ನಮ್ಮ ಪುಣ್ಯವವಳ ಪಾಪ:
ಯಾವ ಕಟ್ಟ ಗಳಿಗೆ ಶಾಪ
ತಟ್ಟಿತೊ ಅಪ್ಸರಿಗೆ, ಪಾಪ?
ಹುಟ್ಟಿತಿಲ್ಲಿ ಇಂದ್ರಗೋಪ:
ಕನತ್‌ಕನಕ ಕೀಟರೂಪ!

ಮುಂಗಾರಿನ ಮೊದಲ ಮಳೆ
ಹುಯ್ದು ನಲಿಯೆ ಮಿಂದ ಇಳೆ,
ಹೊಲದ ಬೇಲಿಸಲಿನಲ್ಲಿ
ಹಸುರ ಮಣೆಯೆ ಉಗನಿಬಳ್ಳಿ,
ಬಂಗಾರವೆ ಹುಳುಗಳಾಯ್ತು!
ಮಕ್ಕಳ ಮನ ಸೂರೆಹೋಯ್ತು!

ಪ್ರಾಣಶಕ್ತಿ ತಾನೆ ವರಿಸಿ
ಜೀವಶುಕ್ತಿಯಲ್ಲಿ ಚರಿಸಿ
ಹತ್ತಿತೊ ಎನೆ ಇಂದ್ರಚಾಪ
ಪಂಕ್ತಿ ಪಂಕ್ತಿ ಕಾಂತಿ ಕಾಂತಿ
ರಂಜಿಸುತಿವೆ ಇಂದ್ರಗೋಪ:
ಕೆಂಪು ಹಳದಿ ಪಚ್ಚೆ ನೀಲಿ
ಬಣ್ಣಸಗ್ಗವಾಯ್ತು ಬೇಲಿ!

ಗೋಮೇದಿಕ ಪುಷ್ಯರಾಗ
ಮಕ್ಕಳೆದೆಯೊಳಗ್ನಿಮೇಘ!
ಬೆಂಕಿಮೋಡಗಳನು ತಾಳಿ
ಬಣ್ಣದೋಡಗಳನು ಹೋಲಿ
ಮಕ್ಕಳುಸಿರು ತೇಲಿ ತೇಲಿ
ರಸವಿಮಾನದಂತೆ ಏರಿ
ನಕ್ಷತ್ರಗಳನೂ ಮೀರಿ
ಸಹಸ್ರಾಕ್ಷನೂರ ಸೇರಿ
ಮೂದಲಿಸಲು ಇಂದ್ರನು
ಹಾಳು ಬಿತ್ತೊ ನಂದನ!

ಹಾಳು ಬಿತ್ತೆ ನಂದನ?
ಕೇಳು ಕಂದನ:
“ಅದೇ. ಅಲ್ಲಿ ಬಂದದೆ
ಇಂದ್ರಗೋಪರಂದದೆ!”

೨೧. ೦೪. ೧೯೪೯