ಮೋಡಗಳ ಸುಳಿವಿಲ್ಲ. ಬಾನೊಳು
ಮಿಂಚಿದುವು ಚುಕ್ಕಿಗಳು ತಳಿರೆಡೆ
ಚರಿಸಿ ಕಂಪನು ಸೂರೆಗೊಳ್ಳುತ
ಲೀಲೆಯೊಳು ಮೈಮರೆತ ತಣ್ಣೆಲರ್
ಒಯ್ಯನೊಯ್ಯನೆ ತೀಡಿತು.
ತಾಯಿಯೆದೆಯನ್ನಪ್ಪಿ ನಲಿಯುವ
ಹಾಲು ಹಸುಳೆಯ ತೆರದಿ ಬನಗಳ
ಮೇಲೆಯೊರಗಿತು ಚೆಲುವಿನೊರತೆಯ
ತಿಂಗಳಿನ ಹೊಂಬೆಳಕು. ಹಬ್ಬಿತು
ಮೌನ ನಾಡಿನಲಿ!            ೧೦
ಹರಿಯುತಿಹ ತೊರೆಯ ಬಳಿ ಮೆರೆಯಿತು
ಬನದ ಮುತ್ತನ್ನೊಲಿದು ಸಲಿಸುತ
ಕಣ್ಣ ಸೆಳೆಯುವ ಹುಲ್ಲುಗುಡಿಸಲು
ಜೊನ್ನದಲಿ ಮಿಂದು.
ಅಂಗಳದ ಮಲ್ಲಿಗೆಯ ಬಳ್ಳಿಯು
ಚೆಲ್ಲುತಿಹ ಬಿರಿಮುಗುಳನಾಯದೆ,
ಉಪವನದ ಗಿಡ ಬಳ್ಳಿ ಮೆರೆಯುವ
ಸುಗ್ಗಿತಿಂಗಳಿನಲರ ಕೊಯ್ಯದೆ,
ಗುಡಿಸಲೆಸೆದುದು ಕಂಗಳಿಗೆ ತಾ
ಬಿಟ್ಟ ಮನೆಯಂತೆ!           ೨೦


ಆದರೇನಾ ಮನೆಯ ಜಗುಲಿಯ
ಮೇಲೆ, ಬೆಳಗುವ ಸೊಡರಿನೆಡೆಯಲಿ,
ಕಾಂಚನದ ಕಮನೀಯತನವನು
ಕಣ್ಣ ಮಿಂಚೊಂದು ಜರೆಯುತಿರುಳಿನ
ಕತ್ತಲನು ಮುಡಿಯಲ್ಲಿ ಮುಡಿಯುತ,
ಮೊಗದ ಬಾಡಿದ ಕಳೆಯೊಳಿಂದುಗೆ
ನಾಚಿಕೆಯ ನೀಡುತ್ತ ಕುಳಿತಿಹಳ್
ಒರ್ವ ಭಾಮಿನಿಯು!
ಮೊಗದ ಕೊಳದೊಳಗರಳಿದಬುಜಗ-
ಳಂತೆ ರಂಜಿಪ ಕಂಗಳಿಂ ಬಹ         ೩೦
ಬಿಸಿಯ ಮಧುಧಾರೆಯೊಲು ಕಂಬನಿ
ಹರಿದುವಂಗೈಲಿಟ್ಟ ಕೆನ್ನೆಯ
ಮೇಲೆ ಎಡೆಬಿಡದೆ;
ಅಳಲಿನಗ್ಗಿಯಲುರುಳಿ ಬೆಂದಿಹ
ನಳಿನದಂದದೊಳಿದ್ದಳಾ ನಳಿ-
ನಾಕ್ಷಿ ಕಂಗಳಿಗೆ!


ಎದೆಯೊಳುರಿವಾ ನೋವದಾವುದು?
ಕಣ್ಣೊಳಿಳಿವಾ ಬೆಸನವಾವುದು?
