ಇಂದ್ರದೇವರು ಮೊನ್ನೆ ಮಾಡಿ ಟೆಲಿಫೋನು
ಕೇಳಿದನು, ದೇಸಾಯಿ, ಹೇಗಿದ್ದಿ ನೀನು?
ನನ್ನ ರಂಭೆಗ ನಿನ್ನ ಚುಟಕಗಳ ಹುಚ್ಚು
ಪ್ರತಿ ಕಳಿಸಿ ಅದು ನನ್ನ ಲೆಕ್ಕಕೆ ಹಚ್ಚು

ಮೊನ್ನೆ ಮೊನ್ನೆ ತಾನೆ ತನ್ನ ರಂಭೆ ಬಯಸಿದ ಚುಟಕಗಳನ್ನು ತರಿಸಿಕೊಂಡು ಆರೋಗ್ಯವನ್ನು ಟೆಲಿಪೋನಿನಲ್ಲಿ ವಿಚಾರಿಸಿಕೊಂಡ ಇಂದ್ರದೇವನು ದಿನಕರ ದೇಸಾಯಿಯವರು ಇಷ್ಟು ಬೇಗ ಅಲ್ಲಿಗೇ ಬರುವರೆಂದು ನಿರೀಕ್ಷಿಸಿರಲಿಕ್ಕಿಲ್ಲ. ಸಾವು ಬರುವುದೇ ಹೀಗೆ.

ಕಾರವಾದ ಜಿಲ್ಲೆಯಲ್ಲಿ ಹನ್ಣೂ ಹನ್ಣು ಮುದಕನನ್ನು ಕೇಳಿ, ಚಿಕ್ಕ ಬಾಲಕನನ್ನು ಮಾತಾಡಿಸಿ. ರೈತ ಕಾರ್ಮಿಕ ಇಲ್ಲವೇ ಹಾಲಕ್ಕೆ ಆದಿವಾಸಿ ಅಥವಾ ವಿದ್ಯಾವಂತ-ದಾರಿಯಲ್ಲಿ ಹೋಗುವ ತಾರನ್ನೇ ಪ್ರಶ್ನಿಸಿ ಅವರು ದಿನಕರ ದೇಸಾಯಿಯವರ ಬಗೆಗೆ ಮಾಹಿತಿ ಕೊಡುತ್ತಾರೆ, ಶ್ರಮ ಜೀವಿಗಳ ವಕ್ತಾರರಾಗಿ ಅವರು ಅಯವತ್ತು ವರ್ಷ ನಡೆಸಿದ ಪ್ರಾಮಾಣಿಕ ಪ್ರಯತ್ನ ಕುರಿತು ಪರಿಚಯಿಸುತ್ತಾರೆ. ಆತ್ಮೀಯವಾಗಿ ಆನಂದವಾಗಿ ವಿವರಗಳನ್ನು ಒದಗಿಸುತ್ತಾರೆ. ಅಷ್ಟರ ಮಟ್ಟಿಗೆ ಅವರ ಬೇರುಗಳು ಜಿಲ್ಲೆಯ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆರೆತು ಅಳವಾಗಿ ಭೇರು ಬಿಟ್ಟಿವೆ. ಸಾಹಿತ್ಯ ರಚನೆ ಅವರ ಎರಡನೆಯ ಉಪವಸ್ತು ಸಾಮಾಜಿಕ ಸುಧಾರಣೆಯೇ ಅವರ ಪ್ರಥಮ ಆಯ್ಕೆ, ಜನತೆಯ ಕಲ್ಯಾಣ ಪ್ರಧಾನ, ಬರವಣಿಗೆ ಗೌಣ. ಅವರ ಒಟ್ಟು ವ್ಯಕ್ತಿತ್ವದಲ್ಲಿ ಮೂರು ಮಜಲುಗಳನ್ನು ಗುರುತಿಸಬಹುದು.

