ಇಂದಿನ ಅಗತ್ಯಗಳ ದೃಷ್ಟಿಯಿಂದ ಶಕ್ತಿ, ಇಂಧನಗಳೆಂಬ ಪದಗಳನ್ನು ಪದೇ ಪದೇ ಕೇಳುತ್ತಲೇ ಇರುತ್ತೇವೆ. ಬಳಸುತ್ತಲೇ ಇರುತ್ತೇವೆ. ಭೂಮಿಯ ಇಡೀ ಸ್ವರೂಪವನ್ನು ರಚಿಸಿದ ‘ಶಕ್ತಿ’ ನೀರಿಗೆ ಸಲ್ಲುತ್ತದೆ ಎಂಬುದನ್ನು ಯೋಚಿಸಿರುವಿರಾ, ಗಮನಿಸಿರುವಿರಾ?ಇದರಲ್ಲಿ ನಿರಂತರವಾಗಿ ಆಗುತ್ತಿರುವ ರೂಪ ಬದಲಾವಣೆಗಳಿಗೆ ನೀರು ಪ್ರಮುಖ ಕಾರಣ.

ಮೊತ್ತ ಮೊದಲ ಸಾಗರಗಳು ಉಂಟಾದುದು ನೀರಿನ ಹಬೆಯಿಂದಾಗಿ. ಎಳೆಯ ಇಳೆಯೊಳಗಿನ ಗರ್ಭದಲ್ಲಿ ಕೊತಕೊತನೆ ಕುದಿಯುತ್ತ ಹೊರಟ ಈ ಹಬೆ, ಒಳಗಿನ ಕಾದ ಅನಿಲಗಳ ಜೊತೆಗೆ ಹೊರಬಿದ್ದಿತು. ಇದು ಸುಮಾರು 4 ಬಿಲಿಯ ವರ್ಷಗಳ ಹಿಂದಿನ ಸಂಗತಿ. ಭೂಕವಚದ ಬಿಸಿ ಆರುತ್ತಿದ್ದಂತೆ ಹಬೆಯು ಸಾಂದ್ರಗೊಂಡು, ಆದಿ ಸಾಗರಗಳನ್ನು ರೂಪಿಸಿತು. ಸೂರ್ಯನ ಬಿಸಿಲು ಇದನ್ನು ಬೆಂಬಲಿಸಿತು ಎಂದರೆ ಮತ್ತೆ ಮತ್ತೆ ಸಾಗರಗಳ ನೀರು ಕಾದು, ಹಬೆಯಾಗಿ ಮೇಲೇರಿ, ಭೂಮಿಯ ಮೇಲೆ ಮಳೆಬಿದ್ದು ಸಾಗರಗಳನ್ನು ಸೇರಿದುವು. ನೆಲದ ಮೇಲೆ ಬಿದ್ದ ನೀರು ಒಂದುಗೂಡಿ ಹೊಳೆ, ನದಿಗಳಾಗಿ ಹರಿದು, ಗುರುತ್ವದಿಂದಾಗಿ ಸಮುದ್ರವನ್ನು ತಲುಪಿತು.

ಭೂಮಿಯ ಕಣಿವೆ, ಎತ್ತರ ಪ್ರದೇಶಗಳು ತ್ವರಿತವಾಗಿ ಹರಿಯುವ ನೀರಿನಿಂದಾದುವು. ಇಂಗ್ಲೀಷಿನ V ಆಕಾರದಲ್ಲಿ ಕಣಿವೆಗಳುಂಟಾದುವು. ನೀರಿನ ರಭಸದ ಹರಿವು, ಜೋರಾದ ಮಳೆಗಳಿಂದಾಗಿ ಬಂಡೆಗಳು, ಮಣ್ಣು, ಮುರುಕಲು ಗುಪ್ಪೆಗಳು ದಂಡೆಗಳಿಂದ ಎಳೆದೊಯ್ಯಲ್ಪಟ್ಟವು. ಇದು ಅಂದಿಗೂ, ಎಂದಿಗೂ ಹರಿಯುವ ನೀರಿನ ಪರಿ.

