ಉತ್ತರದ ಉಜ್ಜಯಿನಿಯ ಕ್ಷತ್ರಪರನ್ನು ಕ್ರಿ ಶ ಸುಮಾರು 3ನೇ ಶತಮಾನದ ಹೊತ್ತಿಗೆ ಶಾತವಾಹನ ದೊರೆ ಗೌತಮೀಪುತ್ರ ಸಾತಕರ್ಣಿಯು ಸೋಲಿಸಿದ್ದರಿಂದ ಕರ್ನಾಟಕದ ಕೆಲವು ಭೂಭಾಗ ಸಾತವಾಹನರಿಗೆ ಸೇರಿತು. ಕ್ರಮೇಣ ಸಾತವಾಹನರ ಅವನತಿಯ ತರುವಾಯ ಕದಂಬರು ಉತ್ತರಾಧಿಕಾರತ್ವವನ್ನು ಹೊಂದಿದರು. ಕರ್ನಾಟಕದ ಇತಿಹಾಸದಲ್ಲಿ ಉತ್ತರದ ರಾಜವಂಶಗಳೊಡನೆ ಸಂಬಂದವಿಟ್ಟುಕೊಂಡವರಲ್ಲಿ ಕದಂಬರೇ ಮೊತ್ತಮೊದಲಿಗರು ಎನ್ನಬಹುದು. ಉತ್ತರ ಭಾರತದ ಸಾಮ್ರಾಜ್ಯವನ್ನು ಗುಪ್ತರು ಆಳುತ್ತಿದ್ದ ಕಾಲದಲ್ಲಿ ದಕ್ಷಿಣದ ಬಾಂಧವ್ಯ ಬೆಳೆದ ಕುರಿತು ಕುಬಟೂರಿನ ಶಾಸನ ಬೆಳಕು ಚೆಲ್ಲುತ್ತದೆ.
ದ್ವೀಪೇ ಜಂಬೂಮತಿಕ್ಷೇತ್ರೇ ಭಾರತೇ ಶ್ರೀಧರಾನ್ವಿತೇ |
ಚಂದ್ರಗುಪ್ತೇನ ಸುಕ್ಷೇತ್ರೇ ಧರ್ಮಗೇಹೇನ ಧೀಮತಾ ||
ರಕ್ಷಿತೋ ದಕ್ಷಿಣಾಪಾತ್ರ ಜನ ಸಂಪದ್ವಿರಾಜಿತಃ || ಎನ್ನುವುದಾಗಿ ಬರುತ್ತದೆ. ಗುಪ್ತ ಎನ್ನುವ ಹೆಸರೇ “ಗುತ್ತ” ಎಂದಾಗಿದ್ದು ಅದುವೇ ಗುತ್ತವೊಳಲಿನ ಗುತ್ತರು ಎಂದಾಗಿರಬಹುದು ಮತ್ತು ಗುಪ್ತವೇ ಗುತ್ತವಾಗಿ ಅದು ಕುಪ್ಪಟವಾಗಿ ಕುಪ್ಪಟೂರು ಕುಬಟೂರು ಎಂದಾಗಿರಬಹುದು ಎನ್ನುವ ಆಶಯ ಅನೇಕ ಹಿರಿಯ ವಿದ್ವಾಂಸರದು. ಅದೇ ರೀತಿಯಾಗಿ ಕ್ರಿ.ಶ.1159ರ ಹಿರೇಮಾಗಡಿಯ ಒಂದು ಶಾಸನವು ಗುಪ್ತರ ಒಂದು ಕವಲು ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿಯನ್ನು ಆಳುತ್ತಿದ್ದುದನ್ನು ವಿವರಿಸಿರುವುದು ಗುಪ್ತರ ದಕ್ಷಿಣದ ನಂಟಿಗೆ ಪುಷ್ಟಿಯನ್ನು ಕೊಡುತ್ತದೆ. ಇವಿಷ್ಟೇ ಅಲ್ಲದೇ ‘ಗುತ್ತವೊಳಲು’ ಮತ್ತು ‘ಚಂದ್ರಗುತ್ತಿ’ ಎರಡೂ ಸಹ ಬನವಾಸಿಗೆ ಅಷ್ಟೇನೂ ದೂರವಿಲ್ಲದ ಕಾರಣ ಬನವಾಸಿ ಕದಂಬರಿಗೂ ಮತ್ತು ಉತ್ತರದ ಗುಪ್ತರಿಗೂ ನಂಟಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಉತ್ತರದ ಗುಪ್ತರ ನಾಡಿನಲ್ಲಿ ನಮ್ಮ ನಾಡಿನ ಕದಂಬರ ಕೀರ್ತಿ ಹರಡಿರಲೂಬಹುದು.

