ಬೈಗುಗೆಂಪನು ಬೀರಿ ಪಡುವಣ
ಬೆಟ್ಟದುದಿಯೊಳು ಕಾದ ಕಬ್ಬಿಣ –
ದುಂಡೆಯಂದದೊಳಿಳಿವ ನೇಸರು
ತೊಳಗಿ ಬೆಳಗಿದನು.
ಸಂಜೆಗೆಂಪೊಳು ಮಿಂದು ತಣ್ಣೆಲ –
ರಾಟದಲಿ ತಲೆದೂಗಿ ನಲಿಯುವ
ನಳನಳಿಪ ಪೊಸತಳಿರನಾಂತಿಹ
ಬನವು, ಮಲಗಿಹ ಮಗುವಿನಂದದಿ,
ಯೋಗನಿದ್ರೆಯೊಳಿರುವ ಕಿತ್ತಡಿ –
ಯಂತೆ ರಾಜಿಸಿತು.           ೧೦
ಹಕ್ಕಿಗಳ ಸದ್ದಿಲ್ಲ; ಮಿಗಗಳು
ಸಂಚರಿಪ ರವಮಿಲ್ಲ; ತರಗೆಲೆ
ಸುಳಿವ ತಂಗಾಳಿಯಲಿ ಕುಣಿಯುವ
ಸದ್ದದೊಂದೇ ಮೌನವಿಮ್ಮಡಿ –
ಯಾಗುವಂದದಿ ಸುತ್ತಿ ಚಿಮ್ಮಿತು
ಕನಸಿನಂದದಲಿ!
ಸಂಜೆವೆಣ್ಣಿನ ಮುಗುಳುನಗೆಯೋ?
ಸೊಗಯಿಸುವ ಕೆಂದುಟಿಯ ಬಣ್ಣವೊ?
ಪಶ್ಚಿಮಾಂಗನೆಯುಟ್ಟ ಚೇಲಾಂ –
ಚಲದ ರೇಶ್ಮೆಯ ಮಂಜುರಾಗವೊ? ೨೦
ತಳುವಿದೆನು ತಾನೆಂಬ ಭಯದಿಂ
ತನ್ನ ನಚ್ಚಿನ ಬೈಗುವೆಣ್ಣಿಗೆ
ಕಾಣಿಕೆಯ ಕೊಡಲೆಂಬ ನಲ್ಬಗೆ –
ಯಿಂದ ದಿನಪಂ ದಿನದ ಪಯಣದೊ –
ಳಾಯ್ದು ತಂದಾ ಸುಗ್ಗಿವೂಗಳ
ಕೇಸರ ಪರಾಗವನು ಸಿಗ್ಗಿನೊ –
ಳರಿಯದಿಹ ಕೋಮಲೆಯು ಚೆಲ್ಲಲು,
ಪಡುವಣದ ಬಾಂದಳವ ಮುಸುಗಿದ
ಕುಂಕುಮದ ಪುಡಿಯಂತೆ ಸಂಜೆಯ
ಕೆಂಪು ಚೆಲ್ವಾಯ್ತು!            ೩೦


ಹಿಂಡನಗಲಿದ ಹರಿಣನೊಂದು ವ –
ನಾಂತರದಿ ಬಾಯಾರಿ ನೀರನು
ಹುಡುಕುತಲೆಯುತಲೇರುತಿಳಿಯುತ
ಪೊದೆಯ ನುಸುಳುತ ಬರುತಲಿರ್ದುದು
ನಿಬಿಡ ವಿಪಿನದಲಿ.
ಕಿವಿಯನಲೆಯುತ, ತಲೆಯನೊಲೆಯುತ,
ಬಾಲವನು ಕುಣಿ ಕುಣಿಸಿ ಚಿಮ್ಮುತ,
ಸುತ್ತ ನೋಡುತ, ಮತ್ತೆ ತಿರುಗುತ,
ಕೊಂಕುಗೊರಲನು ಮಾಡಿ, ಶಂಕೆಯ
ದಿಟ್ಟಿಗಳನಟ್ಟುತ್ತ ನಾನಾ    ೪೦
ದೆಸೆಗೆ, ಕೊಂಬನು ಸುತ್ತಿ ಹೆಣೆಯುವ
ಬಳ್ಳಿಗಳನೊಯ್ಯೊಯ್ಯನುಣುಚುತ,
ಸಪ್ಪುಳವನಾಲಿಸುತ, ಬೆಚ್ಚುತ,
ಗೊರಸಿಗಂಟಿದ ತರಗೆಲೆಯ ಕೊಡ
ಕೊಡಹಿ ಮರ್ಮರನಾದಗೈಯುತ,
ಒಮ್ಮೆ ನಿಲ್ಲುತಲೊಮ್ಮೆ ನೆಗೆಯುತ
ಬಂದುದಾ ಜಿಂಕೆ.
ಇಂತು ಪೊಮ್ಮರೆ ಬರಬರುತಲಿರೆ,
ತರುಗಳಂಚಿನ ಸಿರಿಯ ಮೆರೆಯುತ
ಬೆಟ್ಟ ಬಾಂದಳ ಬನಗಳನು ಮರು –  ೫೦
ಬಿಂಬಿಸೆದೆಯಲಿ ನೆಳಲ ಲೋಕವ
ಪಡೆದು, ಕಾಡಿನ ಕಣ್ಣಿನಂದದಿ
ಹೊಳೆವ ತಿಳಿಗೊಳವೊಂದು ಮೆರೆದುದು
ಅನತಿದೂರದಲಿ.
ಕಮಲಗಳ ಸುಳಿವಿಲ್ಲ; ಹಂಸಗ –
ಳಾವಳಿಯ ಹೆಸರಿಲ್ಲ; ಮೊರೆಯುವ
ದುಂಬಿಗಳ ಕುಲವಿಲ್ಲ; ನಗರದ
ತರಳೆಯಂದದ ಸಿಂಗರದ ಸೊಬ –
ಗಿಲ್ಲ; ಹಳ್ಳಿಯ ಬಾಲೆಯೊಲು ತಿಳಿ –
ಗೊಳವು ಶೋಭಿಸಿತು!      ೬೦
ಗಾಳಿಯಲಿ ನಲಿನಲಿವ ತೆರೆಗಳು
ಮೋಹವನು ಬೀರಿದುವು. ದಡದಲಿ
ಪೂತ ತರುಗಳು ಪೂವಲಿಯ ಚೆ –
ಲ್ಲಿದುವು; ತರಗೆಲೆ ತೇಲಿದುವು ಕೆಳ –
ಗುದುರಿ; ಹಬ್ಬಿತು ಪಾಚಿಯಾದರು
ಕೆರೆಯು ಚೆನ್ನಾಯ್ತು!
ಹಬ್ಬಿದಾ ಬನಗತ್ತಲೆಯ ನಡು,
ವನರಮೆಯ ನಯನವರು ಹೋಲುವ
ತಿಳಿಗೊಳವ ಕಾಣುತಲೆ, ಮುದದಲಿ  ೭೦
ಕಣ್ಣು ಕಣ್ಣಿನ ಬಣ್ಣ ಬಣ್ಣದ
ಪೊಮ್ಮರೆಯು ನಗೆ ನಗೆದು ಚಿಮ್ಮುತ
ಸೇರಿ ಕರೆಯೆಡೆಯ;
ನಿಂತು ಮೊಳಕಾಲೂರಿ ಮೋರೆಯ
ನೀರಿಗಿಟ್ಟಿತು; ಹೊಡೆಯುವಳ್ಳೆಯು
ಜಲವನೀಂಟಿತು: ನೋಟವಕ್ಷಿಗೆ
ಚಿತ್ರಗತವಾಯ್ತು!
ಚಲಿಸುವಲೆಗಳ ಕನ್ನಡಿಯ ತೆರೆ –
ಯಲ್ಲಿ ಛಾಯಾ ಹರಿಣ ಕಂಪಿಸಿ
ಕದಡುಗನಸಿನ ಮಿಗದ ತೆರದಲಿ      ೮೦
ರಾಜಿಸಿತು ಕಣ್ಗೆ!
ನೆಳಲಿನೆರಳೆಯು ಮೇಲಿನೆರಳೆಯ –
ನೊಲಿದು ಮುದ್ದಿಸುವಂತೆ ಚಿತ್ರವ –
ದೆಡ್ಡಮಾಯ್ತಲ್ಲಿ!


