10. ಶ್ರೀರಾಮ ನಿಜಪಟ್ಟಾಭಿಷೇ

ಕಥಾಸಾರ:

ಪೂಜ್ಯರಾದ ವಾಲ್ಮೀಕಿ ಮುನಿಗಳಲ್ಲಿ ಕುಶಲವರು ಲಂಕೆಯ ದೈತ್ಯ ಕುಲನಾಶಮಾಡಿದ ಶ್ರೀರಾಮಚಂದ್ರ ಮುಂದೇನು ಮಾಡಿದ ಎಂದು ಕೇಳಲು ಮುನಿಗಳು ಶ್ರೀರಾಮ ನಿಜಪಟ್ಟಾಭಿಷೇಕದ ಕಥೆಯನ್ನು ಬರೆದರು.

ಶ್ರೀರಾಮ, ರಾವಣಾನಾದಿಖಳರನ್ನು ಕೊಂದಮೇಲೆ ಮಾತಲಿಯನ್ನು ಕರೆದು ಸುರರಿಗೆ ಅಭಯ ನೀಡಿ ಕಳುಹುವನು. ಹನುಮಂತ, ಅಂಗದ, ಸುಗ್ರೀವ, ಲಕ್ಷ್ಮಣ, ಹೀಗೆ ಎಲ್ಲರ ಸಾಹಸ, ಸಮರ್ಪಣೆಯನ್ನು ರಾಮ ಕೃತಜ್ಞತೆಯಿಂದ ನೆನೆಯುತ್ತಾನೆ. ಬಳಿಕ ಹನುಮಂತನನ್ನು ಲಂಕೆಗೆ ಕಳುಹಿಸಿ, ಲಂಕಾವಾಸಿಗಳಿಗೆ ಮತ್ತು ಮಂಡೋದರಿಗೆ, ಧೈರ್ಯ ಒರೆದು, ಸೀತೆಯನ್ನು ಕಂಡು ಬರುವಂತೆ ತಿಳಿಸುತ್ತಾನೆ. ಹನುಮಂತ ಲಂಕೆಗೆ ಹೋಗಿ, ಕೊನೆಗೆ ಸೀತಾಮಾತೆಯಲ್ಲಿ ಬಂದು ರಾಮನ ಸಂದೇಶ ಹೇಳಲು, ಸೀತೆ ಸಂತಸಗೊಳ್ಳುತ್ತಾಳೆ. ಅಂತೆಯೇ ತನ್ನ ಮೇಲೆ ರಾಮ ಕೋಪಿಸಿಕೊಂಡಿರಬಹುದೆಂದು  ಕಳವಳವೂ ಆಗುತ್ತದೆ. ಹನುಮ ಸಾಂತ್ವನ ಹೇಳಿ, ಶ್ರೀರಾಮನಲ್ಲಿ ಬಂದು ಸೀತೆಯು ರಾಮನ ಧ್ಯಾನದಲ್ಲೇ ಇರುವ ವಿಷಯ ತಿಳಿಸಲು ಎಲ್ಲರೂ ಭಾವುಕರಾಗುತ್ತಾರೆ.

ವಿಭೀಷಣನಿಗೆ, ಮಂಡೋದರಿಗೆ ಧೈರ್ಯ ಒರೆದು, ಚೆನ್ನಾಗಿ ಬಾಳುವಂತೆ ರಾಮ ಹರಸುತ್ತಾನೆ. ವಿಭೀಷಣ ಶ್ರೀರಾಮನೇ ಲಂಕೆಯನ್ನು ಪಾಲಿಸಬೇಕೆಂದು ವಿನಂತಿಸಲು, ರಾಮಚಂದ್ರ ಆತನನ್ನು ಒಡಂಬಡಿಸಿ, ಲಕ್ಷ್ಮಣ ಮುಂತಾದವರನ್ನು ಕಳಿಸಿ ವಿಭೀಷಣನಿಗೆ ಲಂಕೆಯ ಪಟ್ಟವನ್ನು ಕಟ್ಟುತ್ತಾನೆ. ಪುಷ್ಪಕವಿಮಾನ, ಧನಕನಕಗಳನ್ನು  ಶ್ರೀರಾಮನಿಗರ್ಪಿಸುತ್ತಾನೆ. ರಾಮ ಸೀತೆಯನ್ನು ಕರೆತರುವಂತೆ ಹೇಳಲು ಅಂತೇ ಆತ ಬಂದು ಸೀತೆಗೆ ರಾಮಾಜ್ಞೆಯನ್ನು ತಿಳಿಸುತ್ತಾನೆ.

ನಾನಾ ಆಭರಣ ತೊಟ್ಟು, ಪೀತಾಂಬರವುಡುವಂತೆ ವಿಭೀಷಣ ಪರಿ ಪರಿಯಿಂದ ಸೀತೆಯನ್ನು ವಿನಂತಿಸಲು, ಮನಸ್ಸಿಲ್ಲದ ಮನಸ್ಸಿನಿಂದ ತಾನು ಶೃಂಗಾರಗೊಂಡು, ಪಲ್ಲಕ್ಕಿಯಲ್ಲಿ ಕುಳಿತು ಶ್ರೀರಾಮನನ್ನು ಕಾಣುವ ತವಕದಿಂದ ಸೀತೆ ಬರುತ್ತಾಳೆ. ದೂರದಿಂದ ಬರುವ ಸೀತೆಯನ್ನು ರಾಮ ಸಂಶಯದಿಂದ ನೋಡಲು, ರಾಮ ಆಕೆಯನ್ನು ಸ್ವೀಕರಿಸುವ ಲಕ್ಷಣ ಕಾಣದಾದಾಗ, ಕಂಗಾಲಾದ ವಿಭೀಷಣಾದಿಗಳು ರಾಮನ ಪಾದಕೆರಗಿ ತಾಯಿ ಸೀತೆ ಪರಮ ಪವಿತ್ರ ಅವಳನ್ನು ಸ್ವೀಕರಿಸಿ ನಮ್ಮೆಲ್ಲರನ್ನೂ ಉದ್ಧರಿಸಬೇಕೆಂದು ಅಂಗಲಾಚುವರು. ಸೀತೆಯೇ ರಾಮನ ಪಾದಕ್ಕೆರಗಿ ತಾನು ನಿನ್ನ ಹೊರತಾಗಿ ಅನ್ಯರನ್ನು ಎಣಿಸಿಲ್ಲ, ಅದಕ್ಕಾಗಿ ಅಗ್ನಿಗೆ ತನ್ನನರ್ಪಿಸಿ ತನ್ನ ಪಾವಿತ್ರ್ಯಶ್ರುತಪಡಿಸುವೆ ಎನ್ನುತ್ತಾಳೆ. ರಾಮನಿಗೆ  ಎಲ್ಲರು ಕೈ ಮುಗಿದು ಸೀತೆಯನ್ನು ಈ ಕಠಿಣ ಪರೀಕ್ಷೆಗೆ ಒಳಪಡಿಸದಿರಲು ವಿನಂತಿಸಿದರು. ರಾಮ ಅದನ್ನೆಲ್ಲ ನಿರಾಕರಿಸಲು ಅಗ್ನಿ ಪರೀಕ್ಷೆಗೆ ಸೀತೆ ಸಿದ್ದವಾದಳು. ಅಗ್ನಿಗೆ  ಬಲಬಂದು ಕುಂಡಕ್ಕೆ ಧುಮುಕಲು, ಸುಡದೇ ಹೊನ್ನ ಪುತ್ಥಳಿಯಂತೆ ರಾರಾಜಿಸಿದಳು. ಆದರೂ ರಾಮ ಕುಲಕ್ಕೆ ಕೆಟ್ಟ  ಹೆಸರು ತಂದ ಈಕೆ ಮನ ಬಂದತ್ತ ಸಾರಲಿ ಎಂದಾಗ ದೇವತೆಗಳು, ಹಾಗೂ ನೆರೆದವರೆಲ್ಲ ದುಃಖತಪ್ತರಾಗುತ್ತಾರೆ. ಪೂಜ್ಯವಸಿಷ್ಟರು ಮಧ್ಯ ಪ್ರವೇಶಿಸಿ ಸೀತೆಯನ್ನು ರಾಮ ಸ್ವೀಕರಿಸುವಂತೆ ತಿಳಿಸುತ್ತಾರೆ. ಅಂತೆಯೇ ರಾಮಸೀತೆಯರು ಒಂದಾಗಲು ಎಲ್ಲರೂ ಸಂತಸಗೊಳ್ಳುತ್ತಾರೆ. ಸ್ವಯಂ ಶಂಕರ ಪಾರ್ವತಿ ಸಮೇತನಾಗಿ ಬಂದು, ಹರಸುತ್ತಾನೆ. ಶಂಕರನ ಅನುಗ್ರಹದಿಂದ ಸತ್ತುಹೋದ ಕಪಿಗಳೆಲ್ಲ ಜೀವತಳೆಯುತ್ತಾರೆ. ಎಲ್ಲರೂ ಶರಣ ವಿಭೀಷಣನ ಆತಿಥ್ಯ ಸ್ವೀಕರಿಸುತ್ತಾರೆ.

