸಬಹುದಿತ್ತು. ಇವರು ಬಳಸಿರುವ ಉಪಧ್ವನಿಮಾ, ಉಪ ಆಕೃತಿಮಾ ಮುಂತಾದ ಪರಿಭಾಷೆ ತಪ್ಪು ಕಲ್ಪನೆಯ ಪರಿಣಾಮ. ಫೋನೀಮ್ ಮಾರ್ಫೀಮ್ ಎಂಬ ಶಬ್ದಗಳಿಗೆ ಧ್ವನಿಮಾ (ಅಥವಾ ಸ್ವನಿಮಾ ಮತ್ತು ಆಕೃತಿಮಾ ಎಂಬ ಶಬ್ದಗಳನ್ನು ರೂಢಿಗೆ ತಂದಿದೆ. ಇವಕ್ಕೆ ಸಂಬಂಧಿಸಿದಂತೆ ಅಲಫೋನ್‌ಮತ್ತು ಅಲೊಮಾರ್ಫ್‌ಶಬ್ದಗಳಿಗೆ ಕ್ರಮವಾಗಿ ಉಪಧ್ವನಿ ಅಥವಾ ಸಹಸ್ವನ) ಮತ್ತು ಉಪಾಕೃತಿ (ಉಪ ಆಕೃತಿ) ಎಂದಿಟ್ಟುಕೊಳ್ಳಲಾಗಿದೆ. ಲೇಖಕರು ಇದನ್ನು ಬಳಸುವುದು ಸೂಕ್ತ. ಚಾಕ್ಷುಸ, ಪಕೃತಿ, ಕ್ಷೀತ್ರೀಯ ಮುಂತಾದ ಮುದ್ರಣ ಸ್ಖಾಲಿತ್ಯಗಳು ಸಾಕಷ್ಟಿವೆ. ಅಲ್ಲಲ್ಲಿ ಬರವಣಿಗೆ ಶಾಸ್ತ್ರ ವಿಷಯಕ್ಕೆ ಬೇಕಾದ ಬಿಗಿಯನ್ನು ಬಿಟ್ಟುಕೊಟ್ಟು ಜಾಳುಜಾಳುಗುವುದುಂಟು. ಪುನರಾವೃತ್ತಿಗಳೂ ಕೆಲವು ಇವೆ. ಇತ್ತೀಚಿನ ಬರವಣಿಗೆಗಳನ್ನು ಸಂಖ್ಯಾವಾಚಿಗಳು, ವಿಭಕ್ತಿ ಪ್ರತ್ಯಯಗಳು ಮುಂತಾದ ಕಡೆ ಬಳಸಿಕೊಳ್ಳುವ ಅಗತ್ಯವಿದೆ. ಈ ವಿಚಾರಗಳ ಅರಿವು ಲೇಖಕರಿಗೂ ಇದೆ – ‘ಈ ಕೃತಿ ಪರಿಪೂರ್ಣವಾಗಿದೆಯೆಂದು ಹೇಳಲಾರೆ, ಅನೇಕ ಚರ್ಚಾಸ್ಪದ ವಿಚಾರಗಳಿವೆ’. ಅದರಿಂದ ಮುಂದಿನ ಮುದ್ರಣದಲ್ಲಿ ಅವರು ಈ ಅಂಶಗಳತ್ತ ಗಮನಕೊಟ್ಟು ಪರಿಷ್ಕರಿಸುವುದು ಅಗತ್ಯ.

ಕೇಶಿರಾಜನ ಶಬ್ದಮಣಿ ದಪರ್ಣದ ಸೂತ್ರಸಾರ (ಟಿ. ಶಂಭುಲಿಂಗಪ್ಪ) ಒಂದು ನಮ್ರ ಪ್ರಯತ್ನ. ಇದರಲ್ಲಿ ಕೇಶಿರಾಜನ ಪ್ರಸಿದ್ಧ ವ್ಯಾಕರಣಕ್ಕೆ ವ್ಯಾಖ್ಯಾನ ನೀಡಿದ್ದಾರೆ; ನಾಮಪ್ರಕರಣದಿಂದ ಮೊದಲುಗೊಂಡು ಈ ವ್ಯಾಖ್ಯಾನ ಸಿದ್ಧವಾಗಿದೆ. ಕೇಶಿರಾಜನ ಸೂತ್ರಗಳನ್ನು ಉದಾಹರಿಸುವುದು, ಅದಕ್ಕೆ ವೃತ್ತಿ, ಇಂಗ್ಲಿಷಿನಲ್ಲಿ ಕಿಟೆಲ್ ಕೊಟ್ಟಿದ್ದ ಸೂತ್ರತಾತ್ಪರ್ಯವನ್ನು ಉದಾಹರಿಸುವುದು, ಹೊಸಗನ್ನಡದಲ್ಲಿ ಸೂತ್ರಾರ್ಥವನ್ನು ಕೊಡುವುದು, ಅನಂತರ ಆಯಾ ಸೂತ್ರಗಳನ್ನು ವಿವೇಚಿಸುವುದು – ಇದು ಈ ಪುಸ್ತಕ ಸ್ಥೂಲವಾಗಿ ಅನುಸರಿಸಿರುವ ಕ್ರಮ.

ಕೆಲವು ನ್ಯೂನತೆಗಳು :

೧. ಹೇರಳವಾದ ಅಚ್ಚಿನ ತಪ್ಪುಗಳು. ಲೇಖಕರೇ ಕೊಟ್ಟಿರುವ ಅಯ್ದು ಪುಟಗಳ ಒಪ್ಪೋಲೆಯ ಜತೆಗೆ ಇನ್ನಷ್ಟು ಪುಟಗಳಿಗೆ ಸಾಕಾಗುವಷ್ಟು ಸ್ಖಾಲಿತ್ಯಗಳಿವೆ. ಜತೆಗೆ ಅಲ್ಪಪ್ರಾಣ ಮಹಾಪ್ರಾಣ ಪಲ್ಲಟ ದೋಷಗಳು ತಬ್ಬಿಬ್ಬಾಗಿಸುತ್ತವೆ.

