ಬಾನ್, ಮುಗಿಲ್, ಅರಿಲ್,
ತಿಂಗಳ್, ಇರುಳ್, ನೇಸರ್,
ಕಾಡು, ಮೇಲೆ, ಹೊಳೆ,
ಪಕ್ಕಿ, ಪೂ, ಮಣ್,
ಓ ಮಿಗಂಗಳಿರಾ,
ನಿಮ್ಮೊಳೆನಗೇಕಿನಿತು ಮಮತೆ?
ನಿಮ್ಮನಗಲಲೈನಗೆ ವೆತೆ?
ಇಂದರಿತೆನಾ ಗುಟ್ಟುನಿಂದರಿತೆ:
ಜೀವನ ಸ್ಮೃತಿ, ಪೂರ್ವಚರಿತೆ,
ನೀಮೆಲ್ಲರೆನ್ನಾತ್ಮಕಥೆ!

ಬೆಳಗಿರ್ದುದು ಬೆಳಗುವಿಸಿಲ್;
ತೀಡಿರ್ದುದು ತಣ್ದೆರಲ್;
ಪೊಯ್ದಿರ್ದುದು ಕಿವಿಗಿಂಪನ್
ಪಕ್ಕಿಯ ಕೊರಲ್;
ಕರೆದತ್ತದೊ ಕಣ್‌ಸೊಂಪನ್
ತೆಂಗಿನ ಅರಲ್!

ಗಾಳಿಗೆ ಗರಿಮರ್ಮರ ಸುಯ್ದಿತ್ತು;
ತೆಂಗಿನ ಮರ ಉಸಿರೆಳೆದಿತ್ತು;
ಕವಿಯೆದೆಯಲಿ ನಿಷ್ಕಾರಣಮಾನಂದದ ನದಿ ಹರಿದಿತ್ತು!
ತೊಟ್ಟನೆ ಮಿಂಚಿತು ಗುಟ್ಟು;
ಆ ತೆಂಗಿನ ಹೂ ನನ್ನತಿಪೂರ್ವದ ಹುಟ್ಟು!

ತೊಲಗಿತು ವಿಸ್ಮೃತಿ;
ಮರುಕೊಳಿಸಿತು ಜೀವನ ಸ್ಮೃತಿ!
ಉಕ್ಕಿತು ಮನದಲಿ ಆವುದೊ ಒಂದಾತ್ಮೀಯತೆ:
ಓ ತೆಂಗಿನ ಹೂವೆ,
ನೀಂ ದಿಟದಿಂ ನಾಂ ಮರೆತೆನ್ನಾತ್ಮಕಥೆ!

೧೬. ೧೨. ೧೯೩೯