ಕನ್ನಡ ಜೈಮಿನಿ ಭಾರತವು ಸಂಸ್ಕೃತ ಜೈಮಿನಿ ಭಾರತದ ಅನುವಾದ. ಕಥಾವಸ್ತುವು ಬಹುಮಟ್ಟಿಗೆ ಮೂಲವನ್ನೇ ಅನುಸರಿಸಿದೆ. ಮಹರ್ಷಿ ಜೈಮಿನಿಯು ಜನಮೇಜಯ ಮಹಾರಾಜನಿಗೆ ಕಥೆಯನ್ನು ಹೇಳಿದಂತಿದೆ. ಕವಿಯ ಜನ್ಮಸ್ಥಳವಾದ ದೇವನೂರಿಗೆ ಸವಿಪವಾಗಿರುವ ಹಿರಿಯಮಗಳೂರು ಜನಮೇಜಯ ಸರ್ಪಯಾಗಮಾಡಿದ ಸ್ಥಳವೆಂಬ ಪ್ರತೀತಿ ಇದೆ. ಈ ಜೈಮಿನಿಯ ಅಶ್ವಮೇಧಪರ್ವದಲ್ಲಿ ಅಶ್ವಮೇಧದ ಕಥೆಯಲ್ಲಿ ಪದ್ಮಪುರಾಣಾಂತರ್ಗತ ರಾಮಾಶ್ವಮೇಧದ ಛಾಯೆ ಇದೆಯೆಂದು ವಿದ್ವಾಂಸರು ತರ್ಕಿಸಿದ್ದಾರೆ. ಮೂಲ ಸಂಸ್ಕೃತ ಜೈಮಿನಿಯಲ್ಲಿರುವ ನಕುಲೋಪಾಖ್ಯಾನವು ಕನ್ನಡದಲ್ಲಿ ಕಂಡು ಬರುವುದಿಲ್ಲ. ಮೂಲ ಸಂಸ್ಕೃತ ಕಾವ್ಯದಲ್ಲಿ ಇಲ್ಲದಿರುವ ಪುಂಡರೀಕನ ಹೆಸರು ಕನ್ನಡ ಜೈಮಿನಿಯಲ್ಲಿದೆ. “ಸಲೆಕೀರ್ತಿಯಿಂ ಪುಂಡರೀಕಾನಾಗಿ” (ಸಂ.೨೯,ಪ.೧೪) ಎಂದು ಹೇಳಿರುವುದು ಕಾಣಬರುತ್ತದೆ. ಈ ಪುಂಡರೀಕನ ಹೆಸರನ್ನು ಕ್ರಿ.ಶ. ೧೩೦೦ರಲ್ಲಿದ್ದ ಚೌಂಡರಸನೂ, ೧೫೩೦ರಲ್ಲಿದ್ದ ವಾದಿರಾಜರೂ, ೧೫೫೦ರಲ್ಲಿದ್ದ ಕನಕದಾಸರೂ ತಮ್ಮ ಗ್ರಂಥಗಳಲ್ಲಿ ಹೇಳಿರುತ್ತಾರೆ. ಈ ಪುಂಡರೀಕನು ಪಂಡರಪುರದ ಪಾಂಡುರಂಗನ ಭಕ್ತನೇ ಆಗಿರಬೇಕೆಂದು ತೋರುತ್ತದೆ. ಶ್ರೀ ಕೃಷ್ಣದೇವರಾಯನು ವಿಜಯನಗರದಲ್ಲಿ ವಿಜಯವಿಠಲ ದೇವಾಲಯವನ್ನು ಕಟ್ಟಿಸಿದಮೇಲೆ, ವ್ಯಾಸರಾಯರು, ವಾದಿರಾಜರು, ಪುರಂದರದಾಸರು ಮೊದಲಾದ ವೈಷ್ಣವ ಶಿಖಾಮಣಿಗಳ ಧರ್ಮಪ್ರಚಾರ ಕಾರ‍್ಯ ನಡೆದಮೇಲೆ ಪಾಂಡುರಂಗನ ಭಕ್ತನಾದ ಪುಂಡರೀಕನ ಪರಿಚಯವು ಕನ್ನಡಿಗರಿಗೆ ಹೆಚ್ಚಾಗಿ ಆಗಿರಬೇಕು.