ಒಂದು : ಅಲಗೇರಿ – ಅಂಕೋಲೆಯಿಂದ ಮೈಸೂರು – ಮುಂಬಯಿಯವರೆಗೆ ಅವರ ವಿದ್ಯಾರ್ಥಿ ಜೀವನ ನಡೆದು ಬಂದ ದಾರಿ ಸರಳವಾಗಿತ್ತು. ಬಿ. ಎ. (ಕ್ಯಾಂಡಿ ಚಿನ್ನದ ಪದಕ). ಎಂ. ಎ. (೧೯೩೩, ಸಂತ ಝೇವಿರ ಬೆಳ್ಳಿ ಪದಕ), ಎಲ್.ಎಲ್.ಬಿ (೧೯೩೪), ಭಾರತ ಸೇವಕ ಸಮಾಜದ ಸದಸ್ಯ (೧೯೩೫) – ಇದು ಸರಳ ರೇಖೆಯಂತೆ ನೇರವಾಗಿ ನಡೆಯಿತು. ಭಾರತ ಸೇವಕ ಸಮಾಜದ ಅಜೀವ ಕಾರ್ಯಕರ್ತರಾಗಿ ನೊಂದಾಯಿಸಿಕೊಂಡು ಕಡೆಗೆ ಅದರ ಮುಂಬಯಿ ಶಾಖೆಗೆ ಸಾಯುವ ಗಳಿಗೆಯ ತನಕ ಅಧ್ಯಕ್ಷರಾಗಿದ್ದರು. ಅವರ ಒಟ್ಟು ಬದುಕು ಇದಿಷ್ಟೇ ಆಗಿದ್ದರೆ ಇದರಲ್ಲಿ ಯಾವ ವಿಶೇಷವೂ ಇರುತ್ತಿರಲಿಲ್ಲ. ಆದರೆ ದಿನಕರ ದೇಸಾಯಿಯವರ ಸಿದ್ಧಿ ಸಾಧನೆಗಳು ಉದ್ದುದ್ದನಾಗಿವೆ, ನಾನೇರಿದೆತ್ತರಕೆ ನೀನೇರಬಲ್ಲೆಯಾ ಎಂದು ಕೇಳಿ ಕೆಣಕುವಷ್ಟಿವೆ.

ಎರಡು : ಸಾಹಿತ್ಯ ದೇಸಾಯಿಯವರ ಎರಡನೇಯ ಪ್ರೇಮಕ್ಕೆ ಪಾತ್ರವಾಗಿತ್ತೆಂದರೂ ಅಲ್ಲಿ ಅವರು ನಡೆಸಿದ ಪ್ರಯತ್ನಗಳನ್ನು ಬೀಳುಗಳೆಯುವಂತಿಲ್ಲ. ಕವನ ಸಂಗ್ರಹ, ಮಕ್ಕಳ ಗೀತೆಗಳ (ಮುಂಬಯಿ ಸರಕಾರ ಬಹುಮಾನಿತ ಕೃತಿ), ಮಕ್ಕಳ ಮದ್ಯ, ಮಕ್ಕಳ ಪದಗಳು ಹೂಗೊಂಚಲು – ಇವು ಅವರ ಕಾವ್ಯ ಕುಸುಮಗಳೂ, ಅವರ ಗಟ್ಟಿ ಕೊಡುಗೆ ನಾ ಕಂಡ ಪಡುವಣ. ಇದು ಇಂದಿಗೂ ಒಂದು ಉತ್ತಮ ಪ್ರವಾಸ ಕಥನ. ಪ್ರಪಂಚದ ಕೆಲಸಗಾರ ಎಂಬ ಪುಸ್ತಕವನ್ನೂ ಹೆಸರಿಸಬಹುದು. ಆದರೆ ಅವರ ಹೆಸರು ಹೇಳಿದೊಡನೆ ನೆನಪಿಗೆ ಬರುವುದು ದಿನಕರನ ಚೌಪದಿ, ಚುಟಕವೆನ್ನಿ, ಚೌಪದಿಯೆನ್ನಿ. ದಿನಕರ ದೇಸಾಯಿಯೆನ್ನಿ – ಇವೆಲ್ಲಾ ಒಂದೇ, ಇವು ಅನ್ಯೋನ್ಯ ಸಂಬಂಧ ಪಡೆದು ಬೆಸೆದುಕೊಂಡ ಹೆಸರುಗಳು.