ಬಿಸಿಯ ಸುಯ್ಲಲಿ ಬಸಿವ ದುಃಖವ-
ದಾವುದೆಲೆ ರಮಣಿ?          ೪೦
ಒಲಿದವರ ಅಗಲಿಕೆಯೊ? ಫಲಿತಿಹ
ಯೌವನದ ಬೇವುರಿಯೊ? ಪಡೆದಿಹರ್
ಅಳಿದಿರುವ ಯಾತನೆಯೊ? ಬಯಕೆಯು
ಸಲ್ಲದುರಿಯೋ? ಮೇಣ್ ನಿರಾಶೆಯ
ಬೆಂಕಿಯೋ? ಪೇಳೇನು, ಕುಮುದಿನಿ,
ಎದೆಯ ಕೊರೆಯುವ ಗೋಳನು!
ವರುಷವೆರಡರ ಹಿಂದೆ ರಮಣನು
ಕದನಕೈದಿದ; ಮರಳಲಿಲ್ಲವು.
ದಿನಗಳಳಿದುವು, ಪಕ್ಷ ಕಳೆದುವು,
ಮಾಸಗಳು ಬಿರಬಿರನೆ ಸುಳಿದುವು,  ೫೦
ದುಗುಡ ಹೆಚ್ಚಿತು ಬಯಕೆಯ!
ಇನಿಯನಾಗಮನವನು ಹಾರೈ-
ಸುತ್ತ ತರಳೆಯು ಕಂಬನಿಗಳಂ-
ಜಲಿಯ ಜಗದೀಶನಿಗೆ ಅರ್ಪಿಸಿ,
ಎದೆಯ ಭಕುತಿಯ ಮೇಲೆ ಭಾರವ-
ನಿಟ್ಟು ಕಾಲವ ನೂಂಕುತಿರುವಳು
ರಮಣದರ್ಶನಕೆ!


ಮಾನವಗೆ ನಂಬುಗೆಯ ಬಲವೇ
ಪರಮ ಬಲವೈ! ಜೀವಮಾನದ
ಕಷ್ಟಗಳ ಕರಗಿಪುದು ಭಕ್ತಿಯು.         ೬೦
ಬಾಳಿಗೀಯುತ ಬೆಳಕ ಪೊರೆವುದು
ಶಕ್ತಿಯನು ನೀಡಿ!
ಬಾನಿನೊರತೆಯ ಬತ್ತಿಸದು; ತಿಳಿ-
ವಳಿಕೆಗೀವುದು ರಾಗದಿಂಪನು;
ಎದೆಯ ಮರುಭೂಮಿಯನು ಮಾಡದು;
ಮನದ ಒಣ ವಿಜ್ಞಾನಕೀವುದು
ರಸದ ಪೆಂಪನು. ದಾರಿಯನು ಮರೆ
ಮಾಡದೆಂದಿಗು ಭಕ್ತಿಯು!
ಬೆಟ್ಟಗಳನೆತ್ತುವುದು; ಮಿರ್ತುವ
ಮುರಿಯುವುದು; ಹರಿಯುವುದು ಮಾಯಾ     ೭೦
ಜಾಲವನು; ಕಾಣದಿಹ ದೇವನ
ತೋರುವುದು ಕಂಗಳಿಗೆ; ಜನರಿಗೆ
ಜೀವನವನೊಲಿಸುವುದು; ಸಾವಿನ
ಭಯವ ಪರಿಹರಿಸಿತ್ತು ಮುಕುತಿಯ,
ಸಲಹುವುದು ಭಕುತಿ!


ಗೂಬೆ ಕೂಗಿದರೇನು ಮರದಲಿ?
ಹಾಲ ಚೆಲ್ಲಿದರೇನು ತಿಂಗಳು?
ತಾರೆ ಮಿನುಗಿದರೇನು ನಭದಲಿ?
ಸೊಬಗು ಹೊರಗಡೆ ನಲಿದರೇನು
ತರಳೆಯರಿಯುವಳೆ?        ೮೦
ಒಳಗೆ ತೋರದ ಸೊಗವು ಬಯಲಲಿ
ಎನಿತು ಹರಡಿದರೇನು? ರಮಣಿಯ
ಮನವ ಸೆಳೆಯುವುದೆ?
ತನುವು ಗುಡಿಸಲೊಳಿದ್ದರೇನಾ
ಮನವು ಪತಿಯಿಹ ಲೋಕದಲಿ ಸಂ-
ಚರಿಸೆ ಸೋಜಿಗವೆ?
