ಮೊದಲಿದ್ದದ್ದು ಆಕಾರವೇ ಇರದ
ಅಂಧಕಾರದ ಕಡಲು ; ಅದ-
ರೊಳಗಿಂದ ಬುದ್ಬುದಗಳಾಗಿ ಮೂಡಿತು
ಬೆಳಕು, ಯಾರೋ ಮಿಡಿದ

ಬೃಹತ್ ವೀಣೆಯೊಳಗಿಂದ ಹೊಮ್ಮಿದ
ಸ್ವರ ತರಂಗಗಳಂತೆ ವಿವಿಧ
ರೂಪಗಳಾಗಿ ಪಂಚೇಂದ್ರಿಯ ಪ್ರಪಂಚ
ಶಬ್ದ-ಸ್ಪರ್ಶ-ರೂಪ-ರಸ-ಗಂಧ.

ಒಳಿತಾಯ್ತು. ಇರಲಿ ಇದು ಹೀಗೇ ನಿರಂ-
ತರವಾಗಿ ವೃದ್ಧಿಗೊಳ್ಳುತ್ತ
ನೆಲ-ಜಲ-ವಾಯು-ಆಕಾಶಾದ್ಯಂತ
ತನ್ನ ತೇಜಸ್ಸನ್ನು ಬಿತ್ತಿ ಬೆಳೆಯುತ್ತ.

ಕತ್ತಲು-ಬೆಳಕು, ಬೆಳಕು-ಕತ್ತಲೆ
ಒಂದರೊಳಗೊಂದು ಬೆರೆಯುತ್ತ
ಹುಟ್ಟಿಸಿದ ಕಲ್ಪನಾ ವಿಲಾಸಕ್ಕೆ ಕೊನೆ-
ಯೆಲ್ಲಿ ? ಬೆಳಕು ಬಿಚ್ಚುತ್ತ

ಕತ್ತಲೆಯು ಮುಚ್ಚುತ್ತ ಪ್ರಚೋ-
ದಿಸಿದ ತತ್ವಜಿಜ್ಞಾಸೆಯಲಿ
ತೊಳಲಿದೆ ಬುದ್ಧಿ. ಅಸ್ತಿತ್ವಕ್ಕೆ
ಒಂದುಮುಖ ಬೆಳಕಾದರಿ-

ನ್ನೊಂದು ಮುಖ ಕತ್ತಲು ಎಂದು ತಿಳಿದ
ಚೈತನ್ಯಕ್ಕೆ ಗರುಡನ ರೆಕ್ಕೆ.
ಕತ್ತಲಿನ ಹಾಳೆಯ ಮೇಲೆ ಭಾಷ್ಯ ಬರೆ-
ಯುತ್ತಲೇ ಇದೆ ಬೆಳಕು ಈ ಅನುಭವಕ್ಕೆ.