ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ,
ಒಂಬತ್ತು ಮೈಲಿಗಳ ದೂರದಲಿ, ನಮ್ಮೂರು
ಕುಪ್ಪಳಿ. ಊರಲ್ಲ ನಮ್ಮ ಮನೆ. ನಮ್ಮ ಕಡೆ
ಊರೆಂದರೊಂದೆ ಮನೆ. ಪಡುವೆಟ್ಟುಗಳ ನಾಡು;
ದಟ್ಟವಾದಡವಿಗಳು ಕಿಕ್ಕಿರಿದ ಮಲೆನಾಡು.
ಸುತ್ತಲೂ ಎತ್ತರದ ಬೆಟ್ಟಗಳು, ಕಾಡುಗಳು;
ಎತ್ತನೋಡಿದರತ್ತ ಸಿರಿಹಸುರು. ಕಣ್ಣುಗಳಿ-
ಗಾನಂದ; ಮೇಣಾತ್ಮಕೊಂದೊಸಗೆ.
ಓ ಅಲ್ಲಿ,
ದೊಡ್ಡಣಬೆಯಂದದಲಿ ನೆಲದಿಂದ ಮೇಲೆದ್ದ
ಹುಲ್ಗುಡಿಸಲೊಂದರಲಿ ಸಂಸಾರಿಯಾಗಿದ್ದ      ೧೦
ಕರಿಸಿದ್ದನೆಂಬುವನು. ಜಾತಿಯಲಿ ಕೀಳಂತೆ!
ನೀತಿಯಲಿ? ನಾನರಿಯೆ!-ಗಿಡ್ಡಿ ಎಂಬುವಳವನ
ಹೆಂಡತಿ.
ಬಡಜನರ ಜೀವದಲಿ ಉಬ್ಬೆಗವ
ಹುಟ್ಟಿಸುವ ಸಂಗತಿಗಳೇನಿಲ್ಲ ಎಂದೆಲ್ಲ
ತಿಳಿದಿಹರು. ಅದರಿಂದ ವಾಲ್ಮೀಕಿ ಮೊದಲಾದ
ಕಬ್ಬಿಗರು ರಾಮನಂತಹ ರಾಜರನೆ ಕುರಿತು
ಕೊಬ್ಬಿರುವ ಕಾವ್ಯಗಳ ರಚಿಸಿದರು. ನಾನೇನು
ವಾಲ್ಮೀಕಿಯೂ ಅಲ್ಲ, ನನ್ನ ಕತೆಯೂ ದೊಡ್ಡ
ಕಾವ್ಯವಾಗಿಲ್ಲ.-ಪುಟ್ಟ ಕವಿ; ಪುಟ್ಟ ಕತೆ!
ಹದಿನೆಂಟು ವರ್ಣನೆಗಳಿಲ್ಲಿಲ್ಲ. ಯಮಕಗಳು,   ೨೦
ಗಮಕಗಳು, ಮೇಣಲಂಕಾರಗಳು, ಪ್ರಾಸಗಳು
ಇಲ್ಲಿಲ್ಲ. ನಾನೇನು ವೃತ್ತಗಳ, ಕಂದಗಳ
ಮಂದೆಗಳ ಕಾಯುತಿಹ ಕುರುಬರವನೂ ಅಲ್ಲ.
ಪಾಂಡಿತ್ಯವೆನಗಿಲ್ಲ. ಮುಚ್ಚುಮರೆ ಏತಕ್ಕೆ?
ಪಂಡಿತರ ಕಂಡರೆನಗಾಗುವುದೆ ಇಲ್ಲ.
ಪಂಡಿತರ ಮೆಚ್ಚಿಸಲು ನಾನಿದನು ಕಟ್ಟಿಲ್ಲ.
ದಿಟದ ಕತೆಗಾಸಿಸುವ ಪಾಮರರಿಗಾಗಿದನು
ಬರೆದಿಹೆನು. ನಾನೊಬ್ಬ ಪಾಮರನು….
