ಟಿ.ಕೆ.ವೇಣುಗೋಪಾಲದಾಸರು

ಜನನ : ೧೯೦೦ ರಲ್ಲಿ ತುಮಕೂರಿನಲ್ಲಿ

ಮನೆತನ : ವೈದಿಕ ಸಂಪ್ರದಾಯ ಹಾಗೂ ಕಥಾಕೀರ್ತನಕಾರರ ಮನೆತನ. ತಂದೆ ಮೂರ್ತಾಚಾರ್ಯರು ತಾಯಿ ಸರಸ್ವತಮ್ಮ ಕರಿಗಿರಿಯಾಚಾರ್ಯರಿಗೆ ದತ್ತು ಪುತ್ರರು. ಸೋದರ ಮಾವಂದಿರುಗಳಾದ ರಾಮದಾಸರು. ರಾಘವೇಂದ್ರದಾಸರು ಹಾಗೂ ವೆಂಕಟರಾಯದಾಸರು. ಅಣ್ಣ ವೆಂಕಣ್ಣದಾಸರು, ಮಗ ಟಿ.ವಿ. ಗುರುರಾಜದಾಸರು ಎಲ್ಲರೂ ಹರಿಕಥಾ ವಿದ್ವಾಂಸರುಗಳಾಗಿದ್ದವರು.

ಗುರುಪರಂಪರೆ : ಸೋದರ ಮಾವಂದಿರುಗಳ ಹರಿಕಥೆಗಳನ್ನು ಕೇಳಿ ಅದರಲ್ಲಿ ಆಸಕ್ತಿ ತಳೆದು ಅಣ್ಣ ವೆಂಕಣ್ಣದಾಸರಲ್ಲಿ ಕಥಾ ಕೀರ್ತನ ಕಲೆಯಲ್ಲಿ ಸಾಕಷ್ಟು ಶಿಕ್ಷಣ ಪಡೆದದ್ದೇ ಅಲ್ಲದೆ ಕೊಳ್ಳೇಗಾಲ ದಕ್ಷಿಣಾಮೂರ್ತಿಗಳಲ್ಲಿ ಸಂಗೀತವನ್ನು ತುಮಕೂರು ರಾಘವೇಂದ್ರಾಚಾರ್ಯರಲ್ಲಿ ಶಾಸ್ತ್ರಾಧ್ಯಾಯನವನ್ನು ಮಾಡಿದರು. ಹಾರ್ಮೋನಿಯಂ ನುಡಿಸುವುದರಲ್ಲೂ ಪರಿಣತಿ ಇತ್ತು.

ಕ್ಷೇತ್ರ ಸಾಧನೆ : ೧೯೨೪ ರಲ್ಲಿ ಅಂದರೆ ತಮ್ಮ ೨೩ನೆಯ ವಯಸ್ಸಿನಲ್ಲಿ ತುಮಕೂರಿನಲ್ಲಿ ಪ್ರಪ್ರಥಮ ರಂಗ ಪ್ರವೇಶ. ಅಂದಿನಿಂದ ಅವ್ಯಾಹತವಾಗಿ ತಮ್ಮ ಕೊನೆಯುಸಿರಿನ ತನಕ ಕಾರ್ಯಕ್ರಮಗಳನ್ನು ನೀಡುತ್ತಾ ಬಂದವರು. ಸುಮಾರು ೪೫ ವರ್ಷಗಳಿಗು ಮಿಕ್ಕಿ ಆಕಾಶವಾಣಿಯಲ್ಲಿ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ರಾಜ್ಯದ ಒಳಗೂ ಹೊರಗೂ ಪ್ರಮುಖವಾಗಿ ಮುಂಬೈ, ಚೆನ್ನೈ, ಆಂಧ್ರ ಪ್ರದೇಶಗಳಲ್ಲಿ ಕರ್ನಾಟಕ ಹರಿದಾಸ ಪರಂಪರೆಯನ್ನು ಎತ್ತಿ ಹಿಡಿದವರು. ಇವರದು ಒಂದು ರೀತಿಯಲ್ಲಿ ಸಂಪ್ರದಾಯ ಬದ್ಧ, ಶಾಸ್ತ್ರಾಧಾರಿತ ಕಥಾ ಕೀರ್ತನಗಳಾಗಿದ್ದು ರಂಜನೆಗಿಂತ ತತ್ವಕ್ಕೆ ಹೆಚ್ಚು ಒತ್ತು ನೀಡಿ ನಡೆಸುವ ಕೀರ್ತನ ಪದ್ಧತಿಯಾಗಿತ್ತು. ಅವರ ಜೀವಿತದಲ್ಲಿ ಸಾವಿರಾರು ಹರಿಕಥಾ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ದೂರದರ್ಶನ ಕೇಂದ್ರ ಬೆಂಗಳೂರಿನಲ್ಲಿ ಆರಂಭಿಸಿದ ದಿನಗಳಲ್ಲಿ ಇವರ ಸಂದರ್ಶನ ಕಥಾ ಕೀರ್ತನಗಳು ಪ್ರಸಾರವಾಗಿವೆ. ಇವರ ಇಡೀ ಕುಟುಂಬವೇ ಹರಿಕಥಾ ವಿದ್ವಾಂಸರಾಗಿದ್ದು ಕಥಾ ಕೀರ್ತನ ಕಲೆಯ ವಿಶ್ವವಿದ್ಯಾಲಯವಾಗಿತ್ತು. ಇವರ ಮಗ ಟಿ. ವಿ. ಗುರುರಾಜದಾಸರು, ಅಣ್ಣ ವೆಂಕಣ್ಣದಾಸರ ಮಕ್ಕಳಾದ ಟಿ.ವಿ. ಗೋಪಿನಾಥದಾಸರು, ಟಿ. ವಿ. ಜಯಸಿಂಹದಾಸರು, ಕರಿಗಿರಿರಾಯರು ಎಲ್ಲರೂ ಹರಿಕಥಾ ವಿದ್ವಾಂಸರಾಗಿ ಮೆರೆದವರು. ವೇಣ ಗೋಪಾಲದಾಸರು ಪರಂಪರಾನುಗತವಾಗಿ ಬಂದ ದಾಸ ಪಂಥವನ್ನೇ ಅನುಸರಿಸಿದರು. ಇವರು ಹರಿಕಥೆಗಳಿಗಾಗಿ ಬರೆದು ಸಿದ್ಧಪಡಿಸಿಕೊಂಡ ಟಿಪ್ಪಣಿಗಳು, ಹರಿಕಥಾ ಪ್ರಸಂಗಗಳು, ಆಯ್ದು ತೆಗೆದ ದಾಸರ ಪದಗಳು – ಉಗಾಭೋಗ – ಸುಳಾದಿಗಳು ಸುಮಾರು ಸಾವಿರ ಪುಟಗಳಾಗುವಷ್ಟು ಸಂಗ್ರಹ ಇವರ ಮನೆಯಲ್ಲಿದೆ. ಅಲ್ಲದೆ ಸನತ್ಸುಜಾತೀಯ, ಶ್ರೀ ವ್ಯಾಸರಾಯರು, ಶ್ರೀ ಪುರಂದರಾಸರು, ಶ್ರೀ ಜಗನ್ನಾಥದಾಸರು, ರಾಘವೇಂದ್ರ ವೈಶಿಷ್ಟ್ಯ, ಕನಕನ ಗುಟ್ಟು, ಬಿಂಬಗುರು – ಕಲ್ಪತರು ಶ್ರೀ ರಾಘವೇಂದ್ರ ತೀರ್ಥರು, ಶ್ರೀ ಮದ್ಭಾಗವತ, ಮಾಧ್ವ ನಿಘಂಟು ಮುಂತಾದ ಗ್ರಂಥಗಳನ್ನು ರಚಿಸಿ ಎಲ್ಲವೂ ಪ್ರಕಟಗೊಂಡಿವೆ.

