‘ಕೃಷ್ಣಚರಿತೆ’ ಪಾತಿಸುಬ್ಬ ಅವರ ಪ್ರಸಂಗಗಳಲ್ಲಿ ಪ್ರಾತಿನಿಧಿಕ ಎನ್ನಬಹುದು. ರಂಗತಾಂತ್ರಿಕತೆಯ ದೃಷ್ಟಿಯಿಂದ ನೋಡಿದಾಗಲೂ ಬಹಳ ಯಶಸ್ವೀಕೃತಿ. ಇಲ್ಲಿ ಯಾವ ದೃಶ್ಯವೂ ತೀರಾ ನೀಳವಾಗಿ ಬೇಸರತರುವಂತೆ ಇಲ್ಲ. ಘಟನೆಗಳು ಛಕ್ ಛಕ್ ಅಂತ ಬದಲಾಗುತ್ತ ಹೋಗುತ್ತವೆ. ಮತ್ತು ಅವು ಒಂದಕ್ಕೊಂದು ಕೊಂಡಿಯನ್ನು ಸಿಕ್ಕಿಸಿಕೊಂಡು ಬೆಳೆಯುತ್ತವೆ. ಘಟನೆಗಳು ವೈವಿಧ್ಯದಿಂದ ಕೂಡಿವೆ. ಕಂಸನ ಮೆರವಣಿಗೆಯ ದೃಶ್ಯದಲ್ಲಿ ವಿಧಿಯ ಸವಾಲೊಂದು ಆತನಿಗೆ ಆಘಾತಕಾರಿಯಾಗಿ ಬಂದೊದಗುತ್ತದೆ. ಈ ವಿಸ್ಮಯವನ್ನು ಆತ ಕ್ರೌರ್ಯದಿಂದ ಎದುರಿಸುವ ಛಲ ತೆಗೆದುಕೊಳ್ಳುತ್ತಾನೆ. ಇದು ಮುಂದಿನ ದೃಶ್ಯದಲ್ಲಿ ಕರುಣೆಗೆ ಅನುವು ಮಾಡಿಕೊಡುತ್ತದೆ. ದೇವಕಿಯ ಶೋಕವನ್ನು ಮತ್ತು ದೃಶ್ಯದಲ್ಲಿಯ ನೀಳತೆಯನ್ನು ಹಗುರಗೊಳಿಸಲೆಂಬಂತೆ ಕೊರವಂಜಿ ಬರುತ್ತಾಳೆ. ಮುಂದೆ ಇನ್ನೊಂದು ದೃಶ್ಯ, ಕೃಷ್ಣಶಿಶುವನ್ನು ಒಯ್ಯುವಾಗಿನ ಸಂದರ್ಭ ಮಳೆ, ನಾಗರಾಜ ಹೆಡೆಬಿಚ್ಚಿ ಕೊಡೆಹಿಡಿಯುವುದು ಇತ್ಯಾದಿ ದೃಶ್ಯರಂಗದ ಮೇಲೆ ತರಲು ಆಗಲಾರದು. ಆದರೆ ಅದನ್ನು ಶಬ್ದಚಿತ್ರವನ್ನಾಗಿಸುವಲ್ಲಿ ಯಶಸ್ವಿಯಾಗುತ್ತದೆ.

ಕೃಷ್ಣನ ಬಾಲಲೀಲೆ ಸಂಸಾರಿಗರನ್ನು ಮನಸೂರೆಗೊಳ್ಳುವ ದೃಶ್ಯ ಇಲ್ಲಿ ನಾಟಕೀಯತೆಯಿಂದ ಮುಪ್ಪುರಿಗೊಂಡಿದೆ. ಬಾಲ ಕೃಷ್ಣನನ್ನು ಮನೆಯಲ್ಲಿ ನೋಡಿದ ಗೋಪಿಯರ ವಾತ್ಸಲ್ಯಮಯವಾದ ಮಾತನ್ನು ಗಮನಿಸಬಹುದು.

“ಯಾರೆಬಂದವರು ಇಲ್ಲಿಗೆ ಕಳ್ಳ ರ‍್ಯಾರೆ ಬಂದವರು …. ಸಿಕ್ಕದೊಳಿರಿಸಿದ ಮಡಕೆಗಳೊಳಗೆ ಕಾಡ್ಬೆಕ್ಕಿನ ಹಾಗೆಲ್ಲ ಹುಡುಕಾಡುತ್ತ …’’

ಇಲ್ಲಿ ‘ಸಿಕ್ಕದ ಮೇಲೆ’ ‘ಕಾಡ್ಬೆಕ್ಕಿನಂತೆ’ ಮುಂತಾದ ಪ್ರಯೋಗ ಗ್ರಾಮೀಣ ಪ್ರದೇಶದ ವಾತಾವರಣವನ್ನು ಸೆರೆಹಿಡಿಯುವುದು ಮಾತ್ರವಲ್ಲ ಹಾಲು – ಹೈನ ಸಂಸ್ಕೃತಿಯನ್ನು ಸಾಕಾರಗೊಳಿಸುತ್ತದೆ. ಅದನ್ನು ನೋಡಿದಂಥವರಿಗೆ ಇದು ಪ್ರೀತಿಯ ಬುಗ್ಗೆಯನ್ನು ಚಿಮ್ಮಿಸುತ್ತದೆ. (ಈಗ ಸಿಕ್ಕ ಮಾಯವಾಗಿದೆ – ಆದ್ದರಿಂದ ಕಾಡ್ಬೆಕ್ಕು – ಹಾಲುಕುಡಿದು ಕೊಬ್ಬಿದ ಬೆಕ್ಕು – ಮಾಯವಾಗಿದೆ). ಇಲ್ಲಿಯ ಸಂವಾದ ಗ್ರಾಮೀಣವಾಗಿರುವುದಕ್ಕೂ ಯಕ್ಷಗಾನ ಗ್ರಾಮಗಳಲ್ಲೇ ಬದುಕಿದ್ದಕ್ಕೂ ಆಂತರಿಕ ಸಂಬಂಧವೊಂದು ಮಿಂಚುತ್ತದೆ.

ಗೋಪಿಯರು ಬಾಲಕೃಷ್ಣನನ್ನು ನೀನು ಯಾರೆಂದು ವಿಚಾರಿಸಿದಾಗ ತಾನು ಸುಂಕದವನು ಎಂದು ಹೇಳುತ್ತ “ಕೊಟ್ಟು ಪೋಗೆನ್ನ ಸುಂಕವ | ಕಣ್ಣ | ಬಿಟ್ಟರಂಜುವನಲ್ಲ ದಿಟ್ಟ ಹೆಂಗಳಿರ’’ : ತುಂಬಯಶಸ್ವಿಯಾಗಿ ಮುದ್ದು, ಮುಗ್ಧತೆ, ವಾತ್ಸಲ್ಯವನ್ನು ದೃಶ್ಯೀಕರಿಸುತ್ತದೆ.

