ಕಥಕಳಿ ಪ್ರಭೇದಗಳು

ಯಕ್ಷಗಾನದಲ್ಲಿ ತೆಂಕು, ಬಡಗುತಿಟ್ಟುಗಳಿರುವಂತೆ ಕಥಕಳಿಯಲ್ಲೂ ಪ್ರಾದೇಶಿಕ ಪ್ರಭೇದಗಳಿವೆ. ಇದನ್ನು ತೆಕ್ಕನ್‌ಚಿಟ್ಟ(ತೆಂಕುತಿಟ್ಟು), ವಡಕ್ಕನ್‌ಚಿಟ್ಟ(ಬಡಗುತಿಟ್ಟು) ಎಂದೂ ಗುರುತಿಸಲಾಗುತ್ತದೆ. ಈಗಾಗಲೇ ಗಮನಿಸಿರುವಂತೆ ಸಾಂಸ್ಕೃತಿಕ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಕೇರಳದಲ್ಲಿ ಇದ್ದ ಹಾಗೂ ಹೊರಗಿನಿಂದ ಬಂದ ಕಲೆಗಳು ಸಮ್ಮಿಳನಗೊಂಡು ಕಥಕಳಿ ರೂಪುಗೊಂಡಿದೆ. ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆಯ ಹೆಜ್ಜೆ ಮೂಡಿಸಿದ ಸಾಂಸ್ಕೃತಿಕ ಪ್ರತಿಭೆಗಳ ಶ್ರಮದ ಸತ್ಫಲವೇ ಕಥಕಳಿ. ಈ ವಿಶೇಷವಾದ ಹಿನ್ನೆಲೆಯಲ್ಲಿ ಶತಮಾನಗಳಿಂದ ಕೇರಳದ ಸ್ವಂತಿಕೆಯನ್ನು ಉಳಿಸಿದ ಜಿನಪದ ಕಲೆಗಳೂ, ಪರಶುರಾಮ ಸೃಷ್ಟಿಯ ನೆಲದ ಶಾಸ್ತ್ರೀಯ ಕಲೆಗಳೂ ಕಥಕಳಿಯಲ್ಲಿ ಸೇರಿಕೊಂಡಿವೆ. ಭಕ್ತಿಪಂಥದ ತಿರುಳು ಹಾಗೂ ಶೈಲಿಯನ್ನು ಸ್ವೀಕರಿಸಿದ ಈ ಕಲೆ ಬೆಳೆದು ವಿಕಾಸಗೊಳ್ಳಲು ರಾಮಾಯಣ ಮೊದಲಾದ ಕೃತಿಗಳು ಸಾಕಷ್ಟು ನೆರವಾದವು. ರಾಜಕೀಯ ಅರಾಜಕತೆಯಲ್ಲಿಯೂ ಸಾಂಸ್ಕೃತಿಕ ಒಗ್ಗಟ್ಟಿನ ಘಟಕಗಳೆಂಬಂತೆ ವ್ಯಾಪಿಸಿದ ದೇವಸ್ಥಾನಗಳು ಕಥಕಳಿಯ ಬೆಳವಣಿಗೆಗೆ ಕಾರಣವಾದುವು. ಕೇರಳೀಯ ಬದುಕನ್ನು ಸ್ಪರ್ಶಿಸಿದ ಭಕ್ತಿಪಂಥದ ಮರು ಪ್ರದರ್ಶನ ಎಂಬಂತೆ ಹುಟ್ಟಿದ ಹಾಗೂ ಕೇರಳದಾದ್ಯಂತ ಏಕರೂಪವಾಗಿದ್ದ ದೇವಾಲಯಗಳ ಮೂಲಕ ಬೆಳೆದ ಕಥಕಳಿಯು ಒಂದೇ ರೀತಿಯಲ್ಲಿಲ್ಲ. ಕಥಕಳಿಗೆ ಪೋಷಣೆ ಹಾಗೂ ಪ್ರೋತ್ಸಾಹ ನೀಡಿದ ಸಣ್ಣ ದೊಡ್ಡ ರಾಜವಂಶಗಳು, ದೊರೆಗಳು ಕಥಕಳಿಯ ಭಿನ್ನ ಶೈಲಿಗಳಿಗೆ ಕಾರಣರಾದರು.

ಶಿಸ್ತು, ಕ್ರಮ, ನಿಯಮ, ವ್ಯವಸ್ಥೆ ಆಚಾರ ಪರಂಪರೆಗಳು ವಿಭಿನ್ನವಾಗಿರುವುದೇ ಒಂದು ಕಲಾ ಪ್ರಕಾರಾದ ಪ್ರಭೇದಕ್ಕೆ ಕಾರಣವಾಗಿರುತ್ತದೆ. ಸಾಮಾನ್ಯ ಸ್ವರೂಪವು ಒಂದೇ ಆಗಿದ್ದು ಪ್ರಾಯೋಗಿಕ ಅಂಶಗಳಲ್ಲಿ ಕಂಡುಬಂದ ವಿಭಿನ್ನತೆಯು ಕಥಕಳಿಯ ಪ್ರಾದೇಶಿಕ ಭಿನ್ನತೆಗೆ ಕಾರಣವಾಯಿತು.

