ಪ್ರೌಢ ಪ್ರತಾಪಿಯಾದ ಪ್ರತಾಪನು ಸ್ವದೇಶರಕ್ಷಣೆಗಾಗಿ ಬಲಾಧಿಕನಾದ ಅಕ್ಬರನೊಡನೆ ಹೋರಾಡಿ ಇನ್ನಿಲ್ಲದ ಕಷ್ಟಪರಂಪರೆಗಳನ್ನು ಅನುಭವಿಸಿದರೂ ಅಧೀರನಾಗದೆ ಶತ್ರುವಿಗೆ ತಲೆಬಾಗದಿದ್ದವನು, ಕಾಡಿನಲ್ಲಿ ಅನ್ನ ನೀರುಗಳಿಲ್ಲದೆ ಅಲೆಯುತ್ತಿರುವಾಗ, ಇದ್ದ ಅರೆರೊಟ್ಟಿಯನ್ನೂ ಮಗುವಿನ ಕೈಯಿಂದ ಕಾಡು ಬೆಕ್ಕೊಂದು ಹೊತ್ತುಕೊಂಡು ಹೋಗಲು, ಮಗುವಿನ ದುಃಖವನ್ನು ಕಂಡು ಮರುಗಿ, ರಾಜಪದವಿಯನ್ನು ಶಪಿಸಿ, ಶತ್ರುವಿಗೆ ಶರಣಾಗತನಾಗುವುದೆ ಲೇಸೆಂದು ನಿಶ್ಚಯಿಸಿದನಂತೆ. ಪ್ರತಾಪನ ಯಾವ ಗುಣವನ್ನು ನಾವು ಮೆಚ್ಚೋಣ? ಯಾವ ಗುಣ ಹೆಚ್ಚು ಅಭಿನಂದನೀಯವಾದದ್ದು? ಇಂಥ ಒಂದು ಸಮಸ್ಯೆಯ ಹಿನ್ನೆಲೆಯಲ್ಲಿ ಈ ಕವನ ಆರಂಭವಾಗಿ ಅಪೂರ್ಣವಾಗಿ ನಿಂತಿದೆ.


ದೇಶ ನನ್ನದು, ನನ್ನದು ನಾಡು
ಎನ್ನದ ಮಾನವನೆದೆ ಸುಡುಗಾಡು!
ದೂರದೇಶಕೆ ಹೋದಾ ಸಮಯದಿ
ತನ್ನ ನಾಡನು ನೆನೆನೆನೆದುಬ್ಬದ
ಮಾನವನಿದ್ದರೆ ಲೋಕದಲಿ,
ತಾವಿಲ್ಲವನಿಗೆ ನಾಕದಲಿ!-ವೀರನಾಕದಲಿ!
ತನ್ನ ನಾಡಿನ ನೀಲಿಯ ಬಾನು,
ತನ್ನ ನಾಡಿನ ಹಸುರಿನ ಕಾನು,
ತನ್ನ ನಾಡಿನ ಹೊಳೆ ಕೆರೆ ಬೆಟ್ಟ
ತನ್ನ ನಾಡಿನ ಪಶ್ಚಿಮ ಘಟ್ಟ ೧೦
ತನ್ನ ನಾಡಿನ ನಡೆನುಡಿ,-ತನ್ನ ತಾಯ್ನುಡಿ!
ಎಂದು ಹಿಗ್ಗದ ಮಾನವನಿದ್ದರೆ
ತಾವಿಲ್ಲವನಿಗೆ ನಾಕದಲಿ!-ವೀರ ಲೋಕದಲಿ!
ದೇಶದ್ರೋಹಿಯು ಬದುಕುವನೆಲ್ಲಿ?
ದೇಶದ್ರೋಹಿಯು ಸಾಯುವನೆಲ್ಲಿ?
ಸತ್ತರವನಿಗೆ ಸುಡುಗಾಡೆಲ್ಲಿ?
ಸೂಡುಮಾಡಲು ಕಟ್ಟಿಗೆಯೆಲ್ಲಿ?
ಪಾಪಿಯವನಿಗೆ ನಾಡಿಲ್ಲ!
ಅದರಿಂದವನಿಗೆ ಬೀಡಿಲ್ಲ!-ಸುಡಲು ಸೂಡಿಲ್ಲ!
