ಆನಂದಕಂದರ ಕಥಾಸಂಕಲನಗಳು ಏಳು. ‘ದಶಮಂಜರಿ’ ಆಯ್ದ ಕಥೆಗಳ ಸಂಕಲನ. ಪ್ರಾರಂಭದಲ್ಲಿ ‘ಮಾತೃಭೂಮಿ’, ‘ಸ್ವಧರ್ಮ’ ಪತ್ರಿಕೆಗಳಲ್ಲಿ ಹಾಗೂ ಇತರೆಡೆ ಪ್ರಕಟವಾದ, ಅಂಥ ಮಟ್ಟಕ್ಕೆ ಬಾರದ ಕಥೆಗಳನ್ನು ಆನಂದಕಂದರು ಈ ಸಂಕಲನಗಳಲ್ಲಿ ಸೇರಿಸಿಲ್ಲ. ಕನ್ನಡ ನವೋದಯದ ಪ್ರಮುಖ ಕಥೆಗಾರರಲ್ಲಿ ಆನಂದಕಂದರೂ ಒಬ್ಬರು. ಕಾವ್ಯದ ನಂತರ ಇವರ ಕಥಾಸೃಷ್ಟಿಯೇ ಅಧಿಕವಾಗಿದೆ. ಕನ್ನಡ ಕಥಾಲೋಕಕ್ಕೆ ಒಂದು ನೆಲೆ ಬೆಲೆ ತಂದು ಕೊಟ್ಟವರು. ಜಾನಪದ ಸತ್ವದಿಂದ ಹಾಗೂ ಮಣ್ಣಿನ ಗುಣದಿಂದ ತಮ್ಮ ಕಥೆಗಳಿಗೆ ರಕ್ತ-ಮಾಂಸ ತುಂಬಿದವರು. ಗ್ರಾಮೀಣ ಸಂಪ್ರದಾಯ. ಹಳ್ಳಿಗರ ನಂಬಿಕೆಗಳ ಜತೆ,  ನಗರದ ಮಧ್ಯಮ ವರ್ಗದ ಬದುಕನ್ನೂ ಚಿತ್ರಿಸಿದವರು. ಆದರೆ ಆನಂದಕಂದರ ಗ್ರಾಮೀಣ ವಸ್ತುಗಳ ಕಥೆಗಳೇ ಸಮರ್ಥವಾಗಿ ಮೂಡಿ ಬಂದಿವೆ. ಆನಂದಕಂದರಿಗೆ ಹಳ್ಳಿಯ ಬದುಕೇ ಯಾವಾಗಲೂ ಮಹತ್ವದ್ದಾಗಿ ಕಂಡಿದ್ದು ಕಾರಣವಾಗಿರಬಹುದು.

ಆನಂದಕಂದರ ಪ್ರಥಮ ಕಥಾಸಂಕಲನ ೧೯೩೨ ರಲ್ಲಿ ಪ್ರಕಟವಾದ ‘ಬಡತನದ ಬಾಳು’. ಇದರಲ್ಲಿಯ ನಾಲ್ಕು ಕಥೆಗಳಲ್ಲಿ ಮೂರು ಬಡತನದ ವಸ್ತುವನ್ನೇ ಪಡೆದಿವೆ. ‘ಈ ಚಿತ್ರ ಆ ಚಿತ್ರ’ ಕಥೆಯಲ್ಲಿ ಬಡತನ ಹಾಗೂ ಸಿರಿವಂತಿಕೆಯನ್ನು ಸಂವಾದಿಯಾಗಿ ವಿಶ್ಲೇಷಿಸುತ್ತಾರೆ. ಬಡ ಸೇವಕರನ್ನು ದುಡ್ಡುಳ್ಳವರು ಶೋಷಿಸುವ ಚಿತ್ರಣ, ಆನಂದಕಂದರ ಪ್ರಗತಿಪರ ಧೋರಣೆಯನ್ನು ಎತ್ತಿ ತೋರುತ್ತದೆ.

ಮೊದಲಿನಿಂದಲೂ ಬಂಡಾಯ ಮನೋವೃತ್ತಿಯನ್ನು ಮೈಗೂಡಿಸಿಕೊಂಡ ಆನಂದಕಂದರು ‘ಬಹಿಷ್ಕಾರ’ ಕಥೆಯಲ್ಲಿ ಬ್ರಾಹ್ಮಣ್ಯದ ಅರ್ಥಹೀನ ಸಂಪ್ರದಾಯಗಳನ್ನು ಬಿಚ್ಚಿಟ್ಟಿದ್ದಾರೆ. ಪ್ಲೇಗು ತಗುಲಿ ಒಂದು ಬ್ರಾಹ್ಮಣ ಕುಟುಂಬ ಹಾಸಿಗೆ ಹಿಡಿದಾಗ, ಯಾವ ನೆರವನ್ನೂ ನೀಡದ ಬ್ರಾಹ್ಮಣರು, ಆ ಬ್ರಾಹ್ಮಣ ಊರಗೌಡ ಸಹಾಯ ಮಾಡಿ, ಶಾಮಣ್ಣನ ತಂದೆಯ ಶವಸಂಸ್ಕಾರ ಮಾಡಿದಾಗ, ಇದೇ ಅಪರಾಧವಾಗಿ ಬ್ರಾಹ್ಮಣರೆಲ್ಲರು ಸೇರಿ, ತಮ್ಮ ಮಠಕ್ಕೆ ದೂರು ನೀಡಿ ಶಾಮಣ್ಣನ ಕುಟುಂಬಕ್ಕೆ ಬಹಿಷ್ಕಾರ ಹಾಕಿಸಿ ಪುಣ್ಯಕಟ್ಟಿಕೊಳ್ಳುತ್ತಾರೆ. ಈ ಬಹಿಷ್ಕಾರ ಕೇವಲ ಬಡತನಕ್ಕಾಗಿ ಎಂದು ಹೇಳುವ, ಕಥೆಗಾರರು ಶ್ರೀಮಂತರ ಮಹಾಪರಾಧಗಳನ್ನು ದುಡ್ಡಿನಿಂದ ಮುಚ್ಚಿಡುವ ಸಾಮಾಜಿಕ ವ್ಯವಸ್ಥೆಯ  ಮೇಲೆ ಚಾಟಿ ಏಟು ಹಾಕಿದ್ದಾರೆ.

‘ಹೊಟ್ಟೆಯ ಹೋರಾಟ’- ಒಂದು ಮಧ್ಯಮ ವರ್ಗದ ರೈತ ಕುಟುಂಬ, ಬರಗಾಲದಿಂದ ತತ್ತರಿಸಿ ಹೋದ ಕರುಣಾರ್ಥ ಕಥೆಯಾಗಿದೆ. ಇಲ್ಲಿ ಬಡವರನ್ನು ಶೋಷಿಸುವ ಅಂದಿನ ಗ್ರಾಮಾಧಿಕಾರಿಗಳ ಚಿತ್ರಣವೂ ಯಥಾರ್ಥವಾಗಿ ಮೂಡಿ ಬಂದಿದೆ. ಕೊನೆಯ ಕಥೆ ‘ರಾಜನ ಧರ್ಮ ಸಂಶೋಧನೆ’- ಹಿಂದೂ ಯುವಕನೊಬ್ಬ ಮೌಲ್ವಿಯ ಮನೆಯಲ್ಲಿದ್ದ ಮುಸ್ಲಿಂ ತರುಣಿಗೆ ಮನಸೋತಿದ್ದು, ಆಕೆ ಬಲಾತ್ಕಾರಕ್ಕೊಳಗಾಗಿ ಧರ್ಮಬಾಹಿರಳಾದ ಹಿಂದೂ ತರುಣಿ ಎಂದು ತಿಳಿದಾಗ, ಆತನ ಭ್ರಮನಿರಸನವಾಗುತ್ತದೆ. ಅಂಥ ವಿಶೇಷವಾದ ಕಥೆಯೇನಲ್ಲ.

