ಅದೆ ತಾಯಿ, ಅದೆ, ತಾಯಿ,
ಇಲ್ಲಿರುವಳದೆ ತಾಯಿ!
ಕಾಡಿರುವ ನಾಡೆಲ್ಲ
ಕವಿಗೆ ತಾಯೊಡಲೊ;
ಮಲೆ ಕಾಡು ಹೊಳೆ ಬೀಡು
ಕವಿಗೆ ತಾಯ್ಮಡಿಲೊ!

ಇದೆ ತಾಯಿ, ಇದೆ ತಾಯಿ,
ಅಲ್ಲಿರುವಳಿದೆ ತಾಯಿ!
ಹರಿಯುತಿಹಳೀ ಕಪಿನಿ
ಹರಿವಂತೆ ತುಂಗೆ;
ಕರೆಯುತಿಹಳೀ ಕಪಿನಿ
ಕರೆವಂತೆ ತುಂಗೆ!

ಅದೆ ತಾಯಿ; ಅದೆ ತಾಯಿ,
ಇಲ್ಲಿರುವಳದೆ ತಾಯಿ!
ಈ ಕಾಡುಗಳ ನೋಡಿ
ನಾಳನಾಳದಲಿ
ಆ ಕಾಡುಗಳು ಮೂಡಿ
ನೆತ್ತರಾಳದಲಿ
ದುಮುಕುತಿದೆ ತೇಲುತಿವೆ
ಕುಣಿಕುಣಿದು ನಲಿದು,
ಒಂದನೊಂದನು ಒಲಿದು
ಒಲಿದಪ್ಪಿ ಉಲಿದು!

ಅದೆ ತಾಯಿ, ಅದೆ ತಾಯಿ,
ಇಲ್ಲಿರುವಳದೆ ತಾಯಿ!
ತಾನುಲಿದರೀ ಹಕ್ಕಿ
ತಾನ ತಾನದಲಿ
ಮಾರುಲಿವುದಾ ಹಕ್ಕಿ
ವಿಪಿನ ಗಾನದಲಿ:
ಅದಕೆ ಇದು, ಇದಕೆ ಇದು
ಕನ್ನಡಿಯ ಹಿಡಿದಿಹುದು!

ಅದೆ ತಾಯಿ, ಅದೆ ತಾಯಿ,
ಇಲ್ಲಿರುವಳದೆ ತಾಯಿ!
ಖೆಡ್ಡಗಿಡ್ಡಗಳೆಲ್ಲ
ಗೊಡ್ಡಗಳಿಗಿರಲಿ,
ಗುಡ್ಡ ಕಾಡುಗಳೆನಗೆ
ಒಡ್ಡಾಗಿ ಬರಲಿ!
ಖೆಡ್ಡ ಬರಿ ನೆವವಾಯ್ತು
ಬರಲಿಲ್ಲಿಗೆನಗೆ;
ಎಂತಾದರೇನಂತೆ
ಬಂದೆ ತಾಯ್ಮನೆಗೆ!
ಈ ದೃಶ್ಯದೀ ಕಾಂತಿ
ಈ ಮೌನದೀ ಶಾಂತಿ
ಎಂದೆಂದಿಗೂ ಇರಲಿ;
ಮತ್ತೆ ಮತ್ತೈತರಲಿ;
ತಪ್ಪದೆಯೆ ಬರಲಿ!

೨೮.೧೨.೧೯೩೮