ಇನಿಯನಿಹನೋ? ಕದನದಲಿ ಮಡಿ-
ದಿಹನೊ? ಕೈದುಗಳಾಟದಲಿ ನೊಂ-
ದಿಹನೊ? ಅರಿಗಳ ಸೆರೆಮನೆಯಲುರು-
ಳುವನೊ? ದೇಸಿಗನಂತೆ ಚರಿಪನೊ?           ೯೦
ಎಂಬ ಹಂಬಲದಲ್ಲಿ ಬೆಂದಳು
ಸಂದೆಯದಿ ನೊಂದು!


“ಬೆಳಗುತಿಹ ಚಂದಿರನೆ, ಮಿರುಗುವ
ತಾರೆಗಳೆ, ಬಿತ್ತರದ ಗಗನವೆ,
ಲೋಕವನು ದಿಟ್ಟಿಸುತ ಚರಿಸುವ
ನಿಮಗೆ ತೋರನೆ ನನ್ನೊಲವಿನಂ-
ಬುಧಿಯ ಹಿಮಕರನೆಲ್ಲಿ ನೆಲೆಸಿಹ-
ನೆಂಬುದನು ತಿಳಿಸೆನಗೆ ಕರುಣಿಸಿ.
ನಮಿಸುವೆನು ನಿಮಗೆ!
ತಂಬೆಲರೆ, ಸುದ್ದಿಯನು ತಿಳಿಸೈ       ೧೦೦
ರಮಣನೆಲ್ಲಿಹನೆಂದು. ಪೂರ್ವದೊ-
ಳಂದು ಸೀತಾದೇವಿಗರುಹನೆ
ನಿನ್ನ ಮಗ ಹನುಮಂತದೇವನು
ರಾಮನೆಲ್ಲಿಹನೆಂಬ ಮಂಗಳ-
ಮಯದ ವಾರ್ತೆಯನು?
ಇನಿಯನಗಲಿದ ರಮಣಿ ಜಾನಕಿ-
ಯಾದರೇನಂತಲ್ಲವಾದರೆ
ಏನು? ಒಲುಮೆಯೊಳಿಹುದೆ ಭೇದವು?
ವಿರಹಯಾತನೆಯೊಂದೆ ಅಲ್ಲದೆ
ಬೇರೆ ಬೇರಿಹುದೆ?            ೧೧೦
ಬೇಡುವೆನು, ದಿವಿಜರಿರ, ನಮಿಸುವೆ.
ಗಾಳಿವಟ್ಟೆಯೊಳಲೆವ ನಿಮಗೀ
ಕಜ್ಜವಲ್ಲವು ಕಠಿನ. ಹೇಳಿರಿ
ರಮಣನೆಲ್ಲಿಹನೆಂದಿಗೈತಹ-
ನೆಂಬ ಸತ್ಯವನು!
ಬೇಡುವೆನು, ಜಗದೀಶ, ಬಾಲೆಯ
ಪಾಲಿಸೈ. ನಿನ್ನನೆಯೆ ನಂಬಿಹೆ-
ನಿನ್ನು ಬೇರೆಯ ಗತಿಯ ಕಾಣೆನು.
ಕಳುಹು ರಮಣನನು.
ಸರ್ವಶಕ್ತನು ನೀನು; ನಿನಗಿದು         ೧೨೦
ದೇವ ಪೇಳ್ ಹುಲುಗಜ್ಜವಲ್ಲವೆ?
ತೋರು ಇನಿಯನನು.”


ಬೇಡಿದಳು ಇಂತೆಂದು ಕುಮುದಿನಿ.
ಕೇಳಿದನು ಜಗದೀಶ. ದಿವಿಜರು
ಕೇಳಿದರು. ಕೇಳಿದರು ಮಾರುತ
ಗಗನವಿಂದುವು ತಾರೆಯಾವಳಿ
ಎಲ್ಲ ಕಿವಿಗೊಟ್ಟು!
ಎದೆಯು ಯಾತನೆಯಿಂದ ನುಡಿಯುವ
ದನಿಯು ಮರುದನಿಯಾಗಿ ಮುಟ್ಟದೆ
ವಿಶ್ವದೆಲ್ಲೆಡೆಯ?   ೧೩೦
ಹಿಂದೆ ಕೊಳದೊಳು ಮೊಸಳೆ ಹಿಡಿಯಲು
ಹಸ್ತಿರಾಜನು ಹರಿಗೆ ಮೊರೆಯಿಡೆ,
ಬಂದು ಚಕ್ರದಿ ಸೀಳಿ ನಕ್ರವ,
ಪೊರೆದನಾತನನು.
