1. ರಾವಣೋದ್ಭವ

ಕಥಾಸಾರ:

ರಾವಣನನ್ನು ಕೊಂದು ಸೀತಾ ಸಮೇತನಾಗಿ ಸಾಕೇತಕ್ಕೆ ಬಂದು ಶ್ರೀರಾಮ ಪಟ್ಟಾಭಿಷಿಕ್ತನಾಗಿರುವಾಗ, ಪೂಜ್ಯ ಅಗಸ್ತ್ಯರು ರಾಮನಿಗೆ ರಾವಣನ ಉದ್ಭವದ ವೃತ್ತಾಂತವನ್ನು ಹೇಳಿದರು.

ಪೂರ್ವದಲ್ಲಿ ದೈತ್ಯ ವಿದ್ಯುತ್ಕೇಶಿ ಎಂಬ ಖಳನಿಗೆ ಮಗುವೊಂದು ಜನಿಸಿತು. ಹುಟ್ಟಿದ ಶಿಶುವನ್ನು ಅವನ ತಾಯಿ ಅರಣ್ಯದಲ್ಲಿ ಅನಾಥವಾಗಿ ಬಿಟ್ಟು ಹೋದ ಸಂದರ್ಭದಲ್ಲಿ ಗಗನದಲ್ಲಿ ಸಂಚರಿಸುವ ಪಾರ್ವತಿ ಪರಮೇಶ್ವರರು ಮಗುವನ್ನು ಕಂಡು ಕರುಣೆಯಿಂದ ಸುಕೇಶಿ ಎಂದು ಹೆಸರಿಟ್ಟು ಸಲಹುವರು. ಇವನು ಯೌವನವಂತನಾಗಿ ಗಂಧರ್ವ ಸ್ತ್ರೀಯಲ್ಲಿ ಮಾಲಿ, ಮಾಲ್ಯವಂತ ಮತ್ತು ಸುಮಾಲಿ ಎಂಬ ಮಕ್ಕಳನ್ನು ಪಡೆದು ವಿಶ್ವಕರ್ಮನ ಪರವಾಗಿದ್ದ ಲಂಕೆಯಲ್ಲಿ ನೆಲೆಸಿದ. ಬಲಗರ್ವಿತರಾದ ಈ ಖೂಳ ರಕ್ಕಸರು ದೇವತೆಗಳ ಮೇಲೆ ದಾಳಿಯಿಟ್ಟು ಅವರನ್ನು ಸೋಲಿಸಲು ಅವರೆಲ್ಲ ಶಂಕರನ ಮೊರೆ ಹೋಗುವರು. ಶಂಕರನು ನಿಮ್ಮ ಕಷ್ಟವನ್ನು ಶ್ರೀಹರಿ ಪರಿಹರಿಸುವನು ಎನಲು, ದೇವತೆಗಳು ಲಕ್ಷ್ಮೀಕಾಂತನನ್ನು ಕಂಡು ಬಿನೈಸುವರು. ಶ್ರೀಹರಿ ದೇವತೆಗಳಿಗೆ ಭರವಸೆ ನೀಡಿ ಭೂಭಾರ ಇಳಿಸುವೆನೆಂದು ತಿಳಿಸುವನು. ಇದನ್ನು ಅರಿತ ಮಾಲ್ಯವಂತನು ಮಾಲಿ ಎಂಬ ತನ್ನಣ್ಣನಿಗೆ ದೇವತೆಗಳ ಹಾಗೂ ಶ್ರೀಮನ್ನಾರಾಯಣನ ಸಂಕಲ್ಪ ತಿಳಿಸುತ್ತಾನೆ. ಇದರಿಂದ ಕೋಪಗೊಂಡು, ಈ ದೈತ್ಯ ಸಹೋದರರು ಪುನಃ ದೇವತೆಗಳ ಮೇಲೆ ದಾಳಿ ಮಾಡಿ ಅವರನ್ನ ಸೋಲಿಸಿದರು. ಸೋತ ದೇವತೆಗಳು  ಶ್ರೀಹರಿಗೆ ಶರಣಾಗಲು ಹರಿ ಮೈದೋರಿ ಈ ದುರುಳರ ಮೇಲೆ ಚಕ್ರವೆನ್ನೆಸಗಿ ಅವರನ್ನು ಸಂಹರಿಸಿದನು. ಅಳಿದುಳಿದ ರಕ್ಕಸರನ್ನು ಕೂಡಿಕೊಂಡು ಸುಮಾಲಿ ಮಾಲ್ಯವಂತರು ಲಂಕೆಯಿಂದ ಪಾತಾಳಕ್ಕೆ ಪಲಾಯನಗೈದರು.

ಬ್ರಹ್ಮಮಾನಸ ಪುತ್ರ ಪುಲಸ್ತ್ಯನು ತಪೋನಿರತನಾಗಿರಲು ಅಲ್ಲೇ ಹತ್ತಿರದಲ್ಲಿರುವ ಸರೋವರದಲಿ್ಲ ಜಲಕೇಳಿಗೆ ಬರುವ ಅಪ್ಸರೆಯರಿಂದ ತನಗೆ ತಪೋಭಂಗವಾಗದಿರಲೆಂದು ಆ ಸರೋವರದಲ್ಲಿ ಮಿಂದವರು ಗರ್ಭಿಣಿಯಾಗಲೆಂದು ಶಾಪಕೊಟ್ಟಿದ್ದು, ಇದನ್ನರಿಯದ ತ್ರಣಬಿಂದು ಋಷಿಯ ಕುವರಿ ಗೋ ಎಂಬಳು ಅಲ್ಲಿ ಮಿಂದು ಗರ್ಭವತಿಯಾಗುವಳು. ನಿರ್ದೋಶಿಯಾದ ಇವಳನ್ನು ವರಿಸಬೇಕೆಂದು   ತ್ರಣಬಿಂದು ಪ್ರಾರ್ಥಿಸಲು ದಾರಿಗಾಣದೇ ಪುಲಸ್ತ್ಯನು ಅವಳನ್ನು ಮಡದಿಯಾಗಿ ಸ್ವೀಕರಿಸುವನು. ಅವಳಿಗೆ ಜನಿಸಿದ ಮಗನಿಗೆ ವಿಶ್ರವಸು ಎಂದು ನಾಮಕರಣ ಮಾಡಿದ. ಕಾಲಕ್ರಮದಲ್ಲಿ ಭಾರದ್ವಜರ ಮಗಳು ದೇವವರ್ಣಿನಿಯೊಡನೆ ಇವನ ವಿವಾಹ ನೆರವೇರಿತು. ವಿಶ್ರವಸುವು ಈ ದೇವವರ್ಣಿನಿಯಲ್ಲಿ ವೈಶ್ರವಣನೆಂಬ ಮಗನನ್ನು ಪಡೆದನು. ವೈಶ್ರವಣು ಘನ ತಪಸ್ಸಿನಿಂದ ಬ್ರಹ್ಮ ದೇವನನ್ನು ಒಲಿಸಿಕೊಂಡ ಅವನಿಂದ ದಿಕ್ಪಾಲತ್ವವನ್ನು, ಪುಷ್ಪಕ ವಿಮಾನವನ್ನು ಪಡೆದ. ಆಮೇಲೆ ತಂದೆಯ ನಿರ್ದೇಶನದಂತೆ ಲಂಕೆಯಲ್ಲಿ ವಾಸ ಮಾಡಿಕೊಂಡನು. ಒಂದು ದಿನ ಪುಷ್ಪಕವನ್ನೇರಿ ತನ್ನ ತಂದೆಯನ್ನು ಕಾಣಲು ಬರುತ್ತಿರುವಾಗ ಸುಮಾಲಿ ಮತ್ತು ಮಾಲ್ಯವಂತರು ಕುಬೇರನ ವೈಭವವನ್ನು ಕಂಡು ಕರುಬಿದರು. ಒಂದು ಕಾಲಕ್ಕೆ ತಮ್ಮದಾಗಿದ್ದ ಲಂಕೆ ಈಗ ಕುಬೇರನಲ್ಲಿ ಸೇರಿ ಹೋಗಿದ್ದನ್ನು ಸಹಿಸಲಾಗಲಿಲ್ಲ. ಈ ವಿಷಯದಲ್ಲಿ ಸುಮಾಲಿಗೆ ಮಾಲ್ಯವಂತ ಹೇಳಿದ ಮಾತನ್ನು ಕೇಳಿ ತಮ್ಮನಿಗೆ ಸವಾಧಾನವನ್ನರುಹಿ ಸಾವಧಾನದಿಂದ ಕಾರ್ಯಸಾಧಿಸೋಣ ಎಂದು ಹೇಳುತ್ತಾನೆ. ಅಂತೆಯೇ ತನ್ನ ಮಗಳಾದ ಕೈಕಸೆಗೆ, ದಾನವಕುಲದ ಉದ್ಧಾರಕ್ಕಾಗಿ ನೀನು ಹೇಗಾದರೂ ಮಾಡಿ ವಿಶ್ರವಸುವನ್ನ ಒಲಿಸಿ ಅವನಿಂದ ಸಂತಾನ ಪಡೆ ಎಂದು ನಿಯೋಜಿಸಲು, ಸಂತಸಗೊಂಡ ಕೈಕಸೆ ಅದಕ್ಕನುವಾಗಿ ವಿಶ್ರವಸುವಿನ ಎದುರು ವನಪುವಯ್ಯರದಿಂದ ಎರಗಿ ಅವನನ್ನು ಒಲಿಸಿಕೊಂಡು ಅವನಿಂದ ಸಂತಾನ ಭಿಕ್ಷೆ ಬೇಡುತ್ತಾಳೆ. ಸುಜ್ಞಾನದಿಂದ ಎಲ್ಲ ತಿಳಿದು ಮುನಿ ಅವಳನ್ನು ಕೂಡಲು ಅವಳಿಗೆ ರಾವಣ, ಕುಂಭಕರ್ಣ ಜನಿಸಿದರು. ಅಂತೆಯೆ ನಾನಾ ಉತ್ಪಾತಗಳು ತೋರಿದವು. ಹರಿಭಕ್ತ ವಿಭಿಷಣನ ಜನನವೂ ಆಯ್ತು. ಶುರ್ಪನಖಿ ಎಂಬ ಹೆಣ್ಣು ಮಗುವನ್ನು ಸಹ ಕೈಕಸೆ ಹೆತ್ತಳು.

ರಾವಣ ಕುಂಭಕರ್ಣರು ಸಾದು ಸಜ್ಜನರಿಗೆ ಉಪಟಳ ಕೊಡಲು ಆರಂಭಿಸಿದರು. ಕೈಕಸೆ ತನ್ನ ಮಕ್ಕಳಾದ ರಾವಣ, ಕುಂಭಕರ್ಣ,  ವಿಭೀಷಣರನ್ನು ಕರೆದು ಬ್ರಹ್ಮನನ್ನು ಮೆಚ್ಚಿಸಿ ವರಪಡೆವಂತೆೆ ಸೂಚಿಸಿದಳು. ಅಂತೆಯೇ ಮೂವರೂ ಘೋರ ತಪವಾಚರಿಸಿ ಬ್ರಹ್ಮನನ್ನು ಮೆಚ್ಚಿಸಿದರು. ರಾವಣ ತನಗೆ ಯಾರಿಂದಲೂ ಸೋಲು ಬರದಂತೆ ವರವನ್ನು ಪಡೆಯಲು ದೇವತೆಗಳು ಭಯಗೊಂಡರು ಇದರಿಂದ ಮುಂದೆ ಲೋಕಕ್ಕೇ ಗಂಡಾಂತರವೆಂದರಿತು ದೇವತೆಗಳು ಶಾರದೆಯನ್ನ ಪ್ರಾರ್ಥಿಸಿ, ಮುಂದೆ ಕುಂಭಕರ್ಣ ವರವ ಪಡೆವ ಸಮಯ ನೀನು ರಕ್ಷಿಸಬೇಕೆನಲು ಶಾರದೆ, ಆತ ವರವ ಕೇಳುವ ಸಮಯದಿ ಅವನ ನಾಲಿಗೆಯಲ್ಲಿ ನೆಲಸಿ ಉಚಿತವಾದ ವರವನ್ನೇ ಬೇಡುವಂತೆ ಮಾಡುವೆನೆಂದು ಅಭಯ ನೀಡುತ್ತಾಳೆ. ಅಂತೆಯೇ ಅವನು ವರವನ್ನು ಬೇಡುವ ಸಮಯ ಬಂದಾಗ ದೀರ್ಘ ನಿದ್ರೆಯ ವರ ಪಡೆಯುವಂತಾಗುತ್ತದೆ. ವಿಭೀಷಣನು ಸತ್ಸಂಗ, ವನಜನಾಭನ ಧ್ಯಾನ ಮತ್ತು ಸುಜ್ಞಾನವನ್ನು ಬೇಡುತ್ತಾನೆ.

ಮೂವರೂ ವರ ಪಡೆದ ಸಂಗತಿ ತಿಳಿದು ಸುಮಾಲಿ ಮಾಲ್ಯವಂತ ಮಾರೀಚ ಮುಂತಾದ ದೈತ್ಯರು ರಕ್ಕಸರನ್ನೆಲ್ಲ ಒಗ್ಗೂಡಿಸಿ ತನ್ನವರ ಸಲಹೆಯಂತೆ ವೈಶ್ರವಣನಲ್ಲಿಗೆ ಪ್ರಹಸ್ತವನ್ನು ಕಳಿಸಿ ಲಂಕೆಯ ಅಧಿಪತ್ವ ತನಗೆ ಬಿಡುವಂತೆ ಕೇಳಲು, ಬೇರೆ ದಾರಿತಿಳಿಯದೇ, ಅದಕ್ಕೊಪ್ಪಿ ಕುಬೇರ ಲಂಕೆಯನ್ನು ತ್ಯಜಿಸುತ್ತಾನೆ. ತಂದೆಯಲ್ಲಿ ಮುಂದೆ ತನಗೆ ಗತಿಯೇನೆಂದು ಪ್ರಶ್ನಿಸಲು, ವಿಶ್ರವಸು ಕುಬೇರನಿಗೆ ಉತ್ತರ ದಿಕ್ಕಿನ ಆಧಿಪತ್ಯವನ್ನು ಕೊಡುತ್ತಾನೆ. ಇತ್ತ ರಾವಣ ಲಂಕೆಯ ಆಧಿಪತ್ಯ ವಹಿಸಿಕೊಂಡಿರಲು, ತಂಗಿ ಶೂರ್ಪನಖಿ ಅಣ್ಣನಲ್ಲಿ ತನಗೆ ಮದುವೆ ಮಾಡುವಂತೆ ವಿನಂತಿಸಲು ರಾವಣ ಮಾವ ಮಾರೀಚನ ಮೂಲಕ ವಿದ್ಯುಜಿಹ್ವನೆಂಬುವನನ್ನು ಒಡಂಬಡಿಸಿ ಮದುವೆ ಮಾಡಿಸುವರು. ಇವಳ ವಿಕಾರ ರೂಪವನ್ನು ನೋಡಿ ವಿದ್ಯುಜಿಹ್ವ ಮೂರ್ಛಿತನಾಗುವನು. ಆದರೂ ಬಿಡದೇ ಅವನನ್ನು ಶೂರ್ಪನಖಿ ಮದುವೆಯಾಗುವಳು.

ಇತ್ತ ಮಯನೆಂಬ ದಾನವ ಶಿಲ್ಪಿ (ಹೇಮ ಎಂಬ) ಅಪ್ಸರೆಯಲ್ಲಿ ಪಡೆದ ಮಗಳಾದ ಮಂಡೋದರಿ ರಾವಣರ ಮದುವೆ ವೈಭವದಲ್ಲಿ ನಡೆಯುತ್ತದೆ. ದಶಕಂಠ ಸಂಭ್ರಮದಲ್ಲಿ ಲಂಕೆಯನ್ನಾಳುತ್ತ ಒಂದು ದಿನ ವಿಶ್ವವಿಜಯಕ್ಕೆ ಹೊರಟು ಸುರಪರನ್ನು ಕಂಗೆಡೆಸಿ, ಅಣ್ಣ ಕುಬೇರನಿಂದ ಪುಷ್ಪಕವಿಮಾನವನ್ನು ಸೆಳೆದು ಧರೆಯಲ್ಲಿ ತಿರುಗಾಡುತ್ತಿರಲು ಒಂದು ಕಡೆ ಪುಷ್ಪಕ ಮುಂದೆ ಸಾಗದೇ ಸ್ಥಬ್ಧವಾಗಲು ವಿಚಾರಿಸಿದಾಗ ಅದು ಶಿವ ಪಾರ್ವತಿಯರು ವಾಸಿಸುವ ಬೆಟ್ಟ ಎಂದು ತಿಳಿದು ಬಂದಾಗ  ಆ ಬೆಟ್ಟವನ್ನೇ ತನ್ನ ಕೈಯಿಂದ ಎತ್ತಲು ಉದ್ಯುಕ್ತನಾಗಲು, ಪಾರ್ವತಿ ಕಂಗೆಡುತ್ತಾಳೆ. ಹರನು ಗಿರಿಜೆಗೆ ಸಮಾಧಾನ ಹೇಳಿ ರಾವಣನ ವೃತ್ತಾಂತ ತಿಳಿಸಿ ಪರ್ವತವನ್ನು ಹೆಬ್ಬೆರಳಿಂದ ಒತ್ತಲು, ಅದರಡಿಯಲ್ಲಿ ದಶಕಂಠನ ಕೈಗಳು ಸಿಕ್ಕಲು ಒಂದೇ ಸಮನೆ ಆತ ಹರನನ್ನು ಸ್ತುತಿಸುತ್ತಾನೆ. ಸಂತಸಗೊಂಡ ಶಿವ ಅವನನ್ನು ಅನುಗ್ರಹಿಸಿ ಚಂದ್ರಹಾಸವೆಂಬ ಆಯುಧವನ್ನು ಕೊಟ್ಟು ಹರಸುತ್ತಾನೆ.

ಬೃಹ್ಮಸ್ಪತಿಯ ಮಗ ಕುಶದ್ವಜ. ಅವನ ಮಗಳಾದ, ವೇದವತಿ ಎಂಬ ಕನ್ಯೆಯು ಶ್ರೀ ಹರಿಯನ್ನು ಸೇರಬೇಕೆಂದು ತಪವಾಚರಿಸುತ್ತಿರಲು ಅವಳನ್ನು ಬಲಾತ್ಕರಿಸಲು ಮುಂದಾಗಿ ಹಿಡಿದೆಳೆದ ರಾವಣನನ್ನು ಶಪಿಸಿ ಆಕೆ ತನ್ನ ದೇಹವನ್ನು ಅಗ್ನಿಗರ್ಪಿಸುವಳು.  ಶಾಪವನ್ನು ಧರಿಸಿ ಅವಮಾನಿತನಾಗಿ ಪುರವನ್ನು ಸೇರುತ್ತಾನೆ.