ನದಿಯ ತಳವು ಅಗಲಗೊಂಡಾಗ ಅದರ ಬದಿಯ ಕಡಿದಾದ ಇಳಿಜಾರು ಸ್ವಲ್ಪ ಸಮಗೊಳ್ಳಬಹುದು. ಆಗ ಹೆಚ್ಚಿನ ಹೂಳು ನದಿಯ ತಳದಲ್ಲಿ ತಂಗುತ್ತದೆ. ಉಪನದಿಗಳು ಸೇರಿದಾಗ ನದಿಯ ಪಾತ್ರ ಹೆಚ್ಚು ಅಗಲವಾಗುತ್ತದೆ. ಕಣಿವೆ ಹಿರಿದಾಗುತ್ತದೆ. ಸತತವಾಗಿ ಹೂಳು ಮಣ್ಣು ನದಿಯ ನೀರಿನೊಡನೆ ಪಾತ್ರದ ಗುಂಟ ಸರಿಯುತ್ತಲೇ ಇರುತ್ತದೆ. ಆಮೇಲೆ ಮುಖಜ ಭೂಮಿಯನ್ನು ತಲುಪುತ್ತದೆ. ಮುಂದೆ ಇದು ಭಾಗಶಃ ಸಮುದ್ರವನ್ನು ಸೇರಿ, ಒತ್ತಡದಿಂದ ಒತ್ತಲ್ಪಟ್ಟು ಎಂದೋ ಒಂದು ಕಾಲಕ್ಕೆ ಭವಿಷ್ಯದ ಬಂಡೆಯಾಗಿ ಹೆಪ್ಪುಗೊಳ್ಳುತ್ತದೆ.

ಸುಣ್ಣ ಕಲ್ಲಿರುವೆಡೆ ಹೊಳೆ, ನದಿಗಳ ನೀರು ಕೆಲವೊಮ್ಮೆ ಒಳಗಿಳಿದು ಅದೃಶ್ಯವಾಗುತ್ತದೆ. ಸಾಕಷ್ಟು ದೂರ ಹೀಗೆ ನೆಲದೊಳಗೆ ಸಾಗುವಾಗ ಸುಣ್ಣಕಲ್ಲು ನೀರಿನಲ್ಲಿ ಕರಗುತ್ತದೆ. ಆಗ ಅಲ್ಲಿ ಗವಿಗಳು ರೂಪುಗೊಳ್ಳುತ್ತವೆ. ಇದು ಆ ಪ್ರದೇಶದಲ್ಲಿ ಹರಿಯುವ ನೀರಿನ ಕಾರ್ಯ. ಕರಗಿದ ಸುಣ್ಣ ಸಂಚಯಗೊಂಡು, ಟ್ರಾವರ್‌ಟೈನ್ ಎಂಬ ಬಿಳಿಕಲ್ಲು ಆಗಬಹುದು ಅಥವಾ ನೀರ್ಗಲ್ಲುಗಳಂತೆ ಕಾಣುವ ಸುಣ್ಣಕಲ್ಲು ತೊಂಗಲುಗಳು (Stalactite) ಆಗಬಹುದು. ಇಲ್ಲವೇ ತಳದಿಂದ ಹೆಪ್ಪುಕಟ್ಟಿ ಬೆಳೆದ ಸುಣ್ಣಕಲ್ಲು ಹೆಪ್ಪು (Stalagmite)ಆಗಬಹುದು.