ಮೂಲ ರೂಪ: ಕಥಕಳಿಯು ಹುಟ್ಟಿಕೊಂಡ ಕಾಲ ಇಂದಿಗೂ ಚರ್ಚೆಯ ವಿಷಯವಾಗಿದೆ. ಆದರೂ ಕೊಟ್ಟಾರಕರ ತಂಬುರಾನ್‌ ಹುಟ್ಟುಹಾಕಿದ ರಾಮನಾಟವೇ ಅದರ ಮೂಲರೂಪವೆಂದು ಐತಿಹ್ಯ ತಿಳಿಸುತ್ತದೆ. ಪ್ರಾದೇಶಿಕ ಪ್ರಭೇದಗಳನ್ನು ಅಧ್ಯಯನ ನಡೆಸುವಾಗ ಅದರ ಮೂಲ ಸ್ವರೂಪದ ಅರಿವು ಅಗತ್ಯ. ರಾಮನಾಟಂ ಮತ್ತು ಕೃಷ್ಣನಾಟಂ ಸಂಬಂಧ ಹಾಗೂ ಮೊದಲಿನಿಂದಲೇ ಈ ಐತಿಹ್ಯದಲ್ಲಿ ಕಂಡುಬರುವ ಉತ್ತರ ದಕ್ಷಿಣ ವಿವಾದವು ಕಥಕಳಿಯ ಅಧ್ಯಯನದಲ್ಲಿ ಮುಖ್ಯವಾಗಿದೆ.

ಮಹಾಕವಿ ಉಳ್ಳೂರರ ಪ್ರಕಾರ ಮಾನವೇದನ್‌ ತಂಬುರಾನ್‌ ಕೃಷ್ಣನಾಟವನ್ನು ರಚಿಸಿದ ಹತ್ತು. ಹನ್ನೆರಡು ವರ್ಷಗಳಲ್ಲಿ ರಾಮನಾಟಂ ಪ್ರಕಾರ ಹುಟ್ಟಿಕೊಂಡಿತು. ಕೂಡಿಯಾಟಂ ಎಂಬ ಅಭಿಜಾತೆ ಕಲೆ, ಮುಡಿಯೇಟ್ಟ್‌, ಕೋಲಂತುಳ್ಳಲ್‌, ಕಾಳಿಯಾಟ್‌, ಗರುಡನ್‌ ತೂಕಂ, ವೇಲಕಳಿ, ಪಳ್ಳಿಪಾನ ಮೊದಲಾದ ದಕ್ಷಿಣ ಕೇರಳದ ಜನಪದ ಕಲೆಗಳೂ ರಾಮನಾಟದ ಹುಟ್ಟಿಗೆ ಕಾರಣವಾದುವು. ರಾಮನಾಟದ ಉತ್ತರದ ಶೈಲಿಯನ್ನು ಪರಿಷ್ಕರಿಸುವಲ್ಲಿ ಕೃಷ್ಣನಾಟದ ಪ್ರಭಾವವಿರಬಹುದು. ಜನಪದ ಕಲಾಪ್ರಕಾರಗಳಿಂದ ಸ್ವೀಕರಿಸಿದ ಲೋಕಧರ್ಮಿ ಪ್ರಯೋಗಗಳು ಸಾಮಾನ್ಯ ಜನರಿಗೂ ಅರ್ಥವಾಗುವ ಆಹಾರ್ಯ ವಾಚಿಕಾದಿಗಳೂ, ರಾಮಾಯಣವನ್ನು ಆಧರಿಸಿ ಬರೆದ ಕಥೆಗಳೂ ರಾಮನಾಟಕ್ಕೆ ಅಪೂರ್ವವಾದ ಜನಪ್ರಿಯತೆಯನ್ನು ತಂದುಕೊಟ್ಟವು. ರಾಮನಾಟದ ವೇಷ ವಿಧಾನದಲ್ಲಿ ಕೂಡಿಯಾಟದ ಪ್ರಭಾವ ನಿಚ್ಚಳವಾಗಿದ್ದರೂ, ರಾಮಲಕ್ಷ್ಮಣರಿಗೆ ನೀಲಬಣ್ಣ ಹಾಗೂ ಸ್ತ್ರೀ ವೇಷಗಳ ಬಿಳಿಬಣ್ಣವನ್ನು ‘ಗಂಧರ್ವಪಾಟಿ’ನ(ಗಂಧರ್ವ ಹಾಡು) ಅನುಕರಣೆಯಿಂದ ಸ್ವೀಕರಿಸಿದ್ದಾರೆ. ರಾವಣಾದಿ ದುಷ್ಟ ಪಾತ್ರಗಳಿಗೆ ವಾಲಿ ಮೊದಲಾದ ವಾನರ ವೇಷಗಳಿಗೆ ರೌದ್ರಭಾವದ ಮುಖವಾಡಗಳನ್ನು ಬಳಸಿದ್ದೇ ಕೋಲಂ ತುಳ್ಳಲ್‌ನ ಅನುಕರಣೆಯಿಂದಾಗಿರಬಹುದು ಎಂಬೊಂದು ಅಭಿಪ್ರಾಯವಿದೆ. ನಿಣ, ಪಕ್ಷಿ ವೇಷಗಳು, ತೆರೆಪುರಪಾಡ್‌ ಇತ್ಯಾದಿಗಳನ್ನು ಮುಡಿಯೇಟ್ಟ್, ಪಡಯಣಿ, ವೇಲಕಳಿ ಮೊದಲಾದ ಜನಪದ ಕಲೆಗಳಿಂದ ಸ್ವೀಕರಿಸಿರಬೇಕು. ಕಲಾವಿದರೇ ಹಾಡಿ ಕುಣಿಯುತ್ತಿದ್ದ ರೀತಿ ಜನಪದ ಕಲೆಗಳ ಪ್ರಭಾವವನ್ನು ಸೂಚಿಸುತ್ತದೆ. ಸಾಹಿತ್ಯದ ಕೃತಿಯಾಗಿ ರಾಮನಾಟಂ ಕೃತಿಗಳಿಗೆ ತುಂಬ ಪ್ರಾಧಾನ್ಯವಿಲ್ಲದಿದ್ದರೂ ಕಥಕಳಿ ಪಠ್ಯಗಳ ಮೊದಲ ರೂಪ ಎಂಬ ನೆಲೆಯಲ್ಲಿ ಬಹಳ ಮಹತ್ವವಿದೆ.

