ಚಿತ್ರಕಲೆ (ಬಣ್ಣಗಾರಿಕೆ)

ಚಿತ್ರಕಲೆಯೂ ಕಥಕಳಿಯ ಅಂಗವೇ ಆಗಿದೆ. ಪಾತ್ರಧಾರಿಗಳ ಮುಖವೇ ಚಿತ್ರದ ಭಿತ್ತಿ. ಮನಯೋಲ, ಚಾಯಿಲ್ಯಂ, ನೀಲ, ಮಸಿ (ಕಾಡಿಗೆ) ಬಳಸುವ ಬಣ್ಣಗಳು. ಈ ಮೂಲ ಬಣ್ಣಗಳನ್ನು ಪ್ರಮಾಣಬದ್ಧವಾಗಿ ಸೇರಿಸಿ ಅಥವಾ ಕಳೆದು ಉಳಿದ ಬಣ್ಣಗಳನ್ನು ತಯಾರಿಸುತ್ತಾರೆ. ಈ ಬಣ್ಣಗಳಿಂದ ಮುಖದಲ್ಲಿ ಮೂಡುವ ಬರವಣಿಗೆಗಳೂ, ಮುದ್ರೆಗಳೂ ಕಥಾ ಪಾತ್ರಗಳನ್ನು ಸೃಷ್ಟಿಸುತ್ತದೆ. ಮುಖದ ಬಣ್ಣಗಾರಿಕೆ ಚೆನ್ನಾಗಿರದಿದ್ದರೆ ಪಾತ್ರಧಾರಿ ಎಷ್ಟೇ ಪ್ರತಿಭಾವಂತನಾದರೂ ಪಾತ್ರಕ್ಕೆ ಜೀವ ತುಂಬಲು ಯಶಸ್ವಿಯಾಗಲಾರ. ಅಕ್ಕಿಹಿಟ್ಟಿನಿಂದ ಮುಖಕ್ಕೆ ಚುಟ್ಟಿ ಇಡುವುದು ಕಥಕಳಿ ವೇಷಗಳ ವೈಶಿಷ್ಟ. ಚುಟ್ಟಿ ಸಂಪ್ರದಾಯವನ್ನು ಕೂಡಿಯಾಟದಿಂದ ಸ್ವೀಕರಿಸಿದ್ದರೂ ಆಕೃತಿ ಹಾಗೂ ವಿಸ್ತಾರದಲ್ಲಿ ಕಥಕಳಿ ಪ್ರಕಾರವು ಅನೇಕ ಪರಿಷ್ಕಾರಗಳನ್ನು ಮಾಡಿದೆ. ಚುಟ್ಟಿ ಇಡುವುದಕ್ಕೆ ತುಂಬ ಸಮಯ ಬೇಕು. ಹಾಗೆಯೇ ಕಠಿಣವಾದ ಪರಿಶ್ರಮವೂ ಬೇಕು. ಚುಟ್ಟಿಯು ಕಲಾವಿದನ ಮುಖಕ್ಕೆ ವಿಸ್ತಾರವನ್ನು ಮತ್ತು ಆಕಾರವನ್ನು ನೀಡುತ್ತದೆ. ಅಕ್ಕಿ ಹಿಟ್ಟಿನಿಂದ ಚುಟ್ಟಿ ಇಟ್ಟು ಅದನ್ನು ಎತ್ತರಗೊಳಿಸುವ ಕೆಲಸ ಶ್ರಮದಾಯಕವಾಗಿದೆ. ಕಥಕಳಿ ವೇಷಗಳ ಮಹತ್ವವಿರುವುದೇ ಈ ಚುಟ್ಟಿಗಳಿಂದ. ಕಥಕಳಿ ಕಲಾವಿದರನ್ನು ‘ಚುಟ್ಟಿಕಾರ’ ಎಂದೂ ಕರೆಯುತ್ತಾರೆ. ಕಥಾ ಪಾತ್ರಗಳ ಉದಾತ್ತ ಮೊದಲಾದ ಸ್ವಭಾವಗಳು ಚುಟ್ಟಿಗಳ ಮೂಲಕ ವ್ಯಕ್ತವಾಗುತ್ತವೆ. ಆಟ ಆರಂಭವಾಗುವ ಮೂರು ಗಂಟೆಗಳ ಮೊದಲು ವೇಷಧಾರಿಗಳು ಚುಟ್ಟಿಗೆ ಕುಳಿತುಕೊಳ್ಳಬೇಕು. ಈಗ ಅಕ್ಕಿಹಿಟ್ಟಿನ ಬದಲಾಗಿ ಕಾಗದದ ಚುಟ್ಟಿಗಳು ಪ್ರಚಾರಕ್ಕೆ ಬಂದಿವೆ. ತೆಂಕುತಿಟ್ಟು ಯಕ್ಷಗಾನದಲ್ಲಿಯೂ ಚುಟ್ಟಿ ಇಡುವ ಸಂಪ್ರದಾಯವಿದೆ.

ವಸ್ತ್ರಾಲಂಕಾರಗಳು

ಮುಖದ ಹೊರತಾಗಿ ಉಳಿದ ಅಂಗಗಳಿಗೆ ವೇಷಭೂಷಣಗಳನ್ನು ತೊಡಿಸಿ ಪಾತ್ರಕ್ಕೆ ಸ್ವರೂಪವನ್ನು ಕೊಡುವವನಿಗೆ ಶಿಲ್ಪಕಾರನ್‌ ಎಂದು ಹೆಸರು. ಕಿರೀಠ, ಕಡಗ, ಅಂಗದು, ಕುಂಡಲ, ಚೆವಿಪೂ, ಅಂಗಿ ಸೋಗೆವಲ್ಲಿ (ಉತ್ತರೀಯ) ಕುರಲಾರಂ ಮೊದಲಾದವು ವೇಷಭೂಷಣಗಳು. ವೇಷಭೂಷಣಗಳನ್ನು ನಿರ್ಮಿಸುವಂತೆ ಅವುಗಳನ್ನು ಸರಿಯಾದ ಸ್ಥಾನಗಳಲ್ಲಿ ಧರಿಸುವುದೂ ಒಂದು ಕಲೆ. ವೇಷಭೂಷಣಗಳನ್ನು ತೊಡಿಸಲು ಹಾಗೂ ತೊಡಲು ಕಲಾಪ್ರತಿಭೆ ಬೇಕು. ಹೀಗೆ ಕಥಕಳಿಯು ಸಂಗೀತ, ಸಾಹಿತ್ಯ, ಅಭಿನಯ, ನೃತ್ಯ, ವಾದ್ಯ, ಚಿತ್ರ ಶಿಲ್ಪಗಳಿಂದಾಗಿ ಸಂಕೀರ್ಣ ಕಲೆಯೆನಿಸಿದೆ.

ಅಭಿನಯದಲ್ಲಿ ವೇಷ, ಮಾತು, ಮುದ್ರೆ, ರಸ ಹೀಗೆ ನಾಲ್ಕು ಅಂಗಗಳಿವೆ. ಇವುಗಳನ್ನು ಮುಂದೆ ಗಮನಿಸಬಹುದು.

ವೇಷಗಳು

ಕಥಕಳಿಯು ವೇಷದ ಹೆಚ್ಚಿನಂಶವನ್ನು ಕೂಡಿಯಾಟದಿಂದ ಸ್ವೀಕರಿಸಿದೆ. ವೇಷಗಳಿಗೆ ಸಂಬಂಧಿಸಿದಂತೆ ಕೂಡಿಯಾಟದಲ್ಲಿ ಅನೇಕ ವ್ಯವಸ್ಥೆಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ಮಾತ್ರ ಪಾತ್ರಗಳ ಸ್ವಭಾವ ಭೇದಗಳಿಗೆ ಅನುಗುಣವಾಗಿ ಕಥಕಳಿಯು ಸ್ವೀಕರಿಸಿಕೊಂಡಿದೆ. ಈ ವೇಷ ವಿಧಾನಗಳನ್ನು ಪಚ್ಚೆ, ಕತ್ತಿ, ಕರಿ, ತಾಡಿ, ಮಿನುಕ್ಕು ವೇಷಗಳೆಂದು ವಿಂಗಡಿಸಲಾಗಿದೆ. ಸಾತ್ವಿಕ ಸ್ವಭಾವದ ವೇಷಗಳನ್ನು ಪಚ್ಚೆವೇಷವೆಂದೂ ರಜೋಗುಣ ವೇಷಗಳನ್ನು ಕತ್ತಿವೇಷಗಳೆಂದೂ, ತಮೋಗುಣ ಪ್ರಧಾನವಾಗಿದ್ದರೆ ಚುವನ್ನ ತಾಡಿ ಅಥವಾ ಕರಿವೇಷವೆಂದೂ ಶಾಂತಸ್ವಭಾವದ ಬ್ರಾಹ್ಮಣರು, ಋಷಿಗಳೂ, ಸ್ತ್ರೀವೇಷಗಳನ್ನು ಮಿನುಕ್ಕು ವೇಷಗಳೆಂದೂ ಗುರುತಿಸಲಾಗುತ್ತದೆ.

