ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾವ್ ನಮ್ಮ ನಡುವೆ ಇನ್ನೂ ತಮ್ಮ ಕೃತಿಗಳ ಮೂಲಕ ಬರವಣಿಗೆ ನಡೆಸುತ್ತಿರುವ ಹಿರಿಯರಲ್ಲಿ ಮೂರ್ಧನ್ಯಪ್ರಾಯರು, ವಯೋವೃದ್ಧರೂ, ಶೀಲವೃದ್ದರೂ, ಜ್ಞಾನವೃದ್ದರೂ ಆದ ಎ.ಎನ್. ಮೂರ್ತಿರಾಯರು ಕಳೆದ ಅರ್ಥ ಶತಮಾನದಿಂದ ಸಾರ್ತಕ ಬರವಣಿಗೆಯನ್ನು ನಡೆಸಿಕೊಂಡು ಬಂದಿದ್ದಾರೆ. ಇಪ್ಪತ್ತನೆಯ ಶತಮಾನವನ್ನು ಕನ್ನಡ ನಾಡಿನಲ್ಲಿ ಉದ್ಘಾಟನೆ ಮಾಡಿದರೋ ಎಂಬಂತೆ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳು ಗ್ರಾಮದಲ್ಲಿ ೧೯೦೦ರಲ್ಲಿ ಇವು ಹುಟ್ಟಿದರು. ೮೨ ವರ್ಷ ತುಂಬಿ ೮೩ನೇ ವರ್ಷಕ್ಕೆ ಕಾಲಿಟ್ಟಿರುವ ಮೂರ್ತಿರಾಯರು ಆದಿಕವಿ ಪಂಪ ಹೇಳುವಂತೆ ಹಿತಮಿತ ಮೃದುವಚನವನ್ನು ಒಂದು ವ್ರತವಂತೆ ನಡೆಸಿಕೊಂಡು ಬಂದಿದ್ದಾರೆ. ಇವರನ್ನು ದೂರದಿಂದ ಕಂಡಾಗ ಒಬ್ಬ ಸಾರಸ್ವತ ತಪಸ್ವಿಯಂತೆ ಕಾಣುತ್ತಾರೆ. ಹತ್ತಿರದಿಂದ ಪರಿಚಯ ಪಡೆದ ಮೇಲೆ ನಿಷ್ಕಾಮ ಕರ್ಮಯೋಗಿಯ ಒಡನಾಟದ ಅನುಭವ ದೊರೆಯುತ್ತದೆ. ಇವರಿಗೆ ಬದುಕು ಕಲಿಸಿದ ಪಾಠವೇ ಇರಬೇಕು. ನಿರ್ಲಿಪ್ತತೆಯನ್ನು ಇವರಂತೆ ಬದುಕಿಗೆ ಅಳವಡಿಸಿಕೊಳ್ಳುವುದು ಬಹುಜನಕ್ಕೆ ಕಷ್ಟವಾಗುತ್ತದೆ. ಅಷ್ಟರ ಮಟ್ಟಿಗೆ ಸ್ಥಿತ ಪ್ರಜ್ಞತ್ವದ ಲಕ್ಷಣಗಳನ್ನು ಮೈಗೂಡಿಸಿಕೊಂಡ ಮೂರ್ತಿರಾಯರು ಎಲ್ಲರಿಗೂ ಸುಲಭರು. ಸರಳತೆ, ನಿರಾಡಂಬರತೆ, ಅಕುಟಿಲ ವರ್ತನೆ, ಯಾವ ಪೂರ್ವಗ್ರಹಿಕೆಗಳೂ ಇಲ್ಲದ ಋಜು ಸ್ವಭಾವ -ಇವನ್ನು ಇವರ ಒಡನಾಟ ಮನವರಿಕೆ ಮಾಡಿಕೊಡುತ್ತದೆ. ಸ್ವಾರ್ಥಲೋಲುಪತೆಯಿಲ್ಲದೆ ಸಹಜ ನಡವಳಿಕೆಯಿಂದ, ಯಾವ ಅತಿಗಳಿಗೂ ಧಾವಿಸದೆ ನ್ಯಾಯ ನೆಮ್ಮದಿಗಳ ಮಿತಿಯಲ್ಲೆ ಸಂಚರಿಸಿ, ಅರ್ಥಪೂರ್ಣ ಬದುಕನ್ನು ತಮಗೂ ಇತರರಿಗೂ ಹಿತವಾಗುವಂತೆ ಮೂರ್ತಿರಾಯರು ನಡೆಸಿಕೊಂಡು ಬಂದಿದ್ದಾರೆ.

ಮೂರ್ತಿರಾಯರ ಬರವಣಿಗೆಯನ್ನು ಕುರಿತು ನನ್ನ ಅನಿಸಿಕೆಗಳನ್ನು ದಾಖಲಿಸುವುದಕ್ಕೆ ಮೊದಲೇ ಇವರ ಬದುಕನ್ನು ಕುರಿತು ಪ್ರಸ್ತಾಪಿಸುವುದಕ್ಕೂ ಒಂದು ಔಚಿತ್ಯವಿದೆ. ಇವರ ಬದುಕಿನಂತೆ ಇವರ ಬರವಣಿಗೆಯೂ ಇದೆ. ಅದೇ ಸರಳತೆ, ನಿರಾಡಂಬರತೆ ಇಲ್ಲಿಯೂ ಎದ್ದು ಕಾಣುತ್ತದೆ. ಇವರ ಕೃತಿಗಳ ವಿಚಾರದಲ್ಲಿ ಹೇಳಲೇಬೇಕಾದ ಮುಖ್ಯವಾದ ಮಾತು ಎಂದರೆ ಸಂಖ್ಯೆಯಲ್ಲಿ ಹೆಚ್ಚುಗಾರಿಕೆ ಎಲ್ಲ. ಆದರೆ ಸತ್ವದಲ್ಲಿ ವಿಶೇಷತೆ ಇದೆ, ಸಾಕಷ್ಟು ವೈವಿಧ್ಯವೂ ಇದೆ. ಹರವೂ ಇದೆ.

ಕನ್ನಡದಲ್ಲಿ ಪ್ರಬಂಧ ಪ್ರಕಾರವನ್ನು ರೂಢಿಸಿ ಸಂಭದ್ರವಾದ ತಳಪಾಯ ಹಾಕಿಕೊಟ್ಟು ಪ್ರಚಾರಕ್ಕೆ ತಂದ ಆದ್ಯರಿವರು, ಹಗಲುಗನಸುಗಳು’, ‘ಅಲೆಯುವ ಮನ’, ಮಿನುಗುಮಿಂಚುಎಂಬ ಇವರ ಮೂರು ಪ್ರಬಂಧ ಸಂಕಲನಗಳೂ ಕನ್ನಡದ ಉತ್ತಮ ಪ್ರಬಂಧಗಳ ಗೊಂಚಲಾಗಿವೆ. ಚಿತ್ರಗಳು ಪತ್ರಗಳುಎಂಬ ವ್ಯಕ್ತಿ ಚಿತ್ರದ ಬರವಣಿಗೆಯು ಒಂದು ಉತ್ಕೃಷ್ಟ ಮಾದರಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರವಾಗಿದೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿ ೩೫ ವರ್ಷಕಾಲ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಇವರ ಬರವಣಿಗೆಯಲ್ಲಿ ಸಹಜವಾಗಿಯೇ ಇಂಗ್ಲಿಷ್ ಸಾಹಿತ್ಯದ ಪ್ರೇರಣೆ ಪ್ರಚೋದನೆ ಕಾಣಬುದಾಗಿದೆ. ಇಂಗ್ಲಿಷ್ ನ ಶ್ರೇಷ್ಠ ಪ್ರಬಮಧಕಾರರ ಪ್ರಬಮಧಗಳನ್ನು ವ್ಯಾಸಂಗ ಮಾಡಿದ್ದರ ಫಲವಾಗಿ ಕನ್ನಡಕ್ಕೆ ಅಂತಹದೊಂದು ಸಾಹಿತ್ಯ ಪ್ರಕಾರದ ದಾರಿ ತೋರಿಸಿದರು.

