Categories
ಕೃಷಿ ನಾಟಿ ಬೆಳೆಗಳು ಬೆಳೆ ವೈವಿಧ್ಯ

ಕಣ್ಮರೆಯ ಹಾದಿಯಲ್ಲಿ ಕೊರಲೆ

ಆಧುನಿಕ ಕೃಷಿಯ ಸುಳಿಗಾಳಿಗೆ ಸಿಲುಕಿ ಕಣ್ಮರೆಯಾಗುತ್ತಿರುವ ಸಾಂಪ್ರದಾಯಿಕ ಬೆಳೆಗಳಲ್ಲಿ ಕಿರುಧಾನ್ಯಗಳಿಗೆ ಅಗ್ರಸ್ಥಾನ. ಎಲ್ಲಾ ಕಡೆಗಳಿಂದಲೂ ಹೊಡೆತ ತಿನ್ನುತ್ತಿರುವ ಅವುಗಳ ಹೆಸರೇ ಇಂದು ಎಷ್ಟೋ ಜನಕ್ಕೆ ಅಪರಿಚಿತ.

ಕಿರುಧಾನ್ಯಗಳಲ್ಲಿ 9 ವಿಧ. ಅವುಗಳೆಂದರೆ ಜೋಳ, ಸಜ್ಜೆ, ರಾಗಿ, ನವಣೆ, ಸಾವೆ, ಹಾರಕ, ಬರಗು, ಊದಲು ಮತ್ತು ಕೊರಲೆ. ಈ ಒಂಭತ್ತರಲ್ಲಿ ಹಾರಕ ಕಣ್ಮರೆಯ ಹಾದಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಎರಡನೆಯ ಸ್ಥಾನ ಕೊರಲೆಯದು.

ಕೊರಲೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಾದ ತುಮಕೂರು, ಚಿತ್ರದುರ್ಗ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಠ ಪ್ರಾದೇಶಿಕ ಹಿನ್ನೆಲೆಯ ಕಿರುಧಾನ್ಯ. ಬೇಗ ಕುಯಿಲಿಗೆ ಬರುವ, ಬರ ನಿರೋಧಕ ಗುಣ ಹೊಂದಿದ, ಕಡಿಮೆ ಸಾರಯುಕ್ತ ಬರಡು ಮಣ್ಣಿನಲ್ಲೂ ಬೆಳೆಯುವ ಸಾಮರ್ಥ್ಯವುಳ್ಳ, ಇಬ್ಬನಿಯ ತೇವಕ್ಕೇ ಬೆಳೆಯುವ ಅಪರೂಪದ ಗುಣಗಳ ಕಣಜ ಕೊರಲೆ.

 

ಈಗ್ಗೆ ಕೇವಲ 20 ವರ್ಷಗಳ ಹಿಂದೆ ಈ ಭಾಗದ ಬಹುತೇಕ ರೈತರ ಹೊಲಗಲಲ್ಲಿ ಬೆಳೆಯಲ್ಪಡುತ್ತಿದ್ದ, ಅವರ ಮನೆಯ ಮಡಕೆ ಸಾಲು, ಗುಡಾಣಗಳಲ್ಲಿ ಭದ್ರವಾಗಿದ್ದ, ದಿನನಿತ್ಯದ ಆಹಾರ ಪದ್ಧತಿಯಾಗಿದ್ದ ಕೊರಲೆ ಇಂದು ಬೆರಳೆಣಿಕೆಯಷ್ಟು ರೈತರಲ್ಲಿ ಮಾತ್ರ ಉಳಿದಿದೆ. ಇನ್ನು ಕೆಲವೇ ವರ್ಷಗಳಲ್ಲಿ ಪೂರ್ತಿ ಕಣ್ಮರೆಯಾದರೆ ಅಚ್ಚರಿಪಡಬೇಕಿಲ್ಲ.

ತಳಿ ವೈವಿಧ್ಯ

ಕೊರಲೆಯಲ್ಲಿ ಹೆಚ್ಚು ತಳಿ ವೈವಿಧ್ಯತೆಯಿಲ್ಲ. ಕೊರಲೆ ಎಂಬ ಒಂದೇ ತಳಿ ಮೊದಲಿನಿಂದಲೂ ಬಳಕೆಯಲ್ಲಿದೆ. ಆದರೆ ಅಂಡುಗೊರ್ಲೆ ಎಂಬ ಮತ್ತೊಂದು ತಳಿ ಇದೆ ಎಂತಲೂ ಕೆಲವರು ಹೇಳುತ್ತಾರೆ. ಆದರೆ ಲಭ್ಯವಿಲ್ಲ. ಶಿರಾ ತಾಲ್ಲೂಕು ತಡಕಲೂರುಪಾಳ್ಯದ ಈರಣ್ಣನವರ ಪ್ರಕಾರ ಕೊರಲೆಯಲ್ಲಿ ಕೆದರುತೆನೆ ಮತ್ತು ದುಂಡುತೆನೆಯ ಎರಡು ಬಗೆಗಳಿವೆ. ಒಂದೇ ಹೊಲದಲ್ಲಿ ಎರಡೂ ಮಿಶ್ರವಾಗಿರುತ್ತವೆ. ರೈತರು ಎರಡನ್ನೂ ಬೇರ್ಪಡಿಸಲು ಹೋಗುವುದಿಲ್ಲ. ಕಾಳಿನಲ್ಲಿ ಯಾವುದೇ ವ್ಯತ್ಯಾಸವಿರುವುದನ್ನು ಇವರು ಗಮನಿಸಿಲ್ಲ.

ಬಿತ್ತನೆ

ಕೊರಲೆಯನ್ನು ಸಾರವಿಲ್ಲದ ಜಮೀನಿಗೆ, ಕರಲು ಭೂಮಿಗೆ ಹಾಕುವುದು ರೂಢಿ. ಬೇಗ ಕುಯಿಲಿಗೆ ಬರುವುದರಿಂದ ಕೆಲವರು ಕಣ ಮಾಡುವ ಜಾಗಕ್ಕೆ ಬಿತ್ತುವುದೂ ಉಂಟು. ಕೊರಲೆ ಬಿತ್ತನೆ ಅತ್ಯಂತ ಸುಲಭ. ಒಂದು ಸಲ ಉಳುಮೆ ಮಾಡಿದ ಜಮೀನಿಗೂ ಸಹ ಬಿತ್ತಬಹುದು. ತುಂಬಾ ಹಸನು ಮಾಡಬೇಕಾದ್ದಿಲ್ಲ. ಭರಣಿ-ರೋಹಿಣಿ ಮಳೆಯಲ್ಲಿ ಬಿತ್ತನೆ ಮಾಡಿದರೆ ಒಳ್ಳೆಯದು ಎಂಬುದು ಬಹುತೇಕ ರೈತರ ಅನಿಸಿಕೆ. ದೊಡ್ಡಹಸಲೆ (ಪುನರ್ವಸು) ಮಳೆ ನಂತರ ಬಿತ್ತಿದರೆ ಜೊಳ್ಳಾಗುತ್ತದೆ.

ಕೆಲವು ರೈತರು ದಿನ್ನೆಗೆ ಬಿತ್ತುವುದಾದರೆ ಸಾಲು ಹೊಡೆದು ಬಿತ್ತುತ್ತಾರೆ. ನೀರಾವರಿಗಾದರೆ ಕೈಚೆಲ್ಲನೆ ಮಾಡುತ್ತಾರೆ. ಸಾಲು ಬಿತ್ತನೆಗೆ ಎಕರೆಗೆ 4-5 ಕೆಜಿ, ನೀರಾವರಿಗಾದರೆ 7-8 ಕೇಜಿ ಬೀಜ ಬೇಕಾಗುತ್ತದೆ. ಕೈಚೆಲ್ಲನೆ ಮಾಡಿ ಮೇಲೆ ಹಲುವೆ ಹೊಡೆಯುತ್ತಾರೆ. ಹೆಚ್ಚು ಒತ್ತಾಗಿ ಬಿತ್ತಬಾರದು. ಹಾಗೆ ಮಾಡಿದರೆ ತೆಂಡೆ ಹೊಡೆಯುವುದಿಲ್ಲ ಹಾಗೂ ತೆಂಡೆ ಧೃಢವಾಗಿ ಬೆಳೆಯುವುದಿಲ್ಲ. ಬಿತ್ತಿದ 3-4 ದಿವಸಗಳಿಗೆ ಮೊಳಕೆ ಬರುತ್ತದೆ.

ಒಮ್ಮೆ ಬಿತ್ತಿದರೆ ಮತ್ತೆ ಯಾವುದೇ ಅಂತರ ಬೇಸಾಯವಾಗಲೀ, ಮೇಲುಗೊಬ್ಬರ ಕೊಡುವುದಾಗಲೀ ಅವಶ್ಯಕತೆ ಇಲ್ಲ. ಆದರೂ ಸಹ ಕೆಲವರು ಸಾಲು ಬಿತ್ತನೆ ಮಾಡಿದ ಹೊಲಕ್ಕೆ ಕುಂಟೆ ಹೊಡೆದು ಕಳೆ ನಿಯಂತ್ರಣ ಮಾಡುತ್ತಾರೆ. 2 ರಿಂದ 3 ಅಡಿವರೆಗೆ ಬೆಳೆಯುತ್ತದೆ. ಮಣ್ಣು ಫಲವತ್ತಾಗಿದ್ದರೆ ಅಥವಾ ಗೊಬ್ಬರ ಬಳಸಿದರೆ 4 ಅಡಿವರೆಗೂ ಬೆಳೆಯಬಲ್ಲದು.