ಮುಂದೆ ಪ್ರಹಸ್ತಾದಿಗಳನ್ನು ಕರೆದು ಕಾರ್ತವೀರ್ಯಾಜುನನನ್ನು ಗೆಲ್ಲಲು ಸಂಕಲ್ಪಿಸಿ ಸೇನೆಯನ್ನು ಸಜ್ಜುಗೊಳಿಸುತ್ತಾನೆ.

ಇತ್ತ ತನ್ನ ಸಖಿಯರೊಡನೆ ಜಲಕೇಳಿಯಾಡುತ್ತಿರುವ ಕಾರ್ತಿವೀರ್ಯನು ತನ್ನ ಐನೂರು ತೋಳನ್ನೇ ಅಡ್ಡಗಟ್ಟಿ ನರ್ಮದೆಯಲ್ಲಿ ಜಲಕೇಳಿಯಾಡಿ, ಕೈ ತೆಗೆದಾಗ ಆ ನೀರಿನ ರಭಸಕ್ಕೆ ಅದಾಗಲೇ ಸೈನ್ಯ ಸಮೇತ ಮಾಹಿಶ್ಮತಿಗೆ ಬಂದು ಅಲ್ಲಿಂದ ನರ್ಮದೆ ನದಿ ತಟದಲ್ಲಿ ಶಂಕರನನ್ನು ಪೂಜಿಸುತ್ತಿರುವ ರಾವಣ ಮತ್ತು ಅವನ ಸೈನ್ಯ ನೀರಿನ ಪ್ರವಾಹಕ್ಕೆ ಅಲ್ಲೋಲಕಲ್ಲೋಲವಾಗುತ್ತದೆ. ಇದರಿಂದ ಕೋಪಗೊಂಡ ರಾವಣ ಕಾರ್ತವೀರ್ಯನೊಡನೆ ಯುದ್ಧಕ್ಕಿಳಿದು ಸೆರೆಯಾಳಾಗುತ್ತಾನೆ. ಇದನ್ನು ತಿಳಿದು ಕೈಕಸೆ, ಪೌಲಸ್ತ್ಯರಲ್ಲಿ ವಿನಂತಿಸಲು ಅವರು ಬಂದು ತನ್ನ ಮೊಮ್ಮಗನನ್ನು ಬಿಡುವಂತೆ ರಾವಣನನ್ನು ಸೆರೆಮುಕ್ತಗೊಳಿಸಿದಲ್ಲಿಗೆ ಪ್ರಸಂಗಗಕ್ಕೆ ಮುಕ್ತಾಯವಾಗುತ್ತದೆ.

ರಾವಣೋದ್ಭವ ನಗರೆಯ ಸುಬ್ಬ

ನಗರೆಯ ಸುಬ್ರಹ್ಮಣ್ಯ : 16ನೇ ಶತಮಾನದವ ಹಿಂದೆ ನಗಿರೆ (ಅಥವಾ ನಗರೆ) ಎನಿಸಿದ ಗೇರಸೊಪ್ಪ ಊರಿನವನು. ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಒಂದು ಊರು. ಇವನು ಬರೆದ ಶಂಭರಾಸುರ ಕಾಳಗದಲ್ಲಿ ತಾನು ವಿಠ್ಠಲ ಮತ್ತು ಗೌರಿಯರ ಮಗನಾದ ಸುಬ್ರಹ್ಮಣ್ಯ ಎಂದು ಹೇಳಿಕೊಂಡಿದ್ದಾನೆ. ನಗರೆಯ ವೆಂಕಟರಮಣ ದೇವರನ್ನು ಆತ ಸ್ತುತಿಸಿದ್ದಾನೆ.

ರಾವಣೋದ್ಭವ ಸಮೀಕ್ಷೆ

ರಾವಣೋದ್ಭವವು ಯಕ್ಷಗಾನದ ಪ್ರಾಚೀನ ಪ್ರಸಂಗಗಳಲ್ಲಿ ಒಂದು. ಆದರೆ ಕವಿಯ ಕಾಲಕ್ಕಾಗಲೇ ಯಕ್ಷಗಾನವು ಸಿದ್ಧರೂಪವನ್ನು ತಳೆದದ್ದು ಸ್ಪಷ್ಟವಾಗಿದೆ. ಹಾಗಾಗಿ ರಂಗದ ಅನುಕೂಲ ಅಗತ್ಯಗಳನ್ನು ಗಮನಿಸಿ ಕವಿ ಪ್ರಸಂಗವನ್ನು ರಚಿಸಿದ್ದಾನೆ. ಆಶ್ಚರ್ಯಕರವೆಂಬಂತೆ ರಂಗಪ್ರಜ್ಞೆಯನ್ನು ಪ್ರದರ್ಶಿಸುತ್ತಾನೆ. ಮಟ್ಟುಗಳ ಬಳಕೆಯಲ್ಲಾಗಲಿ ತಾಳಗಳ ವೈವಿಧ್ಯವನ್ನು ಯಥೋಚಿತವಾಗಿ ಬಳಸುವಲ್ಲಾಗಲಿ ಕವಿಯು ಮೇಲ್ಮಟ್ಟದವನೆಂಬುದನ್ನು ತೋರಿಸಿಕೊಡುತ್ತಾನೆ.

ಶ್ರೀರಾಮನ ಓಲಗದಿಂದ ಕಥೆ ಪ್ರಾರಂಭವಾಗುವುದಾದರೂ ಕವಿಯು ಅದನ್ನು ಪೀಠಿಕೆಯ ರೂಪದಲ್ಲಿಯೇ ಹೇಳುತ್ತಾನೆ. ಪೀಠಿಕೆಯನ್ನು ಹೆಚ್ಚು ವಿಸ್ತರಿಸದೆ ಅತ್ಯಂತ ಸಂಕ್ಷಿಪ್ತವಾಗಿ ಮುಗಿಸಿ ಮುಖ್ಯ ಕಥೆಗೆ ಧಾವಿಸುವ ರೀತಿ ಮೆಚ್ಚುವಂಥದ್ದು. ಅಲ್ಲಿಯೂ ಒಂದೇ ವಾರ್ಧಿಕದಲ್ಲಿ ವಿದ್ಯುತ್ಕೇಶಿ ಸುಕೇಶಿಯರ ವೃತ್ತಾಂತವನ್ನು ಹೇಳಿ ಭಾಮಿನಿಯಲ್ಲಿ ಸುಕೇಶಿಯ ವಿವಾಹ, ಮಾಲ್ಯವಂತಾದಿಗಳ ಜನನದ ವೃತ್ತಾಂತವನ್ನು ಹೇಳಿ ಕಂದಪದ್ಯದಲ್ಲಿ ದೇವೇಂದ್ರನ ಬಳಿಗೆ ದೇವತೆಗಳು ಬಂದು ದೂರಿಡುವವರೆಗಿನ ಕಥಾಭಾಗವನ್ನು ಸಂಗ್ರಹಿಸಿದ ರೀತಿ ಮೆಚ್ಚುವಂಥಾದ್ದು. ಈ ಮೂಲಕವಾಗಿ ಇದು ಕೇವಲ ಶ್ರವ್ಯವೇ ಹೊರತು ದೃಶ್ಯವಲ್ಲವೆಂಬುದನ್ನು ಸ್ಪಷ್ಟಪಡಿಸುತ್ತಾನೆ.

ದೇವತೆಗಳು ದೇವೇಂದ್ರನಲ್ಲಿ ದೂರುವುದು ಅನಂತರ ಹರನಲ್ಲಿಗೆ ಹೋಗುವುದು, ಆವನು ವಿಷ್ಣುವಿದ್ದಲ್ಲಿಗೆ ಕಳುಹುವುದು- ಮುಂತಾದ ದೃಶ್ಯಗಳು ಪುನರಾವರ್ತನೆಯಾದಂತೆ ಕಾಣುತ್ತದೆ. ದೇವತೆಗಳು ನೇರವಾಗಿ ವಿಷ್ಣುವಿನಲ್ಲಿಗೆ ಹೋಗುವಂತೆ ಸಂಯೋಜಿಸಬಹುದಿತ್ತು. ಬಹುಶಃ ಕವಿಯು ಮೂಲಕಥೆಗೆ ನಿಷ್ಠನಾಗಿರುವಾಗ ಇದೆಲ್ಲ ಅನಿವಾರ್ಯವಾಯಿತೆನಿಸುತ್ತದೆ. ಕವಿಗೆ ದೊರಕಿದ ಉತ್ತರಕಾಂಡದ ಕಥೆಯಲ್ಲಿ ಇವೆಲ್ಲ ಇದ್ದಿರಬಹುದಾಗಿದೆ.

