. ರತಿಜನ್ಮ ಶಂಬರಾಸುರ ಕಾಳಗ

ಕೃಷ್ಣ ತನ್ನ ವೈಭವಯುತವಾದ ಅರಮನೆಯಲ್ಲಿ ಇಂದ್ರನ ಸಭೆಯನ್ನು ಮೀರಿಸುವ ಸಭೆಯನ್ನು ಹೊಂದಿ “ಸಂತೋಷದೊಳಿರಲೊಂದು ದಿನಂ ಅಂತಃಪುರದಲಿ ರುಕ್ಮಿಣಿಯು ಸಂತತಿಯ ಬಯಸಿ ತನ್ನ ಪತಿಯೊಡನೆಂದಳ್’’ ಮನೋಹರನೆ ರಾತ್ರಿ ಕನಸಲ್ಲಿ ಒಂದು ಶಿಶುವು ನನ್ನ ತೊಡೆಯ ಮೇಲೆ ಆಡಿದಂತೆ ಕಂಡಿತು. ಅದರ ಅರ್ಥವೇನು ಎಂಬುದಾಗಿ ಕೇಳಲು ನೀನು ಸದ್ಯವೇ ಸಂತತಿಯನ್ನು ಪಡೆಯುವೆ ಎಂದುತ್ತರಿಸಿ, ಈಶ್ವರನ ಒಲುಮೆಯನ್ನು ಸಂಪಾದಿಸಿ ಸಂತತಿಯ ಫಲವನ್ನು ಪಡೆದು ಬರುವೆ ಎಂದು ಹೊರಡುತ್ತಾನೆ.

ಹೀಗೆ ಹೊರಟ ಕೃಷ್ಣನು ಬದರಿಕಾಶ್ರಮಕ್ಕೆ ಬರುತ್ತಾನೆ. ಅದನ್ನು ತಿಳಿದು ಅನೇಕ ಋಷಿಮುನಿಗಳು ಬರುತ್ತಾರೆ. ಅದೇ ಸಮಯದಲ್ಲಿ ಘಂಟಾಕರ್ಣನೆಂಬ ರಾಕ್ಷಸನೂ ಬರುತ್ತಾನೆ. ಆತ ಮೂಲತಃ ಗಂಧರ್ವದರಲ್ಲೊಬ್ಬನಾಗಿದ್ದು ಕೃಷ್ಣ ಭಕ್ತನಾಗಿದ್ದ. ಆದರೆ ಶಾಪದ ಫಲವಾಗಿ ರಾಕ್ಷಸನಾಗಿ ಭೂಮಿಯಲ್ಲಿ ಹುಟ್ಟಿರುತ್ತಾನೆ. ತನ್ನವರ ಗುಂಪನ್ನು ಕೂಡಿ ಮೆರೆಯುತ್ತಿರುತ್ತಾನೆ. ಈಗ ಆತ ಕೃಷ್ಣ ವಿರೋಧಿ. ಆದ್ದರಿಂದ ಈಶ್ವರನ ಹೆಸರಲ್ಲದೆ ಬೇರೆಯದು ಕೇಳಬಾರದೆಂದು ಕಿವಿಗೆ ಹತ್ತಿರವೇ ಒಂದು ಗಂಟೆಕಟ್ಟಿಕೊಂಡಿರುತ್ತಾನೆ. ಈತ ಮತ್ತು ಈತನ ಉಪಟಳದಿಂದಾಗಿ ಋಷಿಗಳು ಬದುಕಿದರೆ ಸಾಕು ಎಂದು ಆ ವನದಿಂದ ಹೋಗಲು ತೊಡಗುತ್ತಾರೆ. ಇದನ್ನು ನೋಡಿ ಕೃಷ್ಣನಿಗೆ ನಗೆಬರುತ್ತದಲ್ಲದೆ ಘಂಟಾಕರ್ಣನನ್ನು ಕರೆಸಿಕೊಳ್ಳುತ್ತಾನೆ. ಘಂಟಾಕರ್ಣ ರೊಚ್ಚಿಗೆದ್ದ ತನ್ನವರನ್ನು ಸುಮ್ಮನುಳಿಸಿ, ಕೃಷ್ಣನೊಡನೆ ತಾನು ಹರಿಭಕ್ತನೇ ಆಗಿದ್ದೇನೆಂದೂ ಪೂರ್ವಜನ್ಮದ ತಪ್ಪಿನಿಂದ ಹೀಗಾಗಿರುವೆನೆಂದೂ, ವನಕ್ಕೆ ಹರಿಯನ್ನು ಕಾಣುವ ಉತ್ಸಾಹದಲ್ಲಿ ಬಂದಿರುವೆನೆಂದು ಕೃಷ್ಣನ ಕಾಲಿಗೆ ಎರಗುತ್ತಾನೆ. “ನಗಧರ ನಿನ್ನನ್ನು ನೋಡಿದ ಬಳಿಕಿನ್ನು ಜಗದಿ ನಾನೇ ಧನ್ಯ ಜ್ಞಾನದಿ ಪಿತಯನ್ನಾ ಪಾಲಿಸೊ’’ ಎಂದು ಪ್ರಾರ್ಥಿಸುತ್ತಾನೆ. ಈತ ದುರುಳನಲ್ಲವೆಂದು ಭಕ್ತನೆಂದು ಕೃಷ್ಣ ಅವನ ಮೈದಡವಲು ಆತನ ಶಾಪ ವಿಮೋಚನೆಯಾಗಿ ಗಂಧರ್ವನಾಗಿ ಮಾರ್ಪಡುತ್ತಾನೆ.

ಈ ಕಡೆ ಸ್ವರ್ಗದಲ್ಲಿ ದೇವತೆಗಳು ಬಂದು ಇಂದ್ರನಲ್ಲಿ ತಮಗೆ ಶಂಬರಾಸುರನ ಕಾಟವಾಗಿದೆಯೆಂದೂ ಆತನನ್ನು ಕೊಂದು ತಮ್ಮನ್ನು ಉದ್ಧರಿಸಬೇಕೆಂದು ಕೇಳಿಕೊಳ್ಳುತ್ತಾರೆ. ಆದರೆ ಅದು ತನ್ನಿಂದ ಅಸಾಧ್ಯವೆಂದು ಇಂದ್ರ ತಿಳಿಸುತ್ತಾನೆ. ಹಾಗೂ ಕೃಷ್ಣನ ಮೊರೆ ಹೋಗಲು ಬದರಿಕಾಶ್ರಮಕ್ಕೆ ಬರುತ್ತಾರೆ. ಹಾಗೆ ಬಂದ ಅವರಿಗೆ ಕೃಷ್ಣ ಶಂಬರಾಸುರ ಈಶ್ವರನಿಂದ ವರ ಪಡೆದ ಕಾರಣ ಮನ್ಮಥನ ಹೊರತು ಯಾರಿಂದಲೂ ಸಂಹರಿಸಲು ಅಸಾಧ್ಯ. ಆದ್ದರಿಂದ ರುಕ್ಮಿಣಿಯಲ್ಲಿ ಮನ್ಮಥ ಹುಟ್ಟಿ ಶಂಬರಾಸುರನನ್ನು ಸಂಹರಿಸುತ್ತಾನೆ. ನಿಶ್ಚಿಂತೆಯಿಂದಿರಿ ಎಂದು ಕಳಿಸಿಕೊಡುತ್ತಾನೆ.

ಮುಂದೆ ಕೃಷ್ಣನು ಗರುಡನನ್ನು ಏರಿ ಕೈಲಾಸಕ್ಕೆ ಈಶ್ವರನನ್ನು ಕಾಣಲು ಹೋಗುತ್ತಾನೆ. ಈತ ಬಾಗಿಲಿಗೆ ಬಂದ ವಾರ್ತೆಯನ್ನು ತಿಳಿದು ಅವನನ್ನು ಸ್ವಾಗತಿಸಿ ಕರೆ ತರುತ್ತಾನೆ. “ಏನಿದು ವಿಚಿತ್ರ ವಿಮಲಚಾರಿತ್ರಾ, ದಾನವಾರುಧಿ ಬಂದ ಕಾರಣವೇನಿದು’’ ಮುಂತಾಗಿ ಉಪಚರಿಸುತ್ತಾನೆ. “ಯಾರಿಗಿಷ್ಟುಪಚಾರವೈ ಪಾರ‍್ವತೀಪತಿಯಾರಿಗಿಷ್ಟುಪಚಾರವೈ’’ ಮುಂತಾಗಿ ಉತ್ತರಿಸಿ, ನೋಡಪ್ಪಾ, ಸುಮನಶರ (ಕಾಮ) ಹೋದ. ಅವನನ್ನು ಬದುಕಿಸಿ ಕೊಟ್ಟರೆ ಶಂಬರಾಸುರ ವಧೆಯಾಗಿ ಸಜ್ಜನರು ಸುಖದಿಂದ ಬಾಳಲು ಸಾಧ್ಯ ಎನ್ನುತ್ತಾನೆ. ಈ ಮಾತನ್ನು ಕೇಳಿದ ಈಶ್ವರ ರುಕ್ಮಿಣಿಯಲ್ಲಿ ಆತ ಹುಟ್ಟುತ್ತಾನೆ ಎಂದು ಭರವಸೆ ಕೊಡುತ್ತಾನೆ. ಈಶ್ವರ-ಪಾರ್ವತಿಯರೊಡನೆ ಭೋಜನವನ್ನು ಮಾಡಿ ಸಂತಸದಿಂದ ಕೃಷ್ಣ ಮನೆಗೆ ಹಿಂದಿರುಗುತ್ತಾನೆ.

ಇನ್ನೊಂದು ಕಡೆ ಕಾಶಿ ದೇಶದ ಅರಸ ಗಂಡು ಮಕ್ಕಳಿಲ್ಲವೆಂದು ತನ್ನ ಮಗಳನ್ನು ವಸುದೇವನಿಗೆ ಕೊಟ್ಟು ಲಗ್ನಮಾಡಿರುತ್ತಾನೆ. ಅವಳಿಗೆ ಕಂದರ್ಪನ ಹಾಗಿರುವ ಪೌಂಡ್ರಕನೆಂಬ ಮಗ ಜನಿಸಲು ಆತನನ್ನು ಕಾಶಿ ರಾಜ ಸಾಕಿಕೊಂಡಿರುತ್ತಾನೆ. ಹಾಗಾಗಿ ಪೌಂಡ್ರಕನು ಕಾಶಿ ರಾಜನಾಗಿದ್ದಾನೆ. ಆತನಿಗೆ ಕಂಸನತಂಗಿ ದೇವಕಿಯಲ್ಲಿ ಕೃಷ್ಣ ಹುಟ್ಟಿದ ಸುದ್ದಿ ತಿಳಿದು ಆತನನ್ನು ನೋಡಿ ಬರಲು ದೂತರನ್ನು ಕಳಿಸುತ್ತಾನೆ. ಅವರು ತಾವು ನೋಡಿದ ಕೃಷ್ಣನನ್ನು “ಪಂಕಜಾಂಬಕಗೆ ಚತುರ್ಭುಜವಂತೆ ಶಂಖಚಕ್ರ ಗದಾಪದ್ಮ ನಾಲ್ಕಂತೆ ಕುಂಕುಮ ಸಮಕಸ್ತೂರಿ ಬೊಟ್ಟಂತೆ ಅಂಕದಿ ಭುಜ ರಾಕ್ರಮ ವೀರನಂತೆ’’ ಎಂದು ವರ್ಣಿಸಲಾಗಿ ಹೊಟ್ಟೆಕಿಚ್ಚು ಉಂಟಾಗುತ್ತದೆ. ತಾನು ಅವನಿಗಿಂತ ಮೇಲಾಗಬೇಕೆಂದು ತಾನೂ ಅದೇ ರೀತಿ ವೇಷಧರಿಸುತ್ತ, ವರ್ತಿಸುತ್ತಾನೆ. ಮನೆಯಳಿಯತನಕ್ಕಾಗಿ ನನ್ನನ್ನು ಕೊಟ್ಟು ನನಗೆ ವಂಚಿಸಿದರೆಂದು ಸಿಟ್ಟು ಮಾಡಿ “ವರಸಚಿವ ಕೇಳ್ ಧುರಕೆ ಸನ್ನಾಹಗಳನುವದಗಿಸು ದ್ವಾರಕೆಯ ಮುತ್ತುವ ತರಳ ಕೃಷ್ಣನ ಪಿಡಿವನಕಲೇಸಲ್ಲ ನಮಗಿನ್ನು’’ ಗರ್ಜಿಸುತ್ತಾನೆ. ಆದರೆ ಮಂತ್ರಿ ಆತನಿಗೆ ಬುದ್ಧಿ ಹೇಳಿ “ಕ್ರೋಧವೆಂಬುದು ಶತ್ರು ಸರ್ವಥಾ. ಸಮಾಧಾನವೆಂಬುದು ಸಕಲ ಸಮ್ಮತಾ ಮಾಧವನೊಡನೆ ಗೆಲ್ಲುವ ಚಿಂತೆಬೇಡ ಸಾಧಿಸಿ ಮೃತ್ಯುವ ಕರೆದಂತೆ’’ ಎಂದು ಹೇಳಿದರೂ ಕೇಳದೆ ಯುದ್ಧಕ್ಕೆ ಹೊರಡುತ್ತಾನೆ. ರಾತ್ರಿಯ ಹೊತ್ತಾದರೂ ದ್ವಾರಕೆಯನ್ನು ಮುತ್ತಿಗೆ ಹಾಕುತ್ತಾನೆ.

ತಾನು ಹಿರಿಯನೆಂದೂ ಕೃಷ್ಣನ ಕೈಲಿರುವ ಶಂಖಚಕ್ರ ಮೊದಲಾದವುಗಳನ್ನು ತಂದು ತನಗೆ ಒಪ್ಪಿಸಿದರೆ ಆತನ್ನನ್ನು ಕಾಪಾಡುತ್ತೇನಾಗಿ ಹೇಳಿಕಳಿಸುತ್ತಾನೆ. ಇದನ್ನು ಕೇಳಿದ ಕೃಷ್ಣ ನಗೆಯಾಡಿ ಆತನನ್ನು ಎದುರಿಸಲು ಶಸ್ತ್ರ ಸಹಿತನಾಗಿ ಯುದ್ಧ ರಂಗಕ್ಕೆ ಹೊರಡುತ್ತಾನೆ. ಪೌಂಡ್ರಕನನ್ನು ಕಂಡು “ಅಣ್ಣನವರೇ ತಮ್ಮ ಗರುಡನ ಬಣ್ಣ ಮಿಗಿಲಾಹುದು’’ ಇತ್ಯಾದಿ ವರ್ಣಿಸಿದರೆ ಆತ ನಿಜವೆಂದೇ ಗ್ರಹಿಸಿ ತರಳನಾಗಿರುವ ನಿನ್ನನ್ನು ಮುಗಿಸಿಬಿಡುತ್ತೇವೆ ಎನ್ನುತ್ತಾನೆ. ಕೃಷ್ಣನಿಂದ ಮನೆತನಕ್ಕೇ ಅಪಕೀರ್ತಿಯಾಗಿದೆಯೆಂದು ಜರೆಯುತ್ತಾನೆ. ಯುದ್ಧವಾಗುತ್ತದೆ. ಯುದ್ಧದಲ್ಲಿ ಆತನ ಕೃತ್ರಿಮವಾದ ಹೆಚ್ಚಿನ ಎರಡು ಕೈಗಳನ್ನು, ಶಂಖ ಚಕ್ರ ಮೊದಲಾದವುಗಳನ್ನು ಕಳೆದುಕೊಂಡು ನೆಲಕ್ಕೆ ಬೀಳುತ್ತಾನೆ. ಆದರೆ ಆತ ಸುಮ್ಮನಿರದೇ ಕೃಷ್ಣನನ್ನು ವಿಡಂಬಿಸಿ ಜರೆಯುತ್ತಾನೆ. ಕೊನೆಗೆ ಕೃಷ್ಣನ ಚಕ್ರಕ್ಕೆ ಆತನ ತಲೆ ಕಡಿದು ಬೀಳುತ್ತದೆ.

ರುಕ್ಮಿಣಿ ಗರ್ಭವತಿಯಾಗುತ್ತಾಳೆ. ಚೆಲುವಿನಿಂದ ಆಕೆ ನಳನಳಿಸುತ್ತಾಳೆ. ಸಖಿಯರೇ ಮೊದಲಾದವರು ಅವಳನ್ನು ಉಪಚರಿಸಿ ಸಂತೋಷದಲ್ಲಿಡುತ್ತಾರೆ. “ರುಕ್ಮಿಣಿಯು ಹರುಷದಿಂ ನವಮಾಸ ತುಂಬಿ ಸುಮೂರ್ತದೊಳು ಮೆರಗ ಸತ್ಪುತ್ರನಂ ಪಡೆದಳೇನೆಂಬೆತತ್ಸುತನ ಚೆಲುವಿಕೆಯನೂ’’ ಹೀಗೆ ಹುಟ್ಟಿದ ಶಿಶುವನ್ನು ಆಸ್ಥಾನದ ರಾಣಿಯರೆಲ್ಲರೂ ಬಹು ಸಂತೋಷದಿಂದ ಜೋ ಜೋ ಹಾಡುತ್ತ ಬೆಳೆಸುತ್ತಿದ್ದರು.

ಇತ್ತ ಈಶ್ವರನಿಂದ ತನ್ನ ಗರಡಿ ಸಾಧಕತನದ ಸಹವಾಸ ಹೊಂದಿದವನಿಂದ ಮಾತ್ರ ತನಗೆ ಸಾವು ಬರಲೆಂದು ವರಪಡೆದ ಶಂಬರಾಸುರನಿಗೆ ಕೃಷ್ಣಪುತ್ರನ ಗಂಟುಹಾಕುವುದರಿಂದ ಆತನಿಗೆ ಸಾವು ಬರುತ್ತದೆಂದು ಬಗೆದ ನಾರದ ಶಂಬರಾಸುರನಲ್ಲಿ ಬಂದು, ರುಕ್ಮಿಣಿಯಲ್ಲಿ ಮನ್ಮಥನು ಹುಟ್ಟಿರುವನು. ಆತ ರಕ್ಕಸರ ಅಂದರೆ ಶಂಬರಾಸುರ ವೈರಿ; ಆತನಿಂದಲೇ ಶಂಬರಾಸುರ ವಧೆ ಆಗುತ್ತದೆ. ಆದ್ದರಿಂದ ಬೆಳೆಯಲ್ಲಿಯೇ ಚಿವುಟಿಹಾಕುವುದೇ ಸೂಕ್ತ. ಆದ್ದರಿಂದ ಮನ್ಮಥನನ್ನು ಅಪಹರಿಸಿ ಕೊಲ್ಲು ಎಂದು ಸಲಹೆ ಕೊಡುತ್ತಾನೆ.

ನಿಜವೆಂದು ತಿಳಿದ ಶಂಬರಾಸುರನು, ಮಾಯೆಯಿಂದ ದ್ವಾರಕೆಗೆ ಹೋಗಿ ಅಂತಃಪುರ ಪ್ರವೇಶಿಸಿ “ಮಾಯದಲಿ ಮಲಗಿರುವ ಶಿಶುವನು ನೋಯಿಸದೆ ನುಶಿಯಂತೆ ಕರದೊಳು ಕಾಯಜನ ಕೊಂಡೊಯ್ದನೇ ಖಳರಾಯ’’ ಆದರೆ ಬರಬರುತ್ತ ಶಿಶುವನ್ನು ನೋಡುತ್ತಿರುವಾಗ ನಾರದನ ಹೇಳಿಕೆ ಸುಳ್ಳಿರಬೇಕೆಂದು ಬಗೆದು ಶಿಶುಹತ್ಯೆ ದೋಷಕ್ಕೆ ಗುರಿಯಾಗುವುದೇಕೆಂದು ಆ ಶಿಶುವನ್ನು ಸಮುದ್ರಕ್ಕೆ ಒಗೆಯುತ್ತಾನೆ.

ತೊಟ್ಟಿಲಲ್ಲಿ ಮಲಗಿದ ಶಿಶು ಕಾಣದಿರಲು ಎಲ್ಲರೂ ಗಾಬರಿಯಾಗಿ ಊರೆಲ್ಲ ಹುಡುಕಿದರು. ಶಿಶು ಹುಟ್ಟಿದ ಮನೆಯನ್ನೆಲ್ಲ ಶೋಧಿಸಿದರು. ಆದರೆ ಶಿಶು ಸಿಕ್ಕಲಿಲ್ಲ. “ಎಲ್ಲಿರುವೆಯೆಲೊ ಕಂದಾ, ಏನಾದುದೆಲೆ ಕಂದಾ’’ ಎಂದು ರುಕ್ಮಿಣಿ ಶೋಕಿಸುತ್ತಾಳೆ.

ಸಮುದ್ರದಲ್ಲಿ ಒಗೆದ ಶಿಶುವನ್ನು ಮೀನೊಂದು ನುಂಗುತ್ತದೆ. ಆ ಮೀನು ಅಂಬಿಗರ ಬಲೆಗೆ ಸಿಕ್ಕುತ್ತದೆ. ಆ ಮೀನನ್ನು ಅವರು ಶಂಬರಾಸುರನಿಗೆ ತಂದೊಪ್ಪಿಸುತ್ತಾರೆ. ಹಿಂದೆ ಮನ್ಮಥನು ಉರಿದು ಹೋದಾಗ ದುಃಖದಿಂದ ಬಹಳ ದೇಶಗಳ ಸಂಚರಿಸಿದ ರತಿ ಕೊನೆಗೆ ಶಂಬರಾಸುರನಲ್ಲಿ ಬಂದು ಅಡಿಗೆಯವಳಾಗಿ ಜೀವನ ಸಾಗಿಸುತ್ತಿರುತ್ತಾಳೆ. ಅವಳನ್ನು ಕರೆದು ಪೊಗದಸ್ತಾಗಿ ಪದಾರ್ಥವನ್ನು ಮಾಡೆಂದು ಅವಳ ಕಡೆ ಮೀನನ್ನು ಕೊಡಲು, ಅವಳು ಮೀನನ್ನು ಸೀಳಿದಾಗ ಶಿಶುವನ್ನು ಕಾಣುತ್ತಾಳೆ. “ಎಲೆ ಎಲೆ ಇದೇನು ವಿಚಿತ್ರವೈ ಶಿವಶಿವಾ ಜಲಜಂತುವಿನಲಿ ಮಾನವನುದಿಸುವುದು’’ ಎಂದು ಆಶ್ಚರ್ಯಪಟ್ಟು ಏನು ಮಾಡಬೇಕೆಂದು ತಿಳಿಯದಿರುವಾಗ ನಾರದ ಬರುತ್ತಾನೆ. ಈಶ್ವರನ ಕಣ್ಣಿನಿಂದ ಭಸ್ಮವಾದ ನಿನ್ನ ಗಂಡನೇ ತಿರುಗಿ ರುಕ್ಮಿಣಿಯಲ್ಲಿ ಹುಟ್ಟಿದ್ದಾನೆ. ಎಂದು ತಿಳಿಸಿ ಸ್ತನ್ಯಪಾನ ಮಾಡಿಸದೆ ಪಾಲಿಸುವಂತೆ ಉಪದೇಶಿಸುತ್ತಾನೆ. ಇದರಿಂದ ಅವಳಿಗೆ ಸಂತೋಷವಾದರೂ ಮರೆಸಿ ಉಳಿಸಲಾಗದ್ದಕ್ಕೆ ಶಂಬರಾಸುರನೆದುರು ತಂದು ಇಟ್ಟು ಮೀನಿನ ಉದರದಿ ಜನಿಸಿದ ಶಿಶುವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ಚೆಲುವಾದ ಶಿಶುವನ್ನು ಕಂಡ ಶಂಬಾಸುರ ಇರಲಿ. ದೇವರೆ ಕೊಟ್ಟ ಶಿಶು. “ಸಂತತ್ಕರುಣದಿಂದಲಿ ಸಲಹಿಕೋ ಚೆಂದವಾಗಿ’’ ಎನ್ನುತ್ತಾನೆ. ರತಿ-ಮನ್ಮಥರು ಗಂಡ ಹೆಂಡಿರ ಹಾಗೇ ಪ್ರೀತಿಯಿಂದಿರುತ್ತಾರೆ. ಶಂಬರಾಸುರನು “ಗರುಡಿಯೋಳ್ ತನ್ನೊಡನೆ ದಿನದಿನದಲಿ ಪಾದಕ ಮರ್ಮಗಳನರುಹಿ ಸತ್ಕರುಣದಿಂದ ಬಿಡದೆ’’ ಬೆಳೆಸುತ್ತಾನೆ.

ಹೀಗಿರುವಾಗ ನಾರದ ಬಂದು ನಿನ್ನ ಅರಮನೆಯಲ್ಲೇ ನಿನ್ನ ನಾಶದ ತಯಾರಿ ನಡೆಯುತ್ತಿದೆ. ‘ಪಗಲಿರುಳೆನ್ನದೆ ಸಂಪತಿಗೆ ಮೇಲ್ ದಂಪತಿಗಳಂತೆ ಸುಬಗಿನಿಂದಹರೈ’’ ಎಂದು ತಿಳಿಸಿ, ಗರಡಿಯ ಮನೆಯಲ್ಲಿ ನಿನ್ನ ಸಾಧನೆ ಜೊತೆ ಇರುವವನಿಂದ ನಿನ್ನ ಮರಣ ಎಂಬುದು ನೆನಪಿದೆಯೇ ಎಂದು ಕೇಳುತ್ತಾನೆ. ಇದನ್ನು ಕೇಳಿ ಶಂಬರಾಸುರ ಸಿಟ್ಟಿಗೇಳುತ್ತಾನೆ. ಅಡಿಗೆಯವಳನ್ನು ಸೆರೆಮನೆಯಲ್ಲಿಡಲು ಹೇಳುತ್ತಾನೆ. ಆದರೆ ಹಾಗೆ ಹೋದ ದೂತರನ್ನು ಮನ್ಮಥ ಸಂಹರಿಸಿ, ಸೇವಕನೊಡನೆ ನಿಮ್ಮ ಒಡೆಯನಿಗೆ ಹೇಳೆನ್ನುತ್ತಾನೆ.

ತಾನು ತನಗೇ ಅಪಾಯಕಾರಿ ಕಾರ್ಯ ಮಾಡಿದೆನೆಂದು ಆತನಿಗೆ ಈಗ ಅರಿವಾಗುತ್ತದೆ. ಆರ್ಭಟಿಸಿ ಆತ ಬರುತ್ತಾನೆ. ಆದರೆ ಇಲ್ಲಿ ಮನ್ಮಥ-ರತಿಯರ ಸರಸಸಲ್ಲಾಪ ನಡೆಯುತ್ತಿರುತ್ತದೆ. ಅತಿ ಮೋಹದಿಂದ ತಕ್ಕೈಸುವ ಅವಳ ತೋಳುಗಳನ್ನು ಬಿಡಿಸಿಕೊಂಡು ಮನ್ಮಥ ಯುದ್ಧಕ್ಕೆ ಬರುತ್ತಾನೆ. ಮೋಹನಾಂಗಿಯನ್ನು ತನಗೆ ಇತ್ತು ಸಲಹು ಎನ್ನುತ್ತಾನೆ. ಶಂಬರಾಸುರನು ಉಗ್ರವಾದ ಬಾಣ ಪ್ರಯೋಗ ಮಾಡುತ್ತಾನೆ. ಅದಕ್ಕೆ ಮಿಗಿಲೆನ್ನುವಂತೆ ಮನ್ಮಥನು ಬಾಣ ಪ್ರಯೋಗ ಮಾಡುತ್ತಾನೆ. “ಅಡಿಗೆ ಮನೆಯೊಳ್ನಲಿವ ಆ ಮಡದಿಯ ಮಾತಾಡಿಸು ಬೆಡಗಲ್ಲಾ ನೋಡ್ ತರಳ’’ ಎಂದು ಬೋರ್ಗರೆಯುತ್ತಾನೆ. ಆದರೆ ಮನ್ಮಥ ತಿಳುಕದೆ ಆತನ ತಲೆ ಕಡಿದುರುಳಿಸುತ್ತಾನೆ.

ದೇವತೆಗಳು ಸಂತೋಷಪಟ್ಟರು. ದ್ವಾರಕೆಗೆ ಬಂದ ನಾರದನನ್ನು ಮನ್ಮಥನ ಪತ್ತೆ ಇದೆಯೇ ಎಂಬ ಕೃಷ್ಣ-ರುಕ್ಮಿಣಿಯರು ವಿಚಾರಿಸಲಾಗಿ ಮನ್ಮಥ ಶಂಬರಾಸುರನನ್ನ ಸೇರಿದ ಕಥೆಯನ್ನೆಲ್ಲ ವಿಸ್ತರಿಸುತ್ತಾನೆ. ಅಷ್ಟರಲ್ಲಿ ಮನ್ಮಥ ಮತ್ತು ರತಿಯರು ಪುಷ್ಪಕ ವಿಮಾನದಿಂದ ಬಂದು ನಮಸ್ಕರಿಸುತ್ತಾರೆ. ರತಿ, ಮನ್ಮಥರ ಮದುವೆ ಮಹೋತ್ಸವ ನಡೆಯುತ್ತದೆ.

. ಬಾಣಾಸುರ ಕಾಳಗ

ದ್ವಾರಕಾ ಪಟ್ಟಣದಲ್ಲಿ ಶ್ರೀಕೃಷ್ಣನಿಗೆ ಅನಿರುದ್ಧನೆಂಬ ಮೊಮ್ಮಗನು ಹುಟ್ಟಿದಂತೆ ಬಲಿಗೆ ಹುಟ್ಟಿದ ನೂರು ಜನ ಮಕ್ಕಳಲ್ಲಿ ಬಾಣಾಸುರನೇ ಹಿರಿಯನಾಗಿರುತ್ತಾನೆ. ಬಾಣಾಸುರನು ಶಿವಭಕ್ತನಾಗಿ ಸಾವಿರ ತೋಳುಗಳನ್ನು ಪಡೆದ ವೀರನಾಗಿರುತ್ತಾನೆ. ಆತ ಮನೆ ಬಾಗಿಲನ್ನು ಸ್ವತಃ ಈಶ್ವರನೇ ಕಾಯುತ್ತಿರುತ್ತಾನೆ. ಹಾಗೆ ಐಶ್ವರ್ಯದಿಂದಲೂ ಅಹಂಕಾರದಿಂದಲೂ ಮೆರೆಯುತ್ತಿದ್ದ ಬಾಣನಿಗೆ ಓರ್ವ ಚಿನ್ನಗೊಂಬೆ ಯಂತಹ ಮಗಳು ಹುಟ್ಟಿ ಬೆಳೆಯುತ್ತಾಳೆ.

ಒಂದು ದಿನ ಬಾಣನು ಈಶ್ವರನನ್ನು ಪರಮ ಭಕ್ತಿಯಿಂದ ಪೂಜಿಸಲಾಗಿ ಈಶ್ವರ ಪ್ರತ್ಯಕ್ಷನಾಗಿ ಆತನ ಆಶೆ ಏನೆಂದು ಹೇಳುತ್ತಾನೆ. ಆಗ ಬಾಣ ‘ಶಿವನೆ ನೀನೇ ಬಾಗಿಲು ಕಾಯುತ್ತಿರುವಾಗ ಮತ್ತೆ ಯಾವ ಐಶ್ವರ್ಯ ಕೇಳಲಿ. ನನಗೆ ಸಮನಾಗಿ ಹೋರಾಡುವ ವೀರನನ್ನು ತೋರಿಸು’ ಎನ್ನುತ್ತಾನೆ. “ವೀರಖಳನಿಂತೆನಲು ಕೇಳುತ್ತ ಮಾರಮಣನುಸುರಿದನು. ನಿನ್ನ ಮಯೂರಕೇತನ ಮುರಿದು ಭೂಮಿಗೆ ಬಿದ್ದ ದಿವಸದಲಿ ವಾರಿಜಾಕ್ಷನೊಳೈದೆ ಸಮರವು ದೋರುವುದು ನಿನಗೆಂದು’’ ನಿನ್ನ ಮಯೂರ ಧ್ವಜ ಮುರಿದು ಬಿದ್ದ ದಿನ ನಿನಗೆ ಕೃಷ್ಣನೊಡನೆ ಯುದ್ಧ ಸಂಭವಿಸುತ್ತದೆ – ಎಂದು ಅಂತರ್ದಾನನಾಗುತ್ತಾನೆ.