ಇಂತಿರಲು-
ಕರಿಸಿದ್ದ ದನಗಳನು ಕಾಯುವನು. ಗಿಡ್ಡಿ
ಮನೆಮನೆಗೆ ತಿರುತಿರುಗಿ ದಿನಗೂಲಿಮಾಡುವಳು.       ೩೦
ಬಹುಕಾಲವಾದರೂ ಮಕ್ಕಳಾಗಲೆ ಇಲ್ಲ.
ಮಕ್ಕಳಿಲ್ಲದವರಿಗೆ ಪುನ್ನರಕವಾಗುವುದು
ಎಂದರಿಯರವರು. ಧರ್ಮಶಾಸ್ತ್ರವನವರು
ಕೇಳಿಯೇ ಇರಲಿಲ್ಲ. ಪುತ್ರಕಾಮೇಷ್ಟಿಯನು
ಮಾಡಲವರಿಗೆ ದೊಡ್ಡೆ ಇರಲಿಲ್ಲ. ಗಂಜಿಗೇ
ಗತಿಯಿಲ್ಲ! ನೈವೇದ್ಯಕೆಲ್ಲಿಂದ ತರಬೇಕು?
….ಪ್ರಕೃತಿ ಧರ್ಮವ ನಂಬಿ
ಕರ್ಮವನು ಮಾಡಿದರು. ಕಡೆಗೊಂದು ದಿನ ಗಿಡ್ಡಿ
ನಡುರಾತ್ರಿ ಹಿಗ್ಗಿದಳು ಒಂದು ಕೂಸನು ಹೆತ್ತು.
ಕರಿಸಿದ್ದ ಸಂತಸದಿ ಹೆಂಡತಿಯ ಶುಶ್ರೂಷೆ      ೪೦
ಮಾಡಿದನು; ದಾದಿಯರನೆಲ್ಲಿಂದ ತಂದಾನು
ಆ ಬಡವ! ಹರಳೆಣ್ಣೆ ಹಣತೆಯನು ಹೊತ್ತಿಸಿದ.
ಮಬ್ಬಿನಲಿ ಮಗುವನ್ನು ಪದ್ಧತಿಯ ಮೀರದೆಯೆ
ಮೊರದಲ್ಲಿ ಮಲಗಿಸಿದ. ದೆವ್ವಗಳು ಬರದಂತೆ
ಹರಕು ಮೆಟ್ಟಿನ ಚೂರ ಬಾಗಿಲಿಗೆ ಕಟ್ಟದನು.
ಬಾಗಿಲಿನ ಮೂಲೆಯಲಿ ಪೊರಕೆಯೊಂದನು ಇಟ್ಟ!
ಬಡತನದ ತೊಟ್ಟಿಲನು ಬಲಗೊಂಡು, ಭಕ್ತಿಯಲಿ
ಮೂರು ಕಾಸನು ಸುಳಿದು ಮುಡಿಪಾಗಿ ಕಟ್ಟಿದನು!
ತಿರುಪತಿಯ ವೆಂಕಟೇಶನಿಗಲ್ಲ; ಕಾಶಿಯಲಿ
ಮಲಗಿರುವ ವಿಶ್ವನಾಥನಿಗಲ್ಲ; ಉಡುಪಿಯಲಿ  ೫೦
ವಾಸಿಸುವ ವಾಸುದೇವನಿಗಲ್ಲ; ನಮ್ಮೂರ
ತೋಟದಾಚೆಯ ಭೂತನಿಗೆ ಮುಡಿಪು ಕಟ್ಟಿದನು.
ಆದರೂ ತಿರುಪತಿಯ ವೆಂಕಟನ ಭಕ್ತರಿಗೆ
ಬರುವ ಸಂತಸವಾಯ್ತು, ವಿಶ್ವನಾಥನ ಭಕ್ತ-
ರಾನಂದವೇ ಅವನಿಗೂ ಬಂತು. ವೈಷ್ಣವರ
ಸುಖವಾಯ್ತು. ಮಾನವರ ಭಕ್ತಿಯೇ ದೇವರಿಗೆ
ಶಕ್ತಿ! ನರಭಕ್ತಿಯಳಿದರೆ ಎಲ್ಲಿ ಹರಶಕ್ತಿ?