ಕರಿಯು ಮೊರೆಯಿಡೆ ಬಂದು ಕಾಯ್ದಾ
ಕರುಣಿ ಕಾಯನೆ ಕರೆಯೆ ಕಾಮಿನಿ
ಪರಮ ಭಕ್ತಿಯಲಿ?
ವಿಷ್ಣುದೂತರು ಬಂದು ಸಗ್ಗಕೆ
ಹರಿಯ ಸಂದೇಶವನು ನುಡಿದರು:
ಕುಮುದಿನಿಯ ರಮಣನನು ಕಳುಹಲು          ೧೪೦
ಮೂರು ಗಳಿಗೆಯ ಮಾತ್ರಕೆ!
ಕಾಳಗದಿ ಕೈಮಾಡಿ ಮಡಿದಾ
ಸತಿಯ ಪತಿ ರಣವೀರನೆಂಬುವ
ಭಟನ ಪತಿ ರಣವೀರನೆಂಬುವ
ಭಟನ ಕರೆಯುತ ಬಳಿಗೆ ಸಗ್ಗದ
ರಾಜನಿಂತೆಂದ:
“ಹೋಗು ವೀರನೆ, ನಿನ್ನ ಸತಿಯೊಡ.
ನಿದ್ದು ಮೂರೇ ಗಳಿಗೆಯಲಿ ಸಂ-
ತೈಸಿಯಾಕೆಯ ಹಿಂತಿರುಗಿ ಬಾ
ಮರೆಯದಾಣತಿಯ!
ದೂತನೊಬ್ಬನ ಕಳುಹುವೆನು ನಿ-     ೧೫೦
ನ್ನೊಡನೆ. ಆತನ ಮಾತ ಮೀರದೆ,
ಕಾಮಿನಿಯ ಕಾಮಕ್ಕೆ ಸಿಲುಕದೆ,
ಸುರರ ಧರ್ಮವ ಮೀರಿ ನಡೆಯದೆ
ಹೋಗಿ ಬಾ ಬೇಗ!”
ಸುರಪತಿಗೆ ಕೈಮುಗಿದು ವೀರನು
ದೂತನೊಬ್ಬನ ಕೂಡಿ ಹೊರಟನು
ಸಗ್ಗದಿಂದಿಳೆಗೆ!


ಏನ ಕಂಡಳು ಕುಮುದಿನಿ?
ಬೆಚ್ಚುತಿಹಳೇಕಿಂತುಟು?
ಅರಳಿಯೆಲೆಯಲ್ಲಾಡದಿರುವುದು;      ೧೬೦
ಗಾಳಿ ಸುಳಿಯದು; ಜನವಿಹೀನವು;
ನಿನದವೇನಿದು ಬರುತಿದೆ?
ಅಂಗಳದ ಮಲ್ಲಿಗೆಯ ಹೊದರಲಿ
ಮೊಗ್ಗು ಮಳೆ ಬಳಬಳನೆ ಸೂಸಿತು;
ತಲೆಯನೊಲೆದುವು ಹೂವುಗಿಡಗಳು;
ತೆರೆಯದೆಯೆ ಬಾಗಿಲುಗಳೆಲ್ಲಾ
ತಮಗೆ ತಾವೇ ಸೆಡೆತು ತೆರೆದುವು
ಸುರರ ಬರವನು ಸೂಚಿಸಿ!
ನೋಡಿದಳು ತಲೆಯೆತ್ತಿ ತರಳೆ:
ನಡುಗಿದಳು ತನ್ನೆದುರಿನಲ್ಲಿಹ          ೧೭೦
ದೀಪದೆಡೆಯೊಳು ನೆಳಲ ತೋರದೆ
ನೆಲವ ಸೋಂಕದೆ ಅಂತರಾಳದಿ
ನಿಂತ ರೂಪುಗಳೆರಡ ಕಾಣುತ
ಬೆಚ್ಚಿ ಬೆರಗಾಗಿ.