ಕವಿಯು ವರ್ಣನೆಯಲ್ಲಿ ಅಲ್ಲದೆ ವಿಷಯ ನಿರೂಪಣೆಯಲ್ಲಿಯೂ ಸ್ವಾತಂತ್ರ್ಯ ವಹಿಸಿದ್ದಾನೆಂದು ತಿಳಿಯುತ್ತದೆ. ಮೂಲ ಸಂಸ್ಕೃತ ಪುರಾಣದಲ್ಲಿ ೬೮ ಅಧಯಗಳೂ ೫,೧೯೪ ಶ್ಲೋಕಗಳೂ ಇವೆ. ಕ್ರಿ.ಶ.೧೫೮೫ರಲ್ಲಿ ಲಿಖಿತವಾದ ಸಂಸ್ಕೃತ ಜೈಮಿನೀ ಭಾರತದ ಹಸ್ತಪ್ರತಿ ಸಿಕ್ಕಿದೆ. ಆಂಧ್ರ ಭಾಷೆಯಲ್ಲಿ ಪಿಲ್ಲಲ ಮರಿಪಿನ ವೀರಭದ್ರ ಕವಿಯು ೧೮೭೧ರಲ್ಲಿ ಪದ್ಯರೂಪದಿಂದ ಜೈಮಿನಿ ಭಾರತವನ್ನು ರಚಿಸಿದ್ದಾನೆ. ಇದನ್ನು ಮೂಲಸಂಸ್ಕೃತ ಜೈಮಿನಿ ಭಾರತದಿಂದ ಭಾಷಾಂತರ ಮಾಡಿದ್ದಾನೆ. ಮರಾಠಿಯಲ್ಲಿ ಶ್ರೀಧರ ಕವಿಯು ಕ್ರಿ.ಶ.೧೮೦೦ರಲ್ಲಿ ಜೈಮಿನಿ ಭಾರತವನ್ನು ಮೂಲ ಸಂಸ್ಕೃತದಿಂದ ಭಾಷಾಂತರಮಾಡಿದ್ದಾನೆಂದು ತಿಳಿದುಬರುತ್ತದೆ. ಸಂಸ್ಕೃತ ಜೈಮಿನಿ ರಚನೆಯ ಕಾಲ ಕ್ರಿ.ಪೂ.೧೦೦ ಆಗಿರಬಹುದೆಂದು ವಿದ್ವಾಂಸರು ತರ್ಕಿಸಿದ್ದಾರೆ. ಆದರೆ ಸಮುದ್ರಗುಪ್ತನ ಅಶ್ವಮೇಧಯಾಗದ ಪರಿಣಾಮ ಈ ಜೈಮಿನಿ ಭಾರತದಲ್ಲಿ ಕಾಣುವುದರಿಂದ ಸಂಸ್ಕೃತ ಜೈಮಿನಿಯು ಆತನ ಕಾಲಕ್ಕಿಂತ (ಕ್ರಿ.ಶ. ೩೨೬-೩೭೫) ಬಹುಮಟ್ಟಿಗೂ ಈಚಿನದಾಗಿರಬೇಕೆಂದು ಹೇಳಬೇಕಾಗುತ್ತದೆ.

