3. ಅತಿಕಾಯ ಕಾಳಗ

ಕವಿ ಶಾರ್ದೂಲವಿಕ್ರೀಡಿತ ವೃತ್ತದಲ್ಲಿ ಶ್ರೀರಾಮಸ್ತೋತ್ರ, ಗಣಪ, ಗಿರಿಜೆ ಹರ ಸರಸ್ವತಿ ಸುರಪಮುಖ್ಯರಿಗೆರಗಿ ಆದಿಕವಿ ವಾಲ್ಮಿಕಿಗೆ ನಮಿಸಿ ಕಥೆಯನ್ನು ಆರಂಭಿಸುತ್ತಾನೆ.

ಕಥಾಸಾರ:

ನರಾಂತಕ, ತ್ರಿಶಿರ, ಅಕಂಪನ, ಪ್ರಹಸ್ತ ಮತ್ತು ಕುಂಭಕರ್ಣ ಮುಂತಾದ ರಕ್ಕಸರ ದಂಡುನಾಶವಾಗುತ್ತಿದ್ದಂತೆ, ಶ್ರೀರಾಮನು ಸಂತಸದಿಂದ ಇದಕ್ಕೆ ಕಾರಣರಾದ ತನ್ನ ಸೇನೆಯ ಅದರಲ್ಲೂ ಮುಖ್ಯವಾಗಿ ಮಹಾಕಪಿಗಳ ಉದ್ದಾಮ ಸಾಹಸವನ್ನು ಮೆಚ್ಚಿ, ತಲೆದೂಗಿ, ಅವರನ್ನು ಕೊಂಡಾಡುತ್ತಾನೆ.

ಇತ್ತ ರಾವಣ ಮರುದಿನ ಸಭೆಯಲ್ಲಿ ಮಂಡಿತನಾಗಿರುವಾಗ ನರಾಂತಕ, ದೇವಾತಂಕ ಮುಂತಾದ ರಕ್ಕಸರು ಅಳಿದುದನ್ನು ತಿಳಿಸಿ ವಾನರ ಸೇನೆಯ ಪರಾಕ್ರಮವನ್ನು ಹೇಳಲು, ಕೋಪದಿಂದ ಕುರಿಗೆ ಹೆಬ್ಬುಲಿಯಂಜುವುದೇನ ಫಡ ಎಂದು ಆರ್ಭಟಿಸಿ, ಇಂದಿನ ಯುದ್ಧದಲ್ಲಿ ರಾಮಸೈನ್ಯವನ್ನು ಸೋಲಿಸುತ್ತೇನೆಂದು ತಂದೆ ತಾಯಿಯ ಆಣೆ ಮಾಡಿ ಪ್ರತಿಜ್ಞಾಬದ್ಧನಾಗುತ್ತಾನೆ. ಈ ರೀತಿ ಆರ್ಭಟಿಸುತ್ತಿರುವ ತಂದೆಯ ಮಾತನ್ನು ಕೇಳಿದ ರಾವಣನ ಮತ್ತೋರ್ವ ಹೆಂಡತಿ ಧಾನ್ಯಮಾಲಿನಿಯಲ್ಲಿ ಜನಿಸಿದ ಅತಿಕಾಯ ತಂದೆಗೆ ಅಭಿನಮಿಸಿ ಶ್ರೀರಾಮನನ್ನು ಕೆಣಕುವುದು, ಅವನೊಟ್ಟಿಗೆ ಹೋರಾಟ ಮಾಡುವುದು ಕೇವಲ ವ್ಯರ್ಥ ಪ್ರಯತ್ನ, ಅದು ಅಂಬರವನ್ನು ಇರಿದು ನೋಯಿಸುತ್ತೇನೆ ಎಂದಂತೆ, ಎಂದು, ಈಗಾಗಲೇ ಖರಧೂಷಣ, ತ್ರಿಶಿರ ಮುಂತಾದ ರಕ್ಕಸರ ಪಾಡನ್ನು ತಿಳಿಸಿ ಸೀತೆಯನ್ನು ರಘುವರನಿಗಿತ್ತು ವಿಭೀಷಣನನ್ನು ಪ್ರೀತಿಯಿಂದ ಕರೆತಂದು ರಾಜ್ಯವನ್ನಾಳುವಂತೆ ನೀತಿಯನ್ನು ಹೇಳುತ್ತಾನೆ.

ಇದರಿಂದ ಕೋಪಗೊಂಡ ರಾವಣ, ಮಗ ಅತಿಕಾಯನಲ್ಲಿ ರಿಪುಮಥನಕ್ಕೆ ಹೋಗುವುದಾದರೆ ಹೇಳು ಹೊರತು ಕಥೆಯು ಇಲ್ಲಿ ಬೇಡವೆನಲು, ತಂದೆಯು ಅರಿಯದವನೇನಲ್ಲ, ಅವನ ಮನಸ್ಸಿನಲ್ಲಿ ಏನಿದೆಯೋ ಯಾರು ಬಲ್ಲರು ಎಂದು ತನಗೆ ತಾನೇ ಸಮಾಧಾನ ಹೇಳಿಕೊಂಡು ಯುದ್ಧಕ್ಕೆ ಹೊರಡಲುದ್ಯುಕ್ತನಾಗುತ್ತಾನೆ. ತಂದೆಯಿಂದ ರಣವೀಳ್ಯ ಪಡೆದ ಅತಿಕಾಯ ತುಳಸೀ ದಂಡೆಯನ್ನು ಕೊರಳಿಗೆ ಧರಿಸಿ ತ್ರಿಪುಂಡ್ರವನ್ನು ಹಣೆಯಲ್ಲಿ ಲೇಪಿಸಿಕೊಂಡು ತಾಯಿಗೆರಗಿ ಅಪ್ಪಣೆ ಪಡೆದು ನಂತರ ಸೈನಿಕರನ್ನು ಕುರಿತು, ಮೋಕ್ಷವನ್ನು ಬಯಸುವರು, ಹರಿಯನ್ನ ಸೇರುವ ಮುಕ್ತಿಪದದಾಸೆ ಉಳ್ಳವರೆಲ್ಲ ತನ್ನ ಸೇನೆಗೆ ಸೇರಿಕೊಂಡು ಸೆಣಸಲು ಆಹ್ವಾನಿಸುತ್ತಾನೆ, ವೈಷ್ಣವ ಶಿರೋಮಣಿ ಅತಿಕಾಯ. ಇವರ ಈ ಯುದ್ಧ ಸಂಭ್ರಮ ನೋಡಿ ಊರ ಪೌರರು ಅತಿಕಾಯನ ಸಾತ್ವಿಕ, ತೇಜಸ್ಸು ಗುಣಗಳನ್ನು ಕೊಂಡಾಡುವರು.

ನಾನಾ ವಾಧ್ಯಘೋಷದಿಂದ ಮುಂದೋತ್ತಿ ಬರುವ ಅತಿಕಾಯವನ್ನು ನೋಡಿ ಶ್ರೀರಾಮನು ವಿಭೀಷಣನಲ್ಲಿ ಪ್ರಶ್ನಿಸಲು, ವೀರನಾದ ಇವನು ಭಕ್ತರೋಳು ವೆಗ್ಗಳ ನೀತ ಎಂದು ಪರಿಚಯಿಸಲು ಸುಗ್ರೀವಾದಿಗಳು ಬೆರಗಾಗಲು ವಾನರೆಲ್ಲರಿಗೂ ಯುದ್ಧಕ್ಕೆ ಸನ್ನದ್ಧರಾಗುವಂತೆ ಪ್ರೋತ್ಸಾಹಿಸುತ್ತಾನೆ. ಅತಿಕಾಯನೊಡನೆ ವಾನರ ವೀರರು ಹೋರಾಡುತ್ತ ದಣಿದಿರುವಾಗ ಲಕ್ಷ್ಮಣ ಧನುಶರ ಕೊಂಡು ಯುದ್ಧಕನುವಾಗುತ್ತಾನೆ. ಸಮರಕ್ಕೆ ಸನ್ನದ್ಧನಾದ ಲಕ್ಷ್ಮಣನನ್ನು ರಾಮ ತಕೈಸಿ ಬೀಳ್ಕೊಡುತ್ತಾನೆ.

ಲಕ್ಷ್ಮಣ ಅತಿಕಾಯರಲ್ಲಿ ಯುದ್ಧ ಸಂಧಣಿಸುತ್ತದೆ. ಲಕ್ಷ್ಮಣನ ಸತ್ವಯತ ಶರದ ಮುಂದೆ ಅತಿಕಾಯ ಸೋಲುತ್ತಾನೆ. ತನ್ನ ಯುದ್ಧವನ್ನು ಶ್ರೀಹರಿಪೂಜೆಯೆಂದು ತಿಳಿದು ಅಸ್ತ್ರ ಶಸ್ತ್ರಗಳನ್ನು ಲಕ್ಷ್ಮಣನಿಗೆ ಸಮರ್ಪಿಸಿ ಭಕ್ತಿಭಾವದಿಂದ ಯುದ್ಧ ಮಾಡುತ್ತಲೇ ತನ್ನ ಅಂತರಂಗದ ಒಲುಮೆ, ನಿಲುಮೆಯನ್ನು ತಿಳಿಸಲು, ಸಂತಸಗೊಂಡ ಲಕ್ಷ್ಮಣ ಅವನ ಅಸ್ತ್ರಗಳನ್ನು ಖಂಡಿಸದೇ ಅದನ್ನು ತನ್ನಲ್ಲಿ ಧರಿಸಿ ಅತಿಕಾಯನನ್ನು ಅನುಗ್ರಹಿಸುತ್ತಾನೆ. ತಾನು ಶ್ರೀರಾಮನನ್ನು ಧ್ಯಾನಿಸುತ್ತ ಬ್ರಹ್ಮಾಸ್ತ್ರವನ್ನು ಬಿಡುವಂತೆ ಲಕ್ಷ್ಮಣನಿಗೆ ಪ್ರಚೋದಿಸಲು ಲಕ್ಷ್ಮಣ ಆ ಮಹಾಸ್ತ್ರವನ್ನು ಬಿಡಲು, ಶ್ರೀರಾಮನನ್ನು ನೆನೆಯುತ್ತ ಅತಿಕಾಯ ಕಡಿದು ಬೀಳುತ್ತಾನೆ. ಸುರರು ಸುಮವೃಷ್ಟಿ ಕರೆಯಲು ವಿಭಿಷಣ ತೆರಳಿ ಹಾ ………! ಸುಕುಮಾರ ಎಂದು ಪ್ರಲಾಪಿಸುತ್ತಾನೆ. ವಿಭೀಷಣನನ್ನು ರಾಮ ಸಂತೈಸುತ್ತಾನೆ.

ಧಾನ್ಯಮಾಲಿನಿ ಕುವರನ ಮರಣದ ವಿಷಯ ತಿಳಿದು ರೋಧಿಸುತ್ತಾಳೆ. ಮಡದಿಯು ನಾನಾ ತರದಿಂದ ಶೋಕಿಸುವುದನ್ನು ಕಂಡು ರಾವಣ ವಿಷಯ ತಿಳಿದು ಸ್ವತಃ ಯುದ್ಧಕ್ಕೆ ಅನುವಾಗುತ್ತಾನೆ. ಅಸಮ ಸಾಹಸವನ್ನು ಮೆರೆಯುತ್ತ ದಶಕಂಠ ರಾವಣ ಮುನ್ನುಗ್ಗಲು, ಸುಗ್ರೀವ ಅವನಿಗೆ ಎದುರಾಗಿ ಯುದ್ಧಮಾಡಲು, ರಾವಣನ ಬಾಣಕ್ಕೆ ಸುಗ್ರೀವ ಮೂರ್ಚಿತನಾಗಲು, ಅಂಗದ ರಾವಣನನ್ನು ಎದುರಿಸುತ್ತಾನೆ. ಅಂಗದ ಮೂರ್ಛೆಗೊಳಗಾಗಲು ಜಾಂಬವ, ಶರಭ, ಮೈಂದ, ದ್ವಿವಿದ, ಗವಯ ಮುಂತಾದ ಕಪಿಗಳನ್ನು ಕೂಡಿ ಲಕ್ಷ್ಮಣ ಇದಿರಾಗುತ್ತಾನೆ. ಘೋರಯುದ್ಧ ಆರಂಭವಾಗುತ್ತದೆ. ಲಕ್ಷ್ಮಣನಿಗೆ ಸೋಲಾಗಬಹುದೆಂಬ ಶಂಕೆಯಿಂದ ಸ್ವಯಂ ವಿಭೀಷಣ ಗಧೆಯನ್ನು ಹಿಡಿದು ಸಹಾಯಕ್ಕೆ ಬರಲು ರಾವಣ ಅವನನ್ನು ಮೂದಲಿಸುತ್ತಾನೆ. ಮತ್ತು ಮಹಾಸ್ತ್ರವೊಂದನ್ನು ವಿಭೀಷನಿಗೆ ಬಿಡಲು, ಇದರಿಂದ ಆಗುವ ಅನಾಹುತ ಗ್ರಹಿಸಿ ಲಕ್ಷ್ಮಣ ಆ ಬಾಣಕ್ಕೆ ತಾನೇ ಇದಿರುನಿಂತು ಮೈಯಲ್ಲಿ ಧರಿಸಲು ಆತ ಮೂರ್ಛನಾಗುತ್ತಾನೆ. ಇವನ ದೇಹವನ್ನು ಎತ್ತೊಯ್ಯಲು ರಾವಣ ಪ್ರಯತ್ನಿಸಿ ಅದು ಬಲು ಭಾರವೆನಿಸುತ್ತದೆ. ರಾವಣನ ಉದ್ದೇಶ ತಿಳಿದ ಹನುಮಂತ ಘನಘೋರ ರೂಪದಿಂದ ದಶಶಿರನ ಎದುರಿಗೆ ನಿಲ್ಲಲು ಅವನ ಉಗ್ರರೂಪ ರಾವಣನಿಗೆ  ಭಯವುಂಟುಮಾಡಲು, ಹನುಮನು ಕೋಪದಿಂದ ಮುಷ್ಠಿಘಾತ ಮಾಡುತ್ತಾನೆ. ಇದರಿಂದ ರಾವಣನ ಹತ್ತೂ ಮುಖದಲ್ಲಿ ರಕ್ತ ವಾಂತಿ ಮಾಡಿ ರಥದಲ್ಲಿ ಸತ್ತವನಂತೆ ಬಿದ್ದುದು ನೋಡಿ ಹನುಮಂತ ಇವನು ರಾಮನಿಂದ ಹತನಾಗಬೇಕಾದವನಾದ್ದರಿಂದ ನನ್ನಿಂದ ಅಪಚಾರವಾಯ್ತು ಎಂದು ಮರಗುತ್ತಾನೆ. ಮತ್ತು ರಾವಣನನ್ನು ಉಪಚರಿಸಿ ಎಚ್ಚರಿಕೆ ನೀಡುತ್ತಾನೆ.

ಮೂರ್ಛಿತನಾದ ಲಕ್ಷ್ಮಣನನು ನೋಡಿ ಶ್ರೀರಾಮನು ತಡೆಯಲಾಗದೇ ನಾನಾಪರಿ ಗೋಳಾಡುತ್ತಾನೆ. ಕೋಪದಿಂದ ರಾವಣನನ್ನು ಯುದ್ಧಕ್ಕೆ ಆಹ್ವಾನಿಸಿ ಯುದ್ಧದಲ್ಲಿ ಅವನನ್ನು ನಿರಾಯುಧನಾಗಿಸಿ ಬಾಣದಿಂದ  ಅವನ ಕಿರೀಟ ಕುಂಡಾಲಗಳನ್ನು ಕತ್ತರಿಸಿ ಮೂದಲಿಸಲು ರಾವಣ ನಾಚಿ ಹಿಂದಿರುಗುತ್ತಾನೆ.

ಅಶೋಕವನದಲ್ಲಿ ಸೀತೆಗೆ ದುಃಸ್ವಪ್ನವಾಗಲು, ಆಕೆ ಭಯಗೊಳ್ಳಲು, ಸರಮೆ ತ್ರಿಜಟೆಯರು ಸಮಾಧಾನ ಹೇಳುತ್ತಾರೆ. ಇಲ್ಲಿ ರಾಮ ಲಕ್ಷ್ಮಣನಿಗಾಗಿ ಪರಿಪರಿ ವಿಲಾಪಿಸಲು ಜಾಂಬವ ಬಂದು ಲಕ್ಷ್ಮಣನನ್ನು ಸಂಜೀವಿನಿ ಔಷಧದಿಂದ ಬದುಕಿಸಲು ಸೂಚಿಸಲು ರಾಮ ಹನುಮನನ್ನು ಕರೆದು ಅದನ್ನು ತರುವಂತೆ ನೇಮಿಸುತ್ತಾನೆ.

ಹನುಮ ಸಂಜೀವಿನಿ ತರಲು ಹೊರಡುತ್ತಾನೆ. ಇದನ್ನು ಬೇವಿನ ಚರರು ರಾವಣನಿಗೆ ತಿಳಿಸಲು, ಈ ಕಾರ್ಯ ಕೆಡಿಸಲು ರಾತ್ರಿಕಾಲದಲ್ಲೇ ಕಾಲನೇಮಿ ಎಂಬ ರಕ್ಕಸನನ್ನು ನಿಯಮಿಸುತ್ತಾನೆ. ಕಾಲನೇಮಿ ದ್ರೋಣಪರ್ವತದಲ್ಲಿ ತನ್ನವರರೊಳಗೊಂಡು ಕಪಟಯತಿ ರೂಪದಿಂದ ಹನುಮಂತನನ್ನು ಮೋಸಗೊಳಿಸಲು ಯತ್ನಿಸುವ ಸಮಯದಲ್ಲಿ, ಸರೋವರದಲ್ಲಿ ಶಾಪದಿಂದ ಮೊಸಳೆಯಾಗಿದ್ದ ಮತ್ತು ಹನುಮನಿಂದ ಶಾಪ ವಿಮೋಚನೆಗೊಂಡ ದಿವಿಜ ನಾರಿಯು ವಿಷಯ ತಿಳಿಸಲು ಕೋಪಗೊಂಡ ಹನುಮ ರಕ್ಕಸರ ಮಾಯೆಯನ್ನು ಭೇದಿಸಿ ಅವರನ್ನು ವಧಿಸಿ ಸಂಜೀವಿನಿ ಔಷಧ ಕೊಂಡು ರಣಾಂಗಣಕ್ಕೆ    ಬರುವನು. ವೈದ್ಯ ಸುಷೇಣ ಅದನ್ನು ಸೌಮಿತ್ರಿಯ ನಾಸಪುಟಕ್ಕೆ ಹಿಡಿಯಲು ಲಕ್ಷ್ಮಣ ನಿದ್ರೆ ಕಳೆದವನಂತೆ ಏಳಲು ಎಲ್ಲರಿಗೂ ಅಪಾರ ಸಂತಸವಾಗುತ್ತದೆ. ಶ್ರೀರಾಮ ತೊಡೆಯ ಮೇಲೇರಿಸಿಕೊಂಡು ಲಕ್ಷ್ಮಣನನ್ನು ನಾನಾ ವಿಧ ಪ್ರೀತಿಯಿಂದ ಉಪಚರಿಸುತ್ತಾನೆ.