ಹೊಳೆವ ಹೊನ್ನನು ಕಡೆದು ಜೊನ್ನದ
ಮಿರುಗನಿತ್ತಂದದಲಿ, ಬೆಂಕಿಯು
ಬೇಗೆಯನು ಕಳೆದುಳಿದ ಶಾಂತಿಯೆ
ರೂಪುವೆತ್ತಂದದಲಿ, ಬಾಲೆಯ
ಮುಂದೆ ಕಂಗಳಿಗೆಸೆದರಮರರು
ಅಮರತೇಜದಲಿ! ೧೮೦
ಮೊಗದಿ ನಲಿಯಿತು ನಗೆಯ ತಿಂಗಳು.
ಕಂಗಳರಳಿದುವರಳುವಂದದಿ
ಸುಗ್ಗಿಯಲಿ ಮೊಗ್ಗುಗಳು; ಚಂಚಲ
ಜಲದೊಳೆಳಮೀನಲೆಯುವಂದದಿ
ಮಿಂಚಿದುವು, ಚಲಿಸಿದುವು. ಸಂತಸ-
ದಿಂದಲುಬ್ಬಿತು ಹೃದಯ, ಹಿಗ್ಗಿತು
ಕಾಮಿನಿಯ ದೇಹಲತೆಯಿನಿಯನ-
ನೆದುರಿನಲಿ ಕಂಡು!
ಮರೆತಳನಿಮಿಷದೂತನಿರವನು;
ವಿರಹದುದ್ರೇಕದಲಿ ಭೀತಿಯ           ೧೯೦
ತೊರೆದಳಿನಿಯನನಪ್ಪಲೋಸುಗ
ಮೊಗವ ಮುಂದಕೆ ಚಾಚಿ, ತೋಳ್ಗಳ:
ನೀಡಿ ನೆಗೆದಳು! ಹಿಡಿಯಲಾರದೆ
ಸೂಕ್ಷ್ಮ ರೂಪವ ಕಂಪಿಸುತ ಬೆರ-
ಗಾದಳಾ ರಮಣಿ!
ಹಿಡಿದರೊಡೆಯಿತು ಕೈಗೆ ಸಿಲುಕದೆ;
ಮರಳಿ ಕೂಡಿತು ಹೊಳೆಯುವಾಕೃತಿ;
ಮುನ್ನಿನಂತೆಯೆ ನಲಿಯತೊಡಗಿತು
ಕಾಮಿನಿಯ ಮುಂದೆ!
ಕಾಮುಕರ ಕಂಗಳಿಗೆ ಕನಸಾ-         ೨೦೦
ದೊಡೆಯು ಸತ್ಯವು; ಮೇಘದೂತನ
ಮಾಡಿ ಕಳುಹನೆ ಯಕ್ಷನೊಬ್ಬನು
ತನ್ನ ಸತಿಯೆಡೆಗೆ?


ಸತಿಯು ಬೆದರುವಳೆಂದು ಬಗೆಯುತ
ದೇವದೂತನು ಮುಂದೆ ಬಂದನು.
ಕುಮುದಿನಿಯ ಸಂತೈಸಿಯಮರರ
ದನಿಯಲಿಂತೆಂದ:
“ತಾಯೆ ತಾಳೌ! ಬೆದರಬೇಡೌ!
ನಿನ್ನ ಭಕುತಿಗೆ ಮೆಚ್ಚಿ ಸಗ್ಗಿಗ-
ರಾಣ್ಮನೀತನನೆನ್ನೊಡನೆ ಕಳು-       ೨೧೦
ಹಿದನು. ನಿನ್ನೆಡೆಯೀತನಿರುವನು;
ಮೂರುಗಳಿಗೆಯ ಕಾಲವವಧಿಯು;
ಮೇಲೆ ಸಗ್ಗಕೆ ಬರುವನೀತನು
ಕೂಡಿ ಎನ್ನೊಡನೆ!”
ಎಂದು ದೂತನು ಮಾಯವಾದನು
ಸತಿಯ ಕಂಗಳಿಗೆ!
“ಕಂಗಳಿಗೆ ಮರೆಯಾದನಾತನು.
ಮಾತನಾಡೈ, ರಮಣ, ವೀರನೆ!
ನಿನ್ನ ಸೊಲ್ಲನು ಕೇಳಿ ನಲಿಯುವು-
ದಂಗಳದ ಮಲ್ಲಿಗೆಯ ಬಳ್ಳಿಯು;       ೨೨೦
ನಿನ್ನ ಬರವನೆ ಬಯಸಿ ವಿರಹದಿ
ಬಾಡಿ ಕಂದಿಹ ಹೂವುಗಿಡಗಳು
ನಳಿನಳಿಸಿ ಕೊನರೊಡೆದು ಸುಮಗಳ
ಚೆಲ್ಲುವುವು ಮೌನದಲಿ ಮಂಗಳ
ಗೇಯವನು ಬೀರಿ!