ಪ್ರಶಸ್ತಿ – ಪುರಸ್ಕಾರಗಳು : ದಾಸರು ಯಾವ ರೀತಿಯ ಆಸೆ-ಆಮಿಸಗಳಿಗೆ ಒಳಪಟ್ಟವರಲ್ಲ ಆದರೂ ಅವರನ್ನು ಅರಸಿ ಬಂದ ಪ್ರಶಸ್ತಿ – ಪುರಸ್ಕಾರಗಳು ಅಪಾರ. ಮಂತ್ರಾಲಯ ಮಠಾಧೀಶರಾಗಿದ್ದ ಶ್ರೀ ಶ್ರೀ ಸುಮೀಂದ್ರ ತೀರ್ಥರಿಂದ, ವ್ಯಾಸರಾಯ ಮಠಾಧೀಶರಾಗಿದ್ದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರಿಂದ ಉಡುಪಿಯ ಶ್ರೀಗಳಾದ ವಿದ್ಯಾಮಾನ್ಯರು, ವಿಶ್ವೇಶ್ವರ ತೀರ್ಥರು ಮುಂತಾದ ಮಠಾಧೀಶರುಗಳಿಂದ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಹರಿಕಥಾಂಬುದಿ ಚಂದ್ರ, ಹರಿದಾಸ ರತ್ನ ದಾಸಸಾಹಿತ್ಯ ನಿಧಿ, ಕೀರ್ತನಾಲಂಕಾರ, ಕೀರ್ತನ ಕಂಠೀರವ ಮುಂತಾದ ಬಿರುದುಗಳೂ ಸಂದಿವೆ. ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು, ಕರ್ನಾಟಕ ಗಾನಕಾಲ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳಿಂದಲೂ ಗೌರವ ಸನ್ಮಾನಗಳಿಗೆ ಪಾತ್ರರಾದ ವೇಣುಗೋಪಾಲದಾಸರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೭೭-೭೮ ರಲ್ಲಿ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ.

ಸುಮಾರು ೯೬ ವರ್ಷಗಳ ಕಾಲ ಹರಿಯ ಸೇವೆಯಲ್ಲೇ ಹರಿದಾಸರಾಗಿ ಜೀವನ ಸವೆಸಿ ೧೯೬೬ ರಲ್ಲಿ ವೈಕುಂಠವಾಸಿಗಳಾದರು. ಕರ್ನಾಟಕ ಕೀರ್ತನ ಕ್ಷೇತ್ರದಲ್ಲಿ ವೇಣುಗೋಪಾಲದಾಸರ ಹೆಸರು ಇಂದಿಗೂ ಅಜರಾಮರ.