ವೆಟ್ಟತ್ತು ಸಂಪ್ರದಾಯ

ರಾಮನಾಟಂ ಪ್ರಕಾರವು ತಿರುವಿದಾಂಕೂರಿನ ಹಲವು ಭಾಗಗಳಲ್ಲಿ ಪ್ರಚಾರಗೊಂಡು, ಕ್ರಮೇಣ ಉತ್ತರ ಕೇರಳವನ್ನು ಪ್ರವೇಶಿಸಿದಾಗ ವೆಟ್ಟತ್ತು ಸಂಪ್ರದಾಯವೆಂಬ ಹೆಸರಿನಲ್ಲಿ ಪರಿಷ್ಕಾರಗೊಂಡಿತು. ‘ವೆಟ್ಟಂ ಕಳಿಯೋಗ’ದ ಗುರುವಾಗಿದ್ದವರು ಶಂಕರನ್‌ ನಾಯರ್. ವೆಟ್ಟತ್ತು ರಾಜನ ಸೇನಾಧಿಪತಿಯೂ ವೇಷಧಾರಿಯೂ ಆಗಿದ್ದ ಕೋಮಲನಾಯರ್ ರ ಸಹಕಾರದೊಂದಿಗೆ ವೆಟ್ಟತ್ತುರಾಜ ಕಥಕಳಿಗೆ ತುಂಬಾ ಪ್ರೋತ್ಸಾಹವನ್ನು ನೀಡಿದ. ಕೂತ್ತು ಹಾಗೂ ಕೂಡಿಯಾಟದ ಮುದ್ರೆಗಳನ್ನು ಅವರು ಸ್ವೀಕರಿಸಿದರು. ರಾಮಲಕ್ಷ್ಮಣರಿಗೆ ಮುಖವರ್ಣಿಕೆಯಲ್ಲಿ ನೀಲಿಬಣ್ಣದ ಬದಲಾಗಿ ಹಸಿರು ಬಳಸಿದರು. ಮುಖವಾಡಗಳನ್ನು ತ್ಯಜಿಸಿ, ರಾಕ್ಷಸ ಪಾತ್ರಗಳಿಗೂ. ವಾನರ ಪಾತ್ರಗಳಿಗೂ ಮುಖವರ್ಣಿಕೆ ಆರಂಭಿಸಿದರು. ಕಣ್ಣಿನ ಬರವಣಿಗೆ, ಚುಂಡಪೂ ಹಾಕಿ ಕಣ್ಣುಗಳನ್ನು ಕೆಂಪಗಾಗಿಸುವ ಕ್ರಮ ಋಷಿ ಮತ್ತು ಬ್ರಾಹ್ಮಣ ವೇಷಗಳ ಹೊರತಾಗಿ ಎಲ್ಲ ವೇಷಗಳಿಗೂ ಇದೆ. ವೆಟ್ಟತತು ಸಂಪ್ರದಾಯದ ಆಹಾರ್ಯ ಪರಿಷ್ಕರಣೇಯ ಫಲವಾಗಿ ಅಂಗಿ ಉಡುಪುಗಳ ಬಳಕೆ, ಸ್ತ್ರೀ ವೇಷಗಳಿಗೆ ಮನಯೋಲದಿಂದ ಮುಖ ಮಿನುಗಿಸಿ, ಅಂಗಿ ಹಾಗೂ ನೆರಿಗೆ ಇರುವ ಉಡುಪುಗಳನ್ನು ನಿಗದಿ ಪಡಿಸಲಾಯಿತು.

ಪರಿಷ್ಕೃತವಾದ ರಾಮನಾಟಂ ವೆಟ್ಟತ್ತು ಸಂಪ್ರದಾಯ ಎಂಬ ಹೆಸರಿನಲ್ಲಿ ದಕ್ಷಿಣದಲ್ಲಿ ಪ್ರಚಾರಗೊಂಡು ತಿರುವನಂತಪುರದವರೆಗೆ ಪ್ರಚಾರ ಪಡೆಯಿತು. ಆದರೆ ಕಲ್ಲಡಿಕೋಡನ್‌ ಸಂಪ್ರದಾಯ ಪ್ರಚಾರದೊಂದಿಗೆ ಉತ್ತರಭಾಗದಲ್ಲಿ ಇದು ತನ್ನ ಸ್ವಂತಿಕೆಯನ್ನು ಕಳೆದುಕೊಂಡು ಹೊಸ ಸಂಪ್ರದಾಯವನ್ನು ಸ್ವೀಕರಿಸಿತು.

ಕೋಟ್ಟಯಂ ತಂಬುರಾನ್ಹಾಗೂ ಕಲ್ಲಡಿಕೋಡನ್ಸಂಪ್ರದಾಯ

ಕಥಕಳಿ ಇತಿಹಾಸದಲ್ಲಿ ಕೋಟ್ಟಯಂ ತಂಬುರಾನನಿಗೆ ವಿಶಿಷ್ಟ ಸ್ಥಾನವಿದೆ. ಪ್ರತಿಭಾವಂತರಾದ ಅವರು ವೆಟ್ಟತ್ತು ಸಂಪ್ರದಾಯದ ಅಪರಿಷ್ಕೃತ ಅಂಶಗಳನ್ನು ತನ್ನ ಪ್ರತಿಭೆಯಿಂದ ಪುನರ್ ಸೃಷ್ಟಿಸಿ ಭಕ್ತಿ ಪಂಥದ ಕಲೆಯಾದ ಕಥಕಳಿಯನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದರು. ಪಾತ್ರಗಳನ್ನು ಸೇರಿಸಿಕೊಂಡು ಈ ಕೇರಳಿಯ ಕಲೆಯನ್ನು ಸಾಧಾರಣೀಕರಣಗೊಳಿಸಿದ ಕಲಾ ವಿದ್ವಾಂಸರೇ ತಂಬುರಾನ್‌.