ಇದೇ ವರ್ಷ ಪ್ರಕಟವಾದ ಎರಡನೆಯ ಕಥಾಸಂಕಲನ ‘ಸಂಸಾರ ಚಿತ್ರ’ದಲ್ಲಿ ಒಂಬತ್ತು ಕಥೆಗಳಿವೆ. ಈ ಕಥೆಗಳಲ್ಲಿ ವಸ್ತು ವೈವಿಧ್ಯತೆ, ವಿಷಯ ವಿಸ್ತಾರ ಕಂಡುಬರುತ್ತವೆ. ಮೊದಲ ಕಥೆ ‘ಹೆಣ್ಣಿನ ಕಣ್ಣು’ ಇದರಲ್ಲಿ ಹೊಂದಾಣಿಕೆಯಿಲ್ಲದ ದಾಂಪತ್ಯ, ಪರಸ್ಪರ ಅರ್ಥಮಾಡಿಕೊಳ್ಳಲಾರದ ಪರಿಸ್ಥಿತಿಯ ಚಿತ್ರಣವಿದೆ. ಕವಿಯಾದ ತನ್ನನ್ನು ಅರ್ಥಮಾಡಿಕೊಳ್ಳದ ಹೆಂಡತಿಯ ಬಗೆಗೆ ರತ್ನಾಕರನಿಗೆ ಬೇಸರ. ಒಮ್ಮೆ ಅವರ ಮನೆಗೆ ಅತಿಥಿಯಾಗಿ ಬಂದ ರೋಹಿಣಿ ಕಾವ್ಯಭಿರುಚಿಯುಳ್ಳವಳು. ರತ್ನಾಕರ ಇವಳತ್ತ ಆಕರ್ಷಿಸುತ್ತಿರುವಲ್ಲಿ, ರೋಹಿಣಿ ಇದಕ್ಕೆ ತೆರೆ ಎಳೆದು ಹೋಗಿದ್ದು-ದಂಪತಿಗಳು ಪರಸ್ಪರ ಹೊಂದಿಕೊಂಡು ಇರಬೇಕೆಂಬ ಉದ್ದೇಶದಿಂದ.

ಏಕಮಾತ್ರ ಪುತ್ರನ ಆಕಸ್ಮಿಕ ಮರಣದ ದುರಂತ ಚಿತ್ರಣ ‘ಜೀವನದ ಹೂ’. ಇದು ಭಾವುಕವಾದ ಕಥೆ. ಬಡತನದ ಕಾರಣಕ್ಕಾಗಿ ಮುದುಕ ವರನಿಗೆ ತಂಗಿಯನ್ನು ಕೊಡುವ ಪ್ರಸ್ತಾಪ ಬಂದಾಗ, ವಕೀಲ ವೃತ್ತಿಯಿಂದ ಒಂದಿಷ್ಟು ಅನೂಕೂಲನಾದ ಅಣ್ಣ ಗೋವಿಂದ, ತಂಗಿಯನ್ನು ಪಾರುಮಾಡುವ ಪ್ರಸಂಗದ ವಸ್ತು ‘ಅನಾಥ ಬಂಧು’ಕಥೆಯಲ್ಲಿದೆ. ಅಂದಿನ ಕಾಲದ ಸಾಹಿತಿಯಾದವನ ಬವಣೆಯ ಕಥೆ’ಮಂಜಿನ ನೀರು’ ನಲುಮೆಯ ಗಂಡನನ್ನು ಕಳೆದುಕೊಂಡು ಹುಚ್ಚಿಯಾದ ಯುವತಿಯ ಕಥೆ ‘ಬಾಡಿ ಬಿದ್ದ ಹೂ’. ವಿವಾಹಿತನೊಬ್ಬ ಅನ್ಯಳ ಜತೆ ಸಲುಗೆ ಬೆಳೆಸಿದಾಗ, ಸಂಪ್ರದಾಯಸ್ಥ ಕುಟುಂಬದಲ್ಲಿ ಅಸಮಾಧಾನ ತಲೆದೋರುತ್ತದೆ. ಕೊನೆಗೆ ಆ ಅನ್ಯ ಹೆಂಗಸು ಮನೆಬಿಟ್ಟು ಹೋದ ಚಿಕ್ಕಪ್ಪನ ಸಿಂಹಳದ ಹೆಂಡತಿ ಎಂದು ತಿಳಿದಾಗ, ಮನೆಯವರೆಲ್ಲ ಆಕೆಯ ಬಗ್ಗೆ ಅನುಕಂಪ ತಾಳುತ್ತಾರೆ. ಅಂಥ ವಿಶೇಷತೆಯಿಲ್ಲದ ಈ ಕಥೆ ‘ಆ ಹೆಂಗಸು’.

‘ನೀನು ಪುಟ್ಟನ ತಾಯಿ’ ಈ ಸಂಕಲನದಲ್ಲಿಯ ಉತ್ತಮ ಕಥೆ. ಅಕ್ಕ ತೀರಿಕೊಂಡ ಬಳಿಕ ಅವಳ ನಾಲ್ಕು ವರ್ಷದ ಮಗು ಕುಮಾರನನ್ನು ತಂಗಿ ಇಂದಕ್ಕ ಮಾತೃಸ್ಥಾನದಲ್ಲಿ ನಿಂತು ಸಲಹುತ್ತಾಳೆ. ಅನಂತರ ಆಕೆ ತಾನೇ ಒಂದು ಮಗುವಿನ ತಾಯಿಯಾದ ಬಳಿಕ, ಸ್ವಾಭಾವಿಕವಾಗಿ ಕುಮಾರನಲ್ಲಿಯ ವಾತ್ಸಲ್ಯಕ್ಕೆ ಕೊರತೆ ಉಂಟಾಗುತ್ತದೆ. ಇದನ್ನು ಅರ್ಥಮಾಡಿಕೊಂಡ ಕುಮಾರ, ತಾನು ಮತೃತ್ವ ಕಂಡ ಚಿಕ್ಕಮ್ಮನ ಮಗು ತನಗೆ ಪ್ರತಿಸ್ಫರ್ಧಿಯಾಗಿ ಕಂಡಂತೆ, ದ್ವೇಷ ಬೆಳೆಸಿಕೊಂಡು ಕೊನೆಗೆ ಮನೆ ಬಿಟ್ಟು ಹೋಗುತ್ತಾನೆ. ಎಳೆಯ ಮಕ್ಕಳ ಮನೋವ್ಯಾಪಾರವನ್ನು ಕಥೆಗಾರರು ಎಳೆ ಎಳೆಯಾಗಿ ಬಿಡಿಸಿದ್ದು, ಇದೊಂದು ಮೌಲಿಕ ಕಥೆಯಾಗಿದೆ.