ರೆವರೆಂಡ್ ಮೌಲಿಂಗನು ಕನ್ನಡ ಜೈಮಿನಿ ಭಾರತವನ್ನು ಜರ‍್ಮನ್ ಭಾಷೆಗೆ ಅನುವಾದ ಮಾಡಿದನೆಂದು ತಿಳಿದುಬಂದಿದೆ. [Lakshmica :- Erstes und zweises kapitel des altkanaresischen Jeimini Bharata einer uberarbeitnag des Acvamedha Parva des Mahabharata Ans den Kanareschen umgeschricben, wortlich ubrsetzt und mit Erlanternnugen Versehen Von Dr. Mogling . Zeitschrift der Dentsehen Morgenlandischen Gesellschaft, Vol. Xxxiv, 1870, pp. 309 and ff; Vol.xxv, 1871, pp. 22 and ff, Vol.xxvii. 1873, pp. 364 and ff.- Linguistic Survey of India. Vol. Iv] ಕನ್ನಡ ಜೈಮಿನಿಯು ಚೆನ್ನಬಸವ ಪುರಾಣದಂತೆಯೇ ಇಂಗ್ಲೀಷ್ ಭಾಷೆಗೆ ಕೂಡ ಭಾಷಾಂತರವಾದಂತೆ ತಿಳಿದುಬಂದಿದೆ. (?)

ಮೂಲ ಸಂಸ್ಕೃತ ಜೈಮಿನಿಯು ಪುರಾಣ ಧರ್ಮಪ್ರದವಾಗಿದೆ. ಲಕ್ಷ್ಮೀಶನ ಕಾವ್ಯವು ರಮಣೀಯ ಕಾವ್ಯಧರ‍್ಮದಿಂದ ಕಂಗೊಳಿಸುತ್ತಿದೆ. ಮೂಲದ ಕಥೆಗಳನ್ನೂ ಅಲ್ಲಿನ ಉಪದೇಶಗಳನ್ನೂ ಲಕ್ಷ್ಮೀಶನು ತನ್ನ ಕನ್ನಡಕಾವ್ಯಕ್ಕೆ ಹದವರಿತು ಬಳಸಿಕೊಂಡಿದ್ದಾನೆ. ಆದರೆ ಮೂಲಪುರಾಣದ ಶೈಥಿಲ್ಯವಾಗಲಿ, ನೀತಿ ಧರ‍್ಮಗಳ ಉಪದೇಶದ ಆವೇಶವಾಗಲಿ, ಭಾಷಾಶೈಲಿಯ ನೀರಸತ್ವವಾಗಲಿ ಕನ್ನಡ ಕಾವ್ಯದಲ್ಲಿಲ್ಲ. ಮೂಲಸಂಸ್ಕೃತ ಪುರಾಣದಲ್ಲಿರುವ ಕಥನ ಕೌಶಲ್ಯ, ಭಕ್ತಿಯ ಆವೇಶ, ಉಕ್ತಿಗಳ ಚಮತ್ಕಾರ, ಇವನ್ನು ಲಕ್ಷ್ಮೀಶನು ಅನುಸರಿಸಿದ್ದಾನೆ. ಅಲ್ಲದೆ ತನ್ನ ಕನ್ನಡ ಕಾವ್ಯದಲ್ಲಿ ರಸಪರವಶತೆಯನ್ನೂ, ಉಚಿತಪದಪ್ರಯೋಗವನ್ನೂ, ಷಟ್ಟದಗಳ ಝೇಂಕಾರವನ್ನೂ ಬೆರಸಿ ಕನ್ನಡಕಾವ್ಯವು ಮೂಲಕ್ಕಿಂತಲೂ ಹೆಚ್ಚು ಆಕರ್ಷಕವಾಗುವಂತೆ ಮಾಡಿದ್ದಾನೆ. ಮೂಲಪುರಾಣದ ವೈಷ್ಣವಾತಿರೇಕವು ಕನ್ನಡದಲ್ಲಿಲ್ಲ. ಕನ್ನಡ ಜೈಮಿನಿಯು ಹರಿಹರಭಕ್ತಿ ಸಮನ್ವಯದಿಂದ ಅದ್ವೈತದ ಸುಮಧುರ ದುಂದುಭಿಯನ್ನು ಮೊಳಗಿಸುತ್ತದೆ. ಮೂಲ ಕಥೆಗಳ ಸ್ವಾರಸ್ಯವು ಕೆಡದಂತೆ ಎಚ್ಚರದಿಂದ ಕವಿ ಚಿತ್ರಿಸಿದ್ದಾನೆ. ಸಂಸ್ಕೃತ ಜೈಮಿಗೂ ಕನ್ನಡ ಜೈಮಿನಿಗೂ ಇರುವ ಸಾಮ್ಯ-ವೈಷಮ್ಯಗಳನ್ನು ಕುರಿತು ಶ್ರೀ ಎ. ಅನಂತರಂಗಾಚಾರ್‌ರವರು, “ಲಕ್ಷ್ಮೀಶನಿಗೆ ಈಗ ದೊರೆತಿರುವ ಬಹುಭಾಗದ ಗೌರವಕ್ಕೆ ಮೂಲ ಗ್ರಂಥವೇ ಕಾರಣ. ಕನ್ನಡ ಜೈಮಿನಿ ಭಾರತದಲ್ಲಿ ತೋರಿಬರುವ ಕಥಾ ಸಂವಿಧನ ಕೌಶಲ, ಸಂಭಾಷಣೆಗಳ ಸ್ವಾರಸ್ಯ, ಹಾಸ್ಯರಸ ಪ್ರತಿಪಾದನೆ, -ಇದೆಲ್ಲವೂ ಮೂಲ ಗ್ರಂಥದಲ್ಲಿಯೇ ಸ್ಪಷ್ಟವಾಗಿದೆ. ಕನ್ನಡ ಗ್ರಂಥದ ಬಹುಭಾಗದ ಸಂಸ್ಕೃತ ಗ್ರಂಥದ ಅನುವಾದ ಮಾತ್ರವಾಗಿದೆ………. ಲಕ್ಷ್ಮೀಶನು ಮೂಲದಲ್ಲಿರುವ ವಿಷಯವನ್ನು ಹಿಗ್ಗಿಸಿ, ತಗ್ಗಿಸಿ ಕನ್ನಡದಲ್ಲಿ ಒಂದು ಮಹಾಕಾವ್ಯವನ್ನು ರಚಿಸಿದ್ದಾನೆ.