ಆಟಕಥಾ ಸಾಹಿತ್ಯದ ನಿಧಿಗಳಂತಿರುವ, ವಿದ್ವಾಂಸರಿಂದ ಹೊಗಳಿಕೆಗೆ ಒಳಗಾದ ಅವರ ನಾಲ್ಕು ಕೃತಿಗಳು ಕಥಕಳಿಗೆ ಒಂದು ಶಿಸ್ತನ್ನು ಒದಗಿಸಿದುವು. ತಂಬುರಾನ್‌ ಕಳಿಯೋಗದ ಗುರುವಾದ ಚಾತುಪಣಿಕ್ಯರು ಕೊಚ್ಚಿ ತಂಬುರಾನನ ರಾಮನಾಟಂ ಯೋಗದ ಗುರುವಾಗಿದ್ದರು. ಇವರ ನೇತೃತ್ವದಲ್ಲಿ ತಂಬುರಾನ್‌ ಆವಿಷ್ಕರಿಸಿದ ಹೊಸ ಪದ್ಧತಿ ಹಾಗೂ ಶಿಸ್ತುಗಳನ್ನು ಕಲ್ಲಡಿಕೋಡನ್‌ ಸಂಪ್ರದಾಯ ಎಂದು ಕರೆಯಲಾಗುತ್ತದೆ.

ಕಲ್ಲಡಿಕೋಡನ್‌ ಸಂಪ್ರದಾಯದ ಮೂಲಕ ಕಥಕಳಿಯು ನಾಟ್ಯಶಾಸ್ತ್ರವನ್ನು ಅನುಸರಿಸಿ ಒಂದು ಮಾರ್ಗಕಲೆಯಾಗಿ ಬೆಳೆಯಿತು. ತಂಬುರಾನರ ಕಥೆಗಳ ಆಂಗಿಕ ಹಾಗೂ ವಾಚಿಕಾಭಿನಯಗಳ ಸಮ್ಮೇಳನ ಹಾಗೂ ನಾಟ್ಯ, ನೃತ್ಯ, ಸಾಹಿತ್ಯ, ಸಂಗೀತಗಳ ಸಮನ್ವಯದಿಂದ ಬೆಳವಣಿಗೆ ಹೊಂದಿತು. ಇಬ್ಬರು ಭಾಗವತರು ಹಾಡುವಾಗ ಕಲಾವಿದ ಒಂದು ಬಾರಿ ಮುದ್ರೆಗಳ ಅಭಿನಯ ತೋರಿಸಿದರೆ ಸಾಕು ಎಂದು ನಿರ್ದೇಶಿಸಿದ್ದು ಕಲ್ಲಡಿಕೋಡನ್‌ ಸಂಪ್ರದಾಯ. ಸುಲಲಿತವಾದ ಹಾಡುಗಳು, ಶೃಂಗಾರ ಪದಗಳೂ ಕಥಕಳಿಯ ವಿಶೇಷ ಕಲಾಸಂಕೇತವಾದುದು ಈ ಸಂಪ್ರದಾಯದ ಕೊಡುಗೆಯಾಗಿದೆ. ವೆಟ್ಟಂ ಸಂಪ್ರದಾಯದ ನೃತ್ಯ ರೀತಿಗಳನ್ನು ತಾಳಾತ್ಮಕವಾಗಿ ಪ್ರಯೋಗ ಮಾಡಿದವರು. ಇವರೇ. ‘ಅಷ್ಟಕಲಶಂ’, ‘ವಲಿಯ ಕಲಾಶ’ಗಳನ್ನು ಸಾಂದರ್ಭಿಕವಾಗಿ ನೃತ್ಯಗಳೊಂದಿಗೆ ಪರಿಷ್ಕರಿಸಿದರು.

ಕಥಕಳಿಯಲ್ಲಿ ಉತ್ತರದ ಸಂಪ್ರದಾಯ ಎಂಬ ಪ್ರಕಾರವು ಕಲ್ಲಡಿಕೋಡನ್‌ ಸಂಪ್ರದಾಯದೊಂದಿಗೆ ಆರಂಭವಾಯಿತು. ತಜ್ಞರಾದ ಗುರುಗಳ ಕಳರಿ ಅಭ್ಯಾಸ ಹಾಗೂ ನೃತ್ಯ ಪರಿಶ್ರಮದಿಂದ ಪರಿಷ್ಕರಿಸಿ ಕಲ್ಲಡಿಕೋಡನ್‌ ಸಂಪ್ರದಾಯವು ಇಂದಿನ ಉತ್ತರ ಭಾಗದ ಕಥಕಳಿಯಾಗಿ ಪ್ರಸಿದ್ಧಿ ಪಡೆದಿದೆ. ಕೋಟ್ಟಯಂ ತಂಬುರಾನನ ಉದಾತ್ತ ರೂಪ ಕಲ್ಪನೆಯಿಂದ ಮೂಡಿ ಬಂದರೂ, ಕೇವಲ ಕೊಟ್ಟಯಂ ಕಥೆಗಳಿಗೆ ಸೀಮಿತವಾಗಿದ್ದ ಅದರ ಶಿಸ್ತು ಮುಂದೆ ವಿಸ್ತರಿಸಿಕೊಳ್ಳುವುದಕ್ಕೆ ಕಾರಣವಾಯಿತು.

