. ರುಗ್ಮಿಣಿ ಸ್ವಯಂವರ

ವಿದರ್ಭದೇಶದೊಳಗೆ ಕುಂಡಿನಾಖ್ಯಪುರವೆಂಬುದು ನಾಲ್ಕು ದ್ವಾರದ ನಡುವೆ ನೆಲೆಸಿದೆ. ಕೇರಿಕೇರಿಗಳು ತೋರಣಗಳಿಂದ ಅಲಂಕೃತವಾಗಿವೆ. ಎಲ್ಲ ಕಡೆ ಸಂಗೀತ, ನೃತ್ಯ, ವಾದ್ಯಗೋಷ್ಠಿಗಳು ಮೆರೆದಿವೆ. ಒಟ್ಟಾರೆಯಾಗಿ ಪಟ್ಟಣವನ್ನು ವರ್ಣಿಸಲು ಸರ್ಪರಾಜನಿಗೂ ಸಾಧ್ಯವಾಗದು.

ಇಂಥಲ್ಲಿ ರಾಜನಾದವನು ಭೀಷ್ಮಕ. ಸುಖದಿಂದ ರಾಜ್ಯವಾಳುತ್ತಿದ್ದನು. ಅವನಿಗೆ ರುಗ್ಮನೆಂಬವ ಹಿರಿಯ ಮಗ. ತಮಗೆ ಮಗಳೊಂದು ಇಲ್ಲವೆಂದು ರಾಣಿ ವಿಷ್ಣುವ್ರತವನ್ನು ಕೈಗೊಂಡು ಚಿಂತಿಸುತ್ತಿರುವಾಗ ಭೂಮಿಯಲ್ಲಿಯ ದುಷ್ಟಶಕ್ತಿಗಳನ್ನು ಕೊಂದು ಭೂಭಾರ ಇಳಿಸಲೆಂದೇ ಹರಿಯು ಅವತರಿಸಿರುನೆಂದರಿತ ಲಕ್ಷ್ಮೀ ಭೀಷ್ಮಕನ ಮಡದಿಯ ಉದರದಲ್ಲಿ ತಾನು ಹುಟ್ಟುವುದಾಗಿ ನಿಶ್ಚಯಿಸಿದಳು.

ಭೀಷ್ಮಕನ ಹೆಂಡತಿ ಚಂದ್ರಾನನೆ ಗರ್ಭವತಿಯಾಗಿ ನವಮಾಸ ಸಮೀಪಿಸಿದಳು. “ತಾಳಲಾರೆನು ಎನ್ನಂಗದ ವ್ಯಥೆಯ ಗಳಿಗೆಗಳಿಗೆಗೊಂದಲಗು ನಟ್ಟಿಂತಹದು’’ ಎಂದು ಶೋಕಿಸುತ್ತಿರುವಾಗ ಮಗು ಹುಟ್ಟಿತು. ಮಗುವನ್ನು ಮಜ್ಜನಾದಿಗಳನ್ನು ಮಾಡಿಸಿ, ರುಗ್ಮಿಣಿ ಎಂದು ಹೆಸರಿಟ್ಟರು. ಸೇವಕವರ್ಗದ ಸ್ತ್ರೀಯರು ಜೋ ಜೋ ಎಂದು ಹಾಡಿ ನಲಿಸಿದರು.

ಹೀಗಿರುತ್ತ ಒಂದು ದಿನ ದ್ವಾರಕೆಯಿಂದ ಜನರು ಬಂದು “ದೊರೆಯ ಸಮ್ಮುಖದಲ್ಲಿ “ಪವನ ಪಾವನಚರಿತ ಮಹಿಮೆಯಂ ಪರಿಪರಿಯ ರಾಗದಲಿ’’ ಹಾಡಿದರು. ಇದನ್ನು “ತರಳೆ ರುಗ್ಮಿಣಿ ಕೇಳಿ ಪರಿತೋಷಮಂ ತಾಳ್ಪಳೂ’’.

ಬೆಳೆಯುತ್ತಿದ್ದ ಹುಡುಗಿ ಶ್ರೀಕೃಷ್ಣನ ರೂಪ ಸೌಂದರ್ಯವನ್ನು ನೆನೆಸುತ್ತ ಅವನ ಚರಿತ್ರೆಯನ್ನು ಕಣ್ಮುಂದೆ ತಂದುಕೊಳ್ಳುತ್ತ ತನ್ನ ಮುಂದಿರುವ ಪ್ರತಿಮೆಯೇ ಶ್ರೀಕೃಷ್ಣನೆಂದು ಗ್ರಹಿಸಿ “ಪತಿ ತನಗೆ ಶ್ರೀಕೃಷ್ಣನೆನುತಲಿ ಹಿತದಿ ಭಾವಿಪ ತನ್ನ ಮೋಹದ ಸುತೆಯ ಮತಮಂ ತಿಳಿದು ವಿಸ್ಮಯವಾಗಿ ಸಂತೋಷದಿಂದಿದ್ದರೂ ತಂದೆತಾಯಿಗಳು”.

ಹೀಗೆ ಬೆಳೆದ ತನ್ನ ಮಗಳನ್ನು ಕೃಷ್ಣನಿಗೆ ಮದುವೆ ಮಾಡಿಕೊಡುವುದಾಗಿ ಭೀಷ್ಮಕನ ನಿಶ್ಚಯದಿಂದಿರಲು ಸೇವಕರು ಬಂದು ರುಗ್ಮನಿಗೆ ತಿಳಿಸಿದೊಡನೆ ರುಗ್ಮ ಸಿಟ್ಟಿನಿಂದ ಕಿಡಿಕಿಡಿಯಾದನು. ಹಾಗೆ ತಂದೆ ಬಳಿ ಹೋಗಿ ವಿರೋಧಿಸಿದನು. “ಪಾತಾಳ ಭೂವ್ಯೋಮಕೆಲ್ಲನಾಥ ಕಾಣೈ ಏತಕ್ಕಿಂತ ಬುದ್ಧಿ ನಿನಗೆ’’ ಎಂದು ತಂದೆ ಹೇಳಿದರೆ “ತೆಗೆ ತೆಗೆ ಜಾರ ಚೋರನ ಬಗೆಯನೆಲ್ಲ ಬಲ್ಲೆ ನಾನು ಜಗದೊಳು ಜಾತಿ ಹೀನಂಗೆ ಮಗಳೀಯಬೇಡಾ’’ ಎಂದನು. “ಸರ್ವರ ಹೃದಯದಲ್ಲಿ ವಾಸವಾಗಿರ್ಪಾತ’’ ಎಂದು ತಂದೆ ಬುದ್ಧಿ ಹೇಳಿದರೆ “ವೃದ್ಧರಯ್ಯ ತಾತಾ ನಿಮ್ಮ ಬುದ್ಧಿಯು ಹಾಗಿರಲಿ“ ಕೃಷ್ಣ ಅಂಥ ವೀರನಲ್ಲವೆಂದೂ ಮಗಧ, ಶಿಶುಪಾಲರ ಮುಂದೆ ಆತ ಕಡಿಮೆಯವನೆಂದೂ ಹೇಳಿದರೂ ತಂದೆ “ಮಗನೆ ನಿನಗಿನ್ನೇನ ಹೇಳಲಿ ಜಗದ ಭಾರವ ಇಳಿಸಲೋಸುಗ ನಗಧರನು ತಾನುದಿಸಿದನು’’ ಎಂದು ಕೃಷ್ಣರಾಯನಲ್ಲಿ ಹಗೆತನ ಬೇಡವೆಂದೂ ಎಷ್ಟು ಹೇಳಿದರೂ ಕೇಳಲಿಲ್ಲ. ರುಗ್ಮನು ತಾನೇ ಓಲೆಯನ್ನು ಬರೆದು ಮಗಧ, ಶಿಶುಪಾಲರಲ್ಲಿಗೆ ಚರರನ್ನು ಕಳಿಸಿದನು.

