ಪ್ರವೇಶ

ಕಥಕಳಿ ದೇಶ ವಿದೇಶಗಳ ಸಹೃದಯ ಪ್ರೇಕ್ಷಕರನ್ನು ಆಕರ್ಷಿಸಿದ ಕೇರಳದ ಒಂದು ಪ್ರದರ್ಶನ ಕಲೆ. ನಾಟ್ಯ ಕಲಾಮಾರ್ಗದಲ್ಲಿ ಕಥಕಳಿಗೆ ಸಮಾನವಾದ ಇನ್ನೊಂದು ಪ್ರದರ್ಶನ ಕಲಾಮಾಧ್ಯಮ ಕೇರಳದಲ್ಲಿ ಮಾತ್ರವಲ್ಲ, ಯಾವ ದೇಶದಲ್ಲಿಯೇ ಇಲ್ಲ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ರಷ್ಯಾ, ಅಮೆರಿಕಾ ಮೊದಲಾದ ವಿದೇಶ ರಾಷ್ಟ್ರಗಳಲ್ಲಿ ಕೂಡಾ ಕಥಕಳಿ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ.

ಕೇರಳದ ಎಲ್ಲ ಪ್ರಮುಖ ದೇವಸ್ಥಾನಗಳಲ್ಲಿ ಹಿಂದೆ ಕೂಡಿಯಾಟಂಗಳು ನಡೆಯುತ್ತಿದ್ದವು. ಕೂಡಿಯಾಟಂ ಕಲೆಯನ್ನು ಕಡೆದು ಪಡೆದ ಅಮೃತವೇ ಕಥಕಳಿ. ಕೂಡಿಯಾಟದಲ್ಲಿ ದೀರ್ಘವಾಗಿರುವ, ಶುಷ್ಕವಾಗಿರುವ ಹಾಗೂ ಸಂಕೀರ್ಣವಾಗಿರುವ ಹಲವಾರು ಭಾಗಗಳನ್ನು ಸಂಕ್ಷೇಪಿಸಿ, ಒಳ್ಳೆಯ ಅಂಶಗಳನ್ನು ಸರಿಯಾಗಿ ಸಂಯೋಜನೆಗೊಳಿಸಿ ಕಥಕಳಿಯನ್ನು ಸೃಷ್ಟಿಸಲಾಗಿದೆ. ಸಂಗೀತ ಕಲೆಯ ಸೇರ್ಪಡೆಯಿಂದ ಈ ಸುಂದರ ಕಲೆಯ ಆಸ್ವಾದನೆ ಇಮ್ಮಡಿಯಾಯಿತು. ‘ಕೊತ್ತಂಬಲ’ಗಳಿಂದ ಹೊರಬಂದು ಸರ್ವಾಂಗ ಸುಂದರವಾಗಿ ಕಥಕಳಿಯು ಬೆಳೆಯಲು ಅವಕಾಶವಾಯಿತು.

ಮೊದಲಿಗ ರಾಮನಾಟಂ ಎಂಬ ರೂಪದಲ್ಲಿ ಕೊಟ್ಟಾರಕರ ತಂಬುರಾನನಿಂದ ಸೃಷ್ಟಿಯಾದ ಕಥಕಳಿಯು ಕೋಟ್ಟಯಂ ತಂಬುರಾನ್‌, ವೆಟ್ಟತ್ತುನಾಡ್‌ರಾಜ, ಕಪ್ಲಿಂಗಾಡ್‌ ನಂಬೂದಿರಿ ಮೊದಲಾದ ಕಲಾವಿದರ ಶಿಕ್ಷಣ ಹಾಗೂ ಮಾರ್ಗದರ್ಶನದಲ್ಲಿ ಬೆಳವಣಿಗೆಯನ್ನು ಸಾಧಿಸಿ ಇಂದು ಜಗತ್ಪ್ರಸಿದ್ಧವಾಗಿದೆ.

ಆಂಗಿಕ, ಸಾತ್ವಿಕ, ಆಹಾರ್ಯ, ವಾಚಿಕಾಭಿನಯಗಳಿರುವ ಹಾಗೂ ಹಿಮ್ಮೇಳ, ಹಾಡು, ನೃತ್ಯಗಳಿಂದ ಕೂಡಿದ, ರಸಾನುಭವ ಉಂಟುಮಾಡುವ ಕೇರಳೀಯ ಪ್ರದರ್ಶನ ಕಲೆಯೇ ಕಥಕಳಿ. ಗಾನ, ನೃತ್ಯ ವಾದ್ಯಗಳು ಸೇರಿರುವುದರಿಂದ ಕಥಕಳಿ ಸಾರ್ವತ್ರಿಕವಾಗಿ ಬೆಳೆದುಬಂತು. ೧೭, ೧೮ ನೇ ಶತಮಾನದಲ್ಲಿ ಬದುಕಿದ್ದರೆಂದು ವಿದ್ವಾಂಸರು ಊಹಿಸಿರುವ ಕೊಟ್ಟಾರಕರ ರಾಜನೇ ಈ ಪ್ರದರ್ಶನ ಕಲೆಗೆ ರೂಪ ನೀಡಿದವನು ಎಂಬುದು ನಂಬಿಕೆ. ಕೇರಳದ ಪ್ರಾಚೀನ ಶಾಸ್ತ್ರಕಳಿ, ಚಾಕ್ಯರ್ ಕೊತ್ತು, ಕೂಡಿಯಾಟಂ, ಕೃಷ್ಣನಾಟಂ, ಅಷ್ಟಪದಿಯಾಟಂ, ದಾಸಿಯಾಟಂ, ತೆರುಕೂತ್ತು, ತೆಯ್ಯಂ, ತಿರ, ಪಡಯಣಿ ಮೊದಲಾದ ಅನೇಕ ಶಾಸ್ತ್ರೀಯ ಮತ್ತು ಜನಪದ ಕಲಾರೂಪಗಳ ವಿವಿಧ ಅಂಶಗಳನ್ನು ಅಳವಡಿಸಿಕೊಂಡು ಬಂದು ನೈಜ ಕೇರಳೀಯ ಕಲೆಯಾಗಿ ಹುಟ್ಟಿ, ವಿಕಾಸಗೊಂಡು ಕಥಕಳಿ ಎಂದು ಹೆಸರುವಾಸಿಯಾಗಿದೆ.

ಚರಿತ್ರೆ: ಕೇರಳೀಯರ ಪ್ರಸಿದ್ಧ ನಾಟ್ಯಕಲಾ ವಿಶೇಷಗಳಲ್ಲಿ ಮೊದಲನೆಯದು ಕಥಕಳಿ. ಅಭಿನಯದ ಘಟಕಗಳಾದ ನೃತ್ತ, ನೃತ್ಯ, ನಾಟ್ಯ ಎಂಬಿವಲ್ಲದೆ ಆಂಗಿಕ, ಸಾತ್ವಿಕ ಮತ್ತು ಆಹಾರ್ಯಗಳು ಇದರಲ್ಲಿ ಒಳಗೊಂಡಿವೆ. ವಾಚಿಕಾಭಿನಯದ ಬದಲು ಹಿಮ್ಮೇಳದ ಹಾಡು ಇರುತ್ತದೆ. ಮಾತ್ರವಲ್ಲದೆ ವಾದ್ಯವಾದನ, ಚಿತ್ರಕಲೆ ಹಾಗೂ ಶಿಲ್ಪಕಲೆಗಳು ಸೇರಿರುವ ವೇಷವಿಧಾನವು ಅಭಿನಯದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕಥೆಯನ್ನು ಆಡುವುದಕ್ಕೆ ಮತ್ತು ಹಾಡುವುದಕ್ಕೆ ಧಾರಾಳ ಸಾಹಿತ್ಯವೂ ಈ ಪ್ರಕಾರದಲ್ಲಿ ಸೃಷ್ಟಿಯಾಗಿದೆ. ಹೀಗೆ ಅಭಿನಯಕ್ಕೆ ಮಹತ್ವ ನೀಡಿದ ಅನೇಕ ಸುಂದರ ಕಲೆಗಳು ಒಂದಕ್ಕೊಂದು ಪೂರಕವಾಗಿ ಶೋಭಿಸುವ ಒಂದು ಸಂಕೀರ್ಣವಾದ ಪ್ರದರ್ಶನ ಕಲೆಯೇ ಕಥಕಳಿ.

ಹುಟ್ಟು: ೧೭ನೇ ಶತಮಾನದ ಉತ್ತರಾರ್ಧದಲ್ಲಿ ಕಥಕಳಿ ಎಂಬ ಕಲಾ ಪ್ರಕಾರದ ಆದಿರೂಪವಾದ ರಾಮನಾಟಂ ಹುಟ್ಟಿತು. ಕೊಟ್ಟಾರಕರ ತಂಬುರಾನನ ಅಪೇಕ್ಷೆಯನ್ನು ಕಲ್ಲಿಕೋಟೆ ಸಾಮೂದಿರಿ ತಿರಸ್ಕರಿಸಿದ ಪರಿಣಾಮವಾಗಿ ಒಂದು ಹೊಸ ಕಲಾಪ್ರಕಾರ ಹುಟ್ಟಿಕೊಂಡಿತು ಎಂಬುದು ಐತಿಹ್ಯ. ಮಾನವೇದ ಸಾಮೂದಿರಿಯ ಕೃಷ್ಣ ನಾಟದ ಕುರಿತು ಕೇಳಿ ತಿಳಿದ ಕೊಟ್ಟಾರಕರ ತಂಬುರಾನ್‌ರು ಯಾವುದೋ ಒಂದು ಕಾರ್ಯಕ್ರಮಕ್ಕೆ ಆ ತಂಡವನ್ನು ತಮ್ಮ ಆಸ್ಥಾನಕ್ಕೆ ಕಳುಹಿಸುವಂತೆ ವಿನಂತಿಸಿದರು. ಕೃಷ್ಣ ನಾಟವನ್ನು ಆಸ್ವಾದಿಸುವಂತಹ ಸಹೃದಯರು ದಕ್ಷಿಣ ಭಾಗದಲ್ಲಿ ಇಲ್ಲವೆಂದು ಹೇಳಿ ಸಾಮೂದಿರಿಯು ತಂಬುರಾನರ ಆಹ್ವಾನವನ್ನು ತಿರಸ್ಕರಿಸಿದರು. ಇದರಿಂದ ಸಿಟ್ಟುಗೊಂಡ ತಂಬುರಾನ್‌ ಕೃಷ್ಣನಾಟದ ಬದಲು ರಾಮನಾಟವನ್ನು ಸಂಯೋಜಿಸಿದರು. ಅದುವೇ ಪರಿಷ್ಕೃತಗೊಂಡು ಇಂದಿನ ಕಥಕಳಿಯಾಯಿತು. ಇದು ಕಥಕಳಿಯ ಹುಟ್ಟಿನ ಬಗೆಗಿರುವ ಪ್ರಸಿದ್ಧ ಐತಿಹ್ಯ. ರಾಮನಾಟದ ತಂಡವನ್ನು ಕಳುಹಿಸಿಕೊಡದ ಸಿಟ್ಟಿನಲ್ಲಿ ಸಾಮೂದಿರಿ ರಾಜ ಕೃಷ್ಣನಾಟವನ್ನು ಹುಟ್ಟುಹಾಕಿದ ಎಂಬ ಅಭಿಪ್ರಾಯವೂ ಇದೆ. ಇದು ಎರಡೂ ಸರಿಯಲ್ಲವೆಂದೂ ಕೋಟೆಯತ್ತು ತಂಬುರಾನನೇ ಕಥಕಳಿಯ ಸೃಷ್ಟಿಕರ್ತನೆಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಪ್ರಾಚೀನ ಕೇರಳದಲ್ಲಿ ಪ್ರಚಾರದಲ್ಲಿದ್ದ ಧಾರ್ಮಿಕವೂ ಸಾಮಾಜಿಕವೂ ಆದ ಅನೇಕ ಕಲೆಗಳೊಂದಿಗೆ ಕಥಕಳಿಗೆ ಸಂಬಂಧವಿದೆ. ಶಾಸ್ತ್ರಕಳಿ, ಕೂಡಿಯಾಟಂ, ಚಾಕ್ಯಾರ್ ಕೂತ್ತು, ಮೋಹಿನಿಯಾಟ್ಟಂ, ಅಷ್ಟಪದಿಯಾಟಂ, ಕೃಷ್ಣನಾಟಂ ಎಂಬ ಕಲೆಗಳು ಕಥಕಳಿಯ ರೂಪಭಾವಾದಿಗಳಿಗೆ ಪ್ರೇರಣೇ ಹಾಗೂ ಪೋಷಣೆ ನೀಡಿವೆ.. ಇವುಗಳಲ್ಲಿ ಕೂಡಿಯಾಟದೊಂದಿಗೆ ಕಥಕಳಿಗೆ ಹತ್ತಿರದ ನಂಟು. ಅದರ ಹಲವಾರು ವಿಧಿಗಳು, ಅಭಿನಯ ಶೈಲಿ, ಶ್ರೀಮುದ್ರೆ, ನೃತ್ತರೀತಿಗಳು, ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಕಥಕಳಿಯಲ್ಲಿ ಕಂಡುಬರುತ್ತದೆ. ಮೋಹಿನಿಯಾಟದ ಲಾಸ್ಯ, ಚಾಕ್ಯಾರ್ ಕೂತಿನಿಂದ ಆಂಗಿಕ, ಸಾತ್ವಿಕ ಮೊದಲಾದ ಅಭಿನಯಗಳನ್ನೂ ಕಥಕಳಿ ಪಡೆದುಕೊಂಡಿದೆ. ಕಥಕಳಿಯ ಭೀರು, ವಿದ್ಯುಜಿಹ್ವ ಮೊದಲಾದ ಹಾಸ್ಯ ಪಾತ್ರಗಳಿಗೆ ಶಾಸ್ತ್ರಕಳಿಯ ಹಾಸ್ಯ ಪ್ರಧಾನ ವೇಷಗಳೊಂದಿಗೆ ಸಾಮ್ಯವಿದೆ. ಅಷ್ಟಪದಿ “ಗೀತ ಗೋವಿಂದದ ಮಂಜುತರ ಕುಂಜುತಲಾ ಕೇಳೀಸದನೆ…” ಎಂಬ ಹಾಡನ್ನು ಸಾಮಾನ್ಯವಾಗಿ ಕಥಕಳಿಯ ಮೇಳಪದವಾಗಿ ಹಾಡುತ್ತಾರೆ.