ಕಪ್ಲಿಂಗಾಡನ್ಸಂಪ್ರದಾಯ

ಕಥಕಳಿಗೆ ಕಲಾವಂತಿಕೆಯ.ಪರಿಪೂರ್ಣತೆಯನ್ನು ಒದಗಿಸಿದ ಈ ವಿಭಾಗವು ಪರಂಪರೆಗಿಂತ ಭಿನ್ನವಾಗಿ ಅದರ ಪರಿಷ್ಕೃತದ ಹೆಸರಿನಲ್ಲೇ ಪ್ರಸಿದ್ಧವಾಗಿದೆ. ಸಕಲ ಕಲಾಪ್ರವೀಣನಾದ ಕಪ್ಲಿಂಗಾಡ್‌ ನಂಬೂದಿರಲಿಯ ವಿಶಾಲವಾದ ಮನೋಧರ್ಮ. ಹಾಗೂ ಅಸಾಮಾನ್ಯ ವ್ಯಕ್ತಿತ್ವದ ಈ ವೈಶಿಷ್ಟ್ಯಕ್ಕೆ ಕಾರಣವಾಗಿರಬಹುದು. ಕಥಕಳಿಪಾಟ್‌ ಹಾಗೂ ಮೇಳದಲ್ಲಿ ಪ್ರಾವೀಣ್ಯವನ್ನು ಪಡೆದ ನಂಬೂದಿರಿ, ಕೂಡಿಯಾಟದ ರಸಾಭಿನಯವನ್ನು ಸೇರಿಸಿ ಕಥಕಳಿಯನ್ನು ಪರಿಷ್ಕರಿಸಿದರು. ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಅವರು ತನ್ನದೇ ಕಳಿಯೋಗವನ್ನು ಸ್ಥಾಪಿಸಿ ‘ಚೊಲ್ಲಿಯಾಟ’ಕ್ಕೆ ನೇತೃತ್ವ ವಹಿಸಿದರು. ಪರಿಷ್ಕಾರ ಹಾಗೂ ಪ್ರಯೋಗಗಳಿಂದ ಬೆಳೆದ ಈ ಶೈಲಿ ಕಾರ್ತಿಕ ತಿರುನಾಳ್‌ ರಾಜರು ಪ್ರೋತ್ಸಾಹಿಸಿದಾಗ ಹೆಚ್ಚು ಪ್ರಕಾರ ಪಡೆಯಿತು.

ಕಪ್ಲಿಂಗಾಡನ್‌ ಸಂಪ್ರದಾಯದ ಹೊಸತನಗಳು ಕಥಕಳಿಯನ್ನು ಸಮಗ್ರವಾಗಿ ಸ್ಪರ್ಶಿಸುವಂತಿತ್ತು. ಈ ಹೊಸತನಗಳಿಗೆ ಹಲವಾರು ಆಯಾಮಗಳಿದ್ದವು. ಉತ್ತರದಲ್ಲಿ ಅದು ಕಲ್ಲಡಿಕೋಡನ್‌ ಸಂಪ್ರದಾಯದ ಪರಿಷ್ಕಾರವಾಗಿದ್ದರೆ, ದಕ್ಷಿಣದಲ್ಲಿ ರಾಮನಾಟದ ಪರಿಷ್ಕೃತ ರೂಪವಾಗಿತ್ತು. ದಕ್ಷಿಣ ಶೈಲಿಯಲ್ಲಿ ತನ್ನ ಕಲಾಕೌಶಲ್ಯ ಸರ್ವಸ್ವವನ್ನು ನಿಕ್ಷೇಪಿಸಲು ಕಪ್ಲಿಂಗಾಡನಿಗೆ ಸಾಧ್ಯವಾದಂತೆ ಉತ್ತರದಲ್ಲಿ ಸಾಧ್ಯವಾಗಲಿಲ್ಲ. ಅಲ್ಲಿ ಸ್ವಲ್ಪ ತಡವಾಗಿಯಾದರೂ ಈ ಹೊಸತನಗಳನ್ನು ಒಂದು ಹಂತದವರೆಗೆ ಸ್ವೀಕರಿಸಿದರು. ಭಾರವಾದ ವೇಷಭೂಷಣಗಳು, ದಪ್ಪ ಚುಟಟಿ, ವೈವಿಧ್ಯಮಯ ಮುಖವರ್ಣಿಕೆ. ಚುವನ್ನತಾಡಿ ಹಾಗೂ ಕತ್ತಿವೇಷಗಳಿಗೆ ಹಣೆ ಹಾಗೂ ಮೂಗಿನಲ್ಲಿ ಚುಟ್ಟಿಪೂ, ಚಾಮರಂ, ಕಚ್ಚಮಣಿ, ಮಹರ್ಷಿ ವೇಷಗಳಿಗೆ ನಾರದಮುಡಿ ಮೊದಲಾದುವು ಆಹಾರ್ಯ ಪರಿಷ್ಕಾರಗಳಾಗಿವೆ. ‘ಹಸ್ತ ಲಕ್ಷಣ ದೀಪಿಕಾ’ ಕೃತಿಯಲ್ಲಿ ಹೇಳಿದಂತೆ ಮುದ್ರೆಗಳನ್ನು ಕಥಕಳಿಯಲ್ಲಿ ಆರಂಭಿಸಿದವರು ಕಪ್ಲಿಂಗಾಟ್‌ ನಂಬೂದಿರಿ. ಕೊರಳಿಗೆ ಸಮ ಮುದ್ರೆ ತೋರಿಸುವ ಕಲ್ಲಡಿಕೋಡನ್‌ ರೀತಿಯ ಬದಲಿಗೆ ಮೊಣಕಾಲೆತ್ತಿ ಹೃದಯಕ್ಕೆ ಸಮ ಮುದ್ರೆ ತೋರಿಸುವ ಸಂಪ್ರದಾಯವನ್ನು ಆರಂಭಿಸಿದವರೂ ಇವರೇ. ಕಥಕಳಿಯ ಶಿಸ್ತುಗಳಿಗೆ ಸಂಬಂಧಿಸಿದಂತೆ ಕೋಟ್ಟಯಂ ತಂಬುರಾಣ್‌ ನಿರ್ದಿಷ್ಟಪಡಿಸಿದ ಸಂವಿಧಾನವನ್ನು ಅವರು ಬದಲಾಯಿಸಿದರು.