ಕನ್ನಡದಲ್ಲಿ ಸಾಹಿತ್ಯ ವ್ಯವಸಾಯ ಮಾಡಿ ತಮಗೂ ಕನ್ನಡಕ್ಕೂ ಕೀರ್ತಿ ತಂದ ಇಂಗ್ಲಿಷ್ ಪ್ರಧ್ಯಾಪಕರ ಪರಂಪರೆಗೆ ಈ ಶತಮಾನದಲ್ಲಿ ನಾಂದಿ ಹಾಡಿದವರು ಬಿ.ಎಂ.ಶ್ರೀ ಅವರು ಶ್ರೀ ಅವರು ಹಾಕಿಕೊಟ್ಟ ಹೆದ್ದಾರಿಯಲ್ಲಿ ಎ. ಎನ್.ಮೂರ್ತಿರಾಯರು, ಎಸ್.ವಿ. ರಂಗಣ್ಣನವರು ಅದ್ಬುತ ಕೆಲಸ ಮಾಡಿದ್ದಾರೆ. ಅನಂತರ ಬಂದ ಸುಂಆರು ಆರೇಳು ಜನ ಇಂಗ್ಲಿಷ್ ಪ್ರಧ್ಯಾಪಕರು ಕನ್ನಡದ ವಿಚಾರದಲ್ಲಿ ತೋರಿದ ದಿವ್ಯನಿರ್ಲಕ್ಷ್ಯದ ಹಿನ್ನಲೆಯಲ್ಲಿ ಈ ಹಿರಿಯರ ಸೇವೆ ಮತ್ತಷ್ಟು ದೊಡ್ಡದಾಗಿಯೇ ಕಂಡ ಬರುತ್ತದೆ.

ಎಂತಹ ಸುಲಲಿತವಾದ ಸುಂದರ ಬರವಣಿಗೆ, ತಿಳಿಹಾಸ್ಯ, ಆದರೆ ನವಿರುಗಾಳಿಯಂತೆ, ಗಾಂಭಿರ್ಯ ಜೀವನ ವಿವೇಕ, ಪ್ರತಿಭೆ -ಇವೆಲ್ಲದರ ಮಿಶ್ರಣ ಮತ್ತು ಬಮಿಂಚು ಇವರ ಬರವಣಿಗೆಯಲ್ಲಿ ಇದೆ.

ಕನ್ನಡ ಸಾಹಿತ್ಯ ಪರಿಷತ್ತಿಗೂ ಇವರಿಗೂ ಮಧುರವಾದ ಸಂಬಂಧ. ಪರಿಷತ್ತಿನ ಅಧ್ಯಕ್ಷರಾಗಿ ಇವರು ೧೨-೫-೧೯೫೪ ರಿಂದ ೧೬-೬-೧೯೫೬ ರವರೆಗೆ ಕಾರ್ಯನಿರ್ವಹಿಸಿದ್ದಾರೆ. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ ಭಾರತ ೫೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಂದು ವಸ್ತು ಪ್ರದರ್ಶನವನ್ನು ಪ್ರಾರಂಭಿಸಿಕೊಡಲು ಇವರನ್ನು ನಾನು ಆಹ್ವಾನಿಸಿದ್ದೆ. ಎಷ್ಟೇ ತೊಂದರೆ ಇದ್ದರೂ ಸಹಿಸಿಕೊಂಡು ಬಂದು ಕಾರ್ಯಕ್ರಮದಲ್ಲಿ ಭಾಗವಹಸಿ ಹರಿಸಿದರು. ಮಂಡ್ಯದಲ್ಲಿ ೧೯೮೦ರಲ್ಲಿ ನಡೆದ ಬಿ.ಎಂ.ಶ್ರೀ ಅವರನ್ನು ಕುರಿತ ವಿಚಾರ ಸಂಕಿರಣದಲ್ಲಿ ನನ್ನ ಅಪೇಕ್ಷೆಯಂತೆ ಇವರು ಭಾಗವಹಿಸಿದ್ದರು. ತಮ್ಮ ಪುಸ್ತಕವೊಂದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಅದರ ಸಂಬಂಧವಾಗಿ ಗೌರವ ಸಮಾರಂಭವನ್ನು ಏರ್ಪಡಿಸಿದಾಗ ಪ್ರೀತಿಯಿಂದ ಬಂದು ಸ್ವೀಕರಿಸಿದರು. ಶ್ರೀ ಯವರನ್ನು ಕುರಿತು ಪರಿಷತ್ತು ಪ್ರಕಟಿಸಲು ಪುಸ್ತಕ ಬರೆದು ಕೊಟ್ಟರು, ಇದು ಈಗಾಗಲೇ ಎರಡು ಮುದ್ರಣ ಕಂಡಿದೆ. ಇವರ ಮಗ ನಾಗರಾಜು ಮೈಸೂರು ಸಮೀಪದಲ್ಲಿ ಹೊಲದ ನಡುವೆ ಇದ್ದ ಮನೆಯಲ್ಲಿ ವಾಸವಾಗಿದ್ದರು. ಅಲ್ಲಿಗೆ ನಾನು ಮತ್ತು ಮಿತ್ರ ಡಿ.ವಿ.ಕೆ. ಮೂರ್ತಿ ಅವರು ಹೋಗಿ ಕಂಡಾಗ ಒಂದು ದಿನವಿಡೀ ಮಧ್ಯಾಹ್ನ ತಮ್ಮ ಸಮಯವನ್ನು ನಮಗಾಗಿ ಮೀಸಲಿಟ್ಟರು. ಪ್ರೊ. ಪ್ರಭುಶಂಕರರ ಮನೆಯಲ್ಲಿ ಡಿ.ವಿ.ಕೆ ಮೂರ್ತಿಯವರ ಮನೆಯಲ್ಲಿ, ಬೆಂಗಳೂರಿನಲ್ಲಿ ಇವರು ಬಂದಾಗ ಇಳಿದುಕೊಳ್ಳುತ್ತಿದ್ದ ಮಿತ್ರರ ಮನೆಯಲ್ಲಿ, ಹೀಗೆ ಆರೇಳು ಸಲ ಕಂಡಿದ್ದೇನೆ. ಹೀಗೆ ಕಂಡಾಗಲೆಲ್ಲಾ ಇವರ ಆತ್ಮೀಯ ಮಾತುಕತೆಯಲ್ಲಿ ಬೆರೆತು ಕರಗಿದ್ದೇನೆ. ಸುಖಿಸಿ ಪುಳಕಗೊಂಡಿದ್ದೇನೆ. ಮರ್ಯಾದೆಯ ಮೇಲೆ ಮೀರದೆ, ಇನ್ನೊಬ್ಬರ ಲೇವಡಿಗಿಳಿಯದೆ ನಡೆಯುವ ಸುಹೃದ್ ಸಲ್ಲಾಪ ನಡೆಸಿದ ಮಾತುಕತೆಗಳ ಔನ್ನತ್ಯವನ್ನು ನೆನಪಿಗೆ ತರುವಂತಹದು.

ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಅಖಿಲ ಭಾರತ ಆಕಾಶವಾಣಿಯ ಮೇಸೂರು ನಿಲಯದ ನಿರ್ದೇಶಕರಾಗಿ, ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ, ನಿರ್ವಾಹಕರಾಗಿ ಸೇವೆ ಗೈದಿದ್ದಾರೆ. ದೇವರಾಜ ಬಹದ್ದೂರ್ ಬಹುಮಾನ, ಸಾಹಿತ್ಯ ಅಕಾಡೆಮಿಯ ಬಹುಮಾನ (ಕೇಂದ್ರ ಹಾಗೂ ರಾಜ್ಯ) ಪಡೆದಿದ್ದಾರೆ. ಇವೆಲ್ಲಕ್ಕೂ ಶಿಖರ ಪ್ರಾಯವಾಗಿ ಒಬ್ಬ ಶ್ರೇಷ್ಠ ಸಾಹಿತಿಯಾಗಿ ಇವರು ಸಲ್ಲಿಸಿದ ಅರ್ಧ ಶತಮಾನದ ಸೇವೆಗೆ ಸಂದ ಪುರಸ್ಕಾರವೊ ಎಂಬಂತೆ ಮೈಸೂರು ವಿಶ್ವವಿದ್ಯಾನಿಲಯ ಇವರಿಗೆ ಗೌರವ ಡಾಕ್ಟೆರೇಟ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ಕನ್ನಡದಲ್ಲಿ ಹೇಗೋ ಹಾಗೆ ಇಂಗ್ಲಿಷಿನಲ್ಲೂ ಇವರ ಲೇಖನಿ ಕೆಲಸ ಮಾಡಿದೆ. ಶಿವರಾಮ ಕಾರಂತರ ಮರಳಿ ಮಣ್ಣಿಗೆಕಾದಂಬರಿಯನ್ನು ‘ದಿ ರಿಟನ್ ಟು ದಿ ಸಾಯಿಲ್’ ಎಂಬ ಹೆಸರಿನಿಂದ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಬಿ.ಎಂ. ಶ್ರೀಕಂಠಯ್ಯ ಅವರನ್ನು ಕುರಿತು ಬಿ.ಎಂ. ಶ್ರೀಕಂಠಯ್ಯ ಎಂಬ ಪುಸ್ತಕವನ್ನು ಬರೆದಿರುತ್ತಾರೆ. ಆದರೆ ಇವರ ಹೆಚ್ಚಿನ ಬರವಣಿಗೆ ನಡೆದಿರುವುದು ಕನ್ನಡದಲ್ಲೆ. ಸಾಕ್ರೆಟೀಸನ ಕೊನೆಯ ದಿನಗಳು, ಹಳವಳದ ದ್ವೀಪ ಪಾಶ್ಚಾತ್ಯ ಸಣ್ಣ ಕಥೆಗಳು, ಯೋಧನ ಪುನರಾಗಮನ, ಅಮೇರಿಕನ್ ಸಾಹಿತ್ಯ ಚಂಡಮಾರುತ, ಮೋಲಿಯೇರನ ಎರಡು ನಾಟಕಗಳು ಇವು ಇವರು ಕನ್ನಡಕ್ಕೆ ಭಾಷಾಂತರಿಸಿರುವ ಗ್ರಂಥಗಳು. ‘ಆಷಾಢಭೂತಿಎಂಬ ನಾಟಕವಂತೂ ಪ್ರಸಿದ್ಧವಾಗಿದೆ. ಇದೂ ಕೂಡ ಭಾಷಾಂತರವೇ ಆದರೂ ನೇರ ಭಾಷಾಂತರವಾಗದೆ ಸ್ವಲ್ಪ ಸ್ವತಂತ್ರ ವಹಿಸಿ ಮಾಡಿದ ರೂಪಾಂತರವಾಗಿದೆ.

ಚಂಡಮಾರುತಇವರ ಅನುವಾದ ಗ್ರಂಥಗಳಲ್ಲಿ ಮುಡಿಯ ಮಾಣಿಕ್ಯ. ಜಗತ್ತಿನ ಶ್ರೇಷ್ಠ ನಾಟಕಕಾರ ವಿಲಿಯಂ ಪೇಕ್ಸ್ ಪಿಯರನ ದಿ ಟೆಂಪೆಸ್ಟ್ಎಂಬ ನಾಟಕದ ಅನುವಾದ ಚಂಡಮಾರುತ. ‘ಮ್ಯಾಕ್ ಬೆತ್’ ನಾಟಕವನ್ನು ಅನುವಾದಿಸಲು ಹೊರಡು ಟೆಂಪೆಸ್ಟ್ ನಾಟಕವನ್ನು ಅನುವಾದಿಸಿದೆ ಎಂದು ತಿಳಿಸಿದ್ದಾರೆ. ಗದ್ಯಾನುವಾದ ಸರಿಕಾಣದೆ ಸರಳ ರಗಳೆಯಲ್ಲಿ ಚಂಡಮಾರುತ ನಾಟಕವನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಈ ವಿಚಾರದಲ್ಲಿ ಇವರ ಅಭಿಪ್ರಾಯ “ಒಟ್ಟಿನಲ್ಲಿ ನಾನು ಸರಳರಗಳೆಯ ನಿಯಮಗಳನ್ನು ಅನುಸರಿಸಿದ್ದೇನೆ ಎಂದು ನನ್ನ ಭಾವನೆ ಆದರೆ ಅವನ್ನು ಕಟ್ಟುನಿಟ್ಟಾಗಿ ಪಾಲಿಸಿಲ್ಲ ಎಷ್ಟೋ ಕಡೆ ಮಾತ್ರೆ ಗಣಗಳ ಲೆಕ್ಕಕ್ಕಿಂತ ‘ಇದು ಕಿವಿಗೆ ಹಿತವೋ ಅಹಿತವೋ’ ಎಂಬುದೇ ಪಂಕ್ತಿಯ ಲಯಕ್ಕೆ ಆಧಾರವಾಗಿ ಪರಿಣಮಿಸಿದೆ. ಮಾತ್ರೆ ಗಣಗಳ ಸಂಖ್ಯೆ ಸ್ವಷ್ಟವಾದ ವಸ್ತು ನಿಷ್ಠವಾದ ಮಾನದಂಡ. ‘ಕಿವಿಗೆ ಹಿತವಾದದ್ದು ಎನ್ನುವುದು ಅಸ್ಪಷ್ಟ, ಆತ್ಮ ನಿಷ್ಠ. ಇದರ ಅರಿವಿದ್ದೂ ನಾನು ಆ ದಾರಿ ಹಿಡಿದಿದೇನೆ.” ಇವರ ತೀರ್ಪಿನ ಮಹತ್ವವನ್ನು ಈ ನಾಟಕ ಓದಿಯೇ ಮನಗಾಣಬೇಕು. ಮೂರ್ತಿರಾಯರು ಚಂಡಮಾರುತ ನಾಟಕಕ್ಕೆ ಬರೆದಿರುವ ೫೪ ಪುಟಗಳ ಸೊಗಸಾದ ಅವತರಣಿಕೆ ಇವರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ.