ಚರರು ಮಾಗಧನಿಗೆ ಓಲೆಯನ್ನು ತಲುಪಿಸಿ ನೇರ ಚೈದ್ಯಭೂಪ ಶಿಶುಪಾಲನಲ್ಲಿಗೆ ಹೋಗಿ ಓಲೆಯನ್ನು ಕೊಡಲು ಅದರಲ್ಲಿ ಬರೆದಿರುವ “ಕೇಳಯ್ಯ ಚೈದ್ಯಭೂಪ ಸತ್ಕುಲದೀಪ’’ ಜನಕ ಭೀಷ್ಮಕರಾಯನು ತನ್ನ ಕುವರಿಯನ್ನು ಶ್ರೀಕೃಷ್ಣನಿಗೆ ಕೊಡುವುದಾಗಿ ಹೇಳಲು ಪ್ರತಿರೋಧಿಸಿ ತಾನು ನಿನಗೆ ಕೊಡುವುದಾಗಿ ನಿಶ್ಚಯಿಸಿದ್ದೇನೆ. ಓಲಗ ಸಹಿತ ಬಾ. ತಂಗಿಯನ್ನು ಕೊಡುವುದು ನಿನಗೇ. ಶ್ರೀಕೃಷ್ಣ ಯುದ್ಧಮಾಡಬಹುದು ಆದ್ದರಿಂದ ಸೈನ್ಯ ಸಹಿತ ಬಾ ಎಂಬ ಮಾತುಗಳನ್ನು ಓದಿ ಸಂತೋಷಗೊಂಡು ಮಂತ್ರಿಯನ್ನು ಕರೆದು ರುಗ್ಮನು ಬಾಲ್ಯಸ್ನೇಹದಿಂದ “ಶೀಲ ಗುಣವತಿಯಾದ ಶ್ರೀಲತಾಂಗಿಯನ್ನು ಎನಗೆ ನಾಳೆ ಕೊಡುವೆ ಒಪ್ಪುವುದೆಂದು ಓಲೆಬರೆದಿಹಾ’’ ಒಡನೆ ಬರುವೆನೆಂದು ನೀನು ಹೋಗಿ ತಿಳಿಸು ಎಂದು “ತೊಡುವುದುಡುವ ಒಡವೆಗಳ ಕೊಡಿಸು ಬಂದ ಗಡಣ ತಿಳಿಯಲಿ’’ ಎಂದು ಅಪ್ಪಣೆ ಮಾಡಿದನು. ಮಂತ್ರಿ ಬಂದ ಸಂಗತಿ ತಿಳಿದು ರುಗ್ಮ, ಶಿಶುಪಾಲ ಸುಖಿಯೇ ಮಾಗಧನು ಸುಖಿಯೇ ಇತ್ಯಾದಿ ವಿಚಾರಿಸಿದನು. ಮಂತ್ರಿ ಶಿಶುಪಾಲನೂ, ಅವನ ಪರಿವಾರದವರೂ, ಪ್ರಜೆಗಳೂ ಸುಖವಾಗಿರುವರೆಂದೂ ಮಾಗಧನು ಸ್ನೇಹದಿಂದಿರುವೆನೆಂದು ಉತ್ತರಿಸಿದನು. ಆತನನ್ನು ಒಡವೆ ಕಾಣಿಕೆಗಳೊಡನೆ ಭೀಷ್ಮಕನಲ್ಲಿಗೆ ಕಳಿಸಲು ಬಂದ ಮಂತ್ರಿಗೆ ಆಸನವನ್ನು ಕೊಟ್ಟು ಕುಳ್ಳಿರಿಸಿ ಇದನ್ನು “ನಿಮ್ಮೊಡಯನೇಕೆ ಕಳುಹಿದ ನಮ್ಮಿಂದ ಆಗುವುದೇನು ಕೇಳಯ್ಯ ಮಂತ್ರಿ’’ ಎಂದು ಹೇಳಿದಾಗ ಮಂತ್ರಿ ಮಹಾರಾಜನೇ ತಮ್ಮ ಪುತ್ರಿಯನ್ನು ನಮ್ಮ ದೊರೆ ಚೈದ್ಯನಿಗೆ ಕರುಣಿಯಿಂದ ಮದುವೆ ಮಾಡಿಕೊಡಬೇಕೆಂದು ವಿನಂತಿಸಿದನು. ಶಿಶುಪಾಲ ಸಂಪನ್ನನೇ, ಹೆಣ್ಣು ಕೇಳುವುದು ಉಚಿತವೇ. ಆದರೆ “ಕನ್ನೆಯ ಪಣೆಯಲ್ಲಿ ವಿಧಿ ತಾನು ಬರೆದಿರ್ಪುದನ್ನು ಮೀರುವರ‍್ಯಾರು?’’ ಎಂದುದನ್ನು ತಿಳಿದ ರುಗ್ಮನು ಸಿಟ್ಟಾಗಿ “ತಾತ ವೃದ್ಧನು ಪೇಳಿದುದು ನಿಜವೆಂದು ತೋರ್ಪುದು ಮೇಲೆ ನಡೆಸುವ ಭಾರ ನಮ್ಮದು ಚಿಂತೆ ಏತಕೆ ನಾಳೆ ಲಗ್ನವು ಬರಲಿ’’ ಎಂದು ಹೇಳಿ ಕಳಿಸಿದನು. ಮಂತ್ರಿ ಹೋಗಲು ರುಗ್ಮನು ಸುತ್ತೆಲ್ಲ ರಾಜರಿಗೆ ಪತ್ರ ಕಳಿಸುವುದಲ್ಲದೆ ಮದುವೆಯ ಏರ್ಪಾಡು ಮಾಡಿ, ಚೈದ್ಯನು ಕಳಿಸಿದ ಒಡವೆಗಳನ್ನು ರುಗ್ಮಿಣಿಗೆ ಕಳಿಸಿದನು.

ಅಂತಃಪುರದ ಗೆಳೆತಿಯರು ಬಂದು ಚೈದ್ಯನು ನಿನ್ನ ಮೆಲೆ ಮನವಿಟ್ಟು ಕಳಿಸಿದ ವಿವಿಧ ರತ್ನಾಭರಣಗಳನ್ನು ರುಗ್ಮನು ನಿನಗೆ ತಲುಪಿಸಲು ಕಳಿಸಿದ್ದಾನೆ, ಎಂದು ಹೇಳಿ ಆಭರಣ ಕೊಡುತ್ತಾರೆ. ಆತ ಕುಲದೊಳುತ್ತಮನು ಗುಣಶೀಲ “ಮತ್ತೊಂದು ನೆನೆಯದಲ್ಲವ ನೋಡಿ ವಿನಯದಿಂ ನಲಿದಾಡು ತಾಯೇ’’ ಎನ್ನುತ್ತಾರೆ. ಇದನ್ನು ಕೇಳಿದ ರುಗ್ಮಿಣಿ ಇಂತು ಹೇಳುತಲಿಪ್ಪ ಕಾಂತೆಯರ ನುಡಿಕೇಳಿ ಸಂತಾಪವನು ತಾಳ್ದು ಮನದೀ ಅಂತರಂಗದಲಿ ಶ್ರೀಕಾಂತನನು ನೆನೆದು ಗುಣವಂತೆ’’ ನೀವು ತಂದ ಒಡವೆಗಳನ್ನು ಇಟ್ಟು ಹೋಗಿ “ಜಲಜಸಂಭವ ಬರೆದ ಬರಹದ ನೆಲೆಯ ಕಂಡವರಾರು ದಾನವ ಕುಲವಿರೋಧಿಯ ಬಲ್ಲವೆಂಗಳು ಸುಯ್ದುಲಲಿತಾಂಗಿ’’ ಅಣ್ಣನೆಂಬವನೆನಗೆ ಹಣ್ಣಿದನು ಮೃತ್ಯುವನು ಇನ್ನಾರುಗತಿ ಎನುತ ಕಣ್ಣೀರು ಗರೆದೂ’’ ಊಟವನ್ನು ಮಾಡದವಳಾಗಿ, ಯಾಕಾದರೂ ಹೆಣ್ಣಾಗಿ ಹುಟ್ಟಿದೆ ಎಂದು ಹಲುಬಿ ಮೂರ್ಛೆ ಹೋಗುತ್ತಾಳೆ. ತಾಯಿ ಬಂದು ಏಕೆ ಮೊಗ ಕುಂದಿತು ಕೇಳಲಾಗಿ ತಾಯಿಯೆ ಅಣ್ಣ ನನ್ನನ್ನು ಚೈದ್ಯನಿಗೆ ಕೊಡುವುದಾದರೆ ತಾನು ಬದುಕಲಾರೆ ಎಂದು ಗೋಳಿಡುತ್ತಾಳೆ. ತಾಯಿ, ಶ್ರೀಕೃಷ್ಣ ಅಸಾಮಾನ್ಯನು. ಅವನು ನಿನ್ನ ಇಚ್ಛೆಯನ್ನು ನೆರವೇರಿಸಿಕೊಳ್ಳುತ್ತಾನೆ ಎಂದು ಸಂತೈಸಿದಳು.

ಇದನ್ನು ತಿಳಿದ ರುಗ್ಮ ನಾಳೆ ತಾನೇ ಶಿಶುಪಾಲನಿಗೆ ರುಗ್ಮಿಯನ್ನು ಮದುವೆ ಮಾಡುತ್ತೇನೆಂದು ಸಕಲ ಸಿದ್ಧತೆ ಮಾಡಲು ಮಂತ್ರಿಗೆ ಆದೇಶಿಸುತ್ತಾನೆ. ಇಡೀ ರಾಜ್ಯವು ಶೃಂಗಾರಗೊಳ್ಳುತ್ತಿರುವಾಗ ಆ ಕಡೆ ಚೈದ್ಯನ ಮಂತ್ರಿ ತನ್ನ ರಾಜನಿಗೆ “ರುಗ್ಮನ ಚಿತ್ತದುತ್ಸಾಹಗಳನ್ನು ಸಭೆಯೊಳು ಬಿತ್ತರಿಸಿದಾ’’ ಇದನ್ನು ಕೇಳಿದ ಶಿಶುಪಾಲ ಸಕಲ ಸೈನ್ಯ ಸಿದ್ಧತೆಯನ್ನು ಮಾಡಲು ಮಂತ್ರಿಗೆ ಹೇಳಿ “ಚೈದ್ಯನಾಗ ಭೂಮಿಕಾಂತ ಜರೆಯ ಸುತರ ಕೂಡಿಕೊಂಡು ಬೇಗಾ ಚಾರುತರ ಬಾಸಿಗವಕಟ್ಟಿ ನಲವಿಂದಾ ಸರ್ವಧಾರಿಣೀಶಾರನ್ನು ಕೂಡಿ’’ ಬರುತ್ತಿರುವಾಗ ಅನೇಕ ದುಶ್ಶಕುನಗಳು ಕಂಡವು.

ಬಂದ ದಿಬ್ಬಣವನ್ನು ರುಗ್ಮನು ಎದುರುಗೊಳ್ಳುತ್ತಾನೆ. ಬಂಧುಗಳೂ, ಪುರೋಹಿತರು ಕಲಶಕನ್ನಡಿಯನ್ನು ಹಿಡಿದ ವನಿತೆಯರೂ ಎದುರುಗೊಳ್ಳುತ್ತಾರೆ. ಈ ಕಡೆ ರುಗ್ಮಿಣಿ ವ್ಯಥೆಮಾಡಿ ಉಪಾಯಗಾಣದೆ ಒಬ್ಬ ಬ್ರಾಹ್ಮಣನನ್ನು ಕರೆದು ಕೃಷ್ಣನಿಗೆ ಒಂದು ಪತ್ರವನ್ನು ಕಳಿಸಿ ಕೊಡುತ್ತಾಳೆ. ಆ ಬ್ರಾಹ್ಮಣನು ಊರುಗಳನ್ನೂ ಕಾಡುಗಳನ್ನು ನೋಡುತ್ತ ಕೃಷ್ಣನಲ್ಲಿಗೆ ತಲುಪುತ್ತಾನೆ. ಕೃಷ್ಣ ಅವನನ್ನು ಕರೆದು ಕುಳ್ಳಿರಿಸಿ “ಎಲ್ಲಿಂದೆಲ್ಲಿಗೆ ಬಂದಿರಿ ಯಾವ ದೇಶ ನಮ್ಮಲ್ಲಿ ಕಾರ್ಯವೇನು’’ ಮುಂತಾಗಿ ಕೇಳಲು ಆತ ರುಗ್ಮಿಣಿಯ ಪತ್ರವನ್ನು ಕೊಟ್ಟನು.