ಪ್ರಾದೇಶಿಕ ಭೇದಗಳು

ಕಪ್ಲಿಂಗಾಡನ್‌ ಸಂಪ್ರದಾಯದ ಸತ್ವವನ್ನು ಒಳಗೊಂಡಿರುವುದು ಕಥಕಳಿಯ ದಕ್ಷಿಣ ಶೈಲಿಯಾಗಿದೆ. ಧರ್ಮರಾಜ ಕಾರ್ತಿಕ ತಿರುನಾಳ, ಚಿತ್ರ ತಿರುನಾಳ್‌, ಕಪ್ಲಿಂಗಾಡ್‌ ನಂಬೂದಿರಿ ಮೊದಲಾದ ಅಂದಿನ ಕಥಕಳಿ ಆಚಾರ್ಯರಿಂದ ಈ ಪ್ರಭೇದ ಬೆಳೆಯಿತು. ಕುಣಿತ, ಆಟಗಳಿಂದ ಮುಕ್ತಿ ನೀಡಿ, ಜೀವನ ಚಕ್ರದ ಅವಸ್ಥೆಗಳನ್ನು ಅನುಕರಿಸಿ ಪ್ರತಿಫಾಲಿಸುವಂತೆ ಮಾಡಿದ ಈ ದಕ್ಷಿಣದ ಶೈಲಿ ನಳಚರಿತೆಯಂತಹ ನಾಟಕೀಯ ಕಥೆಗಳನ್ನು ಹಾಗೂ ನಳನುಣ್ಣಿಯಂತಹ ಮಹಾನ್‌ ಕಲಾವಿದರನ್ನು ಸೃಷ್ಟಿಸಿದೆ. ಈ ಪ್ರಭೇದವು ಮುಂದೆ ವಿವಿಧ ಕೇಂದ್ರಗಳಲ್ಲಿ ಪ್ರಚಾರ ಪಡೆಯಿತು.

ದಕ್ಷಿಣದ ಕಥಕಳಿ ಪ್ರೇಮಿಗಳಿಗೆ ಸುಪರಿಚಿತವಾದ ಒಂದು ಪ್ರಭೇದ ಕಿಡಙೂರುವಳಿ. ಏಟುಮಾನ್ನೂರಿನ ನಳನುಣ್ಣಿಯಿಂದ ಪರಿಷ್ಕೃತವಾದ ಕಥಕಳಿ ಪ್ರಭೇದ ಇದು.

ದಕ್ಷಿಣೋತ್ತರ ಸಂಪ್ರದಾಯಗಳಲ್ಲಿ ಮುಖವರ್ಣಿಕೆ

ಮುಖವರ್ಣಿಕೆಯಲ್ಲಿ ಎರಡು ಸಂಪ್ರದಾಯಗಳ ಮಧ್ಯೆ ಇರುವ ಅಂತರ ಈಗ ಕಡಿಮೆಯಾಗಿದೆ. ವೇಷಗಳ ಸ್ವಭಾವ ಹಾಗೂ ಪ್ರಧಾನ್ಯವನ್ನು ಹೊಂದಿಕೊಂಡು, ಚುಟ್ಟಿಯ ರಚನೆ ಹಾಗೂ ಕಣ್ಣು, ಹುಬ್ಬುಗಳ ಬರವಣಿಗೆಯಲ್ಲಿ, ತುಟಿಗಳ ಕೊನೆಯ ಬೊಟ್ಟಿನಲ್ಲಿ ಪ್ರಮಾಣ ಬದ್ಧತೆಯನ್ನು ಪಾಲಿಸಬೇಕೆಂಬ ನಿಯಮ ದಕ್ಷಿಣದ ಸಂಪ್ರದಾಯದಲ್ಲಿದೆ. ಆದರೆ ಉತ್ತರದ ಸಂಪ್ರದಾಯದಲ್ಲಿ ಇಂತಹ ಮುಖವರ್ಣಿಕೆಯಲ್ಲಿ ‘ಆದ್ಯವಸಾನಂ’ ವೇಷ ಹಾಗೂ ಕುಟ್ಟಿತರ ವೇಷಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲದ ಸ್ಥಿತಿಯಿದೆ. ಪುರಪ್ಪಾಡಿಗೆ ವೇಷಹಾಕುವ ಪಚ್ಚೆವೇಷದವನೂ ‘ಆದ್ಯವಸಾನಂ’ ಕಥಾಪಾತ್ರದ ಪಚ್ಚೆವೇಷದವನೂ ಮುಖ ತುಂಬ ಬಣ್ಣ ಬಳಿಯುವ ರೀತಿ ದಕ್ಷಿಣ ಸಂಪ್ರದಾಯದಲ್ಲಿಲ್ಲ. ಕತ್ತಿ ವೇಷಗಳ ಬಣ್ಣಗಾರಿಕೆಯಲ್ಲಿ ಎರಡು ಕಡೆಯ ವೇಷಗಳಿಗೂ ವ್ಯತ್ಯಾಸಗಳಿವೆ. ವಡಕ್ಕನ್‌ (ಉತ್ತರ) ಕತ್ತಿವೇಷದ ಬರವಣಿಗೆಯು ಗಲ್ಲವನ್ನು ಇಳಿಸಿ, ಹುಬ್ಬಿನ ಮೇಲೆ ದಟ್ಟ ಕೆಂಪು ಬಣ್ಣ ಲೇಪಿಸಿ, ಮೂಗಿನ ಎರಡು ಬದಿಯಲ್ಲಿರುವ ಕತ್ತಿಯ ಮೊನಗೆಳನ್ನು ಕಣ್ಣಿನ ದೃಷ್ಟಿಯೆಡೆಗೆ ಎಳೆದಿರುತ್ತಾರೆ. ಇದಕ್ಕೆ ಭಿನ್ನವಾಗಿ ದಕ್ಷಿಣದ (ತೆಕ್ಕನ್‌) ಕತ್ತಿ ವೇಷವಿರುತ್ತದೆ. ತೆಕ್ಕನ್‌ ನೆಡುಂಗತ್ತಿಯು ಸಾಮಾನ್ಯವಾಗಿ ಉತ್ತರದ (ವಡಕ್ಕನ್‌) ಕುರುಂಗತ್ತಿಯಂತಿರುತ್ತದೆ.