ಹೀಗೆ ಕಾಲ ಹೋಗುತ್ತಿರುವಾಗ ತಾರುಣ್ಯಕ್ಕೆ ಬಂದ ಉಷೆ ತಂದೆ ತನಗೆ ಪರಿಣಯದ ಕಾರ್ಯ ಮಾಡಲಿಲ್ಲವೆಂದು ಕಳವಳಿಸಿ ಸಖಿಯೊಡನೆ ಹೇಳಲು ಆಕೆ ಪಾರ್ವತಿಯನ್ನು ಒಲಿಸಿಕೊಳ್ಳಬೇಕೆನ್ನುತ್ತಾಳೆ. ಹಾಗೆಯೇ ತಂದೆಯ ಅಪ್ಪಣೆ ಪಡೆದು ಉದ್ಯಾನಕ್ಕೆ “ನಡೆಗೆ ಹಂಸ ಮರುಳಾಗೆ, ನುಡಿಗೆ ಗಿಣಿಗಳು ಕೂಡೈತರೆ” ಈ ರೀತಿಯಲ್ಲಿ ಬರಲಾಗಿ ಶಿವನು ಬಂದುದೇಕೆಂದು ಕೇಳಲು ತಾವು ಶಿವೆಯನ್ನು ಕಾಣಲು ಬಂದೆವೆಂದು ಸಖಿ ಹೇಳುತ್ತಾಳೆ. ಅವರು ಬಂದ ಕಾರಣವನ್ನು ತಿಳಿದ ಶಿವೆ “ನಾಳೆ ಬರುವ ವೈಶಾಖ ಶುದ್ಧ ದ್ವಾದಶಿಯ ದಿನದಿ ಬಾಲೆ ಸರಿರಾತ್ರಿಯೋಳ್ ಸ್ವಪ್ನದಲ್ಲಿ ಮದನನಂದದಾತ ಬಂದಿರದೆ ನೆರೆವನವನು ಕಾಂತನಹನು ನಂಬಿಮಾತ’’ ಎನ್ನುತ್ತಾಳೆ.

ಪಾರ್ವತಿ ಹೇಳಿದ ಕನಸನ್ನು ನೆನೆಸುತ್ತ ಕಾತುರತೆ ತಾಳುತ್ತ ಬೇಕಾದ ಭೋಜನ ಮಾಡಿ ಮಲಗಿ ನಿದ್ರಿಸುವಾಗ ಅನಿರುದ್ಧನ ಕಂಡು ರಮಿಸುತ್ತಾಳೆ. ಎಚ್ಚರಾದಾಗ ಆತನನ್ನು ಕಾಣದೆ ದುಃಖಿಸುತ್ತಾಳೆ. ಅವಳ ಸಖಿ-ಮಂತ್ರಿಯ ಮಗಳು ಬೆಳಗಾಗಲಿ ತಡೆ ಎಂದು ಸಂತೈಸುತ್ತಾಳೆ. ಬೆಳಗಾದ ಮೇಲೆ, ತನಗೆ ಆತನ ಗುರುತು ಹೇಳುವುದಾದರೆ ಹುಡುಕಿಬರುವ ಎಂದು, ತಾನು ಕಲಿತ ಮಾಯಾ ವಿದ್ಯೆಯಿಂದ ದೇವಗಂಧರ್ವರೇ ಮೊದಲಾದವರ ತೋರಲು ಅನಿರುದ್ಧನಂತಹ ಚಿತ್ರ ಕಂಡು ಈತನೇ ಎನ್ನಲು ಸಖಿ ದೇಶಾಂತರ ಹೋಗಿ ಆತನನ್ನು ದ್ವಾರಕೆಯಲ್ಲಿ ಕಂಡು, ಮಲಗಿದಲ್ಲಿಂದಲೇ ಎತ್ತಿ ತಂದು ಉಷೆಯ ಕೋಣೆಯಲ್ಲಿ ಬಿಡುತ್ತಾಳೆ.

ಆತನನ್ನು ಕಂಡು ಉಪಚರಿಸಿ ತನ್ನನ್ನು ಸ್ವಪ್ನದಲ್ಲಿ ಬಂದು ರಮಿಸಿ ಬಿಟ್ಟುಹೋಗಬಹುದೇ ಎಂದಾಗ “ಮಾನಿನಿ ಕೇಳೆ ವಂಚಿಸಿಪೋದವಳ್ ನೀನು ನಾನಲ್ಲ’’ ಎಂದು ಹೇಳಿ ರಮಿಸುತ್ತಾನೆ. ಹೀಗೆ “ಅನಿರುದ್ಧ ನೊಡೀಪರಿಯಿಂ ದಿನದಿನದೊಳು ಬಾಣತನುಜೆಯಲಿ ಸಂಭ್ರಮದಿಂ ಮನುಮಥಕೇಳಿಯೊಳಿರುತಿರೆ ಮುನಿಪತಿ ನಾರದಸುರನ ಸಭೆಗೇಳ್ತಂದಂ’’.

ನಾರದನನ್ನು ಬಾಣನು ಸತ್ಕರಿಸಿ ಬಂದ ಕಾರಣ ಕೇಳಲು ನಾರದ “ಉಸಿರೆಂದರುಸಿರ್ವೆ ನಾನು ನೀ ತಲೆಯ ತಗ್ಗಿಸುವ ಹಾಗಾಯಿತಿನ್ನು’’ ಎಂದು ಉಷೆಯ ಕಥೆಯನ್ನು ಹೇಳುತ್ತಾನೆ. ತನ್ನ ಸರ್ಪಕಾವಲನ್ನೂ ಮೀರಿಬಂದವನು ಯಾರೆಂದು ಕೇಳಲು ಆತ ಕೃಷ್ಣನ ಮೊಮ್ಮಗನೆಂದೂ ನೀನು ಕೊಲ್ಲುತ್ತೇನೆ ಎಂದರೆ ನಿನ್ನ ಕೈಗಳನ್ನೇ ಕಡಿಯುವನು ಎನ್ನುತ್ತಾನೆ.

ಈ ಸಂಗತಿಯನ್ನು ಕೇಳಿದ ಬಾಣ ತನ್ನ ಮಂತ್ರಿ ಕುಂಭಾಂಡನನ್ನು ಕರೆದು ತನ್ನ ಮಗನಿಗೆ ಈತ ಯೋಗ್ಯ ಗಂಡನಾಗಬಹುದೇ ಎಂದು ಹೇಳಿದಾಗ ತಾನೇ ಹೋಗಿ ನೋಡಿ ಬರುವುದಾಗಿ ಹೇಳಲು ಆತನನ್ನು ಕರೆತರದಿದ್ದರೆ ನಿನ್ನನ್ನೇ ಕೊಲ್ಲುವುದಾಗಿ ಹೇಳುತ್ತಾನೆ.

ಇದು ತಿಳಿದ ಉಷೆ ದುಃಖಿಸುತ್ತಾಳೆ. ಸಖಿ ರಾಕ್ಷಸರ ಕಾವಲು ಇರಿಸುತ್ತಾಳೆ. ಅನಿರುದ್ಧನನ್ನು ಕಂಡು ಮಂತ್ರಿ ಬಹು ವೀರರನ್ನು, ಶಸ್ತ್ರಾಸ್ತ್ರ ಸಹಿತನಾಗಿ ಬರುವನೆಂದೂ ತಾನೇ ಕರೆತಂದು ಕೊಲ್ಲಿಸುವಂತಾಯಿತೆಂದೂ ಮರಗುತ್ತಾಳೆ. ಅನಿರುದ್ಧ ಹಾಗೇನೂ ಇಲ್ಲ. ಚೆಲುವೆಯನ್ನು ನೀನು ನನಗೆ ಒದಗಿಸಿದೆ. ಅದಕ್ಕೆ ಕೊಲಿಸುವುದು ಎನ್ನಲಾಗದು ಎನ್ನಲು ಉಷೆ ಪರಿಪರಿಯಾಗಿ ದುಃಖಿಸುತ್ತಾಳೆ. ಇದ ನೊಡಿದ ಅನಿರುದ್ಧ “ಬೇಡವೇ, ನಿನಗೆ ಶೋಕವು, ಕೇಳು, ಯುದ್ಧ ಮಾಡುವುದನು ನೋಡು ನೀನೇಳು, ಕೂಡಿದ ರಾಕ್ಷಸ ಬಲವನು ಮಣ್ಣಗೂಡಿಸುವೆನು ನಿಮಿಷಗೊಳಾನು’’ ಎಂದು ಸಂತೈಸುತ್ತಾನೆ.

ಅಲ್ಲಿ ಮಂತ್ರಿ ಬರುತ್ತಾನೆ. ಬಾಗಿಲು ತೆಗೆಯಲು ಹೇಳಿದರೆ ತೆಗೆಯುವುದಿಲ್ಲ. ಆಗ ಆತ ಆನೆಗಳಿಂದ ಬಾಗಿಲನ್ನು ಮುರಿಸುತ್ತಾನೆ. “ಕರಿಗಳಿಂದ ಬಾಗಿಲನ್ನು ಮುರಿಸುವನು ಗೈಯೆ ಕಂಡು ಸ್ಮರಜ ಖಾತಿವೆತ್ತು ಹೂಂಕರಿಸುತಾಕ್ಷಣ ಶರಶರಾಸನವನು ಕೊಂಡು ಭರದಿ ಕದವ ತೆಗೆದು ಪೊರಟು ಸರಳಿನಿಂದ ಗಜವ ಧರಣಿಗುರುಳಲೆಚ್ಚನು’’ ಯುದ್ಧದಲ್ಲಿ ದೈತ್ಯರನ್ನು ನಾಶ ಮಾಡಲು ಮಂತ್ರಿ ಮೂಗಿನ ಮೇಲೆ ಬೆರಳಿಡುತ್ತಾನೆ. ತಾನು ಚಿಕ್ಕವನಾದರೂ ತನ್ನ ಶರ ಚಿಕ್ಕದೇ ಎಂದು ವೀರತ್ವವನ್ನು ತೋರುತ್ತಾನೆ. ಅನಿರುದ್ಧನ ಬಾಣಕ್ಕೆ ಮೂರ್ಛೆ ಹೋದ ಕುಂಭಾಂಡಕ ಮತ್ತೆ ಎದ್ದು “ಬಲಿಯ ಕೊಡುವೆ ಭೂತಗಳಿಗೆ’’ ಎಂದು ಗರ್ಜಿಸಿ ಯುದ್ಧಕ್ಕೆ ತೊಡಗುತ್ತಾನೆ. ಆದರೆ ಸೋತು ಮೂರ್ಛೆ ಹೋಗಲಾಗಿ ದೂತನು ಬಾಣನ ಕಡೆಗೆ ಬಂದು ನಡೆದ ರೀತಿಯನ್ನು ಹೇಳುತ್ತಾನೆ. ಇದನ್ನು ಕೇಳಿದ ಬಾಣ ತನ್ನ ಸಕಲ ಯುದ್ಧ ತಯಾರಿಯಿಂದ ಬರುತ್ತಾನೆ.

ಇದನ್ನು ತಿಳಿದ ಅನಿರುದ್ಧನು ಧನುರ್ಬಾಣಗಳನ್ನು ಹಿಡಿದು ಯುದ್ಧಕ್ಕೆ ಬರುತ್ತಾನೆ. ಎದುರಿಗೆ ಬಂದ ದೈತ್ಯಗಣಗಳನ್ನು ಸಂಹರಿಸುತ್ತಾನೆ. ಇದರಿಂದ ಬಾಣ ಉಗ್ರರೂಪದಿಂದ ಅವನ ಮೆಲೆ ಎರಗುತ್ತಾನೆ. ಇಲ್ಲಿಯವರೆಗೆ ಗೆದ್ದೆನೆಂದು ಬೀಗಬೇಡ. ನಿನ್ನ ದೇಹವನ್ನು ಸೀಳುತ್ತೇನೆ. ಎನ್ನುತ್ತಾನೆ. ಇದನ್ನು ಕೇಳಿ ಅನಿರುದ್ಧ ನಿನ್ನ ಮಗಳ ಗಂಡನಾದ ನನ್ನ ಮೇಲೆ ಸಿಟ್ಟಿನಿಂದ ಮಾತಾಡುವುದೇಕೆ ಎನ್ನಲು, ನನ್ನ ಮಗಳನ್ನು ನಿನಗೆ ಕೊಟ್ಟವರು ಯಾರು ? ಕಳ್ಳತನದ ಮಾತು ಬೇಡವೆನ್ನುತ್ತಾನೆ. ಮಗಳ ಕೊಟ್ಟವರು ಯಾರೆಂಬುದು ಬೇಡ. ಎಲ್ಲ ಬ್ರಹ್ಮ ಬರಹದಿಂದಾದುದು. ನೀವು ಹಿರಿಯರು. ಇದ ಮೀರಿ ನಿಮ್ಮೊಡನೆ ಯುದ್ಧ ಮಾಡಲಾರೆ ಎನ್ನುತ್ತಾನೆ. ಆದರೂ ಯುದ್ಧ ನಡೆದು ಬಾಣನು ಅನಿರುದ್ಧನನ್ನು ಸೆರೆಹಿಡಿಯುತ್ತಾನೆ.

ಅನಿರುದ್ಧನನ್ನು ಹಿಡಿದುದನ್ನು ತಿಳಿದು ಉಷೆ ದುಃಖಪಡುತ್ತಾಳೆ. ಇದನ್ನು ನೋಡಿದ ಬಾಣ ಅವನನ್ನು ಕೊಲ್ಲುವುದಿಲ್ಲವೆಂದು ಸಂತೈಸುತ್ತಾನೆ.

ಇಷ್ಟಕ್ಕೆ ನಾರದನು ಅಲ್ಲಿಗೆ ಬರುತ್ತಾನೆ. ತಾನು ಮುಂದೆ ಏನು ಮಾಡಬೇಕೆಂದು ಕೇಳಲು ತಾನು ಹೇಳುವುದೇನು? ನಿನ್ನ ಬಾಗಿಲನ್ನೆಲ್ಲ ಕಾಯುತ್ತಿದ್ದ ಈಶ್ವರನನ್ನು ಕೇಳು ಎನ್ನುತ್ತಾನೆ. ಈಶ್ವರನನ್ನು ಕೇಳಲು ಆತ ಈತನಿಗೆ ಶಿಕ್ಷೆಕೊಟ್ಟರೆ ಕೃಷ್ಣ ಸಿಟ್ಟುಗೊಂಡು ಯುದ್ಧಕ್ಕೆ ಬರುತ್ತಾನೆ. ಯಾಕೆ ಆತನೊಡನೆ ಯುದ್ಧ, ಎಂದರೆ ಬಾಣ ಬರಲಿ, ಆತನನ್ನು ಕ್ಷಣಾರ್ಧದಲ್ಲಿ ಕೊಂದು ಮುಗಿಸುತ್ತೇನೆ ಎಂದು ಅನಿರುದ್ಧನಿಗೆ ವಜ್ರ ಶೃಂಕಲೆಯನ್ನು ತೊಡಿಸಿ ಸೆರೆಯೊಳಗಿಡುತ್ತಾನೆ.

ನಾರದನು ಅಲ್ಲಿಂದ ಹೊರಟು ದ್ವಾರಕೆಗೆ ಬರಲು ಅವನನ್ನು ಸತ್ಕರಿಸಿದ ಕೃಷ್ಣ ಮುನಿಯೇ ನೀನು ಜಗತ್ತನ್ನೆಲ್ಲ ತಿರುಗುತ್ತಿಯೇ ಆದ್ದರಿಂದ ಅನಿರುದ್ಧನ ಇರುವಿಕೆಯೇನಾದಹ ಗೊತ್ತಾ ಎಂದು ಕೇಳಿದಾಗ ಬಾಣನು ಆತನನ್ನು ಸೆರೆಮನೆಯಲ್ಲಿ ಬಂಧಿಸಿಟ್ಟ ವಿಚಾರವನ್ನು ಹೇಳುತ್ತಾನೆ. ಇದನ್ನು ಕೇಳಿದ ರುಕ್ಮಿಣಿ ತಾನು ಅನಿರುದ್ಧ ಕಾಣೆಯಾದಾಗಲೇ ಹೇಳಿದರೂ ಹರಿ ಮಾತಾಡಲಿಲ್ಲ ಎಂದು ದುಃಖಿಸಲು, ದುಃಖಿಸಬೇಡ ವಿಧಿ ಬರಹ ಆದಂತೆ ಆಗುತ್ತದೆ. ತಾನು ಆತನನ್ನು ಸೆರೆಬಿಡಿಸಿ ತರುತ್ತೇನೆಂದು ಅಣಿಗೊಂಡು, ಗರುಡನನ್ನು ನೆನಪಿನಿಂದ ಕರೆಯುತ್ತಾನೆ. ಗರುಡ ತಾನೇ ಹೋಗಿ ಆತನ ಅರಮನೆಯನ್ನು ಕಿತ್ತು ತರುತ್ತೇನೆ ಎನ್ನಲು, ಅಲ್ಲಿ ಈಶ್ವರ ಕಾವಲಿದ್ದಾನೆ. ನಿನ್ನಿಂದ ಅಸಾಧ್ಯ ಎಂದು ಸೈನ್ಯ ಸಹಿತ ಗರುಡನನ್ನು ಏರುತ್ತಾನೆ. ಬಲು ವೇಗದಿಂದ ಗರುಡ ಹಾರುವಾಗ ಪರ್ವತಗಳೇ ಅಲುಗಿ ಹೋದಂತಾಗುತ್ತದೆ.

ದಾರಿಯಲ್ಲಿಳಿದು ಗೋಮತಿ ನದಿಯಲ್ಲಿ ಮಿಂದು ವಿಶ್ರಾಂತಿ ಪಡೆದು ಕೃಷ್ಣನು ಸಭೆಯನ್ನುದ್ದೇಶಿಸಿ ಇದೀಗ ನಾನು ಬಾಣನ ಸಾವಿರ ತೋಳುಗಳ ಕಡಿದುಹಾಕುವೆನೆಂದು, ಬಾಣನ ಪ್ರಾಣ ತೆಗೆವೆನು, ಆದ್ದರಿಂದ ನಾರದನೇ, ಬೇಗ ನೀನು ಈಶ್ವರನಲ್ಲಿ ಹೋಗಿ ಈ ಸಂಗತಿಯನ್ನು ತಿಳಿಸು. ನಿನ್ನ ಸಹಾಯದಿಂದಾಗಿ ಬಾಣನು ಅಷ್ಟುಬಲಯುತನಾಗಿದ್ದಾನೆ. ನನ್ನ ಮೊಮ್ಮಗನನ್ನು ಸೆರೆಯಲ್ಲಿಟ್ಟಿದ್ದಾನೆ. ಕೊನೆಗೆ ತನ್ನ ಭಕ್ತರನ್ನು ನೀನು ಕೊಂದೆ ಎಂಬ ಅಪಕೀರ್ತಿಯನ್ನು ಆತ ತನ್ನ ಮೇಲೆ ಹೊರಿಸುವನು. ಅದೆಲ್ಲ ಬೇಡ. ನೀನು ಉಷೆಯನ್ನು ಅನಿರುದ್ಧನೊಡನೆ ಮದುವೆ ಮಾಡುವಂತೆ ಬಾಣನಿಗೆ ಹೇಳು ಎಂದು ಹೇಳಲು ನಾರದನು ಈಶ್ವರನಲ್ಲಿ ಬಂದು ಸಂಗತಿ ತಿಳಿಸಿದನು.

ಈಶ್ವರನು ಚರನನ್ನು ಕರೆದು ಕೃಷ್ಣ ತನ್ನ ಮೊಮ್ಮಗನಿಗಾಗಿ ಯುದ್ಧಕ್ಕೆ ಬಂದಿದ್ದಾನೆ. ಕೃಷ್ಣನ ವೈರ ಒಳ್ಳೆಯದಲ್ಲ. ಯುದ್ಧ ಬೇಡ. ಉಷೆಯನ್ನು ಅನಿರುದ್ಧನಿಗೆ ಮದುವೆ ಮಾಡಿಕೊಡಲು ನಾನು ಹೇಳಿರುವೆನೆಂದು ಬಾಣನಿಗೆ ತಿಳಿಸು ಎಂದು ಕಳಿಸುತ್ತಾನೆ.

ಇದನ್ನು ಕೇಳಿ ಬಾಣಾಸುರನು ಸಿಟ್ಟುಗೊಂಡು ಮಂತ್ರಿಯನ್ನು ಕರೆದು ನೋಡು ಈಶ್ವರ ತನ್ನನ್ನು ದನಕಾಯುವವನಿಗಿಂತ ಕಡಿಮೆ ಮಾಡಿದನು ಮುಂತಾಗಿ ಹೇಳಲು ಮಂತ್ರಿ “ತನುಜೆಯ ಸ್ಮರಜಗಿತ್ತರೆ ಚಂದವಯ್ಯ ದನುಜಾರಿ ಬಂಧುತ್ವವಾದರೆ ಸುಖವಯ್ಯ’’ ಮುಂತಾಗಿ ಹೇಳುತ್ತಾನೆ. ಇದರಿಂದ ಆತ ಸಿಟ್ಟಾಗಿ ನಿನಗೆ ಸಲುಗೆ ಕೊಟ್ಟಿದ್ದು ಜಾಸ್ತಿಯಾಯಿತು. ಯುದ್ಧಕ್ಕೆ ಹೋಗು. ನಾನು ಶಿವನ ಪೂಜೆ ಮಾಡಿ ಬರುತ್ತೇನೆ. ಎನ್ನಲು ಮಂತ್ರಿ ಯುದ್ಧಕ್ಕೆ ಹೊರಡುತ್ತಾನೆ.

ಈಗ ಈಶ್ವರನೇ ಸ್ವತಃ ನಂದಿಯನ್ನೇರಿಕೊಂಡು ಯುದ್ಧಕ್ಕೆ ಹೊರಡುತ್ತಾನೆ. ಸ್ಕಂದನಾಗ ಅವನ ಜೊತೆ ಇರುತ್ತಾನೆ. ಮೊದಲು ಸ್ಕಂದನು ಎದುರು ನಿಂತು ಯುದ್ಧಕ್ಕೆ ಆಹ್ವಾನ ಕೊಡುತ್ತಾನೆ. ಆತನನ್ನು ಮನ್ಮಥನು ಎದುರಿಸುತ್ತಾನೆ. ಅವರ ಮಧ್ಯೆ ಅವರ ಹುಟ್ಟಿಗಾಗಿ ವ್ಯಂಗ್ಯಾತ್ಮಕ ಸಂಭಾಷಣೆ ನಡೆಯುತ್ತದೆ. ಅವರಲ್ಲಿ ಮನ್ಮಥ ಸೋತು, ಕೃಷ್ಣ ಎದುರು ಬರಲಾಗಿ ಯುದ್ಧದ ಭೀಕರತೆಯನ್ನು ನೋಡಿದ ಈಶ್ವರ ಹರಿಯ ಸಂಗಡ ಯುದ್ಧಬೇಡವೆನ್ನಲು ಸ್ಕಂದ ಹಿಂದೆ ಸರಿಯುತ್ತಾನೆ.

ಈಗ ಈಶ್ವರನೇ ಯುದ್ಧಕ್ಕೆ ನಿಲ್ಲುತ್ತಾನೆ. “ಹರಿಯೆ ನಿನ್ನೊಳಿಂದು ಸಮರ ದೊರಕಿತೆನಗೆ ದುರುಳ ಖಳರ ಮುಂದೆ ತೆರವಿದಲ್ಲ ಕಳುಹು ಸರಳ ವೇಗದಿ’’ ಎಂದು ಬೊಬ್ಬಿರಿಯುತ್ತಾನೆ. ಭಾರೀ ಯುದ್ಧ ನಡೆದು ಈಶ್ವರನು ತ್ರಿಶೂಲವನ್ನು ತೆಗೆಯಲಾಗಿ ಕೃಷ್ಣನು ಚಕ್ರವನ್ನು ಹಿಡಿಯುತ್ತಾನೆ. ಈಗ ಆಕಾಶವಾಣಿಯಾಗಿ ತ್ರಿಶೂಲ ಮತ್ತು ಚಕ್ರದ ಯುದ್ಧವಾದರೆ ಜಗತ್ತೇ ನಾಶವಾಗುತ್ತದೆಂಬುದನ್ನು ಕೇಳಿದ ಈಶ್ವರನು “ಸಿರವರನೆ ಕೇಳು ಸಂಗರ ಕೇಳಿಯೊಳಗೆ ನಾವಿರಲು ಮೂಜಗವೆಲ್ಲ ಉರಿದು ಪೋಪುದಲ್ಲೈ’’ ಎಂದು ಹೇಳಿ ಸೋತೆ ಎಂದು ಹಿಂದಿರುಗುತ್ತಾನೆ.

ಇದನ್ನು ತಿಳಿದು ಯಾದವರೆಲ್ಲ ಬಾಣಾಸುರನ ಊರನ್ನು ಮುತ್ತುತ್ತಾರೆ. ಇದನ್ನು ಚಾರರು ಬಾಣನಿಗೆ ತಿಳಿಸಲಾಗಿ ಮಂತ್ರಿ ಸಹಿತವಾಗಿ ಬಾಣನು ಎರಗಿದನು. ಯಾದವ ಸೈನ್ಯವನ್ನು ನುಚ್ಚುನೂರು ಮಾಡುತ್ತಾರೆ.

ಹರಿಯು ಮುಂದೆ ಬಂದು ಬಾಣ ಮಳೆಗರೆಯಲಾಗಿ ಆತ ಬಾಣವನ್ನು ಖಂಡಿಸಿ ಬಾಣನು ತಿಮಿರಶರವನ್ನು ಬಿಡಲಾಗಿ ಕತ್ತಲೆಯೆ ಮುತ್ತಿಕೊಳ್ಳುತ್ತದೆ. ಕೃಷ್ಣ ಸೂರ್ಯಾಸ್ತ್ರ ಬಿಟ್ಟು ಬೆಳಕು ಮಾಡುತ್ತಾನೆ. ಹೀಗೆ ಯುದ್ಧವಾಗುತಿರಲು, ಬಾಣ ತನ್ನ ಮಾಯಾಸ್ತ್ರವನ್ನು ಪ್ರಯೋಗಿಸುತ್ತಾನೆ. ಕೃಷ್ಣನಿಗೆ ಕಾಣದ ಹಾಗೆ ಆಕಾಶದಲ್ಲಿ ಬಾಣ ಯುದ್ಧ ಮಾಡತೊಡಗುತ್ತಾನೆ. ಆತನ ಮಂತ್ರಿ ಕುಂಭಾಂಡಕನೂ ಇದರಲ್ಲಿ ಸೇರಿಕೊಳ್ಳುತ್ತಾನೆ. ಇದರಿಂದ ಮಂತ್ರಿ ಉಳಿದವರನ್ನು ಸೋಲಿಸಿ ಬಲರಾಮನಿಗೆ ಎದುರಾಗುತ್ತಾನೆ. ಬಲರಾಮನು ಮಂತ್ರಿಯನ್ನು ಗದೆಯಿಂದ ಬಡಿಯಲು ಆತ ಪಲಾಯನಗೈಯ್ಯುತ್ತಾನೆ.

ಕೃಷ್ಣ ಗರುಡನನ್ನು ಕರೆದು ಆಕಾಶದಲ್ಲಿ ಹಾರಾಡುವ ಬಾಣ ಮೊದಲಾದವರನ್ನು ನೆಲಕ್ಕೆ ಇಳಿಸೆನ್ನಲು ಗರುಡ ಆಕಾಶವನ್ನು ಏರಿ ಅವರನ್ನು ಭಂಗಿಸಿ ನೆಲಕ್ಕೆ ಕೆಡಹುತ್ತಾನೆ. ಈಗ ಕೃಷ್ಣಚಕ್ರ ಹಿಡಿದು ಬಾಣನ ಸಹಸ್ರ ತೋಳುಗಳನ್ನು ಕತ್ತರಿಸುತ್ತಾನೆ. ಕೊರಳನ್ನು ಕತ್ತರಿಸಲು ಚಕ್ರವನ್ನೆತ್ತಲು ಈಶ್ವರ ಅದನ್ನು ತಡೆಯುತ್ತಾನೆ. ಕೃಷ್ಣ ಈಶ್ವರನ ಮಾತನ್ನು ಬೆಂಬಲಸಿ ನಿನ್ನ ಭಕ್ತರು ನನ್ನ ಭಕ್ತರೂ ಹೌದು ಎನ್ನುತ್ತಾನೆ. ಈಶ್ವರ ಪ್ರೀತಿಯಿಂದ ಬಾಣನನ್ನು ಸ್ಪರ್ಶಿಸಲು ಅವನ ನೋವು ಮಾಯವಾಗುತ್ತದೆ.

“ಇಂದಿರಾವರ ಕೇಳೈ ನಾ ನಿಂದು ಬಾಣ ಸಹಿತ ಪೋಪೆನು ಚಂದದಿಂದವನೂರಸಲಹಿಕೊ ಮುಂದೆ ನೀ ಸಂತಸದಲಿ’’ ಎಂದು ಹೇಳಲು ಬಾಣನು ಅರಿಯದೇ ನಾ ನಿನ್ನ ಪಾದಕೆ ದುರುಳುತನ ಮಾಡಿದೆ’’ ಎಂದು ನಮಸ್ಕರಿಸಿ ಈಶ್ವರನ ಸಂಗಡ ಕೈಲಾಸಕ್ಕೆ ಹೋಗುತ್ತಾನೆ.

ಮಂತ್ರಿಯು ಕಾಣಿಕೆ ತಂದು ಕೊಡುತ್ತಾನೆ. ಅನಿರುದ್ಧ ಬಂದು ಕೃಷ್ಣನೆದುರು ಬಂದು ಉಷೆ ಸಹಿತ ನಮಸ್ಕರಿಸಲು “ಇಂದಿರಾಧವತೋಷದಿ ಈ ಪಾಟಿ ಚೆಲುವಿನ ಕನ್ಯೆಯು ಕಮನೀಯ ರೂಪ ನಿನಗೆ ಹೊರತು ಕಾಪುರುಷರ್ಗೆ ಕೈಸೇರುವಳೆ ಎಂದು ಶ್ರೀಪತಿ ನಗುತೆಂದನು’’.

ಅನಿರುದ್ಧ ಉಷೆಯನ್ನೊಡಗೂಡಿ ದ್ವಾರಕೆಗೆ ಬಂದು ಮದುವೆ ನೆರವೇರಿಸಿ, ಸುಖದಿಂದುಳಿದರು.

. ನರಕಾಸುರನ ವಧೆ

ಅಷ್ಟದಿಕ್ಪಾಲಕರಿಂದಲೂ, ಗರುಡ, ಗಂಧರ್ವ, ಯಕ್ಷರೇ ಮೊದಲಾದವರಿಂದಲೂ, ರಂಭಾದಿಗಳ ಸಂಗೀತ ನರ್ತಗಳಿಂದಲೂ ಸಜ್ಜನರಿಂದಲೂ ಕೂಡಿ ವೈಭವದಿಂದ ದೇವೇಂದ್ರನು ಸ್ವರ್ಗವನ್ನಾಳುತಿರ ಲಾಗಿ ನರ, ಮುರಕರೆಂಬ ರಾಕ್ಷಸರು ಶಿವನ ವರವನ್ನು ಪಡೆದು ದೇವತೆಗಳನ್ನು ಪೀಡಿಸುತ್ತಾರೆ. ಧರೆಯಲ್ಲಿಯ ಅರಸರನ್ನು ಸೋಲಿಸಿ, ಮಂಗಳೆಯರನ್ನು ಸೆರೆಹಿಡಿದು ತೊಂದರೆ ಕೊಡುವ ನರಕ ಇಲ್ಲಿ ಬಾರದೆ ಇರನು ಎಂದು ದೇವೆಂದ್ರನು ಚಿಂತೆಯಿಂದ ಹರಿಹರರನ್ನು ಧ್ಯಾನಿಸುತ್ತ ಕಾಲ ಕಳೆಯುತ್ತಿದ್ದನು.

ತಂದೆ ತಾಯಿಗಳಿಂದಲ್ಲದೆ ಮರಣವಿಲ್ಲವೆಂದು ವರ ಪಡೆದ ಭೂಮಿಪುತ್ರ ನರಕ ಹದಿನಾರು ಸಾವಿರ ಹೆಂಗಳೆಯರನ್ನು ಕೂಡಿ ಹಾಕಿ, ಅವರನ್ನೆಲ್ಲ ಒಂದೇ ಹೊತ್ತಿಗೆ ಮದುವೆಯಾಗಲು ಮುಹೂರ್ತ ಸಿಕ್ಕದೇ ಚಡಪಡಿಸುತ್ತಿರುತ್ತಾನೆ. ಆ ಸಮಯದಲ್ಲಿ ನಾರದನ ಆಗಮನವಾಗುತ್ತದೆ. ಆತನೊಡನೆ ಸಮಸ್ಯೆಯನ್ನಿಡಲು ಆತ ನರಕನ ಪರಾಕ್ರಮವನ್ನು ಹೊಗಳಿ, ಆದರೆ, ಒಂದು ಕೊರತೆ ಇರುವುದಾಗಿ, ಅದೆಂದರೆ “ಸೃಷ್ಟಿಗಧಿಕನಿನ್ನಾಳ್ತನಕ್ಕೆ ಪಟ್ಟದ ರಾಣಿತ್ವಕಾಹ ಬಟ್ಟ ಕುಚೆಯರಿಲ್ಲ. ಪೇಳ್ವೆ ಗುಟ್ಟನೊಂದನು ಅಟ್ಟಿಸುರಪ ಮುಖ್ಯಾಮರರ ಥಟ್ಟನೇ ನೀ ಸಚಿಯ ತರಲು ಅಷ್ಟಭಾಗ್ಯ ಶೋಭಿಸುವುದು. ಕಷ್ಟವಲ್ಲದು’’ (ಮಹಾವೀರನಾದ ನಿನಗೆ ಪಟ್ಟದ ರಾಣಿಯರಿಲ್ಲ. ಆದ್ದರಿಂದ ದೇವೇಂದ್ರನ ಹೆಂಡತಿಯಾದ ಶಚಿ ಅದಕ್ಕೆ ಯೋಗ್ಯಳು ಅವಳನ್ನು ಪಡೆ) ಎನ್ನುತ್ತಾನೆ.

