5. ಮಕರಾಕ್ಷನ ಕಾಳಗ

ಕಥಾಸಾರ:

(ವಾಲ್ಮೀಕಿ ಮುನಿಗಳು ಕುಶಲವರಿಗೆ ರಾಮಾಯಣದ ಕಥೆಯನ್ನು ಹೇಳುವುದಕ್ಕೆ ಆರಂಭಿಸುತ್ತಾರೆ)

ಶ್ರೀರಾಮ ಹಾಗೂ ಲಂಕೆಯ ದೈತ್ಯರ ಮಧ್ಯೆ ಯುದ್ಧ ಆರಂಭವಾಗಿ ಅನೇಕ ರಕ್ಕಸರು ಮಡಿದಿದ್ದಾರೆ.  ಗೆಲುವೆನು ರಾಮನ ಸೈನ್ಯವ ಎಂದು ಮುಂದೊತ್ತಿ ಬಂದ ಕುಂಭಕರ್ಣ, ಅತಿಕಾಯ, ಮುಂತಾದ ರಕ್ಕಸರ ದಂಡು ನಾಶವಾದದ್ದರಿಂದ ರಾವಣ ಅತೀವ ಕಳವಳಗೊಂಡಿರುವಾಗ ಇತ್ತ ರಾಮ ಲಕ್ಷ್ಮಣರು ಯುದ್ಧದ ಗೆಲುವಿನಿಂದ ಹರ್ಷ ಚಿತ್ತರಾಗಿದ್ದಾರೆ. ಮುಖ್ಯವಾಗಿ ಲಕ್ಷ್ಮಣನ ಬಾಣದಿಂದ ಅತಿಕಾಯ ಹತನಾದುದ್ದಕ್ಕೆ ಶ್ರೀರಾಮನು ತಮ್ಮನನ್ನು ಬಿಗಿದಪ್ಪಿ ಆಲಂಗಿಸಿ ಅಭಿನಂದಿಸುತ್ತಾನೆ.

ಇತ್ತ ರಾವಣ ಒಡ್ಡೋಲಗಕೊಟ್ಟು ತನಗಾದ ಹಾನಿಯಿಂದ ದುಃಖಿಸುತ್ತಿದ್ದಾಗ.  ಸುರರಾಯಜಿತು ಎನಿಸಿದ ಇಂದ್ರಾಜಿತು ತಂದೆಗೆರಗಿ ಬಹು ಪರಾಕ್ರಮದ ಮಾತಾಡುತ್ತಾನೆ. ತಂದೆಯಿಂದ ಅಪ್ಪಣೆ ಪಡೆದು ನಿಕುಂಭಿಳೆಗೆ ಬಂದು ಯಾಗವನ್ನು ಮಾಡಿ ಬ್ರಹ್ಮನನ್ನು ಒಲಿಸಿಕೊಂಡು ಅವನಿಂದ ವರ ಪಡೆದು ರಣರಂಗಕ್ಕೆ ಬರಲು ನದಿ ಉಕ್ಕಿತು, ಧೂಮಕೇತು ಮುಂತಾದ ಅನಿಷ್ಟಗಳು ಕಂಡವು. ಇವನ ಆರ್ಭಟವನ್ನು ಕಂಡು ವಿಭೀಷಣನು ಅವನ ಬರುವಿಕೆಯನ್ನು ಸುಗ್ರೀವನಿಗೆ ಅರುಹುತ್ತಾನೆ ಮತ್ತು ಇಂದ್ರಜಿತು ಮುಂದೆ ಬರದಂತೆ ತಡಯುತ್ತೇನೆ ಎಂದು ಗದೆಯನ್ನು ಕೊಳ್ಳುತ್ತಾನೆ. ಸುಗ್ರೀವ ಶ್ರೀರಾಮನಿಗೆ ಇಂದ್ರಜಿತುವಿನ ಬರುವಿಕೆಯನ್ನರುಹುತ್ತಾನೆ.  ಶ್ರೀ ರಾಮ ಮುಂದಿನ ಯುದ್ಧಕ್ಕೆ ಕಪಿಗಳೊಂದಿಗೆ ಸನ್ನದ್ಧನಾಗುತ್ತಾನೆ. ಇತ್ತ ಇಂದ್ರಜಿತುವಿಗೂ ವಿಭೀಷಣನಿಗೂ ಯುದ್ಧವಾಗಿ ಇಂದ್ರಜಿತು  ವಿಭೀಷಣನನ್ನು ಮರುತ ಪಾಷದಿಂದ ಬಂಧಿಸುತ್ತಾನೆ. ವಿಭೀಷಣ ಸೋಲಲು ಇಂದ್ರಜಿತು ಮುಂದೊತ್ತಿ ಬಂದು ಸುಗ್ರೀವ, ಹನುಮ ಮುಂತಾದವರಲ್ಲಿ ಯುದ್ಧ ಮಾಡುತ್ತಾನೆ. ಲಕ್ಷ್ಮಣನಲ್ಲೂ ಯುದ್ಧ ನಡೆದು ಲಕ್ಷ್ಮಣನೂ ಸೋಲಲು ರಾಮ ಇದಿರಾಗುತ್ತಾನೆ. ಬಳಿಕ ಘೋರ ಯುದ್ಧ ಕೈಗೊಂಡ ಇಂದ್ರಜಿತು ರಾಮನ ಸೇನೆಗೆ ಕಾಲರೂಪನಂತೆ ಕಾಡಿ ರಾಮ ಲಕ್ಷ್ಮಣರನ್ನೇ ಕಂಗೆಡಿಸಿ ವಿಜಯನಾಗುತ್ತಾನೆ. ರಾಮ ಲಕ್ಷ್ಮಣು ಮೂರ್ಛಾಗತರಾಗಿರುವಾಗ, ರಣರಂಗಕ್ಕೆ ರಾವಣ ಬಂದು ತನ್ನ ಮಗನ ಸಾಹಸಕ್ಕೆ ಮೆಚ್ಚಿ ಅವನನ್ನು ಕೊಂಡಾಡಿ ಪುಷ್ಪಕದಲ್ಲಿ ಕೂಡಿಸಿಕೊಂಡು ಅರಮನೆಗೆ ಹಿಂದಿರುಗುತ್ತಾನೆ.

ಇತ್ತ ವಿಭೀಷಣ ಮರುತ ಪಾಷವ ಹರಿದುಕೊಂಡು ಹನುಮ ಜಾಂಬವರೊಡಗೊಂಡು ರಣಧಾರುಣಿಯಲ್ಲಿ ಏಳುತ್ತ, ಬೀಳುತ್ತ ನಡೆಯುತ್ತಾರೆ. ಮೂರ್ಛಾಗತರಾದ ರಾಮ ಲಕ್ಷ್ಮಣರನ್ನು ಕಂಡು ಎಲ್ಲರೂ ನಾನಾ ಪರಿಯಲ್ಲಿ ಮರುಗುವರು. ಇವರನ್ನು ಸಂತೈಸುತ್ತ ಜಾಂಬವನು ಹನುಮನಿಗೆ ಚಂದ್ರದ್ರೋಣ ಪರ್ವತದಿಂದ ಸಂಜೀವಿನಿ ತರುವಂತೆ ಸೂಚಿಸಲು, ಹನುಮ ಅತ್ತ ಹಾರುತ್ತಾನೆ. ಇದನ್ನರಿತ ರಾವಣ ಕಾಲನೇಮಿಯನ್ನು ಕರೆದು ಹನುಮನ ಕೆಲಸ ಕೆಡಿಸಲು ಸೂಚಿಸುತ್ತಾನೆ. ಆಗ ಅವನ ಅಪೇಕ್ಷೆಯಂತೆ ಕಾಲನೇಮಿ, ಹನುಮನು ಬರುವ ಪರ್ವತದಲ್ಲಿ ಋಷಿಯಂತೆ ಕುಳಿತಿರಲು ಅದನ್ನರಿಯದ ಆಂಜನೇಯ ಅವನಿಗೆರಗಿ ತನಗಾದ ಆಯಾಸ ಪರಿಹಾರಕ್ಕೆ ನೀರು ಬೇಕೆಂದು ಬಯಸಲು, ಈ ಕಪಟ ರಾಕ್ಷಸ ಅವನಿಗೆ ವಿಷ ಸರೋವರಕ್ಕೆ ಕಳಿಸುವನು. ಅಲ್ಲಿರುವ ಮೊಸಳೆ ಅವನ ಕಾಲು ಹಿಡಿಯಲು, ಹನುಮ, ಅದರಿಂದ ಬಿಡಿಸಿಕೊಂಡಾಗ ಆ ಮೊಸಳೆಯ ಶಾಪ ವಿಮೋಚನೆಗೊಂಡು, ದೇವಕನ್ನೆಯಾಗಿ ಪ್ರತ್ಯಕ್ಷಳಾಗಿ ರಕ್ಕಸನ ಕಪಟವನ್ನು ತಿಳಿಸುತ್ತಾಳೆ. ಇದರಿಂದ ಪರಿಸ್ಥಿತಿ ಗ್ರಹಿಸಿದ ಹನುಮ ಕಾಲನೇಮಿಯನ್ನು ಕೊಂದು, ಸಂಜೀವನ ಪರ್ವತವನ್ನು ತಂದು ಜಾಂಬವರೆಡೆಗೆ ಬರಲು ಅಲ್ಲಿ ಸುಷೇಣ ರಾಮಲಕ್ಷ್ಮಣರಿಗೆ ಉಪಚಾರ ಮಾಡುತ್ತಾನೆ. ಶ್ರೀರಾಮ ಲಕ್ಷ್ಮಣರು ನಿದ್ದೆಯಿಂದ ಎಚ್ಚರವಾದಂತೆ ಎದ್ದು ಹನುಮ ಮುಂತಾದವರನ್ನು ಪ್ರಶಂಸಿಸಿ, ಯುದ್ಧಕ್ಕೆ ಸನ್ನದ್ಧರಾಗುತ್ತಾರೆ.

ರಾಮನ ಸಮರ ಸನ್ನಾಹಕ್ಕೆ ಬ್ರಹ್ಮ ಸಹ ಬೆದರಿ ರಾಮನನ್ನ ಸ್ತುತಿಸುತ್ತಾನೆ. ಸುಗ್ರೀವನ ಅಪೇಕ್ಷೆಯಂತೆ ಲಂಕಾ ಪಟ್ಟಣಕ್ಕೆ ಎಲ್ಲರೂ ಉರಿಕೊಳ್ಳಿಗಳನ್ನು ಹಿಡಿದು ಸಾಗುತ್ತಾರೆ. ರಕ್ಕಸರ ಪಟ್ಟಣ ಬುಗಿಲೆದ್ದು ಉರಿಯುತ್ತದೆ. ರಾವಣ ಅತಿ ಕೋಪದಿಂದ ತನ್ನವರನ್ನು ಕರೆದು ಯುದ್ಧಕ್ಕೆ ಸಿದ್ಧರಾಗಿ ಎನಲು, ಕುಂಭಕರ್ಣನ ಮಗನಲ್ಲಿ ಒಬ್ಬನಾದ ಅಗ್ನಿ ಸ್ಥಂಭನ ತಿಳಿದ ಕುಂಭಕ ಬಂದು ರಾವಣನಿಂದ ಅಪ್ಪಣೆ ಪಡೆದು ತನ್ನ ಬಲವನ್ನೇಲ್ಲ ಒಗ್ಗೂಡಿಸಿ ಕಲ್ಪದರುದ್ರನಂತೆ ಅಗ್ನಿ ಮಧ್ಯೆನಿಂತು ನಾನಾತರದಲ್ಲಿ ತನ್ನ ಶಕ್ತಿ ಮೆರೆಯುತ್ತಾ ಹೋರಾಡಿ ವಿರೋಧಿಗಳನ್ನು ದಣಿಸಿ ಲಂಕೆಗೆ ಹತ್ತಿದ ಉರಿಯನ್ನು ಆರಿಸುತ್ತಾನೆ. ಲಂಕೆಗೆ, ತಗುಲಿದ ಬೆಂಕಿಯನ್ನು ಆರಿಸಿ, ರಾವಣನಿಂದ ಪ್ರಶಂಸೆ ಪಡೆದು ಮುಂದಿನ ಯುದ್ಧಕ್ಕೆ ರಾವಣನಿಂದ ಮತ್ತು ತನ್ನ ತಾಯಿಂದ ಅಪ್ಪಣೆ ಪಡೆದು ತನ್ನ ಸಹೋದರರಾದ  ನಿಕುಂಭ, ಯೂಪಾಂಭಕ, ಶೋಣಿತಾಂಭಕ ಹೀಗೆ ಎಲ್ಲರನ್ನೂ ಒಳಗೊಂಡು ಯುದ್ಧಕ್ಕೆ ಬರುತ್ತಾನೆ. ಇತ್ತ ಕಪಿವೀರರೊಟ್ಟಿಗೆ ಹೋರಾಡುತ್ತಾ ಕುಂಭಕನ ಸಹೋದರರು ಈ ಯುದ್ಧದಲ್ಲಿ ಹತರಾಗುತ್ತಾರೆ. ಆದರೆ ಕುಂಭಕ ಹೋರಾಟ ಮುಂದುವರಿಸಿ ಎಲ್ಲರನ್ನೂ ಕಂಗೆಡಿಸುತ್ತಾನೆ. ಕೊನೆಗೆ ಸುಗ್ರೀವನಿಂದ ಹತನಾಗುತ್ತಾನೆ. ಕುಂಭ ನಿಕುಂಭರ ತಾಯಿ ವಜ್ರಜ್ವಾಲೆ ಪುತ್ರಶೋಕದಿಂದ ಅಳುತ್ತಾಳೆ.