ಚೊಲ್ಲಿಯಾಟಂ, ಇಳಗಿಯಾಟಂ ಮೊದಲಾದ ಸಂಪ್ರದಾಯಗಳಲ್ಲಿ ವ್ಯತ್ಯಾಸಗಳಿವೆ. ಉತ್ತರದ ಶೈಲಿಯಲ್ಲಿ ತಗ್ಗಿದ ಸ್ವರದ ಚೊಲ್ಲಿಯಾಟವು ಅಭ್ಯಾಸ ಮಾಡುವಾಗ ಇಂತಹ ರೀತಿಯನ್ನು ದಕ್ಷಿಣದ ಶೈಲಿಯಲ್ಲಿ ಬಳಸುವುದಿಲ್ಲ. ತಗ್ಗಿದ ಸ್ವರವು ಕಥೆಯ ನಾಟಕೀಯತೆ ಹಾಗೂ ಗತಿಗೆ ಭಂಗವುಂಟುಮಾಡುವುದೆಂದು ದಕ್ಷಿಣದ ಶೈಲಿಯ ತಿಳುವಳಿಕೆಯಾಗಿದೆ.

ದಕ್ಷಿಣ ನಾಡಿನ ಕಪ್ಲಿಂಗಾಟ್‌ ಸಂಪ್ರದಾಯ ಹಾಗೂ ಉತ್ತರದ ಕಲ್ಲುವಳಿ ಶೈಲಿಯ ಮಧ್ಯೆ ಇರುವ ಅಂತರ ಇತ್ತೀಚೆಗೆ ಕ್ರಮೇಣ ಕಡಿಮೆಯಾಗುತ್ತಿದೆ. ಸೀಮಾ ರೇಖೆಗಳನ್ನು ಉಲ್ಲಂಘಿಸಿ ಕಥಕಳಿಯನ್ನು ಏಕೀಕರಿಸಲು ಮೊದಲು ರಂಗಕ್ಕಿಳಿದವರು ಹಾಡುಗಾರರು ಮತ್ತು ಹಿಮ್ಮೇಳದವರು. ದಕ್ಷಿಣ ಹಾಗೂ ಉತ್ತರದ ಶೈಲಿಯಲ್ಲಿ ಒಂದೇ ರೀತಿ ಪ್ರಸಿದ್ಧರಾದ ಕಲಾವಿದರು ಹಿಂದೆ ಇದ್ದರು. ದಕ್ಷಿಣೋತ್ತರ ಸಂಪ್ರದಾಯಗಳನ್ನು ಒಳಗೊಂಡು ಸಮಗ್ರ ಕಥಕಳಿ ಸಂಪ್ರದಾಯವನ್ನು ಬೆಳೆಸಿದ ಹಿರಿಮೆ ಈ ಎಲ್ಲ ಕಲಾವಿದರಿಗೆ ಸಲ್ಲಬೇಕು.

ಹೀಗೆ ಕಥಕಳಿ ಅನೇಕ ಕಲಾವಿದರ ಶ್ರಮದಿಂದ ವಿಭಿನ್ನ ಪ್ರಾದೇಶಿಕ ಶೈಲಿಗಳಾಗಿ ರೂಪುಗೊಂಡು ಕಾಲದಿಂದ ಕಾಲಕ್ಕೆ ಬೆಳೆದು ಬಂದಿದೆ. ಇಂದು ಬಾಹ್ಯನೋಟಕ್ಕೆ ಕಥಕಳಿ ಏಕಶೈಲಿಯ ಕಲೆಯಾಗಿ ಕಾಣಿಸಬಹುದು. ಆದರೆ ಅದರ ಆಂತರ್ಯದಲ್ಲಿ ಇರುವ ಶೈಲಿಗಳ ಭೇದ ತಜ್ಞರಿಗೆ ಮಾತ್ರ ಗೋಚರಿಸುವುದು. ಈ ಸ್ಥೂಲ ಇತಿಹಾಸದಲ್ಲಿ ಕಥಕಳಿಯು ರೂಪುಗೊಂಡು ಬೆಳೆದುಬಂದ ಬಗೆಯನ್ನು ಹಾಗೂ ಅದಕ್ಕಾಗಿ ಶ್ರಮಿಸಿದ ಪ್ರಮುಖ ವಿದ್ವಾಂಸರ ಕೊಡುಗೆಗಳನ್ನು ಕಂಡುಕೊಳ್ಳಬಹುದು.