ನೀರ್ಕುಡಿದು ಮೇಲೆದ್ದು ನಿಂತಾ
ಜಿಂಕೆ, ದೆಸೆಗಳ ನೋಡಿ, ಬೈಗನು
ಬಗೆಯುತಿರುಳಿಳಿವುದನು ಭಾವಿಸಿ,
ಬಳಿಯ ಹಕ್ಕೆಯ ನೆನೆದು ಮೆಲ್ಲನೆ
ಮುಂದಕಡಿಯಿಡುತಿರಲು ಬೆಚ್ಚಿತು!
ನಡುಗಿ ಚಿಮ್ಮಿತು! ಮೊಗದಿರುಹಿ ತಿರು          ೯೦
ತಿರುಗಿ, ನಾನಾ ದೆಸೆಯ ನಿಟ್ಟಿಸಿ,
ಹೃದಯದುಬ್ಬೆಗದಲ್ಲಿ ಚಂಚಲ
ದೃಷ್ಟಿಗಳ ಮಿಂಚಿಸುತ, ಶಿರವನು
ನೆಗಹಿ, ಗಾಳಿಯ ಹಿಡಿದು, ಸದ್ದನು
ಕೇಳೆ ಕಿವಿಗಳ ನಿಲಿಸಿ ನೆಟ್ಟಗೆ
ನಿಂತು ನಿಮಿರಿದುದು!
ಹಬ್ಬಿದಾ ವನಮಧ್ಯದಲಿ, ನೀ –
ರಾಕರದ ತೀರದಲಿ ನಿಂತಾ
ಹರಿಣನಾಲಿಸುತಿರಲು ಕೇಳಿತು
ಬೇಂಟೆಗಾರರ ದೂರ ದೂರದ         ೧೦೦
ಬೊಬ್ಬೆಯಬ್ಬರವು.
ಬೇಂಟೆ ನಾಯ್ಗಳ ಕೂಗು, ಬಿಯದರ
ಸೋವುದನಿ; ಹಿಡಿ, ಕೂಡು ಕೂಡೆಂ –
ಬಾತುರದ ಕಾಕುಗಳ ಮರುದನಿ;
ಹರಿವ ಗೋಳಾಯಿಲರ ಹಯಗಳ
ಖುರಪುಟದ ಚಟುಲಗತಿ, ಹೇಷಾ
ರವವು ಹಬ್ಬಿತು ದೂರ ಮೊಳಗುವ
ಗುಡುಗಿನಂದದಲಿ.
ಬರಬರುತ ಹಿರಿದಾಗಿ ಸದ್ದಿನ
ವಾಹಿನಿಯು ವನಮೌನ ಪಾತ್ರೆಯ   ೧೧೦
ತುಂಬಿ ತುಳುಕಿದುದು;
ಬಂಡೆಗಳು ಮರುದನಿಯ ಬೀರಿದು –
ವಡವಿಯಲ್ಲಿಹ ಗುಹೆಗಳುಲಿಯನು
ಕನ್ನಡಿಸೆ, ರಕ್ಕಸರ ತೆರದಲಿ
ಗಗನ ಚುಂಬಿತ ಗಿರಿ ಶಿಖರಗಳು
ಬೊಬ್ಬಿರಿದುವಾಗೊಬ್ಬರೊಬ್ಬರ
ಕರೆಯುವಂದದಲಿ


ಕೇಳಿ ಕಳಕಳನಾದವನು ಕಳ –
ವಳದಿ ಪೊಮ್ಮರೆ ನೆಗೆವ ಹಾದಿಯ
ಬಗೆದು ಮುಂಚುವ ಮುನ್ನ, ಮಿಂಚಿನ            ೧೨೦
ರಯಗತಿಯನೇಳಿಸುತ ಬಂದುವು
ಬೇಂಟೆ ನಾಯಿಗಳು.
ಬನವು ಮರಿಗಳ ಹೆತ್ತಿತೋ ಎನೆ
ಕುಟಜಗಳ ಮರೆಯಿಂದ, ಸೊಂಪಿನ
ಕೇದಗೆಯ ಹೊದರಿಂದ, ಕವಿದಿಹ
ಕೆಂಜಿಗೆಯ ಪಿಣಿಲಿಂದ, ನಿಂತಿಹ
ಬಂಡೆಗಳ ಸೆರಗಿಂದ ತೆಕ್ಕನೆ
ಪೊದರು ಪೊದರಿನ ಗಬ್ಬದಿಂದೊಗೆ –
ತಂದು ಹಾರುತ ನೆಗೆದು ಬಂದುವು
ಬೇಂಟೆ ನಾಯಿಗಳು!        ೧೩೦
ನವಿರು ನಿಮಿರಿದ ದೇಹವೆತ್ತಿದ
ಬಾಲ, ತೆರೆದಿಹ ಬಾಯಿ, ಕೆರಳಿದ
ಕಂಗಳೆದ್ದಿಹ ಕಿವಿಗಳೇದುವ
ಹೊಟ್ಟೆ, ನಿಂತಿಹ ಮೀಸೆಯಿಳಿಯುವ
ಬೆಮರ ಜೊಲ್ಲನು ಬಿಡದೆ ಸೂಸುವ
ಜೋಲ್ವ ಕೆನ್ನಾಲಗೆಯ ಕುನ್ನಿಗ –
ಳಡವಿ ಬಿತ್ತಿದ ಭೀತಿಯಂದದಿ
ಮಿಂಚಿ ಮೂಡಿದುವು.
ನೆಲವ ಮೂಸುತ, ಹೊದರು ಹೊದರನು
ಹೊಕ್ಕು ಹೊಮ್ಮುತ, ನಿಂತ ಬಂಡೆಗ –           ೧೪೦
ಳೇರುದಿಣ್ಣೆಯ ಚಿಮ್ಮಿ ನೆಗೆಯುತ,
ಜಂತುಗಳನರಸುತ್ತ ನಾನಾ
ಬಣ್ಣ ಬಣ್ಣದ ಜಾಯಿಲಂಗಳು
ನುಗ್ಗಿದುವು ಮುಂದೆ.


ಕಾರಮುಗಿಲಲಿ ಮಿಂಚು ಮಿಂಚುವ
ತೆರದಿ ಪೊಮ್ಮರೆ ಹಸುರು ಬನದಲಿ
ಚಿಮ್ಮಿ ಸಿಡಿಯಿತು; ನೆಲವನೊದೆಯಿತು
ನಂಬಿ ಮಾರುತನ.
ಕಂಡು ಸಿಡಿದೋಡುವ ಕುರಂಗದ
ಕೂಗಿ ಬೆನ್ನಟ್ಟಿದುವು ನಾಯಿಗ –
ಳೆಲರನಟ್ಟುವ ಗಾಳಿಯಂದದೊ –
ಳಾತ್ಮನನು ಹಿಂಬಾಲಿಸುವ ಕ –
ರ್ಮಗಳ ಕುಲದಂತೆ!
ಬನದ ಮೋನವು ಬೆದರಿ ಚೀರಿತು!
ನಾಯಿಗಳ ತರತರದ ಗಂಟಲ
ಗಾಳಿ ಅರೆಗಳ ಬಡಿದು ಚಿಮ್ಮಿತು!
ಮರುದನಿಯ ಬೀರಿದುವು ಗುಹೆಗಳು;
ಕೋಟಿ ಶುನಕಗಳೊಂದೆ ಸಲ ಬೊ –
ಬ್ಬಿರಿಯುವಂದದೊಳಡವಿಯೊರಲಿತು
ಬೊಬ್ಬೆಯಬ್ಬರದಿ!            ೧೬೦
ನುಗ್ಗಿ ಬಂದುದು ಬೇಡಪಡೆಯಾ –
ಲಿಸುತ ನಾಯಿಗಳುಲಿಯನೊಡನೆಯೆ
ರಾಹುತರು ಮಿಂಚಿದರು; ದಶರಥ
ನೃಪತಿಯೇಣನ ಜಾಡ ನೋಡುತ
ಹರಿಯ ಚೋದಿಸಿದ!
ಬಿಂಕದಲಿ ಕೊಂಕಿರುವ ಕೊರಲಿನ
ಪೆಂಪ ಮೆರೆಯುತ, ಶಾರದಾಭ್ರದ
ಮುಗಿಲ ಹೋಲುವ ಬಿಳಿಯ ತೇಜಿಯು
ಮನದ ವೇಗದೊಳೊಡನೆ ಸಿಡಿಯಿತು
ಧರೆಯ ಧಿಕ್ಕರಿಸಿ. ೧೭೦
ಕೂಡೆ ಕಳಕಳವೆದ್ದು ಬೇಡರ
ಪಡೆಯು ಸಡಗರದಿಂದ ನುಗ್ಗಿತು;
ಬಾಣಗಳ ಚೂಣಿಯೆನೆ ದಶರಥ
ಭೂಮಿಪನ ಹಿಂಬಾಲಿಸೋಡಿತು
ಹಯದ ಪರಿವಾರ.
ಕಣ್ಣೆವೆಗಳನು ಮುಚ್ಚಿ ತೆರೆವುದ –
ರಲ್ಲಿ ಬೇಡರ ಪಡೆಯು, ನಾಯ್ಗಳು,
ಕುದುರೆಯಾಳುಗಳೆಲ್ಲ ಕಣ್ಮರೆ –
ಯಾಗಿ ಬನದಲಿ ಮರಳಿ ಮೌನವು
ರಾಜ್ಯವಾಳಿದುದು.            ೧೮೦