ಇತ್ತ ಖರನ ಮಗ ಮಕರಾಕ್ಷ ರಾವಣನಿಂದ ಅಪ್ಪಣೆ ಪಡೆದು ಯುದ್ಧಕ್ಕೆ ಬರಲು, ವಿಭೀಷಣ ಇವನನ್ನ ರಾಮನಿಗೆ ಪರಿಚಯಿಸುವನು. ಪರಸ್ಪರ ಕಾಳಗ ಆರಂಭವಾಗಿ ಮಕರಾಕ್ಷನು, ಹನುಮ, ನೀಲ, ಅಂಗದ ಮುಂತಾದವರನ್ನು ಸೋಲಿಸುವನು. ಆಗ ಸುಗ್ರೀವ ಯುದ್ಧಕ್ಕೆ ಅನುವಾಗಿ ಮೂರ್ಛೆಗೊಳ್ಳಲು ಅವನ ತಲೆ ಕಡಿಯಲು ಮಕರಾಕ್ಷನು ಮುಂದಾದಾಗ ಜಾಂಬವ ತಡೆದು ನೀತಿ ಹೇಳುವನು. ಲಕ್ಷ್ಮಣನೂ ಮಕರಾಕ್ಷನೊಡನೆ ಹೋರಾಡಿ ಹಿಂತೆಗೆಯಲು ಮಕರಾಕ್ಷ ರಾಮನನ್ನೇ ಬಂದು ಎದುರಿಸುತ್ತಾನೆ. ರಾಮ ಮತ್ತು ಮಕರಾಕ್ಷರ ಮಧ್ಯೆ ಘೋರ ಕಾಳಗ ನಡೆದು ಮಕರಾಕ್ಷ ಮಡಿಯುತ್ತಾನೆ.

ಸುರರು ಸುಮವೃಷ್ಠಿ ಕರೆಯಲು ಎಲ್ಲ ರಕ್ಕಸರನ್ನು ಕೊಂದು ಶ್ರೀರಾಮ ವಿಭೀಷಣನಿಗೆ ಲಂಕೆಯ ಪಟ್ಟ ಕಟ್ಟಿ ಸೀತೆಯನ್ನು ಒಡಗೊಂಡು ಅಯೋಧ್ಯೆಗೆ ಬಂದು ಪಟ್ಟಾಭಿಷಕ್ತನಾಗಿ ಸುಗ್ರೀವ ಜಾಂಬವಾದಿಗಳನ್ನು ಮನ್ನಿಸಿ, ಉಪಚರಿಸಿ, ಇಳೆಯಪಾಲಕನಾಗಿ ಹರ್ಷದಿಂದ ರಾಜ್ಯವಾಳುತ್ತಿದ್ದನು, ಎಂದು ವಾಲ್ಮೀಕಿ ಮುನಿಗಳು ಕುಶಲವರಿಗೆ ಶ್ರೀರಾಮ ಕಥೆಯನ್ನು ಒರೆದರು.

ಮಕರಾಕ್ಷ ಕಾಳಗ ಸಮೀಕ್ಷೆ

ಮಕರಾಕ್ಷನ ಕಾಳಗವು ಹೇಳಹೊರಟಿದ್ದು ರಾಕ್ಷಸವೀರರ ಪರಮಾದ್ಭುತ ಸಾಹಸಗಳ ಕಥೆಯನ್ನು ಅವರನ್ನು ರಾಮಾಯಣದ ಕಥಾಪುರುಷರು ಸಂಹರಿಸುವಲ್ಲಿ ಮೆರೆದ ವಿಕ್ರಮವನ್ನು ಇಂದ್ರಜಿತು, ಕಾಲನೇಮಿ, ಕುಂಭ, ನಿಕುಂಭ, ಯೂಪಾಂಭಕ, ಶೋಣಿತಾಂಬಕ ಮುಂತಾದವರ ಸಾಲಿನಲ್ಲಿಯೇ ಮಕರಾಕ್ಷನ ವೃತ್ತಾಂತವು ಇದೆ. ಕವಿ ಸಾಕಷ್ಟು ಈಚಿನವನಾದುದರಿಂದ ಹಿಂದಿನವರು ಹೇಳದೇ ಬಿಟ್ಟ ಅಥವಾ ಸಂಕ್ಷಿಪ್ತವಾಗಿ ಹೇಳಿದ ಕಥಾನಕಗಳನ್ನು ವಿಸ್ತರಿಸುತ್ತಾನೆ. ಕೆಲವೊಂದು ಸನ್ನಿವೇಶಗಳನ್ನು ಸ್ವತಃ ಕಲ್ಪಿಸಿದ್ದಾನೆ. ಹಾಗಾಗಿ ಮಕರಾಕ್ಷ ಕಾಳಗದ ಕಥಾವಸ್ತುವು ಮಿಶ್ರವರ್ಗಕ್ಕೆ ಸೇರುತ್ತದೆ.

ಕವಿಯು ಸ್ವತಃ ಭಾಗವತ ರಾಗ ತಾಳಗಳ ಮೇಲೆ ಸಾಕಷ್ಟು ಪ್ರಭುತ್ವವಿದೆ. ಮಟ್ಟುಗಳ ವೈವಿಧ್ಯ – ವೈಶಿಷ್ಟ್ಯಗಳನ್ನು ಚೆನ್ನಾಗಿ ಬಲ್ಲವನು, ರಂಗದ ಅನುಭವ ಚೆನ್ನಾಗಿದೆ. ಸಂಸ್ಕೃತ – ಭಾಷೆಗಳ ಮೇಲೆ ಹಿಡಿತವಿದೆ, ವಿದ್ವತ್ತಿದೆ, ಕವಿತಾಶಕ್ತಿಯಿದೆ. ಇಷ್ಟೆಲ್ಲ ಇರುವ ಕವಿ ಕೃತಿರಚನೆಗೆ ಕೈಹಾಕಿದಾಗ ಉತ್ತಮವಾದ ಪ್ರಸಂಗವನ್ನು ನಿರೀಕ್ಷಿಸಿದರೆ ಅದು ಸ್ವಾಭಾವಿಕ. ಮಕರಾಕ್ಷನ ಕಾಳಗವನ್ನು ಆ ದೃಷ್ಟಿಯಿಂದ ಪರಿಶೀಲಿಸಿದರೆ ನಮಗೆ ನಿರಾಶೆಯಾಗುವುದಿಲ್ಲ. ಕವಿಯು ತನ್ನ ಪ್ರೌಢತೆಯನ್ನು ಮೆರೆಯುತ್ತಾನೆ.

ರಾಮನ ಬಾಣಗಳು ಇಂದ್ರಜಿತುವಿನ ಮುತ್ತಿದ ಬಗೆಯನ್ನು ಕೇಳಿ –

ಭಾಮಿನಿ

ಖಚರಿಯರ ಹೂಮುಡಿಗೆ ಸುರಪನ
ಶಚಿಯ ಮುಖ ಸಾರಸಕೆ ರುದ್ರನ
ಕಚದ ಗಂಗಾಂಬುಧಿಗೆ ಸರಸಿಜ ಭವನ ಗದ್ದುಗೆಗೆ
ಪ್ರಚುರ ದಿಗ್ವನಿತಾಬ್ಜ ಕುಟ್ಮಳ
ಕುಚಗಳಿಗೆ ಮೊಗಚುವ ಶಿಳೀಮುಖ
ನಿಚಯವೆನಲಡರಿದವು ರಾಮ ಶಿಳೀಮುಖಗಳವಗೆ
ಸೂರ್ಯಾಸ್ತವನ್ನು ವರ್ಣಿಸುವ ಪದ್ಯವನ್ನ ಕೇಳಿ

ವಾರ್ಧಕ

ತರುಣಕೇಳನ್ನಗಂ ಲೋಕದಿಲತಾಂಗಿಯರ್
ಪುರುಷನಪರಾಂಗದೊಳಗನ್ಯರಂ ನೆರೆವರತಿ
ಯಿರಬಹುದು ಕಣ್ಮುಂದೆ ಸತಿಕಮಲೆ ಚಾಂಚಲ್ಯೆ ಹಂಸ ಪುನ್ನಾಗದುಂಬಿ
ದೊರೆಗಳೊಡವೆರವಳಿವಳುರೆ ಮಿತ್ರಳಾದುದಂ
ಗುರುಮಂಗಳೋನ್ನತಿಯಪಳಿದು ದ್ವಿಜರಂದಗೆಡಿ
ಸಿರುವ ಕಾರಣಮಿನ್ನುಮಿವಳಲದಿರೆನೆಂಬತೆರದೊಳಿನ ಮರೆಯಾದನು

ಸೂರ್ಯೋದಯವನ್ನು ವರ್ಣಿಸುವ ಪದ್ಯ-

ವಾರ್ಧಕ

ಅನಕ ಶ್ರೀ ಚಕ್ರಿ ಹೊಕ್ಕುಳಕುಶೇಷಯದೆಲರ
ಘನಶೋಣ ಸುಪರಾಗರುಚಿರ ಜ್ವಾಲೆಯದಭ್ರ
ವನು ಬಿಂಬಿಸಿತೊ ಮೇಣು ಪೂರ್ವದಿಗಾಂಗನಾನನದ ಕುಂಕುಮರೇಖೆಯೋ
ಎನುವಂತೆ ಪೊಂಬಿಸಿಲಝಳದೊಡನೆ ಥಳಥಳಿಸು
ತಿನನೋಲಗಂಗೊಟ್ಟಡಾಗನೇಸರ್‌ಕುವರ
ನನುಮತಿಯೊಳಾಹವಾಂಗಣದಿ ಭುಲ್ಲೈಸಿದರು ಹನುಮಾದಿಭಟರತ್ತಲು

ಮುದ್ದಣನ ನಂತರದ ಕವಿಗಳು ಅವನನ್ನೇ ತಮ್ಮ ಮಾದರಿಯನ್ನಾಗಿ ಸ್ವೀಕರಿಸಿದರು.