ಸಮೀಕ್ಷೆ

ಪ್ರಸಂಗದ ಆರಂಭದಲ್ಲಿ ಶ್ರೀರಾಮ, ಗಣಪ, ಹರ-ಗಿರಿಜೆ, ಸರಸ್ವತಿ, ಹನುಮ, ವಾಲ್ಮೀಕಿ, ಸಮಸ್ತ ಕವಿಗಳ ಸ್ಮರಣೆ ಹಗೂ ಲೋಕನಾಥನನ್ನು ವಂದಿಸಿ ಕವಿ ಈ ಪ್ರಸಂಗವನ್ನು ಶಿವ, ಪಾರ್ವತಿಗೆ ಕಥೆಯನ್ನು ಒರೆಯುವಂತೆ ಚಿತ್ರಿಸಿದ್ದಾನೆ. ಕವಿ ಆರಂಭದ ನಾಂದಿಪದ್ಯದಲ್ಲಿ ಗೋಷ್ಟ ಪಟ್ಟಣ ನಿಲಯ ಭಜುಗವಿಭೂಷಣ ಎಂದು ಕೊನೆಗೆ ಮಂಗಲ ಪದ್ಯದಲ್ಲಿ ಲೋಕನಾಥ ಸ್ಮರಿಸಿದ್ದಾನೆ.

ಅತಿಕಾಯನು ರಾಮಾಯಣದಲ್ಲಿ ಅಂಥ ಮಹತ್ವದ ಸ್ಥಾನವನ್ನು ಪಡೆದವನಲ್ಲವಾದರೂ ಈ ಪ್ರಸಂಗದ ಕಾರಣದಿಂದ ಜನಮಾನಸದಲ್ಲಿ ನೆಲೆಗೊಂಡಿದ್ದಾನೆ. ಇದು ಈ ಪ್ರಸಂಗದ ಉತ್ತಮಿಕೆಗೆ ಸಾಕ್ಷಿ. ಅತಿಕಾಯ ರಾವಣನ ಮಗ ಧಾನ್ಯಮಾಲಿನಿ ಅವನ ತಾಯಿ, ಮಹತ್ತರವಾದ ಕಾಯವಿದ್ದರೂ ಅವನು ಕ್ರೂರನಲ್ಲ. ರಾಕ್ಷಸರ ಮಧ್ಯದಲ್ಲಿಯೇ ಬೆಳೆದರೂ ಅವನು ರಕ್ಕಸ ಸ್ವಭಾವವನ್ನು ಹೊಂದಲಿಲ್ಲ. ನಿಸ್ಸೀಮ ಹರಿಭಕ್ತನಾಗಿ ಬೆಳೆಯುತ್ತಾನೆ. ರಾವಣನ ಪಾಳಯದಲ್ಲಿ ವಿಭೀಷಣನಿಗೆ ಸಮನಾದ ಭಕ್ತ. ಹಾಗಿದ್ದರೂ ಅವನು ವಿಭೀಷಣನಂತೆ ರಾವಣನನ್ನು ತೊರೆಯಲಿಲ್ಲ. ಹರಿಯನ್ನು ಎದುರಿಸಿ ಹೋರಾಡಿದರೆ ಹರಣವುಳಿಯುವುದಿಲ್ಲವೆಂದು ತಿಳಿದಾಗಲೂ ಅವನು ಮುನ್ನುಗ್ಗುತ್ತಾನೆ. ಯುದ್ಧದಲ್ಲಿ ಅಸಮ ಸಾಹಸವನ್ನು ಮೆರೆದು ಅಸ್ತಂಗತನಾಗುತ್ತಾನೆ. ಈ ವ್ಯಕ್ತಿತ್ವ ಯಕ್ಷಗಾನ ಪ್ರೀಯರ ಮನಸ್ಸನ್ನು ಸೂರೆಗೊಂಡಿದೆ. ಕೃತಿಯು ಇಂದಿಗೂ ತನ್ನ ಜನಪ್ರಿಯತೆಯನ್ನುಳಿಸಿಕೊಳ್ಳುವುದಕ್ಕೆ ಅತಿಕಾಯನ ಪಾತ್ರಚಿತ್ರಣವೇ ಪ್ರಮುಖ ಅಂಶ.

ಹಟ್ಟಿಯಂಗಡಿ ರಾಮಭಟ್ಟರ ಈ ಕೃತಿ ಪ್ರದರ್ಶನದ ದೃಷ್ಠಿಯಲ್ಲಿ ಅತ್ಯಂತ ಯಶಸ್ವಿ ಆಗಿರುವುದು ಎಲ್ಲರಿಗೂ ತಿಳಿದ ವಿಷಯವೇ. ಕೇವಲ ರಂಗಕೃತಿಯಾಗಿ ಮಾತ್ರವಲ್ಲ, ತಾಳೆಮುದ್ದಲೆಯಲ್ಲೂ ಈ ಪ್ರತಿ ಬಹುಪ್ರಸಿದ್ಧವಾದದ್ದೇ. ಇದಕ್ಕೆ ಮುಖ್ಯ ಕಾರಣ ಆತ ತನ್ನ ಪದ್ಯಗಳನ್ನು ಸುಮಧುರವಾದ ಶಬ್ದಗಳಿಂದ, ಅರ್ಥಗರ್ಭಿತವಾದ ನುಡಿಕಟ್ಟುಗಳಿಂದ ಸರಳವಾದ ನಿರೂಪಣೆಯಿಂದ ಹೆಣೆದಿರುವುದೇ ಆಗಿದೆಯಲ್ಲದೇ, ಅತ್ಯಂತ ಕ್ಲಿಷ್ಟ ಆಧ್ಯಾತ್ಮಿಕ  ವಿಷಯವನ್ನೂ ಬಹಳ ಸರಳತೆಯಿಂದ ಪ್ರಸ್ತುತಪಡಿಸುವ ಅವನ ವಿಶಿಷ್ಟವಾದ ಕವಿತ್ವದ ಶಕ್ತಿಯಿಂದ ಎನ್ನಬಹುದು.

ಉದಾಹರಣೆಗೆ : ತಂದೆಯೊಟ್ಟಿಗಿನ ಅವನ ಸಂಭಾಷಣೆಯಲ್ಲಿ

ರಾಗ : ಕಾಪಿ, ಅಷ್ಟತಾಳ

ಇರಿತಕಂಬರವಳುಕುವುದೆ  ನೊರ 
ಜುರಿಬಿದಡಗ್ನಿಗೆ ನೋವುತಾಗುವುದೇ

ಇರುವೆ ಕಚ್ಚಿದರೆ ಬೆಚ್ಚುವುದೆ  ಸುರ 
ಗಿರಿಯು ನಿನ್ನಧಟು ರಾಘವನೊಳೊಪ್ಪುವುದೇ 

ಎಂಬ ಸರಳ ಆದರೆ ಸುಂದರ ಉಪಮೆಗಳ ಮೂಲಕ ತನ್ನ ವಾದಗಳನ್ನು ಮಂಡಿಸುವ ಈ ಪದ್ಯಕ್ಕೆ ಸಾಕಷ್ಟು ವಿಸ್ತರಿಸಿಕೊಂಡು ಅರ್ಥ ಹೇಳಲು ಅವಕಾಶವಿದೆ. ಕವಿ ಈ ಪ್ರಸಂಗದಲ್ಲಿ ಗೇಯತೆಯನ್ನು ರಂಗ ಗುಣವನ್ನು, ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಹೇಳುವುದನ್ನ ಎಲ್ಲ ಕಡೆಗೂ ಮೆರೆದಿರುವುದು ಸ್ಪಷ್ಟವಾಗಿ ನೋಡಬಹುದು. ಅತಿಕಾಯನ ಪ್ರವೇಶದಲ್ಲೇ ಕವಿ ಅತಿಕಾಯನ ಘನ ವ್ಯಕ್ತಿತ್ವವನ್ನು ಒಂದು ಅಪೂರ್ವ ಶಬ್ದದಲ್ಲಿ ಕಟ್ಟಿಕೊಡುವುದು ಅನನ್ಯ! ಅನಘಮತಿಯತಿಕಾಯ ಪ್ರವೇಶಸುತ್ತಲೇ ಪಾತ್ರ ವಿಸ್ತರಣೆಗೆ ಪೀಠಿಕೆ ಬರೆಯಲ್ಪಡುತ್ತದೆ.

ಪ್ರಸಂಗ ರಾಮ ಲಕ್ಷ್ಮಣರ ಒಡ್ಡೋಲಗದಿಂದ ಆರಂಭವಾಗಿ, ಅಲ್ಲಿ ಮಹಾಕಪಿಗಳ ಉದ್ದಾಮ ಸಾಹಸವ ಕಂಡು, ಕೊಂಡಾಡುವುದು ಕಥೆಯ ಬೀಜ ಹಾಗೂ ಅಪ್ಪಟ ರಂಗ ಸಂಪ್ರದಾಯದ ಅನುಸರಣೆಯೂ ಹೌದು. ಸಾತ್ವಿಕ ಪಾತ್ರದಿಂದ ಕಥೆ ಆರಂಭವಾಗಬೇಕು ಎನ್ನುವುದು ಒಂದು ಒಪ್ಪಿತ ರಂಗ ಕ್ರಿಯೆಯಾಗಿದೆ.

ಕವಿ ಕಡೆದ ಪದ್ಯಗಳಲ್ಲಿ ಅಭಿನಯಕ್ಕೂ ಸಾಕಷ್ಟು ಅವಕಾಶಗಳಿವೆ. ರಾವಣ ಒಡ್ಡೊಲಗ ಕೊಟ್ಟು ಕುರಿಗೆ ಹೆಬ್ಬುಲಿಯಂಜುವುದೇ ಘಡ ಎಂದು ಆರ್ಭಟಿಸಿ ರಂಗದಲ್ಲಿ ಬಿಸಿ ಹುಟ್ಟಿಸಲು ಆರಂಭಿಸುತ್ತಾನೆ. ಸಾಮಾನ್ಯವಾಗಿ ಭಕ್ತಿಯ ಪ್ರಕಟಣೆಯ ಸಂದರ್ಭದಲ್ಲಿ ಕೇವಲ ಮಾತಿನ ಮೂಲಕ ರಂಗದ ಕಾವನ್ನು ಉಳಿಸಿಕೊಳ್ಳುವುದು ಹೆಚ್ಚಿನ ಪ್ರಸಂಗದಲ್ಲಿ ಅನಿವಾರ್ಯ. ಆದರೆ ಯುದ್ಧದಂತ ಸನ್ನಿವೇಶದಲ್ಲಿ ಆಧ್ಯಾತ್ಮಿಕ, ಸಮರ್ಪಣೆಯ ಸನ್ನಿವೇಶದಲ್ಲೂ, ಎಲ್ಲೂ ನೀರಸವಾಗದಂತೆ ಕಥೆ ಸಾಗುವುದು ಕವಿಶಕ್ತಿಯಿಂದ. ಇಂತಹ ವಿರಳ ಉದಾಹರಣೆಯೆಂದರೆ, ಸುಧನ್ವ ಕಾಳಗ, ಕರ್ಣಪರ್ವ ಎನ್ನಬಹುದು. ಅನೇಕ ಪ್ರಸಂಗಗಳಲ್ಲಿ ಅದರ ರಂಗ ಗುಣದ ಕೊರತೆಯಿಂದಾಗಿ ಹಲವಾರು ಪದ್ಯಗಳನ್ನು ಹಿಂದೆ ಮುಂದೆ ತರಬೇಕಾಗುತ್ತದೆ. ಅಥವಾ ಬೇರೆ ಪ್ರಸಂಗದಿಂದ ಬೇಕಾಗುವ ಪದ್ಯ ಎರವಲು ತರಬೇಕಾಗುತ್ತದೆ. ಆದರೆ ಈ ಪ್ರಸಂಗದಲ್ಲಿ ಅಂಥಹ ಅವಶ್ಯಕತೆಯೇ ಉದ್ಬವವಾಗದು. ಅಲ್ಲದೇ ಇಲ್ಲಿಂದಲೇ ಕೆಲ ಪದ್ಯಗಳನ್ನು ಬೇರೆ ಪ್ರಸಂಗ ಎರವಲು ಪಡೆದಿದೆ. ಉದಾ: ಇಂದ್ರಜಿತು ಕಾಳಗ. ಕವಿ ಆಧ್ಯಾತ್ಮಕದ ಸನ್ನಿವೇಷದಲ್ಲಿ ಎಲ್ಲೂ ಕೇವಲ ನಿಷ್ಕ್ರಿಯವಾಗಿ ನಿಂತು ಮಾತಿನ ಮನೆ ಕಟ್ಟುವುದಕ್ಕೆ ಮಾತ್ರ ಆಸ್ಪದ ಇರುವಂತೆ ನೋಡಿಕೊಂಡಿಲ್ಲ. ರಂಗ ಕ್ರಿಯಾಶೀಲತೆ ಮತ್ತು ಮಾತುಗಾರಿಕೆ ಒಟ್ಟೊಟ್ಟಿಗೆ ಸಾಗುಂತೆ ಹೆಣೆದಿದ್ದಾನೆ.

ಅತಿಕಾಯ ಕಾಳಗದ ಪದ್ಯಗಳು ಜನಮಾನಸದಲ್ಲಿ ನೆಲೆ ನಿಂತಿರುವುದನ್ನು ಯಕ್ಷಗಾನದ ಪ್ರೇಮಿಗಳೆಲ್ಲ ಬಲ್ಲರು. ಅದಕ್ಕೆ ಈಗಾಗಲೇ ನಾವು ನೋಡಿದ ಲಕ್ಷಣಗಳೇ ಬಹುಮಟ್ಟಿಗೆ ಕಾರಣ ಎಂದು ನನ್ನ ಅನಿಸಿಕೆ.

ರಾವಣನು ಯುದ್ಧದಲ್ಲಿ ಒಬ್ಬೊಬ್ಬರನ್ನಾಗಿ ಕಳೆದುಕೊಳ್ಳುತ್ತಿದ್ದರೂ ರಾಮನನ್ನು ಸಂಹರಿಸುತ್ತೇನೆಂದು ಅಬ್ಬರಿಸುತ್ತಿರುವ ತಂದೆಯಾದ ರಾವಣನಿಗೆ ಅತಿಕಾಯನು ಮಾಡುವ ನೀತಿ ಬೋಧನೆಯ ಪದ್ಯಗಳು ಈ ಕೃತಿಯ ಅತ್ಯಂತ ಪ್ರಸಿದ್ಧ ಹಾಡುಗಳಾಗಿವೆ. ಅದು ಹೀಗೆ:

ರಾಗ : ಕಾಪಿ, ಅಷ್ಟತಾಳ

ಏತಕೆ ಮರುಳಾದೆ ತಾತ  ರಘು
ನಾಥನೊಳ್ ಕಲಹವೆ ಲೋಕವಿಖ್ಯಾತ  
ಸಕಲ ಲೋಕೈಕ ನಾಯಕನು  ಸರ್ವಾ
ತ್ಮಕನು ಸರ್ವರ ರಕ್ಷಿಸುವ ದೈವನವನು
ಮುಕುತಿದಾಯಕನು ಶಾಶ್ವತನು  ನಿನ್ನ
ಯುಕುತಿ ನಡೆಯದಾದಿ ವಸ್ತು ರಾಘವನು  
ಕಡುಗಲಿ ಖರನೆಲ್ಲಿಪೊದ  ಹಿಂದೆ
ಅಡವಿಯೊಳ್ ವೀರಾಧಿವೀರನೇನಾದ
ಬಿಡದೆ ಯೋಚಿಸಿ ನೀನು ನೋಡುಜಗ
ದೊಡೆಯ ರಾಮನ ಕೆಣಕಲು ಬಂತು ಕೇಡು 

ಎಂದು ತಂದೆಗೆ ತಿಳುವಳಿಕೆಯನ್ನು ಹೇಳುವಾಗ ಅತೀ ಜಾಗರೂಕತೆಯಿಂದ, ಮೆದುವಾಗಿ ಆದರೆ ಅಷ್ಟೆ ಗಟ್ಟಿಯಾದ ತತ್ವವನ್ನು, ತಥ್ಯವನ್ನು ಹೇಳುವ ಪದ್ಯಗಳು ಔಚಿತ್ಯಪೂರ್ಣ.

ಆಗ ರಾವಣ,

ಅತಿಕಾಯನೆ ನೀ ಕೇಳು  ರಿಪು 
ಮಥನಕೆ ಪೋಪಡೆ ಪೇಳು

ಎಂದು ನೇರವಾಗಿ ತನ್ನ ಮುಖ್ಯ ಆಸಕ್ತಿಯಾದ ಯುದ್ಧದತ್ತ ಲಕ್ಷ್ಯ ಸೆಳೆದು ವಿಷಯವನ್ನು ಮುನ್ನೋಟಕ್ಕೆ ತರುವುದು ಔಚಿತ್ಯಪೂರ್ಣ. ಇಲ್ಲಿ ತಂದೆಯ ಎದುರಿಗೆ ಮಾರ್ಮಿವಾಗಿ, ಕುಲಂಕುಷವಾಗಿ ಅತಿಕಾಯನಿಗೆ ಅಭಿಪ್ರಾಯ ಹೇಳಲು ಬಿಡುವ ರಾವಣ ಅದಕ್ಕೆಲ್ಲ ಉತ್ತರಕೊಡುತ್ತಾ ಹೋದರೆ ಬಹುಶಃ ಕಥೆಯ ಬಿಗಿ, ಬಂಧ ಸಡಿಲವಾಗುತ್ತಿತ್ತೇನೋ. ಆದರೆ ತಂದೆಯ ನಿಲುವನ್ನು ಅತಿಕಾಯನ ಮನಸ್ಸು ಅವನಿಗಿರುವ ಸಂಸ್ಕಾರದಿಂದ ತಾನೇ ವಿಶ್ಲೇಷಣೆಗೆ ಅವಕಾಶ ಮಾಡಿಕೊಡುವುದನ್ನು ಕಾಣಬಹುದು. ಅಹುದು ಮತ್ತೇನಾರ ಚಿತ್ತದಲ್ಲಿ ಗ್ರಹಿಸಿಕೊಂ  ಡಿಹುದನವರೇ ಬಲ್ಲರೆನುತ ॥ಎಂದು ನಿರ್ಣಯಿಸುವುದು ಇಂದಿನ ಸಂದರ್ಭದಲ್ಲೂ ಪ್ರಸ್ತತವಾಗುವ ನಿಲುವು. ನಾವು ನಮ್ಮದೇ ನೆಲೆಯಿಂದ ಜಗತ್ತನ್ನ, ವ್ಯಕ್ತಿಯನ್ನ ನೋಡುವ ಬದಲು ಮತ್ತೇನಾರ ಚಿತ್ತದಲಿ ಗ್ರಹಿಸಿಕೊಂಡಿರುವುದನ್ನು ಒಪ್ಪುವ ರೀತಿ, ನೆಲೆ, ಅತಿಕಾಯನ ವ್ಯಕ್ತಿತ್ವದ ಜೊತೆಗೆ ಕವಿಯನ್ನೂ ಎತ್ತರಿಸುತ್ತದೆ. ಅಂತೆಯೇ ತನ್ನ ಹಿತವಚನವನ್ನು ತಿರಸ್ಕರಿಸಿದ ತಂದೆಯ ಅಪ್ಪಣೆಯನ್ನು ಪಡೆದು ಯುದ್ಧಕ್ಕೆ ಹೊಡುವಾಗಿನ ಅವನ ಭಾವವನ್ನು ವ್ಯಂಜಿಸುವ ಪದ್ಯಗಳು ಅತಿಕಾಯನ ಪರಮಭಕ್ತಿಯನ್ನು ಸಾರುತ್ತದೆ.