ಗಿರಿ ಶಿಖರಗಳನಡರಿ, ಕಣಿವೆಗ –
ಳಿಳಿದು, ತೊರೆಗಳ ಹಾದು, ಝರಿಗಳ
ನೆಗೆದು, ಹಳುವನು ಹೊಕ್ಕು, ಹೊದೆಗಳ
ನುಗ್ಗಿಯಟ್ಟುವ ನಾಯಿಗಳ ಗೋ –
ಳಾಯಿಲರ ಮೋಹಿಸುತ, ವಂಚಿಸು –
ತೊಮ್ಮೆ ತೋರುತಲೊಮ್ಮೆ ಮರೆಯಾ –
ಗುತ್ತ ಪೊಮ್ಮರೆ ತೋರಿ ತೋರದ
ತೆರದಿ ಮಿಂಚುತಿರೆ,
ಬಸವಳಿದು ಬಳಲಿದರು ಬಿಯದರು,
ನಾಯಿಗಳು ಮೇಲುಸಿರನೆಳೆದುವು,  ೧೯೦
ಬಾಯ್ನೊರೆಯ ಕಾರುತ್ತ ಕುದುರೆಗ –
ಳೆಲ್ಲ ಸೋತುವು; ರಘುಕುಲೇಶನ
ವಾಜಿಯೊಂದೇ ಹಿಂಜರಿಯದೆಯೆ
ಸಾಗಿದುದು ಮುಂದೆ!
ಹಿಂದುಳಿಯೆ ಪರಿವಾರ, ಗಣನೆಗೆ
ತಾರದರಸನು ಮಿಗವ ಮೋಹಿಸಿ,
ತೇಜಿಯನು ಚಪ್ಪರಿಸಿ ಚೋದಿಸಿ,
ಕರದ ಭಲ್ಲೆಯ ನೆಗಹಿ, ಹರಿಣನು
ತೋರೆ ಗುರಿಯಿಡುತೊಮ್ಮೆ, ಕಾಣದೆ
ಚಲವ ಮೆರೆಯುತಲೊಮ್ಮೆ, ಮುಂದಕೆ           ೨೦೦
ಮಿಂಚಿ ಮುಂಚುತಿರೆ,
ಮೆಲ್ಲಮೆಲ್ಲನೆ ಬೈಗುಗೆಂಪದು
ಮಸುಗು ಮಸುಗಾಗುತ್ತಲಿರುಳಿನ
ಕರಿಯ ಸೀರೆಯ ಸೆರಗು, ಜಿಂಕೆಯ
ಕನಿಕರಿಸಿ ರಕ್ಷಿಸುವ ತೆರದಲಿ,
ಮುಚ್ಚಿ ಮುಸುಕಿತು ಲೋಕವೆಲ್ಲವ;
ನೇಸರಡಗಿದನು!
ಬೆಟ್ಟ ಮರ ಗಿಡ ಬಳ್ಳಿ ಹೊಳೆ ತೊರೆ
ಬಯಲು ಬನಗಳು ಮಾಯವಾದುವು;
ಕವಿಯುತಿಹ ಕತ್ತಲೆಯ ಕಡಲಲಿ       ೨೧೦
ಮುಳುಗಿಯುರ್ವರೆ ಕರಗಿಯೊಯ್ಯನೆ
ಕರಿಯ ನೀರಾಯ್ತು!
ಕಣ್ಣು ಕತ್ತಲೆ, ಕಿವಿಯು ಕತ್ತಲೆ,
ಮುಟ್ಟಿದರೆ ಕತ್ತಲೆಯು, ಕತ್ತಲೆ
ಮುಟ್ಟದಿರಲುಸಿರೆಳೆಯೆ ಕತ್ತಲೆ,
ಉಸಿರುಬಿಡೆ ಕತ್ತಲೆಯು, ಕಾಲವು
ಕತ್ತಲೆಯು, ದೇಶವದು ಕತ್ತಲೆ,
ದೇಹವೇ ಕತ್ತಲೆಯ ಕುಪ್ಪಸ –
ವಾಯ್ತು ಜೀವನಿಗೆ!
ಕಾಲಿರದ, ಕೈಯಿರದ, ದೇಹವ –      ೨೨೦
ದಿರದ, ರೂಪದ ಸುಳಿವ ಕಾಣದ,
ಶೀಲ ಬೂಲಗಳೊಂದುಮಿಲ್ಲದ,
ಹೃದಯದಲಿ ಹರಿಹರಿದು ಬರುವಾ
ಬನದ ಬೆದರಿಕೆಯೆಂಬ ಛಾಯೆಯ
ಬೂತು ಬನವನು ಸುತ್ತಿಮುತ್ತಿತು;
ಮೆಲ್ಲಮೆಲ್ಲನೆ ಹರಿದು ನುಂಗಿತು
ರಾಹುವಂದದಲಿ!


ಕತ್ತಲೆಯ ಮೊತ್ತವದು ಮುತ್ತಲು
ಸುತ್ತ ನೋಡುತ ಚಿತ್ತದಲಿ ದಶ –
ರಥನು ಮುಂದಿನ ಗತಿಯ ಚಿಂತಿಸಿ,  ೨೩೦
ಕಾಣದೆಯೆ ಪರಿವಾರದವರನು,
ತನ್ನ ಮುಂದಿನ ಹಾದಿಯರಿಯದೆ,
ಹರಿಯ ದಿಟ್ಟಿಯ ನಂಬಿ ವಾಗೆಯ
ಸಡಿಲಿಸಲು, ಕುರುಡತನಕಿಮ್ಮಡಿ –
ಯಾದ ಕಪ್ಪಿನ ಕಡಲನೀಜುತ
ತೇಲಿತಾ ತೇಜಿ!
ಬರಬರುತ ದೂರದಲಿ ಮೊರೆಯುತ
ಹರಿವ ಸರಯೂ ನದಿಯ ಮಂಜುಳ
ದೂರಪರಿಣತಗಾನ ಮೌನವ –
ನೆಚ್ಚರಿಸಿ ಪಸರಿಸಿತು ನೆಚ್ಚಿನ           ೨೪೦
ವಾಣಿಯಂದದಲಿ!
ನೀರಡಸಿದಾ ಕುದುರೆ ಸಲಿಲದ
ಮಧುರ ನಾದವ ಕೇಳಿ ಹಿಗ್ಗುತ
ಬೇಗ ಬೇಗನೆ ಹರಿಯ ತೊಡಗಿತು
ಹೊಳೆಯ ಬಳಿಗಾಗಿ.
ಕತ್ತಲಲಿ, ಕಿಕ್ಕಿರಿದ ತರುಗಳ
ಮಿಳಿರುತಿಹ ಸಿರಿದಳಿರ ಜವನಿಕೆ
ತೆರೆದ ಕಂಗಳಿಗಾಚೆ, ಗಗನದ
ಹೊಳೆವ ತಾರಾಗಣವನೆದೆಯಲಿ
ತೊಟ್ಟು ಗಾಂಭೀರ್ಯದಲಿ ಹರಿಯುವ            ೨೫೦
ಹೊಳೆಯು ಶೋಭಿಸಿತು.
ತೊರೆಯ ತೀರವ ಸೇರಿ ವಾಜಿಯು
ನಿಲಲು, ದಶರಥ ನೃಪತಿ ಪಲ್ಲಣ –
ದಿಂದ ಸೈಕತ ತಟದ ಮೇಲಿಳಿ –
ದೊಡನೆ ಕಳಚೆ ಖಲೀನವನು, ತೊರೆ –
ಯೆಡೆಗೆ ಬಳಿಸಂದಶ್ವವೀಂಟಿತು
ಮಧುರವಾರಿಯನು!
ಬಿಲ್ಲು ಭಲ್ಲೆ ನಿಷಂಗ ಮೊದಲಾ –
ದಾಯುಧಂಗಳ ಕಳಚುತೊಯ್ಯನೆ
ಮರಳ ದಿಣ್ಣೆಯ ಮೇಲೆ ಮಲಗಿಸಿ,    ೨೬೦
ದಣಿದು ನೆರೆ ನಿಟ್ಟುಸಿರನೆಳೆಯುತ,
ಮೆಲ್ಲಮೆಲ್ಲನೆ ನದಿಯ ಬಳಿಗೈ –
ತಂದು ಬಾಗುತ ಬೊಗಸೆಗೈಯಲಿ
ಧರಣಿಪಾಲನು ತೇಜಿಯೆಡೆಯೊಳೆ
ನೀರನೀಂಟಿದನು!
ವಾಹಕನು ವಾಹನವು ಜೊತೆಯಲಿ
ಕುಡಿದು ಸಲಿಲವ, ತಿರೆಗೆ ಮೆರೆದರು
ಬನಗಳಲಿ ಕತ್ತಲಲಿ ಮರಣದ
ರಾಜ್ಯದಲಿ ಯೋಗೀಶರೆಡೆಯಲಿ
ದೇವ ಸಾನ್ನಿಧ್ಯದಲಿ ಒಲವರ           ೨೭೦
ತಾರತಮ್ಯಗಳಿಲ್ಲವೆಂಬುವ
ನಿಚ್ಚ ನನ್ನಿಯನು!