ಹಾಗೆಯೇ ಸಂಭಾಷಣೆಯ ಚುರುಕು ಕೂಡ ಇಲ್ಲಿದೆ. ಬಾಲಕೃಷ್ಣನ ಮೇಲೆ ದೂರು ಹೇಳುವ ಗೋಪಿಕೆಯರು ಮತ್ತು ಯಶೋದೆಯ ಮಧ್ಯೆ ನಡೆಯುವ ಮಾತುಕತೆ ಮನಸೂರೆಗೊಳ್ಳುತ್ತದೆ. ಬಾಲಕೃಷ್ಣ “ನೀರು ತರಲು ಪೋದ | ಈ ಸುದತಿಯ | ದಾರಿಯಡ್ಡವ ಕಟ್ಟಿದ | ನಾರಿ ಹೇಳಿದಕೇನು ಬೆಲೆ ಕೊಟ್ಟೆಯೆನುತುಟ್ಟ | ಸೀರೆಯನೆಗದೋಡಿದ |’’ (ಎಂಥ ತುಂಟು! 🙂 ಎಂದು ಕೇಳಿದ. ಬೆರಗಾಗಿ ಯಶೋದೆ ಆರೇಳುವರ್ಷದ ಬಾಲಕ ಸೀರೆ ಹಾರಿಸಿದರೇನಾಯಿತು?’’ ಎಂದು ಮುಗುಳುನಗುತ್ತಾಳೆ.

ಭಾಷೆ ತೀರಾ ಪ್ರೌಢವೂ ಅಲ್ಲದ ತೀರಾ ಸಾಮಾನ್ಯವೂ ಅಲ್ಲದ ರೀತಿಯಲ್ಲಿ ಹದಗೊಂಡಿದೆ. ಈ ಎಲ್ಲ ಗುಣಗಳಿಂದ ತನ್ನ ಕಲಾ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

. ಯಾದವಾಭ್ಯುದಯ

ಇದರಲ್ಲಿ ಎರಡು ಸಂಧಿಗಳಿವೆ. ಯಾದವರ ಅಭ್ಯುದಯವನ್ನು ಈ ಕಥಾಭಾಗ ನಿರೂಪಿಸುತ್ತದೆ. ಕಥಾಭಾಗ ನೀಳವಾಗಿದ್ದರೂ ಬೇಸರಬರದಂತೆ ಕತೆಯ ಓಟವಿದೆ. ಪ್ರಾರಂಭದಲ್ಲಿಯೇ ಕೃಷ್ಣ ಬಲರಾಮನರ ಸಾಹಸ ವ್ಯಕ್ತವಾಗುತ್ತದೆ. ಬಲರಾಮ ಒಟ್ಟೊಟ್ಟಿಗೆ ಇರುವನಾದರೂ ಭಾಗವತದಲ್ಲಿ ಕೃಷ್ಣನೆ ಕೇಂದ್ರಬಿಂದು. ಅದಕ್ಕನುಸಾರವಾಗೇ ಇಲ್ಲಿನ ನಿರೂಪಣೆಯಿದೆ.

ಇಲ್ಲಿಯ ಒಂದು ವಿಶಿಷ್ಟತೆಯೆಂದರೆ ಕೃಷ್ಣನ ಬಾಲ್ಯವನ್ನು ಹಿನ್ನೋಟ (ಪ್ಲಾಶಬ್ಯಾಕ್)ದಿಂದ ನಿರೂಪಿಸುವುದು. ಉದ್ಧವನು ಕೃಷ್ಣನ ಆದೇಶದಂತೆ ನಂದಗೋಕುಲಕ್ಕೆ ಹೋದಾಗ ಕೃಷ್ಣನ ಬಾಲ್ಯ ಪುನಾಸೃಷ್ಟಿಯಾಗುತ್ತದೆ. ಈ ಭಾಗ ಮನೋಹರವಾಗಿದೆ. ಯಶೋದೆ “ಬಾಲನೊಂದಿಗೆ ಬಂದಪ | ಯದುಕುಲದೀಪ’’ ಬಹಳ ಸಾರ್ಥಕವಾದ ರೂಪಕ. “ಮತ್ತೊಮ್ಮೆ ಮೊಲೆಗುಡಿದು | ದಣಿಯುವ ಮೊದಲತ್ತ ವೋದರೆ ನಾನಂದು | ಸುತ್ತಲೂ ಚೆಲ್ಲುತ್ತ ಮೊಸರನು …. | ಮುಂತಾದ ಮಾತುಗಳು ಅವಳ ತಾಯ್ತತನವನ್ನು ಪುನಃ ಅನುಭವಕ್ಕೆ ತಂದುಕೊಡುವಲ್ಲಿ ಸಾರ್ಥಕವಾಗಿದೆ. ಮೊದಲ ಸಂಧಿಯ ಕೊನೆಯಲ್ಲಿ ಮಂಡಿಸುವ ತತ್ವಜ್ಞಾನಕ್ಕೆ ಇದು ಪೂರಕವಾಗಿದೆ.

ಎರಡನೆಯ ಸಂಧಿಯಲ್ಲಿ ಮೂರು ಸಲ ಮಾಗಧನ ದಾಳಿಯ ಘಟನೆಗಳಿವೆ. ಘಟನೆಗಳು ಪುನರ್ ಸಂಭವಿಸುವಲ್ಲಿ ಬಲವಾದ ಕಾರಣಗಳಿಲ್ಲ. ಹಾಗೆಯೇ ವರ್ಣನೆಗಳ ಮಧ್ಯ ಬೇರೆ ದೃಶ್ಯಗಳಿಲ್ಲದ್ದರಿಂದ ವರ್ಣನೆಯ ಏಕತಾನತೆ ಉಂಟಾಗಿದೆ. ಆದರೆ ಯಾದವರ ಅಭ್ಯುದಯಕ್ಕೆ ಪೂರಕವಾಗಿದೆ.

. ರುಗ್ಮಿಣೀ ಸ್ವಯಂವರ

ಪದ್ಯಗಳು ಸುಲಭಗ್ರಾಹ್ಯವಾಗಿವೆ. ಸಂದರ್ಭವನ್ನು ಸ್ಫುಟವಾಗಿ ನಿರ್ಮಿಸುವುದರಲ್ಲಿ ಯಶಸ್ವಿಯಾಗಿದೆ. ಘಟನೆಗಳು ಹೆಚ್ಚು ವಿಲಂಬಿಸಿ ಬೇಸರ ತರುವುದಿಲ್ಲ. ಅಂಗಕತೆಗಳು ನಿಯಮಿತ ಆಗುವುದರಿಂದ ಕಥೆಯ ಓಟ ನೇರವಾಗಿದೆ. ವೀರ, ವಿರಹ, ವಾತ್ಸಲ್ಯ, ಭಕ್ತಿ ಹೀಗೆ ಭಾವಗಳು ಉಚಿತವಾಗಿ ಪರಿಪೋಷಿಸಿದೆ. ಭೀಷ್ಮಕನ ಮನಸ್ಸಿನಗೆ ವಿರುದ್ಧವಾಗಿ ಅವನ ಮಗ ರುಗ್ಮ ಶಿಶುಪಾಲನಿಗೆ ರುಗ್ಮಿಯನ್ನು ಮದುವೆ ಮಾಡಬಯಸುವುದು, ರುಗ್ಮಿ ವಿರಹ, ಬ್ರಾಹ್ಮಣನಿಂದ ಸಂದೇಶ, ಕೃಷ್ಣ ಬಲರಾಮರು ಬರುವುದು, ರುಗ್ಮಿ ಪೂಜೆಗಾಗಿ ದೇವಾಲಯಕ್ಕೆ ಹೋಗುವುದು, ಕೃಷ್ಣ ಅವಳನ್ನು ರಥದ ಮೇಲೆ ಕೂಡ್ರಿಸಿಕೊಳ್ಳುವುದು, ಶಿಶುಪಾಲ, ಮಾಗಧ, ರುಗ್ಮರು ಬಲರಾಮ-ಕೃಷ್ಣರೊಡನೆ ಯುದ್ಧ ಮಾಡಿ ಸೋಲುವುದು ಹೀಗೆ ಪಟ್ ಪಟ್ ಅಂತ ಘಟನೆಗಳು ಒಂದರಿಂದ ಒಂದಕ್ಕೆ ಹಾರುತ್ತ ಬೆಳೆಯುತ್ತ ನಡೆಯುತ್ತವೆ. ನಿರೂಪಣೆಯ ದೃಷ್ಟಿಯಿಂದಲೂ, ರಂಗಪ್ರಯೋಗ ದೃಷ್ಟಿಯಿಂದಲೂ ಯಶಸ್ವೀ, ರಂಜನೀಯ ‘ಪ್ರಸಂಗ’.