ಕಥಕಳಿಗೂ ಕೃಷ್ಣನಾಟಕ್ಕೂ ಗಾಢವಾದ ಸಂಬಂಧವಿದೆ. ಕೃಷ್ಣನಾಟದಲ್ಲಿ ಸಂಸ್ಕೃತಶ್ಲೋಕ ಹಾಗೂ ಸಂಗೀತ ರೂಪದ ಹಾಡುಗಳು ಸೇರಿಕೊಂಡಿದ್ದು ‘ಕೃಷ್ಣಗೀತೆ’ ಎಂಬುದು ಕವಿ ಅದಕ್ಕೆ ನೀಡಿದ ಹೆಸರು. ಕೃಷ್ಣನಾಟದಲ್ಲಿ ಶ್ರೀಕೃಷ್ಣನ ಕಥೆಯನ್ನು ಎಂಟು ಭಾಗಗಳಾಗಿ ವಿಭಜಿಸಲಾಗಿದೆ. ರಾಮನಾಟದ ಕರ್ತೃ ಕೂಡಾ ರಾಮಾಯಣ ಕಥೆಯನ್ನು ಎಂಟು ಭಾಗಗಳಾಗಿ ವಿಭಜಿಸಿದ್ದನು. ಕಥಕಳಿಯ ಶ್ರೀಕೃಷ್ಣ, ಶ್ರೀರಾಮ ಮೊದಲಾದ ಪಾತ್ರಗಳ ಮುಡಿಯು ಕೃಷ್ಣನಾಟದ ರೀತಿಯಲ್ಲಿಯೇ ಇದೆ. ಶ್ಲೋಕಗಳ ಮೂಲಕ ಪಾತ್ರಗಳ ರಂಗಪ್ರವಶ ಹಾಗೂ ಪದಗಳ ಮೂಲಕ ಅವರ ಸಂಭಾಷಣೆಯ ನಿರ್ವಹಣೆ ಇವೆರಡನ್ನು ಕಥಕಳಿಯು ಕೃಷ್ಣನಾಟದಿಂದ ಸ್ವೀಕರಿಸಿರಬೇಕು. ಇವುಗಳಲ್ಲದೆ, ಆ ಕಾಲದಲ್ಲಿ ಪ್ರಚಾರದಲ್ಲಿದ್ದ ತಿರಯಾಟಂ, ಪಡಯಣಿ, ಕೋಲಂತುಳ್ಳಲ್‌, ತೀಯಾಟ, ಮುಡಿಯೇಟ್ಟ್‌ ಮೊದಲಾದ ಜಾನಪದ ಕಲೆಗಳು ಕಥಕಳಿಯನ್ನು ರೂಪಿಸುವಲ್ಲಿ ಸಹಾಯಕವಾಗಿವೆ. ಒಟ್ಟಿನಲ್ಲಿ ನೋಡಿದರೆ ಪ್ರಾಚೀನ ಕಾಲದಲ್ಲಿ ಪ್ರಚಲಿತವಾಗಿದ್ದ ಧಾರ್ಮಿಕ ಆಚರಣೆಗಳು, ಕಲಾ ಪ್ರಕಾರಗಳು ಮತ್ತು ಪ್ರದರ್ಶನ ಕಲೆಗಳ ಸಮನ್ವಯದಿಂದ ಕಥಕಳಿಯ ಸೃಷ್ಟಿಯಾಗಿರಬೇಕು. ರಾಮನಾಟದ ಕರ್ತೃವಾದ ಕೊಟ್ಟಾರಕರ ತಂಬುರಾನ್‌ ಅದಕ್ಕೆ ಸಾಹಿತ್ಯರೂಪವನ್ನೂ ನೀಡಿದಾಗ ಅಡಿಪಾಯ ಗಟ್ಟಿಯಾಯಿತು. ಆದರೂ ಕಥಕಳಿ ಇಂದಿನ ಹಂತಕ್ಕೆ ತಲುಪಲು ಬಹಳ ಕಾಲ ಬೇಕಾಯಿತು.

ಪ್ರದರ್ಶನ ಪರಿಚಯ

ಕೊಟ್ಟಾರಕರ ತಂಬುರಾನ್‌ ರಾಮಾಯಣ ಕಥಾಭಾಗಗಳನ್ನು ಪೋಣಿಸಿ, ಸ್ವತಂತ್ರವಾದ ಒಂದು ಕಲಾಪ್ರಕಾರವನ್ನು ಸೃಷ್ಟಿಸಿದರು. ಅಲ್ಲದೆ ಅದಕ್ಕೆ ಕಾಲೋಚಿತವಾದ ಪರಿಷ್ಕಾರಗಳನ್ನು ಮಾಡಿದವರು ಅನಂತರ ಕವಿಗಳು ಹಾಗೂ ಕಲಾವಿದರು. ತೋಡಯಂ, ಪುರಪಾಡು, ಮೇಳಪದಂ ಮೊದಲಾದ ಹಿಂತಗಳು; ವೈವಿಧ್ಯವಾದ ವೇಷವಿಧಾನಗಳು; ನೃತ್ತ, ನೃತ್ಯ, ನಾಟ್ಯಾದಿಗಳಿಂದ ಕೂಡಿದ ಅಭಿನಯ ರೀತಿ; ಚೆಂಡೆ, ಮದ್ದಳೆ, ಜಾಗಟೆ, ಚಕ್ರತಾಳಗಳ ಹಿಮ್ಮೇಳ; ಹಾಡುಗಾರಿಕೆಯ ಸಂಪ್ರದಾಯ ಮೊದಲಾದ ಅನೇಕ ಪರಿಷ್ಕಾರಗಳು ಸಹೃದಯ ಕಲಾವಿದರ ಹಾಗೂ ವಿದ್ವಾಂಸರ ಪ್ರಯತ್ನಗಳಿಂದ ನಡೆದಿವೆ. ವೆಟ್ಟತ್ತುನಾಡು ರಾಜ, ಕಪ್ಲಿಂಗಾಟ್‌ ನಂಬೂದಿರಿ ಎಂಬವರು ಮೊದಲ ಹಂತದಲ್ಲಿ ಪ್ರಮುಖ ಪರಿಷ್ಕಾರಗಳನ್ನು ಮಾಡಿದ್ದರು. ಈ ಮೂವರು ಕಲಾವಿದರು ಮಾಡಿದ ಪರಿಷ್ಕಾರಗಳಿಂದ ಕಥಕಳಿಯು ರೂಪ ಹಾಗೂ ಭಾವದಲ್ಲಿ ವೈಶಿಷ್ಟ್ಯಪೂರ್ಣವಾಯಿತು.

ಕಥಕಳಿಯು ರಾತ್ರಿಯಲ್ಲಿ ಮಾತ್ರ ಪ್ರದರ್ಶೀಸುವ ರಂಗ ಕಲೆ. ‘ಕೇಳಿಕೊಟ್ಟು’ ಅದರ ಮೊದಲ ಕಾರ್ಯಕ್ರಮ. ಚೆಂಡೆ, ಮದ್ದಳೆ, ಚಕ್ರತಾಳಗಳ ಸಮ್ಮಿಶ್ರ ಸುಮಧುರ ನಾದವೊಂದು ಸಂಜೆಯ ವೇಳೆಗೆ ಕೇಳಿಸಿದರೆ ಅಂದು ರಾತ್ರಿ ಹತ್ತಿರದಲ್ಲಿ ಎಲ್ಲೋ ಕಥಕಳಿ ಇದೆಯೆಂಧು ಅರ್ಥ. ಕೇಳುವುದಕ್ಕೆ ಹಿತವಾದ ಈ ಕೇಳಿಕೊಟ್ಟು ಪ್ರೇಕ್ಷಕರನ್ನು ಆಹ್ವಾನಿಸುವ ಕಾರ್ಯಕ್ರಮವಾಗಿದೆ. ಯಕ್ಷಗಾನದಲ್ಲೂ ಈ ಕೇಳಿಕೊಟ್ಟು ಸಂಪ್ರದಾಯವಿದೆ. ಕೇಳಿಸುವಂತೆ ಕೊಟ್ಟುವುದು ಎಂದರೆ ಬಾರಿಸುವುದೇ ‘ಕೇಳಿಕೊಟ್ಟು’. ಇದು ಕಥಕಳಿ ಹಾಗೂ ಯಕ್ಷಗಾನದಲ್ಲಿ ಸಮಾನವಾಗಿ ಬಳಕೆಯಾಗುವ ಪಾರಿಭಾಷಿಕ ಪದ.