ಮೆಟ್ಟದಿರಾತನು ನಡೆದಾ ಹೆಜ್ಜೆಯ;   ೨೦
ಮುಟ್ಟದಿರಾತನು ಮಲಗಿದ ಸಜ್ಜೆಯ:
ದೇಶದ್ರೋಹಿಗೆ ಇಹವಿಲ್ಲ,
ದೇಶದ್ರೋಹಿಗೆ ಪರವಿಲ್ಲ!-ತಬ್ಬಲಿಗೇನಿಲ್ಲ!
ಬದುಕಿದರಾತನು ಕೇಳುವರಿಲ್ಲ;
ಸತ್ತರಾತನಿಗಳುವವರಿಲ್ಲ;
ಬೆಂಕಿ ಹೆಣವನು ಮುಟ್ಟುವುದಿಲ್ಲ;
ನಾಯಿ ನರಿಯೂ ತಿನ್ನುವುದಿಲ್ಲ!
ದೇಶದ್ರೋಹಿಗೆ ಗತಿಯಿಲ್ಲ!-ಮಲಗಲು ಚಿತೆಯಿಲ್ಲ!
ಹೆತ್ತ ತಾಯಿಯು ಸಗ್ಗಕ್ಕಿಮ್ಮಡಿ,
ಹೊತ್ತ ಭೂಮಿಯು ಮುಕ್ತಿಗೆ ಮುಮ್ಮಡಿ,          ೨೦
ದೇಶಭಕ್ತಿಯು ನಾಲ್ಮಡಿ!-ಸಾಯಲೈಮಡಿ!


ಪ್ರತಾಪಸಿಂಹನ ಕತೆಯನು ಕೇಳಿ,
ದೇಶದ ಮೇಲಭಿಮಾನವ ತಾಳಿ,
ಪರದೇಶಿಯರಾಟೋಪವ ಸೀಳಿ,
ಸ್ವತಂತ್ರ ಯಜ್ಞಕೆ ಬಾಳನು ಬೇಳಿ!
ಸ್ವತಂತ್ರ ಯಜ್ಞಕೆ ಬಾಳನು ಬೇಳಿ,
ಭಾರತ ವೀರರಿಗುಚಿತದಿ ಬಾಳಿ!
ಮಣಿದು ಬದುಕುವ ಪಾಳ್ದಲೆಯೇಕೆ?
ಬೀಡುಗೂಳಿನ ಕೀಳ್ಪೊಡೆಯೇಕೆ?
ತಿರಿದುಂಬುವ ಬೀಳಳಿ ಬಾಳೇಕೆ?     ೩೦
ತೊತ್ತಿನ ಮಕ್ಕಳ ಜೀವನವೇಕೆ?
ಬಿರುಗಾಳಿಯ ಸ್ವಾತಂತ್ರ್ಯದ ಜೊತೆಯಲಿ
ಕಾನನವಾಸವೆ ಲೇಸಲ್ತೆ?
ತಂಗಾಳಿಯ ಪರತಂತ್ರದ ಜೊತೆಯಲಿ
ಸುರ ಮಂದಿರವೂ ಹೇಸಲ್ತೆ?
ಸಿಂಹದ ಮರಿಗಳೆ ಗರ್ಜಿಸಿರೇಳಿ!
ಕುರಿಗಳ ಭಾವವ ತೆಗೆದೊಗೆದೇಳಿ!
ಕೇಸರವಿದೆ! ಕೇಸರಿಗಳು ನೀವು!
ಎಳೆವುಲ್ಲಲ್ಲವು ನಿಮ್ಮಯ ಮೇವು!
ಕನ್ನಡಿಯಿದೋ ತೋರುವೆ ನೋಡಿ;  ೪೦
ನಿಮ್ಮ ನೆಳಲಿನ ಮೈಮೆಯ ನೋಡಿ!
ಪ್ರತಾಪಸಿಂಹಾದರ್ಶವಿದು,
ಭಾರತಾಂಬೆಯ ಹರ್ಷವಿದು!-ನಿಮ್ಮಾದರ್ಶವಿದು!


ಬೇಗ ಬೇಗನೆ ನೀವೈತನ್ನಿ,
ದೂರದರಾವಳಿ ಬೆಟ್ಟಕೆ ಬನ್ನಿ;
ಶೂರರರಾವಳಿಗೈತನ್ನಿ!-ನನ್ನೊಡನೈತನ್ನಿ!