. ಶ್ರೀಕೃಷ್ಣ ವಿವಾಹ

‘ಶ್ರೀ ಕೃಷ್ಣ ವಿವಾಹ’ದ ವಿಶಿಷ್ಟತೆ ಇರುವುದು ಇದರ ವಿಧಾನದ ಹೊಸತನದಲ್ಲಿ. ಈ ಪ್ರಸಂಗವನ್ನು ನಾಟಕದ ಭಾಷೆಯಲ್ಲಿ ಹೇಳುವುದಾದರೆ ಏಕಾಂಕಗಳ ಸಂಯೋಜನೆ. ಅಂದರೆ ಇದರಲ್ಲಿ ಶ್ರೀಕೃಷ್ಣನ ನಾಲ್ಕು ವಿವಾಹಗಳ ಕತೆ ಇವೆ. ಪ್ರತಿಯೊಂದು ಮದುವೆಯೂ ಯುದ್ಧದ ಮುಖಾಂತರವೇ ನೆರವೇರುತ್ತದೆ. ಹಾಗೆಯೇ ಪ್ರೇಮ-ವಿರಹಗಳಿವೆ. ತಂತ್ರ ಪ್ರತಿತಂತ್ರಗಳಿವೆ. ಮತ್ತು ಪ್ರತಿಯೊಂದೂ ಕೃಷ್ಣ ಮಹಿಮೆಯನ್ನು ಸಾರುವಂತಹದು.

ಮೊದಲನೆಯದು ರುಕ್ಮಿಣಿಯೊಡನೆಯ ವಿವಾಹ. ಇದು ಮುಗಿದ ನಂತರದ ಕತೆ ಇದಕ್ಕೆ ಸಂಬಂಧವಿಲ್ಲ. ಅದು ಸ್ಯಮಂತಕ ಮಣಿಯೋಪಾಖ್ಯಾನ ಅಂದರೂ ಸರಿ. ಒಟ್ಟಾರೆ ಸತ್ರಾಜಿತನಿಗೆ ಸಂಬಂಧಿಸಿದ್ದು, ಇದರ ಅಂತ್ಯದಲ್ಲಿ ಸತ್ಯಭಾಮೆಯ ವಿವಾಹ. ಮೂರನೆಯದು ಮತ್ತೇ ಬೇರೆ. ಅದು ನರಕಾಸುರನ ಸೆರೆಮನೆಯಲ್ಲಿರುವ ಹದಿನಾರು ಸಾವಿರ ತರುಣಿಯರನ್ನು ಹೆಂಡತಿಯಾಗಿ ಸ್ವೀಕರಿಸುವುದು. ನಾಲ್ಕನೆಯದು ಮತ್ತು ಕೊನೆಯದು ವಿಂದ-ಅನುವಿಂದ ಎಂಬುವರ ತಂಗಿ ಮಿತ್ರವಿಂದೆಯ ವಿವಾಹಕ್ಕೆ ಸಂಬಂಧಿಸಿದ್ದು, ಕೊನೆಗೆ ಮಿತ್ರವಿಂದೆ ಕೃಷ್ಣನ ವಿವಾಹ.

ಇದನ್ನು ‘ಏಕಾಂಕ ಪ್ರಸಂಗ’ವನ್ನಾಗಿ ಯಶಸ್ವಿಯಾಗಿ ಆಡಬಹುದಾಗಿದೆ. ಮಂಗಳ ಮತ್ತು ಪೀಠಿಕಾ ಪದ್ಯಗಳನ್ನು ಭಾಗವತ ಹೊಂದಿಸಿಕೊಂಡುಬಿಟ್ಟರೆ ಒಂದು ತಾಸಿನಿಂದ ಎರಡು ತಾಸಿನ ತನಕ ಆಡಬಹುದಾದ ಇಲ್ಲಿಯ ಪ್ರತಿಯೊಂದು ಘಟನೆಯೂ ಪ್ರಯೋಗಾರ್ಹವಾಗಿದೆ. ಮತ್ತು ಪ್ರತಿಯೊಂದು ಘಟನೆಯೂ ಪರಿಪೂರ್ಣವಾಗಿದೆ. ಇಂದಿನ ಸಮಾರಂಭ, ಟಿ.ವಿ. ಪ್ರದರ್ಶನದ, ತಾಳಮುದ್ದಳೆ ಇಂಥ ಅನೇಕ ಸಂದರ್ಭದಲ್ಲಿ ಅರ್ಧತಾಸಿನಲ್ಲೇ ಪ್ರಯೋಗಿಸಬಹುದು. ರಂಜನೀಯವಾಗಿದೆ. ‘ಪ್ರಸಂಗ’ವನ್ನು ಊನವಿಲ್ಲ ಎಂಬಂತೆ ಪ್ರದರ್ಶಿಸಬಹುದು.

. ಜಾಂಬವತೀ ಕಲ್ಯಾಣ ಸತ್ಯಭಾಮಾ ಪರಿಣಯ

೨೦೦೪ರಲ್ಲಿ ಪಾದೆಕಲ್ಲು ವಿಷ್ಣುಭಟ್ಟರು ಸಂಪಾದಿಸಿದ ‘ಕಲ್ಯಾಣ ಪ್ರಸಂಗಗಳು’ ‘ಪ್ರಸ್ತುತ ಸಂಕಲನ’ ಎಂಬ ಪ್ರವೇಶಿಕೆಯಲ್ಲಿ ‘ಜಾಂಬವತೀ ಕಲ್ಯಾಣ ಮತ್ತು ಸತ್ಯಭಾಮಾ ಪರಿಣಯ’ ಮೂರನೆಯ ಮುದ್ರಣ ೧೯೭೨ ಎಂದಿದೆ. ಈ ಸಂಪಾದನೆಯಲ್ಲಿ ಒಂದು ಹೆಚ್ಚಿನದಾದ ವೈಶಿಷ್ಟ್ಯವಿದೆ. ಆ ವೈಶಿಷ್ಟ್ಯವನ್ನು ಅವರು ಹೀಗೆ ಬರೆಯುತ್ತಾರೆ. “ಹಿಂದೆ ಪಠ್ಯಭಾಗವನ್ನು ಮುದ್ರಿಸುವಾಗ ಛಂದಸ್ಸಿಗನುಗುಣವಾಗಿ ವಿಂಗಡಿಸದೆ ಉದ್ದಕ್ಕೆ ಮುಂದುವರಿಯುವಂತೆ ಮುದ್ರಿಸುವುದು ಪದ್ಧತಿಯಾಗಿತ್ತು. ಬೇರೆ ಬೇರೆ ರಾಗತಾಳಗಳ ಪದ್ಯಗಳನ್ನು ಮಾತ್ರ ಬೇರೆ ಬೇರೆ ಖಂಡಗಳಾದಿ ಮುದ್ರಣ ಮಾಡುವುದು ಪದ್ಧತಿಯಾಗಿತ್ತು. ಈ ಮುದ್ರಣದಲ್ಲಿ ಪದ್ಯಗಳನ್ನು ಸಾಮಾನ್ಯವಾಗಿ ಛಂದಸ್ಸಿಗೆ ಅನುಗುಣವಾಗಿ ವಿಂಗಡಿಸಿ ಮುದ್ರಿಸಿದೆ’’. ಅದನ್ನೆ ಇಲ್ಲಿ ತೆಗೆದುಕೊಳ್ಳಲಾಗಿದೆ.

