. ಜಾಂಬವತೀ ಕಲ್ಯಾಣ ಮತ್ತು ಸತ್ಯಭಾಮ ಪರಿಣಯ

ಕುಶಸ್ಥಳವನ್ನು ಆಳುತ್ತಿದ್ದ ಸತ್ರಾಜಿತನಿಗೆ ಕಾಂಚನಮಾಲಿನಿ ಎಂಬ ಹೆಂಡತಿ. ಅವರಿಬ್ಬರ ಮಗಳೇ ಸತ್ಯಭಾಮೆ. ಹೀಗೆ ದಿನ ಕಳೆದಂತೆ ಸತ್ರಾಜಿತನು ಹಿಂದಿನ ಜನ್ಮದಲ್ಲಿ ಶಿವನನ್ನು ಪೂಜಿಸುತ್ತಿರುವುದರಿಂದಲೇ ಈಗ ತಾನು ಮಂದಭಾಗ್ಯನಾಗಿದ್ದೇನೆ. ಇನ್ನೇನು ಮಾಡಬೇಕೆಂಬುದೇ ತೋಚುತ್ತಿಲ್ಲ. ಆದ್ದರಿಂದ ಈಗ ಸೂರ್ಯನನ್ನು ಆರಾಧಿಸಿ ಸುಖ ಪಡೆಯುವೆನು, ಎಂದು ವಿಚಾರಿಸಿ ಸೂರ್ಯನ ತಪುಸ್ಸು ಮಾಡತೊಡಗಿದನು. ಸೂರ್ಯನು ಮೆಚ್ಚಿ ಬಂದು ಮನದಿಷ್ಟವನ್ನು ಹೇಳು ಎನ್ನಲು ‘ದೇವನೆ ನಿನಗೆ ತಿಳಿಯದ್ದೇನಿದೆ. ನಿನ್ನ ದರ್ಶನದಿಂದ ಧನ್ಯನಾದೆ. ಹೊನ್ನಿನ ಭಾಗ್ಯವನ್ನು ಕೊಟ್ಟು ರಕ್ಷಿಸು’ ಎನ್ನಲು ಸೂರ್ಯನು ಆತನಿಗೆ ಸ್ಯಮಂತಕಮಣಿ ಮಾಲೆಯನ್ನು ಕೊಟ್ಟು ಹರಿಸಿದನು.

ಹೀಗೆ ಸತ್ರಾಜಿತನು ಸ್ಯಮಂತಕಮಣಿಯನ್ನು ತಂದಾಗ ಅದರಿಂದ ಹೊರಸೂಸುವ ಪ್ರಕಾಶವನ್ನು ಸೂರ್ಯನೆಂದೇ ಭಾವಿಸಿ ದ್ವಾರಕೆಯ ಪ್ರಜರು ಕೃಷ್ಣನಲ್ಲಿ ಓಡಿಬಂದು ತಮ್ಮನ್ನು ಕಾಪಾಡಬೇಕೆನಲು, ಅದು ಸೂರ್ಯ ಅಲ್ಲವೆಂದೂ,. ಸ್ಯಮಂತಕದ ಕಿರಣನೆಂದೂ, ಅದರಿಂದ ನಿಮಗೇನೂ ಅಪಾಯವಿಲ್ಲವೆಂದೂ ಅಭಯವನ್ನಿತ್ತನು.

ಇತ್ತಲಾಗಿ ಸತ್ರಾಜಿತನು ಸ್ಯಮಂತಕದ ಪ್ರಭಾವದಿಂದಾಗಿ ತನ್ನ ಬಡತನವನ್ನು ನೀಗಿಕೊಂಡು ಸುಖದಿಂದಿರುವಾಗ ಒಂದು ದಿನ ಶ್ರೀಕೃಷ್ಣನು ಸ್ಯಮಂತಕಮಣಿ ಮಾಲೆಯನ್ನು ಯದುರಾಜನಿಗೆ ತೊಡಿಸಬೇಕೆಂಬ ಅಭಿಲಾಷೆಯಿಂದ ಚಾರಕರ ಮುಖಾಂತರ ಸತ್ರಾಜಿತನನ್ನು ಕರೆಸಿಕೊಂಡು “ಭಾನು ನಿನಗಿತ್ತ ವಿಮಲ ರತ್ನವನೊಂದ ಸನುಮತದಲಿ ಯದುರಾಜನಿಗೆ ಕೊಡು ಎಂದು ಹೇಳಲು ಸತ್ರಾಜಿತನು “ಅಹಹಾ ಏ ಮುರಮಥನ ನೀನೆಂಬುದು ವಿಹಿತವೆ’’ ಎಂದೆನಲು ಸರಿ, ಮನಸಿಲ್ಲದಿದ್ದರೆ ಬೇಡ ಎಂದು ಹಿಂದಕ್ಕೆ ಕಳಿಸಿದನು.

ಹೀಗೆ ಸತ್ರಾಜಿತನು ಸುಖವಾಗಿ ಕಾಲ ಕಳೆಯುತ್ತಿರಲೊಂದು ದಿನ ಬೇಡರುಬಂದು ಖಗಮೃಗಗಳ ಬಾಧೆ ಹೆಚ್ಚಾಗಿಹೋಗಿದೆಯೆಂದು ತಿಳಿಸಲು ಸತ್ರಾಜಿತನ ತಮ್ಮನಾದ ಪ್ರಸೇನನು ಕುದುರೆಯನ್ನು ತರಿಸಿ, ಆಯುಧ ಹಿಡಿದು ಸ್ಯಮಂತಕಮಣಿಯನ್ನುಧರಿಸಿ ಬೇಡರೊಡಗೂಡಿ ಬೇಟೆಗೆ ನಡೆದನು.

ಅಡವಿಯಲ್ಲಿ ಕರಡಿ, ಕಾಡುಕೋಣ, ಆನೆಯೇ ಮೊದಲಾದ ಕ್ರೂರಮೃಗಗಳನ್ನು ಬೇಟೆಯಾಡುತ್ತ ಸಾಗುವಾಗ ಸಿಂಹವೊಂದು ಹಾರಿ ಆತನ ಕೊರಳೊಳಗಿದ್ದ ಸ್ಯಮಂತಕಮಣಿಯನ್ನು ಒಯ್ಯುತ್ತಿರಲು ಜಾಂಬವನೆಂಬ ಕರಡಿ ರಾಜನು ಸಿಂಹವನ್ನು ಕೊಂದು ಸ್ಯಮಂತಕಮಣಿಯನ್ನು ತಾನು ಒಯ್ದನು.