ದಿಕ್ಕು ದಿಕ್ಕಿಗೆ ಮಿಂಚಿನ ರೆಕ್ಕೆಯ
ಬಿಚ್ಚಿ ಹಾರುವ ವಜ್ರದ ಕೊಕ್ಕಿನ
ಕಲ್ಪನೆಯೆಂಬಾ ಮಾಯದ ಹಕ್ಕಿ
ದೇಶ ಕಾಲಗಳ ದಾಟುತ ಕುಕ್ಕಿ        ೫೦
ದೂರದರಾವಳಿ ಬೆಟ್ಟದ ಸೇರಿ,
ಕೇಳಿರೆಮ್ಮನು ಕರೆವುದು ಚೀರಿ!
ಸಿಡಿಲಿನ ಮರಿಗಳು ಗುಡುಗಿದರಿಲ್ಲಿ,
ಕುಣಿದುವು ಮಿಂಚಿನ ಕತ್ತಿಗಳಿಲ್ಲಿ;
ವೀರರು ರಕ್ತವ ಚೆಲ್ಲಿದರಿಲ್ಲಿ,
ವೀರರತ್ನಗಳೊಡೆದುವು ಇಲ್ಲಿ;
ಶೋಣಿತ ಶೋಣತರಂಗಿಣಿಯಿಲ್ಲಿ
ಹರಿದುದು ಕಲಿಗಳ ಕದನಗಳಲ್ಲಿ;
ಗದ್ದುಗೆಗಳು ಮೇಲೆದ್ದುವು ಇಲ್ಲಿ;
ಮೇಣಿಳೆಗುರುಳುತ ಬಿದ್ದುವು ಇಲ್ಲಿ;    ೬೦
ಮಕುಟದ ಮಣಿಗಳು ಸಿಡಿಸಿಡಿದೊಡೆದು
ವೀರಪುಂಗವರುರುಳಿದರುಡಿದು!
ಸ್ವಾತಂತ್ರ್ಯವು ಹೋರಾಡಿದುದಿಲ್ಲಿ,
ಪರತಂತ್ರವು ಕಚ್ಚಾಡಿದುದಿಲ್ಲಿ!
ವೀರ ಸಾಹಸ ತೈಲ ಸುಪೋಷಿತ
ಭಾರತ ಶೌರ್ಯ ಪ್ರದೀಪದರ್ಚಿಯು
ಥಳಥಳಿಸುರಿಯುತ ಬೆಟ್ಟಗಳಲ್ಲಿ
ಕಟ್ಟಕಡೆಯಲಿ ನಂದಿತು ಇಲ್ಲಿ!
ಬಂಡೆಗಳಾದುವು ಸಾಣೆಯ ಕಲ್ಲು,
ಮಸೆದರು ವೀರರು ಕತ್ತಿಗಳ!           ೭೦
ಬಲ್ಲುವು ಇಲ್ಲಿಯ ವೃಕ್ಷಗಳೆಲ್ಲ
ಯುದ್ಧದ ಯುಕ್ತಿ ಕುಯುಕ್ತಿಗಳ!
ಪರ್ವತ ಕುಹರಗಳೊಳಕೊಂಡಿರುವುವು
ಅಂದಿನ ಯುದ್ಧಧ್ವಾನವನು;
ಇಲ್ಲಿಯ ಮೌನವೆ ಸಾರುತಲಿರುವುದು
ಹಿಂದಿನ ರುದ್ರ ಪುರಾಣವನು!-ರಕ್ತಪುರಾಣವನು!
ರಾಜ ಜಟ್ಟಿಗಳಾಡಿದ ಗರಡಿ
ರಾಜಸಿಂಹಗಳಲೆದಾ ಮರಡಿ;
ರಣದೇವತೆಯಾರಾಮವಿದು!-ಭೈರವಧಾಮವಿದು!


ಏಳು, ಮಿಂಚಿನ ರೆಕ್ಕೆಯ ಹಕ್ಕಿ;        ೮೦
ಏಳು, ವಜ್ರದ ಕೊಕ್ಕಿನ ಹಕ್ಕಿ:
ಹೇಳು ಕಿವಿಗೊಟ್ಟಾಲಿಪೆನು!
ಎಂತು ಚಿತ್ತೂರಳಿದುದು ಹೇಳು!
ಎಂತು ಅಕಬರ ಗೆಲಿದನು ಹೇಳು!
ಉದಯಸಿಂಹನದೆಂತುಟು ಸೋತು
ರಣದಿಂ ಹಿಮ್ಮೆಟ್ಟೋಡಿದನು?
ಪ್ರತಾಪಸಿಂಹನದೆಂತುಟು ನಿಂತು
ಶತ್ರುಗಳನು ಚೆಂಡಾಡಿದನು?