೨. ಕೆಲವು ಸೂತ್ರಗಳಿಗೆ ವ್ಯಾಖ್ಯಾನ ದೀರ್ಘ, ಕೆಲವು ಕಡೆ ಹ್ರಸ್ವ, ಮತ್ತೆ ಕೆಲವು ಕಡೆ ಏನೂ ಹೆಳದಿರುವುದು – ಇದು ಸರಿಯಲ್ಲ. ಇದರಿಂದ ಅತಿವ್ಯಾಪ್ತಿ-ಅವ್ಯಾಪ್ತಿ ದೋಷಗಳಿಗೆ ಅವಕಾಶವಾಗಿದೆ. ಒಂದು ಸೂತ್ರಕ್ಕೆ ವ್ಯಾಖ್ಯಾನ ದೀರ್ಘ ಅಥವಾ ಸಂಕ್ಷಿಪ್ತವಾಗುವುದು ಆಯಾ ಸೂತ್ರದ ವಿಷಯವನ್ನು ಅವಲಂಬಿಸುತ್ತದೆ ಎಂಬುದು ನಿಜ. ಆದರೆ ಒಟ್ಟಂದದಲ್ಲಿ ಒಂದು ಸಮಾನ ಧೋರಣೆ ಇರಬೇಕಾಗುತ್ತದೆ.

೩. ಪ್ರತಿಸೂತ್ರದ ಕೆಳಗ ಕೊಟ್ಟಿರುವ ಇಂಗ್ಲಿಷ್ ಅನುವಾದ ಅಗತ್ಯವೆನಿಸುವುದಿಲ್ಲ.

೪. ವಾಕ್ಯರಚನೆ ಅನೇಕ ಕಡೆಗಳಲ್ಲಿ ಸ್ಫುಟವಾಗಿ ಒಡ-ಮೂಡಿಲ್ಲ. ಇದರಿಂದ ಲೇಖಕರ ಉದ್ದೇಶ ಸರಿಯಾಗಿ ಸಂವಹನವಾಗುವುದಿಲ್ಲ – ‘ಈ ನಮ್ಮ ಕೃತಿಯಲ್ಲಿ ಆಂಗ್ಲ ಸೂತ್ರಗಳಿಗೆ ಇರುವ ತಾತ್ಪರ್ಯವನ್ನು ಎರವಲಾಗಿ ಪಡೆದಿದ್ದೇವೆ’ ಎನ್ನುತ್ತಾರೆ. ಇ‌ಲ್ಲಿ ಲೇಖಕರು ಹೇಳಬೇಕೆಂದಿರುವುದು ‘ಕನ್ನಡ ಸೂತ್ರಗಳಿಗಿರುವ ಆಂಗ್ಲ ತಾತ್ಪರ್ಯವನ್ನು ಎಂದು!

೫. ಅಲ್ಲಲ್ಲಿ ಕೆಲವು ಅಪಶಬ್ದಗಳು ನುಸುಳಿವೆ.

ಲೇಖಕರು ಕೇಶಿರಾಜನ ವ್ಯಾಕರಣಕ್ಕೆ ಸಂಬಂಧಿಸಿದ ಕೃತಿಗಳನ್ನೂ ಲೇಖನಗಳನ್ನೂ ಆಳವಾಗಿ ಅಭ್ಯಾಸ ಮಾಡಿದ್ದಾರೆ. ಅವನ್ನು ಸರಿಯಾಗಿ ಮನನಿಸಿ ಕೇಶಿರಾಜನ ಸೂತ್ರಗಳನ್ನು ಅರ್ಥೈಸಿದರೆ ಅವರ ಪ್ರಯತ್ನ ಉಪಯುಕ್ತವಾಗಲು ಸಾಧ್ಯವಾಗುತ್ತದೆ.

ವ್ಯಾಕರಣ ಲೋಕ (ಬಿ.ಬಿ. ಪಾಟೀಲ) – ಸಿದ್ಧ ಸಂಪ್ರದಾಯವಾಗಿರುವ ವ್ಯಾಕರಣವನ್ನು ಹೊಸದಾಗಿಸಿ ಹೇಳಲು ಪ್ರಯತ್ನಪಟ್ಟ ಪುಸ್ತಕ. ಈ ಗ್ರಂಥದಲ್ಲಿ ಆಧುನಿಕ ಭಾಷಾವಿಜ್ಞಾನದ ಪರಿಭಾಷೆಯನ್ನು ಅಲ್ಲಲ್ಲಿ ಬಳಸಿದ್ದಾರೆ: ಘರ್ಷ, ಅನುಘರ್ಷ, ಘೋಷ, ಅಘೋಷ ಸಪಾರ್ಶ್ವಿಕ, ಕಂಪಿತ- ಇತ್ಯಾದಿ. ಪರಿಭಾಷೆಯನ್ನು ಬಳಸಿದಷ್ಟರಿಂದಲೇ ಕೃತಿಯ ಮೌಲ್ಯ ನಿರ್ಧಾರವಾಗುವುದಿಲ್ಲ. ಲೇಖಕರ ಪ್ರಯತ್ನ ಹೊಸರೀತಿಯದೆಂಬುದು ಸಂತೋಷ ಹಾಗೂ ಸ್ವಾಗತಾರ್ಹ. ಆದರೆ ಅವರ ಈ ಪ್ರಯತ್ನ ಇಡೀ ಗ್ರಂಥದಲ್ಲಿ ಹಾಸು ಹೊಕ್ಕಾಗಿ ಹರಿಯುವುದಿಲ್ಲ. ಅಲ್ಲಲ್ಲಿ ಇದ್ದಕ್ಕಿದ್ದ ಹಾಗೆ ರಭಸದಿಂದ ನುಗ್ಗಿ ಬತ್ತಿ ಹೋಗುತ್ತದೆ.