ಕ್ಷೇಮೇಂದ್ರನು ತನ್ನ ಕೃತಿ “ಔಚಿತ್ಯ ವಿಚಾರ ಚರ್ಚಾ” ಎನ್ನುವುದರಲ್ಲಿ ಇನ್ನೊಂದು ಕೃತಿಯ ಪರಿಚಯ ಮಾಡಿಕೊಡುತ್ತಾನೆ. “ಕುಂತಲೇಶ್ವರ ದೌತ್ಯ” ಎನ್ನುವುದು ಆ ಕೃತಿಯ ಹೆಸರು. ಕೃತಿಯನ್ನು ಕಾಳಿದಾಸ ಎನ್ನುವ ಕವಿ ಬರೆದದ್ದು ಎನ್ನುವುದು ತಿಳಿದು ಬರುತ್ತದೆ. ಆ ಕೃತಿ ಇನ್ನೂ ಲಭ್ಯವಾಗಿಲ್ಲ. ಆ ಕೃತಿಯಲ್ಲಿ ಬರುವ ಸನ್ನಿವೇಶ ಬನವಾಸಿ ಕದಂಬರನ್ನು ಕುರಿತಾದದ್ದು. ಕ್ರಿ. ಶ. 400-425ರ ತನಕ ಆಳುತ್ತಿದ್ದ ಕದಂಬ ರಘು(ರಘುಪತಿ ವರ್ಮ) ಅನ್ನುವವನ ಕುರಿತಾಗಿರುವುದು. ಗುಪ್ತರ ಎರಡನೇ ಚಂದ್ರಗುಪ್ತ ಎನ್ನುವವನ ಸಮಕಾಲೀನ ದೊರೆ ಈ ರಘು. ಈ ರಘುವಿನ ಪ್ರಸಿದ್ಧಿಯನ್ನು ತಿಳಿದು ಚಂದ್ರಗುಪ್ತ ತನ್ನ ಆಸ್ಥಾನದ ಕಾಳಿದಾಸನನ್ನು ಇಲ್ಲಿಗೆ ಕಳುಹಿಸಿದ್ದನು. ಆದರೆ ಈ ಕಾಳಿದಾಸ ಎನ್ನುವವನು ರಘುವಿನ ಆಸ್ಥಾನದಲ್ಲಿದ್ದ ವಿದ್ವಾಂಸರನ್ನು ನೋಡಿ ಬೆರಗಾಗಿದ್ದನು. ತನಗೆ ಈ ವಿದ್ವಾಂಸರೊಡನೆ ಕುಳಿತುಕೊಳ್ಳುವ ಅರ್ಹತೆ ಇಲ್ಲ ಎಂದು ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾನೆ. ಆದರೆ ಈ ಕಾಳಿದಾಸ ರಗಹುವಂಶ ಮತ್ತು ಕುಮಾರಸಂಭವದ ಕಾಳಿದಾಸನಲ್ಲ. ಈ ರೀತಿ ಕುಂತಲೇಶ್ವರ ದೌತ್ಯದಲ್ಲಿ ಹೇಳಿಕೊಂಡಿರುವುದರಿಂದ ಕದಂಬರಿಗೆ ಮೊದಲಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಗುಪ್ತರೊಡನೆ ಸಂಬಂಧವಿದ್ದುದು ತಿಳಿದು ಬರುತ್ತದೆ. ಸಾಮಾಜಿಕ, ರಾಜಕೀಯ ಮತ್ತು ಆಂತರಿಕ ಸಂಬಂಧದೊಡನೆ ಕದಂಬ ಕಾಕುಸ್ಥವರ್ಮ ತನ್ನ ಮಗಳನ್ನು ಎರಡನೇ ಚಂದ್ರಗುಪ್ತನ ಮಗ ಕುಮಾರ ಗುಪ್ತನಿಗೆ ಕೊಟ್ಟು ಮದುವೆ ಮಾಡಿದ ಎಂದು ತಿಳಿದು ಬರುತ್ತದೆ.