“ಶ್ರೀ ರಮಣಿಯರಸ ಸುವಿಚಾರಿ ಸನ್ನುತತೋಷ ಮಾರನಯ್ಯನೆ ನಿನ್ನ ಪದಕೆ’’ ಎಂದು ಶುರುಮಾಡಿ “ಲಾಲಿಸು ಕೃಪಾಂಬುನಿಧಿ ಬಾಲತನದಲಿ ನಾನು ಶೀಲ ಗುಣಗಳಕೇಳಿ ನಿನ್ನ ಮೇಲೆ ಮನವಿರಿಸಿಹೆನು’’ ಆದರೆ ಅಣ್ಣ ತನ್ನನ್ನು ಚೈದ್ಯನಿಗೆ ನಾಳೆಯೇ ಮದುವೆ ಮಾಡುವ ತಯಾರಿ ನಡೆಸಿದ್ದಾನೆ. “ಒಡೆಯ ನೀನಿಹೆನೆಂದು ಪಿಡಿದಿಹೆನು ಜೀವವನು ತಡೆಯದೈತರಬೇಕು ಜವದೀ’’ ಎಂದು ಬರೆದ ಲೇಖನವನ್ನು ಓದಿ ಸಂತೋಷದಿಂದ ಅಣ್ಣ ಬಲರಾಮನನ್ನು ಕರೆದು ಸಂಗತಿಯನ್ನು ತಿಳಿಸಲು ಇಬ್ಬರೂ ಹೊರಟುಬಿಡುತ್ತಾರೆ. ಅದಕ್ಕೂ ಮೊದಲು ಬ್ರಾಹ್ಮಣನು ಅವರು ಬಂದು ರುಗ್ಮಿಣಿಯ ಸೆರೆ ಬಿಡಿಸಬೇಕೆಂದೂ, ವೈರಿಗಳನ್ನು ನಾಶಮಾಡಬೇಕೆಂದೂ ತನಗೆ ಅಭಯಕೊಡಿ ಎಂದು ಅಭಯ ಪಡೆದು ರುಗ್ಮಿಣಿಯ ಕಡೆ ಧಾವಿಸುತ್ತಾನೆ.

ಇತ್ತ ರುಗ್ಮಿಣಿಯು ಪತ್ರ ತೆಗೆದುಕೊಂಡು ಹೋದ ಬ್ರಾಹ್ಮಣನು ಇನ್ನೂ ಉತ್ತರತರಲಿಲ್ಲವೆಂದು ಬಹುಶಃ ಹರಿಯು ಹೆಂಗಸು ಪತ್ರ ಬರೆದಳೆಂದು ಅದನ್ನು ತಂದಿದ್ದಕ್ಕಾಗಿ ಹಂಗಿಸಲಾಗಿ ವಿಪ್ರ ಮೋರೆತೋರಲು ನಾಚಿಕೆಯಾಗಿ ಎಲ್ಲಾದರೂ ಹೋದನೇ ಮುಂತಾಗಿ ಚಿಂತಿಸಿ ತನಗಿನ್ನಾರು ಗತಿ ಎಂದು “ಕೆಟ್ಟೆನಕಟ ಕೃಷ್ಣ ಕೈಯಬಿಟ್ಟ’’ ಎಂದು ಸಖಿಯೊಡನೆ ಮರುಗುತ್ತಿದ್ದಳು. ಅಷ್ಟು ಹೊತ್ತಿಗೆ ವಿಪ್ರ ಬಂದು “ಬರೆದ ಓಲೆಯ ನೋಡಿ ಮುರಹರನು ಪ್ರೀತಿಯ ಮಾಡಿ ಶೀಘ್ರದಲಿ ದುರುಳರ ಶಿರಗಳ ತಂದು ಭರದೊಳು ನಿನ್ನನ್ನು ಕದ್ದೊಯ್ವೆನೆಂದ’’ ಎನ್ನಲು ರುಗ್ಮಿಣಿಗೆ ಬಹಳ ಸಂತೋಷವಾಯಿತು.

ಬಲರಾಮ, ಕೃಷ್ಣರು ಕುಂಡನೀಪುರಕ್ಕೆ ಬಂದುದನ್ನು ಕಂಡ ಭೀಷ್ಮಕರಾಜನು “ಏನಯ್ಯ ರಂಗ ನೀಲನಿಭಾಂಗ ಬಾಲೆಗೋಸ್ಕರ ಬಂದು ಸುಮ್ಮನೆ ವೇಳೆ ಕಳೆವುದು ನೀತಿಯೇ?’’ ಎಂದು ಕೇಳಲಾಗಿ ಕೃಷ್ಣನು ಒಳಗೆ ಬರುತ್ತಾನೆ. “ಹರಿಯೇ ಲಾಲಿಸು ನಿನ್ನ ಸಿರಿಪಾದವನು ಕಂಡು ಹರಿದು ಹೋದುದು ವೆನ್ನದುರಿತ’’ ಎಂದು ಸ್ವಾಗತಿಸಿ ಎಲ್ಲರ ಕ್ಷೇಮ ಸಮಾಚಾರವನ್ನು ವಿಚಾರಿಸಿ ತನ್ನ ಮಗಳ ಕೈ ಹಿಡಿದು ಪೊರೆ ಎಂದು ಕೇಳಿಕೊಂಡನು.

ಇನ್ನೊಂದು ಕಡೆ ರಾಜರು ಮಾಗಧನೊಡನೆ ನಿನ್ನಿಂದಾಗಿ ನಮಗೆ ಧೈರ್ಯ, ಕೃಷ್ಣ ಬಂದಿದ್ದಾನೆ. ತರಳೆಯನ್ನು ಒಯ್ಯಬಹುದು ಚೈದ್ಯನಿಗೆ ಮಗಳನ್ನು ಕೊಡಹೇಳು ಎಂದು ಒತ್ತಾಯಿಸುತ್ತಾರೆ. ಆ ಬಗ್ಗೆ ಹೆದರಬೇಡಿ, ತನ್ನೆದರು ಯಾದವರ ಪಾಡೇನು ಎಂದು ಅವರಿಗೆ ಧೈರ್ಯ ಹೇಳುತ್ತಾನೆ. ಹಾಗೆಯೇ ಭೀಷ್ಮಕನೊಡನೆ ಬೇಗ ಚೈದ್ಯನಿಗೆ ಮಗಳ ಧಾರೆಯೆರೆ ಎನ್ನುತ್ತಾನೆ. ಆಗ ಭೀಷ್ಮಕನು “ರುಗ್ಮಿಣಿಯ ಕುಲದೇವಿಯನ್ನು ಮೊದಲೂ ಒಲಿದು ಪೂಜೆಯ ಮಾಡಲೀ ಬಳಕ ಶುಭ ಕೆಲಸವನು ಕೈಗೊಳ್ಳಲೀ’’ ಎನ್ನುತ್ತಾನೆ. ಇದಕ್ಕೆ ರುಗ್ಮನೂ ಒಪ್ಪಿ ಭಟರನ್ನೂ, ಕುದುರೆಗಳನ್ನು ಸಂಗಡವಿಟ್ಟು ತಂಗಿಯನ್ನು ದೇವಿಗುಡಿಗೆ ಕಳಿಸುತ್ತಾನೆ. ಆಕೆ ಗುಡಿಗೆ ಬಂದು “ಪಾಲಿಸೆ ಪಾರ್ವತಿ ಇಷ್ಟಾರ್ಥವನ್ನು ಬಾಲೆಂದು ಧಾರಿಣಿ ಭಾಗ್ಯ ಪ್ರದಾಯಿನಿ’’ ಎಂದು ಮುಂತಾಗಿ ಸ್ತುತಿಸಿ ಪೂಜಿಸಿ ಹಿಂದಿರುಗುತ್ತಿದ್ದಾಗ ಕೃಷ್ಣ ಅವಳನ್ನು ತನ್ನ ರಥಕ್ಕೆ ಏರಿಸಿಕೊಳ್ಳುತ್ತಾನೆ. ಬಲರಾಮನು ಕೃಷ್ಣನನ್ನು ಮುಂದಕ್ಕೆ ದ್ವಾರಕೆಯೆಡೆ ಕಳಿಸಿ ತಾನು ನಿಂತುಕೊಳ್ಳುತ್ತಾನೆ. ಇದನ್ನು ಕಂಡ ಮಾಗಧನು ಕಿಡಿಕಿಡಿಕಾರಿ ಯಾದವ ಸೈನಿಕರನ್ನು ಪುಡಿಗೈಯ್ಯುತ್ತ ಮುಂದೆ ಬರುತ್ತಾನೆ.

ಇದನ್ನು ಕಂಡ ಬಲರಾಮನು ತನ್ನ ಹಲಾಯುದದಿಂದ ಅವರನ್ನು ಬಡಿದುರುಳಿಸುತ್ತಾ ಕೋಲಾಹಲವೆಬ್ಬಿಸಿದನು. ಆದರೆ ಅವರೂ ಬಲರಾಮನನ್ನು ಹೊಡೆಯುತ್ತ “ಕನ್ನೆಯ ಕದ್ದೊಯ್ದ ಖೂಳನೆ ಶಿರವನ್ನರಿಯುವೆ ನೋಡು ನೋಡು ಚೋರನೆ’’ ಎಂದು ಹಂಗಿಸಿದಾಗ ಬಲರಾಮನು ತರುಣಿಯ ನೆಪದಿಂದ ಜೀವ ಕಳೆದುಕೊಳ್ಳುತ್ತೀರಿ ಸುಮ್ಮನೆ ಹಿಂದಿರುಗಿ ಎಂದು ಬಡಿಯ ತೊಡಗಲು ಮಾಗಧ ಮೊದಲಾದವರು ಅಸಹಾಯಕರಾಗಿ ಈಗ ಯುದ್ಧ ಬೇಡ ಹಿಂದಕ್ಕೆ ಹೋಗುವ ಎಂದು ಚೈದ್ಯನನ್ನು ಸಂತೈಸಲು ಆ “ಹರಹರೆನಗೀ ದುರ್ದೆಶೆ ದೊರಕಿದುದೇಹಾಯೆನುತ ತನ್ನಯ ಬಾಸಿಗವ ತೆಗೆದಿರಸಿ ಬರದೀ ಮುಂಗಡೆಯೊಳಿರಿಸಿದ್ದ ಚೆಲುವಿನ ಪೊಂಗಲಶ ಕನ್ನಡಿಯ ಕಾಣುತ ಕಂಗಳಲಿ ಕಿಡಿಗೆದರಿ ಬಿಸುಟನು ಅಂಗಳದಲೀ’’.