ರಾಗ : ಕಾಂಬೋಧಿ ಝೆಂಪೆತಾಳ

ಬನ್ನಿರೈ ಸಂಸಾರ ಶರಧಿಯನು ದಾಟುವರು
ಬನ್ನಿರೈ ಮೋಕ್ಷಕಾಂಕ್ಷಿಗಳು
ಬನ್ನಿರೈ ಬಹಳ ಪದವಿಯನು ಬಯಸುವ ಸುಭಟ
ರೆನ್ನೊಡನೆ ನೀವೆನುತ ಕರೆದ

ಹಾಗೆಯೇ :         ನೀವು ಜಗದಧಿದೈವವೆಂಬುದ  ನಾವು ಬಲ್ಲೆವು ನಮ್ಮ ಕುಲದ ಸ್ವ 
ಭಾವವನು ನಾವ್ ಬಿಡಲು ಬಹುದೇ ಪೂರ್ವಪದ್ಧತಿಯ

ಎಂದು ತನ್ನ ನಿಲುವನ್ನ (ರಾಕ್ಷಸರ ಯಾವುದೇ ಕುಟಿಲತೆ ಇಲ್ಲದೇ) ಸಮಾಧಾನದಿಂದ ಸಮರ್ಥಿಸಿಕೊಳ್ಳುವುದನ್ನು ಕಾಣಬಹುದು.

ರಣರಂಗದಲ್ಲಿ ಬಾಣ ಪ್ರಯೋಗದ ಸಂದರ್ಭದಲ್ಲಿ ಇದೆಯಾವಾಹನ ನೋಡು  ಎಂಬ ಪದ್ಯದ ಮೂಲಕ ಭಕ್ತಿ ಉತ್ಕಟತೆಯ ಪರಾಕಾಷ್ಟೆಯನ್ನು ಕವಿ ಆ ಪಾತ್ರಕ್ಕೆ ದೊರಕಿಸಿಕೊಡುತ್ತಾನೆ.

ಆಯಿತಕಟಾ ತಂದೆಯಾಯುಷಕೆ ಕಡೆಯನ್ನು 
ಬಾಯಾರಲೇಕೆ ನಾವಿದಕೆ ಎನ್ನುತ್ತ,

ಕಾಯವಿದ್ದಾಗ ನಾರಾಯಣನ ಪಾದವನು 
ಪ್ರೀಯದಿಂ ಸ್ಮರಿಸಬೇಕೆಂದ

ಎಂಬ ಸಂದೇಶವನ್ನು ಜನಕ್ಕೆ ತಲುಪಿಸುವುದನ್ನು ಕಾಣಬಹುದು.

ಅತಿಕಾಯನ ಮರಣಕ್ಕೆ ಸ್ವತಃ ವಿಭೀಷಣನ ರೋಧನ ಮಾರ್ಮಿಕವಾಗಿದೆ.

ಯಾರು ಬದುಕಿರ್ದು ಫಲವೇನು ನೀನಳಿಯೇ
ತೀರೆತೆಮ್ಮಾಯುಷ್ಯವು ರಿಪುತಿಮಿರಭಾನು

ಎಂದಳಲುವಾಗ ದುಃಖ ಮಡುಗಟ್ಟುತ್ತದೆ. ಅತಿಕಾಯನ ಸಾರಥಿ ಹಿಂದಿರುಗುವ ಪರಿಯನ್ನ ಕವಿ ವರ್ಣಿಸುತ್ತ ಕೊನೆಗೆ ಬರಿದಾದ ರಥವನ್ನ ಕಂಡು ಮರಗುವ ತಾಯಿ ಧಾನ್ಯಮಾಲಿನಿ, ಸಾಕಿದಕ್ಕುಪಕಾರ ಸಾಕಯ್ಯ ಸುಕುಮಾರ ॥ಎಂದಳುವಾಗ, ಹೊಟ್ಟೆಯ ಮೇಲೆ ಕಲ್ಲಿಟ್ಟು ಬಿಟ್ಟು ಹೋದೆಯಲ್ಲ ಕಂದ ಎಂಬ ಹೊಸ ಉಪಮಾನದಿಂದ ನೋವಿನ ತೀವ್ರತೆಗೆ ಪುಷ್ಠಿ ದೊರೆಯುತ್ತದೆ.

ಪ್ರದರ್ಶನದಲ್ಲಿ ಅತಿಕಾಯನ ಮರಣದ ನಂತರದ ಭಾಗವನ್ನು ಆಡುವ ಪದ್ಧತಿ ಇಲ್ಲ. ಆದರೆ ಈ ಮುಂದಿನ ಭಾಗದಲ್ಲೂ ಕವಿಯು ಅದನ್ನು ರಂಗಕೃತಿಯಾಗಿಸುವುದಕ್ಕೆ ವಿಫುಲ ಅವಕಾಶ ಒದಗಿಸಿದ್ದಾನೆ.

ರಾಗ : ನೀಲಾಂಬರಿ, ಏಕತಾಳ

ಚಿಣ್ಣನ ಕಳುಹಿದಿರೆ  ಹಬ್ಬವವನೆನ್ನ 
ಕಣ್ಣಿಗೆ ಮಾಡಿದಿರೆ
ಎಣ್ಣಿದ ಬಯೆಕೆ ತೀರ್ದುದೆ  ಹಾಲ ಕೊಂಡಂತೆ
ತಣ್ಣಗೆ ಹೊಟ್ಟೆಗಾದುದೆ  ॥

ಎಂದು ಅತಿಕಾಯನ ಮರಣಕ್ಕಾಗಿ ಅಳುವ ತಾಯಿ ಒಡಲು, ದುಃಖದ ಕಡಲಾಗುವುದರ ಚಿತ್ತಾರ ಯಾರ ಹೃದಯವನ್ನೂ ಕರಗಿಸುವಂತಹದ್ದು. ಇಲ್ಲಿನ ಭಾವ ತೀವ್ರತೆ ಹೃದಯವನ್ನು ಕಲಕುತ್ತದೆ. ಪ್ರಸಂಗದುದ್ದಕ್ಕೂ ಇಂಥ ರಚನೆಗಳು ಸಾಕಷ್ಟು ದೊರೆಯುತ್ತವೆ.

ಈ ಘಟನೆಗಳಿಗೆ ರಾವಣನನ್ನು ತರಾಟೆಗೆ ತೆಗೆದುಕೊಳ್ಳುವ ಧಾನ್ಯಮಾಲಿನಿಯನ್ನು ಸಮಾಧಾನ ಮಾಡುವ ಛಾತಿ ಇಲ್ಲದೇ ತನ್ನ, ಅಸಾಯಕತೆಯನ್ನ ಕೋಪವಾಗಿ ಮಾರ್ಪಡಿಸಿಕೊಂಡು ರಾವಣ ಅತಿಕಾಯನ ಕೊಂದವರನ್ನ

ಪೇಳು ಸಾರಥಿಮಗನ ಮಡುಹಿದ  ಖೂಳನಾದವವನೀಗಳೆ ಬೀಳುಗಡಿವೆನು ರಣದೊಳೆ ಎಂದು ಪ್ರತಿಜ್ಞೆ ಮಾಡುತ್ತಾನೆ.

ರಾವಣ ಯುದ್ಧಕ್ಕೆ ಹೊರಡುವ ಬಗೆಯನ್ನು ಕವಿ ಅಚ್ಚುಕಟ್ಟಾಗಿ ವಿವರಿಸುತ್ತಾನೆ. ಆನೆಗಳ ಹಿಂಡ ಪಂಚಾನನನು ಪೊಗುವಂತೆ ರಣಾಂಗಣಕ್ಕೆ ಧಾವಿಸುವನು. ಆಮೇಲೆ ಸಂಜೀವಿನಿ ತರುವ ಪ್ರಸಂಗ, ಅದಕ್ಕೆ ಆಗುವ ಅಡೆ ತಡೆ ರಾಮನ ದುಃಖ, ಸಂಜೀವಿನಿ ಬಂದ ಸಂಭ್ರಮ, ಹೀಗೆ ಹಲವು ರೋಚಕ ಘಟನೆಗಳನ್ನ ಕವಿ ಮನೋಜ್ಞವಾಗಿ ಹೆಣೆದಿದ್ದಾನೆ. ಕೆಲವು ಅಪರೂಪದ ಮಟ್ಟುಗಳನ್ನು ಕವಿಯು ಪ್ರಯೋಗಿಸಿರುವುದನ್ನು ಕಾಣಬಹುದು.