ಶ್ರೀರಾಮ ತನ್ನವರನ್ನು ಏರಿಸಿಕೊಂಡು ಪುಷ್ಪಕದಲ್ಲಿ ಅಯೋದ್ಯೆಗೆ ಹೊರಡಲನುವಾಗಲು, ಸೀತೆ ಲಂಕಾದರ್ಶನದ ಬಯಕೆ ಮುಂದಿಡುತ್ತಾಳೆ. ಸಂಕ್ಷಿಪ್ತಲಂಕಾದರ್ಶನ ಮುಗಿಸಿ, ಶ್ರೀರಾಮ ಸೀತೆಗೆ ಒಂದೊಂದಾಗಿ ಹಿಂದಿನ ಸ್ಥಳಗಳನೆಲ್ಲ ತೋರಿ ಕಥೆ ಹೇಳುತ್ತಾ ಕಿಷ್ಕಿಂದೆಯಲ್ಲಿ ಸುಗ್ರಿವಾದಿ ಪರಿವಾರವನ್ನನುಗ್ರಹಿಸಿ ಮುಂದೆ ದಂಡಕಾರಣ್ಯ ಮುಂತಾದ ಪ್ರದೇಶಗಳನ್ನು ದಾಟಿ ಭಾರದ್ವಜಾಶ್ರಮಕ್ಕೆ ಬರಲು ಅವರ ಅಪೇಕ್ಷೆಯಂತೆ ಆತಿಥ್ಯ ಸ್ವೀಕರಿಸಲು ನಿಲ್ಲುತ್ತಾನೆ. ಹನುಮನನ್ನು ಕರೆದು ಭರತನಿಗೆ ಸಂದೇಶ ತಲುಪಿಸುವಂತೆ  ಕಳಿಸಲು, ಹನುಮಂತ ಅಯೋಧ್ಯೆಗೆ ಹಾರುತ್ತಾನೆ. ಅಂಬರದಲ್ಲಿ ನಾರದರು ತಡೆದು ನಾನಾ ಪ್ರಶ್ನೆಗಳನ್ನು ಕೇಳಲು, ಆ ಪ್ರಶ್ನೆಗಳಿಗೆ ಒಗಟಿನ ಉತ್ತರ ನೀಡಿ ಅದನ್ನು ಬಿಡಿಸುವ ಕೆಲಸವನ್ನು ನಾರದರಿಗೊಪ್ಪಿಸಲು ಅವರು ಅರ್ಥವಾಗದೇ ಸೋಲಲು, ಇತ್ತ ಹನುಮ ಭರತನನ್ನು ಕಂಡು ಶ್ರೀರಾಮ ಬರುವ ಸಂದೇಶವನ್ನು ಬಿತ್ತರಿಸುವನು.

ಶ್ರೀರಾಮ ಸೀತಾ ಸಮೇತನಾಗಿ ಬಂದು ಹಿರಿಯರಿಗೆ ವಂದಿಸಿ, ಎಲ್ಲರನ್ನೂ ಮನ್ನಿಸಿ ರಾಜ್ಯಾಭಿಷೇಕಕ್ಕೆ ಸಿದ್ದನಾಗುವನು. ಪಟ್ಟಾಭಿಷೇಕಕ್ಕೆ ಬರದ ಸಿದ್ದತೆ ನಡೆಯುತ್ತದೆ. ವಿಜ್ರಂಭಣೆಯಿಂದ ಶ್ರೀರಾಮ ಪಟ್ಟಾಭಿಷೇಕ ಜರುಗುತ್ತದೆ. ಹನುಮನ ಭಕ್ತಿಗೆ ಒಲಿದ ಭಗವಂತ ಆತನಿಗೆ ಬ್ರಹ್ಮಪದವನ್ನು ಕರುಣಿಸುತ್ತಾನೆ. ಇದರಿಂದ ನಾರದನಿಗೆ, ಗುಹನಿಗೆ ಅಸಮಾಧಾನವಾಗಲು ಅದನ್ನು ಗುಹ ಹರನಿಗೆ  ಅರಹುತ್ತಾನೆ. ಇತ್ತ ನಾರದನ ಸಂಚಿನಿಂದ ಹರಿಯ ಪರಿಶೇಷದ ಭೋಜನ ಪಾತ್ರೆ ಅಪಹರಿಸಲ್ಪಡುತ್ತದೆ. ಇದರಿಂದ  ಮಾರುತಿ ಖತಿಯೇರಿದನು.  ಬ್ರಹ್ಮನು ಬೆದರಿದನು. ಅಂತಿಮವಾಗಿ ಶ್ರೀರಾಮನು ಎಲ್ಲರನ್ನೂ ಸಂತೈಸುವನು. ನಾರದನ ಲೀಲೆಗಳ ಅವಾಂತರಗಳನ್ನು ಹರಿ ತನ್ನ ಸಮ್ಮುಖದಲ್ಲಿ ಬಗೆಹರಿಸಿ ಸರ್ವರನ್ನು ಮನ್ನಿಸಿದನು. ಮುಂದೆ ಹತ್ತುಸಾವಿರವರುಷ ಅಯೋದ್ಯೆಯನ್ನು ಆಳಿದನು. ರಜಕನ ಮಾತಿಗೆ ತುಂಬುಗರ್ಭಿಣಿ ಸೀತೆಯನ್ನು ಬಿಟ್ಟು ಅರಣ್ಯಕ್ಕೆ ಕಳಿಸಲು ಅವಳನ್ನು ತಾನು ಕರೆತಂದು, ಈ ಆಶ್ರಮದಲ್ಲಿ ಆಕೆ ನಿಮ್ಮನ್ನು ಪಡೆದಳು ಎಂದು ವಾಲ್ಮೀಕಿ ಮುನಿಗಳು ಕಥೆಗೆ ಮಂಗಳ ಹಾಡಿದರು.

ಶ್ರೀರಾಮನ ನಿಜ ಪಟ್ಟಾಭಿಷೇಕವುಸಮೀಕ್ಷೆ

ಶ್ರೀರಾಮನ ನಿಜ ಪಟ್ಟಾಭಿಷೇಕವು ರಾಮಾಯಣದ ಅನೇಕ ಕೃತಿಗಳಲ್ಲಿ ಒಂದು. ಹಾಗಿದ್ದರೂ ಇದನ್ನು ಪ್ರಯೋಗಿಸುವುದು ಅಪರೂಪ. ರಾವಣವಧೆಯ ನಂತರ ನಡೆಯುವ ವೃತ್ತಾಂತಗಳು ಯಕ್ಷಗಾನ ರಸಿಕರಿಗೆ ಅಂಥ ಇಷ್ಟಕರವಾದ ಘಟನೆಗಳೇನಲ್ಲ. ಉತ್ತರಕಾಂಡದ ಕಥೆಗಳಿಗಿರುವ ಜನಾದರಣೆಯೂ ಇದಕ್ಕೆ ದಕ್ಕಲಿಲ್ಲ.

ಇಲ್ಲಿನ ಸನ್ನಿವೇಶಗಳೆಲ್ಲ ಸೀತೆಯ ಅಗ್ನಿ ಪರೀಕ್ಷೆಯ ವೃತ್ತಾಂತವು ಪ್ರಮುಖವಾದುದು. ಅದನ್ನು ಚೆನ್ನಾಗಿ ನಿರ್ವಹಣೆ ಮಾಡಿದ್ದರೆ ಸ್ವಲ್ಪವಾದರೂ ಜನಾದರಣೆ ಸಿಗುತ್ತಿತ್ತೇನೋ ಎನ್ನುವಂತಿದೆ. ಈ ಸನ್ನಿವೇಶದ ನಿರ್ವಹಣೆಯಲ್ಲಿ ಕವಿ ಸೋತಿದ್ದಾನೆ. ಸೀತೆಯ ಆಗಮನವಾದೊಡನೆಯೇ ಅವಳ ಪರವಾಗಿ ದೇವ ದೇವತೆಗಳೆಲ್ಲ ಬಂದು ಹೇಳುತ್ತಾರೆ. ಆದರೂ ರಾಮ ಸ್ವೀಕರಿಸಲೊಪ್ಪದೆ ಅಗ್ನಿಯನ್ನು ಸಿದ್ಧಪಡಿಸುವಂತೆ ಹೇಳುತ್ತಾನೆ. ಇದರ ಉದ್ದೇಶವನ್ನು ಕವಿಯು ಸ್ಪಷ್ಟಪಡಿಸುವುದಿಲ್ಲ. ಆನಂತರ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾದರೂ ರಾಮ ಅವಳನ್ನು ಸ್ವೀಕರಿಸಲು ಒಪ್ಪುವುದಿಲ್ಲ. ಕೊನೆಗೆ ವಸಿಷ್ಟನ ಮತಿಗೆ ಒಪ್ಪಿ ಸ್ವೀಕರಿಸುತ್ತಾನೆ. ರಾಮ ತನ್ನ ಚರ್ಯೆಯ ಬಗೆಗೆ ಒಂದು ಮಾತನ್ನು ಹೇಳುವುದಿಲ್ಲ. ವಸಿಷ್ಟನ ಮಾತಿಗೆ ಒಪ್ಪಿಗೆಯನ್ನು ಸೂಚಿಸುವುದಕ್ಕೆ ಪದ್ಯ ಬೇಕಿತ್ತು. ನೊಂದ ಸೀತೆಯನ್ನು ಸಂತೈಸುವ ಮಾತು ಬೇಕಿತ್ತು ಎನಿಸುತ್ತದೆ.