ಕದಂಬರು ತಮ್ಮ ರಾಜ್ಯ ವಿಸ್ತಾರದತ್ತ ಹೆಚ್ಚು ಗಮನಹರಿಸದೇ ಇದ್ದರೂ ಸಹ ತಮ್ಮ ರಾಜತಾಂತ್ರಿಕ ಮತ್ತು ವೈವಾಹಿಕ ಸಂಬಂಧವನ್ನು ತುಂಬಾ ದೂರಕ್ಕೆ ವಿಸ್ತರಿಸಿರುವುದು ಇತಿಹಾಸದಲ್ಲಿ ಕಂಡು ಬರುತ್ತದೆ. ಕಾಕುಸ್ಥವರ್ಮನ ಎರಡನೆಯ ಮಗಳು ಅಜಿತ ಭಟ್ಟಾರಕೆ ಎನ್ನುವವಳು. ಅವಳನ್ನು ವಾಕಾಟಕ ವಂಶದ ನರೇಂದ್ರಸೇನ ಎನ್ನುವ ರಾಜನಿಗೆ ವಿವಾಹಮಾಡಿಕೊಟ್ಟು ಕರ್ನಾಟಕವನ್ನೂ ಮೀರಿ ಮುಂದೆ ತನ್ನ ಎಲ್ಲೆಯನ್ನು ಸ್ಥಾಪಿಸಿರುವುದು ಕಂಡು ಬರುತ್ತದೆ. ಈ ಕಾಕುಸ್ಥವರ್ಮ ಕದಂಬರ ಮೂಲದೊರೆ ಮಯೂರನ ಮರಿಮಗ. ಈತ ಸೊರಬದಲ್ಲಿರುವ ತಾಳಗುಂದದ ಪ್ರಣವೇಶ್ವರ ದೇವಾಲಯಕ್ಕಾಗಿ ಕೆರೆಯೊಂದನ್ನು ನಿರ್ಮಿಸಿರುವುದು ತಿಳಿದು ಬರುತ್ತದೆ. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶವನ್ನು ಬಹುಪ್ರಾಚೀನ ಕಾಲದಿಂದಲೂ ಅಳುಪ ಎನ್ನುವ ರಾಜವಂಶ ಆಳಿಕೊಂಡು ಬರುತ್ತಿತ್ತು. ಹೊಂಬುಜ ಕ್ಷೇತ್ರವು ಸುಮಾರು ಕ್ರಿ ಶ 7ನೇ ಶತಮಾನದ ತನಕವೂ ಇವರ ವಶದಲ್ಲಿದ್ದುದರಿಂದ ಶಿವಮೊಗ್ಗದ ಪರದೇಶದಲ್ಲೂ ಇವರ ಆಳ್ವಿಕೆ ಕಂಡುಬರುತ್ತದೆ. ಅಳುಪ ದೊರೆ ಪಶುಪತಿ ಎನ್ನುವವನಿಗೆ ಕಾಕುಸ್ಥವರ್ಮ ತನ್ನ ಮೂರನೆಯ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ. ಹೀಗೆ ಕಾಕುಸ್ಥವರ್ಮ ಕದಂಬ ವಂಶದಲ್ಲಿಯೇ ತಾನು ಪ್ರಖ್ಯಾತನಾಗುತ್ತಾನೆ. ಒಂದು ದೃಷ್ಟಿಯಿಂದ ಈತನ ಮುತ್ಸದ್ದಿತನ ಮೆಚ್ಚಲೇಬೇಕು. ದೊಡ್ಡ ದೊಡ್ಡ ಮನೆತನಗಳ ಸಂಬಂಧ ಬೆಳೆಸಿ ಇಡೀ ಕದಂಬ ವಂಶದ ರಕ್ಷಕನಾಗಿ ಗೋಚರಿಸುತ್ತಾನೆ. ಇನ್ನು ಕದಂಬರ ಕಾಲದ ಲಿಪಿ ಮತ್ತು ಭಾಷಾ ವೈವಿಧ್ಯತೆ ಮತ್ತು ಶಾಸನಗಳಗಳ ಕಡೆ ಗಮನ ಹರಿಸುವುದಾದರೆ, ಕದಂಬರು ದೇವಸ್ವ ಮತ್ತು ಬ್ರಹ್ಮಸ್ವ ಎರಡನ್ನೂ ಆಚರಿಸಿಕೊಂಡು ಬಂದವರು. ಕೆರೆಗಳ ನಿರ್ಮಾಣವೂ ಸಹ ಇವರ ಕಾಲದಲ್ಲಿ ಆಗಿರುವುದು ಅಲ್ಲಲ್ಲಿ ಕಂಡು ಬರುತ್ತದೆ.