ಈ ‘ಪ್ರಸಂಗ’ ಕರ್ತರ ಹೆಚ್ಚುಗಾರಿಕೆಯೆಂದರೆ ಅವರ ಕಥನ ಕಲೆ. ಚೋರಾಡಿಯವರು ಬಹುದೊಡ್ಡ ಕಥನಕಾರರೆಂಬುವುದರಲ್ಲಿ ಸಂದೇಹವೇ ಇಲ್ಲ. ಹೊಯ್ಲಿಗೆಸಿಕ್ಕ ಹಡಗಿನ ಹಾಗೆ ಅವರ ಕಥನದ ಓಟ. ಕತೆ ಎಲ್ಲೂ ವಿಳಂಬಿಸುವುದಿಲ್ಲ. ತಡೆಯಾಗುವುದಿಲ್ಲ. ದೃಶ್ಯಗಳು ಕೂಡಲೇ ಬದಲಾಗುತ್ತವೆ. ಹೀಗೆ ಒಳ್ಳೆಯ ರಂಗಕೃತಿ ಕೂಡ ಹೌದು.

ಹಾಗೆಯೇ ಇಲ್ಲಿಯ ಭಾಷೆ ಸರಳಸುಂದರ ಮತ್ತು ನಿರರ್ಗಳ “ಯಾರೆಲೋ ಬಂದ ವೀರನೆನ್ನ ಠಾವಿಗೆ ಮಾರಹರನಿಗೊಮ್ಮೆ ಬರಲು ತೀರವಿಲ್ಲಿಗೆ’’ ಎನ್ನುವಂಥ, ಜಾಂಬವ ಕೃಷ್ಣನಿಗೇ ಹೇಳುವ ಧ್ವನಿಪೂರ್ಣ ಸಾಲುಗಳೂ ಇಲ್ಲಿವೆ. ಉತ್ತಮ ಕಥನಗಾರಿಕೆಗೆ ‘ಜಾಂಬವತೀ ಕಲ್ಯಾಣ ಮತ್ತು ಸತ್ಯಭಾಮಪರಿಣಯ’ ಉತ್ತಮ ಮಾದರಿಯಾಗಿದೆ.

. ಪಾರಿಜಾತ ಪ್ರಸಂಗ

ಪಾರಿಜಾತ ಪ್ರಸಂಗ ರಮ್ಯವಾಗಿದೆ. ಇದಕ್ಕೆ ಆ ಪ್ರಸಂಗ ನಾಲ್ಕು (೧೯೮೧) ಅಚ್ಚು ಕಂಡುದೇ ಸಾಕ್ಷಿಯಾಗಿದೆ.

ಈ ಪ್ರಸಂಗದ ಕಥಾನಕ ಒಂದು ಭದ್ರವಾದ ಮುನ್ನೋಟದಿಂದ ವ್ಯವಸ್ಥೆಗೊಳಪಡಿಸಲಾಗಿದೆ. ಪ್ರಾರಂಭದಲ್ಲಿ ನಾರದ ಬಂದು ಪಾರಿಜಾತವನ್ನು ಕೊಟ್ಟು ಅದನ್ನು ರುಕ್ಮಿಣಿಗೆ ಮುಡಿಯುವಂತೆ ಹೇಳುವುದು ಒಂದು ವಿನಾಕಾರಣದ ಅಧಿಕ ಪ್ರಸಂಗ ಎಂದು ತೋರುತ್ತದೆ. ಆದರೆ ಅಲ್ಲಿಯೇ ಕಥಾಬೀಜ ಅಂಕುರ ಪಡೆಯುತ್ತದೆ. ಇದರಿಂದ ಪ್ರಚೋದಿತಳಾದ ಸತ್ಯಭಾಮೆ ಅಸೂಯೆಯೊಳಗಾಗಿ ಮುನಿಸುಗೊಳ್ಳುತ್ತಾಳೆ. ಇಲ್ಲಿ ಮುಂದಿನ ಕಥೆಯ ಬೆಳವಣಿಗೆಯಿದೆ. ದೃಶ್ಯ ಅಸೂಯಾಭಾವದಿಂದ ಪೋಷಣೆಗೊಳ್ಳುವ ಶೃಂಗಾರದಲ್ಲಿದೆ. ಚುರುಕಾದ, ವಿಡಂಬನೆಯಿಂದ ಕೂಡಿದ ಸಂವಾದವಿದ್ದು ಬಹುಜನ ಪ್ರಿಯವಾಗುವ ಪ್ರೇಮಕಲಹವಿದೆ. ಇದು ಈ ಪ್ರಸಂಗದ ಆಕರ್ಷಣೀಯ ಭಾಗವಾಗಿದೆ.

ಇಲ್ಲಿ ಪಾರಿಜಾತದ ಮುಂದಿನ ಚೌಕಟ್ಟು ಸಿದ್ಧವಾಗುತ್ತದೆ. ದಿನಗಳೆಯುತ್ತಿರುವಾಗ ದೇವೇಂದ್ರ ಬಂದು ನರಕಾಸುರನಿಂದ ಸ್ವರ್ಗದ ಸುವಸ್ತುಗಳು ಕಾಣೆಯಾದ ಬಗ್ಗೆ ಕೃಷ್ಣನ ಮೊರೆ ಹೋಗುತ್ತಾನೆ. ಇದು ಕಥೆಯ ಅಂತ್ಯವನ್ನು ತನ್ನ ಒಡಲಲ್ಲಿ ಧರಿಸಿದಂತಿದೆ.

ನರಕಾಸುರನನ್ನು ಶಿಕ್ಷಿಸಲು ಹೊಟರಟೊಡನೆ ಕೃಷ್ಣನೊಡನೆ ತಾನು ಬರುವುದಾಗಿ ಸತ್ಯಭಾಮೆ ಹೇಳುತ್ತಾಳೆ. ಇದು ಕತೆಯ ತಾಂತ್ರಿಕ ನಡೆಗೆ ಅವಶ್ಯವಾಗಿದೆ. ನರಕಾಸುರನ ವಧೆ ಆದೊಡನೆ ಕೃಷ್ಣ ಸ್ವರ್ಗಕ್ಕೆ ಹೋಗಿ ಬರುವಾಗ ಪಾರಿಜಾತದ ಮರ ಕಣ್ಣಿಗೆ ಬೀಳುತ್ತದೆ. ಪಾರಿಜಾತದ ಮುಖಾಂತರ ಯುದ್ಧ – ಹೀಗೆ.

ಸತ್ಯಭಾಮೆಯ ಹಟದಿಂದಾಗಿ ಪಾರಿಜಾತದ ಟೊಂಗೆಯೊಂದು ಭೂಮಿಗೆ ಬರುತ್ತದೆ. ಅದನ್ನು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟು ಬೆಳೆಸುತ್ತಾರೆ.