ಕಿರೀಟ, ಕೇಶಭಾರಗಳು ಕೂಡಿಯಾಟದಲ್ಲಿ ರಾಜವೇಷಗಳಿಗೆ ಮಾತ್ರ ಮೀಸಲಾಗಿದೆ. ಉಳಿದ ಸಾಮಾನ್ಯ ವೇಷಗಳಿಗೆ ಸಾಮಾನ್ಯ ಕೂದಲು ಬಳಸುತ್ತಾರೆ. ವೇಷಭೂಷಣಗಳಲ್ಲಿ ಹಾಗೂ ಆಭರಣಗಳಲ್ಲಿ ಹೆಚ್ಚಿನ ಸೌಂದರ್ಯವಿದೆ. ಕಥಕಳಿಯ ಸ್ತ್ರೀವೇಷಗಳಲ್ಲಿ ಕೂಡಾ ಸಾಕಷ್ಟು ವ್ಯತ್ಯಾಸವಿದೆ. ಕೂಡಿಯಾಟದಲ್ಲಿ ಮಹಿಳೆಯರೇ ಸ್ತ್ರೀ ವೇಷ ಮಾಡಿದರೆ ಕಥಕಳಿಯಲ್ಲಿ ಪುರುಷರೇ ಸ್ತ್ರೀ ವೇಷ ಧರಿಸುತ್ತಾರೆ. ಸ್ತ್ರೀ ವೇಷಗಳ ವಸ್ತ್ರಧಾರಣೆ ರೀತಿಯೂ ಭಿನ್ನವಾಗಿದೆ. ತಲೆಯಲ್ಲಿ ‘ಮೂಡುಪಡಂ’ ಧರಿಸುವ ಕಥಕಳಿ ರೀತಿ ಕೂಡಿಯಾಟದಲ್ಲಿ ಕಾಣುವುದಿಲ್ಲ. ಕಥಕಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದವರು ರಾಜರುಗಳೇ ಆಗಿರುವುದರಿಂದ ಅದರಲ್ಲಿ ಕಿರೀಟಾದಿ ಆಭರಣಗಳಿಗೂ ವಸ್ತ್ರಾದಿ ಅಲಂಕಾರಗಳಿಗೂ ಅವಕಾಶ ಸಿಕ್ಕಿತು.

ಪುರಾಣ ಕಥೆಗಳನ್ನು ಹಿನ್ನೆಲೆಯಾಗಿರಿಸಿ ಕಥಕಳಿಯ ಆಟ ಕಥೆಗಳನ್ನು ರಚಿಸುತ್ತಾರೆ. ಆದುದರಿಂದ ಆಯಾ ಪುರಾಣ ಪಾತ್ರಗಳ ಸ್ವಭಾವವನ್ನು ಅನುಸರಿಸಿ, ಅವುಗಳಿಗೆ ಅನುಗುಣವಾದ ವೇಷಗಳನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಹೇಳಿದಂತೆ ಕಥಕಳಿಯ ವೇಷಗಳನ್ನು ಐದು ರೀತಿಯಲ್ಲಿ ವಿಭಜಿಸಲಾಗಿದೆ. ಪಚ್ಚ, ಕತ್ತಿ, ಕರಿ, ತಾಡಿ ಮತ್ತು ಮಿನುಕ್ಕು ಎಂದು ಇವುಗಳಿಗೆ ಹೆಸರು. ಸತ್ವ, ರಜ, ತಮ ಗುಣಗಳಿಗೆ ಅನುಸರಿಸಿ ಈ ಐದು ವಿಭಾಗಗಳನ್ನು ಮಾಡಲಾಗಿದೆ.

ಕಥಕಳಿಯ ಈ ವೇಷ ವಿಧಾನವು ಸಾಂಪ್ರದಾಯಿಕವಾಗಿ ಬಂದಿರುವಂತದ್ದು. ಇವುಗಳನ್ನು ರೂಪಿಸಲು ಯಾವುದೇ ಪ್ರಮಾಣಗಳಿಲ್ಲ. ಪಾತ್ರಗಳ ಸ್ವಭಾವಕ್ಕೆ ಅನುಗುಣವಾಗಿ ವೇಷರಚನೆ ಮಾಡಲಾಗುತ್ತದೆ. ಸಾಮ್ರಾಜ್ಯ, ಸಂಪತ್ತು ಕೈ ಬಿಟ್ಟು ಹೋದ ಪಾಂಡವರ ವೇಷದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಅಜ್ಞಾತವಾಸ ಕಾಲದ ಪಾಂಡವರ ವೇಷದಲ್ಲಿ ವ್ಯತ್ಯಾಸವಿದೆ. ಜೂಜಿನಲ್ಲಿ ಸೋತು ದಮಯಂತಿಯೊಂದಿಗೆ ಏಕವಸ್ತ್ರಧಾರಿಯಾಗಿ ಸಂಚರಿಸುವ ನಳ ಹಾಗೂ ಹಿಂದಿನ ಚಕ್ರವರ್ತಿ ನಳನ ವೇಷದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಒಡಹುಟ್ಟುಗಳಾದರೂ ದುರ್ಯೋಧನದು ಕತ್ತಿವೇಷ. ದುಶ್ಯಾಸನದು ಚುವನ್ನತಾಡಿ ವೇಷ. ರಾವಣ, ವಿಭೀಷಣರದು ಅನುಕ್ರಮವಾಗಿ ಕತ್ತಿ ಹಾಗೂ ಪಚ್ಚೆ ವೇಷ. ಇವೆಲ್ಲ ಪಾತ್ರಗಳ ಗುಣಸ್ವಭಾವಗಳನ್ನು ಆಧರಿಸಿಯೇ ಆಗಿದೆ. ವಿಷ್ಣುವಿನ ಅವತಾರಗಳಲ್ಲಿ ರಾಮನಿಗೂ, ಕೃಷ್ಣನಿಗೂ ಒಂದೇ ಆಹಾರ್ಯ ಸಂಪ್ರದಾಯವಿದೆ. ನರಸಿಂಹ, ವಾಮನ, ಪರಶುರಾಮ, ಬಲರಾಮ ಪಾತ್ರಗಳು ವಿಭಿನ್ನವಾಗಿವೆ. ಇವುಗಳೆಲ್ಲ ಶಾಸ್ತ್ರೀಯವಾಗಿ ಮಾಡಿದ್ದೆಂದು ಹೇಳಲು ಆಧಾರಗಳಿಲ್ಲ. ಮಾತ್ರವಲ್ಲ ನಿರ್ದಿಷ್ಟ ನಿಬಂಧನೆಗಳೂ ಅಲ್ಲ, ಪೂರ್ವಾಚಾರ್ಯರು ಮಾಡಿದ ಸಂಪ್ರದಾಯಗಳಿವು ಎಂದು ಹೇಳಬಹುದು. ಕಥಕಳಿಯು ಸಂಕೀರ್ಣ ಹಾಗೂ ಸಾಂಕೇತಿಕವಾದ ಒಂದು ಕಲೆ. ಆದರೆ ಇದಕ್ಕೆ ಲಿಖಿತವಾದ ಶಾಸ್ತ್ರಗ್ರಂಥಗಳಿಲ್ಲ.