ಕೇವಲ 90 ರಿಂದ 105 ದಿನಗಳಿಗೆ ಕೊರಲೆ ಕಟಾವಿಗೆ ಬರುತ್ತದೆ. ಬಿತ್ತುವಾಗ ಸ್ವಲ್ಪ ತೇವವಿದ್ದರೆ ಸಾಕು. ಮುಂದೆ ಒಂದೆರಡು ಸುಮಾರಾದ ಮಳೆ ಬಿದ್ದರೆ ಉತ್ತಮ ಬೆಳೆ ಕೈಗೆ ಸಿಗುತ್ತದೆ.

ಪಾವಗಡ ತಾಲ್ಲೂಕಿನ ಕೆಲ ಭಾಗಗಳಲ್ಲಿ ಬಿತ್ತನೆ ವಿಧಾನ ಸ್ವಲ್ಪ ಭಿನ್ನ. ಅಲ್ಲಿ ಆದ್ರಿ ಅಥವಾ ರೋಹಿಣಿ ಮಳೆಯಲ್ಲಿ ಒಣ ಭೂಮಿಗೇ ಬಿತ್ತುತ್ತಿದ್ದರು. ಮಳೆ ಬಂದಾಗ ಹುಟ್ಟಿಕೊಳ್ಳುತ್ತಿತ್ತು. ಹುಟ್ಟಿ ನಾಲ್ಕೈದು ಎಲೆ ಇಟ್ಟ ನಂತರ ಮಳೆ ಬಾರದೆ ಬಾಡಿದರೂ ನಂತರ ಮಳೆ ಬಂದಾಗ ಉತ್ತಮವಾಗಿ ತೆಂಡೆ ಹೊಡೆಯುತ್ತಿತ್ತು ಎನ್ನುತ್ತಾರೆ ರೈತರು. ಈ ಭಾಗದಲ್ಲಿ ನೀರಾವರಿ ಭೂಮಿಯಲ್ಲಿ ಬಿತ್ತುವುದು ಪದ್ಧತಿ. ಬಾವಿ, ಕೆರೆಗಳಲ್ಲಿ ನೀರಿಲ್ಲದೆ ಭತ್ತ, ರಾಗಿ ಮುಂತಾದ ಹೆಚ್ಚು ನೀರು ಕೇಳುವ ಬೆಳೆಗಳನ್ನು ಇಡಲು ಸಾಧ್ಯವಿಲ್ಲವೆಂದಾದಾಗ ಕೊರಲೆಯನ್ನು ಹಾಕುತ್ತಿದ್ದರು. ಅಂದರೆ ಕೊರಲೆ ಅತ್ಯಂತ ಕಡಿಮೆ ನೀರಿಗೂ ಬೆಳೆಯಬಲ್ಲದು ಎಂಬ ಅಂಶ ಇದರಿಂದ ಮತ್ತಷ್ಟು ಧೃಢಪಡುತ್ತದೆ.

ಕಟಾವು

ಕೊರಲೆಯ ಗರಿಗಳು ಮತ್ತು ತೆನೆ ಹಳದಿ ಬಣ್ಣಕ್ಕೆ ತಿರುಗಿದಾಗ ಕಟಾವಿಗೆ ಸಿದ್ಧಗೊಂಡಿದೆ ಎಂದರ್ಥ. ಕೊರಲೆ ಬೇರು ಆಳಕ್ಕೆ ಹೋಗುವುದಿಲ್ಲ. ಕೆಲವು ರೈತರು ಬೇರು ಸಮೇತ ಕೀಳುತ್ತಾರೆ. ಹಾಗಾಗಿ ಕಟಾವಿಗೆ ಹೆಚ್ಚು ಕೂಲಿ ಆಳುಗಳ ಅಗತ್ಯವಿರುವುದಿಲ್ಲ. ಆದರೆ ಬೇರು ಸಹಿತ ಕಿತ್ತರೆ ಹುಲ್ಲು ಮತ್ತು ಕಾಳುಗಳೆರಡರಲ್ಲೂ ಮಣ್ಣು ಮಿಶ್ರವಾಗುವುದರಿಂದ ಹಾಗೆ ಮಾಡುವವರು ಕಡಿಮೆ. ಹೆಚ್ಚಿನದಾಗಿ ಕುಯಿಲು ಮಾಡುವುದುಂಟು. ಕಟಾವಾದ ನಂತರ ಕಣದಲ್ಲಿ ಬಣವೆ ಹಾಕಿ ಒಂದೆರಡು ದಿನಗಳ ನಂತರ ದನಗಳನ್ನು ಒಕ್ಕಲೆ ಕಟ್ಟಿ ತುಳಿಸುತ್ತಾರೆ. ಇಲಲವೇ ಟ್ರ್ಯಾಕ್ತರ್ ಬಳಸಿ ಒಕ್ಕುತ್ತಾರೆ. ಮುಂಚೆ ರೋಣುಗಲ್ಲಿನಲ್ಲಿ ಒಕ್ಕಣೆ ಮಾಡುತ್ತಿದ್ದರು. ಈಗ ಬಹುತೇಕ ಈ ವಿಧಾನ ನಶಿಸಿದೆ. ಕಾಳು ಸುಲಭವಾಗಿ ಬೇರ್ಪಡುತ್ತದೆ. ಒಕ್ಕಣೆ ನಂತರ ಕಾಳು ಮತ್ತು ಹುಲ್ಲನ್ನು ಬೇರ್ಪಡಿಸಿ ಜೋಪಾನ ಮಾಡುತ್ತಾರೆ. ಇತ್ತೀಚೆಗೆ ರಸ್ತೆಗೆ ಹಾಕಿ ಒಕ್ಕಣೆ ಮಾಡುವುದೂ ಉಂಟು.

ಕೊರಲೆ ಕಾಳು ಹಳದಿ ಮಿಶ್ರಿತ ಬೂದು ಬಣ್ಣಕ್ಕಿರುತ್ತದೆ. ಕಾಳಿನ ಮೇಲೆ ಗಟ್ಟಿ ಕವಚ ಇರುತ್ತದೆ. ಕವಚವು ಏಳು ಪದರವಿರುತ್ತದೆ ಎಂಬುದು ರೈತರ ಅನಿಸಿಕೆ. ಗರಿಗಳು ಜೋಳದ ಗರಿಗಳನ್ನು ಹೋಲುತ್ತವೆ, ಆದರೆ ಗಾತ್ರ ಮತ್ತು ಉದ್ದ ಕಡಿಮೆ. ಕಾಂಡ ತುಂಬಾ ಮೃದು. ಹಾಗಾಗಿ ಒಕ್ಕಣೆ ಮಾಡುವಾಗ ದನಗಳು ಹೆಚ್ಚು ತುಳಿಯಲು ಬಿಡುವುದಿಲ್ಲ. ಹಾಗೆ ಮಾಡಿದರೆ ಹುಲ್ಲೆಲ್ಲಾ ಒಗಡಾಗುತ್ತದೆ ಅರ್ಥಾತ್ ಪುಡಿಯಾಗುತ್ತದೆ ಎನ್ನುತ್ತಾರೆ ರೈತರು.

ಎಕರೆಗೆ ಅಂದಾಜು 3-4 ಕ್ವಿಂಟಾಲ್ ಇಳುವರಿ ಬರುತ್ತದೆ. ಒಂದು ಗಾಡಿಯಷ್ಟು ಹುಲ್ಲು ಸಿಗುತ್ತದೆ. ಫಲವತ್ತಾದ ಮಣ್ಣಿನಲ್ಲಿ 8 ಕ್ವಿಂಟಾಲ್ವರೆಗೂ ಇಳುವರಿ ಬರುವುದುಂಟು, ಆದರೆ ರೈತರು ಸಾಮಾನ್ಯವಾಗಿ ಸುಮಾರಾದ ಜಮೀನಿಗೆ ಕೊರಲೆ ಬಿತ್ತುತ್ತಾರಾದ್ದರಿಂದ ಇಳುವರಿಯನ್ನೂ ಹೆಚ್ಚು ನಿರೀಕ್ಷಿಸುವುದಿಲ್ಲ.

ಸಂಗ್ರಹಣೆ ಸುಲಭ

ಒಕ್ಕಣೆ ನಂತರ ಹುಲ್ಲನ್ನು ಬಣವೆಗೆ ಹಾಕುತ್ತಾರೆ. ಕಾಳನ್ನು ಮೊದಲು ವಾಡೆ, ಬುಡ್ಡು, ಅಥವಾ ಗುಡಾಣಗಳಲ್ಲಿ ಎತ್ತಿಡುತ್ತಿದ್ದರು. ಈಗ ಚೀಲ ಬಳಸುತ್ತಾರೆ. ಕಾಳಿಗೆ ಗಟ್ಟಿ ಕವಚ ಇರುವುದರಿಂದ ಯಾವುದೇ ಹುಳುವಿನ ಬಾಧೆ ಇಲ್ಲ. 4-5 ವರ್ಷದವರೆಗೂ ಹಾಳಾಗುವುದಿಲ್ಲ ಎನ್ನುತ್ತಾರೆ ಬಹುತೇಕ ರೈತರು. ಆದರೆ ಬಿತ್ತನೆ ಬೀಜಕ್ಕೆ ತುಂಬಾ ಹಳತಾಗಬಾರದು. ಸರಿಯಾಗಿ ಮೊಳಕೆಯಾಗುವುದಿಲ್ಲ. ಹೆಚ್ಚೆಂದರೆ ಎರಡು ವರ್ಷದ ಬೀಜ ಉತ್ತಮ.