ಹಾಗೆ ಪಾರಿಜಾತದಿಂದ ಹುಟ್ಟಿದ ಕತೆ ಪಾರಿಜಾತದ ಬಯಕೆ ಪೂರ್ಣವಾಗುವುದರಲ್ಲಿ ಪೂರ್ತಿಯಾಗುತ್ತದೆ. ಪರಿಜಾತದ ಹೂವೊಂದರ ಬದಲು ಗಿಡವೇ ಬರುತ್ತದೆ. ಹೀಗೆ ಕತೆಯ ಬೆಳವಣಿಗೆ ಮತ್ತು ಒಂದು ಆವರ್ತವಾಗಿ ಸಾರ್ಥಕವಾಗುತ್ತದೆ.

. ರತಿಜನ್ಮ – (ಶಂಬರಾಸುರ ಕಾಳಗ)

ಇದು ದೀರ್ಘವಾದ ಕಥನವನ್ನೊಳಗೊಂಡಿದೆ. ಇದರಲ್ಲಿ ೧) ರುಕ್ಮಿಣಿಯ ಸ್ವಪ್ನ, ಅಲ್ಲಿಂದ ಈಶ್ವರನಲ್ಲಿಗೆ ಹೋಗಿ ಮನ್ಮಥನ ಹುಟ್ಟಿಗೆ ಮೂಲವಾಗುವ ಘಟನೆ. ೨) ಘಂಟಾಕರ್ಣನ ಶಾಪವಿಮೋಚನೆ, ೩) ಕಾಶಿಯ ಅರಸ ಪ್ರೌಂಡ್ರಕವಧೆ ಘಟನೆ, ೪) ನಾರದನು ಶಂಬರಾಸುರನಿಗೆ ಮನ್ಮಥ ಜನನದ ಸಂಗತಿಯನ್ನು ತಿಳಿಸುವುದು ; ಮುಂದೆ ಆತನ ಅಂತ್ಯ.

ಹೀಗೆ ನಾಲ್ಕು ಘಟನೆಗಳಿದ್ದರೂ ಕೃಷ್ಣವಿವಾಹ ಪ್ರಸಂಗದಂತೆ ಪ್ರತಿಯೊಂದು ಘಟನೆಯೂ ಸ್ವತಂತ್ರ ಎಂಬಂತೆ ಹುಟ್ಟ ಬೆಳೆಯುತ್ತದೆ. ಕೃಷ್ಣಭಕ್ತಿ ಪಾರಮ್ಯವೇ ಇಲ್ಲಿ ಘಟನೆಗಳನ್ನು ಕೂಡಿಸುವ ಸೂತ್ರ. ಹಾಗಾಗುವುದರಿಂದ ಈ ದೀರ್ಘ ಪ್ರಸಂಗವನ್ನು ಬೇರೆ ಬೇರೆಯಾಗಿ ಮಿತವಾದ ಸಮಯದಲ್ಲಿ ಆಡಲು ಸಾಧ್ಯವಿದೆ. ಯಕ್ಷಗಾನ ಪ್ರಸಂಗವೆಂದರೆ ರಾತ್ರಿಯಿಡೀ ನಿದ್ದೆಗೆಟ್ಟು ನೋಡಬೇಕಾದುದು ಎಂಬುದನ್ನು ನಿವಾರಿಸಿ ಒಂದೊಂದೇ ಭಾಗವನ್ನು ಏಕಾಂಕ ನಾಟಕದಂತೆ ನೋಡಲು ಸಾಧ್ಯವಿದೆ. ಬಹುಶಃ ಮುಂದಿನ ದಿನಗಳಲ್ಲಿ ಇಂಥ ಪ್ರಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕುವ ಸಂಭವವಿದೆ.

‘ಬಾಣಾಸುರ ಕಾಳಗ’ ದಲ್ಲಿರುವಂತೆ ಇಲ್ಲಿಯೂ ಶೈವ-ವೈಷ್ಣವದ ಸಾಮರಸ್ಯತೆಯ ಪ್ರಸ್ತಾಪವಿದೆ. “ಕೇಳಿ ನೀವೆಲ್ಲಾ ಕಿವಿಗೊಟ್ಟು ಮಾತಾ ಪೇಳುವೆನಿದು ಸಿದ್ಧಾರ ಮುನಿವ್ರಾತ ಹರಿಯೆ ತಾ ಹರನಿಂದು ಹರನು ಶ್ರೀ ಹರಿಯೆಂದು ಮೆರೆವುತ್ತಲಿದೆ ಹರನು ಶ್ರುತಿ ಪರಮಂತ್ರಗಳಿಂದಾ” ಎಂದು ಕೃಷ್ಣ ಹೇಳುವ ಮಾತು ಮಹತ್ವದ್ದಾಗಿದೆ.

ಶಂಬರಾಸುರ ರಾಕ್ಷಸನಾದ್ದರಿಂದ ವಧಾರ್ಹ ಎನ್ನುವುದು ಮುಖ್ಯವಾಗುತ್ತದೆ. ಹಾಗಿದ್ದಾಗಲೂ ಆತ ತನ್ನ ಕೈಗೆ ಸಿಕ್ಕ ಮನ್ಮಥನನ್ನು ಕೊಲ್ಲುವುದಿಲ್ಲ. ಮಗಳ ವಿರಹ ದುಃಖವನ್ನು ಆತ ಸಹಿಸಲಾರ. ಆ ರಕ್ಕಸನ ಮನಸ್ಸು ಮಗಳಿಗಾಗಿ ಮಿಡಿಯುತ್ತದೆ. ಇದು ಮಾನವೀಯತೆಗೆ ಸಿಕ್ಕ ಗೆಲುವಾಗಿದೆ.

. ಬಾಣಾಸುರ ಕಾಳಗ

ಬಾಣಾಸುರನ ಅಂತ್ಯವೂ ಉಷಾಪರಿಣಯವೂ ಆಗುವ ಕಥಾಭಾಗವನ್ನೊಳಗೊಂಡಿದೆ. ಕನಕದಾಸರಮೋಹನ ತರಂಗಿಣಿಯ ಪ್ರಭಾವ ಕಥೆಯ ಆಯ್ಕೆಯ ಮೇಲಿದೆ ಎಂದು ಎನ್ನುತ್ತಾರೆ. ಅದೇನೇ ಇದ್ದರೂ ಕೃಷ್ಣ ಮಹಿಮೆಯ ಪಾರಂಪರ್ಯಕ್ಕೆ ಇಲ್ಲಿ ಕೊರತೆಯಾಗಿಲ್ಲ.

