ಹಸುರು ಬೆಟ್ಟದ ಓರೆಯಲ್ಲಿ ಬೈಗುಗೆಂಪು ಆಡುತಿತ್ತು;
ಗರಿಯ ತೆರದಿ ಬೈಗುಗಪ್ಪು ಮೆಲ್ಲನಿಳಿಯುತ್ತಿದ್ದಿತು;
ಬೇಟೆಗಾಗಿ ಹೋದ ಮಾದ ಏಕೊ ಏನೋ ಬಾರಲಿಲ್ಲ
ಎಂದು ಮಾದಿ ಗುಡಿಸಲಲ್ಲಿ ಚಿಂತೆಮಾಡುತ್ತಿದ್ದಳು!

ದನಗಳನ್ನು ಕಾಯುತಿದ್ದ ಚಿಕ್ಕ ತಬ್ಬಲಿ ಹುಡುಗಿ, ನಾಗಿ,
ಪೆಚ್ಚುಮೋರೆ ಹಾಕಿಕೊಂಡು ಗುಡಿಸಲೊಳಗೆ ಬಂದಳು;
“ದನಗಳೆಲ್ಲಾ ಬಂದುವವ್ವಾ, ತುಂಗೆ ಮಾತ್ರ ಸಿಕ್ಕಲಿಲ್ಲ,
ಹುಡುಕಿ ಹುಡುಕಿ ಬಳಲಿ ಹೋದೆ, ಕತ್ತಲಾಯ್ತು” ಎಂದಳು.

ಸವತಿತಾಯಿ ಮಾದಿ ರೇಗಿ, ಬೆನ್ನ ಮೇಲೆ ಗುದ್ದಿ ಗುದ್ದಿ,
ಎದೆಯ ಬಾನಿನಲ್ಲಿ ಸಿಟ್ಟು ಮೋಡದಂತೆ ಕವಿಯಲು     ೧೦
ಗುಡುಗಿ ಗುಡುಗಿ ಮಿಂಚಿ ಮಿಂಚಿ, ಸವತಿತಾಯಿ ಮಾರಿಯಾಗಿ
ಪಾಪ! ತಬ್ಬಲಿ ಹೆಣ್ಣು ನಾಗಿಯ ಮೇಲೆ ಬೈಗುಳ ಕರೆದಳು.

“ಹೊಟ್ಟೆ ತುಂಬಾ ಹಿಟ್ಟು ಕೊಟ್ಟು, ಗುಡಿಸಲಲ್ಲಿ ಜಾಗ ಕೊಟ್ಟು,
ಸಾಕಿ ಸಲಹಿದೆ, ಮುಂಡೆ, ನಿನ್ನ; ಮೊಸಳೆಯಂತೆ ಆದೆಯಾ?
ದನವ ಕೊಟ್ಟಿಗೆಗಿಂದು ತಂದು ಕಟ್ಟದಿದ್ದ ಪಕ್ಷದಲ್ಲಿ
ಗುಡಿಗೆ ಬರಲೇ ಬೇಡ, ಹೋಗು” ಎಂದು ನೂಕಿಬಿಟ್ಟಳು.

ಪಾಪ! ನಾಗಿ ಸಣ್ಣ ಹುಡುಗಿ, ಬಿಕ್ಕಿ ಬಿಕ್ಕಿ ಅತ್ತು ಅತ್ತು
ತನ್ನ ಸತ್ತ ತಾಯಿಯನ್ನು ನೆನೆದು ನೆನೆದು ಅತ್ತಳು;
“ಕತ್ತಲಾಯ್ತು, ಅವ್ವ, ಹೆದರಿಕೆ; ತುಂಗೆ ಎಲ್ಲಿ ಇದೆಯೊ ಏನೋ?
ನಾಳೆ ಬೆಳಗಿನ ಜಾವದಲ್ಲಿ ಹುಡುಕಿ ತರುವೆ” ಎಂದಳು. ೨೦

ಸವತಿತಾಯಿ ಸಿಡುಕಿ ಮತ್ತೂ ರೇಗಿ ರೇಗಿ ಬೈದು ಬೈದೂ
“ಹೋಗು ಮುಂಡೆ, ಮನೆಯ ಒಳಗೆ ಕಾಲು ಇಡಬೇಡೆಂ”ದಳು;
ಪುಟ್ಟ ಹುಡುಗಿ ನಾಗಿ ಕಂಬಳಿ ಕೊಪ್ಪೆ ಹಾಕಿಕೊಂಡು, ಅಳುತ,
ತುಂಗೆ ದನವ ಹುಡುಕಲೆಂದು ಕಪ್ಪಿನಲ್ಲಿ ಹೊರಟಳು.

ಹೋಗುತಿದ್ದ ನಾಗಿಯನ್ನು ನೋಡಿ ನೋಡಿ, ಬೈದು ಬೈದೂ
“ಸಾಯಬಾರದೇಕೆ ಮುಂಡೆ, ನಿನ್ನ ಋಣವು ತೀರಲಿ!
ದಾರಿಗಡ್ಡ ಮರವು ಬಿದ್ದು, ಹಾವುಗೀವು ಬಂದು ಕಚ್ಚಿ
ಮುಗಿಸಬಾರದೇಕೆ ನಿನ್ನ” ಎಂದು ಹರಸುತ್ತಿದ್ದಳು!

ಸವತಿತಾಯಿಗಿಂತ ಕಾಡೆ ಲೇಸು ಎಂದು ತಿಳಿದು ನಾಗಿ
ತುಂಗೆಯನ್ನು ಅಂಬಾ ಅಂಬಾ ಎಂದು ಕರೆಯುತ ಹೋದಳು;     ೩೦
ಎಲ್ಲಿ ಕರೆದರು ತುಂಗೆ ಇಲ್ಲಾ, ಕಾಡು ಮರುದನಿ ಬೀರುತಿತ್ತು;
ಸಂಜೆವೆಣ್ಣಿನ ಕಪ್ಪು ಸೆರಗು ನೆಲವ ಮುಸುಗುತ್ತಿದ್ದಿತು!

ಗದ್ದೆಗಳನು ದಾಟಿಹೋದಳು; ಹಳ್ಳವನ್ನು ಹಾದುಹೋದಳು;
ಹಗಲಿನಿಂದ ಹೊಟ್ಟೆಗಿಲ್ಲದೆ ತತ್ತರಿಸುತ ಹೋದಳು;
ಕಂಡ ಕರಿಯ ಕಲ್ಲು ಪೊದೆಗಳ ತುಂಗೆಯೆಂದು ಭ್ರಮಿಸಿ ಕರೆದು
ಕಾಣದೆಲ್ಲಿಯು ತುಂಗೆಯನ್ನು ಬಿಕ್ಕಿಬಿಕ್ಕಿ ಅತ್ತಳು.

ಜನವಿಹೀನವಾದ ಕಾಡು, ದಟ್ಟವಾದ ಮಲೆಯನಾಡು,
ನಾಗಿ ತಬ್ಬಲಿ ಪುಟ್ಟ ಹುಡುಗಿ, ಕತ್ತಲಿಳಿಯುತ್ತಿದ್ದಿತು.
ಅವಳ ಕೂಗಿಗೆ ಬೆಟ್ಟ ಗುಡ್ಡಗಳೆಲ್ಲ ಮರುದನಿ ಬೀರುತಿರಲು,
ಸತ್ತ ತಾಯಿಯು ಕರೆವ ಕೂಗೆಂದರಿತು ಮುಂದಕೆ ಹೋದಳು.     ೪೦

ಸತ್ತ ತಾಯಿಯು ಕಾಡನಡುವೆ ಎಲ್ಲೊ ಇರುವಳು ಎಂದು ತಿಳಿದು
ಅವ್ವ ಅವ್ವಾ ಬಂದೆ ಬಂದೇ ಎಂದು ಅಡವಿಯ ಹೊಕ್ಕಳು.
ಬೆಟ್ಟ ಕಾಡುಗಳೆಲ್ಲ ಅವ್ವಾ ಅವ್ವ ಬಂದೇ ಬಂದೆ ಎನ್ನಲು
ಎಲ್ಲ ಮರಗಳ ಹಿಂದೆ ತಾಯಿಯ ರೂಪ ಹೊಳೆದಂತಾಯಿತು!

