ಸುವರ್ಣ ಕಾಲ

೧೯ನೆಯ ಶತಮಾನವನ್ನು ಕಥಕಳಿಯ ಇತಿಹಾಸದ ಸುವರ್ಣ ಕಾಲ ಎಂದೇ ಹೇಳಲಾಗುತ್ತದೆ. ಈ ಶತಮಾನದ ಆರಂಭದಲ್ಲಿ ಕಥಕಳಿಯ ಪೋಷಣೆ ಹಾಗೂ ಸಂರಕ್ಷಣೆಗೆ ಬಹುಮುಖವಾದ ಪ್ರಯತ್ನವನ್ನು ನಡೆಸಿದವರು ಕೊಚ್ಚಿಯ ವೀರಕೇರಳವರ್ಮ ತಂಬುರಾನ್‌. ಸುಮಾರು ನೂರರಷ್ಟು ಆಟಕಥೆಗಳನ್ನ ಇವರು ರಚಿಸಿದ್ದಾರೆ. ತನ್ನದೇ ಆದ ಒಂದು ತಂಡವನ್ನೂ ಇವರು ರೂಪಿಸಿದ್ದರು. ತಂಬುರಾನ್‌ ಕಪ್ಲಿಂಗಾಟ್‌ ಸಂಪ್ರದಾಯದಲ್ಲಿ ಕಥಕಳಿ ಕಲಿತ ಕಲಾವಿದರನ್ನು ಕರೆಸಿ ಪ್ರದರ್ಶನ ಏರ್ಪಡಿಸಿ ಅವರಿಗೆ ಯಥೋಚಿತ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಿದರು.

ಆಟಕಥೆ ಕರ್ತೃಗಳಲ್ಲಿ ಖ್ಯಾತನಾದ ಗಾಯಕ ಕವಿ ಇರಯಿಮ್ಮನ್‌ ತಂಬಿಯು ‘ಕೀಚಕವಧೆ’, ‘ಉತ್ತೆರಾಸ್ವಯಂವರ’, ‘ದಕ್ಷಯಾಗ’ ಎಂಬ ಮೂರು ಕೃತಿಗಳನ್ನು ರಚಿಸಿದ್ದಾರೆ.

ಉತ್ರಂ ತಿರುನಾಳರ ಆಸ್ಥಾನ ಸದಸ್ಯನು ಆಗಿದ್ದ ತಂಬಿಯ ಆಟಕಥೆಗಳು ಸಹೃದಯರನ್ನು ಮುದಗೊಳಿಸಿದ್ದುವು. ಇಂದಿಗೂ ಆ ಕೃತಿಗಳು ಪ್ರಸಿದ್ಧವಾಗಿವೆ. ಸಂಗೀತ ವಿದ್ವಾಂಸರಾಗಿದ್ದ ಸ್ವಾತಿ ತಿರುನಾಳ್‌ ಮಹಾರಾಜರೂ ಕಥಕಳಿಯ ಪ್ರೇಮಿಯಾಗಿದ್ದರು.

ಉತ್ರಂ ತಿರುನಾಳ್‌ ಮಾರ್ತಾಂಡವರ್ಮರ ಕಾಲದಲ್ಲಿ ಕಥಕಳಿಯು ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿತು. ಆ ಕಾಲದ ಖ್ಯಾತ ಕಲಾವಿದರೆಲ್ಲ ತಿರುವನಂತಪುರ ಅರಮನೆಯ ಕಥಕಳಿ ತಂಡದಲ್ಲಿ ಸದಸ್ಯರಾಗಿದ್ದರು. ಈಶ್ವರ ಪಿಳ್ಳೆ ವಿಚಾರಿಪುಕಾರ್, ನಳನುಣ್ಣಿ, ಶೇಖರವಾರ್ಯರ್, ಕಂಡಿಯೂರ್ ಪಪ್ಪುಪಿಳ್ಳೆ, ಕೊಚ್ಚಯ್ಯಪ್ಪ ಪಣಿಕ್ಕರ್, ಕಿಟ್ಟುಣ್ಣಿ, ಕೊಚ್ಚು ಕೃಷ್ಣಪಿಳ್ಳೆ, ಪೞವಂಗಾಡಿ ನಾಣುಪಿಳ್ಳೆ, ಕೊಚ್ಚಾಪಿರಾಮನ್‌ ಮೊದಲಾದ ಪ್ರಸಿದ್ಧ ಕಲಾವಿದರು ಆ ಕಾಲದಲ್ಲಿದ್ದರು. ಉತ್ರ ತಿರುನಾಳರ ಸಲಹೆಯಂತೆ ಈಶ್ವರಪಿಳ್ಳೆ, ವಿಚಾರಿಪುಕಾರ್ ‘ಕೇರಳವಿಲಾಸಂ’ ಎಂಬ ಹೆಸರಿನಲ್ಲಿ ಒಂದು ಮುದ್ರಣಾಲಯವನ್ನು ಸ್ಥಾಪಿಸಿದರು. ಆ ವರೆಗೆ ಬಂದಿದ್ದ ಕೃತಿಗಳನ್ನು ಸಂಪಾದಿಸಿ. ‘ಅಂಬತ್ತಿನಾಲ್‌ ದಿವಸತ್ತೆ ಆಟಕಥೆಗಳ್‌’ (ಐವತ್ನಾಲ್ಕು ದಿವಸಗಳ ಆಟಕಥೆಗಳು) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಆ ಕಾಲದಲ್ಲಿ ತಿರುವಿದಾಂಕೂರಿನಲ್ಲಿಯೇ ಅನೇಕ ಕಥಕಳಿ ತಂಡ ಹಾಗೂ ತರಬೇತಿ ಸಂಸ್ಥೆಗಳು ಹುಟ್ಟಿಕೊಂಡವು. ಉತ್ತರ ಕೇರಳದಿಂದ ಬಂದ ಪ್ರಸಿದ್ಧ ಕಲಾವಿದರಿಗೆ ಉತ್ರಂ ತಿರುನಾಳ್‌ ಪ್ರೋತ್ಸಾಹವನ್ನು ನೀಡುತ್ತಿದ್ದರು.

ಕಲಾವಿದರಿಗೆ ಸಿಕ್ಕಿದ ರಾಜಕೀಯ ಗೌರವವು ಜನರ ಪ್ರೀತ್ಯಾದರಗಳಿಗೂ ಕಾರಣವಾಯಿತು. ಕಥಕಳಿಯನ್ನು ಕಲಿಯುವಲ್ಲಿ ಹಾಗೂ ಆಸ್ವಾದಿಸುವಲ್ಲಿ ಅಭ್ಯಾಸ ಮತ್ತು ಆಸ್ವಾದನೆಗಳಲ್ಲಿ ಜನರ ಆಸಕ್ತಿ ಹೆಚ್ಚಿತು. ತಿರುವಿದಾಂಕೂರು ಮಾತ್ರವಲ್ಲ, ಉತ್ತರ ಕೇರಳದಲ್ಲಿಯೂ ಅನೇಕ ‘ಕಳಿಯೋಗಂ’ ಹಾಗೂ ಕಳರಿಗಳು ಹುಟ್ಟಿಕೊಂಡವು. ಆದರೆ ಉತ್ರಂ ತಿರುನಾಳದ ಕಥಕಳಿ ತಂಡಕ್ಕೆ ಸಮಾನವಾದ ಒಂದು ತಂಡ ಕೇರಳದಲ್ಲಿಯೇ ಇರಲಿಲ್ಲ. ತನ್ನ ತಂಡದ ವೇಷಭೂಷಣಗಳನ್ನೆಲ್ಲ ಪರಿಷ್ಕರಿಸಿ, ತಂಡದ ಉಸ್ತುವಾರಿಯನ್ನು ಈಶ್ವರ ಪಿಳ್ಳೆಯವರಿಗೆ ವಹಿಸಿಕೊಟ್ಟಿದ್ದರು. ತಂಡದ ಕಲಾವಿದರ ಹೊರತಾಗಿ ದಕ್ಷಿಣ ಹಾಗೂ ಉತ್ತರದ ಕಡೆಗಳಿಂದ ಪ್ರಸಿದ್ಧ ಕಲಾವಿದರನ್ನು ಕರೆಸಿ ಅವರು ಕಥಕಳಿ ಪ್ರದರ್ಶನಗಳನ್ನು ಏರ್ಪಡಿಸಿದರು.