ಅವನ ಪ್ರಭಾವದಿಂದ ಹೊರತಾದವರು ತುಂಬ ಅಪರೂಪ. ಆ ಸೆಳೆತವೇ ಅಂಥಾದ್ದು. ಈ ಕವಿಯೂ ಅದಕ್ಕೆ ಅಪವಾದವಲ್ಲ ಅನುಪ್ರಾಸ ಪ್ರಿಯ ಪದ್ಯ ನೋಡಿ-

ರಾಗ ಕಾಂಭೋದಿ ಝಂಪೆತಾಳ

ರಾಜಕುವರರು ಕೇಳಿ ರಾಜೇಂದ್ರ ರಾಘವನು

ರಾಜಿಸುವ ಕಪಿಗಳಾಳ್ತನದ
ರಾಜಸಕೆ ತಲೆದೂಗಿ ರಾಜತೇಜದೊಳುದಿನ
ರಾಜನಣುಗನ ನೋಡು ನುಡಿದ  

ರಾಗ ಅಖಂಡಮಾರವಿ ಏಕತಾಳ

ಆರ್ಬಣ್ಣಿಪರೆಲೆ ಯರ್ಭಕರಿರ ಕೇ
ಳರ್ಬುದ ಸಂಖ್ಯೆಯ ಸರ್ಭವನೌಕಸ
ರುರ್ಭರದಿಂವರ  ಕರ್ಬುರ ಕೋಟೆಯ
ಪರ್ಬಿದರೈಯಜಿ  ಗರ್ಭವು ನಡುಗೆ ಏನನೆಂಬೆ 

ಕವಿಯಲ್ಲಿ ಭಾವಸಮೃದ್ಧಿಗೆ ಕೊರತೆಯಿಲ್ಲ. ಮುನಿದು ಲೊೀಕವನೆಲ್ಲ ಸಂಹರಿಸಲು ಸಿದ್ಧನಾದ ರಾಮನನ್ನು ಸಂತೈಸಲು ಬ್ರಹ್ಮ ಬಂದು ಹೇಳುವ ಮಾತುಗಳನ್ನು ಕೇಳಿ-

ರಾಗ ಬೇಗಡೆ ಅಷ್ಟತಾಳ

ಶೂರವೀರೋದ್ಧಾರ ರಘುವರ್ಯ  ಬಿಡುಸಾಕುಕೋಪವಿ
ದಾರೊಡನೆ ಗಂಭೀರ ಘನಶೌರ್ಯ
ಮೇರುವೆತ್ತಣವೆತ್ತಜುಂಬಕ  ನಾರುಭಟೆತಾನೆತ್ತ ನಿನಗೀ
ಕ್ರೂರನಿಶಿಚರರಿದಿರೆ ಬಿಡುಖತಿ  ಮೀರಿಹೋದುದನೆಲ್ಲ ದೇವನೆ ಶೂರ    1

ಯಕ್ಷಗಾನದ ಪ್ರಸಂಗಗಳಲ್ಲಿ ಕೇವಲ ವರ್ಣನೆಗಳಿಗೆ ಸ್ಥಾನವಿಲ್ಲ. ಇದು ರಂಗದಲ್ಲಿ ಪ್ರಸಂಗಗಳನ್ನಾಡಿಸಿದ ಕವಿಗೆ ಚೆನ್ನಾಗಿ ಗೊತ್ತಿದೆ. ವರ್ಣನೆಗಳು ಕವಿತ್ವಶಕ್ತಿಯ ಪ್ರದರ್ಶನಕ್ಕೆ ಸೀಮಿತ. ರಂಗಕ್ಕೆ ಬೇಕಾದ ನಾಟಕೀಯ ದೃಶ್ಯಗಳು, ಸಂಭಾಷಣೆಗಳು ಇಲ್ಲದಿದ್ದರೆ ಸೊರಗುತ್ತದೆ. ಕವಿ ಪ್ರಸಂಗವನ್ನ ಪುಷ್ಟಿಗೊಳಿಸಲು ಅಗತ್ಯವಾದ ಅಂಶಗಳನ್ನು ತುಂಬಲು ಮರೆಯುವುದಿಲ್ಲ. ಒಂದೊಂದು ಸನ್ನಿವೇಶದಲ್ಲೂ ವಿಪುಲವಾದ ಸಂಭಾಷಣೆಗಳಿವೆ. ರಾಮ-ಮಕರಾಕ್ಷರ ಸಂಭಾಷಣೆಯಂತೂ ಸಂಪೂರ್ಣ ರಾಮಾಯಣದ ವಿಮರ್ಶೆಯೇ ಆಗಿದೆ. ಮಕರಾಕ್ಷನ ಆಕ್ಷೇಪಗಳು ಮತ್ತು ರಾಮನ ಉತ್ತರಗಳು ರಾಮಾಯಣಕ್ಕೆ ಬರೆದ ಭಾಷ್ಯವೆನಿಸುತ್ತದೆ. ಇನ್ನಿತರ ಸಂದರ್ಭಗಳಲ್ಲಿಯೂ ಸಂಭಾಷಣೆಗಳಿಗೆ ಸಾಕಷ್ಟು ಸಾಮಗ್ರಿಗಳನ್ನು ಒದಗಿಸಿದ್ದಾನೆ.

ಜತ್ತಿ ಈಶ್ವರ ಭಾಗವತರ ಈ ಕೃತಿಯಲ್ಲಿ ಭಾಗವತರು ಇನ್ನುಳಿದ ಕೆಲವು ಕೃತಿಗಳಿಂದ ಪ್ರಭಾವಿತರಾಗಿದ್ದಾರೆ ಎಂದು ನನ್ನ ಅನಿಸಿಕೆ. ಉದಾಹರಣೆ

ರಾಗ ನವರೋಜ ಏಕತಾಳ

ಇದಕೋರಥ ಬಲಹಯವ  ಮ  ತ್ತಿದಕೋ ಶರಾಸನ ಶರವ ॥(ಮಕರಾಕ್ಷ ಕಾಳಗ)

ಭೈರವಿ ಏಕತಾಳ

ಇದೆಯಾವಾಹನ ನೋಡು  ಮತ್ತಿದೆಯಾಸನ ದಯಮಾಡು ॥(ಅತಿಕಾಯಾ ಕಾಳಗ)

ರಾಗ ಮಾರವಿ ಏಕತಾಳ

ಆಗಲೆ ಕಲಿಯೂಪಂಬಕರಣಕನು  ವಾಗುತ ಭರದಿಂದ ॥
ಬೇಗದಿರಥವನು ಹಾರಿಸುತವನೆಡೆ  ಭಾಗದಿನೆರೆನಿಂದ ॥

ರಾಗ ಮಾರವಿ ಏಕತಾಳ

ಆಗಸುಧನ್ವನು ವೇಗದಿ ರಣಕನು  ವಾಗುತ ಮುದದಿಂದ ॥
ಭಾಗುತ ಜನನಿಗೆ ವಂದಿಸಿ ವಿನಮಿತ  ನಾಗುತಲಿತೆಂದಾ ॥(ಸುಧನ್ವ ಕಾಳಗ)

ನಿಕುಂಬೆಳೆಯಲ್ಲಿ ಬ್ರಹ್ಮನನ್ನು ಒಲಿಸಿಕೊಳ್ಳಲು ಇಂದ್ರಜಿತು ಮಾಂಸದ ಚರುವನ್ನು ಸಮರ್ಪಿಸುವುದು,  ಅಷ್ಟು ಔಚಿತ್ಯವಾಗಲಾರದೆನೋ ಎಂದೆನಿಸುತ್ತದೆ.

ಆದರೂ, ಮಕರಾಕ್ಷ ಕಾಳಗ ಒಂದು ಪ್ರೌಢವಾದ ಕೃತಿ. ಭಾಷಾಪ್ರಯೋಗದ ಸಂದರ್ಭದಲ್ಲಿ ಸಂಸ್ಕೃತ ಪದಗಳ ಬಳಕೆ ಹೆಚ್ಚು. ಕೆಲವು ಅಪರೂಪದ ಪದಗಳನ್ನು ಕವಿ ಬಳಸಿ ಕಂಗೆಡಿಸುವುದೂ ಉಂಟು. ಆದರೆ ಅವು ಶ್ರವ್ಯ ಭಾಗದಲ್ಲಿ ಪ್ರಯುಕ್ತವಾಗಿರುವುದು ಕವಿಯ ರಂಗಪ್ರಜ್ಞೆಗೆ ಸಾಕ್ಷಿ. ಈ ಪ್ರಸಂಗದ ಬಗೆಗೆ ರಾಷ್ಟ್ರಕವಿ ಎಂ. ಗೋವಿಂದ ಪೈಗಳು ಹೇಳುತ್ತಾರೆ – ಈ ಪ್ರಬಂಧ ಬಹಳ ಚೆನ್ನಾಗಿದೆ. ಓದಿ ಮೆಚ್ಚತಕ್ಕಂತಿದೆ, ಹಾಡಿ ಕೇಳತಕ್ಕಂತಿದೆ.  ಆಡಿ ನೋಡತಕ್ಕಂತಿದೆ  ಈ ಅಭಿಪ್ರಾಯವನ್ನು ಅನುಮೋದಿಸಬಹುದು.

ಕವಿ ಪರಿಚಯ :

ಜತ್ತಿ ಈಶ್ವರ ಭಾಗವತರು (1872-1945)

ಗ್ರಂಥ ಕರ್ತೃಗಳಾದ ಶ್ರೀ ಜತ್ತಿ ಈಶ್ವರ ಭಾಗವತರು ಕ್ರಿ.ಶ. 1872ನೆಯ ಇಸವಿ ಅಗೋಸ್ತು ತಿಂಗಳಲ್ಲಿ ಕಾಸರಗೋಡು ಬಾಯಾರು ಗ್ರಾಮದ ಜತ್ತಿ ಎಂಬಲ್ಲಿ ಕೃಷ್ಣ ಭಟ್ಟ ಮತ್ತು ಗೌರಮ್ಮ ಎಂಬವರ ಏಕಮಾತ್ರ ಪುತ್ರನಾಗಿ ಜನ್ಮವೆತ್ತಿದರು. ನಿರ್ಧನಿಕರಾದರೂ ಕಲಾಪ್ರೇಮಿಗಳಾದ ಆ ತಂದೆ ತಾಯಿಯವರಿಂದ ಪೋಷಿತರಾಗಿ ವಿದ್ಯಾಭ್ಯಾಸ ಪಡೆದು ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿ ವರಾಹ ಚರಿತ್ರೆ ಎಂಬ ಯಕ್ಷಗಾನ ಗ್ರಂಥವನ್ನು ರಚಿಸಿದರು. ಮುಂದೆ ಜೀವನ ನಿರ್ವಹಣೆಗಾಗಿ ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ  ಸರ್ವೇ ಉದ್ಯೋಗಕ್ಕೆ ಸೇರಿ, ಆಮೇಲೆ ಇಪ್ಪತ್ತೈದನೆಯ ವಯಸ್ಸಿನಲ್ಲಿ ಮಂಡಕೋಲು ಗ್ರಾಮದ ಶ್ಯಾನುಭೋಗರಾಗಿ ಕೆಲಸ ಮಾಡಿದರು. ಅದೇ ವರ್ಷ ಸರಸ್ವತಿ ಎಂಬವರೊಡನೆ ವಿವಾಹವಾದರು.

ಯಕ್ಷಗಾನ ಕೃತಿರಚನೆಯಲ್ಲಿಯೂ ಭಾಗವತಿಕೆಯಲ್ಲಿಯೂ ವಿಶೇಷ ಅಭಿರುಚಿಯಿದ್ದ ಕಾರಣ 1902ರಲ್ಲಿ ಶ್ಯಾನುಭಾಗ ಉದ್ಯೋಗವನ್ನು ಬಿಟ್ಟು ಯಕ್ಷಗಾನ ಮೇಳಗಳಲ್ಲಿ ಭಾಗವತರಾಗಿಯೂ, ಗ್ರಂಥಕರ್ತರಾಗಿಯೂ, ಹರಿಕಥಾ ವೃತಿಯಲ್ಲೂ ತನ್ನ ಶೇಷಾಯುಷ್ಯವನ್ನು ಕಳೆದರು. ಆಗ ಪ್ರಸಿದ್ಧ ಮೇಳಗಳಾಗಿದ್ದ  ಇಚ್ಲಂಪಾಡಿ, ಕೂಡ್ಲು, ಕಟೀಲು, ದೆಕ್ಕೆತೋಡಿ ಇಂತಹ ಮೇಳಗಳಲ್ಲಿ ಭಾಗವತಿಕೆ ವೃತ್ತಿಯನ್ನು ನೆರವೇರಿಸುತ್ತಿದ್ದು, ತನ್ಮಧ್ಯೆ, ಮಕರಾಕ್ಷನ ಕಾಳಗ, ಸಂಪೂರ್ಣ ರಾಮಾಯಣ, ಕೇತಕೀವಿಲಾಸ, ನಂದನೀ ವಿಲಾಸ, ಅಂಜನಾವಿಲಾಸ, ಮದನಮಂಜರೀ ಕಲ್ಯಾಣ, ಸತಿ ಸುಲೋಚನ, ಸೂರ್ಯ ಕಾಂತಿಕಲ್ಯಾಣಗಳೆಂಬ ಯಕ್ಷಗಾನ ಪ್ರಸಂಗಗಳನ್ನೂ ಧರ್ಮಪಾಲ ಚರಿತ್ರೆ, ತಾರಾ ವಿಲಾಸ, ಚಂಡಕಿರಾತ, ಗಜೇಂದ್ರಮೋಕ್ಷ, ಪಾರಿಜಾತ, ಕೀರ್ತನಾತರಂಗ, ತುಳು ಕೀರ್ತನಾಮಾಲೆ ಎಂಬಿತ್ಯಾದಿ ಹಲವಾರು ಹರಿಕಥೋಪಯೋಗಿ ಗ್ರಂಥಗಳನ್ನೂ ಬರೆದರು. ಇವುಗಳಲ್ಲಿ ಕೆಲವು ಅವರ ಜೀವಮಾನ ಕಾಲದಲ್ಲಿ, ಎಂದರೆ ಕ್ರಿ.ಶ. 1938ನೇ ಇಸವಿಯಲ್ಲಿಯೇ ಮುದ್ರಿತವಾಗಿ ಜನಪ್ರಿಯವಾಗಿವೆ. ಇನ್ನೆಷ್ಟೋ ಗ್ರಂಥಗಳು ಮುದ್ರಣವಾಗಲು ಬಾಕಿಯುಳಿದಿವೆಯಂತೆ. ಕ್ರಿ.ಶ.1945ನೇ ಇಸವಿ ಜೂನ್ ತಿಂಗಳ 30ರಲ್ಲಿ ಅವರು ಇಹಲೋಕವನ್ನು ತ್ಯಜಿಸಿದರು.