ಬೆಟ್ಟದ ಬಂಡೆಯ ನೆತ್ತಿಯ ಮೇಲೆ
ಕುಳಿತದನೆಲ್ಲಂ ನೋಡಿರುವೆ;          ೯೦
ಬೇರೆ ಬೇರೆಯ ನುಡಿಗಳಲದನು
ಲಾವಣಿಯಂದದಿ ಹಾಡಿರುವೆ!-ಕವನಮಾಡಿರುವೆ!
ಏಳು, ಕನ್ನಡನುಡಿಯಲಿ ಹೇಳು,
ಎದೆಯಲಿ ಕಿಚ್ಚುದಿಪಂದದಿ ಹೇಳು!
ನಿದ್ದೆಮಾಡುವ ನಮ್ಮ ಧಮನಿಯಲಿ
ವೀರರಸ ನದಿ ಹರಿಯಲಿ!-ಮಿಂಚು ಹರಿಯಲಿ!


ಏಳು ದಿನಗಳು ಬೆಳಗೂ ಬೈಗೂ
ಏಳು ದಿನಗಳು ಹಗಲೂ ಇರುಳೂ
ಕೇಳಿ ಬಂದುದು ಕದನದ ಕೂಗು!
ಹೇಳಲೇನದನು?-ಹೇಳಲೇನದನು? ೧೦೦
ಒಂದು ಕಡೆಯಲಿ ಕ್ಷತ್ರಿಯ ಸೇನೆ,
ಒಂದು ಕಡೆಯಲಿ ಮೊಗಲರ ಸೇನೆ,
ಒಂದು ಸಾಗರವೆದ್ದು ಭರದಲಿ
ಇನ್ನೊಂದು ಸಾಗರಕಿರಿಯುವ ತೆರದಲಿ,
ಕಾದಿದರದನೇವಣ್ಣಿಪೆನು-ಏನ ಬಣ್ಣಿಪೆನು?
ಮೊಗಲರ ಕೈ ಮೇಲಾದುದು ಕಡೆಗೆ,
ಬಲಗುಂದಿತು ರಜಪೂತರ ಪಡೆಗೆ.
ಉದಯಸಿಂಹನು ನಗರಿಯ ಬಿಟ್ಟು
ಕಮಲಮೇರುವಿಗೋಡಿದನು-ಹೇಡಿಯೋಡಿದನು.
ಗಂಡಸರೆಲ್ಲರು ಕಾಳಗಕೆದ್ದರು,         ೧೧೦
ಹೆಂಗಸರೆಲ್ಲರು ಬೆಂಕಿಗೆ ಬಿದ್ದರು,
ಗಂಡಸರಲ್ಲದೆ ಹೆಂಗಸರಲ್ಲದ
ಹೇಡಿಗಳೆಲ್ಲರೋಡಿದರು!
ಚಿತ್ತೂರನು ಬಿಟ್ಟೋಡಿದರು!
ವೀರ ಪ್ರತಾಪನು ಪಿತನಂತೋಡದೆ
ಕಾಳೆಗಗೊಟ್ಟನು ಎದೆಗೆಡದೆ:
ಶೂರ ಶಿರೋಮಣಿ ಜಯಮಲ್ಲನು ತಾ
ನಿಂತನು ಸೇನೆಯ ಮುಂಗಡೆಗೆ!
ಮಾನಸಿಂಹನು ಮೊಗಲರ ಕಡೆಗೆ!
ಪ್ರತಾಪಸಿಂಹನು ಚಿತ್ತೂರೆಡೆಗೆ!       ೧೨೦
ಹತ್ತು ಲಕ್ಷದ ಮೊಗಲರ ಸೇನೆ
ಭೋರ್ಗರೆದುದು ಆ ದಿಕ್ಕಿನಲಿ;
ಹತ್ತೇಸಾವಿರ ಕ್ಷತ್ರಿಯ ಸೇನೆ
ಹೋರಾಡಿತು ಈ ದಿಕ್ಕಿನಲಿ.
ಸಾಮ್ರಾಟಕ್ಬರನಾ ಕಡೆಗೆ!
ರಾಣಾ ಪ್ರತಾಪನೀ ಕಡೆಗೆ!
ಹಿರಿಯ ರಾಜ್ಯದ ಹಿರಿದೊರೆಯಾ ಕಡೆ
ಕಿರಿಯ ರಾಜ್ಯದ ಕಿರಿದೊರೆಯೀ ಕಡೆ.
