ಜಾನಕೀಚಟ್ಟಿಯ ಈ ಮರದ ಮನೆಯಲ್ಲಿ ಕಣ್ಣು ತೆರೆದಾಗ ಆಗಲೇ ಬೆಳಗಿನ ಏಳು ಗಂಟೆ. ಲಗುಬಗೆಯಿಂದ ಎದ್ದು ಪಕ್ಕದ ಹೋಟೆಲ್‌ನವರ ಹತ್ತಿರ ಒಂದಷ್ಟು ಬಿಸಿನೀರು ತೆಗೆದುಕೊಂಡು, ಮುಖಮಾರ್ಜನಗಳನ್ನು ತೀರಿಸಿಕೊಂಡೆವು. ಎಂಟು ಗಂಟೆಯ ಹೊತ್ತಿಗೆ ಬಂದು ಮುಖ ತೋರಿಸಿದ ಕಂಡಿಯವರ ಜತೆ, ಹೋಟೆಲಿನಲ್ಲಿ ಒಂದಷ್ಟು ಚಾ ಕುಡಿದು ಹನುಮಾನ್‌ಚಟ್ಟಿಯ ಕಡೆಗೆ ಹೊರಟೆವು. ಕಂಡಿಯಲ್ಲಿ ಈಗ ನಾವು ಯಮುನೋತ್ರಿಯ ದಿಕ್ಕಿಗೆ ಮುಖ ಮಾಡಿ ಕೂತಿದ್ದರಿಂದ, ನಮ್ಮ ಪಯಣದ ಉದ್ದಕ್ಕೂ, ಬಂದೇರ್ ಪೂಂಚ್ ಶಿಖರಗಳು, ಬೆಳಗಿನ ಹೊಂಬಿಸಿಲಿನಲ್ಲಿ ಬಂಗಾರದ ಗೋಪುರಗಳಾಗಿ ಆಕಾಶದೇಶವನ್ನು ರೇಖಿಸಿದ ದೃಶ್ಯ ರೋಮಾಂಚಕಾರಿ ಯಾಗಿತ್ತು. ಕ್ರಮಕ್ರಮೇಣ ಹೊತ್ತೇರಿದಂತೆ, ಆ ಮಹಾ ಪರ್ವತಪಂಕ್ತಿಗಳು, ಥಳಥಳಿಸುವ ಬೆಳ್ಳಿಯ ತಗಡನ್ನು ಹೊದಿಸಿದಂತೆ ಭಾಸವಾದವು. ಇಳಿಯುತ್ತಾ ಇಳಿಯುತ್ತಾ ಮತ್ತೆ ಸಸ್ಯಶ್ಯಾಮಲವಾದ, ಅನೇಕ ಬಗೆಯ ಹೂವುಗಳಿಂದ ಹಬ್ಬಿದ ಬೆಟ್ಟಗಳನ್ನು ದಾಟಿದೆವು. ಹಾಗೆಯೇ ಕೆಳಗೆ ಹೋದ ಹಾಗೆ, ನಾವೇರಿದ ಎತ್ತರ ಎಂಥದೆಂಬುದರ ಅರಿವು ನಮಗಾಗತೊಡಗಿತು. ಬೆಳಗಿನ ಸ್ವಚ್ಛ ಸುಂದರ ಪ್ರಶಾಂತ ಪರ್ವತಾರಣ್ಯ ಮೌನಗಳಲ್ಲಿ, ಕೆಳಗೆ ದಾರಿಯುದ್ದಕ್ಕೂ ನಿರಂತರವಾಗಿ ಪ್ರವಹಿಸುವ ಯಮುನೆಯ ಜುಳುಜುಳು ನಾದವನ್ನು ಆಲಿಸುತ್ತಾ, ಬೆಟ್ಟದ ಮೈಯಲ್ಲಿ ನೆಟ್ಟಗೆ ಮೇಲೆದ್ದ ಎತ್ತರದ ದೇವದಾರು ಮರಗಳ ಕೊಂಬೆಯಲ್ಲಿ ಜೋಕಾಲಿಯಾಡುವ ಗಾಳಿಯ ಮರ್ಮರವನ್ನು ಕೇಳುತ್ತಾ, ಅಲ್ಲಲ್ಲಿ ಕಂಡಿಯಿಂದ ಇಳಿದು, ನಮಗೆ ತಿಳಿದ ಹರಕುಮುರುಕು ಹಿಂದಿಯಲ್ಲಿ ಕಂಡಿಯವರ ಜತೆ ಸಂಭಾಷಿಸುತ್ತ, ಅವರ ಜತೆ ನಡೆದು ಹತ್ತೂವರೆಯ ಹೊತ್ತಿಗೆ ಹನುಮಾನ್‌ಚಟ್ಟಿಯನ್ನು ತಲುಪಿದೆವು. ನಮ್ಮನ್ನು ಸುರಕ್ಷಿತವಾಗಿ ಹಿಂದಕ್ಕೆ ಹೊತ್ತು ತಂದ ಕಂಡಿಯವರಿಗೆ ಕೊಡಬೇಕಾದ ಹಣವನ್ನೂ ಮತ್ತೆ ಮೇಲಷ್ಟು ಇನಾಮನ್ನೂ ಧಾರಾಳವಾಗಿಯೇ ಕೊಟ್ಟೆವು. ಅವರು ತುಂಬ ಖುಷಿಯಿಂದ ಅದನ್ನು ತೆಗೆದುಕೊಂಡು, ಮತ್ತೆ ಆ ದಿನದ ಕೆಲಸಕ್ಕೆ, ಅಂದರೆ ಮತ್ತೆ ಒಂದಷ್ಟು ಯಾತ್ರಿಕರನ್ನು ಬೆನ್ನ ಮೇಲೆ ಏರಿಸಿಕೊಳ್ಳುವ ಕಾಯಕಕ್ಕೆ ಹೊರಟರು.