ಜತ್ತಿ ಈಶ್ವರ ಭಾಗವತರು ಕಳೆದ ಶತಮಾನದ ಕೊನೆಗೆ ಮತ್ತು ಈ ಶತಮಾನದ ಪೂರ್ವಾರ್ಧದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾಗಿದ್ದರು ; ಭಾಗವತರಾಗಿಯೂ ವಿಶಿಷ್ಟ ವ್ಯಕ್ತಿಯಾದವರು. ಏಕೆಂದರೆ ಭಾಗವತಿಕೆ ಮಾತ್ರವಲ್ಲದೆ ಪ್ರಸಂಗರಚನೆ ಮತ್ತು ಹರಿಕಥೆ ಈ ಕ್ಷೇತ್ರಗಳಲ್ಲೂ ಸಾಧನೆ ಮಾಡಿದರು. ಜತ್ತಿ ಭಾಗವತರ ಬಾಲ್ಯದಲ್ಲಿ ಬಾಯಾರು ಪರಿಸರದ ಐಗಳ ಮಠಕ್ಕೆ ಪಣಂಬೂರಿನ ನಾರ್ಣಪ್ಪ ಎಂಬುವರು ಉಪಧ್ಯಾಯರಾಗಿ ಬಂದರೆಂದೂ ಅವರು ಕವಿಗಳೂ ಹರಿದಾಸರೂ ಆಗಿದ್ದುದರಿಂದ ಇವರು ಅವರಿಂದಲೇ ಪ್ರೇರಣೆ ಪಡೆದು ಕವಿತಾರಚನೆ ಮತ್ತು ಹರಿಕಥೆಗೆ ತೊಡಗಿದರೆಂದೂ ತಿಳಿದುಬರುತ್ತದೆ. ತೊರವೆ ರಾಮಾಯಣ, ಗದುಗಿನ ಭಾರತ, ಜೈಮಿನಿ ಭಾರತ, ಕನ್ನಡ ಭಾಗವತ ಮುಂತಾದುವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದ ಜತ್ತಿ ಭಾಗವತರು ಯಕ್ಷಗಾನ ಭಾಗವತರಿಗೆ ಅಪೂರ್ವವೆಂಬಂತೆ ಹಳಗನ್ನಡ ಕಾವ್ಯಗಳನ್ನು ಅಭ್ಯಾಸ ಮಾಡಿದ್ದರು. ಮುಖ್ಯವಾಗಿ ಕರ್ಣಾಟಕ ಕಾದಂಬರಿ, ಜಗನ್ನಾಥ ವಿಜಯ, ಶಬರ ಶಂಕರ ವಿಲಾಸ – ಮೊದಲಾದ ಕೃತಿಗಳು ಅವರಿಗೆ ಪ್ರಿಯವಾಗಿದ್ದವು.

ಹರಿಕಥೋಪಯೋಗಿಯಾದ ಕೀರ್ತನ ಗ್ರಂಥಗಳನ್ನು ಬರೆದು ಪ್ರಕಟಿಸಿದ ಮೊದಲಿಗರಲ್ಲಿ ಜತ್ತಿ ಭಾಗವತರೊಬ್ಬರೆಂದು ಉಲ್ಲೇಖಿಸಲೇ ಬೇಕು. ಅವರ ಹರಿಕಥಾ ಸಾಹಿತ್ಯವು ಯಕ್ಷಗಾನದ ಮಾದರಿಯಲ್ಲೇ ಇದೆ. ಅವರ ಗುರುಗಳ ಹರಿಕಥಾ ಮಾರ್ಗವೂ ಹೀಗೆಯೇ ಇತ್ತೆಂದು ತಿಳಿಯುತ್ತದೆ. ಭಾವತಾಳಗಳಿಗನುಗುಣವಾಗಿ ಕುಣಿದು ಹರಿಕಥೆ ಮಾಡುತ್ತಿದ್ದ ಪದ್ಧತಿ ಜತ್ತಿಯವರದೆಂದೂ ತಿಳಿದು ಬರುತ್ತದೆ. ಆಶುಕವಿಗಳಾಗಿದ್ದು ಸಂದರ್ಭಕ್ಕೆ ಬೇಕಾದ ಪದ್ಯಗಳನ್ನು ಅಲ್ಲಲ್ಲೇ ಕಟ್ಟಿ ಹಾಡುತ್ತಿದ್ದರಂತೆ. ಯಕ್ಷಗಾನದಲ್ಲೂ ಹರಿಕಥೆಯಲ್ಲೂ ಈ ರೀತಿ ಆಶುಪದ್ಯ ರಚನೆ ಮಾಡುತ್ತಿದ್ದರು. ಎಂದೂ ಪುಸ್ತಕ ನೋಡಿ ಭಾಗವತಿಕೆ ಮಾಡುತ್ತಿರಲಿಲ್ಲ ಮತ್ತು ಆ ಕಾಲದಲ್ಲಿ ಹಿಮ್ಮೇಳದವರು ನಿಂತುಕೊಂಡೇ ಭಾಗವತಿಕೆ ಮಾಡುವ ಪದ್ಧತಿಯಿದ್ದುದರಿಂದ ಪುಸ್ತಕ ನೋಡಿಕೊಂಡು ಕಂಠಪಾಠವಿಲ್ಲದ ಪ್ರಸಂಗಗಳನ್ನು ಆಟವಡಿಸುವ ಸಾಧ್ಯತೆಗಳಿದ್ದಿಲ್ಲ. ಆಟದಲ್ಲಿಯೂ ಮೊದಲಿಗೆ ಕಥಾಸಾರ ವಿವರವನ್ನು ಜತ್ತಿ ಭಾಗವತರು ಮಾಡುತ್ತಿದ್ದರಂತೆ.

ಜತ್ತಿ ಭಾಗವತರು ತೆಂಕುತಿಟ್ಟಿನ ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರಿಗಿಂತ ಹಿರಿಯರು. ಜತ್ತಿ ಭಾಗವತರಿಂದಲೇ ಬಲಿಪರು ಪ್ರಸಂಗ ರಚನೆಗೆ ಉತ್ತೇಜನ ಪಡೆದವರೆಂದೂ ಹೇಳಲಾಗಿದೆ. ಜತ್ತಿ ಭಾಗವತರು ಹೊಸ ಕಾಲದಲ್ಲಿ ತುಳು ಕೀರ್ತನೆಗಳನ್ನು ರಚಿಸಿದವರಲ್ಲಿ ಬಹುಶಃ ಮೊದಲಿಗರು. ತುಳು ಕೀರ್ತನಮಾಲೆ ಸಹಿತ ಎಂಟು ಹರಿಕಥಾ ಸಾಹಿತ್ಯ ಕೃತಿಗಳನ್ನೂ 13 ಯಕ್ಷಗಾನ ಕೃತಿಗಳನ್ನು ಜತ್ತಿ ಭಾಗವತರು ಬರೆದಿರುವುದನ್ನು ಶ್ರೀ ಸುಬ್ಬಣ್ಣ ರೈ ಅವರು ಗುರುತಿಸಿ ಪಟ್ಟಿ ಮಾಡಿದ್ದಾರೆ. ಅವರು ಕುಶಲವರ ಕಾಳಗವನ್ನೂ ಬರೆದಿರುವುದಾಗಿಯೂ ಈ ಪ್ರಸಂಗವನ್ನು ತಾನು ನೋಡಿರುವದಾಗಿಯೂ ಪ್ರೊ.ಟಿ. ಕೇಶವ ಭಟ್ಟರು ತಿಳಿಸಿರುತ್ತಾರೆ. ಅವರ ಎಷ್ಟೋ ಕೃತಿಗಳು ಅನುಪಲಬ್ಧವಾಗಿವೆ.

ಜತ್ತಿ ಈಶ್ವರ ಭಾಗವತರ ಸಮಕಾಲೀನರಾದ ಇನ್ನೊಬ್ಬ ಯಕ್ಷಗಾನ ಕವಿ, ಕವಿಭಟ್ಟರೆಂದೇ ಪ್ರಸಿದ್ಧರಾಗಿದ್ದ ಕನ್ಯಾನ ವೆಂಕಟರಮಣ ಭಟ್ಟರು. ಇವರು ಜತ್ತಿ ಭಾಗವತರಿಗಿಂತ ಸ್ವಲ್ಪ ಕಿರಿಯರು. ಇವರಿಬ್ಬರೂ ಆಶುಕವಿಗಳಾದುದರಿಂದ ಆನೆಕಲ್ಲಿನಲ್ಲಿ ನಾರಾಯಣ ಭಟ್ಟರೆಂಬವರು ಮನೆಯಲ್ಲಿ ಇವರಿಬ್ಬರ ನಡುವೆ ಒಂದು ಬಂಡಿ ಪದ ಸ್ಪರ್ಧೆ ಏರ್ಪಟ್ಟಿತ್ತಂತೆ. ಒಬ್ಬರು ನಿಲ್ಲಿಸಿದ ಅಕ್ಷರದಿಂದ ತೊಡಗಿ ಇನ್ನೊಬ್ಬರು ಆಶು ಪದ್ಯಕಟ್ಟಿ ಹಾಡಬೇಕಾಗಿತ್ತು. ಕೇಳಲು ಆ ಕಾಲದ ಹಲವು ಮಂದಿ ಯಕ್ಷಗಾನ ರಸಿಕರು ಸೇರಿದ್ದರಂತೆ. ರಾತ್ರಿ ಕಳೆದು ಬೆಳಗಾದರೂ ಸ್ಪರ್ಧೆ ಮುಗಿಯಲಿಲ್ಲವಂತೆ. ಇಬ್ಬರೂ ಪದ್ಯರಚನೆಯಲ್ಲಿ ಬಹು ಸಮರ್ಥರೆಂದು ಕೊಂಡಾಡಲ್ಪಟ್ಟರಂತೆ. ಈ ಘಟನೆ ಆ ಕಾಲದವರ ಆಸಕ್ತಿಯನ್ನೂ ಆಶುಕವಿತ್ವ ಸಾಮರ್ಥ್ಯವನ್ನು ಸ್ಪುಟಗೊಳಿಸುತ್ತದೆ.