ಪಚ್ಚೆ: ಪಚ್ಚೆ ವೇಷಗಳೆಲ್ಲ ಸತ್ವ ಗುಣ ಪ್ರಧಾನವಾಗಿದೆ. ಅವುಗಳು ಒಳ್ಳೆಯ ಪಾತ್ರಗಳನ್ನು ಪ್ರತಿನಿಧಿಸುತ್ತವೆ. ಧೀರೋದಾತ್ತ ಪಾತ್ರಗಳೆಲ್ಲ ಈ ವಿಭಾಗಕ್ಕೆ ಸೇರುತ್ತವೆ. ಧರ್ಮರಾಜ, ನಳ, ದಕ್ಷ, ಭೀಮಸೇನ, ಅರ್ಜುನ, ರುಕ್ಮಾಂಗದ ಮೊದಲಾದ ಪಾತ್ರಗಳು ಪಚ್ಚೆ ವೇಷಗಳಾಗಿವೆ. ಕಾರ್ಕೋಟಕ ಕಡಿದು ಬಾಹುಕನಾಗುವ ನಳನದು ಪಚ್ಚೆ ವೇಷವಾದರೂ ಮುಖದ ಬಣ್ಣ ಕಡು ಹಸಿರು ಆಗಿರುತ್ತದೆ. ಇದಕ್ಕಾಗಿ ಹಳದಿ ಬಣ್ಣಕ್ಕೆ ನೀಲ ಬಣ್ಣವನ್ನು ಹೆಚ್ಚು ಸೇರಿಸುತ್ತಾರೆ. ಸಾಮಾನ್ಯವಾಗಿ ಪಚ್ಚೆ ವೇಷಗಳು ಧರಿಸುವ ಬಿಳಿ ನೆರಿಗೆಯ ವಸ್ತ್ರದ ಬದಲು ನೀಲ ವಸ್ತ್ರ ಹಾಗೂ ಅಂಗಿಯನ್ನು ಧರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮುಖದ ಬಣ್ಣವೂ ಬದಲಾಗುತ್ತದೆ. ಕೆನ್ನೆ ಹಾಗೂ ಗಲ್ಲದ ಪಕ್ಕದಲ್ಲಿ ಚುಟ್ಟಿಯನ್ನು ಬರೆಯುತ್ತಾರೆ. ಶ್ರೀ ಕೃಷ್ಣ, ಶ್ರೀರಾಮ ಮೊದಲಾದ ಪಾತ್ರಗಳೂ ಪಚ್ಚೆ ವೇಷಗಳೇ. ಇವುಗಳ ವೇಷಭೂಷಣ ಹಾಗೂ ಮುಡಿಯಲ್ಲಿ ವ್ಯತ್ಯಾಸವಿಲ್ಲ.

ಕತ್ತಿ: ಒಳ್ಳೆಯ ಹಾಗೂ ದುಷ್ಟ ಗುಣಗಳಿರುವ ರಜೋಗುಣ ಪ್ರಧಾನವಾದ ಪಾತ್ರಗಳೇ ಕತ್ತಿ ವೇಷಗಳು. ದುರ್ಯೋಧನ, ಕೀಚಕ, ರಾವಣ, ನರಕಾಸುರ ಮೊದಲಾದ ವೇಷಗಳು ಈ ಸಾಲಿಗೆ ಸೇರುತ್ತವೆ. ಕತ್ತಿ ವೇಷದಲ್ಲಿ ನೆಡುಂಗತ್ತಿ ಮತ್ತು ಕುರುಂಗತ್ತಿ ಎಂದು ಎರಡು ವಿಧ. ಸಾಮಾನ್ಯವಾಗಿ ಕುರಂಗತ್ತಿಯೇ ಬಳಕೆಯಲ್ಲಿದೆ. ಮೂಗಿನ ಎರಡೂ ಬದಿಗಳಲ್ಲಿ ಕತ್ತಿ(ಕುಡುಗೋಲು)ಯ ಆಕರವನ್ನು ಬರೆಯುವುದೇ ಈ ವೇಷಗಳ ವೈಶಿಷ್ಟ್ಯ. ಈ ಕತ್ತಿಯ ಆಕಾರವು ಕಣ್ಣು ರೆಪ್ಪೆಗಳ ಸಮೀಪದವರೆಗೆ ಬಾಗಿದ್ದರೆ ಅದು ನೆಡುಂಗತ್ತಿ. ಹಿಡಿಂಬ, ಯಮ ಮೊದಲಾದ ಪಾತ್ರಗಳು ನೆಡುಂಗತ್ತಿ ವೇಷಗಳಾಗಿವೆ. ಆರಂಭದ ದಿನಗಳಲ್ಲಿ ದುಶ್ಯಾಸನನದು ನೆಡುಂಗತ್ತಿ ವೇಷವಾಗಿತ್ತು. ಈಗ ಚುವನ್ನ ತಾಡಿಯಾಗಿದೆ. ಕತ್ತಿ ವೇಷಗಳಿಗೆ ಚುಟ್ಟಿ ಹಾಗೂ ದಂಷ್ಟ್ರಗಳನ್ನು ಬಳಸುತ್ತಾರೆ.

ಕರಿ: ಈ ವಿಭಾಗದ ವೇಷಗಳಿಗೆ ಮುಖವರ್ಣಿಕೆ ಹಾಗೂ ವೇಷಭೂಷಣಗಳು ಕಪ್ಪು ಬಣ್ಣದ್ದಾಗಿರುತ್ತದೆ. ಕಳಸದಂತಹ ಕಪ್ಪುಮುಡಿಯನ್ನು ಧರಿಸುವರು. ಕ್ರೂರ ಸ್ವಭಾವದವರು ಎಂಬ ಹಿನ್ನೆಲೆಯಲ್ಲಿ ಕರಿ ವೇಷಗಳು ತಮೋಗುಣ ಪ್ರಧಾನವಾದವುಗಳಾಗಿವೆ. ಕರಿವೇಷಗಳನ್ನು ಆಣ್‌ಕರಿ(ಗಂಡುಕರಿ) ಪೆಣ್ಕರಿ(ಹೆಣ್ಣುಕರಿಂ) ಎಂದು ವಿಭಜಿಸುತ್ತಾರೆ. ಯಕ್ಷಗಾನದಲ್ಲಿ ಬಣ್ಣ ಮತ್ತು ಹೆಣ್ಣು ಬಣ್ಣ ಎಂಬ ವಿಭಾಗವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಯಕ್ಷಗಾನದಲ್ಲಿ ಬಣ್ಣ ಎಂದರೆ ಗಂಡು ಬಣ್ಣ ಎಂದೇ ಅರ್ಥ. ನಳಚರಿತ ಮೊದಲಾದ ಆಟಕಥೆಗಳ ಕಿರಾತ ಆಣ್‌ಕರಿ ವೇಷವಾದರೆ ಸಿಂಹಿಕೆ, ನಕ್ರತುಂಡಿ, ಶೂರ್ಪನಖಿ, ಪೂತನಿ, ಹಿಡಿಂಬೆ ಮೊದಲಾದ ರಾಕ್ಷಸಿಯರ ಪಾತ್ರಗಳು ಪೆಣ್‌ಕರಿ ವೇಷಗಳಾಗಿವೆ. ಕಪ್ಪುಬಣ್ಣವಾದರೂ, ಮುಖವರ್ಣಿಕೆಯ ವೈಶಿಷ್ಟ್ಯ ಹಾಗೂ ‘ಮುಲಕೊರಲಾರ’ ಧರಿಸುವುದನ್ನು ಕಾಣಬಹುದು. ಮೇಲಿನ ವೇಷಗಳೆಲ್ಲ ಆಯಾ ಕಥಾಭಾಗದ ಮೊದಲಲ್ಲಿ ಲಿತ ವೇಷಧಾರಿಗಳಾಗಿ ಪ್ರತ್ಯಕ್ಷಗೊಳ್ಳುವರು.

ತಾಡಿ: ತಾಡಿ ವೇಷಗಳಲ್ಲಿ ಚುವನ್ನತಾಡಿ(ಕೆಂಪುಗಡ್ಡ), ವೆಳ್ಳತಾಡಿ(ಬಿಳಿಗಡ್ಡ), ಕರುತ್ತತಾಡಿ(ಕಪ್ಪುಗಡ್ಡ) ಎಂದು ಮೂರು ವಿಧ. ತಮೋಗುಣ ಪ್ರಧಾನವಾದ ದುಷ್ಟ ಕಥಾಪಾತ್ರಗಳದು ಚುವನ್ನತಾಡಿ ವೇಷ. ಕೆಂಪು ಉಲ್ಲನ್‌ ಗಡ್ಡವನ್ನು ಗಲ್ಲದ ಬಳಿ ಧರಿಸುವುದರಿಂದ ಈ ಹೆಸರು ಅನ್ವರ್ಥವಾಗಿದೆ. ಮೂಗು ಹಾಗೂ ಹಣೆಯಲ್ಲಿ ಚುಟ್ಟಿ ಹೂ, ಬಿಳಿ ಉಡುಪು ಧರಿಸುವರು..ದೊಡ್ಡ ಕಿರೀಟವನ್ನು ತಲೆಯಲ್ಲಿ ಧರಿಸುವರು. ದುಶ್ಯಾಸನ, ತ್ರಿಗರ್ತ, ಬಕಾಸುರ, ರಾಜಸೂಯದ ಜರಾಸಂಧ, ಶಿಶುಪಾಲ ಮೊದಲಾದ ವೇಷಗಳು ಚುವನ್ನತಾಡಿಗಳಾಗಿವೆ. ವಾನರ ಶ್ರೇಷ್ಠರಾದ ವಾಲಿ, ಸುಗ್ರೀವರದು ಕೆಂಪುತಾಡಿ ವೇಷಗಳು.