ಇನ್ನು ಸಾಗರ ಸಮುದ್ರಗಳ ಭರತ, ಇಳಿತಗಳಿಂದಾಗಿ ಭೂದೃಶ್ಯದ ಸ್ವರೂಪ ಬದಲಾಗುತ್ತದೆ. ಇದು ನಮ್ಮ ಅರಿವಿಗೆ ಬರಲು ಧೀರ್ಘಕಾಲ ಬೇಕಾಗಬಹುದು. ಆದರೆ ಸತತವಾಗಿ ಇದು ನಡೆಯುತ್ತಲೇ ಇರುತ್ತದೆ. ನೀರು ಪಕ್ಕದ ಪ್ರಪಾತಗಳ ಕಲ್ಲುಗಳನ್ನು ತರಿಯುತ್ತಲೇ ಇರುತ್ತದೆ. ಅವುಗಳ ಶಿಲ್ಪ ಬದಲಾಗುತ್ತಲೇ ಇರುತ್ತದೆ.

ಪ್ರಪಂಚದ ಅತಿ ಪ್ರೇಕ್ಷಣೀಯ, ಮನೋಹರ ಜಲಪಾತಗಳು ವೆನಿಜುಯೆಲಾದ ಏಂಜೆಲ್ ಜಲಪಾತ, ಆಫ್ರಿಕದ ಪರಾನ ಪ್ರಸ್ಥಭೂಮಿಯ ಇಗ್ವಾಕು ಜಲಪಾತ, ಜಾಂಬಿಯ ಜಿಂಬಾಬ್ವೆಗಳ ನಡುವೆಯಿರುವ ವಿಕ್ಟೋರಿಯಾ ಜಲಪಾತ. ಏಂಜೆಲ್‌ನ ಒಟ್ಟು ಪಾತ 979 ಮೀ, ಅದರಲ್ಲಿ 807ಮೀ ಆಳಕ್ಕೆ ಎಲ್ಲಿಯೂ ತಾಗದೆ ನೀರು ಧುಮ್ಮಿಕ್ಕುತ್ತದೆ. ಇಗ್ವಾಕುವಿನ ಒಟ್ಟು ಪಾತ 85 ಮೀ, ವಿಕ್ಟೋರಿಯಾ ಜಲಪಾತದ ನೀರು 100ಮೀ ಗೂ ಹೆಚ್ಚು ಪ್ರಪಾತಕ್ಕೆ ಧುಮ್ಮಿಕ್ಕುತ್ತದೆ.

ಸಾಧಾರಣವಾಗಿ ಜಲಪಾತದ ನೀರು ತಾನು ಧುಮುಕುವ ಪ್ರಪಾತದ ಬದಿಯ ಕಲ್ಲುಗಳನ್ನು ತಾಗದೆ, ಚಾಚಿದಂತೆ ಮುಂದಕ್ಕೆ ಹರಿದು ಬೀಳುತ್ತದೆ. ಆದರೆ ಸೆಕೆಂಡಿಗೆ ಅನೇಕ ಸಾವಿರಾರು ಟನ್‌ಗಳಷ್ಟು  ನೀರು ಕೆಳಕ್ಕೆ ಧುಮ್ಮಿಕ್ಕಿದಾಗ ತಳದಲ್ಲಿ ಆಳವಾದ ಕಂದಕವುಂಟಾಗುತ್ತದೆ.