ದಿನಕರರು ಕನ್ನಡ ಕಾವ್ಯ ಹೆಮ್ಮೆ ಪಡಬಹುದಾದ ಒಂದು ಸಂಪ್ರದಾಯವನ್ನೇ ತೆರೆದರು – ಚುಟಕ ರಚನೆಯ ಮೂಲಕ. ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ವಿಶೇಷಾಂಕ – ಪತ್ರಿಕೆ ಯಾವುದೇ ಇರಲಿ ಅದರ ಖಾಲಿ ಜಾಗದಲ್ಲಿ ತುಂಬಲು ದಿನಕರ ಚೌಪದಿ ಅತ್ಯುತ್ತಮವೆನ್ನಿಸಿತ್ತು.

ಸರ್ವಜ್ಞ ಕವಿ, ನೀನು ಮೂಡಿಸಿದ ತ್ರಿಪದಿ
ನನ್ನ ಚೌಪದಿಗಳಿಗೆ ತೋರಿಸಿತು ಹಾದಿ
ನಿನ್ನ ಮಾತಿನ ಸೊಗಸು ಬರಲಿಲ್ಲ ನನಗೆ
ನೀನೊಬ್ಬನೆ ಸೌರ್ವಭೌಮನಿದುವರೆಗೆ

ಎಂದು ಅವರು ಮನಸಾರೆ ಹೇಳಿದರೂ ನಮ್ಮ ಪಾಲಿಗೆ ಇದು ಔಪಚಾರಿಕ, ಅವರು ನಿಜಕ್ಕೂ ಒಬ್ಬ ಚುಟಕ ಬ್ರಹ್ಮ. ಅವರ ಎಷ್ಟೋ ಚುಟಕಗಳಿಗೆ, ಅದು ಬರೆದಂದಿನ ಹಿನ್ನಲೆಯಲ್ಲಿ ತ್ರಿವಿಕ್ರಮನದ ಅರ್ಥವ್ಯಾಪ್ತಿಯಿರುವುದನ್ನು ಓದುಗರು ಸುಲಭವಾಗಿ ಗುರುತಿಸಬಹುದು. ಪ್ರತಿ ಚುಸಕದಲ್ಲೂ ಅವರ ಬಹುಶ್ರುತತ್ವ ಮಾತಾಡುತ್ತವೆ. ಕೆಲವಂತೂ ಸೃಷ್ಟಿಯನ್ನು ಕಂಡರಿಸಿ ಬಿಡಿಸಿಟ್ಟ ಮುಕ್ತಕಗಳು. ಸಹಸ್ರಾರು ಚುಟಕಗಳೆಲ್ಲ ಯಶಸ್ವಿಯಾಗಿವೆಯೆಂದು ನಾನು ಹೇಳುತ್ತಿಲ್ಲ. ಅಲ್ಲೊಮ್ಮೆ ಇಲ್ಲೊಮ್ಮೆ ಕಾವ್ಯ ಕಡಮೆಯಾಗುವುದು, ಮರೆಯಾಗುವುದೂ ಕುಸಿಯುವುದೂ ಉಂಟು. ಗಾಂಭೀರ್ಯ ಮಗ್ಗರಿಸುವುದುಂಟು. ಒಮ್ಮೊಮ್ಮೆ ಉತ್ಪ್ರೇಕ್ಷೆಯ ಬಣ್ಣ ಅತಿ ರಂಜಿತವಾಗುವುದುಂಟು. ಆದರೆ ಒಟ್ಟಾರೆ ಲೋಕದ ಅಂಕುಡೊಂಕು ಸ್ವಭಾವ ವೈಚಿತ್ರ್ಯಗಳನ್ನು ಸೆರೆಹಿಡಿದ ಚಿತ್ರ ಮಾತ್ರ ಸೊಗಸಾಗಿ ಕಾಣಿಸಿಕೊಂಡಿರುತ್ತದೆ. ಅವರು ಹೇಳಬಯಸುವುದನ್ನು ಚುಟಕ ಸಂವಹನಿಸುವುದರಲ್ಲಿ ಸೋಲುವುದಿಲ್ಲ. ವಾಸ್ತವವಾಗಿ ವಿಮರ್ಶಕರಿಗಿಂತ ಚೆನ್ನಾಗಿ ತಮ್ಮ ಚುಟಕಗಳ ಇತಿಮಿತಿ ಭವಿಷ್ಯ ಏನೆಂಬುದನ್ನು ಅವರೇ ಗುರುತಿಸಿ ಹೇಳಿದ್ದಾರೆಂಬುದನ್ನು ಗಮನಿಸಬೇಕು.