ಮುಂದೆ ಕುಬೇರನು ಪುಷ್ಪಕವಿಮಾನದಲ್ಲಿ ವಿಹರಿಸುವುದನ್ನು ಕಾಣುವವರೆಗೆ ಕುಬೇರನ ಜನನ ವೃತ್ತಾಂತವೇ ಮುಂತಾದವುಗಳನ್ನು ಕವಿಯು ವಿತಾಳದ ಪದ್ಯಗಳಲ್ಲಿ ಹೇಳಿರುವುದನ್ನು ಗಮನಿಸಬೇಕು. ಕೇವಲ ಶ್ರವ್ಯವೆನಿಸಿದ ಕಥಾಭಾಗವನ್ನು ವಿತಾಳದ ಪದ್ಯಗಳಲ್ಲಿ ಸೂಚಿಸುವುದು ಕವಿಯ ಕ್ರಮ. ಅದನ್ನು ಚೆನ್ನಾಗಿ ಬಳಸಿಕೊಂಡಿದ್ದಾನೆ. ಮುಂದಿನವುಗಳಲ್ಲಿ ತಾಳ-ವಿತಾಳ ಪದ್ಯಗಳ ಹಾಳತವಾದ ಮಿಶ್ರಣವಿದೆ. ಹೀಗೆ ಕೃತಿಯುದ್ದಕ್ಕೂ ದೃಶ್ಯ-ಶೃವ್ಯ ಭಾಗಗಳ ವಿಭಜನೆಯು ಸ್ಪಷ್ಟವಾಗಿರುವುದು ಕವಿಯ ಉತ್ತಮ ರಂಗಪ್ರಜ್ಞೆಗೆ ಸಾಕ್ಷಿ. ರಾವಣೋದ್ಭವ ಪ್ರಸಂಗವನ್ನು ರಂಗದ ಮೇಲೆ ಹೆಚ್ಚು ಆಡದಂತಿಲ್ಲ. ಅವನ ಶಂಬರಾಸುರ ಕಾಳಗಕ್ಕೆ ಸಿಕ್ಕಿದ ಜನಪ್ರಿಯತೆಯೂ ಇದಕ್ಕೆ ದಕ್ಕಲಿಲ್ಲವೆಂಬುದು ನಿಜವಾದರೂ ಅಲ್ಲಿ ಬರುವ ಶೂರ್ಪಣಖಾ ವಿವಾಹ ಸನ್ನಿವೇಶವು ಇಂದಿಗೂ ಪ್ರಿಯವಾಗಿದೆ. ಮುಂದೇ ಇದೇ ದೃಶ್ಯವನ್ನು ಅನಾಮತ್ತಾಗಿ ಎತ್ತಿಕೊಂಡು ಕಾರ್ತವೀರ್ಯ ಪ್ರಸಂಗದಲ್ಲಿ ಸೇರಿಸಲಾಗಿದೆ. ಕಾರ್ತವೀರ್ಯಾರ್ಜುನದ ಉಡುಪಿ ಪ್ರತಿಯಲ್ಲಿ ಈ ಸನ್ನಿವೇಶವು ಸೇರಿರುವುದು ಅದರ ಜನಪ್ರಿಯತೆಯ ದ್ಯೋತಕ. ಇಡೀ ಸನ್ನಿವೇಶವು ಹಾಸ್ಯಮಯವಾಗಿದ್ದು ಯಕ್ಷಗಾನ ರಸಿಕರನ್ನು  ನಗೆಗಡಲಲ್ಲಿ ತೇಲಿಸುತ್ತದೆ. ಪ್ರಸಂಗದುದ್ದಕ್ಕೂ ಪದ್ಯಗಳು ತಮ್ಮ ಮಾಧುರ್ಯದಿಂದ, ಸರಳತೆಯಿಂದ ನಮ್ಮ ಮನಸ್ಸನ್ನು ಸೆಳೆಯುತ್ತದೆ. ದೇವತೆಗಳ ದೂರನ್ನು ಕೇಳಿದ ಶಿವನ ಮಾತುಗಳನ್ನು ಕೇಳಿ-

ರಾಗ ಸುರುಟಿ ಏಕತಾಳ

ಅಂಜಲ್ಯಾತಕಿಂತು ಅಂಥಾ
ಅಂಜಿಕೆಯೇನ್ಬಂತು
ಸಂಜೀವನಮಣಿ ಸಂಜಿಸುತಿರಲೂ
ಜಂಜಡವೇ ಬಲು ನಂಜಿನಳೀವನ

ಸಹಜತೆಯಿಂದ ಸೊಗಸಾದ ರಚನೆಗಳು ಕೃತಿಯಲ್ಲಿ ಸಾಕಷ್ಟು ತುಂಬಿಕೊಂಡಿವೆ. ಗಾದೆಯ ಮಾತು, ಲೋಕೋಕ್ತಿಗಳನ್ನು ಕವಿ ಜಾಣ್ಮೆಯಿಂದ ಬಳಸಿಕೊಳ್ಳುತ್ತಾನೆ. ಉಪಮೆ, ಉದಾಹರಣೆಗಳ ಮೂಲಕ ಹೇಳುವ ರೀತಿಯು ಸೊಗಸಾದದು. ಹಾವಿಗೆ ಹಾಲಿತ್ತರೇನದ ಕೊಡುವುದೈ ಮನೆಯ ಗೆದ್ದು ಮಾರಗೆಲ್ಲಲು ಮನವ ಮಾಡಿರಿ ಬೇರ್ಕಡಿದರೆ ಮರವೆಲ್ಲಿ, ರೋಗಿ ವೈದ್ಯರ ಮತವಿದೊಂದೇ ಹೆಣ್ಣು ಹೊನ್ಮಣ್ಣುಗಳನಿತ್ತರೆಯೆಣ್ಣಿಸದೆ ಸಂಗ್ರಹಿಪುದುತ್ತಮ- ಇಂಥ ಹಲವಾರು ಮಾತುಗಳು ಪದ್ಯಗಳ ಸೊಗಸನ್ನು ಹೆಚ್ಚಿಸಿದೆ.

ಕವಿಯ ಕವಿತ್ವಶಕ್ತಿಯು ಚೆನ್ನಾಗಿದ್ದರೂ ಆರಿಸಿಕೊಂಡ ಕಥಾಭಾಗವು ಸ್ವಾರಸ್ಯಕರವಾದುದಲ್ಲ. ರಾವಣನೇ ನಾಯಕನಾಗಿರುವುದು ಜನರಿಗೆ ಮೆಚ್ಚುಗೆಯಾದಂತಿಲ್ಲ. ದುಷ್ಟನ ಚರಿತೆಯೆಂದೆನುತ ದೂಷಿಸದೆ ಸ್ವೀಕರಿಸಬೇಕೆಂದು ಕವಿಯು ಬೇಡಿಕೊಂಡರೂ ಜನರು ಅದನ್ನು ಮನ್ನಿಸಲಿಲ್ಲ. ಹಾಗಾಗಿ ಇತರ ಅಖ್ಯಾನಗಳಿಗೆ ಇಲ್ಲಿನ ಕಥೆಗಳನ್ನ ಆಕಾರವಾಗಿ ಬಳಸಿದರೇ ಹೊರತು ಇದನ್ನೇ ಪ್ರದರ್ಶಿಸಲು ತವಕಿಸಲಿಲ್ಲ. ಇಡೀ ಕಥೆಯಲ್ಲಿ ಮನಸ್ಸನ್ನು ಆಳವಾಗಿ ತಟ್ಟುವ ಪಾತ್ರಗಳಿಲ್ಲದಿರುವುದು ಮತ್ತೊಂದು ಕಾರಣವಾಯಿತು. ಹೀಗೆ ವಿಪುಲವಾದ ಪ್ರಯೋಗ ಪ್ರದರ್ಶನಗಳನ್ನು ಕಾಣುವ ಭಾಗ್ಯ ಪ್ರಾಪ್ತವಾಗದಿದ್ದರೂ ಇತಿಹಾಸ ದೃಷ್ಟಿಯಿಂದ ಸರಸಕವಿತ್ವದ ರಾವಣೋದ್ಭವವು ಒಂದು ಗಮನಾರ್ಹ ಪ್ರಸಂಗವಾಗಿ ನಿಲ್ಲುತ್ತದೆ.

ಕವಿ ಪರಿಚಯ

ಉಡುಪಿಯ ಶ್ರೀ ಕೃಷ್ಣಮುದ್ರಣಾಲಯದ ಪ್ರಸಂಗ ಪ್ರತಿ (ಪ್ರಕಟಣೆಗೆ-1930) ಯನ್ನು ಮುಖ್ಯ ಆಧಾರವಾಗಿಟ್ಟುಕೊಂಡು ಈ ಪ್ರಸಂಗವನ್ನು ಸಂಪಾದಿಸಿದ್ದೇನೆ. ಆದರೆ 1896 ಬೆಂಗಳೂರು ಪ್ರೆಸ್‌ನ ಅತ್ಯಂತ ಹಳೆಯದಾದ ಪ್ರಸಂಗವನ್ನು ಈ ಸಂದರ್ಭದಲ್ಲಿ ಪರಿಶೀಲಿಸಿದಾಗ ಎರಡು ಪ್ರತಿಗಳಲ್ಲಿ ಹಲವಾರು ವ್ಯತ್ಯಾಸಗಳು ಗೋಚರವಾದವು. ಶ್ರೀಕೃಷ್ಣ ಮುದ್ರಣಾಲಯದಲ್ಲಿರುವ ಅನೇಕ ಪದ್ಯಗಳು ಹಳೆಯ ಬೆಂಗಳೂರಿನ ಪ್ರತಿಯಲ್ಲಿ ಇಲ್ಲ. ಬೆಂಗಳೂರಿನ ಪ್ರತಿಯಲ್ಲಿರುವ ಕೆಲ ಪದ್ಯ ಉಡುಪಿ ಮುದ್ರಣದಲ್ಲಿ ತಪ್ಪಿಸಿಕೊಂಡಿವೆ. ಹಾಗಾಗಿ ಮುಖ್ಯವಾಗಿ ಉಡುಪಿ ಪ್ರತಿಯನ್ನು ಆಧರಿಸಿ ಸಂಪಾದಿಸಿ ಬಿಟ್ಟು ಹೋದ ಪದ್ಯಗಳನ್ನು (ಬೆಂಗಳೂರು ಪ್ರತಿಯಲ್ಲಿರುವುದು) ಇದಕ್ಕೆ ಸೇರಿಸಿಕೊಂಡಿದ್ದೇನೆ. ಉದಾ :

ರಾಗ ಭೈರವಿ ಆದಿತಾಳ

ಹೆಣ್ಣು ಜನ್ಮವು ಕಷ್ಟವೆಂಬುದ  ಕಂಣಿನಲಿ ಕಂಡೆ

– ಮುಂತಾದವು.