ಬಹುಸಂಖ್ಯೆಯ ಟ್ಯಾಕ್ಸಿ ಕಾರು ಬಸ್ಸುಗಳ ನಡುವೆ ನಮ್ಮ ಟ್ಯಾಕ್ಸಿಯನ್ನು ಪತ್ತೆ ಹಚ್ಚಿ, ಅಲ್ಲಿಂದ ಕೆಳಗಿನ ಐದು ಕಿಲೋಮೀಟರ್ ದೂರದ ಸಯಾನಚಟ್ಟಿಗೆ ಬಂದೆವು. ಈಗಲಾದರೂ ಸರ್ಕಾರೀಪ್ರವಾಸಿ ಮಂದಿರದಲ್ಲಿ ಒಂದಷ್ಟು ಸ್ಥಳ ದೊರೆತು ನಮ್ಮ ಸ್ನಾನಾದಿಗಳಿಗೆ ಅನುಕೂಲವಾದೀತೇನೋ ಎಂದು ವಿಚಾರಿಸಿದರೆ, ಸದ್ಯಕ್ಕೆ ಇಡೀ ಪ್ರವಾಸಿಮಂದಿರ ಖಾಲಿ ಇರುವುದಾಗಿಯೂ, ಮಧ್ಯಾಹ್ನದ ವೇಳೆಗೆ ಉತ್ತರ ಪ್ರದೇಶದ ಎಮ್ಮೆಲ್ಲೆಗಳು ಬರುವ ಕಾರಣ ಅದನ್ನು ಗುಡಿಸಿ ಸ್ವಚ್ಛ ಮಾಡಿಸುತ್ತಿರುವುದಾಗಿಯೂ, ಅದೇ ಕಾರಣದಿಂದ ಯಾರಿಗೂ ಕೊಠಡಿಗಳನ್ನು ಕೊಡಲು ಸಾಧ್ಯವಿಲ್ಲವೆಂದೂ ತಿಳಿಸಲಾಯಿತು. ಕಡೆಗೆ ನಾವು ಸ್ನಾನ ಮಾಡಿ ಊಟ ಮುಗಿಸಿ ಮಧ್ಯಾಹ್ನ ಹೊರಡುವವರೆಗಾದರೂ ಸ್ಥಳವನ್ನು ಕಲ್ಪಿಸಿಕೊಡಿ ಎಂದು ಕೇಳಿಕೊಂಡದ್ದರ ಮೇಲೆ, ಇದ್ದುದರಲ್ಲೆ ಅತ್ಯಂತ ಕೆಟ್ಟದಾದ ಕೊಠಡಿಯೊಂದು ಕ್ಯಾಂಟೀನಿನ ಪಕ್ಕದಲ್ಲಿ ನಮಗೆ ದೊರೆಯಿತು. ಬರಲಿದ್ದ ಆ ಎಮ್ಮೆಲ್ಲೆಗಳನ್ನು ಮನಸ್ಸಿನಲ್ಲೇ ಶಪಿಸುತ್ತಾ, ಕ್ಯಾಂಟೀನಿನವನು ಕೃಪೆಯಿಟ್ಟು ಕಾಯಿಸಿಕೊಟ್ಟ ಬಿಸಿನೀರಿನಲ್ಲಿ ಸ್ನಾನಮಾಡಿ, ಅವನು ವಿಶೇಷ ಮುತುವರ್ಜಿಯಿಂದ ಮಾಡಿ ಬಡಿಸಿದ ಊಟವನ್ನು ಮುಗಿಸಿ ಮಧ್ಯಾಹ್ನದ ಎರಡೂವರೆಯ ಹೊತ್ತಿಗೆ ಉತ್ತರ ಕಾಶಿಗೆ ಹೊರಡಲು ಸಿದ್ಧರಾದೆವು.

