೧
ನಿನ್ನ ಮೊಗವನು ನೋಡಿ
ನನ್ನ ಚಾಗವು ನಡುಗಿ
ಬೆದರಿದುದು, ತರಳೆ!
ಭಗವಾನರನು ನೆನೆದು
ಬೇಡುವಂತೆಸಗಿರುವೆ
ಮಿಂಚುಗಣ್ಣೆರಳೆ!
೨
ಮನವ ಕೆಣಕುವ ತೆರದಿ
ಎದೆಯ ಕೆರಳಿಪ ತೆರದಿ
ನೀನಿರುವೆ, ಚೆಲುವೆ.
ನಿನ್ನ ನಿಲುವಿನ ಭಂಗಿ
ಕಾಮನಿಗೆ ಕೈಗಣ್ಣಿ:
ರತಿಯ ನೀ ಗೆಲುವೆ.
೩
ಮಲೆಯ ಹಸುರಿನ ತಲೆಯ
ಶಶಿ ಚುಂಬಿಪೆಡೆಯಲ್ಲಿ
ಜನಿಸಿದೆಳನಗೆಯು!
ಬೆಳ್ಮುಗಿಲಿನುದರದಲಿ
ಮಲಗಿರುವ ಮಳೆಬಿಲ್ಲಿ-
ನಂತಿಹುದು ಬಗೆಯು!
೪
ವಿಶ್ವ ಸೌಂದರ್ಯವನೆ
ಸ್ಪರ್ಧೆಯಲಿ ಗೆಲಲೆಂದು,
ಬನದ ಹಸುರಿನಲಿ
ಕಾರ ಮಳೆ ಸೋರುತಿರೆ
ನಲಿವ ನವಿಲಂತಿರುವೆ
ನೀನು ಚೆಲುವಿನಲಿ!
೫
ಗುರುದೇವ, ನೀನೇಕೆ
ಚೆಲಿವಿನೀ ಗೊಂಬೆಗಳ
ಕುಣಿಸುತಿಹೆ ಸುತ್ತ?
ಎನಿತು ಬಿಗಿಹಿಡಿದರೂ
ಎನಿತೆನಿತು ತಡೆದರೂ
ಬಳುಕುತಿದೆ ಚಿತ್ತ!
೦೬. ೦೫. ೧೯೨೯
Leave A Comment