. ಕೃಷ್ಣ ಚರಿತೆ

ದ್ವಾಪರಯುಗದಲ್ಲಿ ಭೂಮಿಯಲ್ಲಿ ರಾಕ್ಷಸರ ಉಪಟಳವು ಜಾಸ್ತಿಯಾಗಲು ಅದನ್ನು ತಾಳಲಾರದೆ ಭೂಮಿ ಗೋವಿನ ರೂಪವನ್ನು ಧರಿಸಿ ಬಂದು ಬ್ರಹ್ಮನಲ್ಲಿ ಮೊರೆಯಿಡಲು ಬ್ರಹ್ಮ ದೇವತೆಗಳನ್ನು ಕೂಡಿಕೊಂಡು ಸತ್ಯಲೋಕಕ್ಕೆ ಬರುತ್ತಾನೆ. ಅವರ ಮೊರೆಯನ್ನು ಕೇಳಿದ ವಿಷ್ಣುವು ತಾನು ಗೋಕುಲದಲ್ಲಿ ಹುಟ್ಟಿ ದುಷ್ಟರನ್ನು ನಾಶ ಮಾಡಿ ಕಷ್ಟ ನಿವಾರಿಸುವುದಾಗಿ ಭರವಸೆಯನೀಯುತ್ತಾನೆ. ಬ್ರಹ್ಮನು ಇನ್ನು ದುಃಖಿಸಬೇಕಿಲ್ಲವೆಂದೂ ದುಷ್ಟರು ನಾಶವಾಗಿ ಸತ್ಯಯುಗವು ಪ್ರಾರಂಭವಾಗುತ್ತದೆಂದು ಭೂದೇವಿಯನ್ನು ಸಂತೈಸುತ್ತಾನೆ.

ಇತ್ತ ಮಧುರೆಯಲ್ಲಿ ಉಗ್ರಸೇನನ ಮಗನಾದ ಕಂಸನೆಂಬ ರಾಕ್ಷಸನು ತನ್ನ ರಕ್ಕಸ ಮಿತ್ರನೊಡನೆ ಕೂಡಿ ದುರುಳನ ಗುರುವಿನಂತಾಗಿ ರಾಜ್ಯವಾಳುತ್ತಿದ್ದನು. ಹೀಗಿರುವಾಗ ಕಂಸನಿಗೆ ಓರ್ವ ತಂಗಿಯಿದ್ದಳು. (ದೊಡ್ಡ ತಂದೆ ದೇವಕನ ಮಗಳು) ಅವಳು ಸುಂದರಿಯಾಗಿದ್ದಳು. ಅವಳಿಗೆ ತಾರುಣ್ಯ ಬಂದೊದಗಲು ಶೂರುಸೇನನ ಮಗನಾದ ವಸುದೇವನು ಸದ್ಗುಣಭರಿತನಾಗಿ, ಸ್ಮರನ ಲಾವಣ್ಯದಂತೆ ಸುಂದರನಾಗಿಯೂ ಇರುವಾತನಿಗೆ ಮದುವೆ ಮಾಡಿಕೊಡುವುದನ್ನು ನಿಶ್ಚಯಿಸಿ ಕಂಸನಿಗೆ ಹೇಳಲು ಕಂಸನು ಬಹು ಸಂತೋಷದಿಂದಲೂ, ವಿಜ್ರಂಭಣೆಯಿಂದಲೂ ನೆರವೇರಿಸಿದನು. ಬೇಕುಬೇಕಾದ ದಾನದಕ್ಷಿಣೆಗಳನ್ನು ಕೊಟ್ಟನು. ಹೇರಳವಾಗಿ ಬಳುವಳಿಯನ್ನೂ ಕೊಟ್ಟನು. ವಸುದೇವ ದೇವಕಿಯನ್ನು ಬಹಳ ಸಂತೋಷದಿಂದ ಮಣಿಮಯ ರಥದಲ್ಲಿ ಕೂಡ್ರಿಸಿ ಕಂಸನು ತಾನೆ ಸಾರಥ್ಯವನ್ನು ವಹಿಸಿ ಮೆರವಣಿಗೆ ಹೋಗುತ್ತಿರುವಾಗ ಒಂದು ಭಯಂಕರ ಘಟನೆ ನಡೆದು ಹೋಯಿತು. “ಕೇಳೆಲವೋ ಖಳ ತಂಗಿಯ ಮೇಲೆ ಮೋಹವ ಮಾಳ್ಪ ನಿನಗೆ ಇವಳ ಎಂಟನೆಯ ಗರ್ಭದಲ್ಲಿ ವಿಷ್ಣುವು ಅವತರಿಸಿ ಬಲು ರಾಕ್ಷಸರನ್ನು ಕೊಂದು ನಿನ್ನನು ಸೀಳಿ ಹಾಕುವನು’ ಎಂದು ಅಶರೀರವಾಣಿ ಕೇಳಿಬಂತು. ಇದರಿಂದ ಖತಿಗೊಂಡ ಕಂಸ ತನ್ನ ಖಡ್ಗವನ್ನು ತೆಗೆದು ದೇವಕಿಯನ್ನು ಸಂಹರಿಸಲು ಹೊರಟಾಗ ಇದನ್ನು ಕಂಡು ವಸುದೇವನು ನಡಗುತ್ತಲೇ ಇವಳನ್ನು ಕೊಲೆ ಮಾಡುವದು ಉಚಿತವಲ್ಲ. ಇದರಿಂದ ನಿನ್ನ ಮಾನ ಹೋಗುತ್ತದೆ. ಒಳ್ಳೆಯದಾಗುವುದಿಲ್ಲ ಮುಂತಾಗಿ ಬುದ್ಧಿ ಹೇಳಿದ್ದನ್ನು ಕೇಳಿ ಕೆರಳಿ ತನಗೆ ನಿನ್ನ ಉಪದೇಶ ಬೇಡ ಎಂದು ಹೇಳಿದಾಗ ಮತ್ತೆ ವಸುದೇವನು “ಕೇಳೀ ಸತಿ ಪೆತ್ತಂದಿಗೆ ತನಗುದಿಸಿದ ಪುತ್ರಂದಿರನ್ನೆಲ್ಲರ ತಂದಿತ್ತಂದಿಗೆ ನಿನ್ನ ಚಿತ್ತದ ಭಯವ ಸಾಗಿಸುವೆನು’’ ಎಂದು ಭರವಸೆ ಕೊಡುತ್ತಾನೆ. ಇದರಿಂದ ದೇವಕಿಯ ಜೀವ ತೆಗೆಯದೆ ಅವರನ್ನು ಸೆರೆಮನೆಯಲ್ಲಿ ಇಡುತ್ತಾನೆ. ಹೀಗೆ ದಿನ ಹೋದಾಗ ದೇವಕಿ ಮಗುವನ್ನು ಹಡೆಯುತ್ತಾಳೆ. ವಸುದೇವನು ಆ ಶಿಶುವನ್ನು ಕಂಸನಿಗೆ ತಂದೊಪ್ಪಿಸಲು ಏಳು ಪರಿಯಂತರವು ತನಗೆ ಯೋಚನೆಯಿಲ್ಲ’ ಎಂದು ಹೇಳಿ ಎಂಟನೆಯ ಶಿಶುವನ್ನು ತಂದುಕೊಟ್ಟರೆ ಸಾಕು ಎನ್ನುತ್ತಾನೆ. ತುಸುವೇ ಕಾಲದಲ್ಲಿ ನಾರದನು ಬಂದು ಹೀಗೆ ಎಂಟನೆಯ ಗರ್ಭವನ್ನೇ ನಂಬಿರುವುದು ಸರಿಯಲ್ಲ. ಹರಿಯ ಕಪಟವನ್ನು ತಿಳಿಯಲಾಗದು ಎಂದು ಬೋಧನೆ ಮಾಡಲು ಎಲ್ಲಾ ಶಿಶುಗಳನ್ನು ಸಂಹರಿಸುತ್ತಾನೆ. ದೇವಕಿ ಬಹಳ ದುಃಖದಿಂದಿರುತ್ತಾಳೆ.

ಹೀಗೆ ಕಾಲ ಹೋಗುತ್ತಿರುವಾಗ ದೇವಕಿಗೆ ವಿಷ್ಣು ಹುಟ್ಟುವುನೆಂಬ ವಾರ್ತೆಯನ್ನು ತಿಳಿಸಲೋಸುಗ ಓರ್ವ ಕೊರವಂಜಿ ಬರುತ್ತಾಳೆ. ಇಂಥ ಕೊರವಂಜಿ ಊರೂರು, ಲೋಕ ಲೋಕ ತಿರುಗುತ್ತ ಮಧುರಾ ಪಟ್ಟಣಕ್ಕೆ ಬರುತ್ತಾಳೆ. ದೇವಕಿ ಯಾವ ದೇಶದಿಂದ ಬಂದೆ – ನನಗೆ ಸಂತೋಷವಾಯಿತು. ಒಂದು ಪ್ರಶ್ನೆಯನ್ನು (ನಿಮಿತ್ತ) ಹೇಳು. ನನ್ನ ಬಾಳು ದುಃಖಮಯವಾಗಿದೆ. ಮರಿ ಕೋಗಿಲೆಯಂತಾದೆನಲ್ಲ’’ ಎಂದು ಚಿಂತಿಸುತ್ತಾಳೆ. ಕೈನೋಡಿದ ಕೊರವಂಜಿ ನಿನ್ನಂಥ ಭಾಗ್ಯವಂತಲಾರಿಲ್ಲ’ ನಿನ್ನ ಉದರದಲ್ಲಿ ಗೋವಿಂದನು ಹುಟ್ಟುತ್ತಾನೆ. ಆತ ಕಂಸಾದಿಗಳನ್ನು ಕೊಂದು ಉಗ್ರಸೇನನಿಗೆ (ತಂದೆಯನ್ನು ಕಂಸ ಸೆರಮನೆಯಲ್ಲಿಟ್ಟು ತಾನೇ ರಾಜ್ಯವಾಳುತ್ತಿದ್ದನು) ಪಟ್ಟಕಟ್ಟುತ್ತಾನೆ. ಎಂದು ಮುಂತಾಗಿ ಭರವಸೆ ಕೊಡುತ್ತಾಳೆ. ‘ಎಷ್ಟು ಹೇಳಿದರು ಮನವು ತುಷ್ಟಿ ಹೊಂದದಮ್ಮ ವಂಶ ವೃದ್ಧಿಯಾಗದಂತೆ ಕಂಸನೆನ್ನ ಸುತರ ಹಿಂಸಿಸಿ ಕೊಲ್ಲುವನೆಂಬ’’ ಸತ್ಯ ಅರಿತು ಬಾಳುತ್ತಿದ್ದೇನೆ ಎಂದು ದುಃಖತೋಡಿಕೊಂಡಾಗ ಧೈರ್ಯತಾಳು. ಹಿಂದೆ ಸೀತೆಯೂ ದಮಯಂತಿಯೂ ಅನೇಕ ದುಃಖದಿಂದ ಬಾಳಿದರು ಇತ್ಯಾದಿ ಸಾಂತ್ವನ ಹೇಳುತ್ತಾಳೆ. ಹೀಗೆ ಮಂಗಳವನ್ನು ಹೇಳಿದ ಕೊಂರವಂಜಿಗೆ ವಿವಿಧ ವಸ್ತುಗಳನ್ನಿತ್ತು ತೃಪ್ತಿಪಡಿಸಿ ಕಳಿಸುತ್ತಾಳೆ.