ದೊರೆಯು ತಿಳಿನೀರೀಂಟಿ ಬಾಯಾ –
ರಿಕೆಯನಾರಿಸಿಕೊಂಡು ಮುದದಲಿ
ಮೇಲಕೇಳುತಲಿರಲು, ಬಳಿಯಲಿ
ತೊರೆಯ ತಡಿಯಲಿ ನಿಂತ ತೇಜಿಯು
ಬೆಚ್ಚಿ ಮೂಗಾಳಿಯನು ಹಿಡಿಯುತ
ಬೆದರಿ ಕೆನೆಯಿತು; ಘೋರ ನಿಶೆಯಲಿ
ಹಯದ ಹೇಷಾರವದ ಮಾರ್ದನಿ
ಕೋಟಿ ಕುದುರೆಗಳೊರಲಿದಂತೆ ಕ – ೨೮೦
ಠೋರ ಕರ್ಕಶವಾಯ್ತು; ಚಮಕಿತ
ನಾದನಾ ನೃಪತಿ!
ದನಿಯ ಬೊಮ್ಮವದಿರುಳ ಬೊಮ್ಮವ
ಕೆಣಕಲದು ರೋಷದಲಿ ನಾದವ
ನುಂಗಿಯರಗಿಸಿಕೊಂಡ ತೆರದಲಿ
ಮೌನವತಿಯಾಯ್ತೊಡನೆ ಕತ್ತಲು
ಹೆಚ್ಚಿದಂತಾಯ್ತು!
ನಿಮಿರಿ ನಿಂತಾ ನೃಪತಿ ಕಿವಿಗೊ –
ಟ್ಟಾಲಿಸಲು ದೂರದಲಿ ವಾಹಿನಿ –
ಯೆಡೆಯೊಳಾವುದೊ ಹಿರಿಯ ಜಂತುವು        ೨೯೦
ಸಲಿಲ ಪಾನದಿ ತೊಡಗಿದಂದದಿ
ಘುಳುಘುಳೆಂಬ ಮಹಾನಿನಾದವು
ಹಬ್ಬಿದಾ ಮೌನದಲಿ ನೂರ್ಮಡಿ –
ಯಾಗಿ ಕೇಳಿಸಿತು.
ಮದಗಜವೊ ಹೆಬ್ಬುಲಿಯೊ ಕೊಬ್ಬಿದ
ಕಾಡುಕೋಣವೊ, ಸೊಕ್ಕಿ ಮಲೆತಿಹ
ಸೂಕರವೊ, ಕೇಸರಿಯೊ, ಕರಡಿಯೊ,
ಎಂದು ಶಂಕಿಸುತವನಿಪಾಲನು
ಚಿಮ್ಮಿ ಕೈಗೊಂಡಲಗು ಬಿಲ್ಗಳ
ಸಿಂಜಿನಿಯನೇರಿಸಿದನೊಡನೆಯೆ     ೩೦೦
ಹೂಡಿದನು ಕಣೆಯ.
ಕಣ್ಣಿರಿಯುವಂಧತಮವಾವರಿ –
ಸಾವೆಡೆಯು ಗುರಿಯಿಲ್ಲ ಕಂಗಳಿ –
ಗಾಲಿಸಲು ದನಿಯೊಂದೆ ಕಿವಿಗಳಿ –
ಗಾಯ್ತು ಗುರಿಯ ಗವಾಕ್ಷವಾಯ್ತದೆ
ಮಾರ್ಗ ಮಾರ್ಗಣಕೆ!
ಕತ್ತಲೆಯೆ ಬೆಳಕಾಗೆ, ಮೌನವೆ
ಸೂಚನೆಯ ಕೊಂಬಾಗೆ, ಘುಳು ಘುಳು
ನಾದ ಗುರಿಗಣ್ಣಾಗಲೆಚ್ಚನು
ನೃಪತಿ ಕೂರ್ಗಣೆಯ!        ೩೧೦
ತನ್ನ ಬಾಳಿನ ಪುಣ್ಯದಕ್ಷಿಯ
ತಾನರಿಯದಿರಿವಂತೆ ರಘುಕುಲ –
ದರಸನಟ್ಟಿದನಿರುಳ ಗಬ್ಬಕ –
ಮೋಘ ಭೀಕರ ಕ್ರೂರ ಘೋರ ಕ –
ಠೋರ ಸಾಯಕವ!


ಕೂಡೆ ಕತ್ತಲ ಮೌನದಜಿನವ
ಹರಿಹರಿದು ರೋದನದ ರವವೊಂ –
ದೆಳೆಯ ಕುವರನ ಕೊರಲ ಕೊಯ್ಯಲು
ಹೊಮ್ಮಿ ಚಿಮ್ಮುವ ಬಾಲ ಶೋಣಿತ –
ದಂತೆ ರುದ್ರ ಭಯಂಕರಾದ್ಭುತ –     ೩೨೦
ಮಾಗಿ ತುಂಬಿ ತುಳುಂಕಿ ತೀವಿತು
ತಿಮಿರ ವಿಶ್ವವನು!
“ಶಿವ ಶಿವಾ ತಾಯ್ತಂದೆಗಳಿರಾ!
ಸತ್ತೆನಯ್ಯೋ! ಸತ್ತೆನಾಹಾ!
ನೀರನೊಯ್ಯುವರಾರು ನಿಮಗೆಂ”
ದಾ ದನಿಯು ಕತ್ತಲೆಯ ಬಸಿರಿಂ –
ದೊರಲಿ ಚಿಮ್ಮಿದುದು.
ಇರುಳ ಕರುಳನು ಸೀಳಿ ಪೊರಮ –
ಟ್ಟಾರ್ತ ಮಧುರ ಕಿಶೋರ ವಾಣಿಯು
ನೃಪತಿಯ ಕೊಡಂಕೆಗಳನಿರಿದುದು,  ೩೩೦
ಎದೆಯ ಬಿರಿದುದು, ಮನವ ಮುರಿದುದು,
ಕೊರೆವ ಚಳಿಯಂದದಲಿ ಹರಿದುದು
ನಾಳನಾಳಗಳಲ್ಲಿ ನೆತ್ತರು
ಹೆಪ್ಪುಗೊಳುವಂತೆ!
ಕಾಳೆಗದಿ ಕೂರಸಿಯ ಮಿಂಚನು
ನೋಡಿಯಳುಕದ ವೀರವೀರನು,
ಝಂಕರಿಪ ಸಿಂಜಿನಿಯ ಟಂಕೃತಿ –
ಗೆದೆಗೆಡದ ಪಟುಭಟನು, ಹರಿಯುವ
ಶೋಣಿತದ ವಾಹಿನಿಯನೀಜುವ
ಬೀರ ಜೋದನು, ಗಾಯವಡೆದುರೆ    ೩೪೦
ನರಳುತಿಹ ಸೈನಿಕರ ಗೋಳನು
ಕೇಳಿಯಂಜದೆ ಬಿಂಕದಲಿ ಮುಂ –
ಬರಿವ ನರಪತಿ ಬಾಲವಾಣಿಯ
ಕೇಳಿ ನಡ ನಡ ನಡುಗಿ ಕಂಪಿಸಿ
“ಶಿವ ಶಿವಾ” ಎಂದ!
ಕುಂದಿದುದು ಮೈಬಲವು; ಬಿದ್ದುದು
ವಜ್ರಮುಷ್ಟಿಯನಗಲಿ ಚಾಪವು;
ಕಣ್ಣ ಕತ್ತಲೆಯಿರ್ಮಡಿಸಿದುದು;
ತಣ್ಣೆಲರ ತೀಟದೊಳೆ ಮೈ ಬೆವ –
ರಿದುದು; ಹೆಚ್ಚಿತು ಬೆಪ್ಪು ದೊರೆಗಾ    ೩೫೦
ಚೀರುಲಿಯ ಕೇಳಿ!
ರಾಜತಂತ್ರವಿಶಾರದನು ಕಂ –
ಗೆಟ್ಟು ಮರಳನವೋಲು ದೆಸೆಗಳ
ನೋಡುತಿರುಳಲಿ ಸೊನ್ನೆದಿಟ್ಟಿಯ –
ನಟ್ಟಿ ಮುಂದಡಿಯಿಟ್ಟು ಜವದಿಂ –
ದೋಡಿದನು ಚೀರುಲಿಯು ಮೂಡಿದ
ತಾವಿನೆಡೆಗಾಗಿ.
ಕತ್ತಲಲಿ ಕಂಗಾಣದೆಡವುತ,
ಮೂಡಿದರೆಗಳನೇರುತಿಳಿಯುತ,
ನೆಚ್ಚನರಸುತಲೆವ ಹತಾಶನ          ೩೬೦
ತೆರದಿ, ಕಾಣದ ಮೂಲತತ್ತ್ವವ –
ನೆಳಸಿ ಅನ್ವೇಷಿಸುವ ತಾರ್ಕಿಕ –
ನಂತೆ ದಶರಥ ನೃಪತಿ ಅರಸಿದ –
ನುಲಿಯ ಕಾರಣವ!
ಎಲ್ಲಿ ಕಣ್ಣಿಡಲಲ್ಲಿ ಕತ್ತಲು!
ಬಾನು ಕತ್ತಲು! ತಿರೆಯು ಕತ್ತಲು!
ಸುತ್ತಮುತ್ತಲು ತಿವಿವ ಕತ್ತಲು!
ಘೋರತರ ಘನನಿಬಿಡ ನಿಶೆಯಲಿ
ದಿನಪ ಕುಲಮಣಿ ಪಂತಿದೇರನು
ಬಿಡದೆ ಹುಡುಕಿದನು!        ೩೭೦