ಮಾಯೆಯು ಆ ಕಡೆಗೆ!
ಮುಕ್ತಿಯು ಈ ಕಡೆಗೆ!        ೧೩೦
ಪಾರತಂತ್ರ್ಯದ ಸೊಕ್ಕಾ ಕಡೆಗೆ!
ಸ್ವಾತಂತ್ರ್ಯದ ಹೆಗ್ಗೆಚ್ಚೀ ಕಡೆಗೆ!
ಸಂಖ್ಯೆಯ ಶಕ್ತಿಯು ಆ ಕಡೆಗೆ!
ಶೌರ್ಯದ ಭಕ್ತಿಯು ಈ ಕಡೆಗೆ!
ಇಂತು ಕದನದ ಕೋಲಾಹಲದಲಿ
ರಕ್ತ ಹರಿದುದು ಚಿತ್ತೂರ್ ನೆಲದಲಿ!
ಗೆದ್ದರು ಮೊಗಲರು ಸಂಖ್ಯೆಯ ಬಲದಲಿ
ಬಿದ್ದನು ಮೋಸದಿ ಜಯಮಲ್ಲ-ವೀರ ಜಯಮಲ್ಲ!
ಸಾವಿರಗಟ್ಟಲೆ ವೀರರು ಸತ್ತರು,
ತೊರೆತೊರೆಯಾಗಿ ಹರಿದುದು ನೆತ್ತರು,         ೧೪೦
ಸುಡುಗಾಡಾದುದು ರಣರಂಗ
ಚಿತ್ತೂರಿನ ಆ ರಣರಂಗ!
ಕಟ್ಟೆಕಡೆಗಾ ವೀರಪ್ರತಾಪನು
ರಣದಲಿ ಮಡಿಯಲು ಹಾರೈಸಿ
ನಡೆದನು ಮೊಗಲರ ತೇರೈಸಿ!
ಅತ್ತ ನೋಡಿದರತ್ತ ಮೊಗಲರು
ಇತ್ತ ನೋಡಿದರತ್ತ ಮೊಗಲರು
ಸುತ್ತ ಕಂಡರು ಮೊಗಲರು-ಧೂರ್ತ ಮೊಗಲರು!
ಕಟ್ಟ ಕಡೆಯಲಿ ಸೇನಾನಿಗಳು
ರಾಜಪುತ್ರನ ರಕ್ಷಿಸಲೆಂದು  ೧೫೦
ಒಂದುಪಾಯವ ಹೂಡಿದರು-ಯುಕ್ತಿಮಾಡಿದರು!
ಕಮಲಮೇರುವ ಮೊಗಲರು ಹಿಡಿದರು
ಎಂಬ ವಾರ್ತೆಯ ಸೃಜಿಸಿದರು,
ಪಾಳೆಯದೆಲ್ಲೆಡೆ ಹರಡಿದರು.
ಸುದ್ದಿ ಹಬ್ಬಿತು; ಕಡೆಗದು ಬಿದ್ದಿತು
ಪ್ರತಾಪಸಿಂಹನ ಕಿವಿಯಲ್ಲಿ
ಕರಗಿದ ಕಬ್ಬಿಣದಂದದಲಿ!
ತಂದೆಯ ಯೋಗಕ್ಷೇಮವ ನೆನೆದು,
ಕದನದ ಹೆಮ್ಮೆಯ ಮನದಿಂ ತೊನೆದು,
ಸೇನೆಯೊಳಳಿದುಳಿದವರನು ಕರೆದು,           ೧೬೦
ಚಿತ್ತೂರಿನ ರಣಭೂಮಿಯ ತೊರೆದು,
ಬಂಡೆಯ ಸೀಳುತ ಹೊರಮಡುವ
ಕಾರ್ಗಾಲದ ಸಿಡಿಲಂದದಲಿ
ಸೀಳುತ ಕಿಕ್ಕಿರಿದರಿಸೇನೆಯನು
ಕಮಲಮೇರುವಿಗೈದಿದನು
ತಂದೆಯ ರಕ್ಷಿಸಲೈದಿದನು.
ಇತ್ತ ಚಿತ್ತೂರರಿಗಳ ಸೇರಿತು;
ಹಿಂದಿನ ಸಂಪತ್ತೆಲ್ಲವ ತೂರಿತು;
ಪ್ರೇತಗಳಾಳುವ ಮಸಣದೊಲು….

(ಅಪೂರ್ಣ)