ಕಾವ್ಯದೃಷ್ಟಿಯಿಂದ ಅನಾವಶ್ಯಕವೆಂದು ತೋರಿದ ಕೆಲವು ಭಾಗಗಳನ್ನು ತೇಲಿಸಿದ್ದಾನೆ. ಮರುತ್ತನ ಯಜ್ಞವಿಷಯವನ್ನು ವ್ಯಾಸ ಭಾರತದಿಂದ ಶೇಖರಿಸಿದ್ದಾನೆ. ಋತು, ಪುಷ್ಪಾಪಚಯ, ಸೂರ‍್ಯ-ಚಂದ್ರರ ಉದಯಾಸ್ತಗಳು ಮೊದಲಾದ ವರ್ಣನೆಗಳನ್ನು ಹೊಸದಾಗಿ ಸೇರಿಸಿದ್ದಾನೆ.

ಅಲ್ಲಲ್ಲಿ ಸ್ತ್ರೀವರ್ಣನೆಯಿಂದ ಶೃಂಗಾರಪೂರ್ಣವಾಗಿಯೂ, ಶ್ರೀ ಕೃಷ್ಣ ಪ್ರಾರ್ಥನೆಗಳಿಂದ ಭಕ್ತಿರಸಭರಿತವಾಗಿಯೂ, ಯುದ್ಧ ವರ್ಣನೆಯಿಂದ ವೀರ‍್ಯಯುಕ್ತವಾಗಿಯೂ ಆಗುವಂತೆ ಮಾಡಿದ್ದಾನೆ.” ಎಂದು ಹೇಳಿರುತ್ತಾರೆ. *ಲಕ್ಷ್ಮೀಶ ಪುಟ ೮-೯.*