ಇಂಗ್ಲಿಷ್ ನಾಟಕದ ಒಟ್ಟು ವಯಶಿಷ್ಟ್ಯಗಳನ್ನೂ, ಸೂಕ್ಷ್ಮಗಳನ್ನೂ ಸನ್ನಿವೇಶ ಮತ್ತು ಪಾತ್ರಗಳ ಸ್ವಾರಸ್ಯವನ್ನೂ ಇವರು ವಿಮರ್ಶಿಸಿರುವ ರೀತಿ ಒಂದು ಮಾದರಿ ಬರವಣಿಗೆಯಾಗಿದೆ. ವಿಮರ್ಶಾಪ್ರಜ್ಞೆ ಮತ್ತು ವಿಶ್ಲೇಷಣಾ ಶಕ್ತಿ ಟಷ್ಟು ಉನ್ನತ ಮಟ್ಟದಲ್ಲಿ ಕೆಲಸ ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು. ಸ್ವಲ್ಪ ದೊಡ್ಡದಾದರೂ ಇಲ್ಲಿ ಉದಾಹರಿಸುವ ಭಾಗ ಚೆನ್ನಾಗಿ ಕನ್ನಡಿಸುತ್ತದೆ.

“ಷೇಕ್ಸ್‌ಪಿಯರ್ ತನ್ನ ಘನ ರುದ್ರನಾಟಕಗಳನ್ನು ಬರೆದಾಗಿನ ಮಾತೆ ಬೇರೆ-ಕೇಡಿನ ಅಕಾಂಡತಾಂಡವ ಕೊನೆಯವರಿಗೂ ನಡೆಯುತ್ತದೆ. ನಿರ್ದಯವಾದ ತರ್ಕಕ್ಕೆ ಅನುಸಾರವಾಗಿ ಅದು ತನ್ನ ದಾರಿಯಲ್ಲಿ ತಾನು ಸಾಗುತ್ತದೆ. ದಾರಿಯಲ್ಲಿ ಸಿಕ್ಕಿದವರನ್ನೆಲ್ಲ ಎಳೆದುಕೊಂಡು ಪ್ರಪಾತಕ್ಕೆ ಬಿದ್ದು ನಾಶವಾಗುತ್ತದೆ. ಈ ಕಾಲದಲ್ಲಿ ಎಂಥ ಸಣ್ಣ ಅಪರಾಧಕ್ಕೂ ಕ್ಷಮೆಯಿಲ್ಲ. ಕೊನೆಗೆ ಅಜಾಗರೂಕತೆಗೂ ಕ್ಷಮೆಯಿಲ್ಲ. ಅಪರಾಧದ ಮಾತು ಆಗಿರಲಿ, ಮ್ಯಾಕ್ ಬೆತ್ ಒಥೆಲೋ ನಾಟಕದ ಇಯಾಗೋ ಕಿಂಗ್ ಲಿಯರ್’ ನಾಟಕದ ಗಾನರಿಲ್, ರೀಗನ್, ಎಡ್ಮಂಡ್ಮ, ಹ್ಯಾಮ್ಲೆಟ್’ ನಾಟಕದ ಕ್ಲಾಡಿಯಸ್ ಇವರೆಲ್ಲ ಪಾಪದಲ್ಲಿ ಮುಳುಗಿದವರು, ಕೊಲೆಗಡುಕರು. ಅವರ ಪಾಪಕ್ಕೆ ತನ್ನ ಪ್ರಾಯಶ್ಚಿತ್ತವಾದದ್ದು ನ್ಯಾಯ ಎಂದು ಕೊಳ್ಳೋಣ. ಒಥಲೋ ಹ್ಯಾಮ್ಲೆಟ್ ನಂಥವರಲ್ಲಿ ಒಂದಲ್ಲ ಒಂದು ಬಗೆಯ ಮನೋದೌರ್ಬಲ್ಯ ವಿತ್ತು. ಅವರಿಗಾದ ಶಿಕ್ಷೆ ಹೆಚ್ಚು.ಆ ದರೂ ಅವರಲ್ಲಿ ದೋಷವಿದ್ದದ್ದು ನಿಜ ಎಂದುಕೊಳ್ಳೋಣ. ಆದರೆ ಡೆಸ್ಡಿಮೋನ ಕಾರ್ಡೀಲಯರ ಮಾತೇನು? ಡೆಸ್ಡಿಮೋನ ಅಜಾಗರೂಕತೆಯಿಂದ ತನ್ನ ಕರವಸ್ತ್ರವನ್ನು ಬೀಳಿಸಿದಳು, ಕಾರ್ಡೀಲಿಯ ತನ್ನ ಅಕ್ಕಂದಿರ ಕಾಪಟ್ಯಕ್ಕೆ ರೋಸಿ ತನ್ನಲ್ಲಿ ನಿಜವಾಗಿಯೂ ಇದ್ದ ಪಿತೃ ಪ್ರೇಮವನ್ನು ಕೊಚ್ಚಿಕೊಳ್ಳಲಿಲ್ಲ. ಇದಿಷ್ಟಕ್ಕಾಗಿ ಅದೆಂಥ ಭಯಂಕಾರವಾದ ಶಿಕ್ಷೆ.”

“ಈ ನಾಟಕಗಳಲೆಲ್ಲ ಒಂದು ಕಡೆ ಕೇಡಿಗತನಕ್ಕೂ ಕೇಡಿಗತನ ಎನ್ನಿಸಿಕೊಳ್ಳಲಾರದ ದೋಷ ಅಥವಾ ಕೊರತೆಗಳಿಗೂ ಮತ್ತೊಂದು ಕಡೆ ಸಂಕಟ ಮರಣಗಳಿಗೂ ಅನಿವಾರ್ಯವಾದ ಸಂಬಂಧವಿದೆ. ದೋಷ ವಿನಾಶದಲ್ಲೆ ಕೊನೆಗಾಣಬೇಕು. ಶಿಕ್ಷೆ ತಪ್ಪದು, ಮಾನವಕುಲ ತನ್ನಲ್ಲಿ ಸೇರಿರುವ ದೋಷವನ್ನು ಸಹಿಸಲಾರದೆ ಅದನ್ನು ಹೊರ ಹಾಕಿ ಉಕ್ತಿ ಪಡೆಯಲು ಭಯಂಕರವಾದ ಅಂತರ್ಯುದ್ಧವನ್ನು ನಡಸುತ್ತದೆ, ಯುದ್ಧದಲ್ಲಿ ಕೇಡಿಗತನವೇನೋ ಸಾಯುತ್ತದೆ, ಆದರೆ ತನ್ನ ಜೊತೆಗೆ ಅಳತೆಗೆ ಸಿಕ್ಕದಷ್ಟು ಉದಾತ್ತತೆಯನ್ನೂ ಸಾವಿಗೆಳೆಯುತ್ತದೆ. ಹ್ಯಾಮ್ಲೆಟ್, ಒಥಲೋ, ಡೆಸ್ಡಿಮೋನ, ಕಾರ್ಡೀಲಿಯ ಬದುಕಿಗೆ ಭೂಷಣ ಎನ್ನಬಹುದಾದ ಜನ-ಯಾರೂ ಉಳಿಯಲಿಲ್ಲ. ಆದರೆ ಬದುಕು ಈ ನಷ್ಟವನ್ನು ಅನುಭವಿಸಲೇಬೇಕು. ಷೇಕ್ಸ್ ಪಿಯರ್ ಈ ನಿಷ್ಠುರ ಸತ್ಯವನ್ನು ಹಿಂಜರಿಯದೆ ನೋಡುತ್ತಾನೆ, ನಿರೂಪಿಸುತ್ತಾನೆ.”

