ನೋಡದೊ ಬಾನಿನ ಗೋಪುರದಲ್ಲಿ
ಮುಡಿಗೆದರಿಹ ರಾಣಿ ಇದಾರು?
ಮೇಘ ದುಕೂಲವನೆಲ್ಲೆಡೆ ಚೆಲ್ಲಿ
ಸುಂದರ ಭಯಕರ ನರ್ತನದಲ್ಲಿ
ಮೈಮರೆತಿಹ ದೇವಿ ಇದಾರು?

ರಾಣಿಗೆ ಬಂದಿಹ ಕೋಪವಿದೇನು?
ಹೊಗೆ ತುಂಬಿದೆ ಸುರಸರಣಿಯನು!
ಪ್ರಮತ್ತ ಹರ್ಷೋತ್ಕರ್ಷವಿದೇನು?
ವಿಶ್ವೋನ್ಮತ್ತತೆ ಮತ್ತೆ ಇದೇನು?
ಕಂಪಿಸುತಿದೆ ಗಿರಿಧರಣಿಯನು!

ಕರ ಕರವಾಲದ ಕಾಂತಿಯೆ, ನೋಡು,
ಆ ಅದೆ ತೋರ್ಪಾ ಹೊಂಜೋತಿ?
ಕಟಿಬಂಧದ ಕೆಮ್ಮಿಂಚೇ, ನೋಡು?
ಕಣ್ಕಿಡಿಗಳ ನಿಡುವೊನಲೇ, ನೋಡು?
ಬಾನ್ ಬೀಸುವ ಬಣ್ಣದ ಭೀತಿ!

೨೫.೯.೧೯೨೯