ಎರಡು ನೆನಪಿನ ಚಿತ್ರಗಳ ಕಥೆ ‘ನನ್ನ ಹುಚ್ಚು’. ಓರ್ವ ಮಹಿಳೆ ತಾನು ಬಾಲ್ಯದಲ್ಲಿ ಕಂಡ ಎರಡು ಪ್ರೀತಿಯ ಮುಖಗಳನ್ನು ಸ್ಮರಿಸಿಕೊಳ್ಳುತ್ತಾಳೆ. ಸಿಡುಕು ಸ್ವಭಾವದ ಅಕ್ಕನನ್ನು ಒಲಿಸಿಕೊಳ್ಳುವುದು, ತನ್ನ ಮಗ ಹಟಮಾಡಿದಾಗ ಸಂತಾಪಗೊಂಡರೂ ಅದನ್ನು ನಿರ್ವಹಿಸಿ ಪ್ರೀತಿಯಿಂದ ಅಪ್ಪಿಕೊಳ್ಳುವುದು ಈ ಚಿತ್ರಗಳ ಸಾಧಾರಣ ಚಿತ್ರಣ. ಕೊನೆಯ ಕಥೆ ‘ಸಂಸಾರವೆಂದರೆ ಸೂಜಿಗಲ್ಲು’ ಒಳ್ಳೆಯ ಕಥೆಯಾಗಿದೆ. ತತ್ವಶಾಸ್ತ್ರ ಓದಿದ ಯುವಕನಿಗೆ ಸಂಸಾರ-ಮದುವೆ ಈ ವಿಷಯಗಳ ಬಗೆಗೆ ಒಂದಿಷ್ಟು ಅನಾದರ. ಮನೆಯವರಿಗೆ ಆತನ ಬಗೆಗೆ ಆತಂಕ. ಒಮ್ಮೆ ಅಕ್ಕನ ಊರಿಗೆ ಹೋದಾಗ, ಅವಳ ಮಗಳನ್ನು ಕಂಡು ತನ್ನ ಹುಸಿ ಆದರ್ಶಗಳಿಗೆ ಶರಣು ಹೊಡೆದು ಅವಳಲ್ಲಿ ಕರಗಿ ಹೋಗುತ್ತಾನೆ. ಕಥಾ ನಿರೂಪಣೆ ಆಕರ್ಷಕವಾಗಿದೆ.

ಆನಂದಕಂದರ ಮೂರನೆಯ ಕಥಾಸಂಕಲನ ‘ನಮ್ಮ ಬದುಕು’ ೧೯೩೯ ರಲ್ಲಿ ಪ್ರಕಟವಾಯಿತು. ಮೊದಲಿನ ಸಂಕಲನಗಳಿಗಿಂತ ಇದು ಸಮರ್ಥ ಕಥೆಗಳನ್ನು ಒಳಗೊಂಡಿದೆ. ‘ಮಲ್ಲಮ್ಮನ ಮಹಾಭಾರತ’ದಲ್ಲಿ ಮಲ್ಲಮ್ಮ ತಮ್ಮ ಹಳ್ಳಿಯ ಮನೆತನದ ದುರಂತ ಕಥೆಯೊಂದನ್ನು ನಿವೇದಿಸುತ್ತಾಳೆ. ಆಕೆಯ ಸೊಸೆ ನೆರೆಹೊಲದ ಕಾಮುಕನ ಪಾಶವಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅಪರಾಧ ಮಗನ ಮೇಲೆ ಬಂದಾಗ ಒತ್ತಡಕ್ಕೆ ಮಣಿದು ಗೌಡನಿಗೆ ಇವರೇ ದುಡ್ಡುಕೊಡಬೇಕಾಗುತ್ತದೆ. ಮಳೆಯಾಗದೆ, ಹೊಲ ಬೆಳೆಯದೆ ತಾಯಿಮಗ ದೇಶಾಂತರ ಹೊರಡುವ ದುರಂತ ಚಿತ್ರಣ ಅಂದಿನ ಇಂದಿನ ಹಳ್ಳಿಯಲ್ಲಿಯ ಶೋಷಣೆಯ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದು ಯಶಸ್ವಿ ಕಥೆಯಿದು.

ಸುಪ್ತ ಕಾಮನೆಗಳನ್ನು ಜಯಿಸಲಾರದೇ ವಿರಕ್ತಿಯ ವೇಷ ಹಾಕಿದವನೊಬ್ಬ ಕೊನೆಗೆ ಸಂಸಾರಿಯಾದ ಕಥೆ ‘ಸೋಂಕು ರೋಗ’. ವಿರಕ್ತಿ ಭಾವ, ಸಂನ್ಯಾಸ ಇವೆಲ್ಲ ನಾಟಕವೆಂಬ ಧ್ವನಿ ಇದರಲ್ಲಿದೆ. ‘ಕಾಣದಕೈ’ ಕಥೆಯಲ್ಲಿ ದಾಯಾದಿಯೊಬ್ಬ ಸೇಡಿನ ಭಾವನೆಯಿಂದ ಒಂದು ಅನ್ಯೋನ್ಯ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿ, ಪತಿವ್ರತೆ ಹೆಂಡತಿಯ ಮೇಲೆ ಗಂಡ ಸಂದೇಹಗೊಳ್ಳುವಂತೆ ಮಾಡುತ್ತಾನೆ. ಕೊನೆಗೆ ಸಂಶಯ ನಿವಾರಣೆಯಾಗಿ ಗಂಡನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಇಲ್ಲಿಯ ಪಾತ್ರಗಳ ಮನೋವಿಶ್ಲೇಷಣೆಯನ್ನು ಕಥೆಗಾರರು ಸಮರ್ಥವಾಗಿ ಮಾಡಿದ್ದು, ಕಥೆ ತುಂಬ ಪರಿಣಾಮ ಬೀರುತ್ತದೆ. ಆಂಗ್ಲ ಸರಕಾರದ ಭಕ್ತ ಜಿಲ್ಲಾಧಿಕಾರಿ ನಾಗೇಂದ್ರರಾಯ, ಸ್ವಾತಂತ್ಯ್ರ ಚಳುವಳಿಗಾರರನ್ನು ಬಗ್ಗು ಬಡಿಯಲು, ಅವರ ಮೇಲೆ ಹಲ್ಲೆ ಮಾಡುವಂತೆ ಪೊಲೀಸರಿಗೆ ಆಜ್ಞಾಪಿಸಿದಾಗ, ಅಳಿಯ, ತನ್ನ ಒಬ್ಬಳೇ ಮಗಳ ಗಂಡ, ಅದಕ್ಕೆ ಬಲಿಯಾಗುತ್ತಾನೆ. ಅನಂತರ ನಾಗೇಂದ್ರರಾಯನಿಗೆ ಜ್ಞಾನೋದಯವಾದ ಕಥಾ ವಸ್ತು ‘ಮಮತೆಯ ಮುಡಿಪು’ ಇದರಲ್ಲಿದೆ. ಕಥೆಯ ಕೊನೆ ಮನಮಿಡಿಯುವಂತೆ ಚಿತ್ರತವಾಗಿದೆ.