“ಕೇಡು ತನ್ನ ಕಗ್ಗೊಲೆಯನ್ನು ಮುಗಿಸಿದ ಮೇಲೆ ಉಳಿಯುವವರೆಲ್ಲ ಒಳ್ಳೆಯ ಜನ ಎಂಬುದು ಸಾಮಾನ್ಯವಾಗಿ ಹೇಳೂವ ಸಮಾಧಾನ – ತಿಣಿಕಿ ತಿಣಿಕಿ ತಂದು ಕೊಂಡದ್ದು, ನಿಟ್ಟುಸಿರೆಳೆದು ಒದ್ದೆಗಣ್ಣಿನಿಂದ ಒಪ್ಪಬಹುದಾದ ಸಮಾಧಾನ, ನಿಜವಾದ ಸಮಾಧಾನವೆಂದರೆ ಇಂಥ ಜನ ಇದ್ದರಲ್ಲ, ಇಂಥ ವಿಚಾರ ಶಕ್ತಿ, ಆತ್ಮ ಶಕ್ತಿ, ಕವಿಯ ಮನೋಧರ್ಮ, ಇಂಥ ಪ್ರೇಮ, ಕರುಣೆ-ಬದುಕಿನಲ್ಲಿ ಇವೆಲ್ಲ ಇದ್ದವಲ್ಲ ಎಂಬುದು, ಇಂಥ ಜನಕ್ಕಾಗಿ ಕಣ್ಣೀರು ಕರೆಯುವುದರಲ್ಲೂ ಏನೋ ಒಂದು ಹಿತವಿದೆ. ಈ ರುದ್ರನಾಟಕಗಳ ಅನುಭವ ಮೈಮನಗಳನ್ನು ನಡುಗಿಸುವಂಥದ್ದು, ಆದರೂ ಸಂವೇದನಾಶಕ್ತಿ, ಅಲೋಚನಾಶಕ್ತಿ, ಭಾವನಾಶಕ್ತಿಗಳನ್ನು ಪ್ರಚೋದಿಸುವುದರಿಂದ, ವಿಧಿಯ ಸವಾಲನ್ನು ಎದುರಿಸಲು ಬೇಕಾದ ದಿಟ್ಟತವನ್ನು ಬೆಳೆಸುವುದರಿಂದ, ಸುಪ್ತವಾಗಿರಬಹುದಾದ ಕರುಣೆಯನ್ನು ಎಚ್ಚರಿಸುವುದರಿಂದ ಅಂತಃಶುದ್ಧಿಗೆ ಅವಕಾಶ ಕೊಡುವುದರಿಂದ ಅವು ಮತ್ತೆ ಮತ್ತೆ ನಮ್ಮ ನಮ್ಮನ್ನು ಆಕರ್ಷಿಸುತ್ತವೆ.”

“ಈ ನಾಟಕಗಳಲ್ಲಿನ ವಾತಾವರಣಕ್ಕೆ ಕಾರಣಗಳನ್ನು ಕವಿಯ ವೈಯಕ್ತಿಕ ಜೀವನದಲ್ಲಿ ಹುಡುಬೇಕಾಗಿಲ್ಲ. ಆದರೆ ಅವರು ಕೇಡಿನ ಸಮಸ್ಯೆಯನ್ನು ಬಿಡಿಸಿ ಹೊರಟಾಗ ಯಾವ ದಾರಿಯನ್ನು ಹಿಡಿದ, ದಾರಿ ಕವಲೊಡೆದಾಗ ಕವಲು ಕೊನೆಗಳಲ್ಲಿ ಯಾವುದನ್ನು ಆಯ್ದುಕೊಂಡ ದಾರಿಯಲ್ಲಿ ಅವನಿಗೆ ಎಂಥಂಥ ಅನುಭವಗಳು ಬೆಳಕು ಕೊಟ್ಟವು ಅವನ ಪ್ರತಿಕ್ರಿಯೆಲ್ಲಿ ಏನು ಬದಲಾವಣೆಗಳು ಏತಕ್ಕೆ ಆದವು – ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದು ಫಲಪ್ರದವಾದ ಕೆಲಸ.”

ಈ ಬಗೆಯ ತೂಕವಾದ ಮತ್ತು ಸಮತೋಲನವಾದ ಬೆಲೆ ಕಟ್ಟುವುದುಕ್ಕೆ ಷೇಕ್ಸ್‌ಪಿಯರ್ ಕವಿಯ ಉಳಿದ ನಾಟಕಗಳನ್ನೂ ಪದ್ಯಗಳನ್ನೂ ಅಳವಾಗಿ ಅಧ್ಯಯನ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. ಮೂರ್ತಿರಾಯರಲ್ಲಿ ಅಂತಹ ಸಿದ್ಧತೆ ತಲಸ್ಪರ್ಶಿಯಾದ ತಿಳಿವಳಿಕೆ ವಿಶೇಷವಾಗಿ ಇದೆ.

ಮೂರ್ತಿರಾಯರು ಬೇರೆ ಬೇರೆ ಕಾಲದಲ್ಲಿ ವಿವಿಧ ಗ್ರಂಥಗಳಿಗೆ ಬರೆದ ಮುನ್ನುಡಿ ಅವತರಣಿಕೆ ಮೊದಲಾದ ರೂಪದಲ್ಲಿದ್ದ,ಆ ದರೆ ಇವೆಲ್ಲದರಲ್ಲಿಯೂ ಅಂತರಿಕ ಸತ್ವವಿರುವುದರಿಂದ ಮೌಲಿಕವೆನಿಸುವ ಒಂಬತ್ತು ಬರಹಗಳನ್ನು “ವಿಮರ್ಶಾತ್ಮಕ ಪ್ರಬಂಧಗಳು” ಎಂಬ ಗ್ರಂಥದಲ್ಲಿ ಪ್ರಕಟಿಸಲಾಗಿದೆ.

ಸಾಹಿತ್ಯ ಮತ್ತು ಸತ್ಯಎಂಬ ಗ್ರಂಥದಲ್ಲಿ ಸಾಹಿತ್ಯ ಮತ್ತು ಸತ್ಯ, ಕಲೆ ಮತ್ತು ನೀತಿ ಸಂಸ್ಕೃತಿ ಮತ್ತು ಸಾಹಿತ್ಯ ನಮ್ಮ ಸಾಹಿತ್ಯದಲ್ಲಿ ಭಾರತೀಯತೆ, ಸಾಹಿತ್ಯ ವಿಮರ್ಶೆ, ಹಾಗೂ ರೊಮ್ಯಾಂಟಿಸಿಸ್ಮ್ ಮತ್ತು ವಾಸ್ತವಿಕತೆ -ಎಂಬ ಆರು ಲೇಖನಗಳಿವೆ, ಇದನ್ನು ಕುರಿತು ಮೂರ್ತಿರಾಯರು “ಈ ಪುಸ್ತಕದಲ್ಲಿ ಸೇರಿಸುವ ಮುನ್ನ ಹೆಚು ವಿಷಯಗಳನ್ನು ಒಳಗೊಳ್ಳುವಂತೆ ಲೇಖನಗಳನ್ನು ವಿಸ್ತರಿಸಿ ಬರೆಯಬಹುದಾಗಿತ್ತು. ಬರೆಯುವ ಅಭಿಲಾಷೆಯೂ ಇತ್ತು. ಆದರೆ ಇಲ್ಲಿ ಸೇರಿರುವ ಇತರ ಮೂರು ಲೇಖನಗಳನ್ನು ಸಿದ್ಧಗೊಳಿಸುವ ವೇಳೆಗೆ ನನ್ನ ಚೈತನ್ಯವೆಲ್ಲ ಉಡಿಗಿಹೋಗಿತ್ತು. ಆದ್ದರಿಂದ “ಇಲ್ಲಿ ಹೇಳಿರುವಷ್ಟು ವಿಷಯಗಳನ್ನು ಕುರಿತಂತೆ ನನ್ನ ಅಭಿಪ್ರಾಯಗಳಲ್ಲಿ ಗಮನಾರ್ಹವಾದ ಬದಲಾವಣೆಯಾಗಿದೆಯೆ” ಎಂಬುದನ್ನು ಮಾತ್ರ ಗಮನಕ್ಕೆ ತಂದುಕೊಂಡೆ, ಅಂಥಾದ್ದೇನೊ ತೋರಲಿಲ್ಲವಾದ್ದರಿಂದ ಈ ಲೇಖನದಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಮೊದಲು ಇದ್ದಂತೆಯೇ ಉಳಿಸಿಕೊಂಡಿದ್ದೇನೆ” ಅವರ ಈ ಪ್ರಾಮಾಣಿಕ ಹೇಳಿಕೆ ಹಾಗಿರಲಿ, ವಾಸ್ತವವಾಗಿ ಇಲ್ಲಿನ ಲೇಖನಗಳು ಇಂದಿಗೂ ಉಪಾಧೇಯವಾಗಿದೆ,