೧೦
ಬನಗಳಲಿ ಬೆಳುದಿಂಗಳಹಹಾ!
ಮೂಡುವೆಟ್ಟಿನ ಬನದ ನೆತ್ತಿಯೊ –
ಳಿರುಳು ಕಣ್ದೆರೆದಂತೆ ಕೆಂಬೆಳ –
ಗೊಯ್ಯನೊಯ್ಯನೆ ತೋರಿ ತೆಕ್ಕನೆ
ಸುಧೆಯ ನಿಧಿ ಚಂದಿರನು ಕುಸುಮಿಸಲ್
ಒಡನೆ ತಣ್ಣನೆ ದೇಸಿ ತೀವುತೆ
ಜಗವ, ಮುದ್ದಿಸಿತಿಳೆಯ, ಚೆಲುವಿನ
ಚೆಲುವೆಯಂದದಲಿ!
ಮೆಲು ಮೆಲನೆ ಮೂಡಿದುವು ಬನಗಳು
ನಟ್ಟಿರುಳ ಬಸಿರಿಂದ; ಸುಂದರ        ೩೮೦
ಮಂದಹಾಸವ ಬೀರಿ ಬಾನಿನ
ದೇವಿ ನಲಿದಳು. ಮೆರೆವ ತಿಂಗಳ
ಜೊನ್ನ ಬೆಳ್ಸರಿಯಡೆಬಿಡದೆ ಸುರಿ
ಸುರಿದು ಮುಳುಗಿಸಿತಿಳೆಯನೆಲ್ಲೆಡೆ:
ಬನಗಳಲಿ ಬೆಳುದಿಂಗಳಹಹಾ,
ಚೆಲುವು ಸೊಂಪೇರೆ!
ಹೊಳೆ ಹೊಳೆವ ಪೊರೆ ಪೊರೆಯನಾಂತಿಹ
ವಿಲಯ ಪೂರ್ವದ ದೀರ್ಘ ಭೂಜಲ
ಚರ ವಿಜಾತಿಯ ಜಂತುವಂದದಿ
ಹಬ್ಬಿದಾ ಸೈಕತ ತರಂಗಿತ
ತಟದ ಮರಳಿನ ಮೇಲೆ ಮಲಗಿತು   ೩೯೦
ರಮ್ಯ ಕೌಮುದಿಯು!
ತೆರೆ ತೆರೆಯನಾಲಿಂಗಿಸಿಂಬಿನೊ –
ಳಲೆಯುವಲೆಗಳ ಶಿಖರದಲಿ ನಲಿ
ನಲಿದು ನರ್ತಿಸಿ ಮಂದಗಾಮಿನಿ –
ಯಾದ ಸರಯೂ ನದಿಯ ನಿರ್ಮಲ
ನೀಲ ವಕ್ಷಸ್ಥಳದೊಳೊರಗಿತು
ಬಾಲಚಂದ್ರಿಕೆಯು!
ಜೊನ್ನದಂಬುಧಿಯಲ್ಲಿ ಬನಗಳು
ಹೊಳೆಯು ಗಿರಿಗಳು ಮುಳುಗಿ, ಕನಸಿನ        ೪೦೦
ಲೋಕದೊಡವೆಗಳಂತೆ ಮೆರೆದುವು
ಶಾಂತ ಮೌನದಲಿ!