ದಂಪತಿಗಳುಲ್ಲಸದಿ ಹಿಗ್ಗಿದರು. ಹಾಲಿಲ್ಲ,
ಗೀಲಿಲ್ಲ; ಎಣ್ಣೆಬೆಣ್ಣೆಗಳಿಲ್ಲ. ಮೊಲೆಹಾಲು
ಗಂಜಿಗಳ ಬಲದಿಂದ ಬೆಳೆಯುತ್ತಿದ್ದನು ಬೈರ.  ೬೦
ಹೆಸರಿಡಲು ಭಟ್ಟರಿಗೆ ಬಿಡಿಕಾಸು ಕೊಡಲಿಲ್ಲ.
ಹುಟ್ಟಿಸಿದ ದೇವರೇ ಜಾತಕವ ಬರೆದಿಟ್ಟ!
ಹುಣ್ಣಿಮೆಯ ಚಂದ್ರನಂತಿರಲಿಲ್ಲ ಆ ಬೈರ;
ಗಿಡ್ಡಿ ಕರಿಸಿದ್ದರಿಗೆ ಮುದ್ದಾದ ಮಗನಂತೆ
ಇದ್ದ! ಚೆಲ್ವಿಳೆಗೆ ಬಂದಂತೆಯಿರಲಿಲ್ಲ.
ಚೆಂದುಟಿಯು ಇರಲಿಲ್ಲ. ಆದರೂ ಕರಿಸಿದ್ದ
ಗಿಡ್ಡಿಯರ ಕಣ್ಗೆಡ್ಡವಾಗಿದ್ದ. ದೂಳಿಯಲಿ
ಮಣ್ಣಿನಲಿ, ಹಸುರಿನಲಿ ಕೆಸರಿನಲಿ, ಬಿದ್ದೆದ್ದು
ಬೈರನೊರಟಾಗಿ ಕರ್ರಗೆ ಗಟ್ಟಿಮುಟ್ಟಾಗಿ
ಬೆಳೆದನಾ ಮಲೆಯಲ್ಲಿ.
ಹಂಡನಾಯಿಯೆ ಅವನ     ೭೦
ಸಂಗಾತಿ. ತನ್ನ ಬಡ ತಿಂಡಿಗಳಲಿನಿತನ್ನು
ಹಂಡನಾಯಿಗೆ ಹಾಕಿ ತಿನ್ನುವನು. ಹಂಡನಿಗು,
ಕರಿಸಿದ್ದ ಗಿಡ್ಡಿಯರು ಬೇಡವೆಂದರು ಬಿಡದೆ,
ತನ್ನ ಚಾಪೆಯ ಮೇಲೆ ಜಾಗ ಕೊಡುವನು ಮಲಗೆ.
ಕೋಗಿಲೆಯನಣಕಿಸುವನಾಡುವನು ನಾಯೊಡನೆ;
ಚಿಟ್ಟೆಗಳನಟ್ಟುವನು; ಹಂಡನಾಯಿಯ ಮೇಲೆ
ಕುಳಿತು ಕುದುರೆಯ ಮಾಡಿ ಹೋಯೆಂದು ಕೂಗುವನು.
ತಾಯೆದೆಯ ಮೇಲ್ನಲಿವ ಶಿಶುವಂತೆ ನಲಿನಲಿದು
ಎಳಬಿಸಿಲು ಹಸುರ ಮೇಲ್ಮುತ್ತಿಟ್ಟು ಮಲಗಿರಲು
ಹತ್ತಿರದ ಬನಗಳಲಿ ಹಂಡ್ನಾಯಿಯೊಡಗೂಡಿ  ೮೦
ಪಿಕಳಾರ ಹಕ್ಕಿಗಳ ಗೂಡುಗಳನರಸುವನು.