ಕಥಕಳಿ ಪ್ರಕಾರದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಕಾರಣರಾದ ಅನೇಕ ಜನ ಕಲಾವಿದರು, ಕವಿಗಳು ಇದ್ದಾರೆ. ಕಿಳಿಮಾನೂರು ವಿದ್ವಾನ್‌ ಕೋಯಿ ತಂಬುರಾನರ ‘ರಾವಣವಿಜಯಂ’ ಸಾಹಿತ್ಯ ಹಾಗೂ ಪ್ರದರ್ಶನ ದೃಷ್ಟಿಯಿಂದ ಉತ್ತಮವಾದ ಒಂದು ಆಟಕಥೆಯೆನಿಸಿದೆ. ಇದರ ರಂಭಾ ಪ್ರವೇಶ ಪ್ರಸಿದ್ಧವಾಗಿದೆ. ಕಲ್ಲೂರು ನಂಬೂದಿರಿಪಾಡರ ‘ಬಾಲಿವಿಜಯಂ’ ಕಲ್ಲಕುಳಂಗರ ರಾಘವ ಪಿಶಾರಡಿಯ ‘ರಾವಣೋದ್ಭವ’, ಪಾಲಕಾಡ್ ಬಾಲಕವಿ ರಾಮಶಾಸ್ತ್ರಿಗಳ ‘ಬಾಣಯುದ್ಧ’, ಪಾಲಕಾಡು ಅಮೃತ ಶಾಸ್ತ್ರಿಗಳ ‘ಲವಣಾಸುರವಧೆ’, ವಯಸ್‌ಕರ ಮೂಸಸ್‌ ಅವರ ‘ದುರ್ಯೋಧನವಧೆ’, ಮುರಿಙೂರು ಶಂಕರ ಪೋಟ್ಟಿಯ ‘ಕುಚೇಲವೃತ್ತಂ’ ಎಂಬ ಆಟಕಥೆಗಳು ಪ್ರಸಿದ್ಧವಾಗಿವೆ.

ಆಧುನಿಕ ಕಾಲ

ಇಪ್ಪತ್ತನೇ ಶತಮಾನದ ಆರಂಭದಲ್ಲಿ ಉಳಿದ ಅನೇಕ ಕಲಾ ಪ್ರಕಾರಗಳ ಉಗಮದೊಂದಿಗೆ ಕಥಕಳಿ ಕ್ಷೀಣಿಸಿತು. ಇಂಗ್ಲಿಶ್‌ ಶಿಕ್ಷಣದಿಂದ ಅನೇಕ ಪ್ರಯೋಜನಗಳಾಗಿವೆ. ಆದರೆ ಪಾಶ್ಚಾತ್ಯ ಅನುಕರಣೆಯಿಂದ ಕಲೆ ಹಾಗೂ ಸಂಸ್ಕೃತಿಗಳನ್ನು ಮರೆಯುವಂತಾಯಿತು. ಇಂಗ್ಲಿಶ್‌ ಶಿಕ್ಷಣದ ಪ್ರಚಾರವು ಕಥಕಳಿಯ ಬೆಳವಣಿಗೆಗೆ ಪ್ರತಿಕೂಲವಾಯಿತು. ಇದೇ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದ ನಾಟಕ ಹಾಗೂ ಸಿನಿಮಾ ಸಾಮಾನ್ಯ ಜನರಿಗೆ ಪ್ರಿಯವಾಯಿತು. ಒಳ್ಳೆಯ ಕಥಕಳಿ ಕಲಾವಿದನಾಗಬೇಕಾದರೆ ಅನೇಕ ವರ್ಷಗಳ ಕಠಿಣ ಅಭ್ಯಾಸ ಹಾಗೂ ಪ್ರಯತ್ನ ಬೇಕು. ಕಲಾವಿದರೂ ಕಥಕಳಿಯನ್ನು ಬಿಟ್ಟು ನಾಟಕ ಹಾಗೂ ಸಿನಿಮಾ ಕಡೆಗೆ ವಾಲಿದರು. ಪ್ರಸಿದ್ಧ ಕಥಕಳಿ ಸಂಸ್ಕೃತ ಬಾಹುಳ್ಯದಿಂದ ಕೂಡಿದ್ದು, ಅದನ್ನು ಅರ್ಥಮಾಡಲು ಆಧುನಿಕ ಸಹೃದಯರಿಗೆ ಸಾಮರ್ಥ್ಯ ಕಡಿಮೆಯಾಯಿತು. ಕಥಕಳಿಯನ್ನು ಆಸ್ವಾದಿಸಲು ಪೌರಾಣಿಕ ಸಾಹಿತ್ಯ. ಸಂಗೀತ, ಕೈ ಮುದ್ರೆಗಳು, ರಸಭಾವಾದಿಗಳು, ತಾಳಮೇಳಗಳು ಹಾಗೂ ಕಲೆಯ ಅನೇಕ ಅಂಶಗಳನ್ನು ಅರಿತುಕೊಂಡಿರಬೇಕು. ಇಷ್ಟು ಕಷ್ಟಪಟ್ಟು ಒಂದು ಕಲೆಯನ್ನು ಆಸ್ವಾದಿಸುವ ಸಹನೆ ಸಾಮಾನ್ಯ ಜನರಿಗಿಲ್ಲ. ಆದುದರಿಂದ ಅವರು ಕಷ್ಟವಿಲ್ಲದೆ ಸಂತೋಷ ಪಡೆಯುವ ಕಲೆಗಳಿಗೆ ಮಾರು ಹೋದರು. ಹೀಗೆ ಅನೇಕ ಕಾರಣಗಳಿಂಧ ಕಥಕಳಿ ಮಧ್ಯಕಾಲದಲ್ಲಿ ಜನಪ್ರಿಯತೆಯನ್ನು ಕಳೆದುಕೊಂಡಿತು.

ಇಂದಿನ ಸ್ಥಿತಿ

ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ಹೊತ್ತಿಗೆ ಕಥಕಳಿಯ ಕಷ್ಟಕಾಲ ಮುಗಿಯಿತೆಂದು ಹೇಳಬಹುದು. ಇಂದು ಕಥಕಳಿಗೆ ತುಂಬ ಕೀರ್ತಿ ಹಾಗೂ ಪ್ರಸಿದ್ಧಿ ಇದೆ. ಜಗತ್ತಿನಾದ್ಯಂತ ಪ್ರಚಾರವಿರುವ ಕೇರಳದ ಏಕೈಕ ಕೇರಳೀಯ ಪ್ರದರ್ಶನ ಕಲೆ ಕಥಕಳಿ. ರವೀಂದ್ರನಾಥ ಠಾಗೂರ್, ಜವಾಹರಲಾಲ್‌ ನೆಹರು, ಸರೋಜಿನಿ ನಾಯ್ಡು ಮೊದಲಾದವರು ಕಥಕಳಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ದೆಹಲಿಯಲ್ಲಿ ಅಂತಾರಾಷ್ಟ್ರೀಯ ಕಥಕಳಿ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಯುರೋಪ್‌, ಅಮೆರಿಕಾ, ರಷ್ಯಾ, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಕಥಕಳಿಗೆ ಪ್ರೇಕ್ಷಕರ ಸಂಖ್ಯೆ ಸಾಕಷ್ಟಿದೆ. ಮಹಾಕವಿ ವಳ್ಳತೋಳ್‌ ನಾರಾಯಣ ಮೆನೋನ್‌ ಕಥಕಳಿಯ ಪ್ರಸಿದ್ಧಿಗೆ ಮುಖ್ಯ ಕಾರಣರು. ಅವರು ಚೆರುತುರುತ್ತಿಯಲ್ಲಿ ಸ್ಥಾಪಿಸಿದ ಕೇರಳ ಕಲಾಮಂಡಲಂ ಎಂಬ ಸಂಸ್ಥೆಯ ಕಥಕಳಿಗೆ ಜೀವವನ್ನು ತುಂಬಿತು. ವಿದೇಶಿಯರಾದ ಅನೇಕ ಕಲಾಪ್ರೇಮಿಗಳು ಕಲಾ ಮಂಡಲಕ್ಕೆ ಬಂದು ಕಥಕಳಿಯನ್ನು ನೋಡಿ, ಆಸ್ವಾದಿಸಿ, ಅದರ ಅಭಿಮಾನಿಗಳಾದರು.

ಕಥಕಳಿಯ ಪ್ರಗತಿಗಾಗಿ ತಿರುವನಂತಪುರದಲ್ಲಿ ತೀವ್ರ ಪ್ರಯತ್ನವನ್ನು ನಡೆಸಿದವರು ಪಿ.ಕೃಷ್ಣನ್‌ ತಂಬಿ. ಈ ಕಲೆಯ ಸೌಂದರ್ಯಕ್ಕೆ ಅಪಾಯವಾಗದ ರೀತಿಯಲ್ಲಿ ಆಧುನಿಕ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಅವರು ಕೆಲವು ಆಟಕಥೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ‘ತಾಟಕ ವಧ’ ಪ್ರಸಿದ್ಧವಾಗಿದೆ. ಮೊತ್ತಮೊದಲು ಒಂದು ಕಥಕಳಿ ಕ್ಲಬ್‌ ಆರಂಭಿಸಿದವರು ಕೃಷ್ಣನ್‌ ತಂಬಿ.

ಕಥಕಳಿಯ ಅಸ್ತಿತ್ವ ಹಾಗೂ ಅಭಿವೃದ್ಧಿಗಾಗಿ ಮತ್ತು ಅಧ್ಯಯನಕ್ಕಾಗಿ ಕಾರ್ಯಾಚರಿಸುವ ಹಲವಾರು ಸಂಸ್ಥೆಗಳೂ, ವಿದ್ಯಾಲಯಗಳೂ” ಕೇರಳದಲ್ಲಿವೆ. ಅವುಗಳಲ್ಲಿ ಮುಖ್ಯವಾದುದು ಕೇರಳ ಕಲಾ ಮಂಡಲಂ. ಇರಿಂಜಾಲಕೂಡ ಉಣ್ಣಾಯಿ ವಾರಿಯರ್ ಸ್ಮಾರಕ ಕಲಾನಿಲಯ, ಕೋಟಕ್ಕಲ್‌ ಪಿಎಸ್‌ವಿ ನಾಟ್ಯ ಸಂಘ ಕೀರಿಕೋಡ್‌, ಸಮಸ್ತ ಕೇರಳ ಕಥಕಳಿ ವಿದ್ಯಾಲಯ, ಪೇರೂರು ಗಾಂಧಿ ಸೇವಾ ಸದನ, ತೃಪುಣಿಪುರ, ಆರ್ಎಲ್‌ವಿ ಸ್ಕೂಲ್‌, ತಿರುವನಂತಪುರದ ‘ಮಾರ್ಗಿ’ ಮೊದಲಾದ ಸಂಸ್ಥೆಗಳು ಕಥಕಳಿಯ ಇತರ ವಿದ್ಯಾಲಯಗಳು.

ಕಲಿಕೆ

ಪ್ರದರ್ಶನ ಕಲೆಯಾದ ಕಥಕಳಿಯಲ್ಲಿ ಭಾಗವಹಿಸುವ ಯಾವುದೇ ವ್ಯಕ್ತಿಗೆ ಅತ್ಯಗತ್ಯವಾದ ಸಿದ್ಧಿಯೇ ವೇಷ ಸೌಭಾಗ್ಯ. ವೇಷ ಸೌಂದರ್ಯವೇ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಧಾನ ಅಂಶ. ಅನಂತರವೇ ಅಭಿನಯ ಮುದ್ರೆಗಳ ಕುರಿತು ಯೋಚಿಸುತ್ತಾರೆ. ಕಲಾಪ್ರತಿಭೆ ಎಂಬುದು ಮುಖ್ಯವಾಗುತ್ತದೆ. ಅದು ಕೇವಲ ಪ್ರಯತ್ನದಿಂದ ಬರುವಂತದ್ದಲ್ಲ. ಪ್ರತಿಭೆ ಇಲ್ಲದವನ ಪ್ರದರ್ಶನ ನಿರಸವಾಗಿರುತ್ತದೆ. ಇಂತಹ ಪ್ರತಿಭಾವಂತ ಬಾಲಕರು ಮಾತ್ರ ಕಥಕಳಿ ಕಲಿಸಬಹುದು ಎಂಬುದು ವಿದ್ವಾಂಸರ ಅಂಬೋಣ.

ನಕ್ಷತ್ರ, ವಾರ, ತಿಥಿ ಮೊದಲಾದವುಗಳನ್ನು ಗಮನಿಸಿ ಒಳ್ಳೆಯ ಶುಭ ಮುಹೂರ್ತದಲ್ಲಿ ಕಥಕಳಿ ಕಲಿಕೆ ಆರಂಭವಾಗುತ್ತದೆ. ಬೆಳಿಗ್ಗೆ ಕಳರಿಯಲ್ಲಿ ಬೆಳಗುವ ದೀಪವನ್ನು ಸಾಕ್ಷಿಯಾಗಿಟ್ಟು, ದಕ್ಷಿಣೆ ಸ್ವೀಕರಿಸಿ, ಗುರು ಶಿಷ್ಯನಿಗೆ ‘ಕಚ್ಚೆ ಹಾಗೂ ಎಣ್ಣೆ’ ನೀಡುತ್ತಾನೆ. ಈ ಕಚ್ಚೆಕಟ್ಟಿನಿಂದ ಗುರು ಶಿಷ್ಯ ಸಂಬಂಧದ ಆರಂಭ. ಅನಂತರ ಶರೀರದಾರ್ಢ್ಯದ ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಾರೆ. ಅನಂತರ ನೃತ್ಯ ಪ್ರಕಾರಗಳಾದ ತೋಡಯಂ, ಪುರಪಾಡು. ಪಗುದಿ ಪುರಪಾಡು, ಮುದ್ರೆ. ಕಲಾಶ ಇತ್ಯಾದಿಗಳನ್ನು ಕಲಿಸುತ್ತಾರೆ.

ಹನ್ನೆರಡು ವರ್ಷ ಪ್ರಾಯದ ಸುಮಾರಿಗೆ ಕಲಿಕೆಯನ್ನು ಆರಂಭಿಸಬೇಕು. ಹಾಗಿದ್ದರೆ ಮಾತ್ರ ಸರಿಯಾದ ತರಬೇತಿಯನ್ನು ಪಡೆಯಬಹುದು. ತಜ್ಞ ಗುರುವಿನ ಆಶ್ರಯದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಇದಕ್ಕೆ ತರಬೇತಿ ಬೇಕಾಗುತ್ತದೆ.

ಪ್ರವೇಶ ಅರಿತುಕೊಂಡರೆ ಸಣ್ಣ ಪದವನ್ನು ಹೇಳಿ ‘ಅರಂಗೇಟ್ರಂ’ ನಡೆಸಬಹುದು. ರಂಗ ಪ್ರವೇಶಕ್ಕೆ ಸಾಮಾನ್ಯವಾಗಿ ಕಡಿಮೆ ಭಾರದ ವೇಷಭೂಷಣಗಳ ಶ್ರೀ ಕೃಷ್ಣನ ಪಾತ್ರವನ್ನು ಧರಿಸುವುದು ವಾಡಿಕೆ. ಅನಂತರ ಹಂತ ಹಂತವಾಗಿ ಕಥಕಳಿಯ ಇತರ ನೃತ್ಯಾದಿಗಳನ್ನೆಲ್ಲ ಕಲಿತು ಬೇರೆ ಬೇರೆ ವೇಷಗಳನ್ನು ಮಾಡುತ್ತಾರೆ.

ಪಚ್ಚೆ, ಕತ್ತಿ, ಕರಿ, ತಾಡಿ, ಮಿನುಕ್ಕು ಎಂದು ಕಥಕಳಿ ವೇಷಗಳನ್ನು ವರ್ಗೀಕರಿಸಿರುವಂತೆ ಕುಟ್ಟಿತರಂ, ಇಡತರಂ, ಆದ್ಯವಸಾನಂ ಎಂಬ ವಿಭಾಗ ಕ್ರಮವೂ ಇದೆ. ಇದು ಕಥಾಪಾತ್ರಗಳ ಚೊಲ್ಲಿಯಾಟ, ಅಭಿನಯಗಳ ಹಿನ್ನೆಲೆಯಲ್ಲಿಯೇ ಹೊರತು ಪಾತ್ರಗಳ ಸ್ಥಾನಮಾನಗಳ ಹಿನ್ನೆಲೆಯಲ್ಲಿ ಅಲ್ಲ. ದೇವೇಂದ್ರನು ಇಡತರವಾದರೆ ಅವನ ಮಗನಾದ ಅರ್ಜುನ ಆದ್ಯವಸಾನಂ. ಆದರೆ ಕಥಕಳಿಯ ದುರ್ಯೋಧನ, ಕೃಷ್ಣ ಕುಟ್ಟಿತರವಾಗಿವೆ. ಮಹಾರಾಣಿ ಸುದೇಷ್ಣೆ ಕುಟ್ಟಿತರವೂ, ಆಕೆಯ ದಾಸಿಯಾಗಿ ಬರುವ ಸೈರಂಧ್ರಿ ಆದ್ಯವಸಾನವೂ ಆಗುವರು.

ಕಥಕಳಿಯ ಸಂವಹನ ಮಾಧ್ಯಮ ಹಸ್ತಮುದ್ರೆಗಳಾಗಿವೆ. ೨೪ ಮೂಲಮುದ್ರೆಗಳು, ಅದರ ಜನ್ಯಮುದ್ರೆಗಳೂ. ಸಂಯುತ. ಅಸಂಯುತ, ಮಿಶ್ರ, ಸಮಾನ ಇವುಗಳೆಲ್ಲ ಲಕ್ಷಣ ಗ್ರಂಥವಾದ ಹಸ್ತಲಕ್ಷಣ ದೀಪಿಕೆಯಲ್ಲಿವೆ.

ಕಲಾ ಸರ್ವಸ್ವ
ಕಥಕಳಿಯು ಸುಂದರವಾದ ಅನೇಕ ಕಲೆಗಳ ಸಮ್ಮಿಲನ, ಸಂಗೀತ, ಸಾಹಿತ್ಯ, ನಾಲ್ಕು ವಿಧದ ಅಭಿನಯಗಳು, ನೃತ್ಯಪ್ರಕಾರಗಳು, ವಾದ್ಯ, ಚಿತ್ರಕಲೆ ಮೊದಲಾದವುಗಳೆಲ್ಲಾ ಕಥಕಳಿಯ ಅಂಗಗಳಾಗಿವೆ. ಈ ಅಂಗಗಳ ಕುರಿತು ಅವಲೋಕಿಸಬಹುದು.

ಸಂಗೀತ

ಯಕ್ಷಗಾನದಲ್ಲಿ ಯಂತೆ ಕಥಕಳಿ ಹಾಡುಗಳಿಗೂ ಸಾಮಾನ್ಯವಾಗಿ ‘ಪದ’ ಎನ್ನುತ್ತಾರೆ. ಕಥಕಳಿ ಪದಗಳಲಿಗೆ ಸಮಗ್ರವಾದ, ಸರಸವಾದ ಸಂಗೀತ ಪರಂಪರೆಯ ಹಿನ್ನೆಲೆ ಇದೆ. ಕೃಷ್ಣನಾಟದಲ್ಲಿ ಸುಮಾರು ಎಪ್ಪತ್ತರಷ್ಟು ಗೀತೆಗಳಿವೆ. ಸಂದರ್ಭಾನುಸಾರವಾಗಿ ಸುಮಾರು ೨೫ ರಾಗಗಳನ್ನು ಕೃಷ್ಣನಾಟದಲ್ಲಿ ಪ್ರಯೋಗಿಸುತ್ತಾರೆ. ಇವುಗಳ ಹೊರತಾಗಿ ರಾಮನಾಟದಲ್ಲಿ ೧೬ ಹೆಚ್ಚುವರಿ ರಾಗಗಳ ಬಳಕೆಯಿದೆ. ಕೋಟ್ಟಯಂ ಕಥೆಗಳಲ್ಲಿ ಕೃಷ್ಣನಾಟಂ ಹಾಗೂ ರಾಮನಾಟಗಳಲ್ಲಿ ಇಲ್ಲದಿರುವ ಆರು ಪ್ರತ್ಯೇಕ ರಾಗಗಳನ್ನು ಅಳವಡಿಸಲಾಗಿದೆ. ರಸ, ಭಾವ, ಪಾತ್ರಗಳ ಸ್ವಭಾವ, ಕಾಲಗಳನ್ನು ಸಂಯೋಜಿಸುವ ರೀತಿಯಲ್ಲಿ ಇಷ್ಟು ವೈವಿಧ್ಯ ಪೂರ್ಣರಾಗಗಳನ್ನು ಬಳಸುವ ಕಲೆ ಬೇರೆ ಇಲ್ಲ. ಹಾಡುಗಳಲ್ಲಿ ರಾಗವಾಗಿ (ಸೋಪಾನ ರೀತಿ) ಹಾಡುತ್ತಾರೆ. ಇದು ಕೇರಳೀಯ ಶೈಲಿಯಾಗಿದೆ. ಬೇರೆ ಬೇರೆ ಕಾಲಗಳಲ್ಲಿ ಸಂದರ್ಭೋಚಿತವಾಗಿ ಹಾಡಬೇಕು. ಹಿಮ್ಮೇಳ ಹಾಗೂ ವಾದನದಲ್ಲಿ ಔಚಿತ್ಯಪ್ರಜ್ಞೆ ಇರಬೇಕು. ಅಭಿನಯ, ನಾಟ್ಯಗಳಿಗೆ ಪೂರಕವಾಗಿ ಹಾಡಬೇಕು. ಒಟ್ಟಿನಲ್ಲಿ ಹೇಳುವುದಿದ್ದರೆ ಭಾಗವತನೇ ಕಥಕಳಿಯ ಸೂತ್ರಧಾರ, ನಿರ್ದೇಶಕ. ಹಾಡುಗಾರನು ರಾಗತಾಳಗಳೊಂದಿಗೆ ಚೆನ್ನಾಗಿ ಹಾಡಿದರೆ ಪಾತ್ರಧಾರಿಗಳ ಅಭಿನಯ ಚೆನ್ನಾಗಿರುತ್ತದೆ. ಸಂಗೀತ ಕಲೆಯು ಕಥಕಳಿಯಲ್ಲಿ ಸಾರ್ಥಕತೆಯನ್ನು ಪಡೆದಿದೆ.

ಸಾಹಿತ್ಯ

ಶ್ಲೋಕಗಳು ಹಾಗೂ ಗೀತೆಗಳಿಂದ ಕೂಡಿದ ಸಂಗೀತಕಾವ್ಯವನ್ನು ಮೊದಲಿಗೆ ರಚಿಸಿದವನು ಜಯದೇವಕವಿ ಎಂದು ಹೇಳಲಾಗುತ್ತದೆ. ತೊಂಬತ್ತಾರು ಶ್ಲೋಕ ಹಾಗೂ ಇಪ್ಪತ್ನಾಲ್ಕು ಗೀತಗಳಿರುವ ಜಯದೇವನ ಗೀತಗೋವಿಂದವೇ ಮೊದಲ ಆಟಕಥಾ ಸಾಹಿತ್ಯವೆಂದು ಹೇಳಲಾಗಿದೆ.

ವಾಗ್ದೇವತಾ ಚರಿತ ಚಿತ್ರಿತ ಚಿತ್ತಸತ್ಮಾ
ಪದ್ಮಾವತೀ ಚರಣಚಾರಣ ಚಕ್ರವರ್ತಿ
ಶ್ರೀ ವಾಸುದೇವ ರತಿಕೇಳಿಕಥಾಕ ಸಮೇತ
ಮೇತಂ ತನೋದಿ ಜಯದೇವ ಕವಿ; ಪ್ರಬಂಧ

ಎಂಬ ‘ಗೀತಗೋವಿಂದ’ದ ಪದ್ಯದಲ್ಲಿ ‘ಕೇಳಿಕಥಾ’ ಎಂದರೆ ಆಟಕಥಾ ಪ್ರಬಂಧವಾಗಿರಬೇಕೆಂದು ಹೇಳಲಾಗಿದೆ. ಜಯದೇವ ಕವಿ ಹಾಡುತ್ತಿದ್ದಂತೆ ಪದ್ಮಾವತಿ ನಾಟ್ಯವಾಡುತ್ತಿದ್ದಳೆಂದು ಈ ಪದ್ಯದಿಂದ ವೇದ್ಯವಾಗುತ್ತದೆ. ಗೀತ ಗೋವಿಂದದ ಈ ಅಭಿನಯವು ಅಷ್ಟಪದಿಯಾಟ ಎಂಬ ಹೆಸರಿನಲ್ಲಿ ಹಿಂದೆ ಕೇರಳದಲ್ಲಿ ಪ್ರಚಾರದಲ್ಲಿತ್ತೆಂದೂ ಅದುವೇ ಮುಂದೆ ಕೃಷ್ಣನಾಟಂ ಪ್ರಕಾರದ ಹುಟ್ಟಿಗೆ ಕಾರಣವಾಯಿತೆಂದೂ ವಿದ್ವಾಂಶರು ಹೇಳುತ್ತಾರೆ. ಗೀತಗೋವಿಂದ ಹಾಗೂ ‘ಕೃಷ್ಣಗೀತೆ’ಯ ಸಾದೃಶ್ಯ, ಕಥಕಳಿಯ ಮೇಳಪದದಲ್ಲಿ ಬಳಸುವ ಕೆಲವು ಶ್ಲೋಕಗಳಿಗೂ ಈ ವಿಚಾರಕ್ಕೆ ಪುಷ್ಟಿ ನೀಡುತ್ತವೆ. ಗೀತಗೋವಿಂದದಲ್ಲಿರುವುದು ಅಷ್ಟಪದಿಗಳು. ಅಷ್ಟಪದಿಗಳು ಹಾಡುವುದಕ್ಕೆ ಹಾಗೂ ನೃತ್ಯವಾಡುವುದಕ್ಕೆ ಯೋಗ್ಯವಾಗಿವೆ. ಕೇರಳದಲ್ಲಿ ಮುನ್ನೂರು ವರ್ಷಗಳ ಹಿಂದೆ ಅಷ್ಟಪದಿಯಾಟ ಇದ್ದಿದ್ದರೆ ಅದುವೇ ಕೃಷ್ಣನಾಟದ ಉಗಮಕ್ಕೆ ಕಾರಣವಾಗಿರಬಹುದು. ಕಲ್ಲಿಕೋಟೆಯ ಮಾನವೇದನ್‌ ತಂಬುರಾನ್‌ ರಚಿಸಿದ ‘ಕೃಷ್ಣಗೀತೆ’ಯಲ್ಲಿ ಮುನ್ನೂರರಷ್ಟು ಪದ್ಯಗಳೂ, ಎಪ್ಪತ್ತರಷ್ಟು ಗೀತಿಕೆಗಳೂ, ಒಂದು ದಂಡಕವೂ ಇದೆ. ಕೃಷ್ಣಾವತಾರ, ಕಾಳಿಮರ್ದನ, ರಾಸಕ್ರೀಡೆ, ಕಂಸವಧೆ, ಸ್ವಯಂವರ, ಬಾಣಾಸುರ ಕಾಳಗ, ಅನೇಕ ಅಸುರರ ವಧೆ, ಸ್ವರ್ಗಾರೋಹಣ, ಹೀಗೆ ಎಂಟು ವಿಭಾಗಮಾಡಿ ಎಂಟು ದಿವಸಗಳಲ್ಲಿ, ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗಿದೆ. ಭಾಗವತದ ದಶಮಸ್ಕಂಧದ ಕಥೆಯನ್ನು ಆಧರಿಸಿ ಮಧ್ಯ ಕೇರಳದಲ್ಲಿ ಕೃಷ್ಣನಾಟಂ ಹೀಗೆ ಆರಂಭವಾಗಿದೆ ಎಂಬ ಸುದ್ದಿ ತಿಳಿದು ಕೊಟ್ಟಾರಕರ ತಂಬುರಾನ್‌ ರಾಮಾಯಣದ ಕಥೆಯನ್ನು ಆಧರಿಸಿ, ಶ್ಲೋಕ ಹಾಗೂ ಪದ್ಯಗಳನ್ನು ರಚಿಸಿ ರಾಮನಾಟಂ ಎಂಬ ಕಲಾಪ್ರಕಾರವನ್ನು ಸೃಷ್ಟಿಸಿದರು. ಪುತ್ರಕಾಮೇಷ್ಟಿ, ಸೀತಾಸ್ವಯಂವರ, ಪಟ್ಟಾಭಿಷೇಕ, ಖರಾಸುರ ವಧೆ, ವಾಲಿವಧೆ, ತೋರಣಯುದ್ಧ, ಸೇತುಬಂಧನ, ರಾಮರಾವಣ ಯುದ್ಧ ಹೀಗೆ ರಾಮನಾಟದಲ್ಲಿಯೂ ಪ್ರಸಂಗವನ್ನು ಎಂಟಾಗಿ ವಿಭಜಿಸಲಾಗಿದೆ. ಮಣಿಪ್ರವಾಳ ಶೈಲಿಯಲ್ಲಿ ಸಾಹಿತ್ಯ ರಚಿಸಲಾಗಿದೆ. ಆದುದರಿಂದ ಜನಸಾಮಾನ್ಯರಿಗೂ ಅರ್ಥವಾಗುವಂತಿದೆ. ಸಾಹಿತ್ಯಕ ಅಂಶ ಕಡಿಮೆಯಾದರೂ ಆಡುವುದಕ್ಕೆ ಬೇಕಾದ ಪ್ರಸಾದ ಗುಣ ಅದರಲ್ಲಿದೆ. ಆಟಕಥಾ ಸಾಹಿತ್ಯದಲ್ಲಿ ಇಷ್ಟು ದೀರ್ಘವಾದ ಕೃತಿ ಇನ್ನೊಂದಿಲ್ಲ. ಸಾಮೂದಿರಿ ಹಾಡಿದ ಕೃಷ್ಣಕಥೆ ಹಾಗೂ ತಿರುವಾಂಕೂರು ಮಹಾರಾಜನ ರಾಮಕಥೆಯು ಪ್ರದರ್ಶನಗೊಂಡಾಗ, ದಕ್ಷಿಣ ಕೋಟ್ಟಯಂನಲ್ಲಿ ಕೇರಳವರ್ಮರಾಜನ ಅಳಿಯ ಭಾರತ ಕಥೆಯನ್ನು ಸಿದ್ಧಪಡಿಸಿದರು. ಬಕಾಸುರವಧೆ. ಕಿಮ್ಮೀರ ವಧೆ, ಕಾಲಕೇಯವಧೆ, ಕಲ್ಯಾಣ ಸೌಗಂಧಿಕ ಎಂಬ ನಾಲ್ಕು ಕಥೆಗಳೇ ಕೋಟ್ಟಯಂ ಕಥೆಗಳು. ಇವುಗಳಲ್ಲಿ ಶ್ಲೋಕಗಳನ್ನು ಸಂಸ್ಕೃತದಲ್ಲಿ ಹಾಗೂ ಪದಗಳನ್ನು ಮಣಿಪ್ರವಾಳ ಶೈಲಿಯ ಮಲಯಾಳದಲ್ಲಿ ರಚಿಸಲಾಗಿದೆ. ಕೃಷ್ಣನಾಟದ ರಾಸಕ್ರೀಡೆಯಲ್ಲಿರುವಂತೆ ಕಾಲಕೇಯ ವಧೆಯಲ್ಲಿ ಒಂದು ದಂಡಕವಿದೆ. ಸಾಹಿತ್ಯದ ಶಕ್ತಿ, ಅಭಿನಯ ಸಾಧ್ಯತೆ ಹಾಗೂ ಔಚಿತ್ಯ ಪ್ರಜ್ಞೆಗಳಿಂದ ಈ ಕೋಟ್ಟಯಂ ಕಥೆಗಳು ಕೃಷ್ಣನಾಟ ಸಾಹಿತ್ಯವನ್ನು ಮೀರಿನಿಂತಿವೆ. ಹದಿನೆಂಟನೆಯ ಶತಮಾನದಲ್ಲಿ ಮಧ್ಯ, ದಕ್ಷಿಣ ಹಾಗೂ ಉತ್ತರ ಕೇರಳದಲ್ಲಿ ಒಂದೊಂಧು ಕಥಕಳಿ ತಂಡಗಳು ಹುಟ್ಟಿಕೊಂಡುವು. ಈ ಕಥಕಳಿ ತಂಡಗಳು ಪ್ರದರ್ಶಿಸುವ ಆಟಕಥಾ ಸಾಹಿತ್ಯ, ವೇಷಭೂಷಣಗಳು, ಬಣ್ಣಗಾರಿಕೆಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಮಾಡಿಕೊಂಡರು. ಈ ಎಲ್ಲಾ ಪ್ರಕಾರಗಳಲ್ಲಿ ಕೃಷ್ಣನಾಟಂ ಮಾತ್ರ ಇಂದೂ ಅದೇ ಸ್ವರೂಪದಲ್ಲಿ ಉಳಿದುಕೊಂಡಿದೆ. ರಾಮನಾಟಂ ಮೊದಲಾದ ಕಲಾಪ್ರಕಾರಗಳು ಕಾಲಕಾಲಕ್ಕೆ ಅನೇಕ ಪರಿಷ್ಕಾರಗಳಿಗೆ ಒಳಗಾಗಿ ತನ್ನ ಮೂಲಸ್ವರೂಪವನ್ನು ಕಳೆದುಕೊಂಡಿವೆ.

ಈ ನೃತ್ಯ ವೈವಿಧ್ಯಗಳಿಗೆ ಹಾಗೂ ವೇಷಭೂಷಣಗಳಿಗೆ ಕೃಷ್ಣನಾಟಂ ಮಹತ್ವ ನೀಡುತ್ತದೆ. ಗೋಪಿಕಾ ಸ್ತ್ರೀಯರು ಬಾಲಕೃಷ್ಣನ್ನು ಎತ್ತಿಕೊಂಡು ಮುದ್ದಾಡುವ ಪ್ರಸಂಗ, ರಾಸಕ್ರೀಡೆಯಲ್ಲಿ ಶ್ರೀ ಕೃಷ್ಣ ಗೋಪಿಕೆಯರೊಂದಿಗೆ ಸಲ್ಲಾಪ ನಡೆಸುವ ಪ್ರಸಂಗಗಳ ಮಂಡಲ ನೃತ್ಯಗಳು ಅತ್ಯಂತ ಮನೋಹರವಾಗಿವೆ. ಕಾಳಿಮರ್ದನ ಪ್ರಸಂಗದಲ್ಲಿ ಅನೇಕ ವೈವಿಧ್ಯತೆ ಹಾಗೂ ವೈಶಿಷ್ಟ್ಯಗಳಿವೆ. ಪಾರಿಜಾತ ಪುಷ್ಟ ಅಪಹರಣ ಪ್ರಸಂಗದಲ್ಲಿ ಸತ್ಯಭಾಮೆಯ ಜೊತೆಯಲ್ಲಿ ಗರುಡನ ಮೇಲೇರಿ ಸ್ವರ್ಗಕ್ಕೆ ಹೋಗುವ ಶ್ರೀಕೃಷ್ಣ, ಬಾಣಾಸುರ ಕಾಳಗದಲ್ಲಿ ಬಾಣನ ಅರಮನೆ ಕಾವಲಿಗೆ ನಿಂತಿದ್ದ ಪರಮೇಶ್ವರ ಶ್ರೀಕೃಷ್ಣನನ್ನು ಎದುರುಗೊಳ್ಳುವುದು, ಸಂತಾನ ಗೋಪಾಲ ಪ್ರಸಂಗದಲ್ಲಿ ವೈಕುಂಠ ದೃಶ್ಯ ಮೊದಲಾದ ರಂಗಗಳು ಕೃಷ್ಣನಾಟಂ ಕಲೆಯ ವೈಶಿಷ್ಟ್ಯಗಳಾಗಿವೆ. ಆದರೆ ಕೃಷ್ಣನಾಟದಲ್ಲಿ ಹಸ್ತಾಭಿನಯ ಕಡಿಮೆಯಿದೆ. ಕಥಕಳಿಯಂತೆ ಕೈಮುದ್ರೆಗಳಿಂದ ಅಭಿನಯಿಸುವ ರೀತಿ ಇದರಲ್ಲಿ ಇಲ್ಲವೆಂದೇ ಹೇಳಬಹುದು. ವೇಷಗಳಲ್ಲಿ ಬ್ರಹ್ಮ, ಜಾಂಬವ, ಯಮ, ನರಕಾಸುರ, ಮುರಾಸುರ, ಘಂಟಾಕರ್ಣ, ಶಿವಗಣಗಳು ಮೊದಲಾದ ಪಾತ್ರಗಳಿಗೆ ಮುಖವಾಡಗಳನ್ನು ಧರಿಸುವ ಕ್ರಮವಿದೆ. ಕೃಷ್ಣನಾಟಂ ಸಾಹಿತ್ಯ ಅಂದರೆ ಕೃಷ್ಣಗೀತೆಯು ಸಂಸ್ಕೃತ ಭಾಷೆಯಲ್ಲಿದೆ. ಅಲ್ಲದೆ ಅದರ ಅಭಿನಯದಲ್ಲಿ ಹಸ್ತಾಭಿನಯ, ಮುದ್ರೆಗಳಿಗೆ ಅವಕಾಶವಿಲ್ಲದಿರುವುದರಿಂದ ಈ ಕಲಾ ಪ್ರಕಾರವನ್ನು ಅನುಸರಿಸುವುದಕ್ಕೆ ಮತ್ತು ಪರಿಷ್ಕರಿಸುವುದಕ್ಕೆ ಯಾರೂ ಪ್ರಯತ್ನಿಸಿಲ್ಲ.

ಅಭಿನಯ

ಕಲಾವಿದ ಪಾತ್ರವನ್ನು ತನ್ನಲ್ಲಿ ಆವಾಹಿಸಿಕೊಂಡು, ಪಾತ್ರದ ಔಚಿತ್ಯವನ್ನರಿತು ಅಭಿವ್ಯಕ್ತಿಗೊಳಿಸುವ ಭಾವವೇ ಅಭಿನಯ. ರಸಭಾವಗಳನ್ನು ಸ್ಪಷ್ಟವಾಗಿ ಪ್ರಕಟಿಸುವುದು ಅಭಿನಯದ ಮೂಲಕ. ನಾಟ್ಯಾಂಶಗಳಲ್ಲಿ ಅತ್ಯಂತ ಪ್ರಧಾನವಾದುದೇ ಅಭಿನಯ. ನಾಟ್ಯಕೃತಿಗಳ ಜೀವ ರಸವಾಗಿದ್ದರೂ ಅದಕ್ಕೆ ರೂಪವನ್ನು ನೀಡುವುದು ಅಭಿನಯ. ಗೀತವಾದ್ಯಗಳಿಗಿಂತ ರಸಸ್ಫುರಣೆಗೆ ಶಕ್ತಿ ನೀಡುವುದು ಹಾಗೂ ಅದನ್ನು ಪ್ರಕಟಗೊಳಿಸುವುದು ಅಭಿನಯದ ಮೂಲಕವೇ ಆಗಿದೆ.

ಅಭಿನಯಗಳಲ್ಲಿ ನಾಲ್ಕು ವಿಧ. ಅಂಗ ಪ್ರತ್ಯಂಗಗಳ ಕ್ರಿಯೆಗಳಿಗೆ ‘ಆಂಗಿಕ’ ಎಂದು ಹೆಸರು..ಮಾತುಗಳ ಬಳಕೆಗೆ ‘ವಾಚಿಕ’ ಎನ್ನುವರು. ವೇಷಾಲಂಕಾರಗಳಿಗೆ ‘ಆಹಾರ್ಯ’ ಹಾಗೂ ಮನಸ್ಸಿನ ಅನುಭಾವ ಪ್ರಕಟಣೆಗೆ ‘ಸಾತ್ವಿಕ’ ಎಂದು ಹೇಳುವರು. ತಲೆ, ತೋಳು, ಸೊಂಟ, ಪಾದ, ಕೊರಳು, ಕೈ, ಬೆನ್ನು, ಹೊಟ್ಟೆ, ತೊಡೆ, ಮೊಣಕಾಲು, ಕಣ್ಣು, ಹುಬ್ಬು ಮೂಗು, ತುಟಿಗಳು, ಕೆನ್ನೆ, ಗಲ್ಲ ಮೊದಲಾದ ಅಂಗ ಪ್ರತ್ಯಂಗಗಳ ಕ್ರಿಯೆಯೇ ಆಂಗಿಕಾಭಿನಯ ಎನಿಸಿಕೊಳ್ಳುತ್ತದೆ. ಸಂಭಾಷಣೆಗೆ ವಾಚಿಕವೆಂದು ಹೆಸರು. ಕಿರೀಟ, ಕುಂಡಲ, ಹಾರ, ಕೇಯೂರ ಮೊದಲಾದ ಅಲಂಕಾರಗಳಿಗೆ ಆಹಾರ್ಯವೆಂದು ಹೆಸರು. ಆಹಾರ್ಯದಲ್ಲಿ ಪುಸ್ತಂ, ಅಲಂಕಾರ, ಅಂಗರಚನೆ, ಸಜೀವ ಎಂದು ನಾಲ್ಕು ವಿಧವಿದೆ. ಅದರಲ್ಲಿ ಪ್ರತಿರೂಪ ನಿರ್ವಹಣೆಯೇ ‘ಪುಸ್ತಂ’. ಕಿರೀಟಾದಿ ವೇಷಭೂಷಣಗಳ ಬಳಕೆ ‘ಅಲಂಕಾರ’. ಮುಖದ ಪ್ರಸಾಧನಕ್ಕೆ ‘ಅಂಗರಚನೆ’ ಎನ್ನುವರು. ಯಾವುದಾದರೂ ಪ್ರಾಣಿಗಳನ್ನು ಜೀವದೊಂದಿಗೆ ರಂಗಕ್ಕೆ ತರುವುದನ್ನು ಸಜೀವ ಎಂದು ಹೇಳುತ್ತಾರೆ. ಮುಖವಾಡ, ಕೊಕ್ಕು, ರೆಕ್ಕೆ ಮೊದಲಾದ ಪರಿಕರಗಳ ಬಳಕೆಯೂ ಆಹಾರ್ಯಾಭಿನಯದಲ್ಲಿ ಸೇರುತ್ತದೆ. ಸ್ತಂಭನ, ಸ್ವೇದಾದಿಗಳ ಮನಸ್ಸಿನ ಭಾವಗಳು ಪ್ರಕಟಗೊಳ್ಳುವುದೇ ಸಾತ್ವಿಕಾಭಿನಯ.

ಮೇಲೆ ವಿವರಿಸಿದ ಚತುರ್ವಿಧ ಪ್ರಯೋಗಗಳಿಂದ ಉತ್ತಮ, ಮಧ್ಯಮ, ಅಧಮ ಪ್ರಕೃತಿಗಳ ಪಾತ್ರಗಳ ಗುಣಸ್ವಭಾವಗಳನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸುವುದಕ್ಕೆ ಅಭಿನಯವೆಂದು ಹೆಸರು.

ನೃತ್ಯ ವೈವಿಧ್ಯ

ನೃತ್ಯವು ಕಥಕಳಿಯ ಒಂದು ಪ್ರಧಾನ ಘಟಕವಾಗಿದೆ. ಒಳ್ಳೆಯ ಆರೋಗ್ಯವಂತ ವ್ಯಕ್ತಿ ಶ್ರಮಪಟ್ಟು ಕಲಿತರೆ ಮಾತ್ರ ಈ ಕಲೆ ಒಲಿಯಲು ಸಾಧ್ಯ. ಕಥಕಳಿಯ ಜನಕರೆಂದು ಹೇಳಲಾಗುವ ತಂಬುರಾನ್‌ಗಳು ಕಳರಿ ವಿದ್ಯೆಯಲ್ಲಿ ನಿಪುಣರಾದ ತಮ್ಮ ಸೈನಿಕರನ್ನು ಕಥಕಳಿಗೆ ಆರಿಸುತ್ತಿದ್ದರಂತೆ. ಬಾಯಿತಾಳಗಳಿಗೆ ಹೆಜ್ಜೆ ಹಾಕಿ ಕಥಕಳಿಯ ನೃತ್ಯವನ್ನು ಅಭ್ಯಾಸ ಮಾಡಬೇಕು. ಕಥಕಳಿಯ ‘ಕಲಾಶ’ಗಳೆಂದರೆ ನೃತ್ಯದ ವೈವಿಧ್ಯಗಳಾಗಿವೆ. ದೀರ್ಘ ಕಾಲದ ಅಭ್ಯಾಸದ ಮೂಲಕ ಅವುಗಳನ್ನು ಕಲಿಯಬೇಕು. ಪ್ರತಿಯೊಂದು ತಾಳಕ್ಕೂ, ಪ್ರತಿ ಪದದ ಚರಣಕ್ಕೂ ಕಲಾಶಗಳಿವೆ. ಇಡಕಲಾಶಂ, ಎಡುತ್ತು ಕಲಾಶಂ, ಇರಟ್ಟಿ ಕಲಾಶಂ, ಅಷ್ಟಕಲಾಶಂ ಹೀಗೆ ಬೇರೆ ಬೇರೆ ಹೆಸರುಗಳಿವೆ. ಪ್ರವೇಶ, ಯುದ್ಧದ ಆವೇಶ, ಯುದ್ಧ, ‘ಚಾರಿನೃತ್ತ’ಗಳಿಗೆ ವಿಶೇಷವಾದ ನೃತ್ಯಗಳಿವೆ.

ಪುರಾಣಗಳಲ್ಲಿ ಕಂಡು ಬರುವ ವೈವಿಧ್ಯವಾದ ವಿರುದ್ಧ ಗುಣಗಳ ಪಾತ್ರಗಳನ್ನು ಕಥಕಳಿಯಲ್ಲಿ ಪ್ರಸ್ತುತಪಡಿಸಬೇಕಾಗಿದೆ. ಆದುದರಿಂದ ಆ ಪಾತ್ರಗಳ ನಿಜವಾದ ಆತ್ಮವಿಷ್ಕಾರ ಸಾಧಿಸಬೇಕಾದರೆ ಅಗಾಧವಾದ ಮತ್ತು ಸ್ಥಾಯಿಯಾದ ಅಭಿನಯ ಅಗತ್ಯವಾಗಿದೆ. ಇದಕ್ಕೆ ಹಲವಾರು ಪರಿಮಿತಗಳಿವೆ.

ವಾದ್ಯಗಳು

ಮದ್ದಳೆ, ಚೆಂಡೆ, ತಾಳ, ಚಕ್ರತಾಳಗಳು ಕಥಕಳಿಯ ಹಿಮ್ಮೇಳ ವಾದ್ಯಗಳು. ಈ ನಾಲ್ಕು ವಾದ್ಯಗಳೂ ಕೇರಳದ ವಿಶಿಷ್ಟವಾದ್ಯಗಳಾಗಿವೆ. ಈ ನಾಲ್ಕು ವಾದ್ಯಗಳು ಕೇರಳದ ದೇವಸ್ಥಾನಕ್ಕೆ ಸಂಬಂಧಿಸಿದವುಗಳು. ಕಥಕಳಿಗೆ ಬಹಳ ಹಿಂದೆ ಚೆಂಡೆ ಇದ್ದಿರಲಿಲ್ಲ. ಎರಡು ಮದ್ದಳೆಗಳನ್ನು ಉಪಯೋಗಿಸುತ್ತಿದ್ದರು. ಒಂದು ಶುದ್ಧ ಮದ್ದಳೆ, ಇನ್ನೊಂದು ತಪ್ಪು ಮದ್ದಳೆ. ಎರಡೂ ಮದ್ದಳೆಗಳ ಶಬ್ದಲ್ಲಿ ವ್ಯತ್ಯಾಸವಿದೆ. ಈಗ ಕಥಕಳಿಯಲ್ಲಿ ಬಳಸುವ ಮದ್ದಳೆಗೆ ಶುದ್ಧಮದ್ದಳೆ ಎಂದು ಹೆಸರು. ಕೃಷ್ಣನಾಟದಲ್ಲಿ ಇಂದಿಗೂ ಎರಡು ಬಗೆಯ ಮದ್ದಳೆಗಳ ಬಳಕೆಯಿದೆ. ಕಪ್ಲಿಂಗಾಡ್‌ ನಂಬೂದಿರಿ ಎಂಬವರು ಚೆಂಡೆ ಬಳಕೆಯನ್ನು ಆರಂಭಿಸಿದರು. ವೀರ ರೌದ್ರಾದಿ ರಸಗಳಿಗೆ ಚೆಂಡೆ ಮದ್ದಳೆಗಳು ಸಹಾಯ ಮಾಡುತ್ತವೆ. ಚೆಂಡೆಯ ನಾದ ಈ ರಸಗಳ ದೃಶ್ಯಗಳಿಗೆ ಗಾಂಭಿರ್ಯವನ್ನು ಒದಗಿಸುತ್ತದೆ. ಹಿಂದೆ ದೊಡ್ಡ ಗಾತ್ರದ ಮದ್ದಳೆ ಹಾಗೂ ಚೆಂಡೆಗಳನ್ನು ಬಳಸುತ್ತಿದ್ದರು. ಚೆಂಙಲ(ಜಾಗಟೆ) ಎಂಬುದು ಹಾಡುಗಾರನ ತಾಳ. ಕಥಕಳಿಯ ಹಾಡುಗಾರನಿಗೆ ‘ಪೊನ್ನಾನಿ’ ಎಂದು ಉತ್ತರ ಕೇರಳದಲ್ಲಿ ಹೇಳುತ್ತಾರೆ. ಜತೆಯಲ್ಲಿ ಹಾಡುವವನ ತಾಳವೇ ‘ಇಲತಾಳ’. ಇಡೀ ಹಿಮ್ಮೇಳಕ್ಕೆ ತಾಳ ಹಾಕಿ ದ್ರುತ, ಮಧ್ಯ, ವಿಳಂಬಿತ ಕಾಲಗಳನ್ನು ನಿಯಂತ್ರಿಸುವುದು ಹಾಡುಗಾರರೇ. ಕಥಾಪಾತರಗಳ ಅಟ್ಟಹಾಸ ಮೊದಲಾದ ಶಬ್ದ ಘೋಷಗಳನ್ನು ತಜ್ಞರಾದ ಹಿಮ್ಮೇಳದವರು ಕಲಾವಿದರ ಆಟಕ್ಕೆ ಸರಿಯಾಗಿ ಪ್ರಯೋಗಿಸಿ ಅವರ ಅಭಿನಯಕ್ಕೆ ಆವೇಶವನ್ನು ಹೆಚ್ಚಿಸುತ್ತಾರೆ. ಊಟಕ್ಕೆ ಹಲವು ಬಗೆಯ ವ್ಯಂಜನಗಳಿರುವಂತೆ, ನಾಟ್ಯಕಲೆಗೆ ಅದರಲ್ಲೂ ವಿಶೇಷವಾಗಿ ಕಥಕಳಿಗೆ ವಾದ್ಯಗಳು ಪೂರಕವಾಗಿವೆ.