ತಾರೆಗಳ ಹೆಸರಿಲ್ಲ; ನೋಡಿದರೆ ಬಾನಿಲ್ಲ;
ತಡವುತಿದೆ ಜಗವೆಲ್ಲ ಕುರುಡನಂತೆ.
ಕಗ್ಗತ್ತಲಲಿ ಮುಳುಗಿ ತಿರೆ ಕರಗಿ ಅಳಿದಿಹುದು;
ಪರಚುತಿದೆ ಕರೆಕರೆಯ ಮಳೆಯ ದನಿಯು!
ಜೋತೆಗೆ ಕೀರ್ರೆಂಬ ಬೀರೆಯ ಹುಳುಗಳುಲಿ ಸೇರಿ
ರೇಜಿಗೆಯ ಮಾಡುತಿದೆ ಚಿಟ್ಟುಹಿಡಿಸಿ!
ಸಾವಿನರಿಯಮಿಕೆಗದು ಮೂರುಮಡಿ ನಾಲ್ಕುಮಡಿ
ಐದಾರು ನೂರುಮಡಿ ಕಾರಿನಿರುಳು;
ಬಾಳಿನಗಲದ ಮೀರಿ, ಸಾವಿನಾಳವ ದಾಂಟಿ,
ಸಾಂದ್ರದಲಿ ಮಾಯೆಯನೆ ಮುಂಚಿರುವುದು!
ರುಜೆಯ ಬಿಸುಸಜ್ಜೆಯಲಿ ಬಿದ್ದ ಸದ್ದಿಲಿ ನನಗೆ
ನಾನೆಂಬ ಹೆಮ್ಮೆಯೊಂದುಳಿದಿರುವುದು!

೧೧.೫.೧೯೩೦