ಬಾಣನ ಆಶೆಯಂತೆ ಆತನಿಗೆ ಅಸುರವೈರಿ ಕೃಷ್ಣನೇ ಕೊನೆಗೆ ಗಂಟು ಬೀಳುತ್ತಾನೆ. ಬಾಣನ ಮನೆ ಬಾಗಿಲು ಕಾಯುವ ಈಶ್ವರನಿಗೂ, ಬಾಣನ ವೈರಿಯಾದ ಕೃಷ್ಣನಿಗೂ ಯುದ್ಧ ಗಂಟುಬೀಳುವ ರೋಚಕ ಘಟನೆ ಇಲ್ಲಿದೆ. ಈಶ್ವರನು ಶೂಲವನ್ನು ಅಸ್ತ್ರವನ್ನಾಗಿ ಉಪಯೋಗಿಸುವುದೂ ಕೃಷ್ಣ ಚಕ್ರವನ್ನು ಪ್ರತಿಯಾಗಿಸುವುದು ಕುತೂಹಲಕಾರಿಯಾಗಿದೆ. ಹೀಗೆ ಉಂಟಾದಾಗ ಆಕಾಶವಾಣಿ ಈಶನ ಶೂಲ, ಕೃಷ್ಣನ ಚಕ್ರದಿಂದ ಜಗತ್ತೆ ನಾಶವಾಗುವುದೆನ್ನುತ್ತದೆ. ಇದನ್ನು ಕೇಳಿದ ಈಶ್ವರ “ಸಿರಿವರನೆ ಕೇಳು ಸಂಗರ ಕೇಳಿಯೊಳಗೆ ನಾವಿರಲು ಮೂಜಗವೆಲ್ಲ ಉರಿದು ಪೋಪುದಲ್ಲೈ” ಎಂದು ತಾನು ಸೋಲುತ್ತೇನೆ ಎಂದು ಹಿಂದೆ ಸರಿಯುತ್ತಾನೆ. ಇಲ್ಲಿ ಈಶ್ವರನ ನಿರ್ಧಾರ ನಮ್ಮ ಇಂದಿನ ಜಾಗತಿಕ ಸ್ಥಿತಿಯಲ್ಲಿ ಹೆಚ್ಚು ಅರ್ಥಪೂರ್ಣವಾಗಿದೆ. ಅದೇ ಹೊತ್ತಿಗೆ ಕೃಷ್ಣನ ಉದ್ದೇಶ ಸುಗಮವಾಗಿ ವಿಷ್ಣು ಭಕ್ತಿ ಪಾರಮ್ಯ ಮೇಲುಗೈಯಾಗುತ್ತದೆ.

ಬಾಣನೊಡನೆ ಯುದ್ಧದಲ್ಲಿ ಸಹಸ್ರ ಬಾಹುವನ್ನು ಕಡಿದು ಇನ್ನೂ ಯುದ್ಧ ಮುಂದುವರಿಸಿದಾಗ ಈಶ್ವರ ‘ಏಕೆ ನನ್ನ ಭಕ್ತನೊಡನೆ ಮುನಿಸು’ ಎಂದು ಕೇಳಿದಾಗ ಕೃಷ್ಣ “ಚೆನ್ನಾಯ್ತು ಪೇಳ್ದ ಮಾತು ಪನ್ನಗಾಭರಣ ಕೇಳು ನಿನ್ನ ಹೊಂದಿದವರು ಜಗದೊಳೆನ್ನ ಭಕ್ತರು ಭಿನ್ನಭೇದವುಂಟೆ” ಎಂದು ಕೇಳುವ ಮಾತು ಮಾರ್ಮಿಕವಾಗಿದೆ. ಶೈವ ಮತ್ತು ವೈಷ್ಣವ ಪಂಥದ ಮಧ್ಯೆ ಇರುವ ಭೇದ-ದ್ವೇಷಗಳನ್ನು ಅಂತ್ಯಗೊಳಿಸುವ ಅಥವಾ ಸೌಮ್ಯಗೊಳಿಸುವ ಹರಿಹರ ಪ್ರತಿಮಾ ಸೃಷ್ಟಿಯ ಆಶಯ ಇಲ್ಲಿದ್ದುದು ಕೂಡ ಬಹಳ ಮುಖ್ಯ ಸಂಗತಿಯಾಗಿದ್ದು ಸಂದರ್ಭೋಚಿತವಾಗಿದೆ.

ಪ್ರಸಂಗಗಳ ಮಧ್ಯೆ ಅಡಗಿರುವ ಇಂಥ ಜನಪರವಾದ ಆಶಯವನ್ನು ಪ್ರದರ್ಶಿಸುವುದು. ಕಲಾವಿದರ ವಿವೇಚನೆಗೆ ವಸ್ತುವಾಗಬೇಕಾದ ಅವಶ್ಯಕತೆಯಿದೆ.

. ನರಕಾಸುರವಧೆ

ನರಕಾಸುರವಧೆ ಒಂದು ಕಿರು ಪ್ರಸಂಗ. ರಾತ್ರಿ ಬೆಳಗಾಗುವವರೆಗೂ ‘ಆಟ’ ನಡೆಯಬೇಕು. ಆದರೆ ಪ್ರಸ್ತುತ ಪ್ರಸಂಗ ಅಷ್ಟು ದೀರ್ಘ ಅವಧಿಯನ್ನು ಬಯಸುವುದಿಲ್ಲ. ಇಪ್ಪತ್ತು ಪುಟಗಳಷ್ಟು ಅಂದರೆ ಮೂರು ತಾಸಿನಲ್ಲಿ ಮುಗಿಸಬಹುದಾದ ಪ್ರಸಂಗ. ಇಂದಿನ ತುರ್ತಿಗೆ ತಕ್ಕಾದುದಾಗಿದೆ.

ಇದರಲ್ಲಿ ಎರಡೇ ಘಟನೆಗಳಿವೆ. ಒಂದು ನರಕಾಸುರ ಹತವಾಗುವ ಘಟನೆ. ಎರಡನೆಯದು ದೇವಲೋಕದಿಂದ ಭಾಮೆ ಪಾರಿಜಾತವನ್ನು ಭೂಮಿಗೆ ತರುವುದು. ಹೀಗೆ ಘಟನೆ ಕಡಿಮೆಯಾದರೂ ರಂಗದ ರೋಚಕತೆಗೆ ಕೊರತೆಯಾಗಲಿಲ್ಲ. ವೀರ, ಕರುಣೆ, ಶೃಂಗಾರ ಭಕ್ತಿ ಭಾವಗಳು ಸರಿದೊರೆಯಾಗಿ ಹರಿಯುತ್ತವೆ.

ಬಹಳ ಮುಖ್ಯವಾಗಿ ಗಮನಿಸಬೇಕಾದುದು ಇಲ್ಲಿಯ ಸಂಭಾಷಣೆಯ ತರ್ಕಬದ್ಧತೆ ಮುದನೀಡುವಂತಹದು. ಶಚಿಯನ್ನು ಅಪಹರಿಸಬಂದ ನವಿಯೊಡನೆಯ ಸಂಭಾಷಣೆಯಾಗಲಿ, ಭಾಮೆ-ಕೃಷ್ಣರ ಸಂಭಾಷಣೆಯಾಗಿಲಿ, ನರಕ ದೇವಲೋಕದ ಮೇಲೆ ಯುದ್ಧ ಸಾರುವ ಕಾರಣವಾಗಲಿ, ಹೆಚ್ಚು ಸುಸಂಬಂಧವಾಗಿರುವುದರಿಂದ ಸಂಭಾಷಣೆ ಚುರುಕುಗೊಳ್ಳುತ್ತದೆ. ಅಲ್ಲದೆ ಮನ ಸೆಳೆಯುತ್ತದೆ.

ಅಷ್ಟೇ ಮಹತ್ವದ ಸಂಗತಿಯೆಂದರೆ ಇಲ್ಲಿಯ ಪದ್ಯಗಳ ಸಹಜಸೌಂದರ್ಯ. ತಿಳಿನೀರ ಪ್ರವಾಹದಂತೆ ಇಲ್ಲಿಯ ಭಾಷಾ ಪ್ರವಾಹ ಹಾರ್ದಿಕವಾಗಿದೆ. ಪಾಂಡಿತ್ಯ ಪ್ರದರ್ಶನವೂ ಇಲ್ಲದ ನಿರ್ಲಕ್ಷಕ್ಕೂ ಒಳಗಾಗದ ಶೈಲಿ.