ಉಪಸಂಹಾರ

ಕೇರಳ ಕಲಾ ಮಂಡಲದ ಮೂಲಕ ಕಥಕಳಿ ಇಂದು ಜಗತ್ಪ್ರಸಿದ್ಧ ಕಲೆಯಾಗಿ ರೂಪು ಪಡೆದಿದೆ. ವಿವಿಧ ಮಾಧ್ಯಮಗಳ ಮೂಲಕ ಕಥಕಳಿ ಹಿಂದೆಂದಿಗಿಂತ ಹೆಚ್ಚು ಜನಪ್ರಿಯವಾಗಿದೆ. ಪಾರಂಪರಿಕವಾಗಿ ಆಶ್ರಯದಾತರಾಗಿದ್ದ ರಾಜ ಮನೆತನದವರು ಮತ್ತು ಶ್ರೀಮಂತ ಜಮೀನ್ದಾರರುಗಳಿಂದ ಬಿಡುಗಡೆ ಪಡೆದು ಮುಕ್ತವಾಗಿದೆ. ದೇಶ ವಿದೇಶಗಳ ಜನ ಬಂದು ಕಲಿಯುವಂತಾಗಿದೆ. ಪೌರಾಣಿಕ ಕಥಾನಕಗಳಲ್ಲದೆ ‘ಮಗ್ದಲದ ಮರಿಯಳು’ ಮೊದಲಾದ ಕಥಾನಕಗಳು ಕಥಕಳಿಯ ಮೂಲಕ ಪ್ರದರ್ಶನ ಕಂಡಿವೆ. ಮಹಿಳೆಯರೂ ಕಥಕಳಿಯ ಕಲಾವಿದರಾಗಿ ಹೊರಹೊಮ್ಮಿದ್ದಾರೆ. ಕಾಲಮಿತಿಯ ಪ್ರದರ್ಶನಗಳ ಮೂಲಕ ಆಸಕ್ತರಾಗಿ ಅಗತ್ಯವೆನಿಸಿದಾಗ ಲಭ್ಯವಾಗುವ ಕಲೆಯಾಗಿ ಕಥಕಳಿ ಪ್ರಸಿದ್ಧಿ ಪಡೆದಿದೆ. ನಿರ್ದಿಷ್ಟ ವಿದ್ವಜ್ಜನರ ಮುಂದೆ ಪ್ರದರ್ಶನಗೊಳ್ಳುವ ಪ್ರಬುದ್ಧ ಮಲಯಾಳಂ ಕಲೆಯಾಗಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಥಕಳಿಯ ಹುಟ್ಟು ಹಾಗೂ ಬೆಳವಣಿಗೆಯ ಇತಿಹಾಸವನ್ನು ಕುರಿತಂತೆ ವಿದ್ವಾಂಸರನೇಕರು ಮಲಯಾಳಂನಲ್ಲಿ ಬರೆದಿದ್ದಾರೆ. ಕಥಕಳಿಯ ಹಿನ್ನೆಲೆ ಹಾಗೂ ಪರಿಚಯಾತ್ಮಕವಾದ ಮಾಹಿತಿಗಳನ್ನು ಆ ಬರೆಹಗಳ ಆಧಾರದಿಂದ ಪ್ರಸ್ತುತ ಕೃತಿಯಲ್ಲಿ ಕ್ರೋಡೀಕರಿಸಿದೆ.

ಕಥಕಳಿಗೂ ತೆಂಕುತಿಟ್ಟು ಯಕ್ಷಗಾನಕ್ಕೂ ಅನೇಕ ವಿಷಯಗಳಲ್ಲಿ ಸಾಮ್ಯವಿದೆ. ಕಥಕಳಿಯಂತೆ ಯಕ್ಷಗಾನವು ಸಂಕೀರ್ಣ ಕಲೆಯೇ ಹೌದು. ಆದರೆ ಕಥಕಳಿಯನ್ನು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಅನೇಕ ಪ್ರತಿಭಾವಂತ ಕಲಾವಿದರು, ವಿದ್ವಾಂಶರು ಪ್ರಯತ್ನಪೂರ್ವಕವಾಗಿ ರೂಪಿಸಿದ್ದಾರೆ. ಪ್ರೌಢರಾದ ವಿದ್ವಾಂಸರಿಗೆ ಮಾತ್ರ ಅರ್ಥವಾಗುವ ಈ ಕಲೆ ತನ್ನ ಸರ್ವಾಂಗಗಳಲ್ಲಿಯೂ ವಿದ್ವತ್ತಿನ ಸ್ಪರ್ಶವನ್ನು ಬಳಸಿಕೊಂಡಿದೆ. ಯಕ್ಷಗಾನವಾದರೊ ಅನಕ್ಷರಸ್ಥರಾದ ಪ್ರತಿಭಾವಂತ ಕಲಾವಿದರು ರೂಪಿಸಿ ಅನಕ್ಷರಸ್ಥ ಪ್ರೇಕ್ಷಕರ ಮನರಂಜನೆಗಷ್ಟೇ ಸೀಮಿತವಾಗಿ ಉಳಿಯಿತು. ಕಥಕಳಿಯಂತಹ ಕಲೆಯು ಬೆಳೆದು ಜಾಗತಿಕ ಮಟ್ಟದಲ್ಲಿಯೂ ಪ್ರಸಿದ್ಧಿಯನ್ನು ಪಡೆಯಲು ವಿದ್ವಾಂಸರ ಶ್ರಮವೇ ಕಾರಣ. ಕಥಕಳಿಯನ್ನು ಒಂದು ನಾಡಿನ ಪ್ರಾತಿನಿಧಿಕ ಕಲೆಯಾಗಿ ರೂಪಿಸುವ ಕಾಳಜಿಯೂ ಇದರ ಹಿಂದಿತ್ತು. ಯಕ್ಷಗಾನದಂತಹ ಕಲೆಗಳಿಗೆ ಆ ತೆರನ ವಿದ್ವತ್‌ಸ್ಪರ್ಶ ಸಾಧ್ಯವಾಗಿಲ್ಲ. ಕೋಟ ಶಿವರಾಮ ಕಾರಂತರ ಶ್ರಮ ನಮ್ಮ ಮುಂದಿದ್ದರೂ ಯಕ್ಷಗಾನವನ್ನು ಸಮಗ್ರ ಕರ್ನಾಟಕದ ಕಲೆಯಾಗಿಸುವ ನೆಲೆಯಲ್ಲಿ ಪ್ರಯತ್ನಗಳು ಆಗಲಿಲ್ಲ. ಕರ್ನಾಟಕದ ಎಲ್ಲಾ ಯಕ್ಷಗಾನ ಪ್ರಭೇದಗಳ ಗುಣಾತ್ಮಕ ಅಂಶಗಳನ್ನು ಕ್ರೋಡೀಕರಿಸಿ ಸಮಗ್ರವಾದ ಯಕ್ಷಗಾನ ರಂಗಭೂಮಿಯನ್ನು ಬೆಳೆಸುವ ಕಡೆಗೆ ಪ್ರಯತ್ನಗಳು ನಡೆದರೆ ಕಥಕಳಿಯಂತಹ ಕಲೆ ಸಾಧಿಸಿದ ಔನ್ನತ್ಯವನ್ನು ಯಕ್ಷಗಾನವೂ ಸಾಧಿಸಬಹುದಾಗಿದೆ.