ಹರಿ ಗೋವಿಂದ ಎನ್ನುತ್ತ ದೇವಕಿ ಸೆರೆಮನೆಯೊಳಿರುವಾಗ ಎಂಟನೆಯ ಗರ್ಭ ಧರಿಸುತ್ತಾಳೆ. ಈ ಸುದ್ದಿಯನ್ನು ಕೇಳಿದ ಕಂಸ ಚಿಂತಿತನಾಗುತ್ತಾನೆ. “ಹರಿಯು ಬಹು ಕಪಟಿಗನು ಮೈಮರೆದಿರಲು ಬಾರದೆನುತ್ತ ತಾನೇ ಸೆರಮನೆಯೊಳಿರ್ದಂತೆ ಕಾದಿರಲಿರುಳು ಹಗಲು’’ ದೇವಕಿಯ ಶರೀರ ಬೆಳವಣಿಗೆಯನ್ನು ನೋಡಿದ ಕಂಸ ಇದೇ ಹರಿಯ ಗರ್ಭ ಎಂದು ತಿಳಿದು ಎಚ್ಚರದಿಂದ ಇರುತ್ತಾ ದೇವಕಿಗೆ ನವಮಾಸ ಭರಿತವಾಯಿತು. ಶ್ರಾವಣಮಾಸದ ಕೃಷ್ಣಪಕ್ಷದಲ್ಲಿ ಕೃಷ್ಣ ಹುಟ್ಟಿದ್ದನ್ನು ತಿಳಿದು ದೇವತೆಗಳು ಜಯಕಾರ ಮಾಡಿದರು. ದೇವಕಿಯು ಬಲು ದುಃಖದಿಂದ ಹರಿಯನ್ನು ಧ್ಯಾನಿಸಿದಳು. “ಕಂಸ ದೈತ್ಯನು ; ಕಡುಕೋಪಿ, ಕಂಡರೆ ನಿನ್ನ ಹಿಂಸೆ ಮಾಡದುಳಿಯನು ಪಾಪಿ. ನೋಡಲು ನಮ್ಮ ವಂಶದೊಳೆಲ್ಲ ಸುಪ್ರತಾಪಿ ಹೊತ್ತಿಲ್ಲವು ಕಾಯೋ ಹಂಸವಾಹನ ಪಿತ ನೀಂ ಸರ್ವೋತ್ತಮ” ಎಂದು ನೆನೆಸುತ್ತಿದ್ದಳು.

ಹೀಗೆ ಮೊರೆ ಹೋಗುತ್ತಿರುವಾಗ ಶಿಶು ಬಾಯಿ ತೆರೆದು ‘ಇದೇ ಹೊತ್ತಿಗೆ ನಂದಗೋಕುಲದಲ್ಲಿ ಯಶೋದೆಗೆ ಮಾಯೆಯು ಮಗಳಾಗಿ ಹುಟ್ಟಿದ್ದಾಳೆ. ಕೂಡಲೇ ನನ್ನನ್ನು ತೆಗೆದುಕೊಂಡು ಹೋಗಿ ಅಲ್ಲಿಟ್ಟು ಆ ಶಿಶುವನ್ನು ಇಲ್ಲಿ ತಂದಿಡಿ’ ಎಂದಿತು.

ಈ ಮಾತು ಬಂದ ತಕ್ಷಣ ಸತಿ ಪತಿಯರ ಕಾಲಿನ ಬಂಧನ ಕಳಚಿ ಹೋಯಿತು. ಶಿಶುವನ್ನು ಹೊತ್ತುಕೊಂಡು ವಸುದೇವನು ಹೊರಟನು. ಕಾರುಕತ್ತಲೆ ; ಒಂದೇ ಸವನೆ ಮಳೆ. ಬಾಗಿಲಿಗೆ ಬರಲು ಬಾಗಿಲು ತೆಗೆದುಕೊಂಡಿತು. ಭಯಂಕರ ಮಳೆ ಬೀಳುತ್ತಿರಲು ಒಡೆಯ ಕೋಪಿಸಿಗೊಳ್ಳಬಾರದೆಂದು ಮಹಾಶೇಷ (ಸರ್ಪ)ವು ಕೊಡೆಯಂತೆ ಹೆಡೆಯರಳಿಸಿ ಹಿಂದೆ ಬಂತು. ತುಂಬಿ ಹರಿಯುವ ಯಮುನೆ ಕೈಮುಗಿದು ಮುಂದೆ ಹೋಗಲು ದಾರಿ ಮಾಡಿಕೊಟ್ಟಿತು. ವಸುದೇವನು ಯಶೋದೆಯ ಅಂತಃಪುರವನ್ನು ಪ್ರವೇಶಿಸಿ ಶಿಶು ಕೃಷ್ಣನನ್ನು ಅಲ್ಲಿ ಮಲಗಿಸಿ ಶಿಶುಮಾಯೆಯನ್ನು ಹಿಂದಕ್ಕೆ ತಂದನು.

ಸೆರೆಮನೆಯಲ್ಲಿ ಮಾಯಾ ಶಿಶುವು ಚೀರಿದ್ದನ್ನು ಕೇಳಿ ಕಂಸನು “ಪುಟ್ಟಿದನು ಪಗೆಯೆಂದು ಮನದಲಿ ಬಿಟ್ಟ ಮಂಡೆಯೊಳೊದರಿ ಬುಸುಗುಟ್ಟುತೇಳುತ ಬೀಳುತಲೆ ಕಂಗೆಟ್ಟು ಭರದಿ’’ ಬಂದು ಶಿಶು ಕೊಡೆಂದು ಆರ್ಭಟಿಸಿದನು.

ಶಿಶುವನ್ನು ಕೊಟ್ಟ ದೇವಕಿ ಶಿಶುವನ್ನು ಕೊಲ್ಲವುದು ತರವಲ್ಲವೆಂದು ವಿಧವಿಧವಾಗಿ ಬೇಡಿಕೊಂಡಳು. ಭವಿಷ್ಯವಾಣಿ ಗಂಡು ಶಿಶು ನಿನ್ನ ಕೊಲ್ಲುತ್ತದೆ ಎಂದು ಹೇಳಿತ್ತು. ಇದು ಹೆಣ್ಣು ; ಇದೊಂದನ್ನು ಬಿಡು ಎಂದು ಹೇಳುತ್ತಿರುವಾಗಲೇ ಶಿಶುವನ್ನು ಎಳೆದು ಅಪ್ಪಳಿಸುತ್ತಾನೆ. ಕೂಡಲೇ ಆಶರೀರವಾಣಿಯೊಂದು ಮೊಳಗಿ “ಎಲೆ ಪಾಪಿ ಕೇಳು, ನೀನೆನ್ನ ಕೊಲ್ಲುವುದಕ್ಕೆ ಗಂಟಲೊಳಿಳಿವ ತುತ್ತಲ್ಲ’ ನಿನ್ನ ವೈರಿ ಭೂಮಿಯಲ್ಲಿ ಬೆಳೆವುತಿರುವನು, ಕೊಲ್ಲದಿರ’’ನೆಂದು ಹೇಳುತ್ತದೆ.

ಇದರಿಂದ ದುಃಖಿತನಾದ ಕಂಸ ನಾರದರ ಮಾತೆಲ್ಲ ಸುಳ್ಳಾದ ಬಗ್ಗೆ ನೆನೆಸುತ್ತ, ಭೂಮಿಯಲ್ಲಿರುವ ಶಿಶುಗಳನ್ನೆಲ್ಲ ಸಂಹರಿಸಲು ಅಪ್ಪಣೆ ಮಾಡುತ್ತಾನೆ. ಹಾಗೆಯೇ ವಸುದೇವ ದೇವಕಿಯರನ್ನು ಸೆರೆಯಿಂದ ಬಿಡುಗಡೆ ಮಾಡುತ್ತಾನೆ.