ನಾ ಬರೆದ ಚುಟಕಗಳ ಸಂಖ್ಯೆ ವಿಪರೀತ
ಸೇಕಡಾ ತೊಂಬತ್ತು ಹೊಡೆಯುವವು ಗೋತಾ
ಉಳಿದ ಹತ್ತರ ಪೈಕಿ ಏಳೆಂಟು ಸತ್ತು
ಒಂದೆರಡು ಬದುಕಿದರೆ ಅವು ಮಾತ್ರ ಮುತ್ತು

ಕವಿ ನಿರಾಶರಾಗಬೇಕಾದ್ದಿಲ್ಲ. ಒಂದೆರಡೇಕೆ, ಹತ್ತಾರು ಚುಸಕಗಳ ಕಾವ್ಯರಸಿಕರಿಗೆ ಬಹುಕಾಲ ಮುತ್ತು ಕೊಡುತ್ತಲೇ ಇರುತ್ತವೆ. ಇವರ ೨೫೦೦ ಚಿಟಕಗಳ ಬೃಹತ್ ಸಂಕಲನವಾದ ದಿನಕರನ ಚೌಪದಿ(೧೯೭೮) ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಅಂಕೋಲದಲ್ಲಿ ವಹಿಸಿ ಕಾರ್ಯಕ್ರಮ ನಡೆಸಿಕೊಡುವ ಸಂತೋಷದ ಕಾರ್ಯ ನನ್ನ ಪಾಲಿಗೆ ಬಂದಿತ್ತು.

