ದಟ್ಟ ಕತ್ತಲಿನ ಅಟ್ಟಹಾಸದ ನಡುವೆ
ದೀಪ ಹಚ್ಚುವುದು ನಿಜಕ್ಕೂ ತೀರ
ಕಷ್ಟದ ಕೆಲಸ. ಆದರೂ ಬೇಕು ಕತ್ತಲು
ನಮಗೆ : ನಿದ್ದೆ ಮಾಡುವುದಕ್ಕೆ, ಯಾರ-

ನ್ನಾದರೂ ಬೆನ್ನಟ್ಟಿ ಬೇಟೆಯಾಡುವುದಕ್ಕೆ,
ಕಟ್ಟಿದ್ದನ್ನು ಕೆಡಹುವುದಕ್ಕೆ, ಅಥವಾ
ಮಲಗಿದ್ದ ಪೆಡಂಭೂತಗಳನ್ನು ಗೋರಿಯಿಂ-
ದೆಬ್ಬಿಸಿ, ಅಮಾಯಕರ ಸ್ವಾಹಾ

ಮಾಡಲು ಛೂ ಬಿಡುವುದಕ್ಕೆ ; ಅಥವಾ
ಆತ್ಮಹತ್ಯೆಗೆ ಸಿದ್ಧವಾದವನೊಬ್ಬ-
ನನ್ನು ಹಿಡಿದು, ಸಿಡಿಮದ್ದು ಮಾಡಿ, ತಮ-
ಗಾಗದವರನ್ನು ಕೊಂದು ಹಬ್ಬ

ಮಾಡುವುದಕ್ಕೆ ; ಎಲ್ಲಾದರೂ ಒಂದಷ್ಟು
ತಲೆಯೆತ್ತಿದರೆ ಬೆಳಕು, ತುಳಿದು ಗದ್ದುಗೆ
ಕಟ್ಟಿ, ಬರುವ ಭಕ್ತರಿಗೆ ಬೂದಿ ಹಂಚು
ವುದಕ್ಕೆ. ಈ ಎಲ್ಲ ಸಾಧನೆಗಳಿಗೆ

ಬೇಕು ಕತ್ತಲು ನಮಗೆ. ಈ ಮೂಲಭೂತಕ್ಕೆ
ಭಾಷ್ಯ ಬರೆವಂಥ ಅಷ್ಟಾವಕ್ರ
ಪ್ರಭೃತಿಗಳು ಅವತರಿಸಿ, ಯುಗಯುಗದಲ್ಲು
ಚಲಿಸುವುದು ಹೀಗೆಯೇ ಈ ಚರಿತ್ರೆಯ ಚಕ್ರ !