ಮಂತ್ರಿಗಳನ್ನು ಕರೆದು ಕೇಳಿದಾಗಲೂ ಗೋದ್ವಿಜರನ್ನು ಬಡಿದು ಎಲ್ಲ ಶಿಶುಗಳನ್ನು ಕೊಲ್ಲುವ ಸಲಹೆ ಕೊಡುತ್ತಾರೆ. ಕಂಸ ಹೀಗೆ ನಿಶ್ಚಯಿಸುತ್ತಿರುವಾಗ ಗೋಕುಲದಲ್ಲಿ “ಮಹಿಳೆಯರ್ ಬರುತಳುವ ಬಾಲನಂ ಕಾಣುತ್ತಲಹಹ ಸಿರಿವಂತೆ ನಮ್ಮೊಡತಿ’’ ಎಂಬ ಮಾತುಗಳನ್ನು ಕೇಳಿ ನಂದ ಯಶೋದೆಯರು ಸಂತೋಷ ಹೊಂದುತ್ತಾರೆ. ದನಕರುಗಳ ದಾನ ಕೊಡುತ್ತಾರೆ. ಇವೇ ಮುಂತಾಗಿ ಸುದ್ದಿ ತಿಳಿದ ಕಂಸ ಭಯದಿಂದ ಪೂತನಿಯನ್ನು ಕರೆದು ಎದೆ ಹಾಲನ್ನು ಕೊಟ್ಟು ಲೋಕದ ಶಿಶುಗಳನ್ನು ಕೊಲ್ಲಲು ಹೇಳುತ್ತಾನೆ. ಇದ ಕೇಳಿದ ಪೂತನಿ ಸುಂದರ ಸ್ತ್ರೀಯಾಗಿ ಪರಿವರ್ತನೆ ಹೊಂದಿ, ಕೃಷ್ಣನ ಕೊಲ್ಲುವೆನೆಂದು ನಂದನ ಮನೆಗೆ ಬರುತ್ತಾಳೆ. ಮಲೆತು ಮಲಗಿದ್ದ ಶಿಶಿವನ್ನು ಎತ್ತಿಕೊಂಡು ವಿಷದ ಹಾಲುಣಿಸುತ್ತಾಳೆ. ಸೋಕಿದರೆ ಮೈಯೊಡೆವ ವಿಷವ ಬಾಯಿಂದ ಉಗುಳುತ್ತ ಮೊಲೆ ಹೀರುತ್ತಾನೆ. ಪೂತನಿಗೆ ನೋವು ಶುರುವಾಗುತ್ತದೆ. ರಕ್ತ ಹೀರುತ್ತ ಹೋಗುತ್ತಾನೆ ಕೃಷ್ಣ “ದಮ್ಮಯ್ಯ ಕೊಲದಿರು ಬಿಡು ಕಂದ ತೊತ್ತಾಗುವೆ ಕಣ್‌ಗತ್ತಲೆ ಬರುತಿದೆ’’ ಎಂದು ಒದರುತ್ತಾಳೆ. “ನಾ ಕೆಟ್ಟೆನೆನುತ ಬಾಯಾರಿ ಬಸವಳಿದು, ಮಗುವಲ್ಲದೀ ಮಾರಿ’’ ಎಂದು ಅಬ್ಬರಿಸುತ್ತ ಭೀಕರಾಕೃತಿಯನ್ನು ತಳೆದು “ಮಿಗೆ ಬಿದ್ದಳಸುರೆ ತಾನೈದು ಯೋಜನ ಉದ್ದವಗಲದು ನಗರಕಿದಿರಾಗಿ’’.

ಕೃಷ್ಣನಿಗೆ ವಿಷವೇರಿದೆಯೆಂದು ವಿವಿಧವಾದ ಔಷಧಿಯನ್ನು ಕೊಟ್ಟು ಉಪಚರಿಸುತ್ತಾರೆ. ಪೂತನಿಯನ್ನು ಕೊಂದ ಮೇಲೆ ಶಟಕಾಸುರನೆಂಬ ಹಾಗೆಯೇ ಧೇನುಕನೇ ಮೊದಲಾದ ರಾಕ್ಷಸರನ್ನು ಕೊಂದ ಬಲರಾಮ ಕೃಷ್ಣರಿಗೆ ತೊಟ್ಟಿಲೊಳಿಟ್ಟು ತೂಗಿದರು. “ಜೋಜೋ ದೇವಾದಿದೇವ ಮುಕುಂದ ಜೋಜೋ ಗೋಪಿಯ ಕಂದ’’ ಮುಂತಾಗಿ ಹಾಡಿ ಮುದಗೊಳಿಸುತ್ತಿದ್ದರು. ಹೀಗಿರುತ್ತ ಕೃಷ್ಣ-ಬಲರಾಮರು ವಿವಿಧ ಬಾಲಲೀಲೆಯನ್ನು ತೋರಿದರು.

“ಮೆಲ್ಲ ಮೆಲ್ಲಡಿಯಿಡುತ್ತ ಪಶುಪಾಲಕರ ಸ್ನೇಹದಲ್ಲಿ ಗೋವ್ಗಳ ಮೇಯಿಸುತ್ತ’’ ಇರುವಾಗ ಮೊಸರು ಮಾರಲು ಬಂದ ಗೋಪಿಕೆಯರೊಡನೆ “ಕೊಟ್ಟು ವೋಗೆನ್ನ ಸುಂಕವ ಕಣ್ಣಬಿಟ್ಟರಂಜವನಲ್ಲ ದಿಟ್ಟ ಹೆಂಗಳಿರ’’ ಎಂದು ಹಾಲು ಮೊಸರ ಬಗ್ಗೆ ಸುಂಕ ಕೊಡಿರೆಂದು ಕಾಡುತ್ತಿರಲಾಗಿ “ಸುಂಕದ ನಿಜವೇನು ಹೇಳು ನಿನ್ನ ಅಂಕೆಗೆ ನಾವಂಜುವವರಲ್ಲ ಕೇಳು’’ ಎಂದು ಎದುರೇಟು ನೀಡುತ್ತಾನೆ. ರಾತ್ರಿ ಕದ್ದು ಗೋಪಿಯರ ಮನೆ ಹೊಕ್ಕಿ ಮೊಸರು ತಿನ್ನುವ ಕೃಷ್ಣನನ್ನು “ಯಾರೆ ಬಂದವರು’’ ಮುಂತಾಗಿ ಅರಸುತ್ತಾರೆ. ಸರಿರಾತ್ರಿಯಲ್ಲಿ ಯಾರೋ ಬಂದಂತಾಯಿತು. “ಚಿನ್ನ ಬೆಳ್ಳಿಗಳ ಬಿಟ್ಟು ರಸಬಾಳೆ ಹಣ್ಣಿಗೆಂದಾಸೆ ಪಟ್ಟು’’ ಯಾರೋ ಬರುತ್ತಾರೆ. ಆ ಬಾಲರು ಸಿಕ್ಕದೇ ಇರರು ಎಂದು ಗೋಪಿಕೆಯರು ಮಾತಾಡಿಕೊಳ್ಳುತ್ತಾರೆ. ರಾತ್ರಿ ಕನಸೆಂಬಂತೆ ಕೃಷ್ಣ ಬಂದುದನ್ನು ವರ್ಣಿಸಿಕೊಳ್ಳುತ್ತಾರೆ. “ಪೇಳಲಂಜುವೆ ಬಂದ ಹೊಸಪರಿ ಬಾಲಗೆ ಕಾಲಲಂದುಗೆ ಗೆಜ್ಜೆ ಕಡಗ ಮೊದಲುಂಟು … ನಂದಗೋಪ ಯಶೋದೆ ಕಂದನಲ್ಲದೆ ಮನೆಗೆ ಬಂದು ಕಳುವವರಿಲ್ಲ’’ ಎಂದು ಮುಂತಾಗಿ ಹಳಹಳಿಸುತ್ತಾರೆ.

ಹೀಗೆಲ್ಲ ಮಾತಾಡಿಕೊಂಡು ಹೆಂಗಳೆಯರು ಯಶೋದೆಯಲ್ಲಿಗೆ ಹೋಗುತ್ತಾರೆ. ಬಂದ ಹೆಂಗಳೆಯರನ್ನು ಕಂಡು ಕುಳ್ಳಿರಿಸಿ, ಬಂದ ಕಾರಣವನ್ನು ಕೇಳಲಾಗಿ ಅವರು “ಕೇಳೆ ಗೋಪಿ ರಂಗನಾಟವ ಪೇಳದಿರುವುದುಚಿತವಲ್ಲ. ಪೇಳ್ದೂಡೊಂದು ಕಾರ್ಯವಿಲ್ಲ. ರಾತ್ರಿಯೊಳಗೆ ಬಾಗಿಲ್ಮುರಿಯಲಾಗಿ ಬೆದರಿ ಕದವ ತರೆಯಲೊಳಗೆ ಬಂದು ನಾವರಿಯದಂತೆ ಹಾಲು ಮೊಸರು ಸುರಿವುತೋಡಿ ಬರುವ ಸುಮ್ಮನೆ ಮೇಲಡಗಿಸಿ ಬಚ್ಚಿಟ್ಟಿದರ ಬುಡಕೆ ಕೋಲಲಿಟ್ಟು ತೂತು ಮಾಡುತ್ತಾನೆ ಎನ್ನುತ್ತಾರೆ. ಇದನ್ನು ಕೇಳಿದ ಗೋಪಿ ವಿಸ್ಮಯಪಟ್ಟು ರಾತ್ರಿ ತನ್ನ ಮಗ ಬಂದುದಕ್ಕೆ ಗುರುತೇನು ಎಂದು ಕೇಳುತ್ತಾಳೆ. ನಿಮ್ಮ ಮಾತು ವಿಚಿತ್ರ ಇಲ್ಲಿ ಮೊಸರು-ಬೆಣ್ಣೆ ಹಾಕಿದರೆ ತಿನ್ನುವುದಿಲ್ಲ ಎನ್ನುತ್ತಾಳೆ. ಗೋಪಿಯರು ಮುಂದುವರಿಸುತ್ತಾರೆ. “ಸಣ್ಣವರಾಟವಲ್ಲ ಸಂಗಡಬಂದ ಚಿಣ್ಣರೊಳ್ ಕೇಳ್ದೆವೆಲ್ಲ ಅಣ್ಣರಾಮರಿಯದಂದದೊಳೋಡೋಡಿ ಬಂದಿವಳ ಬಣ್ಣದುಟಿಯ ಸವಿದ ಕೇಳು’’ ಎಂದರೆ ಗೋಪಿ ಎನ್ನಣುಗಗೆ ಆಲದ ಹಣ್ಣು ತಿಂದು ಅಭ್ಯಾಸವಾಗೆ ಒಂದರಿಯದ ಬಾಲ ಮುಗುದೆ ನಿನ್ನಧರವ ತಿಂದರೇನಾಯಿತೆ’’ ಎಂದು ಮಗನನ್ನು ಸಮರ್ಥಿಸಿಕೊಳ್ಳುತ್ತಾಳೆ. ನಸು ಬೆಳಗಿರುವಾಗ ಯವ್ವನವತಿ ಮೊಸರ ಮಂತಿಸುತಿಪ್ಪನ ಕುಶಲದಿಂದೆಳೆದಮರ್ದಪ್ಪುತ ತರುಣಿಯ ಪೊಸ ಕುಚಂಗಳ ಮುಟ್ಟಿದ’’ ಮುಂತಾಗಿ ದೂರುತ್ತಾರೆ.