ಬೇಡರು ಪ್ರಸೇನನ ಹೆಣವನ್ನು ನೋಡಿ ಅಂಜಿ ಸತ್ರಾಜಿತನಲ್ಲಿ ಬಂದು ಆದ ಬಗೆಯನ್ನು ತೋಡಿಕೊಂಡರು. ಇದನ್ನು ಕೇಳಿದ ಸತ್ರಾಜಿತನು “ಈ ರೀತಿಯ ಮರಣಬಂತೆ ತಮ್ಮಾ ನಾನಿನ್ನಾರ ಕೂಡೆ ಬಾಳಲಯ್ಯೊ ತಮ್ಮಾ ತಮ್ಮಾ’’ ಮುಂತಾಗಿ ಮಮ್ಮಲ ಮರುಗುತ್ತಾನೆ. ಸೂರ್ಯಕೊಟ್ಟ ರತ್ನವನ್ನು ಯದುರಾಜಗಿತ್ತಡದು ಯೋಗ್ಯವೆಂದೆನುತ ಶ್ರೀಕೃಷ್ಣನು ಕೇಳಿದ್ದನು. ಈಗ ಆತನೆ ತಮ್ಮನನ್ನು ಕೊಂದು ಮಣಿಯನ್ನು ಅಪಹರಿಸಿದನೆಂದು ಗ್ರಹಿಸಿಕೊಂಡನು.

ಕೃಷ್ಣ ತನ್ನಲ್ಲೇ ತಾನು ನಗುವುದನ್ನು ಕಂಡು ರುಕ್ಮಿಣಿ ನಗೆಯಾಡಿದ ಕಾರಣವೇನು ಎಂದು ಹಟಹಿಡಿದುಕೇಳಲಾಗಿ, ಬೇಟೆಯಲ್ಲಿ ಪ್ರಸೇನನು ಸತ್ತಬಗೆಯನ್ನು ಸತ್ರಾಜಿತ ತನ್ನನ್ನು ದೋಷಿಯೆಂದು ಗ್ರಹಿಸಿದ್ದನ್ನೂ ನೆನೆದು ನಕ್ಕೆನೆಂದನು. ಇದನ್ನು ಕೇಳಿ ರುಕ್ಮಿಣಿ ಸುಮ್ಮನೆ ಅಪವಾದ ಬಂತಲ್ಲಾ ಎಂದರೆ ಗಣೇಶಚೌತಿಯದಿನ ಚಂದ್ರನನ್ನು ನೋಡಿದ್ದಕ್ಕೆ ಈ ಅಪವಾದ ಎನ್ನುತ್ತ ಸಾತ್ಯಕಿಯನ್ನು ಕರೆದು ಯುದಬಲವನ್ನು ಕೂಡಿಕೊಂಡು ವನದೆಡೆ ನಡೆದ.

ವನದಲ್ಲಿ ನಡೆಯುತ್ತಿರುವಾಗ ಮಾಗಧ “ಗೋರಾರ್ಭಟೆಯ ರಭಸದಲಿ’’ ಬಂದು “ಅರೆಲೊ ಕಾಡೊಳು ಪರಿವಾರ ಸಹಿತಿ ಕೂಡಿ ಚೋರರಂತೆ ಕುಳಿತಿರ್ಪನ್ಯಾರು ನೋಡೀತ’’ ಎಂದವನಿಗೆ ಸಾತ್ಯಕಿ “ಕೂಗಲ್ಯಾತಕೊ ಫಡಫಡ ನಿನ್ನಾಗಮನವು ಎಮ್ಮೊಡನೆ ಸಲ್ಲದು’’ ಎಂದು ಸರಳು ಬಿಟ್ಟನು. ಯುದ್ಧದಲ್ಲಿ ಸಾತ್ಯಕಿ ಮೂರ್ಛೆ ಹೋಗಲು ಕೃಷ್ಣ ಬಂದು ಮಗಧನನ್ನು ಎದುರಿಸಲು ಕೃಷ್ಣನನ್ನು ಜಾರ ಚೋರ, ತನ್ನಲ್ಲಿ ಎಂಬತ್ತನಾಲ್ಕು ಸಲ ಸೋತು ನೀರಿನಲ್ಲಿ ಮನೆಮಾಡಿಕೊಂಡವ ಮುಂತಾಗಿ ಬಯ್ಯುತ್ತ ಯುದ್ಧಮಾಡಲು ಕೃಷ್ಣನಿಂದ ಸೋತನು. ಮಗಧನನ್ನು ನಿವಾರಿಸಿಕೊಂಡು ಕೃಷ್ಣ ಸ್ಯಮಂತಕ ಮಣಿಯನ್ನೊಯ್ದ ಕರಡಿಯ ಹೆಜ್ಜೆಯ ಗುರುತಿನಿಂದ ಗವಿಯ ಬಳಿ ನಡೆದನು. ಅಲ್ಲಿ ಒಳಗಡೆ ಜಾಂಬವತಿ ತೊಟ್ಟಿಲು ತೂಗುತ್ತ “ಸ್ಯಮಂತಕಮಣಿ ನಿನ್ನಯ್ಯ ತಂದಿಹ ಸಂತವಿರುವೆನಲಂದು” ಎಂದು ಹೇಳಿತ್ತಿರುವುದನ್ನು ಕೇಳಿದ ಶ್ರೀಹರಿ ‘ಸ್ಯಮಂಕತವನ್ನು ಕರಡಿ ಒಯ್ದಿದ್ದಕ್ಕೆ ಈಗ ನೀವು ಸಾಕ್ಷಿಯಾದಿರಿ. ನಾನು ಒಳಪ್ರವೇಶಿಸುತ್ತೇನೆ. ಹನ್ನೆರಡುದಿನ ನೀವು ಇಲ್ಲಿ ಹೊರಗಿದ್ದು ಅನಂತರ ದ್ವಾರಕೆಗೆ ಮರಳಿ ಎಂದು ಸಂಗಡಿಗರಿಗೆ ಹೇಳಿ ಗವಿಪ್ರವೇಶಿಸಿ ಜಾಂಬವನ ಮಗನನ್ನು ನೋಡಿ ಮಗುವಿನ ಕೈಲಿರುವ ರತ್ನವನ್ನು ಒಯ್ಯುವ ಬಗ್ಗೆ ಆಲೋಚಿಸುತ್ತಿರುವಾಗ ಮಗುವು ಕೂಗಿಕೊಳ್ಳಲು ಜಾಂಬವನು ಬಂದು ಕ್ರುದ್ಧನಾಗಿ “ಯಾರೆಲೊ ಬಂದ ವೀರನೆನ್ನ ಠಾವಿಗೆ ಮಾರಹರನಿಗೊಮ್ಮೆ ಬರಲು ತೀರದಿಲ್ಲಿಗೆ ಚೋರ ನಿನ್ನ ಬಲವ ಮೀಟಿ ತೋರಿಸೆನುತಲಿ ಕಾರಿಕೆಂಡಗಳಿಂದ ಸಾರೆನುತ್ತಲಿ’’ ಎನ್ನಲು ಇಬ್ಬರ ಮಧ್ಯ ದೊಡ್ಡ ಹೊಡೆದಾಟ ನಡೆಯುತ್ತದೆ. “ನೀಲಗಾತ್ರ ಕೇಳುನಿನ್ನ ಕೋಲಿಗಾನು ಬೆದರ್ವುದುಂಟೆ ತೋಳಬಲುಹ ನೋಡೆನುತ್ತ ಸೀಳಿಶಿರವನು’’ ಎನ್ನುತ್ತ ಬಾಲದಿಂದ ಬಡಿಯುತ್ತಾನೆ. ಮುಂದೆ ಮಲ್ಲಯುದ್ಧ ನಡೆಯುತ್ತದೆ. ಹೀಗೆ ಕಾಯುತ್ತಿದ್ದರೂ ಜಾಂಬವನಿಗೆ ಗಲುವಾಗುವುದಿಲ್ಲ. ಆಗ “ಹರಹರ ತಾನಿಷ್ಟು ಯುಗ ಪರಿಯಂತವು ಪರರಕೈಯಲಿ ಸೋತುದಿಲ್ಲ’’ ಮುಂತಾಗಿ ವ್ಯಥೆಮಾಡುತ್ತಿರಲು ಕೃಷ್ಣನೇ ರಾಮನಾಗಿ ಆತನಿಗೆ ಕಾಣಿಸಿಕೊಳ್ಳುತ್ತಾನೆ. ಆಗ “ಜಯ ಜಯ ದಶರಥಬಾಲ ಮುನಿಯಜ್ಞ ಪರಿಪಾಲ’’ ಎಂದು ಸ್ತುತಿಸಲು ಆತನನ್ನು ಅಪ್ಪಿ ಹೀಗೆ ಕಾದೆನೆಂದು ನೊಂದುಕೊಳ್ಳಬೇಡ, ನನ್ನ ಮೇಲೆ ಸ್ಯಾಮಂತಕದಿಂದಾಗಿ ಅಪವಾದ ಬಂದುದರಿಂದ ಬಂದೆ ಎನ್ನಲಾಗಿ ನಿನ್ನ ಮಹಿಮೆಯರಿಯದೆ ನಾನು’’ ಯುದ್ಧ ಮಾಡಿದೆ ಎಂದು ಶರಣಾಗುತ್ತಾನೆ. ಸ್ಯಮಂತಕ ಮಣಿಯನ್ನು, ತನ್ನ ಮಗಳಾದ ಜಾಂಬವತಿಯನ್ನು ಕೃಷ್ಣನಿಗೆ ಅರ್ಪಿಸುತ್ತಾನೆ.

ಬಾಗಿಲಲ್ಲಿ ನಿಂತಿದ್ದ ಸಾತ್ಯಕಿಯೇ ಮೊದಲಾದವರು ಕಾದು ಕಾದು ಕೃಷ್ಣ ಬಾರದಿರಲು ಹಿಂದಕ್ಕೆ ಹೋಗುತ್ತಾರೆ. ಕೃಷ್ಣನನ್ನು ಕಾಣದಾದೆವೆಂದು ತಿಳಿಸಲು ದೇವಕಿ ದುಃಖಿತಳಾಗಿ “ಎಲ್ಲಿಗೈದೆ ರಂಗಯ್ಯ ನಿನ್ನ ಕಾಣದೆ ತಲ್ಲಣಿಸುವುದು ಕಾಯ ಪುಲ್ಲಲೋಚನೆ ರುಗ್ಮಿಣಿ ಕ್ಷಣಾರ್ಧ ಬಿಟ್ಟು ನಿಲ್ಲಳು ನಾರೀಮಣಿ, ತರಳತನದಿ ಚಂದ್ರನ ಪಿಡಿದ ಮೃದು ಕರವ ತೋರೋ ಚಿಣ್ಣ’’ ಇತ್ಯಾದಿಯಾಗಿ ಹಂಬಲಿಸಿ ಬೇಯುತ್ತಾಳೆ. ವಸುದೇವ ಅವಳಿಗೆ ಸಾಂತ್ವನ ಹೇಳುತ್ತಾನೆ. ಇತ್ತ ಗೋಪ ಕಾಂತೆಯರು, “ರಂಗನ ಸುಂದರ ವದನವು ಕಂಗೊಳಿಸದೆಯಿಹ ಕಾರಣ ಭಂಗದೊಳಂಗಜ ಶರಕೆ ನನ್ನಂಗವು ಕೇಳ್‌ಸೂರೆ ತುಂಗಕುಚವ ಬಲ್ಪಿಡಿದಾಲಂಗಿಸಿ ಸುರತಕಲಾಪವ ಸಂಗವ ಮರೆತಿಹ ವ್ಯಥೆ ಗಂಗಾಧರ ಬಲ್ಲ’’ ಮುಂತಾಗಿ ವಿರಹವನ್ನು ತೋಡಿಕೊಳ್ಳುತ್ತಾರೆ. ಹೀಗೆ ತವಕದೊಳೆಲ್ಲರು ಹೋಗಿ ಪರಶಿವೆಯ ಪಾದಕೆಬಾಗಿ ನವವಿಧದಲಿ ಪೂಜಿಪೆವು ನಾವೆಂದವರೆಲ್ಲರನಾ ಯುವತಿ ಸೈರಿಸಿದಳು’’ ಈ ತೆರದೊಳು ಅಂಬಿಕೆಯೊಳು ನಾನಾ ರೀತಿಯಿಂದ ಬೇಡಿಕೊಳ್ಳಲು ಭೂತಳದೊಳು ಜಗನ್ಮಾತೆಯ ಪದಯುಗ ಓತುನಂಬಿದವರಿಗೆ ಭೀತಿಬರುವುದುಂಟೆ’’ ಎಂದು ಸಮಾಧಾನ ಮಾಡಿಕೊಂಡಿರುತ್ತಾರೆ.

ಸತ್ರಾಜಿತನ ಮನೆಗೆ ಕೃಷ್ಣ ಬರುತ್ತಾನೆ. ಅವನನ್ನು ಸ್ವಾಗತಿಸುತ್ತಾರೆ. ಆಗ ಕೃಷ್ಣ ಸತ್ರಾಜಿತನಿಗೆ ಇಲ್ಲಿಯವರೆಗೆ ನಡೆದ ಸಂಗತಿಗಳನ್ನು ಸಾದ್ಯಂತವಾಗಿ ಹೇಳುತ್ತಾನೆ. “ನಿನ್ನ ಮನದೊಳು ಶಂಕೆ ಎನ್ನ ಮೇಲಿರುವುದಕೆ ಮುನ್ನ ಕಳೆಯಲು ಪೋಗೆ ಕನ್ನಿಕೆಯು ಎನಗೆ ದೊರಕಿದಳು. ಇನ್ನು ಮಣಿಕೊಳ್ಳುವುದು, ನಿನ್ನ ಮಣಿ ನಿನಗಾಯ್ತು’’ ಎನ್ನುತ್ತಾನೆ. ಆತನ ಮಾತನ್ನು ಕೇಳಿ ಸತ್ರಾಜಿತ ಲಜ್ಜಿತನಾಗುತ್ತಾನೆ. “ಹರಹರಾ ನಾನರಿಯದಾದೆ ಪರಮಾತ್ಮ ನೀನೆಂದು ಪರಮಾತ್ಮನ ಮೇಲೆ ದೋಷ ಹೊರಿಸಿ ಪೇಳ್ದೆನಿಂದೆ’’ ಮುಂತಾಗಿ ಹೇಳಿ ಮರುಗುತ್ತಾನೆ. ಕೃಷ್ಣ ಸಮಾಧಾನ ಹೇಳುತ್ತಾನೆ.

ತನ್ನಿಂದಾದ ಅಪರಾಧವನ್ನು ಪರಿಹರಿಸಿಕೊಳ್ಳಲು ತನ್ನ ಮಗಳಾದ ಸತ್ಯಭಾಮೆಯನ್ನು ಕೃಷ್ಣನಿಗೆ ಕೊಡಲು ಸತ್ರಾಜಿತ ನಿಶ್ಚಯಿಸಿದ.

ಇತ್ತ ಹೃದಿಕನ ಮಗನಾದ ಅಕ್ರೂರನು ಸತ್ರಾಜಿತನು ತನಗೆ ಮಗಳನ್ನು ಕೊಡುತ್ತೇನೆಂದು ಇದೀಗ ಗೋವಳನಿಗೆ ಕೊಡುತ್ತಿದ್ದಾನೆ. “ಕುಹಕಿಯನ್ನು ಬಿಡುವುದುಚಿತವೇನಯ್ಯ’’ ಎಂದು ಮಂತ್ರಿಯನ್ನು ಕೇಳಲು, ಕೃಷ್ಣನನ್ನು ಕೆಣಕುವುದು ಬೇಡವೆಂದೂ ದೃಢಮನದಿಂದಲಿ ನೋಡು ಜಗದೊಡೆಯನಾಶ್ರಿತರನು ಕೆಣಕಲು ಕೇಡು. ಹುಡುಗಿಯ ನೆವದಿಂದ ಪೋಗಿ ಕೆಡಬೇಡ ನಿನಗೆ ಸಾರಿದೆ ಕಡ್ಡಿಮುರಿದು’’ ಎಂದರೂ ಆತ ಕೇಳದೆ ವೀರಾವೇಶದಿಂದ ಹೊರಡುತ್ತಾನೆ. ಹೀಗೆ ಬಂದು ಕುಶಸ್ಥಳವನ್ನು ಮುತ್ತಿಗೆ ಹಾಕಲು ಕಾವಲು ಭಟರು ರಾಜನಿಗೆ ವರದಿ ಸಲ್ಲಿಸುತ್ತಾರೆ. ಸತ್ರಾಜಿತ ತಾನೇ ಧನುಶರ ಹಿಡಿದು ಆತನನ್ನು ಎದುರಿಸುತ್ತಾನೆ. ಚೋರನಂತೆ ರಾತ್ರಿಯಲ್ಲಿ ದಾಳಿ ಮಾಡಲು ಕಾರಣವೇನೆನ್ನಲು “ಸತ್ಯಧರ್ಮವ ಪೇಳುವೆ ವಚನ ಭ್ರಷ್ಟ ವ್ಯರ್ಥ ನಿನ್ನಯ ಬಾಳುವೆ ಪುತ್ರಿಯನು ಕೊಡದಿರ್ದ ಧೂರ್ತನಾಲಿಗೆ ಕೊಯ್ದು ಶಸ್ತ್ರದೊಳುರ ಸೀಳುವೆ’’ ಎನ್ನುತ್ತಾನೆ. ಯುದ್ಧದಲ್ಲಿ ಸತ್ರಾಜಿತನನ್ನು ಕೊಲ್ಲಲು ಸೈನಿಕರು ಓಡುತ್ತಾರೆ. ಈಗ ತನ್ನ ಪುರಿಗೆ ಮರಳುತ್ತಾನೆ.

ಇದನ್ನು ತಿಳಿದ ಸತ್ಯಭಾಮೆ ಚಕ್ರಧರನಲ್ಲಿ ಹೇಳಿ ಕೊರಳನ್ನು ಕತ್ತರಿಸುವೆ ಎಂದು ಅರಸುತ್ತ ಬರುತ್ತಾಳೆ. ಈ ಎಲ್ಲ ಕತೆಯ ಕೇಳಿ ಕೃಷ್ಣ ಸಿಟ್ಟಿನಿಂದ ಶತಧನ್ವನನ್ನು ನಾಶಮಾಡುವುದಾಗಿ ಹೊರಡುತ್ತಾನೆ. ಶತಧನ್ವ ಮಾವನ ಕೊಂದವನು ಮುಂತಾಗಿ ಹಂಗಿಸುತ್ತಾನೆ. ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ “ಜಡಜನಾಭನು ಕರದಿ ಪಿಡಿದಿರುವ ಚಕ್ರ ಬಿಡೆ ಕಿಡಿಸೂಸಿ ಬಂದು ನಿಂದಿರುವ ಕಡುಪರಾಕ್ರಮಿಯ ಕೊರಳೆಡೆಯ ಕತ್ತರಿಸಲಡಗೆಡೆದ ಬೇರರಿದವೋಲ್ ತರುವ’’.

ಹೀಗೆ ರಕ್ಕಸನನ್ನು ನಾಶಮಾಡಿದಂಥ ಪುರುಷೋತ್ತಮ ಗರುಡವಾಹನವನ್ನು ಏರಿ ತನ್ನ ರಾಜಧಾನಿಗೆ ಬಂದು ಸುಖ ಸಂತೋಷದಿಂದ ತನ್ನ ಪತ್ನಿಯರನ್ನು, ತಂದೆ ತಾಯಿ ಬಂಧು ಬಳಗದವರನ್ನು ಕೂಡಿ ವಾಸವಾಗುತ್ತಾನೆ.

. ಪಾರಿಜಾತ ಪ್ರಸಂಗ

ಒಂದಾನೊಂದು ದಿನ ಶ್ರೀಕೃಷ್ಣ ತನ್ನ ಮಡದಿ ರುಕ್ಮಿಣಿ ಸಹಿತ ಸಭೆಯಲ್ಲಿ ಕುಳಿತಿದ್ದಾನೆ. ಭವನವೋ ರತ್ನಖಚಿತ ಗೋಡೆಗಳಿಂದ ಕೂಡಿದೆ. ರಾಜರೂ, ಸುರನರರೂ ಸಭೆಯಲ್ಲಿ ಮಂಡಿಸಿದ್ದಾರೆ. ಸಂಗೀತ ನರ್ತನಗಳು ನಡೆದಿವೆ. ಹೀಗಿರುವಾಗ ನಾರದ ಆ ಸಭೆಗೆ ಬರುತ್ತಾನೆ.

ಬಂದ ನಾರದನನ್ನು ಬಹುವಿಧವಾಗಿ ಸತ್ಕರಿಸಿ ಬಂದ ಕಾರಣವನ್ನು ಕೇಳಲಾಗಿ, ಭೂಮಿ ಭಾರವನ್ನು ಇಳಿಸಲೆಂದೇ ಅವತರಿಸಿ ಬಂದು ಮಾನವಸಹಜವಾಗಿ ವರ್ತಿಸುವ ನರನಾಟಕದ ರಂಜಿಸುವ ಪರಮಪುರುಷ ನೀನಾಗಿದ್ದೂ ಪ್ರಶ್ನೆಗಳನ್ನು ಕೇಳುತ್ತಿಯಾ ಎಂದು ಹೇಳಿ ತಾನು ಸುರಲೋಕದಿಂದ ತಂದ ಪಾರಿಜಾತವನ್ನು ಅವನ ಕೈಗೆ ಕೊಡುತ್ತಾನೆ.

ಇಂಥ ಪಾರಿಜಾತವನ್ನು ಯಾರು ಮುಡಿಯಲು ಯೋಗ್ಯರು ಎಂದು ಕೃಷ್ಣ ಕೇಳಲಾಗ ಇದನ್ನು ರುಕ್ಮಿಣಿ ಮುಡಿಯಲೆಂದೂ, ಮುಡಿದವರಿಗೆ ಮಕ್ಕಳ ಭಾಗ್ಯ ಬರುವುದೆಂದೂ ಹೇಳಿ ಹೊರಟು ಹೋಗುತ್ತಾನೆ.

ನಾರದನ ಮಾತಿನಂತೆ ಕೃಷ್ಣ ಪಾರಿಜಾತವನ್ನು ರುಕ್ಮಿಣಿಯ ಮುಡಿಯಲ್ಲಿಡಲು, ಅವಳು ಬಹು ಸಂತೋಷದಿಂದ ಮುಡಿದು ಆತನ ಕಾಲ್ಗೆರಗಿ, ನಾರದನಿಗೂ ನಮಸ್ಕರಿಸಿ ಸುಖದಿಂದಿರುತ್ತಾಳೆ. ಇದನ್ನು ಕಂಡ ದೂತಿಯೋರ್ವಳು ಈ ಸುದ್ದಿಯನ್ನು ಸತ್ಯಭಾಮೆಗೆ ತಿಳಿಸುತ್ತಾಳೆ. ಆ ಪಾರಿಜಾತವನ್ನು ಮುಡಿಯಲು ವೈದರ್ಭಿಗಲ್ಲದೆ ಅನ್ಯರಿಗೆ ಅರ್ಹತೆಯಿಲ್ಲ ಎಂದು ನಾರದ ಹೇಳಿದನು ಎಂದು ಹೇಳುತ್ತಾಳೆ. ಆದರೂ ಸತ್ಯಭಾಮೆ “ಕಂಡು ಬಂದೆಯೋ ನೀನು ಕಾಣದೆ ಪೇಳ್ವೆಯೋ’’ ಎಂದು ಕೇಳಿದರೆ “ಪೇಳಿದೆನು ನೋಡಿದುದನು ಪುಸಿಯಲ್ಲ, ಕೇಳದರ ಚಲ್ವಿಕೆಯನು’’ ಮುಂತಾಗಿ ಹೇಳುತ್ತಾಳೆ. ಇದರಿಂದ ಭಾಮೆ ಕ್ರುದ್ಧಳಾಗುತ್ತಾಳೆ. ಮಮತೆಯ ಮಡದಿ ತಾನಿರುವಾಗ ರುಕ್ಮಿಣಿಗೆ ಹೂ ಕೊಡುವುದು ಅವಳ ಮನಸ್ಸಿಗೆ ಮುಳ್ಳು ಚುಚ್ಚಿದಂತಾಗುತ್ತದೆ. “ಹೆಂಡಿರೆಲ್ಲರನು ಸಮ ಕಂಡು ನಡೆಸದೆ ಹೀಗೆ ಪುಂಡತನವೇಕೆ ಕರದಂಡನಾಭನಿಗೆ’’ ಎಂದು ಅಂದುಕೊಳ್ಳುತ್ತಾಳೆ. ಇನ್ನೂ ಮನಸ್ಸಿಗೆ ಸಮಾಧಾನವಾಗದೆ ಮತ್ತೋರ್ವ ದೂತಿಯ ಕಡೆ ತಿರುಗಿ “ಏನು ಮಾಡಲಿಯುವತಿ ಇನಿಯನಿಗಿಲ್ಲವೆ ನೀತಿ, ಆ ನಾರಿಯೊಳು ಪ್ರೀತಿ ಅಧಿಕ ಕೇಳ್ ಸುದತಿ’’ ಮುಂತಾಗಿ ಹೇಳಿ ಊಟ-ಉಡುಗೆಯನ್ನು ನಿರ್ಲಕ್ಷಿಸಿ, “ಭರದಿ ಚಿಂತಾಗೃಹಕೆ ಪರಿತಂದು ಬೇಗ ಬಲಿದು ಕದವನು ಮಂಚದಲಿ ಪವಡಿಸಿದಳು’’.

ಈ ವಾರ್ತೆಯನ್ನು ದೂತಿಯೋರ್ವಳು ಕೃಷ್ಣನಿಗೆ ತಿಳಿಸಲಾಗಿ ಆತ ಅವಳಲ್ಲಿ ಬಂದರೆ ಭಾಮೆ ಆತನನ್ನು ಮಾತಾಡಿಸುವುದಿಲ್ಲ. ಹೊರಗೆ ನಿಂತವರು ಯಾರು ಹೆಸರೇನು ಎಂದು ಕೇಳುತ್ತಾಳೆ. ತಾನು ವೇಣುಗೋಪಾಲ ಎಂದರೆ ವೇಣುಗೋಪಾಲ ಆಗಿದ್ದರೆ ದನ ಕಾಯಲು ಹೋಗು ಎನ್ನುತ್ತಾಳೆ. ಹೀಗೆ ಸಂಭಾಷಣೆ ನಡೆದು ಅವಳು ಆತನಿಗೆ ಒಲಿಯುತ್ತಾಳೆ. ನಾರದ ತಂದ ಪಾರಿಜಾತವನ್ನು ತನಗೆ ಕೊಡದೆ ಕಳ್ಳತನದಲ್ಲಿ ಬೆನ್ನು ಹತ್ತಿ ಬಂದ ನೀತಿಯಿಲ್ಲದ ರುಕ್ಮಿಣಿಗೆ ಕೊಟ್ಟಿದ್ದು ಯಾಕೆ? ಇತ್ಯಾದಿ ಕೇಳಿದ ಮೇಲೆ ನಿನಗೆ ‘ಕಲ್ಪದ್ರುಮ’ವ ತೋರಿಸುವೆನು ಎಂದು ಸಂತೋಷಪಡಿಸುತ್ತಾನೆ.

ಹೀಗೆ ಇರುತ್ತಲಾಗಿ ಇಂದ್ರಾದಿ ದೇವತೆಗಳು ಕೃಷ್ಣನಲ್ಲಿ ಬಂದು ನರ-ಮುರಕಾ ಸುರರು ಸ್ವರ್ಗವನ್ನು ಸೂರೆಗೈದು ಕಲ್ಪದ್ರುಮವೇ ಮೊದಲಾದ ಸುವಸ್ತುಗಳನ್ನು ಅಪಹರಿಸಿದ್ದಲ್ಲದೆ, ಸ್ವರ್ಗದ ಸ್ತ್ರೀಯರನ್ನು ಥಳಿಸಿದರೆಂದು ಹೇಳುತ್ತಾರೆ. ಕೃಷ್ಣ ಅವರ ಕಷ್ಟ ನಿವಾರಿಸುವುದಾಗಿ ಭರವಸೆ ಕೊಡುತ್ತಾನೆ.

ಹಾಗೆ ನರ-ಮುರಕಾಸುರರ ರಾಜಧಾನಿಯತ್ತ ತೆರಳುತ್ತಿರುವಾಗ ಭಾಮೆಯೂ ತಾನೂ ಬರುವುದಾಗಿ ಸ್ವರ್ಗಲೋಕದ ಕಲ್ಪದ್ರುಮವನ್ನು ತೋರಿಸುತ್ತೇನೆಂಬುದನ್ನು ನೆನಪಿಸುತ್ತಾಳೆ.

ಹೀಗೆ ಕೃಷ್ಣ ಸತ್ಯಭಾಮೆಯ ಸಹಿತ ಗರುಡನನ್ನು ಏರಿ ಹೊರಡುತ್ತಾನೆ. ನರಕಾಸುರನ ಅರಮನೆಯ ಹತ್ತಿರ ಬರುತ್ತಾನೆ. ಆ ಅರಮನೆ ಬಹು ಭದ್ರವಾಗಿರುವಂತಹುದು. ಅದನ್ನೆಲ್ಲ ಭೇದಿಸಿ ಕೃಷ್ಣ ತನ್ನ ಶಂಖವನ್ನು ಊದುತ್ತಾನೆ.

“ಮೊರೆವ ಶಂಖಧ್ವನಿಯನಾಲಿಸಿ ಮುರನು ಮೈ ಮುರಿದೆದ್ದು – ಕಾಲನಾಗಲಿ, ಮೃತ್ಯುವಾಗಲಿ, ಕಾಲಭೈರವನಾದಡಾಗಲಿ ನಿಮಿಷ ಮಾತ್ರಕೆ ಬೀಳಕಡಿವೆ’’ ಎಂದು ಬರುತ್ತಾನೆ. ಅನೇಕ ರೀತಿಯಲ್ಲಿ ಕೃಷ್ಣನನ್ನು ಜರೆಯುತ್ತಾನೆ. ಅದಕ್ಕೆ ಉತ್ತರವನ್ನು ಕೃಷ್ಣ ಕೊಡುತ್ತಾನೆ. ಕೊನೆಗೆ ಚಕ್ರದಿಂದ ಮುರನ ತಲೆ ಕಡಿಯುತ್ತಾನೆ.

ಮುರನು ಅಳಿದ ಸುದ್ದಿ ತಿಳಿದು ಮುರನ ಮಗ ಯುದ್ಧಕ್ಕೆ ಬರುತ್ತಾನೆ. “ಧುರದೊಳೆಮ್ಮಪಿತನಗೆಲಿದ ಗರುವತನವನು ಮುರಿವೆನೆಲವೋ’’ ಎಂದು ಸಡ್ಡು ಹೊಡೆಯುತ್ತಾನೆ. ಆದರೆ ಆತ ಸಾಯುತ್ತಾನೆ.

ಈ ವಾರ್ತೆಯನ್ನು ದೂತನು ನರಕಾಸುರನಿಗೆ ತಿಳಿಸುತ್ತಾನೆ. “ಚರರ ನುಡಿಯನು ಕೇಳ್ದು ನರಕನತಿರೋಷದಲಿ ಉರಿಯನುಗುಳುತ ಕರೆದ ನೆರೆದಭಟರ’’. ಮುಂಬತ್ತಿಬರುವ ಸೈನ್ಯವನ್ನು ಗರುಡನು ತಡೆಯುತ್ತಾನೆ. ಈ ಯುದ್ಧದಲ್ಲಿ ನರಕಾಸುರನ ಸೈನ್ಯಕ್ಕೆ ಅನೇಕ ಹಾನಿಯನ್ನು ಮಾಡುತ್ತಾನೆ. ಇದನ್ನರಿತ ನರಕ ಕೃಷ್ಣನೆದುರು ಬಂದು “ಬಿನುಗು ಮಾನವ ಕೇಳು ನಮ್ಮೊಳು ಸೆಣಸಿ ನೀ ಬದುಕುವೆಯೊ ನಿನ್ನಯ ಹಣೆಯಬರಹವ ತೊಡೆವೆ ನಿಮಿಷದೊಳೆನುತ’’ ಬಾಣಗಳನ್ನು ಬಿಡಲು ಕೃಷ್ಣ ಘನಪರಾಕ್ರಮಿಗಳಹುದು ನಿನ್ನೊಳು ಸೆಣಸಿ ಜೀವಿಸಬಲ್ಲನೇ ಹುಲುಮನುಜರೈನಾವೆತ್ತ’’ ತಮಾಶೆ ಮಾಡಿ ಅವನ ಧನಸ್ಸನ್ನು ಕಡಿಯುತ್ತಾನೆ. ಆದರೆ ತಿರುಗೇಟು ಹಾಕಿದ ನರಕನ ಪೆಟ್ಟಿಗೆ ಕೃಷ್ಣ ಮೂರ್ಛೆ ಹೋಗುತ್ತಾನೆ.

ಈ ಘಟನೆಯಿಂದ ಸುರರು ಕೆಟ್ಟೆವು ಎನ್ನುತ್ತಿರುವಂತೆಯೇ ಸತ್ಯಭಾಮ ಯುದ್ಧಕ್ಕೆ ಮುಂದಾಗುತ್ತಾಳೆ. ಇವಳ ಯುದ್ಧಕ್ಕೆ ಭೀತನಾದಾಗ ಹೀನೈಸಲೆಂಬಂತೆ ನಿನ್ನೊಡನೆ ಯುದ್ಧ ಸಲ್ಲದು ಎಂದು ಅವಳ ಸೆರಗು ಹಿಡಿಯಲೆತ್ನಿಸುತ್ತಾಳೆ. ಕ್ರುದ್ಧಳಾದ ಭಾಮೆಯ ಹೊಡೆತಕ್ಕೆ ನರಕ ಮೂರ್ಛೆಬೀಳುತ್ತಾನೆ.

ಈಗ ಇಬ್ಬರೂ ಮೂರ್ಛೆನಿವಾರಿಸಿಕೊಂಡು ಏಳುತ್ತಾರೆ. ನರಕ ಎಲವೊ ಮನುಜ ಕೇಳು ನಿನ್ನ ತೆರದಿ ಲಲನೆಯಿಂದ ಜೀವಿಸುವರ ಕಾಣೆ ಜಗದೊಳು’’ ಎಂದು ಕೃಷ್ಣನನ್ನು ಹಂಗಿಸಿ ಮುಂದೆ ಬರುತ್ತಾನೆ. ಇದರಿಂದ ಸಿಟ್ಟಿಗೆದ್ದ ಕೃಷ್ಣ ನರಕಾಸುರನ ತಲೆಯನ್ನು ಕೆಡಹುತ್ತಾನೆ. ದೇವತೆಗಳು ಬಂದು ಶ್ರೀಕೃಷ್ಣನ ಕಾಲಿಗೆ ಮಣಿಯುತ್ತಾರೆ.

ನರಕ ಸತ್ತ ಸುದ್ದಿ ತಿಳಿದು ಆತನ ಹೆಂಡತಿ ತನ್ನ ಬಾಲಕನನ್ನು ತಂದು ಕೃಷ್ಣನ ಪಾದದ ಮೇಲಿಟ್ಟು ಕಾಪಾಡಬೇಕೆನ್ನುತ್ತಾಳೆ. ಈ ಹುಡುಗ ಭಗದತ್ತ ತನ್ನ ಭಕ್ತನೆಂದು ಹೇಳಿ ಆತನನ್ನು ಸಲಹುವುದಾಗಿ ಭರವಸೆ ಕೊಡುತ್ತಾನೆ. ಹಾಗೆಯೇ ಸ್ವರ್ಗದಿಂದ ಅಪಹರಿಸಲಪಟ್ಟ ಎಲ್ಲ ಸುವಸ್ತುಗಳನ್ನು ದೇವೇಂದ್ರನಿಗೆ ಕೊಡುತ್ತಾನೆ. ನರಕಾಸುರನ ನೆರೆಯಲ್ಲಿದ್ದ ಸಾವಿರಾರು ಹೆಂಗಳೆಯರನ್ನು ದ್ವಾರಕೆಗೆ ಕಳುಹಿಸುತ್ತಾನೆ.

ದೇವೇಂದ್ರನ ವಿನಂತಿಯಂತೆ ಕೃಷ್ಣ ಭಾಮೆ ಸಹಿತ ಸ್ವರ್ಗಕ್ಕೆ ಹೋಗುತ್ತಾನೆ. ದೇವೇಂದ್ರನು ಆತನನ್ನು ಸ್ವಾಗತಿಸುತ್ತಾನೆ. ಅವನ ಆತಿಥ್ಯವನ್ನು ಸ್ವೀಕರಿಸಿ, ಅದಿತಿಯ ಮನೆಗೆ ಬರುತ್ತಾನೆ. ಸತ್ಯಭಾಮೆ ಅವಳಿಗೆ ಕರ್ಣಕುಂಡಲವನ್ನಿರಿಸುತ್ತಾಳೆ. ಅದಿತಿ ಸಂತೋಷಗೊಂಡು ಹರಸುತ್ತಾಳೆ.

ಹೀಗೆ ಬೀಳ್ಕೊಂಡು ಕೃಷ್ಣಭಾಮೆ ಸಹಿತವಾಗಿ ಹಿಂದಿರುಗುತ್ತಾನೆ. ಹೀಗೆ ಬರುವಾಗ ಭಾಮೆ “ಪಗಲ್ ಬೆಳದಿಂಗಳಂದದಿ ಸೊಗಯಿಸಿ ಷಡೃತುಗಳೇಕಕಾಲದೊಳಿಹುದಂ’’ ತಾನು ನೋಡಿಲ್ಲವೆಂದೂ ಇದು ಯಾವುದು ಎಂದು ಕೇಳಿದಾಗ “ಭಾವಕಿರನ್ನ ಕೇಳೀ ದಿವ್ಯವನವು ದೇವೇಂದ್ರನುದ್ಯಾನವೆಂಬ ನಂದನವು’’ ಎಂದು ಕೃಷ್ಣ ಹೇಳುತ್ತಾನೆ.

ಆ ವನವನ್ನು ಸತ್ಯಭಾಮೆಗೆ ತೋರಲು ಕೃಷ್ಣ ಪ್ರವೇಶ ಮಾಡುತ್ತಾನೆ. ಸುಂದರವಾದ ಆ ವನವನ್ನು ನೋಡನೋಡುತ್ತ “ನೀರೆ ಕಂಡಳು ಮುಂದೆ ರಾಜಿಪ ಭೂರಿನೇತ್ರನ ವಿಭವನಗಳಿಗಾಧಾರವೆನಿಸುವ ಕಲ್ಪಪಾದದ ಪಾರಿಜಾತವನು’’

ಇದನ್ನು ಕಂಡು ಮೋಹಿತಳಾಗಿ ಆ ಪಾರಿಜಾತದೊಂದು ಗಿಡವನ್ನು ತಾವು ಒಯ್ಯಬೇಕೆನ್ನುತ್ತಾಳೆ. “ಬೇಡವೆ ವೃಕ್ಷದ ತಳ್ಳಿ ಬೇಡವೆ’’ ಎಂದು ವಿಧವಿಧವಾಗಿ ಹೇಳಿದರೂ ಆಕೆ ಹಟಬಿಡುವುದಿಲ್ಲ. ಕೃಷ್ಣನ ಅನುಮತಿಯಿಂದ ‘ಕಲ್ಪದ್ರುಮ’ವನ್ನು ತೆಗೆದುಕೊಳ್ಳುತ್ತಾಳೆ.

ಈ ಸಂಗತಿಯನ್ನು ವನಪಾಲಕರು ದೇವೇಂದ್ರನಿಗೆ ತಿಳಿಸುತ್ತಾರೆ. ಹೀಗೆ ತಂದು ಕೊಟ್ಟ ವಸ್ತುವನ್ನು ಕಳ್ಳರಂತೆ ಒಯ್ಯುವುದೇ? ಸ್ವರ್ಗದಲ್ಲಿ ಮಾತ್ರ ಇರಬೇಕಾದ ಪಾರಿಜಾತವನ್ನು ಭೂಮಿಗೆ ಒಯ್ಯುವುದೇ? ಇದು ಸರಿಯಲ್ಲ – ಎಂದು ಶಚಿ ಹೇಳಲಾಗಿ ದೇವೇಂದ್ರ ಕೃಷ್ಣನೊಡನೆ ಯುದ್ಧಕ್ಕೆ ಹೊರಡುತ್ತಾನೆ. “ಕರೆದರೆಲವೊ ಕೃಷ್ಣ ನಿನಗೆ ತರವೆ ಚೋರ ವೃತ್ತಿ ಕಲ್ಪತರುವನಿರಿಸಿ ನಿಲ್ಲೆನುತ್ತ ಜರಿದು ನಡಿದನು’’. ಈ ಬಿರು ನುಡಿಗಳನ್ನು ಕೇಳಿದ ಭಾಮೆ ತಾನೇ ಸ್ವತಃ ಅಸ್ತ್ರ ಹಿಡಿದು ಮುಂದುವರಿಯುತ್ತಾಳೆ. ಇದನ್ನು ಕಂಡ ದೇವೇಂದ್ರ “ಬಾಲೆ ನಿನಗೆ ಯುದ್ಧವೇಕೆ, ಕೋಲು ಬಿಸುಡು ಬಿಸುಡು ನಿನ್ನ ಆಳಿದವಗೆ ಕೊಡು ಕೊಡೆಂದು ಖೂಳತನದಲಿ’’.

ಭಾಮೆಯೊಡನೆ ಸೋತ ದೇವೇಂದ್ರ ತನ್ನ ರಾಜಧಾನಿಯ ಕಡೆ ನಡೆದ. ಹೀಗೆ ಭಾಮೆಯಿಂದ ದೇವೇಂದ್ರ ಸೋತು ಹೋಗಲಾಗಿ, ವರುಣನು ಬಂದು ನಿಲ್ಲು ನಿಲ್ಲು ಎಂದು ತಡೆಯಲಾಗಿ ಗರುಡನು ಅವನನ್ನು ಸೋಲಿಸುತ್ತಾನೆ. ಆತನ ಸೋಲನ್ನು ಕಂಡ ಅಗ್ನಿ ಮತ್ತು ವಾಯು ಒಂದಾಗಿ ಯುದ್ಧಕ್ಕೆ ಬರುತ್ತಾರೆ. ಯಮಧರ್ಮನೂ ಸೋತು ಹೋಗುತ್ತಾನೆ. ಈಗ ಈಶ್ವರನೇ ಬಂದು “ನಿಲ್ಲು ನಿಲ್ಲು ಕೃಷ್ಣ ಎಲ್ಲಿಗೆ ಪೋಗುವೆ’’ ಎಂದು ತಡೆಯುತ್ತಾನೆ. ಈಶ್ವರನೂ ಸೋತ ಮೇಲೆ ದೇವೇಂದ್ರನೇ ಕೆರಳಿ ಮತ್ತೆ ಬರುತ್ತಾನೆ. “ಕಳ್ಳತನವೆ ನಮ್ಮ ಕೂಡೆ ಸಲ್ಲದೆಲವೊ ನಿನಗೆ’’ ಎಂದು ಬೆದರಿಸುತ್ತಾನೆ.

ಯುದ್ಧದಲ್ಲಿ ಸೋತು ಹೋಗಲು ಸತ್ಯಭಾಮೆ ಅವನನ್ನು ಜರೆಯುತ್ತಾಳೆ. ಅದನ್ನು ಕೇಳಿ ದೇವೇಂದ್ರ ಕೃಷ್ಣನ ಹೆಂಡತಿ ಎಂದು ಗರ್ವದಿಂದ ನಮ್ಮನ್ನು ಹಂಗಿಸುತ್ತೀಯೆ. ನಮಗೇನು ನೀವು ಬೇರೆಯವರೆ, ತಪ್ಪು ನಮ್ಮದಾಗಿರಲಿ. “ತನಯರೊಂದು ತಪ್ಪು ಮಾಡೆ ಮುನಿವುದುಂಟೆ ಜಗಜ್ಜನಕನಯ್ಯಗೆಮ್ಮ ಮೇಲೆ ಕ್ರೋಧವುಂಟೆ’’ ಎಂದು ತನ್ನ ರಥವನ್ನಿಳಿದುಬಂದು ಕೃಷ್ಣನ ಪಾದಕ್ಕೆ ಎರಗುತ್ತಾನೆ.

ಪಾರಿಜಾತ ಸಹಿತವಾಗಿ ಬಂದ ಕೃಷ್ಣ, ಭಾಮೆಯರು ವಸುದೇವ ದೇವಕಿ, ಬಲರಾಮಾದಿಗಳಿಗೆ ವಂದಿಸುತ್ತಾರೆ. ಪಾರಿಜಾತವನ್ನು ಸತ್ಯಭಾಮೆಯ ಅಂಗಳದಲ್ಲಿ ನೆಡುವುದಾಗಿ ಕೃಷ್ಣ ವ್ಯವಸ್ಥೆ ಮಾಡುತ್ತಾನೆ. ಆ ಉತ್ಸವಕ್ಕೆ ರುಕ್ಮಿಣಿಯನ್ನು ಕರೆಯಲು ಭಾಮೆ ಹೋಗುತ್ತಾಳೆ.

“ತಂಗಿಯ ಬರವಂ ಕಾಣುತ್ತಂಗೋದ್ಭವಜನನಿ ಸಂತೋಷದಿಂದಾಕ್ಷಣದೊಳ್’’ ಅವಳನ್ನು ಸತ್ಕರಿಸುತ್ತಾಳೆ. ಭಾಮೆ ನಡೆದ ಕತೆಯೆಲ್ಲವನ್ನು ಹೇಳುತ್ತಾಳೆ. ರುಕ್ಮಿಣಿ ಹಾಗೂ ಕಾಳಿಂದಿಯೇ ಮೊದಲಾದವರಲ್ಲಿ ಬರುತ್ತಾರೆ.

“ನಾರಿಯರೆಲ್ಲರು ನೆರೆದು ಪಾರಿಜಾತಕೆ ಕೈ ಮುಗಿದು’’ ಶಾಸ್ತ್ರೋಕ್ತವಾಗಿ ಪೂಜೆ ಮಾಡುತ್ತಾರೆ. ವಾದ್ಯಘೋಷಮೊಳಗುತ್ತದೆ. ಕೃಷ್ಣ ನರಕಾಸುರ ಸೆರೆಬಿಡಿಸಿತಂದ ಹದಿನಾರು ಸಾವಿರ ಹೆಂಗಳೆಯರನ್ನು ಮದುವೆಯಾಗುತ್ತಾನೆ ಕಥೆ ಮಂಗಲವಾಗುತ್ತದೆ.