ಮುಂದಿನ ಪ್ರಕರಣಗಳೂ ಸಾಕಷ್ಟು ಗೋಜಲು ಗೋಜಲುಗಳಾಗಿವೆ. ಆಂಜನೇಯನು ಶೇಷಾನ್ನವನ್ನು ತನಗೆ ಕರುಣಿಸಬೇಕೆಂದು ಕೇಳಿ ಪಡೆದುಕೊಂಡ ಪ್ರಕರಣವಂತೂ ತೀರ ಅಧ್ವಾನವಾಗಿದೆ. ಇದ್ದುದರಲ್ಲಿ ರಾಮನು ಅಯೋಧ್ಯೆಗೆ ಬಂದು ಭರತನನ್ನು ಸಂತೈಸುವ ವೃತ್ತಾಂತವೆ ಚೆನ್ನಾಗಿದೆಯೆಂದು ಹೇಳಬೇಕು.

ಈ ಪ್ರಸಂಗದಲ್ಲಿ ಮಟ್ಟುಗಳ ಬಳಕೆ ಸೀಮಿತವಾದುದು. ಕೆಲವೇ ಕೆಲವು ಮಟ್ಟುಗಳಲ್ಲಿ ಪ್ರಸಂಗ ಮುಗಿಯುತ್ತದೆ.  ಅಲ್ಲಲ್ಲಿ ಪ್ರಾಸಪ್ರಿಯತೆಯ ವ್ಯಕ್ತವಾಗಿದೆ ನೋಡಿ.

ಭಾಮಿನಿ

ಸೀತೆ ತ್ರಿಜಗನ್ಮಾತೆ ಧಾತ್ರಿಯ
ಜಾತೆ ರಘುಪತಿ ಪ್ರೀತೆ ನಿನ್ನಾ
ರಾತಿಯಾಗಿಹ ಯಾತುಧಾನರು ಪ್ರೇತಪುರಕೇರೆ
ಸಾತಿಶಯ ಸುಪ್ರೀತಿಯೋಳು ರಘು
ಜಾತ ಕಳುಹಿದನೀತಳಕೆ ಮಿ
ಖ್ಯಾತೆ ದಯಮಾಡೀ ತತುಕ್ಷಣನಾಥನೆಡೆಗೆನಲು

ಆದರೂ ರಾಮಪಟ್ಟಾಭಿಷೇಕದ ಕಥೆಯನ್ನು ಆಡುವವರಿಗೆ ಲಭ್ಯವಾಗಿರುವ ಪ್ರಸಂಗ ಇದೊಂದೇ ಆಗಿದೆಯೆಂಬುದನ್ನು ಗಮನಿಸಬೇಕು.

ಕವಿ ಪರಿಚಯ :

ಅಲೆಟ್ಟಿ ರಾಮಣ್ಣ ಶಗ್ರಿತ್ತಾಯ (1891-1965) :

ಶ್ರೀ ಎ.ಆರ್. ಶಗ್ರಿತ್ತಾಯ ಅಥವಾ ಅಲೆಮಟ್ಟಿ ರಾಮಣ್ಣ ಶಗ್ರಿತ್ತಾಯರು ಸುಳ್ಯ ತಾಲೂಕಿನ ಅಲೆಮಟ್ಟಿಯವರು. ಕೃಷ್ಣ ಶಗ್ರಿತ್ತಾಯ ಮತ್ತು ಸುಬ್ಬಮ್ಮ ಇವರ ತಂದೆ-ತಾಯಿಯರು. 1891ನೇ ಖರ ಸಂವತ್ಸರಲ್ಲಿ ಜನಿಸಿದ ಇವರು 1965ರಲ್ಲಿ ತಮ್ಮ 74ನೇ ವಯಸ್ಸಿನಲ್ಲಿಯೇ ಪ್ರಸಂಗ ರಚನೆಯನ್ನೂ ಮಾಡಿದವರು. 1946ರಲ್ಲಿ ಪ್ರಕಟಿತವಾದ ತಮ್ಮ ಲಕ್ಷ್ಮಣಾ ಸ್ವಯಂವರವನ್ನು 1910ರಲ್ಲಿಯೇ ಬರೆದಿದ್ದಂತೆ ಮುನ್ನಡಿಯಲ್ಲಿ ಹೇಳಿಕೊಂಡಿದ್ದಾರೆ.

ಯಕ್ಷಗಾನದ ಎಲ್ಲಾ ಅಂಗಗಳಲ್ಲಿಯೂ ತಕ್ಕಷ್ಟು ಮಾಹಿತಿ ಇದ್ದ ಶಗ್ರಿತ್ತಾಯರು ತಾಳಮದ್ದಲೆಗಳಲ್ಲೂ ಅರ್ಥ ಹೇಳುತ್ತಿದ್ದರು.

ಶಗ್ರಿತ್ತಾಯರು ಬರೆದ ಒಟ್ಟು ಕೃತಿಗಳು ಏಳು, ಎಲ್ಲವೂ ಯಕ್ಷಗಾನ ಕೃತಿಗಳು. ಇನ್ನಿತರ ಕೃತಿಗಳಿಲ್ಲ ಎಂದು ಶ್ರೀ ಅನಂತಕೃಷ್ಣ ಅವರು ತಿಳಿಸಿರುತ್ತಾರಾದರೂ 1942ರಲ್ಲಿ ಪ್ರಕಟಗೊಂಡ ಅವರ ಯಕ್ಷಗಾನ ಚಂದ್ರಹಾಸ ಚರಿತ್ರೆಯ ಹೊರಪುಟದಲ್ಲಿ ಎಂಟು ಯಕ್ಷಗಾನ ಕೃತಿಗಳೊಂದಿಗೆ ಭಯಂಕರ ದೃಶ್ಯ ಎಂಬ ಪತ್ತೇದಾರಿಕೆಯನ್ನು ಬರೆದಿದ್ದಾರೆಂದು ಉಲ್ಲೇಖ ಇದೆ. ಈ ಪತ್ತೇದಾರಿ ಪುಸ್ತಕವು ಅಚ್ಚಾಗಿಲ್ಲ.

ಸಮಕಾಲೀನ ಸಂಗತಿಯನ್ನು ತೆಗೆದುಕೊಂಡು ಹೊಸ ಕಾಲದಲ್ಲಿ ಪ್ರಸಂಗ ರಚನೆಯಾಗಿರುವುದು  ಆಗುತ್ತಿರುವುದು (ಉದಾ : ಕಾಶ್ಮೀರ ಕಾಳಗ, ಬಾಂಗ್ಲಾವಿಜಯ ಇತ್ಯಾದಿ) ಯಕ್ಷಗಾನದ ಆಧುನಿಕ ಕಾಲದ ಒಂದು ವಿದ್ಯಮಾನ. ಪ್ರಾಯಃ ಈ ಹೊಸ ಮಾರ್ಗಕ್ಕೆ ಅಲೆಮಟ್ಟಿ ರಾಮಣ್ಣ ಶತ್ರಿತ್ತಾಯರು ಮೊದಲಿಗರಿರಬೇಕು. ಅದೇ ತಾನೇ ಕೊನೆಗೊಂಡ ಎರಡನೇ  ಜಾಗತಿಕ ಮಹಾಯುದ್ಧದ ಬಗೆಗೆ ಅವರು ಪ್ರಸಂಗರಚನೆ ಮಾಡಿದ್ದಾರೆ. 1942ರಲ್ಲಿ ಪ್ರಕಟಗೊಂಡ ಚಂದ್ರಹಾಸ ಚರಿತ್ರೆಯ ಹೊರಪುಟದಲ್ಲಿ ಅಚ್ಚಾಗಲಿರುವ ಪುಸ್ತಕಗಳ ಪಟ್ಟಿಯಲ್ಲಿ ಇದನ್ನು ಕೊಡಲಾಗಿದೆ. ಈ ಕೃತಿ ಮುಂದೆ 1949ರಲ್ಲಿ ಪ್ರಕಟಗೊಂಡಿತು.

ಶಗ್ರಿತ್ತಾಯರ ರಚನೆಗಳು ಸರಗಳವಾಗಿಯೂ ಲಲಿತವಾಗಿಯೂ ಇವೆ. ಕೃತಿಗಳು ರಂಗದಲ್ಲಿ ಸಾಕಷ್ಟು ಪ್ರಯೋಗಗೊಂಡಿವೆ. ಹಳೆಯ ಪ್ರಸಂಗಗಳನ್ನು ಸಾಕಷ್ಟು ಓದಿಕೊಂಡ ಅನುಭವವೇ ಇವರ ಪ್ರಸಂಗರಚನೆಯ ಹಿನ್ನೆಲೆ.  (ಮಾಹಿತಿ : ಡಾ. ಪಾದೇಕಲ್ಲು ವಿಷ್ಣುಭಟ್)

* * *

11. ಅಶ್ವಮೇಧಯಾಗ

ಕಥಾಸಾರ:

ಒಂದು ದಿನ ವಾತ್ಸ್ಯಾಯನಮುನಿ ಶೇಷನಿಗೆ ಅಭಿನಮಿಸಿ ರಘುನಂದನನ ಚರಿತ್ರೆಯನ್ನು ಬಿತ್ತರಿಸುವಂತೆ, ಪ್ರಾರ್ಥಿಸಿದನು. ಅಂತೆಯೇ ಶ್ರೀರಾಮನು ರಕ್ಕಸರನೆಲ್ಲ ನಿಗ್ರಹಿಸಿ, ಸೀತಾಸಮೇತನಾಗಿ ಅಯೋಧ್ಯೆಗೆ ಬಂದುನೆಲಸಿ, ರಜಕನಮಾತಿಗಾಗಿ ಸೀತೆಯನ್ನು ತೊರೆದಿದ್ದಾನೆ. ಕಾಡಿನಲ್ಲಿ ಸೀತೆ ಎರಡು ಗಂಡು ಮಕ್ಕಳನ್ನು ವಾಲ್ಮೀಕಿ ಮಹಾಮುನಿಗಳ ಆಶ್ರಯದಲ್ಲಿ ಹಡೆದು ಅಲ್ಲಿ ನೆಲಸಿದ್ದಾಳೆ.

ಶ್ರೀರಾಮನು ಅಯೋಧ್ಯೆಯಲ್ಲಿ ಪ್ರಜೆಗಳನ್ನು ಪಾಲಿಸುತ್ತಿದ್ದಾನೆ. ಸಮೃದ್ಧಿ, ಸಂತೋಷ, ನೆಮ್ಮದಿನೆಲಸಿದ ನಾಡಿಗೆ ಒಂದು ದಿನ ಕುಂಭಸಂಭವರಾದ ಅಗಸ್ತ್ಯರು ಬರುತ್ತಾರೆ. ಅವರನ್ನು ಸೂಕ್ತವಾಗಿ ಉಪಚರಿಸಿ, ಶ್ರೀರಾಮನಿಗೆ, ದೈತ್ಯರನ್ನು ನಾಶಪಡಿಸಿದನ್ನು ಶ್ಲಾಘಿಸಿದಾಗ ಶ್ರೀರಾಮ, ದೈತ್ಯರ ಉಗಮದ ಕಥೆಯನ್ನು ಕೇಳುತ್ತಾನೆ. ತಾನು ಕೊಂದ ರಾವಣಾದಿದೈತ್ಯರು ಬ್ರಹ್ಮವಂಶಜರೆಂದು ತಿಳಿದು ನೊಂದು, ತನಗೆ ಬಂದ ಬ್ರಹ್ಮಹತ್ಯಾ ಪಾತಕಕ್ಕೆ ಪರಿಹಾರಸೂಚಿಸುವಂತೆ ಮುನಿಗಳನ್ನು ಕೇಳುತ್ತಾನೆ. ಅಗಸ್ತ್ಯರು ಇದರ ನಿವಾರಣೆಗೆ ಅಶ್ವಮೇಧಯಾಗ ಮಾಡುವಂತೆ ಸೂಚಿಸುವರು.

ಸರಯೂ ನದೀ ತಟದಲ್ಲಿ ಅಶ್ವಮೇಧ ಕುದುರೆಯ ಬೆಂಗಾವಲಿಗೆ ಶತ್ರುಘ್ನ ಹೊರಡುತ್ತಾನೆ. ಅವನಿಗೆ ಅನುವಾಗಲು ಪುಷ್ಕಳನೆಂಬ ಪರಾಕ್ರಮಿಯೂ ಹೊರಡುತ್ತಾನೆ. ಅವನ ಪತ್ನಿ ನಾನಾ ರೀತಿ ಪುಷ್ಕಳವನ್ನು ಉಪಚರಿಸಿ ಬೀಳ್ಕೊಡುತ್ತಾಳೆ.

ಕುದುರೆ ನಾನಾ ಪ್ರದೇಶಗಳಿಗೆ ಹೋಗುತ್ತಿದೆ. ಚಕ್ರಾಂಕಪುರದರಸನ ಮಗ ಧಮನು ಭೇಟೆಗೆ ಬಂದವನು ತುರಗಾಶ್ವವನ್ನುಕಂಡು ಫಣಿಯ ಲಿಖಿತವನ್ನು ಓದಿ, ಕೋಪಗೊಂಡು ಹಯವನ್ನು ಬಂಧಿಸುವನು. ಚರರು ಇದನ್ನು ಶತ್ರುಘ್ನನಿಗೆ ತಿಳಿಸುತ್ತಾರೆ. ಯುದ್ಧದಲ್ಲಿ ಶತ್ರುಘ್ನ ಹಿಂತೆಗೆಯಲು ಪುಷ್ಕಳ ಯುದ್ಧಕ್ಕೆ ಅನುವಾಗುತ್ತಾನೆ. ಘೋರಯುದ್ಧದಲ್ಲಿ ಧಮನ ಮೂರ್ಛಿತನಾಗಲು, ಅವನ ತಂದೆ ಸುಭಾಹುಕ ಯುದ್ಧಕ್ಕೆ ಬಂದನು. ಉಭಯತ್ರ ವೀರರು ನಾನಾ ಪರಿ ಹೋರಾಡುವರು. ಪುಷ್ಕಳನ ಬಾಣಕ್ಕೆ ಚಿತ್ರಾಂಗ ಮಡಿಯಲು, ಸುಭಾಹುಕ ಮತ್ತು ಆಂಜನೇಯರ ಮಧ್ಯೆ ಯುದ್ಧ ನಡೆಯುತ್ತದೆ. ಆಂಜನೇಯನ ಪದಹತಿಗೆ ಮೂರ್ಛಿತನಾಗಿ ಬಿದ್ದಿರುವಾಗ ಸುಭಾಹುಕನಿಗೆ ಶ್ರೀರಾಮ ಸರಯೂ ನದಿಯ ತಟದಲ್ಲಿ ಯಾಗದೀಕ್ಷೆಯಿಂದಿರುವುದನ್ನು ಕಾಣುತ್ತಾನೆ. ಭಕ್ತಿಯಿಂದ ಶ್ರೀರಾಮನ ನೆನೆದು, ಶ್ರೀರಾಮನ ಕೆಲಸಕ್ಕೆ ತಾನೂ ನೆರವಾಗಲು, ನಿಶ್ಚಯಿಸಿ, ಮಗ ಧಮನನಿಗೆ ತನಗೆ ಬಂದ ಶಾಪದ ವೃತ್ತಾಂತ ತಿಳಿಸಿ, ಈ ಯಾಗಕ್ಕೆ ಸಹಾಯ ಮಾಡಲೋಸುಗ, ತನ್ನ ಪರಿವಾರ ಸಮೇತ ಶತ್ರುಘ್ನನನ್ನು ಕಾಣುತ್ತಾನೆ. ಬಳಿಕ ತನ್ನ ಸೇನೆ ಸಮೇತ ಅಶ್ವಮೇಧ ತುರಗ ರಕ್ಷಣೆಗೆಂದು ಶತ್ರುಘ್ನನ ಸೇನೆಯೊಟ್ಟಿಗೆ ಸೇರಿಕೊಳ್ಳುತ್ತಾನೆ.

ಎರಡನೇ ಸಂಧಿ ಪ್ರಾರಂಭ

ಶತ್ರುಘ್ನ ತನ್ನ ಸೇನಾಬಲಸಮೇತ ತೇಃಜಪುರಕ್ಕೆ ಬಂದು ಅಲ್ಲಿನ ಅರಸರನ ಬೆಂಬಲ ಪಡೆದು ಮುಂದೆ ಸಾಗುತ್ತಿರುವಾಗ ವಿದ್ಯುನ್ಮಾಲಿ ಎಂಬ ದೈತ್ಯನು ಕುದುರೆಯನ್ನು ಅಪಹರಿಸಲು, ಶತ್ರುಘ್ನನನ ಅಪ್ಪಣೆ ಪಡೆದು ಪುಷ್ಕಳ ಯುದ್ಧಕ್ಕೆ ಹೊರಡುತ್ತಾನೆ. ಪುಷ್ಕಳನು ಪರಾಕ್ರಮದಿಂದ ಹೋರಾಡಿ, ದೈತ್ಯನು ಎಸೆದ ತ್ರಿಶೂಲದಿಂದ ಪ್ರಜ್ಞೆತಪ್ಪಿ ಧರೆಯಲಿ ಒರಗಿರುವಾಗ ಮಾರುತಿ ಯುದ್ಧ ಮಾಡುತ್ತಾನೆ. ಈಗಲೂ ದೈತ್ಯ ಸೋಲದಾಗಲು, ಸ್ವಯಂ ಶತ್ರುಘ್ನನೇ ಯುದ್ಧದಲ್ಲಿ ಆ ಖಳನನ್ನು ಅವನನುಜನ ಸಮೇತ ಕೊಲ್ಲುತ್ತಾನೆ. ಇತ್ತ ಮುಂದಕ್ಕೆ ಬಂದ ವಾಜಿಯು ಯಮುನಾನದಿಯಲ್ಲಿ ಮುಳುಗಿ ಪಾತಾಳಸೇರಿತು. ಶತ್ರುಘ್ನ ಅದನ್ನ ಬಿಡಿಸಿ ತರುವನು.

ಮುಂದೆ ಕುದುರೆ ಸಾಗುತ್ತಿರಲು, ವೀರಮಣಿಯ ಸುಕುಮಾರ ರುಕ್ಮಾಂಗದನು ಅದನ್ನು ಕಟ್ಟುವನು. ವೀರಮಣಿ ಶಿವನ ಸೂಚನೆ, ಅನುಗ್ರಹ ಪಡೆದು ಯುದ್ಧಕ್ಕೆ ಸನ್ನಹವೆಸಗುತ್ತಾನೆ. ವಾಜಿ ಬಂಧನ ತಿಳಿದ ಶತ್ರುಘ್ನ ಹಾಗೂ ಎಲ್ಲ ವೀರರು ವೀರಮಣಿಯೊಟ್ಟಿಗೆ ಹೋರಾಡಲು ವೀರಮಣಿ ಸೈನ್ಯ ಕಂಗಡೆಲು ಸ್ವಯಂ  ಶಂಕರನೇ ಮುಳಿದು ಯುದ್ಧವೆಸಗುತ್ತಾನೆ. ಹನುಮಂತ ಮುಂತಾದವರು ಹರನೊಡನೆ ಯುದ್ಧ ಮುಂದುವರಿದು ದೇವತೆಗಳು ಕಂಗೆಡುತ್ತಾರೆ. ದೇವೇಂದ್ರನೊಲಿದು ಹನುಮನಿದ್ದೆಡೆ ಬರುತ್ತಾನೆ. ತನ್ನ ಮಡಿದ ಸೇನೆಯ ಯೋಧರನ್ನು ಬದುಕಿಸಲು ಸಂಜೀವಿನಿ ತರಲು ತಾನು ಹೋಗುವನು. ಅಲ್ಲಿ ಇಂದ್ರಾದಿದೇವತೆಗಳ ಪ್ರತಿಭಟನೆಯನ್ನು ಮಣಿಸಿ, ದೇವಗುರುಗಳ ಮದ್ಯಸ್ಥಿಕೆಯಲ್ಲಿ ಚಂದ್ರೋಣ ಪರ್ವತದಿಂದ ದೇವೇಂದ್ರನ ಸಮ್ಮತಿಯಿಂದ ಸಂಜೀವಿನಿಯನ್ನು ತರಲು, ಶತ್ರುಘ್ನ, ಪುಷ್ಕಳ ಮುಂತಾದವರು ಜೀವತಳೆದು ಯುದ್ಧಕ್ಕೆ ಅನುವಾಗುವರು. ಮತ್ತೆ ಯುದ್ಧವಾರಂಭವಾಗಲು, ಶ್ರೀರಾಮಚಂದಿರನೇ ರಣಾಂಗಕ್ಕೆ ಬರಲು, ಶಿವನು ಅವನನ್ನು ಸ್ತುತಿಸುವನು. ವರವನ್ನು ಕೊಟ್ಟಿರುವುದರಿಂದ ಈ ವೀರಮಣಿಯನ್ನು ತಾನು ರಕ್ಷಿಸಿ ರಾಮನಸೇನೆಯೊಡನೆ ಯುದ್ಧಮಾಡುವಂತಾಯಿತೆಂದು ಶಿವನು ತಿಳಿಸಿ, ವೀರಮಣಿ ಮುಂತಾದವರನ್ನು  ಈ ಅಶ್ವಮೇಧ ರಕ್ಷಣೆಗೆ ಒಂಡಬಡಿಸಿದನು. ಬಳಿಕ ಶಿವನು ಹಾಗೂ ರಾಮಚಂದ್ರನು ತಮ್ಮ ತಮ್ಮ ನಿಜ ಅಲಯಕ್ಕೆ ತೆರಳಲು, ಶತ್ರುಘ್ನ ತುರುಗದ ಕುದುರೆ ಮುಂದೊತ್ತಿ, ಕುಂಡಲಾಪುರದೊಳಗೆ ಬಂದು, ಅಲ್ಲಿಯೂ ಗೆದ್ದು ಆಮೇಲೆ ಜಾನ್ಹವೀ ತೀರದಲ್ಲಿ ಯಜ್ಞತುರಗ ಕುಶಲವರಿಂದ ಬಂದಿಸಲ್ಪಟ್ಟಿತು. ಪೂಜ್ಯ ಮುನಿ ವಾಲ್ಮೀಕೀಗಳು ಮಕ್ಕಳನ್ನು ಒಡಂಬಡಿಸಿ ಸೀತೆಯನ್ನು ಕರೆದುಕೊಂಡು ಅಯೋದ್ಯೆಗೆ ಬಂದರು ಯಾಗ ಸಾಂಗವಾಗಿ ನೆರವೇರುತ್ತದೆ. ಶ್ರೀರಾಮನು ಖಡ್ಗದಿಂದ ಯಾಗದಶ್ವದ ಬೆನ್ನನ್ನು ಮುಟ್ಟಲು ಅದು ಶಾಪದಿಂದ ಮುಕ್ತ ಹೊಂದಿ ಗಂಧರ್ವನಾಗಿ ನಿಜರೂಪದಿಂದ ರಾಮನಿಗೆರಗಿ ತನಗೆ ಬಂದ ಶಾಪದ ವೃತ್ತಾಂತ ತಿಳಿಸಿ, ಅಪ್ಪಣೆ ಪಡೆದು ಹೊರಡುತ್ತಾನೆ.

ಯಾಗ ಪರಿಸಮಾಪ್ತಿಯಾಗಿ ಸರ್ವರಿಗೂ ಮಂಗಲವಾಗುತ್ತದೆ.

ಅಶ್ವಮೇಧಯಾಗ ಸಮೀ್ಷೆ

ಅಶ್ವಮೇಧಯಾಗ ಅಥವಾ ರಾಮಾಶ್ವಮೇದ್ಧವು ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಪ್ರಸಂಗ, ರಂಗದಲ್ಲಿ ಮಾತ್ರವಲ್ಲ, ತಾಳಮದ್ದಳೆಯಲ್ಲಿಯೂ ಇದನ್ನು ಪ್ರಯೋಗಿಸುವ ರೂಢಿಯಿತ್ತು. ಈಚೆಗೆ ಅದು ಮೂಲೆಗುಂಪಾಗಿದೆಯೆಂದು ಹೇಳಬಹುದು. ಹೆಚ್ಚಿನವರಿಗೆ ಈ ಪ್ರಸಂಗದ ಪರಿಚಯವೂ ಇಲ್ಲದ ಸ್ಥಿತಿಯಾಗಿದೆ. ಅದಕ್ಕೆ ಒಂದು ಪ್ರಮುಖಕಾರಣವೆಂದರೆ ಅಚ್ಚಾದ ಪ್ರತಿಗಳು ದೊರೆಯದಿರುವುದೆಂದೂ ಹೇಳಬಹುದು. ಯಕ್ಷಗಾನ ಪ್ರೇಕ್ಷಕರ ಅಭಿರುಚಿಯ ಬದಲಾವಣೆಯೂ ಕಾರಣವಾಗಿರಬಹುದು.

ಪದ್ಮಪುರಾಣ ಈ ಪ್ರಸಂಗ ಆಕರಗ್ರಂಥ. ವಾಲ್ಮೀಕಿ ರಾಮಾಯಣದಲ್ಲಿ ರಾಮನು ಅಶ್ವಮೇಧ ಮಾಡಿದನೆಂಬುದನ್ನು ಹೇಳಲಾಗಿದೆಯೇ ಹೊರತು ವಿವರಗಳಿಲ್ಲ. ಅನಂತರದ ಕಾಲದಲ್ಲಿ ಪದ್ಮಪುರಾಣದಲ್ಲಿ ಅಶ್ವಮೇಧದ ಕಥೆಗಳು ಸೇರಿದ್ದಿರಬಹುದು. ಯಕ್ಷಗಾನ ಕವಿಗಳಂತೂ ಜೈಮಿನಿಭಾರತದ ಕಥೆಗಳಂತೆ ರಾಮನ ಕಥೆಯಲ್ಲಿಯೂ ವಿವರಗಳಿದ್ದರೆ ಸೊಗಸೆಂದು ಆನ್ನಿಸಿರಬೇಕು. ಹಾಗಾಗಿ ಅಶ್ವಮೇಧದ ಕಥೆಗಳಲ್ಲಿ ಜೈಮಿನಿಭಾರತದ ಕಥೆಗಳ ಛಾಯೆ ಕಂಡರೆ ಆಶ್ಚರ್ಯವಲ್ಲ.

ಪ್ರಸಕ್ತ ಪ್ರಸಂಗವು ಇದಕ್ಕೆ ಅಪರಾದವಲ್ಲವೆಂಬುದು ಕಥಾಸಾರವನ್ನು ಗಮನಿಸಿದರೆ ವಿದಿತವಾಗುತ್ತದೆ. ಈ ಕಥೆಯನ್ನು ರಂಗಕ್ರಿಯೆಗಳಿಗೆ ಹೊಂದುವಂತೆ ನಿರೂಪಿಸುವಲ್ಲಿ ಕವಿಯ ಕೌಶಲ್ಯವಡಗಿದೆ. ಅವನು ಅದರಲ್ಲಿ ಸಿದ್ಧಿಯನ್ನು ಪಡೆದಿದ್ದಾನೆ. ಸೇನೆಗೆ ನಾಯಕನಾಗಿ ಶತ್ರುಘ್ನನಿದ್ದರೂ ಕವಿಗೆ ಭರತನ ಮಗನಾದ ಪುಷ್ಕರನ ಮೇಲೆ ಪ್ರೀತಿ. ಪ್ರಸಂಗದುದ್ದಕ್ಕೂ ವೀರಪುರುಷನಾಗಿ ಅವನು ಮನಸ್ಸನ್ನು ಸೆಳೆಯುತ್ತಾನೆ. ಅದೇ ರೀತಿಯಲ್ಲಿ ಇನ್ನೊಂದು ಪಾತ್ರ ದಮನ. ಅವನು ಅಶ್ವಮೇಧದ ಕುದುರೆಯನ್ನು ಕಂಡಾಗಿನ ಪದ್ಯ ಇದು.

ರಾಗ ನಾದನಾಮಕ್ರಿಯೆ ಅಷ್ಟತಾಳ

ಅಶ್ವವಿದು ಮುಂದೆ  ತೋರ್ಪದು  ಮತ್ತೆ  ಭೂರಿ ಶೃಂಗಾರವಾಗಿರ್ಪುದು
ಚಾರು ಲಿಖಿತವಿದೆ ಭಾಳದಿ  ಮನ  ಸೂರೆಗೊಂಡದು ರತ್ನಜಾಲದಿ

ರಂಜನೆಯ ದೃಷ್ಟಿಯಿಂದ ವಿದ್ಯುನ್ಮಾಲಿಯೆಂಬ ರಕ್ಕಸನ ಕಥೆ ಉಪಯುಕ್ತವಾಗಿದೆ. ವೀರಮಣಿಯ ಕಾಳಗವೂ ಇಲ್ಲಿಯೇ ಸೇರಿದು. ಅದು ಸ್ವತಂತ್ರವಾದ ಪ್ರಸಂಗವಾಗುವ ಯೋಗ್ಯತೆಯುಳ್ಳದ್ದು. ಬೇರೊಬ್ಬ ಕವಿ ವೀರಮಣಿ ಕಾಳಗವನ್ನು ಬರೆದುದನ್ನು ಇಲ್ಲಿ ಗಮನಿಸಬಹುದು. ವೀರರಸದ ವಿಜೃಂಭಣೆಯಿರುವುದಾದರೂ ಅದರೊಂದಿಗೆ ಭಕ್ತಿಯೂ ಬೆರೆತಿದೆ. ಅದ್ಭುತವಾದ ವೃತ್ತಾಂತಗಳು ಒಂದರೊಡನೊಂದು ಬೆರೆತುಕೊಂಡಿದೆ.

ಕವಿಯ ಮುಖ್ಯವಾದ ಗುರಿ ಅಶ್ವಮೇಧಯಾಗದ ಕಥೆಯನ್ನು ಬಿತ್ತರಿಸುವುದು ಅದನ್ನು ಸಮರ್ಥವಾಗಿಯೇ ನಿರ್ವಹಿಸಿದ್ದಾನೆ. ಕವಿಪದ್ಯಗಳ ಸಂಖ್ಯೆ ಹೆಚ್ಚಿದೆ. ಬದಲಿಗೆ ಪಾತ್ರಗಳ ಪದ್ಯಗಳಿದ್ದರೆ ಚೆನ್ನಾಗುತ್ತಿತ್ತು. ಸಂಭಾಷಣೆಯಲ್ಲಿಯೂ ಮಾತಿಗೆ ಹೆಚ್ಚಿನ ಅವಕಾಶ ಕಾಣದು. ಯುದ್ಧಪೂರ್ವದಲ್ಲಿ ಒಂದೆರಡು ಮಾತಿಗೆ ಅವಕಾಶನೀಡುವುದಕ್ಕಷ್ಟೆ ಮಾತು ಸೀಮಿತವೆನ್ನುವಂತಿದೆ. ಪದ್ಯಗಳು ಅತ್ಯಂತ ಸರಳವಾಗಿವೆ.

ಕವಿ ಪರಿಚಯ : ತಿಳಿದಿಲ್ಲ

* * *

12. ಕುಶಲವರ ಕಾಳಗ

ಕಥಾಸಾರ:

ಶ್ರೀರಾಮಚಂದ್ರನು ರಾವಣಾದಿಖಳರನ್ನು ಕೊಂದು ಅಯೋದ್ಯೆಗೆ ಬಂದು ಪಟ್ಟಾಭಿಷಕ್ತನಾಗಿದ್ದಾನೆ. ಶ್ರೀರಾಮ ಮಕ್ಕಳು ತನಗಿಲ್ಲ ಎಂಬ ಚಿಂತೆಯಲ್ಲಿರುವಾಗ ಪೂಜ್ಯ ವಸಿಷ್ಠಮುನಿಗಳು ಬರಲು.  ಅವರನ್ನು  ಸತ್ಕರಿಸುತ್ತಾನೆ. ರಾಮನಂತರಂಗವನ್ನು ತಿಳಿದ ಋಷಿ ವಸಿಷ್ಠರು ಅಭಯವನ್ನು ನೀಡಿ, ಜಾನಕಿಯನ್ನು ಕರೆದು ಆಕೆಗೆ ಪುತ್ರೋತ್ಸವವಾಗಲಿ ಎಂದು ಮಂತ್ರೋಪದೇಶ ನೀಡಿ ಹರಸುತ್ತಾರೆ.

ಸಕಲ ಸಮೃದ್ಧಿಯಿಂದ ರಾರಾಜಿಸುವ ಅಯೋದ್ಯೆ ಸುಖಸಂತಸದಿಂದ ನಲಿಯುತ್ತಿರಲು ದೂತರು ಬಂದು ಶ್ರೀರಾಮನನ್ನು ಬೇಟೆಯಾಡುವುದಕ್ಕೆ ವಿನಂತಿಸಲು, ಅಂತೆಯೇ ಶ್ರೀರಾಮನು ಚತುರಂಗ ಸೇನೆಯೊಡನೆ ವನದಲ್ಲಿ ಬೇಟೆಯಾಡಿ ಹಿಂದಿರುಗುತ್ತಾನೆ. ಈಗ ಪತ್ನಿ ಸೀತೆ ಗರ್ಭವತಿಯಾಗಿದ್ದಾಳೆ. ಅವಳ ಸೊಬಗನ್ನು ಕಂಡು ರಾಮ ಹಿಗ್ಗುತ್ತಾನೆ. ಪಟ್ಟಣ ಸಿಂಗಾರಗೊಳ್ಳುತ್ತದೆ. ಗರ್ಭಿಣಿಯಾದ ಸೀತೆಯನ್ನು ಪ್ರೀತಿಯಿಂದ ಅವಳ ಬಯಕೆಯನ್ನು ಕೇಳಲು ತಾನು ಮೂರು ದಿನ ವನದಲ್ಲಿ ಸಂಚರಿಸುವ ಬಯಕೆ ಅರಹುತ್ತಾಳೆ.

ಇತ್ತ ರಾತ್ರಿ ಸಂಚರಿಸುವ ಚರರು ಶ್ರೀರಾಮನಲ್ಲಿ ಬಂದು ರಜಕನೋರ್ವನಾಡಿದ ಕೀಳು ಮಾತನ್ನು ತಿಳಿಸಲು, ಶ್ರೀರಾಮ ಚಿಂತಿತನಾಗಿ, ಹಲವನ್ನು ಹಂಬಲಿಸಿ ನೊಂದುಕೊಳ್ಳುತ್ತಾನೆ. ಮರುದಿನ ಲಕ್ಷ್ಮಣನನ್ನು ಕರೆದು ಸೀತೆಯನ್ನು ಘೋರವಿಪಿನದಲ್ಲಿ ಬಿಟ್ಟು ಬಾ ಎಂದು ಆಜ್ಞಾಪಿಸಲು, ಲಕ್ಷ್ಮಣನು ಯಾರದ್ದೋ ಕ್ಷುಲ್ಲಕ ಮಾತಿಗೆ ಬೆಲೆ ಕೊಡಬಾರದು ಎಂದು ವಿನಂತಿಸಲು, ರಾಮ ಒಪ್ಪದಿದ್ದಾಗ ಸೀತೆಯನ್ನು ಒಡಂಬಡಿಸಿ ಕಾಡಿಗೆ ಬಿಡಲು ಸಿದ್ಧನಾಗುತ್ತಾನೆ.

ಹಿರಿಯರಿಗೆ ವಂದಿಸಿ ಸಕಲಾಭರಣಗಳ ಧರಿಸಿ ಸೀತೆ ಹೊರಡುತ್ತಾಳೆ. ಘೋರಕಾನನಕ್ಕೆ ರಥಬರಲು, ಹೆದರಿದ ಸೀತೆ ಮುನಿಗಳ ಆಶ್ರಮ ಕಾಣದೇ ಭಯಗೊಂಡು ಲಕ್ಷ್ಮಣನಲ್ಲಿ ಇದೇನು ಎಂದು ಕೇಳಲು, ಲಕ್ಷ್ಮಣ, ಅಣ್ಣನ ಆಜ್ಞೆಯನ್ನು ತಿಳಿಸುತ್ತಾನೆ. ಪತಿಯಾಜ್ಞೆ ತಿಳಿದು ಕಂಗೆಟ್ಟು ಕುಸಿದು ಸೀತೆ ಮೂರ್ಛಾಗತಳಾಗಲು ಲಕ್ಷ್ಮಣ ಅವಳನ್ನು ಉಪಚರಿಸುತ್ತಾನೆ. ಸೀತೆ ನಾನಾ ಪರಿಯಿಂದ ದುಃಖಿಸುತ್ತಾಳೆ. ಸೀತೆಯನ್ನು ರಕ್ಷಿಸುವಂತೆ, ವನದೇವತೆ, ಸಕಲಗಣಕ್ಕೆ ಪ್ರಾರ್ಥಸಿ ಲಕ್ಷ್ಮಣ ದುಗುಡದಿಂದ ಹಿಂದಿರುಗಲು, ಏಕಾಂಗಿ ಸೀತೆ ದಿಕ್ಕುಗಾಣದೆ ಏಳುತ್ತ ಬೀಳುತ್ತ ಸಾಗುತ್ತಿರಲು, ಅವಳ ಆರ್ತನಾದ ಕೇಳಿ ವಾಲ್ಮೀಕಿ ಮುನಿಗಳು ಬಂದು ಅಭಯ ಕೊಟ್ಟು ತನ್ನ ಆಶ್ರಮಕ್ಕೆ ಕರೆದುಕೊಂಡು ಹೋಗುತ್ತಾರೆ.