ಸವತಿತಾಯಿಯ ಭೀತಿಯಿರಲು, ಕಾಡುಕತ್ತಲ ಭೀತಿಯೋಡಿ
ಕೂಗು ನಿಲ್ಲಿಸಿ ತಾಯಿಯನ್ನು ಹುಡುಕಲಾರಂಭಿಸಿದಳು.
ಎಲ್ಲ ಮರಗಳ ಹಿಂದೆ ಹುಡುಕಿ, ಎಲ್ಲ ಪೊದೆಗಳ ಬಗ್ಗಿನೋಡಿ,
ಮೆಲ್ಲಮೆಲ್ಲನೆ ಹುಡುಗಿ ಕಾಡಿನ ಕಟ್ಟರಣ್ಯಕೆ ಹೋದಳು.

ಬೇಟೆಗಾಗಿ ಹೋದ ಮಾದ ಬೇಟೆ ಏನೂ ಸಿಕ್ಕದಿರಲು
ಕೋವಿಯನ್ನು ಹೆಗಲಮೇಲೆ ಇಟ್ಟು ಬರುತ ಇದ್ದನು;      ೫೦
ದಟ್ಟವಾದಾ ಹಳುವಿನಲ್ಲಿ ಏನೊ ಹಂದುವುದನ್ನು ಕಂಡು
ಬೇಗ ಕೋವಿಯನೆಳೆದು ಗುರಿಯಿಟ್ಟಲ್ಲೆ ನೋಡುತ ನಿಂತನು.

ಕಾಡ ಕರಿಯ ನೆರಳಿನಲ್ಲಿ ಬೈಗುಗಪ್ಪಿನ ಮುಸುಗಿನಲ್ಲಿ
ಬೇಟೆಯಾಗದ ಸಿಟ್ಟಿನಲ್ಲಿ ತಾಳ್ಮೆ ಇರಲಿಲ್ಲವನಿಗೆ;
ಅಚ್ಚುಮೆಚ್ಚಿನ ಸೊಗಸುಗಾರ್ತಿ, ಹೊಸಬಳಾದ ಮಾದಿ ಹೆಂಡತಿ-
ಗೇನನಾದರು ಕೊಂಡುಹೋಗುವೆನೆಂಬುದವನಿಗೆ ಹೆಮ್ಮೆಯು!

ನಾಗಿ ಕಂಬಳಿಕೊಪ್ಪೆ ಹಾಕಿಕೊಂಡು ಬರುತಿರೆ ಹಳುವಿನಲ್ಲಿ
ದೂರ ಮಾದನ ಕಣ್ಗೆ ಕಾಡಿನ ಜಂತು ಬಂದಂತಾಯಿತು;
ಮತ್ತೆ ನೋಡಿದ, ಕರಿಯ ಕೂದಲು; ಹಂದಿ ಎಂದು ನಿಶ್ಚಯಿಸುತ
ಬೇಗ ಗುರಿಯಿಟ್ಟೀಡುಹೊಡೆದನು, ಗುಂಡು ಸಿಡಿಯಿತು ಹಾರಿತು! ೬೦

ಗುಂಡು ‘ಢಮ್ಮೆಂ’ದೊಡನೆ ಅವನಿಗೆ, ಏನೊ ಕೂಗು ಕೇಳಿಬಂತು:
“ಸತ್ತೆ ಸತ್ತೇ ಅವ್ವ ಅವ್ವಾ, ಅಪ್ಪ ಅಪ್ಪಾ” ಎಂದಿತು.
ಕಾಲು ನಡುಗಿ ಕೈಯು ನಡುಗಿ, ಎದೆಯು ಜೀವಗಳೆಲ್ಲ ನಡುಗಿ
ಸತ್ತ ಹೆಣದಂತಾದ ಮಾದ, ಕೋವಿ ಕೆಳಗೆ ಬಿದ್ದಿತು.

ಜೀವವನ್ನು ಕೈಲಿ ಹಿಡಿದು, ಹುಚ್ಚನಂತೆ ಬಿದ್ದು ಎದ್ದು
ಜಂತು ಬಿದ್ದಾ ಜಾಗಕಾಗಿ ಮಾದ ಓಡಿಹೋದನು;
ಎದೆಗೆ ಗುಂಡು ಬಿದ್ದ ನಾಗಿಯು ಮಾದನನ್ನು ಕಂಡ ಕೂಡಲೆ
“ಸತ್ತೆನಪ್ಪಾ ಸತ್ತೆನಪ್ಪಾ, ಅಯ್ಯೊ ಅವ್ವಾ” ಎಂದಳು.