ಮೂರು : ಸಾಹಿತ್ಯದಲ್ಲಿ ಅಷ್ಟುದೂರ ಇಷ್ಟು ಕಾಲ ಬಂದವರು ಸಾಮಾಜಿಕ ಕಾಳಜಿಯಿಂದ, ಅರ್ಪಣಬುದ್ದಿಯಿಂದ ಜನಸೇವೆಗೆ ಇಳಿಯುವುದು ವಿರಳ, ಸಾಹಿತ್ಯೇತರ ರಂಗದಲ್ಲಿ ಅವರದು ಅಪರೂಪದ ಸಾಧನೆ. ತಮ್ಮ ಸಮಕಾಲೀನ ಉತ್ತರ ಕನ್ನಡ ಜಿಲ್ಲೆಯ ಸಮಾಜವನ್ನು ಸಮುಷ್ಟಿಯಾಗಿ ಬೆಳಗಲು ಟೊಂಕ ಕಟ್ಟಿದರು. ಮಣ್ಣಿನ ಮಕ್ಕಳನ್ನು ಬೆಳಕಿನೆಡೆಗೆ ಕೊಂಡೊಯ್ಯಲು ಪ್ರಾಂಜಲ ಪ್ರಯತ್ನ ನಡೆಸಿದರು. ತಾವಾಗಿ ಬಯಸಿ ಅರಿಸಿಕೊಂಡ ತಮ್ಮ ಪಾಲಿನ ಈ ಕರ್ತವ್ಯವನ್ನು ನಿರ್ವಹಿಸುವಲ್ಲಿ ಎದುರಾದ ಎಡರುತೊಡರುಗಳಿಗೆ ಜಗ್ಗದೆ ಮುನ್ನಡೆದರು. ದೇಸಾಯಿಯವರ ಮೇಲೆ ಆಂಗ್ಲ ಸರ್ಕಾರದ ಹದ್ದುಪಾರು ಅಪ್ಪಣೆ ಇವರ ಉತ್ಸಾಹವನ್ನು ಕುಗ್ಗಿಸಲಾಗಲಿಲ್ಲ ಅವರು ತೋರಿದ ದಕ್ಷತೆ, ಬದ್ಧತೆ ಬಹುಜನರಿಗೆ, ಅದರಲ್ಲಿಯೂ ಸಾರ್ವಜನಿಕ ರಂಗದಲ್ಲಿ ಕೆಲಸ ಮಾಡುವವರಿಗೆ ಒಂದು ಆದರ್ಶ. ಕಟ್ಟುವ ಸಾಮರ್ಥ್ಯ ಅವರಲ್ಲಿ ಅಗಾಧವಾಗಿತ್ತು. ಜನತಾ ಶಿಕ್ಷಣಕ್ಕಾಗಿ ಅವರು ಅನೇಕ ವಿದ್ಯಾ ಸಂಸ್ಥೆಗಳನ್ನು ಹುಟ್ಟು ಹಾಕಿದರು. ಸಾಮಾಜಿಕ ಚಟುವಟಿಕೆ ಚಳುವಳಿಗಳಲ್ಲಿ ಸಾಮಾನ್ಯ ಜನರೊಜನೆ ನಿರ್ಭಿಡೆಯಿಂದ ಮಿಳಿತವಾದುದು. ನಾಗರಿಕರಿಗೆ ಸಂವಿಧಾನದತ್ತ ಸೌಲಭ್ಯಗಳನ್ನು ಧಾರಾಳವಾಗಿ ದೊರಕಿಸಿಕೊಡುವುದು ಮುಖ್ಯ ಪ್ರಯತ್ನವಾಗಿತ್ತು. ಮಿಕ್ಕವರಿಗಿಂತ ತಾವು ಬೇರೆಯವರೆಂದು. ಒಡನಾಡಿಗಳಿಗಿಂತ ತಾವು ಮೇಲಿನವರೆಂದು ಯಾವಾಗಲೂ ಅವರು ತಿಳಿಯಲಿಲ್ಲ. ಅಂದರೆ ಸಾಮಾಜಿಕ ಎಚ್ಚರ ಮೂಡಿಸುವುದು ಅವರ ಉದ್ದೇಶವಾಗಿತ್ತು. ಸಾಮೂಹಿಕ ಪ್ರಜ್ಞೆ ಎಚ್ಚರವಾಗಿರಬೇಕೆಂಬುದು ಅವರ ಕನಸಾಗಿತ್ತು. ಜಾತಿಮತ ಅವರಿಗೆ ಅಡ್ಡಿಯಾಗಿರಲಿಲ್ಲ. ಭಾಷಣಗಳಿಗೆ ಇಲಿಯಲಿಲ್ಲ, ಸಭೆ ಸಮಾರಂಭಗಳಿಗೆ ಸೋಲಲಿಲ್ಲ. ಸನ್ಮಾನಗಳಿಗೆ ತಲೆಬಾಗಲಿಲ್ಲ, ಜನತಾ ಜನಾರ್ಧನನ ಪೂಜೆಯಿಂದ ದೂರ ಸರಿಯಲಿಲ್ಲ. ಹಳ್ಳಿಗಾಡಿನ ರೈತಾಪಿ ಜನಗಳೀಗೆ ವ್ಯವಸಾಯಕ್ಕೆ ಪೂರಕವಾದ ನೆಮ್ಮದಿಯ ವಾತಾವರಣವನ್ನುಂಟು ಮಾಡುವುದು, ಎಲ್ಲರಿಗೂ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿತವಾಗಬೇಕೆಂಬುದು – ಇವೆರಡು ಅವರೆಲ್ಲ ಪ್ರಯತ್ನಗಳ ಶ್ವಾಸಕೋಶಗಳು.

ನನ್ನ ದೇಹದ ಬೂದಿ ಗಾಲಿಯಲಿ ತೂರಿಬಿಡಿ
ಹೀಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿಗೊಬ್ಬರದಿಂದ ತೆನೆದೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಎಂಬ ಅವರ ನುಡಿ ಧಮನಿಗಳಲ್ಲಿ ಕರಗಿಹೋಗಿತ್ತು.