ಈ ರೀತಿ ಅವಮಾನಿತರಾಗಿ ಅವರೆಲ್ಲ ತೆರಳಲು ರುಗ್ಮನು ಕೃಷ್ಣನ ಬೆನ್ನಟ್ಟಿಕೊಂಡು ಹೋಗುತ್ತಾನೆ. “ನಿಲ್ಲು ನಿಲ್ಲೆಲೊ ಬಡ ಗೊಲ್ಲನೆ ಕಳ್ಳತನಗಳೇಕೆ ಖುಲ್ಲನೆ’’ ಎಂದು ಅಬ್ಬರಿಸಿ ತನ್ನ ತಂಗಿಯನ್ನು ಬಿಟ್ಟು ಹೋಗದಿದ್ದರೆ ತುಂಡರಿಸುತ್ತೇನೆ ಎಂದು ಹೂಂಕರಿಸುತ್ತಾನೆ. “ಹಿರಿಯ ಭಾವಯ್ಯ ಕೇಳ್ ತಂಗಿಯ ದಯವಿರಿಸಿ ಮಾಡೆನಗೀ ಪರಿಣಯ’’ ಎಂದು ಕೃಷ್ಣ ಹೇಳಿದುದನ್ನು ಕೇಳಿ “ಬೊಗಳಬೇಡವೋ ಬಾಲೆಯನು ಬಿಡೊ’’ ಎಂದು ಅರಚುತ್ತಾನೆ. ನೀನು ಮಗಧನಿಗೆ ಹೆದರಿ ಕಡಲಿನಲ್ಲಿ ಮನೆ ಮಾಡಿಕೊಂಡಿದ್ದಿಯಾ ತರಳೆಗಾಗಿ ಬಂದು ಇಲ್ಲಿ ತಲೆಕೊಡುವೆಯಾ ಮುಂತಾಗಿ ಹಂಗಿಸಿ ಬಾಣ ಬಿಡುತ್ತಾನೆ. ಈತನ ಅಬ್ಬರವನ್ನು ನೋಡುತ್ತ ಮುಗುಳ ನಕ್ಕು ಕೃಷ್ಣ ಚೋರತನದಲ್ಲಿ ಬಂದದ್ದು ಹೌದು. ಈಗ ಬಲತೋರು ಎಂದು ಅಸ್ತ್ರ ಪ್ರಯೋಗಿಸಲು ರಥವು ಛಿದ್ರವಾಗುತ್ತದೆ. ರುಗ್ಮನು “ವಾಸುದೇವ ನಿನ್ನ ತಲೆಯ ಈಶ ತಾನೆ ಬರಲಿ ಕೇಳು ನಾಶ ಮಾಡದುಳಿಯೆ’’ ಎಂದು ಬಾಣ ಬಿಡುತ್ತಾನೆ. ಕೃಷ್ಣನು ಕೆರಳಿ ಆತನ ಸೆರೆ ಹಿಡಿದು ಕುತ್ತಿಗೆ ಕಡಿಯುತ್ತೇನೆ ಎಂದು ಮುಂದೆಬಂದನು.

ಇದನ್ನು ಕಂಡ ರುಗ್ಮಿಣಿ “ಕೊಲ್ಲಬೇಡವೀಗಾ ನಮ್ಮಣ್ಣನ ಕೊಲ್ಲಬೇಡಾ’’ ಎಂದು ಬೇಡಿಕೊಳ್ಳುತ್ತಾಳೆ. ಬಲರಾಮನು ಬಂದು ಅವನನ್ನು ಸೆರೆಬಿಡಿಸಿ, ಅರಿಯದೇ ಆದ ತಪ್ಪು ಬೇಸರ ಮಾಡಿಕೊಳ್ಳಬೇಡ ಇತ್ಯಾದಿ ಹೇಳಿ ಸಾಂತ್ವನಪಡಿಸಿದನು.

ಮುಂದೆ ರುಗ್ಮಿಣಿ, ಬಲರಾಮ ಇತ್ಯಾದಿಗಳು ಸೇರಿ ಮಧುರೆಗೆ ಹಿಂದಿರುಗುತ್ತಾರೆ. ವಸುದೇವನು ಸಂತೋಷದಿಂದ ಭೀಷ್ಮಕನನ್ನು ಕರೆಸಿ ಮದುವೆ ಸಮಾರಂಭ ನೆರವೇರಲಿ ಎನ್ನುತ್ತಾನೆ. ಉದ್ಧವನನ್ನು ಬಗೆಬಗೆಯ ಕಾಣಿಕೆಗಳನ್ನು ಕೊಟ್ಟು ಕುಂಡಲಿನೀಪುರಕ್ಕೆ ಕಳಿಸುತ್ತಾರೆ. ಅವರೆಲ್ಲ ಬರಲು ವಾಸುದೇವನು ಸತ್ಕರಿಸುತ್ತಾನೆ. ಹೀಗೆ ಮದುವೆಯ ಉತ್ಸವವು ವಿಜ್ರಂಭಣೆಯಿಂದ ನಡೆಯಿತು.

. ಶ್ರೀಕೃಷ್ಣ ವಿವಾಹ

ವಿದರ್ಭ ದೇಶದ ಕುಂಡಿನಿ ಪುರದ ಅರಸು ಭೀಷ್ಮಕನಿಗೆ ಓರ್ವ ಮಗಳೂ ಐದು ಜನ ಮಗಂದಿರೂ ಇದ್ದರು.. ಒಂದು ದಿನ ರಾಜಸಭೆಯನ್ನು ನೆರವೇರಿಸಿ ತನ್ನ ಮಂತ್ರಿಗಳನ್ನು ಕರೆದು ಮಗಳು ರುಕ್ಮಿಣಿಗೀಗ ಹದಿನಾರು ವರ್ಷವಾಯಿತು. ಅವಳಿಗೆ ಲಗ್ನಮಾಡಬೇಕು. “ಸರಸಿಜನೇತ್ರನೇ ಹರಿಯಬಿಟ್ಟಿನ್ಯಾರು ಸಲ್ಲರೆಂದು ಅರಿತಿಹೆ’’ ಎನ್ನಲಾಗಿ ಮಂತ್ರಿ ಕೈಮುಗಿದು ತಾರುಣ್ಯಕ್ಕೆ ಬಂದ ಮಗನಿದ್ದಾನೆ. ಅವನನ್ನು ಕೇಳಿ ಮುಂದಿನ ಕೆಲಸ ಮಾಡಬಹುದು ಎನ್ನಲು ರುಕ್ಮನಿಗೆ ಹೇಳಿ ಕಳಿಸಲಾಗಿ ಆತ ಬಂದು ದೈನ್ಯದಿಂದ ತನ್ನ ಕರೆಸಿದ ಕಾರಣವೇನು ಎಂದು ಕೇಳುತ್ತಾನೆ. ಭೀಷ್ಮಕನು ರುಕ್ಮಿಣಿಗೆ ಹದಿನಾರು ವರ್ಷ ತುಂಬಿದವು. ಆಕೆಗೆ ಯೋಗ್ಯನಾದವನೆಂದರೆ ಕೃಷ್ಣನೊಬ್ಬನೇ. ಆದ್ದರಿಂದ ಆತನನ್ನು ಕರೆದು ರುಕ್ಮಿಣಿಯನ್ನು ಮದುವೆಯಾಗುವಂತೆ ಕೇಳಿಕೊಳ್ಳಬೇಕು ಎನ್ನಲು ಕೆರಳಿ, ‘‘ಜನಕನೇ ಭಳಿಭಳಿರೆಂಬೆನು ತವಮನಕೀನೆಂಟತೆಯು ಘನವಾದುದೆ ಕುಲಪರಿಕಿಸೆ ಗೋವಳ’’, ಗುಣವೋ ಸೋದರ ಮಾವನನ್ನೇ ಕೊಂದವನು. ಬೆಕ್ಕು ಕದ್ದು ಹಾಲು ಕುಡಿವಂತೆ ಹಾಲು-ಮೊಸರ ನೆಕ್ಕುವ ಶೀಲವುಳ್ಳವನು. ಅದರ ಬದಲು ಧೀರನೂ ಶೂರನೂ ಆದ ಶಿಶುಪಾಲನಿಗೆ ರುಕ್ಮಿಣಿಯನ್ನು ಕೊಡುವುದು ಮೇಲು. ಆದ್ದರಿಂದ ಆತನಿಗೆ ಲೇಖನ ಬರೆಸು ಎಂದಾಗ, ಕೃಷ್ಣ ತಿಳಿದರೆ ವಿಘ್ನವ ಮಾಡದೆ ಇರನು ಎಂದು ಸೂಚಿಸಲಾಗಿ “ಬಿಡು ಬಿಡೆನ್ನೆಯ ಜನಕನ ಕೃಷ್ಣನೆನ್ನೊಡನೆ ಕಪಟವನು ತೋರ್ಪನೆ’’ ಎಂದು ಅಬ್ಬರಿಸುತ್ತಾನೆ.

ಅದೇ ಹೊತ್ತಿನಲ್ಲಿ ದ್ವಾರಕೆಯಲ್ಲಿ ಕೃಷ್ಣನು ಸಭೆಗೊಂಡಿರುವಾಗ ಬ್ರಾಹ್ಮಣನೊಬ್ಬನನ್ನು ಕಂಡು ಸ್ವಾಗತಿಸಿ ಬಂದ ಕಾರಣವನ್ನು ಕೇಳುತ್ತಾನೆ. ಆತ ತನ್ನೊಡನೆ ರುಕ್ಮಿಣಿ ಕೊಟ್ಟು ಕಳುಹಿಸಿದ ಪತ್ರವನ್ನು ಕೊಡುತ್ತಾನೆ. ಅದು “ಕುಂಡಿನಾಪುರದ ಭೀಷ್ಮಕನ ತರಳೆ ರುಕ್ಮಿಣಿ ಬಿನ್ನಹ’’ ಎಂದು ಪ್ರಾರಂಭವಾಗಿ “ವರಿಸಿಕೊಂಬುದು ಎನ್ನತೊರೆದರೆ ಜೀವದೊಳಿರೆನು ನಿಶ್ಚಯಗಳಿದು ತರುಣಿ ಹತ್ಯಾದೋಷಬಹುದು ನಂಬಿಹೆ ಸ್ವಾಮಿ ಚರಣಕ್ಕೆ ಬಿನ್ನಹವು’’ ಎಂದು ಮುಕ್ತಾಯವಾಗುತ್ತದೆ. ಪ್ರೀತಿಯಿಂದ ಕೃಷ್ಣನು ಬ್ರಾಹ್ಮಣನಿಗೆ ಉಡುಗೊರೆ ಕೊಟ್ಟು ಕಳಿಸುತ್ತಾನೆ.