ಲೇಖಕರು ಇನ್ನಷ್ಟು ಶ್ರಮವಹಿಸಿ ಹೊಸಗನ್ನಡ ಅಥವಾ ಹಳಗನ್ನಡ ಅಥವಾ ನಡುಗನ್ನಡ ಭಾಷೆಯ ವ್ಯಾಕರಣವನ್ನು ವಿವರಿಸಿದ್ದಾರೆ ಅವರ ಪ್ರಯತ್ನ ಸಾರ್ಥಕವಾಗಲು ಸಾಧ್ಯವಿತ್ತು. ಆದರೆ ಇಲ್ಲಿ ಪರಂಪರಾಗತ ವ್ಯಾಕರಣಗಳ ಮಾದರಿಯೂ ಆಧುನಿಕ ವಿವರಣ ವಿಧಾನವೂ ಕಲಸಿಕೊಂಡು ಒಟ್ಟು ಸಂಯೋಜನೆಯಲ್ಲಿ ಬಿರುಕುಂಟಾಗಿದೆ. ‘ಈ ಪುಸ್ತಕವನ್ನು ಮುಖ್ಯವಾಗಿ ಪಿ.ಯು.ಸಿ. ವಿದ್ಯಾರ್ಥಿಗಳ ಮಟ್ಟಕ್ಕೆ ಯೋಗ್ಯವೆನಿಸುವ ರೀತಿಯಲ್ಲಿ ರಚಿಸುವ ಪ್ರಯತ್ನ ಮಾಡಿ’ರುವುದರಿಂದ ಈ ಗೊಂದಲಕ್ಕೆ ಕಾರಣವಾಗಿದೆ. ಅದನ್ನು ಬಿಟ್ಟು ನೇರವಾಗಿ ಇಂದಿನ ಕನ್ನಡ ಭಾಷೆಗೆ ವರ್ಣಾನಾತ್ಮಕ ವ್ಯಾಕರಣವೊಂದನ್ನು ಬರೆಯಲೆತ್ನಿಸಬಹುದಿತ್ತು, ಅದರಿಂದ ಉಪಯುಕ್ತ ಗ್ರಂಥ ರಚನೆಗೆ ದಾರಿ ತೆರೆದಂತೆ ಆಗುತ್ತಿತ್ತು.

ಕೇಶಿರಾಜಕೃತ ಶಬ್ದಮಣಿ ದರ್ಪಣಂನಲ್ನುಡಿಗನ್ನಡಿ (ಭುವನಹಳ್ಳಿ ಪದ್ಮನಾಭ ಶರ್ಮ) – ಈ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ ಸಾಧನಗಳಲ್ಲಿ ಗಣ್ಯವಾದುದು. ಕೇಶಿರಾಜನ ಶಬ್ದಮಣಿ ದರ್ಪಣದ ವಿವಿಧ ಆವೃತ್ತಿಗಳೂ, ಎರಡು ಸಂಗ್ರಹಗಳು ಕೂಡ, ವ್ಯಾಖ್ಯಾನಗಳು ಪ್ರಕಟವಾಗಿವೆ. ಪ್ರಸ್ತುತ ಗ್ರಂಥ ನಿಟ್ಟೂರ ನಂಜಯ್ಯನ ಟೀಕೆಯನ್ನು ಅವಲಂಬಿಸಿ, ಗಾತ್ರದಲ್ಲಿ ಲಿಂಗಣಾರಾಧ್ಯ ಟೀಕೆಯನ್ನು ಅವಲಂಬಿಸಿ ಪ್ರಕಟಿಸಿದ ಮದರಾಸು ಮುದ್ರಣದಷ್ಟಿದೆ. ಸೂತ್ರ, ಛೇದ, ಅನ್ವಯ, ಟೀಕೆ, (ವಿಚಾರ), ವೃತ್ತಿ, ಅರ್ಥ, ಪ್ರಯೋಗ ವಿಶೇಷ ವಿವರಣೆ, ಪ್ರಯೋಗದಲ್ಲಿರುವ ಕಠಿಣ ಶಬ್ದಗಳಿಗೆ (ಬಹುಮಟ್ಟಿಗೆ) ಅರ್ಥ ಈ ಕ್ರಮದಲ್ಲಿ ನಲ್ನುಡಿಗನ್ನಡ ವ್ಯಾಖ್ಯಾನ ಸಂಯೋಜಿತವಾಗಿದೆ. ಜತೆಗೆ ಶಬ್ದಸ್ಮೃತಿ, ಭಾಷಾಭೂಷಣ, ಕರ್ನಾಟಕ ಶಬ್ದಾನು ಶಾಸನ ಮೊದಲಾದ ಅನ್ಯವ್ಯಾಕರಣಗಳಿಂದ ಸಂವಾದಿಯಾದಿ ಸೂತ್ರಗಳನ್ನು ಉದಾಹರಿಸಿದ್ದಾರೆ. ಈ ವಿಷಯ ಪುಷ್ಟಿಯಿಂದಾಗಿ ತೌಲನಿಕ ಅಧ್ಯಯನಕ್ಕೆ ಸಾಮಗ್ರಿಯನ್ನು ಸಂಗ್ರಹಿಸಿಕೊಟ್ಟಂತಾಗಿದೆ. ಪರಂಪರೆಯ ಪದ್ಧತಿಗೆ ಬದ್ಧವಾದ ಬರವಣಿಗೆ, ಶಾಸ್ತ್ರ ನಿರೂಪಣೆಗೆ ಉಚಿತವಾದ ಅನಲಂಕೃತ ಶೈಲಿ – ಇದು ಶಬ್ದಮಣಿ ದರ್ಪಣವನ್ನು ಕಾಲೇಜು ತರಗತಿಗಳಲ್ಲಿ ಕಲಿಯುವವರಿಗೆ ಬೇಕಾದ ಕೈಪಿಡಿಯನ್ನು ಒದಗಿಸಲು ತಕ್ಕ ಹಿನ್ನೆಲೆಯಾದೀತು.

