ನಯಾಗರಕ್ಕೆ ಐನೂರು ಮೈಲಿ

ಎಸ್.ಆರ್. ಗೌತಮ್, ಅನುಪಮ ಪ್ರಕಾಶನ : ೭೪೧-೫೧, ಮೊದಲನೆಯ ಮುಖ್ಯ ರಸ್ತೆ ವೈಯಾಳಿಕಾವಲ್, ಬೆಂಗಳೂರು-೩.

ತಮ್ಮ ವಿದೇಶ ಪ್ರವಾಸವನ್ನು ಪ್ರವಾಸ ಕಥನವಾಗಿ ಪುಸ್ತಕ ರೂಪದಲ್ಲಿ ಈಗಾಗಲೇ ಹಲವಾರು ಜನ ಕನ್ನಡ ಲೇಖಕರು ಪ್ರಕಟಿಸಿರುತ್ತಾರೆ. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯ ಪುಸ್ತಕಗಳು ಅಮೇರಿಕದ ಪ್ರವಾಸಕ್ಕೆ ಸೇರಿವೆ. ಡಾ. ಎ.ಎನ್.ಮೂರ್ತಿರಾವ್, ಕಾಮತ್, ಶ್ರೀಧರ್ ಮೊದಲಾದವರ ಪುಸ್ತಕಗಳು ತಕ್ಷಣಕ್ಕೆ ನನ್ನ ನೆನಪಿಗೆ ಬರುತ್ತಿವೆ. ಈ ಮಾಲಿಕೆಗೆ ಸೇರುತ್ತದೆ ಇನ್ನೊಂದು ಹೊರಬಂದಿರುವ “ನಾಯಾಗರಕ್ಕೆ ಐನೂರು ಮೈಲಿ” ಎಂಬ ಹೊತ್ತಗೆ.

ಅಮೇರಿಕ ಕುರಿತ ಇದುವರೆಗೂ ಕನ್ನಡದಲ್ಲಿ ಬರೆದ ಪುಸ್ತಕಗಳಲ್ಲೂ ಒಂದೋಂದು ಬಗೆಯ ಸ್ವಾರಸ್ಯ ಆಕರ್ಷಣೆ ಇದೆ, ಇಷ್ಟೊಂದು ಪುಸ್ತಕಗಳನ್ನು ಓದಿದ ಮೇಲೆ ಇನ್ನೊಂದು ಪುಸ್ತಕ ಬರೆಯಲು ಸರಕು ಇದೆಯೇ? ಅದನ್ನು ಬರೆಯಲು ಹೊಸ ಲೇಖಕನಿಗೆ ಧೈರ್ಯ ಇದೆಯೇ? ಅದನ್ನು ಓದುವ ತಾಳ್ಮೆ ಇದೆಯೇ? ಎಂಬ ಪ್ರಶ್ನೆಗಳು ಸಹಜವಾಗಿಯೇ ಎದುರಾಗುತ್ತವೆ. ಈ ಹಿನ್ನಲೆಯಲ್ಲೆ ನಾನು “ನಯಾಗರಕ್ಕೆ ಐನೂರುಮೈಲಿ” ಎಂಬ ಪುಸ್ತಕವನ್ನೂ ಕೈಗೆತ್ತಿಕೊಂಡದ್ದು. ಆಗ ನನ್ನ ಮನಸ್ಸಿನಲ್ಲಿ ಸುಳಿದ ಭಾವನೆ -ಇವರು ಯಾರೋ ಏನೋ. ಹೆಸರು ಗೊತ್ತಿಲ್ಲ. ಇದನ್ನು ಏನು ಮಹಾ ಓದೋದು ಎನ್ನುವ ಉದಾಸೀನತೆ, ತಾತ್ಸಾರದಿಂದಲೇ ಈ ಪುಸ್ತಕವನ್ನು ಕೈಗೆತ್ತಿಕೊಂಡೆ. ಓದತೊಡಗಿದಂತೆಲ್ಲಾ ಪುಟದಿಂದ ಪುಟಕ್ಕೆ ಆಸಕ್ತಿಯನ್ನು ಉಳಿಸಿಕೊಂಡು ಮುಂದಿನದನ್ನು ಓದಿ ಮುಗಿಸುವ ಕುತೂಹಲವನ್ನು ಉದ್ದಕ್ಕೂ ಕಾಪಾಡಿಕೊಂಡ ಲೇಖಕರ ಪ್ರಯತ್ನ ಸಾರ್ಥಕವಾಗಿತ್ತು. ಇದನ್ನು ಓದಿ ಮುಗಿಸಿದ ಮೇಲೆ ನನ್ನ ಆರಂಭದ ಗ್ರಹಿಕೆ ಎಷ್ಟು ಅಪಾಯದ್ದೆಂಬುದು ಮನದಟ್ಟಾಯಿತು. “ಇದು ಶುದ್ದಾಂಗವಾಗಿ ಪ್ರವಾಸ ಕಥನವಲ್ಲ. ಅಮೇರಿಕಾದ ಪ್ರವಾಸ ಕಥನವನ್ನು ಬಹುಮಂದಿ ಬರೆದಿದ್ದಾರೆ. ಅವರಲ್ಲಿ ಅನೇಕರು ನಮ್ಮ ಸಾಹಿತ್ಯ ಲೋಕದ ಪ್ರಜ್ವಲಿಸುವ ತಾರೆಗಳು. ಇದರ ಮೇಲೆ ನಾನು ಇನ್ನು ಬರೆಯಬೇಕಾದದ್ದು ಏನಿದೆ? ಇದು ಪ್ರವಾಸ ಕಥನದ ಸಿಹಿಲೇಪ ಕೊಟ್ಟ ನನ್ನ ಅನಿಸಿಕೆಗಳು, ಅನುಭವಗಳು, ಮಾನವೀಯ ಭಾವನೆಗಳು ಪುಸ್ತಕ ರೂಪ” – ಇದು ಲೇಖಕರು ಪೀಠಿಕೆಯಲ್ಲಿ ಮಾಡಿರುವ ಅರಿಕೆ. ಪುಸ್ತಕದ ಇತಿಮಿತಿಗಳನ್ನು ಲೇಖಕರು ಅರಿತಿದ್ದಾರೆಂದು ಸ್ವಷ್ಟವಾಗುತ್ತದೆ.

ಲೇಖಕರು ತಮ್ಮ ಚಿಕ್ಕ ಮಗಳು ಅನುರಾಧಳಿಗೆ ಹೃದಯದ ಎರಡು ಶ್ವಾಸಕೋಶಗಳ ನಡುವಿನ ಭಾಗದಲ್ಲಿ ಕಾಣಿಸಿಕೊಂಡ ಸಣ್ಣ ತೂತನ್ನು ಶಸ್ತ್ರ ಚಿಕಿತ್ಸೆಯಿಂದ ಸರಿಯಾಗಿ ಮುಚ್ಚಿಸಿ ಮತ್ತೆ ಎಂದಿನ ಆರೋಗ್ಯ ಭಾಗ್ಯವನ್ನು ಎಲ್ಲ ಮಕ್ಕಳಂತೆ ಸಲಿಯುವ ಭಾಳನ್ನು ಸಂಪಾದಿಸಿಕೊಟ್ಟ ಒಟ್ಟು ಪ್ರಯತ್ನದ ನಿರೂಪಣೆಯೇ ಈ ಪುಸ್ತಕದ ತಿರುಳು. ಆದರೆ ಸಾವಿನ ದವಡೆಯಲ್ಲಿದ್ದ ಆರು ವರ್ಷದ ಮಗು ‘ಅನು’ವನ್ನು ಅಮೇರಕದಲ್ಲಿ ವಿಶ್ವವಿಖ್ಯಾತ ಹೃದಯ ಚಿಕತ್ಸಕ ವೈದ್ಯರೊಬ್ಬರು ಉಳಿಸಿ, ಬದುಕಿಸಿದ್ದರ ನಿರೂಪಣೆಯು ತುಂಬಾ ರಸವತ್ತಾಗಿ ಮೂಡಿಬಂದಿದೆ. ಬೆಂಗಳೂರಿನಿಂದ ಬಾಂಬೆಯ ಮೂಲಕ ನ್ಯೂಹೇವನ್ ಗೆ ಮತ್ತೆ ಅಲ್ಲಿಂದ ಸುಖವಾಗಿ ಮರಳಿ ಮನೆಗೆ -ಇದಿಷ್ಟೂ ಒಂಬತ್ತು ಅಧ್ಯಾಯಗಳಲ್ಲಿ ೧೫೦ ಪುಟಗಳಲ್ಲಿ ಮನಸ್ಸಿಗೆ ಮುಟ್ಟುವಂತೆ ಬೆರೆತುಕೊಂಡಿದೆ. ಎಲ್ಲ ಘಟನೆ ಕ್ರಿಯೆಗಳನ್ನು ಕಣ್ಣಿಗೆ ಕಟ್ಟುವಂತೆ ಲೀಲಾಜಾಲವಾಗಿ ಬರೆಯಲಾಗಿದೆ. ಈ ಪ್ರವಾಸ ಕಥನದ ಓದುಗರಿಗೆ ‘ಅನು’ (ರಾಧ) ಆರಂಭದಲ್ಲಿ ಅಪರಿಚಿತಳು ಇರಬಹುದು. ಕಡೆಕಡೆಗೆ ಇವಳು ಕೇವಲ ಲೇಖಕರ ಮಗಳು ಆಗಿರುವುದಿಲ್ಲ. ಓದುಗರ ಪ್ರೀತಿಯ ಮಗಳು ಆಗಿರುತ್ತಾಳೆ. ಇವರ ನೋವು ನಲಿವುಗಳಿಲ್ಲಿ ನಾವೂ ಪಾಲಗಾರರಾಗಿರುತ್ತೇವೆ. ಇದೇ ಲೇಖಕರ ಈ ಪು ಸ್ತಕದ ಕೀಲಿಕೈ “ನಾನು ಐಆವ ಕಾರಣಕ್ಕಾಗಿ ಅಮೆರಿಕಕ್ಕೆ ಹೋಗಬೇಕಾಗಿ ಬಂದಿತೋ, ಅಂಥವೇ ಕಾರಣಕ್ಕಾಗಿ ಮನೋವ್ಯಥೆ, ಅನಿಶ್ಚಯತೆ, ಅಸಹಯಾಯಕತೆ, ಅಂಜಿಕೆಗಳಿಗೆ ಸಿಕ್ಕಿ ಒದ್ದಾಡುತ್ತಿದ್ದ ಮೂರು ನಾಲ್ಕು ತಂದೆ ತಾಯಿಯರ ಬವಣೆಯನ್ನು ಕಂಡು, ಸ್ವಾನುಭವವನ್ನು ಪುಸ್ತಕ ರೂಪದಲ್ಲಿ ಬರೆದರೆ ಅಂಥ ತಾಯಿ ಒಂದು ನೈತಿಕ ಧೈರ್ಯವನ್ನು ತಂದುಕೊಡಬಹುದೇನೊ ಎಂಬ ಒಂದು ಆಸೆ, ಆಶಯ ನನ್ನ ನಿರ್ಧಾರ ಕಾರ್ಯರೂಪಕ್ಕೆ ಬರಲು ಕಾರಣ” ಎಂಬ ಲೇಖಕರ ಅಪೇಕ್ಷೆ ಸಾಕಷ್ಟು ಈಡೇರಿದೆ. ಇದನ್ನು ಓದುತ್ತಾ ಓದುತ್ತಾ ಅರ್ದ್ರತರವಾಗುವ ಓದುಗರ ಹೃದಯ ತಮ್ಮ ಮಗುವಿಗೆ ಏನಾದರೂ ಹೀಗೇ ಅದರ ಇದೇ ವೈದ್ಯರ ಬಳಿ ತಕ್ಷಣ ತಪ್ಪದೆ ಕರೆದುಕೊಂಡು ಹೋಗಿ ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ಬಯಸುತ್ತದೆ. ಈ ಕೃತಿಕಾರರ ಬರವಣಿಗೆ ಮತ್ತು ಅದರ ಹಿಂದಿನ ಮಾನವೀಯ ಆಶಯ ಯಶಸ್ವಿಯಾಗಿದೆಯೆಂಬುದಕ್ಕೆ ಇದೇ ದಿವ್ಯ ಸಾಕ್ಷಿಯಾಗುತ್ತದೆ.

ಗೌತಮ್ ಅವರಿಗೆ ಲೇಖಕನಿಗೆ ಬೇಕಾದ ಭಾಷಾ ಸಂಪತ್ತಿನ ಭಾವಶ್ರೀ ಇದೆ. ಬದುಕಿನ ರಹಸ್ಯ ಸ್ಪೋಟಿಸಬೇಕೆಂಬ ಉತ್ಸಾಹದ ಬಂಡವಾಳವಿದೆ. ಅವರದು ಮಾನವೀಯತೆಗೆ ಸುಲಭವಾಗಿ ಸ್ಪಂದಿಸುವ ಮುಗ್ದಮನಸ್ಸು. ಬದುಕನ್ನು ಒಬ್ಬ ಆದರ್ಶಜೀವಿ ಕಾಣುವ ರೀತಿಯಿಂದ ಇಲ್ಲಿನ ಭಾಷಾ ನಡಿಗೆ ಇದೆ. ಉದಾಹರಣೆಯಾಗಿ ಈ ವಾಕ್ಯಗಳನ್ನು ನೋಡಬಹುದು.

“ಜಯನಗರ ಎಲ್ಲಿದೆ, ಏತಕ್ಕೆ ಪ್ರಸಿದ್ದ ಎಂದು ಯಾರಾದರೂ ಕೇಳಿದರೆ ಇದು ಬೆಂಗಳೂರಿನ ದಕ್ಷಿಣದಲ್ಲಿದೆ, ಆಗ್ನೇಯ ಏಷ್ಯಾದಲ್ಲಿ ಅತ್ಯಂತ ದೊಡ್ಡದಾದ, ಬಹಳ ಚೆನ್ನಾದ ವಿನ್ಯಾಸವುಳ್ಳ, ಅತಿ ಸುಂದರವಾದ ಹಾಗೂ ಅತಿ ಬುದ್ದಿವಂತ ಸೊಳ್ಳೆಗಳು ವಾಸಿಸುತ್ತಿರುವ ಬಡಾವಣೆ ಎಂದು ಧಾರಾಳವಾಗಿ ಹೇಳಬಹುದು. ಬೆಟ್ಟಕ್ಕೆ ಕಲ್ಲು ಹೊರಬಹುದು, ಸಪ್ತಸಾಗರಗಳ ಉಪ್ಪು ನೀರನ್ನು ಕುಡಿಯಬಹುದು, ನ್ಯೂಕ್ಯಾಸಲ್ಲಿಗೆ ಕಲ್ಲಿದ್ದಲನ್ನು ತೆಗೆದುಕೊಂಡು ಹೋಗಬಹುದು. ಸಹರಾ ಮರುಭೂಮಿಯಲ್ಲಿ ಮರಳನ್ನು ಮಾರಬಹುದು, ಇಲ್ಲದಿದ್ದರೆ ಆರ್ಕ್‌ಟಿಕ್‌ನಲ್ಲಿ ರೆಫ್ರಿಜಿರೇಟರನ್ನೂ ಮಾರಬಹುದು, ಆದರೆ ಈ ಜಯನಗರದ (ಜಯನಗರವೋ ಅಥವಾ ಸೊಳ್ಳೆಗಳ ಮುಂದೆ ಸೋಲನ್ನು ಅನುಭವಿಸಿದ ಅಪಜಯನಗರವೋ!) ಖದೀಮ ಸೊಳ್ಳೆಗಳಿಗೆ ಡಿಡಿಟಿಯನ್ನು ಕುಡಿಸಲು ಸಾಧ್ಯವೆ. ಈ ಸೊಳ್ಳೆಗಳು ಒಂದು ರಾತ್ರಿಯಲ್ಲಿ ಹೀರುವ ರಕ್ತವನ್ನೆಲ್ಲಾ ಒಟ್ಟು ಗೂಡಿಸಿದರೆ ಬೆಂಗಳೂರಿನ ಆಸ್ಪತ್ರೆಗಳು, ನರ‍್ಸಿಂಗ್ ಹೋಮ್‌ಗಳು ಇವುಗಳಲ್ಲಿ ಇರುವ ಎಲ್ಲಾ ರೋಗಿಗಳಿಗೂ ರಕ್ತದಾನ ಮಾಡಬಹುದು.

“ಸೊಳ್ಳೆಗಳು, ಜಿರಲೆಗಳು, ಸಾವುಗಳು, ಆಕ್ರಂದನ, ಕೆಂಪುಶಾಲು ಮುಚ್ಚಿ ಸ್ಟ್ರೆಚರ್ ಮೇಲೆ ಮಲಗಿಸಿ ತೆಗೆದುಕೊಂಡು ಹೋಗುತ್ತಿದ್ದ ಬೋಳುತಲೆಯ ರೋಗಿಗಳು – ಈ ಪರಿಸರದಲ್ಲಿ ಒಂದು ರಾತ್ರಿ ಕಳೆಯುವುದು ನನಗೆ ಇಷ್ಟು ದುರ್ಭರವಾಗಿರಬೇಕಾದರೆ, ಇಲ್ಲಿ ಕೆಲಸ ಮಾಡುವ ಡಾಕ್ಟರುಗಳು, ದಾದಿಯವರು, ವಾಡ್ ಬಾಯ್ ಗಳು ವರ್ಷದ ಮೂನ್ನೂರ ಐವತ್ತಾರು ದಿನಗಳೂ ಈ ಪರಿಸರದಲ್ಲಿಯೇ ತಮ್ಮ ಅರ್ಧ ಜೀವನವನ್ನು ಕಳೆಯುತ್ತಾರಲ್ಲ. ಅವರ ಚಿತ್ರಸ್ಥೈರ್ಯ ಎಂತಹುದು ಎಂದು ಮನಸ್ಸಿನಲ್ಲೇ ಅವರುಗಳಿಗೆ ನಮನಮಾಡಿದೆ.”

“ಶಸ್ತ್ರಕ್ರಿಯೆ ಆದ ಮೇಲೆ ಈಗ ಮೂರು ಗಂಟೆ, ಅನುರಾಧಳನ್ನು ಮೊದಲು ಬಾರಿಗೆ ನೋಡುವ ಸಮಯ. ಲಿಪ್ಟಿನಲ್ಲಿ ಮೊದಲನೇ ಮಹಡಿಗೆ ಇಳಿದು ‘ರಿಕವರಿ ರೂಮಿಗೆ’ಗೆ (ಚೇತರಿಸಿಕೊಳ್ಳುವ ಕೋಣೆ) ಹೋದೆವು. ಅಲ್ಲಿದ್ದ ನರ್ಸ್ ಗೆ ನಮ್ಮನ್ನು ನೋಡುತ್ತಲೇ ನಾವು ಅನುವಿನ ಬಂಧುಗಳು ಎಂದು ಗೊತ್ತಾಯಿತು. ನಮಗೆ ನಮ್ಮ ಬಟ್ಟೆಗಳ ಮೇಲೆ ಹಾಕಿಕೊಳ್ಳಲು ಎರಡು ರಕ್ಷಣಾ ಕವಚಗಳನ್ನು ಕೊಟ್ಟಳು. ಈ ರಕ್ಷಣೆಗೆ ನಮಗಲ್ಲ. ಹೊರಗಿನಿಂದ ಬಂದವರ ಬಟ್ಟೆಗಳ ಮೇಲಿನ ಸೂಕ್ಷ್ಮಾಣುಕ್ರಿಮಿಗಳಿಂದ ಒಳಗಡೆ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗೆ ಸೋಂಕು ತಗುಲದಿರಲು ಮನ್ನೆಚ್ಚರಿಕೆ. ನಾವು ಚಿಕ್ಕವರಿದ್ದಾಗ ನಮ್ಮ ಅಜ್ಜಿ ‘ಮಡಿ’ ಮಾಡುತ್ತಿದ್ದ ಉದ್ದೇಶ ಎಷ್ಟೋ ವರ್ಷಗಳಾದ ಮೇಲೆ ನಮಗೆ ಹೊರನಾಡಿನ ಆಸ್ಪತ್ರೆಯೊಂದರಲ್ಲಿ ಅರ್ಥವಾಯಿತು. ಶಾಲೆಯಿಂದ ಬಂದ ಕೂಡಲೇ ಶಾಲೆಗೆ ಹಾಕಿಕೊಂಡು ಹೋಗಿದ್ದ ಬಟ್ಟೆಗಳನ್ನು ಬಿಚ್ಚಿ. ಬೇರೆ ಬಟ್ಟೆಯನ್ನು ಹಾಕಿಕೊಂಡು, ಕೈಕಾಲು ಮುಖ ತೊಳೆದು ತಿಂಡಿ ತಿನ್ನಲು ಅಡಿಗೆ ಮನೆಗೆ ಹೋಗಬೇಕು. ಹಸಿವಿನ ಆತುರದಲ್ಲಿರುತ್ತಿದ್ದ ನಮಗೆ ಈ ‘ಕಾಯಿದೆ’ಯಿಂದ ಬಹು ಕಷ್ಟವೆನಿಸುತ್ತ ‘ಹೋಗಜ್ಜಿ’ ಎಂದು ಗೊಣಗುತ್ತಿದ್ದೆವು ‘ಹೆಡ್ಡರಾದರೂ ದೊಡ್ಡವರು ವಾಸಿ’ ಎಂದು ಅಜ್ಜಿ ನಮ್ಮನ್ನು ಸುಮ್ಮನಾಗಿಸುತ್ತಿದ್ದರು. ನಾನು ನನ್ನ ಬಟ್ಟೆಯ ಮೇಲೆ ಹಾಕಿಕೊಂಡಿದ್ದ ಆ ಬಿಳಿಯ ರಕ್ಷಣಾ ಕವಚವನ್ನು ನೋಡಿ “ಸ್ವರ್ಗದಲ್ಲಿರುವ ನನ್ನಜ್ಜಿ ಬಿದ್ದು ಬಿದ್ದು ನಗುತ್ತಿರಬೇಕು” ಎಂದುಕೊಂಡೆ.”

“ನಮ್ಮ ವಾರ್ಡಿನ ಎದುರುಗಡೆ ಇದ್ದ ಒಂದು ಕೋಣೆಯಲ್ಲಿ ಟೇಬಲ್ ಮೇಲೆ ರೋಗಿಯಿಂದ ರಕ್ತವನ್ನು ತೆಗೆದುಕೊಳ್ಳಲು ಬೇಕಾದ ಉಪಕರಣವು ಇದ್ದವು. ಅನುರಾಧಳನ್ನು ಆ ಕೋಣೆಗೆ ಕರೆದುಕಂಡು ಹೋಗಿ ಟೇಬಲ್ಲಿನ ಮೇಲೆ ಎತ್ತಿ ಮಲಗಿಸಿದೆ. ಪಿಚಕಾರಿಗೆ ಸೂಜಿಯನ್ನು ಸಿಕ್ಕಿಸಿ ರಕ್ತವನ್ನು ಸೆಳೆದುಕೊಂಡ. ರಕ್ತವನ್ನು ತೆಗೆದುಕೊಂಡಾದ ಮೇಲೆ ಸೂಜಿಯನ್ನು ಸಿಕ್ಕಿಸಿ ರಕ್ತವನ್ನು ಪಿಚಕಾರಿಯಿಂದ ಬೇರ್ಪಡಿಸಿ, ಪ್ಲಯರ್ಸ್ ಗಳಿಂದ ಸೂಜಿಯನ್ನು ಎರಡು ತುಂಡುಗಳಾಗಿ ಕತ್ತರಿಸಿ ಕಸದ ಬುಟ್ಟಿಯಲ್ಲಿ ಬಿಸಾಡಿದ. “ಸೂಜಿಯನ್ನು ಹಾಗೇಕೆ ತುಂಡುಮಾಡಿ ಬಿಸಾಡಿದೆ?” ಎಂದು ನಾಣು ಕುತೂಹಲವನ್ನು ವ್ಯಕ್ತಪಡಿಸಿದೆ. “ಈ ಸೂಜಿಗಳು ಮಾದಕ ವ್ಯಸನಿಗಳ ಕೈಗೆ ಸಿಕ್ಕಿದರೆ, ವಿಷವನ್ನು ತಮ್ಮ ಮೈಯಿಗೆ ಚುಚ್ಚಿಕೊಳ್ಳಲುಅವರಿಗೆ ಇನ್ನೊಂದು ವರಪ್ರದಾನವಾಗುತ್ತದೆ. ಈ ಆಸ್ಪತ್ರೆ ಅವರಿಗೆ ಅಂಥ ವರವನ್ನು ಕೊಡಲು ಎಂದಿಗೂ ಸಿದ್ದವಿಲ್ಲ” ಎಂದು ಉತ್ತರಿಸಿದ. ಈ ಪರಮಾನಂದನ ಮರೀಚಿಕೆಯನ್ನು ಅರಸಿಕೊಂಡು ಹೋಗುವವರು ಏನೆಲ್ಲ ಸಾಧನೆಗಳ ಶರಣು ಹೋಗುತ್ತಾರೆ. ಶ್ರೀಮಂತರಾಷ್ಟ್ರದ ಶ್ರೀಮಂತಿಕೆಯ ಮಧ್ಯದಲ್ಲಿ ಆತ್ಮ ನಾಶವೇ ಮೋಕ್ಷಕ್ಕೆ ಮಾರ್ಗವೆಂದು ತಿಳಿದವರ ಬೌದ್ಧಿಕ ಬಡತನ! ಎಂಥ ವಿಪರ‍್ಯಾಸ!”

ಅತಿ ಭಾವುಕತೆ ಈ ಬರವಣಿಗೆಯ ಉದ್ದಕ್ಕೂ ಅವರಿಸಿದೆ. ಆದರೆ ಬದುಕನ್ನು ಮತ್ತು ಮನುಷ್ಯರ ನಡೆನುಡಿಗಳನ್ನು ಅಷ್ಟೇ ಎಚ್ಚರಿಕೆಯಿಂದ ನೋಡುವ ವಿಸ್ಮಯದ, ಒಮ್ಮೊಮ್ಮೆ ಪೂರ್ವಾಭಿಪ್ರಾಯಗಳಿಂದ ಬಿಡಿಸಿಕೊಂಡ ಕುತೂಹಲ ಕಣ್ಣುಗಳು ಇವೆ. ಪಳಗಿದ ಲೇಖಕರು ತೋರುವ ಕೈಚಳಕ ವರಸೆ ಇಲ್ಲಿಲ್ಲ ಓದುಗನಿಗೆ ಯಾವ ಭಾಗ ರುಚಿಸಬಹುದೆಂಬುದನ್ನು ನಾಡಿ ಹಿಡಿದು ಅರಿತು. ಅಂತಹ ಭಾಗವನ್ನು ಹಿಗ್ಗಿಸುವ ಲೆಕ್ಕಾಚಾರದ ಬರವಣಿಗೆಯೂ ಇದಲ್ಲ ಕನ್ನಡ ಭಾಷೆಯ ಬೆಡಗನ್ನು ಸಂದರ್ಭೋಚಿತವಾಗಿ ಸಹಜವಾಗಿ ಬಳಸಿಕೊಂಡಿರುವುದು ಈ ಪ್ರವಾಸ ಕಥನದ ವಿಶಿಷ್ಟತೆಗಳಲ್ಲಿ ಒಂದಾಗಿದೆ. ಒಂದು ಕಡೆ ಅವರು ಹೇಗೆ ಬರೆಯುತ್ತಾರೆ :

“ಮೈಸೂರಾಗಲಿ, ಮದರಾಸಾಗಲೀ, ವಾಟರ್ ಪೋರ್ಡ್ ಆಗಲೀ ಹೆಂಡಂದಿರು ಹೆಂಡತಿಯರೇ, ಗಂಡಂದಿರು, ಗಂಡಂದಿರೇ! ಸ್ವಭಾವ ಜನ್ಯವಾದ ಬುದ್ದಿ ಭೌಗೋಳಿಕ ಎಲ್ಲೆಗಳಿಂದ ಬದಲಾಗುವುದಿಲ್ಲ. ಒಗ್ಗರಣೆ ಹಾಕುವುದಕ್ಕೆ ಎಣ್ಣೆ ಕಾಯುತ್ತಿರಬೇಕು, ಕಾಫಿ ಮಾಡುವುದಕ್ಕೆ ನೀರು ಕುದಿಯುತ್ತರಿಬೇಕು, ಗೃಹಿಣಿಗೆ ಸಾಸಿವೆಯೋ, ಕಾಫಿಪುಡೊಯೋ ಮುಗಿದು ಹೋಗಿರುವುದು ಅಲ್ಲಿಯವರೆಗೆ ನೆನಪಿಗೆ ಬರುವುದಿಲ್ಲ. ಹೆಂಗಸರ ಸ್ವಭಾವ ಹೀಗೆಯೇ ಅಲ್ಲವೇ? ಹೋಗಲಿ ಗೊಣಗದೆ ತಂದುಕೊಡೋಣ ಎಂದು ಗಂಡನಿಗೂ ಅನ್ನಿಸುವುದಿಲ್ಲ. ಕಾರಣ ಹುಡುಕುವುದು ಬಹು ಸುಲಭ – ನೀವು ಆಗಲೇ ಊಹಿಸಿಬಿಟ್ಟಿದ್ದೀರಿ ಗೊಣಗುವುದು ಗಂಡನ ಸ್ವಭಾವ!”

“ಅನುರಾಧಳಿಗೆ ಸಹ ಈ ಯಂತ್ರದ ಪರಿಚಯವಾಗಿ ಬಿಟ್ಟಿತ್ತು. ಇಪ್ಪತ್ತು ಸೆಂಟ್ ನಾಣ್ಯವನ್ನು ನನ್ನಿಂದ ಬೇಡಿ, ಅಲೂಗಡ್ಡೆಯ ಚಿಪ್ಸ್ ಪೊಟ್ಟಣವನ್ನು ಇಟ್ಟುಕೊಂಡು ತಿನ್ನುತ್ತಿದ್ದಾಗ ಅವಳ ಪಕ್ಕದ ಮಂಚದಲ್ಲಿದ್ದ ಮಗುವಿನ ತಾಯಿಯೊಬ್ಬಳು ನನ್ನನ್ನು ನೋಡಿ, “ಇದು ಅವಳಿಗೆ ಬಹು ಅಪೂರ್ವವಾದ ತಿಂಡಿಯಾಗಿರಬೇಕು. ಅಲ್ಲವೇ” ಎಂದು ಕೇಳಿದಳು, ಪಾಪ, ಆ ‘ಕೋಪ ಮಂಡೂಕದ’ ಪ್ರಶ್ನೆಗೆ ನಾವೇಕೆ ಕೋಪ ಮಾಡಿಕೊಳ್ಳಬೇಕು. ನಮ್ಮಮ್ಮ ನಮ್ಮ ಊರಿನಲ್ಲಿ ಮಾಡುವ ತುಪ್ಪದಲ್ಲಿ ಕರೆದು ಉಪ್ಪು ಖಾರ ಹಾಕಿದ ಅಲೂಗಡ್ಡೆಯ ಉಪ್ಪೇರಿಯನ್ನೋ ಬಾಳೆಕಾಯಿಯ ಉಪ್ಪೇರಿಯನ್ನೋ ತಿನ್ನುವ ಭಾಗ್ಯ ಅವಳಿಗೆಲ್ಲಿ ಬರಬೇಕು. ತಿಂದಿದ್ದರೆ, ಆ ಉಪ್ಪೇರಿಗಳು ಅವಳನ್ನು ತಾರಸಿಯಷ್ಟು ಎತ್ತರಕ್ಕೆ ನೆಗೆಯುವಂತೆ ಮಾಡಿರುತ್ತಿದ್ದವು. “ಇಲ್ಲ ಬೆಂಗಳೂರಿನಲ್ಲಿ ಅವಳಿಗೆ ಇದು ಧಾರಾಳವಾಗಿ ಸಿಗುತ್ತದೆ. ಆದಿದ್ದರೆ ಅವಳಿಗೆ ಊಟವೇ ಬೇಕಿಲ್ಲ” ಎಂದು ನಾಣು ಹೇಳಿದೆ. “ಹಾಗಾ ಹೌದು!” ಎಂದು ಆಕೆ ಹುಬ್ಬೇರಿಸುತ್ತಾ ಉದ್ಗಾರ ತೆಗೆದರು. ತೆರೆದ ಹೃದಯದ ಚಿಕಿತ್ಸೆಯಲ್ಲಿ ನೀವು ಪರಿಣಿತರಬಹುದು. ಆದರೆ ಮೈಸೂರಿನ ಶ್ರೀಮದ್ ಬೇಳೆಹುಳಿ, ಅಂಬೋಡೆ, ಮಜ್ಜಿಗೆ ಹುಳಿ ಇತ್ಯಾದಿ ಅಡುಗೆಯಲ್ಲಿ ನಮ್ಮ ಪರಿಣತಿ, ಅದನ್ನು ಉಂಡವರ ಹೃದಯವನ್ನು ತೆರೆದು ಅಲ್ಲಿ ಸ್ಥರವಾಗಿ ನೆಲೆಸಬಹುದು ಎಂಬುದು ನಿನಗೇನು ಗೊತ್ತು ಎಂದು ನಾನು ಸಮಾಧಾನಪಟ್ಟುಕೊಂಡೆ!”

ಹೀಗೆ ಇನ್ನೂ ಎಷ್ಟೊ ವಾಕ್ಯಗಳನ್ನು ಪ್ಯಾರಾಗಳನ್ನು ಈ ಪುಸ್ತಕದಿಂದ ಉದಾಹರಿಸಬಹುದು. ಇವರು ಕನ್ನಡದ ಇಂಗ್ಲಿಷಿನ ಗಾದೆಗಳನ್ನು ಸಂದರ್ಭೋಚಿತವಾಗಿ ಪವಣಿಸುವ ಸಾಲುಗಳನ್ನು ಉಲ್ಲೇಖಿಸಬಹುದು. ಪ್ರಾಣ ಭಿಕ್ಷೆ ಅಥವಾ ಈ ಮಾತನ್ನು ಇನ್ನೂ ಸರಳಗೊಳಿಸಿ ಬೇಳುವುದಾದರೆ ಪ್ರಾಣ ರಕ್ಷಣೆಗಾಗಿ ನಡೆಸುವ ಜೀವಯಾತ್ರೆಯ ಈ ಕಥನದಲ್ಲಿ ಗುಣದೋಷ ಎರಡೂ ಇವೆ. ಯಾವ ಪುಸ್ತಕದಲ್ಲಿ ತಾನೆ ಇದು ಇರುವುದಿಲ್ಲ! ಲೇಖಕರ ಸೋಲು ಗೆಲುವುಗಳನ್ನು ಕಲೆಹಾಕಿ ಪಟ್ಟಿ ಮಾಡುವುದನ್ನು ನನ್ನ ಉದ್ದೇಶವಲ್ಲ.ತಾವು ಕಂಡ ವ್ಯಕ್ತಿಗಳನ್ನು ಪಡೆದ ಅನುಭವಗಳನ್ನು ಲೇಖಕರು, ದಾಖಲಿಸುವ ರೀತಿ ಮಾತ್ರ ಪ್ರಿಯವಾಗುತ್ತದೆ. ಹಾಗೆ ಬಂದು ಹೀಗೆ ಹೋಗುವ ಸಣ್ಣ ಪಾತ್ರಗಳಾದ ಮೈಲಾರಿ, ಸರ್ದಾರ್ ಜಿ. ವೆಂಕಟೇಶ್ ಮೊದಲಾದವರೂ ಕೂಡ ನಮ್ಮ ಗಮನ ಸೆಳೆಯುತ್ತಾರೆ.

ಈ ಪುಸ್ತಕದ ಕಡೆ ಪ್ಯಾರಾ ಹೀಗಿದೆ :- “ಅನುರಾಧ ಗುಣವಾಗಿ ಹಿಂದಿರುಗಿ ಬಂದುದನ್ನು ಕೇಳಿ ಸುನೀತಳ ತಂದೆ ತಾಯಿಗಳಿಗೂ ಧೈರ್ಯ ಬಂದಿತು. ಅವಳಿಗೆ ಇದ್ದ ದೋಷ ಬಹು ತೊಡಕಿನದಾದ್ದರಿಂದ ಡಾ|| ಕೂಲಿಯವರ ಕೂಡ ನಾನೇ ಪತ್ರವ್ಯವಹಾರ ಮಾಡಿ ಸುನೀತಳಿಗೆ ಶಸ್ತ್ರಕ್ರಿಯೆ ಮಾಡಲು ಒಪ್ಪಿಗೆ ದೊರಕಿಸಿಕೊಂಡೆ. ಅವರು ಅದೇ ವರ್ಷ ಜೂನ್-ಜುಲೈ ತಿಂಗಳಿನಲ್ಲಿ ಅಮೇರಿಕಕ್ಕೆ ಹೋದರು. ಶಸ್ತ್ರಕ್ರಿಯೆ ಜಯಪ್ರದವಾಯಿತು. ಸುನೀತ ಈಗ ದೃಷ್ಟಿತಾಗುವ ಹಾಗೆ ಇದ್ದಾಳೆ”.

ನಿಜ ಲೇಖಕರ ಮಗಳು ಬದುಕಿದಳು. ಅದರಿಂದ ಧೈರ್ಯಗೊಂಡ ಶಸ್ತ್ರಚಿಕತ್ಸೆ ಮಾಡಿಸಿಕೊಂಡ ಸುನೀತಾಳೂ ಪುನರ್ ಜನ್ಮ ಪಡೆದು ದೃಷ್ಟಿತಾಗುವ ಹಾಗೆ ಇದ್ದಾಳೆ. ಲೇಖಕರ ತೀರ್ತಿಯಾಗಿ ‘ನಯಾಗರಕ್ಕೆ ಐನೂರು ಮೈಲಿ’ ಕೂಡ ಜಯಪ್ರದವಾಗಿದೆ, ದೃಷ್ಟಿತಾಗುವ ಹಾಗೆಯೇ ಇದೆ.

* * *