ಅಪರ ವಯಸ್ಕನ ಅಮೇರಿಕಾ ಯಾತ್ರೆಅಂಕಿ ಅಂಶಗಳ ಲೆಕ್ಕ ಕೊಡುವ ನೀರಸ ವರದಿ ಅಲ್ಲ ಅಥವಾ ತಮ್ಮ ಕಷ್ಟ ಸುಖಗಳನ್ನು ಮಾತ್ರ ದಾಖಲಿಸುವ ದಿನಚರಿಯೂ ಅಲ್ಲ. ತುಂಬಾ ವಸ್ತುನಿಷ್ಟವಾಗಿ ನರೆಯಲಾಗಿರುವ ಪ್ರವಾಸ ಕಥನ. ಅರಿಕೆಯಲ್ಲಿ ಲೇಖಕರು ಹೇಳೀರುವುದು ಇಷ್ಟು. “ಪ್ರವಾಸದ ದಿನಚರಿ ಬರೆಯಬೇಕೆಂದು ನಾನು ನ್ಯೂಯಾರ್ಕಿನಲ್ಲಿ ಇಳಿದ ತರುಣದಲ್ಲೇ ಸಂಕಲ್ಪ ಮಾಡಿದೆ, ಆದರೆ ಜಿತವಾಗಿ ಕುಳಿತು ಮಾಡಬೇಕಾದ ಕೆಲಸಗಳನ್ನು ಮಾಡಲಿಲ್ಲ, ನಾಲ್ಕಾರು ಟಿಪ್ಪಣಿಗಳನ್ನು ಗುರುತು ಹಾಕಿಕಂಡೆ, ದಿನಚರಿ ಎನಿಸಿಕೊಳ್ಳಬಹುದಾದ ಕೆಲವು ಪುಟಗಳನ್ನೂ ಆಗಾಗ ಬರೆದ. ಮರಳಿ ಭಾರತಕ್ಕೆ ಬಂದ ಮೇಲೆ ಹುಚ್ಚು ತಿರುಗಿದಾಗ ಹಳೆಯ ಟಿಪ್ಪಣಿ ದಿನಚರಿಗಳನ್ನು ‘ಸಂಪಾದಿಸಿ’ ಅವಕ್ಕೆ ನಾಮರೂಪಗಳನ್ನು ಕೊಡುವ ಪ್ರಯತ್ನ ಮಾಡಿದೆ. ೧೯೭೩ರಲ್ಲಿ ಆರಂಬವಾದ ಬರವಣಿಗೆ ೧೯೭೯ರಲ್ಲಿ ಮುಗಿದಿದೆ. ನನ್ನ ಸೋಮಾರಿತನಕ್ಕೆ ಹೊಸ ಸಾಕ್ಷ್ಯಬೇಕಾದರೆ ಈ ಪುಸ್ತಕ ಅದನ್ನು ಒದಗಿಸುತ್ತದೆ.”

“ಇದು ದಿನಚರಿಯೂ ಅಲ್ಲ ಸಾಮಾನ್ಯ ಕಥನವೂ ಅಲ್ಲ ಅವೆರಡರ ಬೆರಕೆ, ಆ ಬಗೆಯ ತಲೆಚೀಟಿ ಹಚ್ಚದೆ ‘ಅನುಭವ ನಿರೂಪಣೆ’ ಎಂದು ಕರೆದು ಸುಮ್ಮನಾಗುತ್ತೇನೆ. ಇದರಲ್ಲಿ ಅಮೇರಿಕದಲ್ಲೇ ಆದ ಅನುಭವಗಳ ಜೊತೆಗೆ ಅದರಿಂದ ಪ್ರಚೋದಿತವಾಗಿ ಮನಸಿನ ಮೇಲ್ಪದರಕ್ಕೆ ಬಂದ ಹಳೆಯ ಅನುಭವಗಳೂ ಸೇರಿವೆ. ಅನುಭವಕ್ಕೂ ಅದು ಅಭಿವ್ಯಕ್ತಿ ಪಡೆದದ್ದಕ್ಕೂ ನಡುವೆ ವರ್ಷಗಳ ಅಂತರವಿದೆ. ಬರೆಯುತ್ತಿದ್ದಾಗ ಎಷ್ಟೋ ಅಂಶಗಳು ನೆನಪಿಗೆ ಬರಲಿಲ್ಲ, ಆದರೆ ಬಂದಷ್ಟರಲ್ಲಿ ಸತ್ಯ ಮಸಕಾಗಿಲ್ಲ ಎಂದು ನನ್ನ ನಂಬಿಕೆ.”

ಇವರ ನಂಬಿಕೆ ಏನೇನೂ ಪೊಳ್ಳಾಗಿಲ್ಲ. ತಮ್ಮ ಪ್ರವಾಸಾನುಭವವನ್ನು ಕುರಿತು ಬರೆದ ಪುಸ್ತಕಗಳು ಕನಕಡದಲ್ಲಿ ಸಾಕಷ್ಟು ಪ್ರಕಟವಾಗಿವೆ. ಅದರಲ್ಲಿಯೂ ಮುಖ್ಯವಾಗಿ ಅಮೆರಿಕಕ್ಕೆ ಹೋಗಿ ಬಂದವರು ಬರೆದ ಪ್ರವಾಸಕಥನಗಳು ಹೆಚ್ಚಾಗಿವೆ. ಈ ಮಾಲೆಯಲ್ಲಿ ಮೂರ್ತಿರಾಯರ ಪುಸ್ತಕ ಚೂಡಾಮಣಿ, ಈ ಗ್ರಂಥದ ಹಿರಿಮೆಯನ್ನು ಪ್ರಸ್ತಾಪಿಸಲು ಒಂದು ಪ್ರತ್ಯೇಕ ಲೇಖನವೇ ಬರೆಯಬೇಕಾಗುತ್ತದೆ. ಇದರಿಂದ ಉದಾಹರಿಸಬಹುದಾದ ಭಾಗಗಳು ಬಹಳಷ್ಟು ಇವೆ. ನನ್ನ ನೆಮ್ಮದಿಗಳಿಗಾಗಿ ಎರಡು ನಿದರ್ಶನಗಳನ್ನು ಉಲ್ಲೇಖಿಸಿದ್ದೇನೆ.