ವೆಳ್ಳತಾಡಿಯು ಸಾಮಾನ್ಯವಾಗಿ ಸತ್ವಗುಣ ಪ್ರಧಾನವಾದ ಪಾತ್ರಗಳಾಗಿವೆ. ಈ ವಿಭಾಗಕ್ಕೆ ಸೇರುವ ಪ್ರಮುಖ ವೇಷ ಹನುಮಂತನದು. ತಲೆಗೆ ವೃತ್ತಾಕಾರದ ಮುಡಿಯನ್ನಿರಿಸುವ ಕಾರಣ ‘ವಟ್ಟಮುಡಿ’ ಎಂದೂ ಹೇಳುತ್ತಾರೆ. ತೆಂಕುತಿಟ್ಟು ಯಕ್ಷಗಾನದಲ್ಲಿಯೂ ಇದೇ ತೆರನ ವಟ್ಟಮುಡಿಯನ್ನು ಹನುಮಂತನ ವೇಷಕ್ಕೆ ಬಳಸುತ್ತಾರೆ. ಉಡುಪು ಉಲ್ಲನ್‌ ಅಂಗಿ, ಮುಖದಲ್ಲಿ ವಿಶೇಷ ಶೈಲಿಯ ಚುಟ್ಟಿ. ಉಳಿದ ವೇಷಗಳಿಗೆ ಚುಟ್ಟಿ ಇಡುವುದಕ್ಕಿಂತ ಹೆಚ್ಚಿನ ಸಮಯ ಇದಕ್ಕೆ ಬೇಕಾಗುತ್ತದೆ. ಹನುಮಾನ್‌ ಹೊರತಾಗಿ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ನಂದಿಕೇಶ್ವರ, ವಿವಿದನ್‌ ಮೊದಲಾದ ಪಾತ್ರಗಳು ವಟ್ಟಮುಡಿಗಳಾಗಿವೆ. ನಂದಿಕೇಶ್ವರ ರಜೋಗುಣವನ್ನು, ವಿವಿದನ್‌ ತಮೋಗುಣವನ್ನು ಪ್ರತಿನಿಧಿಸುತ್ತಾರೆ. ಈ ಎರಡೂ ವೇಷಗಳೂ ಕಪ್ಲಿಂಗಾಡ್‌ ನಂಬೂದಿರಿಯ ಸೃಷ್ಟಿಯೆಂದೂ, ಹನುಮಾನ್‌ ವೇಷವಿಧಾನವು ಕಲ್ಲಡಿಕೋಡನ್‌ ಸಂಪ್ರದಾಯವೆಂದೂ ಹೇಳಲಾಗುತ್ತದೆ. ಮುಖದಲ್ಲಿ ಸಿಂಹರೂಪವನ್ನು ಪ್ರತಿಬಿಂಬಿಸುವ ಮುಖವರ್ಣಿಕೆ, ವೆಣ್‌ಚಾಮರ ಕುಪ್ಪಾಯ, ವೆಳ್ಳತಾಡಿ ಹಾಗೂ ತಲೆಯಲ್ಲಿ ‘ಕುಟ್ಟಿಚಾಮರ’ವನ್ನು ಧರಿಸುವ ನರಸಿಂಹ ವೇಷವೂ ಇದೇ ವಿಭಾಗಕ್ಕೆ ಸೇರಿದೆ. ಮಹಾವಿಷ್ಣುವಿನ ಅವತಾರ ಎಂಬ ಹಿನ್ನೆಲೆಯಲ್ಲಿ ವೇಷವು ಕೇಶಭಾರ ಕಿರೀಟವನ್ನು ಧರಿಸಿ ಬರುವುದಿದೆ.

ಕಪ್ಪುತಾಡಿ ಚುಟ್ಟಿಯನ್ನು ಬಿಟ್ಟು ಉಳಿದ ಭಾಗವೆಲ್ಲ ಕಪ್ಪು ಬಣ್ಣ. ಈ ವಿಭಾಗಕ್ಕೆ ಸೇರಿದ ಒಂದೇ ಒಂದು ವೇಷ ಕಥಕಳಿಯಲ್ಲಿದೆ. ಅದು ನಳಚರಿತೆಯ ಕಲಿ. ತಲೆಗೆ ಧರಿಸುವ ಕಿರೀಟವೂ ಕೂಡ ಕಪ್ಪು ಬಣ್ಣದ್ದೇ ಆಗಿರುತ್ತದೆ.

ಮಿನುಕ್ಕು: ಸ್ತ್ರೀವೇಷ ಹಾಗೂ ಋಷಿವೇಷಗಳು ಮಿನುಕ್ಕು ವಿಭಾಗಕ್ಕೆ ಸೇರುತ್ತವೆ..ನಸುಕೆಂಪು ಹಾಗೂ ಹಳದಿ ಬಣ್ಣವನ್ನು ಉಪಯೋಗಿಸಿ ಮುಖವನ್ನು ಹೊಳೆಯುವಂತೆ ಮಾಡುವುದರಿಂದ ಈ ಹೆಸರು ಬಂದಿರಬೇಕು. ಪ್ರಧಾನ ಸ್ತ್ರೀವೇಷಗಳೆಲ್ಲ ಮಿನುಕ್ಕು ವೇಷಗಳು. ನಾರದ, ವಸಿಷ್ಠ ಮೊದಲಾದ ಋಷಿ ಪಾತ್ರಗಳು ಮುಖವನ್ನು ಮಿನುಗಿಸಿ, ಬಿಳಿಮೀಸೆ ಹಾಗೂ ಗಡ್ಡವನ್ನು ಕಟ್ಟಿಕೊಳ್ಳುತ್ತಾರೆ. ಋಷಿಗಳಲ್ಲೇ ಆಯಾ ಪಾತ್ರಕ್ಕನುಸರಿಸಿ ವಿಶೇಷತೆಗಳಿವೆ. ದೂರ್ವಾಸ, ಶುಕ್ರಾಚಾರ್ಯ, ಪರಶುರಾಮ, ವಿಶ್ವಾಮಿತ್ರ ಮೊದಲಾದವರು ಉದ್ದವಾದ ಕಪ್ಪುಗುಡ್ಡ ಹಾಗೂ ಮೀಸೆ ಧರಿಸುವರು. ಉಳಿದವರು ಮುಡಿ ಧರಿಸುವಾಗ ಪರಶುರಾಮ ಹಾಗೂ ವಿಶ್ವಾಮಿತ್ರ ಮೊದಲಾದವರು. ಜಟಾವಲ್ಕಲಧಾರಿಗಳಾಗಿರುವರು. ಸತ್ವಗುಣ ಪ್ರಧಾನರಾದ ಬ್ರಾಹ್ಮಣ ವೇಷಗಳು ಋಷಿಗಳಲ್ಲದಿದ್ದರೂ ಉದ್ದವಾದ ಗಡ್ಡವನ್ನು ಧರಿಸುತ್ತವೆ. ಮುಡಿ ಧರಿಸುವುದಿಲ್ಲ. ರುಕ್ಮಿಣೀ ಸ್ವಯಂವರದ ಬ್ರಾಹ್ಮಣ ನಳಚರಿತ್ರೆಯ ಸುದೇವ ‘ಸುಂದರ’ ವೇಷಗಳಾಗಿವೆ. ಇವರು ಮುಖಕ್ಕೆ ಬಣ್ಣ ಹಾಕಿ, ತಲೆಗೆ ಜರಿ ವಸ್ತ್ರದ ಮುಂಡಾಸು ಧರಿಸುವರು.

ವಿಶ್ವಾಮಿತ್ರ ಪರಶುರಾಮ, ದೂರ್ವಾಸ ಮೊದಲಾದ ಮಿನುಕ್ಕು ವೇಷಗಳು ಸತ್ವಗುಣ ಪ್ರಧಾನಗಳಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಸತ್ವರಜೋಗುಣಗಳನ್ನು ಪ್ರಕಟಿಸುತ್ತಾರೆ. ಮಣ್ಣನ್‌, ವಲಲ, ಮಲ್ಲ ಈ ಪಾತ್ರಗಳು ಮುಖ ಮಿನುಗಿಸಿ, ದೊಡ್ಡ ಮೀಸೆ ಬರೆದು, ತಲೆಗೆ ದೊಡ್ಡ ಮುಂಡಾಸು ಧರಿಸುವರು.