ಇತ್ತ ಕಡೆ ಚೈದ್ಯ ದೇಶದ ಶಿಶುಪಾಲ ಸಭೆಗೊಡುತ್ತಿರಲು ರುಕ್ಮನ ಚಾರರು ಹೋಗಿ ಪತ್ರ ಕೊಡುತ್ತಾರೆ. ಪತ್ರದಲ್ಲಿದ್ದ “ಅನುಜೆ ರುಕ್ಮಿಣಿಯನ್ನು ಚಿನುಮಯನಿಗೀಯುವರ್ ಜನಕನೆಣ್ಣಿದನಿದಕೆ ಮನವ ಕೊಡದಾನು ನಿನಗೆ ಪರಿಣಯದಿಂದ ಬರುವ ಸಪ್ತಮಿ ದಿನದಿ ವನಜಾಕ್ಷಿಯಳನೀವೆನೆನುತ ನಿಶ್ಚಯಿಸ’’ಲಾಗಿದೆ. ತಂಗಿ ರುಕ್ಮಿಣಿಯನ್ನು ಕೃಷ್ಣನಿಗೆ ಮದುವೆಮಾಡಿ ಕೊಡಲು ತಂದೆ ನಿಶ್ಚಯಿಸಿದ್ದನು. ತಾನು ಅದನ್ನು ಅಲ್ಲಗಳೆದು ನಿನಗೆ ಕೊಡಲು ನಿಶ್ಚಯಿಸಿದ್ದೇನೆ. ಬರುವ ಸಪ್ತಮಿಯ ದಿನ ಮದುವೆ ನಿಶ್ಚಯಿಸಲಾಗಿದೆ ಎಂದಿದ್ದುದನ್ನು ನೋಡಿ “ಭಳಿಭಳಿರೆನ್ನಯ ಸಖ ರುಕ್ಮನ ಹೋಲುವರ ಇಳೆಯೊಳಗಾರಿಹರು’’ ಎಂದು ಮುಂತಾಗಿ ಹೇಳಿಕೊಳ್ಳುತ್ತಾನೆ. ಚರರನ್ನು ಮಾಗಧನಲ್ಲಿಗೆ ಕಳಿಸಿ ಆಮಂತ್ರಣವನ್ನೀಯುತ್ತಾನೆ. ಮತ್ತು ದಿಬ್ಬಣ ತೆಗೆದುಕೊಂಡು ಕುಂಡಿನಿ ಪುರಕ್ಕೆ ಹೊರಡುತ್ತಾನೆ.

ಇಲ್ಲಿ ಮದುವೆಯ ತಯಾರಿ ನಡೆಯುತ್ತಿರುವಾಗ ರುಕ್ಮಿಣಿ ಚಿಂತೆಪಡುತ್ತ ಬ್ರಾಹ್ಮಣ ಇನ್ನೂ ಏಕೆ ಬರಲಿಲ್ಲ ? ಬರಲಿಕ್ಕಿಲ್ಲವೇ? ಚೈದ್ಯನ ಮೋರೆಯನ್ನು ಹೇಗೆ ನೋಡಲಿ ತಾನು ನಿರ್ಭಾಗ್ಯೆ ತನ್ನ ‘ಅಣ್ಣನೇ ಕೊರಳು ಕೊಯ್ಯುತ್ತಾನೆ ಎಂದು ಮರುಗುತ್ತಾಳೆ.

ಅಷ್ಟರಲ್ಲಿ ಚೈದ್ಯನೇ ಮೊದಲಾದ ಅರಸರು ಬರುತ್ತಾರೆ. “ತವಕದಿ ರುಕ್ಮನಾಕ್ಷಣದಿ ಬಾಂಧವರೊಡಗೂಡಿ ಸಂಭ್ರಮದಿ’’ ಎಲ್ಲರನ್ನೂ ಸ್ವಾಗತಿಸುತ್ತಾನೆ. “ಸತಿಯರೊಳ್ ಬೇಗ ಗಿರಿಜಾಲಯಕ್ಕೆ ರುಕ್ಮಿಣಿಯನ್ನು ಕರೆದೊಯ್ದು ವಿರಚಿಸಿ ಪೂಜೆಗಳ’’ ಎಂದು ಕಳಿಸುತ್ತಾನೆ. ಅಷ್ಟು ಹೊತ್ತಿಗೆ ದ್ವಾರಕೆಯಲ್ಲಿ ಬಲರಾಮನು ಸಭೆ ನಡೆಸುತ್ತಿರುವಾಗ ಕೃಷ್ಣ ರುಕ್ಮಿಣಿಯ ಪತ್ರದ ಸಂಗತಿ ತಿಳಿಸಲು “ಹೊರಡು ತಡವೇಕೆಂದು’’ ಹೇಳುತ್ತಾನೆ. ಕುಂಡಿನೀ ನಗರಕ್ಕೆ ಅವರು ಬರಲು ಭೀಷ್ಮಕನು ಸ್ವಾಗತಿಸುತ್ತಾನೆ. ಗಿರಿಜಾಲಯಕ್ಕೆ ಹೋದ ರುಕ್ಮಿಣಿಯನ್ನು ಕರೆತರಲು ಸಖಿಯರು ಹೋಗಲು ಶಿಶುಪಾಲನು ಹರುಷದಿಂದ ಮಂಟಪದಲ್ಲಿ ಕುಳಿತಿರುವುದನ್ನು ಕೃಷ್ಣನು ನೋಡಿ ಕೂಡಲೇ ರಥವೇರಿ ಗಿರಿಜಾಲಯದ ಕಡೆಗೆ ಹೋಗಿ ತಿರುಗಿ ಬರುತ್ತಿರುವ ರುಕ್ಮಿಣಿಯನ್ನು ಸಂಸಾರ ಪತಿತರನ್ನು ಎತ್ತಿಕೊಳ್ಳುವ ಹಾಗೆ ಎತ್ತಿಕೊಂಡು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ನಡೆಯುತ್ತಾನೆ. ಈ ಸುದ್ದಿಯನ್ನು ಸತಿಯರು ತಿಳಿಸಲಾಗ ರುಕ್ಮನು “ಅರೆರೆ ಗೋವಳಬಾಲನೆನ್ನುತ ಬಾರೆಲೋ ಚೈದ್ಯ ನಾರಿಮಣಿಯನ್ನು ಪೋರನೊಯ್ವನು’’ ಎಂದು ಬೊಬ್ಬಿರಿಯಲಾಗಿ ಮಾಗಧ ಇತ್ಯಾದಿಗಳು ಶಸ್ತ್ರ ಹಿಡಿದು ಹೊರಡುತ್ತಾರೆ..

ರುಕ್ಮನು “ಫಡ ಫಡೆಲೋ ಗೋವಳರ ಹುಡುಗತನಗಳ ಶೂರರೊಡನೆ ತೋರುವಿರೈಸೆ ಭಳಿರೆ’’ ಎಂದು ಅಬ್ಬರಿಸುತ್ತಾನೆ. “ದೊರಕಲಾಪುದೆ ಸುರಭಿ ತಿರುಕನಿಂಗಲೆ ಮರುಳೆ’’ ಎಂದು ಬಲರಾಮ ಕೇಳಿದರೆ ಶಿಶುಪಾಲ, ಗೋವಳನೆ, ಕಳ್ಳನೆ ನಿನ್ನ ಸಾಹಸವನ್ನು ತೋರು ಎಂದು ಅಬ್ಬರಿಸಿದನು. ಆದರೆ ಬಲರಾಮನು ತನ್ನ ಹಲಾಯುಧದಿಂದ ಅವನ ಬಾಣಗಳನ್ನು ನಿವಾರಿಸಿಕೊಳ್ಳುತ್ತಾನೆ. ಮುಂದೆ ನಡೆದ ಯುದ್ಧದಲ್ಲಿ ಶಿಶುಪಾಲನು ಮೂರ್ಛೆ ಹೋಗಲು ಮಗಧನು ಯುದ್ಧಕ್ಕೆ ನಡೆಯುತ್ತಾನೆ. “ಹದಿನೇಳು ಬಾರಿಯೊಳು ಗೋವಳಕೃಷ್ಣನೊದಗಿ ಕಾಲ್ದೆಗೆದಾಗಳು ಬೆದರಿವೋಡಿಹ ಭಂಡರುಭಯರ ಕ್ಷಣದೊಳು ನಿಧನಮಾಳ್ಪೆನು’’ ಎಂದು ಅಬ್ಬರಿಸುತ್ತಾನೆ. ಇಬ್ಬರಲ್ಲಿಯೂ ಭಯಂಕರ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ಮಾಗಧ ಮೂರ್ಛೆ ಹೋಗಲು ಕೂಡಲೆ ಚೈದ್ಯನನ್ನು ಕರೆದು ಇಂದು ನಮಗೆ ಯುದ್ಧದಲ್ಲಿ ಜಯವಿಲ್ಲ. ತರುಣಿಯ ಆಸೆ ಈಗ ಬೇಡ ಎನ್ನುತ್ತಾನೆ.

ರುಕ್ಮನು ಹಿಂದಿರುಗದೆ “ಅರೆರೆ ಜಾರ ಕೃಷ್ಣ ಧುರದಿ ನಿನ್ನ ಕೊಲದೆ ಪುರಿಗೆ ತೆರಳುವಧಟನಲ್ಲ’’ ಎಂದು ಮೇಲುವರಿದು ಹೋಗುತ್ತಾನೆ. “ಭಾವನೆನ್ನೊಳೇಕೆ ಮುನಿಸು ಸಾವಧಾನದಿಂದ ಸತಿಯ ನೀವುದುಚಿತ’’ ಎಂದು ಮೂದಲಿಸಿದರೆ ರುಕ್ಮ “ಬಲ್ಲೆ ನಿನ್ನ ಕಪಟ ಕೃತ್ಯ ಬಿಲ್ಲಹಬ್ಬಕೆನುತಪೋಗಿ ಕಳ್ಳ ನೀನು ಕಂಸನನ್ನು ಕೊಂದೆ’’ ಎಂದು ಹೀಯಾಳಿಸುತ್ತಾನೆ. ಹಾಗೆಯೇ ಪೂತನಿಯ ಕೊಂದ ಬಗ್ಗೆ, ಯಯಾತಿಯ ಶಾಪದ ಬಗ್ಗೆ ಒಂದೊಂದನ್ನು ಹೇಳಿ ಕೃಷ್ಣನನ್ನು ಜರೆಯುತ್ತಾನೆ. ಇದರಿಂದ ಕ್ರುದ್ಧನಾದ ಕೃಷ್ಣ “ತೋರೆಲೊ ನಿನ್ನಯ ಪರಾಕ್ರಮವೆನ್ನೊಳು’’ ಎಂದು ಯುದ್ಧಕ್ಕೆ ನಿಲ್ಲಲು ರುಕ್ಮ ಅನೇಕ ಬಾಣಗಳಿಂದ ಆತನನ್ನು ಹೊಡೆಯುತ್ತಾನೆ. ಕೊನೆಗೆ ಕೃಷ್ಣ ಅವನ ಕೈಗಳ ಕಟ್ಟಿ ಖಡ್ಗ ತೆಗೆದು ಕೊರಳು ಕತ್ತರಿಸಲು ಮುಂದಾದಾಗ “ದೇವರಕ್ಷಿಸೆನುತ್ತ ರುಕ್ಮಿಣಿ ದೇವದೇವನ ಕರವ ಪಿಡಿಯುತ ಭಾವನನು ನೀ ಕೊಲುವೆಯಂತೈ ಸಾವಧಾನದಿ ಯೋಚಿಸು’’ ಎಂದು ಮುಂತಾಗಿ ಬೇಡಿಕೊಳ್ಳುತ್ತಾಳೆ. ಕೃಷ್ಣ ಅವಳಿಗೆ ಅಭಯ ಕೊಟ್ಟು ಸಂತೈಸುತ್ತಿರುವಾಗ ಬಲರಾಮ ಬಂದು ರುಕ್ಮನ ಕಟ್ಟಿದ ಕೈಗಳನ್ನು ಬಿಚ್ಚಿ ರುಕ್ಮನನ್ನು ಕಳಿಸುತ್ತಾನೆ.

ರುಕ್ಮಿಣಿ ಸಹಿತ ಬಲರಾಮ ಕೃಷ್ಣರು ತಮ್ಮ ಪಟ್ಟಣಕ್ಕೆ ಹಿಂದಿರುತ್ತಾರೆ. ತಂದೆಯನ್ನು ವಂದಿಸಲಾಗಿ ಆತ ಸಂತೋಷಗೊಂಡು ಭಾಂದವರನ್ನೂ ಭೀಷ್ಮಕನನ್ನೂ ಕರೆಸಿ ರುಕ್ಮಿಣಿ ವಿವಾಹವನ್ನು ಮಾಡಿಸಿ, ಬೇಕು ಬೇಕಾದ ದಾನ ಧರ್ಮವನ್ನು ಮಾಡಿ ಎಲ್ಲರನ್ನು ಸಂತೋಷಗೊಳಿಸುತ್ತಾನೆ. ಭೀಷ್ಮಕ ತಿರುಗಿ ತನ್ನ ಪಟ್ಟಣಕ್ಕೆ ಹೋಗುತ್ತಾನೆ.

ಇನ್ನೊಂದು ಕಡೆಗೆ ರಾಜನಾದ ಸತ್ರಾಜಿತನು ಒಡ್ಡೊಲಗದಲ್ಲಿ ಮಂಡಿಸಲು ಚಾರಕರು ಬಂದು ಕೈಮುಗಿದು “ಚಿತ್ತಾವಧಾನ ಭೂಪಾಲ ಕರಡಿ ಕಾಡ್ಗೋಣ ಜಂಬುಕವು ಮತ್ತೆ ಶರಬ ಶಾರ್ದೂಲ’’ ಮುಂತಾದವು ತುಂಬಿ ಹೋಗುತಿವೆ ಎನ್ನಲು ಸತ್ರಾಜಿತನು ಬೇಟೆಗೆ ಅಪ್ಪಣೆ ಕೊಡಲು ಅವನ ತಮ್ಮನಾದ ಪ್ರಸೇನನು ಬಂದು ನಮಸ್ಕರಿಸಿ ಅಣ್ಣನ ಸ್ಯಮಂತಕ ಮಣಿ ಸರವನ್ನು ಧರಿಸಿ ಬೇಟೆಗೆ ಹೊರಡುತ್ತಾನೆ.

ವನದಲ್ಲಿ ಜಿಂಕೆ, ಮೊಲ, ಕಾಡಾನೆ, ಖಡ್ಗಮೃಗ ಮೊದಲಾದವುಗಳನ್ನು ಬೇಟೆಯಾಡುತ್ತ ಸಂತೋಷದಿಂದ ಮುಂದುವರಿಯುತ್ತಿರಲು ಸಿಂಹವೊಂದು ಕೆರಳಿ ಬರುತ್ತದೆ. ಅದನ್ನು ಕಂಡ ಪ್ರಸೇನನು ಹುರುಪಿನಿಂದ “ಕೆಟ್ಟ ಕಾನನ ಮೃಗವೆ ಜೀವದೊಳಾಶೆ ಬಿಟ್ಟು ಮುಂದಕೆ ಬಾ” ಎಂದು ಬಾಣವನ್ನು ಬಿಡುತ್ತ ಮುಂದುವರಿಯಲು ಸಿಂಹವು’’ ಪ್ರಸೇನನ ಮೇಲೆ ಹಾರಿ ಆತನನ್ನು ಕೊಂದು ಆತನ ಕೊರಳಲ್ಲಿರುವ ಶ್ಯಮಂತಕ ಸರವನ್ನು ಎತ್ತಿಕೊಂಡು ಹೋಗುತ್ತಿರುವಾಗ ಜಾಂಬವನು ಬಂದು ಆ ಸರವನ್ನು ಕೊಡೆನ್ನುತ್ತಾನೆ. ಆದರೆ ಸಿಂಹವು ಅವನ ಮಾತಿಗೆ ಬಗ್ಗದೆ ರಭಸದಿಂದ ಅವನ ಮೇಲೆ ಜಿಗಿಯಲು ಜಾಂಬವ ಸಿಂಹವನ್ನು ಕೊಂದು ಪ್ರಕಾಶಮಾನವಾದ ಸ್ಯಮಂತಕ ಮಣಿ ಸರವನ್ನು ಒಯ್ದು ತನ್ನ ಗುಹೆಗೆ ಹೋಗಿ ತನ್ನ ಮಗನ ತೊಟ್ಟಿಲಿಗೆ ಕಟ್ಟುತ್ತಾನೆ.

ಪ್ರಸೇನನು ಬಾರದಿರಲು ಸತ್ರಾಜಿತ ದುಃಖದಿಂದಿರುವಾಗ ಚಾರರು ಬಂದು ಆತ ಕಾಣೆಯಾದ ಸುದ್ದಿಯನ್ನು ಹೇಳುತ್ತಾರೆ. ಇದರಿಂದ ದುಃಖಿತನಾದ ಸತ್ರಾಜಿತ ಯಾಕಾದರೂ ಸ್ಯಮಂತಕ ಸರವನ್ನು ಧರಿಸಿ ಹೋದೆಯೋ, ಹಿಂದೆ ತನಗೆ ಸೂರ್ಯನು ತನ್ನ ತಪಸ್ಸಿಗೆ ಮೆಚ್ಚಿ ಕೊಟ್ಟಿದ್ದನು ಎಂದೂ ಅದು ಎಷ್ಟು ಆಕರ್ಷಕವಾಗಿತ್ತೆಂದರೆ ಕೃಷ್ಣ ಸ್ವತಃ ಅದನ್ನು ತನಗೆ ಕೊಡು ಎಂದು ಅನೇಕ ಬಾರಿ ಕೇಳಿದ್ದ. ಆತನೇ ತಮ್ಮನನ್ನು ಕೊಂದು ಅಪಹರಿಸಿರಬೇಕು ಎಂದು ನಿಶ್ಚಯಿಸಿ ದುಃಖಿತನಾಗುತ್ತಾನೆ.

ಹೀಗಿರುವಾಗೊಂದು ದಿನ ದ್ವಾರಕೆಯಲ್ಲಿ ಬಲರಾಮನು ಸಭೆಯಲ್ಲಿ ಆಸೀನನಾಗಿರುವಾಗ ನಾರದಮುನಿ ಬರುತ್ತಾನೆ. ಅವನು ಬಲರಾಮನಲ್ಲಿ ಕೃಷ್ಣನ ಬಗ್ಗೆ ಆತ ಜನರ ನಿಷ್ಠುರವನ್ನು ಗಳಿಸುತ್ತಾನೆ. ಮಿತ್ರವಿಂದೆಯನ್ನು ಕಲಹದಲ್ಲಿ ಕದ್ದು ತಂದು ಮದುವೆಯಾದನು. ಹೀಗೆಯೇ ನಗ್ನಜಿತು ಸುತೆಯ, ಮದ್ರಾಧೀಶಸುತೆ ಲಕ್ಷಣಿಯ ಮತ್ತೂ ಕೆಲವರನ್ನು ಹೊತ್ತು ತಂದು ಮದುವೆಯಾದ ಅವನ ತುಂಟಾಟ ತಡೆಯಲಾರದು. ಈಗ ಮತ್ತೊಂದು ಘನತರವಾದ ಅಪರಾಧವನ್ನು ಮಾಡಿದ್ದಾನೆ. ಸತ್ರಾಜಿತನ ಸ್ಯಮಂತಕ ಮಣಿಯುಳ್ಳ ಸರವನ್ನು ಅವನ ತಮ್ಮ ಪ್ರಸೇನ ಧರಿಸಿ ಬೇಟೆಗೆ ಹೋದಾಗ ಆ ಸರದ ಮೇಲಿನ ಪ್ರಲೋಭದಿಂದ ಕೃಷ್ಣನೆ ಅವನನ್ನು ಕೊಂದು ಅಪಹರಿಸಿರಬೇಕೆಂದು ಸತ್ರಾಜಿತ ತಿಳಿದು ದುಖಿತನಾಗಿದ್ದಾನೆ. ನಿನ್ನ ತಮ್ಮನಿಗೆ ಬುದ್ಧಿ ಹೇಳು ಮುಂತಾಗಿ ಚುಚ್ಚಿ ಹಾಕಿ ಹೋಗುತ್ತಾನೆ.

ನಾರದರ ಮಾತು ಕೇಳಿ ಬಲರಾಮನಿಗೆ ಕೃಷ್ಣನ ಮೇಲೆ ಕೋಪ ಬಂದು ಆತನನ್ನು ಕರೆಯುತ್ತಾನೆ. “ಪುಟ್ಟಿದೆಯೇಕೆಮ್ಮಯನ್ವಯದೊಳು ಕಡುದುಷ್ಟನು ನೆಂಟರಲಿ ಕಟ್ಟಿಸಿ ದ್ವೇಷವ ಅಪಹಾಸ್ಯವು ನಿಷ್ಠುರವಾಯಿತಲ್ಲ’’ ಎಂದು ಜರೆಯುತ್ತಾನೆ. ಪ್ರಸ್ತುತ ಆದ ತಪ್ಪೇನೆಂದು, ಸ್ಯಮಂತಕದ ಕುರಿತಾದ ಆರೋಪವನ್ನು ಕೇಳಿ ಜನನಿ ಜನಕರಾಣೆಯಾಗಿಯೂ ತನಗೆ ಈ ಕುರಿತು ಏನೂ ತಿಳಿಯದೆಂದೂ, ಹಿಂದೊಮ್ಮೆ ಅದನ್ನು ಕೇಳಿದ್ದೆ ; ಅದು ತಂದೆಗೆ ತಂದುಕೊಡಲು ಎನ್ನುತ್ತಾನೆ. ಹಾಗಾದರೆ ಪ್ರಸೇನನನ್ನು ಹುಡುಕಿಬಾ ಎಂದು ಬಲರಾಮ ಹೇಳಲಾಗಿ ಕೃಷ್ಣನು ಪ್ರಸೇನ ಮೂರು ಲೋಕದಲ್ಲೇ ಇದ್ದರೂ ತಂದುಕೊಡುವೆ ಎಂದು ಕೃತವರ್ಮ ಸಾತ್ಯಕಿ ಮೊದಲಾದವರನ್ನು ಕೂಡಿಕೊಂಡು ಹೊರಡುತ್ತಾನೆ.