ಸಹಸ್ರ ಸಹಸ್ರ ವರ್ಷಗಳ ಕಾಲ ಹರಿಯುತ್ತಿರುವ ನೀರು ಅತ್ಯಂತ ಗಡುಸಾದ ಶಿಲೆಯನ್ನೂ ಕೊರೆಯಬಲ್ಲದು. ಹೀಗೆ ಕೊರೆದು ಅತಿ ಆಳವಾದ ಕಮರಿಯನ್ನು, ಪ್ರಪಾತಗಳನ್ನು ಉಂಟುಮಾಡಬಲ್ಲದು. ನೀರಿನ ಸತತವಾದ ಒತ್ತಡದ ಕಾರ್ಯವಿದು. ಅಮೆರಿಕದ ಕೊಲರಾಡೋ ನದಿ ಕೊರೆದು ಮಾಡಿರುವ ಮಹಾಕಮರಿ ‘ಗ್ರಾಂಡ್ ಕ್ಯಾನಿಯಾನ್’,ಭೂಮಿಯ ಮೇಲೆ ನೀರಿನ ಕೊರೆತದಿಂದ ಉಂಟಾಗಿರುವ ಕಮರಿಗಳಲ್ಲಿ ಅತ್ಯಂತ ಆಳವಾದುದು. ಅದರ ಅತಿ ಆಳವಾದ ಕಮರಿ 2000 ಮೀ ಕೆಳಕ್ಕಿದೆ. ಅತಿ ವಿಶಾಲವಾದ ಇಕ್ಕೆಲಗಳು 450 ಕಿ.ಮೀ.ಅಂತರದಲ್ಲಿವೆ. ಕೊಲರಾಡೊ ನದಿಯು ಕೊಲರಾಡೊ ಪ್ರಸ್ಥಭೂಮಿಯನ್ನು ಕೊರೆದು ಆಗಿರುವ ಈ ಕಮರಿಯ ಕಾರ್ಯ 10 ಮಿಲಿಯ ವರ್ಷಗಳ ಹಿಂದೆ ಆರಂಭಗೊಂಡಿತು. 2000 ಮಿಲಿಯ ಹಿಂದಿನ ಕಲ್ಲುಗಳೆಂದು ಗುರುತಿಸಬಹುದಾದ ಹಳದಿ ಹಾಗೂ ಬೂದಿಮಿಶ್ರಿತ ನೀಲಿ ಬಣ್ಣದ ಸುಣ್ಣ ಕಲ್ಲುಗಳು, ಬಿಳಿ ಹಾಗೂ ಕಂದು ಬಣ್ಣದ ಮರಳುಗಲ್ಲು, ಗುಲಾಬಿ ಬಣ್ಣದ ಗ್ರಾನೈಟ್ ಮತ್ತು ಪದರು ಪದರಾದ ಕಪ್ಪುಬಣ್ಣದ ಷಿಸ್ಟ್‌ಕಲ್ಲು ಇವೆಲ್ಲ ಬೆರಗುಗೊಳಿಸುವಷ್ಟು ಚಿತ್ರಮಯವಾಗಿ ಕೊರೆಯಲ್ಪಟ್ಟಿವೆ.

ನೀರು ಯಾವಾಗಲೂ ತನ್ನ ಮಟ್ಟವನ್ನು (level)ಕಾಯ್ದುಕೊಳ್ಳುತ್ತದೆ. ಇದು ಗುರುತ್ವ ಹಾಗೂ ವಾತಾವರಣ ಒತ್ತಡಗಳ ಒಟ್ಟಿನ ಪರಿಣಾಮ. ಹೀಗೆ ತನ್ನ ಮಟ್ಟವನ್ನು ಕಾಯ್ದುಕೊಳ್ಳುವಾಗ ಯಾವುದಾದರೂ ವಸ್ತುವಿನ ದೆಸೆಯಿಂದ ಹರಿಯುವ ನೀರು ತಟಕ್ಕನೆ ತನ್ನ ದಿಕ್ಕನ್ನು ಬದಲಾಯಿಸಬೇಕಾಗಿ ಬಂದಾಗ ಅದು ಸುಳಿಯಂತಾಗಿ, ವೃತ್ತಾಕಾರದಲ್ಲಿ ಹರಿಯುತ್ತದೆ. ಇದು ಹೀಗೆಯೇ ಸಾವಿರಾರು ವರ್ಷಗಳ ಕಾಲ ಸುರುಳಿ ಸುತ್ತುತ್ತಿದ್ದರೆ, ಗ್ರಾನೈಟ್‌ನಂತಹ ಶಿಲೆಯೂ ಸೆಳೆದು ಎಸೆಯಲ್ಪಡುತ್ತದೆ. ಆ ಜಾಗದಲ್ಲಿ ದೊಡ್ಡ ಕುಳಿಯುಂಟಾಗುತ್ತದೆ. ಇಂಥಲ್ಲಿ 6ಮೀ.ಗಳಿಗೂ ಹೆಚ್ಚು ಕುಳಿಯಾಗಿ, ಎಂಥ ಬರಗಾಲದಲ್ಲೂ ಈ ಕುಳಿಯಲ್ಲಿ ನೀರು ಇರುತ್ತದೆ. ಈ ಕುಳಿಗಳನ್ನು ‘ಕೆಟಲ್’ಗಳೆಂದು ಕರೆಯುತ್ತಾರೆ. ನೀರಿನ ಸುರುಳಿಯಿಂದ ಹೀಗೆ ಕೊರೆಯಲ್ಪಟ್ಟ ಅನೇಕ ಕೆಟಲ್‌ಗಳು ದಕ್ಷಿಣ ಆಫ್ರಿಕದ ಟ್ರಾನ್ಸ್‌ವಾಲ್‌ನಲ್ಲಿ ಕಂಡುಬರುತ್ತವೆ.