ಅಲ್ಲದೆ ಸುಮಾರು ಈ ರೀತಿಯ 4 ಪದ್ಯಗಳು ತೀರಾ ಉದ್ದವಾಗಿದೆ. ರಂಗ ಪ್ರಯೋಗದಲ್ಲಿ ಇದರ ಬಳಕೆ ಕಷ್ಟವೇ ಆಗಬಹುದು. ಆದರೂ ಈ ಪದ್ಯಗಳನ್ನು ಇಡಿಯಾಗಿ ಅಥವಾ ತುಂಡಾಗಿ ಬಳಸಿಕೊಳ್ಳುವವರಿಗೆ ಅನುಕೂಲವಾಗಲಿ ಎಂದು ಸಂಪಾದಿಸಿದ್ದೇನೆ.

* * *

2. ಕುಂಭಕರ್ಣಾದಿ ಕಾಳಗ

ಕಥಾಸಾರ:

ಕಾಳಗದಲ್ಲಿ ಬಹಳ ಮಂದಿ ರಾಕ್ಷಸಭಟರು ಹತರಾಗಲು ತನ್ನ ತಮ್ಮನಾದ ಕುಂಭಕರ್ಣನನ್ನು ನಿದ್ರೆಯಿಂದೆಬ್ಬಿಸುವಂತೆ ರಾವಣ ಆಜ್ಞಾಪಿಸುತ್ತಾನೆ. ಯಾವೆಲ್ಲಾ ಉಪಾಯಗಳಿಂದಲೂ ಆತನಿಗೆ ಎಚ್ಚರವಾಗದಿರಲು ಕೊನೆಗೆ ಬ್ರಹ್ಮನನ್ನೇ ಕರೆಸಿ ಎಚ್ಚರಗೊಳಿಸುವಂತೆ ಹೇಳುತ್ತಾನೆ. ಬ್ರಹ್ಮನು ಬಂದು ಮಂತ್ರೋದಕವನ್ನು ಪ್ರೋಕ್ಷಣೆಮಾಡಿದೊಡನೆ ಕುಂಭಕರ್ಣನಿಗೆ ನಿದ್ರಾಭಂಗವಾಗಲು, ಎಚ್ಚರಗೊಂಡ ತಮ್ಮನನ್ನು ಭಾರಿ ಭೋಜನದಿಂದ ಸಂತೃಪ್ತಿಗೊಳಿಸಿ, ಶೂರ್ಪನಖಿಯ ಮಾನಭಂಗದಿಂದಿತ್ತ ನಡೆದಿರುವ ವಿದ್ಯಮಾನಗಳನೆಲ್ಲಾ ಆತನಿಗೆ ವಿಸ್ತರಿಸಿ ಕಪಿಸೇನೆಯನ್ನು ಪರಾಭವಗೊಳಿಸುವುದಕ್ಕಾಗಿ ಯುದ್ಧಕ್ಕೆ ತೆರಳುವಂತೆ ತಿಳಿಸುತ್ತಾನೆ.

ಕುಂಭಕರ್ಣನು ಅಣ್ಣನ ಈ ದುಸ್ಸಾಹಸಕ್ಕೆ ಮನನೊಂದವನಾದರೂ ಕೈಮೀರಿ ಹೋದ ಕಾರ್ಯಕ್ಕೆ ಇನ್ನು ಚಿಂತಿಸಿ ಫಲವಿಲ್ಲವೆಂದಣಿಸಿ, ಯುದ್ಧಕ್ಕೆ ತೆರಳಿ ಮಹಾ ಸಾಹಸದಿಂದ ಕಾದಿ ಕೊನೆಗೆ ಶ್ರೀರಾಮನ ಬಾಣದಿಂದ ಅಸುನೀಗುತ್ತಾನೆ. ಆನಂತರ ರಾವಣನ ಮಕ್ಕಳಾದ ನರಾಂತಕ, ದೇವಾಂತಕ, ತ್ರಿಶಿರ, ಮಹೋದರ, ಯುದ್ದೋನ್ಮತ್ತರೆಂಬುವರು ಒಬ್ಬರ ಹಿಂದೊಬ್ಬರಂತೆ ಯುದ್ಧಕ್ಕೆ ಬಂದು, ನರಾಂತಕನು ಅಂಗದನೊಡನೆಯೂ, ತ್ರಿಶಿರ ದೇವಾಂತಕರು ಹನುಮಂತನೊಡನೆಯೂ, ಮಹೋದರನು ನೀಲನೊಡನೆ ಯುದ್ದೋನ್ಮತ್ತನೆಂಬುವನು ವ್ರಷಭನೊಡನೆಯೂ ಕಾದಾಡಿ ಮಡಿಯುತ್ತಾರೆ.

ಇವರ ಮರಣದಿಂದ ಉದ್ವಿಗ್ನನಾದ ರಾವಣನು ಇನ್ನಿರುವ ತನ್ನ ಮಕ್ಕಳಾದ ಅತಿಕಾಯ ಮತ್ತು ಇಂದ್ರಜಿತುವೆಂಬ ಮಹಾ ಪರಾಕ್ರಮಶಾಲಿಗಳಿಬ್ಬರಲ್ಲಿ ಪರಮಸಾತ್ವಿಕನಾದ ಅತಿಕಾಯನನ್ನು ಯುದ್ಧಕ್ಕೆ ತೆರಳುವಂತೆ ಹೇಳುತ್ತಾನೆ. ವಿಷ್ಣುಭಕ್ತನಾದ ಅತಿಕಾಯನು, ಮಹಾವಿಷ್ಣುವಿನ ಅವತಾರವಾದ ಶ್ರೀರಾಮನೊಡನೆ ಹಗೆತನ ಸಲ್ಲವೆಂದೂ, ಸೀತಾದೇವಿಯನ್ನು ಕೊಂಡೊಪ್ಪಿಸಿ ಆತನಲ್ಲಿ ಕ್ಷಮಾಯಾಚನೆಯನ್ನು ಮಾಡುವುದೇ ಶ್ರೇಯಸ್ಕರವೆಂದೂ ತಂದೆ ರಾವಣನಿಗೆ, ನೀತಿ ಹೇಳುತ್ತಾನೆ. ಆದರೆ ರಾವಣನು ಆ ಮಾತನ್ನು ಧಿಕ್ಕರಿಸಲು, ಅನಿವಾರ್ಯವಾಗಿ ಅತಿಕಾಯನು ಅದೇ ತನಗೆ ಮೋಕ್ಷ ಸಾಧನವೆಂದೆಣಿಸಿ ಯುದ್ಧಕ್ಕೆ ತೆರಳಿ ಲಕ್ಷ್ಮಣನೊಡನೆ ವೀರತನದಿಂದ ಸೆಣಸಿ ಕೊನೆಗೆ ಲಕ್ಷ್ಮಣನ ಬಾಣದಿಂದ ಹತನಾಗುತ್ತಾನೆ.

ಅತಿಕಾಯನ ಮರಣದಿಂದ ಹತಾಶನಾದ ರಾವಣನು ಇಂದ್ರಜಿತುವನ್ನು ಕೊನೆಯ ಯುದ್ಧಕ್ಕಾಗಿ  ಹುರಿದುಂಬಿಸುತ್ತಾನೆ. ಮರುದಿನ ಇಂದ್ರಜಿತುವು ಕಪಿಸೇನೆಯನ್ನು ಎಂತಾದರೂ ಗೆಲ್ಲುವೆನೆಂಬ  ಪ್ರತಿಜ್ಞೆಯಿಂದ ಸಮಸ್ತ ರಾಕ್ಷಸ ಬಲದೊಡನೆ ಯುದ್ಧಕ್ಕೆ ತೆರಳಿ ಮಾಯಾತಂತ್ರದಿಂದ ಉರಗಾಸ್ತ್ರವನ್ನು ಪ್ರಯೋಗಿಸಿ ರಾಮಲಕ್ಷ್ಮಣರ ಸಮೇತ ಕಪಿ ಸೇನೆಯನ್ನು ಮೂರ್ಛೆಗೊಳಿಸುತ್ತಾನೆ. ಆದರೆ ಆ ವಿಷವೇಗದಿಂದ ಮೊದಲು ಚೇತರಿಸಿಕೊಂಡ ಹನುಮಂತನು ಚಂದ್ರದ್ರೋಣ ಪರ್ವತದಲ್ಲಿದ್ದ ಸಂಜೀವನ ಔಷಧವನ್ನು ತಂದು ಪ್ರಯೋಗಿಸಿ ಎಲ್ಲರನ್ನು ಚೈತನ್ಯಗೊಳಿಸುತ್ತಾನೆ.

ಹೀಗೆ ತನ್ನ ಉರಗಾಸ್ತ್ರವು ವಿಫಲಗೊಂಡುದನ್ನರಿತ ಇಂದ್ರಜಿತುವು ಮರಳಿ ಯುದ್ಧದಲ್ಲಿ ಜಯಪ್ರಾಪ್ತಿಗಾಗಿ ನೆಲದಡಿಯ ಗುಪ್ತಸ್ಥಳದಲ್ಲಿ (ನಿಕುಂಭಿಳೆಯೆಂಬಲ್ಲಿ) ಮಾರಣಯಜ್ಞವನ್ನು ಕೈಕೊಳ್ಳುತ್ತಾನೆ. ಇದರ ಸೋವನ್ನರಿತ ವಿಭೀಷಣನು ಹನುಮಂತನನ್ನು ಕರೆದುಕೊಂಡು ಹೋಗಿ ಮಾರಣಾಧ್ವರವನ್ನು ಕೆಡಿಸುತ್ತಾನೆ. ಇದರಿಂದ ಕೆರಳಿದ ಇಂದ್ರಜಿತುವು ಅಸಮ ಸಾಹಸದಿಂದ ಘೋರಯುದ್ಧವೆನ್ನೆಸಗಿ ಕೊನೆಗೆ ಲಕ್ಷ್ಮಣನ ಬಾಣದಿಂದ ಮೃತ್ಯುವಶನಾದನೆಂಬಲ್ಲಿಗೆ ಈ ಪ್ರಸಂಗಕ್ಕೆ ಮಂಗಲವಾಗುವುದು.

ಸಮೀಕ್ಷೆ

ಕುಂಭಕರ್ಣಾದಿ ಕಾಳಗವು ಕುಂಭಕರ್ಣನನ್ನ ಮೊದಲ್ಗೊಂಡು ಅತಿಕಾಯ, ಇಂದ್ರಜಿತು, ಮಕರಾಕ್ಷನೇ ಮುಂತಾದ ರಾಕ್ಷಸ ವೀರರ ಕಾಳಗದ ಕಥೆಯಾಗಿದೆ. ರಾಮಾಯಣದ ಯುದ್ಧಕಾಂಡದಲ್ಲಿ ಬರುವ ರಾಕ್ಷಸವೀರರ ಯುದ್ಧದ ಕಥೆಗಳೇ ಈ ಕೃತಿಗೆ ಆಕರ. ಯಕ್ಷಗಾನದ ಹೆಚ್ಚಿನ ಸಂಖ್ಯೆಯ ಕಾಳಗಗಳ ಪಟ್ಟಿಗೆ ಸೇರುವ ಅನೇಕ ಕಥೆಗಳ ಸಂಗ್ರಹವೇ ಇಲ್ಲಿ ಗುರಿಯಾಗಿದೆ. ಕಥೆಯನ್ನು ಸಂಗ್ರಹಿಸುವುದೇ ಕವಿಯ ಮುಖ್ಯ ಉದ್ದೇಶವಾಗಿರುವುದರಿಂದ ಪಾತ್ರಗಳು ಪುಷ್ಟವಾಗಿ ಮೂಡಿಬಂದಿಲ್ಲದಿರುವುದು ಈ ಕೃತಿಯು ಜನಪ್ರೀಯತೆಯ ರೇಖೆಯಲ್ಲಿ ಕೆಳಗಿರುವುದಕ್ಕೆ ಕಾರಣವಾಗಿದೆ.

ಕೃತಿಯು ಆರಂಭಗೊಳ್ಳುವುದು ಕುಂಭಕರ್ಣನ ಕಾಳಗದಿಂದ, ಕುಂಭಕರ್ಣನನ್ನ ನಿದ್ದೆಯಿಂದ ಏಳಿಸುವುದು ಅವನಿಗೆ ಊಟವನ್ನು ಒದಗಿಸುವುದು, ಮುಂತಾದವುಗಳನ್ನು ಕವಿಯು ಸಾಕಷ್ಟು ವರ್ಣಿಸಿದ್ದಾನೆ. ಆ ವರ್ಣನೆಗಳು ಕೇಳುವುದಕ್ಕೆ ರಂಜಕವಾಗಿದೆಯೆಂಬುವುದು ನಿಜ ಆದರೆ ಅವುಗಳನ್ನು ದೃಶ್ಯವಾಗಿ ಪರಿಣಾಮಕಾರಿ ಯಕ್ಷಗಾನ ರಂಗಭೂಮಿಯಲ್ಲಿ ತೋರುವುದು ಕಷ್ಟವಾಗುತ್ತದೆ. ಇದ್ದುದರಲ್ಲಿ ಸ್ವಾರಸ್ಯಕರವಾದುದು ಕುಂಭಕರ್ಣನು ರಾವಣನಿಗೆ ಹೇಳುವ ಮಾತುಗಳು. ಅವನು ದೀರ್ಘಕಾಲದವರೆಗೆ ನಿದ್ದೆಯಲ್ಲಿದ್ದವನಾದರೂ ಎಚ್ಚರದಲ್ಲಿರುವ ರಾವಣನಿಗಿಂತ ವಿವೇಕಿ. ಅವನು ರಾವಣನೊಡನೆ ಆಡುವ ಮಾತುಗಳು ಸೊಗಸಾಗಿವೆ.

ರಾಗ ಕಲ್ಯಾಣಿ ಏಕತಾಳ

ನಿನ್ನಂಥ ಜಾಣರಿಂಗಿದು ನೀತಿಯೇ ಪೇಳಣ್ಣ
ಕಣ್ಣ ಮುಂದಲ್ಲದೆ ಪರರ ಹೆಣ್ಣ ತಂದಿಟ್ಟು ಕೊಂಬುದು

ಇದು ಪ್ರಾರಂಭ ಮುಂದುವರಿದು ಹೇಳುತ್ತಾನೆ.

ಮುಂದುವರಿದ ಮೇಲೆ ಇನ್ನು  ನೊಂದುಮಾಡುವಂಥದೇನು
ಎಂದಿಗಾದರೀ ಶರೀರ  ಎರವಿನ ಹಾರ
ಹಿಂದುಗಳೆಯೆ ಕೀರ್ತಿನಿಲದು  ನಿಂದಿಸುವರು ಬೈದುಜನರು

ಸಂದೇಹವಿಲ್ಲ ಸಂಗರವೇ  ಸರ್ವಸಮ್ಮತ
ಮಾಧವನ ಸೇರ್ವೆನಾ  ವಿರೋಧದಿಂದಾರೂ ಸ್ವಾಮಿ
ಪಾದವ ಹೊಂದುವೆ ಹೇಗಾದರಾಗಲಿ

ಈ ಮಾತುಗಳು ಕುಂಭಕರ್ಣನ ನಿಲುಮೆಯನ್ನು ವಿವರಿಸುತ್ತದೆ. ಮುಂದೆ ಯುದ್ಧದಲ್ಲಿ ಅವನಿಂದ ಬಹಳಷ್ಟನ್ನು ನಿರೀಕ್ಷಿಸುತ್ತೇವಾದರೂ ಅದು ಹುಸಿಯಾಗುತ್ತದೆ. ರಾಮ ಕುಂಭಕರ್ಣರ ನಡುವೆ ಹೆಚ್ಚಿನ ಸಂಭಾಷಣೆಯಿಲ್ಲ. ನರಾಂತಕನ ಕಾಳಗವು ಅತ್ಯಂತ ಸಂಕ್ಷಿಪ್ತವಾಗಿದೆ. ಅಲ್ಲಿ ರಾವಣನ ಗೋಳಾಟ ಮನಮುಟ್ಟುವಂತಿದೆ-

ವಾರ್ಧಕ

ಪರಸತಿಗೆ ಪರುಠವಿಸಿ ಪಾರಾಯ್ತು ಪಂಥದಲಿ
ಪರುಷ ಕಬ್ಬಿಣವಾಗಿ ಫಲಿಸಿತನುದಿನ ಕರೆವ
ಸುರಭಿಗೊಡ್ಡಾಯಮೃತ ವಿಷವಾಯ್ತು ಸೌಭಾಗ್ಯಹೀನಗಪಜಯವಾಯಿತು
ಪುರುಷಾರ್ಥವಿಲ್ಲ ಬದುಕಿದರಿನ್ನೆನುತ್ತಮನ
ಕರಗುತಿಹ ವೇಳ್ಯದಿ ನರಾಂತಕಂನಡೆತಂದು
ಪರಮಪೌರುಷದಿಂದ ಮಂಡೋದರಿಗೆ ನಮಿಸಿ ದಶವಧನಗಿಂತೆಂದನು

ಅತಿಕಾಯದ ಕಾಳಗದಲ್ಲಿ ಅತಿಕಾಯನು ರಾವಣನೊಡನೆ ಆಡುವ ಮಾತುಗಳು ಮನಮುಟ್ಟುವಂತಿದೆ. ಹಾಗೆಯೇ ಯುದ್ಧಕ್ಕೆ ಹೊರಟು ನಿಂತ ಅತಿಕಾಯನ ಧೋರಣೆಯನ್ನು ಬಿಂಬಿಸುವ ಮಾತುಗಳನ್ನು ಕೇಳಿ-

ರಾಗ ಕಲ್ಯಾಣಿ ಅಷ್ಟತಾಳ

ಬನ್ನಿ ರಾಮನ ಸೇವೆಗೆ  ಸಾಧುಗಳೆಲ್ಲ
ಇನ್ನು ಇಂಥಾ ವೇಳ್ಯ  ವಿಲ್ಲ ಸಿಕ್ಕುವುದಿಲ್ಲ
ಪನ್ನಂಗ ಶಯನ ರಾ ಮೆನ್ನುತ್ತ ಶರಣರೆಲ್ಲ
ಮನು ಮುನಿಗಳು ನಿತ್ಯ  ನೆನೆಯುತಿರಲು ಸತ್ಯ
ಘನತರ ನಿಜ ಮುಕ್ತಿ  ಯನು ಸಾಧಿಸುವರೆಲ್ಲ
ಸರಸದಿಂದಲೆ ಸರ  ಸಿರುಹನಾಭನ ಪದ
ಸರಸಿಜವನು ಕಾಂಬ  ತವಕದಿ ಸುಜನರೆಲ್ಲ

ಮುಂದೆ ಹಟ್ಟಿಯಂಗಡಿ ರಾಮಭಟ್ಟ ಈ ಕಥಾನಕವನ್ನು ವಿಸ್ತರಿಸಿ ಬರೆಯುವುದಕ್ಕೆ ಇದು ಪ್ರೇರಕವಾಗಿರಬಹುದು.

ಇಂದ್ರಜಿತು ಕಾಳಗದಲ್ಲಿ ಕೇವಲ ವರ್ಣನಾತ್ಮಕ ಪದ್ಯಗಳೇ ತುಂಬಿವೆ. ಆದರೆ ವಿಭೀಷಣ-ಜಾಂಬವರ ಮಾತುಗಳು ಚೆನ್ನಾಗಿದೆ. ಇಂದ್ರಜಿತುವಿನ ಮಾರಣಾಧ್ವರ ಸನ್ನಿವೇಶ ಸಶಕ್ತವಾಗಿ ಮೂಡಿಬಂದಿದೆ. ಲಕ್ಷ್ಮಣ-ಇಂದ್ರಜಿತು ಸಂಭಾಷಣೆ ಚೆನ್ನಾಗಿ ಮೂಡಿಬಂದಿದೆ. ಇಲ್ಲಿನ ಉತ್ತಮವಾದ ಭಾಗಗಳನ್ನು ಸ್ವೀಕರಿಸಿ ಮತ್ತಷ್ಟು ವಿಸ್ತರಿಸಿ ರಚಿತಗೊಂಡ ಇಂದ್ರಜಿತು ಕಾಳಗವೆಂಬ ಹೆಸರಿನ ಪ್ರಸಂಗವಿರುವುದನ್ನು ಸ್ಮರಿಸಬಹುದು. ಅದು ಈ ಪ್ರಸಂಗದಿಂದ ಸಾಕಷ್ಟು ಉಪಕಾರವನ್ನು ಪಡೆದಿದೆ.

ಇಂದ್ರಜಿತು ಕಾಳಗದ ಮಧ್ಯದಲ್ಲಿಯೇ ಮಕರಾಕ್ಷ ಕಾಳಗವು ಬರುತ್ತದೆ. ಅದು ಅತ್ಯಂತ ಸಂಕ್ಷಿಪ್ತವಾಗಿದ್ದರೂ ರಾಮ ಮಕರಾಕ್ಷರ ಸಂಭಾಷಣೆಯ ಭಾಗ ಸಶಕ್ತವಾಗಿದೆ. ಮಕರಾಕ್ಷಕನನ್ನೇ ಕೇಂದ್ರವಾಗಿಟ್ಟುಕೊಂಡು, ರಚಿತವಾದ ಮಕರಾಕ್ಷಕನ ಕಾಳಗವೆಂಬ ಕೃತಿಗೆ ಈ ಸನ್ನಿವೇಶವು ಪ್ರೇರಕವಾಗಿರಬಹುದು.

ಪಾರ್ತಿಸುಬ್ಬ ಯಕ್ಷಗಾನದ ಆರಂಭ ಕಾಲದ ಕವಿ. ರಾಮಾಯಣದ ಕಥೆಯನ್ನಾಧರಿಸಿ ಹಲವಾರು ಉತ್ತಮ ಪ್ರಸಂಗಗಳನ್ನು ರಚಿಸಿ ಯಕ್ಷಗಾನ ವಾಲ್ಮೀಕಿಯೆಂಬ ಬಿರುದನ್ನು ಪಡೆದವ. ಅವನ ಪಟ್ಟಾಭಿಷೇಕ, ಪಂಚವಟಿ, ವಾಲಿ ಸುಗ್ರೀವ, ಚೂಡಾಮಣಿ ಮುಂತಾದ ರಾಮಾಯಣ ಪ್ರಸಂಗಗಳು ಇಂದಿಗೂ ಹಲವಾರು ಪ್ರಯೋಗಗಳನ್ನು ಕಾಣುತ್ತಿವೆ. ಆದರೆ ಕುಂಭಕರ್ಣಾದಿ ಕಾಳಗಕ್ಕೆ ಆ ಭಾಗ್ಯವಿಲ್ಲ. ಅಲ್ಲಿನ ಕಥೆಗಳನ್ನು ಆಡುವುದು ತುಂಬ ಅಪರೂಪವೆನ್ನಬಹುದು. ಇದಕ್ಕೆ ಈಗಾಗಲೇ ಹೇಳಿದಂತೆ ಅಲ್ಲಿ ಹಲವಾರು ಪ್ರಕರಣಗಳು ಕಿಕ್ಕಿರಿದೆ. ಯಾವುದೇ ಒಂದು ಕಥಾನಕ ಸರಿಯಾದ ಪುಷ್ಟಿಯನ್ನು ಪಡೆಯದೆ ಸೊರಗಿದೆ. ಅಲ್ಲದೇ ಮುಂದೆ ಅತಿಕಾಯ, ಇಂದ್ರಜಿತು, ಮಕರಾಕ್ಷ, ಮುಂತಾದವರನ್ನೇ ಕೇಂದ್ರವಾಗಿಟ್ಟುಕೊಂಡು ರಚಿತವಾದ ಕೃತಿಗಳು ಪ್ರಸಿದ್ಧವಾದವು. ಹಾಗಾಗಿ ಈ ಪ್ರಸಂಗ ಹಿಂದೆ ಸರಿಯಿತು.

ಈ ಪ್ರಸಂಗಗಳಲ್ಲಿರುವ ಲೋಪವೆಂದರೆ ಅಲ್ಲಿ ನಾಟಾಕೀಯ ಸನ್ನಿವೇಶಗಳಿಗಿಂತ ವರ್ಣನೆಯ ಭಾಗಕ್ಕಿರುವ ಪ್ರಾಧಾನ್ಯ ಹೆಚ್ಚು. ಇವು ದೃಶ್ಯವಾಗಿ ನಿಲ್ಲುವುದಿಲ್ಲವಾದ್ದರಿಂದ ಕಥೆಯನ್ನು ವಿಸ್ತರಿಸುವುದಕ್ಕಷ್ಟೇ ಉಪಯುಕ್ತವಾಗಿ ಬಿಡುತ್ತವೆ. ಆದರೂ ಪಾರ್ತಿಸುಬ್ಬನ ಪದ್ಯಗಳಿಗೆ ತಮ್ಮದೇ ಆದ ಆಕರ್ಷಣೆಯಿದೆ. ಅವನ ಸಹಜ ಕವಿತ್ವಕ್ಕೆ ಮರಳುಗೊಳಿಸುವ ಗುಣವಿದೆ. ಉಪಮೆ, ಉದಾಹರಣೆಗಳು ಥಟ್ಟನೆ ನಮ್ಮನ್ನು ಸೆಳೆಯುತ್ತವೆ. ದೇಸಿಯ ಬೆಡಗಿದೆ. ರಾಮಲಕ್ಷ್ಮಣರು ಇಂದ್ರಜಿತುವಿನ ಹತಿಗೆ ಬಿದ್ದಾಗ ವಿಭೀಷಣನಾಡುವ ಮಾತುಗಳನ್ನು ಕೇಳಿ-

ಕುರುಡ ಹೋದಲ್ಲಿ ಕತ್ತಲೆ ಎಂಬ ಗಾದೆಯು
ಸ್ಥಿರವಾಯಿತೆನೆಗೆ ಬಂದು
ಮರುತನಂದನಿದ್ದ ತೆರನ ನೋಡುವೆನೆಂದು
ಅರಸುತ್ತ ನಡೆತಂದನು

ಕನಸಿನರೊಕ್ಕದಂತೆ ಸಾಸುವೆಗೆಡೆಯಿಲ್ಲವೆಂಬಂತೆ – ಎಂಬಂಥ ಈ ಮಾತುಗಳು ಸೊಗಸನ್ನ ಹೆಚ್ಚಿಸುತ್ತದೆ. ಆ ಕವಿತ್ವವೇ ಇಲ್ಲಿನ ಪ್ರಧಾನ ಆಕರ್ಷಣೆಯಾಗಿದೆ.

ಈ ಕೃತಿಯನ್ನು ನಾನು  ಪಾರ್ತಿಸುಬ್ಬನ ಯಕ್ಷಗಾನಗಳು, ಸಂಪಾದಕ ಕುಕ್ಕಿಲ ಕೃಷ್ಣಭಟ್ಟ, ಕನ್ನಡ ಅಧ್ಯಯನ ಸಂಸ್ಥೆ ಮೈಸೂರು ಇವರಿಂದ ಪ್ರಕಟಿತ (1975)ವಾದ ಪುಸ್ತಕದಿಂದ ಆಯ್ದುಕೊಂಡಿದ್ದೇನೆ.

12ನೇ ಶತಮಾನದ ಈ ಕವಿಗೆ ಇರುವ ಪ್ರಸಿದ್ದಿ ಮತ್ಯಾರಿಗೂ ದಕ್ಕಲಿಲ್ಲ. ಇವನ ಕೃತಿಗಳು ಸೀತಾಕಲ್ಯಾಣ, ಪಟ್ಟಾಭಿಷೇಕ, ಪಂಚವಟಿ, ವಾಲಿವಧೆ, ಉಂಗುರ ಸಂಧಿ (ಚೂಡಾಮಣಿ), ಸೇತುಬಂಧನ, ಅಂಗದ ಸಂಧಾನ, ಕುಂಭಕರ್ಣ ಕಾಳಗ, ಕುಶಲವ, ಶ್ರೀಕೃಷ್ಣ ಬಾಲಲೀಲೆ, ಐರಾವತ ಮತ್ತು ಸಭಾಲಕ್ಷಣ ಮುಂತಾದವು.

ಕವಿ ಪರಿಚಯ :

ಪಾರ್ತಿಸುಬ್ಬ(ಸು. 1560-ಸು.1630)

ಯಕ್ಷಗಾನ ವಾಲ್ಮೀಕಿಯೆಂದು ಕೀರ್ತಿತನಾದ ಪಾರ್ತಿ ಸುಬ್ಬನು ಯಕ್ಷಗಾನಾಸಕ್ತರಾದ ವಿದ್ವಾಂಸರ ನಡುವೆ ತೀವ್ರವಾದ ಭಿನ್ನಾಭಿಪ್ರಾಯಗಳನ್ನೂ ವಾದವಿವಾದಗಳನ್ನೂ ಹುಟ್ಟು ಹಾಕಿದ ವ್ಯಕ್ತಿಯಾಗಿ ಪರಿಣಮಿಸಿದ್ದಾನೆ.

ಯಕ್ಷಗಾನ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕ್ರಮ ಪ್ರಕಾರವಾಗಿ ಇನ್ನೂ ಸೇರಿಸಕೊಳ್ಳದಿದ್ದರೂ ಯಕ್ಷಗಾನ ಕವಿ ಪಾರ್ತಿಸುಬ್ಬನ ಬಗೆಗೆ ಪ್ರಾಯಃ ಇತರ ಅನೇಕ ಕನ್ನಡ ಕವಿಗಳಿಗಿಂತ ಹೆಚ್ಚಾಗಿ ಚರ್ಚೆ ನಡೆದಿದೆ. ಪಂಡಿತ ಮುಳಿಯ ತಿಮ್ಮಪ್ಪಯ್ಯನವರು ಪಾರ್ತಿಸುಬ್ಬನು ಕುಂಬಳೆಯವನೆಂದೂ, ಸ್ಥಾನಿಕ ಬ್ರಾಹ್ಮಣನೆಂದೂ 1760 ರಿಂದ 1920ರ ವರೆಗೆ ಇದ್ದಿರಬೇಕೆಂದು ಊಹಿಸಿದ್ದರು. ಕುಕ್ಕಿಲ ಕೃಷ್ಣ ಭಟ್ಟರು ಉಪನ್ಯಾಸದಲ್ಲಿ ಸುಮಾರು ಅದೇ ಕಾಲವನ್ನೇ ಸಮರ್ಥಿಸುವ ಮಧೂರ ಮೂಡಪ್ಪಸೇವೆ ಲೆಕ್ಕದ ಪಟ್ಟಿಯ ನಕಲು, ಕೋರ್ಟು ದಾಖಲೆ ಮೊದಲಾದ ಇನ್ನಷ್ಟು ಆಧಾರಗಳನ್ನು ಕೊಟ್ಟುದಲ್ಲದೆ ಸುಬ್ಬನು ಕಥಕಳಿ ರಾಮಾಯಣ ಅಥವಾ ಕೊಟ್ಟಾರಕರ  ಮಹಾರಾಜನಿಂದ ರಚಿತವಾದ ರಾಮನಾಟ ಗ್ರಂಥದ ಪದ್ಯಗಳಿಗೂ ಯಕ್ಷಗಾನ ರಾಮಾಯಣದ ಪದ್ಯಗಳಿಗೂ ಸಂಬಂಧವಿರುವುದನ್ನು ಎತ್ತಿತೋರಿಸಿರುತ್ತಾರೆ ಮತ್ತು ರಾಮಾಯಣ ಪ್ರಸಂಗಗಳಲ್ಲದೆ ಐರಾವತ ಶ್ರೀಕೃಷ್ಣ ಚರಿತಗಳನ್ನೂ ಈತನು ರಚಿಸಿದ್ದಾನೆಂದು ತೋರಿಸಿಕೊಟ್ಟಿದ್ದಾರೆ. ತಮ್ಮ ಹಿಂದಿನ ಕಾಲನಿರ್ಣಯ, ಕಾರಂತರೊಂದಿಗಿನ ಚರ್ಚೆ-ಟೀಕೆ ಟಿಪ್ಪಣಿಗಳು ಇತ್ಯಾದಿಗಳೆಲ್ಲವನ್ನೂ ಕೈಬಿಟ್ಟು ದೊರಕಿದ ಹೊಸ ಆಧಾರಗಳನ್ನು ವಸ್ತುಸ್ಥಿತಿಯನ್ನೂ ವಿವೇಚಿಸಿ ಪಾರ್ತೀಸುಬ್ಬನ ಯಕ್ಷಗಾನಗಳು ಪೀಠಿಕೆಯಲ್ಲಿ ಕುಕ್ಕಿಲ ಕೃಷ್ಣ ಟ್ಟರು ತಲುಪುವ ನಿರ್ಣಯಗಳನ್ನು ಈ ಕೆಳಗಿನಂತೆ ಸಂಗ್ರಹಿಸಬಹುದಾಗಿದೆ. ಪಾರ್ತಿ ಸುಬ್ಬನು ಕಂಬಳೆಯವನು ; ಪಾರ್ತಿ ಎಂಬವಳ ಮಗ. ಪುತ್ರಕಾಮೇಷ್ಟಿ – ಸೀತಾ ಕಲ್ಯಾಣ ; ಪಟ್ಟಾಭಿಷೇಕ – ಪಂಚವಟಿ ; ಪಂಚವಟಿ-ವಾಲಿ ಸಂಹಾರ ; ಉಂಗುರ ಸಂಧಿ ; ಸೇತುಬಂಧನ ; ಅಂಗದ ಸಂಧಾನ ; ಕುಂಭಕರ್ಣಾದಿ ಕಾಳಗ – ಇವು ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳು.

ಕುಶಲವರ ಕಾಳಗ ಉತ್ತರ ರಾಮಾಯಣಕ್ಕೆ ಸಂಬಂಧಿಸಿದ ಕೃತಿ. ಶ್ರೀಕೃಷ್ಣ ಚರಿತ ಭಾಗವತದ ಕೃತಿ. ಐರಾವತ ಮಹಾಭಾರತಕ್ಕೆ ಸಂಬಂಧಿಸಿದ ಕೃತಿ. ಸಭಾ ಲಕ್ಷಣವು ಯಕ್ಷಗಾನದ ರಂಗನಿಯಮಾದಿಗಳನ್ನು ನಿರೂಪಿಸುವ ಆಧಾರ ಗ್ರಂಥ. ಕಥಕಳಿ ರಾಮಾಯಣವನ್ನು ಸುಬ್ಬನು ಚನ್ನಾಗಿ ಬಲ್ಲವನಾಗಿದ್ದು ಅದರ ಪ್ರಭಾವವು ಈತನ ರಾಮಾಯಣದ ಪ್ರಸಂಗ ಕೃತಿಗಳ ಮೇಲಾಗಿರುವುದು ಪರಿಶೀಲನೆಯಿಂದ ತಿಳಿಯುತ್ತದೆ.

ಕಾಸರಗೋಡು ತಾಲ್ಲೂಕಿನ ಕುಂಬಳೆ ಗ್ರಾಮದ (ಪಟ್ಟಾಭಿಷೇಕದಲ್ಲಿ) ಪಾರ್ತಿನಂದನನಾದ ಈತ ಕಣಿಪುರ. ಕಣಿಯರದ ಅಥವಾ ಕುಂಬಳೆಯ ಶ್ರೀಕೃಷ್ಣನನ್ನು ಸ್ತುತಿಸಿದ್ದಾನೆ. ಕುಲಗೋತ್ರಗಳನ್ನು ಪ್ರಸಂಗದಲ್ಲಿ ಹೇಳಿಕೊಂಡಿಲ್ಲ. ಕೇರಳದ ಪ್ರಸಿದ್ಧ ಕಲೆ ಕಥಕಳಿಯನ್ನು  ತಿಳಿದುಬಂದು ಯಕ್ಷಗಾನದಲ್ಲಿ ಅನೇಕ ಹೊಸತನ ಪರಿವರ್ತನೆ ಈತ ಮಾಡಿದ್ದಾನೆಂದು ಹಲವು ಉಲ್ಲೇಖಿಸಿದ್ದಾರೆ.

* * *