ಸುರ ಸೌಂದರ್ಯವೆ ತಿರೆಗಿಳಿತಂದಿದೆ;
ಇದು ಬರಿ ಹೂವಲ್ಲ!
ಹಿಂಗಿದೆ ಮರ್ತ್ಯದ ಜೀವನ ದೈನ್ಯ;
ಜಡವನು ಗೆದ್ದಿದೆ ಚಿರ ಚೈತನ್ಯ.
ಕಣ್ಣಿರೆ, ಮನವಿರೆ, ಹಾಡುವ ಕವಿಯಿರೆ,
ಬಾಳಿಗೆ ಸೋಲಿಲ್ಲ.


ಅದೊ ಆ ಕಣಿವೆಯ ಕಾಡಿಗೆ ತೆಳ್ಳನೆ
ತೆರೆ, — ತುಂತುರು ಸೋನೆ.
ಬಾನನು ತಬ್ಬಿದೆ ಮೋಡದ ಮಬ್ಬು;
ಬರೆದಂತಿದೆ ಓ ಆ ಹೊಲದಬ್ಬು.
ಇನ್ನೇನಿಣುಕಿದ ಬೇಸರಗೂಬೆ
ತನ್ನಷ್ಟಕೆ ತಾನೆ
ತಲೆ ಸೆಡೆತಡಗಿದೆ ಗವಿಯೊಳಗೋಡಿ:
ಈ ಹೂವನು ನೋಡಿ!
ಇನಿಯಳ ಕಾಣುವ ಇನಿಯನ ಹೋಲಿ,
ಮೈಸೋಂಕುವ ರಸದಿಂಪೊಳು ತೇಲಿ,
ಹೂ ಮೆಯ್ಯೊಳಿ ನಟ್ಟಿರೆ ಕಣ್ಣಾಲಿ
ಕವಿ ನಲಿದನು ಹಾಡಿ.


ಅದೊ ಇದೊ ಯಾವುದೊ? ಸಾಲದೆ ಪ್ರತಿಮೆ
ದೇವರ ಭಕ್ತನಿಗೆ?
ಋಷಿದರ್ಶನಕೀ ಹೂ ವಿಶ್ವಕೆ ಪಡಿ;
ಸಕಲಾರಧನೆ ಸಾಧನೆಗೆದೆ ಗುಡಿ:
ಪುಡಿ ದೇವಾಲಯ ಗೋಪುರಕಿಮ್ಮಡಿ
ಜೀವನ್ಮುಕ್ತನಿಗೆ!
ಪ್ರತಿಭಾಯುಕ್ತನಿಗೆ!

೧೩.೬.೧೯೩೮