ಅವರು ಹೋದ ಮೇಲೆ ಗೋಪಿ ಕೃಷ್ಣನನ್ನು ಕರೆದು “ಚಂದವಾಯಿತು ಮಗನೆ ನಂದಗೋಪ ನಣುಗ ಕದ್ದು ತಿಂದನೆಂಬ ಮಾತು ಬಂದುದು’’ ಮುಂತಾಗಿ ಬುದ್ಧಿ ಹೇಳುತ್ತಾಳೆ. ಅವರು ಮತ್ಸರದಿಂದ “ದೂರುವರೆನ್ನ ಕೊಲ್ಲಿಸಬೇಕೆನುತಲಮ್ಮ ಇರುಳ ಪಟ್ಟಣ ಸಂಚರಿಸಲ್ಕೆನಗೇನು ಮರುಳಾಯ್ತೇ ನಮ್ಮ’ ಮುಂತಾಗಿ ಹೇಳುತ್ತಾನೆ. ಗೋಪಿಯರು ಇನ್ನೊಮ್ಮೆ ಕೃಷ್ಣನನ್ನು ಹಿಡಿದುತಂದರೆ ಅಂತಹದೇ ಮಗು ಯಶೋದೆಯ ತೊಡೆಯಲ್ಲಿರುವುದನ್ನು ನೋಡಿ ನಾಚುತ್ತಾರೆ. ಯಶೋದೆ ಮಗುವಿಗೆ ಬುದ್ಧಿ ಹೇಳಿ ಹಾಲು ಕುಡಿಸಿ ಸಂತೋಷಪಡುತ್ತಾಳೆ.

ಮಾರನೆಯದಿನ ಕೃಷ್ಣ ಗೋಪಬಾಲಕರನ್ನು ದನಕರುಗಳನ್ನು ಹೊಡೆದುಕೊಂಡು ವೃಂದಾವನಕ್ಕೆ ಹೋಗುತ್ತಾನೆ. ಆತನ ಕೊಳಲನಾದವನ್ನು ಕೇಳಿ ಗೋವುಗಳು ತಮ್ಮ ತಮ್ಮ ಹಸಿವೆಯನ್ನು ಮರೆತು ಆತನ ಹಿಂದೆ ಓಡುತ್ತವೆ. ಹಣ್ಣುಗಳನ್ನು ಕೊಯ್ದು ಬಲರಾಮಸಹಿತ ಗೋಪ ಮಕ್ಕಳು ತಿನ್ನುತ್ತಾರೆ. ಗೋಪಾಲ ಎಲ್ಲಿ ಹೋದ? “ನಿಲಲಾರೆವೈ ಗೋಪಾಲಕೃಷ್ಣನ ಪ್ರಾಣನಾಯಕ ಪಂಚಬಾಣ ಜನಕ ಈ ವೇಣುಗೋಪಾಲನ’’ ಎಂದು ಗೋಕುಲದ ಗೋಪಿಕೆಯರೆಲ್ಲ ಕೃಷ್ಣನನ್ನು ಕಾಣದೇ ವಿರಹದಂತಹ ಅನುಭವವನ್ನು ಹೊಂದುತ್ತಾರೆ. ಅವರೆಲ್ಲ ಕೂಡಿ ಯಮನೆಯ ದಡದಲ್ಲಿ ಗೌರಿವ್ರತ ಮಾಡಿ ಕೃಷ್ಣನನ್ನು ಮೆಚ್ಚಿಸಲು ನಿಶ್ಚಯಿಸುತ್ತಾರೆ. “ಹಲವು ವಿಧದಲಿ ನಲಿದು ಪ್ರಾರ್ಥಿಸಿ, “ಶ್ರೀ ಗೌರಿಗೆ ಶುಭ ಶೋಭಾನವೆ ಪುಂಡರೀಕ ನೇತ್ರನೆನ್ನ ಗಂಡನಾಗಿದ್ದರೆ ನಿನ್ನ ಮಂಡೆಗೆ ರತ್ನ ಮುಕುಟ ಕೊಂಡು ತರಿಸುವೆನು’’ ಮುಂತಾಗಿ ಪ್ರಾರ್ಥಿಸುತ್ತಾರೆ.

ವ್ರತ ಮುಗಿದ ಮೇಲೆ ಯಮುನೆಯಲ್ಲಿ ನೀರಾಟ ಆಡಿ ಹೋಗುವ ಎಂದು ಅವರು ತಮ್ಮ ಸೀರೆ ಕುಪ್ಪುಸಗಳನ್ನು ಚಿನ್ನಾಭರಣಗಳನ್ನು ಬಿಚ್ಚಿಟ್ಟು ನೀರಿಗಿಳಿಯುತ್ತಾರೆ. “ಜಲಕ್ರೀಡೆಯೊಳಗಿದ್ದರೆಲ್ಲ ತಂತಮ್ಮೊಳಗೊಬ್ಬಬ್ಬರ ಎಳೆದಾಡುತ್ತ ಪುಲ್ಲಶರನರಗಿಣಿಯಂತೆ ಪೋಲ್ದ ಚೆಲ್ವ ಲಲನೆಯರೆಲ್ಲ ನೋಡಿದ ಲಕ್ಷ್ಮೀನಲ್ಲ’’.

ಹೀಗೆ ನೋಡಿದ ಕೃಷ್ಣ ಬುದ್ಧಿಕಲಿಸಲು ಇದೇ ಸಮಯವೆಂದರಿತು ಅವರ ಸೀರೆಗಳನ್ನು ಮೆಲ್ಲನೆ ಎತ್ತಿಕೊಂಡು ಮರವೇರಿ ಕುಳಿತು ಕುಕ್ಕೂರು ಕೂಗುತ್ತಾನೆ. ಮರದ ಮೇಲೆ ಬ್ರಹ್ಮರಾಕ್ಷಸನಿದ್ದಾನೆ. ಕೊಲ್ಲುತ್ತಾನೆ. ಕೆಳಗಿಳಿ ಎಂದು ಗೋಪಿಯರು ಹೇಳಿದರೂ ಆತ ಇಳಿಯುವುದಿಲ್ಲ. “ಸೀರೆಯ ನೊಯ್ವರೆ ಶ್ರೀಕೃಷ್ಣ ನಿನಗಿಂತ ಚೋರ ವಿದ್ಯೆಯದೇಕೊ’’ “ಮನೆಯವರಿದ ಕೇಳಿದರೆ ನಿನ್ನ ಎಳೆದೊಯ್ದು ದಣಿಸಿ ದಂಡಿಸುವರು. ವಸನಂಗಳನು ಕದ್ದ ವಸುದೇವನಣುಗನೆ ವಶ ವಾದೆವೈನಿನ್ನ’’ ಎಂದು ಸೀರೆ ಕೊಡು ಎಂದು ಮೊರೆಯಿಡುತ್ತಾರೆ. ಅದಕ್ಕೆ ಕೃಷ್ಣ “ಮರುಳಾದಿರಿ ನೀವು ಕೆರೆಯೊಳು ನಿಂತುಕೊಂಡು ಶಿರವರಿದವರಂತೆ ಮೊರೆಯಿಟ್ಟು ಕೂಗಲ್ಯಾಕೆ’’ ಎನಲು “ಅರಿಯದೆ ಮೋಸ ಹೋದೆವು ಅರವಿಂದ ನೇತ್ರ ಬೇಡುವೆವು ಸೆರಗೊಡ್ಡಿ’’ ಎಂದರೆ, ನಾನೆಲ್ಲಿ ಕದ್ದಿದ್ದೇನೆ ಕಾಣಿಸಿ ಕೊಡಿರಿ ಎನ್ನುತ್ತಾನೆ. “ದಾಸಿಯರಾದೆವಯ್ಯ ವಸನವ ನೀಡುದಮ್ಮಯ್ಯ ಅಂಬುಧಿಯೊಳಾಡುವ ದಿಗಂಬರೆಯರಾದೆವು ಮನೆಗೆ ಬೆಂಬಿಡದೈದುವದೆಂತು’’ ಮುಂತಾಗಿ ಹೇಳಿದರೆ ಕೃಷ್ಣ “ಬಾಲೆಯರೆ ನೀರಿಂದ ನೀವು ಮೇಲೆ ಬನ್ನಿ ಕೊಡುವೆನು ನಿಮ್ಮ ಸೀರೆಗಳನ್ನೆಲ್ಲ’’ ಎನ್ನುತ್ತಾನೆ. ಇದನ್ನು ಕೇಳಿದ ಬಾಲೆಯರು ತಮ್ಮ ತಾವು ಮರೆಮಾಡಿಕೊಳ್ಳುತ್ತ ಮೇಲೆ ಬಂದು “ಇನ್ನಾದರೂ ದಯಮಾಡು ಬಂದೆವಲ್ಲದಡಹತ್ತಿ’’ ಎನ್ನುತ್ತಾರೆ. “ಬೆತ್ತಲೆ ಕೊಳವಿಳಿದ ಪ್ರಾಯಶ್ಚಿತ್ತವಾಗಿ ನೀವು ಸುರರ್ಗೆ ಭಕ್ತಿಯಿಂದ ನಮಿಸಿ ಕೊಡುವೆ’’ ಎನ್ನಲು “ಮಡದಿಯರು ತಮ್ಮ ತಮ್ಮ ಜಡೆಬಿಚ್ಚಿ ಪಸರಿಸುತ್ತ ಒಡನೆ ಮುಗಿದರೊಂದು ಕೈಯ ಬಿಡದೆ ನಾಚುತ’’ ಅದನ್ನು ಗಮನಿಸಿದ ಕೃಷ್ಣ ತನ್ನ ಆಟವನ್ನು ಇನ್ನೂ ಮುಂದುವರಿಸುತ್ತಾನೆ. “ಒಂದು ಕೈಯ ಮುಗಿದರೆ ದೇವೇಂದ್ರ ಮುಖ್ಯ ದೇವತೆಗಳಿಗೆ ಚಂದವಲ್ಲ ಎರಡೂಕೈಗಳಿಂದ ಮುಗಿಯಿರೆ’’ ಎನ್ನುತ್ತಾನೆ. ಅವರು “ಮಾರನ ಮಂದಿರಕೆ ತೊಡೆಯ ಸೇರಿಸುತ್ತ ಮೆಚ್ಚಿಕೊಂಡು ಬೇರೆ ಬೇರೆ ಎರಡು ಕೈತೋರಿ ಮುಗಿದರು.’’