ಸಯಾನಚಟ್ಟಿಯಿಂದ ಉತ್ತರ ಕಾಶಿ ೧೧೯ ಕಿಲೋಮೀಟರ್‌ಗಳ ದೂರ.  ಅಂದಿನ ಸಂಜೆಯೊಳಗಾಗಿ (೧೬.೫.೧೯೮೪) ಉತ್ತರ ಕಾಶಿಯನ್ನು ಸೇರಿ, ರಾತ್ರಿ ಅಲ್ಲಿದ್ದು ಮರುದಿನ ಬೆಳಿಗ್ಗೆ ಗಂಗೋತ್ರಿಯನ್ನು ತಲುಪುವುದು ನಮ್ಮ ಗುರಿಯಾಗಿತ್ತು. ನಮ್ಮ ಟ್ಯಾಕ್ಸಿ ಸಯಾನ ಚಟ್ಟಿಯ ಬಳಿ ಹರಿಯುವ ಯಮುನೆಯನ್ನು ಸೇತುವೆಯ ಮೂಲಕ ದಾಟಿ, ಆಚೆ ದಡದ ಬೆಟ್ಟದ ಅಂಚನ್ನು ಸೇರಿ ಏರತೊಡಗಿತು. ಹೀಗೆ ಏರಿ ಇಳಿದು, ಇಳಿದು ಏರಿ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ನಾವೊಂದು ಬೃಹದಾಕಾರದ ಬೆಟ್ಟದ ದಾರಿಯಲ್ಲಿ ಕ್ರಮಿಸುತ್ತಿದ್ದೆವು. ಎರಡೂ ಕಡೆ ಎತ್ತರವಾದ  ಮರಗಳು ಕಿಕ್ಕಿರಿದ ದಾರಿಗಳಲ್ಲಿ ಹಾದು, ಅನೇಕ ತಿರುವುಗಳಲ್ಲಿ ತಟ್ಟನೆ ತೆರೆದುಕೊಳ್ಳುವ ಆಕಾಶದ ಬಟ್ಟ ಬಯಲನ್ನು ಎದುರುಗೊಂಡು, ಮತ್ತೊಂದು ತಿರುವಿನ ಮೂಲಕ ಸ್ವಲ್ಪ ವಿರಳ ಸಸ್ಯದ ಪ್ರದೇಶವನ್ನು  ತಲುಪಿದೆವು. ಆ ಎತ್ತರದಿಂದ ಕೆಳಗೆ ಅಗಾಧವಾದ ಕಣಿವೆಗಳ ಹರಹು, ಆ ಕಣಿವೆಗಳಲ್ಲಿ ತೆರೆತೆರೆಯಾದ ಸಾಮಂತ ಪರ್ವತ ಪಂಕ್ತಿಗಳೂ, ಆ ಹರಹಿನ ತುಂಬಾ ದಟ್ಟವಾದ ಹಸಿರೂ, ಆ ಹಸಿರುಗಳ ಮೇಲೆ ತೇಲುವ ನೀರಿನ ಆವಿ, ಅದರಾಚೆಗೆ ಮತ್ತೆ ಗಗನಸ್ಪರ್ಧಿಯಾದ ಪರ್ವತ ಶ್ರೇಣಿಗಳು, ಕಣ್ಣಿಗೊಂದು ಹಬ್ಬವಾಗಿ ಒದಗಿದವು. ಮತ್ತಷ್ಟು ದೂರ ಹೋದನಂತರ ನಮ್ಮ ಪ್ರಯಾಣ ನಾವು ಈ ಕೆಳಗೆ ಕಂಡ ಹರಹಿನ ಕಡೆಗೆ ಅವರೋಹಣದ ಗತಿಯಲ್ಲಿತ್ತು. ನಾವು ಒಂದೊಂದೇ ತಿರುವುಗಳ ಮೂಲಕ ಇಳಿಯತೊಡಗಿದಂತೆ, ಕೆಳಗಿನ ವಿಸ್ತಾರವಾದ ಕಣಿವೆಯ ಹರಹಿನಲ್ಲಿ ತುಂಬಾ ದಟ್ಟವಾದ ಮೋಡ ಕವಿದುಕೊಂಡಂತೆ ತೋರಿತು. ಸ್ವಲ್ಪ ಹೊತ್ತಿನ ಮೇಲೆ, ಅದು ಮೋಡವಲ್ಲ, ದಟ್ಟವಾದ ಹೊಗೆ ಎಂಬುದನ್ನು ನಮ್ಮ ಮೂಗುಗಳು ಗುರುತಿಸಲು ಕಷ್ಟವಾಗಲಿಲ್ಲ. ಇನ್ನೂ ಒಂದು ತಿರುವಿನ ಮೂಲಕ ಮತ್ತಷ್ಟು ಕೆಳಗಿನ ದಾರಿಗೆ ಬಂದಾಗ, ಆ ಹೊಗೆಗೆ ಕಾರಣವಾದ ಬೆಂಕಿ, ನಾವು ಇಳಿಯುತ್ತಿರುವ ಪರ್ವತ ಪ್ರಾಂತ್ಯವನ್ನೆಲ್ಲ ಆವರಿಸಿರುವುದು ಕಂಡು ಬಂದಿತು. ಕೆಲವೆಡೆ ದಟ್ಟವಾದ ಆ ಹೊಗೆಮೋಡದ ನಡುವೆಯೇ ನಮ್ಮ ಡ್ರೈವರ್ ನಿಶ್ಚಿಂತನಾಗಿ ಟ್ಯಾಕ್ಸಿಯನ್ನು ತೂರಿಸಿಕೊಂಡು ನಡೆಯಿಸಿದ. ನಮ್ಮ ಟ್ಯಾಕ್ಸಿಯ ಎರಡೂ ಬದಿಗೆ ಉರಿಯುತ್ತಿರುವ ಕಾಡು, ಮತ್ತು ನಾವು ಇಳಿದು ಪ್ರವೇಶಿಸಲಿರುವ ಆ ಕೆಳಗಿನ ದಾರಿಯಲ್ಲೂ ಉರಿಯುವ ಕಾಡು. ನಾವು ಕೆಳಗೆ ಹೋದಂತೆ ಮೇಲಿನಿಂದ ಉರಿಯುತ್ತಾ ದಾರಿಗಡ್ಡಲಾಗಿ ಬಿದ್ದಿದ್ದ ಕೊಂಬೆಗಳು. ನಮ್ಮ ಡ್ರೈವರ್ ಹಿಂದಿಯಲ್ಲಿ ಆ ಕಾಡುಕಿಚ್ಚನ್ನು ಬಯ್ಯುತ್ತ, ದಾರಿಗಡ್ಡವಾಗಿ ಬಿದ್ದಿದ್ದ ಆ ಉರಿಯುವ ಕೊಳ್ಳಿಗಳ ಪಕ್ಕದಲ್ಲೇ ಟ್ಯಾಕ್ಸಿಯನ್ನು ನಡೆಸುತ್ತಿದ್ದ. ಒಳಗೆ ಕೂತಿದ್ದ ನಮಗಂತೂ ಆ ಹೊಗೆ ಬೆಂಕಿಯನ್ನು ಕಂಡು ನಡುಕ. ಮುಂದೆ ಹೋದರೆ, ದಾರಿಯ ಎರಡೂ ಬದಿಗೆ ಒಣಗಿದ ಹುಲ್ಲು, ಬೆಂಕಿಯ ಹಸಿದ ನಾಲಗೆಗೆ ಸಿಕ್ಕು ಧಗಧಗಿಸುತ್ತಿತ್ತು; ಅದರ ಪಕ್ಕದ ಹಚ್ಚ ಹಸುರಾದ ಎತ್ತರದ ಮರವೊಂದರ ಕಾಂಡ ಎಣ್ಣೆ ಹಾಕಿದ ಪಂಜಿನಂತೆ ಉರಿಯುತ್ತಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ  ಇಡೀ ಮರ, ಧೊಪ್ಪನೆ ನಡುದಾರಿಗೆ ಬೀಳುತ್ತದೆ. ಇನ್ನು ನಮಗೆ ಯಾವ ಅಗ್ನಿದಿವ್ಯ ಕಾದಿದೆಯೋ ಅಂದುಕೊಳ್ಳುವ ವೇಳೆಗೆ, ಕಾಡುಕಿಚ್ಚಿನ ಹೊಗೆಯಿಂದ ಮಬ್ಬಾಗಿದ್ದ ಆ ಕಣಿವೆಯ ದಾರಿಯಲ್ಲಿ ನಮ್ಮ ಟ್ಯಾಕ್ಸಿ ಮತ್ತೆ ಮೇಲೇರತೊಡಗಿತ್ತು. ಏರಿದಂತೆ ಹೊಗೆಯ ಘಾಟು ಕಡಿಮೆಯಾಗಿ, ಸ್ವಲ್ಪ ಬೇರೆಯ ಸ್ಚಚ್ಛವಾದ ಗಾಳಿಯೊಂದು ನಮ್ಮನ್ನು ತಟ್ಟುತ್ತಿತ್ತು. ಕೆಳಗಿನ ವಿಸ್ತಾರವಾದ ಕಣಿವೆಯಲ್ಲಿ, ಏರುತ್ತಿದ್ದ ಹೊಗೆ, ಬೆಂಕಿಯ ಸೈನ್ಯವೊಂದು ಹಸಿರುಗಳ ಮೇಲೆ ಧಾಳಿ ನಡೆಸಿದ ಅನಾಹುತದ ಪ್ರತೀಕದಂತೆ ತೋರುತ್ತಿತ್ತು. ನಮ್ಮ ಟ್ಯಾಕ್ಸಿ ಈ ಖಾಂಡವ ದಹನದ ಕಂದರದೊಳಗಿನಿಂದ ಪಾರಾಗಿ ಬೇರೊಂದು ದಿಕ್ಕಿಗೆ ಧಾವಿಸಿತ್ತು. ಐದೂವರೆಯ ವೇಳೆಗೆ, ದಾರಿಯಲ್ಲಿ ಸಿಕ್ಕ ಸಣ್ಣ ಊರೊಂದರಲ್ಲಿ ನಿಂತು, ಚಹಾ ಕುಡಿದು, ಸಂಜೆ ಆರೂವರೆಯ ವೇಳೆಗೆ, ಗಂಗಾನದಿಯ ದಡದಲ್ಲಿರುವ ಉತ್ತರ ಕಾಶಿಯನ್ನು ತಲುಪಿದೆವು.

ಉತ್ತರಕಾಶಿ ವಿದ್ಯುದ್ದೀಪಗಳಿಂದ ಝಗಝಗಿಸುತ್ತಿತ್ತು. ಇದೊಂದು ಜಿಲ್ಲಾ ಕೇಂದ್ರವಾದ್ದರಿಂದ, ಎಲ್ಲ ಬಗೆಯ ನಾಗರಿಕ ಸೌಲಭ್ಯಗಳಿಂದ ಕೂಡಿದೆ. ಅಲ್ಲದೆ  ಇದು ಗಂಗೋತ್ರಿಗೆ ಹೋಗುವ ದಾರಿಯ ಮುಖ್ಯ ಪಟ್ಟಣವಾದ್ದರಿಂದ ಯಾತ್ರಿಕರ ಸಂಖ್ಯೆ ಕೂಡ ಹೆಚ್ಚು. ಅಲ್ಲಿ ಭಕ್ತಜನಪ್ರಿಯವಾದ ಅನೇಕ ದೇವಸ್ಥಾನಗಳಿವೆ. ಆದರೆ  ನಮಗೆ ಈ ದೇವಸ್ಥಾನಗಳ ದರ್ಶನದಿಂದ ಲಭಿಸಬಹುದಾದ ಪುಣ್ಯ ಸಂಪಾದನೆಯಲ್ಲಿ ಅಂತಹ ಆಸಕ್ತಿ ಇರಲಿಲ್ಲವಾದುದರಿಂದ, ನಮ್ಮ ಮೊದಲ ಗಮನ ರಾತ್ರಿ ತಂಗಲು ವಸತಿಗೃಹವೊಂದನ್ನು ಹುಡುಕುವ ಕಡೆ ಕೇಂದ್ರೀಕೃತವಾಯಿತು. ಆದರೆ ವಸತಿ ದೊರೆಯುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಯಾಕೆಂದರೆ, ಸಾವಿರಾರು ಯಾತ್ರಿಕರು ಪ್ರವಾಸಿಗಳು ಬಂದುಹೋಗುವ ಈ ಕಾಲಗಳಲ್ಲಿ ಇಲ್ಲಿ ಕೊಠಡಿಗಳು ದೊರೆಯುವುದು ಎಷ್ಟು ಕಷ್ಟ ಎಂಬುದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಅಲೆದಾಡಿದ ನಮಗೆ ಅನುಭವಕ್ಕೆ ಬಂದಿತು. ಕೊನೆಗೆ ಯಾವುದೋ ಗಲ್ಲಿಯೊಂದರಲ್ಲಿ, ಒಂದು ಮುರುಕಲು ಕೋಣೆ ದೊರಕಿತು. ಒಂದಿರುಳು ತಂಗಲು ಇಪ್ಪತ್ತೈದು ರೂಪಾಯಿ. ಮುಖ ತೊಳೆಯಲು ಒಂದು ದಿಕ್ಕಿಗೆ, ಬಾತ್‌ರೂಂಗೆ ಇನ್ನೊಂದು ದಿಕ್ಕಿಗೆ ಹೋಗಬೇಕು. ಆದದ್ದಾಯಿತು ಎಂದು ಅದನ್ನೇ ತೆಗೆದುಕೊಂಡೆವು. ಬಾಗಿಲು ತೆಗೆಸಿ ನೋಡಿದರೆ, ಒಳಗಿನ ಮೂರು ಅಸ್ತವ್ಯಸ್ತವಾದ ಮಂಚಗಳ ಮೇಲೆ ಶತಮಾನಗಳ ಧೂಳು ಕೂತಿತ್ತು; ಮೂಲೆಗಳಲ್ಲಿ, ಜಂತೆಗಳಲ್ಲಿ ಜೇಡನ ಸಾಮ್ರಾಜ್ಯ. ಕಿಟಕಿ ಬಾಗಿಲುಗಳನ್ನು ಕಷ್ಟಪಟ್ಟು ದಬ್ಬಿದಾಗ ಕಿರ್ರೋ ಎಂಬ ಶಬ್ದ. ಸಾಕಷ್ಟು ಧಗೆ ಇದ್ದುದರಿಂದ, ಇದ್ದ ಒಂದೇ ಫ್ಯಾನು ಲಟಕಾ ಪಟಕಾ ಶಬ್ದ ಮಾಡುತ್ತಿತ್ತು. ಯಮುನೋತ್ರಿಯ ಹತ್ತು ಸಾವಿರದ ಅಡಿ ಕೆಳಕ್ಕೆ ಬಂದಿದ್ದೇವೆಂಬುದು ನಮ್ಮನ್ನು ಬೇಯಿಸುತ್ತಿದ್ದ ಶೆಖೆಯ ಪರಿಣಾಮದಿಂದ ಅರ್ಥವಾಗತೊಡಗಿತು.

ಕೊಠಡಿಯಲ್ಲಿ ಹೇಗೋ ಮಾಡಿ ನೆಲೆನಿಂತ ನಂತರ, ಒಂದಷ್ಟು ಊಟ ವನ್ನಾದರೂ ಮಾಡೋಣವೆಂದು ಒಳ್ಳೆಯ ಹೋಟೆಲನ್ನು ಹುಡುಕಿಕೊಂಡು ಹೊರಟೆವು. ಊರು ಪ್ರವಾಸಿಗರಿಂದ ಗಿಜಿಗುಡುತ್ತಿತ್ತು. ಅಂಗಡಿ ಬೀದಿಗಳಲ್ಲಿ, ಹೋಟೆಲುಗಳಲ್ಲಿ ಜನ-ಜನ-ಜನ. ಊರ ತುಂಬ ಪ್ರವಾಸೀ ಬಸ್ಸುಗಳು, ಕಾರುಗಳು, ಟ್ಯಾಕ್ಸಿಗಳು. ಹೇಗೋ ಮಾಡಿ ಒಳ್ಳೆಯ ಹೋಟೆಲೊಂದನ್ನು ಪತ್ತೆ ಮಾಡಿದೆವು. ಕಳೆದ ಮೂರು ದಿನಗಳಿಂದ ಬರೀ ಚಪಾತಿ ಪರೋಟಗಳಲ್ಲೇ ಕಾಲ ನೂಕಿದ್ದ ನಮಗೆ ಇಲ್ಲಿ ದೊರೆತ ಅನ್ನ, ತರಕಾರಿ ಮತ್ತು ಸೊಗಸಾದ ಮೊಸರು, ನಮ್ಮ ಪಾಲಿಗೆ ಅಮೃತದಷ್ಟು ರುಚಿಯಾಯಿತು. ಆದರೆ ಊಟದ ತುದಿಗೆ ಕೈಗೆ ಬಂದ ಬಿಲ್ ಮಾತ್ರ ಗಾಬರಿಗೊಳಿಸುವಂತಿತ್ತು. ಏನು ಮಾಡುವುದು. ಇಂಥ ಸ್ಥಳಗಳ ಹೋಟೆಲಿನವರಿಗೆ ದುಡ್ಡು ಮಾಡಲು ಇಂಥ ಕಾಲಗಳನ್ನು ಬಿಟ್ಟರೆ ಬೇರೆಯ ಅವಕಾಶಗಳೇ ಇಲ್ಲವಲ್ಲ.