ಕದಂಬರು ಅಲ್ಲಲ್ಲಿ ಶಿಲೆ ಮತ್ತು ತಾಮ್ರಪಟಗಳ ಶಾಸನಗಳನ್ನು ಬರೆಸಿದ್ದರೂ ಸಹ ಇವರದ್ದೇ ಆದ ಶೈಲಿ ನಿರ್ಮಾಣ ಮಾಡಿಕೊಂಡದ್ದು ಕಾಣಸಿಗದು. ಸಾಮಾನ್ಯವಾಗಿ ವಾಸ್ತುಶೈಲಿಯನ್ನು ಹೊಂದಿರುವ ದೇವಾಲಯಗಳು ಸಧ್ಯಕ್ಕೆ ಕಾಣಿಸುತ್ತಿಲ್ಲ. ಆದರೆ ಆದರೆ ಮಳವಳ್ಳಿ, ತಾಳಗುಂದ, ಬನವಾಸಿ, ಚಂದ್ರವಳ್ಳಿ, ಹಲಸಿ, ಅರ್ವಾಳಂನಲ್ಲಿ ಭಗ್ನಾವಶೇಷಗೊಂಡಿರುವ ಮತ್ತು ತನ್ನ ಸಹಜಸ್ವರೂಪವನ್ನು ಗುರುತಿಸಲು ಸಾಧ್ಯವಾಗದಷ್ಟು ಬದಲಾಯಿಸಿಕೊಂಡು ನವೀಕರಣಕ್ಕೊಳಗಾಗಿವೆ. ಇವುಗಳಲ್ಲಿ ಗೋವಾದ ಅರ್ವಾಳಂ ಮಾತ್ರ ತನ್ನ ಮೂಲಸ್ವರೂಪವನ್ನು ಬಹುಮಟ್ಟಿಗೆ ಉಳಿಸಿಕೊಂಡಿರುವ ಗುಹಾಲಯ. ಕದಂಬರ ಶಾಸನಗಳನ್ನು ಬರೆದ ಲಿಪಿಕಾರರ ಹೆಸರು ಗೊತ್ತಿದ್ದರೂ ಸಹ ದೇವಾಲಯಗಳನ್ನು ಕಟ್ಟಿದ ಒಬ್ಬನೇ ಒಬ್ಬ ಶಿಲ್ಪಿಯ ಹೆಸರೂ ಸಿಗುತ್ತಿಲ್ಲ. ಕದಂಬರ ಕಾಲವು ಲಿಪಿಕಾರರದ್ದಾಗಿತ್ತೇ ವಿನಃ ವಾಸ್ತು ವಿನ್ಯಾಸಕಾರರದ್ದಂತೂ ಅಲ್ಲ.