ಹರಿಯುವ ನೀರಿನ ಶಕ್ತಿಯು ಭೂಮಿಯ ಮೇಲೆ ಬಿಡಿಸಿರುವ ಚಿತ್ತಾರಗಳು ಅನೇಕ. ಕಮರಿಗಳು, ಕಂದಕಗಳು, ಕೊರಕಲುಗಳು, ಪ್ರಪಾತಗಳು, ಇವೆಲ್ಲ ಕಡಿದಾದ ಗಟ್ಟಿಕಲ್ಲಿನ ಮೇಲೆ ಹರಿಯುವ ನೀರಿನಿಂದ ಉಂಟಾಗುತ್ತವೆ. ಚೀನಾದ ಯಾಂಗ್‌ಟ್ಸೆ ನದಿಯು ಪರ್ವತ ಪ್ರದೇಶದಲ್ಲೆ 200ಕಿ.ಮೀ. ದೂರ ಹರಿಯುತ್ತದೆ. ಪರ್ವತವು ಕೆಲವು ಭಾಗಗಳಲ್ಲಿ ಇನ್ನೂ ಮಡಿಕೆಯಂತೆ ಏಳುತ್ತಿರುವಾಗಲೇ ನೀರಿನ ಕೊರೆತವೂ ಸಾಗುತ್ತಿದ್ದಿತು. ಈ ಪರ್ವತೀಯ ಪ್ರದೇಶದಲ್ಲಿ ಯಾಂಗ್‌ಟ್ಸೆ ಕೆಲವೆಡೆ 100ಮೀ. ಅಗಲ ಹರಿಯುವ ನದಿಯಲ್ಲಿ ನಾವು ಸಾಗುತ್ತಿದ್ದರೆ, ಬದಿಯಲ್ಲಿ 1200ಮೀ. ಎತ್ತರದ ಕಡಿದಾದ ಸುಣ್ಣಕಲ್ಲು ಗೋಡೆಗಳನ್ನು ಕಾಣಬಹುದು. ಇಲ್ಲಿ ತಲೆ ಎತ್ತಿ ನೋಡಿದರೂ ಸೂರ್ಯ ನೆತ್ತಿಗೆ ಬಂದಾಗಲೂ ಬೆಳಕು ಬೀಳುವುದಿಲ್ಲ.

ಅಮೆರಿಕ, ಕೆನಡಾಗಳ ನಡುವಣ ನಯಾಗರಾ ಪ್ರಪಾತವು ನಯಾಗರಾ ನದಿಯ ಕೊರೆತದಿಂದ ಉಂಟಾದ ಒಂದು ರಮಣೀಯ ಜಲಪಾತವಾಗಿ ನಮಗೆ ಕಾಣುತ್ತದೆ.

