ಏರಿಯ ಮೇಲೊಬ್ಬನೆ ಕುಳಿತಿದ್ದೆ:
ಎಣ್ಣೆಯ ಹೊಳೆಯಲಿ ಬೆಣ್ಣೆಯ ಮುದ್ದೆ
ತೇಲುವ ತೆರದಲಿ ಬೈಗಿನ ಹೊತ್ತು
ಜಗುಳುತ್ತೊಯ್ಯನೆ ಬಾಡುತ್ತಿತ್ತು.
ಪಡುವಣ ದೆಸೆಯಲಿ ಮುಗಿಲ್ಗಳ ಮರೆಯಲಿ
ಚಿನ್ನದ ಕಾವಳವೆರಚುವ ದ್ಯುಮಣಿ!
ಪಡಿನೆಳಲೊಡಲಿನ ನುಣ್ತಿಳಿಗೊಳದಲಿ
ಕಣ್ಣಿಗೆ ನುಣ್ಣಗೆ ತೇಲುವ ದೋಣಿ!

ಗಾಳಿಯ ಸುಳಿವಿಲ್ಲ;
ಏನೊಂದುಲಿವಿಲ್ಲ!
ತೆರೆಯಿಲಿ ಆ ಕೆರೆ ಕನ್ನಡಿಯಂತೆ
ಹೊಳೆದುದು ತಿರೆವೆಣ್ಣಿನ ಕಣ್ಣಂತೆ!
ನೆಳಲೇ ನನ್ನಿಯ ಹೋಲಿತ್ತು;
ಕೆಲವೆಡೆ ನನ್ನಿಯ ಮೀರಿತ್ತು;
ಮುಗಿಲಿಗೆ ಮುಗಿಲಿದೆ; ಬಾನಿಗೆ ಬಾನಿದೆ;
ಸಂಜೆಯ ರಂಗಿಗೆ ರಂಗೂ ಅಲ್ಲಿದೆ.
ಹುಟ್ಟಿಗೆ ಹುಟ್ಟು; ದೋಣಿಗೆ ದೋಣಿ;
ಮರಕ್ಕೆ ಮರವಿದೆ! ಮೌನಕೆ ಮೌನ!
ಅಂಬಿಗರಿಗೆ ಪಡಿಯಂಬಿಗರು!

ಏರಿಯ ಮೇಲೊಬ್ಬನೆ ಕುಳಿತಿದ್ದೆ;
ಭಾವದ ಬಲೆಯನು ನೇಯುತ್ತಿದ್ದೆ.
ಆಗಸವೆನ್ನನು ನೋಡುತ್ತಿತ್ತು,
ಮುಗಿಲಾಗಸವನು ನೋಡಿತ್ತು;
ಬೈಗುಗೆಂಪೊ ಮುಗಿಲನು ಮುತ್ತಿತ್ತು,
ಕೆರೆ ನಮ್ಮೆಲ್ಲರ ನೋಡಿತ್ತು!
ಒಬ್ಬರ ನೋಟದೊಳೊಬ್ಬರು ಸಿಕ್ಕಿ
ನೋಡುತ್ತಿರೆಯಿರೆ, ಕಾಲದ ಹಕ್ಕಿ
ಎಣ್ಣೆಯ ಹೊಳೆಯಲಿ ಬೆಣ್ಣೆಯ ಮುತ್ತು
ತೇಲುವ ತೆರದಲಿ ಹಾರುತ್ತಿತ್ತು!
ಮುಗಿಲನು ನಾನೋ? ನನ್ನನು ಬಾನೋ?
ನೋಡುತ್ತಿದ್ದರರಾರೋ ಏನೋ?
ಕೆರೆಯನು ಕಣ್ಣೊಳೆ ಸೆರೆಹಿಡಿದಾನೋ
ಕೆರೆಗಣ್ಣಿಗೆ ಸೆರೆಸಿಕಿದ್ದೆ!
ಒಬ್ಬನೆ ಸುಮ್ಮನೆ ಕುಳಿತಿದ್ದೆ.

೧೪.೧೦. ೧೯೩೦