ಭಾಷಾ ದೃಷ್ಟಿಯಿಂದ ಕದಂಬರನ್ನು ನೋಡುವುದಾದರೆ ಸಂಸ್ಕೃತ ಪ್ರೇಮಿಗಳಾಗಿದ್ದರು. ಕದಂಬರು ಬರೆಸಿರುವ ಬಹುತೇಕ ತಾಮ್ರಪಟ ಶಾಸನಗಳು ಸಂಸ್ಕೃತದಲ್ಲಿಯೇ ಇವೆ. ಕೆಳಗುಂದಿಯವೀರಗಲ್ಲು, ತಮಟಕಲ್ಲು, ಮತ್ತು ಪುರ್ದುಕಾನ್ ದಾನಶಾಸನಗಳು ಮಾತ್ರ ಸಂಪೂರ್ಣ ಕನ್ನಡ ಶಾಸನಗಳು. ಕದಂಬರ ಕಾಲದಲ್ಲಿ ಶಿಲಾಶಾಸನಗಳ ಯುಗ ಕ್ರಮೇಣ ಕೊನೆಗೊಂಡು ತಾಮ್ರಪಟಗಳು ಹೆಚ್ಚಳಗೊಂಡದ್ದು. ಬರಹದ ಮಾಧ್ಯಮ ಬದಲಾಗುತ್ತಾ ಬಂದು ಶಿಲೆಯಿಂದ ತಾಮ್ರಕ್ಕೆ ಬದಲಾಗಿದ್ದು ಮಹತ್ವವೆನಿಸಲಿಲ್ಲ, ವಿಬಹಿನ್ನ ಧಾರ್ಮಿಕ ಸಂಸ್ಕೃತಿಯನ್ನೂ ಆರ್ಥಿಕ ವ್ಯವಸ್ಥೆಯನ್ನೂ ತಂದುದಕ್ಕೆ ಈ ಪಟ್ಟ ಸಿಕ್ಕಿತು. ಹಿರೇಹಡಗಲಿಯ ಶಿವಸ್ಕಂಧವರ್ಮನ ಶಾಸನವು ಕರ್ನಾಟಕದಲ್ಲಿ ಬರೆಸಿದ ಮೊದಲ ತಾಮ್ರಪಟವಾಗಿತ್ತು. ಪ್ರಾಕೃತ ಭಾಷೆಯಲ್ಲಿ ಬರೆದ ಈ ತಾಮ್ರಪಟದಲ್ಲಿ ಅಗ್ನಿಶರ್ಮ ಪ್ರಮುಖನಲ್ಲದೇ ಇಪ್ಪತ್ತು ಬ್ರಾಹ್ಮಣರಿಗೆ ವ್ರಿತ್ತಿಗಳನ್ನು ಹಂಚಿದ ವಿವರವಿದೆ. ಇಲ್ಲಿಂದ ಪ್ರಾರಂಭವಾಗುವ ತಾಮ್ರಪಟಗಳು ಭಾಷೆ ಮತ್ತು ಲಿಪಿ ಮಾಧ್ಯಮದಲ್ಲಿ ಹೊಸ ಅಲೆಯನ್ನೆಬ್ಬಿಸಿದವು.

ಶಿಲಾಶಾಸನಗಳಂತೆ ತಾಮ್ರಪಟಗಳು ಬಹಿರಂಗವಾಗಿ ಕಾಣಿಸಿಕೊಳ್ಳದೇ ವಯಕ್ತಿಕ ಮಟ್ಟಕ್ಕೆ ಸೇರಿದ ಕಾರಣ, ಸಂಬಂಧಪಟ್ಟ ಫಲಾನುಭವಿ ಮತ್ತು ಅವನ ಸಮುದಾಯ ಬಿಟ್ಟು, ಬೇರೆಯವರಿಗೆ ಕಾಣಸಿಗುವುದು ತೀರಾ ಅಪರೂಪವಾಗಿತ್ತು. ಶಿಲಾಶಾಸನಗಳು ಧಾರ್ಮಿಕ ಸಂಸ್ಥೆಗಳು ಪಡೆದುಕೊಂಡ ದತ್ತಿ ದಾಖಲೆಗಳಾಗಿರುವುದರಿಂದ ಇವುಗಳಲ್ಲಿ ವ್ಯಕ್ತಿಗಳಿಗೆ ವಿಶೇಷ ಲಾಭವಿರಲಿಲ್ಲ. ಕೆಲವು ಧಾರ್ಮಿಕ ವ್ಯವಹಾರಗಳಲ್ಲಿ ವ್ಯಕ್ತಿಗಳ ಹೆಸರು ಬಂದರೂ ಅವರನ್ನಿಲ್ಲಿ ಗುರುತಿಸಿರುವುದು ಧರ್ಮಸಂಸ್ಥೆಯ ಪ್ರತಿನಿಧಿಗಳನ್ನಾಗಿ ಮಾತ್ರ.

