ಬ್ರಹ್ಮದ ಮನೆ
ಕವಿಕಲ್ಪನೆ:
ನವಸೃಷ್ಟಿಯ ತವರೂರು!
ಮೇರೆಯನದಕಿತಿಮಿತಿಯನು ಕಲ್ಪಿಸಬಲ್ಲವರಾರು?

ಕಾಲದ ಶಿಶು
ತೊದಲಾಡಿತು
ಮೊದಲಲ್ಲಿ,
ಆಕಾಶದ
ಕಂಕಾಲದ
ಅಂಕದಲಿ!

ಹೋರಿತು ರೂಪವ ಕೋರಿ ಅರೂಪಂ
ಪ್ರತಿಭಾಲಿಂಗನ ಬಂಧದಲಿ,
ಕೃತಿರತಿಯಾನಂದದಲಿ!
ಪೀಡಿಸೆ ತಪದೇಕಾಂತದ ತಾಪಂ
ಮೂಡಿತು ಕ್ರೀಡಾರಸರುಚಿಯಿಂದೀ ಸೃಷ್ಟಿ,
ಮೇಣನುಭವಿಸುವ ಪ್ರಜ್ಞಾಪೂರ್ವಕ ದೃಷ್ಟಿ!

ಶಿಖಿಗರ್ಭಿಣಿ
ನೀಹಾರಿಕೆ
ತಾರಾಳಿಯ ಹೆರುವಂತೆ
ಭಾವಾವೇಶದಿ
ಪೊರಪೊಣ್ಮುತಿದೆ
ನಾಮು ರೂಪ ರಸ ಸೌಂದರ್ಯದ ಸಂತೆ!
ಜಾಡ್ಯದ ಕಪ್ಪೆ
(ಬದುಕಿನ ಸಪ್ಪೆ)
ಪ್ರಾಣದ ಫಣಿಯಣಲಲಿ ಗೋಳಾಡುತಿದೆ!
ಸೌಂದರ್ಯದ
ಆನಂದದ
ಹೊಂದಾವರೆ
ಮಂದ ಜೀವನದ ಪಂಕದ ಮೇಗಡೆ ತೇಲಾಡುತಿದೆ!

ಗಂಗೆ ಧುಮುಕುತಿದೆ
ಹಿಮಗಿರಿ ಮೇಲಿಂ!
ಮಿಂಚು ಬೀಸುತಿದೆ
ಮೋಡದ ಸಾಲಿಂ
ಸಾವಿರ ಸಾವಿರ ತೆರೆಹೆಡೆಗಳನೆತ್ತಿ
ತೀರದ ಸೈಕತರಾಶಿಯನೊತ್ತಿ
ಭೋರಿಡುತಿರುವನು ಸಾಗರಶೇಷಂ,
ಉಕ್ಕುತಲಿರೆ ಚಿರ ಆವೇಶಂ!
ಕಾರುತಿದೆ ಜ್ವಾಲಾಮುಖಿ;
ಹರಿಯುತ್ತಿದೆ ಪ್ರಲಯಾಗ್ನಿ!
ಕುದಿಯುತ್ತಿಹರಜಹರಿಶಿವರೆಲ್ಲ:
ದಾಕ್ಷಿಣ್ಯ,
ಪಾಪ ಪುಣ್ಯ,
ಏನಿಲ್ಲ!

೨.೩.೧೯೩೮