ಜತ್ತಿ ಈಶ್ವರ ಭಾಗವತರ ಮಗ ಜತ್ತಿ ಕೃಷ್ಣ ಭಟ್ ಇವರು ತಮ್ಮ ತಂದೆಯ ಮಕರಾಕ್ಷ ಕಾಳಗ ಪ್ರಸಂಗವನ್ನು 1958ರಲ್ಲಿ ಆರ್ಥಿಕ ಸಂಕಷ್ಟದ ಮಧ್ಯದಲ್ಲೂ ಪ್ರಕಟಿಸಿದ್ದು ಅತ್ಯಂತ ಶ್ಲಾಘನೀಯವಾದ ಕೆಲಸ. ಅವರ ಪುಸ್ತಕದ ಪೀಠಿಕೆಯಿಂದ ಸ್ವಲ್ಪ ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ಟರವರ ಭಾಗವತ ಯಕ್ಷಗಾನ ಪ್ರಸಂಗಗಳು ಎಂಬ ಮಹಾಪ್ರಬಂಧದಿಂದ ಈ ಎಲ್ಲಾ ಮಾಹಿತಿಯನ್ನು ಯಥಾವತ್ತಾಗಿ ಸಂಗ್ರಹಿಸಿ ಇಲ್ಲಿ ಬರೆದಿದ್ದೇನೆ.

ಮಖರಾಕ್ಷ ಕಾಳಗದಲ್ಲಿ ಪ್ರಸಂಗ ಪುಸ್ತಕದಲ್ಲಿ ಜತ್ತಿ ಈಶ್ವರ ಭಾಗವತರ ಭಾವಚಿತ್ರ ಕೂಡ ಇದೆ. ಆಗ ಈ ಪ್ರಸಂಗ ಪುಸ್ತಕದ ಕರಡು ಪ್ರತಿ ತಿದ್ದಿದವರು ಶ್ರೀ ಕಯ್ಯರ ಕಿಜ್ಞಣ್ಣ ರೈ. ಪುಸ್ತಕದ ಬಗ್ಗೆ ಮುನ್ನುಡಿ ಬರೆದವರು ರಾಷ್ಟ್ರಕವಿ ಶ್ರೀ ಗೋವಿಂದ ಪೈ.

* * *

6. ಇಂದ್ರಜಿತು ಕಾಳಗ

ಕಥಾಸಾರ:

ಶ್ರೀರಾಮನೊಂದಿಗೆ ಸಮರಕನುವಾದ ರಾವಣನಿಗೆ ಒಂದಾದ ಮೇಲೆ ಒಂದೆಂಬಂತೆ ಸೋಲು ಉಂಟಾಗತೊಡಗಿತು. ಕುಂಭಕರ್ಣ, ನರಾಂತಕ, ತ್ರಿಶಿರ, ಅತಿಕಾಯ, ಈಗ ಖರಾಸುರನ ಮಗನಾದ ಮಕರಾಕ್ಷ ಮಡಿದ ವಾರ್ತೆಯನ್ನು ಕೇಳಿ ಕಂಗೆಟ್ಟು, ಧೈರ್ಯಗುಂದಿ ಮಂಚಕ್ಕೊರಗಿದ್ದಾನೆ. ಇಷ್ಟಕ್ಕೆಲ್ಲ ತಂಗಿಯೇ ಕಾರಣಳಾದಳು ಎಂದು ಮರಗುವ ಸಂದರ್ಭದಲ್ಲಿ ಮಗನಾದ ಇಂದ್ರಜಿತು ಬಂದು ತಂದೆಯಲ್ಲಿ ಯುದ್ಧಕ್ಕೆ ಅಪ್ಪಣೆ ಪಡೆದು ಹೊರಡುತ್ತಾನೆ. ಅವನು ನೇರವಾಗಿ ಬಂದು ರಾಮನ ಸೇನೆಯ ಮೇಲೆ ಪರಾಕ್ರಮದಿಂದ ಎರಗುತ್ತಾನೆ. ಇಂದ್ರಜಿತುವಿಗೆ ರಾಮನ ಬಾಣದ ರುಚಿ ತಿಳಿಯುತ್ತದೆ. ಈಗ ಇವನನ್ನು ನೇರವಾಗಿ ಎದುರಿಸುವ ಬದಲು ಮಾಯಾ ವಿದ್ಯೆಯನ್ನು ಬಳಸಬೇಕೆನ್ನುತ್ತ, ಅಂಬರದಲ್ಲಿ ಅದೃಶ್ಯನಾಗಿ ಬಾಣ ಬಿಡಲು ಆರಂಭಿಸುತ್ತಾನೆ. ಶ್ರೀರಾಮ ಇವನ ಯುದ್ಧ ತಂತ್ರವನ್ನು  ಕ್ಷಣ ಮಾತ್ರದಲ್ಲಿ ನಿವಾರಿಸಲು,  ಬೇರೆ ಉಪಾಯ ಕಾಣದೇ, ಇಂದ್ರಜಿತು ಪಲಾಯನ ಗೈಯುತ್ತಾನೆ. ರಾಮನನ್ನು ಗೆಲ್ಲುವುದು ಶಿವನಿಗೂ ಅಸಾಧ್ಯವು ಎಂದು ಮನಸ್ಸಿನಲ್ಲಿ ಎಣಿಸುತ್ತಲೇ ತನ್ನ ವೈರಿಗಳ ಆತ್ಮಸ್ಥೈರ್ಯ ಕುಂದುವಂತೆ ಮಾಡಲು ಮಾಯಾಸೀತೆಯನ್ನು ನಿರ್ಮಿಸಿ, ಎಳೆದು ತಂದು ಶಿರಕ್ಕೆ ಖಡ್ಗವನ್ನುನಿರಿಸುತ್ತಾನೆ. ರೋಧಿಸುವ ಮಾಯಾಸೀತೆಯನ್ನು ಕಂಡು ಹನುಮಾದಿ ಕಪಿಗಳು ರಕ್ಕಸನ ಈ ಕಪಟವನ್ನರಿಯದೇ ಕಂಗಾಲಾಗುತ್ತಾರೆ. ಸ್ವತಃ ಹನುಮಂತ ಇಂದ್ರಜಿತುವಿನಲ್ಲಿ ಬಂದು ನಾನಾಪರಿ ಅವನನ್ನು ಹೊಗಳಿ ಸಾಂತ್ವನಗೊಳಿಸಲು ಪ್ರಯತ್ನಿಸುತ್ತಾನೆ. ಇದನ್ನು ದಿಕ್ಕರಿಸಿ ಇಂದ್ರಾರಿ  ಯುದ್ಧಭೂಮಿಯಲ್ಲಿ ಎಲ್ಲರೂ ನೋಡುತ್ತಿದ್ದಂತೆ  ಮಾಯಾಸೀತೆಯ ಶಿರವನ್ನು ತುಂಡರಿಸುತ್ತಾನೆ. ಇದನ್ನು ಕಂಡು ಹನುಮಂತ ಇಂದ್ರಜಿತುವಿನ ಮೇಲೆ ಮುಷ್ಠಿ ಪ್ರಹಾರ ಮಾಡಲು ಇಂದ್ರಜಿತು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ.

ಇತ್ತ ಹನುಮಂತನು ಶೋಕದಿಂದ ಕಂಗೆಟ್ಟಿರಲು, ಜಾಂಬವಾದಿ ಕಪಿಗಳು ದುಃಖತಪ್ತನಾದ ಆತನ ಬಳಿ ಬಂದು ಕಾರಣ ತಿಳಿದು ಏನೂ ಮಾಡಲೂ ತೋಚದೇ, ಹನುಮಂತ ಸಮೇತ ರಾಮನಬಳಿಗೆ ಬಂದು ಸೀತೆಯ ರುಂಡಮುಂಡವನ್ನು ಅವನ ಮುಂದಿಡುತ್ತಾರೆ. ನಡೆದ ಸಂಗತಿ ತಿಳಿಸಿದೊಡನೆ ಶ್ರೀರಾಮ ದುಃಖದಿಂದ ಗೋಳಾಡುತ್ತಿರಲು ವಿಭೀಷಣನು ಇದು ಇಂದ್ರಜಿತುವಿನ ಮಾಯಾಸೀತೆಯೆಂದು ತಿಳಿಸಲು ಹನುಮನನ್ನು ಅಶೋಕವನಕ್ಕೆ ಕಳುಹಿಸಿ ಅಲ್ಲಿ ಸೀತೆ ಸುರಕ್ಷಿತವಾಗಿ ಶ್ರೀರಾಮನ ಧ್ಯಾನದಲ್ಲಿರುವುದನ್ನು ಕಂಡು ಸಂತಸಗೊಂಡು ಅದನ್ನು ಶ್ರೀ ರಾಮನಿಗೆ ತಿಳಿಸಲು ಶ್ರೀರಾಮನು ನೆಮ್ಮದಿಗೊಂಡು, ಮುಂದಿನ ಯುದ್ಧಕ್ಕೆ ಸನ್ನದ್ದನಾಗುತ್ತಾನೆ.

ಇತ್ತ ಇಂದ್ರಜೀತು ಶ್ರೀರಾಮನ ಸೇನೆಯನ್ನು ಗೆಲ್ಲಲು ವಾಮಾಚಾರದ ಮಾರ್ಗವೇ ಸೂಕ್ತ ಎಂದು ನಿರ್ಧರಿಸಿ ಆಮಾರ್ಗ ಹಿಡಿಯುತ್ತಾನೆ. ನಿಕುಂಭಿಳೆಗೆ ಹೋಗಿ ಕುಲದೇತೆಯನ್ನು ಪೂಜಿಸಿ, ಪುರೋಹಿತರಿಂದ ಅಪ್ಪಣೆಪಡೆದು ಶ್ರೀರಾಮ ಲಕ್ಷ್ಮಣರನ್ನು ಮುಗಿಸಲು ಸಂಕಲ್ಪಿಸಿ, ಮಾರಣಾಧ್ವರಕ್ಕೆ ಆರಂಭಿಸುತ್ತಾನೆ. ಈ ಯಾಗದಿಂದ ಉಂಟಾದ ಹೋಮ-ಧೂಮ ಗಗನವನ್ನು ವ್ಯಾಪಿಸುತ್ತದೆ. ಅದನ್ನು ತಿಳಿದ ರಾಮಾದಿಗಳು ವಿಭೀಷಣನಿಂದ ಆ ಕುರಿತ ವಿವರ ತಿಳಿದು ಅವನ ನಿಗ್ರಹಕ್ಕೆ ಯಾರು ಮುಂದಾಗುವರು ಎಂದು ಚಿಂತಿಸುತ್ತಿರುವಾಗ ಲಕ್ಷ್ಮಣನು ಅಪ್ಪಣೆ ಪಡೆದು, ಹನುಮ ಹಾಗೂ ಇತರ ಕಪಿಗಳನ್ನು ಕೂಡಿಕೊಂಡು, ಯಾಗದೀಕ್ಷಿತನಾಗಿ ಭೀಕರ ಕರ್ಮದಲ್ಲಿ ತೊಡಗಿದ್ದ ಇಂದ್ರಜೀತುವನ್ನು ಎಳೆದು, ಉರಿವ ಯಾಗಕುಂಡವನ್ನು ಆರಿಸಿ, ಯುದ್ಧಕ್ಕೆ ಆಹ್ವಾನಿಸಲು, ವ್ರತಭಂಗವಾಗಿ ಕ್ರೋಧಗೊಂಡ ಇಂದ್ರಜಿತು ಇದಕ್ಕೆಲ್ಲ ವಿಭೀಷಣನೇ ಕಾರಣವೆಂದು ಅವನ ಮೇಲೆಯೇ ಬ್ರಹ್ಮಾಸ್ತ್ರ ಪ್ರಯೋಗಿಸಲು, ಹನುಮಂತನಿಂದಾಗಿ ಅದು ವಿಫಲವಾಗುತ್ತದೆ. ಲಕ್ಷ್ಮಣನಲ್ಲಿ ನೇರ ಯುದ್ಧ ಆರಂಭಿಸಿ ಬಸವಳಿದ ಇಂದ್ರಾರಿ ಅಂತಿಮವಾಗಿ ಲಕ್ಷ್ಮಣನ ಬ್ರಹ್ಮಾಸ್ತ್ರದಿಂದ ಹತನಾಗುತ್ತಾನೆ.

ಇತ್ತ ಮಗನ ಮರಣದ ವಾರ್ತೆಯನ್ನ ಕೇಳಿ ರಾವಣ ಶೋಕದಿಂದಿರುವಾಗ, ಮಡದಿ ಮಂಡೋದರಿಯೂ ಪುತ್ರ ಶೋಕದಿಂದ ರೋಧಿಸುತ್ತಿರುವುದನ್ನು ನೋಡಿ ಕೋಪದಿಂದ ರಾವಣ ಸೀತೆಯನ್ನು ಕಡಿಯಲು ಮುಂದಾಗುತ್ತಾನೆ. ಮಂತ್ರಿಗಳು ಶಾಂತೋಕ್ತಿಗಳಿಂದ ಧನುಜೇಂದ್ರನನ್ನು ಸಂತೈಸಿದರು ಎಂಬುದಾಗಿ ವಾಲ್ಮೀಕಿ ಮುನಿಗಳು ನಿರೂಪಿಸುತ್ತಿರುವರು.