ಸಂಸ್ಕರಣೆ ಕಷ್ಟ

ಕೊರಲೆಯನ್ನು ಬಿತ್ತುವುದಾಗಲೀ, ಕೊಯ್ಯುವುದಾಗಲೀ, ಬಚ್ಚಿಡುವುದಾಗಲೀ, ತಿನ್ನುವುದಾಗಲೀ ಸುಲಭದ ಕೆಲಸ. ಆದರೆ ಕಷ್ಟ ಬರುವುದು ಅದನ್ನು ಅಕ್ಕಿ ಮಾಡುವಾಗ ಮತ್ತು ಹಿಟ್ಟು ಮಾಡುವಾಗ. ಈಗಾಗಲೇ ಹೇಳಿದಂತೆ ಕಾಳಿನ ಮೇಲೆ ಗಟ್ಟಿ ಕವಚ ಇರುತ್ತದೆ. ಇದನ್ನು ಬೇರ್ಪಡಿಸುವುದು ಸುಲಭದ ಮಾತಲ್ಲ. ಈ ಕವಚ ದಪ್ಪ ಇರುವುದರಿಂದ ಒಂದು ಕ್ವಿಂಟಾಲ್ ಕೊರಲೆಗೆ 40-50 ಕಿಲೋ ಅಕ್ಕಿ ಮಾತ್ರ ಲಭ್ಯ.

ಹಿಂದಿನ ಕಾಲದಲ್ಲಿ ಅಕ್ಕಿ ಮಾಡುವ ಕ್ರಮ ಹೀಗೆ;

ಮೊದಲು ಕೊರಲೆಗೆ ಕೆಮ್ಮಣ್ಣು ಕಟ್ಟಬೇಕು. (ಕೆಮ್ಮಣ್ಣಿಗೆ ನೀರು ಹಾಕಿ ಸ್ವಲ್ಪ ಮಂದಗೆ ತಿಳಿ ಮಾಡಿಕೊಂಡು, ನೆಲದ ಮೇಲೆ ಹರಡಿದ ಕೊರಲೆಯ ಮೇಲೆ ಚಿಮುಕಿಸಿ ಕೈಯಾಡಿಸಿ ಎಲ್ಲಾ ಕಾಳುಗಳಿಗೂ ಕೆಮ್ಮಣ್ಣು ಮೆತ್ತಿಕೊಳ್ಳುವಂತೆ ಮಾಡುವುದು) ನಂತರ ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು. ಒಣಗಿದ ಕೊರಲೆಯನ್ನು ಬೀಸುವ ಕಲ್ಲಿನಲ್ಲಿ ಹಾಕಿ ಅಕ್ಕಿ ಮಾಡಿಕೊಳ್ಳಬೇಕು. ತುಂಬಾ ಮೃದುವಾಗಿ ಬೀಸಬೇಕು. ಜೋರಾಗಿ ಅಥವಾ ಗಟ್ಟಿಯಾಗಿ ಬೀಸಿದರೆ ಕೊರಲೆ ಅಕ್ಕಿಯಾಗುವ ಬದಲು ನುಚ್ಚಾಗುತ್ತದೆ ಇಲ್ಲವೇ ಹಿಟ್ಟಾಗುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಬೀಸುತ್ತಾರೆ.

ಕೆಲವು ಭಾಗಗಳಲ್ಲಿ ಕೊರಲೆ ಅಕ್ಕಿ ಮಾಡಲೆಂದೇ ಹಗುರವಾದ ಬೀಸುವ ಕಲ್ಲುಗಳಿರುತ್ತವೆ. ಇವು ಇಲ್ಲದ ಕಡೆ ರಾಗಿ ಬೀಸುವ ಕಲ್ಲನ್ನೇ ಬಳಸುತ್ತಾರೆ. ಇದು ಭಾರವಿರುವುದರಿಂದ ಎರಡು ಕಲ್ಲುಗಳ ಮಧ್ಯೆ ಎಣ್ಣೆ ಟಿನ್ನಿನ ಹಾಳೆ (ತುಮಕೂರು ಭಾಗದಲ್ಲಿ ಡಬ್ಬ ರೇಖು ಎನ್ನುತ್ತಾರೆ) ಯನ್ನು ವೃತ್ತಾಕಾರದಲ್ಲಿ ಕತ್ತರಿಸಿ ಇಡುತ್ತಾರೆ, ಇದರಿಂದ ಕೊರಲೆ ನುಚ್ಚಾಗದೆ ಗುಣಮಟ್ಟದ ಅಕ್ಕಿ ಸಿಗುತ್ತದೆ. ಈ ಅಕ್ಕಿಯನ್ನು ಮತ್ತೆ ಕಲ್ಲಿನ ಚೂರುಗಳಿರದಂತೆ ಸೋಸಿ ಬಳಸುತ್ತಾರೆ. ಇದಲ್ಲದೆ ಒಳಕಲ್ಲಿಗೆ ಹಾಕಿ ಅದರ ಮೇಲೆ ಕಡಿ ಇಟ್ಟು ಕುಟ್ಟುವುದೂ ಕೆಲವೆಡೆ ಬಳಕೆಯಲ್ಲಿತ್ತು.

ಕ್ರಮೇಣ ರಾಗಿ ಹಿಟ್ಟು ಮಾಡುವ ಮಿಲ್ನಲ್ಲಿಯೇ ಕೊರಲೆಯನ್ನು ಹಾಕಿ ಅಕ್ಕಿ ಮಾಡುವುದು ರೂಢಿಗೆ ಬಂದಿದೆ. ಆದರೆ ಹೀಗೆ ಮಾಡಿದ ನಂತರವೂ ಮತ್ತೆ ಸ್ವಲ್ಪ ಪ್ರಮಾಣದ ಹೊಟ್ಟು ಇರುತ್ತದೆ. ಇದನ್ನು ಹಸನು ಮಾಡಲು ಕುಟ್ಟುವುದೋ ಅಥವಾ ಬೀಸುವುದೋ ಮಾಡಲೇಬೇಕಾಗುತ್ತದೆ. ಕೊರಲೆ ಅಕ್ಕಿಯ ಗಾತ್ರ ತುಂಬಾ ಚಿಕ್ಕದು. ಹಾಗಾಗಿ ಕಲ್ಲು ಹೆಕ್ಕುವುದು ತ್ರಾಸದ ಕೆಲಸ. ಇದರ ಸಿಪ್ಪೆ ತೆಗೆಯಬಲ್ಲ ಗಿರಣಿ ಯಂತ್ರ ಲಭ್ಯವಾಗುವುದಾದರೆ ಕೊರಲೆಯನ್ನು ಜನಪ್ರಿಯಗೊಳಿಸುವುದು ಸುಲಭವಾಗಬಲ್ಲದು.

ಅಕ್ಕಿಯನ್ನು ಹಿಟ್ಟು ಮಾಡಲು ಮತ್ತೆ ಬೀಸುವ ಕಲ್ಲಿಗೆ ಹಾಕಿ ಬೀಸಬೇಕು. ಈಗ ಬಿರುಸಾಗಿ ಬೀಸಿದರೆ ತಪ್ಪಿಲ್ಲ.

ಉಪಯೋಗಗಳು:

1. ಅಳಿಲಿಗೆ ಆಹಾರ, ಅಡಿಕೆಗೆ ನಿರಾಳ

ಅಡಿಕೆ ತೋಟಕ್ಕೆ ದಾಳಿ ಮಾಡುವ ಅಳಿಲುಗಳಿಂದ ರಕ್ಷಣೆ ಪಡೆಯಲು ತೋಟಗಲಲ್ಲಿ ಕೊರಲೆ ಬೆಳೆಸುವ ಪರಿಪಾಠ ತುಮಕೂರು ಭಾಗದಲ್ಲಿ ಚಾಲ್ತಿಯಲ್ಲಿದೆ. ಇತ್ತೀಚೆಗೆ ಕೊರಯು ಈ ಉದ್ದೇಶಕ್ಕಾಗಿ ಹೆಚ್ಚು ಬಳಕೆಯಾಗುತ್ತಿದೆ. ಅಡಿಕೆಯ ಹೊಂಬಾಳೆ ಹರಳು ಕಟ್ಟಿ ಉಣುಬು (ಎಳೆ ಅಡಿಕೆ) ಆಗುವ ಸಮಯದಲ್ಲಿ ಉಡತೆ (ಅಳಿಲು) ಗಳ ಕಾಟ ವಿಪರೀತ. ಇವು ಮರದಿಂದ ಮರಕ್ಕೆ ನೆಗೆಯುತ್ತಾ ಗುಂಪಾಗಿ ಜಗಳವಾಡುತ್ತಾ ಎಳೆ ಅಡಿಕೆ ಕಾಯಿಗಳನ್ನು ಕಚ್ಚಿ ಉದುರಿಸಿ ಹಾಳು ಮಾಡುತ್ತವೆ.