ಉದಾ:

ರಾಗ ತುಜಾವಂತ ಝಂಪೆತಾಳ

ಲಾಲಿಸೈ ಪುಣ್ಯಜನಕುಲ ಸಾರ್ವಭೌಮ
ಹೇಳಲಿನ್ನೇನದನು ಸಮರ ನಿಸ್ಸೀಮ
ಏನನೆಂಬೆನು ನಿನ್ನ ಸೂನುವಿನ ಸಾಹಸವ
ವಾನರ ಮಹಾಬಲವ ಮೊದಲು ಪೊಕ್ಕು
ಆನೆಗಳ ಹಿಂಡ ಪಂಚಾನನು ಪೊಗುವಂತೆ
ಹಾನಿಗಯ್ದನು ಬೃಹಳ ಕರಡಿ ಕಪಿಗಳನು

ಒಟ್ಟಾರೆಯಾಗಿ ಹೇಳುವುದಾದರೆ ಈ ಪ್ರಸಂಗವನ್ನು ರಚಿಸಿದ ಹಟ್ಟಿಯಂಗಡಿ ರಾಮ ಭಟ್ಟ ಒಬ್ಬ ಶ್ರೇಷ್ಠಮಟ್ಟದ ಯಕ್ಷಗಾನ ಪ್ರಸಂಗಕಾರ. ರಂಗಕ್ಕೆ  ಹೊಂದುವ ಕೃತಿಗಳನ್ನು ರಚಿಸಿದ್ದಲ್ಲದೆ ಯಕ್ಷಗಾನ ಪ್ರಸಂಗ ರಚನೆಗೆ ಮಾದರಿಯಾಗುವಂತೆ ರಚಿಸಿದ್ದಾನೆ. ಮುಂದಿನ ಕೆಲವು ಕವಿಗಳಲ್ಲಿ ಕಾಣುವ ಪಾಂಡಿತ್ಯ ಪ್ರದರ್ಶನ, ಪ್ರಾಸವ್ಯಾಮೋಹಗಳೇ ಮುಂತಾದವು ಅವನಲ್ಲಿ ಕಾಣುವುದಿಲ್ಲ; ಸರಸತೆಗೆ ಬರವೂ ಇಲ್ಲ. ಯಕ್ಷಗಾನ ಸಾಹಿತ್ಯದ ಸಮೃದ್ಧಿಗೆ ಅವನ ಕಾಣಿಕೆ ದೊಡ್ಡದು.

ಅತಿಕಾಯಕಾಳಗ  ಈ ಕೃತಿಯನ್ನು ಶ್ರೀಕೃಷ್ಣ ಮುದ್ರಣಾಲಯ ಉಡುಪಿ (ವರ್ಷ – 1950   ಶ್ರೀ ಮನ್ವದ್ವಸಿದ್ಧಾಂತ ಗ್ರಂಥಾಲಯ ಉಡುಪಿ) ಇವರ ಪ್ರಕಟಿತ ಪ್ರಸಂಗ ಪುಸ್ತಕದಿಂದ ಆಯ್ದುಕೊಂಡಿದ್ದೇನೆ. (ಪದ್ಯಗಳು ಸುಮಾರು 353)

ಕವಿ ಪರಿಚಯ :

ಹಟ್ಟಿಯಂಗಡಿ ರಾಮಭಟ್ಟ (ಸು.17ನೇ ಶತಮಾನ)

ಈತನು ಕುಂದಾಪುರ ತಾಲೂಕಿನ ಹಟ್ಟಿಯಂಗಡಿಯವನು. ಈತನ ತಂದೆ ಸೂರಭಟ್ಟ. ಬೈಸಗಲ್ಲು ಶಂಕರಯ್ಯ ಎಂಬ ಯೋಗಿಯ ಶಿಶ್ಯವೃತ್ತಿಯಲ್ಲಿ ಇದ್ದಂತೆಯೂ ಕಂಡುಬರುತ್ತದೆ. ಕೃಷ್ಣಾರ್ಜುನ ಕಾಳಗ ಬರೆದ ಹಳೆಮಕ್ಕಿ ರಾಮ ಕೂಡಾ ಇದೇ ಶಂಕರಯ್ಯನನ್ನು ತನ್ನ ಗುರು ಎಂದು ಹೇಳಿಕೊಂಡಿದ್ದಾನೆ. ಈತನ ಕೃತಿಗಳು ಲವಕುಶ, ದ್ರೌಪದಿ ಸ್ವಯಂವರ, ಅತಿಕಾಯ ಕಾಳಗ, ಸುಭದ್ರಾ ಪರಿಣಯ, ಧ್ರುವ ಚರಿತ್ರೆ, ರತಿ ಕಲ್ಯಾಣ ಬಿಲ್ಲ ಹಬ್ಬ ಮತ್ತು ಕಂಸವಧೆ, ರಾಜಸೂಯ, ಸುಲೋಚನ ಚರಿತ್ರೆ, ಸೇತುಮಾಧವ, ಶೇಷಗರ್ವಾಪಹರಣ, ಗಿರಿಜಾ ವಿಲಾಸ, ಇಂದ್ರಜಿತು ಕಾಳಗ, ಪ್ರಸಂಗ ರಚನಾ ಕೌಶಲ್ಯದ ದೃಷ್ಟಿಯಿಂದ ಒಬ್ಬ ಪ್ರಮುಖ ಕವಿ. ಕ್ರಿ.ಶ.1674ರಲ್ಲಿ ಈತ ತೀರಿಕೊಂಡಿರಬಹುದೆಂದು ಡಾ॥ಶಿವರಾಮ ಕಾರಂತರು ತಮ್ಮ ಯಕ್ಷಗಾನ (ಪುಟ-49-ಪ್ರಕಟಣೆ 1974) ಪುಸ್ತಕದಲ್ಲಿ ಆ ಪ್ರಸಂಗಗಳ ಪಟ್ಟಿಯನ್ನು ಹಾಗೂ ಮೇಲಿನ ಮಾಹಿತಿಯನ್ನು ಒದಗಿಸಿದ್ದಾರೆ. ತನ್ನ ಎಲ್ಲ ಕೃತಿಗಳಲ್ಲಿ ಹಟ್ಟಿಯಂಗಡಿಯ ಲೋಕನಾಥನ ಸ್ಮರಣೆಯನ್ನು ರಾಮಭಟ್ಟನು ಮಾಡಿರುತ್ತಾನೆ. ಲೋಕನಾಥ, ಲೋಕೇಶ, ವಜ್ರಪುರಪತಿ, ಗೋಷ್ಠಪುರೀಶ ಮೊದಲಾದ ಅಂಕಿತಗಳನ್ನು ಈತನು ಬಳಸಿದ್ದಾನೆ.

ಅತಿಕಾಯ ಕಾಳಗದಲ್ಲಿ ಮೂಲ ರಾಮಾಯಣದಲ್ಲಿ ಇಲ್ಲದ ವೈಶಿಷ್ಟ್ಯ ವಿಷ್ಣುಭಕ್ತ ಸ್ವಭಾವದಲ್ಲಿ ಅತಿಕಾಯನನ್ನು ಚಿತ್ರಿಸಿರುವುದು ವೈಶಿಷ್ಟ್ಯಪೂರ್ಣವಾಗಿದೆ. ಯಕ್ಷಗಾನದ ರಾಕ್ಷಸ ವ್ಯಕ್ತಿತ್ವಗಳಲ್ಲಿಯೇ ಅತಿಕಾಯನು ಪ್ರತ್ಯೇಕವಾಗಿ ನಿಲ್ಲುವಂತೆ ರಾಮಭಟ್ಟನು ಚಿತ್ರಿಸಿರುತ್ತಾನೆ. ಧ್ರುವಚರಿತ್ರೆ, ಬಿಲ್ಲಹಬ್ಬ-ಕಂಸವಧೆ ಮತ್ತು ಸುಧಾಮ ಚರಿತ್ರೆ ಇವು ಮೂರು ಅವನ ಭಾಗವತದ ಯಕ್ಷಗಾನ ಪ್ರಸಂಗಗಳು.

(ಮಾಹಿತಿ : ಡಾ. ಪಾದೇಕಲ್ಲು ವಿಷ್ಣುಭಟ್ ಮತ್ತು ಡಾ.ಶಿವರಾಮ ಕಾರಂತರ ಯಕ್ಷಗಾನ ಗ್ರಂಥಗಳಿಂದ)

* * *

4. ಕಾಲನೇಮಿ ಕಾಳಗ

ಕಥಾಸಾರ:

ಶ್ರೀರಾಮ ಗಣಪತಿ ಶಿವ, ಪಾರ್ವತಿ, ಆಂಜನೇಯ, ಲಕ್ಷ್ಮೀ, ಸರಸ್ವತಿ ಅಲ್ಲದೇ ಕವಿಗಳ ಚಾರುಚರಣಕೆ ವಂದಿಸಿ ಕಥೆಯನ್ನು ಆರಂಭಿಸುತ್ತಾನೆ. ರಜತಾದ್ರಿಯಲ್ಲಿ ಹರನು, ಪರಮ ಪಾವನ ಸೀತಾರಾಮ ಚರಿತ್ರೆಯನ್ನು ಪಾರ್ವತಿಗೆ ಹೇಳಿದುದನ್ನು ನೈಮಿಶಾರಣ್ಯದ ಸೂತಮುನಿ, ಶೌನಕ ಮುಖ್ಯ ಮುನಿಗಳಗೆ ಹೇಳಿದರು.

ಅತಿಕಾಯ ಮುಂತಾದ ರಕ್ಕಸರಳಿಯೆ, ಶ್ರೀರಾಮ ತನ್ನ ಸಹೋದರ ಲಕ್ಷ್ಮಣನನ್ನು ಆ ಕಾರ್ಯಕ್ಕಾಗಿ ಪ್ರಶಂಸಿಸುತ್ತಾನೆ. ಹನುಮ ಜಾಂಬವಾದಿಗಳನ್ನು ಕೃತಜ್ಞತೆಯಿಂದ ಕೊಂಡಾಡುತ್ತಾನೆ. ತನ್ನ ಬಳಗ ಕಾಳಗದಿಂದ ಬಳಲಿ ಬವಣೆಗೊಂಡಿತಲ್ಲ ಎಂದು ಮರುಗಲು ಮುಂದೆ ರಾವಣನೆಂಬ  ದೈತ್ಯನ ಕೊಲ್ಲುವುಪಾಯ ಏನೆಂದು ಪ್ರಶ್ನಿಸಿದಾಗ ಸುಗ್ರೀವನು ಶ್ರೀರಾಮನಲ್ಲಿ ತವಪಾದ ಮಹಿಮೆಯಿಂದ ಇದೊಂದು ಕಾರ್ಯವೆಸಗಲು ಏನೂ ಚಿಂತೆಬೇಡ ಎಂದು ಹೇಳುತ್ತಾನೆ.

ಇತ್ತ ರಾವಣನೂ ಅತಿಕಾಯನ ಯುದ್ಧ ವಾರ್ತೆಯ ಕುತೂಹಲದಲ್ಲಿರಲು, ದೂತನೋರ್ವ ಬಂದು ಅತಿಕಾಯ ಲಕ್ಷ್ಮಣನ ಬಾಣದಿಂದ ಮಡಿದ ವಿಷಯ ತಿಳಿಸಲು, ರಾವಣ ಹಾಗೂ ರಕ್ಕಸವೀರರು ದುಃಖದಿಂದ ಕುಸಿಯುತ್ತಾರೆ. ರಾವಣ ಮರುಗುತ್ತಿರುವ ಸಮಯದಿ, ಮಂಡೋದರಿ ಬಂದು ಶ್ರೀರಾಮನಿಗೆ ಶರಣಾಗುವಂತೆ ತಿಳಿಯ ಹೇಳಲು, ಅದನ್ನು ನಿರಾಕರಿಸಿ, ರಾಮನಿಗೆ ಯುದ್ಧದಲ್ಲಿ ಎದುರಾಗಿ ಶ್ರೀಹರಿಯ ಪಾದವನ್ನು ಸೇರುವೆ,  ತಾನೂ ಎಲ್ಲವನ್ನು ತಿಳಿದವನೇ ಎಂದು ತನ್ನ ನಿಲುವನ್ನು ಸಮರ್ಥಿಸಿಕೊಂಡು, ನಾಳಿನ ಯುದ್ಧಕ್ಕೆ ಆಯುಧಪೂಜೆ ಮಾಡಿ ದುರ್ಗೆಯನ್ನು ಸ್ತುತಿಸಿ ಬಲಿಗಳನ್ನು ನೀಡಿ ಸಿದ್ಧನಾಗುತ್ತಾನೆ.

ರಾವಣ ಮರುದಿನ ಒಡ್ಡೋಲಗವ ಕೊಟ್ಟಿರಲು, ರಕ್ಕಸ ವೀರರಾದ ಮಕರಾಕ್ಷ, ಕುಂಬ, ನಿಕುಂಬ ಮುಂತಾದ ದೈತ್ಯರು ರಾವಣನ ಅಪ್ಪಣೆಗೆ ಕಾದಿರುವ ಸಮಯದಿ, ಇಂದ್ರಜಿತು ಬಂದು ತಂದೆಗೆ ವಂದಿಸಿ ಯುದ್ಧಕ್ಕೆ ಅಪ್ಪಣೆ ಬೇಡುವನು. ಮಗನನ್ನು ತಡೆದು ತಾನೇ ಸಮರಕ್ಕೆ ಹೊರಟ ರಾವಣನಿಗೆ ಪತ್ನಿ ಮಂಡೋದರಿ ರತುನದಾರತಿ ಎತ್ತಿ ಶುಭಹಾರೈಸುತ್ತಾಳೆ.

ರಣಾಂಗಣದಲ್ಲಿ ಘೋರ ಸಮರವಾರಂಭವಾಗುತ್ತದೆ. ಕಪಿಗಳು ನಾನಾ ರೀತಿಯಲ್ಲಿ ರಾವಣನ ಮೇಲೇರಿಬಂದು ಯುದ್ಧಮಾಡುತ್ತಾರೆ. ರಾವಣ-ಲಕ್ಷ್ಮಣರ ಯುದ್ಧದಲ್ಲಿ ಲಕ್ಷ್ಮಣ ಮೂರ್ಛಾಗತನಾಗುತ್ತಾನೆ. ಹನುಮಂತ ಕೋಪದಿಂದ ರಾವಣನ ಮೇಲೆರಗಿ ಮುಷ್ಟಿಘಾತದಿಂದ ಅವನನ್ನು ಕೆಡಹುತ್ತಾನೆ. ರಾವಣ ಮೂರ್ಛೆತಳೆದು ಬೀಳಲು, ಹನುಮನೇ ಅವನನ್ನು ಉಪಚರಿಸಿ ಎಬ್ಬಿಸುತ್ತಾನೆ.

ಶ್ರೀರಾಮ ರಾವಣನೊಡನೆ ಯುದ್ಧಕ್ಕೆ ತೊಡಗುತ್ತಾನೆ. ರಾಮನ ಬಾಣಕ್ಕೆ ರಾವಣ ಸರ್ವವನ್ನು ಕಳೆದುಕೊಂಡು ನಾಚಿಕೆಯಿಂದ ಮನೆಗೆ ಹಿಂದಿರುಗುವನು. ಇತ್ತ ಶ್ರೀರಾಮನು ಮೂರ್ಛಾಗತನಾದ ಲಕ್ಷ್ಮಣನನ್ನು ಕಂಡು ಮರುಗುವನು. ಜಾಂಬವನ ಸೂಚನೆಯಂತೆ ಹನುಮಂತನು ಸಂಜೀವಿನಿ ತರಲು ಹೊರಡುತ್ತಾನೆ.

ಸೀತೆ ಅಶೋಕವನದಲ್ಲಿ ಸರಮೆಯಿಂದ ಸಮರ ವೃತ್ತಾಂತ ತಿಳಿಯುತ್ತಾಳೆ. ಲಕ್ಷ್ಮಣ ಮೂರ್ಛಾಗತನಾಗಿರುವುದಕ್ಕೆ ಶೋಕಿಸುತ್ತಾಳೆ. ಸರಮೆ ಸಮಾಧಾನಪಡಿಸುತ್ತಾಳೆ.

ಇತ್ತ ಹನುಮ ಸಂಜೀವಿನಿಯನ್ನು ತರಲು ಹೋದ ಸುದ್ದಿ ತಿಳಿದ ರಾವಣ ವ್ಯಥೆಪಡುತ್ತಾನೆ. ಕಾಲನೇಮಿಯನ್ನು ಕಂಡು ಹನುಮಂತನನ್ನು ಈ ಕೆಲಸದಿಂದ ವಿಮುಖನಾಗಿಸಲು ಪ್ರಯತ್ನಿಸಬೇಕೆಂದು ಕೇಳಿಕೊಂಡಾಗ ಕಾಲನೇಮಿ ರಾವಣನಿಗೆ ಬುದ್ಧಿ ಹೇಳಲು, ಕುಪಿತಗೊಂಡ ರಾವಣ ಗದರಿಸಿ ಒಪ್ಪಿಸುತ್ತಾನೆ. ಕಪಟರೂಪ ಧರಿಸಿ ಕಾಲನೇಮಿ ಚಂದ್ರದ್ರೋಣ ಪರ್ವತದಲ್ಲಿ ಮಾರುತಿಗಾಗಿ ಕಾಯುತ್ತಾನೆ. ಮಾರುತಿಯು ಕಾಲನೇಮಿ ತೋರಿದ ಸರೋವರದಲ್ಲಿ ನೀರು ಕುಡಿಯುತ್ತಿರುವಾಗ, ಶಾಪದಿಂದ ಮೊಸಳೆಯಾಗಿ ಕಾಲುಹಿಡಿದ ದಿವಿಜನಾರಿಯನ್ನು ಶಾಪಮುಕ್ತಗೊಳಿಸಿ, ಅವಳು ಅರುಹಿದ ವಿಷಯ ತಿಳಿದು ಕಾಲನೇಮಿಯ ಕುತಂತ್ರಗಳನ್ನು ಪುಡಿಗಟ್ಟಿ ಅವನನ್ನು ಕೊಂದು ಸಂಜೀವಿನಿಯನ್ನು ತರಲು ಅಂಬರದಲ್ಲಿ ಹೊರಟನು. ಇತ್ತ ಅಯೋಧ್ಯೆಯಲ್ಲಿ ಭರತ ಶತ್ರುಘ್ನರು ದುಃಸ್ವಪ್ನ ಕಂಡು, ಅದರ ಪರಿಹಾರಕ್ಕಾಗಿ ಶಾಂತಿ ಮಾಡುವರು.

ಹನುಮಂತ ಸಂಜೀವಿನಿಯನ್ನು ಹೊತ್ತು ತರುವಾಗ ಸಮುದ್ರದ ಮಧ್ಯೆ ಮಾಲ್ಯವಂತನೆಂಬ ಖಳ ತಡೆಯಲು, ಯುದ್ಧದಲ್ಲಿ ಅವನನ್ನು ಪಾತಾಳಕಟ್ಟಿದನು. ತರುವಾಯ ಹನುಮನು ತಂದ ಸಂಜೀವಿನಿಯಿಂದ ಲಕ್ಷ್ಮಣನು ಎಚ್ಚರಗೊಳ್ಳಲು ಎಲ್ಲರೂ ಸಂತೋಷಪಡುವರು. ಬಳಿಕ ರಾಮ ಎಲ್ಲ ದೈತ್ಯರನ್ನು ಸದೆಬಡಿದು, ಆಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾದಲ್ಲಿಗೆ ಈ ಕಥೆ ಮುಕ್ತಾಯವಾಗುತ್ತದೆ.