ಇಷ್ಟಾಗಿಯೂ ಪರಿಶ್ರಮಕ್ಕೆ ತಕ್ಕ ಪ್ರಯೋಜನ ದೊರೆತಿಲ್ಲ. ಅಲ್ಲಲ್ಲಿ ಅನವಶ್ಯಕವಾದ ವಿಸ್ತಾರವಿದೆ. ಪೀಠಿಕೆಯೂ ಅತಿವ್ಯಾಪ್ತಿಯಿಂದ ಕುಸಿದಿದೆ. ತಮಗೆ ತಿಳಿದುದನ್ನೆಲ್ಲ ತುಂಬಿದರೆ, ವೃಥಾ ಪಾಂಡಿತ್ಯ ಪ್ರದರ್ಶನವಾಗುತ್ತದೆ. ನಿರೂಪಿಸುತ್ತಿರುವ ವಿಷಯಕ್ಕೆ ಪೂರಕವಾದ, ನಿರೂಪಣೆಯನ್ನು ಸುಲಭಗೊಳಿಸಲು ಪೋಷಕವಾದ ಸಾಮಗ್ರಿ ಸ್ವಾಗತಾರ್ಹ. ಹಾಗೆಂದು ದೂರಾನ್ವಯ ಮಾಡುವುದು, ಹಿಗ್ಗಾಮುಗ್ಗಾ ಸೂತ್ರಗಳನ್ನು ಜಗ್ಗಾಡುವುದು – ಇವುಗಳಿಂದ ವ್ಯಾಕರಣದ ಅಭ್ಯಾಸಿಗಳಿಗೆ ಸಹಾಯವಾಗುವುದಿಲ್ಲ. ಸಂಸ್ಕೃತ ಮತ್ತು ಪ್ರಾಕೃತ ಪದ್ಯಗಳನ್ನು ಅನ್ಯ ಮೂಲಗಳಿಂದ ತಂದು ಉದಾಹರಿಸುವಾಗ ಅವುಗಳ ಮೂಲವನ್ನು ಕೆಲವು ಕಡೆ ಕೊಟ್ಟಿಲ್ಲ (ಪುಟ ೨೧, ೫೭, ೬೦, ೨೮೧). ೞೞಾಕ್ಷರ ಪ್ರಾಸನಿಯಮೋಲ್ಲಂಘನೆ ಪಂಪರನ್ನರಂಥ ೧೦ನೇ ಶತಮಾನದ ಕವಿಗಳಲ್ಲೇ ನಡೆದಿದೆ. ಲೇಖಕರು ಅವನ್ನು ಉದಾಹರಿಸದೆ (ಪು. ೪೧) ೧೩ನೆಯ ಶತಮಾನದ ಕೃತಿಯಿಂದ ಉದಾಹರಿಸಿದ್ದರೆ. ಮರಲ್, ಅರಲ್, ಎರಲ್ (೧೦೦) ಶಬ್ದಗಳು ಮಲರ್ ಅಲರ್ ಎಲರ್ ಆಗಿರುವಲ್ಲಿ ವರ್ಣಪಲ್ಲಟ (ಮೆಟಾಥೆಸಿಸ್) ನಡೆದಿದೆಯೆಂದು ಆಧುನಿಕ ಪರಿಭಾಷೆಯಲ್ಲಿ ಹೇಳಬಹುದಿತ್ತು. ಇದೇ ರೀತಿ ಬಹುವಚನ ಪ್ರತ್ಯಯ ಹಾಗೂ ವಿಭಕ್ತಿ ಪ್ರತ್ಯಯಗಳ ವಿವರಣೆಯಲ್ಲಿ ಭಾಷಾ ವಿಜ್ಞಾನ ಸಂಬಂಧಿಯಾದ ವಿವರಣೆ ಕೊಡಬಹುದಿತ್ತು. ೧೪ಜನ ಮನುಗಳು ಯಾರು (೪೭), ದಿವಾಕರರ್ ಪನ್ನೀರ್ವರು ಯಾರು (೫೩) ಇವುಗಳಿಗೆ ಉತ್ತರವಿಲ್ಲ. ‘ಕವಿರಾಜಮಾರ್ಗವನ್ನು ರಚಿಸಿ ಪ್ರಸಿದ್ಧನಾದ ನೃಪತುಂಗ ಚಕ್ರವರ್ತಿ’ (೨೫) ಎನ್ನುತ್ತಾರೆ. ಕವಿಪರಮೇಠಿ ಕನ್ನಡದಲ್ಲಿ ಗ್ರಂಥ ಬರೆದಿರಬೇಕೆಂದು ತೆಳುವಾದ ಕಾರಣಕ್ಕೆ ಊಹಿಸುತ್ತಾರೆ(೩೦೩). ಮುದ್ರಣ ಸ್ಖಾಲಿತ್ಯಗಳು ಹೇರಳವಾಗಿವೆ. ಈ ಬಗೆಯ ಇನ್ನೂ ಕೆಲವು ಕೊರತೆಗಳಿದ್ದೂ ಈ ಗ್ರಂಥ ಉಪಾದೇಯವಾಗಿದೆ. ಇಷ್ಟು ನಿಜ, ಕೇಶಿರಾಜನ ವ್ಯಾಕರಣದ ಅಭ್ಯಾಸಿಗಳಿಗೆ ಈ ನಲ್ನುಡಿಗನ್ನಡದಿಂದ ಆಗುವ ಪ್ರಯೋಜನ ಅಪಾರವಾದುದು.