-ಕರಿಸಿದ್ದ ಗಿಡ್ಡಿಯರ ಬಾಲಕನು ಹುಟ್ಟುತಲೆ
ಬುದ್ಧನಾಗಿರಲಿಲ್ಲ-ಹಕ್ಕಿ ಮೊಟ್ಟೆಗಳನ್ನು
ಕದಿಯುವನು; ಇರುವೆಗಳನರೆಯುವನು. ‘ಚೀಟಿ’ಗಳ
ಬಾಲಕ್ಕೆ ಬಾಳೆನಾರನು ಕಟ್ಟಿ, ಹಾರಿಸುತ
ನೋಡುವನು ಬೆರಗಾಗಿ: ಬಣ್ಣಬಣ್ಣದ ಚಿಟ್ಟೆ-
ಗಳನಟ್ಟಿ ಹಿಡಿಹಿಡಿದು ಪೀಡಿಪನು. ಗೂಡಿನಲಿ
ಹಕ್ಕಿಮರಿಗಳ ಕಂಡು, ಬಾಯ್ದೆರೆಯಲವು ಹಣ್ಣು
ಹಾಕುವನು ಸಂತೋಷದಿಂದ, ಆ ಮರಿಗಳಿಗೆ
ತಾನೆ ತಾಯಾಗಿ.
ಮಗನ ಬೆಳವಣಿಗೆಯನು
ಕಂಡು ಕರಿಸಿದ್ದ ಗಿಡ್ಡಿಯರು ಹಿಗ್ಗಿದರು.            ೯೦
ಚಂದ್ರನುದಯವ ಕಂಡು ಸಂತಸದಿ ಹಿಗ್ಗುವಾ
ಕಗ್ಗಡಲಿನಂತಲ್ಲ (ಜಡತನದ ಹೋಲಿಕೆಯು);
ಮಕ್ಕಳನು ಹೆತ್ತವರು ಹಿಗ್ಗಿ ನಲಿಯುವ ಹಾಗೆ!
ದಿನದಿನವು ಬೈಗಿನಡುಗೆಯ ಮುಗಿಸಿ ಗಿಡ್ಡಿ
ಕತೆ ಹೇಳುವಳು. ಬೈರ ಹಂಡನಾಯಿಯ ತಲೆಯ
ತಟ್ಟುತ್ತ ಕೇಳುವನು ಕಣ್ಬಿಟ್ಟು, ಬಾಯ್ಕಳೆದು,
ಬೆರಗಾಗಿ, ಗಿಡ್ಡಿ ಪಂಡಿತೆಯಲ್ಲ. ಕತೆಗಳವು
ಸಣ್ಣಕತೆಗಳ ಪಂದ್ಯದಲಿ ಗೆದ್ದು ಬಹುಮಾನ
ಪಡೆಯುವಂಥವು ಅಲ್ಲ. ಹಳ್ಳಿಯರ ಕಲ್ಪನೆಯು            ೧೦೦
ಹಳ್ಳಿಗರಿಗಾಗಿ ಕಟ್ಟಿದ ಕಟ್ಟುಗತೆಗಳವು.
ಜಗಕೆಲ್ಲ ಒಂದೆ ರಾಮಾಯಣವು ಎಂಬುದದು
ಹೆದ್ದಪ್ಪು. ಇಳೆಗೆಲ್ಲ ವಾಲ್ಮೀಕಿಯೊಬ್ಬನೇ
ಕವಿ ಎಂಬುದೂ ತಪ್ಪು. ತಿರೆಗೆಲ್ಲ ಶ್ರೀರಾಮ-
ನೊಬ್ಬನೇ ಎಂಬರೂ ಬೆಪ್ಪುಗಳೆ. ಹನುಮಂತ-
ರೆನಿತಿಹರು ಮಲೆಯ ಕಾಡುಗಳಲ್ಲಿ! ಒಂದೊಂದು
ಹಳ್ಳಿಯಲಿ ಒಬ್ಬೊಬ್ಬ ಜಸವಂತನಾಗದಿಹ
ವಾಲ್ಮೀಕಿ ನೆಲೆಸಿಹನು. ರಾಮಾಯಣಗಳಂತೂ
ಲೆಕ್ಕಕ್ಕೆ ಮಿತಿಯಿಲ್ಲ. ಕಣ್ದೆರೆದು ನೋಡಿದರೆ
ತೋರಿ ಬರುವುದು ನಿಜವು. ಒಬ್ಬೊಬ್ಬ ಗಂಡನಲಿ         ೧೧೦
ಶ್ರೀರಾಮನಡಗಿಹನು; ಒಬ್ಬೊಬ್ಬ ಹೆಂಡತಿಯ
ಎದೆಯೊಳಿರುವಳು ಸೀತೆ. ಇಂತಿರಲು ವಾಲ್ಮೀಕಿ
ಬರೆದಿರುವ ರಾಮಾಯಣವು ಕೋಟಿ ಕಾವ್ಯಗಳ-
ಲೊಂದೆನ್ನಲತಿಶಯವೆ?