ಕಾರವಾರದ ಈ ಕರ್ಮಯೋಗಿಯನ್ನು ಕೃತಿಗಳ ಮೂಲಕ ಪರಿಚಯಿಸಿಕೊಂಡಿದ್ದು ೧೯೫೬ರ ಸುಮಾರಿಗೆ. ಅವರನ್ನು ನಾನು ಮೊದಲ ಬಾರಿಗೆ ನೋಡಿದ್ದು ೧೯೭೯ರಲ್ಲಿ ದೂರದ ಈ ಮುಂಬಯಿ ಸಾಮಾನ್ಯವಾಗಿ ದೇಸಾಯಿಯವರಿಗೆ ವಾಸದ ಮನೆ. ಅಲ್ಲಿನ ಭಾರತ ಸೇವಕ ಸಂಸ್ಥೆಯ ಮಹಡಿ ಮನೆಯೊಳಗೆ ಕುಳಿತೇ ಮಾನಸಿಕವಾಗಿ ಇಡೀ ಪ್ರಪಂಚ ಪರ್ಯಟನವೆಸಗುತ್ತಿದ್ದರು. ಮುಂಬೈ ಒಂದು ಪುಟ್ಟ ಪ್ರಪಂಚ. ಅಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊಸಬರು ಸುಲಭವಾಗಿ ಹೋಗಿ ಬರುವುದಕ್ಕೆ ಆಗುವುದಿಲ್ಲ. ನನ್ನನ್ನು ಪ್ರೊ|| ಜಿ.ಬಿ. ಜೋಶಿಯವರು ಮೊದಲೇ ದೇಸಾಯಿಯವರಿಗೆ ತಿಳಿಸಿ. ಒಪ್ಪಿಗೆ ಪಡೆದು ಕರೆದುಕೊಂಡು ಹೋದರು. ಅ ವೇಳೆಗೆ ಎಷ್ಟೋ ಚುಟಕಗಳು ನನ್ನ ನೆನಪಿನ ಉಗ್ರಾಣದಲ್ಲಿ ಸೇರಿದ್ದುವು. ನಾನು ಅವರಿದ್ದ ಮಹಡಿಯ ಮೆಟ್ಟಿಲು ಹತ್ತಿ ಮೇಲೆ ಒಂದೊಡನೆ ಅಲ್ಲಿಯವರೆಗೆ ಖುದ್ದಾಗಿ ಬಂದು ಕೈಮುಟ್ಟಿ ಬರಮಾಡಿಕೊಂಡರು. ಆ ಮುಖ ಸ್ವಭಾವ, ಪ್ರತಿಕ್ರಿಯೆ ಅಕುಟಿಲತೆ ನನ್ನಲ್ಲಿ ಅಳಿಸಲಾಗದ ಅನುಭವವನ್ನು ಉಳಿಸಿದೆ. ಆ ನೆನಪುಸುಖದ ತಂಗಾಳಿಗೆ ಮೈಯೊಡ್ಡಿದಂತೆ ಹಿತವಾಗಿ ಚಿರವಾಗಿ ಇರುವಂತಹುದು. ಸದಾ ಬಗೆಬಣ್ಣಿಗೆ ಕಾಣುವ ಅಗತಾನೆ ಮಿಂದೆದ್ದು ಬಂದಂಥ ನುಣುಪು ಬೆಣ್ಣೆ ಮುಖ ಯೌವನದಲ್ಲಿ ಅವರು ಚೆಲುವ ಚೆನ್ನಿಗರಾಯನಾಗಿರಬೇಕೆನಿಸಿತು. ಅವರ ಇಳಿಗಾಲದಲ್ಲಿ ನಾನು ಕಂಡಿದ್ದು, ಆಗಳೇ ಅಸ್ತಂಗತನಾಗುವ ಸೂರ್ಯನಂತೆ ದೇಹಶಕ್ತಿ ಗಳಿತವಾಗಿದ್ದುದು ಕಂಡು ಬಂತು, ‘ಇಲ್ಲಿಯವರೆಗೂ ಬರುವ ತೊಂದರೆ ತಗೊಂಡಿದ್ದೀರಿ ಕೃತಜ್ಞನಾಗಿದ್ದೇನೆ. ನಿಮ್ಮನ್ನು ನೋಡಬೇಕೆಂದು ಅಪೇಕ್ಷೆಯಿತ್ತು : ‘ಕನ್ನಡನುಡಿ’ ಪತ್ರಿಕೆ ಬರುತ್ತದೆ. ತಪ್ಪದೆ ಓದುತ್ತೀನಿ, ಇಗೋ ಇಲ್ಲಿದೆ ಈ ಸಲದ ಸಂಚಿಕೆ. ನಿಮ್ಮ ಚಟುವಟಿಕೆಗಳಲ್ಲಿ ಕವಿಗಳ ವಿಚಾರ ಸಂಕಿರಣಗಳು ತುಂಬ ಚೆನ್ನಾಗಿವೆ. ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿಯೂ ತನ್ನು’ ಇತ್ಯಾದಿಯಾಗಿ ಹೇಳತೊಡಗಿದರು.