ಹಳಗನ್ನಡ ನಿಘಂಟು (ಸಂ: ಎನ್. ಬಸವಾರಾಧ್ಯ) ಹಲವು ನಿಘಂಟುಗಳ ಸಂಕಲನ. ಇಂಥದೊಂದು ಕೋಶಗುಚ್ಛದ ಅಗತ್ಯ ಬಹುಕಾಲದಿಂದ ಇತ್ತು. ಇದರಲ್ಲಿ ರನ್ನಕಂದ, ಶಬ್ದಮಣಿದರ್ಪಣದಲ್ಲಿ ಬರುವ ಶಬ್ದಾರ್ಥ ವಿವರಣ ಭಾಗ, ಕರ್ನಾಟಕ ಶಬ್ದಸಾರಂ, ಕರ್ನಾಟಕ ನಿಘಂಟು, ಚತುರಾಸ್ಯ ನಿಘಂಟು, ಕಬ್ಬಿಗರ ಕೈಪಿಡಿ, ಕರ್ನಾಟಕ ಶಬ್ದಮಂಜರಿ, ಕರ್ನಾಟ ಸಂಜೀವನಂ, ಕರ್ನಾಟಕ ಭಾರತ ನಿಘಂಟು, ಕವಿಹಂಠಹಾರ- ಎಂಬ ಹಳಗನ್ನಡ ಮತ್ತು ನಡುಗನ್ನಡ ನಿಘಂಟುಗಳು ಒಂದೆಡೆ ಸಿಗುತ್ತವೆ. ಜತೆಗೆ ಕಬ್ಬಿಗರ ಕೈಪಿಡಿಗೆ ಇರುವ ಚಕೋರ ಚಂದ್ರಿಕೆಯೆಂಬ ಟೀಕು, ಶಬ್ದಮಂಜರಿಗೆ ಇರುವ ಮುನೇಗೌಡರ, ಹೆಸರು ಘಟ್ಟದ ಹೊನ್ನಪ್ಪನವರ, ಕರಿಬಸವ ಶಾಸ್ತ್ರಿಗಳ ಮತ್ತು ಶ್ರೀನಿವಾಸ ಎಂಬುವರ ಟೀಕುಗಳನ್ನೂ ಸಂಪಾದಿಸಿಕೊಟ್ಟಿದ್ದಾರೆ. ಅನುಬಂಧದಲ್ಲಿ ಒಟ್ಟು ಪದ್ಯಗಳ ಅಕಾರಾದಿಯನ್ನೂ ಶಬ್ದಾರ್ಥ ಕೋಶವನ್ನೂ ಕೊಟ್ಟಿದ್ದಾರೆ. ಇದರಿಂದ ಗ್ರಂಥದ ಪ್ರಯೋಜನ ದ್ವಿಗುಣಿತವಾಗಿದೆ.

ಚತುರಾಸ್ಯ ನಿಘಂಟು, ಕಬ್ಬಿಗರ ಕೈಪಿಡಿ, ಕರ್ಣಾಟಕ ಶಬ್ದಮಂಜರಿ ಎಂಬ ನಿಘಂಟುಗಳನ್ನು ಏಳೇಳು ಹಸ್ತಪ್ರತಿಗಳ ನೆರವಿನಿಂದ ಸಂಪಾದಿಸಿದ್ದಾರೆ. ಇದಕ್ಕೆ ಬೇಕಾಗುವ ಶ್ರಮ, ಸಹಿಷ್ಣುತೆ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೇ ಗೊತ್ತು. ಗ್ರಂಥ ಸಂಪಾದನೆಯಲ್ಲೂ, ಶಬ್ದಕೋಶ ನಿರ್ಮಾಣದಲ್ಲೂ ಹಲವು ವರ್ಷಗಳ ಅನುಭವವಿರುವ ಸಂಪಾದಕರು ಸಿದ್ಧಪಡಿಸಿಕೊಟ್ಟಿರುವ ಕೃತಿಯಿದು – ಎಂದು ಉದ್ದಕ್ಕೂ ಓದುಗರಿಗೆ ಅನುಭವ ವೇದ್ಯವಾಗುತ್ತದೆ.

ಶಬ್ದಮಣಿದರ್ಪಣದ ಭಾಗಗಳನ್ನು ಮುದ್ರಿತ ಗ್ರಂಥದಿಂದ ಎತ್ತಿಕೊಂಡಿದೆಯೆಂದು ಹೇಳಿದ ಮೇಲೆ, ಅದರ ಮೂಲ ಸಂಪಾದಕರು ಬಳಸಿಕೊಂಡ ಮಾತೃಕೆಗಳನ್ನು ಇವರು ಮತ್ತೆ ಉದಾಹರಿಸಿರುವುದು ಅನಗತ್ಯವಾಗಿದೆ – ಇಂಥ ಅಲ್ಲಲ್ಲಿ ಕಂಡು ಬರುವ ಕೆಲವು ನ್ಯೂನತೆಗಳನ್ನು ಪ್ರತ್ಯೇಕವಾಗಿ ತೋರಿಸಬೇಕಾದ ಪ್ರಮೇಯವೇನಿಲ್ಲ. ಮುದ್ರಣ, ರಕ್ಷಾಪುಟ, ಕವಚ- ಎಲ್ಲ ಯಥೋಚಿತವಾಗಿವೆ.

(ಸಾಹಿತ್ಯ ವಾರ್ಷಿಕ ೧೯೭೬: ಸಂಪಾದಕರು, ಜಿ.ಎಸ್. ಶಿವರುದ್ರಪ್ಪ, ಬೆಂಗಳೂರು, ವಿದ್ಯಾವಿದ್ಯಾಲಯ, ಬೆಂಗಳೂರು ೧೯೭೮)

ವ್ಯಾಕರಣಛಂದಸ್ಸು

ನಾನು ಇಲ್ಲಿ ವಿಮರ್ಶಿಸಲಿರುವ ೧೯೭೭ ರಲ್ಲಿ ಅಚ್ಚಾದ ಗ್ರಂಥಗಳು ಎರಡು – ಒಂದು ಛಂದಸ್ಸನ್ನು ಕುರಿತದ್ದು, ಇನ್ನೊಂದು ವ್ಯಾಕರಣ ಶಾಸ್ತ್ರಕ್ಕೆ ಸಂಬಂಧಿಸಿದ್ದು.

ತಮ್ಮ ಹಿಂದಿನ ಪುಸ್ತಕವಾದ ‘ಕನ್ನಡ ವ್ಯಾಕರಣ ಪ್ರವೇಶಿಕೆ’ ಮಾದರಿಯನ್ನು ಮುಂದುವರಿಸಿ ಬರೆದ ಕನ್ನಡ ಛಂದಸ್ಸಿನ ಪ್ರವೇಶಿಕೆ (ನೀ. ಗಿರಿಗೌಡ) ಒಂದು ತೀರ ಪರಿಮಿತ ಉದ್ದೇಶ ಸಾಧನೆಗಾಗಿ ಸಿದ್ಧವಾಗಿರುವ ಕಿರುಹೊತ್ತಗೆ. ಕೃತಿ ಸರಳವಾಗಿದೆ. ಸರಳೀಕರಣದಿಂದ ಮುಖ್ಯ ಸಂಗತಿಗಳು ಸೋರಿಹೋಗದಂತೆ ಸಾಕಷ್ಟು ಎಚ್ಚರವಹಿಸಿದ್ದಾರೆ. ಮುನ್ನುಡಿಕಾರರ ಮಾತುಗಳು – “ಈ ಪುಸ್ತಿಕೆಯನ್ನು ಇನ್ನಷ್ಟು ಅವಧಾನ ಪೂರ್ವಕವಾಗಿ ರಚಿಸಿದ್ದರೆ ಇದು ಮತ್ತೂ ಉತ್ತಮವಾಗುತ್ತಿತ್ತೆಂದು ಹೇಳದಿರಲಾರೆ. ಅಚ್ಚಿನ ತಪ್ಪುಗಳು ಅಧಿಕರವಾಗಿವೆ. ಮುಂದಿನ ಆವೃತ್ತಿ ನಿರ್ದುಷ್ಟವಾಗಿರುವುದೆಂದು ಆಶಿಸಬಹುದು” – ಈ ಮಾತುಗಳನ್ನು ಅಕ್ಷರಶಃ ಅನುಮೋದಿಸಬಹುದು.

ಬೆಂಗಳೂರಿನ ಐ.ಬಿ.ಎಚ್. (ಇಂಡಿಯಾ ಬುಕ್ ಹೌಸ್) ಪ್ರಕಾಶನದವರು ಕಳೆದ ನಾಲ್ಕು ವರ್ಷಗಳಿಂದ ‘ಕವಿ ಕಾವ್ಯ ಪರಂಪರೆ’ ಎಂಬ ಮಾಲೆಯಲ್ಲಿ ಕೆಲವು ಉಪಯುಕ್ತ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಒಬ್ಬ ಕವಿಯ ಕೃತಿಗಳನ್ನು ಅಥವಾ ಒಂದು ವಿಷಯವನ್ನು ಆರಿಸಿಕೊಂಡು ವಿವಿಧ ವಿದ್ವಾಂಸರಿಂದ ವಿಮರ್ಶಾತ್ಮಕ ಲೇಖನಗಳನ್ನು ಬರೆಸಿ, ಸಂಪಾದಿಸಿ ಪ್ರಕಟಿಸುವುದು ಈ ಮಾಲೆಯ ಉದ್ದೇಶ. ಈ ಆಶಯ ಅಭಿನಂದನೀಯ. ಇದರ ಯಶಸ್ಸು ಪೂರ್ಣವಾಗಿ ಆಯಾ ಗ್ರಂಥಕ್ಕೆ ಬರೆವಣಿಗೆ ಮಾಡಿಕೊಡುವ ವಿವಿಧ ಲೇಖಕರಿಗೆ ಸೇರಿರುತ್ತದೆ. ಇದುವರೆಗೆ ಹೊರಬಂದಿರುವ ಈ ಮಾಲೆಯ ಹನ್ನೆರಡು ಸಂಕಲನ ಗ್ರಂಥಗಳಲ್ಲಿ ಗಟ್ಟಿ ಕಾಳುಗಳ ಜತೆಗೆ ಜಳ್ಳೂ ಸೇರಿರುವುದನ್ನು ಗುರುತಿಸಲಾಗಿದೆ. ಪಂಪ ಕವಿಯನ್ನು ಕುರಿತ ಗ್ರಂಥದಲ್ಲಿ ಆದಿಪುರಾಣವನ್ನು ಕುರಿತು ಬರೆದ ತೀರ ನೀರಸ ಲೇಖನವನ್ನು ಮರೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವ್ಯಾಕರಣಗಳು ಎಂಬ ಗ್ರಂಥವನ್ನು ಪರಿಶೀಲಿಸಬೇಕಾಗುತ್ತದೆ.