ತನ್ನದು “ಕುರಂಗಲೋಚನದ ಬಣ್ಣ ಹೊಂಗೇದಗೆಸಳಿನ ತೆರಕುಪ್ಪುಸವ,’’ ಚಂದ್ರಕಾವಿಯ ಸೀರೆ ಚಂದದರವಕೆ ಗೋವಿಂದ ನೀದಯಮಾಡು’’ ಪನ್ನಗಾರಿ ಧ್ವಜನೆ ಕೇಳೆನ್ನ ವಸ್ತ್ರದಂಡವನ್ನು ಸ್ವರ್ಣರೇಖೆ ಸುತ್ತಲು ಮೆರೆವುದು ಮಿಂಚುತಿರುವುದು..’’ ಹಳ್ಳಿಯವಳಲ್ಲ ನಾನು ಹರುಷದಿಂದುಟ್ಟಿಂತಾದ್ದು ಬೆಳ್ಳಿಯ ಕಂಬಿಯ ಸೀರೆ ಪಾಲಿಸೊ’’ ಅರಮನೆಯಿಂದ ಮೆಚ್ಚಿಕೊಟ್ಟಂಥ ಸೀರೆ ತೋರಯ್ಯ ಕೈಯೋಳ್ ತಾರಯ್ಯ’’ ಮುಂತಾಗಿ ಮುದಗೊಂಡು ಬೇಡುತ್ತಾರೆ. “ಬಾಲೆಯರನೆಲ್ಲ ಕರೆದು ಶಾಲೆಗಳ ಕೊಟ್ಟನರಿದು ಲೀಲೆಯಿಂದ ಉಟ್ಟುಕೊಂಡು ಮೆರೆದರು ಸುಖಿಸಿದರು’’ ಬಾಲೆಯರು.

ಹೀಗೆ ಲೀಲಾಲೋಲನಾದಂಥ ಕೃಷ್ಣ ತರುಣಿಯರನೆಲ್ಲ ಕೂಡಿ ಗೋಕುಲಕ್ಕೆ ನಡೆತಂದು ಸುಖದಿಂದಿದ್ದನು.

. ಯಾದವಾಭ್ಯುದಯ

ಒಂದು ದಿನ ಮಧುರೆಯ ಅರಸನಾದ ಉಗ್ರಸೇನನು ವಸುದೇವನನ್ನು ಕರೆದು ಬಾಲ್ಯದಲ್ಲಿಯೇ ಕಂಸಾದಿ ರಾಕ್ಷಸರನ್ನು ಸದೆಬಡಿದು ರಾಜ್ಯವನ್ನು ರಕ್ಷಿಸಿದ ಕೃಷ್ಣ ಮಹಾಮಹಿಮನೇ ಸೈ. ಸುಮ್ಮನೆ ಕಂಸ ಹರಿಯ ದ್ವೇಷವ ಮಾಡಿ ಹಾಳಾದ. ಇಂಥ ಮಹಾಮಹಿಮರ ಮಕ್ಕಳಾಗಿ ಪಡೆದ ನಿನ್ನ ಭಾಗ್ಯವೇ ಭಾಗ್ಯ. ಆದುದರಿಂದ ಯಾದವರ ಪದ್ಧತಿಯ ಪ್ರಕಾರ ಕೃಷ್ಣ ಬಲರಾಮರಿಗೆ ಉಪನಯನವೇ ಮೊದಲಾದ ಕಾರ್ಯ ನೆರವೇರಿಸು ಎನ್ನಲು ವಸುದೇವನು ಕುಲಪುರೋಹಿತ ಗಾರ್ಗ್ಯರನ್ನು ಕರೆಸಿ ಚೌಳ ಕಾರ್ಯವನ್ನು ನಡೆಸಿ ಕಲಶೋದಕ ಸ್ನಾನ ಮಾಡಿಸಿ ಭೋಗ್ಯಗಳಿಂದ ಸಂತಸಪಡಿಸಿ ಮುಂದೆ ಬ್ರಹ್ಮೋಪದೇಶವನ್ನು ಕೊಟ್ಟು ತಾನು ಸೆರೆಯಲ್ಲಿದ್ದಾಗ ಹೊತ್ತ ಹರಕೆಯಂತೆ ಲಕ್ಷಗೋಧನವನ್ನು ಬ್ರಾಹ್ಮಣರಿಗೆ ದಾನವಿತ್ತು ಕಾರ್ಯ ನೆರವೇರಿಸಿದರು.

ವಟುಗಳಾದ ಬಲರಾಮ ಕೃಷ್ಣರಿಗೆ “ಭಿಕ್ಷೆಯ ನೀಡೆಸಖಿ ಸಾರಸ ಮುಖಿ ಭಿಕ್ಷೆಯ ನೀಡೆ ಸಖಿ ಇಕ್ಷುಚಾಪನ ಸಿತ ಪಕ್ಷಿವಾಹನ ಪರ ಪಕ್ಷರಹಿತ ನಿತ್ಯ ಲಕ್ಷ್ಮೀಕಾಂತಗೆ ಮುದದಿ’’ ಎಂದು ಸುದತಿಯರು ಸಂಸ್ಕಾರ ನೆರವೇರಿಸಲು ಬಲರಾಮ, ಕೃಷ್ಣ, ಸಾಂದೀಪನೆಂಬ ಋಷಿಯ ಆಶ್ರಮಕ್ಕೆ ವಿದ್ಯೆ ಕಲಿಯಲು ಹೋದರು. ಅಲ್ಲಿ “ಪರಮ ಪುರುಷರಿಂತು ಹರುಷದಿಂ ಚೌಷಷ್ಠಿ ಪರಿಗಣನೆಯ ವಿದ್ಯೆಯ ಅರವತ್ತು ನಾಲ್ದಿನ ಹರಿವಷ್ಟರೊಳು ಕಲ್ತು’’ ಸರ್ವಜ್ಞರಾದರು.

ಹೀಗೆ ಅಧ್ಯಯನವನ್ನು ಪೂರ್ತಿಮಾಡಿ ಗುರುವನ್ನು ಆಶ್ಚರ್ಯಗೊಳಿಸಿದ ಇವರು ತಮ್ಮ ಮನೆಗೆ ಹೋಗಲು ನಿಂತು ಗುರುಕಾಣಿಕೆ ಏನು ಕೊಡಬೇಕೆಂದು ಕೇಳಲು ಗುರುಪತ್ನಿ ತನ್ನ ಗಂಡನೊಡನೆ ಇವರು ಜಗತ್ರಾಣ ಮೂರ್ತಿಗಳಲ್ಲದೆ ಬೇರಲ್ಲ, ಇವರಲ್ಲಿ ತಮ್ಮ ಸತ್ತು ಹೋದ ಮಗನನ್ನು ತಂದು ಕೊಡಲು ಹೇಳಿದರೆ ತಮಗೆ ಉತ್ಸವವಾಗುತ್ತವೆ ಎನ್ನಲು ಸಂದೀಪನು ವರುಣನಿಂದ ಅಳಿದುಹೋದ ತನ್ನ ಮಗನನ್ನು ತಂದು ಕೊಟ್ಟರೆ ತಮಗೆ ಸಂತೋಷವಾಗುತ್ತದೆ ಎನ್ನಲು ಅದಕ್ಕೊಪ್ಪಿ ಗುರುವಿಗೆ ನಮಸ್ಕರಿಸಿ ಹೊರಟರು.