ಹಾಗೆ ಹೊರಟ ಕೃಷ್ಣನು ವಿಂದ್ಯಾರಣ್ಯವನ್ನು ಹೊಕ್ಕು ಹುಡುಕುತ್ತಿರಲು ಹೆಜ್ಜೆಗುರುತನ್ನನು ಸರಿಸಿ ಬರಲಾಗಿ ಪ್ರಸೇನ ರಕ್ತದ ಮಡುವಿನಲ್ಲಿ ಬಿದ್ದುದನ್ನು ನೋಡುತ್ತಾನೆ. ಕರುಹನ್ನು ನೋಡಿ ಸಿಂಹವೆ ಕೊಂದಿರಬೇಕೆಂದು ಗುರುತು ಹಿಡಿದು ಹೋಗುತ್ತಿರುವಾಗ ಸಿಂಹದ ಹೆಣವನ್ನು ನೋಡುತ್ತಾನೆ. ಕರಡಿಯ ಹೆಜ್ಜೆಯನ್ನು ನೋಡಿ ಅದೇ ಜಾಡಿನಲ್ಲಿ ಮುಂದೆ ಹೋಗಲು ಅದು ಆತನನನ್ನು ಗವಿಗೆ ಒಯ್ಯುತ್ತದೆ. ಅಲ್ಲಿ ಹೋಗಿ ನೋಡಲಾಗಿ ತರುಣಿಯೂ, ಸುಂದರಿಯೂ ಆದ ಕನ್ಯೆಯೋರ್ವಳು ಜಾಂಬವನ ಮಗಳು ಸ್ಯಮಂತಕಮಣಿ ಮಾಲೆಯನ್ನು ಕಟ್ಟಿದ ತೊಟ್ಟಿಲು ತೂಗುವುದನ್ನು ನೋಡುತ್ತಾನೆ. “ತಂದೆಯಾಗಿಹ ಜಾಂಬವಂತ ಕೇಸರಿಯಕೊಂದು ತಂದಿಹ ಸ್ಯಮಂತಕ ಮಣಿಯ ಚೆಂದದೊಳು ನಿನ್ನ ತೊಟ್ಟಿಲಬಳಿಯ ಬಂಧಿಸಿಹನು ನೋಡುಭಾಗ್ಯಾಂಭೋ ನಿಧಿಯ ಜೋಜೊ’’ ಮುಂತಾಗಿ ಹಾಡುತ್ತಿರುವುದನ್ನು ಕೇಳುತ್ತಾನೆ. ಆತ ತನ್ನ ಪಾಂಚಜನ್ಯವನ್ನು ಊದುತ್ತಾನೆ. ಆ ಭಯಂಕರ ನಾದವನ್ನು ಕೇಳಿ ಜಾಂಬವನು “ಅರೊ ಎನ್ನಯ ಗುಹೆಯ ಸ್ವತಂತ್ರಿಸಿ ಸೇರಿದೆಯ ಪೆಸರೇನು ಬಂದಿಹ ಕಾರಣಗಳಿದೇನಿದು’’ ಎಂದು ಅಬ್ಬರಿಸುತ್ತಾನೆ. ಕೃಷ್ಣ ತನ್ನ ಪರಿಚಯ ಹೇಳಲು ಒಬ್ಬಳೇ ಇರುವ ಬಾಲೆಯನ್ನು ಬೆದರಿಸಿದ್ದಕ್ಕಾಗಿ ನಿನ್ನ ತಲೆ ಕಡಿವೆ ಎನ್ನುತ್ತಾನೆ. ಹಿತದಿಂದ ಮಣಿಯನ್ನು ಕೊಡೆಂದು ಕೃಷ್ಣ ಹೇಳಿದರೆ, ತಾನು ಸಾಮಾನ್ಯ ಮೃಗವಲ್ಲ ದ್ವಾಪರದಲ್ಲಿ ಹುಟ್ಟಿದವ ತನ್ನಲ್ಲಿ ಇಷ್ಟು ಛಲದಿಂದ ಯುದ್ಧಮಾಡಿದವರೇ ಇಲ್ಲ ನೀನು ಯಾರು ಎಂದು ಜಾಂಬವ ಆಶ್ಚರ್ಯವ್ಯಕ್ತಪಡಿಸುವರೆ, ಯಾರಾದರೇನು ನಿನ್ನ ಪರಾಕ್ರಮ ತೋರು ಎಂದು ಕೃಷ್ಣ ಸಡ್ಡು ಹೊಡೆಯುತ್ತಾನೆ. ಕೊನೆಗೆ ಕೃಷ್ಣನು ರಾಮನಾಗಿ ಕಾಣಿಸಿಕೊಳ್ಳುತ್ತಾನೆ. “ರಾಮರಾಘವ ದಶರಥಬಾಲ ಜಯ ಸೀತಾಲೋಲ’’ ಮುಂತಾಗಿ ಜಾಂಬವ ಸ್ತುತಿಸುತ್ತಾನೆ. ಶರಣ ಲಾಲಿಸು ಹಿಂದೆ ನಿನಗೆ ಮುಂದಿನ ಯುಗದಲ್ಲಿ ದರ್ಶನ ಕೊಡುವೆನೆಂದು ಮಾತುಕೊಟ್ಟಿದ್ದೆ. ಆ ಪ್ರಕಾರ ನಿನಗೆ ದರ್ಶನವಿತ್ತೆ. ಈ ಕಲ್ಪಾಂತರದವರೆಗೆ ಜೀವಿಸಿದ್ದು ಮುಂದೆ ನೀನು ಮುಕ್ತಿ ಹೊಂದುವೆ ಎಂದು ಆಶೀರ್ವದಿಸುತ್ತಾನೆ. “ಆದಿದೇವರದೇವ ನಿನ್ನೊಡನೆ ಮುಳಿದು ನಾ ಕಾದಿದಪರಾಧ ಪರಿಹಾರಕೆನ್ನಯ ಸುತೆಯ ಮೋದದಿಂದೀದಪೆನು ಜಾಂಬವತಿಯೆಂಬಿವಳ ಸಾದರಿಸಿ ಸ್ವೀಕರಿಪುದು’’ ಎಂದು ಅರ್ಪಿಸುತ್ತಾನೆ. ಅಲ್ಲಿಂದ ಕೃಷ್ಣ ಹೊರಡುತ್ತಾನೆ.

ಬಂದ ಕೃಷ್ಣನನ್ನು ಕಂಡು ಬಲರಾಮ ಸಂತೋಷಗೊಳ್ಳುತ್ತಾನೆ. ಸತ್ರಾಜಿತನನ್ನು ಕರೆಸಿ ನಡೆದ ಸಂಗತಿಯನ್ನು ತಿಳಿಸಿ ಅವನಿಗೆ ಸ್ಯಮಂತಕಮಣಿಯನ್ನು ಅರ್ಪಿಸುತ್ತಾನೆ. ಸತ್ರಾಜಿತ ತನ್ನ ಮಗಳನ್ನು ಕೃಷ್ಣನಿಗೆ ಕೊಡುತ್ತಾನೆ.

ಹೀಗಿರುತ್ತಿರಲಾಗಿ ಒಂದು ದಿನ ದೇವದೂತನೊಬ್ಬನು ಬಂದು ‘ದೇವರದೇವ’ ಎಂದು ಕೃಷ್ಣನನ್ನು ಸ್ತುತಿಸಿ ಪ್ರಾಗ್ಜ್ಸೋತಿಷಪುರವನ್ನು ಆಳುತ್ತಿರುವ ನರಕಾಸುರ ಮತ್ತು ಅವನ ತಮ್ಮ ಮುರಕಾಸುರರು ದೇವಲೋಕವನ್ನು ಮುತ್ತಿ ಉಚ್ಛೈಶ್ರವ, ಕಲ್ಪವೃಕ್ಷ ಮೊದಲಾದವುಗಳನ್ನು ಅಪಹರಿಸಿದ್ದಲ್ಲದೆ ಸುರಸ್ತ್ರೀಯರಿಗೆ ಉಪಟಳಕೊಡುತ್ತಾರೆಂದೂ, ರಾಕ್ಷಸರನ್ನು ನಾಶಮಾಡಿ ತಮಗೆ ಸುಖವೀಯಬೇಕೆಂದು ದೇವೇಂದ್ರ ನಿನ್ನನ್ನು ವಿನಂತಿಸುದ್ದಾನೆಂದೂ ಹೇಳುತ್ತಾನೆ.

ದೂತನ ಮಾತನ್ನು ಕೇಳಿ ಕೃಷ್ಣನು ಗರುಡವಾಹವನ್ನೇರಿ ಸತ್ಯಭಾಮೆಯನ್ನು ಕರೆದುಕೊಂಡು ನರಕಾಸುರನ ಅರಮನೆಗೆ ಹೊರಡುತ್ತಾನೆ.

ಅಸುರರ ಭದ್ರವಾದ, ಮಾಯಾಜಾಲದಿಂದ ಕೂಡಿದ ಕೋಟೆಯನ್ನು ನೊಡಿ ಕೃಷ್ಣ ತನ್ನ ‘ಪಾಂಚಜನ್ಯ’ವನ್ನು ಊದುತ್ತಾನೆ. ಇದನ್ನು ಕೇಳಿದ ನರಕ “ಆರೆಲೊ ದುರ್ಗವ ಭೇದಿಸಿ ಪುರದೊಳು ಸಾರಿಬಂದಿಹೆ ಬಳಿರೆ ಕಾರಣವೇನೆಲೊ’’ ಎಂದು ಮುರನು ಬಂದನು. ಅದಕ್ಕುತ್ತರವಾಗಿ ಕೃಷ್ಣ “ಧುರದೊಳು ಕಂಸನ ತರಿದಿಹ ಕೃಷ್ಣನನರಿಯ ವಾರ್ತೆಯನು’’ ಎಂದು ಮರುತ್ತರವೀಯುತ್ತಾನೆ. ಮುರನು ನಿನ್ನನ್ನು ಕೊಂಡು ಕೀರ್ತಿಪಡೆವೆ ಎಂದರೆ, ಕೃಷ್ಣ ಅವನೆಲ್ಲ ಬಾಣಗಳನ್ನು ಖಂಡಿಸಿ ಚಕ್ರದಿಂದ ಆತನ ತಲೆ ಕತ್ತರಿಸಿ ಕೆಡಹುತ್ತಾನೆ.