[1]

ಜಮೀನುದಾರನ ಶೋಷಣೆಗೆ ಒಳಗಾದ ಬಡರೈತ ಲಿಂಗಣ್ಣನ ಗೋಳಿನ ಕಥೆ ‘ಮಾಲ್ಕೀ ಹಕ್ಕು’. ಭೂಮಾಲಿಕರ ತೋಟವನ್ನು ನಂದವನವನ್ನಾಗಿ ಮಾಡಿದ ಬಡರೈತ ಲಿಂಗಣ್ಣನ ಹೆಂಡತಿ, ಹಬ್ಬಕ್ಕಾಗಿ ಮಕ್ಕಳಿಗೆ ಹೊಸ ಬಟ್ಟೆಬರೆ ಬೇಕೆಂದು, ಒಡೆಯರಿಗೆ ಹೇಳದೆ ಒಂದು ಬಾಳೆಗೊನೆ ಮಾರಿದ ಅಪರಾಧಕ್ಕಾಗಿ, ಭೂಮಾಲಿಕರು ತೋಟದಿಂದ ಲಿಂಗಣ್ಣನ ಕುಟುಂಬವನ್ನೇ ಹೊರಹಾಕುತ್ತಾರೆ. ‘ಉಳುವವನೆ ಭೂಮಿಯ ಒಡೆಯನಾಗಿರಬೇಕು’ ಎಂಬ ಮಾತಿಗೆ ಪೂರಕವಾಗಿ ಆನಂದಕಂದರು ಇಲ್ಲಿ ತಮ್ಮ ಪ್ರಗತಿಶೀಲ ಮನೋಧರ್ಮದಿಂದ ಮಣ್ಣಿನ ಮಕ್ಕಳಾದ ರೈತರ ಸಂಕಟವನ್ನು ಪ್ರಾಮಾಣಿಕವಾಗಿ ಚಿತ್ರಿಸಿದ್ದಾರೆ. ಔದ್ಯೋಗೀಕರಣದಿಂದ ಗ್ರಾಮೀಣ ಗುಡಿಕೈಗಾರಿಕೆಗಳು ನಾಶವಾಗಿ, ದುಡಿಯುವ ಕೈಗಳು ಕಟ್ಟಿದಂತೆ, ಒಂದು ಜನಾಂಗದ ಜೀವನ ಹಾಳಾಗುತ್ತಿರುವ ಚಿತ್ರಣ ‘ಜಾಡರ ಜಾಣಪ್ಪ’ ಕಥೆಯಲ್ಲಿದೆ. ಗಿರಣಿ ಬಟ್ಟೆಗಳ ದಾಳಿಯಿಂದ ಕೈಮಗ್ಗದ ಒರಟು ಬಟ್ಟೆಗಳಿಗೆ ಬಂದೊದಗಿದ ಕುತ್ತನ್ನು ಆರು ದಶಕಗಳ ಹಿಂದೆಯೇ ಆನಂದಕಂದರು ಸೂಚ್ಯವಾಗಿ ಹೇಳಿದ್ದಾರೆ. ಆದರೆ ಈ ಅಧೋಗತಿಗೆ ಕಾರಣವಾದ ಆತನ ವೈಯಕ್ತಿಕ ದೋಷಗಳನ್ನು ಎತ್ತಿ ಹೇಳಿದ್ದು ವಿಶೇಷ.

೧೯೬೩ ರಲ್ಲಿ ಪ್ರಕಟವಾದ ಆನಂದಕಂದರ ನಾಲ್ಕನೆಯ ಕಥಾಸಂಕಲನ ‘ಮಾತನಾಡುವ ಕಲ್ಲು’. ಈ ಸಂಕಲನ ಕನ್ನಡ ಕಥಾ ಕ್ಷೇತ್ರದಲ್ಲಿ ತನ್ನದೇ ಆದ ಒಂದು ಸ್ಥಾನವನ್ನು ಹೊಂದಿದೆ. ಮೊದಲ ಕಥೆ ‘ಮಾತನಾಡುವ ಕಲ್ಲು’ ಒಂದು ಸ್ಥಳಪುರಾಣದ ಹಿನ್ನೆಲೆಯಲ್ಲಿ ಮೂಡಿಬಂದ ಸುಂದರ ಕಥಾನಕವಾಗಿದೆ. ಹಳ್ಳಿಗರ ಭಾವನಾತ್ಮಕ ನಂಬಿಕೆಗಳು ಹಾಗೂ ಸಹಜ ಚೇಷ್ಟೆಗಾಗಿ ಹೇಳಿದ ಮಾತು ಎಂಥ ಸಂಕಟಕ್ಕೆ ಗುರಿಮಾಡಬಹುದೆಂದು ಈ ಕಥೆ ಉದಾಹರಣೆಯಾಗಿದೆ. ಇಲ್ಲಿ ಹಳ್ಳಿಯ ರೀತಿ ನೀತಿಗಳು ಒಪ್ಪಾಗಿ ಮೂಡಿ ಬಂದಿವೆ. ‘ಸೀಮೆಯ ಕಲ್ಲು’ ಹಳ್ಳಿಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಎಂಥ ಗೌರವ ಎಂಬುದರ ಸಂಕೇತದ ಕಥೆ. ಗೌಡನ ತಮ್ಮ, ತಮ್ಮ ರೈತನ ಹೆಂಡತಿಯನ್ನು ಕೆಣಕಿದಾಗ, ಆಕೆಯ ಗಂಡ ಜಕ್ಕಣ್ಣ ಅದನ್ನು ಸಹಿಸದೇ ಆತನನ್ನು ಕೊಂದು, ಗೌಡನ ಬಳಿ ಹೋಗಿ ತನಗೆ ಶಿಕ್ಷೆಯಾಗಬೇಕೆಂದು ಕೇಳುತ್ತಾನೆ. ಅಪರಾಧಿಯಾದ ತಮ್ಮನಿಗೆ ತಕ್ಕ ಶಿಕ್ಷೆಯಾಯಿತೆಂದು ಗೌಡ, ಜಕ್ಕಣ್ಣನನ್ನು ಕ್ಷಮಿಸುತ್ತಾನೆ. ಅಲ್ಲದೆ ಇದು ಎಲ್ಲರಿಗೂ ಪಾಠವಾಗಲೆಂದು, ತನ್ನ ದುಷ್ಟ ತಮ್ಮನ ಮೂರ್ತಿ ಕೆತ್ತಿಸಿ ಊರ ಸೀಮೆಯಲ್ಲಿ ಸ್ಥಾಪಿಸಿ, ಅದರ ಮೇಲೆ ಎಲ್ಲರೂ ಉಗುಳಿ, ಕಲ್ಲು ಬೀರಿ ಹೋಗಬೇಕೆಂದು ಆಜ್ಞಾಪಿಸುತ್ತಾನೆ. ಗೌಡನ ತಾಯಿ ಕೂಡ ಪಾಪಿ ಮಕ್ಕಳು ಸಾಯುವುದೇ ಕುಲಕ್ಕೆ ಕ್ಷೇಮ’ವೆಂದು ತಾನೂ ಉಗುಳಿ, ಕಲ್ಲು ಹಾಕಿ ಬರುತ್ತಾಳೆ. ಹಳ್ಳಿಗರ ನೈತಿಕ ಪ್ರಜ್ಞೆಗೆ ಒತ್ತುಕೊಡುವ ಗ್ರಾಮೀಣ ಸಂಸ್ಕೃತಿಯ ಕಥೆ ಇದಾಗಿದೆ.