೧೧
ಹೆಚ್ಚಿ ಬಹ ಹಿಮಕರನ ಕಾಂತಿಯೊ –
ಳನತಿದೂರದೊಳೊಂದು ವಸ್ತುವ
ಕಂಡು ದಶರಥ ನೃಪತಿ ಬೇಗನೆ
ಮುಂದೆ ನಡೆದನು, ಬಗೆಯೊಳುಬ್ಬೆಗ –
ವೇರಿ ಬರುತಿರಲು!
ಮೊದಲು ಮಬ್ಬಾಗರೆಯ ತೆರದಲಿ
ತೋರಿಯೊಯ್ಯನೆ ಮಿಗದ ರೂಪವ –
ನಾಂತು ಮೆಲ್ಲನೆ ಮಾನವಾಕೃತಿ –
ವೆತ್ತು ಕೈಕಾಲುಗಳ ಪಡೆಯಿತು!       ೪೧೦
ದೊರೆಯು ಕಂಪಿಸಿದ!
ಹೆಜ್ಜೆ ಹೆಜ್ಜೆಗೆ ಭೀತಿ ಹೆಚ್ಚಿದು –
ದೆದೆಯ ಕಳವಳ ಮೇರೆದಪ್ಪಿದು –
ದುಸಿರು ಬಿಸುಸುಯ್ಲಾದುದೊಡನೆಯೆ
ನೃಪತಿ ಹಾಯೆಂದ!
ಅಲ್ಲಿ ಸರಯೂ ತೊರೆಯ ತೀರದೊ –
ಳಲ್ಲಿ ಪಾವನ ನದಿಯ ವೇಲೆಯೊ –
ಳಲ್ಲಿ ಸೈಕತ ಶಯನರಂಗದೊ –
ಳಲ್ಲಿ ತಿಂಗಳಿನಲರ ಬೆಳಕಿನೊ –       ೪೨೦
ಳಲ್ಲಿ ಕಾನನದಿಂಪು ತೆಕ್ಕೆಯೊ –
ಳಲ್ಲಿ ಮೌನದ ಮಡಿಲ ಶಾಂತಿಯೊ –
ಳಲ್ಲಿಯೊರಗಿದುದೊರ್ವ ಕೋಮಲ
ಬಾಲ ವಿಗ್ರಹವು!
ಎದೆಗೆ ನಾಟಿದ ಕಣೆಯ ಹಿಂಭಾಗ –
ಗವನು ಕೈಯಲಿ ಹಿಡಿದು, ವದನದೊ –
ಳಳಲ ಚಿತ್ರವ ತೋರಿ, ಕಂಬನಿ
ಗರೆದು ತೆರೆದಿಹ ಕಂಗಳೆವೆಗಳ –
ನಿನಿತು ಚಲಿಸದೆ, ನಟ್ಟದಿಟ್ಟಿಯ
ಬೀರಿ, ಸೂಸಿದ ರಕ್ತಪಂಕದ ೪೩೦
ಮೇಲೆ, ಬಾಡಿದ ಬಾಲಕುವಲಯ –
ದಂತೆ ಬಿದ್ದುದು ತರುಣ ಮೂರ್ತಿಯು
ದಶರಥನ ಮುಂದೆ!
ಮಾಯವಾದುದು ಬಗೆಯ ಕಳವಳ;
ಭೀತಿಯುಬ್ಬೆಗವಳಿದುವೆದೆಯಲಿ
ಕರುಣೆ ಪಶ್ಚಾತ್ತಾಪ ದಯೆಗಳು
ಚಿಗುರಿದುವು; ಮೂಡಿದುದು ಕಜ್ಜದ
ಕೆಚ್ಚು; ಪಾರ್ಥಿವ ಧರ್ಮದುರುತರ
ಕಾರ್ಯದಕ್ಷತೆ ಮೊಳೆತುದರಸಗೆ
ತನ್ನ ಮುಂಗಡೆ ವಿಗತ ಚೇತಸ –      ೪೪೦
ನಾಗಿಯೊರಗಿದ ಮುಗ್ಧ ಮಧುರ ಕಿ –
ಶೋರನನು ಕಂಡು!
ಲೀಲೆಯತಿಶಯದಲ್ಲಿ ಬಾಲ ಮ –
ರಾಳನೊಂದೇಕಾಂಗಸಾಹಸ –
ಕೆಳಸಿ ಬಳಿಯಿಹ ತಂದೆತಾಯ್ಗಳ –
ನಗಲಿ ಮಾನಸ ಸರಸಿಯಲೆಗಳ –
ನಡುವೆ ತೇಲುತಿರೆ,
ಶೈಶಿರದ ಹಿಮವೇರಿ ಚಳಿಯಲಿ
ಹೆಪ್ಪುಗಡಲಾ ಸಲಿಲವದರಲಿ
ಸಿಲ್ಕಿಬಿಳ್ದ ಕಿಶೋರ ಹಂಸವು           ೪೫೦
ಹಾರಲಾರದೆ ಮೆಯ್ಯ ಮರೆಯುವ
ತೆರದಿ ತಿಂಗಳ ಸೊದೆಯ ಕಡಲಿನೊ –
ಳಾಳ್ದ ಮರಳಿನ ಮೇಲೆ ಮಲಗಿದ –
ನಲ್ಲಿ ಬಾಲಕನು!
ಬಾಗಿ ಮೊಳಕಾಲೂರಿ ದಶರಥ
ನೃಪತಿ ನಾಟಿದ ಕಣೆಯನೀಚೆಗೆ
ತೆಗೆಯಲೆಳಸಿದನಾದರಾಹಾ!
ಬಾಲದೇಹದ ಮಿಂಚುಗೆಂಪಿನ
ನೆತ್ತರೊರತೆಯು ಚಿಮ್ಮಿಯರಸನ
ಕೆನ್ನೆಗಳ ಚುಂಬಿಸಿತು ಬೆಚ್ಚಗೆ!         ೪೬೦
ನಿಮಿರಿ ನಿಂತನು ದೊರೆಯು ಕಂಪಿಸಿ
ತೆಗೆಯಲಾರದೆ ಕುವರನೆದೆಯನು
ಹೊಕ್ಕ ಕೂರ್ಗಣೆಯ!
ನೋಡುತಿರೆ ಶೋಣಿತವ ಭೂಪತಿ,
“ಪಾಪಿ ನೀ ನಡೆ! ಮುಟ್ಟದಿರು ನಡೆ!”
ಎಂಬ ತೆರದಲಿ ಮೂಕ ರಕ್ತವು
ಹರಿದುದೆದೆಯಿಂದ!
ದೊರೆಯು ಬಿಸುಸುಯ್ದಂತರಿಕ್ಷವ
ನೋಡಲದು “ನಡೆ ಪಾಪಿ” ಎಂದಿತು!
“ಪಾಪಿಗಳು ನಾವಲ್ಲ ನೋಡದಿ –      ೪೭೦
ರೆಮ್ಮ ನೋಡದಿರೆಂ”ದು ಚುಕ್ಕಿಗ –
ಳೆಲ್ಲ ಮಿಣುಕಿದುವು!
ಸಾಕ್ಷಿಯಾಗುವ ಭಯದಿ, ಜವದಲಿ
ಬಳಿಯ ಸರಯೂ ನದಿಯು ಹರಿದುದು!
ಮುಂದೆ, ಧರ್ಮನ ಮುಂದೆ ನಿಲ್ಲಲು
ಬೆದರಿ ಬಂಡೆಗಳೆಲ್ಲ ತಳೆದುವು
ಜಡತನದ ವೇಷವನು! ಬನಗಳು
ಪಾಪಿಯರಸನ ಗೊಡವೆ ತಮಗೇ –
ಕೆಂದು ನಿದ್ದೆಯ ನಟಿಸಿ ಮೌನದೊ –
ಳಿದ್ದುವಾಯೆಡೆ! ಗಾಳಿಯೊಯ್ಯನೆ    ೪೮೦
ಕೊಲೆಯ ಪಾಪದ ಸೋಂಕಿಗಂಜುತ
ಸುಳಿಯದಡಗಿದುದು!
ನನ್ನಿಯನು ಮರೆಮಾಡಿ ಠಕ್ಕಿಸಿ –
ದಿರುಳು ತಪ್ಪಿಸಿಕೊಂಡು ತೆರಳಿತು.
ನಾದಕೆಡೆಗೊಟ್ಟಾ ತರಂಗಿಣಿ
ಅರಿಯದರಂದದಲಿ ಹರಿದುದು:
ಸದ್ದನೊಯ್ದಾ ಮಾರುತನು ಸ –
ದ್ದಿಲ್ಲದಂತೆಯೆ ಮಾಯವಾದನು;
ನೃಪತಿಯೊಬ್ಬನೆ ಪಾಪಿಯಾದನೆ
ಧರ್ಮದೃಷ್ಟಿಯಲಿ!            ೪೯೦

೧೨
ಬೊಗಸೆಗೈಯಲಿ ಬಳಿಯ ಸರಯೂ
ನದಿಯ ನೀರನು ತಂದು ಚಿಮುಕಿಸಿ,
ಸುರಿವ ನೆತ್ತರವೊರಸಿ, ಬಿಜ್ಜಣ –
ವಿಕ್ಕಿದನು ತನ್ನುತ್ತರೀಯದ
ಸಿರಿಯ ಸೆರಗಿನಲಿ.
ಶಬ್ದವೇಧಿಯ ಕಲೆಯ ನಿಂದಿಸಿ,
ಮನದಿ ಬೇಂಟೆಯ ಹಳಿದು, ಶೋಕಿಸಿ,
ಭಕ್ತಿಯಲಿ ತನ್ನಿಷ್ಟದೈವವ
ನೆನೆದು “ಮಿಂಚಿದ ಕಜ್ಜವನು ಹಿಂ –
ತಿರುಗಿಸುವರಿಹರಾರು? ಬಲ್ಲಿರೆ?       ೫೦೦
ನೆಲವನೀಯುವೆ ನಿಮಗೆ! ದಶರಥ –
ತನವದೇಕೆಂ”ದ!
ರಘುಕುಲಾಧಿಪನಿಂತು ಬಿಜ್ಜಣ –
ವಿಕ್ಕುತಿರೆ ಮೈತಿಳಿದು ಬಾಲಕ –
ನುಸಿರನೆಳೆದನು: ತಂದೆತಾಯ್ಗಳ;
ಕಂಗಳನು ಚಲಿಸುತ್ತ ನೋಡಿದ –
ನವನಿಪಾಲನನು.
ನೆಚ್ಚುದಿಸಿ ಬಿಸುಸುಯ್ಯುತರಸನು:
“ಬಾಲ ನೀನಾರವನು? ನೋಡಿದ –  ೫೧೦
ರಮಲ ಮುನಿಗಳ ಕುವರನಂತಿಹೆ!
ಪರ್ಣಶಾಲೆಯದೆಲ್ಲಿ? ಕತ್ತಲೊ –
ಳಿಲ್ಲಿಗೈತಂದೇತಕೆನ್ನನು
ಪಾಪಕಿಳಿಸಿದೆ? ಮುದ್ದುಕುವರನೆ,
ಹೇಳು, ಹೆದರದೆ ಹೇಳು! ದಶರಥ
ನೃಪತಿ ನಾನೆಂ”ದ!
ಶೋಕವಾಣಿಯ ಕೇಳಿ ಬಾಲಕ –
ನೊರೆದನಿಂತೆಂದರಸನುಮ್ಮಳ –
ವಿಮ್ಮಡಿಸೆ, ನೋವಿನಲಿ ಗದ್ಗದ
ಕಂಠ ಗದಗದಿಸೆ:  ೫೨೦
“ಕೇಳು ದಶರಥ ನೃಪತಿ, ಪಿಂಗಳ
ಮುನಿವರನ ಮಗ ನಾನು. ಮುದುಕನು
ತಂದೆ, ಮುದುಕಿಯು ತಾಯಿ, ಅವರಿಗೆ
ಕಣ್ಣು ಕಿವಿ ಕಾಲೆದೆಯು ಜೀವಗ –
ಳನಿತು ನಾನಹೆ! ನಡೆಯಲಾರರು!
ನೋಡಲಾರರು! ಕೇಳಲಾರರು!
ಸಿಂಧುವೆಂಬುದು ನಾಮವೆನಗಿಹು –
ದವರ ಸೇವೆಯೆ ನನ್ನ ಪೂಜೆಯು!
ಪಿತೃಗಳೇಕಾದಶಿಯ ಉಪವಾ –
ಸದಲಿ ಬಳಲಿಹರೆಂದು ಸಲಿಲವ –     ೫೩೦
ನೊಯ್ಯಬಂದೆನು ನಿಶೆಯೊಳಿಲ್ಲಿಗೆ.
ಬಳಲಿ ಬಾಯಾರಿಹರು; ನನ್ನನೆ
ಕಾಯುವರು. ನೋಯುವರು ತಳುವಿದ –
ರಾನು. ಸಲಿಲವ ಕೊಂಡು ಬೇಗನೆ
ಹೋಗಿ ಬಾಯಾರಿಕೆಯ ನೀಗಿಸು!
ಕಡೆಯ ನಿನ್ನುಪಕಾರವೆನಗಿದು!
ನನ್ನ ಬಿಡು, ನಡೆ. ಬಳಿಯ ಕಣಿವೆಯ
ನಡುವೆ ಮರಗಳ ಕರಿಯ ನೆರಳಲಿ
ಪರ್ಣಶಾಲೆಯದಿಹುದು. ನಡೆ, ನಡೆ,
ತಂದೆತಾಯಿಗಳೊರಲುತಿರುವರು;  ೫೪೦
ತೆರಳಿ ಸಂತವಿಸು!”