ಸಮುದ್ರ ಮಟ್ಟಕ್ಕೆ ಅಂತಿಮವಾಗಿ ಇಳಿದು, ಸಮುದ್ರವನ್ನು ಸೇರುವಾಗ ನದಿಯ ನೀರು ಉಂಟು ಮಾಡುವ ನದೀ ಮುಖಜ ಭೂಮಿ ಹಾಗೂ ಅಳಿವೆಗಳು, ನಿರಂತರವಾಗಿ ಅಲ್ಲಿನ ಭೂ ದೃಶ್ಯವನ್ನು ಬದಲಿಸುತ್ತಲೇ ಇರುತ್ತವೆ. ಧಾವಿಸಿ ಹರಿಯುವ ನೀರು ತನ್ನೊಡನೆ ಮಣ್ಣು ಕಲ್ಲುಗಳನ್ನು ಹೊತ್ತು ಸಮುದ್ರದಲ್ಲಿ ತನ್ನ ಹೊರೆಯನ್ನು ಖಾಲಿಮಾಡಿಕೊಳ್ಳುತ್ತದೆ. ಸಮುದ್ರವು ಪಡೆಯುವ ವೇಗಕ್ಕಿಂತ ಹೆಚ್ಚು ಕ್ಷಿಪ್ರವಾಗಿ ನದಿಯು ಹೂಳು ಮಣ್ಣು ತಂದಾಗ ಮುಖಜ ಭೂಮಿಯು ರೂಪುಗೊಳ್ಳುತ್ತದೆ. ಆಗ ನದಿಯು ತಂದ ಹೂಳೆಲ್ಲ ಸಮುದ್ರವನ್ನು ಸೇರದೆ, ಅದರ ಪಾತ್ರದಲ್ಲೂ ಉಳಿದುಕೊಂಡು ಅಲ್ಲಿ ಹೊಸ ಹೊಸದಾಗಿ ಕೊರೆತಗಳು ಉಂಟಾಗುತ್ತಲೇ ಇರುತ್ತವೆ. ಹಳೆಯ ಕೊರೆತಗಳು ಮಾಸಿದಾಗ, ಹೊಸ ಕೊರೆತದಿಂದ ಅಲ್ಲಿ ನೆಲವು ಬೇರೆಡೆ ಕಾಣಿಸಿಕೊಳ್ಳುತ್ತದೆ. ಬೃಹತ್ ನದಿಗಳ ಮುಖಜ ಭೂಮಿಗಳು ಮಿಲಿಯಗಟ್ಟಲೆ ವರ್ಷಗಳಿಂದ ರೂಪುಗೊಳ್ಳುತ್ತಲೇ ಇವೆ. ಬಂಗಾಳಕೊಲ್ಲಿಯ ಬೃಹತ್ ಭಾಗವು ಗಂಗಾ ಹಾಗೂ ಬ್ರಹ್ಮಪುತ್ರ ನದಿಗಳ ಮುಖಜ ಭೂಮಿಯಿಂದ ಕೂಡಿದೆ. ಸಿಂಧೂ ನದಿಯು ತನ್ನ ಮುಖಜ ಭೂಮಿಯಲ್ಲಿ, ಹಿಮಾಲಯದಿಂದ ಕೊರೆದು ತಂದ ಮಣ್ಣು ಕಲ್ಲುಗಳಿಂದ ಪಾಕಿಸ್ತಾನದ ಬಹುಭಾಗವನ್ನು ರೂಪಿಸಿದೆಯೆಂದು ತಿಳಿಯಲಾಗಿದೆ. ಚಾರಿತ್ರಿಕ ಕಾಲದಲ್ಲಿ ನದೀ ಮುಖಜ ಭೂಮಿಗಳು ಮಾನವ ನಾಗರಿಕತೆಗಳ ಆವಾಸಗಳಾಗಿದ್ದುದು ಕಂಡುಬರು್ತದೆ. ಯೂಫ್ರಟಿಸ್, ಟೈಗ್ರಿಸ್, ನೈಲ್, ಸಿಂಧೂನದಿ ಮುಖಜ ಭೂಮಿಗಳು ಹೀಗೆ ಹೆಸರಾದವು. ಆದರೆ ಮಾನವನ ಚಟುವಟಿಕೆಗಳಾದ ಅಣೆಕಟ್ಟು ಹಾಗೂ ನೀರಾವರಿ ಯೋಜನೆಗಳಿಂದ ನದೀ ಮುಖಜ ಭೂಮಿಗಳು ನಾಶಗೊಳ್ಳುತ್ತವೆ. ನೈಲ್ ನದಿಗೆ ಕಟ್ಟಿರುವ ಬೃಹತ್ ಅಸ್ವಾನ್ ಅಣೆಕಟ್ಟಿನಿಂದಾಗಿ 6695ಕಿ.ಮೀ. ದೂರ ನೈಲ್ ಸಾಗಿಸುತ್ತಿದ್ದ ಹೂಳು ಅಣೆಕಟ್ಟಿನಲ್ಲಿ ತಡೆಯಲ್ಪಟ್ಟಿದೆ. ಅದರ ಮುಖಜ ಭೂಮಿಯಲ್ಲಿ ಈಗ ಸಮುದ್ರದಿಂದ ಸವಕಳಿಯುಂಟಾಗುತ್ತಿದ್ದು,  ನೈಲ್ ನದೀ ಮುಖಜ ಭೂಮಿ ಒಂದು ಅರ್ಥದಲ್ಲಿ ‘ಅದೃಶ್ಯ’ವಾಗುತ್ತಿದೆ.  ಬಾಂಗ್ಲಾದೇಶದಲ್ಲಿನ ಗಂಗಾ ಬ್ರಹ್ಮಪುತ್ರ ನದಿಗಳ ಮುಖಜ ಭೂಮಿಯು ಪ್ರಪಂಚದಲ್ಲಿ ಅತ್ಯಂತ ವಿಸ್ತಾರವಾದುದು. ಇಲ್ಲಿನ ಜನರು ಈ ಫಲವತ್ತು ಪ್ರದೇಶವನ್ನೇ ಅವಲಂಬಿಸಿರುವರು. ಕಾಡುಗಳನ್ನು ಸವರಿ ಉಂಟಾದ ಪ್ರವಾಹಗಳಿಂದಾಗಿ ಇದರ ಸ್ವರೂಪವೂ ಬದಲಾಗುತ್ತಿದೆ.