ವ್ಯಾಕರಣಗಳು ಗ್ರಂಥದಲ್ಲಿ ಮುನ್ನುಡಿಯನ್ನು ಬಿಟ್ಟು ನಾಲ್ಕು ಲೇಖನಗಳಿವೆ; ಜತೆಗೆ ಸಂಪಾದಕರ ಸಮೀಕ್ಷೆ, ಮೂರು ಜನ ಬೇರೆ ಬೇರೆ ಲೇಖಕರಿಂದ ಎತ್ತಿಕೊಂಡ ಮೂರು ಅನುಬಂಧಗಳು ಹಾಗೂ ಕಡೆಯಲ್ಲಿ ಕವಿವಾಣಿ ಇಷ್ಟೂ ಇವೆ. ಮುನ್ನುಡಿಯಲ್ಲಿ ಈ ಗ್ರಂಥವನ್ನು ಸಿದ್ಧಪಡಿಸುವಾಗ ಸಂಪಾದಕರ ಕಲ್ಪನೆ ಏನು, ಮತ್ತು ಇಲ್ಲಿನ ಲೇಖನಗಳ ಸಂಯೋಜನೆ ಎಂತು-ಎಂಬುದರ ಸ್ಪಷ್ಟ ನಿರ್ದೇಶನವಿಲ್ಲ. ವ್ಯಾಕರಣ, ನಿಘಂಟು – ಎರಡಕ್ಕೂ ಸಂಬಂಧಿಸಿದಂತೆ ಸಡಿಲವಾಗಿ ಬಿಚ್ಚಿಕೊಂಡ ಎಂಟು ಪುಟಗಳಿವೆ.

ಮೊದಲನೆಯ ಲೇಖನ ನಾಗವರ್ಮನ ಕಾವ್ಯಾವಲೋಕನದಲ್ಲಿ ಬರುವ ಶಬ್ದ ಸ್ಮೃತಿಯೆಂಬ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ್ದು. ಇದರ ಲೇಖಕರು ಮೂಲ ನಾಗವರ್ಮನ ಶಬ್ದಸ್ಮೃತಿಯನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಹೀಗೆ ಸಂಕ್ಷೇಪಿಸುವ ಕಾರ್ಯದಲ್ಲಿ ತೋರಿದ ಶ್ರಮದ ಹೊರತು ಮತ್ತೇನೂ ಪ್ರಯತ್ನವಿಲ್ಲ, ಪ್ರಯೋಜನವಿಲ್ಲ. ಈ ರೀತಿ ಮಾಡಿದ್ದರಿಂದ ಸಾಧಿಸಿದ್ದಾದರೂ ಏನು ಎಂತು ಚಿಂತಿಸಿದರೆ ತೃಪ್ತಿಕರವಾದ ಉತ್ತರ ಸಿಗದು. ಶಬ್ದ ಸ್ಮೃತಿಗೂ ಭಾಷಾ ಭಾಷಣಕ್ಕೂ ಇರುವ ಸಂಬಂಧ, ಸಾದೃಶ್ಯ ಮೊದಲಾದವುಗಳನ್ನು ತೋರಿಸಬಹುದಿತ್ತು ನಾಗವರ್ಮನ ಶಬ್ದಸ್ಮೃತಿಗೂ ಕೇಶಿರಾಜನ ಶಬ್ದಮಣಿ ದರ್ಪಣಕ್ಕೂ ಎಷ್ಟು ಗಾಢವಾದ ಸಾವಯವ ಸಂಬಂಧ ಇದೆ ಎಂಬುದನ್ನು ಅವಶ್ಯ ಹೇಳಬೇಕಿತ್ತು, ನಾಗವರ್ಮನ ಮೂಲ ಸಿದ್ಧಸಾಮಗ್ರಿಯನ್ನು ಅನಾಮತ್ತಾಗಿ ಬಳಸಿಕೊಂಡರೂ ಕೇಶಿರಾಜನ ವ್ಯಾಕರಣ ಜನಪ್ರಿಯವಾಗಲು ಅದರಲ್ಲಿರುವ ವಿಶಿಷ್ಟ ಗುಣಗಳನ್ನು ತಿಳಿಸಬೇಕಿತ್ತು.

ಇದೇ ರೀತಿಯಾಗಿ ನಾಗವರ್ಮನ ಭಾಷಾ ಭೂಷಣ ಹಾಗೂ ಭಟ್ಟಾಕಲಂಕನ ಶಬ್ದಾನುಶಾಸನಗಳ ನಡುವೆ ತೌಲನಿಕ ಅಧ್ಯಯನ ನಡೆದಿದ್ದರೆ ಈ ಗ್ರಂಥದ ಉಪಯುಕ್ತತೆಯೂ ಮೌಲಿಕಾಂಶವೂ ಹೆಚ್ಚುತ್ತಿತ್ತು. ಯಾವ ಪರಿಶ್ರಮವೂ ಪಡದೆ ಯಥಾ ನಕಲು ಮಾಡುವ ಈ ಸಂಪ್ರತಿಕಾರ ಕಾರ್ಯದಿಂದ ಕೇವಲ ಶುಷ್ಕ ಪ್ರಯತ್ನವಾಗಿದೆ. ಇದಕ್ಕಿಂತ ಕನ್ನಡ ಕೈಪಿಡಿಯ ಮೊದಲ ಸಂಪುಟದ ಪ್ರಾರಂಭದ ಭಾಗದಲ್ಲೇ ಬರುವ ಕನ್ನಡ ವ್ಯಾಕರಣಗಳನ್ನು ಕುರಿತ ವಿವೇಚನೆ ಇಂದಿಗೂ ಉಪಾದೇಯವಾಗಿದೆ.