೧೩
ಇಂತೊರೆದು ಮುನಿಸುತನು ಕಂಗಳ
ಮುಚ್ಚಿದನು; ದಿನಮಣಿಯು ಮುಳುಗಲು
ಬಿರಿದ ತಾವರೆ ದೀನ ದುಃಖದಿ
ಮುಗುಳುವಂದದಲಿ!
ಮುಗಿಲಿನಲಿ ಮೈದೋರಿ, ಮೋಹನ
ಮಧುರ ಮಹಿಮೆಯ ಮೆರೆದು, ಮರಳುವ
ಮಳೆಯ ಬಿಲ್ಲಿನೊಲು
ಜೀವವಡರಿತು ತನ್ನ ನಿಲಯಕೆ,
ತಾವರೆಯ ಸೆರೆಯಲ್ಲಿ ಸಿಲುಕಿದ       ೫೫೦
ದುಂಬಿ ಇನನುದಯದಲಿ ಮುಕ್ತಿಯ
ಹೊಂದಿ, ಪರಮಾನಂದದತಿಶಯ –
ದಿಂದ ಹಲ್ಲೆಯ ನೆನೆದು ಬೀಡಿಗೆ
ಹಾರುವಂದದಲಿ!
ಕಾಂತಿ ಮೊಗದಲಿ ಮಸುಳೆ, ಹರಿದಿಹ
ಕವನದಂದದಿ ತರಳನೊರಗಿರೆ,
ಮರಣ ಚಿಹ್ನೆಯನರಿತು ದಶರಥ
ನೃಪತಿ, ತನ್ನನು ಕೊಲೆಗೆ ನೂಂಕಿದ
ಬಿದಿಯನತಿ ಶೋಕದಲಿ ನಿಂದಿಸಿ,
ನಿಶ್ಚಯಿಸಿದನು ಮನದಿ ಸಲ್ಲಿಸೆ        ೫೬೦
ತನ್ನ ಕೂರ್ಗಣೆ ಬೇಳ್ದ ಬಾಲನ
ಕೊನೆಯ ಕೋರಿಕೆಯ.

ಮೋಹ ಮಿತಿಮೀರೊಡೆದ ನೆಚ್ಚನು
ಮರಳಿಯಾಲಿಂಗಿಸುವ ಕಾಮುಕ –
ನಂತೆ ಬಾಗುತ ನೆಗಹಿದನು ದಶ –
ರಥನು ನೆತ್ತರು ಸೋರುತಿರ್ದಾ
ಕೋಮಲಾಕೃತಿಯ!
ನೇಸರಿನ ಬಳಿಯರಸನಾ ಸಿಸು –
ಹೆಣವನೆತ್ತಿದ ಘೋರ ದೃಶ್ಯವ
ಕಂಡು ಕಂಪಿಸಿತಿರುಳು, ನಡುಗಿತು   ೫೭೦
ನದಿಯು, ಬೆದರಿತು ಬನವು, ಸೆಡೆತುದು
ಬನದ ಕೌಮುದಿಯು!

ನೆಗಹಿ ತರುಣನ, ದೊರೆಯು ಬಳಿಯಿಹ
ಸಲಿಲ ಕಲಶವ ಕೊಂಡು ಕೈಯಲಿ
ಮುಂದೆ ನಡೆದನು ಜವದ ಜವದಲಿ;
ಪುಣ್ಯಪುರುಷನ ಮುಡಿದು ಮೈಯಲಿ,
ಪಾಪ ಭಾರದಿ ಕುಸಿದು ಗುರುವಿನ
ಬಳಿಯನೈದುವೆ ಶಿಷ್ಯನಂದದಿ
ಬಳಿಗೆ ಪಿಂಗಳನ!

೧೪
ಮುತ್ತಿ ಬಹ ತಣ್ಗದಿರನಾಟೋ –        ೫೮೦
ಪವನು ಹಿಂಗಿಸೆ, ತಿಮಿರ ರಾಕ್ಷಸಿ
ಬನದ ರಕ್ಷಣೆಗಿಟ್ಟ ಪಹರೆಯ
ರಕ್ಕಸರ ಪಡೆಯಂತೆ ನಿಂತಾ
ಹೆಮ್ಮರಗಳೆಡೆಯಲ್ಲಿ ನುಸುಳುತ
ತೋರಿ ಮರೆಯಾಗಿ,
ಗಗನ ದುರ್ಗವ ಲಗ್ಗೆಯೇರಲು
ಕಿಕ್ಕಿರಿದ ಕಾಲಾಳುಗಳ ದಳ –
ದಂತೆ ಪರ್ವತ ಪಕ್ಷದೋರೆಯ
ಮುತ್ತಿ, ಮುಚ್ಚಿ, ಮುಸುಂಕಿ ಕವಿಯುತ,
ಹೆಜ್ಜೆ ಹೆಜ್ಜೆಗೆ ಹೆಣೆದುಕೊಂಡಿಹ         ೫೯೦
ಗುಲ್ಮಗಳ ನಡುಹೊಕ್ಕು ಹೊಮ್ಮುತ,
ತಡವುತೆಡುವುತ್ತ,
ದಿಣ್ಣೆಯೇರುತ ತಗ್ಗನಿಳಿಯುತ –
ಲೊಮ್ಮೆ, ಬೆಳಕಿನೊಳೊಮ್ಮೆ ನೆರಳಿನೊ
ಳೊಮ್ಮೆ, ಕಾಣುತಲೊಮ್ಮೆ ಕಾಣದೆ –
ಯೊಮ್ಮೆ, ತರಗೆಲೆಗಳಲಿ ಹಾರುತ
ಇನಕುಲೇಶನು ಮುಂದೆ ನಡೆದನು
ತನ್ನ ಸೂಡನು ತಾನೆ ಹುಡುಕುತ
ಮಸಣದಲಿ ತಿರುತಿರುಗಿ ಮೌನದಿ
ಬರಿದೆ ತೊಳಲುವ ಮಾಯದಿರುಳಿನ            ೬೦೦
ಮರಳಿನಂದದಲಿ!

