ಎಲ್ಲ ಚೆಲುವಾಗಿಹುದು,
ಎಲ್ಲ ಗೆಲುವಾಗಿಹುದು;
ಮಲೆನಾಡು ಕಗ್ಗಾಡು
ಸೊಬಗು ಬೀಡಾಗಿಹುದು.
ಹಿಂದಿನಂತಿಹುದೆಲ್ಲ;
ಇರುವುದೆಲ್ಲ!
ಏನಿದ್ದರೇನಂತೆ?
ತಿಮ್ಮು ಇಲ್ಲ!

ಅಂದಿನಂತೆಯೆ ಇಂದು
ಕಾಮಳ್ಳಿ ಕೂಗುತಿದೆ;
ಅಂದಿನಂತೆಯೆ ಇಂದು
ಕಾಜಾಣ ಹಾಡುತಿದೆ.
ಎಂದಿನಂತಿಹುದೆಲ್ಲ
ಇರುವುದೆಲ್ಲ!
ಏನಿದ್ದರೇನಂತೆ?
ತಿಮ್ಮು ಇಲ್ಲ!

ಹಸುರು ಬನಗಳ ಮೇಲೆ
ಹೊಂಬಿಸಿಲು ಮಲಗುತಿದೆ;
ಹಸುರು ಹುಲ್ಲಿನ ಮೇಲೆ
ಇಬ್ಬನಿಯು ಮಿರುಗುತಿದೆ,
ಅಂದಿನಂತಿಹುದೆಲ್ಲ,
ತೋರ್ಪುದೆಲ್ಲ!
ಏನಿದ್ದರೇನಂತೆ?
ತಿಮ್ಮು ಇಲ್ಲ!

ಎಲ್ಲಿ ನೋಡಿದರಲ್ಲಿ
ಅಂದೆ ಇಂದಾಗಿಹುದು;
ಕಾಂಬ ಕಾಣಿಕೆಗೆಲ್ಲ.
ಕಂಡೊಂದು ಕಣ್ಣಿಲ್ಲ.
ಹಿಂದಿನಂತಿಹುದೆಲ್ಲ,
ಇರುವುದೆಲ್ಲ!
ಏನಿದ್ದರೇನಂತೆ?
ತಿಮ್ಮು ಇಲ್ಲ!

೧೭.೫.೧೯೩೦