ನವಿಯ ಮಧ್ಯಪ್ರದೇಶದಿಂದ ದೇವತೆಗಳಿಗೆ ಬರುವ ಗಂಡಾಂತರದ ಮುಖ್ಯ ಸಂಗತಿಯ ಒಳನೋಟ ಸಿಕ್ಕುತ್ತದೆ. ನರಕನ ನಾಶಕ್ಕೆ ಬಲವಾದ ಕಾರಣವನ್ನು ಒದಗಿಸುತ್ತದೆ. ಶೂರ್ಪಣಖಿ ರಾಮ-ರಾವಣರ ಸಂದರ್ಭವನ್ನು ನೆನಪಿಸುತ್ತದೆ. ಕತೆಯ ಓಟಕ್ಕೆ ಎಲ್ಲೂ ತೊಡಕಿಲ್ಲ. ನೇರ ಒಂದಕ್ಕೊಂದು ಹೊಂದಿಕೊಂಡಿರುವಂತಹುದು. ಯಾವ ಪಾತ್ರವೂ ಹೆಚ್ಚು ಹೊತ್ತು ರಂಗದ ಮೇಲೆ ನಿಲ್ಲುವುದಿಲ್ಲ. ಬಲಿಪ ನಾರಾಯಣ ಭಾತವತರು ನುರಿತ ಭಾಗವತರು. ಅನೇಕ ಪ್ರಸಂಗಗಳನ್ನು ರಂಗಕ್ಕೆ ತಕ್ಕಾಗಿ ಅಳವಡಿಸಿದ ಕುಶಲತೆ ಅವರಿಗಿದೆ. ಅಂಥ ನೈಪುಣ್ಯತೆ ಇಲ್ಲಿಯೂ ಇದೆ.

೧೦. ಶ್ರೀಕೃಷ್ಣದಿನಾಶ್ವಮೇಧ

‘ಪ್ರಸಂಗ’ದ ಕೊನೆಯ ಪುಟದಲ್ಲಿ ಉಡುಪಿ ಸೋಮದೇವ ಮಠದ ರಾಜಗೋಪಾಲಾಚಾರ್ಯ ರಿಂದ ರಚಿಸಲ್ಪಟ್ಟ ಈ ಪುಸ್ತಕವು ಪಂಡಿತರಿಂದ ಪರಿಶೋಧಿಸಿ ಪಾವಂಜೆ ಗುರುರಾಜ್ ಇವರ ಉಡುಪಿ ಶ್ರೀಕೃಷ್ಣ ಮುದ್ರಣಾಲಯದಲ್ಲಿ ಮುದ್ರಿಸಲ್ಪಟ್ಟು, ಸ್ವಕೀಯ ಉಡುಪಿ ಶ್ರೀಮನ್ವಧ್ವ ಸಿದ್ಧಾಂತ ಗ್ರಂಥಾಲಯದಿಂದ ಪ್ರಕಟಿಸಲ್ಪಟ್ಟಿತು. ಶಾ : ಶಕೆ ೧೮೫೦ “ಎಂದು ಇದೆ. ಇಲ್ಲಿ ‘ಪಂಡಿತರಿಂದ ಪರಿಶೋಧಿಸಿ’ ಎಂಬುದು ಮುಖ್ಯ. ಯಕ್ಷಗಾನ ಪ್ರಸಂಗಗಳು ಕೈಯಿಂದ ಕೈಗೆ ಬದಲಗುವುದೂ, ಆಗಾಗ ಪರಿಷ್ಕರಣಕ್ಕೆ ಒಳಗಾಗುವುದೂ ಉಂಟು. ಇದು ಯಕ್ಷಗಾನದ ಒಂದು ವೈಶಿಷ್ಟ್ಯ ಕೂಡ. ಇಲ್ಲಿ ಪಂಡಿತರಿಂದ ಇದು ಪರಿಶೋಧಿಸಿದೆ. ಅಥವಾ ರಚನೆಗೆ ಮೊದಲಿನಂತೇ ಇದ್ದಿರಬಹುದು. ಅದೇನೇ ಇದ್ದರೂ ಶಬ್ದಪ್ರಯೋಗದ ದೃಷ್ಟಿಯಿಂದ ಕಾಠಿಣ್ಯತೆ ತಲೆ ಹಾಕಿರುವುದಂತೂ ಹೌದು. ಅಂದರೆ ಈ ರಚನೆಯ ಎದುರು ಸಾಮಾನ್ಯ ಪ್ರೇಕ್ಷಕರು ಮಾತ್ರ ಇದ್ದಿರಲಿಲ್ಲ. ಕವಿಗೆ ತನ್ನ ಪಾಂಡಿತ್ಯ ಬಗ್ಗೂ ಕಾಳಜಿ ಇತ್ತು ಎಂದಾಯಿತು. ಆದ್ದರಿಂದ ಇಲ್ಲಿಯ ಶಬ್ದಪ್ರಯೋಗ ಪ್ರಜ್ಞಾಪೂರಕವಾದುದು. ಆದ್ದರಿಂದಲೇ ಕಠಿಣ ಶಬ್ದಗಳಿಗೆ ಅರ್ಥ ಸೂಚಿಸುವ ಹೊಸದೊಂದು ಉಪಕ್ರಮ ಇಲ್ಲಿಯದಾಗಿದೆ. ಈ ಕ್ರಮ ಸ್ವಾಗತಾರ್ಹವೂ ಹೌದು.

ಸಮಾರೋಪ :

ಭಾಗವತ ಪ್ರಸಂಗಗಳು ಕೃಷ್ಣ ಮಹಿಮೆಯನ್ನು ಸಾರಲೆಂದೇ ಬಂದವು. ಅನೇಕ ರಸಕ್ಷಣಗಳ ಸಾಕ್ಷಾತ್ಕಾರಕ್ಕೆ ಆಶ್ರಯ ಕೊಡುವುದು ಹೌದಾದರೂ ಅಂತಿಮವಾಗಿ ಭಕ್ತಿಯ ಸಾಕ್ಷಾತ್ಕಾರವೇ ಮುಖ್ಯ. ಆದ್ದರಿಂದ ಇಲ್ಲಿ ಗೋಪಿಯರ ವಿರಹ ಅನೀತಿಯಾಗುವುದಿಲ್ಲ. ಯಾಕೆಂದರೆ ಭಾಗವತ (ಭಕ್ತಿ) ಭಾವದಲ್ಲಿ ಸಖ-ಸಖಿಭಾವ ಒಂದು ವಿಧಾನ, ಒಂದು ರೂಪಕ.

ಹಾಗೆಯೇ ಇಂಥ ಹೆಚ್ಚಿನ ಪ್ರಸಂಗಗಳೆಲ್ಲ ಉಡುಪಿಯಲ್ಲೇ ಮುದ್ರಣಗೊಂಡಿರುವುದಕ್ಕೂ ಪ್ರಸಂಗಗಳ ಮೂಲಕ ಶ್ರೀಕೃಷ್ಣ ಭಕ್ತಿಯೇ ಪ್ರತಿಪಾದನೆಯ ಕೇಂದ್ರವಾಗುವುದಕ್ಕೂ ಚಾರಿತ್ರಿಕವಾದ ಮತ್ತು ಸಾಂಸ್ಕೃತಿಕವಾದ ಸಂಬಂಧ ಕೂಡ ಉಂಟು. ಅಂಥ ಭಾಗವತ ಭಕ್ತಿ ಕೇಂದ್ರವಾಗಿರುವುದಕ್ಕೆ ಉಡುಪಿಯೇ ಕೇಂದ್ರ ; ಮಠ ಅದರ ಆಶ್ರಯ.