ವಿರಹದಗ್ನಿಯಲುರಿಯುವೆನ್ನೀ
ಎದೆಯ ಸಂತೈಸಿನಿಯ ಮುದ್ದಿನ
ಮಾತುಗಳ ತಣ್ಣೆಲರ ಬೀಸುತ
ಶೈತ್ಯವನು ನೀಡಿ!
ಇನಿಯ ಬಾರೈ; ದಿನವು ಮಲಗುವ   ೨೩೦
ಶಯನವಲ್ಲಿದೆ ನೋಡು! ಬಾರೈ!
ದಿವಿಜಪತಿ ಕಳುಹಿದುದು ಕೆಮ್ಮನೆ
ನನ್ನ ದಿಟ್ಟಿಸಲಲ್ಲಿ, ವೀರನೆ,
ಮುಗುದೆಯನು ಸಂತೈಸಿ ನುಡಿಯೈ!”
ಎಂದಳಂಗನೆಯು.

೧೦
“ಬರಿದೆ ಹಂಬಲವೇಕೆ, ಕುಮುದಿನಿ?
ಹರಿಯು ಕೃಪೆಯಿಂದಿಲ್ಲಿಗೆನ್ನನು
ಕಳುಹಿದುದು ಕಾಮಿನಿಯ ಕಾಮವ
ಪರಿಹರಿಸಲೆಂದಲ್ಲ; ಭಕುತಿಗೆ
ಮೆಚ್ಚಿಯಟ್ಟಿದನು! ೨೪೦
ಸಮರದಲಿ ಮಾರಾಂತು ಮಡಿದೆನು;
ವೀರನಾಕವದೆನಗೆ ಲಭಿಸಿತು;
ಈ ವಿಯೋಗವು ಹಿಂದೆಯೆಸಗಿದ
ಕರ್ಮಫಲವೆಂದರಿತು ಸುಮ್ಮನೆ
ಬಿದಿಯ ನಾಟಕಕಡ್ಡ ಬರುವರೆ
ತಿಳಿದ ಮಾನವರು?
ಸ್ಥೂಲಕಾಯವಿದಲ್ಲ, ತರಳೆಯೆ,
ಮುಟ್ಟಲಾರೌ ದೇಹವಿದ ನೀ-
ನೆಳಸಬೇಡೌ ಕಾಯಸುಖಗಳ.
ಬೇರೆ ಸೊಗವಿಹುದು.        ೨೫೦
ದೇವ ನೋಡುವನೊಲವಿನಂಬುಧಿ.
ಯಾಳವನು; ಆರ್ಭಟವನೆಣಿಸನು.
ಉಕ್ಕುತಿಹ ಕಾಮವನು ಭಕ್ತಿಯ
ಕಣ್ಣಿಯಲಿ ಬಿಗಿ, ಕಟ್ಟು; ಮಂಗಳ-
ವಾಗುವುದು ನಿನಗೆ!”
ಎಂದ ರಮಣನ ನುಡಿಯನಾಲಿಸಿ
ನುಡಿದಳಿಂದುಮುಖಿ:
“ಮುತ್ತನೊಂದನು ನೀಡು, ಕರುಣಿಸು,
ಮರಳಿ ನನ್ನನು ವರಿಸು, ವೀರನೆ;
ಕರುಣಮೂರುತಿ ದೇವನರಿಯನೆ      ೨೬೦
ಮಾನವರ ಭಾವಗಳ ಕುಂದನು?
ತಪ್ಪ ಮನ್ನಿಸನೆ?
ಪೂರ್ವದಲಿ ಸಾವಿತ್ರಿದೇವಿಯು
ಪ್ರೇಮದಾಯುಧದಿಂದ ಗೆಲ್ಲಳೆ
ಜವನ ಕಣ್ಣಿಯಲಿದ್ದ ಗಂಡನ
ಜೀವವನು ಮರಳಿ?”