ಹೀಗೆ ಹರಿಯುವ ನೀರಿನ ಶಕ್ತಿ ಅಗಾಧವಾದುದು.ಅದು ಭೂಮಿಯನ್ನು ಕೊರೆಯುತ್ತಲೇ ಇರುತ್ತದೆ. ಹರಿಯುವ ನೀರಿನಲ್ಲಿನ ಕಲ್ಲು ಚೂರುಗಳು ಅದರ ಪಾತ್ರವನ್ನು ತರಿಯುತ್ತಲೇ ಇರುತ್ತವೆ. ಇದರಿಂದ ಪಾತ್ರದ ಆಳ, ಅಗಲಗಳು ಹೆಚ್ಚುತ್ತಲೇ ಇರುತ್ತವೆ. ಹರಿಯುವ ನೀರಿನಲ್ಲಿನ ಈ ಚೂರುಗಳು ಹತಾರಗಳಂತೆ, ಎಂಥ ಗಟ್ಟಿಕಲ್ಲುಗಳನ್ನೂ ಕೊರೆಯಬಲ್ಲವು. ಭೂದೃಶ್ಯ ರಚನೆಯಲ್ಲಿ ಮಾನವನ ಹಸ್ತಕ್ಷೇಪದ ಪಾತ್ರವೂ ಇದೆ. ಇದರ ಒಟ್ಟಿನ ಫಲಿತಾಂಶವೇನು ಎಂಬುದನ್ನು ಬಹಳ ಗಂಭೀರವಾಗಿ ವಿವೇಚಿಸಬೇಕಾಗಿದೆ.