“ಸ್ನಾನವಾದ ಮೇಲೆ ಮೈಯಿನ ಬಿಗುಪೆಲ್ಲ ಇಳಿದು ಹೋಗುತ್ತದೆ, ನರಗಳು ಸಡಿಲವಾಗುತ್ತವೆ ಮಲಗಿದೊಡನೆ ನಿದ್ದೆ ಬರುತ್ತದೆ, ಆಲಸ್ಯದಲ್ಲಿ ಕಳೆದು ಮೈಮನಗಳೆರಡೂ ಮತ್ತೊಂದು ಒಬ್ಬೆ ಆಲಸ್ಯಕ್ಕೆ ಸಿದ್ದವಾಗುತ್ತವೆ. ನಾನು ಒನ್ನೊಂದು ಬಾರಿ ಮನೆ ಕಟ್ಟಿದರೆ, ಅದಕ್ಕಾಗಿ ಸಾಲ ಮಾಡುವುದು ಸಾಧ್ಯವಾದರೆ ಮತ್ತು ಸಾಲವನ್ನು ತೀರಿಸುವುದು ಅನವಶ್ಯಕವಾದರೆ – ಮೇಲೆ ಬಣ್ಣಿಸಿದಂಥ ಬಚ್ಛಲು ಮನೆಯನ್ನು ಕಟ್ಟಲೇಬೇಕು.”

“ಅಮೇರಿಕಕ್ಕೆ ಬರುವ ಮುನ್ನ ಬೊಂಬಾಯಿಯಲ್ಲಿ ಕೆಲವು ದಿನ ಇದ್ದೆ. ಅಲ್ಲಿ ನನ್ನ ಮಿತ್ರರೊಬ್ಬರು, ಚಿಕ್ಕಂದಿನಲ್ಲಿ ನನ್ನ ಒಡನಾಡಿಯಾಗಿದ್ದವರು. ತಮ್ಮ ಮನೆಗೆ ಆಹ್ವಾನಿಸಿದರು. ಅವರೊಡನೆ ಆರು ದಶಕಗಳ ಹಿಂದಿನ ನೆನಪುಗಳು ಮೆಲಕು ಹಾಕುತ್ತ ಸಂಜೆಯನ್ನು ಕಳೆಯಬಹುದೆಂದು ನನ್ನ ನಿರೀಕ್ಷೆ ಆದರೆ ಅವರು ಹೊಸದಾಗಿ ಈ ಟೀವಿ ಭೂತವನ್ನು ಬರಮಾಡಿಕೊಂಡಿದ್ದರು. ಅಲ್ಲಿದ್ದ ಎರಡು ಗಂಟೆಗಳ ಕಾಲ ಒಬ್ಬರೂ ಪಿಟಗುಟ್ಟಲಿಲ್ಲ. ಅತ್ತ ಇತ್ತ ನೋಡಲಿಲ್ಲ ನಗಲಿಲ್ಲ. ಯೋಗಕ್ಷೇಮ ವಿಚಾರಿಸಲಿಲ್ಲ, ತೀರ ಸಾಮಾನ್ಯವಾದ, ಬಾಲಿಶವಾದ ಎಂದರೂ ತಡೆಯುವಂಥ ಟೀವಿ ಕಾರ್ಯಕ್ರಮ ನೋಡಿದ್ದೂ ನೋಡಿದ್ದೇ, ಟೀವಿ, ಮೆಚ್ಚಿಕೊಂಡರೆ ಮನೆಯ ಗತಿ ಏನಾಗುತ್ತದೆಂದು ಹಿಂದೆ ಕೇಳಿದ್ದೆ. ಅವತ್ತು ಪ್ರತ್ಯಕ್ಷಾನುಭವ ಪಡೆದಂತಾಯಿತು. ಆದ್ದರಿಂದ ಟೀವಿ ನೋಡುವ ಕುತೂಹಲ ಏನೇನೂ ಉಳಿಯಲಿಲ್ಲ”

ನಿರ್ಮಮಕರರಾಗಿ, ಕೆಲವೊಮ್ಮೆ ತೀರಾ ಮುಗ್ಧರಾಗಿ, ಹಲವೊಮ್ಮೆ ಅಷ್ಟೇ ಪ್ರಬುದ್ಧರಾಗಿ ಅವರು ಬದುಕಿಗೆ ಸ್ಪಂದಿಸುವ ರೀತಿ ಮನೋಜ್ಞವಾಗಿರುತ್ತದೆ. ಮತ್ತೆ ಮತ್ತೆ ಮೆಲುಕು ಹಾಖುವಂತಿರುತ್ತದೆ. ಪ್ರವಾಸ ಕಥನಕ್ಕೆ ಪ್ರವಾಸ ಕಥನವಾಗಿ, ಮುಗಿದ ಜೀವದ ಜೀವನ ಸಿದ್ಧಾಂತವಾಗಿ, ಶ್ರೇಷ್ಠ ಸಾಹಿತ್ಯ ಕೃತಿಯಾಗಿ ‘ಅಪರ ವಯಸ್ಕನ ಅಮೆರಿಕಾ ಯಾತ್ರೆ’ ಕನ್ನಡದಲ್ಲಿ ಅನನ್ಯವೆನಿಸಕೊಲ್ಳುತ್ತದೆ.

ಪ್ರವಾಸ ಇವರಿಗೆ ಒಂದು ಹವ್ಯಾಸವೇನೂ ಅಲ್ಲ. ಆದರೆ ಅವರ ಜೀವನ ವಿಧಾನ ಅಂತಹ ಅನಿವಾರ್ಯ ತಂದು ಕೊಟ್ಟಿತು. ಈಗಾಗಲೇ ಮೂರು ಬಾರಿ ವಿದೇಶಯಾತ್ರೆ ಹೋಗಿಬಂದಿದ್ದಾಗಿದೆ. ೧೯೬೪ರಲ್ಲಿ ಪೂರ್ವದೇಶಗಳಲ್ಲೂ ೧೯೭೩ರಲ್ಲಿ ಅಮೆರಿಕವನ್ನೂ ಸುತ್ತಿಕೊಂಡು ಬಂದಿದ್ದಾರೆ. ಇಂಗ್ಲೆಂಡ್, ಅಮೆರಿಕ, ಫಿಲಪೇನ್ಸ್, ಆಫ್ರಿಕಾ, ಕೆನಡಾ ಮೊದಲಾದ ದೇಶಗಳ ಸಂಚಾರ ಅವರ ಅನುಭವ ಕೋಶವನ್ನು ಹಿಗ್ಗಿಸಿದೆ. ‘ಅಪರ ವಯಸ್ಕನ ಅಮೆರಿಕಾ ಯಾತ್ರೆ’ ವಿದೇಶ ಪ್ರವಾಸದ ಅನುಭವದ ಫಲಮಾತ್ರ ಅಲ್ಲ. ಅದೊಂದು ಶುದ್ಧಾಂತಃಕರಣದ ರನ್ನದರ್ಪಣ, ಭಾರತೀಯ ಸಜ್ಜನ ಶ್ರೇಷ್ಠನೊಬ್ಬನ ಕೈಪಿಡಿ.