ಹಲವು ವಿಧ ವೇಷಗಳು

ಮೇಲೆ ತಿಳಿಸಿದ ಐದು ವಿಧದ ವೇಷಗಳು ಹಾಗೂ ಅವುಗಳ ಒಳ ವಿಭಜನೆಗಳಲ್ಲದೆ ಈ ಮೇಲಿನ ಯಾವುದೇ ವಿಭಾಗಕ್ಕೆ ಸೇರದ ಕೆಲವು ವೇಷಗಳು ಕಥಕಳಿಯಲ್ಲಿವೆ. ದಕ್ಷಯಾಗದ ಭದ್ರಕಾಳಿ ಮುಖಕ್ಕೆ ಕಪ್ಪುಬಣ್ಣವನ್ನು ಲೇಪಿಸಿ, ಅಕ್ಕಿ ಹಿಟ್ಟಿನಿಂದ ಅನೇಕ ಚುಕ್ಕಿಗಳನ್ನಿರಿಸಲಾಗುತ್ತದೆ. ‘ಮುಲಕುರಲಾರ’ ಧರಿಸಿ, ಕೆಂಪು ವಸ್ತ್ರಗಳನ್ನು ಧರಿಸುತ್ತದೆ. ಹಂಸ, ಗರುಡ ಮೊದಲಾದ ಪಕ್ಷಿಗಳಿಗೆ ಆಯಾ ಪಕ್ಷಿಗಳ ಮುಖವರ್ಣಿಕೆ, ಉದ್ದವಾದ ಚಂಚು ಹಾಗೂ ರೆಕ್ಕೆಗಳಿರುತ್ತವೆ.

ಕೂಡಿಯಾಟದ ವಿದೂಷಕನ ಸ್ಥಾನವನ್ನು ತುಂಬುವ ಒಂದು ಹಾಸ್ಯ ಪಾತ್ರವೇ ಭೀರು. ಹಾಸ್ಯ, ಭೀಭತ್ಸ, ರಸಗಳನ್ನು ವ್ಯಂಜಿಸುವಂತೆ ಈ ವೇಷಗಳ ರಚನೆ ಇರುತ್ತವೆ. ಕಥಕಳಿಯಲ್ಲಿ ಮಾತನಾಡುವ ಒಂದು ಪಾತ್ರವಿದ್ದರೆ ಅದು ಭೀರು ಮಾತ್ರ. ಕೀರಲು ಸ್ವರದ ಹಾಸ್ಯ ಸಂಭಾಷಣೆಯೇ ಇವುಗಳಲ್ಲಿ ಪ್ರಧಾನ. ರುಕ್ಮಿಣೀ ಸ್ವಯಂವರ, ಕಾಲಕೇಯವಧೆ, ನರಕಾಸುರವಧೆ ಮೊದಲಾದ ಕಥೆಗಳಲ್ಲಿ ನಾಯಕ – ಪ್ರತಿ ನಾಯಕರೊಂದಿಗೆ ಇವರು ರಂಗವನ್ನು ಪ್ರವೇಶಿಸುತ್ತಾರೆ. ರಾವಣೋದ್ಭವದ ವಿದ್ವಜಿಂಹ್ವನ ಪಾತ್ರವೂ ಇದೇ ವಿಭಾಗಕ್ಕೆ ಸೇರಿದೆ. ಸಾಮಾನ್ಯವಾಗಿ ಇವುಗಳದು ಭದ್ರಕಾಳಿಯ ವೇಷದಂತಿರುವ ಒಂದು ಪಾತ್ರ ಅಂಬರೀಶ ಚರಿತೆ, ಪೌಂಡ್ರಕವಧೆಗಳಲ್ಲಿ ಬರುವ ಕೃತ್ತಿಕ. ಕ್ರೂರ ಪ್ರಕೃತಿಯ ಈ ವೇಷಕ್ಕೆ ಕಿರೀಟ ಹಾಗೂ ವೇಷಭೂಷಣ ಎಲ್ಲವೂ ಕೆಂಪು ಬಣ್ಣದ್ದಾಗಿರುತ್ತದೆ.

ಮುಖದಲ್ಲಿ ಚಿನ್ನದ ಬಣ್ಣವನ್ನು ಲೇಪಿಸಿ, ಅದಕ್ಕೆ ಹೊಂದಿಕೊಂಡಂತೆ ಆಭರಣಾದಿಗಳನ್ನು ಧರಿಸುವ ಸತ್ವಗುಣದ ಕೆಲವು ಪ್ರಧಾನ ವೇಷಗಳು ಬಲರಾಮ, ಶಿವ ಮೊದಲಾದುವು. ಬಲರಾಮನಿಗೆ ನೀಲಿ ಬಣ್ಣದ ಲಂಗ ಹಾಗೂ ಹಳದಿ ಅಂಗಿ. ನೀಲಾಂಬರ ಎಂಭ ಹೆಸರಿಗೆ ಅನ್ವಯವಾಗುವಂತೆ ಈ ವೇಷ ವಿಧಾನವಿದೆ. ಆದರೆ ಪ್ರಾದೇಶಿಕವಾಗಿ ವ್ಯತ್ಯಾಸಗಳೂ ಇವೆ. ಶಿವನಿಗೆ ಹಳದಿ ನೆರಿಗೆ, ಹಳದಿ ಅಂಗಿ. ಪಚ್ಚೆ ಮತ್ತು ಕತ್ತಿ ವೇಷಗಳು ಎಡದ ಕೈಯ ಐದು ಬೆರಳುಗಳಿಗೆ ಬೆಳ್ಳಿಯ ಉಗುರುಗಳನ್ನು ಧರಿಸುವುದು. ಪ್ರಧಾನ ಪುರುಷ ವೇಷಗಳಿಗೆ ‘ಚುಂಡ’ ಹೂ ಹಾಕಿ ಕಣ್ಣನ್ನು ಕೆಂಪು ಮಾಡುತ್ತಾರೆ.

‘ಚುಂಡ’ ಎಂದರೆ ಬದನೆ ಜಾತಿಯ ಒಂದು ಸಸ್ಯ. ಕನ್ನಡದಲ್ಲಿ ಇದನ್ನು ‘ಕುದನೆ’ ಎಂದು ಹೇಳುತ್ತಾರೆ. ಈ ಕಾಡು ಗಿಡದ ಹೂವಿನದು ನೇರಳೆ ಬಣ್ಣ..ಹೂವನ್ನು ಒಣಗಿಸಿ ಅದರ ಹುಡಿಯನ್ನು ಸೋಸಿ ಕಣ್ಣಿಗೆ ಹಾಕಲಾಗುತ್ತದೆ. ಒಣಗಿಸಲು ಅವಕಾಶ ಸಿಗಲಿಲ್ಲವಾದರೆ ನೀರಿನಲ್ಲಿ ನೆನೆಹಾಕಿ ಆ ನೀರನ್ನು ಕಣ್ಣಿಗೆ ಹಾಕುವುದೂ ಇದೆ. ಹೂವುಗಳ ಬದಲಿಗೆ ಅದರ ಬೀಜವನ್ನು ಬಳಸುವುದೂ ಇದೆಯಂತೆ. ಪಾರಂಪರಿಕ ನೃತ್ಯ ಪ್ರಕಾರಗಳಲ್ಲಿ ಕಣ್ಣು ಕೆಂಪಾಗಿಸಲು ಇದನ್ನೇ ಉಪಯೋಗಿಸಲಾಗುತ್ತದೆ. ದೇವ, ಗಂಧರ್ವಾದಿಗಳ ಕಣ್ಣು ಕೆಂಪಾಗಿರುತ್ತದೆ ಎಂಬುದು ನಂಬಿಕೆ. ಇದು ಕಣ್ಣಿಗೆ ದೋಷಕರವಲ್ಲ ಎಂಬ ಪಾರಂಪರಿಕ ತಿಳುವಳಿಕೆ ಇದೆ.

ಮಾತು

ಕಥಕಳಿಯಲ್ಲಿ ಮಾತಿಗೆ ಆಸ್ಪದವಿಲ್ಲ. ಇದರಿಂದಾಗಿ ಪಾತ್ರಧಾರಿಗೆ, ಅಭಿನಯಕ್ಕೆ ಸ್ವಾತಂತ್ಯ್ರ ಲಭಿಸಿತು. ಇತರ ಕಲೆಗಳಿಗೆ ಸಂಬಂಧಿಸಿದಂತೆ ಕಥಕಳಿಯನ್ನು ಬೇರ್ಪಡಿಸುವ ಅಂಶವೂ ಇದೇ ಆಗಿದೆ. ಅಭಿನಯದ ಯಶಸ್ವಿಗಾಗಿ ಹಸ್ತಾಭಿನಯ, ರಸಾಭಿನಯ, ನೃತ್ಯ, ವಾದ್ಯ, ಹಾಡುಗಳೆಲ್ಲ ದುಡಿಯಬೇಕಾಗಿದೆ. ಇದುವೇ ಕಥಕಳಿಯ ವೈಶಿಷ್ಟ್ಯಕ್ಕೆ ಕಾರಣವಾಗಿದೆ. ಪ್ರೇಕ್ಷಕರಿಗೆ ಹಾಡು ಮತ್ತು ಹಸ್ತಾಭಿನಯಗಳ ಮೂಲಕ ಮಾತುಗಳನ್ನು ಕೇಳಿಸಿಕೊಳ್ಳಲು ಹಾಗೂ ಅರ್ಥ ಮಾಡಲು ಸಾಧ್ಯವಿಲ್ಲ. ಕೂಡಿಯಾಟದಲ್ಲಿ ಮಾತು ಮತ್ತು ಅಭಿನಯ ಹಿಂದೆ ಮುಂದೆ ಬಂದು ಎರಡು ಬಾರಿ ನಡೆಸುತ್ತಿದ್ದರು. ಇದು ಕಥಕಳಿಯಲ್ಲಿ ಇಲ್ಲದ ಕಾರಣ ರಸಾಸ್ವಾದನೆಗೆ ಕಾರಣವಾಗುತ್ತದೆ.

ಕೈ ಮುದ್ರೆಗಳು

ಕಥಕಳಿಯನ್ನು ಆಸ್ವಾದಿಸಬೇಕಾದರೆ ಕೈ ಮುದ್ರೆಗಳ ಪರಿಚಯವಿರಬೇಕು. ಮುದ್ರೆಗಳನ್ನು ಅರಿತಿರುವ ಕಲಾವಿದನಿಗೆ ಮಾತಿಲ್ಲದೆಯೇ ಮುದ್ರೆಗಳ ಮೂಲಕ ಯಾವುದೇ ವಿಷಯವನ್ನು ಪ್ರಸ್ತುತಪಡಿಸಿಬಹುದು. ಐದು ಬೆರಳುಗಳನ್ನು ಉಪಯೋಗಿಸಿ ಪತಾಕೆ, ಕಟಕ, ಮುಷ್ಟಿ ಮೊದಲಾದ ಇಪ್ಪತ್ನಾಲ್ಕು ಮುದ್ರೆಗಳನ್ನು ಕೈಗಳಿಂದ ಮಾಡಬಹುದೆಂದು ಭರತಮುನಿ ನಾಟ್ಯಶಾಸ್ತ್ರದಲ್ಲಿ ಹೇಳಿದ್ದಾನೆ. ಎರಡೂ ಕೈಗಳ ಮುದ್ರೆಗಳು, ನಾಭಿ, ಹೃದಯ, ಶಿರ, ಎಡ, ಬಲ ಭಾಗಗಳಿಗೆ ಬಂದಾಗ ವಿಭಿನ್ನ ಅರ್ಥಗಳನ್ನು ಕೊಡುತ್ತದೆ. ಕಥಕಳಿಯಲ್ಲಿ ಸಾಮಾನ್ಯವಾಗಿ ಇಂತಹ ಐದುನೂರು ಮುದ್ರೆಗಳಿವೆ. ಕಲಾವಿದ ಇವುಗಳನ್ನು ತಿಳಿದುಕೊಂಡಿರಬೇಕು. ಒಟ್ಟಿನಲ್ಲಿ ಕೈಮುದ್ರೆಗಳೇ ಕಥಕಳಿಯ ಭಾಷೆ ಎಂದು ಹೇಳಬಹುದು. ‘ಹಸ್ತಲಕ್ಷಣ ದೀಪಿಕ’ ಎಂಬ ಕೃತಿಯು ಕಥಕಳಿ ಮುದ್ರೆಗಳನ್ನು ತಿಳಿಸುವ ಆಕರ ಗ್ರಂಥವಾಗಿದೆ.

ರಸಾಭಿನಯ

ಕಣ್ಣು, ಹುಬ್ಬು, ಕೆನ್ನೆ, ತುಟಿ ಇವುಗಳಿಂದ ರಸಾಭಿನಯ ಸಾಧ್ಯವಾಗುತ್ತದೆ. ಕಣ್ಣು ಹಾಗೂ ಹುಬ್ಬುಗಳನ್ನು ಇಚ್ಛೆಯಂತೆ ಚಲಿಸಲು ಪ್ರತ್ಯೇಕ ಅಭ್ಯಾಸವನ್ನೇ ನಡೆಸಬೇಕು. ನಾಟ್ಯ ಕಲೆಯ ಜೀವವಿರುವುದೇ ನೋಟದಲ್ಲಿ.

ಯದೋ ದೃಷ್ಟಿ ತದೋ ಹಸ್ತೋ
ಯದೋ ಹಸ್ತ ಸ್ತುದೋ ಮನಃ
ಯದೋ ಮನಸ್ತುದೋ ಭಾವೋ
ಯದೋ
ಭಾವಸ್ತುದೋ ರಸಃ

ಎಂಬ ಶ್ಲೋಕವು ಕಣ್ಣು, ಕೈ, ಮನಸ್ಸು, ಭಾವ ಮತ್ತು ರಸಗಳ ಕುರಿತು ಹೇಳುತ್ತದೆ. ಹೀಗೆ ಕಥಕಳಿಯು ನೋಡುವ ಸಹೃದಯರಲ್ಲಿ ರಸಾನುಭವವನ್ನು ಉಂಟುಮಾಡುತ್ತದೆ.

ಕಥಕಳಿಯ ಬೆಳವಣಿಗೆಗೆ ಅನೇಕ ಕಲಾಪೋಷಕರ ಕೊಡುಗೆ ಅಪಾರವಿದೆ. ಕಥಕಳಿಯ ಸ್ಥೂಲ ಇತಿಹಾಸದ ಜೊತೆಗೆ ಅವುಗಳನ್ನು ಮುಂದೆ ಪರಿಶೀಲಿಸಬಹುದು.

ಕಥಕಳಿ ಪ್ರದರ್ಶನದ ವಿವಿಧ ಹಂತಗಳು

ಕಥಕಳಿಯನ್ನು ಪ್ರದರ್ಶಿಸಲು ಉಳಿದ ಪ್ರದರ್ಶನ ಕಲೆಗಳಂತೆ ವ್ಯಾಪಕವಾದ ರಂಗಸಿದ್ಧತೆಗಳ ಅಗತ್ಯವಿಲ್ಲ. ನಾಟಕ ಶಾಲೆಗಳಲ್ಲೋ, ಛತ್ರಗಳಲ್ಲೋ ಅಥವಾ ತೆರೆದ ಬಯಲಿನಲ್ಲಿ ಕಥಕಳಿ ಪ್ರದರ್ಶನ ನಡೆಯುತ್ತದೆ. ಸಾಮಾನ್ಯವಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಒಂದು ವೇದಿಕೆಯಲ್ಲಿ ರಂಗಸ್ಥಳವಿರುತ್ತದೆ. ಬೆಳಗಿಸಿದ ದೀಪವೊಂದು ರಂಗದಲ್ಲಿರುತ್ತದೆ.

. ಕೇಳಿಕೊಟ್ಟ್‌: ಇಂದು ರಾತ್ರಿ ಇಂತಹ ಸ್ಥಳದಲ್ಲಿ ಕಥಕಳಿ ನಡೆಯಲಿದೆ ಎಂಬ ಪೋಷಣೆಯನ್ನು ಮಾಡುವ ಮೊದಲ ಹಂತವೇ ಕೇಳಿಕೊಟ್ಟ್‌. ಕಥಕಳಿಯ ವಾದ್ಯೋಪಕರಣಗಳಾದ ಚೆಂಡೆ, ಮದ್ದಳೆ, ಜಾಗಟೆ, ಚಕ್ರತಾಳಗಳನ್ನು ಇದಕ್ಕೆ ಬಳಸುವರು. ಪ್ರಚಾರಕ್ಕೆ ಬೇರೆ ಮಾಧ್ಯಮಗಳಿಲ್ಲದ ಕಾಲದಲ್ಲಿ ಈ ರೀತಿಯ ಪ್ರಚಾರಶೈಲಿ ಇದ್ದಿರಬೇಕು. ಈಗ ಇದರ ಪ್ರಾಧಾನ್ಯ ಕಡಿಮೆಯಾಗಿದೆ.

. ಅರಂಙು ಕೇಳಿ: ದೀಪ ಬೆಳಗಿಸಿದರೆ ಮದ್ದಳೆಯವನು ಮದ್ದಳೆಯೊಂದಿಗೆ ರಂಗಕ್ಕೆ ಬಂದು ಬಾರಿಸುವನು. ಇದಕ್ಕೆ ‘ಶುದ್ದಮದ್ದಳೆ’ ಎಂಬ ಹೆಸರೂ ಇದೆ.. ಚೆಂಡೆ ಹೊರತಾದ ವಾದ್ಯೋಪಕರಣಗಳನ್ನು ಇದಕ್ಕೆ ಬಳಸುತ್ತಾರೆ.

. ತೋಡಯಂ: ಪ್ರಸ್ತುತ ಪಡಿಸುವ ದೃಶ್ಯವು ಮಂಗಳಕರವಾಗಿ ಕೊನೆಗೊಳ್ಳುವಂತೆ ಕಥಕಳಿ ಕಲಾವಿದರು ನಡೆಸುವ ದೇವತಾ ಪ್ರಾರ್ಥನೆಯೇ ತೋಡಯಂ. ಎಲ್ಲ ಕಲಾವಿದರೂ ತೋಡಯಂ ಕಳೆದು ವೇಷ ಧರಿಸಬೇಕು ಎಂಬುದು ನಿಯಮ. ಆದರೆ ಪ್ರಾಯೋಗಕವಾಗಿ ಅದು ಅಸಾಧ್ಯವಾದ ಕಾರಣ ಎಲ್ಲರ ಪ್ರತಿನಿಧಿಯಾಗಿ ಒಬ್ಬರೋ ಇಬ್ಬರೋ ಈ ವಿಧಿಯನ್ನು ನೆರವೇರಿಸುತ್ತಾರೆ. ತೋಡಯಂ ನಿರ್ವಹಿಸುವ ಕಲಾವಿದರಿಗೆ ಪ್ರತ್ಯೇಕ ವೇಷಗಾರಿಕೆ ಇಲ್ಲ. ಒಂದು ವಸ್ತ್ರವನ್ನು ತಲೆಗೆ ಸುತ್ತಿ, ಗೋಪಿತಿಲಕ ಧರಿಸುತ್ತಾರೆ. ತೋಡಯದಲ್ಲಿ ಭಾಗವಹಿಸದ ಕಲಾವಿದರು ವೇಷಧರಿಸಿ ರಂಗಕ್ಕೆ ಬಂದು, ನಮಸ್ಕರಿಸಿ, ವಾದ್ಯೋಪಕರಣಗಳನ್ನು ಸ್ಪರ್ಶಿಸಿ ವಂದಿಸುತ್ತಾರೆ.

. ವಂದನ ಶ್ಲೋಕಗಳು: ಕಥಕಳಿಯಲ್ಲಿ ಭಾಗವಹಿಸುವ ಎಲ್ಲ ಕಲಾವಿದರು ವಂದನ ಶ್ಲೋಕವನ್ನು ಹೇಳಬೇಕೆಂಬ ನಿಯಮವಿದೆ. ‘ಮಾತಂಗಾನ ನಮಬ್ಜವಾಸರಮಣೀ’ ಎಂಬ ಕೋಟ್ಟಯಂ ರಾಜನು ರಚಿಸಿದ ಮಂಗಳ ಶ್ಲೋಕವನ್ನು ಹೆಚ್ಚಾಗಿ ಹಾಡುತ್ತಾರೆ. ಬೇರೆ ಕೆಲವು ಸ್ತುತಿಗಳೂ ಬಳಕೆಯಲ್ಲಿವೆ.

. ಪುರಪಾಡು: ಯಾವ ಕಥಾಭಾಗ ಪ್ರದರ್ಶನವಾಗುವುದೋ ಆ ಕಥೆಯಲ್ಲಿ ಮೊದಲ ಕಥಾಪಾತ್ರವು ‘ಪುರಪಾಡ್‌’ಗೆ ರಂಗಪ್ರವೇಶ ಮಾಡುತ್ತದೆ. ಪುರಪಾಡ್‌ ವೇಷಗಳು ಯಾವಾಗಲೂ ಸತ್ಪಾತ್ರಗಳಾಗಿರುತ್ತವೆ. ನಟಿಸುವವರು ‘ಕುಟ್ಟಿತರ’ದವರು. ಮೇಲಾಪ್‌, ಆಲವಟ್ಟ, ಶಂಖನಾದಗಳೊಂದಿಗೆ ನಾಲುನೋಟಂ ಮತ್ತು ನಿಲಪದಂ ಎಂಬೆರಡು ಹಂತಗಳೂ ಇದಕ್ಕಿವೆ. ನಾಟಕದ ಪ್ರಸ್ತಾವನೆಯೇ ಕಥಕಳಿಯ ಪುರಪಾಡ್‌.

. ಮೇಳಪದಂ: ಈ ಸಂಪ್ರದಾಯವನ್ನು ಆರಂಭಿಸಿದವರು ಕೋಟ್ಟಯಂ ರಾಜನ ಗುರುವಾದ ಗೋವಿಂದ ಸ್ವಾಮಿಗಳೆಂದು ಐತಿಹ್ಯ. ಶಿಷ್ಯನಾದ ರಾಜನ ವೇಷವನ್ನು ಕಾಣಲು ಅವರು ಸಭೆಗೆ ಬಂದಿದ್ದರಂತೆ. ವೇಷ ಸಿದ್ಧವಾಗಿ ರಂಗಕ್ಕೆ ಬರಲು ತಡವಾದಾಗ ರಂಗದ ವಿರಸವನ್ನು ಪರಿಹರಿಸಲು ‘ಗೀತ ಗೋವಿಂದ’ದ ಮಂಜುತರ ಕುಂಜತಲಾ ಕೇಳಿಸದನೇ…’ ಎಂಬ ಗೀತೆಯನ್ನು ಹಾಡಿದರೆಂದೂ, ಅದಕ್ಕೆ ಹಿಮ್ಮೇಳದವರು ಸಹಕರಿಸಿದರೆಂದೂ ಕಥೆಯಿದೆ. ಗುರುಸ್ಮರಣೆಗಾಗಿ ಅಂದಿನಿಂದ ಪುರಪಾಡ್‌ ನಂತರ ಈ ಹಾಡನ್ನು ಹಾಡಿದ ನಂತರವೇ ಕಥೆ ಆರಂಭಿಸಬೇಕು ಎಂದು ವಿಧಿಸಿದೆ.

ಈ ಹಾಡಿನ ಆರಂಭದಲ್ಲಿ ಪುರಪಾಡ್‌ ವೇಷದವರು ನಿರ್ದಿಷ್ಟ ‘ಕಲಾಶ’ ತೆಗೆದು ರಂಗದಿಂದ ನಿರ್ಗಮಿಸುತ್ತಾರೆ. ಅನಂತರ ಮೇಳದವರೂ, ಹಾಡುಗಾರರೂ ದೀಪದ ಸಮೀಪ ನಿಂತು ‘ಮಂಜುತರ’ವೇ ಮೊದಲಾದ ಎಂಟು ವ್ಯತ್ಯಸ್ತ ರಾಗಗಳನ್ನು ಹಾಡುತ್ತಾರೆ. ಕೊನೆಯ ಹಾಡು ಮಧ್ಯಮಾವತಿ ರಾಗದಲ್ಲಿರುತ್ತದೆ. ಇದರ ಕೊನೆಯ ಹಂತ ಹಿಮ್ಮೇಳದವರ ಕೌಶಲ್ಯ ಪ್ರದರ್ಶನವಾಗಿರುತ್ತದೆ.