ಮಾದ “ಅಯ್ಯೊ ಕೆಟ್ಟೆನಲ್ಲಾ, ಮಗಳೆ ನಿನ್ನ ಕೊಂದೆನಲ್ಲಾ,
ಕೊಲ್ಲಲೆಂದೇ ಹೆತ್ತೆನವ್ವಾ! ಅಯ್ಯೊ ಅಯ್ಯೋ” ಎಂದನು;          ೭೦
“ಬೈಯಬೇಡ ಅಪ್ಪ ಎನ್ನ, ತುಂಗೆಯನ್ನು ಹುಡುಕಿ ತರುವೆ,
ಹೊಡೆಯಬೇಡ ಹುಡುಕಿ ತರುವೆ” ಎಂದು ನಾಗಿಯು ಸತ್ತಳು

ಮಗಳ ನೆತ್ತರು ಹರಿದು ಹಾರಿ ಅಪ್ಪನೆದೆಯನು ಮೀಯಿಸಿತ್ತು,
ಅವಳ ಎದೆಯಲ್ಲಿ ಹೊಕ್ಕ ಗುಂಡು ಬೆನ್ನಿನಲಿ ಹೊರಟಿದ್ದಿತು:
ಮಾದ ಮಗಳಾ ಕೆಂಪು ದೇಹವ ಅಪ್ಪಿಕೊಂಡು ಮೂರ್ಛೆಹೋದ,
ಮೂರ್ಛೆಹೋದ ಎಂದೆನೇ, ಅದು ಸುಳ್ಳು, ಸತ್ತೇ ಹೋದನು!

ಮಗಳ ಎದೆಯನು ತನ್ನ ಕೋವಿಯ ಗುಂಡು ಹೊಕ್ಕು ಕೊಂದರೇನು?
ತಾನೆ ಕೊಂದಾ ಮಗಳ ಸಾವೆ ಗುಂಡಿನೇಟಾಯ್ತವನಿಗೆ!
ಕೊಂದ ತಂದೆಯು ಸತ್ತ ಮಗಳ ಅಪ್ಪಿಕೊಂಡು ಬಿದ್ದನಲ್ಲಿ;
ಮೌನವಾದಾ ಕಾಡಿನಲ್ಲಿ ಮಾರಿಕತ್ತಲು ಮುಸುಗಿತು!    ೮೦

ಅಡಿಗೆ ಮಾಡಿ ಇಟ್ಟು ಮಾದಿ ಮಾದಗಾಗಿ ಕಾದು ಕಾದು
ಗುಡಿಯ ಹೊಸಲಿನಲ್ಲಿ ಕುಳಿತು ಎದುರು ನೋಡುತ್ತಿದ್ದಳು;
ನಾಗಿ ಬರದಿರೆ ಹಿಗ್ಗಿ ಹಿಗ್ಗಿ, ಮಾದ ಬರದಿರೆ ಕುಗ್ಗಿ ಕುಗ್ಗಿ
ಕಾದು ಕಾದು ಬೇಸರಾಗಿ ಮಲಗಿ ನಿದ್ದೆಹೋದಳು!

ಮಾದ ನಾಗಿ ಇಬ್ಬರನ್ನೂ ಊರಿನವರು ಹುಡುಕಿ ಹುಡುಕಿ
ಎಲ್ಲಿಯವರ ಸುಳಿವ ಕಾಣದೆ ಮತ್ತೆ ಊರಿಗೆ ಬಂದರು.
ಗಂಡ ಹೋದನಲ್ಲ ಎಂದು ಮಾದಿ ಅತ್ತೂ ಅತ್ತು ಕಡೆಗೆ
ಸಿಂಗನನ್ನು ಮದುವೆಯಾಗಿ ಮಾದನನ್ನು ಮರೆತಳು.

ಆರು ತಿಂಗಳಾದ ಮೇಲೆ, ಮಾದ ಮರೆತುಹೋದ ಮೇಲೆ,
ಮಣ್ಣು ತಟ್ಟೆ ಹೆಣೆಯಲೆಂದು ಬೆತ್ತವನ್ನು ಹುಡುಕುತ       ೯೦
ಸಿಂಗನೊಡನೆ ಕೂಡಿ ಮಾದಿ ದಟ್ಟವಾದ ಕಾಡಿನಲ್ಲಿ
ಸರಸದಿಂದ ಹರಟೆಯಾಡಿ ಗಂಡನೊಡನೆ ಹೋದಳು.

ಅಡವಿಯಲ್ಲಿ ತಿರುಗಿ ತಿರುಗಿ, ಬೆತ್ತಗಳನು ಕಡಿದು ಕಡಿದು
ಗಂಡಹೆಂಡಿರು ಇಬ್ಬರೆರಡು ಹೊರೆಯ ಹೊತ್ತು ಬರುತಿರೆ;
ಸಿಂಗ ಬೆಚ್ಚಿ ಬಿದ್ದು ನಿಂತು ಮಾದಿಯನ್ನು ಕರೆದು ತೋರಿದ:
ಹೊತ್ತ ಹೊರೆಯ ಕೆಳಗೆ ಜರಿದು ಮಾದಿ ಮೂರ್ಛೆ ಹೋದಳು!

ದೊಡ್ಡದೊಂದು ಮರದ ಕೆಳಗೆ ದಟ್ಟವಾದ ಹಳುವಿನಲ್ಲಿ
ಒಣಗಿದೆಲೆಗಳ ಹೊದ್ದುಕೊಂಡು ಬೆಳ್ಳಗಾಗಿ ಹೊಳೆಯುತ
ಒಂದನೊಂದು ಅಪ್ಪಿಕೊಂಡ ಅಸ್ಥಿಪಂಜರವೆರಡ ಕಂಡರು!
ಸಿಂಗಮಾದಿಯರಿಬ್ಬರನ್ನೂ ಮೂದಲಿಸುವಂತಿದ್ದುವು!     ೧೦೦

ಕೊಳೆತುಹೋದಾ ಕಂಗಳಿಂದ ಸಿಂಗ ಮಾದಿಯರನ್ನು ನೋಡಿ,
ಕರಗಿ ಹುಳು ಹಿಡಿದಿದ್ದ ಬಾಯಿಗಳಿಂದ ಕಿಲಕಿಲ ನಕ್ಕವು;
ಸಿಂಗಮಾದಿಯರನ್ನು ನೋಡಿ ಅಸ್ಥಿಪಂಜರವೆರಡು ಎದ್ದು
ಕೇಕೆಹಾಕುತ ಒಂದನೊಂದು ಅಪ್ಪಿಕೊಂಡೇ ಬಂದುವು.

ಸಿಂಗ ಮಾದಿಯರಿಬ್ಬರಾಗ ಸತ್ತುದಿದ್ದುದನ್ನು ಮರೆತು
ಹೆದರಿ ಅಬ್ಬರಿಸುತ್ತ ಕೂಗಿ ಓಡಿ ಊರಿಗೆ ಬಂದರು;
ಬಂದ ಎರಡೇ ದಿನಗಳಲ್ಲಿ ಭೀತಿಯಿಂದ ರೋಗ ಬಂದು
ಅಬ್ಬರಿಸುತ ಹೆದರಿ ಹೆದರಿ ಕಡೆಗೆ ಸತ್ತೇ ಹೋದರು!

“ನಾಗಿ ಇಂದಿಗು ಅಂಬ ಅಂಬಾ ಎಂದು ತುಂಗೆಯ ಕರೆದು ಕರೆದೂ
ದೆವ್ವವಾಗಿ ಕತ್ತಲಲ್ಲಿ ತಿರುಗುತಿರುವಳು” ಎಂಬರು!       ೧೧೦
ಕೆಲರು “ಹುಣ್ಣಿಮೆ ರಾತ್ರಿಯಲ್ಲಿ ಅಪ್ಪಿದಸ್ಥಿಯ ಪಂಜರೆರಡು
ಕೇಕೆಹಾಕುತ ಮಾದಿ ಸಿಂಗರ ಅಟ್ಟುತಿರುವುವು” ಎಂಬರು!