ಸಾವಯವ ಕೃಷಿಕರಾದ ಕೃಷ್ಣಮೂರ್ತಿ ಬಿಳಿಗೆರೆಯವರ ಪ್ರಕಾರ ಅಳಿಲುಗಳ ಈ ಸ್ವಭಾವಕ್ಕೆ ಕಾರಣ ತೋಟಗಳಲ್ಲಿ ಹಣ್ಣು ಹಂಪಲುಗಳ ಗಿಡಗಳು ಇಲ್ಲದಿರುವುದು. ಮುಂಚೆ ತೋಟಗಳಲ್ಲಿ ಸೀಬೆ, ನೇರಳೆ, ಸೀತಾಫಲ ಮುಂತಾದ ಹತ್ತು-ಹಲವು ಹಣ್ಣಿನ ಗಿಡಗಳಿದ್ದು ಸದಾ ಒಂದಿಲ್ಲ್ಲೊಂದು ಹಣ್ಣು ಬಿಟ್ಟಿರುತ್ತಿದ್ದವು. ಅಳಿಲುಗಳು ಈ ಹಣ್ಣ್ಣುಗಳನ್ನು ತಿಂದುಕೊಂಡು ಆರಾಮಾಗಿ ಕಾಲಕಳೆಯುತ್ತಿದ್ದವು, ಅಡಿಕೆ ಮರ ಹತ್ತುವ ಗೋಜಿಗೆ ಹೋಗುತ್ತಿರಲಿಲ್ಲ. ಈಗ ನೆರಳಾಗುತ್ತದೆ ಎಂತಲೋ, ಹೆಚ್ಚೆಚ್ಚು ಇಳುವರಿಗಾಗಿಯೋ ಹಣ್ಣಿನ ಗಿಡಗಳನ್ನೆಲ್ಲಾ ಕಡಿದು ಬರೀ ಅಡಿಕೆ ಅಥವ ತೆಂಗು ಮಾತ್ರ ಉಳಿಸಿಕೊಂಡಿರುತ್ತಾರೆ. ಹಾಗಾಗಿ ಅಳಿಲುಗಳಿಗೆ ತಿನ್ನಲು ಏನೂ ಸಿಗದೆ ಅವು ಅಡಿಕೆ ಕಾಯಿಗೆ ಬಾಯಾಕಿವೆ.

ಬಹುತೇಕ ಕೃಷಿಕರು ಬಿಳಿಗೆರೆಯವರ ಈ ಅಭಿಪ್ರಾಯವನ್ನು ಅನುಮೋದಿಸುತ್ತಾರೆ.

ಈ ಸಮಸ್ಯೆಯಿಂದ ಪಾರಾಗಲು ಕೊರಲೆ ಉತ್ತಮ ಬೆಳೆಯಾಗಿ ಬಳಕೆಯಲ್ಲಿದೆ. ಅಡಿಕೆ ತೋಟದಲ್ಲಿ ಯುಗಾದಿ ಹಬ್ಬದ ಹೊತ್ತಿಗೆ ತೋಟದಲ್ಲಿ ಕೊರಲೆ ಬಿತ್ತುತ್ತಾರೆ. ಅಡಿಕೆಯಲ್ಲಿ ಎಳೆ ಅಡಿಕೆ ಮೂಡುವ ಕಾಲಕ್ಕೆ ಸರಿಯಾಗಿ ಕೊರಲೆ ಕಾಳು ಕಟ್ಟುವ ಹಂತಕ್ಕೆ ಬೆಳೆದಿರುತ್ತದೆ. ಅಳಿಲುಗಳಿಗೆ ಪ್ರಿಯವಾದ ಕೊರಲೆ ನೆಲಮಟ್ಟದಲ್ಲೇ ಲಭ್ಯವಿರುವುದರಿಂದ ಅವು ಅಡಿಕೆ ಮರ ಹತ್ತುವ ಕಷ್ಟಕ್ಕೆ ಹೋಗುವುದಿಲ್ಲ. ಅಳಿಲುಗಳಿಗೆ ಆಹಾರವೂ ಸಿಕ್ಕಿತು, ರೈತರಿಗೆ ಅಡಿಕೆಯೂ ಉಳಿಯಿತು. ಈ ಉದ್ದೇಶಕ್ಕೆಂದೇ ಅಡಿಕೆ ಕೃಷಿಕರು ಪ್ರತಿ ವರ್ಷವೂ ಕೊರಲೆ ಬಿತ್ತುತ್ತಾರೆ. ಕೆಲವರು ತೋಟದ ಅಂಚಿನಲ್ಲಿ ಬಿತ್ತಿದರೆ ಮತ್ತೆ ಕೆಲವರು ಇಡೀ ತೋಟದಲ್ಲಿ ಬಿತ್ತುವುದನ್ನು ಕಾಣಬಹುದು.

ತೋಟಗಳಲ್ಲಿ ಕೊರಲೆ ಬಿತ್ತನೆಯಿಂದ ಅಳಿಲು ನಿಯಂತ್ರಣದಂತಹ ನೇರ ಅನುಕೂಲವಾದರೆ ಪರೋಕ್ಷ ಅನುಕೂಲಗಳು ಹಲವಾರಿವೆ. ಮುಖ್ಯವಾಗಿ ಬೇಸಿಗೆಯಲ್ಲಿ ತೋಟದ ತೇವಾಂಶ ಕಾಪಾಡುವಲ್ಲಿ ಕೊರಲೆ ಸಹಕಾರಿ. ಅಲ್ಲದೆ ಸಮೃದ್ಧವಾಗಿ ಬೆಳೆಯುವ ಕೊರಲೆ ಇತರೆ ಹಾನಿಕಾರಕ ಕಳೆಗಳನ್ನೂ ನಿಯಂತ್ರಿಸುತ್ತದೆ. ತೋಟ ಹಸನು ಮಾಡುವಾಗ ಉಳುಮೆ ಮಾಡಿ ಕೊರಲೆ ಹುಲ್ಲನ್ನು ಅಲ್ಲೇ ಬಿಟ್ಟರೆ ಅಥವಾ ಬುಡ ಮಟ್ಟಕ್ಕೆ ಕತ್ತರಿಸಿ ಹರಡಿದರೆ ಮುಚ್ಚಿಗೆಯಾಗುತ್ತದೆ ಹಾಗೂ ಬೇಗನೆ ಕೊಳೆತು ಭೂಮಿಗೆ ಸೇರಿ ಉತ್ಕೃಷ್ಟ ಗೊಬ್ಬರವೂ ಆಗುತ್ತದೆ. ಉಳುಮೆ ಮಾಡದಿದ್ದರೆ ಕೊರಲೆ ತೆನೆ ಬಲಿತು ಅಲ್ಲೇ ಉದುರಿ ಮತ್ತೆ ಮೊಳಕೆಯಾಗುವುದೂ ಉಂಟು.

2. ನೆರಳಲ್ಲೂ ಬೆಳೆಯುವ ಗುಣ

ನೆರಳಿನಲ್ಲೂ ಬೆಳೆಯುವ ವಿಶಿಷ್ಠ ಗುಣ ಕೊರಲೆಗಿದೆ. ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ ತಾಲ್ಲೂಕುಗಳಲ್ಲಿ ಹುಣಸೆ ಮರಗಳು ಹೇರಳವಾಗಿವೆ. ಹೊಲದ ನಡು ಮಧ್ಯೆ, ಬದುಗಳ ಮೇಲೆ, ಹೊಲದ ಅಂಚುಗಳಲ್ಲಿ ಹುಣಸೆ ಮರಗಳನ್ನು ಬೆಳೆಸುವುದು ಈ ಭಾಗದ ರೂಢಿ. ಕೆಲವೆಡೆ ಹುಣಸೆ ತೋಪುಗಳನ್ನೂ ಕಾಣಬಹುದು. ಹುಣಸೆ ಮರಗಳ ನೆರಳಿನಲ್ಲಿ ಸಾಮಾನ್ಯವಾಗಿ ಯಾವ ಬೆಳೆಯೂ ಬೆಳೆಯುವುದಿಲ್ಲ. ಕಾರಣ ಅಲ್ಲಿ ಮಣ್ಣು ಫಲವತ್ತಾಗಿರುವುದಿಲ್ಲ ಹಾಗೂ ಅಲ್ಪ-ಸ್ವಲ್ಪ ಬಿಸಿಲೂ ಬೀಳುವುದಿಲ್ಲ. ಆದರೆ ಕೊರಲೆ ಇಲ್ಲಿಯೂ ಸಮೃದ್ಧವಾಗಿ ಬೆಳೆಯಬಲ್ಲ ಸಾಮಥ್ರ್ಯ ಹೊಂದಿದೆ.

ಕೊರಲೆ ಬೆಳೆಯಲ್ಲಿ ಕೊಪ್ಪಳದ ಸಾವಯವ ಕೃಷಿಕರಾದ ಜಯಂತ್ರವರದು ವಿಶಿಷ್ಟ ಅನುಭವ. 2009ರಲ್ಲಿ ಧಾರವಾಡದ ಸಿರಿಧಾನ್ಯ ಮೇಳಕ್ಕೆ ಭಾಗವಹಿಸಿದ್ದ ಜಯಂತ್ ಕೊರಲೆಯ ಬಗ್ಗೆ ಮಾಹಿತಿ ತಿಳಿದು ಬೆಳೆಯುವ ಆಸಕ್ತಿ ವಹಿಸಿದರು. ತುಮಕೂರಿನಿಂದ 1 ಕಿಲೋ ಬೀಜ ತರಿಸಿ 2010 ರ ಮುಂಗಾರಿನಲ್ಲಿ ತಮ್ಮ ಹೊಲದಲ್ಲಿ ಬಿತ್ತಿದರು. ಹೆಚ್ಚಾಗಿ ಮರಗಳ ಕೆಳಗೇ ಬಿತ್ತನೆ ಮಾಡಿದರು. ಅವರಿಗೇ ಆಶ್ಚರ್ಯವಾಗುವಂತೆ ಕೊರಲೆ 4 ಅಡಿವರೆಗೂ ಬೆಳೆಯಿತು. ಮರದ ನೆರಳಲ್ಲೂ ಸಹ ಉತ್ತಮ ಬೆಳವಣಿಗೆ ಬಂದಿತ್ತು. ತೆನೆ ಹಂತದಲ್ಲಿ ಹೆಚ್ಚು ಮಳೆ ಬಂದು ಹೊಲ ಪೂರ್ತಿ ಚಾಪೆ ಹಾಸಿದಂತೆ ಮಲಗಿದರೂ ಕಾಳು ಮತ್ತು ಹುಲ್ಲು ಹಾಳಾಗಲಿಲ್ಲ. ಕತಪ್ಪದೇ ಈ ವರ್ಷ ಮತ್ತೆ ಕೊರಲೆ ಹಾಕುತ್ತೇನೆಕಿ ಎನ್ನುತ್ತಾರೆ ಜಯಂತ್. ಅಲ್ಲದೆ ಅಕ್ಕ-ಪಕ್ಕದ ಹಲವಾರು ರೈತರೂ ಸಹ ಬೇಡಿಕೆ ಇಟ್ಟಿದ್ದಾರೆ ಎನ್ನುತಾರೆ. ಹೀಗೆ ಕೊಪ್ಪಳ ಭಾಗದಲ್ಲಿಯೂ ಸಹ ಕೊರಲೆ ಹಬ್ಬುತ್ತಿದೆ.