‘ಜೋಗತಿ ಕಲ್ಲು’ ಕಥೆಯಲ್ಲಿ ಯುವ ಹೆಬ್ಬುಲಿನಾಯಕ ಯುದ್ಧದಲ್ಲಿ ಜಯಗಳಿಸಿ ಬಂದಾಗ, ಊರಲ್ಲಿ ಮೆರವಣಿಗೆ ನಡೆಯುತ್ತದೆ. ಅಭಿಮಾನದಿಂದ ತರುಣ ಜೋಗತಿ ಚಂದಾ, ಆತನ ಮೇಲೆ ಹೂಮಾಲೆ ಎಸೆದಾಗ, ಅದೇ ಅವರಿಬ್ಬರ ಪ್ರಣಯಕ್ಕೆ ಅಂಕುರವಾಗುತ್ತದೆ. ಇದು ನಾಯಕನ ಹೆಂಡತಿಗೆ ಜೀವ ಹಿಂಡುವ ಪ್ರಸಂಗ. ಆಕೆ ಚಂದಾಳ ಮುಂದೆ ತನ್ನ ಅಳಲನ್ನು ತೋರಿಕೊಂಡಾಗ, ಚಂದಾ ಆಕೆಯ ಸುಖಕ್ಕೆ ಬೆಂಕಿಯಿಡಬಾರದೆಂದು ತಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಲೆ. ಅವಳ ಸ್ಮಾರಕವೇ ಜೋಗತಿಕಲ್ಲು. ಜನಪದ ಸಾರಸತ್ವವನ್ನು ಒಡಮೂಡಿಸಿದ ಈ ಕಥೆಯನ್ನು ಆನಂದಕಂದರು ಕಲಾತ್ಮಕವಾಗಿ ಹೇಳಿಕೊಂಡು ಹೋಗುತ್ತ, ನಾಯಕ-ಚಂದಾರ ಒಲವಿನ ಪ್ರಸಂಗವನ್ನು ಹೃದ್ಯವಾಗಿ ಚಿತ್ರಿಸಿದ್ದಾರೆ. ಆನಂದಕಂದರ ಅತ್ಯುತ್ತಮ ಕಥೆಗಳಲ್ಲಿ ಇದೂ ಒಂದಾಗಿದೆ. ಕನ್ನಡ ವೀರರಮಣಿಯ ಬಲಿದಾನದ ಕಥೆ ‘ಕಂಕಣದ ಕೈ’ ಶೌರ್ಯ-ಸಾಹಸದ ಪರಿಸರದಲ್ಲಿ ಹುಟ್ಟಿ ಬೆಳೆದ ನಾಗಲಬ್ಬೆ, ಅದೇ ಮನೋಧರ್ಮವನ್ನು ಪಡೆದವಳು. ಆಕೆಯ ಗಂಡ ಅಂಥ ಸಾಹಸಿಯಲ್ಲ. ಆದರೂ ಪತ್ನಿಯ ಪ್ರೇರಣೆಯಿಂದ ಆತನೂ ಸಾಹಸ ಪ್ರವೃತ್ತಿ ಬೆಳೆಸಿಕೊಂಡು, ಯುದ್ಧದಲ್ಲಿ ಹೋರಾಡುತ್ತ ವೀರಮರಣ ಪಡೆಯುತ್ತಾನೆ. ನಾಗಲಬ್ಬೆ ಸತಿ ಹೋಗುತ್ತಾಳೆ. ಆ ಮನೆಯವರು ಅವಳ ಕೈಯಲ್ಲಿಯ ಕಂಕಣವನ್ನು ಪೂಜಿಸಿಕೊಂಡು ಬರುತ್ತಾರೆ. ಪ್ರಾಚೀನ ಕನ್ನಡನಾಡಿನಲ್ಲಿಯ ಮಹಿಳೆಯರ ಸಾಹಸದ ದ್ಯೋತಕವಾಗಿ ಮೂಡಿಬಂದ ಕಥೆ ಮನೋಜ್ಞವಾಗಿದೆ.

ತೊರಗಲ್ಲು ದೊರೆ ಒಮ್ಮ ಸಂಚಾರದಲ್ಲಿ ತುಂಬಾ ನೀರಡಿಸಿದಾಗ, ಓರ್ವ ಬಡ ಮುದುಕಿ ನೀರು ನೀಡಿ ಉಪಚರಿಸುತ್ತಾಳೆ. ಸಂತೃಪ್ತಿನಾದ ದೊರೆ ಆ ಮುದುಕಿಗೆ ಏನಾದರೂ ಕಾಣಿಕೆ ಸಲ್ಲಿಸಬೇಕೆಂದು ಕೇಳಿದಾಗ, ನೀರಿನ ತೊಂದರೆಯಿದ್ದ ಆ ಊರಿಗೆ ಒಂದು ಬಾವಿ ಕಟ್ಟಿಸಿಕೊಡಲು ಬೇಡುತ್ತಾಳೆ. ಅವಳ ಹೆಸರು ಹೊತ್ತ ಆ ‘ಬಡವಿ ಬಾವಿ’ ಎಲ್ಲ ಜಾತಿಯ ಜನಾಂಗದವರಿಗೂ ಮುಕ್ತವಾಗಿರುತ್ತದೆ. ಆನಂದಕಂದರ ಜತ್ಮತೀತ ಮನೋಧರ್ಮಕ್ಕೆ ಇದೊಂದು ಸಾಕ್ಷಿ. ‘ವೀರಮಾನ್ಯ’ ಕಥೆಯಲ್ಲಿ ತನಗೆ ದಕ್ಕಬೇಕಾಗಿದ್ದ ಹೆಣ್ಣನ್ನು, ಆಕೆಯ ತಂದೆ ಬೇರೊಬ್ಬನಿಗೆ ಕೊಟ್ಟ ದ್ವೇಷ ಸಾನೆಯಲ್ಲಿದ್ದ ಹುಲಿಯಣ್ಣ, ಅದೇ ಹೆಣ್ಣು-ಚಿನ್ನವ್ವೆಯನ್ನು ಇನ್ನೊಬ್ಬರತು ಬಲಾತ್ಕಾರವಾಗಿ ಒಯ್ಯುತ್ತಿರುವಲ್ಲಿ ಆಕೆಗಾಗಿ ಹೋರಾಡಿ, ರಕ್ಷಿಸಿ ತಾನು ಸಾಯುತ್ತಾನೆ. ಆತನ ಸಾಹಸಕ್ಕೆ ಮೆಚ್ಚಿ, ಚಿನ್ನವ್ವೆಯ ತಂದೆ ಹುಲಿಯಣ್ಣನ ಮನೆತನಕ್ಕೆ ದಾನ ನೀಡಿದ ಹೊಲವೇ ವೀರಮಾನ್ಯ. ಹಿಂದಿನ ಜಾನಪದ ಮೌಲ್ಯಗಳನ್ನು ಎತ್ತಿ ಹೇಳುವ ಆನಂದಕಂದರ ಕಥೆಗಳಲ್ಲಿ ಇದೂ ಒಂದು ಸುಂದರವಾದ ಚಿತ್ರಣವಾಗಿದೆ. ಊರಿನ ಎರಡು ಪ್ರತಿಷ್ಠಿತ ಮನೆತನದ ದಾಯಾದಿ ಜಗಳ ಹಳ್ಳಿಯಲ್ಲಿ ಹೇಗೆ ಕೊಳ್ಳಿ ಇಡುತ್ತದೆ ಎಂಬುದಕ್ಕೆ ಉದಾಹರಣೆಯಾದ ಕಥೆ ‘ಇಬ್ಬಣದ ದಿಬ್ಬಣ’. ಕಾರಹುಣ್ಣಿಮೆಯಲ್ಲಿ ಕರೀ ಹರಿಯುವ ಕಾಲಕ್ಕೆ ಕೆಳಗೌಡರ ಎತ್ತು ಗೆದ್ದಾಗ ಹುಟ್ಟಿದ ದ್ವೇಷ ಕೊಲೆಯಲ್ಲಿ ಪರ್ಯವಸಾನವಾಗುತ್ತದೆ. ಅಂದಿನ ಗೌಡರ ಜಗಳ ಇಂದಿನ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಪಕ್ಷಗಳ ರೂಪಾಂತರದಲ್ಲಿ ಅದೇ ಅನುಭವವನ್ನು ಕಾಣುತ್ತಲಿದ್ದೇವೆ ಅಷ್ಟೆ. ‘ದನಗಾಹಿ’ ಕಥೆಯಲ್ಲಿ ಹಳ್ಳಿಯ ಮುಗ್ಧ ಯುವಕನೊಬ್ಬ ಕಣ್ಣಾರೆ ಕಂಡ ಒಂದು ಕೊಲೆಯ ಬಗ್ಗೆ ಸುಳ್ಳು ಸಾಕ್ಷಿ ಹೇಳದೇ ಬೇಸರಿಸಿ ಊರು ಬಿಟ್ಟು ಹೋಗುತ್ತಾನೆ. ಹಳ್ಳಿಯ ಬದುಕಿನ ಇನ್ನೊಂದು ಮುಖ, ಸತ್ಯಕ್ಕೂ ಅಲ್ಲಿ ಬೆಲೆಯಿದೆ ಎಂಬುದನ್ನು ಇದು ಧ್ವನಿಸುತ್ತದೆ.