“ಆಗದಾಗದು, ತರುಣಿ, ಮೂರೇ
ಗಳಿಗೆಯವಧಿಯು! ಮೇಲೆ ನಿಲ್ಲೆನು;
ನಿಲ್ಲಲಾರೆನು! ದೇವನಿಯಮವ
ಮೀರಬಾರದು. ಜೀವಮಾನವ        ೨೭೦
ಕಳೆದು, ಕರ್ಮವ ಸಮೆದು, ನನ್ನನು
ಸೇರು ಸಾವಿನಲಿ!”
“ಯುಗದ ಕರ್ಮವನೆಲ್ಲ ನಿಮಿಷದಿ
ಕಳೆಯಲಾರದೆ ಗಾಢಭಕ್ತಿಯು?
ವಿಶ್ವನಿಯಮವ ಮೀರಲಾರದೆ
ಪ್ರೇಮ ಧರ್ಮದಲಿ?
ನೀನಿರದೆ ಜೀವವಿದು ಸಾವೈ!
ಸಾವೆ ಜೀವವು ನಿನ್ನ ಕೂಡಿರೆ!
ಬರುವೆ ನಿನ್ನೊಡನೆ!”
ಎನುತ ಮುಂಬರಿದಾಕೆ ಬರುತಿರೆ     ೨೮೦
ಕಂಡು ವೀರನು “ಶಾಂತಳಾಗೌ,
ತರುಣಿ, ಮುಟ್ಟದಿರೆನ್ನ ಮುಟ್ಟಲು
ಸುಟ್ಟು ಸೀಯುವೆಯಾತ್ಮಹತ್ಯೆಯ
ದೋಷ ನಿನಗಹುದು!
ಹುಟ್ಟಿ ಭೂಮಿಯೊಳೊಮ್ಮೆ ಕರ್ಮವ
ಕಟ್ಟಿನಲಿ ಬೀಳುವೆಯ? ಶಾಂತಿಯ
ಹೊಂದು; ಸೊಗವಹುದು!”
ಮಾಯಮಂತ್ರದಿ ಕಟ್ಟಿದಂದದ
ತರುಣಿ ನಿಂತಳು ಚಲಿಸಲಾರದೆ!
ಅಮರರಾಣತಿಗಿಹುದೆ ಭಂಗವು?      ೨೯೦
ಧರ್ಮಕೆಡರಿಹುದೆ?

೧೧
ದೇವದೂತನ ಬರವ ಕಾಣುತೆ
ಚೀರಿ ಬಿದ್ದಳು ಭಯದೊಳಂಗನೆ
ಮಾಯವಾಗುವ ತನ್ನ ಇನಿಯನ
ಕಂಡು ಕಂಗೆಟ್ಟು!
ಕನಸಿನೊಳು ಸುಳಿದಾಡಿ ತೆರಳುವ
ಪುರುಷರಂದದಿ ಮಾಯವಾದರು.
ಮೌನ ಹಬ್ಬಿದುದು!
ಗಗನರಂಗದಿ ಚಂದ್ರನೆಸೆದನು.
ಜೊನ್ನಜೇನಲಿ ತಿರೆಯು ತೊಯ್ದಿತು. ೩೦೦
ಮಿಣುಕಿದುವು ತಾರೆಗಳು ತಣ್ಣೆಲ-
ರೊಯ್ಯನೊಯ್ಯನೆ ತೀಡಿತು!
ತಿಂಗಳಿನ ಬೆಳಕಿನಲಿ ತರಳೆಯ
ಕಾಯವೊರಗಿತು ಗುಡಿಯ ಜಗಲಿಯ
ಮೇಲೆ. ಜೀವವು ಪತಿಯ ಹಿಂಬಾ-
ಲಿಸಿತು, ಕೂಡಿತು ಮರಣವಿಲ್ಲದ,
ನಿಚ್ಚಸೊಗದಾವಾಸವಾಗಿಹ,
ಮುಪ್ಪನರಿಯದ, ಯೌವನದ ನೆಲೆ-
ವೀಡದಾಗಿಹ, ವಿರಹವಿಲ್ಲದ
ಪರಮಧಾಮದಲಿ!           ೩೧೦* ವರ್ಡ್ಸ್‌ವರ್ತ್ ಕವಿಯ ‘Laodamia’ ಎಂಬ ಕವಿತೆಯ ಭಾವವನ್ನು ಗ್ರಹಿಸಿ ರಚಿತವಾದದ್ದು.