3. ಉತ್ಕೃಷ್ಟ ಮೆವು

ಮಣಿವಿನಕುರಿಕೆ ಮಂಜಣ್ಣನವರ ಪ್ರಕಾರ ಕೊರಲೆ ಹುಲ್ಲು ಕರಾವಿನ ರಾಸುಗಳಿಗೆ ಅತ್ಯುತ್ತಮವಾದುದು. ಮನುಷ್ಯರಿಗೆ ಕೊರಲೆ ರೊಟ್ಟಿ ಹೇಗೆ ಇಷ್ಟವೋ ಹಾಗೆಯೇ ರಾಸುಗಳಿಗೆ ಕೊರಲು ಹುಲ್ಲು ಬಲು ಇಷ್ಟ ಎನ್ನುತ್ತಾರೆ ಅವರು. ಎಷ್ಟೊ ರೈತರು ಬರೀ ಮೇವಿಗಾಗಿಯೇ ಕೊರಲೆ ಬೆಳೆಯುವುದೂ ಉಂಟು. ಕಾಳು ಕಟ್ಟುವ ಮೊದಲೇ ಕತ್ತರಿಸಿ ಕುರಿಗಳಿಗೆ ಹಾಕುತ್ತಾರೆ. ಅದರಲ್ಲೂ ಮಾರಾಟದ ಉದ್ದೇಶಕ್ಕಾಗಿ ಮೇಯಿಸುವ ಕುರಿಗಳು ಕಡಿಮೆ ಅವಧಿಯಲ್ಲಿ ದಷ್ಟ-ಪುಷ್ಟವಾಗಿ ಬೆಳೆಯಲು ಕೊರಲೆ ಹುಲ್ಲೇ ಅತ್ಯುತ್ತಮ.

 

ಕಾಳು ಬೇರ್ಪಡಿಸಿದ ಹುಲ್ಲನ್ನೂ ಸಹ ರೈತರು ಜತನದಿಂದ ಕಾಪಾಡುತ್ತಾರೆ. ಕೆಲವರು ಅದನ್ನೇ ಪ್ರತ್ಯೇಕ ಬಣವೆ ಹಾಕಿ ಬಳಸುವುದೂ ಉಂಟು. ಬೇರೆ ಯಾವ ಹುಲ್ಲೂ ಸಹ ಇಷ್ಟು ಮೃದುವಾಗಿರುವುದಿಲ್ಲ. ಕಟಾವಾದ ನಂತರ ಮಳೆಗೆ ಸಿಕ್ಕರೆ ಮೇವಿನ ಗುಣ ಹಾಳಾಗುತ್ತದೆ. ಆದ್ದರಿಂದ ರೈತರು ಮಳೆ ನೋಡಿಕೊಂಡು ಕಣಕ್ಕೆ ಹಾಕಿ ಒಕ್ಕಣೆ ಮಾಡುತ್ತಾರೆ.

ಅಡುಗೆ ಮನೆಯಲ್ಲಿ ಕೊರಲೆ

ಕೊರಲೆ ಬಗ್ಗೆ ಮಾತನಾಡುವವರೆಲ್ಲ ಅದರ ರೊಟ್ಟಿಯ ಗುಣಗಾನ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಕೊರಲೆ ರೊಟ್ಟಿ ಅಷ್ಟು ಸ್ವಾದಿಷ್ಟ. ಒಂದೆರಡು ಸಲ ತಿಂದವರ ನೆನಪಿನ ಭಿತ್ತಿಯಲ್ಲೂ ಅದು ಶಾಶ್ವತ ಸ್ಥಾನ ಪಡೆದಿರುತ್ತದೆ ಎಂದರೆ ಅದರ ಹೆಚ್ಚುಗಾರಿಕೆಯನ್ನು ಅರ್ಥಮಾಡಿಕೊಳ್ಳಬಹುದು. ಕೊರಲೆ ರೊಟ್ಟಿಯ ಕಮ್ಮಗಿನ ಸ್ವಾದ, ಮೃದುತ್ವ ಮತ್ತು 5-6 ದಿನಗಳಷ್ಟು ಕಾಲ ಕೆಡದಿರುವ ತಾಳಿಕೆ ಗುಣಗಳು ಬೇರೆ ಯಾವ ರೊಟ್ಟಿಗೂ ಇಲ್ಲವೆಂದೇ ಹೇಳಬಹುದು. ಚೆನ್ನಾಗಿ ಒಣಗಿಸಿ ಶೇಖರಿಸಿಟ್ಟರೆ 6 ತಿಂಗಳು ಬಳಸಬಹುದು ಎನ್ನುತ್ತಾರೆ ಮಧುಗಿರಿ ತಾಲ್ಲೂಕು ಗೊಲ್ಲರಹಟ್ಟಿಯ ಚಿತ್ತಕ್ಕ.

ಕೊರಲೆ ರೊಟ್ಟಿ ಮಾಡುವ ವಿಧಾನ ಬಹುತೇಕ ರಾಗಿ ಮತ್ತು ಅಕ್ಕಿ ರೊಟ್ಟಿ ಮಾಡುವಂತೆಯೇ ಇರುತ್ತದೆ. ಆದರೆ ಹುರಿದ ಎಳ್ಳು ಮತ್ತು ಮೆಣಸಿನಕಾಯಿ ಬೀಜ ಹಾಕುವುದು ಕೊರಲೆ ರೊಟ್ಟಿಯ ವಿಶೇಷ. ಕೊರಲೆ ಹಿಟ್ಟನ್ನು ನೀರು ಹಾಕಿ ಕಲಸಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕುವುದು ಕಡ್ಡಾಯ. ಕಲಸಿಕೊಂಡ ಹಿಟ್ಟನ್ನು ಉಂಡೆ ಮಾಡಿ ಮಣೆಯ ಮೇಲೆ ತಟ್ಟಿ ಒಲೆಯ ಮೇಲಿಟ್ಟ ಹೆಂಚಿಗೆ ಹಾಕಬೇಕು. ಅದು ಹಸಿಯಾಗಿರುವಾಗಲೇ ಮೊದಲೇ ಹುರಿದಿಟ್ಟುಕೊಂಡ ಎಳ್ಳು ಮತ್ತು ಮೆಣಸಿನಬೀಜಗಳನ್ನು ರೊಟ್ಟಿಯ ಮೇಲೆ ಉದುರಿಸಿ ಅವು ರೊಟ್ಟಿಗೆ ಭದ್ರವಾಗಿ ಅಂಟಿಕೊಳ್ಳುವಂತೆ ಮೃದುವಾಗಿ ತಟ್ಟಬೇಕು. ಎರಡೂ ಬದಿ ಹದವಾಗಿ ಬೆಂದ ನಂತರ ಇಳಿಸಬೇಕು. ರೊಟ್ಟಿಯನ್ನು ಬಿಸಿಯಾಗಿರುವಾಗಲೇ ತಿನ್ನಬಹುದು. ಹೆಚ್ಚಿನ ಕಾಲ ಶೇಖರಿಸಿಡುವುದಾದರೆ ಬಿಸಿಲಿನಲ್ಲಿ ಚೆನಾಗಿ ಒಣಗಿಸಬೇಕು.

ಇಸ್ಕೂಲ್ ಬ್ಯಾಗ್ನಲ್ಲಿ ಕಾಯಂ ಸದಸ್ಯತ್ವ  

ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಕೊರಟಗೆರೆ, ಶಿರಾ ತಾಲ್ಲೂಕುಗಳಲ್ಲಿ ಸುಮಾರು 20 ವರ್ಷ ಹಿಂದೆ ಶಾಲೆಗೆ ಹೋಗುವ ಚಿಕ್ಕ ಮಕ್ಕಳ ಬ್ಯಾಗುಗಳಲ್ಲಿ ಕೊರಲೆ ರೊಟ್ಟಿ ಕಾಯಮ್ಮಾಗಿ ಇರುತ್ತಿತ್ತು. ಮದ್ಯಾಹ್ನ ರೊಟ್ಟಿ ತಿಂದು ಹೊಟ್ಟೆ ತುಂಬಾ ನೀರು ಕುಡಿದ ಮಕ್ಕಳು ಸಂಜೆವರೆಗೂ ದಿಮ್ಮಗೆ ಇರುತ್ತಿದ್ದವು. ಆಗ ಬಡವ-ಸಾಹುಕಾರ ಎನ್ನದೆ ಅಲ್ಲರ ಮನೆಗಳಲ್ಲೂ ಕೊರಲೆ ರೊಟ್ಟಿ, ಹಾರಕದ ಅನ್ನ ದಿನನಿತ್ಯದ ಆಹಾರವಾಗಿತ್ತು.
ತರಾವರಿ ಅಕ್ಕಿ!  