ಮುರನು ಸತ್ತ ವಾರ್ತೆಯನ್ನು ತಿಳಿದು ನರಕಾಸುರನು “ಭೋರ್ಗುಡಿಸುತ ನರಕದೈತ್ಯನು ಗಜರುತ ಅರೆರೆ ಪೋರನ ವಾರ್ತೆಯ ಪಿಂದೆನಾನರಿತಿರ್ವೆ ಕುಟಿಲೋಕ್ತಿಯ’’ ಎಂದು ಧಾವಿಸಿ ಬರುತ್ತಾನೆ. ದೇವಲೋಕದಿಂದ ತಂದ ದಿವ್ಯವಸ್ತುಗಳನ್ನು ಕೊಡದಿದ್ದರೆ ಗಂಟಲು ಕತ್ತರಿಸುವುದಾಗಿ ಕೃಷ್ಣ ಹೇಳಲು “ಕೊಡೆನೆಂದಿಗು’’ ತಂದವಸ್ತುವ. ತನ್ನಲ್ಲಿ ಯುದ್ಧಮಾಡಿ ಒಯ್ಯಿ ಎಂದು ಆರ್ಭಟಿಸಿದ ನರಕನು “ಮೂರುಲೋಕದೊಳೆನ್ನ ಗೆಲ್ಲುವ ಶೂರರನ್ನು ಕಾಣೆ ಜಾರಗೋವಳನೆ’’ ಎಂದು ಹೇಳಿ ಅಸ್ತ್ರ ಬಿಡುತ್ತಾನೆ. ಇಬ್ಬರಿಗೂ ಘನಘೋರವಾದ ಯುದ್ಧ ನಡೆದು ಕೆರಳಿ ಕೃಷ್ಣ ಚಕ್ರದಿಂದ ಕೊರಳನ್ನು ಕತ್ತರಿಸಿಕೆಡಹುತ್ತಾನೆ. ಆಗ ನರಕಾಸುರನ ಹೆಂಡತಿ ಧಾರಣಿದೇವಿ ಕಣ್ಣೀರು ಸುರಿಸುತ್ತ ಕೃಷ್ಣನಿಗೆ ನಮಿಸುತ್ತ ನರಕಾಸುರನ ಮಗನಾದ ಭಗದತ್ತನನ್ನು ಕಾಪಾಡಬೇಕೆಂದು ಪಾದದಲ್ಲಿಡುತ್ತಾಳೆ. ಕೃಷ್ಣನು ಆತನಿಗೆ ಪ್ರಾಗ್ಜ್ಯೋತಿಪುರದ ಪಟ್ಟಕಟ್ಟುತ್ತಾನೆ.

ನರಕಾಸುರನ ಸೆರೆಮನೆಯಲ್ಲಿದ್ದ ಹದಿನಾರು ಸಾವಿರ ಹೆಂಗಳೆಯರು ಬಂದು ಕೃಷ್ಣನಿಗೆ ಕೈಮುಗಿದು ತಮ್ಮನ್ನು ಮದುವೆಯಾಗಿ ಉದ್ಧರಿಸಬೇಕೆಂದು ಬೇಡಿಕೊಳ್ಳುತ್ತಾರೆ. ಅವರ ಮೊರೆಯನ್ನು ಸ್ವೀಕರಿಸಿ, ತನ್ನ ಪಟ್ಟಣಕ್ಕೆ ಬಂದು ಸುಖವಾಗಿದ್ದನು.

ಹೀಗೆ ಸುಖದಿಂದಿರುತ್ತಿರುವೊಂದುದಿನ ಆವಂತಿ ನಗರದಲ್ಲಿ ಶೃತದೇವನ ಮಕ್ಕಳಾದ ವಿಂದ ಮತ್ತು ಅನುವಿಂದರು ಸಭೆ ನಡೆಸುತ್ತಿರುವಾಗ ವಿಂದನು ತನ್ನ ತಮ್ಮನೊಡನೆ ತನ್ನ ಸೋದರಿಯ ವಿವಾಹವನ್ನು ನೆರವೇರಿಸಿದಾಗ ಮಿತ್ರವಿಂದೆಯನ್ನು ಯಾರೋ ಅಪಹರಿಸಿದ್ದಾರೆ. ಕೂಡಲೇ ಹುಡುಕಿ ಬರಬೇಕು. ಎನ್ನುತ್ತಾನೆ. ಅಷ್ಟು ಹೊತ್ತಿಗೆ ಚರನು ಬಂದು ಎಲ್ಲ ಕಡೆಗೆ ಹುಡುಕಿದೆವು. ಆಕೆ ದ್ವಾರಕೆಯಲ್ಲಿ ಕೃಷ್ಣನ ಅರಮನೆಯೊಳಿದ್ದಾಳೆ ಎನ್ನುತ್ತಾರೆ.

ಕೂಡಲೇ ವಿಂದನು ಗೋವಳನ ತಲೆ ಕತ್ತರಿಸುವೆ ಎಂದು ತಮ್ಮನೊಡನೆ ಹೊರಡುತ್ತಾನೆ. ಕೃಷ್ಣನಲ್ಲಿ ಹೋಗಿ ನೀನು ಕದ್ದು ತಂದ ತನ್ನ ಗಂಗಿ ಮಿತ್ರವಿಂದೆಯನ್ನು ತನಗೊಪ್ಪಿಸಬೇಕು ಎಂದು ಬೆದರಿಸುತ್ತಾನೆ. ಅದಕ್ಕೆ ಕೃಷ್ಣ “ಅತ್ತೆ ರಾಜಾದೇವಿಯು ಎನಗಾಗಿ ಪೆತ್ತಿರ್ಪ ಸುಕುಮಾರಿ ಮಿತ್ರವಿಂದೆಯುಯೆನ್ನು ಬಿಡದೆ ನೆನೆಯುತ್ತಿರಲು ತಂದಿಹೆನು’’ ಎನ್ನುತ್ತಾನೆ. ಇದನ್ನು ಮನ್ನಿಸದೆ ಮುಂದೊತ್ತಿಬರುತಿರಲು ಬಲರಾಮ ಯುದ್ಧದಲ್ಲಿ ಜಯಿಸಿ ವರಿಸುವುದೇ ಚಂದ. ನಾನು ಸಿದ್ಧನಾಗಿದ್ದೇನೆ ಎಂದು ಹೇಳಿದಾಗ ಇಬ್ಬರೂ ವಿಂದಾನುವಿಂದರನ್ನು ಎದುರಿಸುತ್ತಾರೆ. “ಎಲೆ ಗೋವಳ ನೀನೆನ್ನೊಳು ಸಮರದಿ ಬಲಪೌರುಷತೋರೊ’’ ಎಂದರೆ “ಪೇಳಿರೆ ಕುಲದೂಷಣಗಳ ಕೃತ್ಯವ ಖೂಳನೆ ನುಡಿಯದಿರೆ ಸೀಳುವೆ ಜಿಹ್ವೆಯನೆನ್ನುತ ಕ್ರೋಧವ ತಾಳೆ ಹಲಾಯುಧನು’’, ನಿನಗಿಂತ ನಿನ್ನ ಹೆಂಡತಿಯೇ ಹಿರಿಯಳೆಂದು ಬಲರಾಮನನ್ನು ಚೇಡಿಸಿದರೆ, ಬ್ರಾಹ್ಮಣ ಆದೇಶದಿಂದ ಹಾಗೆ ವರ್ತಿಸಿದ್ದೇನೆ, ಎಂದು ಬಲರಾಮ ಹೇಳಿ ಯುದ್ಧಕ್ಕೆ ತೊಡಗುತ್ತಾನೆ. ವಿಂದನು ಮೂರ್ಛೆ ಹೋಗಲು ಅನುವಿಂದನು ಬರುತ್ತಾನೆ. ಆತನೂ ಮೂರ್ಛೆ ಹೋಗಲು ಮತ್ತು ವಿಂದನು ಎದ್ದುಬರುತ್ತಾನೆ. ಇಬ್ಬರೂ ಒಬ್ಬರೊಬ್ಬರು ಹಂಗಿಸಿ ಮಾತನಾಡಿಕೊಂಡು ಯುದ್ಧದಲ್ಲಿ ತೊಡಗುತ್ತಾರೆ. ಭೀಕರವಾದ ಯುದ್ಧ ನಡೆದಾಗ ಕೃಷ್ಣ ಚಕ್ರವನ್ನು ಹಿಡಿದು ಕಡಿಯಲೆಳೆಸಲು ಮಿತ್ರವಿಂದೆ ಅಣ್ಣನನ್ನು ಕೊಲ್ಲಬಾರದೆಂದು ಬೇಡಿಕೊಳ್ಳಲು ಆತನನ್ನು ಹೋಗೆಂದು ಬಿಡುತ್ತಾನೆ.

ಆಗ ಮಿತ್ರವಿಂದೆಯು ವಿಂದನೊಡನೆ ಸುಮ್ಮನೆ ವಿರಸಬೇಡ ತನ್ನನ್ನು ಕೃಷ್ಣನಿಗೆ ಮದುವೆ ಮಾಡಿಕೊಡು ಎನ್ನುತ್ತಾಳೆ. ತೋರದಿರಲೆ ನಿನ್ನಾನನ ಧೂರ್ತಳೆ’’ ಎಂದು ಅವಳನ್ನು ಹೀನೈಸುತ್ತಾನೆ.

ಮಿತ್ರಮಿಂದೆಯನ್ನು ಕೂಡಿಕೊಂಡು ಕೃಷ್ಣನು ದ್ವಾರಕೆಗೆ ಬರಲು ಬಲರಾಮ ವಿಶ್ವಕರ್ಮನನ್ನು ಕರೆಸಿ ಸಭಾಮಂಟಪವನ್ನು ರಚಿಸಿ ಕುಲಪುರೋಹಿತ ಗಾರ್ಗ್ಯಾಚಾರ್ಯನನ್ನು ಕರೆದು ಕೃಷ್ಣನಿಗೆ ಮದುವೆ ಮಹೋತ್ಸವವನ್ನು ನೆರವೇರಿಸಲು ಹೇಳಿದರೆ ಈ ಹದಿನಾರು ಸಾವಿರ ಮದುವೆಯನ್ನು ಮಾಡಿಸುವುದು – ಮುಹೂರ್ತ ಹುಡುಕುವುದು ಹೇಗಪ್ಪಾ ಎಂದು ಹೇಳಿ ಕೊನೆಗೆ ಪರಮಾತ್ಮನ ಮದುವೆಯನ್ನು ಸರಿಯಾಗೇ ಮಾಡಿಸುತ್ತೇನೆಂದು ಸತ್ಯಭಾಮೆ ಸಹಿತ ಎಲ್ಲರ ಮದುವೆ ನೆರವೇರಿಸುತ್ತಾನೆ. ಹೀಗೆ ಹರಿಯು ಸಂತೋಷದಿಂದ ಸರಸಿಜಾಕ್ಷಿಯರೊಡನೆ ಸುಖ ಸಂತೋಷದಿಂದಿರುತ್ತಾನೆ.