ಸಮೀಕ್ಷೆ

ರಾಮಾಯಣದ ರಾಕ್ಷಸ ವೀರರಲ್ಲಿ ಮಾಯಾವಿಗಳಲ್ಲಿ ಕಾಲನೇಮಿಯೂ ಒಬ್ಬ. ಅವನನ್ನು ಹನುಮಂತನು ಸಂಹರಿಸಿದ ಕಥೆಯೇ ಕಾಲನೇಮಿ ಕಾಳಗ. ಲಂಕೆಯ ಯುದ್ಧರಂಗದ ರಂಜಕ ಕಥೆಗಳಲ್ಲಿ ಇದೂ ಒಂದಾದುದರಿಂದ ಕಾಳಗ ಪ್ರೀಯರಾದ ಯಕ್ಷಗಾನ ಪ್ರೇಕ್ಷಕರು ಈ ಕೃತಿಯನ್ನು ಪ್ರೀತಿಯಿಂದಲೇ ಬರಮಾಡಿಕೊಳ್ಳುತ್ತಾರೆ. ಪ್ರಯೋಗದಲ್ಲಿ ಜನಪ್ರಿಯತೆ ಇದಕ್ಕೆ ದಕ್ಕಲಿಲ್ಲವಾದರೂ ರಂಗಯೋಗ್ಯವಾದ ಕೃತಿಯಾಗಿ ಪ್ರಸಿದ್ಧವಾಗಿದೆ.

ಕಥಾಸಾರಾಂಶವು ತಿಳಿಸುವಂತೆ ಕಥೆಯ ಮೊದಲ ಭಾಗವೆಲ್ಲ ರಾವಣನ ಯುದ್ಧದ ವರ್ಣನೆಯೇ  ಆಗಿದೆ. ಅತಿಕಾಯ, ಇಂದ್ರಜಿತುಗಳಂಥ ವೀರರನ್ನು ಕಳೆದುಕೊಂಡು ಗೋಳಾಡುವ ರಾವಣನ ಚಿತ್ರ ಇತರ ಪ್ರಸಂಗಗಳಲ್ಲಿ ಇರುವಂತೆಯೇ ಇದೆ. ಅಲ್ಲಿನಂತೆ ಮಂಡೋದರಿಯ ಉಪದೇಶವೂ ಉಂಟು. ಆದರೆ ಇಲ್ಲಿ ರಾವಣ ಸೀತೆಯನ್ನು ತಂದುದಕ್ಕೆ ಕೊಡುವ ಕಾರಣ ರಾವಣವಧೆಯಲ್ಲಿರುವಂತೇ ಇರುವುದ ಗಮನಾರ್ಹ. ರಾವಣ ಹೇಳುತ್ತಾನೆ.

ರಾಗ ಕಾಂಬೋಧಿ ಝೆಂಪೆತಾಳ

ಅರಸಿ ನೀನೆನ್ನ ಮೂಡಾತ್ಮನೆನಬೇಡೀಗ 
ಧರೆಯ ಭಾರವ ಕಳೆವ ನೆವದಿ

ಹರಿಮನುಜ ರೂಪಿನೊಳು ಉದಿಸಿರುವನೆಂದು ನಾ 
ನರಿಯದವನಲ್ಲ ಕೇಳ್ ಮಡದಿ

ಇಂದಿರೆಯ ನೆಪದೊಳೀ ಭವವ ಪರಿಹರಿಸಿಗೋ
ವಿಂದ ಮುಕುತಿಯನೀವನೆಂದು

ಹಿಂದೆ ತಾನೆನಗೆ ಪೇಳಿದ ಮಾತಿಗಾಗೀನಾ 
ತಂದೆ ಜಾನಕಿಯ ರಮೆಯೆಂದು

ಇದೇ ಧಾಟಿಯಲ್ಲಿ ರಾವಣ ತನ್ನ ಅಂತರಂಗವನ್ನು ಬಿತ್ತರಿಸುವುದು ಸೊಗಸಾಗಿದೆ.

ಕಾಲನೇಮಿ ಮಾಯಾವಿಯಾದರೂ ವಿವೇಕವುಳ್ಳವನು. ಅವನು ಕೂಡ ಮಾರೀಚನಂತೆ ರಾವಣನಿಗೆ ಉಪದೇಶವನ್ನು ನೀಡುತ್ತಾನೆ. ಆದರೆ ರಾವಣನ ಪ್ರತಿಕ್ರಿಯೆ ಬೇರೆ. ರಾವಣ ಬೆದರಿಸುತ್ತಾನೆ. ಇದು ಸ್ಪಷ್ಟವಾಗಿ ಮಾರೀಚ ವೃತ್ತಾಂತದ ಅನುಕರಣೆಯಾಗಿದೆ. ಹಾಗಿದ್ದರೂ ಕಾಲನೇಮಿ ನಮ್ಮ ಸಹಾನುಭೂತಿಯನ್ನು ಗಳಿಸುತ್ತಾನೆ.

ಪ್ರಸಂಗಕವಿ ಆಯ್ದುಕೊಂಡ ಕಥೆಯನ್ನು ನಿರೂಪಿಸುವ ರೀತಿ ಮೆಚ್ಚುವಂಥದು. ಭಾಷಾಪ್ರೌಢಿಮೆ, ಭಾವಸಮೃದ್ಧಗಳಿಗೆ ಕೊರತೆಯಿಲ್ಲ. ಈ ವಾರ್ಧಕವನ್ನು ಗಮನಿಸಿ.

ಮಿತ್ರಸುತನಿಂತೆನಲು ಕೇಳ್ದು ವಾನರರೆಲ್ಲ
ಮಿತ್ರಜನ ಕೋಪವೆತ್ತವನಿಜಾನನಕಂಜಿ
ಮಿತ್ರಗೊಂದಿಸಿ ಜೀಯ ನಿನ್ನಾಜ್ಞೆಯಾದರಾ ಖಳನ ವಂಶಾವಳಿಯನು
ಮಿತ್ರಜನ ಬಳಿಗಟ್ಟಿ ದೇವಿಯರತಂದು ಭವ
ಮಿತ್ರ ನಿನಗೊಪ್ಪಿಸುವೆವೆನಲು ಸಂಗ್ರಾಮದೊಳ
ಮಿತ್ರನಂ ಕೋಲವೆ ನಾ ನಿಮ್ಮಯ ಸಹಾಯದಿಂ ಸಹಿಸಿ ರೋಷವನೆಂದನು 

ಕಾಲನೇಮಿಯು ತೋರಿದ ಸರೋವರದ ಕಮಲವನ್ನು ಕವಿ ಹೀಗೆ ವರ್ಣಿಸುತ್ತಾನೆ.

ವಾರ್ಧಕ

ತನ್ನ ಪೌತ್ರ ವಿರಂಚಿ ತಾ ಕ್ಷಿತಿಯ ಬಸುರೊಳಿಹೆ
ತನ್ನೊಳುದಿಸಿರ್ಪುದಂ ತೊಡುವನಂಗಜನೊಲಿದು
ತನ್ನ ಸನ್ನಿಧಿಯೊಳಂ ತಪಗೈಯುವರ್ಮುನೀಶ್ವರರು ಶಿವರೂಪ ತಾನು
ತನ್ನ ತನುಜೇಶ ರವಿಮಾ ಪದ್ಮೀಯನಿಮಿಷರು
ತನ್ನೊಳಿಹರೈಸೆ ಗುಣಹೀನರುಂ ಕಳವಳಿಸಿ
ತನ್ನ ಬಳಿಗೆಯ್ಯಲವರಂ ಪೊರೆವೆನೆನುತ ಮೆರೆದಿರ್ದುದಾಕೊಳನ ಕಮಲ

ಜೈಮಿನೀ ಭಾರತದ ಪ್ರಭಾವವು ವಾರ್ಧಕಗಳಲ್ಲಿ ಕಾಣುತ್ತದೆ. ಲಕ್ಷ್ಮೀಶನ ಪ್ರಭಾವದಿಂದ ತಪ್ಪಿಸಿಕೊಂಡ ಯಕ್ಷಗಾನ ಕವಿಗಳು ವಿರಳ. ಅದೇನೂ ಛಂದೋದೋಷವಲ್ಲ. ಕವಿಗೆ ಬಂಧಗಳ ಮೇಲೆ, ರಾಗ-ಮಾತುಗಳ ಮೇಲೆ ಸಾಕಷ್ಟು ಹಿಡಿತನವಿರುವುದು ಪ್ರಸಂಗದ ಪದ್ಯಗಳನ್ನೋದಿದರೆ ಗೊತ್ತಾಗುತ್ತದೆ. ಯಕ್ಷಗಾನ ಮಾಧ್ಯಮದ ಮೇಲೆ ಸಾಕಷ್ಟು ಹಿಡಿತವಿರುವುದನ್ನು ಅವನ ಕೃತಿಯು ತೋರಿಸಿಕೊಡುತ್ತದೆ. ಸರಳವಾದ ಕಥೆಯನ್ನು ಸರಳವಾಗಿ ಸೊಗಸಾಗಿ ನಿರೂಪಿಸಿದ ಕಾರಣ ಕವಿಯನ್ನು ಮೆಚ್ಚಬೇಕಾಗುತ್ತದೆ.

ಈ ಪ್ರಸಂಗವನ್ನು ಶ್ರೀ ಕೃಷ್ಣ ಮುದ್ರಣಾಲಯ ಉಡುಪಿ (1926) ಇವರಿಂದ ಪ್ರಕಟಿತ ಪ್ರಸಂಗ ಪುಸ್ತಕದಿಂದ ಆಯ್ದುಕೊಂಡಿದ್ದೇವೆ.

ಕವಿ ಪರಿಚಯ : ಅಜ್ಞಾತ