೧೫
ಸುತ್ತ ನೋಡುತ ಪರ್ಣಶಾಲೆಯ –
ನರಸಿ ಬರುತಿರೆ ದೊರೆಯು ಕಂಡನು,
ಮರದ ಕರಿನೆರಳಲ್ಲಿ ದೂರದಿ,
ಬೊಮ್ಮಗಬ್ಬದೊಳುರಿಯುವೊಲ್ಮೆಯ
ಮಂಗಳಾರತಿಯಂತೆ ಮಿನುಗುವ
ಸೊಡರ ಕುಡಿಯನು. ಬಗೆಯು ಬೆಚ್ಚಿತು;
ಜನಪ ನಡುಗಿದನು!
ಅಲ್ಲಿ ಹಣತೆಯ ಸೊಡರಿನೆಡೆಯಲಿ,
ನಿಶೆಯೊಡನೆ ಮಾರಾಂತು ಬಳಲಿದ            ೬೧೦
ಬೆಳಕಿನಲಿ, ಮುದಿದವಸಿ ಪಿಂಗಳ –
ನವನ ಸಹಧರ್ಮಿಣಿಯ ಬಳಿಯಲಿ
ಮೆಲು ನುಡಿಯ ಮಾತುಗಳಲಿರ್ದನು,
ಬಣ್ಣದಲಿ ಬರೆದಿರುವ ದೂರದ
ಮಬ್ಬುಗನಸಂತೆ!
ಕಾಲ ಸಮೆದಿಹ ಮೆಯ್ಯ ಮುದುಕರು,
ಕಣ್ಣ ಬೆಳಕಳಿದಿರುವ ಹಳಬರು,
ಸದ್ದನಗಲಿದ ಕಿವಿಯ ವೃದ್ಧರು,
ಶಕ್ತಿ ಕುಂದಿದ ಗತಿಯ ಮುನಿಗಳು
ಹಸಿದು ಬಾಯಾರವರ ಕುವರನ      ೬೨೦
ಬರವ ಹಾರೈಸುತ್ತ, ತಳುವಿದ –
ನೇತಕೆಂಬುದನರಿಯಲಾರದೆ
ಹಿರಿಯ ಕಳವಳದಿಂದಲಿರ್ದರು
ಮಗನ ಮೋಹದಲಿ!
ಪರ್ಣಶಾಲೆಯ ಬಳಿಗೆ ಮೆಲ್ಲನೆ
ರಘುಕುಲೇಶನು ಬರಲು ಮುನಿಸತಿ
ತರಗೆಲೆಯ ಮರ್ಮರವನಾಲಿಸಿ,
ಹೆಜ್ಜೆ ಸಪ್ಪುಳವರಿತು, ಕುಂದಿದ
ಮಂದ ದೃಷ್ಟಿಯ ಬೀರಿ ಕಂದನ
ಕೂಗಿ ಕರೆದಳು: “ಮಗನೆ ಬಂದೆಯ?            ೬೩೦
ಎನ್ನ ಮುದ್ದಿನ ಕಂದ ಬಂದೆಯ?
ಎನ್ನ ಬಾಳಿನ ಕಣ್ಣೆ ಬಂದೆಯ?
ಎನ್ನ ಜೀವನದುಸಿರೆ ಬಾ, ಬಾ,
ನೀರ ತಂದೆಯ, ತಂದೆ? ಹೆತ್ತೊಡ –
ಲುರಿಯ ನಂದಿಸು; ನೊಂದ ತಾತನ
ಸಂತವಿಸು ಬಾ! ಕಂದ ಬಾ, ಬಾ!”
ಎಂದಳಾ ತಾಯಿ!
ಕೇಳಲದು ದಶರಥನು ಮಮ್ಮಲ
ಮರುಗಿದನು; ಕಂಬನಿಯ ಕರೆದನು;
ಹೊತ್ತ ಹೆಣವನು ಹಿಡಿದು ಕೈಯಲಿ,   ೬೪೦
ಜೀವವನು ಸೆಳೆದೊಯ್ವ ಸಾವಿನ
ತೆರದಿ ಮುನಿಗಳ ಪರ್ಣಶಾಲೆಯ
ಹೊಕ್ಕು ನಿಂತನು, ಧರ್ಮನೆದುರಲಿ
ತನ್ನ ಪಾಪವನೊಪ್ಪಿಕೊಳ್ಳುವ
ವೀರನಂದದಲಿ!
ಬೇಟೆಗಾರನು ಕೊಂದು ತಂದಿಹ
ಹರಿಣ ಶಿಶುವಿನ ತೆರದಿ ಸಿಂಧುವು
ದಶರಥನ ತೆಕ್ಕೆಯಲಿ ಸಿಲುಕಿರೆ
ರಕ್ತಪಂಕದಲಿ,
ಘೋರ ದೃಶ್ಯವ ಕಂಡು ನಡ ನಡ     ೬೫೦
ನಡುಗಿ ಹಾಯೆಂದೊರಲಿದನು ಮುನಿ;
ಚೀರಿದಳು ಮುನಿಸತಿಯು; ಜನಪನು
ಹೊತ್ತ ಕುವರನ ಕೆಂಪು ಕಾಯವ
ನೆಲದೊಳಿಳುಹಿದನು!
ಸಿಡಿಲ ಬಡಿತಕೆ ಹಳೆಯ ಹೆಮ್ಮರ
ತಿರೆಗುರುಳುವಂದದಲಿ ಮುನಿಸತಿ
ತನ್ನ ಕಂದನ ಮೇಲೆ ದೊಪ್ಪೆಂ –
ದುರುಳಿ ಬಿದ್ದಳು! ಮುನಿಯು ಜನಪನ
ನೋಡುತಿರೆ ಕೈಮುಗಿದು ದಶರಥ –
ನಾತಗಿಂತೆಂದ:   ೬೬೦
“ಕತ್ತಲಲಿ ಕಂಗಾಣದೆಸಗಿದ
ತಪ್ಪ ಮನ್ನಿಸು ದೇವ! ಕಂದನ
ಕೊಂದ ಪಾತಕಿ ನಾನು! ದಶರಥ –
ನೆಂಬರೆನ್ನನು! ಯೋಗದೃಷ್ಟಿಯೊ –
ಳಾದುದೆಲ್ಲವ ಬಲ್ಲೆ ನೀನೆಲೆ
ಗುರುವೆ! ನಿನಗಿನ್ನೇನನರುಹಲಿ?
ಮುಡಿಯಿಡುವೆ ನಿನ್ನಡಿಯೊಳೆನ್ನನು
ಕಾಯ್ದುಕೊಳ್ಳೈ” ಎನುತ ಬಿದ್ದನು,
ಪುಣ್ಯಕೆರಗುವ ಪಾಪದಂದದಿ,
ಋಷಿಯ ಚರಣದಲಿ!         ೬೭೦

೧೬
ಬಿದ್ದ ಭೂಪನ ತಲೆಯ ನೆಗಹುತ
ಶಾಂತ ವಾಣಿಯಲೆಂದನಾ ಮುನಿ:
“ಏಳು! ನೃಪತಿಯೆ ಏಳು! ಶಪಿಸೆನು
ನಿನ್ನನಾದರೆ ಕಾಲಗರ್ಭವ
ಹೊಕ್ಕ ದೃಷ್ಟಿಗೆ ತೋರುತಿದೆ: ನೀ –
ನಳಿವ ಸಮಯದಿ ನಿನ್ನ ಪುತ್ರರು
ಬಳಿಯೊಳಿರದೆ ವನಾಂತರದಿ ಸಂ –
ಚರಿಸುತಿರುವರು! ಸುತರನಗಲಿದ
ನೀನು ದುಃಖದಿ ಮಡಿವೆ! ಕರ್ಮದ
ಧರ್ಮ ಶೃಂಖಲೆಯಿದನು ಕಂಡೆನು   ೬೮೦
ದಿವ್ಯ ದೃಷ್ಟಿಯಲಿ!
ಕೇಳು ನುಡಿವೆನು, ಕಡೆಯ ಮಾತಿದು:
ಬಾಳಿನಳಲಿಗೆ ಶಾಂತಿಯೊಂದಿಹು –
ದೊಂದಿಹುದು ಬೇರಿಲ್ಲ: ಬದುಕಿದು,
ಸುಖವೊ ದುಃಖವೊ? ದೇವನೆಂಬುವ –
ನಮಿತ ಕರುಣಾಸಿಂಧುವಾತನ
ಸೃಷ್ಟಿಯಿದು; ತುದಿಯಲ್ಲಿ ಮಂಗಳ –
ವಪ್ಪುದಾತನ ಮುತ್ತು ಮಲಗಿಹು –
ದೆಲ್ಲರೆದೆಗಳ ಮೇಲೆ -ಎಂಬುದೆ
ನಿಜದ ನಂಬುಗೆಯು!”       ೬೯೦

೧೭
ಇಂತು ನುಡಿದಾ ಮುನಿಯು, ಕಂಗಳ
ಮುಚ್ಚಿ, ಯೋಗದ ದೀರ್ಘನಿದ್ರೆಯೊ –
ಳೈಕ್ಯವಾದನು! ದೊರೆಯು ಮಸಣದ
ಗಾಳಿಯಂದದಿ ನಿಂತನೊಬ್ಬನೆ
ಪರ್ಣಶಾಲೆಯಲಿ!
ನಿಶೆಯ ಮೌನವು ಹರಡಿತೆಲ್ಲೆಡೆ
ಅಲ್ಲಿ ಬನದಲಿ ಮಲಗಿ ನಲಿದುದು
ಮಧುರ ಮೋಹನ ಸಾಂದ್ರ ಸುಂದರ
ವಿಪಿನ ಚಂದ್ರಿಕೆಯು!