. ಕಥಾರಂಭ: ಮೇಳಪದ ಕಳೆದ ಕೂಡಲೇ ಕಥ ಆರಂಭವಾಗುತ್ತದೆ. ಗಾಯಕ ರಂಗ ಪ್ರಸ್ತುತಿಯ ಪದ್ಯವನ್ನು ಹೇಳುವುದರೊಂದಿಗೆ, ಅದರಲ್ಲಿ ನಿರ್ದಿಷ್ಟವಾದ ಪಾತ್ರಗಳು ರಂಗವನ್ನು ಪ್ರವೇಶಿಸುತ್ತವೆ, ಕತ್ತಿ, ತಾಡಿ, ವೇಷಗಳಿಗೂ ‘ತಿರನೋಟ’ವಿದೆ. ಶ್ಲೋಕಾಲಾಪನೆಯಲ್ಲಿ ಪ್ರಸಕ್ತವಾದ ಕತ್ತಿ ಅಥವಾ ತಾಡಿ ಪಾತ್ರದ ಪ್ರವೇಶವಿದ್ದರೆ ತೆರೆಯ ಹಿಂದಿನಿಂದ ಆರ್ಭಟೆ ಕೊಡುತ್ತಾರೆ. ಮೂರು ಸಲ ಆರ್ಭಟೆ ಕೊಟ್ಟು, ಕೆಲವು ನಿರ್ದಿಷ್ಟ ವಿಧಿಗಳೊಂದಿಗೆ, ತೆರೆ ಸರಿಸಿ ಪಾತ್ರವು ರಂಗಪ್ರವೇಶ ಮಾಡುತ್ತದೆ. ಆರಂಭದಲ್ಲಿ ಹಸ್ತಮುದ್ರೆಗಳನ್ನು ತೋರಿಸಿ ತೆರೆಯನ್ನು ಸ್ವಲ್ಪ ತಗ್ಗಿಸಿ, ದೀಪವನ್ನು ನೋಡುತ್ತಾ ‘ತಿರನೋಟ’ವನ್ನು ಆರಂಭಿಸಲಾಗುತ್ತದೆ. ಅನಂತರ ಪ್ರೇಕ್ಷಕರ ಸಭಾಂಗಣದ ಎರಡೂ ಬದಿಗಳನ್ನು ಮತ್ತೆ ಮತ್ತೆ ನೋಡುತ್ತಾ ಕಥೆಯ ಸ್ಥಾಯೀಭಾವವನ್ನು ಪ್ರಕಟಿಸುವುದು ಇದರ ಪ್ರಧಾನ ಹಂತವಾಗಿದೆ. ಪ್ರಮುಖ ಕತ್ತಿವೇಷಗಳ ತಿರನೋಟಕ್ಕೆ ಹಿಂದಿನಿಂದ ಶಂಖನಾದ, ಮೇಲೆ ಮೇಲಾಪ್‌, ಆಲವಟ್ಟಗಳನ್ನು ಬಳಸುತ್ತಾರೆ. ರಾವಣನ ವೇಷಕ್ಕೆ ದಶಮುಖವನ್ನು ಪ್ರಕಟಿಸಲು ಎರಡೂ ಬದಿಗಳಲ್ಲಿ ಎರಡು ಕಿರೀಟಗಳು ಸಾಮಾನ್ಯವಾಗಿ ಇರುತ್ತದೆ. ತೆರೆ ಸರಿಸಿದ ನಂತರ ಮುಂದಿನ ದೃಶ್ಯಕ್ಕೆ ಪೂರ್ವಭಾವಿಯಾಗಿ ಒಂದು ಉಪಕ್ರಮಾಭಿನಯವಿರುತ್ತದೆ. ಉದಾ: ನಾರದನ ಆಗಮನವನ್ನು ವೀಕ್ಷಿಸುವ ರಾವಣ, ಮಾನಿನಿಯನ್ನು ನೋಡುತ್ತಿರುವ ಕೀಚಕ ಇತ್ಯಾದಿ.

ಉಳಿದ ಪಾತ್ರಗಳೊಂದಿಗೆ ನಡೆಸುವ ಸಂಭಾಷಣೆ ಹಾಗೂ ಅದರ ಜತೆಯಲ್ಲಿ ‘ಇಳಗಿಯಾಟ’ ಇರುತ್ತದೆ. ಅನಂತರದ ಹಂತ ಹಿಂದೆ ಅಭಿನಯಿಸಿದ್ದು, ಮುಂದೆ ಅಭಿನಯಿಸಬೇಕಾದದ್ದು ಮೊದಲಾದ ಪದಗಳಿಗೆ ವಿಸ್ತಾರವಾದ ಅಭಿನಯವೇ ಇಳಗಿಯಾಟ. ಕೇಕಿಯಾಟ, ತೆರೆಪುರಪಾಡು, ರಥಸಜ್ಜೀಕರಣ ಮೊದಲಾದುವೆಲ್ಲ ಹಿಮ್ಮೇಳದೊಂದಿಗೆ ನಡೆಸುವ ವಿಶಿಷ್ಟ ನೃತ್ಯ ವಿಶೇಷಗಳಾಗಿವೆ. ಅಭಿನಯದಲ್ಲಿ ಸಲಜ್ಜೋಹಂ, ಕಮಲದಳಂ, ಅಜಗರ ಕಬಳಿತಂ, ಕೈಲಾಸೋದ್ಧಾರಣ, ಪಾರ್ವತೀವಿರಹ, ಸ್ವರ್ಗ ಮತ್ತು ವನವರ್ಣನೆಗಳು ಕಲಾವಿದರ ಅಭಿನಯ ಚಾತುರ್ಯಕ್ಕೆ ಒರೆಗಲ್ಲುಗಳಾಗಿವೆ. ಆಟಕಥೆಗಳಲ್ಲಿ ಇಲ್ಲದ ಅನೇಕ ಶ್ಲೋಕಗಳನ್ನು ಮುಕ್ತಕಗಳನ್ನೂ ಕಲಾವಿದರು ಕಥಕಳಿ ಯಲ್ಲಿ ಅಭಿನಯಿಸುತ್ತಾರೆ.

. ಸಾರಿ, ಕುಮ್ಮಿ: ಸ್ತ್ರೀ ವೇಷಗಳ ರಂಗ ಪ್ರವೇಶದಲ್ಲಿ ಆಡುವ ಲಾಸ್ಯ ವಿಶೇಷವೇ ಸಾರಿ. ಇಲ್ಲಿ ಪ್ರತ್ಯೇಕ ಅಭಿನಯ ಅಥವಾ ಮುದ್ರೆಗಳಿಲ್ಲ. ಲಲಿತ, ನರಕಾಸುರ ವಧೆ, ಬಕಾಸುರ ವಧೆ, ಮೋಹಿನಿ (ರುಕ್ಮಾಂಗದ ಚರಿತೆ) ದಮಯಂತಿ ಹಾಗೂ ಸೇವಕಿಯರು (ನಳಚರಿತೆ) ಉಷಾ ಮತ್ತು ಚಿತ್ರಲೇಖೆ (ಬಾಣಾಸುರ ಯುದ್ಧ) ಸಾರಿ ನೃತ್ಯಗಳನ್ನು ಮಾಡುತ್ತವೆ

ಕುಮ್ಮಿ ಮೊದಲು ಬಳಕೆಯಾಗಿರುವುದು ‘ಉತ್ತರಾ ಸ್ವಯಂವರ’ದಲ್ಲಿ. ಉತ್ತರನ ಪತ್ನಿಯಂದಿರ ‘ವೀರ ಉತ್ತರ ಕುಮಾರ ವಿಭೋ’ ಎಂದು ಆರಂಭವಾಗುವ ಪದ್ಯದಿಂದ. ಇದನ್ನು ಅನಂತರ ಅನೇಕ ಪ್ರಸಂಗಕರ್ತರು ಅನುಕರಿಸಿದರು.

. ಧನಾಶಿ: ಪ್ರದರ್ಶನದ ಕೊನೆಯ ಹಂತವಿದು. ಕಥಾ ನಿರ್ವಹಣೆ ಮುಗಿದ ನಂತರ ರಂಗದಲ್ಲಿ ಉಳಿದ ಕಲಾವಿದ ಹಿಮ್ಮೇಳದವರು ಮಂಗಳ ಶ್ಲೋಕವನ್ನು ಹಾಡಿ ಮುಗಿಸಿದಾಗ, ಪ್ರೇಕ್ಷಕರಿಗೆ ವಂದಿಸಿ, ಕಲಾಶದೊಂದಿಗೆ ಹಿಂದಿರುಗುವಾಗ, ಅಂದಿನ ಪ್ರದರ್ಶನ ಮುಕ್ತಾಯವಾಗುತ್ತದೆ. ಪ್ರದರ್ಶನಗೊಂಡ ಆಟಕಥೆಯ ಕೊನೆಯಲ್ಲಿರುವ ಮಂಗಳಶ್ಲೋಕವನ್ನೇ ಇಲ್ಲಿಯೂ ಬಳಸಲಾಗುತ್ತದೆ. ಕೆಲವು ಗಾಯಕರು ತಮಗೆ ಇಷ್ಟವಾದ ಕೆಲವು ಶ್ಲೋಕಗಳನ್ನು ಹೇಳುತ್ತಾರೆ. ಇದಕ್ಕೆ ಧನಾಶಿ ಹಾಡುವುದು ಎಂದು ಹೇಳುವರು. ‘ಧನಾಶಿ ಪಾಡುಗ’ ಎಂಬ ಪದವನ್ನು ಸರ್ವನಾಶ ಮಾಡುವುದು, ಹಾಳು ಮಾಡುವುದು ಎಂಬರ್ಥದಲ್ಲಿ ಜನಪದರು ಬಳಸುತ್ತಾರೆ. ಇದು ಕಥಕಳಿ ಪ್ರದರ್ಶನದ ಕೊನೆಯಾಗುವುದು ಎಂಬರ್ಥದ ಹಿನ್ನೆಲೆಯಲ್ಲಿ ಬಂದಿರುವ ಪದ.