‘ಜನಪದ ಜೀವನ’ ಕಥಾಸಂಕಲನ ೧೯೫೫ ರಲ್ಲಿ ಪ್ರಕಟವಾಗಿದೆ. ಇಲ್ಲಿಯ ‘ಅರಳಿದಜೀವ’ ಕಥೆಯಲ್ಲಿ, ಬರಗಾಲದಲ್ಲಿ ಬಡರೈತರನ್ನು-ಜನಸಾಮಾನ್ಯರನ್ನು ಸಂರಕ್ಷಿಸಲು ಸ್ವಾಮಿಗಳೊಬ್ಬರು ಜನ ಸಂಘಟನೆ ಮಾಡಿ, ಸಾಹುಕಾರನ ಸೊಕ್ಕನ್ನು ಮುರಿಯುವ ಹಿನ್ನೆಲೆಯಿದೆ. ಗ್ರಾಮೀಣ ಪರಿಸರ ಕಣ್ಣಿಗೆ ಕಟ್ಟುವಂತಿದೆ. ಸ್ವಾತಂತ್ಯ್ರ ದೊರೆತ ಬಳಿಕ ಹಳ್ಳಿಗಳು ನೈತಿಕ ಅಧಃಪತನಕ್ಕೆ ಈಡಾಗುತ್ತಿರುವುದನ್ನು ‘ಹುಳ ಹತ್ತಿದ ಹಳ್ಳಿ’ಯಲ್ಲಿ ಆನಂದಕಂದರು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ನಾಗರಿಕತೆ ಕೂಡ ಹಳ್ಳಿಗಳ ನಾಶಕ್ಕೆ ಹೇಗೆ ಕಾರಣವಾಗುತ್ತದೆಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ‘ದೆವ್ವದ ಸಂಸಾರ’ದಲ್ಲಿ ಎರಡು ಮುಖಗಳಿವೆ. ಶಿಕ್ಷಣ ಇಲಾಖೆಯ ಕಾರಕೂನನೊಬ್ಬನ ಅನುಭವಗಳ ಸರಮಾಲಿಕೆ ಒಂದು ಮುಖವಾದರೆ, ಇನ್ನೊಂದು ಮುಖವಾಗಿ ಜೀವಣ್ಣ ಮಾಸ್ತರನ ಹೆಂಡತಿ ಕಾಮುಕರ ಕೈಗೆ ಸಿಕ್ಕು ದುರಂತಕ್ಕೀಡಾಗುತ್ತಾಳೆ. ಅದೇ-ಹದಗೆಟ್ಟ ಹಳ್ಳಿಯ ಇನ್ನೊಂದು ಮುಖ.

‘ನೆತ್ತರ ಕೊಡುಗೆ’ ಆನಂದಕಂದರ ಮಹತ್ವದ ಕಥೆಗಳಲ್ಲಿ ಒಂದು. ಇಲ್ಲಿಯೂ ಸಾಹಸ, ತ್ಯಾಗ ಬಲಿದಾನಗಳ ಹಿನ್ನೆಲೆಯಲ್ಲಿ ಇನ್ನೊಂದು ಮುಖವನ್ನು ತೋರಿಸುವಂತಿದೆ. ಒಡತಿಯ ರಕ್ಷಣೆಗಾಗಿ ಹೋರಾಡಿ ವೀರಮರಣ ಪಡೆದ ಮುತ್ತಣ್ಣನ ಮನೆತನಕ್ಕೆ ನೀಡಿದ ಹೊಲವೇ ‘ನೆತ್ತರ ಕೊಡುಗೆ’ಯಾಗಿದೆ. ಲೇಖಕರು ಕಥೆಯನ್ನು ಹದವಾಗಿ ಬೆಳೆಸುತ್ತ ಹೋಗಿದ್ದು, ವಿವರಣೆ ಆಕರ್ಷಕವಾಗಿದೆ. ‘ಮೂರನೆಯ ದರ್ಜೆಯ ಪ್ರಯಾಣ’ದಲ್ಲಿ ರೈಲಿನ (ಅಂದಿನ) ಮೂರನೆಯ ದರ್ಜೆಯ ಡಬ್ಬಿಯಲ್ಲಿ ಜರುಗುವ ವಿವಿಧ ಅನುಭವಗಳ ಜತೆ ಸಮಾಜವಾದಿ ಯುವಕರು ಬರೀ ಮಾತಿನ ಮಲ್ಲರು, ಅಲ್ಲಿಯೇ ಜ್ವರದಿಂದ ಬಳಲುತ್ತಿದ್ದ ಒಬ್ಬ ಬಾವಾಜಿಯನ್ನು ಕಣ್ಣೆತ್ತಿ ಕೂಡ ನೋಡದ, ಮಾನವೀಯತೆ ಇಲ್ಲದವರು ಎಂಬುದನ್ನು ಕಟುವಾಗಿ ಹೇಳಿದ್ದಾರೆ.

ಹೊಟ್ಟೆಗಾಗಿ ಹಾಡುತ್ತ ಬರುವ ಓರ್ವ ಹುಡುಗಿಯ ಹಾಡು ಕೇಳಿ ಎಲ್ಲರು ಸಂತೋಷಪಡುತ್ತಾರೆ. ಆದರೆ ಆ ಬಾಲಕಿಯ ಹಾಡಿನ ಹಿಂದಿನ ಬದುಕು ದುಃಖಮಯವಾಗಿರುತ್ತದೆ. ಆಕೆಯ ತಾಯಿ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ. ‘ಬೀದಿಯ ಹಾಡುಗಾರರು’ ಈ ಕಥೆಯಲ್ಲಿ ಬದುಕು ಹಾಗೂ ಕಲೆಯ ವೈರುಧ್ಯವನ್ನು ಕಥೆಗಾರರು ಎತ್ತಿ ಹೇಳುತ್ತಾರೆ. ‘ನಂದನೂರಿನ ಜಾತ್ರೆ’ಕಥೆಯಲ್ಲಿ ಗಂಗಾಸಾನಿಯ ಆಟ ನೋಡಿದ ದೇಸಾಯಿ ಆಕೆಗೆ ಮನಸೋತು, ಆಕೆಯನ್ನು ತನ್ನವಳನ್ನಗಿ ಮಾಡಿಕೊಳ್ಳುವ ಪ್ರಯತ್ನದಲ್ಲಿ, ಆಕೆ ಆತನ ಮನೆ ಮುರಿಯಲು ಒಪ್ಪದೇ ತನ್ನ ಕಲೆಗಾಗಿ ತನ್ನ ಬದುಕನ್ನು ಮೀಸಲಿಡುತ್ತಾಳೆ. ಇದು ಕೂಡ ಗ್ರಾಮೀಣ ಪ್ರದೇಶದ ಇದ್ದುಳ್ಳವರ ಆಡಂಬರವನ್ನು ಬಿಂಬಿಸುತ್ತದೆ.