ಇಂದ್ರಜಿತು ಕಾಳಗ ಸಮೀಕ್ಷೆ

ಇಂದ್ರಜಿತು ಕಾಳಗವನ್ನು  ಶ್ರೀಮನ್ಮಧ್ವ ಸಿದ್ಧಾಂತ ಗ್ರಂಥಾಲಯ, ಉಡುಪಿ ಇವರ ಪ್ರಸಂಗ ಪುಸ್ತಕವನ್ನು (ಪ್ರಕಟಣೆ 1929) ನಾನು ಸಂಪಾದನೆಗೆ ಆಯ್ದುಕೊಂಡಿದ್ದೇನೆ. ಇಂದ್ರಜಿತು ಕಾಳಗ ತೆಂಕು ಮತ್ತು ಬಡಗು ಈ ಎರಡೂ ತಿಟ್ಟುಗಳಲ್ಲಿ ರಂಗಕೃತಿಯಾಗಿ ಪ್ರಸಿದ್ಧಗೊಂಡಿದೆ.

ಸುಮಾರು 130 ಪದ್ಯಗಳ ಈ ಪ್ರಸಂಗ ಚಿಕ್ಕದಾಗಿ ಅಡೆ ತಡೆ ಇಲ್ಲದೇ ಸಾಗುತ್ತದೆ. ಕಥೆಗೆ ಅಂತಹ ಕವಲುಗಳು ಇಲ್ಲದೇ, ದೃಶ್ಯಾವಳಿಗಳನ್ನು ಮುಂದೆ ಮಾಡಿಕೊಳ್ಳದೇ ರಂಗಕ್ಕಿಳಿಸಬಹುದು. ಈ ಪ್ರಸಂಗದಲ್ಲಿ ಹೆಚ್ಚಾಗಿ ಕೈಕರಣಗಳು ಹಾಗೂ ದೃಶ್ಯಗಳಿಂದ ಪರಿಣಾಮ ಮಾಡಬೇಕಾದ ಸನ್ನಿವೇಶವಿದೆ. ಕಾಳಗದ ವಿವಿಧ ಮಜಲುಗಳು, ತಂತ್ರಗಳೇ ಮುಖ್ಯವಾಗಿ ಬರೆಯಲ್ಪಟ್ಟ ಪ್ರಸಂಗವಾಗಿರುವುದರಿಂದ ವೀರ, ರೌದ್ರ ರಸೋತ್ಪಾದನೆಗೆ ಮಾತ್ರ ಹೆಚ್ಚಿನ ಅವಕಾಶಗಳು ದೊರೆಯುತ್ತದೆ.

ಇಂದ್ರಜಿತು ರಾಮಾಯಣದ ಮಹಾಪರಾಕ್ರಮಿಗಳಾದ ರಾಕ್ಷಸರಲ್ಲೊಬ್ಬ. ರಾವಣನಿಗಿಂತಲೂ ಮಿಗಿಲಾದ ಪರಾಕ್ರಮಿ; ಮಂತ್ರ-ಮಾಯೆಗಳಲ್ಲಿ ಸರಿಸಾಟಿಯಿಲ್ಲದ ಶೂರ, ತಂತ್ರಗಾರ, ವರಬಲವೂ ಅವನಿಗಿದೆ. ರಾಮಾಯಣ ಅವನ ಆಶ್ಚರ್ಯಕರವಾದ ಪರಾಕ್ರಮಗಳ ಕಥೆಯನ್ನು ರೋಚಕವಾಗಿ ವರ್ಣಿಸಿದೆ. ಅಂಥ ಮಹಾವೀರನ ಅವಸಾನದ ಕಥೆಯೇ ಇಂದ್ರಜಿತು ಕಾಳಗದ ಆಕರ್ಷಣೆ.

ಇಂದ್ರಜಿತು ತನ್ನ ಸರ್ವಸ್ವವನ್ನೂ ಪಣಕ್ಕಿಟ್ಟು ಹೋರಾಡುವ ಚಿತ್ರ ಬೆರಗುಗೊಳಿಸುತ್ತದೆ. ಮಾಯಾಸೀತೆಯ ಪ್ರಕರಣ ಅವನ ಧೂರ್ತತೆಯನ್ನು ಸಾರುತ್ತದೆ. ಅದರ ಮೂಲಕ ಅವನು ರಾಮನಿಂದ ಮೊದಲ್ಗೊಂಡು ಕಪಿಸೈನ್ಯವೆಲ್ಲವನ್ನೂ ವಂಚಿಸುತ್ತಾನೆ. ಅವನ ಮಾಯೆಯ ಬಲೆಗೆ ಸಿಲುಕಿದ ಹನುಮಂತನು ತೊಳಲುವ (ಮಾಯಾಸೀತಾ ಪ್ರಕರಣ) ವೃತ್ತಾಂತ ಹೃದಯಂಗಮವಾಗಿದೆ. ಇದು ಮಾಯೆಯೆಂಬುದನ್ನು ಬಲ್ಲ ವಿಭೀಷಣನಿಲ್ಲದಿದ್ದರೆ ರಾಮನ ಕಥೆಯೂ ಕರುಣಾಜನಕವೆನಿಸುತ್ತ ವೆಂಬುದು ಸೂಚಿತವಾಗಿದೆ.

ಇಂದ್ರಜಿತುವಿನ ಮಾರಣಾಧ್ವರ ಸನ್ನಿವೇಶ ಮತ್ತೊಂದು ಅದ್ಭುತ. ಅಲ್ಲಿಯೂ ವಿಭೀಷಣನ ಸಲಹೆಯೇ ಮಾರ್ಗದರ್ಶಕವಾಗುತ್ತದೆ. ಲಕ್ಷ್ಮಣನ ಶೌರ್ಯದ ಚಿತ್ರ ಸೊಗಸಾಗಿದೆ. ಲಕ್ಷ್ಮಣನನ್ನು ಕರೆತಂದ ವಿಭೀಷಣನನ್ನು ಕಂಡು ಕೆರಳಿ ಕೆಂಡವಾಗುವುದು, ಅವನ ಅಹಂಕಾರ, ಕೈಸೋತಾಗ ಅವನು ಆತ್ಮವಿಮರ್ಶೆ ಆದರೂ ಬಿಡದ ಛಲ ಇವೆಲ್ಲವೂ ಇಂದ್ರಜಿತುವಿನ ಭವ್ಯವಾದ ಚಿತ್ರವನ್ನು ಕಡೆದು ನಿಲ್ಲಿಸುವಲ್ಲಿ ಸಮರ್ಥವಾಗಿದೆ.

ಇಂದ್ರಜಿತು ಕಾಳಗ  ಚಿಕ್ಕದು. ಆದರೆ ಈ ಪುಟ್ಟ ಭಿತ್ತಿಯಲ್ಲಿ ಚೊಕ್ಕ ಚಿತ್ರಗಳನ್ನು ಜೋಡಿಸುವಲ್ಲಿ ಕವಿಯು ಸಫಲನಾಗಿರುವುದು ಅವನ ಕೌಶಲ್ಯಕ್ಕೆ ಸಾಕ್ಷಿ. ಪ್ರಧಾನ ಪಾತ್ರವಾದ ಇಂದಜಿತುವನ್ನು ತುಂಬ ಅದ್ಭುತವಾಗಿ ಚಿತ್ರಿಸಿದ ಕವಿ, ಹನುಮಂತ, ಲಕ್ಷ್ಮಣರನ್ನೂ ಸೊಗಸಾಗಿ ಚಿತ್ರಿಸಿದ್ದಾನೆ. ಇತರ ಪಾತ್ರಗಳೂ ಯಥಾವಕಾಶವಾಗಿ ಸಂಪನ್ನವಾಗಿದೆ.

ಕಥೆ ಆರಂಭವಾಗುವುದು, ರಾವಣ ತನಗಾಗುತ್ತಿರುವ ಸೋಲಿನಿಂದ ವ್ಯಥಿತನಾದ ಸನ್ನಿವೇಷದಿಂದ. ಕೂಡಲೇ ಇಂದ್ರಜಿತುವಿನ ಪ್ರವೇಶ ವೀರ ರಸೋತ್ಪಾದನೆಗೆ ಅವಕಾಶ ಮಾಡಿಕೊಡುತ್ತದೆ. ಮುಂದೆಯೂ ಇದೇ ರೀತಿ ಕ್ಷಣ ಕ್ಷಣಕ್ಕೂ ಬಂದು ಹೋಗುವ ದೃಶ್ಯಾವಳಿಗಳು ಮುಖ್ಯ ರಸಸೃಷ್ಟಿಗೆ ಅವಕಾಶವನ್ನು ನೀಡುತ್ತಲೇ ಬದಲಾಗುತ್ತದೆ. ಈ ಪ್ರಸಂಗ ನಮ್ಮಲ್ಲಿ ಹೆಚ್ಚು ದೃಶ್ಯ ಪ್ರಧಾನವಾಗಿ ಅಥವಾ ಪರಿಕರಪ್ರದಾನವಾಗಿ ಮಾತಿಗೆ ಕಡಿಮೆ ಅವಕಾಶವಿರುವ ಕೃತಿಯಾಗಿ ನಿಂತಿದ್ದು, ಕೆಲವೊಮ್ಮೆ ರಂಗಕ್ಕೆ ತರಬಾರದ ವಸ್ತುಗಳು ಬರುವುದುಂಟು. ಉದಾಹರಣೆಗೆ ರಂಗಮಧ್ಯದಲ್ಲಿ ನಿಕುಂಬಿಳೆಯಾಗದ ದೃಶ್ಯಕ್ಕಾಗಿ ಪ್ರತ್ಯಕ್ಷ ಬೆಂಕಿಯನ್ನೇ ತಂದು ಭೀಕರತೆಯನ್ನು ಉಂಟುಮಾಡುವ ಪ್ರಯತ್ನಗಳನ್ನು ಇಂದು ಕಾಣಬಹುದು. ತೆಂಕಿನಲ್ಲಿ ರಂಗಕೃತಿಯಾಗಿ ಇದನ್ನು ಹೇಗೆ ಆಡುತ್ತಾರೆ ಎಂಬ ಕಲ್ಪನೆ ನನಗಿಲ್ಲ.

ಆದರೆ ಬಡಗಿನಲ್ಲಿ ಈ ಪ್ರಸಂಗ ಅತ್ಯಂತ ಭೀಕರ ದೃಶ್ಯಗಳನ್ನು ಸೃಷ್ಠಿಸುವ ಪ್ರಯತ್ನದಲ್ಲೇ ಯಶಸ್ಸನ್ನು ಕಂಡಿದೆ.

ಆದರೆ ಪ್ರಸಂಗದ ಆರಂಭದಲ್ಲಿ ಸ್ವಲ್ಪ ರಂಗ ಪ್ರಜ್ಞೆಯ ಅಭಾವ ಕಾಣುತ್ತಿದೆ. ಕಥೆಯ ನಾಯಕನಾದ ಇಂದ್ರಜಿತುವನ್ನು ರಂಗಕ್ಕೆ ತರುವಲ್ಲಿ ಪ್ರತ್ಯೇಕ ಪದ್ಯದ ಅವಶ್ಯಕತೆಯಿತ್ತು. ರಾವಣನ ಪದ್ಯದ ಕೊನೆಯ ಸಾಲಿನಲ್ಲಿ ಇಂದ್ರಜಿತುವಿಗೆ ಪ್ರವೇಶವಕಾಶ ಕಲ್ಪಿಸಿದ್ದು ಸಮರ್ಪಕವಾಗಿಲ್ಲ. ಅಂತೆಯೇ ಹನುಮ ಇಂದ್ರಜಿತುಗಳಲ್ಲಿ ಸಂವಾದರಾಹಿತ್ಯವು ಅಷ್ಟೊಂದು ಸೊಗಸುವುದಿಲ್ಲ. ಅಲ್ಲಿ ಇಂದ್ರಜಿತುವಿಗೆ ಪದ್ಯಗಳ ಅವಶ್ಯಕತೆಯಿತ್ತು. ರಾಮ ಇಂದ್ರಜಿತುಗಳ ನಡುವೆ ಯುದ್ಧವಲ್ಲದೇ, ಸಂಭಾಷಣೆಯ ಪದ್ಯಗಳು ಇದ್ದರೆ ಒಳ್ಳೆಯದಿತ್ತು. ಅಲ್ಲಿ ಕೇವಲ ಕವಿ ಪದ್ಯವಿದೆ.

