ಮಂಜಣ್ಣನೊಡಗೂಡಿ ನಾನೊಂದು ದಿನದಲ್ಲಿ
ಮಲೆನಾಡ ವನಗಳಲಲೆದಾಡಿದೆ;
ತಿರುಗಾಡಿ ಮಾತಾಡುತಿಬ್ಬರೂ ಬಂದೆವು
ಗಳಗಳ ಹರಿಯುವ ತೊರೆಯೆಡೆಗೆ.
ಮಂಜಣ್ಣ ಸುತ್ತಲು ದೃಷ್ಟಿಯ ಬೀರಿ
ಬೆರಗಾಗಿ ನಿಂತನು ಭಯವನು ತೋರಿ!
“ಮಂಜಣ್ಣ ಏನೆಂ”ದೆ! ಮಾತಾಡದಿದ್ದನು!
ಸುತ್ತಲೂ ನಾನೂ ನೋಡಿದೆನು.
ಕಣ್ಣಿಗೆ ತಳಿತಿಹ ವನಗಳು ಮೆರೆದುವು,
ಹಕ್ಕಿಗಳಿಂಚರ ಬೀರಿದುವು! ೧೦
“ಹುಲಿಯಿಲ್ಲ, ಹಾವಿಲ್ಲ, ಹೆದರುವುದೇಕೆ?
ಮಂಜಣ್ಣ!” ಎನ್ನಲು, ಇಂತೆಂದನವನು:
“ಹುಲಿಗಳ ಸಾವಿರ ಕೊಂದಿಹೆ ನಾನು!
ಹಾವೆಂದರೆಳ್ಳಷ್ಟು ಭಯವಿಲ್ಲವು!
ಹಿಂದಿಲ್ಲಿ ನಡೆದಿದ್ದ ಸಂಗತಿಯೊಂದೆನ್ನ
ನೆನಪಿಗೆ ಬಂದಿತು! ಬಲು ಘೋರವು!
ಯೋಚಿಸಿಕೊಂಡರೆ ಮೈಯೆಲ್ಲ ನಡುಗಿ
ನಾಲಗೆ ಬಾರದು, ಮಾತೆಲ್ಲವುಡುಗಿ!
“ತವರೂರಿನಲ್ಲಿದ್ದ ಹೆಂಡತಿ ಸಿಂಗಿಯ
ಕರೆತರೆ ಹೋಗಿದ್ದ ಕರಿಸಿದ್ದನು; ೨೦
ಗಂಡ ಬಂದನು ಎಂಬ ಹೆಮ್ಮೆಯಲಾಕೆಯು
ಹೊರಟಳು ಅವನಿದ್ದ ಚಿಕ್ನೂರಿಗೆ;
ಬೈರಣ್ಣ, ತಿಮ್ಮಕ್ಕ, ಸಣ್ಪುಟ್ಟ, ಎಲ್ಲಾ
ಹರಿದಾರಿ ಬಂದಿವರ ಹೋದರು ಕಳುಹಿ!
“ಸೌಭದ್ರೆ ಪಾಂಡವರನ್ನಂದು ಕಳುಹುತ್ತ
ರಥವೇರಿ ಕೃಷ್ಣನು ಬಂದಂತೆಯೆ
ಅಣ್ಣಯ್ಯ, ಅತ್ಗಮ್ಮ, ಸಣ್ಣಣ್ಣ ಎಲ್ಲಾರು
ಸಿಂಗಿಯ ಸಿದ್ದನ ಕಳುಹಿದರು!
ಸಿಂಗಿಯು ಸಿದ್ದನು ಮಾತಾಡಿ ನಲಿಯುತ್ತ
ದಾರಿಯ ನಡೆದರು ಚಿಕ್ನೂರಿಗಾಗಿ! ೩೦
“ದಾರಿಯಲೇನೇನು ಮಾತಾಡಿಕೊಂಡರೊ
ಯಾರೇನು ಬಲ್ಲರು? ನಾನರಿಯೆ.
ಚಿಕ್ನೂರಿಗೈದಾರು ಮೈಲಿಗಳಿರುವಾಗ
ಕತ್ಲಾಗಿ, ಮುಗಿಲೇರಿ, ಮಳೆಬಂದಿತು!
ಸಿದ್ದಗೆ ಕಂಬಳಿ; ಸಿಂಗಿಗೆ ಗೊರಬಿತ್ತು;
ಮಿಂಚೆದ್ದು ಸಿಡಿಲಾಗಿ ಜಿರ್ರೆಂದು ಜಡಿಬಿತ್ತು!
“ಈ ಹಳ್ಳದೆಡೆಗವರು ಬರುವಷ್ಟರಲ್ಲಿಯೆ
ಎರಡಾಳು ನೀರೇರಿ ಭೋರೆನ್ನುತಿತ್ತು;
ಕಗ್ಗತ್ತಲವರಿಗೆ ಗೊತ್ತಾಗಲಿಲ್ಲವು!
ಸಿದ್ದನು ಸಿಂಗಿಯ ಕೈಹಿಡಿದು ೪೦
ಮಾರಿ ಪ್ರವಾಹವ ದಾಟಲು ಹೊರಟನು
ನೀರೇರಿ ಮೊಣಕಾಲಿಗೆದೆಯುದ್ದ ಬಂದಿತು.
“ಸಿಂಗಿಯು ಬೇಡೆಂದಳಾದರೂ ಸಿದ್ದನು
ಹೆದರದೆ ಹಾಯಲು ತೊಡಗಿದನು!
ತುಸುದೂರ ಹೋದವ ‘ನಬ್ಬಬ್ಬ!’ ಎಂದನು.
ಮೂಗಿನವರೆಗೂ ನೀರೇರಿತು.
ನೀರಿನ ರಭಸವು ಕಾಲೆತ್ತಬಿಡಲಿಲ್ಲ!
ಹಿಂದಕ್ಕೆ ಹೋಗಲು ಕೈಲಾಗಲಿಲ್ಲ!
“ವೇಗದಿ ಬಂದಿತು ಗುಡ್ಡದ ಮಳೆನೀರು
ಮರಮುಟ್ಟುಗಳನೆಲ್ಲ ತೇಲುತ್ತ; ೫೦
ಭಯದಿಂದ ಸಿಂಗಿಯು ಸಿದ್ದನ ತಬ್ಬಿದ-
ಳಯ್ಯಯ್ಯೊ ಮೃತ್ಯುವಿನಾಲಿಂಗನ!
ನಿಲ್ಲಲಾರದೆ ಸಿದ್ದ ಹತ್ತಿರವಿದ್ದ
ಕಿರಿದೊಂದು ಮರವನ್ನು ಆಲಿಂಗಿಸಿದ್ದ!
“ಸಾವನೆ ಕಾರುವ ಕಾರದು ಸುರಿಯಿತು;
ಮತ್ತಷ್ಟು ಬಲವಾಗಿಯಪ್ಪಿದರು!
ಮಕ್ಕಳ ನೆನಪಾಗಿ ಗುಡಿಸಲೆ ಕಣ್ಮುಂದೆ
ನಿಂತಂತೆ ಅವರಿಗೆ ಕಂಡಿತ್ತು!
ಮುಂದೇನು ನಡೆಯಿತೊ ನಾ ಹೇಳಲಾರೆ!
ಬಲು ಘೋರ! ಬಲು ಘೋರ! ನೀ ಕೇಳಲಾರೆ!” ೬೦
Leave A Comment