ಇಂತು ಆ ತಪ್ಪಲೊಳು ಕದನ ಕೋಲಾಹಲವು ಹಗಲೆಲ್ಲ ಮೊಳಗಿ
ಮುಳುಗುತಿರೆ, ಮುಳುಗಿದನು ಪಡುಗಡಲಿನಂಚಿನಲಿ ದಿನಮಣಿಯು ತೊಳಗಿ-
ಹಬ್ಬಿದುದು ಮುಂಗಪ್ಪು; ಮುಸುಗಿದುದು ಬಿಳಿಮಂಜು; ಚಳಿಗಾಳಿ ತೀಡಿ
ನರಳಿದುದು ಪೂರಾಯಗಾಯದಲಿ ನೊಂದು ನರಳುವ ಭಟರ ಕೂಡಿ.
ಆ ದಿನದ ಕದನದಲಿ ಜಯಸಿಂಹ ಭೂವರನ ನೆಚ್ಚಿಗೆಯ ಸೇನೆ
ಕೆಚ್ಚಿನಲಿ ಕಾದಾಡಿ ಕೊಚ್ಚುತರಿನಿಕರವನು ಹೆಚ್ಚಿಬರೆ ಬೇನೆ
ನೊಂದು ತಿರೆಗುರುಳಿದುದು! ಮಿರ್ತುವಿನ ಕರಿನೆರಳು ರಣರಂಗದಲ್ಲಿ
ಸುಳಿದು ತಿರುಗಿತು ಕೆರಳಿ ಮೂಳೆಗಳ ಮುರಿದು ಬಿಸಿನೆತ್ತರನು ಚೆಲ್ಲಿ!
ಸಾಯುವರ ನರಳಾಟ, ಸತ್ತವರ ಚೀರಾಟ, ಮರುಳುಗಳ ಕಾಟ,
ಸಾಯುತಿಹರೆದೆಯೆಲುಬುಗಳ ಮುರಿವ ಹಸಿದ ಶಿವಗಣದ ಕೂಗಾಟ,        ೧೦
ಮಜ್ಜೆ, ನೆತ್ತರು, ಮಾಂಸ, ಮುರಿದ ಕೂರಸಿಗಳಿಂದಿಡಿದಗುರ್ವಾಯ್ತು
ಭೀಕರದ ರಣರಂಗ! ಕೊಳುಗುಳದೊಳೆಚ್ಚಾಡಿ ಗಾಯದಲಿ ನೊಂದು,
ಮರಸೊಂದಿ, ಮುಚ್ಚೆ ತಿಳಿದೇಳಲಾರದೆ ಬಿದ್ದು, ನೆತ್ತರಲಿ ಮಿಂದು
ಮಲಗಿದ್ದ ಜಯಸಿಂಹ ಭೂಪತಿಯ ಬಳಿಗೆ ರಣವೀರನೈತಂದು,
ಮೆಲ್ಲಗಾತನನೆತ್ತಿ, ಪಾಳುಬಿದ್ದಾ ಬಳಿಯ ಗುಡಿಯೊಳಗೆ ಬಂದು,
ಸುರಿವ ಕೆನ್ನೀರೊರಸಿಯುಪಚರಿಸಿದನು ಮರುಗಿ ಮನನೊಂದು ಬೆಂದು!
ನರಳಿತೊಂದೆಡೆ ಬಿತ್ತರದ ಕಡಲು; ಪಸರಿಸಿತು ಮಿರುಗಿ ಮತ್ತೊಂದು
ದಿಕ್ಕಿನಲಿ ಮೆರೆವ ಕಮಲಾಕರವು; ಮೇಣೆಸೆದುದಂಬರದೊಳಿಂದು!
ಕಣ್ದೆರೆದು, ನೋಡಿ ರಣವೀರನನು, ನುಡಿದನವನೀಶನಿಂತೆಂದು:-
“ಬಳಿಗೆ ಬಾರೈ ಗೆಳೆಯ, ವೀರ, ರಣವೀರ,      ೨೦
ನುಡಿಯಲಾರೆನು; ಕೇಳು ಕಿವಿಗೊಟ್ಟು, ಶೂರ!
ಸೇನೆ ಮಡಿದುದು; ವೀರರಳಿದಿಹರು; ನೀನೊಬ್ಬ-
ನಲ್ಲದಿನ್ನಾರ ನಾ ಕಾಣೆನಿಲ್ಲಿ.
ಜವನಿದ್ದೆಯಲ್ಲಿಹರು ನಮ್ಮ ನೆಚ್ಚಿನ ಭಟರು;
ಮರಳಿ ರಣರಂಗದಲಿ ಕಾದರವರು.
ಮುಂದೆ ಎಂದೆಂದಿಗೂ ಕೆಚ್ಚೆದೆಯ ಮಾತುಗಳ-
ನಾಲಿಸೆವು; ಮಿಂಚುತಿಹ ಕೂರಸಿಗಳ,
ಕವಿಯುತಿಹ ಸರಳುಗಳ, ಹೊಳೆಯುತಿಹ ಕೈದುಗಳ,
ಕಾಳಲೀಲೆಯ ಮುಂದೆ ಕಾಣೆವಿನ್ನು.
ಶೋಕವನು ಬಿಡು; ಬಿದಿಯ ಕಟ್ಟಳೆಗೆ ತಲೆಬಾಗು;        ೩೦
ನಾಕವೆಂಬುದೆ ಸಾಹಸಿಗೆ ಸಮರವೆಂದರಿತು
ವ್ಯಾಕುಲತೆಯನು ನೀಗು. ನಿನ್ನೆದೆಯ ಗೆಳೆಯನಿಗೆ
ಕಡೆಯ ಕಜ್ಜವಮಾಡು, ಶಾಂತನಾಗು!
‘ಮಾಕಾಳಿ’ ಹೆಸರಿನೀ ಎನ್ನತುಳ ಕೂರಸಿಯ
ನೀ ಕೊಂಡು, ಬಳಿಯ ಕಮಲಾಕರವ ಸೇರಿ,
ಏಕೆಂದು ಕೇಳದಲೆ, ಕೊಳದೆದೆಯೊಳೆಸೆದು, ತಾ
ಕೌತುಕದ ಸುದ್ದಿಯನು; ಹೋಗು ಬೇಗ!
ಹಿಂದೆ ನಾನೊಂದು ದಿನ ಬೇಸಗೆಯ ಸಮಯದಲಿ
ಬಂದೆನೀ ಕೊಳದೆಡೆಗೆ ನೀರೀಂಟಲೆಂದು;
ಚಂದದಲಿ, ಮೋಹದಲಿ, ನೇಹದಲಿ, ಕೋಮಲದ        ೪೦
ಕೆಂದಳಿರ ಕೈಯೊಂದು ಮೇಲ್ಮೂಡಿಬಂದು
‘ಮಾಕಾಳಿ’ ಎಂಬ ಈ ಕೂರಸಿಯನೆನಗಿತ್ತು
ಮುಳುಗಿದುದು ಮರಳಿ ಕೊಳದಾಳದಲ್ಲಿ!
ದೊರೆಯಂತೆ ಧರಿಸಿದೆನು ‘ಮಾಕಾಳಿ’ ಕೂರಸಿಯ;
ಧರುಮದಲಿ ಜಯಿಸಿದೆನು ಮಾಕಾಳಿಯಿಂದ.
ಬರುವ ಕಾಲದೊಳೆನ್ನ ಕೀರ್ತಿಯನು ಹಾಡುವರು,
ಮರೆಯಲಾರರು ನನ್ನ ಕೂರಸಿಯ ಕತೆಯ!
ತೆರಳು, ನಡೆ, ಸರಸಿಯೆಡೆಗೈತಂದು ಬಿಸುಡಿ, ತಾ,
ನೀ ಕಾಂಬ ಕೌತುಕದ ಕತೆಯ ಪರಿಯ.
ಇಂತೆಂದ ನರಪತಿಯ ನಿಟ್ಟಿಸುತ ಮರುಗಿ,     ೫೦
ರಣವೀರನಿಂತೆಂದು ನುಡಿದನೆದೆ ಕರಗಿ:
“ಗಾಯದಲಿ ನರಳುತಿಹ ನಿನ್ನನೆಲೆ ದೇವ,
ನೆರವಿಲ್ಲದಿಂತು ನಾನಗಲುವುದು ತರವೆ?
ನರಳುತಿಹ ನಿನ್ನನಗಲಲು ಕಜ್ಜ ಕೆಡದೆ?
ಆದೊಡೆಯು ತೆರಳುವೆನು ನಿನ್ನಾಣೆಯಂತೆ!
ಕೂರಸಿಯ ಬಿಸುಡುವೆನು; ಸುದ್ದಿಯನು ತರುವೆ!”

ಇಂತೆನುತ ರಣವೀರನಾ ಮಹಾ ಕೈದುವನು ಕೈಯಲ್ಲಿ ಹಿಡಿದು,
ತಿರುತಿರುಗಿ ನರಪತಿಯ ದಿಟ್ಟಿಸುತ, ಪಾಳಾದ ಗುಡಿಯಿಂದ ನಡೆದು,
ತಿಂಗಳಿನ ಮಬ್ಬಾದ ಬೆಳಕಿನಲಿ ಮಡಿದವರ ನಡುನಡುವೆ ಹಾರಿ,
ಚೀರುತಿಹ ಕಡಲ ಚಳಿಗಾಳಿಯಲಿ ಹೆಪ್ಪಾದ ಬಸೆಯಲ್ಲಿ ಜಾರಿ,      ೬೦
ಡೊಂಕಾದ ದಾರಿಗಳ, ಮೊನಚಾದ ಬಂಡೆಗಳ, ತೊಳತೊಳಲಿ ಬೇಗ
ತಿಂಗಳೊಳು ತಳಿಸುತಿಹ ಬಿತ್ತರದ ಸರಸಿಯೆಡೆಗೈತಂದನಾಗ!
ನಿಂತಲ್ಲಿ ರಣವೀರನಾ ಬಾಳನೊರೆಯಿಂದ ಕಳಚಿದನು; ಕೂಡೆ,
ಮುಗಿಲಿನಂಚನು ಕಳೆದು ತಣ್ಗದಿರನುಕ್ಕುತಿಹ ಕಾಂತಿಯಲಿ ಮೂಡೆ,
ವಜ್ರವೈಡೂರ್ಯಾದಿ ಮುತ್ತುಗಳ ಕೆತ್ತನೆಯ ಖಂಡೆಯದ ಪೆಂಪು
ಮಿರುಗಿ ಮಿಂಚಿತು; ತೊಳಗಿ ರಂಜಿಸಿತು, ಕಂಡುಬರೆ ಮಳೆಬಿಲ್ಲಿನಿಂಪು!
ಬಿಸುಡೆ ಕೈನೆಗಹಿದನು; ಮನಮೋಹಿಪಾ ಬೆಡಗ ನೋಡಿ, ನೆರೆನೋಡಿ,
ಮೋಹದಲಿ ಕವಲೊಡೆದು ಬಗೆ ಕದಡಿ, ನಿಂತನಾಲೋಚನೆಯ ಮಾಡಿ.
ಕಡೆಗಾ ಮಹಾಬಾಳನಡಗಿಪುದೆ ಲೇಸೆಂದು ಚಿತ್ತದಲಿ ಬಗೆದು,
ಬಿಸುಡದಲೆ ಬೈತಿಟ್ಟನಾ ದಡದ ದಟ್ಟಜೊಂಡಿನ ಮೆಳೆಯ ದೊಗೆದು!        ೭೦
ಇಂತೆಸಗಿ ಮರಳಿದನು ದೊರೆಯೆಡೆಗೆ ಬೇಗ;
ಕಂಡು ರಣವೀರನನು ದೊರೆಯೆಂದನಾಗ:

“ಏನು ಮಾಡಿದೆ ಹೇಳು ವೀರನೆ? ಎಸೆದೆಯೋ ‘ಮಾಕಾಳಿ’ಯ?
ಏನು ನೋಡಿದೆ ಹೇಳು! ಕೌತುಕವೇನು? ಕೇಳಿದೆಯೇನನು?”
ಇಂತೆಂದ ನರಪತಿಗೆ ಬಾಗಿ
ರಣವೀರ ನನ್ನಿಯನು ನೀಗಿ:
“ತೆರೆಗಳಾಡುತ ಬಂದು ಜೊಂಡಿಗೆ ತಾಗಿ ಮೊರೆವುದ ಕೇಳಿದೆ!
ಮರುಗಿ ನೊರೆನೊರೆಯಾಗಿ ಬಂಡೆಯ ಬಡಿವ ನೀರನು ನೋಡಿದೆ!”
ಇಂತೆಂದ ದಳಪತಿಯ ನೋಡಿ, ನೋಡಿ,
ಜಯಸಿಂಹನಾಡಿದನು ಬಳಲಿ, ಬಾಡಿ:           ೮೦
“ಮರೆತು ಧರ್ಮವನಿಂತು ಪುಸಿಯನು ನುಡಿವರೇ, ರಣವೀರನೆ?
ನಿನ್ನ ಪಾರ್ಥಿವತನವ ಸುಡು, ಸುಡು! ಲೋಭಿಯಾದೆಯ ತುದಿಯಲಿ?
ಕಾಣಲಿಲ್ಲವೆ ಕೈಯ? ವಾಣಿಯ ಕೇಳಲಿಲ್ಲವೆ? ಕೊಳದಲಿ
ಕುರುಪನೊಂದನು ನೋಡಲಿಲ್ಲವೆ? ಬಿಸುಡಿದುದೆ ಸಟೆ; ಬಲ್ಲೆನು!
ಕ್ಷತ್ರಿಯನು ನೀ ಸಟೆಯ ನುಡಿವುದೆ? ನಾಚಿಕೆಯೆ ನಿನಗಿಲ್ಲವೆ?
ಇರಲಿ, ನಡೆ; ಮನ್ನಿಸುವೆ, ಬೆಸಸುವೆನೊಮ್ಮೆಯಾಪ್ತನು ನೀನಹೆ:
ಮರಳಿ ಕೊಳವನು ಸೇರಿ, ಬಾಳನು ಬಿಸುಟು, ಸುದ್ದಿಯನು ತಾ, ನಡೆ!”

ದೊರೆಯ ಮಾತನು ಕೇಳಿ ನಾಚುತ ರಣದ ವೀರನು ಬಂದು ಕೊಳದೆಡೆ –
ಗಲ್ಲಿ ಬೈತಿಟ್ಟಸಿಯ ಕೊಂಡನು ಕೈಲಿ, ನೋಡಿದನು.
ತರತರದ ಬಣ್ಣಗಳ ಹೊಳಪನು ಕಂಡು, ಕತ್ತಿಯ ಮೆಚ್ಚಿ ಮನದಲಿ,            ೯೦
ಮರುಗಿ, ಬಾಳನು ಬಿಸುಡಲಾರದೆ ಚಿಂತಿಸಿದನಿಂತು:
“ಬಿಸುಡಲೀ ಕೈದುವನು ನಷ್ಟವು ಧರೆಗೆ ದಿಟವನು! ಧಾರಿಣಿಯೊಳೊಂ-
ದತುಲವಸ್ತುವನೆಸೆದ ಪಾತಕಿಯಾಗುವೆನು ನಾನು.
ಬಿಸುಡದೆಯೆ ನಾನಿಂದು ಪೊರೆದರೆ, ಮುಂದೆ ಕಾಲಾಂತರದೊಳಸಿಯನು
ಭೂವರನ ಜಯಸಿಂಹನಸಿಯೆಂದೊಲಿದು ಹಿಗ್ಗುವರು.
ಬಿಸುಡಲಾಗುವುದೇನು? ಮುಚ್ಚಿಡಲಿದನು ಹೋಗುವುದೇನು? ನೃಪತಿಯ
ಮಾತ ಮೀರುವುದುಚಿತವಲ್ಲವೆ ವೀರ ಪಾರ್ಥಿವಗೆ?
ದೊರೆಯ ಕೆಡುಕನು ದೊರೆಯೆ ಬಯಸಿದರದನು ಕೈಕೊಂಡೆಸಗೆ ಧರ್ಮವೆ?
ತನ್ನ ಹಿತವನು ತಾನೆ ಅರಿಯನು ಹೆಚ್ಚಿದಳಲಿನಲಿ!
ಕತೆಯ ಹೇಳುವರಿದನು ತೋರುತ ದೊರೆಯ ಕೀರ್ತಿಯ ಹೊಗಳುವರು; ಮೇ-
ಣಿದನು ಕೊಳದೊಳಗೊಬ್ಬ ಬಾಲೆಯು ರಚಿಸಿ ಕೊಟ್ಟುದನು         ೧೦೦
ಮುದುಕರಾದವರೊರೆವರೆಳೆಯರ ಕುರಿತು. ನಾನಿದನಿಂದು ಬಿಸುಡಲು
ದೊರೆಯ ಚರಿತೆಯ ತೋರ್ಪ ಚಿಹ್ನೆಗಳೊಂದು ಕಾಣದೆಯೆ
ಕಟ್ಟುಕತೆಯಾಗುವುದು ಚರಿತೆಯು! ಅಸಿಯನಿದನಾನೆಸೆಯಲಾಗದು!
ನೃಪತಿಯಾಜ್ಞೆಯ ಮೀರಿ ನಡೆವೆನು ದೂರದೃಷ್ಟಿಯಲಿ!”–
ಲೋಭದಲಿ ರಣವೀರನಿಂತೆಂದು ಬಗೆದು,
ಕೂರಸಿಯನಿನ್ನೊಮ್ಮೆ ಜೊಂಡಿನಲಿ ದೊಗೆದು,
ನೋವಿನಲಿ ನರಳುತಿಹ ದೊರೆಯೆಡೆಗೆ ಬಂದು,
ನಿಲಲು ಕಂಡವನೀಶನೊರೆದನಿಂತೆಂದು:
“ಏನು ಮಾಡಿದೆ ಹೇಳು ವೀರನೆ? ಎಸೆದೆಯೋ ‘ಮಾಕಾಳಿ’ಯ? ೧೧೦
ಏನು ನೋಡಿದೆ ಹೇಳು! ಕೌತುಕವೇನು? ಕೇಳಿದೆಯೇನನು?”

ಇಂತೆಂದ ನರಪತಿಗೆ ಬಾಗಿ
ರಣವೀರ ನನ್ನಿಯನು ನೀಗಿ:
“ಮರುಗಿ ನೊರೆನೊರೆಯಾಗಿ ಬಂಡೆಗೆ ಬಡಿವ ನೀರನು ನೋಡಿದೆ!
ತೆರೆಗಳಾಡುತ ಬಂದು ಜೊಂಡಿಗೆ ತಾಗಿ ಮೊರೆವುದ ಕೇಳಿದೆ!”
ಕೇಳುತ್ತ ಕೋಪದಲಿ ದುಃಖದಲಿ ನೊಂದು,
ದಳಪತಿಯ ನೋಡಿ ಜಯಸಿಂಹನಿಂತೆಂದು:
“ನನ್ನಾಣತಿಯ ಬಲವಳಿದು ಹೋಯ್ತೆ? ಹಾ ವಿಧಿಯೆ,
ತುದಿಯಲ್ಲಿ ನನ್ನ ಗತಿಯಿಂತುಟಾಯ್ತೆ?
ಧಿಕ್ಕರಿಸಿ ನೂಕುವರು, ಲೆಕ್ಕಿಸರು ಸೇವಕರು,   ೧೨೦
ಮರೆಯುವರು ದರ್ಪ ಬಲವಳಿದ ಮೇಲೆ!
ಎಲೆ ದುರುಳ, ಎಲೆ ಪಾಪಿ, ನಿರ್ದಯನೆ, ರಣವೀರ,
ಕಡೆಯ ಸೇವೆಯೊಳೆನ್ನ ಪೀಡಿಸುವುದೆ?
ತರಳೆಯಂದದಿ ನೀನು ಹೊಳೆವ ಕತ್ತಿಯ ಕಂಡು
ಮೋಹಿಪುದೆ ಮೀರಿ ನನ್ನಾಣತಿಯನು?
ಎರಡುಸಲ ಎಡವಿದರು ಮೂರನೆಯ ಸಲ ನೀನು
ಮುಗ್ಗುರಿಸಿ ಬೀಳದಿರಬಹುದು; ತೆರಳು!
ಕೂರಸಿಯನೆಸೆಯದಲೆ ನೀ ಬಂದರೀಯೆಡೆಗೆ
ಕಡಿದು ಕೆಡಹುವೆ ಸಲಹಿದೀ ಕೈಯಲಿ!”
ಜವದಿಂದ ಮೇಲೆದ್ದು ರಣವೀರನೋಡುತ್ತ ಸರಸಿಗೈತಂದು         ೧೩೦
ಜೊಂಡಿನಲಿ ಬೈತಿಟ್ಟ ಕೂರಸಿಯ ಮೇಲೆತ್ತಿ, ಕಣ್ಮುಚ್ಚಿ ನಿಂದು,
ಗಿರಗಿರನೆ ತಿರುಗಿಸುತ ಬೀಸಿದನು ಕೈಬಿಟ್ಟು. ಕಣ್ದೆರೆದು ಕೂಡೆ
ಬೆಳ್ಮಿಂಚಿನಂದದಲಿ ಸುತ್ತಿ ಚಿಮ್ಮುತ ಸಿಡಿವ ಕೈದುವನು ನೋಡೆ,
ಗಗನಾಂತರಾಳದೊಳು ಭರದಿಂದ ಸಂಚರಿಪ ನಕ್ಷತ್ರದಂತೆ,
ಕೊಳದೆದೆಯ ಕನ್ನಡಿಯೊಳೆಸೆಯುತ್ತ, ಗೆರೆಯೆಳೆದು ಕುಡಿಮಿಂಚಿನಂತೆ,
ಗುಳುಗುಳಿಸಿ ಮುಳುಗುತಿರೆ, ಕೈಯೊಂದು ಸರಸಿಯಿಂ ಮೇಲೆದ್ದು ಬಂದು,
ಚಂದದಲಿ, ಮೋಹದಲಿ, ನೇಹದಲಿ ‘ಮಾಕಾಳಿ’ಯನು ಧರಿಸಿ ನಿಂದು
ಗಿರಗಿರನೆ ತಿರುಗಿಸುತ ಮೂರುಸಲವಡಗಿದುದು ಕೊಳದಾಳದಲ್ಲಿ!
ಬೆಕ್ಕಸಂಬಟ್ಟು ರಣವೀರನೈತಂದು ನಿಲಲರಸನೆಡೆಯಲ್ಲಿ,
ದಳಪತಿಯ ನಗುಮೊಗವನಾನಂದದಿಂದ     ೧೪೦
ದಿಟ್ಟಿಸುತ ಜಯಸಿಂಹನವನಿಗಿಂತೆಂದ:
“ಈಗ ನಿನ್ನೀ ಕಣ್ಣಕಾಂತಿಯೆ ನುಡಿವುದೆಸಗಿದ ಕಜ್ಜವ!
ಏನು ನೋಡಿದೆ ಹೇಳು! ಕೌತುಕವೇನು? ಕೇಳಿದೆಯೇನನು?”

ಇಂತೆಂದ ನರಪತಿಗೆ ಕೈಮುಗಿದು ಬಾಗಿ
ರಣವೀರನೆಂದನಾವೇಶವಶನಾಗಿ:
“ಎಂಬೆನೇಂ? ‘ಮಾಕಾಳಿ’ ಕತ್ತಿಯ ಕೌತುಕದ ಪರಿಯ
ಜನ್ಮಜನ್ಮದಿಯುದಿಸಿ ಬಂದರು, ಮುಂದೆ ನಾ ಕಾಣೆ!
ಮನವ ಮೋಹಿಸದಂತೆ ಮುತ್ತಿನ ಕೆತ್ತನೆಯ ಕತ್ತಿ,
ಜೀಯ, ಕಂಗಳ ಮುಚ್ಚಿಕೊಂಡೆನು; ಮತ್ತೆ ಬೀಸಿದೆನು.
ಮರಳಿ ಕಣ್ದೆರೆದದರ ಮಿಂಚಿನ ಪಥವ ನೋಡುತಿರೆ,      ೧೫೦
ಕೋಮಲದ ಕೈಯೊಂದು ಕೊಳದೆದೆಯಿಂದ ಮೂಡಿದುದು!
ಚಂದದಲಿ, ಮೋಹದಲಿ, ನೇಹದೊಳಸಿಯ ಕೈಲಾಂತು
ಮೂರುಸಲ ಗಿರಗಿರನೆ ತಿರುಗಿಸಿ ಕೊಳದೊಳಡಗಿದುದು!”
ಮಮತೆಯಲಿ, ಹರುಷದಲಿ, ಗೆಳೆಯನನು ನೋಡಿ,
ಜಯಸಿಂಹನಿಂತೆಂದನಾತನನು ಬೇಡಿ:
“ಸನ್ನಿಹಿತವಾಗಿಹುದು ತುದಿಯ ಕಾಲವು ನನಗೆ;
ತಡವ ಮಾಡದೆ ಬೇಗ ಕೊಳದ ತಡಿಗೆ
ಹೆಗಲೊಳೆನ್ನನು ಹೊತ್ತು ಕೊಂಡೊಯ್ದಿರಿಸು, ಗೆಳೆಯ!
ಗಾಯದಲಿ, ಚಳಿಯಲ್ಲಿ ಬದುಕಲಾರೆ.”

ಇಂತೆಂದು ನೋವಿನಲಿ ನರಳುತಿಹ ನರಪತಿಯು ಕೈಯೊಂದನೂರಿ,       ೧೬೦
ಬಿಚ್ಚಿದೆವೆಗಳ ಮುಚ್ಚದೆಯೆ ಬರೆದ ಚಿತ್ತಾರದಂದದಲಿ ತೋರಿ,
ಮೇಲೇಳಲೆಳಸುತಿರೆ, ಬಯಕೆಗಣ್ಣನು ಬೀರಿ, ಮಿತ್ರನನು ನೋಡಿ;
ಎದೆಯೊಳುಕ್ಕುವ ದುಃಖವನು ತಡೆದು, ಕಂಬನಿಯ ಸೂಸುತ್ತ, ನೋಡಿ
ಕರಯುಗವ, ನುಡಿಯದಲೆ ಮೌನದಲಿ ಬಗ್ಗಿ ದೊರೆಯನು ಹೆಗಲೊಳಿಟ್ಟು;
ರಣವೀರನೈತಂದನಾ ಸಮರಭೂಮಿಯಲಿ ದೇಗುಲವ ಬಿಟ್ಟು!
ಸದ್ದಿಲ್ಲದಿರುಳಿನಲಿ ಮನೆಯಲ್ಲಿ ಕನವರಿಸಿ ನರಳುವವನಂತೆ,
ಹೆಗಲೊಳೇರಿಸಿ ಕೊಳಕೆ ರಣವೀರನೊಯ್ಯುತಿರೆ, ದೊರೆಯು ಬಿಸುಸುಯ್ದು
ನರಳಿದನು ನೋವಿನಲಿ; ಬೇಗಬೇಗೆಂದೆನುತ, ಮಿರ್ತುವಿನ ಚಿಂತೆ
ಮೂಡಿಬರೆ ಚಿತ್ತದಲಿ, ಸುಯ್ಯೆಂದು ಕೊರೆವ ಚಳಿಗಾಳಿಯನು ಬಯ್ದು!
ದೊರೆಯುತ್ತಮಾಂಗದಿಂದಿಳಿವ ನೆತ್ತರ ದಾರೆ ಜಲಜಲನೆ ಚೆಲ್ಲಿ,   ೧೭೦
ಜವದಿಂದ ಬಂಡೆಗಳ ನೆಗೆನೆಗೆದು ಮುಗ್ಗುರಿಸಿ ಬಿಳಿಮಂಜಿನಲ್ಲಿ
ಮನುಜರೂಪವ ಮೀರಿ, ಹಿರಿದಾಗಿ ತೋರಿ, ಸಾಗುವ ವೀರನುಡೆಯ
ತೋಯಿಸಿತು; ಮೀಯಿಸಿತು ಕೆನ್ನೀರಿನಲಿ, ನಡೆದ ಕಿರುದಾರಿಯೆಡೆಯ!
ಅವನ ಬಲಗಡೆ ಬಂಡೆ ಅವನ ಎಡಗಡೆ, ಬಂಡೆ, ಕೆಳಗೈಕಿಲುಂಡೆ;
ಬಂಜರಿನ ಭೂಮಿಯದು ಕಣ್ಗಾಯ್ತು ಬೋಳಿಸಿದ ಮಿತ್ತುವಿನ ಮಂಡೆ.
ರಣವೀರನೈದುತಿರೆ ಜಾರುಗಲ್ಲೊಳು, ಲೋಹದಾಯುಧಗಳಾಳಿ
ಶಿಲೆಗಳಿಗೆ ಬಡಿಬಡಿದು ಖಣಿಲೆಂದು ಚೀರಿದುವು; ನಡುಗಿ ಚಳಿಗಾಳಿ
ರೋಗಿಯಂದದಿ ಕೂಗಿ ಬೀಸಿದುದು. ಮೊರೆದು ನರಳಿತು ಕಡಲು ಹಿಂದೆ;
ರೋದನದ ದನಿಯೊಂದು ಮೆಲುಮೆಲನೆ ಮೇಲೇರಿ ಪಸರಿಸಿತು ಮುಂದೆ!
ಕಂಗೊಳಿಸಿತನಿತರೊಳೆ ಕೊಳವು ನೀರಾದ ಕನ್ನಡಿಯ ತೆರದಿಂದ,            ೧೮೦
ತೆರೆತೆರೆಗು ಹಬ್ಬಿ ತಳತಳಿಸುತಿಹ ಚಂದ್ರಿಕೆಯ ಹೊಂಬಣ್ಣದಿಂದ!
ಆ ಬಿತ್ತರದ ಸರೋವರದೆದೆಯ ಮೇಲೊಂದು, ರಮಣೀಯವಾಗಿ,
ಪಡಿದಿಂಗಳೆಂಬಂತೆ ತೇಲಿಬಹ ದೋಣಿಯಿರೆ, ಬೆಪ್ಪುಬೆರಗಾಗಿ
ನೋಡಿದನು ರಣವೀರನೆವೆಯಿಕ್ಕದಲೆ ಮುಂದಕಡಿಯಿಡಲು ಮರೆತು!
ವಿಸ್ಮಯಾನ್ವಿತನಾಗಿ ನೋಡಿ, ನೆರೆ ನೋಡಿದನು, ಹಿಗ್ಗಿ ಮೈಮರೆತು!
ಸಿಂಗರಿಸಿದಾ ದೇವನೌಕೆಯಲಿ ಪೊಂದೊಡಿಗೆಗಳನು ಕಳಚಿಟ್ಟು
ಮಂಗಳದ ದಿವ್ಯಮೂರ್ತಿಗಳಾರು ತೋರಿದರು ಕರಿಯುಡೆಯನುಟ್ಟು.
ಬಳಿಯಲ್ಲಿ ಮಣಿಮಕುಟಗಳನಾಂತು, ಕಾಂತಿಯಲಿ ಸೊಬಗಿನಲಿ ಮೀರಿ,
ಕಂಗೊಳಿಸಿದರು ಮೂವರರಸಿಯರು! ದೋಣಿಯಿಂದೊಯ್ಯೊಯ್ಯನೇರಿ
ಗೋಳಿಡುವ ದನಿಯೊಂದು ಚಳಿಗಾಳಿಯಲಿ ಹಬ್ಬಿ, ಬಾಂದಳವ ಸೇರಿ       ೧೯೦
ಮರುದನಿಯ ಬೀರಿತ್ತು ಗುಹೆಗಳೊಳು ಮೊರೆದು, ಬಳಿಯರೆಗಳನು ತಾಗಿ!
ರಣವೀರನೊಯ್ಯೊಯ್ಯನೊಯ್ದಿಳಿಸಿದನು ದೊರೆಯ, ಕೊಳದ ಬಳಿ ಬಾಗಿ!
ದಡದೆಡೆಗೆ ತೇರಿ ಬರಲಾ ನಾವೆಯವನೀಶ ಮಿತ್ರನನು ನೋಡಿ,
“ನೌಕೆಯಲಿ ಇರಿಸೆನ್ನ” ಎನಲೆತ್ತಿದನು. ತಮ್ಮ ಕೈಗಳನು ನೀಡಿ
ಮೂವರರಸಿಯರವನ ನೆಗಹಿದರು ಕಂಬನಿಯ ಕರೆದು ಗೋಳಾಡಿ;
ಕರಿನೆತ್ತರೊಸರುತಿರಲೊರಸಿದರು; ಬಲಿದ ಮೋಹದಲಿ ಮೊಗನೋಡಿ,
ದುಃಖದಲಿ, ಕರುಣೆಯಲಿ, ಪ್ರೇಮದಲಿ, ‘ಜಯಸಿಂಹ’ ಎಂದು ಮಾತಾಡಿ,
ಸಮರದಲಿ ಸೀಳಿದ ಕುಲಾವಿಯನು ಕಳಚಿದರು ನೊಂದು, ಮುದ್ದಾಡಿ!
ಅವರಲ್ಲಿ, ಸೊಬಗಿನಲಿ, ಕಾಂತಿಯಲಿ, ಹರೆಯದಲಿ ಹಿರಿದಾದ ದೇವಿ
ಭೂವರನ ಗಾಯವಡೆದುತ್ತಮಾಂಗವ ತನ್ನ ತೊಡೆಯಲಿಟ್ಟೋವಿ ೨೦೦
ಕಣ್ಣೀರ ಸುರಿಸಿದಳು, ಬಿಸುಸುಯ್ದು, ಕಡುನೊಂದು, ದುಃಖಾರ್ತೆಯಾಗಿ;
ಬೆಳಗಿನಿಂದುವಿನಂತೆ ಮಲಗಿದನು ನರಪತಿಯು ಮೊಗ ಬೆಳ್ಳಗಾಗಿ!
ದುಂಬಿಗಳ ಕರಿಮೆಯ್ಯನೇಳಿಸುವ ಮುಂಗುರುಳು ಮುತ್ತಿರುವ ಹಣೆಯು
ನೀರದಗಳಂಚಿನಲಿ ರಂಜಿಸುವ ಪೊಳ್ತೆಡೆಯ ರವಿಗಾದುದೆಣೆಯು!
ಮಿಂಚಿ ಬಳುಕುವ ತನ್ನ ಕೂರಸಿಯ ಕೈಲಾಂತು ರಣರಂಗದಲ್ಲಿ,
ಎಳೆಯ ಬಾಳೆಯ ಬನವ ಬಾಲಕನು ಬಿನದಕಾಗಿಯೆ ಸವರುವಂತೆ,
ಮುರಿದಿಕ್ಕುತರಿಭಟರ, ಗೆಲ್ವೆಣ್ಣನೆಳೆದೊಯ್ವ ಜಯಸಿಂಹನಲ್ಲಿ,
ಸುಂದರಿಯ ತೊಡೆಯ ಮೇಲೊರಗಿದನು ತಿರೆಗುರುಳಿದೊಂದು ದಳದಂತೆ!
ತಬ್ಬಲಿಯ ತೆರದಿಂದೆ ರೋದಿಸುತ, ಕಂಬನಿಯ ಸೂಸುತಳಲಿಂದ,
ಪೊರಮಡುವ ತನ್ನೊಡೆಯನನು ನೋಡಿ, ನೋವಿನಲಿ ರಣವೀರನೆಂದ:    ೨೧೦
“ಹೇ ಜೀಯ, ಗತಿಯಾವುದಿನ್ನೆನಗೆ? ಹೇ ದೇವ, ಮರೆಗೊಳ್ವೆನೆಲ್ಲಿ?
ಹಳೆಯ ಯುಗವಳಿಯುತಿದೆ; ಹೊಸಯುಗವು ಮೂಡುತಿದೆ ಧಾರಿಣಿಯೊಳಿಲ್ಲಿ!
ಮುಂದೆ ನನ್ನಿಯ ಕಾಣೆನಾಚಾರವಳಿಯುತಿದೆ, ಮುಳುಗುತಿದೆ ಧರ್ಮ!
ಈ ದಿನದ ಸೋಲಿನಲಿ ಮಾಯವಾದುದು ಪಾರ್ಥಿವರ ವೀರಕರ್ಮ!
ಕಾರಿರುಳು ಕವಿಯುತಿದೆ; ದಾರಿಗಾಣುವುದೆಂತುಟಡಿಯಿಡುವುದೆಂತು?
ಹಳೆಯುಗದ ಜೊತೆಗಾರರಿಲ್ಲದಲೆ ಬದುಕಿ ಬಾಳುವುದಿಳೆಯೊಳೆಂತು?
ಹೊಸಕಾಲ, ಹೊಸಬಾಳು, ಹೊಸಜನವು, ಹೊಸಮನವು, ಹೊಸದಿಟ್ಟಿಯಿಂತು
ಜಗವೆಲ್ಲ ಹೊಸದಾಗಿ ಮೈದೋರಲದರಲ್ಲಿ ಹಳೆಯದಿಹುದೆಂತು?”

ಇಂತೆಂದ ಮಿತ್ರನನು ಕರುಣೆಯಲಿ ನೋಡಿ
ಸಂತೈಸಿದನು ದೊರೆಯು ಮೆಲನೆ ಮಾತಾಡಿ:            ೨೨೦
“ಮುಳುಗುವುದು ಹಳೆಯುಗವು; ಮೂಡುವುದು ಹೊಸಯುಗವು,
ಧರ್ಮಸಂಸ್ಥಾಪನೆಯ ಕಟ್ಟಳೆಯದಿಂತು!
ಜಗದೊಡೆಯನಾವಾವ ರೀತಿಯಲಿ ಧರ್ಮವನು
ನೆಲೆಗೊಳಿಪನೆಂಬುದಕೆ ಮಿತಿಯೆಂಬುದಿಲ್ಲ!
ಒಂದೇ ಸದಾಚಾರವೀ ಭೂಮಿಯನ್ನಾಳಿ
ಜೀವನದ ರಸಗೆಡಿಸಿ, ಕುಲಗೆಡಿಸದಂತೆ,
ಧರ್ಮವೆಂಬುದು ಬಹಳ ರೂಪಗಳ ಹೊಂದುವುದು
ಕಾಲದೇಶಗಳೆಂಬ ನಿಯಮವನುಸರಿಸಿ!
ತಿಳಿದಿದನು ಶಾಂತನಾಗಿರು! ನನ್ನ ಶಾಂತಿಯಿದು:
ನಿಂದಿಸದೆ ಜೀವವನು ಬಾಳಿ ಬದುಕಿಹೆನು;     ೨೩೦
ನಿಷ್ಕಾಮ ಬುದ್ಧಿಯಲಿ ಕರ್ಮಗಳನೆಸಗಿಹೆನು;
ಭಕ್ತಿಯಲಿ ಜಗದೊಡೆಯಗರ್ಪಿಸಿಹೆನೆಲ್ಲ!
ಮುಂದೆನ್ನ ನೋಡದಿರೆ, ಜಗದೀಶನನು ಬೇಡು;
ನನಗಾಗಿ ಕೈಮುಗಿದು ಪ್ರಾರ್ಥನೆಯ ಮಾಡು!
ಪ್ರಾರ್ಥನೆಯ ಮಹಿಮೆಯನು ಲೋಕವರಿಯದು, ಗೆಳೆಯ;
ಪ್ರಾರ್ಥನೆಯು ಸಾಧಿಸದ ಕಾರ್ಯವೊಂದಿಲ್ಲ!
ಹಗಲಿರುಳು, ನನಗಾಗಿ ನಿನ್ನ ಭಕ್ತಿಯ ವಾಣಿ,
ಬುಗ್ಗೆಯಂದದಿ ಸಗ್ಗದೆಡೆಗೇರುತಿರಲಿ!
ದೇವನಿಹನೆಂದರಿತ ಮಾನವರು, ಭಕ್ತಿಯಲಿ
ಕೈಮುಗಿದು ತಲೆಬಾಗಿ ಬಿನ್ನಹವ ಮಾಡದಿರೆ;  ೨೪೦
ಬೇಡದಿರೆ ಮನ್ನಣೆಯ ಜಗದೊಡೆಯನಲ್ಲಿ;
ಘನತಿಮಿರ ಕವಿದಿರುವ ಮನದ ಸಾಮ್ರಾಜ್ಯದಲಿ
ಹೆಮ್ಮೆಯಲಿ ತೊಳಲುತಿರೆ ಜನ್ಮಾಂಧರಂದದಲಿ;
ತಮಗಾಗಿ, ತಾವೊಲಿದವರಿಗಾಗಿ ಮನಮರುಗಿ
ಪ್ರಾರ್ಥನೆಯ ಮಾಡದಿರೆ ಕಂಬನಿಯ ತಾಳಿ-
ಮನುಜರೆಂದರೆ ಏನು? ಬರಿಮಿಗಗಳಂತೆ!
ಹೋಗಿಬರುವೆನು ನಿಲ್ಲು. ಬಹುದೂರ ಹೋಗುವೆನು
ನೀ ನೋಡುವಿವರೊಡನೆ-ಹೋಗುವೆನೊ ನಾನರಿಯೆ-
(ಸಂಶಯದ ಮಂಜು ಕವಿದಿಹುದೆನ್ನ ಮನದಲ್ಲಿ)
ತೆರಳುವೆನು ಸಮರದಲಿ ಮಡಿದವರ ಸಗ್ಗಕ್ಕೆ:  ೨೫೦
ಚಳಿಗಾಳಿಯಲ್ಲಿಲ್ಲ; ಮಳೆಯಿಲ್ಲ; ಮಂಜಿಲ್ಲ;
ಬಿರುಗಾಳಿಯಲ್ಲಿಲ್ಲ; ದುಃಖವೆನ್ನುವುದಿಲ್ಲ;
ಸುಗ್ಗಿಯಲಿ ತಳಿತು ನಳನಳಿಪ ಬನದೆದೆಯಲ್ಲಿ,
ಬಗ್ಗಿಸುವ ಕೋಗಿಲೆಯ ನುಣ್ಚರದ ದನಿಯಲ್ಲಿ,
ಸೊಬಗಿಂದ ಪೂತೆಸೆವ ಬಳ್ಳಿಮಾಡಂಗಳಲಿ,
ಸೊಗದಲ್ಲಿ, ಸೊಬಗಿನಲಿ, ನನ್ನಿಯಲಿ, ಶಾಂತಿಯಲಿ
ಮೆರೆವ ನಾಡಿಗೆ ತೆರಳಿ ಗಾಯಗಳ ಮಾಣಿಸುವೆ!
ಹೋಗಿಬರುವೆನು ನಿಲ್ಲು; ವೀರ, ರಣವೀರ;
ಮರುಗದಿರು: ಶಾಂತಿಯನು ಹೊಂದು, ಹೇ ಧೀರ!”
ದೊರೆಯಿಂತು ನುಡಿಯುತಿರೆ ಮೆಲುಮೆಲನೆ ದೇವನೌಕೆಯು ಸರಿದುತೇಲಿ,            ೨೬೦
ಗರಿಗೆದರಿ ಮೈಕೊಡವಿ ಮಡಿವ ಮೊದಲೊಂದುಸಲ ಹೆಮ್ಮೆಯಲಿ ಕೂಗಿ,
ಎದೆಯ ಮುಂದಕೆ ಚಾಚಿ, ತೆರೆಯ ಮೇಲೀಜುತಿಹ ಹಂಸವನು ಹೋಲಿ
ದೂರ ಸಾಗಿತು ಜವದಿ, ನೋಡುತಿರೆ ಬರಬರುತ ಕಿರಿದು ಕಿರಿದಾಗಿ!
ಹಳೆಯ ಬಾಳನು ನೆನೆದು, ನಿಂತಿರಲು ರಣವೀರನಳಲಿಗೀಡಾಗಿ
ಮುಳುಗಿದುದು ರೋದನವು ತೆರೆಯ ಮೊರೆಯಾಟದಲಿ, ನೌಕೆ ಮರೆಯಾಗಿ!* ಟೆನ್ನಿಸನ್ ಕವಿಯ ‘Morte D’ Arthur’ ಎಂಬ ಕವನವನ್ನನುಸರಿಸಿ.