೧೯೬೯ರಲ್ಲಿ ‘ಕಳ್ಳರ ಗುರು’ ಪ್ರಕಟವಾಗಿದ್ದು, ಈಗಾಗಲೇ ಕನ್ನಡ ಕಥಾ ಸೃಷ್ಟಿ ತನ್ನ ಬೇರೆ ಮಾರ್ಗ ಕಂಡುಕೊಂಡಿದ್ದರೂ ಆನಂದಕಂದರು ತಮ್ಮ ಮೊದಲಿನ ಮಾರ್ಗದಲ್ಲಿಯೇ ಈ ಕಥೆಗಳನ್ನು ರಚಿಸಿದ್ದಾರೆ. ‘ಕಳ್ಳರ ಗುರು’ ಕಥೆಯಲ್ಲಿ ಕಳ್ಳನೊಬ್ಬ ತನ್ನ ತಪ್ಪಿನ ಅರಿವಾಗಿ, ಮಗನ ಮೇಲಿನ ಮೋಹದಿಂದ ಪರಿವರ್ತಿತನಾಗುವ ಪ್ರಸಂಗವಿದೆ. ಅಂಥ ಅವಕಾಶವಾದರೆ ದುಷ್ಟರಲ್ಲಿಯ ಸದ್ಗುಣಗಳು ಕೂಡ ಗೆಲ್ಲಬಲ್ಲವು ಎಂಬುದನ್ನು ಸುಂದರವಾಗಿ ಹೇಳಿದ್ದಾರೆ. ಆಸ್ಪತ್ರೆಗೆ ಸಾಮಾನ್ಯ ಗರತಿಯೊಬ್ಬಳು ಬಂದಾಗ, ಆಕೆಯ ಸುತ್ತಮುತ್ತಲಿನ ಒಲವಿನ ಪರಿಸರವನ್ನು ಕಂಡು, ಅಹಂಕಾರದ ವೇಶ್ಯೆಯೊಬ್ಬಳು ತನ್ನ ಹಮ್ಮನ್ನು ಬಿಟ್ಟು ಮಾನವೀಯ ಅಂಶಗಳನ್ನು ಬೆಳೆಸಿಕೊಳ್ಳುವ ವಸ್ತು ‘ಟಿ.ಬಿ. ವಾರ್ಡಿನಲ್ಲಿ’ ಇದೆ. ‘ಚಾಮರಧಾರಿಣಿ’ ವಿಜಯನಗರ ಕಾಲದ ಕಥೆ. ಕನಕದಾಸರಿಗೆ ಮನಸೋತ ಮರಧಾರಿಣಿ, ರಾಮರಾಯರ ಬಯಕೆಯನ್ನು ತಿರಸ್ಕರಿಸುತ್ತಾಳೆ. ಮನೆಗೆ ಬಂದ ಕನಕರಿಗೆ ತಾಯಿ ದೊಣ್ಣೆ ಬೀಸಿದಾಗ, ಅದು ತಪ್ಪಿ ಮಗಳಿಗೆ ಏಟು ಬಿದ್ದು ಆಕೆ, ಕನಕರ ಮಡಿಲಲ್ಲಿ ತಲೆಯಿಟ್ಟು ಸಾಯುತ್ತಾಳೆ. ಐತಿಹಾಸಿಕ ಕಲ್ಪನೆಯ ಒಂದು ಸಾಮಾನ್ಯ ಕಥೆ.

ಸ್ವಾತಂತ್ಯ್ರ ಚಳುವಳಿಕಾಲದ ಚಿತ್ರ ‘ಐದು ಸಾವಿರದ ಬಹುಮಾನ’. ಇಲ್ಲಿ ತಲೆಮರೆಸಿಕೊಂಡ ಹೋರಾಟಗಾರನನ್ನು ಮೋಸದಿಂದ ಹಿಡಿದುಕೊಟ್ಟು ಐದುಸಾವಿರ ಬಹುಮಾನ ಪಡೆಯುವ ದೇಶದ್ರೋಹಿಯ ಕಥಾವಸ್ತುವಿನಲ್ಲಿ, ಹೋರಾಟಗಾರನ ಕೌಟುಂಬಿಕ ಜೀವನ, ಅವನಿಗೆ ಸಿಗುವ ಇತರ ಸಹಕಾರ ಪ್ರೀತಿಗಳು ಅನನ್ಯವಾಗಿ ಚಿತ್ರಿಸಲ್ಪಟ್ಟಿವೆ. ಮನುಷ್ಯನ ಅಂತರಂಗದಲ್ಲಿ ಹುದುಗಿದ ಒಳಿತು-ಕೆಡಕುಗಳ ಚಿತ್ರಣ ‘ರೋಮ್ಯಾಂಟಿಕ್‌ ಪೇಶಂಟ್‌’ ಕಥೆಯಲ್ಲಿದೆ. ಪೊಲೀಸ್‌ ಅಧಿಕಾರಿಯೊಬ್ಬ ತನ್ನ ಹೆಂಡತಿ ಕ್ಷಯದಿಂದ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿರುವಾಗ, ಆಕೆಯಲ್ಲಿ ಒಲವಿನ ಮಳೆಗರೆದು, ಆಕೆ ಗುಣಮುಖಳಾದಾಗ, ಅವಳ ಬಗೆಗೆ ತಾತ್ಸಾರ ತಳೆದು ಮತ್ತೊಂದು ಮದುವೆ ಮಾಡಿಕೊಳ್ಳುಲತ್ತಾನೆ. ಅನಾಥಳಾದವಳನ್ನು ಆಸ್ಪತ್ರೆಯ ಕಾರಕೂನ ಮಾನವೀಯತೆ ತೋರಿ ಸಂರಕ್ಷಿಸುತ್ತಾನೆ. ‘ಟಿ.ಬಿ. ವಾರ್ಡಿನಲ್ಲಿ’ ಹಾಗೂ ‘ರೋಮ್ಯಾಂಟಿಕ್‌ ಪೇಶಂಟ್‌’ ಈ ಎರಡೂ ಕಥೆಗಳಲ್ಲಿಯೂ ಮೂಲ ವಸ್ತುಗಳನ್ನು ಆನಂದಕಂದರು ಕ್ಷಯರೋಗ ಗ್ರಸ್ತ ತಮ್ಮ ಪತ್ನಿಯನ್ನು ಆಸ್ಪತ್ರೆಯಲ್ಲಿ ಉಪಚರಿಸುತ್ತಿರುವ ಸಮಯ ಪಡೆದುಕೊಂಡಿರಬೇಕು.