ಇದರಿಂದ ಪ್ರಚೋದಿತನಾದ ನರಕಾಸುರನು ಸ್ವರ್ಗದ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡುತಿದ್ದಾನೆ. ಅವನ ತಂಗಿ ನವಿ ಎನ್ನುವವಳು ಬಂದು ಆ ಕೆಲಸವನ್ನು ಉಪಾಯದಿಂದ ತಾನು ಮಾಡುವುದಾಗಿ ಹೇಳಿ ಸ್ವರ್ಗಕ್ಕೆ ಹೋಗುತ್ತಾಳೆ.

ಒಬ್ಬಳೇ ಉದ್ಯಾನದಲ್ಲಿರುವ ಶಚಿಯನ್ನು ಹಾರಿಸಿಕೊಂಡು ಬರಲು ಕೈ ಹಾಕಿದಾಗ ಅವಳು ಕೂಗಿಕೊಳ್ಳುತ್ತಾಳೆ. ಈ ಕೂಗನ್ನು ಕೇಳಿದ ಅವಳ ಮಗ ಜಯಂತ ಬಂದು ಅವಳನ್ನು ತಡೆಯುತ್ತಾನೆ. ಆದರೆ ಶೌರ್ಯದಿಂದ ನೀನು ಹುಡುಗನಾದ್ದರಿಂದ ಕೊಲ್ಲಲಾರೆ, ಮರಳಿ ಹೋಗು ಎನ್ನುತ್ತಾಳೆ. ನೀನು ಹೆಣ್ಣಾದ್ದರಿಂದ ಕೊಲ್ಲುವುದಿಲ್ಲ ಎಂದು ಅವಳ ಎರಡು ಕೈಗಳನ್ನು ಕತ್ತರಿಸುತ್ತಾನೆ. ಅವಳು ಬೊಬ್ಬೆಯಿಡುತ್ತ ಬಂದು ನರಕಾಸುರನಿಗೆ ತನಗಾದ ಬವಣೆಯನ್ನು ಹೇಳುತ್ತಾಳೆ. ಇದರಿಂದ ಕ್ರುದ್ಧನಾದ ನರಕ ಸ್ವರ್ಗದ ಮೇಲೆ ದಂಡೆತ್ತಿ ಬರುತ್ತಾನೆ. ಸ್ವರ್ಗದ ಸಮಸ್ತ ವಸ್ತುವನ್ನು ಗೆದ್ದು ನರಕ ತನ್ನ ಅರಮನೆಗೆ ಮರಳುತ್ತಾನೆ. ಇಂದ್ರ ತನ್ನ ಸ್ಥಿತಿಯನ್ನು ಕೃಷ್ಣನಿಗೆ ಹೇಳುತ್ತಾನೆ. ಕೃಷ್ಣ ನರಕಾಸುರನ ಮೇಲೆ ದಾಳಿ ಮಾಡುತ್ತಾನೆ.

ಮುರಕಾಸುರನು ಸತ್ತನೆಂದು ತಿಳಿದೊಡನೆ ನರಕನು ಮುಂದರಿದು ಬರುತ್ತಾನೆ. “ಎಲವೋ ಮನುಜ ಲಲನೆಯೊಡನೆ ಬಂದು ನಿಶೆಯಲಿ ಹಲವರನ್ನು ತರಿದು ಉಬ್ಬಿ ನಲಿಪೆ ಮುದದಲಿ ಕಳೆದುಕೊಳ್ಳಬೇಡ ಪ್ರಾಣ ಚೆಲುವೆಯಿವಳನೆಮಗೆ ನಲಿವಿನಿಂದಿತ್ತು ಪೋಗು’’ ಎನ್ನುತ್ತಾನೆ. ಭೀಕರವಾದ ಯುದ್ಧ ನಡೆಯುತ್ತದೆ. ಕೃಷ್ಣ ಬಳಲಿದಂತೆ ತೋರಿಸಿಕೊಳ್ಳುತ್ತಾನೆ. ಕೂಡಲೇ ಭಾಮೆ ಅಸ್ತ್ರವನ್ನು ತೆಗೆದುಕೊಂಡ ನರಕನ ಮೇಲೆ ಕೈ ಮಾಡುತ್ತಾಳೆ.

“ತರುಣಿ ನಾಚಿಕೆ ತೊರೆದು ಎನ್ನೊಳು ಧುರಕೆ ಇದಿರಾಗುವೆಯೊ ನಿನ್ನಯ ವರನ ಭಂಗವನರಿತು ಚರಣಕೆರಗಿ’’ ಇತ್ಯಾದಿ ಹೇಳಿದರೆ “ಘೋರ ಪಾತಕ ಪುರುಷರನು ಸಂಹಾರ ಗೈವುದು ಸತಿಯರಿಗೆ ನಾ ಸಾರಿ ಪೇಳುವ ನೀತಿ’’ ಎಂದು ಯುದ್ಧಕ್ಕೆ ತೊಡಗುತ್ತಾಳೆ. ಕೃಷ್ಣ ಮತ್ತೆ ಯುದ್ಧಕ್ಕೆ ನಿಲ್ಲುತ್ತಾನೆ. ನರಕಾಸುರ ಸೊಕ್ಕು ನಿಲ್ಲಿಸುತ್ತೇನೆಂದು ಶರಬಿಡಲಾಗಿ ಕೃಷ್ಣ ಅದನ್ನು ತುಂಡಿಸಿ ಚಕ್ರ ಬಿಡಲು ಅದು ಉದರವನ್ನು ಪ್ರವೇಶಿಸುತ್ತದೆ. ತಂದೆ ತಾಯಿಂದಲ್ಲದೆ ಮರಣವಿಲ್ಲ ಎಂದು ಈಶ್ವರನ ವರ ನೆನಪಿಗೆ ಬಂದು ಸತ್ಯಭಾಮೆ ಭೂಮಿಯ ಅಂಶ ಮತ್ತು ಕೃಷ್ಣ ಆದಿಪುರುಷ’ “ಘನಮಹಿಮರೀರುವರು ಜನನಿ ಜನಕರು ಎನ್ನ ಜನುಮ ಸಾರ್ಥಕವಾಯಿತಿನ್ನು’’ ಎಂದು ಕೈ ಮುಗಿಯುತ್ತಾನೆ. ಕೃಷ್ಣ ಮತ್ತು ಭಾಮೆಯರಿಬ್ಬರೂ ಸಂತೈಸುತ್ತಾರೆ. ನರಕ ತನ್ನ ಹೆಸರು ಸ್ಥಿರಸ್ಥಾಯಿಯಾಗಿ ಭೂಮಿಯಲ್ಲಿರಬೇಕೆಂದು “ಅಶ್ವೀಜದ ಸಿತಪಕ್ಷಾ ಇನಿತು ತ್ರಯೋದಶಿ ಕಳೆದ ಚತುರ್ದಶಿಯನು ತನ್ನ ಹೆಸರಿಂದ ಕರೆದು ಹಿರಿಯರು, ಯತಿಗಳು ಸಹ ಹಿಮಕರನುದಯದಿ ತೈಲಾಭ್ಯಂಗ ವರಸ್ನಾನ ವಿರಚಿಸಿ ಭಕ್ಷಭೋಜ್ಯವನುಂಡು ಮೆರೆವುದು ಜಗತಿಯೊಳೆಲ್ಲ’’ ಎಂದು ವರ ಕರುಣಿಸುವಂತೆ ಕೇಳಿಕೊಳ್ಳುತ್ತಾನೆ. ಅನಂತರ ಆತನ ಆತ್ಮಜ್ಯೋತಿ ಶ್ರೀವರನನ್ನು ಸೇರುತ್ತದೆ. ದೇವತೆಗಳಿಗೆ ಅವರ ಎಲ್ಲ ಸುವಸ್ತುಗಳನ್ನು ಕೊಡುತ್ತಾನೆ. ಸೆರೆಯಲ್ಲಿದ್ದ ಹೆಂಗಸರನ್ನು ದ್ವಾರಕೆಗೆ ಕಳಿಸುತ್ತಾನೆ. ಭಗದತ್ತನಿಗೆ (ನರಕನ ಮಗ) ರಾಜ್ಯವನ್ನೀಯುತ್ತಾನೆ. ಸ್ವರ್ಗದ ಅದಿತಿಗೆ ಅವಳ ಕರ್ಣಕುಂಡಲವನ್ನು ಕೊಡುತ್ತಾನೆ. ಹೀಗೆ ಇಂದ್ರನಿಂದ ಸತ್ಕಾರವನ್ನು ಪಡೆದು ಭಾಮೆ ಸಹಿತ ಹಿಂದಿರುತ್ತಾನೆ.

ಹಾಗೆ ಬರುವಾಗ ಉದ್ಯಾನವನ್ನು ಸಂಚರಿಸುವಾಗ ಭಾಮೆ “ಮುಂದೆ ಕಂಡಳು ಮಹಾಪಾರಿಜಾತ ತರುವನು’’. ವೃಕ್ಷದ ತಳ್ಳಿಬೇಡವೆಂದರೂ ಭಾಮೆ ಒಂದು ಟೊಂಗೆಯನ್ನು ಮುರಿದುಕೊಂಡು ಭೂಲೋಕಕ್ಕೆ ಒಯ್ಯುವೆವೆನ್ನುತ್ತಾಳೆ. ಇದನ್ನು ಕಂಡ ಚರರು ಅವರನ್ನು ತಡೆಯುತ್ತಾರೆ. ಮತಿಹೀನ, ಚೋರ ಮುಂತಾಗಿ ಹೇಳಲು ಅವರ ಕೈ ಕಟ್ಟಿ ಸಂಗತಿಯನ್ನು ಇಂದ್ರನಿಗೆ ತಿಳಿಸಿ ಎಂದು ಬಿಡುತ್ತಾನೆ.

ಚರರು ಇಂದ್ರನ ಬಳಿ ಬಂದು ನಡೆದ ಸಂಗತಿಯನ್ನು ತಿಳಿಸುತ್ತಾರೆ. ತನಗೆ ನರಕನಿಂದ ಆದ ಪರಿಭವನನ್ನು ಬಗೆಹರಿಸಿ, ಸುವಸ್ತುಗಳನ್ನು ತಂದುಕೊಟ್ಟವನೇ ಹೀಗೆ ಅಪಹರಿಸಿದರೆ ಏನು ಮಾಡುವುದು ಎಂದು ಚಿಂತಿಸಿ ಈಶ್ವರನನ್ನು ಕೇಳುತ್ತಾನೆ. ಸ್ವರ್ಗದಲ್ಲೇ ಇರಬೇಕಾದ ವಸ್ತುವನ್ನು ಭೂಮಿಗೆ ಒಯ್ದನಾದರೆ ಬೇಲಿ ಬೆಳೆ ತಿಂದು ಕೆಡಿಸಿತು ಎಂದಂತಾಗುತ್ತದೆ ಎನ್ನುತ್ತಾನೆ. ಗಿರಿಜೆ ಕೂಡ ಭಾಮೆಗೆ ಮನವರಿಕೆ ಮಾಡಿ ಪಾರಿಜಾತವನ್ನು ಒಯ್ಯದಂತೆ ಮಾಡುವೆನೆಂದು ಶಿವನ ಸಂಗಡ ಹೊರಡುತ್ತಾಳೆ.

ಸ್ವರ್ಗದಲ್ಲಿ ತ್ರಿಮೂರ್ತಿಗಳಿಂದ ದತ್ತವಾದ ಪಾರಿಜಾತವನ್ನು ಭೂಮಿಗೆ ಒಯ್ಯುವೆನೆಂದು ತಿಳಿದು ತಾನು ಬಂದೆ ಎಂದು ಶಿವನು ಹೇಳುತ್ತಾನೆ. ಒಂದು ಕೊಂಬೆಯನ್ನು ಮುರಿದಡೇನು ಎಂದು ಕೃಷ್ಣ ಹೇಳಿದರೆ ಗಿರಿಜೆ ಒಡಂಬಡುತ್ತಿಲ್ಲ ಇದರಿಂದ ಮೇದಿನಿಯೊಳು ಅಪವಾದ ಬರುವುದು ಎನ್ನುತ್ತಾನೆ. ಅವರ ಮಧ್ಯೆ ವಾದ ವಿವಾದ ಬಡಿದಾಟ ಶುರುವಾಗುತ್ತದೆ. ಆಗ ಅಲ್ಲಿಗೆ ಬ್ರಹ್ಮನೇ ಬರುತ್ತಾನೆ. ಆತ ಶ್ರೀರಮಣ ಭೂಮಿಯಲ್ಲಿರುವ ತನಕ ಮಾತ್ರ ಇದು ಅಲ್ಲಿರಲಿ – ಎಂದು ರಾಜಿ ಮಾಡಿಸುತ್ತಾನೆ. ಹೀಗೆ ಪಾರಿಜಾತದ ಒಂದು ಟೊಂಗೆಯನ್ನು ಭಾಮೆಗೆ ಕೊಡುತ್ತಾರೆ. ಅದನ್ನು ತಂದು ತನ್ನ ಅಂಗಳದಲ್ಲಿ ನೆಟ್ಟು ಬೆಳೆಸುತ್ತಾಳೆ. ಆ ಪಾರಿಜಾತದ ಮರ ಬೆಳೆದು ಹೂವುಗಳೆಲ್ಲ ರುಕ್ಮಿಣಿಯ ಅಂಗಳದಲ್ಲಿ ಉದುರಿ ಪರಿಮಳಿಸುವುದನ್ನು ತಿಳಿಯದೆ ಸತ್ಯಭಾಮೆ ತನ್ನ ಸಾಹಸವನ್ನು ವರ್ಣಿಸಿಕೊಳ್ಳುತ್ತಾಳೆ.

೧೦. ಶ್ರೀಕೃಷ್ಣದಿನಾಶ್ವಮೇಧ

ಒಂದಾನೊಂದುದಿನ ಶ್ರೀಕೃಷ್ಣ ಮಡದಿ ರುಕ್ಮಿಣಿ ಸಹಿತ ಒಡ್ಡೋಲಗಕ್ಕೆ ಬಂದು ಝಗಝಗಿಸುವ ರತ್ನಗಳ ಮಧ್ಯೆ ಶೋಭಿಸುವ ಪೀಠದಲ್ಲಿ ಕುಳಿತು ತನ್ನ ಮಡದಿಯರಿಗೆ ನಾಳೆ ಸೂರ್ಯಗ್ರಹಣದ ದಿನವಾಗಿದ್ದು, ತಾನು ಶಾಮಂತಪಂಚಕಕೆ ತೀರ್ಥ ಸ್ನಾನಕ್ಕಾಗಿ ಹೋಗುವುದಾಗಿ ಹೇಳಲು ರುಕ್ಮಿಣಿ- ಸತ್ಯಭಾಮೆಯರು ತಾವೂ ಬರುವುದಾಗಿ ಹೇಳುತ್ತಾರೆ. ಅದನ್ನೊಪ್ಪಿದ ಕೃಷ್ಣ ತನ್ನಣ್ಣ ಬಲರಾಮನನ್ನು ಚಾರರ ಮುಖಾಂತರ ಹೇಳಿ ಕರೆಸಿಕೊಳ್ಳುತ್ತಾನೆ.

ತನ್ನನ್ನು ಕರೆದ ಕಾರಣವೇನು ವೈರಿಗಳಿಂದೇನಾದರೂ ತೊಂದರೆ ಬಂತೇ ಎಂದು ಬಲರಾಮ ಕೇಳಲು ಕೃಷ್ಣ ನಿನ್ನಂತಹ ಮಹಾವೀರನಿರುವಾಗ ಯಾವ ಕಷ್ಟವೂ ಬರಲಾರದು ಎಂದು ವಿನಯದಿಂದ ಉತ್ತರಿಸಿ ಶಾಮಂತಪಂಚಕದ ವ್ರತಾಚರಣೆಗಾಗಿ ಗಂಗಾನದಿ ಸ್ನಾನಕ್ಕಾಗಿ ಹೋಗಬೇಕಾಗಿ ತಿಳಿಸುತ್ತಾನೆ. ಆ ಪ್ರಕಾರ ಅವರು ಗಂಗಾತಟಕ್ಕೆ ತಲುಪುತ್ತಾರೆ.

ಇತ್ತ ಇಂದ್ರಪ್ರಸ್ಥರಲ್ಲಿ ತಮ್ಮಂದಿರನ್ನು ಮಡದಿ ದ್ರೌಪದಿಯನ್ನೊಡಗೂಡಿ ಧರ್ಮರಾಯ ವೈಭವದಿಂದ ಸಭೆನಡೆಸುತ್ತ ರಾಜ್ಯದ ಆಗುಹೋಗುಗಳನ್ನು ತಮ್ಮಂದಿರಲ್ಲಿ ವಿಚಾರಿಸಿ ಎಲ್ಲವೂ ಸರಿಯಾಗಿದ್ದು, ಸುಖ ಸೌಖ್ಯ ಇರುವುದನ್ನು ತಿಳಿದು ಸಂತಸದಿಂದಿರುವಾಗ ಅಲ್ಲಿಗೆ ವ್ಯಾಸಮುನಿ ಬರುತ್ತಾನೆ. ಧರ್ಮರಾಯನ ಹಾಗೆಯೇ ದ್ರೌಪದಿಯ ಗುಣಗಾನ ಮಾಡಿ ಪಾಂಡವರು ರಾಯಸೂಯಾಯಾಗವನ್ನು ಮಾಡಿ ಕೀರ್ತಿ ಹೊಂದಬೇಕಾಗಿ ಉಪದೇಶಿಸುತ್ತಾನೆ. ಹಾಗೆಯೇ ಶಾಮಂತಕನಾಮಕ ಕ್ಷೇತ್ರಕ್ಕೆ ಕೃಷ್ಣ ಬಂದಿರುವ ಸಂಗತಿಯನ್ನು ತಿಳಿಸಿ, ಅವರಿಗೂ ಅಲ್ಲಿಗೆ ಹೋಗಲು ಸೂಚಿಸುತ್ತಾನೆ. ವ್ಯಾಸನೊಡಗೂಡಿ ಅವರು ಪಯಣಿಸುತ್ತಾರೆ.

ಅವರ ಬರವನ್ನು ಕಂಡು ಕೃಷ್ಣ ಸಂತೋಷದಿಂದ ಸ್ವಾಗತಿಸಿದರೆ ಬಲರಾಮ ಸುಭದ್ರೆಯನ್ನು ಅರ್ಜುನ ಕದ್ದೊಯ್ದದ್ದನ್ನು ನೆನೆಸಿಕೊಂಡು ಮುನಿಸುಗೊಳ್ಳುತ್ತಾನೆ. ಕೃಷ್ಣ ಅವನನ್ನು ಸಾಂತ್ವನ ಗೊಳಿಸುತ್ತಾನೆ.

ಸತ್ಯಭಾಮೆ ದ್ರೌಪದಿಯ ಕ್ಷೇಮ ಸಮಾಚಾರ ಕೇಳಿ, “ಕಪಟ ಮುನಿಯ ವೇಷದಿಂದ ಜಪಿಸುತಿರ್ಪ ನರನ ಮೋಹಿಸಿ ಗುಪಿತದಿಂದ ರಮಿಸಿಹೋದ ಚಪಲೆಗೆ ಸುಖವೆ?’’ ಎಂದು ಸುಭದ್ರೆಯನ್ನು ಚೇಡಿಸಿದರೆ ಅದಕ್ಕೆ ತಕ್ಕಾಗಿ ಸುಭದ್ರೆ ಕೂಡ ರುಕ್ಮಿಣಿಯ ಮದುವೆಯ ವಂಚನೆಯನ್ನು ಹೇಳುತ್ತಾಳೆ. ಇಂತಹದೇ ಧಾಟಿಯಲ್ಲಿ ದ್ರೌಪದಿ ಭಾಮೆಯರ ಸಂವಾದವೂ ನಡೆಯುತ್ತದೆ.

ಕೃಷ್ಣ ಬಲರಾಮರು ಪಾಂಡವರನ್ನು ಕೂಡಿಕೊಂಡು ಗಂಗಾಸ್ನಾನ ಮಾಡಿ ಬೇಕುಬೇಕಾದ ದಾನ ದಕ್ಷಿಣೆಯನ್ನು ಕೊಡುತ್ತಾರೆ. ಹಾಗೆಯೇ ಪಾಂಡವರ ಸಹಿತ ಕೃಷ್ಣ ದ್ವಾರಕೆಗೆ ಹಿಂದಿರುಗುತ್ತಾನೆ. ಅಲ್ಲಿ ಅವರೊಡನಿದ್ದ ವ್ಯಾಸಮುನಿ “ವಾಜಿಮೇಧವ ಚಂದದಲಿ ವಿರಜಿಸುತ ಬಂದಿಹ’’ ನರರಿಗೆ ಸುಖವಾಗುತ್ತದೆಂದೆನ್ನಲು ಕೃಷ್ಣ ಯಾಗನಿಶ್ಚಯ ಮಾಡುತ್ತಾನೆ. ಯಜ್ಞ ಭವನ ಸಿದ್ಧವಾಗುತ್ತದೆ. ಯಜ್ಞಾಶ್ವವನ್ನು ಶೃಂಗರಿಸಿ ಅದರ ಹಣೆಪಟ್ಟಿಯಲ್ಲಿ “ಬಂದ ವೀರರು ಕಟ್ಟಿ ವಾಜಿಯ ಧುರದಲ್ಲಿ ಕಾದುವದುಚಿತಾ ಸಲ್ಲದ ರಾಜರು ಕಪ್ಪಕಾಣಿಕೆ ಕೊಡುತೆಲ್ಲರು ನಮಿಸುವುದು’’ ಎಂದು ಬರೆದು, ಬಿಡುತ್ತಾರೆ. ಅದರ ಬೆಂಗಾವಲಿಗೆ ದೊಡ್ಡ ಸೈನ್ಯವನ್ನು ತೆಗೆದುಕೊಂಡು ಅರ್ಜುನನ ಅಧಿಪತ್ಯದಲ್ಲಿ ಭೀಮ, ಸಾತ್ಯಕಿ, ಪ್ರದ್ಯುಮ್ನ ಮೊದಲಾದವರು ಹೊರಡುತ್ತಾರೆ. ಆ ಹಯವು ಸಂಚರಿಸುತ್ತ ವೇಗವಾಗಿ ಮಗಧದೇಶಕ್ಕೆ ಬಲುಪುತ್ತದೆ.

ಮಗದಕ್ಕೆ ಮಗಧ (ಜರಾಸಂಧ) ದೊರೆಯಾಗಿದ್ದು, ಸಭೆಗೆ ಬಂದಾಗ ದುಶ್ಶಕುನವಾಗಲು ತನ್ನ ಇಷ್ಟದೈವವಾದ ಶಿವನನ್ನು ಪೂಜಿಸುತ್ತಿರಲು ಯಜ್ಞ ಕುದುರೆಯ ತಿರುಗಾಟದ ಸದ್ದಿನಿಂದ ವಿಚಲಿತನಾದ ಮಗಧ ಕ್ರುದ್ಧನಾಗಿ ಕುದುರೆಯನ್ನು ನೋಡಿ ಅದರ ಹಣೆಯ ಫಲಕವನ್ನು ಓದಿ ತನ್ನ ಮಂತ್ರಿಯನ್ನು ಕರೆಸಿ ವಿಚಾರ ತಿಳಿಸಲು ಆತ ತಾನೇ ಯುದ್ಧಮಾಡುವುದಾಗಿ ಹೇಳಿದ ಮಾತಿನಿಂದ ಸಂತೋಷ ಹೊಂದಿ ಅವನನ್ನು ಕಳಿಸುತ್ತಾನೆ.

ಅರ್ಜುನನಿಂದ ಅಪ್ಪಣೆ ಪಡೆದ ಸಾತ್ಯಕಿ ಮಂತ್ರಿ ಎದುರಾಗಲು “ಪುಂಡಯಾದವ’’ ಎಂದು ಮೇಲೆ ಬೀಳುತ್ತಿರುವ ಮಂತ್ರಿಯನ್ನು ಸಂಹರಿಸುತ್ತಾನೆ. ಇದ ಕಂಡ ಮಾಗದ ಭಯಂಕರ ಸಿಟ್ಟಿನಿಂದ ಸಿಡಿಯುತ್ತಾನೆ. ಸಾತ್ಯಕಿ ಅವನನ್ನು ತಡೆದು ಕುದುರೆಯನ್ನು ಕಪ್ಪಸಹಿತ ಬಿಟ್ಟುಕೊಡದಿದ್ದರೆ ಆತನನ್ನು ಯುದ್ಧದಲ್ಲಿ ಕೊಲ್ಲುವುದಾಗಿ ಹೇಳುತ್ತಾನೆ. ಆದರೆ ಮಾಗಧ ಹುಚ್ಚು ಯಾದವ ತನ್ನ ಮುಂದೆ ನೀವೆಲ್ಲ ಕ್ರಿಮಿಗಳ ಸಮಾನ ಎಂದು ಯುದ್ಧಕ್ಕೆ ತೊಡಗುತ್ತಾನೆ. ಅವರಲ್ಲಿ ಸಮಾನ ಯುದ್ಧವು ನಡೆಯುತ್ತಿರುವುದನ್ನು ತಿಳಿದ ಭೀಮ ತಾನೇ ಯುದ್ಧಕ್ಕೆ ಬರುತ್ತಾನೆ.

ಗದೆಯನ್ನು ತಿರುವುತ್ತ ಬಂದಭೀಮನು “ಇಂದಿರೇಶನಧ್ವರಾಶ್ವವನ್ನು ಬಿಡದಿರೆ ಬಂಧಿಸೀಗಲೊಯ್ವೆ’’ ಹೇಳಿದರೆ “ಹರನ ಭಕ್ತನಿಹೆನು ತಾನು ದುರುಳ ನೋಡೆಲ’’ ಎಂದ ಮಾಗಧನ ಮಾತಿಗೆ “ಹರನ ಭಜಕ ನೀನು ನಮಗೆ ಗಣ್ಯವೇನಲಾ’’ ಎಂದು ಉತ್ತರಿಸುತ್ತಾನೆ. ನನ್ನ ಭಯದಿಂದ ಹರಿಯೇ ನೀರಮಧ್ಯೆ ನೆಲೆ ಅರಸಿದವನು, ಅವನ ಭಕ್ತನು ತನಗೆ ಗಣ್ಯನೇ ಎಂದು ಮಾಗಧ ಸವಾಲು ಹಾಕುತ್ತಾನೆ. ಲಕ್ಷಭಾರವಾದ ಗದೆಯನ್ನು ತಿರುಗತೊಡಗಲು ಭೀಮ ಸಮಬಲನಾಗಿ ಆತನನ್ನು ತಡೆದನು. ಹೀಗೆ ಬ್ರಹ್ಮಾಂಡವೇ ನಡುಗುವಂತಹ ಘೋರ ಯುದ್ಧದಲ್ಲಿ ಭೀಮ ಗದೆ ಚೂರು ಚೂರಾಗಲು ಹೆದರದೆ ಮೇಲೆ ಬಿದ್ದು ಮಾಗಧನನ್ನು ಗುದ್ದಿದಾಗ ಮೂರ್ಛೆ ಹೋಗುತ್ತಾನೆ.

ಮೂರ್ಛೆಯಿಂದ ಎಚ್ಚತ್ತ ಮಾಗಧ ಯುದ್ಧಮಾಡಲು ಬಲವೇ ಬರುತ್ತಿಲ್ಲವಾದುದರಿಂದ ಕಪ್ಪ ಕೊಡುವುದೇ ಗತಿಯೆಂದು ಮನದಲ್ಲೇ ಕಳವಳಿಸಿ ಭೀಮನಿಗೆ “ಪಂಥವೇತಕೆ ರಣಧಿ ಸೋತಿಹೆ ನಂತಕನ ತೆರ ಕೊಲದಿರೆನ್ನನು ಕುಂತಿಸುತ ತಾನೀವೆ ಕರ ಹಯವೆಂದು’’ ಹೇಳುತ್ತಾನೆ. ಇಲ್ಲಿಗೆ ಮೊದಲ ಸಂಧಿ ಮುಕ್ತಾಯವಾಗುತ್ತದೆ.

ಮಗಧ ದೇಶದಿಂದ ಹೊರಟ ಅಶ್ವ ಅನೇಕ ದೇಶಗಳನ್ನು ಸಂಚರಿಸಿ ಅಂಗದೇಶವನ್ನು ಪ್ರವೇಶಿಸಿತು. ಅಲ್ಲಿಯ ಅರಸನ ಪರಿಚಯವನ್ನು ಅರ್ಜುನ ಕೇಳಿದಾಗ ಭೀಮ ಬಿಲ್ವಿದ್ಯೆಯ ಪರೀಕ್ಷೆಯಲ್ಲಿ ಅರ್ಜುನನೊಡನೆ ಬಹಳ ಶೌರ್ಯದಿಂದ ಮೆರೆದು ಕೌರವನೂ ಬೆಚ್ಚಿಬೆರಗಾಗುವಂತೆ ಪರಶುರಾಮನಲ್ಲಿ ತಾನು ಕಲಿತ ವಿದ್ಯೆಯನ್ನು ತೋರಿದ, ಯಾವನನ್ನು ಕೌರವನು ಒಲಿದು ಕರೆತಂದು ಅರ್ಜುನನಿಗೆ ಸಮನಾದ ವೀರನೀತನೆಂದು ಅಂಗದರಾಜ್ಯವನ್ನು ಕೊಟ್ಟನೋ ಆ ರಾಧೇಯ ಕ್ರೋಧದಿಂದ ಹಯವನ್ನು ಕಟ್ಟಿದ್ದಾನೆ. ಆತ ಕಾಯದೆ ಇರಲಾರ ಎಂದು ಹೇಳುತ್ತಾನೆ.

ಬಂದತ್ತ ಕುದುರೆಯನ್ನು ಕಾವಲುಗಾರರು ತಕ್ಷಣದಲ್ಲಿ ಹಿಡಿದು, ಅದರ ಹಣೆಯಲ್ಲಿರುವ ಬರಹವನ್ನು ಕಂಡು ಇದು ಯಜ್ಞ ಕುದುರೆಯಾದ್ದರಿಂದ ಅರಸನಿಗೆ ಒಪ್ಪಿಸುವುದಾಗಿ ಒಯ್ಯುತ್ತಾರೆ. ಹಾಗೆ ಬಂದ ಚಾರಕರು ಸಭೆಯಲ್ಲಿ ಕುಳಿತಿರುವ ಕರ್ಣನಿಗೆ ಐದು ಬಣ್ಣಗಳಿಂದ ಕೂಡಿದ ಮತ್ತು ಹಣೆಯಲ್ಲಿ ಚಿನ್ನದ ಓಲೆ ಇರುವ ಈ ಕುದುರೆ ಸಂಚರಿಸುತ್ತ ನಮ್ಮ ಪಟ್ಟಣಕ್ಕೆ ಬಂತು. ಅದರ ಹಿಂದೆ ಭಾರಿ ದೊಡ್ಡ ಸೈನ್ಯ ಇರುವುದನ್ನು ಕಂಡು ಭಯಭೀತರಾಗಿ ಬಂದೆವು ಎನ್ನುತ್ತಾರೆ.

ಇದನ್ನು ಕೇಳಿದ ಕರ್ಣ ಅತ್ಯಂತ ಸಿಟ್ಟಿನಿಂದ ತನ್ನಂಥ ಶೂರನಾದ ರಾಜ ಇರುವಾಗ ಯಾರಿಗೆ ಯಜ್ಞಾಶ್ವವನ್ನು ಬಿಡುವ ಧೈರ್ಯ ಬಂತು? ಸಿಂಹವು ನರಿಯನ್ನು ಛಿದ್ರಮಾಡಿ ಒಗೆವಂತೆ ಮಾಡುತ್ತೇನೆಂದು ಕುದುರೆಯ ಹಣೆಯ ಪಟ್ಟಿಯನ್ನು ತೆಗೆದು ಓದುತ್ತಾನೆ. ಅದರಲ್ಲಿ ಬರೆದಿರುವ ಚಂದ್ರವಂಶದವನೂ ವೈರಿಗಳಿಗೆ ಭಯಾನಕನೂ ಆದ ವಸುದೇವನ ಮಗ ಕೃಷ್ಣ ಮಹಾವೀರನು ದ್ವಾರಕಾಪುರದಲ್ಲಿ ಒಂದು ದಿನ ‘ವಾಜಿಮೇಧ’ (ಕುದುರೆಯಜ್ಞ)ದ ದೀಕ್ಷೆಗೊಂಡು ಕುದುರೆಯನ್ನು ಬಿಟ್ಟಿದ್ದಾನೆ. ವೀರರಾದವರು ಬಂಧಿಸಿ ಭೀಮ, ಅರ್ಜುನ, ಪ್ರದ್ಯುಮ್ನನೊಡನೆ ಹೋರಾಡಬೇಕೆಂದೂ, ಹೇಡಿಗಳಾದರೆ ಕರ ಕಾಣಿಕೆ ಕೊಟ್ಟು ಶರಣಾಗಬೇಕೆಂಬ ಸಂದೇಶವನ್ನು ತಿಳಿದು ಕರ್ಣನು ಕಲ್ಪದದುರ್ಜಟಿಗೆ ಮಿಗಿಲಿನಿಸುವಂತೆ ಗರ್ಜಿಸಿ ಪರಾಕ್ರಮವನ್ನು ಯುದ್ಧದಲ್ಲಿ ತೋರುತ್ತೇನೆ ಎನ್ನುತ್ತಾನೆ.

ಆ ಕಡೆ ಅರ್ಜುನನ ಅಪ್ಪಣೆ ಪಡೆದು ಸಾತ್ಯಕಿ ಯುದ್ಧಕ್ಕೆ ಬರುತ್ತಾನೆ. ಇದ ತಿಳಿದ ವಿಕರ್ಣ ಧುರಕ್ಕೆ ತನ್ನನು ಕಳುಹಿಸಬೇಕೆಂದೂ, ಇಂಥ ಸಣ್ಣ ಕೆಲಸಕ್ಕೆ ಕರ್ಣನೇ ಹೋಗುವುದು ಉಚಿತ ಅಲ್ಲವೆಂದೆನ್ನಲು ಕರ್ಣ ತನ್ನ ಸೋದರನಿಗೆ ಅಪ್ಪಣೆ ಕೊಟ್ಟು ಕಳಿಸುತ್ತಾನೆ. ವಿಕರ್ಣ ಮತ್ತು ಸಾತ್ಯಕಿಯರು ಒಬ್ಬನ್ನೊಬ್ಬರು ಜರೆದುಕೊಳ್ಳುತ್ತ ಯುದ್ಧಮಾಡುತ್ತಿರುವಾಗ ವಿಕರ್ಣ ಮೂರ್ಛಿತನಾಗುತ್ತಾನೆ. ಇದನ್ನು ತಿಳಿದ ಕರ್ಣ “ತೋರುತೋರೆಲೊ ಸಾಹಸ ನಮ್ಮನುಜನ ಗಾರುಗೆಡಿಸಿದ ತೋಷಾ’’ ಎನ್ನುತ್ತ ಯುದ್ಧಕ್ಕೆ ಬರುತ್ತಾನೆ. ತಾನು ಮೂರ್ಖನಲ್ಲವೆಂದೂ ಕೌರವರಲ್ಲಿ ಸದಾ ಇದ್ದು ಉಪದೇಶ ಕೇಳಿ ಕೇಳಿ ಪಾರ್ಥನ ವಿರುದ್ಧ ವೈರಮಸೆಯುವ ನೀನು ಖಳನೆಂದು ಹೇಳುತ್ತಾನೆ. ಖಳನೆಂದು ಹೇಳಬೇಡ ಗರುಡನೆದುರು ಸರ್ಪ ಸಿಕ್ಕಿದಂತೆ ಸಿಕ್ಕಿದ್ದಿಯಾ ಎಂದು ಕರ್ಣ ಬಾಣ ಬಿಡುತ್ತಾನೆ. ಅದರಿಂದ ಸಾತ್ಯಕಿ ಸೋತು ಹಿಂದಿರುತ್ತಾನೆ.

ಇದನ್ನು ಕಂಡ ಪ್ರದ್ಯುಮ್ನನು ಕರ್ಣನ ಎದುರು ಬಂದು “ಅರರೆ ಸೂತಸುತನೆ ಸಾಕು ಧುರದಿ ಸಾತ್ಯಕಿಯ ಗೆಲಿದ ಹರುಷ ಬೇಡ ವಿಶಿಖ ಪರಿಕಿಸೆನ್ನ ಸಮರವಾ’’ ಎಂದು ಆಹ್ವಾನಿಸುತ್ತಾನೆ. “ಸೂತನಾದರೇನು’’ ತಾನು ಪರಶುರಾಮನ ಶಿಷ್ಯ ಗೊಲ್ಲನಲ್ಲ ಎಂದು ತಿರುಗೇಟುಕೊಡುತ್ತಾನೆ. ಹೀಗೆ ಅವರಲ್ಲಿ ಅನೇಕ ಮಾತುಗಳು ನಡೆದು ಯುದ್ಧವು ನಡೆಯುತ್ತದೆ. ಇಬ್ಬರೂ ಪಂಥ ಹಿಡಿದು ಸಮತಳದಲ್ಲಿ ಯುದ್ಧ ನಡೆಸುತ್ತಿರುವಾಗ ಈತನನ್ನು ಗೆಲ್ಲಲು ನಿಜ ಯುದ್ಧದಲ್ಲಿ ಸಾಧ್ಯವಾಗದೆಂದು ಬಗೆದ ಪ್ರದ್ಯುಮ್ನ “ಭ್ರಾಮಕಶಿರ’’ವನ್ನು ಪ್ರಯೋಗಿಸಲು ಕರ್ಣನ ಮನಕರಗಿ ಕ್ಷಣಕಾಲ ಸಾವರಿಸಿಕೊಂಡು ಮತ್ತೆ ಬೋರ‍್ಗರೆದು ಯುದ್ಧ ಶುರುಮಾಡುತ್ತಾನೆ. ಈಗ ಸ್ವತಃ ಅರ್ಜುನನೇ ಎದುರಾಗುತ್ತಾನೆ. ಕುದುರೆ ಕಳ್ಳ ಎಂದು ಕರ್ಣನನ್ನು ಅರ್ಜುನ ಜರೆದರೆ, ಆತ ಸುಭದ್ರೆಯಕದ್ದವನೆಂದು ಕರ್ಣ ಹೇಳುತ್ತಾನೆ. ಭಾನುಮತಿಯ ಮದುವೆಯಲ್ಲಿ ಕೌರವನ ಸಹಿತ ನೀನು ಎಳೆಯುವಾಗ ಪೆಟ್ಟುತಿಂದೆ ಎಂದರೆ ಕುರುಭೂಪ ನಿಮ್ಮನ್ನು ಜತುಗೃಹದಲ್ಲಿಟ್ಟು ಬೆಂಕಿಹಾಕಲು ತಲೆತಪ್ಪಿಸಿಕೊಂಡಿರೆಂದು ಕರ್ಣ ಹೇಳುತ್ತಾನೆ. ಹೀಗೆ ಸಮಜೋಡಿಯಲ್ಲಿ ಯುದ್ಧಮಾಡುತ್ತಿರುವಾಗ ಅರ್ಜುನನ ಬಾಣಕ್ಕೆ ಕರ್ಣ ಎಚ್ಚರತಪ್ಪುತ್ತಾನೆ. ಇದನ್ನು ಕಂಡು ಸೈನ್ಯ ಬೆರಗಾಗುತ್ತದೆ. ಕೂಡಲೇ ಎಚ್ಚತ್ತ ಕರ್ಣ ಯುದ್ಧಕ್ಕೆ ನಿಲ್ಲಲು ಅರ್ಜುನನು ಆತನನ್ನು ಸೂರ್ಯಾಸ್ತ್ರದಿಂದ ಖಂಡಿಸುತ್ತಾನೆ. ಇದರಿಂದ ಕರ್ಣ ರಥದಲ್ಲಿ ಬೀಳುತ್ತಾನೆ. ಆದರೆ ಸೂರ್ಯಾಸ್ತ್ರ ಕರ್ಣನ ತಂದೆಯ ಅಸ್ತ್ರವಾದ್ದರಿಂದ ಅದು ಕರ್ಣನನ್ನು ಸುಡುವುದಿಲ್ಲ. ಹೀಗಾಗಿ ಕರ್ಣ ಮತ್ತೆ ಎದ್ದು ಯುದ್ಧದಲ್ಲಿ ತೊಡಗುತ್ತಾನೆ. ಸಿಟ್ಟುಗೊಂಡ ಅರ್ಜುನ ಆತನನ್ನು ಕೊಂದೇ ಬಿಡುತ್ತೇನೆನ್ನಲು ಭೀಮ ಕೊಲ್ಲುವುದು ಉಚಿತವಲ್ಲ ಆತನ ಕೈಗಳನ್ನು ಬಿಗಿದು ಕರೆ ತರುತ್ತೇನೆ ಎಂದು ಸಂತೈಸಿ “ಕಿಡಿಕಿಡಿಯೆನುತಲಿ ಭೀಮ ಗದೆ ಪಿಡಿಯುತ ಬಲು ನಿಸ್ಸೀಮಾ” ಹೋಗುತ್ತಾನೆ. ಕರ್ಣನಿಗೂ, ಭೀಮನಿಗೂ ಘನಘೋರವಾದ ಯುದ್ಧ ನಡೆಯುತ್ತದೆ. ಅದರಲ್ಲಿ ಕರ್ಣ ಸೋತು ಬೀಳುತ್ತಾನೆ. “ಧೀರನಾಗಿ ಕಟ್ಟಿ ಹಯವ ಧೀರತನದ ತೊರೆದೂ ನಾರಿಯಂತೆ ಮರುಗಲೆನ್ನ ಯಾರು ಕೇಳ್ವರು’’ ಎಂದು ಮುಂತಾಗಿ ಚಿಂತಿಸಿ ಮತ್ತೆ ಎದ್ದು ಯುದ್ಧ ಕೊಡುತ್ತಾನೆ. ಆದರೆ ಭೀಮನನ್ನು ಗೆಲ್ಲಲಾರದಾಗಲು ಭೀಮ ಯಜ್ಞ ಕುದುರೆಯನ್ನು ಮತ್ತು ಕಪ್ಪಗಾಣಿಕೆಯನ್ನು ಕೊಡದಿದ್ದರೆ ನಿನ್ನ ಕೈಗಳನ್ನು ಕಟ್ಟಿ ಒಯ್ದು ಕೃಷ್ಣನ ಪಾದಲ್ಲಿ ಕೆಡುಹುತ್ತೇನೆ ಎನ್ನುತ್ತಾನೆ. ಈಗ ಕರ್ಣನು ಭೀಮನಂತಹ ವೀರ ಭೂಮಿಯ ಮೇಲೆ ಇಲ್ಲ. ಈಗ ಕಾದಾಡಲು ತನ್ನಲ್ಲಿ ಶಕ್ತಿಯು ಇಲ್ಲ. ಆದ್ದರಿಂದ ಮುಂದೆ ಪಾಂಡವರಿಗೆ ತನ್ನ ಪಂಥ ತೋರುವೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತ ಭೀಮನೊಡನೆ ಕಪ್ಪಕೊಡುವುದಾಗಿ ಹೇಳುತ್ತಾನೆ.

ಸೂರ್ಯನ ರಥ ಮುಂದೆ ಹೋಗುವ ರೀತಿಯಲ್ಲಿ ಯಜ್ಞ ಕುದುರೆಯ ಸಾಲ್ವಪುರಕ್ಕೆ ತಲುಪಿತು. ಅದೇ ಸಮಯದಲ್ಲಿ ಹಂಸ ಮತ್ತು ಡಿಭಿಗಾ ಎಂಬ ಸೋದರ ರಾಕ್ಷಸರು ಬೇಟೆಗೆ ಹೊರಡುತ್ತಾರೆ. ಅಲ್ಲಿ ಕೇಸರಿ, ಕರಡಿ, ಕಾಡ್ಗೋಣ, ಹೆಬ್ಬುಲಿಯೇ ಮೊದಲಾದವುಗಳನ್ನು ಕೊಂದ ಶ್ರಮವನ್ನು ಕಳೆದುಕೊಳ್ಳಲು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಮಯಕ್ಕೆ ಯಜ್ಞಾಶ್ವವು “ಹಂಸನ ಪರಿಮುಖಕೆ ರಾಘವನ ಶರದವೋಲ್ ಬರುವುದನು’’ ತಡೆದು ಅದರ ಹಣೆಯನ್ನು ಓದಿ “ಕ್ರುದ್ಧರಾಗುವ ಹಂಸ, ಡಿಭಿಗರು ಶುದ್ಧ ಗೋವಳ ಕೃಷ್ಣ ನಮ್ಮಿಂದಲೆಂತು ಮಖಗೈವ’’ ಎಂದು ಹಯವನ್ನು ಕಟ್ಟುತ್ತಾರೆ.

ಹೀಗೆ ಹಯವನ್ನು ಕಟ್ಟಿ ಬಾಣದ ಮಳೆಗರೆಯುತ್ತ ಬರಲಾಗಿ ಡಿಭಿಗನಿಗೆ ಅರ್ಜುನನು ಎದುರಾಗುತ್ತಾನೆ. ಅರ್ಜುನನು ಅಬ್ಬರಿಸಿ “ಆರು ನಮ್ಮಯ ಹರಿಯ ಮಖಹಯ ಚೋರನಭಿಮುಖನಾಗಲೆನ್ನುತ ಘೋರ ಲಯಭೈರವನಂತೆ’’ ನಿಂತರೆ ಡಿಭಿಗ “ಧೀರ ನಿನ್ನ ಹಯವ ಬಿಗಿದ ವೀರ ನಾನೇ’’ ಎಂದು ಸಡ್ಡು ಹೊಡೆಯುತ್ತಾನೆ. ಹೀಗೆ ಪರಸ್ಪರ ಯುದ್ಧಮಾಡುತ್ತಾರೆ. ಅಂಥಯುದ್ಧದಲ್ಲಿ ಡಿಭಿಗನು ಮೂರ್ಛೆ ಹೋದುದನ್ನು ಕಂಡ ಹಂಸ “ಭೇದಿಸುವೆನೀ ದುರುಳನೆಂದನು ತಾ ಧನಂಜಯನನ್ನು.

“ದುರುಳ ನೀನಮ್ಮವಾಜಿಯ ಬಿಡದಿರಲು ತೋರ್ವೆನು ಕಾಲನಗರಿಯಾ’’ ಎಂದರೆ ಹಂಸ “ಮಂದಮತಿಯೆ ತಾ ಧುರದಲ್ಲಿ ಶರವೃಂದದಿ ತೋರುವೆ ಜವದಲ್ಲಿ’’ ಎಂದು ಶೌರ್ಯತೋರುತ್ತಾನೆ. ಪರಸ್ಪರರಲ್ಲಿ ಯುದ್ಧ ನಡೆದು ಹಂಸನು ಸೋಲುತ್ತ ಹೋದಂತೆ ಈಶ್ವರ ಗಣಗಳನ್ನು ನೆನೆಯುತ್ತಾನೆ. ಅವರು ಬಂದು ಹಂಸನೊಡನೆ ತಮ್ಮಿಂದೇನಾಗಬೇಕೆನ್ನಲು ಈತನನ್ನು ರಣದಲ್ಲಿ ಸೋಲಿಸಿ ತನಗೆ ಕೀರ್ತಿ ತನ್ನಿ ಎನ್ನುತ್ತಾನೆ. ಅವರು ಬಾಲರವಿಯ ಮೇಲೆ ಕತ್ತಲೆಯಂತೆ ಬರುತ್ತಾರೆ. ಅವರನ್ನು ಭೀಮ ಎದುರಿಸಿ “ನಿಮ್ಮಯ ಸ್ವಾಮಿಯನ್ನು ಬಿಡುತ ಬಂದುದ್ಯಾರೆ ನಮ್ಮಯ ಈ ಮಹಾದ್ಭುತನ ನಡೆಯ ಹತಿಯ ತಿಳಿಯದೆ’’ ಎನ್ನುತ್ತಾನೆ. ಯುದ್ಧದಲ್ಲಿ ಶಿವಗಣ ಸೋತು ಹೋಗಿ ಕುದುರೆ ಸಹಿತ ಅವರು ದ್ವಾರಕೆಗೆ ಬರುತ್ತಾರೆ.

ವಿಜಯಿಯಾಗಿ ಬಂದ ಭೀಮಾದ್ಯರನ್ನು ಕೃಷ್ಣ ಆಲಿಂಗಿಸಿ ಹೊಗಳುತ್ತಿರಲಾಗಿ ಅಲ್ಲಿಗೆ ತೊಂಬತ್ತೈದು ವರ್ಷದ ಮುದುಕನೊಬ್ಬನು ಬರುತ್ತಾನೆ. ಬ್ರಾಹ್ಮಣನು ಅರ್ಜುನನನ್ನು ವಿಧವಿಧವಾಗಿಸ್ತುತಿ ಸುತ್ತ ಭೂಮಿಗೆ ಬೀಳುವಂತಿರಲು ಅರ್ಜುನನು “ಎಲೆವೃದ್ಧ ಭಯವೇಕೆ ನುಡಿವುದೆನ್ನೊಡನೆಲ್ಲ ಸಲಹುವೆ ತಾನೆನಲು’’ ಆತ ಕೊಟ್ಟ ಮಾತಿಗೆ ನೀನು ತಪ್ಪುವನಲ್ಲೆಂದು ನಟ್ಟಗೆ ನಿನ್ನಡೆಗೆ ಬಂದೆ’’ ಎಂದು ಕೃಷ್ಣ ರಾಮಾದ್ಯರಿಗಿಂತ ಅರ್ಜುನನೇ ಶ್ರೇಷ್ಠ ಎನ್ನುತ್ತಾನೆ. ತನ್ನದು ಕೃಷ್ಣ ರಾಮರ ಪರಿಯಲ್ಲ, ಏನೆಂದು ಹೇಳು ಎನ್ನಲು ತನ್ನ ಕಥೆಯನ್ನು ಹೇಳುತ್ತಾನೆ.

“ಇದಕೇಳಿ ವಿಪ್ರನು ಮುದಗೊಂಡು ಬೆಸಗೊಂಡ ಮುದುಕನೆನಗೆ ಮೂರನೆ ಮದುವೆಯ ಸತಿಯೊಳು ಮೂರು ಬಾಲರು ಪುಟ್ಟಲದರೊದರ್ಯಾರ‍್ಗೆ ಕಾಣೇ’’ ಆದ್ದರಿಂದ ನಿನ್ನ ಭಾಷೆ ಖರೆ ಎಂದು ಜಗದಲ್ಲೇ ಪ್ರಸಿದ್ಧ, ಈಗ ನೀನು ತಪ್ಪಿ ಅಪಹಾಸ್ಯಕ್ಕೆ ಎಡೆಯಾಗಬೇಡ ನನ್ನ ಹೆಂಡತಿಗೆ ನಾಲ್ಕನೆಯ ಬಸುರು ಈಗ ಹತ್ತನೆಯ ಮಾಸ ಗರ್ಭವನೆ ಸಲಹು ಎನ್ನುತ್ತಾನೆ. ಗರ್ಭವನ್ನು ಯಾರು ಕಳದಹಾಗೆ ರಕ್ಷಿಸುತ್ತೇನ್ನುತ್ತ ಏಳಲು ಕೃಷ್ಣನು ನಗುತ್ತ ನರವೀರನೆ ನಿನಗೆ ಸಾಧ್ಯವೊ ಈ ಮಾತು ಉಳಿಸಿಕೊಳ್ಳಲು ಮಾತು ಕೊಟ್ಟು ತಪ್ಪಬಾರದೆಂದು ನಾನು ನಿನಗೆ ಸಾರಿ ಹೇಳಿದೆ. ಈಗ ಹೋಗು ಎನ್ನುತ್ತಾನೆ. ಅರ್ಜುನ ಈ ಗರ್ಭವನ್ನು ರಕ್ಷಿಸಲಾಗದಿದ್ದರೆ ಅಗ್ನಿಗೆ ಬಿದ್ದು ಸಾಯುತ್ತೇನೆ ಅನ್ನುತ್ತಾನೆ. ಇದರಿಂದ ಕೃಷ್ಣ ಮೆಚ್ಚಿಗೆ ವ್ಯಕ್ತಪಡಿಸಲು ಬ್ರಾಹ್ಮಣ ಸಂತೋಷದಲ್ಲಿ ತೇಲುತಿರಲಾಗಿ ಅರ್ಜುನ ಶಸ್ತ್ರಸಹಿತ ರಥವೇರಿ ವೃದ್ಧನನ್ನು ಹತ್ತಿಸಿಕೊಂಡು ತೆರಳುತ್ತಾನೆ.

ಅರ್ಜುನನು ವಿಪ್ರನ ಮನೆಯಲ್ಲಿ ಪೀಠದಲ್ಲಿ ಕುಳಿತಿರುತ್ತಾನೆ. ಆಗ ಮುದುಕನು ತನ್ನ ಮಡದಿಯನ್ನು ಕರೆಯಲು ಅವಳು ನೆಲಕ್ಕೆ ಕೈಕೊಟ್ಟು ಬುಸುಗುಡುತ್ತ ಏಳುತ್ತ ಮೂರು ಗರ್ಭಧರಿಸಿದರೆ ಮಕ್ಕಳನ್ನು ಕಾಣಲಿಲ್ಲ ಬರಿದೆ ಪ್ರಾಯ ಹೋಯಿತು. ಗರ್ಭವನ್ನು ರಕ್ಷಿಸುವವರನ್ನು ನೀನು ಗುರುತಿಸಲಿಲ್ಲ ಎಂದು ದುಃಖಿಸಲು ಮುದುಕ ನೋಡು ಕೃಷ್ಣನ ಭಾವವನ್ನೇ ಕರೆತಂದಿದ್ದೇನೆ. ಈತ ಮಹಾಶೂರ, ದುಃಖಿಸಬೇಡ ಎಂದರೆ, ಬ್ರಾಹ್ಮಣ ಹೆಂಡತಿ ರಾಮಕೃಷ್ಣರಿಗೆ ಅಸಾಧ್ಯವಾಗುವ ಕೆಲಸ ಈತನಿಂದಾಗುವುದೇನು ಎಲ್ಲ ವ್ಯರ್ಥ ಎನ್ನಲು ಅರ್ಜುನ ಸಿಟ್ಟುಗೊಂಡು ನಿನ್ನ ಸೊಕ್ಕಿನ ಮಾತು ಸಾಕು ಕೃಷ್ಣ – ರಾಮರೆ ತಡೆದರೂ ರಕ್ಷಿಸುತ್ತೇನೆ ಎಂದು ಹೇಳುತ್ತಾನೆ.

ವಿಪ್ರಮಡದಿಗೆ ಹಡೆವ ಬೇನೆ ಶುರುವಾಗುತ್ತದೆ. ಪುತ್ರರಿಲ್ಲದ ತಮಗೆ ಮುಕ್ತಿ ಇಲ್ಲವೆಂದು ದುಃಖಿಸುತ್ತಾಳೆ. ದೇವರೇ ಹೇಗಾದರೂ ಗರ್ಭ ರಕ್ಷಿಸೆಂದು ಗೋಳಿಡುತ್ತಾಳೆ. ಹಡೆವ ಹೊತ್ತು ಬಂದಿತೆಂದು ತಿಳಿಸಲು ಅರ್ಜುನನು “ಪಂಜರವನು ಮಾಡಿ ಸರಳ ಪುಂಜದಿಂದ ಗೃಹಕೆ ಸುತ್ತು ಅಂಜದಂತೆ ಧೈರ್ಯಹೇಳಿ’’ ಕಾಯುತ್ತಿರುವಾಗ ಅವಳು ಹಡೆಯುತ್ತಾಳೆ. ಆದರೆ ಕೃಷ್ಣ ಭಟರು ಮಾಯದಿಂದ ಅದನ್ನು ಒಯ್ದುಬಿಡುತ್ತಾರೆ. ಒಯ್ದವರು ಆಕಾಶದಲ್ಲಿ ನಿಂತು ಗರ್ಜಿಸುತ್ತಾರೆ. ಅರ್ಜುನನ ಬಾಣ ವ್ಯರ್ಥವಾಗುತ್ತದೆ.

ಆಗ ಬ್ರಾಹ್ಮಣ “ಹರಿಯ ಭಾವ ನೀನೆನುತ್ತ ಕರೆಯಲೆನಗೆ ಫಲವಿದೇನೊ’’ ಎಂದು ಖಾಂಡವವನ ದಹನದ ಸಂದರ್ಭದಲ್ಲಿ ಸುರರನ್ನೇ ಗೆದ್ದ ವೀರನೇ ನೀನಾ ಮುಂತಾಗಿ ಮೂದಲಿಸುತ್ತಾನೆ. ಇದರಿಂದ ಲಜ್ಜೆಗೊಂಡ ಪಾರ್ಥ ನಿಮ್ಮ ಮಗುವನ್ನು ಮೂರು ಲೋಕದಲ್ಲಿ ಎಲ್ಲೆ ಇದ್ದರೂ ತಂದೊಪ್ಪಿಸುವುದಾಗಿ ಹೇಳುತ್ತಾನೆ.

ಅರ್ಜುನನು ಕುಶಿಕನು ದಶರಥ ಮಕ್ಕಳಿಗೆ ಉಪದೇಶಿಸಿದ ಮಂತ್ರವನ್ನು ಜಪಿಸಿ, ಆಕಾಶಕ್ಕೆ ಏರಿ ಹೋದನು. ಎಲ್ಲಿಯೂ ಮಗುವು ಸಿಕ್ಕಲಿಲ್ಲವೆಂದು ತಿರುಗಿಬಂದು ವಿಪ್ರನಿಗೆ ಹೇಳಲು ಆತ ಧೂತರ್ಜಟಿಯಂತೆ ಆರ್ಭಟಿಸಿ ನಿಂದಿಸುತ್ತಾನೆ. ಅರ್ಜುನ ಬ್ರಾಹ್ಮಣನನ್ನು ಕರೆದುಕೊಂಡು ಕೃಷ್ಣನಲ್ಲಿಗೆ ಬರುತ್ತಾನೆ. ಅಲ್ಲಿ ಬಂದರೂ ವಿಪ್ರ “ಹರಿಯ ಬಳಿಗೆ ಬಂದುದಾಯ್ತು ತರಳನನ್ನು ತೋರಿಸೆಯಾ’’ ಮಾತುಕೊಟ್ಟು ತಪ್ಪುವ ನೀನು ಮೋಸಗಾರ ಇತ್ಯಾದಿ ನಿಂದಿಸುತ್ತಾನೆ.

ಇದನ್ನು ಕೇಳಿ ಅರ್ಜುನನ್ನು “ಸರಳ ಪಂಡಿತನ್ನ ಸೇರಿ ವರಮಾಹಾಸ್ತ್ರವನ್ನು ಕಲಿತೇ ಪರಮವಿದ್ಯವಿಂತು ವ್ಯರ್ಥ’’ ಎಂದು ಚಿಂತಿಸುತ್ತಾ “ತಂಗಿಯನ್ನು ಕೊಟ್ಟು ತನ್ನ ಭಂಗನೊಳ್ಪುದೇನೋ ರಂಗ ದ್ವಿಜಗೆ ನುಡಿದ ತುಂಗಭಾಷೆ ಸಲಿಸೊ’’ ಎಂದು ಬೇಡಿಕೊಳ್ಳುತ್ತಾನೆ. ಅಷ್ಟಕ್ಕೆ ನಿಲ್ಲದೆ ಪಂಥದಂತೆ ಜೀವಕೊಡಲು ಅಗ್ನಿಕುಂಡ ರಚಿಸುತ್ತಾನೆ. ಆಗ ಕೃಷ್ಣ ಅವನನ್ನು ಬಿಗಿದಪ್ಪಿ ಸಂತೈಸುತ್ತಾನೆ. “ಬರಿದೆ ಶೋಕಿಸಲೇಕೆ ಬಿಡು’’ ಎಂದು ರಥವನ್ನು ತರಿಸಿ ಬ್ರಾಹ್ಮಣನನ್ನು ಕೂಡ್ರಿಸಿಕೊಂಡು ಅರ್ಜುನನೊಡನೆ ಸಾರಥ್ಯವನ್ನು ಮಾಡಲು ಹೇಳುತ್ತಾನೆ.

ಏಳು ಸಮುದ್ರವನ್ನು ಸ್ವರ್ಣಭೂಮಿಯಲ್ಲಿ ಚರಿಸುತ್ತ ವಜ್ರಾದಿಲೇಪಿತ ದೇಶಗಳನ್ನು ಕೃಷ್ಣ ತನ್ನ ಚಕ್ರದಿಂದ ಕತ್ತರಿಸಿ ತೋರಿಸಿದ, ನೀರಿನ ರಾಶಿಯನ್ನು ತೋರಿಸಿದ, ಅದನ್ನು ದಾಟಿ ಮಣಿಯೋಜ್ವಲ ಆಸನವನ್ನು ಕಂಡು ಕೃಷ್ಣ ತನ್ನ ಮನೆಯನ್ನು ಹೊಕ್ಕು ಅದ್ವಿತೀಯವಾದ ದೃಶ್ಯವನ್ನು ತೋರಿದಾಗ ಎಲ್ಲರೂ ಬೆರಗಾದರು ಇದನ್ನು ಕಂಡು ಅರ್ಜುನನು ತನ್ನ ಅಪರಾಧವನ್ನು ಕ್ಷಮಿಸಬೇಕೆಂದು ಕೇಳಿಕೊಂಡ ತನ್ನ ಅಹಂಕಾರವನ್ನು ಬಿಟ್ಟು ಕೃಷ್ಣನನ್ನು ಭಜಿಸಲಾಗಿ ಹರಿಯ ಚಾರಕ ವಿಪ್ರನಿಂದ ಅಪಹರಿಸಲ್ಪಟ್ಟ ನಾಲ್ಕು ಶಿಶುವನ್ನು ತರಲು ಕೃಷ್ಣನು ತನ್ನ ನಾಲ್ಕು ಕೈಯಲ್ಲಿ ಹಿಡಿದು ತಂದುಕೊಟ್ಟು ಪಾರ್ಥನ ಭಾಷೆಯನ್ನು ಸಲ್ಲಿಸಿದನು. ಅದನ್ನು ಕಂಡು ವಿಪ್ರನು ಅರ್ಜುನನ್ನು ಹೊಗಳುತ್ತಾನೆ.

ಅರ್ಜುನನು ವಿಸ್ಮಯಗೊಂಡು ಈ ತರಳರು ಯಾರು ಭೂಮಿಗೆ ಬರಲು ಕಾರಣವೇನು ಎಂದು ಕೇಳುತ್ತಾನೆ. ಕೃಷ್ಣ ಅವರು ನನ್ನ ದ್ವಾರಪಾಲಕರೇ, ಜಗತ್ತಿಗೆ ತಾನೇ ಏಕೈಕ ವೀರನೆಂದು ತಿಳಿದ ನಿನ್ನ ಅಹಂಕಾರವನ್ನು ಅಳಿಸಲು ಹೂಡಿದ ತನ್ನ ಲೀಲೆ ಇದು ಎನ್ನುತ್ತಾನೆ. ‘ಆವಾವಕಾಲದಲ್ಲಿ ನೋವುಬಾರದ ತೆರದಿ ಶ್ರೀವತ್ಸ ಸೇವಕನತಾರಯದಿ ಕಾಯುವಂಥ ಶ್ರೀ ಕೃಷ್ಣನ ಹೊಗಳಲು’ ಇದು ಸಾಧನವಾಗಿದೆ.

ಶ್ರೀಕೃಷ್ಣನು ತನ್ನ ಮಡದಿಯನ್ನು ಕೂಡಿ ಯಜ್ಞಕ್ಕೆ ಕುಳಿತ ಮುಹೂರ್ತದಲ್ಲಿ ದೇವತೆಗಳು ಹೂಮಳೆಯ ಸುರಿಸಿದರು. ವ್ಯಾಸನೇ ಕುದುರೆಗೆ ಪ್ರೋಕ್ಷಣೆಯ ಮಾಡಿದನು. ಅರ್ಜುನನು ಕುದುರೆಯು ಮುಕ್ತಿಪಾಲಿಸೆಂದು ಕೇಳುತ್ತದೆ ಎನ್ನುತ್ತಾನೆ. ನಿಶ್ಚಯವಾಗಿ ಸಾಯುಜ್ಯ ನೀಡುವೆನು ಎಂದು ಕೃಷ್ಣ ಎನ್ನುತ್ತಾನೆ. ಕುದುರೆಯನ್ನು ಛೇದಿಸಲಾಗುತ್ತದೆ. ಅದರ ಜೀವವು ಆಕಾಶದಲ್ಲಿ ಹೋಗುವುದನ್ನು ಕಂಡು ಎಲ್ಲರೂ ಬೆರಗುಗೊಳ್ಳುತ್ತಾರೆ. ಅದರ ಶರೀರವನ್ನು ತುಂಡುಮಾಡಿ ಹೋಮಿಸುತ್ತಾರೆ. ಹಾಲು-ಮೊಸರನ್ನು ಹೋಮಿಸಿ ಸಾಮಗಾನವ ಪಠಿಸುವಾಗ ಅಗ್ನಿಯು ಅದನ್ನೆಲ್ಲ ಕೊಂಡು ದೇವತೆಗಳಿಗೆ ಸಲ್ಲಿಸಿದನು. ಹೀಗೆ ಯಜ್ಞವು ಪೂರ್ತಿಯಾಗುವ ಸಂದರ್ಭದಲ್ಲಿ ದಂತವಕ್ರ ಎಂಬ ರಾಕ್ಷಸನು ಭೋರಿಡುತ ಶಸ್ತ್ರವ ಬೀರುತ್ತ ಬಂದನು.

ತನ್ನನ್ನು ಗೆಲ್ಲದೆ ಯಜ್ಞಹುಸಿ ಎಂದು ಮುಂದಾಗಲು ಕೃಷ್ಣನಿಂದ ಹತನಾಗಲು ವಿಡೂರಥನು ಯುದ್ಧಕ್ಕೆ ಬಂದನು. ಅವನನ್ನು ಕೃಷ್ಣ ಜಯಿಸಿದ. ಸುರರೆಲ್ಲ ಜಯಜಯವೆನ್ನಲು ಎಲ್ಲರೂ ಸಂತೋಷಪಟ್ಟರು. ಹೀಗೆ ಶ್ರೀಕೃಷ್ಣದಿನಾಶ್ವಮೇಧವು ಪೂರ್ತಿಯಾಗುತ್ತದೆ.

* * *