ನಮ್ಮ ಮಿಲನದಿಂದ ಅವರು ಸಂತುಷ್ಟರಾಗಿದ್ದರು. ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ, ಕಣ್ಣು ತೊಂದರೆ ಜತೆಗೆ ವಯಸ್ಸಾದ ಶರೀರ ಸಹಜ ಕಾಯಿಲೆಗಳೂ ಕಾಣಿಸಿಕೊಂಡಿದ್ದುವು. ಆದರೆ ತಮ್ಮ ಸ್ವಂತ ದೈಹಿಕ ತೊಂದರೆಗಳು ಅವರ ಸಜ್ಜನಿಕೆಯನ್ನು ಸೋಲಿಸಲಾಗಲಿಲ್ಲ. ತಿದ್ದಿದ ಹದವಾದ ಮನೋಧರ್ಮ ಎದ್ದು ಕಂಡಿತು. ಸ್ವಭಾವ ಸಹಜವಾದ ತಾಳ್ಮೆ, ಆತ್ಮೀಯ ಸಹೃದಯತೆ ಅತಿಥಿ ಸತ್ಕಾರ, ಕಾವ್ಯಾಲಾಪ ಮೊದಲಾದ ಗುಣಗಳಿಂದ ನನ್ನನ್ನು ತಮ್ಮ ಹಳಬನೆಂಬಂತೆ ನೋಡಿಕೊಂಡರು. ಖುಷಿಪಟ್ಟು ಖುಷಿಕೊಟ್ಟರು, ಸಂಭಾಷಣೆ ಸಾಹಿತ್ಯಕ್ಕೆ ಸೀಮಿತವಾಗಿತ್ತು. ವಿನೋದವಿತ್ತು, ಗಾಂಭೀರ್ಯವಿತ್ತು. ಅವರಿಗೆ ಹಳೆಯ ಕಾಲದ ನೆನಪುಗಳು ಸುಳಿದಾಡಿದುವು. ತಕ್ಷಣ ಏನನ್ನಿಸಿತೊ. ಹೊಸ ಕಾಲದ ಇತ್ತೀಚಿನ ಲೇಖಕರ ಪರಿಚಯ ಕೇಳಿ ತಿಳಿದು ಕೊಂಡರು. ನನ್ನ ಅಪೇಕ್ಷೆಯಂತೆ ಒಂದೆರಡು ಕವಿತೆ ಓದಿದರು (ಹೂಗೊಂಚಲಿಂದ), ಚುಟಕಗಳನ್ನು ಅಂದರು. ನಾನು ಹೆಚ್ಚು ಓದಲು ಒತ್ತಾಯಿಸಲಿಲ್ಲ, ಅವರೂ ಇಚ್ಚಿಸಲಿಲ್ಲ. ತಮಗೆ ನೋವುಗಳಿದ್ದರೂ ಆ ಗಳಿಗೆಯಲ್ಲಿ ನುಂಗಿಕೊಂಡು ಮುಗುಳುನಗೆ ಚೆಲ್ಲಿ ಮತ್ತೆ ಹೊರ ಹೊಸ್ತಿಲವರೆಗೂ ಬಂದು ಕೈಮುಟ್ಟಿ ಬೀಳ್ಕೊಟ್ಟರು. ಅದೇ ನಮ್ಮ ಮೊಟ್ಟಮೊದಲನೆಯ ಹಾಗೂ ಕಟ್ಟಕಡೆಯ ಭೇಟಿ.