ಈಗ ಅಕ್ಕಿ ಎಂದರೆ ಅದು ಭತ್ತದ ಅಕ್ಕಿ ಎಂದೇ ಎಲ್ಲರ ಭಾವನೆ. ಆದರೆ ಮುಂಚೆ ನವಣಕ್ಕಿ, ಹಾರಕದಕ್ಕಿ, ಸಾಮಕ್ಕಿ, ನೆಲ್ಲಕ್ಕಿ ಎಂದೇ ಕರೆಯುತ್ತಿದ್ದರು. ಹಬ್ಬ ಮತ್ತು ವಿಶೇಷ ಸಂದರ್ಭಗಳಲ್ಲಿ ಹುಡುಗರು `ಐಟ್ಲಗೋ ಇವತ್ತು ನಮ್ಮೆನೆಗೆ ನೆಲ್ಲಕ್ಕಿ ಅನ್ನ’ ಎಂದು ಅಭಿಮಾನದಿಂದ ಹೇಳಿಕೊಂಡು ಸ್ನೇಹಿತರನ್ನು ಕಿಚಾಯಿಸಿಕೊಂಡು ಅಡ್ಡಾಡುತ್ತಿದ್ದರು. 

ಮುದ್ದೆಗೆ ನುಚ್ಚು : ಕೊರಲೆ ಅಕ್ಕಿಯ ಮತ್ತೊಂದು ಮುಖ್ಯ ಬಳಕೆ ರಾಗಿ ಮುದ್ದೆಗೆ ಮಿಶ್ರ ಮಾಡಲು ನುಚ್ಚಾಗಿ ಬಳಸುತ್ತಿದ್ದುದು. ಪಾವಗಡದ ಮುಗದಾಳಬೆಟ್ಟ ಗ್ರಾಮದ ನರಸಿಂಹಯ್ಯನವರ ಪ್ರಕಾರ ಶೇ 75ರಷ್ಟು ರಾಗಿ ಹಿಟ್ಟಿಗೆ ಶೇ 25ರಷ್ಟು ಕೊರಲೆ ನುಚ್ಚು ಸೇರಿಸಿ ಮುದ್ದೆ ಮಾಡುವುದು ರೂಢಿ.

ಕೊರಲೆ ಹುಗ್ಗಿ ಅಥವಾ ಪಾಯಸ : ಇದೊಂದು ಸಿಹಿ ತಿನಿಸು. ಕೊರಲೆ ಅಕ್ಕಿಯನ್ನು ಬೇಯಲು ಇಟ್ಟು ಮುಕ್ಕಾಲು ಭಾಗ ಬೆಂದ ನಂತರ ಪುಡಿ ಮಾಡಿದ ಬೆಲ್ಲವನ್ನು ಹಾಕಿ ತಿರುವಬೇಕು. ಒಲೆ ಮೇಲಿಂದ ಇಳಿಸಿದ ನಂತರ ಕಾಯಿತುರಿ ಹಾಕಿ ಮತ್ತೆ ತಿರುವಿದರೆ ಹುಗ್ಗಿ ರೆಡಿ. ಇದ್ದರೆ ದ್ರಾಕ್ಷಿ-ಗೋಡಂಬಿನೂ ಹಾಕ್ಬೈದು ಎನ್ನುತ್ತಾರೆ ಹರೆಯದಲ್ಲಿ ಇದನ್ನು ತಿಂದಿರುವ ಎಂ.ಗೊಲ್ಲಹಳ್ಳಿಯ ಸಿದ್ದಪ್ಪ ತಾತ.

ಕೊರಲೆ ಉಸ್ಲಿ : ಕೊರಲೆ ಅನ್ನ ಮಾಡಿ ಎಣ್ಣೆ, ಈರುಳ್ಳಿ, ಮೆಣಸಿನಕಾಯಿಯ ಒಗ್ಗರಣೆ ಹಾಕಿದರೆ  ಅದೇ ಕೊರಲೆ ಉಸ್ಲಿ.

ಹಿರಿಯರ ಮನದಲ್ಲಿ ನೆಲೆಯೂರಿದ ಕೊರಲೆ  

ಕೊರಲೆ ಬಗ್ಗೆ ತುಮಕೂರು ಜಿಲ್ಲೆಯ ರೈತರೊಂದಿಗೆ ಮಾತಿಗೆ ಕುಂತರೆ `ಈಗೆಲ್ಲೈತೆ ಸ್ವಾಮಿ ಕೊರ್ಲೆ, ಅದುನ್ ಬೆಳೆಯೋನು ಇಲ್ಲ, ತಿನ್ನೋ ನನ್ ಮಗ ಮದ್ಲೆ ಇಲ್ಲ’ ಎನ್ನುತ್ತಾರೆ. ಆದರೆ ಅವರ ನೆನಪಿನಲ್ಲಿ ಕೊರಲೆಯ ಬಾಂಧವ್ಯ ಬಿಚ್ಚಿಕೊಳ್ಳುತ್ತದೆ.  ಈರಗೆಂಪಯ್ಯನಪಾಳ್ಯದ ಹೋರಿ ಮುದ್ದಪ್ಪ ಕದನಗಳ ಜಾತ್ರೆಗಳಿಗೆ 10-15 ದಿನ ಹೋಗಬೇಕಾದರೆ ಕೊರ್ಲೆ ರೊಟ್ಟಿ ಬುತ್ತಿ ತಗೊಂಡೋಗ್ತ್ತಿದ್ವಿ, ಅದೇ ನಮಗೆ ಊಟ, ಅಷ್ಟು ದಿನ ಆದ್ರೂ ರೊಟ್ಟಿ ಕಮ್ಮಗಿರದು, ಎನ್ನುತ್ತಾರೆ. ತೋವಿನಕೆರೆ ಬಳಿಯ ಗೊಲ್ಲರಹಟ್ಟಿಯ 70 ವರ್ಷದ ಈರಣ್ಣ  `ಕೊರ್ಲೆ ಅಕ್ಕಿ ಅನ್ನದ ಜೊತ್ಗೆ ಹಾಲು ಇಲ್ಲಾ ಮೊಸರು ಕಲಿಸಿ ಉಂಡರೆ ಜೀವ ತಣ್ಣಗಿರದು’ ಎಂದು ಕೊರಲೆ ತಿನಿಸಿನ ಗುಣಗಾನ ಮಾಡುತ್ತಾರೆ.

ಕೊರಲು ಬೆಳೆ ಕಡಿಮೆಯಾಗಲು ಕಾರಣಗಳು

ಬೇರೆಲ್ಲಾ ಕಿರುಧಾನ್ಯಗಳಂತೆ ಕೊರಲೆಯೂ ಕಣ್ಮರೆಯ ಹಾದಿಯಲ್ಲಿದೆ. ಆದರೆ ಉಳಿದೆಲ್ಲವುಗಳಿಗಿಂತ ಕೊರಲೆ ಹೆಚ್ಚು ಅಪಾಯದಲ್ಲಿದೆ. ಬೇರೆ ಕಿರು ಧಾನ್ಯಗಳ ಬೆಳೆಯುವ ವ್ಯಾಪ್ತಿ ಹೆಚ್ಚಾಗಿದ್ದು ಎಲ್ಲಾದರೂ ಒಂದು ಕಡೆ ಉಳಿಯುವ ಸಂಭವವಿದೆ. ನವಣೆ, ಸಾಮೆಗಳು ಸಾಲು ಬೆಳೆಯಾಗಿಯಾದರೂ ಹೇಗೋ ನುಸುಳಿಕೊಂಡು ಬೆಳೆಯಬಲ್ಲವು. ಆದರೆ ಕೊರಲೆ ಕೇವಲ ಒಂದೆರಡು ಜಿಲ್ಲೆಗಳಲ್ಲಿ ಮಾತ್ರ ಬೆಳೆಯುತ್ತಿರುವುದರಿಂದ ಬಹುಬೇಗ ನಾಶವಾಗುವ ಸಂಭವವಿದೆ.

ಕೊರಲೆ ನಾಶಕ್ಕೆ ಕಾರಣಗಳು ಹೀಗಿವೆ.

ಗಟ್ಟಿ ಕವಚವೇ ಮುಳುವಾಗಿದೆ : ಕೊರಲೆ ಕಾಳಿನ ಮೇಲೆ ಗಟ್ಟಿ ಕವಚವಿದೆ. ಇದು ಕಾಳಿನ ರಕ್ಷಣೆಗೆ ಹಲವು ರೀತಿಯಲ್ಲಿ ಸಹಕಾರಿಯಾಗಿದೆ, ಹಾಗೆಯೇ ಕೊರಲೆ ಬಳಕೆ ಕಡಿಮೆಯಾಗಲೂ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಗಟ್ಟಿ ಕವಚದ ದೆಸೆಯಿಂದಾಗಿ ಕೊರಲೆಯನ್ನು ಮಿಲ್ ಮಾಡಿಸುವುದು ಈಗಿನ ತಲೆಮಾರಿನವರಿಗೆ ತಲೆನೋವಿನ ಕೆಲಸವಾಗಿದೆ. ಅದಕ್ಕೆ ಯಾವುದೇ ಮಿಲ್ಗಳಾಗಲೀ, ತಂತ್ರಜ್ಞಾನವಾಗಲೀ ಅಭಿವೃದ್ಧಿಯಾಗಿಲ್ಲವಾದ್ದರಿಂದ ಕೊರಲೆ ಬಳಕೆ ಕಡಿಮೆಯಾಗಿದೆ. ರಾಗಿ, ಸಜ್ಜೆ, ಜೋಳಗಳ ಕಾಳಿಗೆ ಕವಚ ಇರುವುದಿಲ್ಲ ನೇರವಾಗಿ ಮಿಲ್ ಮಾಡಿಸಿ ಹಿಟ್ಟು ಮಾಡಬಹುದು. ಹಾಗಾಗಿ ಅವುಗಳ ಬಳಕೆ ಈಗಲೂ ವ್ಯಾಪಕವಾಗಿದೆ. ಆದರೆ ನವಣೆ, ಸಾಮೆ, ಬರಗು, ಊದಲು, ಹಾರಕ ಮತ್ತು ಕೊರಲೆ ಕಿರುಧಾನ್ಯಗಳಿಗೆ ಕಾಳಿನ ಮೇಲೆ ಬಲವಾದ ಕವಚವಿದ್ದು ಕಾಳು ಬೇರ್ಪಡಿಸುವುದು ರಗಳೆಯ ಕೆಲಸವಾದ್ದರಿಂದ ಬಳಕೆ ಕಡಿಮೆಯಾಯಿತು, ಕ್ರಮೇಣ ಬೆಳೆಯುವುದೂ ಕಡಿಮೆಯಾಯಿತು.

