. ಜೀವನ ರಸಿಕ : ಡಾ. ರಂ.ಶ್ರೀ. ಮುಗಳಿ
. ಸಿಂಗಾರ : ಡಾ. ಹಾ.ಮಾ. ನಾಯಕ
. ಶಿವರಾಮ ಕಾರಂತ : ಪ್ರೊ. ವಿ. ಎಂ. ಇನಾಂದಾರ
. ನಾಡಿಗರ ಬರಹಗಳು : ಡಾ. ನಾಡಿಗ ಕೃಷ್ಣಮೂರ್ತಿ
. ಬಲಿದಾನ : ಮೂಲ ಹರಿಕೃಷ್ಣ ಪ್ರೇಮಿ
ಅನುವಾದ ಪ್ರದಾನ ಗುರುದತ್ತ

೧. ಜೀವನ ರಸಿಕ ‘ರಸಿಕ ರಂಗ’ರಾದ ರಂ.ಶ್ರೀ. ಮುಗಳಿ ಅವರ ಆತ್ಮ ಚರಿತ್ರೆ. ಅವರು ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರು. ಕನ್ನಡ ಸಾಹಿತ್ಯ ಚರಿತ್ರೆಗೆ ಖಚಿತವಾದ ಸ್ವರೂಪ ಕೊಟ್ಟವರು. ಸಿದ್ದಗಂಗೆಯಲ್ಲಿ ನಡೆದ ಅಖಿಲ ಭಾರತ ೪೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ‘ರಸಿಕ ರಂಗ’ ಅಭಿನಂದನಾ ಗ್ರಂಥಕ್ಕೆ ಸತ್ಪಾತ್ರರಾದವರು. ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗ ತೆರೆದಾಗ ವಿಶೇಷ ಆಹ್ವಾನದ ಮೇರೆಗೆ ಬಂದ ಮೊದಲ ಕನ್ನಡ ಪ್ರಾಧ್ಯಾಪಕರು, ಸಾಂಗಲಿಯಲ್ಲಿ ಸಾರಸ್ವತ ತಪವೆಸಿಗಿದವರು. ಅಲ್ಲಿ ಮರಾಠಿ ಕಲಿತು ಮರಾಠಿಗರಿಂದ ಸೈ ಎನಿಸಿಕೊಂಡು. ವಿಲ್ಲಿಂಗ್ ಡನ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು -ಹೀಗೆ ಇನ್ನೂ ಎಷ್ಟೋ ಗರಿಗಳನ್ನು ತಮ್ಮ ಟೊಪ್ಪಿಗೆಯಲ್ಲಿ ಇರಿಸಿಕೊಂಡಿರುವ ರಂ.ಶ್ರೀ. ಮುಗಳಿ ಅವರ ಬದುಕು ಬರಹ, ಮಡದಿ-ಮಕ್ಕಳು, ಪಟ್ಟ ಪಾಡು, ಕಂಢ ನಾಡು, ಉಂಡ ಅನುಭವ, ಪಡೆದ ಮತ್ತು ಬೀರಿದ ಪ್ರಭಾವ ಮೊದಲಾದುದನ್ನು ಅರಿಯುವ ಕುತೂಹಲ ಸಾಹಿತ್ಯಾಸಕ್ತರಲ್ಲಿರುವುದು ಸಹಜವೆ. ಇಂತಹ ಆಸಕ್ತಿಗಳನ್ನು ತಣಿಸುವ ಕೆಲಸವನ್ನು ಈ ‘ಜೀವನ ರಸಿಕ’ ಪುಸ್ತಕ ಯಶಸ್ವಿಯಾಗಿ ನಿರ್ವಹಿಸಿಕೊಡುತ್ತದೆ.

ತಮ್ಮ ಬಾಳಿನ ಉತ್ತರಾರ್ಧದಲ್ಲಿ ಬಾಳುತ್ತಿರುವ ರಸಿಕ ರಂಗದ ಹುಟ್ಟಿನಿಂದ ಇಂದಿನವೆರೆಗಿನ ಬದುಕು, ತೆರೆದ ತೋರಿದ ದಾರಿ, ನಡೆದು ಬಂದ ಹೆಜ್ಜೆ ಗುರುತು ಅರಳಿದ ಪರಿ-ಇವೆಲ್ಲಾ ಈ ಪುಸ್ತಕದಲ್ಲಿ ದಾಖಲಾಗಿದೆ. ಈ ಪುಸ್ತಕದ ಒಂದು ವಿಶೇಷತೆ ಎಂದರೆ ತಾವು ಪ್ರಸ್ತಾಪಿಸಬಯಸುವ, ಪರಿಚಯಿಸಿಕೊಡಬಯಸುವ, ಅಲ್ಲದೆ ದೋಷ ತೋರಿಸಬಯಸುವ ಯಾವುದೇ ವ್ಯಕ್ತಿಯ ಹೆರಸನ್ನೂ ಇಡೀ ಪುಸ್ತಕದ ಆರಂಭದಿಂದ ಅಂತ್ಯದವರೆಗೂ ಎಲ್ಲಿಯೂ ಹೇಳುವುದಿಲ್ಲ. ಇತ್ತೀಚಿನ ಜೀವನ ಚರಿತ್ರೆ ಮತ್ತು ಆತ್ಮ ಚರಿತ್ರೆಗಳಲ್ಲಿ ಈ ರೀತಿಯ ಪ್ರಯತ್ನ ಅಪರೂಪ, “ಆ ವ್ಯಕ್ತಿಯ ಹೆಸರು ದಸೆಯಾಗಲಿ ಅವನ ಬಾಳಿನಲ್ಲಿ ಅವನು ಸಂಧಿಸಿದ ವ್ಯಕ್ತಿಗಳ ಹೆಸರುಗಳಾಗಲಿ ಬಂದಿಲ್ಲ. ಅನಿವಾರ್ಯವಾಗಿ ಕೆಲವು ಸ್ಥಳಗಳ ಉಲ್ಲೇಖವಿದೆ. ಯಾರ ಜೀವನದಲ್ಲಿಯೇ ಆಗಲಿ, ಹೆಸರೆಂಬುದು ರೂಢಿಯ ಸಂಕೇತ ಮಾತ್ರ. ಆ ಹೆಸರಿನ ಹಿಂದಿರುವ ಉಸಿರು, ಜೀವನಸ್ವರೂಪ ಮುಖ್ಯ, ಅದನ್ನು ಸಾಧ್ಯವಾದಷ್ಟು ತಟಸ್ಥ ಭೂಮಿಕೆಯಿಂದ ನಿರೂಪಿಸಬೇಕೆಂದು ಈ ಕಥನದಲ್ಲಿ ಪ್ರಯತ್ನಿಸಲಾಗಿದೆ. ಕೇವಲ ಹೊಸತಂತ್ರವೆಂದು ಇದನ್ನು ಬಳಸಲಾಗಿಲ್ಲ. ಇದು ಹೊಸದಾಗಿಯೂ ಇರಲಿಕ್ಕಿಲ್ಲ ಬೇರೆ ಯಾರಾದರೂ ಬೇರಾವ ಭಾಷೆಯಲ್ಲಿಯಾದರೂ ಇದನ್ನು ಅನುಸರಿಸಿರಲೂಬಹುದು” ಇದು ಲೇಖಕರ ನಿವೇದನೆ, ಧೋರಣೆ.

ತಾವು ಬಾಲ್ಯದಿಂದ ನಿಸರ್ಗ ಪ್ರಿಯನಾಗಿ ಬೆಳೆದುದನ್ನು ಆರಂಭದ ಪುಟಗಳಲ್ಲಿ ಹೇಳಿದ್ದಾರೆ. ಅವರು ಪ್ರಕೃತಿ ಪ್ರೇಮವನ್ನು ಮೈಗೂಡಿಸಿಕೊಂಡಿದ್ದು ಹೀಗೆ : “ಸೂರ್ಯೋದಯ-ಸೂರ್ಯಾಸ್ತನ ದೃಶ್ಯಯಗಳು ನಿತ್ಯನೂತನವಾಗಿ ಅವನ ಕಣ್ಣಿಗೆ ಹಬ್ಬವಾಗಿ ಮೆರೆಯುತ್ತಿದ್ದವು. ಮಳೆಗಾಲವು ಮುಂದುವರಿದಂತೆ ಶ್ರಾವಣ ಮಾಸದಲ್ಲಿ ಬೀಳುವ ಮಳೆಯ ವಿವಿಧ ಭಾವಭಂಗಿಗಳು ಅವನನ್ನು ಮರುಳುಗೊಳಿಸುತ್ತಿದ್ದವು. ನಿಚ್ಚಳವಾದ ಅಗಸದಲ್ಲಿ ಒಮ್ಮೊಮ್ಮೆ ಎಲ್ಲಿಲ್ಲದ ಮೋಡಗಳ ಸಂದಿನಿಂದ ಕಿಡಿಗೇಡಿ ಬಾಲಕನಂತೆ ಹಣಿಕುವ ಸೂರ್ಯನ ಮೇಲ್ಮೊಗವಾದ ಕಿರಣಗಳಿಂದ ಬಾನಿನ ಕಲೆಗೆ ಸಿರಪೇಚು ಹಚ್ಚಿದಂತಾಗುತ್ತಿತ್ತು. ನೆಲವೆಲ್ಲ ಹೊಂಬಣ್ಣದಿಂದ ಹೊಸ ಹೊಗರು ಪಡೆಯುತ್ತಿತ್ತು. ಈ ನೋಟವು ಅವನಿಗೆ ಹುಚ್ಚು ಹಿಡಿಸುತ್ತಿತ್ತು. ಹಿಗ್ಗಿನಿಂದ ಅವನು ಕುಣಿಯುತ್ತಿದ್ದನು. ತನ್ನಷ್ಟಕ್ಕೆ ‘ಎಂಥ ಚಂದ’ ಎಂದು ನುಡಿಯುತ್ತಿದ್ದನು. ಎಲ್ಲಿ ಅನುಭವವನ್ನು ಪಡೆಯುತ್ತಿರುವಂತೆ ನಿಸರ್ಗ ಅವನಿಗೆ ಕಿವಿಯಲ್ಲಿ ಬಂದು ಹೇಳೀದಂತಾಯಿತು. ‘ನಿನ್ನೊಳದಲ್ಲಿ ಹೊಸ ಸೆಲೆಯೊಂದು ಹುಟ್ಟಿದೆ, ಇದು ದಿಟವೆಂದು ಅವನಿಗೆ ತೋರಿತು. ರಸಿಕನಾಗಿ ತನ್ನ ಬದುಕನ್ನು ಬೆಳೆಸಬೇಕೆಂದು ಸಂಕಲ್ಪ ಮಾಡಿದನು.”

ಎಲ್ಲ ಮನುಷ್ಯರಂತೆ ಈ ಲೇಖಕರೂ ರಾಗದ್ವೇಷ್ದ ಸುಳಿಗೆ ಸಿಕ್ಕವರು. ಒಮ್ಮೆ ತಮಗೆ ತಾವು ನಿರೀಕ್ಷಿಸಿದ ಉತ್ತಮ ಶ್ರೇಣಿ ಪರೀಕ್ಷೆಯಲ್ಲಿ ದೊರೆಯಲಿಲ್ಲ ಎಂಬ ಕಾರಣಕ್ಕಾಗಿ ಸಿಡಿಮಿಡಿಗೊಂಡು ತಳಮಳಿಸಿದ ಅನುಭವವನ್ನು ಹೇಳಲು ಸಂಕೋಚ ಪಡುವುದಿಲ್ಲ “ಪರೀಕ್ಷೆಯ ಪರಿಣಾಮವು ದೊಡ್ಡ ಅಘಾತವನ್ನು ಉಂಡು ಮಾಡಿತು. ಸೋಲಿನ ಮೇಲೆ ಸೋಲು, ಗಾಯದ ಮೇಲೆ ಬರೆ ಎಂದವನು ಕೊರಗಿದನು. ಅವನು ಒಪ್ಪಿಕೊಂಡ ಮೌಲ್ಯಗಳೆಲ್ಲ ಅಲುಗಾಡ ತೊಡಗಿದವು. ಭೂಕಂಪದ ಒಂದು ಸೆಳೆತಕ್ಕೆ ಸಿಕ್ಕ ಮಹಾನಗರದ ಮನೆಗಳಂತೆ. ಅವನ ಪ್ರೀತೆಗೆ ದ್ವೇಷದ ಹೊಗೆ ಮುಸುಕಿತು. ಅವನು ಕಾವ್ಯಕ್ಕೆ ಗ್ರಹಣ ಹಿಡಿಯಿತು. ಅವನು ಗೆಳೆತನದ ದಾರಿಯಲ್ಲಿ ಹೊರಟು ಕಂಡು ಕೊಂಡ ದೈವಭಕ್ತಿ ಕರಗತೊಡಗಿತು. ಕಾಲೇಜಿನಲ್ಲಿ ಭಾವವಿತ್ತು. ‘ದೇವನಿರುವನೇ?’ ಎಂಬ ಚರ್ಚೆಗಳು ಸ್ನೇಹಿತರ ಕೂಟಗಳಲ್ಲಿ ಆಗಾಗ ನಡೆದು ಕಾವೇರುತ್ತಿದ್ದಾಗ ಅವನಲ್ಲಿ ನಾಸ್ತಕತೆಯ ಪ್ರಬಲವಾಗಿ ತೋರುತ್ತಿತ್ತು. ಆದರೆ ಅತ್ಯಂತ ಆತ್ಮೀಯರಾದ ಗೆಳೆಯರು ಅವನಿಗೆ ದೊರೆತು, ಜೀವಜೀವರಲ್ಲಿ ಎಷ್ಟೇ ಸ್ವಭಾವದ ಭೇದಗಳಿದ್ದರೂ ಅವರು ಏಕಜೀವವಾಗಿ ಹೊಂಧುವ ತಾದಾತ್ಮ್ಯ ಭಾವದಿಂದ ಅವನು ರೋಮಾಂಚನಗೊಂಡಿದ್ದನು. ಮುಂದೊಮ್ಮೆ ಬರೆದ ಒಂದು ಕವಿತೆಯಲ್ಲಿ ‘ಎಳೆತನ ಗೆಳೆತನ ಮುಕ್ತಿಗೆ ಸೋಪಾನ’ ಎಂದು ಬಣ್ಣಿಸಿದನು.”

ಈ ಆತ್ಮ ಚರಿತ್ರೆಯಲ್ಲಿ ಸಾಕಷ್ಟು ಪಕ್ಷವಾದ ಲೇಖಕನೊಬ್ಬ ತನ್ನ ಬದುಕನ್ನು ಸಿಂಹಾವಲೋಕನ ಕ್ರಮದಲ್ಲಿ ನೋಡಿದಂತಿದೆ. ಆತ್ಮ ಚರಿತ್ರೆಯನ್ನು ನಿರ್ವಿಕಾರವಾದ ವಿಶ್ಲೇಷಣೆಯಿಂದ, ವಸ್ತು ನಿಷ್ಠೆಯಿಂದ ಬರೆಯುವುದು ತುಂಬಾ ಕಷ್ಟ ಲೇಖಕರ ಅದರಂತೆ ಆದಷ್ಟೂ ವಸ್ತು ನಿಷ್ಠತೆಯಿಂದ ತಮ್ಮ ಬದುಕನ್ನು ಸಾಕ್ಷಿ ಪಜ್ಞೆಯಂತೆ ನೀಡಲು ಪ್ರಯತ್ನಿಸಿರುವುದಾಗಿ ವಿನಂತಿಸಿಕೊಂಡಿದ್ದಾರೆ. “ತಟಸ್ಥ ಭೂಮಿಕೆಯಿಂದ ತನ್ನ ತಾನು ನೋಡಿಕೊಂಡು ತನ್ನ ಬಗ್ಗೆ ನಿರ್ವಿಕಾರವಾಗಿ ಬರೆಯುವುದು ತಿಳಿದಷ್ಟು ಸುಲಭವಲ್ಲ. ವ್ಯಕ್ತಿಯ ರಾಗದ್ವೇಷಗಳು ಪೂರ್ವಗ್ರಹಗಳು ಅವನನ್ನು ಬಿಟ್ಟಿರುವುದುಕಷ್ಟ. ಅವುಗಳಿಂದ ತಾನು ದೂರವಾಗಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿಯಲ್ಲಿ ಒಮ್ಮೊಮ್ಮೆ ಅವು ಚಾಪೆಯಿಂದ ರಂಗೋಲಿಯ ಕೆಳಗೆ ನುಸುಳಿದಂತೆ ಆಗಿ ಬಂದಿರಬಹುದು. ಅವನ ಆತ್ಮ ವಿಶ್ಲೇಷಣೆಯಲ್ಲಿ ಕೆಲವು ಸಲ ಆತ್ಮವು ಅದೃಶ್ಯವಾಗಿ ಅಹಂಭಾವವು ತಾನೇ ತಾನಾಗಿ ಮೆರೆಯಬಹುದು. ಎಷ್ಟು ಎಚ್ಚರವಾಗಿದ್ದರೂ ಈ ಜೀವನ ಕಥನದಲ್ಲಿಯೂ ಇಂಥ ನಿರೂಪಣೆ ಇರಬಹುದೆಂಬುದನ್ನು ನಾನು ಅರಿತಿದ್ದೇನೆ, “ಇದು ಬಹುಮಟ್ಟಿಗೆ ಈ ಪುಸ್ತಕದಲ್ಲಿ ನಿಜವಾಗಿ ಪರಿಣಮಿಸಿದೆ. ಇದಕ್ಕೆ ಪೋಷಕವಾಗಿ ಎರಡು ಉದಾಹರಣೆಗಳನ್ನು ನೀಡಬಹುದು. “ಮೊದಲಿನ ಕೆಲವು ವರ್ಷಗಳಲ್ಲಿ ರಸಿಕನು ಕಲಿಸುವುದರಲ್ಲಿ ಎಷ್ಟೇ ಆಸಕ್ತಿಯುಳ್ಳವನಾಗಿದ್ದರೂ ಆಗಾಗ ತಡವರಿಸುತ್ತಿದ್ದನು. ವಿವರಣೆಯಲ್ಲಿ ತಪತ್ತಿದ್ದನು, ಗೊಂದಲಗೊಳ್ಳುತ್ತಿದ್ದನು. ಆದರೆ ಅವನ ಶ್ರದ್ಧೆಯನ್ನೂ ನಿಷ್ಠೆಯನ್ನೂ ವಿದ್ಯಾರ್ಥಿಗಳು ಮೆಚ್ಚಿಕೊಂಡು ಅವನ ಲೋಪದೋಷಗಳಿಗೆ ಮಹತ್ವ ಕೊಡುತ್ತಿರಲಿಲ್ಲ. ಇಷ್ಟದರೂ ಕೆಲವು ಕಿಡಿಗೇಡಿಗಳು ಕಿರಕುಳ ಕೊಡದೆ ಇರುತ್ತಿರಲಿಲ್ಲ. ಇದು ವಿಶೇಷವಾಗಿ ಅನ್ಯಭಾಷೆಯ ದೊಡ್ಡ ತರಗತಿಗಳಲ್ಲಿ ನಡೆಯುತ್ತಿತ್ತು. ತೀರ ಹಿಂದೆ ಕುಳಿತುಕೊಂಡು ಸಿಳ್ಳು ಮುಂತಾದ ಚೇಷ್ಟೆಗಳಿಂದ ಅವರು ಅವನನ್ನು ಕಾಡುತ್ತಿದ್ದರು” ಮತ್ತು “ಬೆಳೆಯ ಸಿರಿ ಎಳೆಯಲ್ಲಿ ಎಂಬ ನಾಣ್ನುಡಿಯನ್ನು ಸುಳ್ಳು ಮಾಡುವಂತೆ ಅವನೊಬ್ಬ ಅರಸಿಕನಾದ ಸಾಮಾನ್ಯ ಹುಡುಗನಾಗಿದ್ದನು. ಓದಿನ ಕಡೆಗೆ ಅವನ ಲಕ್ಷ್ಯವು ಅಷ್ಟಕಷ್ಟೆ ಆಟ, ಊಟ ಇವುಗಳಲ್ಲಿ ಗಮನ ಹೆಚ್ಚು. ಅದರಿಂದ ದಷ್ಟಪುಷ್ಟವಾದ ಮೈ. ಆಗಾಗ ಗೆಳೆಯರೊಂದಿಒಗೆ ಮನೆಯ ಹಿರಿಯರ ಕಣ್ಣು ತಪ್ಪಿಸಿ ಉಪಾಹಾರ ಮಂದಿರಗಳಲ್ಲಿ ನುಸುಳಿ ಕರಿದ ಪದಾರ್ಥಗಳನ್ನು ತಿನ್ನುವದರಲ್ಲಿ ಹೆಚಿನ ಲಾಲಸೆ. ಅದು ಎಷ್ಟೆಂದರೆ ಒಮ್ಮೊಮ್ಮೆ ರಾತ್ರಿಯೂ ಊಟವಾದ ಮೇಲೆಯೂ ತಿಂಡಿ ತಿನಿಸುಗಳ ಮೇಲೆ ಅವನ ದಾಳಿ ನಡೆಯುತ್ತಿತ್ತು”

ರಸಿಕರಂಗರು ಕನ್ನಡದ ಹಿರಿಯ ಲೇಖಕರಲ್ಲಿ ಒಬ್ಬರಾಗಿರುವುದರಿಂದ ಸಹಜವಾಗಿಯೇ ಅವರ ಈ ಆತ್ಮ ಚರಿತ್ರೆಯಲ್ಲಿ ಅನೇಕ ಭಾಗಗಳು ಕೃತಿಯಿಂದ ಪ್ರತ್ಯೇಕವಾಗಿ ತೆಗೆದಿರಿಸಿದಾಗಲೂ ತನ್ನ ಅರ್ಥವಂತಿಕೆಯನ್ನು ಮೆರೆಯಬಲ್ಲ ಪಂಕ್ತಿಗಳು ನೂರಾರು ಸಿಗುತ್ತವೆ. “ದೇಶ ಸೇವೆಯೆಂದರೆ ಸಣ್ಣ ಮಾತಲ್ಲ ಸರ್ವಸ್ವ ತ್ಯಾಗಮಾಡಬೇಕು. ಎಲ್ಲ ತರದ ಕಷ್ಟ ನಷ್ಟಗಳಿಗೆ ಶಾರೀರಕ ಮಾನಸಿಕ ಯಾತನೆಗಳಿಗೆ ಸಿದ್ಧವಾಗಬೇಕು.”

“ಏನೂ ಸಿದ್ಧತೆಯಿಲ್ಲದೆ ಪಾಠ ಪ್ರವಚನಗಳನ್ನು ನಾನು ನಡಸಬಲ್ಲೆ ಎಂಬ ಹೆಮ್ಮೆಯ ಮಾತು ನಿಷ್ಠಾಂತನಾದ ಶಿಕ್ಷಕನಿಗೆ ಒಪ್ಪುವಂಥದಲ್ಲ”

“ಜೀವನದಲ್ಲಿ ಸಮಗ್ರ ಕ್ರಾಂತಿಯಾಗಬೇಕಾದರೆ ಕೇವಲ ಉಪದೇಶದಿಂದ ಆಗಲಾರದು, ಆದಕ್ಕೆ ಇಡೀ ಜನ ಸಮುದಾಯವನ್ನು ಕೆರಳಿಸಿ ಬಡಿದೆಬ್ಬಿಸುವಂಥ ಆರ್ಥಿಕ ರಾಜಕೀಯ, ಸಾಮಾಜಿಕ ಅವ್ಯವಸ್ಥೆಗಳು ಕಳಸಮುಟ್ಟಿರಬೇಕು. ಜನತೆ ಅಸಹ್ಯವಾದ ದೌರ್ಜನ್ಯಕ್ಕೆ ಬಲಿಯಾಗಿರಬೇಕು, ಸರ್ವಸ್ವ ತ್ಯಾಗಕ್ಕೆ ಸಿದ್ದದಾಗಿರಬೇಕು, ಜತೆಗೆ ನುಡಿದಂತೆ ನಡೆಯುವ ಸಮರ್ತವಾದ ಮುಂದಾಳುತರವಿರಬೇಕು.

“ಗುಂಪು ಕಟ್ಟಿ ಸ್ವಾರ್ಥ ಸಾಧನೆಗಾಗಿ ರಾಜಕೀಯ ಮಾಡುವವರಿಗೆ ಗೆಲವಿನ ಮೇಲೆ ಗೆಲವು ಒಂದು ಕಣ್ಣೂ ನೆತ್ತಿಗೇರಿ ಅವರು ಮನಬಂದಂತೆ ನಡೆಯುತ್ತಾರೆ, ಅವರ ಅಧಿಕಾರದಾಹವು ಹೆಚ್ಚುತ್ತದೆ. ಆಚಂದ್ರಾರ್ಕ ಜೀವಿಸುವವರಂತೆ ಅವರು ಉನ್ನತ್ತರಾಗಿ ವರ್ತಿಸುತ್ತಾರೆ. ತಮ್ಮ ಬಾಲಬಡಿಕರನ್ನು ಅವರು ಅಟ್ಟಕ್ಕೇರಿಸುತ್ತಾರೆ. ಆಗದವರನ್ನು ಕಾಲಕೆಳಗೊತ್ತಿ ತುಳಿಯುತ್ತಾರೆ.”

“ದುರ್ಬಲ ವರ್ಗದ ಜನರನ್ನು ಸಬಲರನ್ನಾಗಿ ಮಾಡಬೇಕಾದರೆ ಅವರನ್ನು ಮಾನಸಿಕವಾಗಿ ಮೇಲೆತ್ತಬೇಕು. ಇದನ್ನು ಮಾಡಿದದ್ದರೆ ಅರ್ಧಮರ್ಧ ಶಿಕ್ಷಿತರೂ ಹಣಹಪಾಪಿಯುಳ್ಳವರೂ ಆದ ಮಧ್ಯಸ್ಥರು ಬಡವರ ಮತ್ತ ದುರ್ಬಲರ ಹೆಸರಿನಲ್ಲಿ ಹಣಪಡೆದು ತಾವು ಕೊಬ್ಬುತ್ತ ಅವರನ್ನು ಇನ್ನಿಷ್ಟು ಶೋಷಿಸುತ್ತಾ ಹೋಗುತ್ತಾರೆ. ದುರ್ಬಲರು ಇನ್ನಿಷ್ಟು ದುರ್ಬಲರಾಗುತ್ತಾರೆ.”

“ಜೀವಂತಕವಿ ಯಾವಾಗಲೂ ಬರೆಯುತ್ತಿರಬೇಕೆಂದಿಲ್ಲ ಅವನು ಬರೆಯಲಿ, ಬರೆಯದಿರಲಿ, ತನ್ನ ಸುತ್ತಮುತ್ತಿನ ಪರಿಸರಕ್ಕೆ ಸಮಕಾಲೀನ ಪ್ರಂಪಂಚಕ್ಕೆ ಅದರ ಆಗುಹೋಗುಗಳು, ಹಿನ್ನಡೆ ಮುನ್ನಡೆಗಳು, ಸೋಲು ಗೆಲುವುಗಳು -ಇವುಗಳಿಗೆ ತನ್ನ ರೀತಿಯಲ್ಲಿ ಎಷ್ಟರಮಟ್ಟಿಗೆ ತನ್ನೊಳಗೆ ಸ್ಪಂದಿಸುತ್ತಾರೆ ಎಂಬುದು ಅವನ ಜೀವಂತಿಯ ಲಕ್ಷಣ. ಪ್ರತಿಯೊಂದು ಘಟನೆಗೆ ಪ್ರತಿಯೊಬ್ಬ ಸಾಹಿತಿ ಪ್ರತಿಕ್ರಿಯೆಯನ್ನು ವ್ಯಕ್ತಮಾಡಬೇಕೆಂಬ ಅಪೇಕ್ಷೆ, ಸಹೃದಯ ವಿವೇಕವಲ್ಲ.

‘ಜೀವನ ರಸಿಕ’ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ನಮ್ಮ ಸಮಕಾಲೀನ ಹಿರಿಯ ಲೇಖಕರೊಬ್ಬರ ಬದುಕು ಕಷ್ಟ ಸುಖಗಳ ಏರಿಳಿತಗಳಲ್ಲಿ ತೇಲಿ ಬಂದ ರೀತಿಯನ್ನು ಆತ್ಮೀಯವಾಗಿ ಹೃದ್ಯವಾಗಿ ಪರಿಚಯಿಸಿಕೊಂಡ ಸಮಾಧಾನ ದೊರೆಯುತ್ತದೆ.

೨. ಕನ್ನಡದ ಪ್ರಸಿದ್ಧ ಲೇಖಕರಲ್ಲಿ ಒಬ್ಬರೆಂದು ಈಗಾಗಲೇ ಹಾಮಾನು ಅವರು ಖ್ಯಾತನಾಮರಾಗಿದ್ದಾರೆ. ಜನಪ್ರಿಯ ಪತ್ರಿಕೆಗಳ ಅಂಕಣಕಾರರಾಗಿ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ನಿದೇಶಕರಾಗಿ, ನಿರ್ಭೀತ ವಿಮರ್ಶಕರಾಗಿ, ಕನ್ನಡ ನಾಡು ನುಡಿಗಳ ಪ್ರಶ್ನೆ ಬಂದಾಗಲೆಲ್ಲಾ ಮುಂಚೂಣಿಯಲ್ಲಿ ನಿಂತು ಅದರ ಮುಖವಾಣಿಯಾಗಿ ನಾಯಕರು ತಮ್ಮ ಹೆಸರನ್ನು ಅನ್ವರ‍್ಥಕಗೊಳಿಸಿದ್ದಾರೆ.

ಅವರು ಬೇರೆ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳಲ್ಲಿ ಹನ್ನೆರಡನ್ನು ಮಾತ್ರ ಆರಿಸಿ ಪ್ರಕಟವಾಗುತ್ತಿರುವ ಈ ಪುಸ್ತಕದ ಹೆಸರು ‘ಸಿಂಗಾರ’ ಸಂಸ್ಕೃತ ಭಾಷೆಯ ಶೃಂಗಾರ ಶಬ್ದದ ತದ್ಬವವಾದ ಸಿಂಗಾರ ಎಂಬ ಶಬ್ದ ಲೇಖಕರ ಊರಾದ ತೀರ್ಥಹಳ್ಳಿಯ ಕಡೆ ‘ಅಡಕೆಯ ಹೂವು’ ಎಂಬ ಅರ್ಥದಲ್ಲಿ ಬಳಕೆಯಲ್ಲಿ ಇದೆ. ನಮ್ಮ ಕಡೆ ಹೊಂಬಾಳೆ ಎಂದು ಕರೆಯುವುದನ್ನು ಅವರ ಕಡೆ ಸಿಂಗಾರ ಎಂದು ಎಂದು ಕರೆಯುತ್ತಾರೆ. “ಅದು ಕಳಸದ ಪೂಜೆಗೆ ತುಂಬ ಪ್ರಶಸ್ತವಾದದ್ದು ಮುನ್ನುಡಿ, ಕೃತಿಕಳಸಕ್ಕೆ ಇಟ್ಟ ಪೂಜೆಯ ಹೂವು. ಎಂದೇ ನನ್ನ ಮುನ್ನುಡಿಗಳ ಈ ಮೊದಲ ಸಂಕಲನ ‘ಸಿಂಗಾರ’ವಾಗಿದೆ. ನನ್ನ ಮುನ್ನುಡಿಗಳಿಂದ ಈ ಕೃತಿಗಳನ್ನು ಅಲಂಕರಿಸಿದ್ದೇನೆಂದು ನಾನು ಯಾವಾಗಲೂ ಭಾವಿಸಲಿಲ್ಲ. ಸಾಹಿತ್ಯದ ಪೂಜೆ ಸಲ್ಲಿಸುತ್ತಿದ್ದೇನೆಂದು ಮಾತ್ರ ತಿಳಿದಿದ್ದೇನೆ”. ಇದು ತಮ್ಮ ಪುಸ್ತಕದ ಶೀರ್ಷಿಕೆಯನ್ನು ಲೇಖಕರು ಸಮರ್ಥಿಸಿಕೊಳ್ಳುವ ರೀತಿ.

ಕನ್ನಡದಲ್ಲಿ ಈಗಾಗಲೇ ಹೆಚ್ಚು ಮುನ್ನುಡಿಗಳನ್ನು ಬರೆದ ಕೆಲವು ಲೇಖಕರು ಅಂತಹ ಮುನ್ನುಡಿಗಳನ್ನು ಪುಸ್ತಕ ರೂಪದಲ್ಲಿ ಸಂಕಲಿಸಿ ಪ್ರಕಟಿಸಿದ್ದಾರೆ. ಶ್ರೀನಿವಾಸ, ದೇಜಗೌ, ಪರಮೇಶ್ವರ ಭಟ್ಟ. ಸಿ.ಪಿ.ಕೆ. ಮೊದಲಾದವರ ಪ್ರಯತ್ನಗಳನ್ನು ಇಲ್ಲಿ ಹೆಸರಿಸಬಹುದು. ಈ ಬಗೆಯ ಪುಸ್ತಕಗಳಲ್ಲಿ ‘ಸಿಂಗಾರ’ವಾಗಿ ನಿಲ್ಲುವಂತಹ ಈ ಸಂಕಲನಕ್ಕೆ ವಿಶೇಷ ಸ್ವಾಗತ ಮತ್ತು ಮಹತ್ವ ಇದೆ ಎಂದು ನಾನು ನಂಬಿದ್ದೇನೆ. ಇದರಲ್ಲಿ ಲೇಖಕರು ಬರೆದ ಎಲ್ಲಾ ಮುನ್ನುಡಿಗಳೂ ಸೇರಿಲ್ಲ. ಕೇವಲ ಹನ್ನೆರಡನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಮಿಕ್ಕವನ್ನು ಇದೇ ರೀತಿ ಇನ್ನೂ ಎರಡು ಸಂಪುಟಗಳಲ್ಲಿ ಪ್ರಕಟಿಸುವ ಆಲೋಚನೆ ಇರುವುದಾಗಿ ಮೊದಲ ಮಾತಿನಲ್ಲಿ ತಿಳಿಸಿದ್ದಾರೆ.

ಈ ಸಂಕಲನದಲ್ಲಿ ಅಪ್ರಸಿದ್ದರೂ ಆದ ಲೇಖಕರಿಗೆ ಬರೆದ ಮುನ್ನುಡಿಗಳು ಇವೆ. ಇಷ್ಟೇ ಅಲ್ಲದೆ, ತುಂಬಾ ಸುಪ್ರಸಿದ್ದರಾದ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳೂ ಇವೆ. ಆದರೆ ಇವರು ಎಷ್ಟು ವಸ್ತುನಿಷ್ಠೆಯಿಂದ ಕೃತಿಗಳನ್ನು ವಿಶ್ಲೇಷಿಸಿ ಬರೆದಿದ್ದಾರೆ ಎಂದರೆ, ಅದನ್ನು ಸಮಾನ ಸಮ್ಯಕ್ ದೃಷ್ಟಿಗೆ ಉದಾಹರಣೆಯಾಗಿ ಹೆಸರಿಸಬಹುದು. ಎಲ್ಲದರಲ್ಲೂ ಸದಭಿರುಚಿ, ಅಚ್ಚು ಕಟ್ಟು, ಸಮರ್ಪಕತೆ, ಸವಷ್ಟವಾದ ಪಾರದರ್ಶಕ ರೀತಿಯಲ್ಲಿ ಗೋಚರಿಸುತ್ತದೆ. ಆರಿಸಿಕೊಂಡ ಕೃತಿಯ ಹೃದಯವನ್ನು ಅಪಾಯವಾಗಿದೆ, ಹೃದಯ ಹೃದಯವಂತಿಕೆಯನ್ನೂ ಉಳಿಸಿಕೊಂಡಿದ್ದು ಎಂಬುದನ್ನು ಇಪ್ಪತ್ತು ವರ್ಷಗಳ ಹಿಂದೆ ಚದುರಂಗರ ಕಥಾಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ ಮನಗಾಣಬಹುದು.

“ಉತ್ತಮವಾದ ಸಣ್ಣ ಕಥೆಗಳಲ್ಲಿ ಕಾಣಬೇಕಾದ ಗುಣಗಳೆಲ್ಲಿ ಚದುರಂಗರ ಈ ಕಥೆಗಳಲ್ಲಿವೆ. ನವ್ಯತೆಯನ್ನು ತೋರುವ ಚಪಲ, ನೀತಿಯನ್ನು ಬೋಧಿಸುವ ಕಾತರ ಅವರಿಗಿಲ್ಲ. ಅವರು ನೇರವಾಗಿ ಕಥೆ ಹೇಳುತ್ತಾರೆ, ಅದರ ಜೊತೆಗೇ ಸಾಮಾಜಿಕ ಅನ್ಯಾಯಗಳನ್ನೂ ಮಾನವ ಹೃದಯದ ಅಲ್ಪತೆಯನ್ನೂ ಅವರು ನೇಯಬಲ್ಲರು. ಚಿಕ್ಕ ಮಕ್ಕಳು ಮನಸ್ಸನ್ನು ತೆರೆದು ತೋರಿಸಬಲ್ಲಂತೆಯೇ ಹಳ್ಳಿಗರ ಮಾತನ್ನೂ ಆಡಬಲ್ಲರು, ನ್ಯಾಯಾಲಯ, ಆಸ್ಪತ್ರೆಗಳ ನಿಜಸ್ಥಿತಿಯನ್ನು ಬಿಚ್ಚಿ ತೋರಿಸಿ ಅವರು ಮರುಗುತ್ತಾರೆ. ಓದುಗರನ್ನು ಮರುಕಗೊಳಿಸುತ್ತಾರೆ. ಎದುರಿಗೆ ಕಾಣುತ್ತಿರುವ ಲೋಕದಂತೆಯೇ ಮಾನವನ ಮನಸ್ಸಿನೊಳಗೂ ಒಂದು ಲೋಕವಿರುವುದನ್ನೂ ಅಲ್ಲಿನ ರಹಸ್ಯಗಳನ್ನೂ ಅವರು ಬಲ್ಲರು. ಮಾನವತೆಯ ಅಧೋಗತಿಗೆ ಪರಿತಪಿಸುತ್ತಿರುವ ಸೂಕ್ಷ್ಮ ಸಂವೇದನಾ ಜೀವಿಯಾದ ಕಲಾವಿದನೊಬ್ಬನ ನಿಟ್ಟುಸಿರು ಅವರ ಕಥೆಗಳ ಉದ್ದಕ್ಕೂ ಕೇಳಿಬರುತ್ತದೆ.

ಹೊಸಗನ್ನಡದ ಸಣ್ಣ ಕಥೆಗಳನ್ನು ಕುರಿತು ವಿಚಾರ ಮಾಡುವ ಯಾರೇ ಆಗಲಿ ‘ಇಣಿಕು ನೋಟ’ ‘ಶವದ ಮನೆ’, ಬಣ್ಣದ ಗೊಂಬೆ’ ಮುಂತಾದ ಕಥೆಗಳನ್ನೂ, ಅವನ್ನು ಬರೆದ; ಚದುರಂಗ’ರನ್ನೂ ಕಡೆಗಾಣುವಂತಿಲ್ಲ”

ಇದು ಹೆಸರಾಂತ ಹಿರಿಯ ಲೇಖಕ ಚದುರಂಗದ ಸಣ್ಣ ಕಥೆಗಳ ವಿಚಾರವಾಗಿ ಹೇಳಿದ ಮಾತಾಯಿತು.

ಚಿತ್ರ ಕಲೆ ಮತ್ತು ಸಾಹಿತ್ಯದಲ್ಲಿ ಹೆಸರುವಾಸಿಯಾಗಿರುವ ಲೇಖಕರಾದ ಆದರೆ ಶ್ರೇಷ್ಠ ಕಲಾವಿದರಾದ ಪಿ.ಆರ್. ತಿಪ್ಪೇಸ್ವಾಮಿ ಅವರು ಬರೆದ ‘ಹೋರಾಟಗಾರ ಕೆಂಚಪ್ಪ’ ಎಂಬ ಪುಸ್ತಕವನ್ನು ಹೇಗೆ ಮೆಚ್ಚಿಕೊಳ್ಳುತ್ತಾರೆ ನೋಡಿ.

“ಕೀರ್ತಿ ಪ್ರತಿಷ್ಠೆ ಲಾಭಗಳು ಸಾಮಾನ್ಯವಾಗಿ ಮೇಲೆ ಬಿದ್ದು ಹೋಗ ಹೋಗುವವರ ಸ್ವತ್ತು. ಜೀವನದ ನಿಜವಾದ ಮೌಲ್ಯಗಳನ್ನಾಗಲಿ, ಸಹಜವಾದ ಅರ್ಹತೆಗಳನ್ನಾಗಲಿ ಅವು ಆಧರಿಸುವುದಿಲ್ಲ. ಆದ್ದರಿಂದಲೇ ನಮ್ಮ ಈಗಿನ ಸಮಾಜ ಜೀವನ ಸಾರ‍್ವಜನಿಕ ಕಲುಪಿತವಾಗಿರುವುದು. ತಾತ್ಕಾಲಿಕವಾದ ಪ್ರಚಾರಕ್ಕೆ ಸಿಕ್ಕುವ ಮನ್ನಣೆ, ಶಾಸ್ವತವಾದ ಗುಣಗಳಿಗೆ ಇಲ್ಲದೆ ಹೋಗುತ್ತದೆ, ಅಧಿಕಾರಕ್ಕೆ ದೊರೆಯುವ ಮಾನ್ಯತೆ, ಸೇವೆಗೆ ಸಿಕ್ಕದೆ ಹೋಗುತ್ತದೆ. ಚಂಡಮದ್ದಲೆಗಳು ಗಮನ ಸೆಳೆಯುವ ಹಾಗೆ ವೀಣೆಯಂಥ ವಾದ್ಯಗಳು ಗಮನ ಸೆಳೆಯಲಾರದು, ಆರ್ಭಟ ಉದ್ರೇಕಗಳಂತೆ, ತಾಳ್ಮೆ ಸಹನೆಗಳು ಆ ಗಳಿಗೆಯ ಗೆಲುವನ್ನು ತಂದು ಕೊಡಲಾರವು. ಇದು ಈಗ ನಾವು ಸುತ್ತಲೂ ನೋಡುತ್ತಿರುವ ಪರಿಸ್ಥಿತಿ. ಈ ಪರಿಸ್ಥಿತಿಯಲ್ಲಿ ನಮ್ಮ ಸಮಾಜ ನಿಜವಾದ ವ್ಯಕ್ತಿತ್ವಗಳನ್ನು ಗುರಿತಿಸಲಾಗದ ಅಸಹಾಕತೆಯಲ್ಲಿ ತೊಳಲುತ್ತಿದೆ. ಇದು ದುರ್ದೈವ.

ಶ್ರೀ ತಿಪ್ಪೇಸ್ವಾಮಿಯವರು ಸ್ಥೂಲವಾಗಿ ಚಿತ್ರಿಸಿರುವ ಶ್ರೀ ಕೆಂಚಪ್ಪನವರ ಜೀವನವನ್ನು ಓದಿದರೆ ನಾವು ಹೇಗೆ ನಿಜವಜ್ರಗಳನ್ನು ಹಾಳು ಮಾಡಿ ಕೃತಕ ವಜ್ರಗಳನ್ನು ತಯಾರಿಸುತ್ತಿದ್ದೇವೆಂಬುದು ಗೊತ್ತಾಗುತ್ತದೆ. ಯಾವ ಸಮಾಜದಲ್ಲಾದರೂ ಇಂಥ ವ್ಯಕ್ತಿತ್ವಗಳು ತುಂಬ ಅಪರೂಪ, ಕೆಂಚಪ್ಪನವರಿರಲಿ, ಅವರ ಸುತ್ತ ಸೇರಿದ ಹರಿಹರಪ್ಪನವರು, ಸಿದ್ದೋಜಿರಾಯರು ಮೊದಲಾದವರ ವ್ಯಕ್ತಿತ್ವಗಳೂ ಸಾಧಾರಣವಾದುದಲ್ಲ, ಇಂಥವರನ್ನು ನಾವು ಹೆಚ್ಚು ಹೆಚ್ಚಾಗಿ ನೋಡುತ್ತೇವೆಯ ಎನಿಸುತ್ತದೆ. ಅವರು ಕಾಣಿಸದಾದಾಗ ವಿಷಾದವಾಗುತ್ತದೆ.”

ಲೇಖಕರು ಪುಸ್ತಕದ ಮೊದಲ ಮಾತಿನಲ್ಲಿ “ಎಲ್ಲವನ್ನೂ (ಉಳಿದ ಬೇರೆ ಲೇಖಕರ ಪುಸ್ತಕಗಳಿಗೆ ಬರೆದ ಮುನ್ನುಡಿಗಳನ್ನು) ಒಂದೇ ಸಂಪುಟದಲ್ಲಿ ಪ್ರಕಟಿಸಬೇಕೆಂಬ ಆಸೆ, ಪ್ರಕಟಣೆಗಳು ತೀರ ಕಷ್ಟವಾಗಿರುವ ಈ ದಿನಗಳಲ್ಲಿ ಈಡೇರುವುದು ಸಾಧ್ಯವಾಗದೆ ಹೋಯಿತು. ಇಲ್ಲಿ ನಾನು ನಾಲ್ಕು ಸಣ್ಣ ಕಥೆಗಳ ಸಂಕಲನಗಳಿಗೆ, ಮೂರು ವಚನ ಸಂಗ್ರಹಗಳಿಗೆ, ಮೂರು ವ್ಯಕ್ತಿ ಚಿತ್ರ ಸಂಬಂದಿ ಪುಸ್ತಕಗಳಿಗೆ ಹಾಗೂ ಒಂದೊಂದು ನಾಟಕ ಮತ್ತು ಪ್ರವಾಸ ಕಥನಗಳಿಗೆ ಬರೆದ ಮುನ್ನುಡಿಗಳಿವೆ. ಇವುಗಳಿಂದ ಓದುಗರಿಗೆ ಸ್ವಲ್ಪವಾದರೂ ಪ್ರಯೋಜನವಾದರೆ ಇದನ್ನು ಹೀಗೆ ಪ್ರಕಟಿಸಿದ್ದು ಸಾರ್ಥಕವಾಗುತ್ತದೆ” ಎಂದು ಹೇಳಿದ್ದಾರೆ. ಲೇಖಕರ ಆಸೆಯನ್ನು ಈಡೇರಿಸಲು ಕರ್ನಾಟಕದಲ್ಲಿ ಹಲವು ಪ್ರಕಾಶಕರು ಸಂತೋಷದಿಂದ ಸಿದ್ದರಾಗಿದ್ದಾರೆಂಬುದು ನಮಗೆಲ್ಲಾ ತಿಳಿದ ವಿಷಯ. ಆದುದರಿಂದ ಅವರ ಪುಸ್ತಕ ಪ್ರಕಟಣೆಗೆ ಯಾವ ದಿನಗಳೂ ಕಷ್ಟದ ದಿನಗಳಲ್ಲ. ಓದುಗರಿಗೆ ತುಂಬಾ ಪ್ರಯೋಜನವಾಗುವ ಈ ಬಗೆಯ ಪುಸ್ತಕಗಳಿಗೆ ಸದಾ ಹೃತ್ಪೂರ್ವಕವಾದ ಸ್ವಾಗತ ಇದ್ದೇ ಇರುತ್ತದೆ. ಲೇಖಕರು ತಮ್ಮ ಇನ್ನೂ ಎರಡು ಸಂಪುಟಗಳನ್ನು ಬೇಗನೆ ಹೊರತರಲೆಂದು ಆಶಿಸುತ್ತೇನೆ.

೩. ಭಾರತ ದೇಶದಲ್ಲಿ ನೋಬೆಲ್ ಪಾರಿತೋಷಕದಂತಿರುವ “ಭಾರತೀಯ ಜ್ಞಾನ ಪೀಠ ಪ್ರಶಸ್ತಿ’ಯನ್ನು ಕನ್ನಡದಲ್ಲಿ ಕುವೆಂಪು, ಬೇಂದ್ರೆ ಮತ್ತು ಕಾರಂತ – ಈ ಮೂರು ಜನ ಪಡೆದಿರುತ್ತಾರೆ. ಅವರಿಂದಾಗಿ ಅಖಿಲ ಭಾರತ ಸಾಹಿತ್ಯ ಭೂಪಟದಲ್ಲಿ ಕನ್ನಡಕ್ಕೆ ಒಂದು ಮರ್ಯಾದಿತ ಸ್ಥಾನ ದೊರೆತಿದೆ. ಈ ಮೂವರಲ್ಲಿ ಒಬ್ಬರಾದ ಕಾರಂತರ ಬದುಕನ್ನು ಬರವಣಿಗೆಯನ್ನು ಪರಿಚಯಿಸುವ ಪುಸ್ತಕವೆ ಶಿವರಾಮ ಕಾರಂತ

ಈ ಪುಸ್ತಕದ ಮೊದಲನೆ ಮುದ್ರಣ ಹಿಂದೆಯೇ ಪ್ರಕಟವಾಗಿದೆ. ಇದೀಗ ಹಿಂದಿನ ಮುದ್ರಣದ ತಿದ್ದಿದ ಆವೃತ್ತಿಯನ್ನು ಹೊರತರಲಾಗುತ್ತಿದೆ. ಇದರ ಲೇಖಕರು ಈಗಾಗಲೇ ತಮ್ಮ ಕಾದಂಬರಿ ಮತ್ತು ವಿಮರ್ಶೆಗಳ ಕೃತಿಗಳಿಂದ ಹೆಸರು ಗಳಿಸಿರುವ ಹಿರಿಯರಾಗಿದ್ದಾರೆ. ಹೀಗಾಗಿ ಇದರ ವಿಚಾರದಲ್ಲಿ ಹೆಚ್ಚಿಗೆ ಹೇಳುವುದು ಔಪಚಾರಿಕವಾದೀತು. ಇಷ್ಟು ಹೇಳಬಹುದು : ಕಾರಂತರ ಜೀವನ ನಡೆದು ಬಂದ ದಾರಿಯನ್ನು ಮತ್ತು ಅವರ ಕೃತಿಗಳನ್ನು ಪರಿಚಯಿಸಿಕೊಳ್ಳಬಯಸುವ ಹೊಸಬರಿಗೆ ಈ ಪುಸ್ತಕ ಒಂದು ಸ್ವಾಗತಾರ್ಹವಾದ ಪ್ರವೇಶಿಕೆ. ಇದರಲ್ಲಿ ವಿಮರ್ಶೆ ಗೌಣವಾಗಿ ಪರಿಚಯ ಮತ್ತು ಪ್ರಶಂಸೆಯ ಪ್ರಧಾನವಾಗಿದೆ.

ಕಾರಂತರಿಗೂ ಲೇಖಕರಿಗೂ ಬಹು ವರ್ಷದ ನಿಕಟವಾದ ಪರಿಚಯವೂ ಆತ್ಮೀಯತೆಯೂ ಇರುವುದರಿಂದ ಸಹಜವಾಗಿಯೇ ಲೇಖಕರು ಕೃತಿನಿಷ್ಠೆ ವಿಮರ್ಶೆಯಿಂದ ಅನೇಕ ವೇಳೆ ದೂರ ಸರಿಯುತ್ತಾರೆ. ಪುನರುಕ್ತಿಗಳು ಹೇರಳವಾಗಿ ಸಿಗುತ್ತವೆ. ಒಂದು ಉದಾಹರಣೆ : “ಅವರ ಆಸಕ್ತಿಗಳ ಪ್ರಪಂಚದಗಲವೂ ಹರಡಿಕೊಂಡಿವೆ. ಅವರ ನಿರೀಕ್ಷಣೆಗೆ, ಅಲೋಚನೆಗೆ, ಕಲ್ಪನೆಗೆ, ಈ ಪ್ರಪಂಚವೇ ವಸ್ತು, ಈ ಪ್ರಪಂಚದಲ್ಲಿಯ ಎಲ್ಲವೂ ಅವರ ಆಸಕ್ತಿಗೆ, ಕುತೂಹಲಕ್ಕೆ ವಿಷಯ, “ಅಲ್ಲದೆ ಯಾರೂ ಯಾರೊಬ್ಬರ ವಿಚಾರದಲ್ಲೂ ಹೇಳಬಹುದಾದ ಧಾರಾಳತೆಯಿಂದ ಒಮ್ಮೊಮ್ಮೆ ಸರಳೀಕರಿಸಿ ಬರೆಯತೊಡಗುವುದು ಉಂಟು : “ಶಾಲಾ ಶಿಕ್ಷಕರು ಅವರಿಗೆ ಹೇಳಿಕೊಡಲಿಲ್ಲ. ಪಠ್ಯ ಪುಸ್ತಕಗಳು ಅವರಿಗೆ ಪಾಠ ಕಲಿಸಲಿಲ್ಲ. ಜೀವನಾನುಭವವೇ ಅವರ ಪಾಲಿಗೆ ಒಂದು ಸಾಹಸದ ಶೋಧಕಾರ್ಯವಾಗಿದೆ. ಜೀವನಾನುಭವ ಮಾತ್ರ ತಂದುಕೊಡಲಿಲ್ಲ ತಿಳಿವಳಿಕೆಯನ್ನು ಈ ಸಾಹಸ ಅವರಿಗೆ ತಂದುಕೊಟ್ಟಿದೆ. ಬದುಕಿನಲ್ಲಿಯ ಕಷ್ಟಗಳ ಹೊರೆಯನ್ನು ಹೊತ್ತಿದ್ದಾರೆ, ದುಃಖಗಳ ರುಚಿಯನ್ನು ಕಂಡಿದ್ದಾರೆ ಆದರೆ ಇವು ಯಾವುವೂ ಅವರ ಮನಸ್ಸನ್ನು ಕಹಿಯಾಗಿಸಿಲ್ಲ. ಕಷ್ಟ ದುಃಖಗಳ ಅನುಭವಗಳು ಅದಕ್ಕೆ ಮಾರ್ಗವನ್ನು ತಂದುಕೊಟ್ಟಿವೆ. ತಿಳುವಳಿಕೆಯನ್ನು ಹದಗೊಳಿಸಿವೆ. ತಾಳ್ಮೆಯನ್ನು ಅಳವಾಗಿಸಿವೆ. ಹೃದಯ ಔದರ್ಯವನ್ನು ಹೆಚ್ಚಿಸಿವೆ. ವಿವೇಕ ವಿನೀತ ಭಾವವನ್ನು ಮೂಡಿಸಿವೆ.”

ಇಂತಹ ಕಾರಣಗಳಿಗಾಗಿ ರಕ್ಷಾಪುಟದ ಒಳಪುಟದಲ್ಲಿ ಲೇಖಕರನ್ನು ಕುರಿತು “ಶಿವರಾಮ ಕಾರಂತರ ವಿಪುಲವಾದ ಸಾಹಿತ್ಯವನ್ನು ಗಹನವಾಗಿ ಅಧ್ಯಯನ ಮಾಡಿದ್ದರೆ ಫಲಶ್ರುತಿಯಾಗಿ, ಹುಟ್ಟಿದ ‘ಶಿವರಾಮ ಕಾರಂತ : ಬದುಕು ಬರೆಹ’ ಇಂಥ ಗ್ರಂಥಗಳ ಶ್ರೇಣಿಯಲ್ಲಿ ಅದ್ವಿತೀಯವಾದುದು” ಎಂಬ ಹೇಳಿಕೆ ತುಂಬಾ ದುಬಾರಿಯೆನಿಸುತ್ತದೆ. ಆದರೆ ಲೇಖಕರು ಹೇಳಿ ಕೇಳಿ ಕಾದಂಬರಿಕಾರರು ಎಂಬುದನ್ನು ನೆನಪಿಗೆ ತಂದುಕೊಂಡಾಗ ಇದಕ್ಕೆ ಕಾರಣ ಸ್ಪಷ್ಟವಾಗುತ್ತದೆ.

ಕಾರಂತರ ಮತ್ತು ಅವರ ಕೃತಿಗಳ ಸ್ಥೂಲಪರಿಚಯವನ್ನು ಮಾಡಿಕೊಡುವ ವಿಶ್ವಾಸಾರ್ಹ ಕೈಪಿಡಿಯೆಂದು ಮಾತ್ರ ಈ ಪುಸ್ತಕದ ಬಗೆಗೆ ಧಾರಾಳವಾಗಿ ಹೇಳಬಹುದು.

೪. ೧೯೪೪ ರಿಂದ ೧೯೮೧ರ ಅವಧಿಯಲ್ಲಿ ತಾವು ಬರೆದ ಕೆಲವು ಲೇಖನಗಳ ಸಂಕಲನಕ್ಕೆ ನಾಡಿಗ ಕೃಷ್ಣಮೂರ್ತಿ ಅವರು ‘ನಾಡಿಗರ ಬರಹಗಳು’ ಎಂಬ ಹೆಸರನ್ನು ಕೊಟ್ಟಿರುತ್ತಾರೆ. ಇದೊಂದು ಕದಂಬ, ವಿವಿಧತೆ ಇರುವ ಗೊಂಚಲು. ಇದರಲ್ಲಿ ಆತ್ಮ ಕಥೆಯೂ ಇದೆ. ಸಾಮಯಿಕ ರೀತಿಯಲ್ಲಿ ಬರೆದು ಪ್ರಕಟಿಸಿದ ಲೇಖನಗಳೂ ಇವೆ. ಅವು ಈ ಪುಸ್ತಕಕ್ಕೆ ಹೊಂದಬಹುದು. ಹೊಂದವೇ ಇರಬಹುದು. ಆದರೆ ಇದರಲ್ಲಿ ಇರುವುದಷ್ಟೂ ‘ನಾ.ಕೃ. ಬರೆದ ಬರವಣಿಗೆ ಅಂತಲೇ ಈ ಪುಸ್ತಕಕ್ಕೆ ‘ನಾಡಿಗರ ಬರಹಗಳು’ ಎಂಬ ತಲೆಬರಹ. ಒಬ್ಬ ಲೇಖಕ ಸುಮಾರು ಅರ್ಧ ಶತಮಾನದ ಅವಧಿಯಲ್ಲಿ ಬರೆದ ಬಹುಮಟ್ಟಿನ ಲೇಖನವೆಲ್ಲ ಇಲ್ಲಿ ಒಂದೆಡೆ ಸಂಚಯವಾಗಿರುವುದರಿಂದ ಆತನ ಧೋರಣೆ ಮತ್ತು ದೃಷ್ಟಿಕೋನವನ್ನು ಅರ್ಥಮಾಡಿ ಕೊಳ್ಳಲು ಸಾಧ್ಯವಾಗಿದೆ. ಡೆಮಿ ಆಕಾರದಲ್ಲಿ ೪೦೬ ಪುಟಗಳಿರುವ ಈ ಪುಸ್ತಕದಲ್ಲಿ ಒಟ್ಟು ಐದು ಭಾಗಗಳಿವೆ. ನಾನು ಮತ್ತು ನನ್ನವರು, ಗಾಂಧಿ ಮತ್ತು ರಾಷ್ಟ್ರೀಯ ಸಾಹಿತ್ಯ. ಪತ್ರಿಕೋದ್ಯಮ ಮತ್ತು ಸಮೂಹ ಸಂಪರ್ಕ, ವ್ಯಕ್ತಿ ವಿಚಾರ, ವಿಮರ್ಶೆ ಮತ್ತು ಪ್ರವಾಸ ಸಾಹಿತ್ಯ ಎಂಬ ಐದು ಭಾಗಗಳೂ ಕಡೆಯಲ್ಲಿ ಬೆಹಾಗ್ ರಾಗದಲ್ಲಿ ಅದಿತಾಳದಲ್ಲಿ ಬರೆದ ಶ್ರೀ ಗುರುರಾಯ ಎಂಬ ಒಂದು ಕವನವೂ ಇದೆ. ಪುಸ್ತಕವನ್ನು ಪತ್ರಿಕೋಧ್ಯಮದಲ್ಲಿ ಮೊದಲ ಪಾಠ ಕಲಿಸಿದ ಶ್ರೀ ಸಿದ್ಧವನಹಳ್ಳಿ ಕೃಷ್ಣಶರ್ಮರಿಗೆ ಅರ್ಪಿಸಲಾಗಿದೆ.

ಇದರ ಮೊದಲನೆಯ ಭಾಗ, ಶ್ರೀಸಾಮಾನ್ಯನ ಸಾರ್ಥಕ ಬದುಕಿನ ಕಥೆ. ಆನವಟ್ಟಿಯಲ್ಲಿ ಹುಟ್ಟಿದ ಲೇಖಕರು ಕರ್ನಾಟಕದ ಹೆಮ್ಮೆಯ ಮಗನಾಗಿ ಬೆಳೆದದ್ದನ್ನು ಆತ್ಮೀಯವಾಗಿ ಹಿಡಿದಿಟ್ಟ ಆತ್ಮ ಕಥೆಯೇ ಈ ಪುಸ್ತಕದಲ್ಲಿರುವ ಬರಹಗಳ ಮುಖ್ಯ ಭಾಗ. ಕಷ್ಟದ ದಿನಗಳು ಹಿಂದೆ ಸರಿದು ಸುಖದ ದಿನಗಳಿಗೆ ಹಾದಿ ತೆರೆದುಕೊಟ್ಟ ಆರಂಭದ ಆತ್ಮ ಕಥೆ ಅನೇಕ ಜನರಿಗೆ, ಹಳ್ಳಿಯ ಹೈದರಿಗೂ ನಗರದ ಪೋರರಿಗೂ ಚಿರಪರಿಚಿತವಾದದ್ದು. ಇದನ್ನು ಲೇಖಕರು ನಿಸ್ಸಂಕೋಚವಾಗಿ ಮುಗ್ಧ ರೀತಿಯಿಂದ ನಿರೂಪಿಸಿದ್ದಾರೆ. ತಮ್ಮ ತಾಯಿಯ ಅಂತಿಮ ಕಾಲದ ಮಾತನ್ನು ನಡಸಿ, ಅಂಜನೇಯನ ಗುಡಿ ಕಟ್ಟಿಸಿ ಕಳಶ ಸ್ಥಾಪನೆಯಾದ ಪ್ರಯತ್ನಗಳನ್ನು ತಿಳಿಸುವಾಗ ತೋರಿರುವ ತನ್ಮಯತೆ ಅವರ ಸ್ವಭಾವಕ್ಕೆ ಅನುಗುಣವಾಗಿದೆ.

೧೯೪೮ರ ಜನವರಿ ಅಂತ್ಯದಲ್ಲಿ ಮಹಾತ್ಮಾ ಗಾಂಧಿಯವರು ನಿಧನರಾದಾಗ ಲೇಖಕರು ಅಮೇರಿಕದಲ್ಲಿದ್ದರು. ಗಾಂಧೀಜಿಯ ಚಿತೆಯ ಮೇಲಿರಿಸಿದ ಹೂಗಳನ್ನು ಚಿತೆಯ ಭಸ್ಮವನ್ನು ಸ್ವಲ್ಪ ಲಕೋಟೆಯಲ್ಲಿಟ್ಟು ದಿವಾಕರರು ಲೇಖಕರಿಗೆ ಕಳಿಸಿದರು. “ನನ್ನ ಕೈಗಳು ಥಕಥಕನೆ ನಡುಗಿದುವು. ಪವಿತ್ರವಾದ ಆ ವಸ್ತುವನ್ನೂ ಕೈಯಲ್ಲಿ ಪಕ್ಕದ ಮೇಜಿನ ಮೇಲಿಟ್ಟೆ ‘ಸಮಾಧಿ’ಯ ರೀತಿಯಲ್ಲಿ ಅಲಂಕಾರ ಮಾಡಿದೆ. ನನ್ನ ಭಾರತೀಯ ಗೆಳೆಯರಿಗೆ ತಿಳಿಯಿಸಿದೆ. ಊರಲೆಲ್ಲಾ ಮಿಂಚಿನ ವೇಗದಲ್ಲಿ ಸುದ್ದಿ ಹರಿಡಿತು, ನೂರಾರು ಜನ ನನ್ನ ರೂಮಿಗೆ ಬರತೊಡಗಿದರು. ೩೦೧ ಮೆಲ್ಬೋರನ್ ಬೀದಿಯ ಕೆಲವು ದಿನ ಯಾತ್ರಾಸ್ಥಳ ಅದಂತೆಯೇ ಆಯಿತು. ಎಂತಹ ಗಂಭೀರ ಜನ ಅವರು. ಒಬ್ಬೊಬ್ಬರಾಗಿ ಬಂದು ತಮ್ಮ ಗೌರವವನ್ನು ಸೂಚಿಸಿ ಹೋಗುತ್ತಿದ್ದರು. ಕೆಲವರು ಹೂವು ಹಣ್ಣುಗಳನ್ನು ಸಮರ್ಪಿಸಿದರು. ಕೆಲವರು ಅಲ್ಲಿ ಬಂದು ಕುಳಿತು ಬೈಬಲ್ ನ ಕೆಲವು ಶ್ಲೋಕಗಳನ್ನು ಹೇಳಿ ತಮ್ಮ ಮನಸ್ಸನ್ನು ಸಂತೈಸಿಕೊಂಡರು. ಮತ್ತೆ ಕೆಲವರು ಏನೂ ಮಾತನಾಡದವರಾಗಿ ಅಲ್ಲಿಯೇ ನಿಂತು ಬಿಟ್ಟರು. ಆ ದೃಶ್ಯ ನೋಡಿದ ನಾನು ಚಕಿತನಾದೆ. ಗಾಂಧೀಜಿ ಪುಣ್ಯ ಪುರುಷರು. ನಮ್ಮ ನಾಡು ಭಾಗ್ಯನಾಡು ಎಂದುಕೊಂಡೆ. ಅಮೇರಿಕಾದ ಪತ್ರಿಕಾ ಪ್ರತಿನಿಧಿಗಳನ್ನು ಕೇಳಬೇಡಿ! ಕೆಲವರು ಸುದ್ಧಿ ಕೇಳಿ ಬರೆದುಕೊಂಡರು. ಇನ್ನು ಕೆಲವರು ಗಾಂಧೀಜಿಯ ಚಿತೆಯ ಭಸ್ಮದ ಚೀಲದ ಭಾವಚಿತ್ರವನ್ನು ತೆಗೆದುಕೊಂಡರು. ಮರುದಿನ ಪತ್ರಿಕೆಗಳಲ್ಲಿ. “ಅಮೇರಿಕಾದಲ್ಲಿ ಮಹಾತ್ಮರ ಅಸ್ಥಿಶೇಷವನ್ನು ಪಡೆದ ಆಭರತೀಐರಲ್ಲಿ ಪ್ರಥಮರು” ಎಂದು ಸುದ್ಧಿ ಪ್ರಕಟಿಸಿದರು. ಆ ದಿನ ಸಂಜೆ ಪುನಃ ನನ್ನ ಕೊಠಡಿ ಯಾತ್ರಾಸ್ಥಳವೇ ಆಯಿತು.”

ಲೇಖಕರು ಒಂದು ಅರ್ಥದಲ್ಲಿ ಸಿರಿವಂತರು. ಭಾರತದ, ವಿಶ್ವದ ಮಹಾಚೇತನಗಳ ಪರಿಚಯ ಪಡೆದವರು, ಕರ್ನಾಟಕದ ಅತಿರಥ ಮಹಾರಥರ ನಿಕಟ ಸಂಪರ್ಕ ಹೊಂದಿದವರು. ಪುಸ್ತಕದ ಒಳಗೊಳಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಿರುಚಿತ್ರಗಳು, ಪರಿಮಿತ ಆದರೆ ಬಹು ಹೃದ್ಯವಾದ ದಾಖಲೆಯೂ ತೆಕ್ಕ ಹಾಕಿಕೊಳ್ಳುತ್ತದೆ. ಮೈಲಾರ ಮಹದೇವಪ್ಪ. ಧೀರ ಶಂಕರ ಇಬ್ಬರು ಬಾಪು ಕಸ್ತೂರಿಬಾರಂತೆ ನಮ್ಮ ಹೃದಯ ಸರೆಗೊಳ್ಳತ್ತಾರೆ.

ಈ ಪುಸ್ತಕದಲ್ಲಿ ಸಪ್ಪೆಯಾಗುವ, ಪೇಲವವೆನಿಸುವ ಭಾಗಗಳೂ ಬರುತ್ತವೆ. ಆದರೆ ಅವೆಲ್ಲವನ್ನೂ ಲೇಖಕರು ಶುಭ್ರ ಸ್ಫಟಿಕ ಪ್ರಾಮಾಣಿಕತೆ ಮುಚ್ಚಿ ಹಾಕಿ ಬಿಡುತ್ತದೆ. ನಾಡಿಗರ ಬರಹಗಳು ಒಂದು ಪ್ರಾಂಜಲವಾದ ಅಂತಃಕರಣಕ್ಕೆ ಹಿಡಿದ ಕನ್ನಡಿ.

೫. ಹರಿಕೃಷ್ಣಪ್ರೇಮಿ ಅವರು ಹಿಂದಿ ಭಾಷೆಯ ಹಿರಿಯ ಲೇಖಕರಲ್ಲಿ ಒಬ್ಬರು, ಹೆಸರಾಂತ ನಾಟಕಕಾರರು ಅವರು ಬರೆದ ‘ಶೀಶ್ ದಾನ್’ ಎಂಬ ಐತಿಹಾಸಿಕ ನಾಟಕದ ಕನ್ನಡ ರೂಪಾಂತರ ‘ಬಲಿದಾನ’ ಕನ್ನಡಕ್ಕೆ ರೂಪಾಂತರ ಮಾಡಿದವರು ಪ್ರಧಾನ ಗುರುದತ್

೧೮೫೭ರಲ್ಲಿ ಭಾರತದ ದೇಶದಲ್ಲಿ ನಡೆದ ಸ್ವಾತಂತ್ರ್ಯ ಸಂಬಂಧವಾದ ಹೋರಾಟವನ್ನು ಆ ದಿಕ್ಕಿನಲ್ಲಿ ಇಟ್ಟ ಮೊದಲ ಹೆಜ್ಜೆ ಎಂದು ಚರಿತ್ರಕಾರರು ಗುರುತಿಸಿದ್ದಾರೆ. ಆ ಸಂದರ್ಬದಲ್ಲಿ (ರಾಮಚಂದ್ರ ಪಾಂಡುರಂಗ) ತಾತ್ಯಾ ಟೋಪಿಯೂ ನಡೆಸಿದ ಹೋರಾಟ, ಮಾಡಿದ ಮಹಾತ್ಯಾಗ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಒಂದು ರೋಮಾಂಚಕ ಅಧ್ಯಾಯ. ಚುರುಕು ಗತಿಯಲ್ಲಿ ಭಾರತವನ್ನು ಸುತ್ತು ಹಾಕಿ ಕ್ರಾಂತಿಯ ಕಿಡಿಯನ್ನು ಬುಗಿಲೆಬ್ಬಿಸಿದ ಪುರುಷ ಸಿಂಹನಾತ. ತನ್ನ ಸೆರಗಿನಲ್ಲೆ ಸೋಲನ್ನು ಕಟ್ಟಿಕೊಂಡು ಹೋರಾಡಿದುದರಿಂದ ೧೮೫೭ರ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು.ಎಷ್ಟೇ ಅದ್ಬುತ ಪರಾಕ್ರಮಿಯಾಗಿದ್ದರೂ ನೇಣುಗಂಬವನ್ನು ಏರಬೇಕಾಯಿತು. ದೇಶ ದ್ರೋಹಿಯಾಗಲಿ, ಬಂಡುಕೋರನಾಗಲಿ ಯಾವುದೂ ಅಲ್ಲದ ಒಬ್ಬ ಶುದ್ಧ ದೇಶಭಕ್ತ ತನ್ನ ನಾಡಿಗೆ ಮಾಡಿದ ‘ಬಲಿದಾನ’ದ ಕಥೆಯನ್ನು ಹರಿಕೃಷ್ಣ ಪ್ರೇಮಿ ಅವರು ತಮ್ಮ ನಾಟಕದಲ್ಲಿ ತುಂಬಾ ಯಶಸ್ವಿಯಾಗಿ ನಿರೂಪಿಸಿದ್ದಾರೆ. ಅದರ ರೂಪಾಂತರವನ್ನು ಕನ್ನಡ ಮತ್ತು ಹಿಂದಿ ಎರಡು ಭಾಷೆಗಳಲ್ಲಿ ಪರಿಶ್ರಮ ಪಡೆದಿರುವ ಪ್ರಧಾನ ಗುರುದತ್ತ ಅವರು ತುಂಬಾ ಯಶಸ್ವಿಯಾಗಿ ಮಾಡಿರುತ್ತಾರೆ.

ಮೇಲಿನ ಅಯ್ದೂ ಪುಸ್ತಕಗಳನ್ನು ಪ್ರಕಟಿಸಿದ ಮೈಸೂರಿನ ಉಷಾಸಾಹಿತ್ಯ ಮಾಲೆಯ ಯುವಕ ರಮೇಶ್ ನಮ್ಮ ಅಭಿನಂದನೆಗೆ ಅರ್ಹರು.

* * *