ತಾರಣ್ಯಭರದಲ್ಲಿ ಮಾಡಿದ ತಪ್ಪು, ಮುಂದೆ ಎಂಥ ಕಷ್ಟಕ್ಕೆ ಈಡು ಮಾಡುತ್ತದೆ ಎಂದು ಸೂಚ್ಯವಾಗಿ ಹೇಳುವ ಕಥೆ ‘ಬೆಳಗಿನ ಕೋಳಿ’. ಪ್ರೇಮ ವಿವಾಹ ಮಾಡಿಕೊಂಡ ಬಳಿಕ, ತನ್ನ ಗಂಡನ ನಿಜಬಣ್ಣ ಬಯಲಾದಾಗ ಪರಿತಪಿಸುವ ಯುವತಿಯ ಗೋಳಿನ ಕಥೆ ಇದಾಗಿದೆ. ಭೂಸುಧಾರಣೆಯ ಕಾನೂನಿನ ಹಿನ್ನೆಲೆಯಲ್ಲಿ ಆದರ್ಶ ಹಾಗೂ ಸಂಪ್ರದಾಯಗಳ ತಿಕ್ಕಾಟದ ಕಥೆ ‘ಬೀರಣ್ಣನ ದರ್ಶನ’. ಇಲ್ಲಿ ಹೊಸಕಾಲದ ಮಗ, ತಾವು ಊಳುವ ಭೂಮಿ ತಮ್ಮದೇ ಎಂದು ಕಾನೂನನ್ನು ಎತ್ತಿ ಹೇಳಿದಾಗ, ಸಂಪ್ರದಾಯ ಶರಣನಾದ ತಂದೆ, ಅದು ಒಡೆಯರದೇ ಎಂದು ಹಟಹಿಡಿದು, ಮುಂದೆ ತಂದೆಯ ತಪ್ಪಿನಿಂದ ಮಗ ಸಾಯುತ್ತಾನೆ. ಟೆನನ್ಸಿ ಕಾಯ್ದೆಯ ಎರಡೂ ಮುಖಗಳನ್ನು ಈ ಕಥೆ ವಿವರಿಸುತ್ತದೆ. ದೇಶ ಸ್ವತಂತ್ರವಾದ ಬಳಿಕ ತಲೆಯೆತ್ತಿನಿಂತ ಭ್ರಷ್ಟರ ಕಥೆ ‘ಸ್ವಾತಂತ್ಯ್ರ ಮಹೋತ್ಸವ’ದಲ್ಲಿದೆ.

‘ಬೋನಗಿತ್ತಿಯ ಹಬ್ಬ’ ಆನಂದಕಂದರ ವಿಶಿಷ್ಟ ರಚನೆಯ ಯಶಸ್ವಿಕಥೆಗಳ ಸಾಲಿನಲ್ಲಿ ಸೇರುತ್ತದೆ. ದೇಸಾಯರ ಬೋನದಾಳು ಭೋಗಮ್ಮನ ಬಲಿದಾನದ ಸ್ಮರಣಾರ್ಥವಾಗಿ ಆ ಮನೆತನ ಆಚರಿಸುವ ವಿಶಿಷ್ಟಹಬ್ಬ ‘ಬೋನಗಿತ್ತಿಯ ಹಬ್ಬ’. ಅದಾಗಲೇ ಮದುವೆ ನಿಶ್ಚಯವಾದ ದೇಸಾಯರ ಮಗಳನ್ನು ಊರಿನ ಪುಂಡ ಹಾರಿಸಿಕೊಂಡು ಹೋಗುತ್ತಾನೆ. ಅವನ ಬಂಧನದಲ್ಲಿ ಸಿಕ್ಕು ನಲಗುತ್ತಿರುವ ತನ್ನ ಒಡತಿಯನ್ನು ಬೋನಗಿತ್ತಿ ಭೋಗಮ್ಮ ಉಪಾಯದಿಂದ ಪಾರು ಮಾಡಿ, ತಾನು ಬಲಿಯಾಗುತ್ತಾಳೆ. ಇಲ್ಲಿ ಕೂಡ ಜಾನಪದ ಆದರ್ಶ, ಮೌಲ್ಯಗಳನ್ನು ಈ ಕಥೆ ಎತ್ತಿ ಹೇಳುತ್ತದೆ.

ಆನಂದಕಂದರ ಕಥೆಗಳು ಬಹಳಷ್ಟು ತಮ್ಮದೇ ಆದ ವಿಶಿಷ್ಟ ಸಂಸ್ಕಾರವನ್ನು ಪಡೆದಿವೆ. ಉತ್ತರ ಕರ್ನಾಟಕದ ಜನಪದ ಜೀವನ, ವೀರ-ಸಾಹಸಗಳ ಗಾಥಾ ವಿವರ, ಇತಿಹಾಸ, ಹಳ್ಳಿಯ ಬದುಕು ಇವೆಲ್ಲವುಗಳನ್ನು ಸಮರ್ಥವಾಗಿ ತಮ್ಮ ಕಥೆಗಳಲ್ಲಿ ಬಳಸಿದ್ದಾರೆ.

“…… ಆನಂದಕಂದರ ಇನ್ನೊಂದು ಮಹತ್ತ್ವದ ಗುಣವೆಂದರೆ ಭಾವನಾವಶತೆಯ ಸೋಂಕು ತಗಲದ ಇವರ ವಾಸ್ತವ ದೃಷ್ಟಿ ಭಾವನಾವಶತೆ ಸಾಹಿತ್ಯದ ಪ್ರಮುಖ ಸೌಂದರ್ಯವಾಗಿದ್ದ ಕಾಲದಲ್ಲಿ ಕೂಡ ಇವರು ಅವರಿಂದ ದೂರವಾಗಿದ್ದು ಬಹಳ ದೊಡ್ಡ ಮಾತಾಗಿದೆ. ‘ಬಾಡಿಬಿದ್ದ ಹೂ’, ‘ಕಾಣದ ಕೈ’ ಇಂಥ ಕಥೆಗಳಲ್ಲಿ ಅದು ಸುಳಿದಿದೆಯಾದರೂ ಭಾವನಾವಶತೆ ಇವರ ಸಾಹಿತ್ಯದ ಅಂಕಿತವಾಗಿಲ್ಲ… ಈಗಿದ್ದಂತೆಯೇ ಅವರ ಶುದ್ಧವಾಸ್ತವತೆ ಕತೆಗಳಿಗೆ ಗಟ್ಟಿತನವನ್ನು ತಂದುಕೊಟ್ಟಿದೆ. … ಭಾಷೆಯ ಉಪಯೋಗದಲ್ಲಿ ಆನಂದಕಂದರು ಹೆಚ್ಚಿನ ಜಾಣ್ಮೆಯನ್ನೂ ತೋರಿದ್ದಾರೆ. ‘ಸೀಮೆಯ ಕಲ್ಲಿ’ನ ಶಾಸನ ಭಾಷೆ, ‘ಜೋಗತಿ ಕಲ್ಲಿ’ನಲ್ಲಿ ಧರಮಣ್ಣನ ಕೆಚ್ಚುತುಂಬಿದ ಕನ್ನಡ, ‘ಕಂಕಣದ ಕೈ’ಯ ಐತಿಹಾಸಿಕತೆಯನ್ನು ಹೊರಸೂಸುವ ಭಾಷೆ ಇವೆಲ್ಲ ಆನಂದಕಂದರ ಭಾಷಾಪ್ರಭುತ್ವವನ್ನು ಸಾರುತ್ತವೆ.[2][1]  ‘ಮಮತೆಯ ಮುಡಿಪು’, ಹಾಗೂ ‘ಮಾಲ್ಕೀ ಹಕ್ಕು’ ಈ ಎರಡೂ ಕಥೆಗಳು ಅದಾಗಲೇ ಹಿಂದಿಗೆ ಅನುವಾದವಾಗಿದ್ದವು.

[2]  ನಡೆದು ಬಂದ ದಾರಿ-ಸಂಪುಟ ೨-ಕೆ. ಡಿ. ಕುರ್ತಕೋಟಿ ಪುಟ. ೮೦೭