ಕದಂಬರ ಕಾಲದ ಸಂಸ್ಕೃತವು ವ್ಯವಹಾರ ಭಾಷೆಯಾಗಿ ಮಾತ್ರ ಉಳಿಯದೆ ಸಾಹಿತ್ಯದ ಉನ್ನತ ಸ್ಥಾನವನ್ನು ಸಂಪಾದಿಸಿಕೊಂಡ ಕಾವ್ಯ ಮಾಧ್ಯಮವಾಯಿತು. ಇದು ನಮಗೆ ಮೊತ್ತ ಮೊದಲು ಸಿಗುವುದು ಶಿವಮೊಗ್ಗ ಜಿಲ್ಲೆಯ ತಾಳಗುಂದ ಸ್ತಂಭಶಾಸನದಲ್ಲಿ. ಸುಮಾರು ಐದನೇ ಶತಮಾನದ ಕವಿ ಕುಬ್ಜ ಇದರ ಕರ್ತೃ. ‘ಕುಬ್ಜಸ್ಸ್ವ ಕಾವ್ಯಮಿದಮಶ್ಮತಲೇ ಲಿಲೇಖ’ ಎಂದು ಅವನೇ ಈ ಶಾಸನದಲ್ಲಿ ಹೇಳಿಕೊಂಡಿರುವನು. ಕದಂಬರ ಅತಿ ದೀರ್ಘ ದಾಖಲೆಯಾದ ಇದು ಒಟ್ಟು 34 ಸಂಸ್ಕೃತ ಪದ್ಯಗಳನ್ನೊಳಗೊಂಡಿದೆ. ಸುಂದರ ಅಕ್ಷರಗಳಲ್ಲಿ ಸಮಸಾಲುಗಳಲ್ಲಿ ಕಂಡರಿಸಿರುವ ಈ ಕಂಭಶಾಸನದಲ್ಲಿ ಅಕ್ಷರದೋಷಗಳು ಕಾಣಸಿಗುವುದೇ ಇಲ್ಲ. ಅಲ್ಲದೆ ಸಮಕಾಲೀನ ಜಗತ್ತಿನ ಭಾಷಾ ಲೋಕದ ನಿಘಂಟಿಗೂ ಗೊತ್ತಿರದ ಕೆಲವು ಅಪರೂಪ ಪದಗಳು ಈ ಪ್ರೌಢ ಕಾವ್ಯದಲ್ಲಿ ಬಂದಿವೆ.