ಹೀಗೆ ವಾಲ್ಮೀಕಿ ಮುನಿಗಳ ಆಶ್ರಮ ಸೇರಿದ ಸೀತೆ ಅಲ್ಲಿ ಶುಭ ಮುಹೂರ್ತದಲ್ಲಿ ಎರಡು ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಮುನಿಗಳು ಮಕ್ಕಳಿಗೆ ಕುಶ ಮತ್ತು ಲವ ಎಂದು ನಾಮಕರಣ ಮಾಡುತ್ತಾರೆ. ಮಕ್ಕಳು ದಿನದಿಂದ ದಿನಕ್ಕೆ ತೇಜೋವಂತರಾಗಿ ಬೆಳೆಯುತ್ತಾರೆ. ಗುರು ವಾಲ್ಮೀಕಿ ಮಕ್ಕಳಿಗೆ ಸಕಲ ವಿದ್ಯಾಭ್ಯಾಸ ಮಾಡಿಸುತ್ತಾರೆ. ಒಂದು ದಿನ ಋಷಿ ವಾಲ್ಮೀಕಿ ಯಜ್ಞಕ್ಕೆಂದು ಪಾತಾಳಕ್ಕೆ ಪಯಣಿಸುತ್ತಾರೆ.

ಇತ್ತ ಅಯೋಧ್ಯೆಯಲ್ಲಿ ಶ್ರೀರಾಮನು ಅಶ್ವಮೇಧ ಯಾಗ ಮಾಡಬೇಕೆಂದು ಸಂಕಲ್ಪಿಸಿ ಋಷಿಮುನಿಗಳ ಅಪ್ಪಣೆ ಪಡೆದು ಯಜ್ಞಾಶ್ವಪೂಜಿಸಿ, ಶತ್ರುಘ್ನನನ್ನು ಬೆಂಗಾವಲಿಗೆ ಕಳಿಸಿಕೊಡುತ್ತಾನೆ. ಅನೇಕ ಪ್ರದೇಶವನ್ನು ಸುತ್ತಿ ಯಜ್ಞಾಶ್ವ ವಾಲ್ಮೀಕಿ ಮುನಿಗಳ ಆಶ್ರಮಕ್ಕೆ ಬರಲು, ಅದನ್ನು ಕಂಡು ಲವನು ಅದನ್ನು ಬಂಧಿಸುತ್ತಾನೆ. ಬಂದ ಶತ್ರುಗಳನ್ನು ಸೋಲಿಸಿ, ಕೊನೆಗೆ ಶತ್ರುಘ್ನನನ್ನು ಎದುರಿಸಿ, ಬಂಧನಕ್ಕೊಳಗಾಗಲು, ಸುದ್ದಿ ತಿಳಿದ ಸೀತೆ ರೋಧಿಸಲು, ಕುಶನು ಕಾರಣ ತಿಳಿದು ರಣಾಂಗಣಕ್ಕೆ ಬರುತ್ತಾನೆ. ಪರಾಕ್ರಮದಿಂದ ಹೋರಾಡಿ ಲವನನ್ನು ಬಿಡಿಸಿ ಶತ್ರುಘ್ನನನ್ನು ಸೋಲಿಸುತ್ತಾನೆ. ಅಯೋಧ್ಯೆಯಲ್ಲಿ ರಾಮಚಂದ್ರನಿಗೆ ವಿಷಯ ತಿಳಿಯಲು ದುಃಖಿತನಾಗಿ ಲಕ್ಷ್ಮಣನನ್ನು ಯುದ್ಧಕ್ಕೆ ಕಳಿಸಲು ಆತನೂ ತರಳನ ಪರಾಕ್ರಮ ಎದುರಿಸಲಾರದೇ ಸೋಲಲು, ರಾಮನಪ್ಪಣೆ ಪಡೆದು ಭರತನು ಬರುತ್ತಾನೆ. ಭರತನು ತನ್ನ ಸೇನೆಯೊಂದಿಗೆ ಸೋತುಹೋಗಲು, ಸ್ವಯಂ ರಾಮನೇ ಯುದ್ಧರಂಗಕ್ಕೆ ಹನುಮ, ಜಾಂಬವ, ಸುಗ್ರೀವ ಮುಂತಾದವರನ್ನೊಳಗೊಂಡು ಧಾವಿಸುತ್ತಾನೆ.

ಧರೆಯಲ್ಲಿ ಒರಗಿದ ವೀರಾಧಿವೀರರನ್ನು ಕಂಡು ಮರುಗಿದ ಶ್ರೀರಾಮ ಬಾಲಕರ ಸಾಹಸಕ್ಕೆ ಮೆಚ್ಚಿ ತಲೆದೂಗುತ್ತಾನೆ. ಮುಂದೆ ನಡೆದ ಯುದ್ಧದಲ್ಲಿ ಶ್ರೀರಾಮನೂ ಮೂರ್ಛಾಗತನಾಗಲು, ಕುಶಲವರು, ಹನುಮ ಜಾಂಬವ ಮುಂತಾದವರನ್ನು ಬಂದಿಸಿ, ಶ್ರೀರಾಮನ ಕೊರಳ ಹಾರ, ಆಭರಣಗಳನ್ನು ಹಿಡಿದು ತಾಯಿ ಸೀತೆಯನ್ನು ಕಾಣಲು ಬರುತ್ತಾರೆ. ಅದೇ ಸಮಯಕ್ಕೆ ಬಂದ ವಾಲ್ಮೀಕಿ ಮುನಿಗಳು ವಿಷಯ ತಿಳಿದು ರಣಾಂಗಣಕ್ಕೆ ಬಂದು ಎಲ್ಲರನ್ನು ಮಂತ್ರೋದಕದಿಂದ ಎಬ್ಬಿಸುತ್ತಾರೆ. ಶ್ರೀರಾಮನಿಗೆ ಕುಶಲವರು ತನ್ನ ಮಕ್ಕಳು ಎಂದು ತಿಳಿದು ಸಂತಸವಾಗಲು, ಸೀತಾ ಸಮೇತ ಎಲ್ಲರನ್ನು ಕೂಡಿಕೊಂಡು ಅಯೋಧ್ಯೆಗೆ ಬಂದು ಶ್ರೀರಾಮಯಾಗವನ್ನು ಪೂರೈಸಿ ಸಂತಸದಿಂದ ರಾಜ್ಯಭಾರ ಕೈಗೊಂಡನು ಎಂಬಲ್ಲಿಗೆ ಮಂಗಳವಾಗುತ್ತದೆ.

ಕುಶಲವರ ಕಾಳಗ ಸಮೀಕ್ಷೆ

ಯಕ್ಷಗಾನ ವಾಲ್ಮೀಕಿಯೆಂದೇ ಪ್ರಸಿದ್ಧನಾದ ಪಾರ್ತಿಸುಬ್ಬನ ಜನಪ್ರಿಯ ಪ್ರಸಂಗಗಳಲ್ಲಿ ಕುಶಲವರ ಕಾಳಗವೂ ಒಂದು. ಲಕ್ಷ್ಮೀಶ ಮಹಾಕವಿಯ ಜೈಮಿನೀಭಾರತದಲ್ಲಿ ಬರುವ ಸೀತಪರಿತ್ಯಾಗದ ವೃತ್ತಾಂತವನ್ನು ಮುಖ್ಯವಾದ ಆಕರವನ್ನಾಗಿಸಿಕೊಂಡ ಕವಿ ಈ ಸುಂದರವಾದ ಕೃತಿಯನ್ನು ರಚಿಸಿ ಯಕ್ಷಗಾನ ರಂಗವನ್ನು ಸಮೃದ್ಧಗೊಳಿಸಿದ್ದಾನೆ. ಕವಿಯ ಮಾಂತ್ರಿಕಸ್ಪರ್ಶ ಕೃತಿಯನ್ನು ಅಮರವಾಗಿಸಿದೆ.  ಇಂದೂ ರಂಗಭೂಮಿಯಲ್ಲಿ ರಂಜಿಸುವಂತೆ ಮಾಡಿದೆ.

ಈ ಕಥಾನಕವನ್ನು ಸೀತಾಪರಿತ್ಯಾಗ, ಕುಶಲವರ ಜನನ, ಯಜ್ಞಾಶ್ವಬಂಧನ, ಕುಶಲವರ ರಣಪರಾಕ್ರಮ ಮತ್ತು ವಾಲ್ಮೀಕಿಯ ಅನುಗ್ರಹಗಳೆಂಬ ಪ್ರಮುಖ ಪ್ರಕರಣಗಳಿಂದ ಕೂಡಿದ್ದೆಂಬುದಾಗಿ ಹೇಳಬಹುದು. ಸೀತಾಪರಿತ್ಯಾಗ ಪ್ರಕರಣದಲ್ಲಿ ಸೀತೆಯು ಗರ್ಭಿಣಿಯಾದ ಕಥೆಯು ಸೇರಿಕೊಂಡಿದೆ. ಸೀತೆ ಪುಷ್ಪವತಿಯಾದಳೆಂಬುದನ್ನು ಕವಿ ವರ್ಣಿಸಿದ್ದಲ್ಲದೆ ಗರ್ಭಿಣಿಯ ಹಂತಹಂತದ ಬೆಳವಣಿಗೆಯನ್ನು ವರ್ಣಿಸಿದ್ದಾನೆ. ಉದಾ :

ರಾಗ ಅಂದೋಳಿ ಅಷ್ಟತಾಳ

ಮೂರು ತಿಂಗಳು ತುಂಬೆ ಮುದ್ದುಮೊರೆಯಲಿ ಬಿ
ಳ್ಘೆರಿತು ತ್ರೈಜಗದೊಡತಿಗೆ

ಶ್ರೀರಾಮನರಸಿಯ ಗುರುಕುಚವೆರಡು
ಪ್ಪೇರಿತು ಛಾಯಾಮಾತ್ರದೊಳಾಗ

ಯಕ್ಷಗಾನ ಕವಿಗಳು ಶುದ್ಧವರ್ಣನೆಯನ್ನು ಬರೆಯಬಾರದೆಂಬ ನಿಬಂಧನೆಯೇನೂ ಇಲ್ಲ. ಮೇಲಾಗಿ ಪ್ರಸಂಗಕೃತಿಯೇ ಅರ್ಥದ ಮಾತಿಗೂ ಆಕರವಾಗಿತ್ತಾದುದರಿಂದ ಹಿಂದಿನ ಕೃತಿಗಳಲ್ಲಿ ಈ ರೀತಿಯ ವರ್ಣನೆಗಳು ಅಪರೂಪವೇನಲ್ಲ.

ಸೀತಾ ಪರಿತ್ಯಾಗದ ಸನ್ನಿವೇಶದಲ್ಲಿ ರಾಮನು ತನ್ನನ್ನು ಪರಿತ್ಯಾಗ ಮಾಡಿದನೆಂದು ತಿಳಿದಾಗ ಪ್ರತಿಕ್ರಿಯಿಸುವ ಸೀತೆಯ ಮಾತುಗಳು ತುಂಬಾ ತೀಕ್ಷ್ಣವಾಗಿವೆ.

ರಾಗ ನೀಲಾಂಬರಿ ರೂಪಕತಾಳ

ಕಯ್ಯರೆ ಖಡ್ಗವಕೊಟ್ಟು ತನ್ನರಸಿಯ
ಹೊಯ್ಯೆಂದು ಪೇಳದೆ ಬರಿದೆ

ಒಯ್ಯನೆ ಕಾಡೊಳು ಬಿಟ್ಟು ಬಾರೆಂದನೆ
ಅಯ್ಯಯ್ಯ ರಾಮ ಕರುಣಾಳು

ಕಾಡಿನೊಳಗೆ ಹುಲಿ ಇರುವ ಸುದ್ದಿಯ ಕೇಳಿ
ನಾಡಿಂದೊಕ್ಕಲು ತೆಗೆದಂತೆ

ನಾಡ ಮಾತನು ಕೇಳಿ ಎನ್ನನೀರೀತಿಯ
ಮಾಡಿದ ನಲ್ಲ ಎನ್ನರಸ

ಕಾಣಲಾರದ ಪಗೆಯವರಿಗೆ ತಲೆಯಲ್ಲಿ
ಮಾಣಿಕ್ಯವುಂಟೆಂದರವನ

ಪ್ರಾಣವ ಕಳೆದಂತೆ ಜಾಲ ಮಾತಿಗೆಯೆನ್ನ
ಪ್ರಾಣೇಶ ತೊರೆದನೆ ವಿಧಿಯೆ

ಸೀತಾ ಸಂದೇಶವೂ ಸಾಕಷ್ಟು ಶಕ್ತಿಶಾಲಿಯಾಗಿ ಮೂಡಿಬಂದಿದೆ. ಇಲ್ಲೆಲ್ಲ ಲಕ್ಷ್ಮೀಶನ ಪ್ರಭಾವವನ್ನು ಗುರುತಿಸಬಹುದಾದರೂ ಪಾರ್ತಿಸುಬ್ಬನ ಕವಿತ್ವಶಕ್ತಿ ಅದನ್ನು ಜೀರ್ಣಿಸಿಕೊಂಡಿದೆ.

ರಂಗದ ದೃಷ್ಟಿಯಿಂದ ಕುಶಲವರ ಕಾಳಗಗೊಡುವ ದೃಶ್ಯಗಳು ಪ್ರಭಾವಿಯಾಗಿವೆ. ಲವ, ಕುಶರ ಪಾತ್ರಗಳು ನಮ್ಮನ್ನು ಆಕರ್ಷಿಸುತ್ತವೆ. ಲವನು ಅಶ್ವಮೇಧದ ಕುದುರೆಯ ಹಣೆಯ ಲಿಖಿತವನ್ನು ನೋಡಿ ಪ್ರತಿಕ್ರಿಯಿಸುವ ಬಗೆಯನ್ನು ನೋಡಿ.

ರಾಗ ಶಂಕರಾಭರಣ ಅಷ್ಟತಾಳ

ಸೀತಾನಂದನನು  ಓಲೆಯ ನೋಡಿ
ನ್ನೇತರ ಬದುಕೆಂದನು

ಭೂತಳದೊಳಗೊರ್ವ ಖ್ಯಾತನಾಗಿಹಮೇಲೆ
ಪೇತುಗರೆಂದೆಂಬ ಮಾತು ಬಂತೆಮಗೆ

ಬಂದದೆಲ್ಲವು ಬರಲೀ ಪ್ರಾಣವು
ಇಂದೇ ಹೋದರು ಹೋಗಲಿ

ಮುಂದುವರಿಯಲು ತಾಯ್ ಮುನಿ ಕೋಪಿಸಲು ಬಿಡೆ
ನೆಂದು ಹತ್ತಿರೆ ಬಂದು ನಿಂದು ನೋಡಿದನು

ಅಂತೆಯೇ ರಣದಲ್ಲಿ ವಿಜೃಂಭಿಸಿದ ಕುಶಲವರನ್ನು ಕಂಡ ರಾಮ ಸಾಹಸದಿ ಬಿಲ್‌ಬಾಣ ರಂಜಿಸಲು ನಿಸ್ಸೀಮ ಎಂಬುದು ತುಂಬ ಪ್ರಸಿದ್ಧವಾದ  ಪದ್ಯ. ಅದರ ಮಾಧುರ್ಯದ ಅರಿವು ಹಾಡಿದ್ದನ್ನು ಕೇಳಿದಾಗ ಉಂಟಾಗುತ್ತದೆ. ರಾಮನ ಸೇನೆಯವರೆಲ್ಲರನ್ನು ಕೆಳಕ್ಕೆ ಕೆಡವಿ ಅವರ ಆಭರಣಗಳನ್ನು ಗಂಟುಕಟ್ಟಿಕೊಂಡು ಹೊರಡುವಾಗ ಹನುಮ-ಜಾಂಬವರನ್ನು ಕಟ್ಟಿ ಹಾಕುತ್ತಾರೆ. ಆ ಸಮಯದಲ್ಲಿ ಹನುಮನ ಪ್ರತಿಕ್ರಿಯೆ ತುಂಬ ಸ್ವಾರಸ್ಯಕರವಾಗಿದೆ.

ಕೊಂಡು ಹೋಗಲಿ ನಮ್ಮಲ್ಲಿಗೆ  ಸೀತೆ
ಕಂಡರೆ ರಕ್ಷಿಸುವಳು ಜಗನ್ಮಾತೆ

ಪುಂಡುಹುಡುಗರೊಳು ಜಗಳಾಟವೇಕೆ ಭೂ
ಮಂಡಲದೊಳು ನಮ್ಮ ಕೊಂದಂತೆ ಜೋಕೆ

ಕವಿಯ ಯೋಗ್ಯತೆ ಹಿರಿದು. ಅದು ಪ್ರಸಂಗದುದ್ದಕ್ಕೂ ಗೋಚರವಾಗುತ್ತದೆ. ಭಾಷೆಯು ಸರಳವಾದರೂ ಭಾವಸಮೃದ್ಧಿಯಿದೆ. ನೇರವಾಗಿ ಹೃದಯವನ್ನು ಮುಟ್ಟುವಂಥ ರಚನೆಗಳು ಕೃತಿಯ ತುಂಬ ಇವೆ. ಇದೊಂದು ಉತ್ತಮ ಕೃತಿಗಳ ಸಾಲಿಗೆ ಸೇರಬಹುದಾದ ಪ್ರಸಂಗ. ಅಶ್ವಮೇಧಯಾಗ ಅಥವಾ ರಾಮಾಶ್ವಮೇಧವು ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಪ್ರಸಂಗ. ರಂಗದಲ್ಲಿ ಮಾತ್ರವಲ್ಲ, ತಾಳಮಾದ್ದಳೆಯಲ್ಲಿಯೂ ಇದನ್ನು ಪ್ರಯೋಗಿಸುವ ರೂಢಿಯಿತ್ತು.

ಕವಿ ಪರಿಚಯ :

ಪಾರ್ತಿಸುಬ್ಬ : ವಿವರ ುಂಭಕರ್ಣಾದಿ ಕಾಳಗದ ಸಮೀಕ್ಷೆಯ ನಂತರ ಇದೆ.

* * *