ವಿಶಾಲವಾದ ಮೈದಾನದ ಒಂದು ತುದಿಯಲ್ಲಿ ಪುಟ್ಟ ಚಪ್ಪರ ವೇದಿಕೆ. ವೇದಿಕೆಯಲ್ಲಿ ಒಂದೆರಡು ಆಸನಗಳು, ಮುಂಭಾಗದಲ್ಲಿ ದೊಡ್ಡ ಒಂದು ದೀಪದ ಹೊರತಾಗಿ ಕಥಕಳಿಗೆ ಬೇರೆ ರಂಗ ಸಾಮಗ್ರಿಗಳಿಲ್ಲ. ದೀಪ ಬೆಳಗಿಸಿದ ನಂತರ ಶುದ್ಧ ಮದ್ದಳೆಯ ನಾದ ಕೇಳಿಸುತ್ತದೆ. ಇದು ವೇದಿಕೆಯಲ್ಲಿ ಕಥಕಳಿ ಆರಂಭವಾಗುವ ಸೂಚನೆ. ರಂಗದ ಹಿಂಭಾಗದಲ್ಲಿ ಚೆಂಡೆ, ಮದ್ದಳೆ ತಾಳಗಳನ್ನು ಹಿಡಿದ ಹೆಮ್ಮೇಳದವರು ನಿಲ್ಲುತ್ತಾರೆ. ದೀಪದ ಮುಂಭಾಗದಲ್ಲಿ ಒಂದು ತೆರೆಯನ್ನು ಸಮಾನ ಎತ್ತರವಿರುವ ಇಬ್ಬರು ವ್ಯಕ್ತಿಗಳು ಎರಡು ಬದಿಯಿಂದ ಹಿಡಿಯುತ್ತಾರೆ. ಹಲವು ಬಣ್ಣಗಳಿಂದ ಕೂಡಿದ, ಅಂಚುಗಳು ಚಪ್ಪವಾಗಿರುವ ಆ ತೆರೆಯು ಚಿತ್ರಗಳಿಲ್ಲದಿದ್ದರೂ ನೋಡಲು ಸುಂದರವಾಗಿರುತ್ತದೆ. ತೆರೆಯ ಹಿಂಬದಿಯಿಂದ ಹಾಡುಗಾರರು ಹಾಡಲು ಆರಂಭಿಸುತ್ತಾರೆ. ಪ್ರೇಕ್ಷಕರ ಕಣ್ಣುಗಳು ಕುತೂಹಲದಿಂದ ತೆರೆಯ ಹಿಂಬದಿಯನ್ನು ನಿರೀಕ್ಷಿಸುತ್ತವೆ. ವೇದಿಕೆಯಲ್ಲಿ ತೋಡಯಂ ಆರಂಭವಾಗುತ್ತದೆ. ವೇಷಧಾರಿಗಳಲ್ಲಿ ಕೆಲವರು (ಸಾಮಾನ್ಯವಾಗಿ ಬಾಲಕರು) ತಲೆಗೆ ಮುಂಡಾಸು ಕಟ್ಟಿ ತೆರೆಯ ಹಿಂದೆ ಮಂಗಳಾಚರಣೆಗಾಗಿ ನಡೆಸುವ ನೃತ್ಯವೇ ‘ತೋಡಯಂ’. ಈ ಸಂದರ್ಭದಲ್ಲಿ ಬಾಯಿತಾಳಗಳನ್ನು ಹೇಳುವುದು ವಾಡಿಕೆಯಾಗಿದೆ. ಆ ಸಂದರ್ಭದಲ್ಲಿ ಭಾಗವತರು ನಾಟಿ ಮೊದಲಾದ ರಾಗಗಳಲ್ಲಿ ಹಾಡುತ್ತಾರೆ. ಅದರ ನಂತರ ದೇವರಸ್ತುತಿ (ವಂದನ ಶ್ಲೋಕ) ನಡೆಯುತ್ತದೆ. ಈ ಭಾಗವು ನಾಟಕದ ನಾಂದಿಗೆ ಸಮಾನವಾಗಿದೆ. ವೇಷಗಳ ಪ್ರವೇಶಕ್ಕೆ ಮತ್ತೆ ವಿಳಂಬವಿಲ್ಲ. ಪ್ರವೇಶಕ್ಕೆ ಪದ್ಯ ಹಾಡುತ್ತಾರೆ. ಇದಕ್ಕೆ ‘ಪುರಪ್ಪಾಡ್‌ ಶ್ಲೋಕಂ’ ಎಂದು ಹೆಸರು. ಪುರಪ್ಪಾಡ್‌ ಎಂದರೆ ಹೊರಡುವುದು ಎಂದರ್ಥ. ಚೆಂಡೆ, ಮದ್ದಳೆಗಳ ಆರ್ಭಟ ಹೆಚ್ಚಾಗುತ್ತದೆ. ವೇದಿಕೆಯ ದೀಪದ ಬತ್ತಿಗಳನ್ನು ಉದ್ದಮಾಡಿ ಬೆಳಕಿನ ಕಾಂತಿಯನ್ನು ಹೆಚ್ಚಿಸುತ್ತಾರೆ. ತೂಗುದೀಪಗಳನ್ನು ಬೆಳಗಿಸುತ್ತಾರೆ. ಶಂಖನಾದ ಮೊಳಗುತ್ತದೆ. ಛತ್ರಚಾಮರಗಳು ಪ್ರವೇಶಿಸುತ್ತವೆ. ಹೂಮಳೆಯೊಂದಿಗೆ ತೆರೆ ಚಲಿಸುತ್ತದೆ. ಒಂದು ‘ಪಚ್ಚೆವೇಷ’ ಮತ್ತು ಸ್ತ್ರೀವೇಷ ವೇದಿಕೆಗೆ ಆಗಮಿಸುತ್ತದೆ. ಪ್ರಸನ್ನವಾದ ಮುಖಭಾವ, ‘ಆಲವಟ್ಟ’ಗಳಿಂದ ಕೂಡಿದ ಅಲಂಕಾರಗಳು ಆ ಮುಖದ ಪ್ರಸನ್ನತೆಯ ಕಾಂತಿಯನ್ನು ಹೆಚ್ಚಿಸುತ್ತವೆ. ಪ್ರೇಕ್ಷಕರನ್ನು ಮಂದಹಾಸಪೂರ್ವಕ ವೀಕ್ಷಿಸುತ್ತಾ ಚಲನೆಯಿಲ್ಲದೆ ನಿಲ್ಲುತ್ತದೆ. ಕ್ರಮವಾಗಿ ಕಣ್ಣು ಹಾಗೂ ಹುಬ್ಬುಗಳು ಚಲಿಸಲು ಆರಂಭಿಸುತ್ತವೆ. ಈ ಚಲನೆ ಕೈ ಹಾಗೂ ಶರೀರವನ್ನು ವ್ಯಾಪಿಸಿ, ಒಂದು ರೀತಿಯ ನೃತ್ಯವಾಗಿ ಪರಿಣಮಿಸುತ್ತದೆ. ಮುಂದೆ ಪ್ರವೇಶವಾಗಲಿರುವ ಕಥಾಪಾತ್ರದ ಸೂಚನೆಯನ್ನು ನೀಡಿ ‘ಪುರಪ್ಪಾಡ್‌’ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಹಾಡುವ ಹಾಡಿಗೆ ‘ನಿಲಪದಂ’ ಎಂದು ಹೆಸರು. ಈ ಪುರಪ್ಪಾಡ್‌ ಭಾಗವು ನಾಟಕದ ಪ್ರಸ್ತಾವನೆಗೆ ಸಮಾನವಾಗಿದೆ. ಅನಂತರ ‘ಮೇಳಪದಂ’ ಆರಂಭವಾಗುತ್ತದೆ. ಭಾಗವತರು ಹಾಗೂ ಹಿಮ್ಮೇಳ ವಾದನದವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಸಂದರ್ಭವಿದು. ‘ಮಂಜುತರ ಕುಂಜುತಲಾ ಕೇಳೀ ಸದನೇ…’ಎಂಬ ಅಷ್ಟಪದಿಯನ್ನು ಈ ಸಂದರ್ಭದಲ್ಲಿ ಹಾಡುತ್ತಾರೆ. ಈ ಮೇಳ ಪದವು ಯಕ್ಷಗಾನದ ಪೀಠಿಕೆ ಭಾಗಕ್ಕೆ ಸಮಾನವಾಗಿದೆ. ಪರಿಸರವನ್ನು ಮರೆತು ಪ್ರೇಕ್ಷಕರು ಕಥಕಳಿಯ ನಾಟ್ಯರಸವನ್ನು ಆಸ್ವಾದಿಸುವಂತೆ ಸಿದ್ಧಪಡಿಸಲು ಆವರಣ ನಿರ್ಮಿಸಲು ಮೇಳಪದವು ಸಹಕಾರಿಯಾಗಿದೆ. ಮೇಳ ಪದವು ಕಳೆದ ಕೂಡಲೇ ಕಥೆಯ ಆರಂಭವಾಗುತ್ತದೆ. ಒಂದು ಪುಸ್ತಕಕ್ಕೆ ಪ್ರಸ್ತಾವನೆ, ಮುನ್ನುಡಿ, ಅನುಕ್ರಮಣಿಕೆ ಮೊದಲಾದ ಭಾಗಗಳಿರುವಂತೆ ಕಥಕಳಿಯಲ್ಲಿ ಹಲವಾರು ಹಂತಗಳಿವೆ. ಸಂಪ್ರದಾಯಗಳಿವೆ.

ಆಟಕಥಾ ಸಾಹಿತ್ಯದಲ್ಲಿ (ಪ್ರಸಂಗ ಸಾಹಿತ್ಯ) ಸಾಮಾನ್ಯವಾಗಿ ಶ್ಲೋಕಗಳು, ಹಾಡುಗಳಿ, ಅಪರೂಪವಾಗಿ ದಂಡಕಗಳಿರುತ್ತವೆ. ಕಥಕಳಿ ಹಾಡುಗಳಿಗೆ ‘ಪದ’ ಎನ್ನುತ್ತಾರೆ. ಕಥಕಳಿಯ ಪದಗಳಿಗೆ ವೇಷಧಾರಿಗಳು ಅಭಿನಯಿಸುತ್ತಾರೆ. ಈ ಪದಗಳು ಸಂಭಾಷಣೆ ಅಥವಾ ವಿಚಾರ ರೂಪದಲ್ಲಿರುತ್ತವೆ. ಶ್ಲೋಕಗಳು ಸಾಮಾನ್ಯವಾಗಿ ಕಥಾಸಂದರ್ಭ ಅಥವಾ ಪಾತ್ರ ಪ್ರವೇಶಗಳನ್ನು ತಿಳಿಸುವ ಕವಿ ವಚನಗಳಾಗಿರುತ್ತವೆ. ಮೇಳಪದ ಕಳೆದು ತೆರೆ ಹಿಡಿದಾಗ, ಕಥೆಯಲ್ಲಿ ಮೊದಲು ಪ್ರವೇಶಿಸುವ ಪಾತ್ರಗಳನ್ನು ಸೂಚಿಸುವ ಶ್ಲೋಕಗಳನ್ನು ಸಾಮಾನ್ಯವಾಗಿ ಹಾಡುತ್ತಾರೆ. ಅದರ ಕೊನೆಯಲ್ಲಿ ತೆರೆ ಚಲಿಸಿ, ವೇಷಗಳು ರಂಗಪ್ರವೇಶ ಮಾಡುತ್ತವೆ. ಮೊದಲ ಭಾಗದ ಕೆಲವು ಸಾಂಪ್ರದಾಯಿಕ ವಿಧಿಗಳ ನಂತರ ಹಾಡು, ಕುಣಿತ ಮುಂದುವರಿಯುತ್ತದೆ. ಭಾಗವತ ಕಥೆಯ ಪ್ರಧಾನ ಭಾಗವನ್ನು ಪದ್ಯವಾಗಿ ಹಾಡುತ್ತಾನೆ. ಎರಡನೇ ಭಾಗವತ ಅದನ್ನು ಪುನರಾವರ್ತಿಸುತ್ತಾನೆ. ಪಾತ್ರಧಾರಿ ಪ್ರತಿಯೊಂದು ಮಾತಿಗೂ ಸ್ಪಷ್ಟವಾಗಿ ಕ್ಯೆಮುದ್ರೆಗಳನ್ನು ಸೃಷ್ಟಿಸಿ ಅಭಿನಯಿಸುತ್ತಾನೆ. ಕಣ್ಣು. ಹುಬ್ಬು, ಕೈ, ಕಾಲು, ಶರೀರಗಳ ಪ್ರತಿಯೊಂದು ಚಲನೆಯೂ ತಾಳಗತಿಗೆ ಹೊಂದಿಕೊಂಡಿರುತ್ತದೆ. ಮುದ್ರೆಗಳ ರಚನೆ ಮತ್ತು ಪ್ರದರ್ಶನ ಅದ್ಭುತವಾಗಿರುತ್ತದೆ. ಮುಖದಲ್ಲಿ ಆಯಾರಸಗಳಿಗೆ ತಕ್ಕಂತೆ ಭಾವಗಳು ಪ್ರಕಟಗೊಳ್ಳುತ್ತವೆ. ಪದಗಳಲ್ಲಿ ಪಲ್ಲವಿ, ಅನುಪಲ್ಲವಿ ಹಾಗೂ ಚರಣಗಳಿದ್ದು ಅವುಗಳಿಗನುಗುಣವಾಗಿ ನಡೆಯುವ ನಾಟ್ಯ ಕಥಕಳಿಯ ಪ್ರತ್ಯೇಕತೆಯಾಗಿದೆ. ಪದದ ಕೊನೆಯಲ್ಲಿ ಹಿಮ್ಮೇಳವಾದನ ವಿಜೃಂಭಿಸುತ್ತದೆ. ಕಥಾ ಸಂದರ್ಭ, ಪಾತ್ರಗಳ ಸ್ವಭಾವ ಹಾಗೂ ರಸಭಾವಗಳಿಗೆ ಹೊಂದಿಕೊಂಡು ಕಥರಕಳಿಯ ‘ಕಲಾಶ’ಗಳು ಬದಲಾಗುತ್ತವೆ. ಹೀಗೆ ನಾಟ್ಯಗೀತೆ, ನೃತ್ಯವಾದ್ಯಗಳು ಸಂಯೋಜನೆಗೊಂಡು ಕಥೆ ಮುಂದುವರಿಯುತ್ತದೆ. ಒಂದು ಹಾಡಿನಲ್ಲಿ ಶೃಂಗಾರ ರಸವು ಮುಖ್ಯವಾಗಿದ್ದರೆ, ಮುಂದಿನ ಹಾಡು ವೀರರಸವಾಗಿರುತ್ತದೆ. ಭಕ್ತಿ ಹಾಗೂ ಕರುಣ ರಸಗಳ ಹಾಡುಗಳಿಗೂ ಆಟಕಥೆಗಳಲ್ಲಿ ಅವಕಾಶವಿದೆ. ಯುದ್ಧದ ಸನ್ನಿವೇಶಗಳಲ್ಲಿ ವೀರ ಮತ್ತು ರೌದ್ರ ರಸಗಳಿಗೆ ಪ್ರಾಧಾನ್ಯವಿರುತ್ತದೆ. ಒಟ್ಟಿನಲ್ಲಿ ರಸಭಾವ ತುಂಬಿ ತುಳುಕದ ಒಂದೇ ಒಂದು ‘ಕಳಿಪದ’ವು ಇರಲಾರದು. ಕಥಕಳಿಯಲ್ಲಿ ಹಾಸ್ಯರಸಕ್ಕೆ ಅವಕಾಶ ಕಡಿಮೆ. ಹಾಡಿನ ಚೌಕಟ್ಟಿನಿಂದ ಹೊರಬಂದು ಕಲಾವಿದನಿಗೆ ಸ್ವತಂತ್ರವಾದ ಮನೋಧರ್ಮಗಳ ಅಭಿನಯವನ್ನು ಮಾಡಲು ಅವಕಾಶವಿದೆ. ಈ ರೀತಿಯ ಅಭಿನಯಕ್ಕೆ ಇಳಗಿಯಾಟಂ’ ಎಂದು ಹೆಸರು. ಸ್ವರ್ಗವರ್ಣನೆ, ಪರ್ವತವರ್ಣನೆ, ವನವರ್ಣನೆ, ಆಶ್ರಮವರ್ಣನೆ, ನಾಯಿಕೆಯ ಸೌಂದರ್ಯ ವರ್ಣನೆ ಮೊದಲಾದ ಸಂದರ್ಭಗಳು ‘ಇಳಗಿಯಾಟಂ’ಗಳಿಗೆ ವಿಷಯಗಳಾಗುತ್ತವೆ. ಕಾವ್ಯನಾಟಕಾದಿಗಳ ಪ್ರಸಿದ್ಧ ವರ್ಣನೆಗಳನ್ನು ಕೆಲವು ಪ್ರಸಿದ್ಧ ಶ್ಲೋಕಗಳನ್ನು ಇಳಗಿಯಾಟದಲ್ಲಿ ಪ್ರತಿಭಾವಂತ ಕಲಾವಿದರು ಬಳಸುತ್ತಾರೆ. ಪಂಡಿತರಿಗೆ ಇಂತಹ ರಂಗಗಳು ಹೆಚ್ಚು ಪ್ರಿಯವಾಗುತ್ತವೆ. ಕಥಕಳಿ ಜನಪ್ರಿಯತೆಗೆ ಈ ಎಲ್ಲ ಅಂಶಗಳು ಕಾರಣವಾಗಿವೆ.