ಕುಬ್ಜನು ಇದರಲ್ಲಿ ಒಂಬತ್ತು ಜಾತಿ ಛಂದಸ್ಸುಗಳನ್ನು ಬಳಸಿರುವುದು ಕಂಡು ಬರುತ್ತದೆ. ಇವುಗಳಲ್ಲಿ ಪುಷ್ಟಿತಾಗ್ರಾ, ಇಂದ್ರವಜ್ರ, ವಸಂತತಿಲಕ, ಮಂದಾಕ್ರಾಂತಾ, ಶಾರ್ದೂಲವಿಕ್ರೀಡಿತ ಮತ್ತು ದಂಡಕ ಶಾಖೆಯ ‘ಪ್ರಚಿತ’ವೆಂಬವು ಈ ಕಾಲಕ್ಕಾಗಲೇ ಪರಿಚಿತವಾಗಿದ್ದವು. ಆದರೆ ಸುಮಾರು 24 ಪದ್ಯಗಳನ್ನು ಸಂಯೋಜಿಸಲು ಬಳಸಿರುವ ‘ಮಾತ್ರಾಸಮಕ’ ಕುಟುಂಬದ ‘ಮಿಶ್ರಗೀತಿಕಾ’ ಛಂದಸ್ಸು ಹೊಸದೆಂಬುದು ವಿದ್ವದ್ವಲಯದ ಅಭಿಮತ. ಸರಳ ಗದ್ಯದಂತೆ ಓದಿಸಿಕೊಳ್ಳುವ, ಹದಿನೈದು ಮಾತ್ರಾಪಾದದ ನಾಲ್ಕು ಸಾಲುಗಳ ಈ ಕಾವ್ಯಪ್ರಭೇದವನ್ನು ಕೆಲವು ಪಂಡಿತರು ಗದ್ಯವೆಂದೇ ಭ್ರಮಿಸಿದ್ದುಂಟು. ಅಪರೂಪವಾಗಿ ಇದನ್ನು ಗುಪ್ತರು ತಮ್ಮ ತುಸಾನ್ ಶಿಲಾಶಾಸನದಲ್ಲಿ, ವಾಕಾಟಕರು ಅಜಂತಾ ಗುಹಾಶಾಸನದಲ್ಲಿ ಬಳಸಿರುವುದು ತಿಳಿಯುತ್ತದೆ. ಇವಲ್ಲದೆ ಬೊವೆರ್ ಹಸ್ತಪ್ರತಿಯ ಕೆಲವು ಪದ್ಯಗಳು ಇದೇ ಜಾತಿಯವೆಂಬುದನ್ನೂ ಗುರುತಿಸಲಾಗಿದೆ. ಐದು-ಏಳನೇ ಶತಮಾನದಲ್ಲಿ ಎಲ್ಲೋ ಬಳಕೆಯಲ್ಲಿದ್ದ ಈ ಛಂದಸ್ಸನ್ನು ಕುಬ್ಜನು ಕರ್ನಾಟಕಕ್ಕೆ ಪರಿಚಯಿಸಿದ್ದೊಂದು ವಿಶೇಷ.

ಕವಿಕುಬ್ಜನ ಬಗ್ಗೆ ಹೆಚ್ಚು ವಿವರಗಳಿಲ್ಲ. ಬಹುಶಃ ಕಾಲಿದಾಸನ ನಂತರದ ಕಾಲದವನಾಗಿರಬಹುದಾದ ಈತನು ಹರ್ಷನ ಬಾಣ ಮತ್ತು ಪುಲಿಕೇಶಿ, ರವಿಕೀರ್ತಿಗಿಂತ ಒಂದು ಶತಮಾನ ಪೂರ್ವದಲ್ಲಿದ್ದನೆನಿಸುವುದು. ಸೃಜನಾತ್ಮಕ ಕವಿ ಕುಬ್ಜನು ಆ ಕಾಲದ ಸಂಸ್ಕೃತ ಕವಿಗಳಲ್ಲಿ ಅಗ್ರಗಣ್ಯನಂತೂ ಹೌದು. ಕುಬ್ಜನ ನಂತರದಲ್ಲಿ ಕದಂಬಶಾಸನ ಕವಿಗಳು ಯಾರೂ ಸಹ ಅವನಷ್ಟು ವಿಧದ ಛಂದಸ್ಸುಗಳನ್ನು ಬಳಸಿ ಶಾಸನಗಳನ್ನು ರಚಿಸಲಿಲ್ಲ. ಅಲ್ಲದೆ ಇವನಷ್ಟು ಸುದೀರ್ಘ ಶಾಸನಕಾವ್ಯವನ್ನೂ ಕಟ್ಟಲಿಲ್ಲ. ಸುಮಾರು ಇಪ್ಪತ್ತೇಳು ಶಾಸನ ಕವಿಗಳು ಅನುಷ್ಟುಪ್ ಛಂದಸ್ಸೊಂದನ್ನೇ ಬಳಸಿದರು. ಇನ್ನಾರು ಕವಿಗಳು ಆರ್ಯ, ಸ್ರಗ್ಧರಾ, ಉಪಜಾತಿ, ಮುಂತಾದವನ್ನು ಅನುಷ್ಟುಪ್ ಜೊತೆ ಸೇರಿಸಿ ಒಮ್ಮೊಮ್ಮೆ ಬರೆದರು. ಇದೇನೇ ಇರಲಿ ರವಿವರ್ಮನ ಕಾಲದ ದಾವಣಗೆರೆ, ಹಲಸಿ, ಗುಡ್ನಾಪುರ ಶಾಸನಗಳು ಪ್ರೌಢಕಾವ್ಯಗುಣವನ್ನು ಹೊಂದಿರುವುದನ್ನು ಒಪ್ಪಲೇಬೇಕು. ಹೀಗೇ ಕದಂಬರು ನಮ್ಮ ನಾಡಿಗೆ ರಾಜಕೀಯ ಭದ್ರ ಬುನಾದಿಯೊಂದಿಗೆ ಸಾಂಸ್ಕೃತಿಕ ಸಾಹಿತ್ಯಿಕ, ಭಾಷಾ ಕ್ಷೇತ್ರದ ರೂವಾರಿಗಳಾದರು.