ಇದನ್ನು ಅರಿತ ವರುಣನು ಆತನನ್ನು ಎದರುಗೊಂಡು ಜಯ ಜಯವೆನಲು ಗುರುವಿನ ಮಗುವನ್ನು ಕೊಡುವಂತೆ ಕೇಳಲಾಗಿ, ಗುರುಪುತ್ರನ ಸಾವಿನಲ್ಲಿ ತನ್ನ ಪಾತ್ರವಿಲ್ಲವೆಂದೂ, ಅದಕ್ಕೆ ಶಂಖಾಸುರನು ಕಾರಣನೆಂದೂ ಆತ ಸಮುದ್ರದ ಮಧ್ಯೆ ಅಡಿಯಲ್ಲಿ ವಾಸವಾಗಿರುವುದಾಗಿ ತಿಳಿಸುತ್ತಾನೆ. ಸನ್ನೆಯಿಂದ ಸ್ಥಳವನ್ನು ತೋರಿಸಲು ಶಂಖಾಸುರನು “ಎಲೆಲೊ ಮದಾಂಧರಾಗಿ ವಾರಿಧಿಯೊಳು ಮುಳುಗುತಿದ್ದು ಯಾರು ನಿಂತು ಹುಡುಕುವಿರಿ ಮೊಗೇರರಂದದಿ’’ ಎಂದು ಕೇಳಲು, “ಕಳ್ಳರಂತೆ ಕಡಲ ಮಧ್ಯದಲ್ಲಿ ಮನೆಯ ಮಾಡಿಕೊಂಡು ಮೆಲ್ಲನಬ್ದಿಗಿಳಿವ ಜನರ ಕೊಲ್ಲು’’ ತಿರುವ ಅಧಮನೀನು. ಪ್ರಭಾಸದಲ್ಲಿಯ ಸಾಂದೀಪ ಪುತ್ರನನ್ನು ತೋರಿಸು ಎಂದನು. ಕೃಷ್ಣ ಈ ಕೆಲಸಕ್ಕೆ ಬಂದಿದ್ದಿಯಾ ನಿನ್ನ ಗುರುಪುತ್ರ ನನ್ನ ಹಸಿವಿಗೆ ಇಂಗಿ ಹೋದ. ಈಗ ನನ್ನ ಹಸಿವು ಇಳಿಸಲು ನೀವು ಸಿಕ್ಕಿದ್ದೀರಿ ಎಂದು ಮುಂತಾಗಿ ಹೇಳಲು ಬಲರಾಮನು ಖಳನನ್ನು ತಿವಿದನು. ನೀವು ಹೇಡಿಗಳು, ಕಳ್ಳರು ಎಂದೆಲ್ಲ ಹೇಳಿದ ಶಂಖಾಸುರನು ಕೃಷ್ಣನ ಪೆಟ್ಟಿಗೆ ರಕ್ತಕಾರಿ ಬಿದ್ದನು. ಹೀಗೆ ಬಿದ್ದ ಶಂಖಾಸುರ ಕೃಷ್ಣನನ್ನು ಸ್ತುತಿಸಿ ತನ್ನ ತಪ್ಪನ್ನು ಕ್ಷಮಿಸಿ ಮುಕ್ತಿ ನೀಡಬೇಕೆಂದೂ ಆದರೆ ತನ್ನ ಹೆಸರು ಸ್ಥಿರವಾಗುವ ಹಾಗೆ ತನ್ನ ಅಸ್ಥಿಯಿಂದ ಶಂಖ ನಿರ್ಮಿಸಿಕೊಂಡು ಅದನ್ನು ಕೈಯಲ್ಲಿ ಹಿಡಿದುಕೊಂಡಿರುವಂತೆ ಅನುಗ್ರಹಿಸಬೇಕೆಂದು ಕೇಳಿಕೊಳ್ಳಲಾಗಿ ಆತನ ಎಲುಬಿನಿಂದ ಪಾಂಚಜನ್ಯವೆಂಬ ಶಂಖವನ್ನು ಮಾಡಿಕೊಂಡನು. ಅಲ್ಲಿಂದ ಕೃಷ್ಣ ಯಮಲೋಕಕ್ಕೆ ಹೋಗಲು ಯಮ ಆತನನ್ನು ಸ್ವಾಗತಿಸಿ ಸಂದೀಪಪುತ್ರನನ್ನು ಕೊಟ್ಟನು. ಹಾಗೆ ಸಾಂದೀಪರಲ್ಲಿ ಹೋಗಿ ಅವರ ಮಗುವನ್ನು ಒಪ್ಪಿಸಿ ಆಶೀರ್ವಾದ ಪಡೆದು ಮಧುರೆಗೆ ತೆರಳಿದರು..

ಹೀಗೆ ಮಧುರೆಯಲ್ಲಿ ಸಂತೋಷದಿಂದ ಕಾಲ ಕಳೆಯುತ್ತಿರುವಾಗೊಂದು ದಿನ ಕೃಷ್ಣ ಉದ್ಧವನನ್ನು ಕರೆದು ನಂದಗೋಕುಲವನ್ನು ಮತ್ತು ತಂದೆ-ತಾಯಿಗಳ (ನಂದಗೋಪ ಮತ್ತು ಯಶೋದೆ) ಅಗಲಿ ಬಹಳ ಕಾಲವಾಯಿತು. ಅವರಿಗೆಲ್ಲ ನೋವಾಗದೆ ಇಲ್ಲ, ಅವರಿಗೆಲ್ಲ ನಾನು ವಂಚಿಸಿದಂತಾಯಿತು. ನೀನು ನನಗೆ ಸಮಾನ ಬಾಂಧವ, ನೀನು ಹೋಗಿ ಅವರನ್ನೆಲ್ಲ ವಿಚಾರಿಸಿಕೊಂಡು ಸಂತೈಸಿ ಬಾ ಎನ್ನುತ್ತಾನೆ.

ನಂದಗೋಕುಲದಲ್ಲಿ ಅಹಾ, ನಮ್ಮನ್ನು ಕೃಷ್ಣ ನೆನೆವನೇ, ಗೋಪಿಕೆಯರನ್ನು ನೆನೆವನೇ ಎಂದು ಕಾತರದಿಂದ “ಬಾಲನೆಂದಿಗೆ ಬಂದಪ ಯದುಕುಲದೀಪ, ಚೆನ್ನಕೇಶವ ಮೊಸರು-ಹಾಲನು ಮೇಣುಬೆಣ್ಣೆಯ ಗೋಪಿಯರ ಕಣ್ಣನೂಮರೆಗೆಯ್ದು’’ ರೀತಿಯಾಡಿದ ಕೃಷ್ಣನನ್ನು ಮತ್ತೊಮ್ಮೆ ಮೊಲೆಯೂಡಿಪನೇ ಎಂದು ನೆನೆಸುವ ಯಶೋದೆಯರನ್ನೆಲ್ಲ ಕಂಡು, ಶೋಕಬೇಡ, ಕೃಷ್ಣನನ್ನು ಮಗನಾಗಿ ಪಡೆದ ನಿಮ್ಮ ಭಾಗ್ಯವೇ ಭಾಗ್ಯ ಎಂದು ಅವರಿಗೆ ಸಮಾಧಾನ ಹೇಳುತ್ತಾನೆ. ಹೀಗೆ ಅವರು ಸಮಾಧಾನಪಡಿಸುತ್ತಿರಲು ಮತ್ತೊಂದು ಕಡೆ “ಗೋಪಿಕೆಯರು ಸುಸ್ವರದಿ ಮನವೊಲಿದು ಹರಿಲೀಲೆಗಳ ಭಕ್ತಿಭರದಿ ಪಾಡುತಲಿ ಮೊಸರ ಕಡೆವುತಿದ್ದರಂದು’’ ಅವರು ತುಳಸಿಮಾಲೆ ಧರಿಸಿರುವ ಉದ್ಧವನನ್ನು ನೋಡಿ ಕೃಷ್ಣನನ್ನು ನೆನೆದು ಆತನು ಯಾರೆಂದು ವಿಚಾರಿಸಿಕೊಳ್ಳುತ್ತಾರೆ. ಹರಿಯ ನೆನಪಾಗಿ ಕಣ್ಣೀರು ಹಾಕುತ್ತ “ಆರು ಕೃಷ್ಣನಿಗೆ ನಾವೆಮಗವನಾರು ವ್ಯಥೆ ಸುಮ್ಮನೆ, ಸೇರೆ ಸಾಮ್ರಾಜ್ಯವು ವೈರಿಗಳೆಲ್ಲ ಸೇರೆ ಬಲುಸುಖವು ನೀರಜನರಯನಿನ್ನಾರ ಹರಿಗೆಮ್ಮ ಓತ ಮನೆ ಮಕ್ಕಳ ಬಿಡುವ ಗೆಯ್ದ ಪ್ರೀತಿಗಿದೆ ಸುಫಲ’’ ಮುಂತಾಗಿ ದೂರುತ್ತಾರೆ. ಈ ರೀತಿಯ ವಿರಹದ ಕೃತ್ರಿಮ ಸಿಟ್ಟನ್ನು ತೋರುವ ಅವರು, “ಸಂಧಿಯಮಾಡೆ ನೀಬಂದುದಾದರೆ ಬಹೆವಿಂದೆಲ್ಲವನು ಮರೆತು’’ ಎಂದು ಕೃಷ್ಣ ಪ್ರೀತಿಯನ್ನು ತೋರುತ್ತಾರೆ.

ಅದನ್ನು ಕೇಳಿದ ಉದ್ಧವನು “ಧನ್ಯರಾರು ನಿಮ್ಮ ಹೋಲುವ ಪುಣ್ಯವಂತರಮ್ಮ’’ ಎಂದು ಹೇಳಿದರೂ “ಎಂದು ಮೈದೋರುವನೊ ಹರಿ’’ ಎಂದು ನೆನೆಸುವ ಅವರಿಗೆ ಕೃಷ್ಣ ನಿಮ್ಮನ್ನು ಅಗಲುವುದಿಲ್ಲ. ಆತ ಚೇತನ ರೂಪದಲ್ಲಿ ನಿಮ್ಮ ಹೃದಯದಲ್ಲಿ ಇದ್ದಾನೆ. ತನ್ನ ಮಾಯೆಯಲ್ಲಿ ಸೃಷ್ಟಿಲಯಗಳನ್ನು ಮಾಡುತ್ತಾನೆ. ಇವೆಲ್ಲವೂ ಅವನ ರೀತಿ. ಆತನನ್ನು ಪ್ರೀತಿಸಿದವರಿಗೆ ಮುಕ್ತಿಯನ್ನು ಕೊಡುತ್ತಾನೆ, ಮುಂತಾಗಿ ಸಮಾಧಾನ ಹೇಳಿ. ಅವರ ಹರಕೆಗಳನ್ನೆಲ್ಲ ಗ್ರಹಿಸಿ, ನಂದ-ಯಶೋದೆಯರ ಉಡುಗೊರೆಗಳನ್ನೆಲ್ಲ ಹೊತ್ತುಕೊಂಡು ಮಧುರೆಗೆ ಹಿಂದಿರುತ್ತಾನೆ.