ಕಥಕಳಿ ಎಂಬ ಪ್ರದರ್ಶನ ಕಲೆ ಹುಟ್ಟಿ ಸುಮಾರು ಮುನ್ನೂರು ವರ್ಷಗಳಿಗಿಂತ ಹೆಚ್ಚಾಗಿಲ್ಲ. ಕಲ್ಲಿಕೋಟೆಯ ಮಾನವೇದನ್‌ ತಂಬುರಾನ್‌ ಭಾಗವತ ಕಥೆಯನ್ನು ಆಧರಿಸಿ ಕೃಷ್ಣನಾಟಂ ಆರಂಭಿಸಿದರು. ಈ ಸುದ್ದಿಯನ್ನು ತಿಳಿದ ಕೊಟ್ಟಾರಕರ ಬಾಲವೀರಕೇರಳ ತಂಬುರಾನ್‌ ರಾಮಾಯಣ ಕಥೆಯನ್ನು ಆಧರಿಸಿ ರಾಮನಾಟಂ ಎಂಬ ಕಲೆಯನ್ನು ಆರಂಭಿಸಿದರು. ಕೆಲವೇ ಸಮಯದಲ್ಲಿ ದಕ್ಷಿಣ ಕೋಟ್ಟಯಂನ ಕೇರಳವರ್ಮ ತಂಬುರಾನ್‌ ಭಾರತ ಕಥೆಯನ್ನು ಆಧರಿಸಿ ‘ಕೋಟ್ಟಯಂ ಕಥಗಳ್‌’ ಎಂಬ ಕಲೆಯನ್ನು ಆರಂಭಿಸಿದರು. ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ ಕ್ಷೇತ್ರಗಳಲ್ಲಿ ಈ ಪ್ರಕಾರದ ಹುಟ್ಟಿನೊಂದಿಗೆ ಪರಿಷ್ಕಾರಗಳು ಕಂಡುಬಂದುವು. ಇದುವೇ ಕಥಕಳಿ ಕಲಾಪ್ರಕಾರಾವಾಗಿ ಬೆಳೆಯಿತು. ವೆಟ್ಟತ್ತುರಾಜ, ಕಪ್ಲಿಂಗಾಡು ನಂಬೂದಿರಿ ಮೊದಲಾದವರು ಕಥಕಳಿಯ ಪರಿಷ್ಕಾರಕ್ಕಾಗಿ ದುಡಿದವರು. ತಿರುವನಂತರಪುರದಲ್ಲಿ ಕಾರ್ತಿಕ ತಿರುನಾಳ್‌ ಮಹಾರಾಜ ಹಾಗೂ ಅವರ ಅಳಿಯನಾದ ಅಶ್ವತಿ ತಿರುನಾಳ್‌ ತಂಬುರಾನ್‌ ಸ್ವತಃ ಅಟಕಥ ಸಾಹಿತ್ಯವನ್ನು ರಚಿಸಿದರು. ಅವರು ಸಾಹಿತಿಗಳಿಗೆ, ಕವಿಗಳಿಗೆ, ಕಲಾವಿದರಿಗೆ ಆಶ್ರಯ ಹಾಗೂ ಪ್ರೋತ್ಸಾಹ ನೀಡಿ ಕಥಕಳಿ ಪ್ರಕಾರದ ಬೆಳವಣಿಗೆಗೆ ಕಾರಣರಾದರು. ಉಣ್ಣಾಯಿ ವಾರಿಯರ್ ರಚಿಸಿದ ಪ್ರಸಿದ್ಧವಾದ ‘ನಳಚರಿತಂ ನಾಲಾಂ ದಿವಸಂ’ ಇದೇ ಕಾಲದಲ್ಲಿ ರಚಿತವಾದ ಕೃತಿ. ಕಥಕಳಿ ಎಂಬ ಕಲೆ ಹುಟ್ಟಿ ಸುಮಾರು ಎರಡು ಶತಮಾನಗಳ ಕಾಲ ಅಭಿವೃದ್ಧಿಯ ಪಥದಲ್ಲಿತ್ತು. ಆದರೆ ಮುಂದಿನ ವರ್ಷಗಳಲ್ಲಿ ಜನರಲ್ಲಿ ಆಸಕ್ತಿ ಕಡಿಮೆಯಾಗಿ ಕಥಕಳಿ ಕ್ಷೀಣಿಸತೊಡಗಿತು. ತಮಿಳು ಸಂಗೀತ ನಾಟಕಗಳು ಕೇರಳದಲ್ಲಿ ಪ್ರಚಾರಗೊಳ್ಳುತ್ತಿದ್ದ ಕಾಲದಲ್ಲಿ ಕಥಕಳಿಗೆ ‘ಮೂಕರ ಆಟ’ ಎಂಬ ಅಪಖ್ಯಾತಿಯೂ ಉಂಟಾಯಿತು. ಇಂತಹ ದುಸ್ಥಿತಿಯಿಂದ ಕಥಕಳಿ ಹಾಗೂ ಇತರ ಪತನದಂಚಿನಲ್ಲಿರುವ ಕಲೆಗಳನ್ನು ರಕ್ಷಿಸಿದ ಕೀರ್ತಿ ಮಹಾಕವಿ ವಳ್ಳತೋಳ್‌ ನಾರಾಯಣ ಮೇನೋನ್‌ ಅವರು ಸ್ಥಾಪಿಸಿದ ಕೇರಳ ‘ಕಲಾಮಂಡಲಂ’ಗೆ ಸಲ್ಲುತ್ತದೆ.

ಆಟಕಥಾ ಸಾಹಿತ್ಯ

ಆಟಕಥಾ ಸಾಹಿತ್ಯದ ಮೊದಲ ಕೃತಿಗಳೆಂದರೆ ರಾಮನಾಟಂ ಕಥೆಗಳು ಹಾಗೂ ಕೋಟ್ಟಯಂ ಕಥೆಗಳು. ಆ ಕಾಲದ ಚಾಕ್ಯಾರರು ಕೂಡಿಯಾಟದಲ್ಲಿ ಪ್ರಚಲಿತವಿದ್ದ ಎಲ್ಲಾ ರೀತಿಯ ವೇಷ ವೈವಿಧ್ಯಗಳನ್ನು ಹಾಗೂ ಹಸ್ತಾಭಿನಯ ರೀತಿಗಳನ್ನು ಕೊಟ್ಟಾರಕರ ತಂಬುರಾನ್‌ ಹಾಗೂ ಕೋಟ್ಟಯಂ ತಂಬುರಾನ್‌ ಸ್ವೀಕರಿಸಿದರು. ಮುಖವಾಡ ಧರಿಸುವ ಸಂಪ್ರದಾಯ ಬಹಳ ಹಿಂದೆ ಚಾಲ್ತಿಯಲ್ಲಿತ್ತು. ಆದರೆ ಅದು ಬಹಳ ಕಾಲ ಉಳಿಯಲಿಲ್ಲ. ಈ ರೀತಿಯ ವೈಶಿಷ್ಟ್ಯಗಳಿಂದ ಕಥಕಳಿಯನ್ನು ಅನುಕರಿಸಲು ಅನೇಕ ಜನ ಮುಂದೆ ಬಂದರು. ಕೋಟ್ಟಯಂ ತಂಬುರಾನ್‌ ಆಟಕಥಾ ಸಾಹಿತ್ಯದಲ್ಲಿ ಮಾದರಿಯಾಗುವಂತೆ ಅನೇಕ ಪರಿಷ್ಕಾರಗಳನ್ನು ನಡೆಸಿದರು. ಮೊದಲಿಗೆ ಒಂದು ಕಥಾ ಪ್ರವೇಶ, ನಂತರ ಪುರಪ್ಪಾಡ್‌, ಶ್ಲೋಕಗಳು, ಪದಗಳು, ದಂಡಕ ಹಾಗೂ ಪದಗಳಿಗೆ ಪಲ್ಲವಿ, ಅನು ಪಲ್ಲವಿ, ಚರಣಗಳ ಕ್ರಮ, ಕಲಾಶಗಳಿಗೆ ಉಚಿತವಾದ ಅಕ್ಷರ ವಿನ್ಯಾಸ ಹೀಗೆ ಕೋಟ್ಟಯಂ ತಂಬುರಾನ್‌ ಪರಿಷ್ಕಾರಗಳನ್ನು ಮಾಡಿದರು. ಆಟಕಥಾ ಸಾಹಿತ್ಯ ಹಾಗೂ ಸಂಸ್ಕೃತದ ನಾಟಕ ಪರಂಪರೆಗೆ ಸಾಕಷ್ಟು ವ್ಯತ್ಯಾಸವಿದೆ.

ಪ್ರಾಚೀನ ಕಾಲದಲ್ಲಿ ಒಂದು ಸಂಸ್ಕೃತ ನಾಟಕವು ‘ಕೂತ್ತಂಬಲ’ಗಳಲ್ಲಿ ಪ್ರದರ್ಶನಗೊಳ್ಳಲು ಹಲವಾರು ದಿವಸಗಳು ಬೇಕಾಗಿದ್ದುವು. ರಾಮಾಯಣ ಕಥೆಯನ್ನು ಇಪ್ಪತ್ತೊಂದು ಅಂಕಗಳಾಗಿ ಚಾಕ್ಯಾರರು ಅಭಿನಯಿಸುತ್ತಿದ್ದರು. ಈ ಕಥೆಯು ಪೂರ್ಣವಾಗಿ ಪ್ರದರ್ಶನಗೊಳ್ಳಬೇಕಾದರೆ ಐದಾರು ತಿಂಗಳುಗಳೇ ಬೇಕಾಗಿದ್ದುವು. ಈ ಪ್ರದರ್ಶನಗಳಲ್ಲಿ ಪುನರಾವರ್ತನೆ, ಶುಷ್ಕವಾದ ಅನೇಕ ವಿಧಿಗಳು ಸಾಕಷ್ಟಿವೆ. ರಾಮನಾಟಂ ಪ್ರಕಾರವು ಎಂಟು ದಿವಸಗಳಲ್ಲಿ ಸಂಪೂರ್ಣ ರಾಮಾಯಣವನ್ನು ಪ್ರದರ್ಶಿಸುತ್ತದೆ. ಅದೇ ರೀತಿ ಯಾವುದೇ ಕಥೆಯನ್ನು ಸಂಕ್ಷೇಪಿಸಿ ಹೇಳುವ ಸೌಕರ್ಯ ಆಟಕಥೆಗಿದೆ. ಈ ಕಾರಣಗಳಿಂದ ಆಟಕಥ ಸಾಹಿತ್ಯ ಪರಂಪರೆಯು ಮಲಯಾಳಂ ಸಾಹಿತ್ಯದಲ್ಲಿ ಬೆಳೆದು ಬಂತು.

ಕೋಟಯತ್ತು ತಂಬುರಾನ್‌ (೧೮ನೆಯ ಶತಮಾನಂ)

ಕಥಕಳಿ ಎಂಬ ಕಲಾಪ್ರಕಾರಕ್ಕೆ ಮಹತ್ವದ ಕೊಡುಗೆ ನೀಡಿದವರಲ್ಲಿ ಅಗ್ರಗಣ್ಯರಾದವರು ಕೋಟ್ಟಯಂ ತಂಬುರಾನ್‌. ಇವರ ಕಾಲದಲ್ಲಿ ರಾಮನಾಟಂ ಎಂಬ ಕಲಾ ಪ್ರಕಾರವು ಕಥಕಳಿ ಎಂಬ ಹೆಸರಿನಲ್ಲಿ ಪ್ರಸಿದ್ಧವಾಯಿತು. ರಾಮಾಯಣದ ಹೊರತಾಗಿ ಮಹಾಭಾರತದ ಕಥೆಗಳನ್ನೂ ತನ್ನ ಆಟಕಥೆಗಳಿಗೆ ತಂಬುರಾನ್‌ ಬಳಸಿದ್ದರಿಂದ ರಾಮನಾಟಂ ಎಂಬ ಹೆಸರಿಗೆ ಪ್ರಸಕ್ತಿ ಇಲ್ಲದಾಯಿತು. ಬಕಾಸುರವಧೆ, ಕಲ್ಯಾಣ ಸೌಗಂಧಿಕಾ, ಕಿಮ್ಮೀರವಧೆ, ನಿವಾತ ಕವಚ, ಕಾಲಕೇಯ ವಧೆ ಮೊದಲಾದವು ಕೋಟ್ಟಯಂ ತಂಬುರಾನನ ಕೃತಿಗಳು. ಅವರು ಒಳ್ಳೆಯ ನಟರೂ ಆಗಿದ್ದರು. ಸಂಗೀತ, ಸಾಹಿತ್ಯ ಕಲೆಗಳಲ್ಲಿ ಪ್ರತಿಭಾವಂತರಾಗಿದ್ದರು. ಅವರ ಈ ಪ್ರತಿಭೆ ಅವರ ನಾಲ್ಕು ಕೃತಿಗಳಲ್ಲಿ ಪ್ರಕಟಗೊಂಡಿದೆ. ತಂಬುರಾನ್‌ ಬರೆದ ತೋಡಯಂ, ವಂದನ ಶ್ಲೋಕ, ನಿಲಪದಂ ಮೊದಲಾದುವು ಕಥಕಳಿ ರಂಗದಲ್ಲಿ ಪ್ರಚಾರದಲ್ಲಿವೆ. ಅವರು ಅಳವಡಿಸಿದ ಕೆಲವು ಶಿಸ್ತು ಹಾಗೂ ಶೈಲಿಗಳು ಕಥಕಳಿಯ ಬೆಳವಣಿಗೆಗೆ ಪೂರಕವಾದವು. ಅನಂತರದ ಅನೇಕ ಕಥಕಳಿ ಸಾಹಿತಿಗಳು ತಂಬುರಾನರನ್ನು ಅನುಕರಿಸಿದ್ದಾರೆ.

ಕಾರ್ತಿಕ ತಿರುನಾಳ್

ತಿರುವಿದಾಂಕೂರು ಇತಿಹಾಸದಲ್ಲಿ ‘ಧರ್ಮರಾಜ’ ಎಂಬ ಬಿರುದು ಪಡೆದ ಕಾರ್ತಿಕ ತಿರುನಾಳ್‌ ರಾಮವರ್ಮ ಮಹಾರಾಜರು ಕಥಕಳಿಗೆ ನೀಡಿದ ಕೊಡುಗೆ ಅಪಾರ.