ಯಕ್ಷಗಾನದ ರಂಗನಿಯಮದಂತೆ, ರಾಮಾಯಣದ ಹೆಚ್ಚಿನ ಎಲ್ಲ ಪ್ರಸಂಗಗಳಲ್ಲೂ ಶ್ರೀರಾಮನ ಒಡ್ಡೋಲಗ (ಪಟ್ಟಾಭಿಷೇಕ ಮತ್ತು ಅದಕ್ಕಿಂತ ಪೂರ್ವದ ಪ್ರಸಂಗ ಹೊರತುಪಡಿಸಿ) ದಿಂದಲೇ ಆರಂಭವಾಗಬೇಕು. ಇದು ುಹಾಭಾರತ ಭಾಗವತಾದಿಗಳಲ್ಲೂ, ಹೆಚ್ಚಾಗಿ ಸಾತ್ವಿಕ ಪಾತ್ರಗಳಿಂದ ಆರಂಭವಾಗಬೇಕಾದದ್ದು ಪರಂಪರೆ, ರಂಗರೂಢಿ. ಆದರೆ ಅನೇಕ ಪ್ರಸಂಗಗಳ ರಚನೆ ಈ ಕಲ್ಪನೆಗೆ ಹೊರತಾಗಿ ಇರುವುದನ್ನು ಗುರುತಿಸಬಹುದು. ಇಂದ್ರಜಿತು ಕಾಳಗದಲ್ಲೂ ಕವಿ ಪರಂಪರೆಯಂತೆ, ಶಾರ್ದೂಲವಿಕ್ರೀಡಿತವೃತ್ತದಲ್ಲಿ ಶ್ರೀರಾಮನ ಸ್ತುತಿಯಿಂದ ಆರಂಭಿಸಿ ನೇರ ರಾವಣನ ಒಡ್ಡೋಲಗದ ದೃಶ್ಯಕ್ಕೆ ಕೊಂಡೊಯ್ಯುತ್ತಾನೆ. ಹಾಗಾಗಿ ರಂಗಕೃತಿಯಲ್ಲಿ ರಾಮನ ಪ್ರವೇಶಕ್ಕೊಂದು ಅವಕಾಶ ಮಾಡಿಕೊಡುವುದಕ್ಕಾಗಿ ಅತಿಕಾಯ ಕಾಳಗದ

ಕಾಮಿನಿಮಣಿ ಕೇಳು ರಾಮಚಂದಿರನು
ಬಳಿಕ ಆ ಮಹಾ ಕಪಿಗಳುದ್ದಾಮ ಸಾಹಸವ ಕಂಡು
ಎಂಬ ಪದ್ಯದ ಮೂಲಕ ಪ್ರಸಂಗ ಆರಂಭಿಸುವುದು ಪರಂಪರೆಯಾಗಿದೆ.

ಇದಲ್ಲದೆ ಶ್ರೀ ಬಲಿಪನಾರಾಯಣ ಭಾಗವತರಿಂದ ಸಂಪಾದಿಸಿದ ಇನ್ನೊಂದು ಭಿನ್ನವಾದ ಇಂದ್ರಜಿತು ಕಾಳಗದ ಪ್ರತಿಯಿಂದ ಕೆಲವು ಪದ್ಯಗಳನ್ನು ಬಳಸಿಕೊಳ್ಳುತ್ತಾರೆ. ಉದಾಹರಣೆಗೆ,

ಮರ ಹಾರುವ ಮರ್ಕಟಗೆ  ಈ
ಪರಿ  ಕಲಿಸಿದರ‌್ಯಾರ್ ನಿಮಗೆ

ಧರಣಿಜೆಯಿಂ ಖಳವಂಶ  ಸಸಿ
ಉರಿಯಿತು ಮಾಳ್ಪೆನು ಧ್ವಂಸ  ॥

ಬಡಗು ಹಾಗೂ ತೆಂಕು ಈ ಎರಡೂ ಪ್ರಸಂಗಗಳಿಂದ ಆಯ್ದ ಪದ್ಯಗಳನ್ನು ರಂಗಕೃತಿಗೆ ಅಳವಡಿಸಿ ಬಳಸುವ ಪದ್ಧತಿ ಕಾಣಬಹುದು. ಮಕರಾಕ್ಷ ಕಾಳಗ (ಜತ್ತಿ ಈಶ್ವರ ಭಾಗವತರು) ಪ್ರಸಂಗದ ರಾವಣನಲ್ಲಿ ಇಂದ್ರಜಿತು ಹೇಳುವ ಜನಕ ದುಗುಡವಿದೇಕೆ (ಪುಟ 2) ಮುಂತಾದ ಪದಗಳನ್ನು ತೆಂಕುತಿಟ್ಟಿನ ರೂಢಿಯಲ್ಲಿ ಇಂದ್ರಜಿತು ಕಾಳಗದಲ್ಲಿ ಅಂಥದೇ ಸಂದರ್ಭದಲ್ಲಿ ಬಳಸುತ್ತಾರೆ  ಎಂದು ಡಾ. ರಾಘವನಂಬಿಯಾರ್ ತಿಳಿಸಿದ್ದಾರೆ. ಅಲ್ಲದೇ ಇಂದ್ರಜಿತು ಕಾಳಗದ ಕವಿ, ಪಾರ್ವತಿ ನಂದನನ ಕುಂಭಕರ್ಣ ಕಾಳಗದ ಕೆಲವು ಪದ್ಯಗಳನ್ನು ಈ ಪ್ರಸಂಗದಲ್ಲಿ ಬಳಸಿಕೊಂಡಿದ್ದನ್ನು  ಶ್ರೀ ಅಮೃತ ಸೋಮೇಶ್ವರರು ತನ್ನ ಯಕ್ಷಾಂದೋಳ ಕೃತಿಯಲ್ಲಿ ಯಕ್ಷಗಾನ ಕರ್ತ ಪಾರ್ವತಿ ನಂದನ ಎಂಬ ತಮ್ಮ ಲೇಖನದಲ್ಲಿ (ಪುಟ 102) ವಿವರವಾಗಿ ಚರ್ಚಿಸಿದ್ದಾರೆ. ಈ ಪ್ರಸಂಗದ ಕವಿಯು, ಕಣ್ವಪುರದ ಕವಿಯ ಕುಂಬಕರ್ಣ ಕಾಳಗ ದೊಳಗಿನ ಇಂದ್ರಜಿತು ಯುದ್ಧಭಾಗದ ಸಂದರ್ಭದ ಹಲವು ಪದ್ಯಗಳನ್ನು ಇದ್ದಕ್ಕಿದ್ದಂತೆಯೋ, ರೂಪಾಂತರಿಸಿಯೋ ಸ್ವೀಕರಿಸಿದ್ದಾನೆ ಎಂದು ಅಮೃತರು ಉದಾಹರಿಸುತ್ತ,

ನಿನ್ನ ಸೇನೆಯೊಳುಂಟೆ ನಿದ್ರೆಯು ಸತಿಸಂಗ  ಅನ್ನವರ್ಜಿತವಾದ ವ್ರತವು
ಹನ್ನೆರಡಬ್ಜ ಸಾದಿಸಿದವನುಳ್ಳಡೆ  ನಿರ್ನಾಮವಹನು ಶಕ್ರಾರಿ  (ಕುಂಬ-ಕಾಳಗ)

ನಿನ್ನ ಸೇನೆಂೋಳಗುತ್ತುಂಗರುಂಟೆ  ಯನ್ನಹಾರದಿ ಸತಿಸಂಗ
ಹನ್ನೆರಡಬ್ದ ವಿಭಿನ್ನ ಸದ್ಬ್ರತರಿರ  ಅನ್ನವರೊಳು ಖಳ  ನಿರ್ನಾಮವಾಗುವ ॥

(ಇಂದ್ರಜಿತು-ಕಾಳಗ)

ಹರಣದಾಸೆಗಳುಳ್ಳಡಣ್ಣನ ಕರೆಸಿಕೊ
ಚರಣವ ನಂಬಿದ ವಿಭೀಷಣನ ॥

ತಿರಿದುಂಬುದಕೆ ವೀಳ್ಯವಿತ್ತು ಕಳಹು ದೇಶಾಂ
ತರಕೆಂದು ನುಡಿದ ಶಕ್ರಾರಿ ॥(ಕುಂಭ-ಕಾಳಗ)

ಹರಣದಾಸೆಗಳುಳ್ಳಡಣ್ಣನ  ಕರೆಸು ವೀಳ್ಯವಿತ್ತು ದೇಶಾಂ
ತರಕೆ ತಿಂದುಂಬುದಕೆ ಶರಣನ  ಭರದಿ ಕಳಹು॥

(ಇಂದ್ರಜಿತು ಕಾಳಗ)

ಇತ್ಯಾದಿ ಪದ್ಯಗಳನ್ನು ಉಲ್ಲೇಖಿಸಿದ್ದಾರೆ.

ಈ ಪ್ರಸಂಗದಲ್ಲಿ ಕವಿ ಪದ್ಯರಚನೆಯ ಸರಳತೆ ಮತ್ತು ಗೇಯತೆಯನ್ನು ಉಳಿಸಿಕೊಂಡಿದ್ದಾನೆ. ಆರಂಭದಲ್ಲಿ ರಾವಣ ತಂಗಿಯೆ ಕುಲಕೆ ಕೇಡಾದಳು  ಗೆಲು  ವಂಗ ವಿಲ್ಲೆಮಗೆ ರಾಘವನೊಳು ಎಂದು ರಾವಣನ ಅನಿಸಿಕೆಗೆ, ಕೊನೆಗೆ ಇಂದ್ರಜಿತುವಿನ ಮರಣದಿಂದ ನೊಂದು ತಾಯಿ ಕೈಕಸೆ ಮೃತ್ಯುವಾದಳು ಮಗನೇ ಕುಲಕೆ ನಿನ್ನತ್ತೆ ಎಂದು ಹೇಳುವುದು ಕಥೆಯ ಆರಂಭ ಅಂತ್ಯವನ್ನು ಒಂದೇ ಅಭಿಪ್ರಾಯದಲ್ಲಿ ಬೆಸೆಯುವ ಒಂದು ಒಳ್ಳೆಯ ಕಲ್ಪನೆ.

ಸಾಹಿತ್ಯಿಕ ಮೌಲಿಕತೆಯನೆಲೆಯಲ್ಲಿ ಈ ಕೃತಿಯಲ್ಲಿ ಅನೇಕ ಉತ್ತಮ ರಚನೆಯನ್ನು ಗುರುತಿಸಬಹುದು. ಹೆಸರಿಸಬಹುದಾದ ಪದ್ಯಗಳಲ್ಲಿ ರಚನೆ, ರಂಗಗುಣದ ಪದ್ಯಗಳನ್ನು ಈ ಪ್ರಸಂಗದಲ್ಲಿ ಕಾಣಬಹುದು. ಹಾಡುವುದಕ್ಕೆ ಯಾವುದೇ ತೊಡಕು, ಕಸರತ್ತು ಮಾಡದೇ ನಿರಳವಾಗಿ ಹಾಡಬಹುದಾದ ಪದ್ಯಗಳು ಪ್ರಸಂಗದಲ್ಲಿ ಒಂದು ಮುಖ್ಯ ಹಾಗೂ ಅಗತ್ಯವಾದ ಅಪೇಕ್ಷೆಯಾಗಿರುತ್ತದೆ. ಅಭಿನಯಕ್ಕೂ ಸಾಕಷ್ಟು ಅನುಕೂಲವಿರುವ ಶಬ್ದಗಳು ಪದ್ಯದಲ್ಲಿದ್ದರೆ ಅಂತಹ ಪ್ರಸಂಗ ಯಶಸ್ವಿ ಆಗಲು ಸಾಧ್ಯ. ಈ ದೃಷ್ಟಿಯಿಂದ ಇಲ್ಲಿ ಬರುವ ಕೆಲವು ಭಾಮಿನಿ, ಕಂದಪದ್ಯಗಳನ್ನು ಉದಾಹರಿಸಬಹುದಾದರೆ,

ಭಾಮಿನಿ

ಇವನೊಡನೆ ಕಾದುವ ಸಮರ್ಥರು
ಭುವನ ಮೂರರೊಳಿಲ್ಲೆನುತ ಖಳ

ಪವನಜನ ಸಮ್ಮುಖಕೆ ಹಾಯ್ದನು ಕಪಟವನು ನೆನದು ॥
ಶಿವನಿಗರಿಯದ ಧೂರ್ತ ಮಾಯದೊಳವ

ನಿಜೆಯ ನಿರ್ಮಿಸುತ  ಕಪಿಗಳ
ನಿವಹದಲಿ ತೋರಿದನು ಖಡ್ಗವ ಕೊರಳಿಗಾನಿಸುತ ॥

ಇಡೀ ದೃಶ್ಯವನ್ನು ಸಾಹಿತ್ಯದ ಶಕ್ತಿಯ ಮೂಲ ಕಟ್ಟಿ ಕೊಡುವ ಪದ್ಯಗಳನ್ನು ಇಲ್ಲಿ ಉದಾರಿಸಬಹುದಾದರೆ ಮಾರಣಧ್ವರದ ಸನ್ನಿವೇಶವನ್ನು ಕವಿ ಭಾಮಿನಿ ಮತ್ತು ವಾರ್ಧಿಕ್ಯದಲ್ಲಿ ವರ್ಣಿಸಿದ ರೀತಿ ಮೆಚ್ಚುವಂತದ್ದು.

