ಅವನಿಗೆ
ಘಂಟಾಕರ್ಣನು ಭಕ್ತಲಲಾಮನು;
ಶಿವನಿಗೆ
ಕೇವಲ ಕಿಂಕರನಾಪ್ತ ಗುಲಾಮನು!
ಬೇರೆಯ ದೇವರ ಪೂಜೆಯ ಮಾಡನು;
ಕಿವಿಯಲಿ ಕೇಳನು, ಕಣ್ಣಲಿ ನೋಡನು;
ನಿಂದನೆಗಲ್ಲದೆ ಬಾಯಲ್ಲಾಡನು;
ಹಳಿವನು ಹೃತ್ಪೂರ್ವಕವಾಗಿ.
ಬೇರೆಯ ದೇವರ ಭಕ್ತರ ಕಂಡರೆ
ಹಲ್ಲನು ಕಡಿವನು ಬಲು ರೇಗಿ;          ೧೦
ಸುರಿವನು ಕೆಂಡದ ಮಳೆಯಾಗಿ!
ಹರಿ ಎಂದರೆ ಅವನಿಗೆ ಬರಿ ಬೊಂತೆ;
ಹರನೆನೆ ಹಾಲಿಗೆ ಜೇನಿಳಿದಂತೆ!
ಬೊಮ್ಮನದಂತೂ ಕಚ್ಚಟ ಕಂತೆ;
ಬೈವನು ಬಾಯಿಗೆ ಬಂದಂತೆ!
ಇಂತಿರೆ-
ಭಕ್ತನ ಭ್ರಾಂತಿಗೆ ಕನಿಕರ ತಾಳಿ
ಮೈದೋರಿದನಾ ದೇವ ತ್ರಿಶೂಲಿ!
“ಭಕ್ತನೆ, ಅದ್ವಯವಾಗಿಹ ಶಕ್ತಿ
ಒಂದಿದೆ; ಅದನಾರಾಧಿಸೆ ಭಕ್ತಿ.        ೨೦
ಬ್ರಹ್ಮನು ಹರಿಹರರೆಂಬುವರೆಲ್ಲ
ಆ ಚೈತನ್ಯಕೆ ಬೇರೆಯರಲ್ಲ.
ಹರಿಗೆಂದರೆ ನೀ ನನಗೆಂದಂತೆ;
ನನಗಿತ್ತರೆ ನೀನವಗಿತ್ತಂತೆ;
ಎಲ್ಲ ನದಿಗಳೂ ಕಡಲಿಗೆ ಕೊನೆಗೆ;
ಎಲ್ಲ ಹಾದಿಗಳು ಒಂದೇ ಮನೆಗೆ;
ಸರ್ವ ಸ್ತೋತ್ರವೂ ತುದಿಯಲಿ ನನಗೆ;
ಇದನರಿತರೆ ಶಾಂತಿಯು ನಿನಗೆ.
ರೂಪವು ಬೇರೆ; ನಾಮವು ಬೇರೆ;
ಸಕ್ಕರೆ ತಿಂಡಿಯ ರುಚಿ ಬೇರೇನು?    ೩೦
ಜಲವೆನಲೇನು? ನೀರೆನಲೇನು?
ಸಂಸ್ಕೃತವೇನು? ಕನ್ನಡವೇನು?
ಬಾಯಾರಿದ ಮಾನವ ತಾ ಕುಡಿಯಲು
ತೃಷ್ಣೆಯು ನಿಲ್ಲುವುದಿಲ್ಲೇನು?
ನಿನ್ನ ದೇವರಿಗೆ ಪೂಜೆಯ ಸಲ್ಲಿಸು;
ಅನ್ಯದೇವರಾ ನಿಂದೆಯ ನಿಲ್ಲಿಸು;
ಸಮತಾ ಬುದ್ಧಿಯೆ ನನಗೂ ಪ್ರೀತಿ,
ಭಕ್ತನಿಗದೆ ಧರ್ಮದ ನೀತಿ!”

ಇಂತೆಂದನು ಆ ಪಿನಾಕಪಾಣಿ,
ಮಾರ್ನುಡಿದುದು ಆ ಭಕ್ತನ ವಾಣಿ:   ೪೦
“ಅಜಹರಿಗಳ ತಲೆಮೆಟ್ಟಿದ ದೇವ,
ಇಂದ್ರಾದ್ಯಮರರ ಕುಟ್ಟಿದ ದೇವ,
ದೇವರ ದೇವನೆ, ಸಮತೆಯು ನಿನಗೆ:
ನಿನ್ನನೆ ಪೂಜಿಪೆ ಬುದ್ಧಿಯು ನನಗೆ!
ಹರಿಯನು ಬೈವುದೆ ಹರನ ಮಹಾಸ್ತುತಿ!
ಹರಿನಾಮವ ಹಾಡಿದರದೆ ದುರ್ಗತಿ!
ಹರಿ ಹಾಳ್ ಎಂದರದೊಂದೇ ಬಾರಿ
ಹರ ಬಾಳ್ ಎಂದಂತೆನಿತೋ ಸಾರಿ!
ಮೃಡನೇ, ಮುನಿದರೆ ಮುನಿ ನೀನು!
ದೃಢವೆನ್ನದು ಅದ ಬಿಡೆ ನಾನು!”      ೫೦
ಭಕ್ತನ ಮೊಂಡತನಕೆ ಬೇಸತ್ತು
ಹರ ಹೋದನು ಕೈಲಾಸಕ್ಕೆ.
ಘಂಟಾಕರ್ಣನೊ ತಾನೆಂದಿನವೊಲೆ
ಜೀವಿಸುತಿದ್ದನು ಶಿವನುಪದೇಶವ-
ನಿನಿತೂ ತಾರದೆ ಲಕ್ಷ್ಯಕ್ಕೆ!
