ಸಂಜೆ ಮರಸಿಗೆ ಹೊರಟ ತಂದೆಯು
“ನಾನು ಬಹೆನಪ್ಪಯ್ಯ ಕಾಡಿಗೆ”
ಎಂದು ಹಟಹಿಡಿದಳುವ ಕಂದಗೆ
ನುಡಿದನಿಂತೆಂದು:
“ಅಲ್ಲಿ ಹುಲಿಯಿದೆ; ಹಂದಿ ಹಿಂಡಿದೆ;
ಮುಳ್ಳು ಕಲ್ಲಿದೆ; ಹಳುವು ಹಬ್ಬಿದೆ;
ಸಣ್ಣವನು; ಹೆಬ್ಬಾವು ಕಂಡರೆ
ಹಾಕುವುದು ತಿಂದು.”

ಏಳು ವರುಷದ ರನ್ನನವನು;
ತುಂಬುದಾವರೆ ಕೆನ್ನೆಯವನು;         ೧೦
ನೇರಿಳೆಯ ಕರಿಕಣ್ಣಿನವನು
ದುಂಬಿಗುರುಳವನು!
ಜೊಲ್ಲ ಸೂಸುವ ಕೆಂಪು ತುಟಿಯಲಿ,
ಮುದ್ದು ಮೋಹಿಪ ತೊದಲು ನುಡಿಯಲಿ,
ಕಂಡು ನಲಿಯುವ ತಂದೆಗೆಂದನು-
ಬರಿಯ ಹಟದವನು.

ಬೇಟೆಗಾರನು ಮುತ್ತುಕೊಟ್ಟು,
“ಹಟವ ಹಿಡಿದರೆ ಕೊಡುವೆ ಪೆಟ್ಟು”
ಎಂದು ಕೋವಿಯ ಹೆಗಲೊಳಿಟ್ಟು
ಏರಿದನು ಬನಕೆ.  ೨೦
ಏರುತಿರೆ ತಾನೊಂಟಿಯಾಗಿ
ಹಿಂದೆ ಯಾರೋ ಬಂದ ಹಾಗೆ!
ತಿರುಗಿ ನೋಡಲು: ಗಾಳಿ, ತರಗೆಲೆ-
ಅಳುಕಿದೇಂ ಮನಕೆ?

ತೂಗಿ ಮರದಲಿ ಗಾಳಿ ಸುಯ್ಯಿಡೆ,
ಒಂದಕೊಂದಕೆ ತೀಡಿ ಮೆಳೆಯಲಿ
ಬಿದಿರು ಚೀರಿಡಲಡವಿ ನರಳಿತು
ರೋದಿಸುವವೋಲು.
ಹಾಡ ನಿಲ್ಲಿಸಿತಡವಿಹಕ್ಕಿ;
ಬೈಗುವೆಳಗಳಿವನಿತರಲ್ಲಿಯೆ           ೩೦
ಇರುಳ ಹಣೆಯಲಿ ‘ಬೆಳ್ಳಿ’ ಚುಕ್ಕಿ!-
ಏನು ಅದು? ಕೇಳು!

ಯಾರೊ ಕೂಗಿದ ಹಾಗೆ ಅಲ್ಲವೆ?
ಯಾರೊ ಗೋಳಿಟ್ಟಂತೆ ಅಲ್ಲವೆ?
ಬಿದಿರು ಮೆಳೆಯಲಿ ಕೂಗಿತೇನೋ!-
ಏನು ಗಾಳಿಯಿದು!
ಬೇಟೆಗಾರನು ನಿಂತು ನೋಡಿ,
ಕಾಣದಿರೆ ಕಿವಿಗೊಟ್ಟು ಕೇಳಿ,
ಕೇಳದಿರೆ ನಿಃಶಂಕೆ ತಾಳಿ,
ನಡೆಯೆ-ಕಂಡಿತದು!         ೪೦

ಕಾಣೆ-ಹಣ್ಣಿನ ಮರದ ಮರಸದು
ಹತ್ತಿ ಕುಳಿತನು. ಸುತ್ತ ಕಾಡಿನ
ಮರದ ಕತ್ತಲೆ; ಕೆಳಗೆ ಹಳುವಿನ
ಸಾಂದ್ರ ವಿಸ್ತಾರ.
ಮನಸು ದೃಷ್ಟಿಗಳೆಲ್ಲ ಪ್ರಾಣಿಯು
ಬರುವುದೊಂದನೆ ಚಿಂತಿಸುತ್ತಿರೆ
ಕೊಲೆಯ ಕೋವಿಯ ತಪದೊಳಿದ್ದನು
ಜಾಣ ಗುರಿಗಾರ!

ಕಾಯುತಿರೆ-ಅದೊ ಹಳುವಲುಗುತಿದೆ!
ಎತ್ತಿ ಕೋವಿಯನೆಳೆದು ಕುದುರೆಯ- ೫೦
ನಿಟ್ಟು ಗುರಿಯನ್ನೊತ್ತೆ ಬಿಲ್ಲನು-
ಹಾರಲಿಲ್ಲೀಡು!
ಮತ್ತೆ ಕುದುರೆಯನೆಳೆದು, ಅಯ್ಯೋ,
ಬಿಲ್ಲನೊತ್ತಿದನಾದರೇನಿದು?
ಎಂದು ‘ಲಪ್ಪ್’ ಎನದಾ ತುಪಾಕಿಗೆ
ಇಂದಿದೇಂ ಕೇಡು?

ಕೇಪು ಕೆಟ್ಟಿದೆಯೇನು? ಅಥವಾ
ಕಿವಿಗೆ ಮಸಿಯೈತರದೆ? ಅಥವಾ
ಮಾಟ ಮಾಡಿಹರೇನು? ಅಥವಾ-
ಶಿವನೆ! ಶಿವ ಶಿವನೆ!          ೬೦
ಬೇಟೆಗಾರಗೆ ತನ್ನನರಸುತ
ಬರುವ ಕಂದನ ಕಂಡು ಹರಣವೆ
ಹಾರಿಯೋಯಿತು! ಹಳುವದಲಿ ಅದೊ
ಅವನೆ? ಹೌದವನೆ!

ಬೈದ ಕೋವಿಗೆ ಮಣಿದನೊಡನೆಯೆ!
“ಹೈದನುಳುಹಿದ ದೇವ ದೇವನೆ
ನೀನು!” ಎಂದದನಂದಿನಿಂದಲು
ಪೂಜೆ ಮಾಡಿದನು!
ಬೇಟೆಯನು ಕೈಬಿಟ್ಟನಂದಿಗೆ!
ತನ್ನ ಕಂದನ ಜೀವದಂತೆಯೆ           ೭೦
ಇತರ ಜೀವಗಳೆಂದಹಿಂಸೆಯ
ವ್ರತವ ಹೂಡಿದನು!

“ಕೇಪು ಕೆಟ್ಟಿರಬೇಕು! ಅಥವಾ
ಮಸಿಯು ಕೆಟ್ಟಿರಬೇಕು! ಅಲ್ಲದೆ
ಕೋವಿ ಕನಿಕರ ತೋರಬಲ್ಲುದೆ?
ನಿನಗೆ ಬರಿಹುಚ್ಚು!”
ಎಂದ ಮಂದಿಯ ಹಳಿದು ನುಡಿದನು:
“ನನ್ನ ಹಸುಳೆಯ ಪೊರೆದ ಕೋವಿ
ನನ್ನ ಪುಣ್ಯದ ಪರಮದೇವಿ!
ಹುಚ್ಚದುವೆ ಮೆಚ್ಚು!”          ೮೦