ಈ ಸಂದರ್ಭದಲ್ಲಿ ಗೋವಾದ ಅರ್ವಾಳಂ ಶಿವಾಲಯ ಶಾಸನವು ನನ್ನ ನೆನಪಿಗೆ ಬರುವುದು. ಇಂದಿಗೆ ಸುಮಾರು ಮೂವತ್ತೈದು ವರ್ಷಗಳ ಹಿಂದೆ ಅದನ್ನು ಮೊದಲು ಕಾಣುವ ಮತ್ತು ಕಾಣಿಸುವ ಅವಕಾಶ ನನಗೊದಗಿತ್ತು. ಇದು ಮುಖ್ಯವಲ್ಲ. ಮುಖ್ಯವಾದದ್ದು ಈ ಏಳುಸಾಲುಗಳ ಶಾಸನದಲ್ಲಡಗಿರುವ ಸುಶ್ರಾವ್ಯ ಕಾವ್ಯದ ಸೊಗಸು. ಲಿಂಗದ ಬುಡಭಾಗದಲ್ಲಿ ಕಂಡರಿಸಿರುವ ಈ ಶಾಸನವನ್ನು ಪ್ರಯಾಸಪಟ್ಟು ಮೇಲಕ್ಕೆತ್ತಿ, ಗುಹಾಲಯದ ಸಂಜೆಗತ್ತಲ ಪ್ರಶಾಂತ ಪರಿಸರದಲ್ಲಿ ಮೊದಲು ಓದಿದಾಗ, ಕಾವ್ಯದಲ್ಲಿ ವರ್ಣಿಸಿದ ಕಾನನದ ಸೊಬಗು ಗುಹಾಲಯವನ್ನು ಸುತ್ತುವರಿದ ನಿಸರ್ಗದೊಡನೆ ಸಂಗಮಗೊಂಡು ನನ್ನನ್ನು ಮಂತ್ರಮುಗ್ಧನನ್ನಾಗಿಸಿತ್ತು. ಇಲ್ಲಿರುವ ‘ರಮ್ಯೋಪವನ ಕಾನನಾಃ’, ‘ಭಗಮನೀಶಸ್ಸದಾಸನ್ನಿಹಿತೋಹರಃ’, ‘ವೀರಾಸನಾದಿಭಿಃ ಸಾಗತಾ ಚೇಷ್ಟ ಯಾಪಾಗತಸ್ತೀಹ’, ‘ಮಹಾಲಯೇ’, ಎಂಬ ಕಾವ್ಯ ತುಣುಕುಗಳು ನನ್ನಲ್ಲಿ ಕಿನ್ನರಿಬಾರಿಸಿದ್ದವು. ಹೆಚ್ಚು ಛಂದಾಃಲಂಕಾರಗಳನ್ನು ಬಳಸದೆ ರೂಪಿಸಿರುವ ಈ ಸುಂದರ ಕಾವ್ಯವನ್ನು ಕಂಡರಿಸಿದ ಕದಂಬ ಕವಿ ಅಜ್ಞಾತನಾಗಿರುವುದೊಂದು ಆತಂಕದ ವಿಷಯ.

-ಸದ್ಯೋಜಾತ ಭಟ್