ಯಾರು ಅರಿಯದ ಮಲೆಯ-
ನಾಡಿನಾ ಮೂಲೆಯಲಿ ನಾಗರಿಕತೆಯ ಸುಳಿಗೆ
ಬೀಳದೆಯೆ, ಜಗದ ದೊಂಬಿಯ ಗಲಭೆಯನು ಕೇಳಿ
ಬೇಸರದೆ, ಸಂಸ್ಕೃತಿಯ ಸುಖದುಃಖಗಳಿಗೆಲ್ಲ
ದೂರಾಗಿ, ಸಿರಿಗೆ ಕರುಬದೆ, ಬಡತನಕೆ ಹೇಸಿ
ಗೋಳಿಡದೆ, ಅತಿಕಾಂಕ್ಷೆ ಅತಿಭೋಗ ಅತ್ಯಾಶೆ
ಅತಿಗಳೊಂದಿಲ್ಲದೆಯೆ ಮಿತಿಯಿಂದ ಬಾಳಿದರು,          ೧೨೦
ಬದುಕಿದರು ಬೈರನೊಡಗೂಡಿ ಬಡ ಕರಿಸಿದ್ದ
ಗಿಡ್ಡಿಯರು. ಇಂತು ಬಾಳಿನ ಹೊನಲು ಹರಿಯುತಿರೆ,
ಒಂದು ದಿನ ಕರಿಸಿದ್ದ ಮೀನು ಹಿಡಿಯಲು ಕೆರೆಗೆ
ಬೈರನನು ಕೊಂಡೊಯ್ದ. ಹಂಡನಾಯಿಯು ಅವನ
ಜತೆ ಹೋಯ್ತು. ಕರಿಸಿದ್ದ ಮೀನು ಹಿಡಿಯುತಲಿರಲು
ಬಿಳಿಯ ಆವಲ ಹೂವ ಕುಯ್ಯಲೆಂದಳಸುತಿರೆ
ಕಾಲು ಜಾರಿದ ಬೈರ ಕೆರೆಯಲ್ಲಿ ಮುಳುಗಿದನು.
ಮುದಿಯಾದ ಕರಿಸಿದ್ದ ಬಾಯ್‌ಬಾಯಿ ಬಡುಕೊಂಡು
ಕೆರೆಯಲ್ಲಿ ಮುಳುಮುಳುಗಿ ಮಗನ ಮೇಲಕೆ ತಂದ.
ಹಂಡನಾಯಿಯು ಕೂಡ ಕೆರೆಗಿಳಿದು, ದಡಕಡರಿ,          ೧೩೦
ಬೈರನನು ಮೂಸುತ್ತ ಬಾಲವಲ್ಲಾಡಿಸಿತು.
ಬೈರನಿಗೆ ಉಸಿರಾಡುತಿರಲಿಲ್ಲ. ನೀರ್ಕುಡಿದು
ಹೊಟ್ಟೆಯುಬ್ಬರಿಸಿತ್ತು. ಕಂಗೆಟ್ಟ ಕರಿಸಿದ್ದ
ತೋಟದಾಚೆಯ ಭೂತರಾಯನಿಗೆ ‘ಅಡ್ಬಿದ್ದು’
ಬೇಡಿಕೊಂಡನು ಮಗನ ಕಾಪಾಡಬೇಕೆಂದು.