ಇವರ ಬರವಣಿಗೆ ಒಂದು ನಿರ್ದಿಷ್ಟ ತಾತ್ವಿಕ ನೆಲೆಗಟ್ಟಿನ ಮೇಲೆ ನಿಂತಿದೆ. ದೀರ್ಘ ಜೀವನದ ಸಂದರ್ಭದಲ್ಲಿ ಕನ್ನಡ ನಾಡಿನ ಒಳಗೂ ಹೊರಗೂ ತಮಗೆ ದಕ್ಕಿದ ಅನುಭವಗಳನ್ನು ಸಾಹಿತ್ಯವನ್ನಾಗಿರುವ ಸಾರ್ಥಕ ಮಾಡಿಡುವ ಪ್ರಯತ್ನ ಇವರದು. ನಮ್ಮ ಪರಂಪರೆಯ ಅರಿವು, ಚಾರಿತ್ರಿಕ ಪ್ರಜ್ಞೆ, ಜಾಗತಿಕ ಸಾಹಿತ್ಯ ಪ್ರಪಂಚದ ನಿಕಟ ಪರಿಚಯ – ಇವುಗಳಿಂದ ಇವರು ಸಮಗ್ರ ದೃಷ್ಟಿಯುಳ್ಳ ಲೇಖಕರಾಗಿ ಗಣ್ಯರೆನಿಸಿಕೊಂಡಿದ್ದಾರೆ. ಕನ್ನಡ ಭಾಷೆ ಕೂಡ ಇವರಿಗೆ ಹದವಾಗಿ ಒಗ್ಗಿದೆ. ಇವರು ಮಿದ್ದಂತೆ ಅದೂ ಕೇಳುತ್ತದೆ. ತಿದ್ದಿದಂತೆ ಆಕಾರ ಪಡೆಯುತ್ತದೆ,

ಇಂದಿನ ಸಾಮಾಜಿಕ ಸಂದರ್ಭದಲ್ಲೂ ಇವರ ಬರವಣಿಗೆ ಸಂಗತ ಹಾಗೂ ಪ್ರಸ್ತುತವೆನಿಸಿಕೊಳ್ಳಲು ಕಾರಣ ಇವರ ನಿರ್ಲಿಪ್ತತೆ. ಬಹು ಜನ ಲೇಖಕರಲ್ಲಿ ಅಪರೂಪವಾಗಿರುವ ಈ ಗುಣವನ್ನು ಅಪೂರ್ವವೆನಿಸುವಂತೆ ಇವರು ಸಾಧಿಸಿಕೊಂಡಿದ್ದಾರೆ. ಹತ್ತು ಆಸಕ್ತಿಗಳ ನಟ್ಟನಡುವೆ ಇವರು ಮಾನವೀಯತೆ ಬಿಟ್ಟು ದೂರ ಸರಿಯುವುದಿಲ್ಲ. ತನ್ನ ರಹಸ್ಯಗಳನ್ನು ಸುಲಭವಾಗಿ ಬಿಟ್ಟುಕೊಡದ ಬದುಕಿನ ಅಥವಂತಿಕೆಯನ್ನು ಅರಸುತ್ತಾ ಅನುಭವಗಳನ್ನು ಸಂವೇದನೆಗಳನ್ನು ಇವರು ಶೋಧಿಸುವ ರೀತಿ ಅನನ್ಯವೆನಿಸುತ್ತದೆ. ಇವರ ಎಲ್ಲ ಬರವಣಿಗೆಯ ಕೇಂದ್ರ ಬಿಂದು ಮಾನವೀಯತೆ ಅತಿ ಸಂಕೀರ್ಣತರವಾದ ಮನುಷ್ಯ ಸ್ವಭಾವದ ಸೂಕ್ಷ್ಮ ಸ್ತರಗಳನ್ನು ಇವರು ಗುರುತಿಸುವುದು, ವಿಶ್ಲೇಷಿಸುವುದು, ಸ್ಪಂದಿಸುವುದು ತುಂಬಾ ಸ್ವಾಭಾವಿಕ ರೀತಿಯಲ್ಲಿರುತ್ತದೆ. ಇವೆಲ್ಲದರಿಂದಾಗಿ ಇವರಿಗೆ ಮುಪ್ಪಾಗದೆ, ತಂಗಳಾಗದೆ, ಕುಂದದೆ ತೇಜಸ್ವಿಯಾಗಿದೆ, ಇದಕ್ಕಿಂತ ಲೇಖಕನಿಗೆ ದೊಡ್ಡ ಗೌರವ ಏಕೆ ಬೇಕು? ಏನು ತಾನೆ ಬೇಕು?

ಇವರ ಕೃತಿಗಳು

ಲಲಿತ ಪ್ರಬಂಧವ್ಯಕ್ತಿ ಚಿತ್ರ

೧. ಹಗಲುಗನುಸುಗಳು
೨. ಅಲೆಯುವ ಮನ
೩. ಮಿನುಗು ಮಿಂಚು
೪. ಚಿತ್ರಗಳು ಪತ್ರಗಳು

ಪ್ರವಾಸ ಕಥನ :

೫. ಅಪರ ವಯಸ್ಕನ ಅಮೆರಿಕಾಯಾತ್ರೆ

ಸಾಹಿತ್ಯ ವಿಮರ್ಶೆ :

೬. ಷೇಕ್ಸ್ ಪಿಯರ್
೭. ಮಾಸ್ತಿಯವರ ಕಥೆಗಳು
೮. ಬಿ.ಎಂ. ಶ್ರೀಕಂಠಯ್ಯ
೯. ಪೂರ್ವಸೂರಿಗಳೊಡನೆ
೧೦. ಸಾಹಿತ್ಯ ಮತ್ತು ಸತ್ಯ
೧೧. ವಿಮರ್ಶಾತ್ಮಕ ಪ್ರಬಂಧಗಳು

ರೂಪಾಂತರ ಭಾಷಾಂತರ

೧೨. ಅಷಾಢಭೂತಿ (ನಾಟಕ)
೧೩. ಮೋಲಿಯೇರನ ಎರಡು ನಾಟಕಗಳು
೧೪. ಚಂಡಮಾರುತ (ನಾಟಕ)
೧೫. ಸಾಕ್ರೇಟೀಸನ ಕೊನೆಯ ದಿನಗಳು
೧೬. ಪಾಶ್ಚಾತ್ಯ ಸಣ್ಣ ಕಥೆಗಳು
೧೭. ಯೋಧನ ಪುನರಾಗಮನ
೧೮. ಅಮೆರಿಕನ್ ಸಾಹಿತ್ಯ (ವಿಮರ್ಶೆ)

ಇಂಗ್ಲಿಷಿನಲ್ಲಿ

೧೯. The Return to the Soil
೨೦. B.M. Srikantaiah.

 (ಕನ್ನಡ ನುಡಿ, ಅಕ್ಟೋಬರ್ ೧೬, ೧೯೮೨)

ವಿ.ಸೂ. : ‘ಕನ್ನಡನುಡಿಪತ್ರಿಕೆಯಲ್ಲಿ ಪರಿಚಯ ಲೇಖನವನ್ನು ಪ್ರಕಟಿಸಿದ್ದು ನಿರ್ದಿಷ್ಟ ಉದ್ದೇಶದಿಂದ, ಕೈವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನೇ ಅಧ್ಯಕ್ಷರನ್ನಾಗಿ ಆರಿಸಬೇಕೆಂದು ಪೂರ್ವನಿರ್ಧಾರ ಮಾಡಿದ್ದೆ. ಕಾರ್ಯ ಸಮಿತಿಯ ಸದಸ್ಯರಿಗೂ ಕನ್ನಡ ನುಡಿಯ ಓದುಗರಿಗೂ ಇವರ ಎತ್ತರ ಬಿತ್ತರದ ವಿಹಂಗಮ ನೋಟವಿದ್ದರೆ ಒಳಿತು ಎಂಬ ಗ್ರಹಿಕೆಯೂ ಒತ್ತಾಸೆಯಾಯಿತು. ಕೈವಾರ ಸಮ್ಮೇಳನದ ಅಧ್ಯಕ್ಷರಾಗಿ ಇವರು ಅವಿರೋಧವಾಗಿ ಆಯ್ಕೆಯಾದದ್ದೂ ಶತಾಯುವಾಗಿ ಬಾಳಿದ್ದೂ ಈಗ ಇತಿಹಾಸ.

* * *