ಇಂತಿರೆ ಮತ್ತೆ-
ಭಕ್ತಗೆ ಬುದ್ಧಿಯ ಕಲಿಸುವೆನೆಂದು
ನೆನೆದು ಮಹೇಶನುಪಾಯವನೊಂದು
ಮೈಯಲಿ ಹರಿಹರರೂಪವ ತಾಳಿ
ಮೈದೋರಿದನಾ ದೇವ ತ್ರಿಶೂಲಿ:     ೬೦
ಸುಂದರ ವಿಷ್ಣುವು ಮುಖವೊಂದರಲಿ;
ಭವ್ಯ ಮಹೇಶನು ಮತ್ತೊಂದರಲಿ!
ಒಂದೆಡೆ ರಾಜಿಪ ದಿವ್ಯ ಕಿರೀಟ;
ಮತ್ತೊಂದರಲಿ ಜಟಾಜೂಟ!
ಒಂದೆಡೆ ಮನಮೋಹಿಪ ವನಮಾಲಾ;
ಮತ್ತೊಂದೆಡೆ ರುದ್ರ ತ್ರಿಶೂಲ!
ಇಂತೆಸೆಯುತ್ತಿರೆ ತ್ರಿಭುವನ ವಂದಿತ
ಹರಿಹರ ರೂಪ,
ಸಂತೋಷದೊಡನೆ ಘಂಟಾಕರ್ಣಗೆ
ಮೂಡಿತು ಕೋಪ! ೭೦
ಹರಭಾಗವ ಕಾಣಲು ಸಂತೋಷ;
ಹರಿಭಾಗವ ಕಂಡತಿರೋಷ!
ಸ್ತುತಿಗಿನ್ನೇಂ ಗತಿ? ಎಂತಹ ಕ್ಲೇಶ!
ಹೆದರಿಕೆ ಏನ್? ಅರೆ! ಇದೆ ಶ್ಲೇಷ!
ಶ್ಲೇಷ ಸಹಾಯದೊಳೊಂದೇ ಸ್ತೋತ್ರದಿ
ಹರಸ್ತುತಿಗೈದು, ಹರಿಯನು ಬೈದು
ಹರಮುಖವಿದ್ದಾ ಪಕ್ಷಕೆ ನಮಿಸಿ,
(ಹರಚಂದ್ರನ ಹರಿದೋಷವ ಕ್ಷಮಿಸಿ)
ಫಲಪುಷ್ಪದಿ ಪೂಜೆಯ ಮಾಡುತಿರೆ,
ಧೂಪದ ಹೊಗೆಯನು ನೋಡಿದನು! ೮೦
ಅಯ್ಯೋ ಗತಿಯೇನು!
ಏನದು ಏನು?

ಹೋದುದೆ ಹರಿ ಮೂಗಿಗೆ ಧೂಪದ ಹೊಗೆ?
ಹರವದನದೊಳದೊ ಪರಿಹಾಸದ ನಗೆ!
ಹರಭಕ್ತನು ಉರಿದೆದ್ದನು ರೇಗಿ,
ಆಘೋಷಿಸಿದನು ಕೂಗಿ:-
“ಪಾಪಿಯೆ, ಹರಗೆಂದಿಟ್ಟಾ ಧೂಪವ
ಆಘ್ರಾಣಿಸುವೆಯ? ಕೊಡುವೆನು ಶಾಪವ-
‘ಹರನವರುರಿಸಿದ ಧೂಪದ ಚಕ್ಕೆ
ನಿನಗೆಂದಿಗು ಸಗಣಿಯ ಹೊಗೆಯಕ್ಕೆ!'”          ೯೦
ಎನ್ನುತ ರೋಷದೊಳೌಡನು ಕಚ್ಚಿ
ಹರಿಯಾ ಮೂಗನು ಹಿಡಿದನು ಮುಚ್ಚಿ!
ಈ ಹುಚ್ಚನು ನೋಡಿ
ಗಾಂಭೀರ್ಯವನೀಡಾಡಿ
ಹರಿಹರರಿಬ್ಬರು ನಕ್ಕೂ ನಕ್ಕೂ
ಕಣ್ಮರೆಯಾದರು ಗಗನವ ಹೊಕ್ಕು.
ನಾಡೊಳಗೆಲ್ಲಾ ಹಬ್ಬಿತು ಸುದ್ದಿ;
ಘಂಟಾಕರ್ಣನ ಭಕ್ತಿಯ ಬುದ್ಧಿ.
ಬಾಲಕರಾತನ ಹಿಂದೂ ಮುಂದೂ
ಆ ಶಿವಭಕ್ತನ ಪೀಡಿಸಲೆಂದು           ೧೦೦
“ಹರಿ ಹರಿ! ಹರಿ ಹರಿ! ಹರಿ ಹರಿ!” ಎಂದು
ಯದ್ವಾ ತದ್ವಾ ಕೂಗಿದರು!
ಹಿರಿಯರು ಕೂಡಾ ಹುಡುಗರ ಗೇಲಿಗೆ
ನಗುನಗುತಲೆ ತಲೆದೂಗಿದರು!
ಹರಭಕ್ತನು ಹರಿನಾಮವ ಕೇಳಿ
ಸಹಿಸಲಾರದೆ ಜುಗುಪ್ಸೆಯ ತಾಳಿ
ಕರ್ಣಗಳೆರಡಕೆ ಘಂಟೆಯ ಕಟ್ಟಿ
ಮುಳುಗಿಸಿದನು ಹರಿನಾಮವನು.
ಕಂಡದನೆಲ್ಲರು ಘಂಟಾಕರ್ಣಗೆ
ಹಾಕಿದರಾ ನವ ನಾಮವನು!          ೧೧೦