ಇತ್ತೀಚೆಗೆ ಅಖಿಲ ಆಭರತ ೫೫ನೇಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಾರವಾರ ಜಿಲ್ಲೆಯ ಸಿರಸಿಯಲ್ಲಿ ನಡೆಸಲು ಏರ್ಪಾಟುಗಳು ನಡೆಯುತ್ತಿವೆ. ಸಿರಸಿಯಲ್ಲಿ ಸಾಹಿತ್ಯ ಸಮ್ಮೇಳನ ಆರಂಭವಾಗುವ ಮೊದಲೇ ಆ ಭಾಗದ ಹಿರಿಯರಾದ ದಿನಕರರು ಕಣ್ಮುಚ್ಚಿದ್ದಾರೆ, ಲೋಕಸಭಾ ಸದಸ್ಯ ದೇವರಾಯ ನಾಯ್ಕರೂ ಜಿಲ್ಲಾ ಸಾಹಿತ್ಯ ಪರಿಷದಧಕ್ಷ ಟಿ.ಕೆ. ಮಹಮೂದರೂ ಅವರನ್ನು ಸಂಪರ್ಕಿಸಿದ್ದರು. ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಬೇಡವೆಂಬ ಹೇಳಿಕೆ ಕೊಟ್ಟೇಬಿಟ್ಟರು. ಆ ನಿರ್ಲಿಪ್ತತೆ ಅವರನ್ನು ಬಲ್ಲವರಿಗೆ ಹೊಸದಲ್ಲ, ಕೇವಲ ಸಾಹಿತ್ಯ ಕ್ಷೇತ್ರದ ಸಾಧನೆಯ ದೃಷ್ಟಿಯಿಂದ ಸಮ್ಮೇಳನದ ಅಧ್ಯಕ್ಷತೆಗೆ ಅವರಿಗಿಂತ ಅರ್ಹರಾದವರು ಹಲವರಿದ್ದಾರೆಂಬುದು ನಿಜ. ಆದರೆ ಅವರ ಒಟ್ಟು ಸಾಧನೆಯನ್ನು ಸಮಗ್ರವಾಗಿ ನೋಡಿದಾಗ ಅವರಿಗಿಂತ ಅರ್ಹರು ಒಂದು ಕೈಯ ಬೆರಳೆಣಿಕೆಗೂ ಬರುವುದಿಲ್ಲ ಎಂಬುದು ದಿನಕರರ ಘನತೆಯನ್ನು ಸ್ಪಷ್ಟಪಡಿಸುತ್ತದೆ.

ದಿನಕರರು ಕನಸು ಕಂಡರೂ ಕೇವಲ ಕನಸುಣಿಯಾಗಿರಲಿಲ್ಲ ಕಂಡ ಕನಸನ್ನು ಕಾರ್ಯ ರೂಪಕ್ಕಿಳಿಸಿದರು. ಕಂಡರಿಸಿದರು. ಕೆಲವು ತಿಂಗಳಿಂದೀಚೆಗೆ ಎಲ್ಲರಿಂದ ಅವರು ಪೂರ್ಣ ತಟಸ್ಥರಾಗಿದ್ದರು. ಅಂತರ್ಮುಖಿಯಾಗಿದ್ದರು. ಆದರೆ ಅವರ ಕನ್ನಡ ಪ್ರೇಮ ಬತ್ತಿರಲಿಲ್ಲ –

ನನ್ನ ಕನ್ನಡ ನುಡಿಯೆ, ನೀನೆಷ್ಟು ಚಂದ |
ಏನು ಗೀಚಿದರೂ ಆಗುವುದು ಶ್ರೀಗಂಧ
ಸಿಂಗರದ ಗಣಿ ನಿನ್ನ ಶಬ್ಧ ಸಂಪತ್ತು
ಬಂಗಾರಕ್ಕಿಂತಲೂ ಶ್ರೇಷ್ಠ ನುಡಿ ಮುತ್ತು

ದಿನಕರ ದೇಸಾಯಿಯವರ ಸಾವಿನಿಂದ ಒಬ್ಬ ಮಹಾನ್ ಕನ್ನಡಿಗರ ಕಣ್ಮರೆಯಾದಂತೆ.

 (ಕನ್ನಡ ನುಡಿ, ಡಿಸೆಂಬರ್ , ೧೯೮೨)

* * *