‘ವಲಯಂ ಕೊಟ್ಟಾರಂ ಕಥಕಳಿಯೋಗ’ ಎಂಬ ಸಂಸ್ಥೆಯ ಸ್ಥಾಪಕ ಎಂಬ ಗೌರವವೂ ಇವರಿಗೆ ಸಲ್ಲುತ್ತದೆ. ಸಂಗೀತ, ಸಾಹಿತ್ಯ ಮತ್ತು ಅಭಿನಯದಲ್ಲಿ ಅಸಾಮಾನ್ಯ ಪ್ರತಿಭೆ ಮತ್ತು ಪಾಂಡಿತ್ಯ ಅವರಿಗಿತ್ತು. ನಾಟ್ಯಶಾಸ್ತ್ರದ ಬಗೆಗೆ ಅವರು ರಚಿಸಿದ ಸಂಸ್ಕೃತ ಕೃತಿ ‘ಬಾಲರಾಮ ಭರತಂ’. ಇವರು ರಚಿಸಿದ ಏಳು ಆಟಕಥೆಗಳಲ್ಲಿ ರಾಜಸೂಯ ಹಾಗೂ ನರಕಾಸುರವಧೆ ಪ್ರಸಿದ್ಧವಾಗಿದೆ. ಕಾರ್ತಿಕ ತಿರುನಾಳರ ಆಸ್ಥಾನ ಸದಸ್ಯರಲ್ಲಿ ಅನೇಕ ಕವಿಗಳೂ, ಪಂಡಿತರೂ ಇದ್ದರು. ಅವರಲ್ಲಿ ಪ್ರಮುಖರಾದವರು ಉಣ್ಣಾಯಿ ವಾರಿಯರ್.

ವಾರಿಯರ ನಳಚರಿತಂ ಕಥಕಳಿಯಲ್ಲಿ ಮಾತ್ರವಲ್ಲ ಮಲಯಾಳಂ ಸಾಹಿತ್ಯದಲ್ಲಿಯೇ ಗಣ್ಯವಾದ ಸ್ಥಾನವನ್ನು ಪಡೆದಿದೆ. ನಾಲ್ಕು ದಿವಸಗಳ ಕಾಲ ಪ್ರದರ್ಶಿಸುವ ನಾಲ್ಕು ಭಾಗಗಳು ಈ ಆಟಕಥೆಯಲ್ಲಿದೆ. ಇದರ ಎಲ್ಲಾ ಲಕ್ಷಣಗಳು ಪರಿಪೂರ್ಣವಾದ ಒಂದು ಸಂಸ್ಕೃತ ನಾಟಕವನ್ನು ಹೋಲುತ್ತದೆ. ಸಾಹಿತ್ಯಕ ಅಂಶ, ಸಂಗೀತಪ್ರೌಢಿಮೆ, ಅಭಿನಯ ಸಾಧ್ಯತೆ, ಪಾತ್ರ ಸೃಷ್ಟಿ, ವೈಭವ, ಒಳನೋಟಗಳಿರುವ ಒಂದು ಮೌಲಿಕ ಕೃತಿ ನಳಚರಿತಂ.

ಕಾರ್ತಿಕ ತಿರುನಾಳರ ಸೋದರಳಿಯನಾಗಿದ್ದ ಅಶ್ವತಿ ತಿರುನಾಳರು ಪ್ರತಿಭಾವಂತ ಕವಿ. ಮಾವ ಬರೆದ ನರಕಾಸುರ ವಧೆ ಕೃತಿಯನ್ನು ಇವರು ಪೂರ್ಣಗೊಳಿಸಿದರೆಂದು ಹೇಳಲಾಗುತ್ತದೆ. ಪೂತನಿ ಮೋಕ್ಷ, ರುಕ್ಮಿಣಿ ಸ್ವಯಂವರ, ಪೌಂಢ್ರಕವಧೆ, ಅಂಬರೀಶ ಚರಿತೆ ಅವರ ಇತರ ಕೃತಿಗಳು. ಇವು ನಾಲ್ಕೂ ಭಾಗವತದ ಕಥೆಗಳಾಗಿವೆ. ಪೂತನಿ ಮೋಕ್ಷದ ಲಲಿತಾ, ರುಕ್ಮಿಣಿ ಸ್ವಯಂವರದ ಬ್ರಾಹ್ಮಣ, ಅಂಬರೀಶ ಚರಿತೆಯ ದೂರ್ವಾಸ ಪಾತ್ರಗಳು ಕಥಕಳಿಯ ಅನಶ್ವರ ಕಥಾ ಪಾತ್ರಗಳಾಗಿವೆ.

ಕಾರ್ತಿಕ ತಿರುನಾಳರ ಆಸ್ಥಾನ ಸದಸ್ಯರಾಗಿದ್ದ ಕಿಳಿಮಾನೂರು ರವಿಮರ್ಮಕೋಯಿ ತಂಬುರಾನ್‌, ಚೇರ್ತಲ ಪುದಿಯಕ್ಕಲ್‌ ತಂಬಾನ್‌, ಮಂಡವಪಳ್ಳಿ, ಇಟ್ಟಿರಾರಿಶ್ಯ ಮೇನೋನ್‌, ಇರಟ್ಟುಕುಳಂಗರ ವಾರಿಯರ್ ಮೊದಲಾದ ವಿದ್ವಾಂಸರು ಕಥಕಳಿಗೆ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ‘ಕಂಸವಧಂ’ ರವಿವರ್ಮ ಕೋಯಿ ತಂಬುರಾನ್‌ ಬರೆದ ಒಳ್ಳೆಯ ಕೃತಿ. ಪುದಿಯಕ್ಲಲ್‌ ತಂಬಾನರ ‘ಕಾರ್ತವೀರ್ಯ ವಿಜಯಂ’ ಕೃತಿಯು ಕಮಲದಳ ಎಂಬ ಒಂದು ದೃಶ್ಯದಿಂದಲೇ ಪ್ರಖ್ಯಾತವಾಗಿದೆ. ಕೇರಳದ ದಕ್ಷಿಣೋತ್ತರಗಳಲ್ಲಿ ಒಂದೇ ರೀತಿ ಪ್ರಚಾರದಲ್ಲಿರುವ ‘ರುಕ್ಮಾಗಂದ ಚರಿತೆ’ ಹಾಗೂ ‘ಸಂತಾನಗೋಪಾಲ’ ಕೃತಿಗಳು ಇಟ್ಟಿರಾರಿಶ್ಯ ಮೇನೋನರ ಕೃತಿಗಳು. ಇರಟ್ಟು ಕುಳಂಗರ ವಾರಿಯರ ಕಿರಾತವೂ ಪ್ರಚಾರದಲ್ಲಿರುವ ಪ್ರಸಿದ್ಧ ಕೃತಿ.

ಕೇರಳದ ಪ್ರದರ್ಶನ ಕಲೆಗಳಲ್ಲಿ ಕಥಕಳಿಗೆ ಮೊದಲ ಸ್ಥಾನ ಸಿಕ್ಕಿದ್ದು ಕಾರ್ತಿಕ ತಿರುನಾಳರ ಪ್ರೋತ್ಸಾಹದಿಂದ. ಅರಮನೆಯ ಆಶ್ರಯದಲ್ಲಿ ಒಂದು ಕಥಕಳಿ ತಂಡವನ್ನು ಕಟ್ಟಿದ್ದಲ್ಲದೆ, ಉತ್ಸವ, ಜಾತ್ರೆ, ನವರಾತ್ರಿ ಮೊದಲಾದ ಸಂದರ್ಭಗಳಲ್ಲಿ ಕಥಕಳಿ ಬೇಕೇ ಬೇಕೆಂದು ಅವರು ಆಜ್ಞಾಪಿಸಿದರು. ‘ಕಳಿಯೋಗಂ’(ಪ್ರದರ್ಶನ) ಮೊದಲಾದ ಖರ್ಚು ವೆಚ್ಚಗಳಿಗೆ ಧಾರಾಳ ಹಣವನ್ನು ಮೀಸಲಿರಿಸಿದರು. ಅವುಗಳ ಹೊಣೆಯನ್ನು ಮಾತೂರ್ ಪಣಿಕ್ಕರರಿಗೆ ಒಪ್ಪಿಸಿದರು. ಹೀಗೆ ಕಥಕಳಿಯ ಏಳಿಗೆಗಾಗಿ ಅವಿಸ್ಮರಣೀಯ ಕೆಲಸಗಳನ್ನು ಅವರು ಮಾಡಿದರು.