ಸುಪ್ರಸಿದ್ಧ ಸಾಹಿತಿಗಳಾಗಿದ್ದ ದಿವಂಗತ ಎಂ.ಆರ್.ಶ್ರೀನಿವಾಸ ಮೂರ್ತಿಗಳು ಸಂಸ್ಕೃತ ಹಾಗೂ ಕನ್ನಡ ಜೈಮಿನಿಗಳ ಹೋಲಿಕೆಯನ್ನು ಕುರಿತು ಹೇಳುತ್ತಾ, *ಸಂಸ್ಕೃತ ಜೈಮಿನಿಯಲ್ಲಿ ಮರುತ್ತರಾಯನ ಕಥೆ ವಿಸ್ತಾರವಾಗಿಲ್ಲ. ಬಹಳ ಸಂಕ್ಷೇಪವಾಗಿದೆಯೆಂದೇ ಹೇಳಬೇಕು. ಲಕ್ಷ್ಮೀಶನು ಇದನ್ನು ವಿಸ್ತಾರವಾಗಿ ಬರೆದಿರುವುದಲ್ಲದೆ-

ನಾರದನ ಬುದ್ಧಿಯಂ ಕೇಳ್ದು ಸಂತೋಷದಿಂ |
ಭೂರಮಣನಲ್ಲಿಂದೆ ಬೀಳ್ಕೊಂಡು ಶಶಿಮೌಳಿ |
ತಾರಕ ಬ್ರಹ್ಮೋಪದೇಶದಿಂ ಪ್ರಾಣಿಗಳ್ಗಾತ್ಮ ಸಾಯುಜ್ಯ ವಿವ ||
ಭೂರಿದುರಿತಂಗಳಂ ಕಂಡಮಾತ್ರದೊಳೆ ಸಂ |
ಹಾರಮಂ ಮಾಳ್ಪ ನಿಖಿಳ ಪ್ರಳಯ ಬಾಧೆಗ |
ಳ್ದೂರಮೆನಿಪ ವಿಮುಕ್ತ ಕಾಶಿ ಗೈತಂದು ವಿಶ್ವೇಶಂಗೆ ಪೊಡಮಟ್ಟನು ||

ಎಂಬ ಪದ್ಯ ಬರೆದಿದ್ದಾನೆ. ಇದು ಸಂಸ್ಕೃತ ಮೂಲದಲ್ಲಿಲ್ಲ. ಸ್ವಾಹಾದೇವಿಯನ್ನು ಅಗ್ನಿಗೆ ಮದುವೆಮಾಡಿಕೊಟ್ಟ ಸಂದರ್ಭ, ಸೌಭರಿ ಮುನಿಯ ಆಶ್ರಮ ವರ್ಣನೆ, ಸಂಸ್ಕೃತ ಮೂಲದಲ್ಲಿ ಸಾಮಾನ್ಯವಾಗಿದೆ. ಇವನ್ನೆಲ್ಲಾ ಲಕ್ಷ್ಮೀಶನು ಮಾರ‍್ಪಡಿಸಿದ್ದಾನೆ” ಎಂದು ಹೇಳಿದ್ದಾರೆ. (ಪ್ರಬುದ್ಧ ಕರ್ಣಾಟಕ ಸಂ.೧೫. ಸಂಚಿಕೆ ೨. ಪುಟ ೮೩-೮೪)

ಈ ಉಭಯ ವಿದ್ವಾಂಸರ ಅಭಿಪ್ರಾಯಗಳು ಕವಿ ಲಕ್ಷ್ಮೀಶನು ಸ್ವತಂತ್ರ ಪ್ರತಿಭೆಯುಳ್ಳವನೆಂಬುದಕ್ಕೂ ಕೇವಲ ಚರ್ವಿತ ಚರ್ವಣದ ಕವಿಯಲ್ಲವೆಂಬುದಕ್ಕೂ ನಿದರ್ಶನವೆನಿಸಿವೆ. ಅಲ್ಲದೆ ಮೂಲಸಂಸ್ಕೃತದ ಕಥೆಗೂ, ಕನ್ನಡ ಜೈಮಿನಿಗೂ ತಕ್ಕಷ್ಟು ವ್ಯತ್ಯಾಸಗಳಿವೆಯೆಂದು ತಿಳಿಯಲು ಸಹಾಯವೆನಿಸಿವೆ.