ರೋದನವ ಕೇಳ್ದೊಡನೆ ಗುಡಿಸಲಿಂದೋಡೋಡಿ
ಬಿದ್ದೆದ್ದು ಗಿಡ್ಡಿ ಬಂದಳು. ಬೆದರಿ, ನೋಡಿದಳು!
ಚೀತ್ಕಾರದನಿಮಾಡಿ, ಮುಡಿಗೆದರಿ ಗೋಳಾಡಿ,
ಮಣ್ಣೆರಚಿ, ಭೂತನನು ಬೈಯುತ್ತ, ಬೇಡುತ್ತ,
ಕಲ್ಲಿನಲಿ ತಲೆಕುಟ್ಟಿ, ಬಿದ್ದು ಬೈರನಮೇಲೆ        ೧೪೦
ಒರಗಿದಳು ದಣಿದು ತಟ್ಟಾಗಿ.
ಮಧ್ಯಾಹ್ನದಾ
ಬಿರುಬಿಸಿಲು ಬನ ಬೆಟ್ಟಗಳ ಮೇಲೆ ಮಲಗಿತ್ತು.
ತಿಳಿನೀಲಿಯಾಗಸದಿ ಬಿಳಿಯ ಮೋಡದ ಮಂದೆ
ಚಲಿಸದೆಯೆ ನಿಂತಿತ್ತು. ಏನು ತಿಳಿಯದ ಹಸುಳೆ
ಕಣ್ಣು ಬಿಡುವಂತೆ ಕೆರೆ ಮುಗ್ಧತೆಯ ತೋರಿತ್ತು.
ಬೆಟ್ಟ, ಕಾನ್, ಮುಗಿಲು, ಬಾನ್, ಬಯಲು, ಕೆರೆ, ಮರ, ಬಳ್ಳಿ
ಎಲ್ಲಿ ನೋಡಿದರಲ್ಲಿ ಶ್ರೀ ಶಾಂತಿ ನೆಲೆಸಿತ್ತು.
ಹಂಡನೆದೆ, ಗಿಡ್ಡಿಯೆದೆ, ಸಿದ್ದನೆದೆಗಳು ಮಾತ್ರ
ತೋರಿದುವು ಬೇರೊಂದು ಲೋಕದಲ್ಲಿದ್ದಂತೆ!
ಯಮನ ಕರಣಿಕನಾಗ ಕಾಲದೋಲೆಯ ಮೇಲೆ,          ೧೫೦
ಚಿತ್ರಗುಪ್ತನು ಬರೆದು ಚಿತ್ರಿಸಿದನಿಂತೆಂದು:
ಪಾರ್ಲಿಮೆಂಟಿನಲೊಬ್ಬ ಭಾಷಣವ ಮಾಡಿದನು….
ವಂಗದೇಶದ ಕವಿಯು ನಾಟಕವನಾಡಿದನು….
ಹಿಮಗಿರಿಯ ಮೇಲೊಬ್ಬ ಸಾಧುವಾದನು ಸಿದ್ಧ….
ಜರ್ಮನಿಯ ದೇಶದಲಿ ನಡೆದಿದೆ ಮಹಾಯುದ್ಧ….
ಕುಪ್ಪಳಿಯ ಕೆರೆಯಲ್ಲಿ ಬೈರ ಹುಡುಗನು ಬಿದ್ದ….
ಮಡಿದವಗೆ ಮರುಗುವರು ಗಿಡ್ಡಿ, ಕರಿಸಿದ್ದ….
ಹಂಡನಾಯಿಯು ಮರುಗಿ ಕಣ್ಣೀರು ಕರೆದಿತ್ತು….
ಆಫ್ರಿಕದಿ ಕಂಬಿ ತಪ್ಪಿದ ರೈಲು ಬಿದ್ದಿತ್ತು….
ಕಾಶಿಯಲಿ ಹಾರುವರು ಹೇಳುತಿರುವರು ವೇದ….        ೧೬೦
ಚಿತ್ರಗುಪ್ತನಿಗಿದೆಯೆ ಮೇಲು ಕೀಳಿನ ಭೇದ?