ಒಂದು ದಿನ ಮಗಧನು ತನ್ನ ಗಿರಿವ್ರಜದ ರಾಜಧಾನಿಯಲ್ಲಿ ಸಭೆಗೊಡುತ್ತಿರುವಾಗ ಕಂಸನ ಹೆಂಡಂದಿರಾಗಿ ವಿಧವೆಯರಾದ ಹೆಣ್ಣು ಮಕ್ಕಳು ಬಂದು ಜನಕನೆ ನಮ್ಮ ಬಾಳುವೆ ಇನ್ನು ಯಾಕೆ, ನಮಗೆ ಸಾಯಲು ಅನುಮತಿ ಕೊಡು. ಕಂಸನ ದುರ‍್ಮರಣದಿಂದ ನಾವು ಅನಾಥರಾದೆವು ಎಂದು ಹೇಳಿಕೊಳ್ಳಲು ಮಾಗಧನು ದುಃಖಿಯಾಗಲು ಹೆಣ್ಣುಮಕ್ಕಳು, ತಂದೆಯೇ ಬಿಲ್ಲು ಹಬ್ಬದ ನೆಪದಲ್ಲಿ ಬಲರಾಮ ಮತ್ತು ಕೃಷ್ಣರು ಕಂಸನನ್ನು ಕೊಂದು ನಿನ್ನನ್ನು ಕೊಲ್ಲಲು ಹವಣಿಸುತ್ತಿದ್ದಾರೆ ಎನುತ್ತಾರೆ. ಅದನ್ನು ಕೇಳಿದ ಮಾಗಧ, ವಸುದೇವ ಮಗುವನ್ನು ಬಚ್ಚಿಟ್ಟು ಕಂಸನನ್ನು ಕೊಲ್ಲಿಸಿದ. ತಾನು ಹಗೆಯನ್ನು ಬಿಡುವುದಿಲ್ಲ. ಅವರನ್ನು ಶಿಕ್ಷಿಸುತ್ತೇನೆಂದು ಅವರನ್ನು ಸಾಂತ್ವನಗೊಳಿಸಿ, ಚರರನ್ನು ಕರೆದು ಶಿಶುಪಾಲನನ್ನು ಬರಹೇಳಿ ಕಳುಹಿಸಲು ಆತ ಬಂದು ಕೆಲಸವೇನೆಂದು ಕೇಳಲು ಬಲರಾಮ- ಕೃಷ್ಣರು ತನ್ನ ಹೆಣ್ಣು ಮಕ್ಕಳಿಗೆ ವೈಧವ್ಯವನ್ನು ತಂದಿದ್ದಾರೆ. ಕುರಿಗಳಂತಿರುವ ಅವರನ್ನು ಮುರಿಯಬೇಕೆಂದು ನಿನ್ನ ಕರೆಸಿದೆ ಎನ್ನುತ್ತಾನೆ. ಶಿಶುಪಾಲನು ಅಂಜದಿರು ಅರಸ ಈಶ್ವರನೇ ಬಂದರೂ ವೈರಿಗಳನ್ನು ಬಿಡೆನು ಎಂದು ಹೇಳಿ ದೊಡ್ಡ ಸೈನ್ಯದೊಂದಿಗೆ ಹೊರಡುತ್ತಾನೆ. ದಂತವಕ್ರ, ಹಾಹ್ಲಿಕ, ಮೊದಲಾದವರು ಮಧುರೆಯನ್ನು ಮುತ್ತಲಾಗಿ ಕೋಟೆಯನ್ನು ಕಾಯುತ್ತಿರುವ ಕಾವಲು ಭಟರು ಗಾಬರಿಯಿಂದ ಬಂದು ಕೃಷ್ಣನಿಗೆ ತಿಳಿಸುತ್ತಾರೆ.

ಇದನ್ನು ತಿಳಿದ ಕೃಷ್ಣನು ಮಾಗಧನು ತಾನಾಗೇ ಬಂದುದು ಒಳ್ಳೆಯದೇ ಆಯಿತು. ಆದರೆ ಆತನನ್ನು ಒಮ್ಮೆಲೆ ಕೊಲ್ಲಬಾರದು. ಆತ ಹೆಚ್ಚು ಹೆಚ್ಚು ದುಷ್ಟರನ್ನು ಕೂಡಿಬರುತ್ತಿರುತ್ತಾನೆ. ಆ ದುಷ್ಟರನ್ನೆಲ್ಲ ಮೊದಲು ಕೊಲ್ಲಬೇಕು. ಸಜ್ಜನರ ರಕ್ಷಿಸುವುದೇ ತನ್ನ ಉದ್ದೇಶ ಎಂದುಕೊಂಡು ಬಲರಾಮನಲ್ಲಿ ಮಗಧನ ದಾಳಿಯ ವಾರ್ತೆ ತಿಳಿಸುತ್ತಾನೆ. ಬಂದುದು ಒಳ್ಳೆಯದೇ ಆಯಿತು. ಅವರನ್ನೆಲ್ಲ ಯಮಸದನಕ್ಕೆ ಅಟ್ಟುತ್ತೇವೆ ಎನ್ನುತ್ತಾನೆ. ಕೂಡಲೇ ಕೃಷ್ಣ, ಕೃತವರ್ಮ, ಉದ್ಧವ ಮುಂತಾದವರನ್ನು ಕರೆಸಿ ಯುದ್ಧಕ್ಕೆ ಹೊರಡುತ್ತಾನೆ.

ಯುದ್ಧ ಸಂಭವಿಸಿತು. ರಕ್ತದ ಕಾಲುವೆಯೆ ಹರಿಯಿತು. ಆದರೆ ಮಾಗಧನ ಸೈನ್ಯ ಓಡಿ ಹೋಗಲಿಲ್ಲ. ಕಿರಾತನು ಬಂದು ಯಾದವರನ್ನು ತಡೆದು “ಯಾರು ನೀನೆಲೆ ಹುಡುಗ ಗೋಪಕುಮಾರನ ನುಡಿಕೇಳಿ ಮಾರಬೇಡಲೊ ತಲೆಯ’’ ಎಂದು ಸಾತ್ಯಕಿಯನ್ನು ತಡೆಯುತ್ತಾನೆ. ಕುರುಬರು ದಾರಿಯಲ್ಲಿ ಬಿದ್ದ ಕಲ್ಲನ್ನು ಮಾಣಿಕ್ಯವೆಂದು ತಿಳಿದ ಹಾಗೆ ಕೃಷ್ಣನನ್ನು ಪರಬ್ರಹ್ಮ ಎಂದುಕೊಂಡು ಯಾದವರು ಕೆಟ್ಟರು ಎನ್ನುತ್ತಾರೆ. ಇದನ್ನು ಕೇಳಿದ ಸಾತ್ಯಕಿ ಎಲ್ಲೊ ಕಾಡುಮಿಗವನ್ನು ಅರಸುವ ಬೇಡನೆ ನಿನ್ನ ಸೊಕ್ಕೇನು, ತೊಡುಬಿಲ್ಲನ್ನು ಎಂದು ಅವನನ್ನು ರಥಹೀನನ್ನಾಗಿ ಮಾಡಲು ಅದನ್ನು ಕಂಡ ಭೂರಿಶ್ರವ ಮುಂದೆ ಬರುತ್ತಾನೆ. ಯುದ್ಧದಲ್ಲಿ ಸೋತು ಸುಣ್ಣಾಗುತ್ತಾನೆ. ರಣಕಣದಲ್ಲಿ ಹೆಣಗಳರಾಶಿಯೇ ಬೀಳುತ್ತದೆ. ಇದನ್ನೆಲ್ಲ ಗಮನಿಸಿದ ಮಾಗಧನು “ದುಷ್ಟನೀ ನೆಲವೊ ಕಿಟ್ಟನೆಂಬವ ನಮ್ಮ ಕೊಟ್ಟ ಮಗಳಿಂದರೆರೆಯನನು ಕುಟ್ಟಿಕಳದೆಯೇಕೆ’’ ಮುಂತಾಗಿ ಹೇಳಿ ಅವನ ಮೇಲೆ ಎರಗುತ್ತಾನೆ. ಆದರೆ ಭಯಂಕರ ಯುದ್ಧದಲ್ಲಿ ಕೃಷ್ಣ ಮಾಗಧನ ಸೈನ್ಯವನು ಕೊಚ್ಚಿ ಹಾಕುತ್ತಾನೆ.

ಇದನ್ನು ಕಂಡ ಶಿಶುಪಾಲನು ರಭಸದಿಂದ ಮುಂದೊತ್ತಿಬರುತ್ತಾನೆ. “ಎಲವೊ ಗೋಪಕುಮಾರ ಸಾಕೆಲೊ ಹುಲು ಬಲಸಂಹಾರ ಗೆಲವೆಂಬಡವಿಕುಠಾರ ಎನ್ನೊಳು ನಿನ್ನಳವನ್ನು ತೋರು’’ ಎಂದು ಬೊಬ್ಬಿರಿಯುತ್ತಾನೆ. ಆದರೆ ಯುದ್ಧದಲ್ಲಿ ಕೃಷ್ಣನ ಕೈಮೇಲಾಗಲು ಶಿಶುಪಾಲ ಮೆಲ್ಲನೆ ಜಾರುತ್ತಾನೆ. ಇನ್ನುಳಿದ ಮಾಗಧನ ಬಲವನ್ನು ಬಲರಾಮನು ನಾಶಮಾಡುತ್ತಾನೆ. ಮಾಗಧ ಮುಂದೆ ಬರಲು ಭೀಕರ ಕಾಳಗವಾಗಿ ಅದರಲ್ಲಿ ಸೋತು ಹೋಗಲು ಚೈದ್ಯನೊಡಗೂಡಿ ಪಲಾಯನ ಮಾಡುತ್ತಾನೆ.