ಉತ್ತರಕಾಶಿಯ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಸಾಧುಗಳು ಇದ್ದಾರೆಂದು ಕೇಳಿದ್ದೆ. ಈ ಪ್ರದೇಶ ಗಂಗಾನದಿಯ ದಡದಲ್ಲಿ ಇರುವುದರಿಂದಲೋ, ಹತ್ತಿರದಲ್ಲೇ ದಟ್ಟವಾದ ಅರಣ್ಯಗಳು ಇರುವುದರಿಂದಲೋ, ಸಾಧು ಸಂತರ ಧ್ಯಾನ-ತಪಸ್ಸುಗಳಿಗೆ ಇದು ತಕ್ಕುದಾಗಿದೆ ಎಂದು ತೋರುತ್ತದೆ. ಮಹಾಭಾರತದ ಕಿರಾತಾರ್ಜುನೀಯದ ಘಟನೆ ನಡೆದದ್ದು ಈ ಪರಿಸರದಲ್ಲಿಯೇ ಎಂದು ಪುರಾಣಗಳು ಹೇಳುತ್ತವೆ. ಪುರಾಣದಿಂದ ವರ್ತಮಾನಕ್ಕೆ ಬಂದರೆ, ಉತ್ತರಕಾಶಿ ಹೆಸರಾಗಿರುವುದು ಪರ್ವತಾರೋಹಿಗಳನ್ನು ತಯಾರುಮಾಡುವ ‘ನೆಹರೂ ಪರ್ವತಾರೋಹಣ ಸಂಸ್ಥೆ’ ಯಿಂದಾಗಿ. ಈ ಸಂಸ್ಥೆಗೆ ಭಾರತದ ಪ್ರಧಾನಮಂತ್ರಿಯವರೇ ಅಧ್ಯಕ್ಷರು.

ಭಾರತದಲ್ಲಿ ಸಾಹಸಕ್ಕಾಗಿ ಪರ್ವತಾರೋಹಣ ಮಾಡುವ ಪ್ರವೃತ್ತಿ ಇಲ್ಲವೇ ಇಲ್ಲ; ಈ ಭಾವನೆ ಬೆಳೆದದ್ದು ತೀರಾ ಈಚೆಗೆ, ಅದೂ ಪಾಶ್ಚಾತ್ಯರ ಸಂಸರ್ಗದಿಂದ. ಪರ್ವತಾರೋಹಣ, ಯಾತ್ರೆಯಂಥ ಧಾರ್ಮಿಕ ಸಂಬಂಧಿಯಲ್ಲದ ಒಂದು ಕ್ರೀಡೆ ಎಂದು ಈ ದೇಶದ ಮನಸ್ಸು ಒಪ್ಪುವುದು ಕಷ್ಟ. ಆದರೆ ಈ ಭಾವನೆಯನ್ನು ಬದಿಗೊತ್ತಿ, ಪರ್ವತಾರೋಹಣವನ್ನು ಒಂದು ಸಾಹಸವೆಂಬಂತೆ ರೂಢಿಸಿದವರು ಪಾಶ್ಚಾತ್ಯರು.

ಪರ್ವತಾರೋಹಿಗಳಿಗೆ ಹಿಮಾಲಯ ಅತ್ಯಂತ ಆಕರ್ಷಕವಾದ ಒಂದು ಆಹ್ವಾನವಾಗಿದೆ.  ವಾಸ್ತವವಾಗಿ ಹಿಮಾಲಯ ಅನ್ನುವುದು ಒಂದು ಪರ್ವತವಲ್ಲ; ಅದು ಅನೇಕ ಪರ್ವತಗಳ ಶ್ರೇಣಿ. ಈ ಹಿಮಾಲಯ ಪರ್ವತಗಳು ನಿರಂತರವಾಗಿ ಹದಿನೈದು ನೂರು ಮೈಲಿಗಳಷ್ಟು ಸುದೀರ್ಘವಾಗಿ, ನೂರರಿಂದ ನೂರೈವತ್ತು ಮೈಲಿಗಳಷ್ಟು ಅಗಲವಾಗಿ, ಅರ್ಧಚಂದ್ರಾಕೃತಿಯಲ್ಲಿ ಹರಡಿಕೊಂಡಿವೆ. ಭೌಗೋಳಿಕವಾಗಿ, ಇಡೀ ಹಿಮಾಲಯ ಅತ್ಯಂತ ಎತ್ತರವಾದ, ಆದರೆ ವಯಸ್ಸಿನಲ್ಲಿ ಕಿರಿಯದಾದ ಪರ್ವತ ಶ್ರೇಣಿಯಾಗಿದೆ. ಎತ್ತರದ ಶಿಖರಗಳು, ಆಳವಾದ ಕಣಿವೆಗಳು ಇದನ್ನು ದುಷ್‌ಪ್ರವೇಶ್ಯವನ್ನಾಗಿ ಮಾಡಿವೆ. ಪೂರ್ವದಲ್ಲಿ ಬ್ರಹ್ಮಪುತ್ರಾದಿಂದ ಮೊದಲಾಗಿ, ಪಶ್ಚಿಮಕ್ಕೆ ಭೂತಾನ, ಸಿಕ್ಕಿಂ ಮೂಲಕ ಚಾಚಿಕೊಂಡಿರುವ ಪ್ರದೇಶದಲ್ಲಿನ ಶಿಖರಗಳು ಸರಾಸರಿ ಇಪ್ಪತ್ತು ಸಾವಿರದಿಂದ ಇಪ್ಪತ್ತೈದು ಸಾವಿರ ಅಡಿಗಳಷ್ಟು ಎತ್ತರವಾಗಿವೆ. ಇನ್ನೂ ಪಶ್ಚಿಮಕ್ಕೆ ಸಿಕ್ಕಿಂ ನೇಪಾಳಗಳ ಪ್ರದೇಶದಲ್ಲಿ ಭೂತಾಕಾರವಾದ, ಇಪ್ಪತ್ತು ಸಾವಿರದಿಂದ ಇಪ್ಪತ್ತೊಂಭತ್ತು ಸಾವಿರ ಅಡಿಗಳವರೆಗಿನ (ಎವರೆಸ್ಟನ್ನು ಸೇರಿಸಿಕೊಂಡು) ಎತ್ತರವಾದ ಪರ್ವತಗಳಿವೆ. ಇನ್ನೂ ಮುಂದಕ್ಕೆ ಕಾಂಚನಗಂಗಾ, ಧವಳಗಿರಿ ಮತ್ತು ಅಲ್ಲೇ ಸಮೀಪದ ಮಾನಸ ಮತ್ತು ಅನ್ನಪೂರ್ಣ ಶಿಖರಗಳು; ನೇಪಾಳವನ್ನು ಹಾದು ಉತ್ತರಕ್ಕೆ ಕುಮಾನ್ ಪ್ರಾಂತ್ಯ ಮತ್ತು ಘಡವಾಲ್ ಪ್ರದೇಶಗಳಲ್ಲಿ, ನಂದಾದೇವಿ (೨೫,೬೪೫ ಅಡಿ) ಶಿಖರವಿದೆ. ಇವಲ್ಲದೆ ಕಾಮೆಟ್, ತ್ರಿಶೂಲ್, ನಂದಘುಂಟ, ಸುದರ್ಶನ, ಭಾಗೀರಥಿ ಸಮುಚ್ಚಯ, ಚೌಕಾಂಬಾ, ನೀಲಕಂಠ ಹೀಗೆ ಇನ್ನೂ ಅನೇಕ ಶಿಖರಗಳಿವೆ. ಹತ್ತೊಂಬತ್ತು ಸಾವಿರ ಅಡಿಗಳಿಂದ ಹಿಡಿದು ಇಪ್ಪತ್ತನಾಲ್ಕು ಸಾವಿರ ಅಡಿಗಳ ಎತ್ತರದ ಇನ್ನೂ ಹಲವು ಶಿಖರಗಳು ಇಲ್ಲಿವೆ. ಈ ಅಗಾಧ ಹಿಮಾಲಯದ ಪರಿವೀಕ್ಷಣೆ (survey) ಪ್ರಾರಂಭವಾದದ್ದೂ ‘ಸರ್ವೆ ಆಫ್ ಇಂಡಿಯಾ ಇಲಾಖೆ’ (Survery of India Department) ಸ್ಥಾಪಿತವಾದಾಗಿನಿಂದ. ಕ್ರಿ,. ಶ. ೧೮೦೮ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಕ್ಯಾಪ್ಟನ್‌ವೆಬ್ (Capt. Webb) ಎನ್ನುವವನ ಮುಂದಾಳುತನದಲ್ಲಿ ಹರಿದ್ವಾರದಿಂದ ಹಿಡಿದು ಗಂಗೆಯ ಮೂಲದವರೆಗಿನ ಪರಿವೀಕ್ಷಣೆಗಾಗಿ ಒಂದು ತಂಡವನ್ನು ಕಳುಹಿಸಿತು. ೧೮೨೦ರಲ್ಲಿ ಕಾರಾಕೊರಂ ಪ್ರದೇಶದ ಒಳಭಾಗಗಳ ಪರಿವೀಕ್ಷಣೆಯನ್ನು ಕೈಗೊಂಡ ಮೊದಲಿಗ ಕ್ಯಾಪ್ಟನ್ ಮೂರ್‌ಕ್ರಾಫ್ಟ್. ಕ್ರಿ. ಶ. ೧೮೫೦ರ ವೇಳೆಗೆ ಹಿಮಾಲಯದ ಪ್ರಮುಖ ಶಿಖರಗಳ ಎತ್ತರವನ್ನೆಲ್ಲ ಗುರುತಿಸಲಾಯಿತು. ಭಾರತದಲ್ಲಿ ಪರ್ವತಾರೋಹಣ ಪ್ರಾರಂಭವಾದದ್ದೇ ಸರ್ ಜಾನ್ ಎವರೆಸ್ಟ್ ಅವರಿಂದ. ಆದುದರಿಂದ ಹಿಮಾಲಯದ ಅತ್ಯಂತ ಎತ್ತರವಾದ ಶಿಖರಕ್ಕೆ (ಅದನ್ನು ಭಾರತೀಯರು ಗೌರೀಶಂಕರ ಎನ್ನುತ್ತಾರೆ) ಎವರೆಸ್ಟ್ ಎಂದು ಹೆಸರಿಡಲಾಯಿತು. ಹಿಮಾಲಯದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿಯೇ  ಅತ್ಯಂತ ಎತ್ತರವಾದ ಶಿಖರ ಇದು. ಇಂಥ ಒಂದು ಶಿಖರವಿದೆ ಎಂಬುದನ್ನು ಮೊದಲು ಕಂಡುಹಿಡಿದವನು, ರಾಧಾನಾಥ ಸರ್ಕಾರ್ ಎಂಬ ಭಾರತೀಯ ಅನ್ನುವುದು ಬಹುಜನಕ್ಕೆ ತಿಳಿದಿರಲಾರರು. ಈತ ಭಾರತೀಯ ಸರ್ವೇ ಇಲಾಖೆಯಲ್ಲಿ ಮುಖ್ಯ ಕಂಪ್ಯೂಟರ್ (Chief Computer) ಆಗಿ ಕೆಲಸ ಮಾಡುತ್ತಿದ್ದ. ೧೮೫೨ರಲ್ಲಿ ಈತ, ಸರ್ವೇ ಇಲಾಖೆ ಸಂಗ್ರಹಿಸಿದ ಪರ್ವತಗಳ ಎತ್ತರವನ್ನು ಕುರಿತ ಅಳತೆಗಳನ್ನೆಲ್ಲ ಪರಿಶೀಲಿಸುತ್ತ ಇರುವಾಗ, ಅವುಗಳಲ್ಲಿ ‘ಶಿಖರ ಸಂಖ್ಯೆ ೧೫’ ಹಿಮಾಲಯದ ಶಿಖರಗಳಲ್ಲೆಲ್ಲ ಮಾತ್ರವಲ್ಲ, ಜಗತ್ತಿನ ಎಲ್ಲ ಶಿಖರಗಳಿಗಿಂತ ಎತ್ತರವಾದದ್ದೆಂಬ ಸಂಗತಿ ಅವನಿಗೆ ಗೊತ್ತಾಯಿತು. ಈ ಅದ್ಭುತ ಆವಿಷ್ಕಾರದಿಂದ ಸಂಭ್ರಮಗೊಂಡ ಅವನು, ತನ್ನ ಮೇಲಧಿಕಾರಿಗಳ ಕಛೇರಿಗೆ ಧಾವಿಸಿ, ‘ಸರ್, ನಾನು ಜಗತ್ತಿನಲ್ಲೇ ಅತ್ಯಂತ ಎತ್ತರವಾದ ಶಿಖರವನ್ನು ಕಂಡುಹಿಡಿದಿದ್ದೇನೆ. ಅದು ನಮ್ಮ ಪರಿವೀಕ್ಷಣೆಯಲ್ಲಿ ಶಿಖರ ಸಂಖ್ಯೆ – ೧೫. ಅದು ೨೯,೦೨೮ ಅಡಿ ಎತ್ತರ ಇದೆ’ ಎಂದು ಘೋಷಿಸಿದ. ಇದೇ ಶಿಖರವನ್ನು ಅನಂತರ ಮೌಂಟ್ ಎವರೆಸ್ಟ್ ಎಂದು ಹೆಸರಿಟ್ಟು ಕರೆದದ್ದು. ಹಿಮಾಲಯದ ಅನೇಕ ಶಿಖರಗಳ ಆರೋಹಣದ ಪ್ರಯತ್ನ ಒಂದು ಸಾಹಸವೆಂಬಂತೆ ನಡೆದಿದ್ದರೂ ಅವುಗಳಲ್ಲೆಲ್ಲ ಅತ್ಯಂತ ಚರಿತ್ರಾರ್ಹವಾದ ಘಟನೆ ನಡೆದದ್ದು ೧೯೫೩ ಮೇ ತಿಂಗಳ ೨೯ನೇ ತಾರೀಖು, ಎಡ್ಮಂಡ್ ಹಿಲರಿ ಮತ್ತು ತೇನ್‌ಸಿಂಗ್ ಅವರು ಎವರೆಸ್ಟ್ ಶಿಖರವನ್ನೇರಿದಾಗ.  ಪರ್ವತಾರೋಹಣದ  ಚರಿತ್ರೆಯಲ್ಲಿ ಇದೊಂದು ಸುವರ್ಣ ಮುಹೂರ್ತ. ೧೯೫೪ರಲ್ಲಿ ಪರ್ವತಾರೋಹಣ ಸಂಸ್ಥೆಯೊಂದು ಡಾರ್ಜಿಲಿಂಗ್‌ದಲ್ಲಿ ಪ್ರಾರಂಭವಾಯಿತು. ಅನಂತರ ಉತ್ತರಕಾಶಿಯಲ್ಲಿ ನೆಹರೂ ಪರ್ವತಾರೋಹಣ ಸಂಸ್ಥೆ ಪ್ರಾರಂಭವಾಯಿತು. ಭಾರತದ ಪರ್ವತಾರೋಹಿಗಳಿಗೆ ತರಬೇತಿಯನ್ನು ಕೊಡುವ ಕೆಲಸ ಇಲ್ಲಿ ನಡೆದಿದೆ. ಈಚೆಗೆ ಮತ್ತೆ ಮೌಂಟ್ ಎವರೆಸ್ಟನ್ನು ಹತ್ತಿದ ಪ್ರಥಮ ಮಹಿಳೆ ಬಚೇಂದ್ರಿಪಾಲ್, ಈ ಉತ್ತರಕಾಶಿಯವಳೇ.

ಉತ್ತರಕಾಶಿಯ ಪರ್ವತಾರೋಹಣ ಸಂಸ್ಥೆ ಮೂಡಿಸಿದ ನೆನಪುಗಳಲ್ಲಿ ಮನಸ್ಸನ್ನು ಮುಳುಗಿಸುತ್ತ, ಉತ್ತರಕಾಶಿಯ ಕೊಳಕು ಕೊಠಡಿಯ ಛಾವಣಿಯಲ್ಲಿ ಕಿರುಗುಟ್ಟುತ್ತಾ ತಿರುಗುವ ಫ್ಯಾನಿನ ಕೆಳಗೆ ಮಲಗಿದ ನನಗೆ ಯಾವಾಗಲೋ ನಿದ್ದೆ ಸೆಳೆದುಕೊಂಡಿತ್ತು. ಮರುದಿನ ಗಂಗೋತ್ರಿಯ ಪ್ರಯಾಣದ ನೆನಪು, ಅಲಾರಾಂ ಕೊಟ್ಟ ಹಾಗೆ, ಮುಂಬೆಳಗಿನ ಐದು ಗಂಟೆಗೆ ನಮ್ಮನ್ನು ಬಡಿದು ಎಬ್ಬಿಸಿತು.