ಈ ಭಾಗವತ ಭಕ್ತಿ ವಿಷ್ಣು ಭಕ್ತಿಯೇ ಆಗಿರುತ್ತದೆ. ಶಿವ ಭಕ್ತಿಯಾಗಿರುವುದಿಲ್ಲ. ಒಂದು ವೇಳೆ ಶಿವ ಬಂದರೂ ಆತ ಖಂಡನೆಗೆ ಗುರಿಯಾಗುತ್ತಾನೆ. ಅದಲ್ಲದಿದ್ದರೂ ವಿಷ್ಣುಭಕ್ತಿಯೇ ಬಲಶಾಲಿಯಾಗುತ್ತದೆ. ಇದಕ್ಕೆ ‘ಕೃಷ್ಣದಿನಾಶ್ವಮೇಧ’ದಲ್ಲಿ ಮಾಗಧ ‘ಶಂಭುಭಕ್ತನಹೆನು ನಾನು’ ಎಂದು ಹೇಳಿಕೊಂಡರೆ ಭೀಮ, “ಹರಿಯ ಭಕ್ತನಹೆನುನಾನು ದುರುಳ ನೊಡೆಲಾ ಹರನ ಭಜಕ ನೀನು ನಮಗೆ ಗಣ್ಯವೇನಲಾ” ಎಂದು ಹಂಗಿಸುವ ಮಾತು ಸಾಕ್ಷಿಯಾಗಿದೆ.

ಅದೇನೇ ಇದ್ದರೂ ಮಧ್ಯಕಾಲೀನ ಊಳಿಗಮಾನ್ಯ ವ್ಯವಸ್ಥೆಯ ಸಂದರ್ಭದಲ್ಲಿ ಈ ಭಕ್ತಿ ಭಾಗವತ ಪಂಥ ವ್ಯವಸ್ಥೆಗೆ ಪೋಷಕವಾಗಿ ನಿಂತೇ ಅಂದಿನ ಮಹಿಳೆಯರನ್ನೊಳಗೊಂಡು ಜನಸಾಮಾನ್ಯರಿಗೆ ನೀತಿ ಶಿಕ್ಷಣದ ಮಾಧ್ಯಮವಾಗಿ ಕೆಲಸ ಮಾಡಿದ್ದು ನಿಜವಾಗಿದೆ. ಅದರ ಬಹಳ ಶಕ್ತಿಯುತ ಮಾಧ್ಯಮವಾಗಿ ಭಾಗವತ ಯಕ್ಷಗಾನ ಪ್ರಸಂಗಗಳು ಕೆಲಸ ಮಾಡಿದವು.

ಭಾಷಿಕ ದೃಷ್ಟಿಯಿಂದ ನೋಡಿದಾಗಲೂ ಬೇರೆ ವೈಶಿಷ್ಟ್ಯಗಳು ಕಾಣಬರುತ್ತದೆ. ಉದಾ : ತತ್ಸಮ-ತದ್ಭವಗಳು, ಘೋಷ-ಗೋಶ ; ನಿಮಿಷ-ನಿಮುಶ ; ಮಧುರ-ಮದುರ ; ಭೂಸುರ-ಬೂಸುರ ; ಪುರುಷ – ಪುರುಶ ; ಸಂತೋಷ-ಸಂತೋಶ ; ಧರೆ-ದರೆ ; ಘನತರ-ಗನತರ ; ವಿಧವಿಧಾನ-ವಿದವಿಧಾನ ; ಖಳ-ಕಳ ; ಗೃಹ-ಗ್ರಹ ; ಇಚ್ಛೆ-ಇಚ್ಚೆ ; ವೀರಾಧಿವೀರ-ವೀರಾದಿವೀರ ; ನೆಂಟತನಕ್ಕೆ ನೆಂಟತೆ ಇವೇ ಮುಂತಾದವುಗಳನ್ನು ಗಮನಿಸಬಹುದಾಗಿದೆ.

ಉದ್ದೇಶ ಇಷ್ಟೇ ಎಂದು ಹೇಳಲಾಗದು. ಯಾಕೆಂದರೆ ಯಕ್ಷಗಾನ ಪ್ರಸಂಗಗಳು ಒಂದು ಸಾಮೂಹಿಕ ರಂಗ ಕೃತಿಯಾಗಿ – ರಂಗಕಲೆಯಾಗಿ ಬೆಳೆದುಬಂದು ಒಂದು ಅದ್ಭುತ ಸಾಂಸ್ಕೃತಿಕ ಕೊಡುಗೆಯಾಗಿದೆ.

ಕೃತಜ್ಞತೆ :

ಈ ಸಂಪುಟವನ್ನು ಮಿತವಾದ ಅವಧಿಯಲ್ಲಿ ಸಿದ್ಧಪಡಿಸುವಾಗ ಅನೇಕ ಮಹನಿಯರ ಸಹಾಯ ಯಾಚಿಸಬೇಕಾಯಿತು. ಅವರಲ್ಲಿ ಕೆಲವರನ್ನಾದರೂ ನೆನೆದುಕೊಳ್ಳದೇ ಇರಲಾರೆ. ಗೆಳೆಯರಾದ ಎನ್.ಆರ್.ಯಾಜಿ ಅವರು ಸಜ್ಜನರು, ಬ್ಯಾಂಕ್ ಮ್ಯಾನೇಜರರು, ಯಕ್ಷಗಾನ ಪ್ರಿಯರು. ಡಾ. ಪಾದೇಕಲ್ ವಿಷ್ಣುಭಟ್ಟರ ಸ್ನೇಹ ದೊಡ್ಡದು. ಸಹಾಯವೂ ದೊಡ್ಡದು. ತಮ್ಮದೇ ಕೆಲಸ ಎಂಬಂತೆ ಸಹಕರಿಸಿದ್ದಾರೆ. ಡಾ.ಜಿ.ಎಸ್. ಭಟ್ಟ ಸಾಗರ, ಅವರು ಕೂಡ ಹಾಗೇ ನಿರ್ವ್ಯಾಜ ಪ್ರೀತಿಯಿಂದ ಸಹಾಯ ಮಾಡಿದ್ದಾರೆ. ಕಟೀಲಿನ ಶ್ರೀನಿವಾಸ ಭಟ್ಟರ ಉಪಕಾರ ಅಷ್ಟಿಷ್ಟಿಲ್ಲ. ಇನ್ನೂ ಪರಸ್ಪರ ನೋಡಿರದಿದ್ದರೂ ಯಕ್ಷಗಾನ ಪ್ರಿಯರಾದ ಅವರು ನಾನು ಕೇಳಿದ್ದೆಲ್ಲಕ್ಕೆ ಸಹಕರಿಸಿದ್ದಾರೆ.

ಇತರ ಸಲಹೆ ಸಹಕಾರ ಇತ್ತವರು ಜಾನಪದ ವಿದ್ವಾಂಸ ಡಾ.ಎನ್.ಆರ್. ನಾಯಕರು ಮುಖ್ಯ ಸಂಪಾದಕರು ಶಂಭು ಹೆಗಡೆಯವರು ಮತ್ತು ಇತರ ಸದಸ್ಯರು. ಇವರೆಲ್ಲರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

 – ಆರ್.ವಿ. ಭಂಡಾರಿ