ಜತೆಗೆ ಇಲ್ಲಿ ಕನ್ನಡದ ಒಂದೊಂದು ವ್ಯಾಕರಣವನ್ನು ಪರಿಚಯಿಸಿರುವುದನ್ನು ಇನ್ನೂ ಸಾರ್ಥಕಗೊಳಿಸಲು ಪ್ರಯತ್ನಿಸಬೇಕಾಗಿತ್ತು. ಒಂದೊಂದನ್ನೂ ತನಿ ತನಿಯಾಗಿ ತೆಗೆದುಕೊಂಡು ಕನ್ನಡದ ವ್ಯಾಕರಣ ಪರಂಪರೆಯಲ್ಲಿ ಅವುಗಳ ಸ್ಥಾನವನ್ನೂ ಮಹತ್ವವನ್ನೂ ಮನದಟ್ಟು ಮಾಡಿತೊಡಬಹುದಿತ್ತು. ಇಲ್ಲಿ ಕೊಟ್ಟಿರುವ ತಮಿಳು ವ್ಯಾಕರಣ ಕುರಿತ ಪರಿಚಯ ಕೂಡ ತೀರ ಪರಿಮಿತ ಪ್ರಮಾಣದ್ದಾಗಿದೆ. ಅದರ ಬದಲು ಇನ್ನೂ ಸ್ವಲ್ಪ ಆಳಕ್ಕಿಳಿದು ಕನ್ನಡದ ವ್ಯಾಕರಣಗಳ ಪ್ರಯತ್ನವನ್ನು ತಮಿಳು ವ್ಯಾಕರಣಗಳೊಡನೆ ಸ್ಪಷ್ಟವಾಗಿ ತುಲನೆ ಮಾಡಿ ಎರಡರ ಸೋಲು ಗೆಲುವುಗಳನ್ನು ಗುರುತಿಸಬಹುದಿತ್ತು. ಇದನ್ನು ಇನ್ನೂ ಮುಂದುವರಿಸಿ, ಒಟ್ಟು ಭಾರತದ ವ್ಯಾಕರಣಗಳ ಪರಂಪರೆಯಲ್ಲಿ ಕನ್ನಡ ವ್ಯಾಕರಣಗಳ ಪ್ರಯತ್ನದಲ್ಲಿ ಕಾಣುವ ಸಿದ್ಧಿಸಾಧನೆಗಳ ವೈಫಲ್ಯಗಳ ಒಂದು ಚಾರಿತ್ರಿಕ ಸಮೀಕ್ಷೆಯೂ ಸೇರುವುದು ಅಗತ್ಯವಾಗಿತ್ತು. ಈ ಬಗೆಯ ವಿವೇಚನೆಗೆ ಚಾರಿತ್ರಿಕ ಭಾಷಾ ವಿಜ್ಞಾನದ ಹಿನ್ನೆಲೆಯನ್ನಿರಿಸಿಕೊಂಡಾಗಂತಲೂ ತುಂಬ ಔಚಿತ್ಯ ಬರುತ್ತಿತ್ತು.

ಭಟ್ಟಾಕಲಂಕನ ಶಬ್ದಾನುಶಾಸನವನ್ನು ಕುರಿತ ಲೇಖನ ಪ್ರಮಾಣಬದ್ಧವಾಗದಿರಲು ಯತ್ನಿಸಿದೆ. ಕೆಲವು ಹೆಚ್ಚಿನ ಸಂಗತಿಗಳನ್ನು ಕೊಡಲೂ ಲೇಖಕರು ಯತ್ನಿಸಿದ್ದಾರೆ; ಉದಾಹರಣೆಗೆ – ಬಂಧುವರ್ಮನ ಜೀವಸಂಭೋಧನೆಯ ಶಬ್ದವೊಂದಕ್ಕೆ ಅರ್ಥ ಕಂಡುಕೊಳ್ಳಲು ಇಲ್ಲಿನ ಪ್ರಯೋಗ ಹೇಗೆ ಸಹಕಾರಿಯಾಗಿದೆ ಎಂಬುದರ ಪ್ರಾಸಂಗಿಕ ಸೂಚನೆ.

ಹೊಸ ಕನ್ನಡಕ್ಕೆ ಒಂದು ವ್ಯಾಕರಣ ಅಗತ್ಯವೆ ಎಂಬ ಲೇಖನ ತನ್ನ ಉದ್ದೇಶವನ್ನು ಸಾಧಿಸಿಲ್ಲ. ವಿಷಯ ವ್ಯಾಪ್ತಿಯಿಂದ ದೂರ ಸರಿದ ಅನಗತ್ಯ ವಿಚಾರಗಳ ಪ್ರಸ್ತಾಪದಿಂದ ಈ ಲೇಖನ ಸಮಸ್ಯೆಯ ಅಂತರಾಳಕ್ಕೆ ಇಳಿಯದೆ ಅಂಚಿನಲ್ಲೇ ಸಂಚರಿಸಿದೆ.

ಇಡೀ ಗ್ರಂಥದ ಮೌಲ್ಯ ಉಳಿದಿರುವುದು ದಿವಂಗತ ‘ಡಾ|| ದೊ.ಲ.ನ’ರವರು ಬರೆದಿದ್ದ ಶಬ್ದ ಶಿಲ್ಪವನ್ನು ಕುರಿತ ವಿವೇಚನೆಯಿಂದ. ಆದರೆ ಇದು ಈ ಗ್ರಂಥಕ್ಕೆಂದು ಬರೆದುದಲ್ಲವೆಂಬುದು ಈ ಗ್ರಂಥಕ್ಕಾಗಿಯೇ ಹೇಳಿ ಬರೆಸಿದ ಲೇಖನಗಳ ಸೋಲನ್ನು ಅಣಕಿಸುವಂತಾಗಿದೆ.

(ಸಾಹಿತ್ಯ ವಾರ್ಷಿಕ ೧೯೭೭: ಸಂಪಾದಕರು, ಜಿ.ಎಸ್. ಶಿವರುದ್ರಪ್ಪ, ಬೆಂಗಳೂರು, ವಿಶ್ವವಿದ್ಯಾಲಯ, ಬೆಂಗಳೂರು ೧೯೭೯)

* * *