ಮಾರುಕಟ್ಟೆ ಇಲ್ಲ : ಬಹುತೇಕ ರೈತರು ಕೊರಲೆಯನ್ನು ಮನೆ ಬಳಕೆಗೆ ಮಾತ್ರ ಬೆಳೆಯುತ್ತಾರೆ. ಮಾರುಕಟ್ಟೆಯಲ್ಲಿ ಬೆಡಿಕೆಯಿಲ್ಲ. ಹಾಗಾಗಿ ಹೊಸ ತಲೆಮಾರು ಇದರಿಂದ ವಿಮುಖವಾಗಿದೆ. ಕಡಿಮೆ ಇಳುವರಿಯೂ ಇದಕ್ಕೆ ಮತ್ತೊಂದು ಕಾರಣ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಚಿತ್ರದುರ್ಗದ ಹೊಸದುರ್ಗ ತಾಲ್ಲೂಕುಗಳಲ್ಲಿ ಇತ್ತೀಚಿನ 4-5 ವರ್ಷಗಳಲ್ಲಿ ಸಾಮೆ ಬೆಳೆಯುವ ರೈತರು ಹೆಚ್ಚುತ್ತಿದ್ದಾರೆ. ರೈತರನ್ನು ಈ ಬಗ್ಗೆ ಕೇಳಿದಾಗ ಇದಕ್ಕೆ ತಿಳಿದು ಬಂದ ಕಾರಣ, ಕೆಲವು ಬಿಸ್ಕತ್ ಕಂಪನಿಗಳು ಉತ್ತಮ ಬೆಲೆಗೆ ಸಾಮೆಯನ್ನು ಕೊಳ್ಳುವುದು ಕಂಡುಬಂದಿದೆ. ಕರಾಗಿಗಿಂತಲೂ ಉತ್ತಮ ಬೆಲೆ ಸಾಮೆಗೆ ನೀಡುತ್ತಾರೆ, ಹಾಗಾಗಿ ಈಗ ರಾಗಿಗಿಂತಲೂ ಹೆಚ್ಚೆಚ್ಚು ಅದನ್ನೇ ಬೆಳೆಯುತ್ತೇವೆ ಎನ್ನುತ್ತಾರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಾರಿಕಟ್ಟೆ ಗ್ರಾಮದ ಮಹಾಲಿಂಗಯ್ಯ.

ಆದರೆ ಕೊರಲೆಗೆ ಈ ರೀತಿಯ ಯಾವುದೇ ಬೇಡಿಕೆ ಸೃಷ್ಟಿಯಾಗಿಲ್ಲ

ಅಕ್ಕಿ ನುಚ್ಚು ಬಂದಿದ್ದು : ಕೊರಲೆಯ ಬಹುಮುಖ್ಯ ಉಪಯೋಗ ಅದರ ಅಕ್ಕಿಯನ್ನು ರಾಗಿಮುದ್ದೆಗೆ ಮಿಶ್ರವಾಗಿ ಬಳಸುತ್ತಿದ್ದುದು. ಆದರೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಕಡಿಮೆ ಬೆಲೆಗೆ ಅಕ್ಕಿ ಕೊಡಲಾರಂಭಿಸಿದ ನಂತರ ಅಕ್ಕಿಯನ್ನೆ ಅಥವಾ ನುಚ್ಚಕ್ಕಿಯನ್ನು ಮುದ್ದೆಗೆ ಮಿಶ್ರ ಮಾಡುವುದು ಬಳಕೆಗೆ ಬಂದಿತು. ಅತ್ಯಂತ ಸುಲಭವಾಗಿ ಅಕ್ಕಿನುಚ್ಚು ಸಿಗುವಾಗ ಅಷ್ಟೆಲ್ಲಾ ಕಷ್ಟಪಟ್ಟು ಕೊರಲೆ ಅಕ್ಕಿ ಮಾಡುವ ತುರ್ತು ಯಾರಿಗೂ ಇಲ್ಲವಾಯಿತು.

ರೇಷ್ಮೆ ಮತ್ತು ಶೇಂಗಾ ಆಗಮನ : ತುಮಕೂರು ಜಿಲ್ಲೆಯಲ್ಲಿ ಕೊರಲೆ ಬೆಳೆಗೆ ಕಂಟಕವಾದ ಅಂಶಗಳಲ್ಲಿ ಇದೂ ಒಂದು ಎನ್ನುತ್ತಾರೆ ಹಲವಾರು ರೈತರು.

ಹುಣಸೆಮರಗಳ ಸಂಖ್ಯೆ ಕಡಿಮೆಯಾಗಿದ್ದು : ವಿಚಿತ್ರವೆನಿಸಿದರೂ ಸ್ವಲ್ಪಮಟ್ಟಿಗೆ ಇದು ಸತ್ಯ. ವಿಶೇಷವಾಗಿ ತುಮಕೂರು ಜಿಲ್ಲೆಯಲ್ಲಿ ಹುಣಸೆಮರಗಳ ನೆರಳಿನಲ್ಲಿ ಕೊರಲೆ ಹಾಕುವುದು ಹೆಚ್ಚು. ಹಲವಾರು ಕಾರಣಗಳಿಂದ ಹುಣಸೆಮರಗಳನ್ನು ಕಡಿದು ಹಾಕುತ್ತಿರುವುದರಿಂದ ಸಹಜವಾಗಿಯೇ ಕೊರಲೆ ಅಲ್ಲಿಂದ ಕಾಲ್ಕಿಳಬೇಕಾದ ಅನಿವಾರ್ಯತೆ ಬಂದೊದಗಿದೆ.

ಈ ಮೇಲಿನ ಪ್ರಮುಖ ಕಾರಣಗಳ ಜೊತೆಗೆ ಇನ್ನೂ ಹಲವಾರು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  • ಹೈಬ್ರಿಡ್ ತಳಿಗಳ ಪ್ರವೇಶ
  • ಕೃಷಿ ವಾಣಿಜ್ಯಕರಣ.
  • ಇಳುವರಿಯಲ್ಲಿ ಕುಂಠಿತ
  • ಪಡಿತರ ವ್ಯವಸ್ಥೆಯಲ್ಲಿ ಹೊಸ ಆಹಾರಗಳು ಸೀಗುವಂತಾಗಿದ್ದು. ಹಾಗೂ ಪಡಿತರ ವ್ಯಸ್ಥೆಯಲ್ಲಿ ಇವುಗಳ ಹಂಚಿಕೆಗೆ ಪ್ರಾಶಸ್ತ್ಯ ನೀಡದಿರುವುದು.
  • ಸ್ಥಳೀಯವಾಗಿ ಇವುಗಳಿಗೆ ಅಗತ್ಯ ಮಾರುಕಟ್ಟೆ ಸೌಲಭ್ಯದ ಕೊರತೆ.
  • ಗ್ರಾಮೀಣ ಪ್ರದೇಶಗಳಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿ.
  • ಕೊರಲೆಯಲ್ಲಿನ ಪೌಷ್ಠಿಕಾಂಶದ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು.
  • ಕೃಷಿ ಇಲಾಖೆ ಕೊರಲೆ ಬೆಳೆಯನ್ನು ಜನಪ್ರಿಯಗೊಳಿಸದೆ ಹೋದದ್ದು.
  • ಇವುಗಳ ಸಂಸ್ಕರಣೆಯು ಹೆಚ್ಚು ತ್ರಾಸದಾಯಕ ಹೊಸ ಪ್ರಯೋಗಗಳ ಕೊರತೆ.
  • ಕೊರಲೆಯನ್ನು ಆಹಾರವಾಗಿ ಬಳಸುವ ಬಗ್ಗೆ ಮಾಹಿತಿ ಕೊರತೆ. 
ಮಿಲ್ಲೆಟ್ ನೆಟ್ ವರ್ಕ್ ಆಫ್ ಇಂಡಿಯಾದಲ್ಲಿ ಕೊರಲೆಯ ಹೆಸರಿಲ್ಲ!!  

