ಇದು ಚಿತ್ರಕೃತಿಯಲ್ತೆನಗೆ: ಪ್ರಕೃತಿಗೆ ಗವಾಕ್ಷಮಂ
ಕೊರೆದಿಹುದು ವರ್ಣಶಿಲ್ಪಿಯ ಕುಂಚ! ‘ಉದಯರವಿ’
ತನ್ನ ಗೋಡೆಯೊಳೆ ತೆರೆದಿದೆ ಕಣ್ಣ ‘ಕುಪ್ಪಳಿಗೆ’:
ಬಯಲು ಸೀಮೆಗೆ ಅತಿಧಿ ಬಂದಿದೆ ಮಲೆಯನಾಡು!

* * * *

ಪ್ರತ್ಯಕ್ಷ ಕಂಗೊಳಿಸೆ ಕವಿಶೈಲದಂತರಿಕ್ಷಂ,
ಕಣ್ದೆರೆದ ಮಣ್ಣಿನೊಳೆ ಕಣಸೊಂದು ಮೂಡಿದೋಲ್,
ಕಂಡರಣೆಗೊಂಡು ಮೋಹಿಸಿಹುದೀ ಭವ್ಯದೃಶ್ಯಂ:
ದಿಗುತಟಕೆ ಮಲೆತೆದ್ದ ದಿಕ್ಕರಿಯೆನಲ್ ಕುಂದಾದ್ರಿ!

* * * *

ಸುರುಳಿ ಸುತ್ತುತೆ ಗಿರಿಕೆಹೊಡೆದಿರುವ ಆದಿಶೇಷಂ
ನಡುವೆ ನಸು ಹೆಡೆಯೆತ್ತಿ ನಿದ್ರಿಪೋಲ್, ಕುಂದಗಿರಿ
ತನ್ನ ಸುತ್ತಣ ಮಲೆಯರಣ್ಯಶ್ರೇಣಿಗಳ ಮಧ್ಯೆ
ಧೀರಮಿದೆ, ವಿಪಿನಯೋಗದಲಿ ಅದ್ರಿತಪಸ್ವಿ!

* * * *

ಕಡಲ ಕಡೆಹಕೆ ಮುನ್ನ ಮಂದರವ ಸುತ್ತಿಬಿಗಿದಾ
ವಾಸುಕಿಯ ಪೊರೆಪೊರೆಯ ತೆರೆತೆರೆಯ ನಿಡುಮೆಯ್ಯವೋಲ್
ಮೆರೆಯುತಿಹುದೀ ವಕ್ರವಂಕಿಮ ವಿವಿಧ ಭಂಗಿಯೊಳ್
ಅಟವಿ ಅದ್ರಿಯ ವರ್ಣವೀಚೀ ಮಹಾರ್ಣವಂ!

* * * *

ಅನ್ನಮಯದಾಚೆಯಲಿ ಪ್ರಾಣಮಯದೀಚೆಯಲಿ
ನನಗಿರುವುದೊಂದಲ್ತೆ ಅರಣ್ಯಮಯ ಕೋಶ?

* * * *

ಸ್ಥೂಲದೇಹವನಿಲ್ಲಿ ಕಳಚಿಟ್ಟು, ಸೂಕ್ಷ್ಮತನು
ತಾನಾಗಿ, ಕಲ್ಪನೆಯ ಹಾರುತಟ್ಟೆಯನೇರಿದೋಲ್
ಕಾಲ ದೇಶವನುತ್ತರಿಸಿ, ಸಹ್ಯಗಿರಿಕಂದರದ
ಸಂಗಾತಿಯಾಗಿ ನಮ್ನೋನ್ನತಂಗಳನಲೆದು
ಧ್ಯಾನ ಸಂಮಗ್ನನಾದೆನ್ ರಸದ ಯಾತ್ರೆಯಲಿ,
ಹೂಹೂವ ಎಲೆಎಲೆಯ ಅಲೆಅಲೆಯ ಈಸೀಸಿ,
ಬಿದಿರ್ಮಳೆಯ ಕಣೆಚವರಿಯುಯ್ಯಾಲೆಯಂ ಬೀಸಿ!

* * * *

ಮನೆಯೊಳಿರ್ದ್ದುಮಾನ್ ಭೂವ್ಯೋಮ ಸಂಚಾರಿ:
ಗೃಹಸ್ಥನಾಗಿಯುಮಾದೆನಯ್ ಮಹದ್ — ಬ್ರಹ್ಮ — ಚಾರಿ!

೧೦. ೦೨. ೧೯೬೦