ಆದರೆ ಮಗಧ ಸೇಡನ್ನು ಮಾತ್ರ ಮರೆಯಲಿಲ್ಲ. ಮತ್ತೆ ಮೂರೇ ತಿಂಗಳಲ್ಲಿ ಬಲಾಢ್ಯವಾದ ಸೈನ್ಯವನ್ನು ತೆಗೆದುಕೊಂಡು ಮಧುರೆಯನ್ನು ಮುತ್ತಲು ಬರುತ್ತಾನೆ. ಯಮುನಾನದಿಯ ಅಂಚಿಗೆ ಬರುತ್ತಿರಲಾಗಿ ದುಷ್ಟನ ಮೋರೆಯನ್ನು ನೋಡಲಾರೆ ಎಂಬಂತೆ ಸೂರ್ಯಮುಳುಗುತ್ತಾನೆ. ರಾತ್ರಿ ಅಲ್ಲೇ ಕಳೆದು ಮರುದಿನ ದಾಳಿ ನಡೆಸುವುದಾಗಿ ನಿಶ್ಚಯಿಸಿ ಅಲ್ಲಿಯೇ ಇರುಳು ತಂಗುತ್ತಾರೆ.

ಆದರೆ ಈ ವಾರ್ತೆಯು ಕೃಷ್ಣನಿಗೆ ಕಾವಲುಗಾರರಿಂದ ತಿಳಿಯಲು ಕೃಷ್ಣ ಬಲರಾಮನೊಡನೆ ವಿಚಾರವಿನಿಮಯ ನಡೆಸುತ್ತಾನೆ. ನದಿಯಿಂದೀಚೆ ಆ ದುಷ್ಟರನ್ನು ಬರಗೊಡುವುದು ತಕ್ಕದ್ದಲ್ಲ. ಸದ್ಯ ಎದುರಿಸುವ ಬಲ ನಮ್ಮದಲ್ಲ ಎಂದು ಗ್ರಹಿಸಿದ ಅವರು ರಾತ್ರಿ ವೈರಿ ಸೈನ್ಯದವರು ನಿದ್ರಿಸುತ್ತಿದ್ದಾಗ ದಾಳಿ ಮಾಡುತ್ತಾರೆ.

ಕೃಷ್ಣ, ಬಲರಾಮ, ಸಾತ್ಯಕಿ ಮೊದಲಾದವರು ವೈರಿ ಸೈನ್ಯವನ್ನು ಕಾಡುಮೃಗಗಳನ್ನು ಕೊಚ್ಚಿ ಹಾಕಿದಂತೆ ಕೊಲ್ಲುತ್ತ ಹೋಗುತ್ತಾರೆ. ಇದರಿಂದ ಎಚ್ಚತ್ತ ಮಗಧನು ತನ್ನ ಮಗಳಿಗೆ ವೈಧವ್ಯವನ್ನು ತಂದಿತ್ತ ನಿನ್ನನ್ನು ಕೊಲ್ಲದೆ ಬಿಡೆ ಎಂದು ಅರ್ಭಟಿಸುತ್ತಾನೆ. ಆದರೆ ಯುದ್ಧದಲ್ಲಿ ಸೋತು ಓಡಿಹೋಗುತ್ತಾನೆ. ಹೇಗೆ ಇವರನ್ನು ನಾಶಮಾಡಬೇಕೆಂದು ಚಿಂತಿಸುತ್ತಲೇ ಶೋಣಿತಾಪುರಕ್ಕೆ ಹೋಗುತ್ತಾನೆ.

ಶೋಣಿತಾಪುರದಲ್ಲಿ ಬಲಿಯ ಮಗನಾದ ಬಾಣಾಸುರನು ಈಶ್ವರನನ್ನು ತಪಸ್ಸಿನಲ್ಲಿ ಮೆಚ್ಚಿಸಿ ಸಾವಿರ ಭುಜಗಳನ್ನು ಪಡೆದು ಈಶ್ವರನನ್ನೂ ತನ್ನ ರಾಜಧಾನಿಯಲ್ಲಿ ನಿಲ್ಲಿಸಿಕೊಂಡಂಥ ಬಲಶಾಲಿಯಾಗಿ ರಾಜ್ಯವಾಳುತ್ತಿರುತ್ತಾನೆ.

ಅಲ್ಲಿಗೆ ಮಗಧ ಹೋಗಿ ತನ್ನ ಸೋಲಿನ ಪರಿಯನ್ನು ಹೇಳಿಕೊಳ್ಳಲು “ಅರರೇ ಚೋದಿಗವೈಸೆ ಗೋಪಾಲತರಳಲೀ ಎಂದು ತನ್ನ ಬಲವಾದ ಸೈನ್ಯವನ್ನು ನೀ ಒಯ್ಯಿ ಅಲ್ಲದೆ ಅದರ ಮುಖ್ಯಸ್ಥನಾಗಿ ಆತನ ಮಂತ್ರಿ ಕುಂಭಾಂಡಕ, ಕೂಪಕರ್ಣರನ್ನ ಕಳಿಸುತ್ತಾನೆ.

ಮೂರನೆಯ ಸಲ ಮಾಗಧ ಬಂದವಾರ್ತೆಯನ್ನು ತಿಳಿದು ಕೃಷ್ಣ ಬಲರಾಮರು ಸಕಲ ಸಿದ್ಧತೆಯೊಂದಿಗೆ ಯುದ್ಧಕ್ಕೆ ಹೋಗುತ್ತಾರೆ. ಯುದ್ಧದಲ್ಲಿ ಅಸುರರು ದೊಡ್ಡ ಸಂಖ್ಯೆಯಲ್ಲಿ ಅಳಿಯಲು ಬಾಣಾಸುರನ ಮಂತ್ರಿ ಕೂಪಕರ್ಣ ಮುಂದೊತ್ತಿಬರಲು ಕೈತವರ್ಮ ಅವನನ್ನು ತಡೆಯಲು “ನೀನಾರೊ ನರಗುರಿಸೆಣಸುವ ದಾನವರೆಮ್ಮೊಡನೆ’’ ಎಂದು ಕಾದಾಡಿ ಸಾಯಲು ಕುಂಭಾಂಡಕನು ಆವೇಶದಿಂದ ಬರುತ್ತಾನೆ. ಯದುಕುಲದ ಕ್ಷತ್ರಿಯರು ಅಧಮರು ಕೃಷ್ಣ ಜನಿಸಿದ ಯದುಕುಲಕ್ಕೆ ಪ್ರಳಯಕಾಲ ಬಂದಂತೆ ಮುಂತಾಗಿ ಕೂಗುತ್ತಾನೆ. ಈ ಯುದ್ಧದಲ್ಲಿ ಕೃತವರ್ಮನು ಮೂರ್ಛೆ ಹೋಗುತ್ತಾನೆ. ಆದರೆ ಕೂಡಲೇ ಎದ್ದು “ಲೇಸು ಲೇಸೆಲವೊ ಮಂತ್ರೀಶ ನಾನೊಮ್ಮೆ ಹಮೈಸಿದೆನುತ ರಾಶಿ ವರ್ಗವ ಹೊಂದದೀಶರದೆಸಕವ ನೀಸಲೆ ನೋಡೆನುತ’’ ಬಾಣ ಬಿಡುತ್ತಾನೆ. ಮಂತ್ರಿ ಸಾಯುತ್ತಾನೆ.

ಇದೀಗ ಮಗಧನು ಬಂದು ಬಲರಾಮನಿಗೆ ಎದುರಾಗಿ “ಭಳಿ ಭಳಿರೆ ಹಿಡಿಬೇಗ ಬಲನೆ ನಿನ್ನಯ ಮುಸಲಗಳನು’’ ನಿನ್ನ ತಲೆಯನ್ನು ಗದೆಯಿಂದ ಒಡೆಯುತ್ತೇನೆ ಎನ್ನುತ್ತಾನೆ. ಬಲರಾಮನು ಎಡಗೈಯಿಂದ ಗದೆಯನ್ನು ಕಸಿದಾಗ ಮಾಗಧ ಮುಷ್ಠಿ ಯುದ್ಧಕ್ಕೆ ಮುಂದಾಗುತ್ತಾನೆ. ಮಾಗಧ ಸೋತು ಹೋಗಲು, ನೀನು ಮಹಾವೀರ, ಶಿಶುಪಾಲನೆ ಮೊದಲಾದ ವೀರರ ಮಿತ್ರ ದೇವರಿಂದ ವರಪಡೆದವ. ನಾವು ಗೋವಳರು ಆದರೂ ನಿನ್ನ ಗತಿ ಮುಗಿಯಿತು. ಈಗ ಕೊಲ್ಲುತ್ತೇನೆ ಎಂದು ನೇಗಿಲನ್ನು ಹೊಡೆಯಲು ಅಶರೀರವಾಣಿಯಾಗಿ ನೇಗಿಲನ್ನು ತೆಗೆ. ಈತನಿಗೆ ನಿನ್ನಿಂದ ಸಾವಿಲ್ಲ. ನಿನಗೆ ವಿಜಯವಾಯಿತು. ಹಿಂದಿರುಗು ಎಂಬ ಮಾತು ಕೇಳಿ ಮಾಗಧನನ್ನು ಬಿಟ್ಟನು.

ಹೀಗೆ ವಿಜಯಿಗಳಾದ ಬಲರಾಮ, ಕೃಷ್ಣ, ಸಾತ್ಯಕಿಯೇ ಮೊದಲಾದ ಯಾದವರು ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದರು.