ಪಡುವಲೆಡೆಯ ಮಲೆಗಳಲ್ಲಿ, ಹೆಬ್ಬನಗಳ ನಿಲಯದಲ್ಲಿ,
ಮುದಿತನವನೆ ಮುದುಗಿಸಿರುವ ಹಸುರ ಹೆಮ್ಮೆ ಹೊಮ್ಮುವಲ್ಲಿ,
ಬೇಟೆನಾಯಿಯೊಡನೆ ಕೂಡಿ ತಿಮ್ಮನಿರಲು ಬೇಟೆಯಾಡಿ
ಮೂಡಲಲ್ಲಿ ಮುದ್ದುಬಿಸಿಲ ಚಿಲುಮೆ ಚಿಮ್ಮುತೆದ್ದಿತು!

ತಿಮ್ಮ ದೊಡ್ಡ ಬೇಟೆಗಾರ, ಮಲೆಯನಾಡಿನೀಡುಗಾರ,
ಡೂಲಿಯೊಳ್ಳೆ ಬೇಟೆನಾಯಿ, ಹಿರಿಯ ಕುಲದ ಚೀನಿ ನಾಯಿ;
ಹಂದಿ ಮಿಗಗಳನ್ನು ಹಿಡಿದು ಕೀರ್ತಿವೆತ್ತುದದರ ತಾಯಿ!
ಬೇಟೆಗಾರರಿಬ್ಬರಿಂತು ಬೇಟೆಯಾಡುತಿದ್ದರು.

ಕಣಿವೆಯಿಳಿದು, ಬೆಟ್ಟವೇರಿ, ಸರುವ ದಾಟಿ, ಹಳುವ ನುಸಿದು,
ಮಂದೆ ಮಂದೆಯಾಗಿ ಬಂದು ನೆತ್ತರು ಹೀರುತ್ತಲಿದ್ದ      ೧೦
ಜಿಗಣೆಗಳನು ಕಷ್ಟದಿಂದ ಕಿತ್ತು ಕಿತ್ತು ಬಿಸುಟು ಬಿಸುಟು
ಹುಡುಕುನೋಟದಿಂದ ಬನವ ನೋಡಿ ತಿಮ್ಮ ನಡೆದನು.

ಇಂತು ನಡೆಯುತಿರಲು, ದೂರ ಬೆಳೆದ ಬಳ್ಳಿ ಹೊದರುಗಳಲಿ
ನಾಯಿ ಬಗುಳಿದಂತೆಯಾಯ್ತು, ಹಂದಿ ಹೂಂಕರಿಪವೊಲಾಯ್ತು!
ನಾಯಿಯೊಮ್ಮೆ ಹಂದಿಯೊಮ್ಮೆ ಬೊಬ್ಬೆ ಬನವ ತುಂಬಿಹೋಯ್ತು;
ಎದ್ದು ಬಿದ್ದು ಬಂದು ಸದ್ದು ಬೆಟ್ಟ ಕಣಿವೆಯಾದುದು.

ನಾಯಿ ಹಂದಿ ತಡೆಯಿತೆಂದು ತಿಮ್ಮ ನುಗ್ಗಿ ನಡೆದ ಮುಂದೆ!
ಬಂದೆ ಬಂತು ಮಾರಿಹಂದಿ ಹೂಂಕರಿಸುತ ಕೋರೆ ಮಸೆದು!
ಅದರ ಹಿಂದೆ ಡೂಲಿ ಬಗುಳಿ ಹಾರಿಬಂತು ಮಿಂಚಿನಂತೆ!
ತಿಮ್ಮನೊಡನೆ ಕೋವಿಯೆತ್ತಿ ಗುರಿಯ ಗುಂಡು ಹೊಡೆದನು!       ೨೦

ಮುಗ್ಗರಿಸುತ ಹಂದಿ ಬಿತ್ತು; ಡೂಲಿ ಕೂಗುತಾಚೆ ಬಿತ್ತು!
ತಿಮ್ಮ ಮುಂದೆಯೋಡಿ ನೋಡೆ ನಾಯಿಯಳುತ ಹೊರಳುತಿತ್ತು!
ಹಂದಿಯೊಡಲ ದಾಟಿ ಗುಂಡು ನಾಯಿಯೊಡಲ ಭೇದಿಸಿತ್ತು!
ತಿಮ್ಮನ ಕಡೆ ನೋಡುತೊರಲಿ ಡೂಲಿ ಕಣ್ಣು ಮುಚ್ಚಿತು!