ವಾರ್ಧಿಕ್ಯ

ಸುಳಿಸಿದರ್ ಭೂತಭೇತಾಳರಂ ದೆಸೆದೆಸೆಯೊ
ಳಳಸಿದರ್

ಪ್ರಾಕಾರದಸುರರಂ ಜಡಿವುತ
ಪ್ಪಳಿಸಿದರ್ ಡೊಳ್ಳಾದ ಋತ್ವಿಕ್ಕುಗಳ ಹೊಗೆವ ಹೋಮದೊಳ್ ಹೋಮಿಸಿದರು॥

ಇದು ಸನ್ನಿವೇಷದ ಭೀಕರತೆಯನ್ನು ಸಶಕ್ತವಾಗಿ ತಿಳಿಸುತ್ತದೆ.

ಇಂದ್ರಜಿತು ಕಾಳಗದ ಪುಟ್ಟ ಹರಹಿನಲ್ಲಿ ಸೊಗಸಾದ ರಚನೆಗಳು ತುಂಬಿವೆ. ಪದ್ಯರಚನೆ ಮಧುರವಾದುದು. ಸರಳವಾದರೂ ಭಾವಬಂಧುರವಾದವುಗಳು ಮಾಯಾಸೀತೆಯನ್ನ ಕೊಲ್ಲಲು ಹೊರಟ ಇಂದ್ರಜಿತುವನ್ನ ಹನುಮನು ತಡೆದು ಬೋಧಿಸುವ ರಚನೆಯನ್ನ ನೋಡಿ

ರಾಗ ಸಾರಂಗ ಅಷ್ಟತಾಳ

ಮತಿವಂತ ಖಳನೇಕೇಳೂ  ಹೆಂಗೊಲೆಯಿದು
ಹಿತವೇನೋ ತಿಳಿದು ಪೇಳೂ
ಯತಿಪೌಲಸ್ತ್ಯನ ವೀರ್ಯ ಗತಿಗೆ ಸಾಧನಯಿಂದ್ರ
ಜಿತುವೆಂಬ ನಾಮದೊ ಳತಿಶಯ ಬಿರುದುಳ್ಳ ಮತಿವಂತ
ಓದಿ ನೋಡಿದೆ ಶಾಸ್ತ್ರವ  ಬೊಮ್ಮನ ಚತು
ರ್ವೇದ ಪೌರಾಣಸ್ತೋತ್ರವಾ
ಮೇದಿನಿಯೊಳುವಿಕ್ರ ಮಾಗ್ರಣಿಯೆನೆನಿಸಿದೆ
ಸಾಧಸಿ ಬೊಮ್ಮನ ಶಿವನವೊಲಿಸಿಕೊಂಡೆ

ಪದ್ಯಗಳ ರಚನೆಯಲ್ಲಿ ಸನ್ನಿವೇಶಕ್ಕೆ ತಕ್ಕ ತಾಳಗಣನ್ನು ಬಳಸುವಲ್ಲಿ ತುಂಬ ಪಳಗಿದವನು. ಅದನ್ನ ಪ್ರಸಂಗದುದ್ದಕ್ಕೂ ಕಾಣಬಹುದು. ಕರುಣರಸದ ಸನ್ನಿವೇಶಗಳನ್ನು ಹೃದ್ಯವಾಗಿ ಚಿತ್ರಿಸುವಂತೆ. ವೀರರೌದ್ರಗಳನ್ನು ತಕ್ಕ ರೀತಿಯಲ್ಲಿ ವ್ಯಕ್ತಪಡಿಸುವ ಅವನ ಶಕ್ತಿ ಮೆಚ್ಚುವಂಥದ್ದು. ಅವನ ಕವಿತ್ವಶಕ್ತಿಯನ್ನು ಸ್ಫುಟಗೊಳಿಸುವ ರಚನೆಗಳು ಪ್ರಸಂಗದುದ್ದಕ್ಕೂ ಹರಡಿಕೊಂಡಿವೆ.

ಭಾಮಿನಿ

ಮಗಧರಾಯನ ಮೊಮ್ಮನಾಡೀ
ರ್ದಗಡುವಾಕ್ಯವ ಕೇಳ್ದು ಸುರಪನ

ಬಿಗಿದ ಖಳನುಬ್ಬೇರಿ ಘರ್ಜಿಸುತೆಂದ ಖಾತಿಯಲೀ
ರಘುಕುಲದೊಳತಿ ಧೀರನೆಂಬೀ

ಹಗರಣವು ನಿನಗಿರಲು ಕೊಳ್ಳೆಂ
ದುಗಿಸಿದನು ಮುಂಗಾರು ಮೇಘದ ಸೋನೆಯೆನೆ ಸರಳಾ

ರಾಗ ನೀಲಾಂಬರಿ ಆದಿತಾಳ

ಮಗನೇ ನಿನ್ನ ಗೆಲುವ ವೀರ  ಜಗದೊಳಿಲ್ಲವೈಸೇ
ಮೃಗಧರನಿತ್ತಾಯುಷ್ಯವು  ನಗೆಗೀಡಾದುದಂೆ್ಯೂ

ರಾಗ ಭೈರವಿ ಅಷ್ಟತಾಳ

1.ತರಳ ಕೇಳಾಹಾರವು  …..

ರಾಗ ಢವಳಾರ ತ್ರಿವುಡೆತಾಳ

2.ಶಂಕರಿ ಸರ್ವೇಶ್ವರಿ ದುರಿತ
ಯಂಕರಿ ನಮ್ಮಾನ್ವಯಪೋಷಿಣಿ

ರಾಗ ಶಂಕರಾಭಣ, ಮುಟ್ಟಿತಾಳ

3.ಮಲ್ಲ ದೈತ್ಯರೆಮ್ಮ ರಣದಿ  ಗೆಲ್ವುಪಾಯವೂ
ಹುಲ್ಲು ಮನುಜರರಿತರೆಂಬು  ದೊಳ್ಳೆ ಚೋದ್ಯವು  ….

ಮುಂತಾದವು ಹಾಡುವುದಕ್ಕೆ ಅನುಕೂಲಿಸಿದವು ಜೊತೆಗೆ ನೃತ್ತಕ್ಕೂ ಅವಕಾಶ ಇವುಗಳಿಂದ   ದೊರಕಲು ಸಾಧ್ಯ.

ಲಕ್ಷ್ಮಣನನ್ನು ಪ್ರಶಂಸಿಸುವ ಸಂದರ್ಭದಲ್ಲಿ – ಕರುಣ ಹೀನನ ಸೇರಿ  ಕಷ್ಟವದಗಿತು ನಿನಗೆ  ತರಳನಿನ್ನುಪಕಾರ ಮರೆಯಲಿನ್ನುಂಟೆ ಎಂಬ ಪದ್ಯ ರಸ ಸೃಷ್ಠಿಯ ದೃಷ್ಠಿಯಿಂದ ಉತ್ತಮವಾದ ರಚನೆ.

ಆದರೆ ಮಾರಣಾಧ್ವರದ ಘೋರ ಭೀಬತ್ಸ ದೃಶ್ಯ ಕಲ್ಪಿಸಿದ ಕವಿ, ಕಾಳಿಯನ್ನ ಸ್ತುತಿಸುವಾಗ ಬಳಸಿದ ಶಂಕರಿ ಸರ್ವೇಶ್ವರಿ… ಪದ್ಯ ಅವಳ ಭಯಂಕರವಾದ, ಭೀಕರವಾದ ಮುಖವನ್ನು ಪ್ರಸ್ತುತಪಡಿಸಿದ್ದರೆ ಉಚಿತವಾಗುತಿತ್ತು ಎಂಬುದು ನನ್ನ ಅನಿಸಿಕೆ. ಈ ಪದ್ಯಕೊಡುವ ಕಲ್ಪನೆ, ಉಂಟುಮಾಡುವ ಭಾವನೆ, ಮಾರಣಾಧ್ವರದ ಭೀಕರತೆಗೆ ಪೋಷಕವಾಗಿಲ್ಲ ಎನಿಸುತ್ತದೆ.

ಹೀಗೆ ರಂಗದ ದೃಷ್ಠಿಯಿಂದ ನೋಡಿದರೆ ಕವಿ ಅಲ್ಲಲ್ಲಿ ಎಡವುತ್ತಾನೆ. ಆದರೆ ಶಕ್ತಿಶಾಲಿಯಾದ ರಚನೆಗಳು ಆ ದೋಷಗಳನ್ನು ಮರೆಸುವಲ್ಲಿ ಯಶಸ್ವಿಯಾಗಿದೆ. ಈ ಕಾರಣದಿಂದ ಇಂದ್ರಜಿತು ಕಾಳಗವು ರಾಮಾಯಣ ಪ್ರಸಂಗಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಸಾವಿರಾರು ಪ್ರದರ್ಶನಗಳನ್ನು ಪಡೆದಿದೆ. ಇದು ಅದರ ಉತ್ತಮಿಕೆಯನ್ನು ಸಾಬೀತುಪಡಿಸುತ್ತದೆ. ಕವಿಯು ಅಜ್ಞಾತನಾಗಿದ್ದರೂ ಅವನ ಕವಿತೆ ಶಾಶ್ವತವಾದ ಸ್ಥಾನವನ್ನು ಪಡೆದಿದೆ.

ಕವಿ ಪರಿಚಯ :

ಈ ಪ್ರಸಂಗ ಬರೆದ ಕವಿ ತನ್ನ ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಕಾರಂತರು ತಮ್ಮ ಯಕ್ಷಗಾನದಲ್ಲಿ ಇದನ್ನು ಹಟ್ಟಿಯಂಗಡಿ ರಾಮ ಭಟ್ಟರ (ಯಕ್ಷಗಾನ, ಪುಟ 149) ಪ್ರಸಂಗ ಕೃತಿಯ ಹೆಸರನ್ನು ರಚಿಸಿದ ಪಟ್ಟಿಯಲ್ಲಿ ಇದೂ ಸೇರಿದೆ.

ಅಲ್ಲದೇ ಮಂಗಲ ಪದ್ಯದಲ್ಲಿ ಕಾಂತಾವರದ ಕಾಂತೇಶ್ವರನ ಹೆಸರು ಕಂಡುಬರುವುದರಿಂದ ಈ ಕವಿ ಕಾಂತಾವರದನೆಂದು ತಿಳಿಯಬಹುೊ ಏನೋ ಎಂದು ಶ್ರೀ ಅಮೃತಸೋಮೇಶ್ವರರು ಸೂಚಿಸುತ್ತಾರೆ. ಆದರೆ ಕವಿ ಯಾರು ಎಂಬುದು ಇನ್ನೂ ನಿರ್ಧರಿಸಬೇಕಷ್ಟೆ!

* * *