ಹೈದರಾಬಾದಿನ ಡೆಕ್ಕನ್ ಡೆವಲಪ್ಮೆಂಟ್ ಸಂಸ್ಥೆಯು ಕಿರುಧಾನ್ಯಗಳ ಸಂರಕ್ಷಣೆಯಲ್ಲಿ ತೊಡಗಿದೆ. ಜೊತೆಗೆ ಇವುಗಳನ್ನು ಭಾರತ ದೇಶದಾದ್ಯಂತ ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸಿರಿಧಾನ್ಯಗಳ ಜಾಲವನ್ನು ಕಟ್ಟಿ (Millet Network of India – MINI) ಆ ಮೂಲಕ ಸಿರಿಧಾನ್ಯಗಳು ತಳಮಟ್ಟದ ರೈತ ಸಮುದಾಯಗಳ ಕೈತಪ್ಪಿ ಹೋಗದಂತೆ ಜಾಗ್ರತೆ ವಹಿಸುತ್ತಿದೆ. ಆದರೆ ಇವರು ಪಟ್ಟಿ ಮಾಡಿರುವ ಕಿರುಧಾನ್ಯಗಳಲ್ಲಿ ಕೊರಲೆಯ ಪ್ರಸ್ತಾಪವಿಲ್ಲ. ಮಾಹಿತಿಯ ಕೊರತೆಯಿಂದ ಹೀಗಾಗಿರುವ ಸಾಧ್ಯತೆ ಇರಬಹುದು, ಆದರೆ ತಕ್ಷಣ ಕೊರಲೆಯ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ.
ಹಕ್ಕಿಗಳಿಗೆ ಪ್ರಿಯವಾದ ಕಾಳು!  

ಹೊರದೇಶಗಳಲ್ಲಿ ಸಾಕು ಪಕ್ಷಿಗಳಿಗೆ ಆಹಾರವಾಗಿ ಕಿರುಧಾನ್ಯಗಳನ್ನು ಕೊಡುತ್ತಾರೆ. ಬೆಂಗಳೂರಿನ ಶಿವಾಜಿನಗರದಲ್ಲಿ ಪಕ್ಷಿಗಳನ್ನು ಮಾರುವವರು ಜೊತೆಗೆ ಸಾಮೆಯನ್ನೂ ಮಾರುತ್ತಾರೆ. ಹೊಲದಲ್ಲಿ ಬೆಳೆದ ಕಿರುಧಾನ್ಯಗಳಿಗೂ ಸಹ ಪಕ್ಷಿಗಳ ಕಾಟ  ಹೆಚ್ಚು. ಕಾಳು ಸಣ್ಣಕ್ಕಿರುವುದರಿಂದ ಸಣ್ಣ ಪಕ್ಷಿಗಳಿಗೆ ಇವು ಅಚ್ಚು-ಮೆಚ್ಚಿನ ಆಹಾರ. 

ಕೊರಲೆಯೂ ಸಹ ಹಕ್ಕಿಗಳ ಮೆಚ್ಚಿನ ಕಾಳು. ಬೇಗನೆ ಕಾಳು ಕಟ್ಟುವುದರಿಂದ ಎಲ್ಲ ಪಕ್ಷಿಗಳೂ ಹಿಂಡು-ಹಿಂಡಾಗಿ ದಾಳಿ ಮಾಡುತ್ತವೆ. ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರ ಗ್ರಾಮದ ರೈತ ಲಿಂಗರಾಜು ಕಿರುಧಾನ್ಯಗಳನ್ನು ಉಳಿಸುವ ಆಸೆಯಿಂದ 2009ರಲ್ಲಿ ಸಾಮೆ, ಸಜ್ಜೆ, ಕೊರಲೆ, ರಾಗಿಗಳನ್ನು ಬಿತ್ತಿದರು. ಬಿತ್ತಿದ್ದು ಒಂದೇ ಸಮಯಕ್ಕಾದರೂ ಕೊರಲೆ ಬಹುಬೇಗ ತೆನೆ ಬಿಟ್ಟಿತು. ತೆನೆ ಬಿಟ್ಟಿದ್ದೇ ತಡ ನವಿಲು, ಗೀಜಗಗಳ ಹಿಂಡು ದಾಳಿ ಇಟ್ಟಿತು. ಎಷ್ಟು ಪ್ರಯತ್ನಪಟ್ಟರೂ ಲಿಂಗರಾಜುರವರಿಗೆ ಒಂದು ಕಾಳೂ ಸಹ ಕೊರಲೆ ಸಿಗಲಿಲ್ಲ.

ಉಳಿದ ರೈತರದೂ ಸಹ ಇದೇ ಅನುಭವ. ಮುಂಚೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದುದರಿಂದ ಹಕ್ಕಿಗಳ ಕಾಟ ಅಷ್ಟಾಗಿ ಬಾಧಿಸುತ್ತಿರಲಿಲ್ಲ. ಈಗ ಆಸಕ್ತಿಯಿಂದ ಕೆಲವೇ ರೈತರು ಹಾಕಿದರೆ ಅವು ಹಕ್ಕಿಗಳ ದಾಳಿಗೆ ತುತ್ತಾಗುವುದು ಹೆಚ್ಚಾಗಿದೆ.

ಕೊರಲೆ ಉಳಿಸಲು ಬೇಕಿದೆ ಬದ್ಧತೆ

ಬಾಸುಮತಿ, ನಂಜನಗೂಡು ರಸಬಾಳೆ ಮುಂತಾದವುಗಳಂತೆ ಸೀಮಿತ ಭೌಗೋಳಿಕ ವ್ಯಾಪ್ತಿಗೆ ಸೇರಿದ ಕೊರಲೆಗೆ ಭೌಗೋಳಿಕ ಮಾನ್ಯತೆ (Giographical indication) ಪಡೆಯಬೇಕಾಗಿದೆ. ಕೃಷಿ ಇಲಾಖೆ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು.

ಕೊರಲೆ ಸಂಸ್ಕರಣೆಯನ್ನು ಸರಳಗೊಳಿಸುವ ಗಿರಣಿಯೊಂರ ಸಂಶೋಧನೆ ಕೊರಲೆ ಬೆಳೆಗಾರರನ್ನು ಮತ್ತು ಬಳಕೆದಾರರನ್ನು ಉತ್ತೇಜಿಸಬಲ್ಲದು. ಆಸಕ್ತರು, ಸ್ವಸಹಾಯ ಗುಂಪುಗಳು ಕೊರಲೆ ಅಕ್ಕಿ ಮತ್ತು ಸುರ್ಧೀ ತಾಳಿಕೆ ಶಕ್ತಿ ಇರುವ ಕೊರಲೆ ರೊಟ್ಟಿಗಳನ್ನು ಮಾಡಿ ಸರಬರಾಜು ಮಾಡುವಂತೆ ಉತ್ತೇಜಿಸಬಹುದು.

ಬೆಳೆಗಾರರು ಮತ್ತು ಗ್ರಾಹಕರಲ್ಲಿ ಕೊರಲೆಯ ಉತ್ತಮ ಗುಣಗಳ ಬಗ್ಗೆ ಮನವರಿಕೆ ಮಾಡಿ ಬೆಳೆಯಲು ಮತ್ತು ಬಳಸಲು ಉತ್ತೇಜನ ಮಾಡುವುದು ತುರ್ತಿನ ಕೆಲಸ.

ಕೊರಲೆ ಮಾಹಿತಿ ಮತ್ತು ಬೀಜಕ್ಕಾಗಿ ಸಂಪರ್ಕ

1. ಸಹಜ ಸಮೃದ್ಧ

ನಂ 7, 2ನೇ ಅಡ್ಡರಸ್ತೆ, 7ನೇ ಮುಖ್ಯ ರಸ್ತೆ

ಸುಲ್ತಾನ್ ಪಾಳ್ಯ, ಬೆಂಗಳೂರು 560032

ದೂರವಾಣಿ  080-2271 5744

2. ಧಾನ್ಯ ಸಂಸ್ಥೆ, ತೆನೆ ಮೊದಲನೆ ಮಹಡಿ, 3ನೇ ಮುಖ್ಯ ರಸ್ತೆ,

ಸದಾಶಿವನಗರ, ತುಮಕೂರು  572 101

ಮೊಬೈಲ್ 96861 94641 ಮತ್ತು 98440 31318

3. ಹೆಚ್.ಜೆ.ಪದ್ಮರಾಜು

ಅಂಚೆ ತೋವಿನಕೆರೆ, ಕೊರಟಗೆರೆ ತಾ.

ತುಮಕೂರು ಜಿಲ್ಲೆ

ದೂರವಾಣಿ :08138-239 294, ಮೊಬೈಲ್  99453 23787

 

4. ಜಯಂತನಾಥ್ ಬಿ.ಆರ್.

ಕೇರಾಫ್ ಬಿ.ವಿ.ರಾಮರೆಡ್ಡಿ

ಗೋಶಾಲಾ, ಕೊಪ್ಪಳ ಗ 583 231

ದೂರವಾಣಿ 94819 37428

One reply on “ಕಣ್ಮರೆಯ ಹಾದಿಯಲ್ಲಿ ಕೊರಲೆ”

ಪ್ರಿಯ ಮಲ್ಲಿಕಾರ್ಜುನ್ ರವರೆ,
ನಿಮ್ಮ ಲೇಅನ ತು೦ಬಾ ಉಪಯುಕ್ತವಾಗಿದೆ. ನಗರ ಸ೦ಸ್ಕೃತಿಗೆ ಮಾರು ಹೋಗುತ್ತಿರುವ ಯುವಪೀಳಿಗೆಗೆ ಹಿ೦ದೆ ಇದ್ದ ಧಾನ್ಯಗಳ ಪರಿಅಯ ಮಾಡಿಕೊಟ್ಟಿರುವಿರಿ.
ಈಗ ಅವರು ಇ೦ತಹ ಧ್ಯಾನಗಳ ಬಗ್ಗೆ ಕೇಳಿ ತಿಳಿಯಬಹುದೇ ವಿನಹ ನೋಡಲಾಗುವುದಿಲ್ಲ. ಒೞೆಯ ಪ್ರಯತ್ನ ಮಾಡಿದ್ದೀರಿ .ಧನ್ಯವಾದಗಳು